Saturday 23 July 2016

ಗಣಪತಿ: ಬಿಜೆಪಿಯ ದ್ವಂದ್ವ ಮತ್ತು ಕೆಲವು ಅನುಮಾನಗಳು

       ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿಯವರ ಸರಣಿ ಮಧ್ಯ ಪ್ರವೇಶಕ್ಕೆ ತತ್ತರಿಸಿ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇಮುಲನ ಪರ ಯಾವ ಹೇಳಿಕೆಯನ್ನೂ ಕೊಡದ ಮತ್ತು ಧರಣಿಯನ್ನೂ ನಡೆಸದ ಬಿಜೆಪಿಯು ಸದ್ಯ ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆಯ ಕುರಿತಂತೆ ತೀವ್ರ ಸಂತಾಪ ಮತ್ತು ಸಂಕಟವನ್ನು ವ್ಯಕ್ತಪಡಿಸುತ್ತಿದೆ. ಆಹೋರಾತ್ರಿ ಪ್ರತಿಭಟನೆಯನ್ನು ನಡೆಸಿದೆ. ಪಾರ್ಲಿಮೆಂಟ್‍ನಲ್ಲಿ ಈ ಆತ್ಮಹತ್ಯೆಯನ್ನು ಪ್ರಸ್ತಾಪಿಸುವುದಾಗಿ ಅದರ ಸಂಸದರೋರ್ವರು ಘೋಷಿಸಿದ್ದಾರೆ. ನಿಜವಾಗಿ, ಆರೇಳು ತಿಂಗಳ ನಡುವೆ ನಡೆದ ಈ ಎರಡು ಆತ್ಮಹತ್ಯೆಗಳಲ್ಲಿ ಕೆಲವು ಹೋಲಿಕೆಗಳಿವೆ. ವೇಮುಲ ತನ್ನ ಆತ್ಮಹತ್ಯೆಗೆ ನೇರ ಕಾರಣವಾಗಿ ಯಾರನ್ನೂ ಬೊಟ್ಟು ಮಾಡದಿದ್ದರೂ ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿಯವರ ಪಾತ್ರ ಅದರಲ್ಲಿ ಅತ್ಯಂತ ಸ್ಪಷ್ಟವಾಗಿತ್ತು. ವೇಮುಲನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದ ಬಂಡಾರು ದತ್ತಾತ್ರೇಯರು ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮøತಿ ಇರಾನಿ ಮತ್ತು ಕುಲಪತಿಯವರ ಮೇಲೆ ಒತ್ತಡವನ್ನು ಹೇರಿದ್ದರು. ಅದರಂತೆ, ಸ್ಮೃತಿ ಇರಾನಿಯವರು ಐದು ಪತ್ರಗಳನ್ನು ಒಂದರ ಮೇಲೊಂದರಂತೆ ವಿಶ್ವವಿದ್ಯಾನಿಲಯದ ಕುಲಪತಿಯವರಿಗೆ ರವಾನಿಸಿದ್ದರು. ಈ ಒತ್ತಡಗಳ ಪರಿಣಾಮದಿಂದಾಗಿಯೇ ವೇಮುಲ 15 ದಿನಗಳ ಕಾಲ ಬಯಲಿನಲ್ಲಿ ರಾತ್ರಿ ಮಲಗಬೇಕಾಯಿತು. ಹಾಸ್ಟೆಲ್ ಸೌಲಭ್ಯವನ್ನೂ ನಿರಾಕರಿಸಲಾಯಿತು. ಇಷ್ಟೆಲ್ಲಾ ನಡೆದೂ ವೇಮುಲನ ಆತ್ಮಹತ್ಯೆಯ ಬಗ್ಗೆ ಬಿಜೆಪಿ ಪ್ರದರ್ಶಿಸಿದ್ದು ಅತ್ಯಂತ ಉಡಾಫೆಯ ನಿಲುವು. ಅದು ಈ ಪತ್ರಗಳು ಮತ್ತು ಒತ್ತಡಗಳ ಕುರಿತಂತೆ ತನಿಖೆ ನಡೆಸುವ ಬದಲು ವೇಮುಲ ದಲಿತನೋ ದಲಿತೇತರನೋ ಎಂಬ ಬಗ್ಗೆ ತೀವ್ರ ಕುತೂಹಲವನ್ನು ವ್ಯಕ್ತಪಡಿಸಿತು. ತನಿಖೆಗೆ ಆದೇಶಿಸಿತು. ಬಿಜೆಪಿಯ ಯಾವೊಬ್ಬ ಸಂಸದನೂ ಈ ಆತ್ಮಹತ್ಯೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಿಲ್ಲ. ರಜೆಯ ಮೇಲೆ ತೆರಳಿದ ಉಪಕುಲಪತಿಯವರನ್ನು ಮತ್ತೆ ಅದೇ ಸ್ಥಾನದಲ್ಲಿ ಕೂರಿಸುವ ದಾಷ್ಟ್ರ್ಯತನದ ಹೊರತು ಇನ್ನಾವುದನ್ನೂ ಬಿಜೆಪಿ ಈವರೆಗೂ ಪ್ರದರ್ಶಿಸಿಲ್ಲ. ಹಾಗಂತ, ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆಯನ್ನು ಎತ್ತಿಕೊಂಡು ಹೋರಾಟಕ್ಕಿಳಿದಿರುವ ರಾಜ್ಯ ಬಿಜೆಪಿ ನಾಯಕರಿಗೆ ಇದನ್ನು ಮತ್ತು ನೆನಪಿಸಬೇಕಾದ ಅಗತ್ಯವಿಲ್ಲ. ಹಾಗೆ ನೋಡಿದರೆ, ಗಣಪತಿಯವರ ಆತ್ಮಹತ್ಯೆಗಿಂತ ವೇಮುಲನ ಆತ್ಮಹತ್ಯೆಯೇ ಹೆಚ್ಚು ಕಳವಳಕ್ಕೆ ಅರ್ಹವಾದವು. ಗಣಪತಿಯವರಲ್ಲಿ ಜೀವನಾನುಭವವಿದೆ. ವಯಸ್ಸಿನ ಬೆಂಬಲವೂ ಇದೆ. ಅಲ್ಲದೇ ಅವರು ಹೊರಿಸಿರುವ ಆರೋಪಗಳಲ್ಲಿ ಅಸ್ಪಷ್ಟತೆಯಿದೆ. ನಡತೆಯ ಕಾರಣಕ್ಕಾಗಿ ಅಮಾನತು ಶಿಕ್ಷೆಗೂ ಅವರು ಒಳಗಾಗಿದ್ದಾರೆ. ಕೆ.ಜೆ. ಜಾರ್ಜ್‍ರ ಮೇಲೆ ಅವರು ಹೊರಿಸಿದ ಆರೋಪದಲ್ಲಿ ಎಷ್ಟೇ ಹುರುಳಿದ್ದರೂ ಅದು ನಡೆದು ಎರಡು ವರ್ಷಗಳೇ ಸಂದಿವೆ. ಒಂದು ವೇಳೆ, ವೇಮುಲನನ್ನು ಗಣಪತಿಯವರ ಬಳಿ ತಂದಿಟ್ಟು ನೋಡಿದರೆ, ಇಂಥ ಯಾವ ಕಪ್ಪು ಚುಕ್ಕೆಗಳೂ ವೇಮುಲನಲ್ಲಿ ಕಾಣಿಸುವುದಿಲ್ಲ. ಆತನಲ್ಲಿ ಜೀವನಾನುಭವ ಇಲ್ಲ. ಇನ್ನೂ ಎಳೆಯ. ಅಲ್ಲದೇ ದಮನಿತ ಹಿನ್ನೆಲೆಯನ್ನು ಹೊಂದಿರುವ ಯುವಕ. ಆದರೆ ಬಿಜೆಪಿ ಈ ಎರಡು ಆತ್ಮಹತ್ಯೆಗಳಿಗೆ ಪ್ರತಿಕ್ರಿಯಿಸಿದ ರೀತಿಯನ್ನು ನೋಡಿದರೆ, ಅದರ ಅಸಲು ಮುಖ ಬಹಿರಂಗವಾಗುತ್ತದೆ. ವೇಮುಲನ ಜಾತಿಯನ್ನು ತನಿಖಿಸಲು ಹೊರಟ ಬಿಜೆಪಿ, ಗಣಪತಿಯವರ ಆತ್ಮಹತ್ಯೆಯಲ್ಲಿ ಮಾತ್ರ ಜಾರ್ಜ್‍ರ ರಾಜೀನಾಮೆಯನ್ನು ಬಯಸಿದೆ.
      ಅಷ್ಟಕ್ಕೂ, ಡಿವೈಎಸ್ಪಿ ಹುದ್ದೆಯಲ್ಲಿರುವ ಓರ್ವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದರೆ ಏನು? ಅದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳುವಷ್ಟು ಸಾಮಾನ್ಯ ವಿಷಯವೇ? ಇಂಥ ಉನ್ನತ ಹುz್ದÉಯಲ್ಲಿರುವವರ ಮಟ್ಟಿಗೆ ರಾಜಕೀಯ ಒತ್ತಡಗಳು ಹೊಸತಲ್ಲವಲ್ಲ. ಗೂಂಡಾಗಳನ್ನೋ ಸಮಾಜಘಾತುಕರನ್ನೋ ಕೋಮುವಾದಿಗಳನ್ನೋ ಅವರು ಸದಾ ಎದುರಿಸಬೇಕಾಗುತ್ತಲೇ ಇರಬಹುದು. ಲಾಬಿ, ಸುಳ್ಳಾರೋಪಗಳಿಗೆ ಗುರಿಯಾಗುತ್ತಿರಬಹುದು. ಈ ಹುದ್ದೆಗೇರುವ ಪ್ರತಿಯೋರ್ವ ಅಧಿಕಾರಿಗೂ ಇದು ಚೆನ್ನಾಗಿಯೇ ಗೊತ್ತಿರುತ್ತದೆ. ಆದ್ದರಿಂದಲೇ ಗಣಪತಿಯವರ ಆತ್ಮಹತ್ಯೆಯನ್ನು ಬರೇ `ಜಾರ್ಜ್' ಮೂಲಕವೇ ನೋಡುವುದು ಅತಾರ್ಕಿಕವೆನಿಸುತ್ತದೆ. ಹುದ್ದೆಯೇತರ ಕಾರಣಗಳ ಕುರಿತೂ ನಾವೂ ದೃಷ್ಟಿ ಹರಿಸಬೇಕಾಗುತ್ತದೆ. ಆದರೆ ಬಿಜೆಪಿ ಇದನ್ನು ಬಯಸುತ್ತಿಲ್ಲ. ರಾಜಕೀಯ ಒತ್ತಡಗಳಿಗೆ ಆತ್ಮಹತ್ಯೆಯೇ ಪರಿಹಾರ ಎಂಬ ರೀತಿಯಲ್ಲಿ ಅದು ಗಣಪತಿ ಆತ್ಮಹತ್ಯೆಯನ್ನು ವೈಭವೀಕರಣಕ್ಕೆ ಒಳಪಡಿಸುತ್ತಿದೆ.
       ಸಾಮಾನ್ಯವಾಗಿ, ಕೌಟುಂಬಿಕ ಜಗಳದಲ್ಲಿ  ಭಾಗಿಯಾದವರು, ಕುಡುಕರು, ಪ್ರೇಮಿಗಳು ಅನುತೀರ್ಣಗೊಂಡ ವಿದ್ಯಾರ್ಥಿಗಳು... ಮುಂತಾದವರಲ್ಲೇ ಆತ್ಮಹತ್ಯೆ ಒಂದು ಆಯ್ಕೆಯಾಗಿರುವುದು ಕಾಣಸಿಗುತ್ತದೆ. ತಕ್ಷಣದ ಆವೇಶ, ಸಿಟ್ಟು, ವಿಷಾದ, ಭಾವುಕತೆಗಳೇ ಇದಕ್ಕೆ ಪ್ರಚೋದನೆ ನೀಡಿರುತ್ತದೆ. ವರ್ಷಂಪ್ರತಿ ಆಗುವ ಆತ್ಮಹತ್ಯೆಗಳ ಕಾರಣಗಳನ್ನು ಗಂಭೀರವಾಗಿ ಪರಿಶೀಲಿಸಿದರೆ, ಅವುಗಳಲ್ಲಿ 99% ವನ್ನೂ ತಡೆಯಬಹುದಿತ್ತು ಎಂದು ಅನಿಸುವಷ್ಟು ಕಾರಣಗಳು ದುರ್ಬಲವೂ ಆಗಿರುತ್ತದೆ. ಆದ್ದರಿಂದಲೇ ಗಣಪತಿ, ಕಲ್ಲಪ್ಪ, ಡಿ.ಕೆ. ರವಿ ಮುಂತಾದವರ ಆತ್ಯಹತ್ಯೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಹೋಗುವುದು. ಒತ್ತಡಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡರು ಎಂಬ ಒಂದು ವಾಕ್ಯದ ಕಾರಣದಾಚೆಗೆ ಕಾರಣಗಳ ಹುಡುಕಾಟ ನಡೆಯುವುದು. ಅಂದಹಾಗೆ, ಪ್ರೇಮಿಗಳಿಗೂ ಡಿ.ಕೆ. ರವಿಯವರಿಗೂ ವ್ಯತ್ಯಾಸ ಇದೆಯಲ್ಲವೇ? ಅನುತ್ತೀರ್ಣಗೊಂಡ ವಿದ್ಯಾರ್ಥಿಗೂ ಗಣಪತಿಯವರಿಗೂ ಹೋಲಿಕೆ ಅಸಾಧ್ಯವಲ್ಲವೇ? ಡಿವೈಎಸ್ಪಿ, ಜಿಲ್ಲಾಧಿಕಾರಿ ಮುಂತಾದ ಹುದ್ದೆಗಳಷ್ಟೇ ಉನ್ನತವಲ್ಲ, ಅದನ್ನು ಅಲಂಕರಿಸುವ ವ್ಯಕ್ತಿಗಳೂ ಮಾನಸಿವಾಗಿ ಮತ್ತು ವೈಚಾರಿಕವಾಗಿ ಉನ್ನತರಾಗಿಯೇ ಇರುತ್ತಾರೆ ಮತ್ತು ಇರಬೇಕು ಕೂಡ. ಯಾವುದೇ ಬೆಳವಣಿಗೆಯನ್ನೂ ಧೃತಿಗೆಡದೇ ಎದುರಿಸುವ ಸಾಮಥ್ರ್ಯ ಈ ಹುದ್ದೆಯಲ್ಲಿರುವವರಿಗೆ
ಕರಗತವಾಗಿರುತ್ತದೆ. ಒತ್ತಡಗಳನ್ನು ಎದುರಿಸಿದ ಅನುಭವದೊಂದಿಗೆ ಅವರು ಆ ಹುದ್ದೆಯನ್ನು ಪಡೆದಿರುತ್ತಾರೆ. ಹೀಗಿರುವಾಗ, ಎರಡು ವರ್ಷಗಳ ಹಿಂದೆ `ಜಾರ್ಜ್'ರಿಂದ ಒತ್ತಡಕ್ಕೊಳಗಾದ ಘಟನೆಯು ಎರಡು ವರ್ಷಗಳ ಬಳಿಕ ಇವತ್ತು ಗಣಪತಿಯವರನ್ನು ಆತ್ಮಹತ್ಯೆಗೆ ದೂಡುವುದೆಂದರೇನು? ಇದು ಸಾಧ್ಯ ಮತ್ತು ಇದುವೇ ಪರಮ ಸತ್ಯ ಎಂದಾದರೆ, ಈ ರಾಜ್ಯದ ಪ್ರತಿ ಅಧಿಕಾರಿಯ ಸುತ್ತಲೂ ಕಾವಲು ಏರ್ಪಡಿಸುವ ಅನಿವಾರ್ಯತೆ ಎದುರಾಗದೇ? ಯಾಕೆಂದರೆ, ಸರಕಾರಿ ಅಧಿಕಾರಿಗಳೆಂದ ಮೇಲೆ ಒತ್ತಡ ಮಾಮುಲು. ಅದಕ್ಕೆ ಕಾಂಗ್ರೆಸ್-ಬಿಜೆಪಿ ಸರಕಾರ ಎಂಬ ವ್ಯತ್ಯಾಸವೇನೂ ಇಲ್ಲ. ‘ರಾಜಕಾರಣಿಯ ಬಳಿಯಲ್ಲಿ ತನ್ನ ಮನೆಯವರ ದೂರವಾಣಿ ಸಂಖ್ಯೆ ಇಲ್ಲದಿರಬಹುದು ಆದರೆ, ಅಧಿಕಾರಿಗಳ ಸಂಖ್ಯೆ ಇರುತ್ತದೆ..’ ಎಂದು ತಮಾಷೆ ಮಾಡುವಷ್ಟು ಇದು ಬಹಿರಂಗ ಸತ್ಯ. ಅಧಿಕಾರಿಗಳ ಸಹಕಾರ ಇಲ್ಲದೇ ಯಾವ ರಾಜಕಾರಣಿಯೂ ಜನಪ್ರಿಯ ಆಗಲಾರ. ಕೆಲವೊಮ್ಮೆ ಈ ಸಂಬಂಧ ಕೆಡುತ್ತದೆ. ಒತ್ತಡ ತಂತ್ರಗಳ ಪ್ರಯೋಗವಾಗುತ್ತದೆ. ಎಲ್ಲ ಪಕ್ಷಗಳ ಎಲ್ಲ ರಾಜಕಾರಣಿಗಳಿಗೂ ಇದು ಗೊತ್ತಿರುವಂಥದ್ದೇ. ಹೀಗಿರುವಾಗ ಇವು ಆತ್ಮಹತ್ಯೆಗೆ ಕಾರಣವಾಗುವುದೆಂಬುದನ್ನು ಎಲ್ಲಿಯವರೆಗೆ ಒಪ್ಪಿಕೊಳ್ಳಬಹುದು? ಅಥವಾ ಇದರಾಚೆಗಿರುವ ಕಾರಣಗಳನ್ನು ಹುಡುಕದಂತೆ ತಡೆಯುವುದಕ್ಕಾಗಿ `ಒತ್ತಡ'ವನ್ನು ಮುಖ್ಯ ಕಾರಣವಾಗಿ ಬಿಂಬಿಸಲಾಗುತ್ತಿದೆಯೇ? ಡಿ..ಕೆ. ರವಿಯವರ ಆತ್ಮಹತ್ಯೆಯನ್ನು ಆರಂಭದಲ್ಲಿ ಬಿಂಬಿಸಲಾದದ್ದು ಇದೇ ರೀತಿಯಲ್ಲಿ. ಸರಕಾರವೇ ಅವರ ಹತ್ಯೆ ನಡೆಸಿತು ಎಂದೇ ವಾದಿಸಲಾಗಿತ್ತು. ಅಂತಿಮವಾಗಿ ವೈಯಕ್ತಿಕ ಕಾರಣಗಳೇ ಆತ್ಮಹತ್ಯೆಯ ಹಿಂದಿದೆ ಎಂಬುದು ಬಹುತೇಕ ದೃಢವಾಯಿತು. ಗಣಪತಿಯವರ ಆತ್ಮಹತ್ಯೆಯೂ ಇದೇ ರೀತಿಯದ್ದೇ? ಜಾರ್ಜ್ ಅದರ ಒಂದು ತೋರುಮುಖವಷ್ಟೇ ಅಗಿದ್ದಾರೆಯೇ? ಅಸಲು ಮುಖ ಬೇರೆಯೇ ಇರಬಹುದೇ?




No comments:

Post a Comment