Thursday 21 July 2016

ಚರ್ಚೆಗೀಡಾಗಬೇಕಿದ್ದ ಐಸಿಸ್, ಚರ್ಚೆಗೊಳಗಾಗುತ್ತಿರುವ ಕುರ್‍ಆನ್?

        ಅತ್ಯಂತ ಅವಾಸ್ತವಿಕ, ಅಧಾರ್ಮಿಕ, ಅತಾರ್ಕಿಕ ಮತ್ತು ಪೈಶಾಚಿಕ ವಿಚಾರಗಳನ್ನು ಪ್ರತಿನಿಧಿಸುವ ಒಂದು ಮನುಷ್ಯ ವಿರೋಧಿ ಗುಂಪಿನ ಸುತ್ತ ಈ ದೇಶದಲ್ಲಿ ಬಿರುಸಿನ ಚರ್ಚೆಯೊಂದು ಆರಂಭವಾಗಿದೆ. ಈ ಚರ್ಚೆಗೆ ವೇಗವನ್ನು ತಂದುಕೊಟ್ಟದ್ದು ಬಾಂಗ್ಲಾದ ಪ್ರಧಾನಿ ಹಸೀನಾ ಅವರ ಪಕ್ಷದ ನಾಯಕ ಇಮ್ತಿಯಾಜ್  ಖಾನ್ ಬಬೂತ ಅವರ ಪುತ್ರನಾಗಿರುವ ಮತ್ತು ಮಲೇಶ್ಯಾದ ಮೊನಾಷ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿರುವ ರೋಹನ್ ಇಮ್ತಿಯಾಜ್, ಹಿಂದಿ ಚಿತ್ರನಟಿ ಶ್ರದ್ಧಾ ಕಪೂರ್‍ರ ಕೈ ಕುಲುಕಿ ಆ ಖುಷಿಯ ಕ್ಷಣವನ್ನು ತನ್ನ ಫೇಸ್‍ಬುಕ್ ಪುಟದಲ್ಲಿ ಚಿತ್ರ ಸಮೇತ ಹಂಚಿಕೊಂಡಿದ್ದ ನಿಬ್ರಸ್ ಇಸ್ಲಾಮ್ ಮತ್ತು ಇತರ ಮೂವರು ಪದವೀಧರ ಯುವಕರು. ಢಾಕಾದ ಹೋಲಿ ಆರ್ಟಿಸನ್ ಬೇಕರಿಯ ಮೇಲೆ ನಡೆದ ದಾಳಿಯ ಮರುದಿನವೇ ಅದರಲ್ಲಿ ಭಾಗಿಯಾದ ಈ ಐವರು ಯುವಕರ ಪೋಟೋವನ್ನು ಐಸಿಸ್ ಬಿಡುಗಡೆಗೊಳಿಸಿತ್ತು. ನಿಜವಾಗಿ, ಯಾವುದೇ ಚರ್ಚೆಯ ದಿಕ್ಕು-ದೆಸೆಯನ್ನು ನಿರ್ಧರಿಸಬೇಕಾದ ಮತ್ತು ಚರ್ಚೆಯ ಸ್ವರೂಪವನ್ನು ಸ್ಪಷ್ಟಪಡಿಸಿಕೊಳ್ಳಬಹುದಾದ ಸಂದರ್ಭ ಇದು. ಆದರೆ ಢಾಕಾದ ಆ ಐವರು ಬಂದೂಕುಧಾರಿಗಳ ಹಿನ್ನೆಲೆಯನ್ನು ಮತ್ತು ಐಸಿಸ್‍ಗೂ ಅವರಿಗೂ ನಡುವೆ ಇರಬಹುದಾದ ಶಂಕಿತ ಸಂಬಂಧದ ಕುತೂಹಲವನ್ನು ಅಲ್ಲಿಗೇ ಕೈಬಿಟ್ಟು ಈ ದೇಶದಲ್ಲಿ ಸದ್ಯ ಚರ್ಚೆಗಳು ಮುಂದೆ ಸಾಗುತ್ತಿವೆ. ‘ಮುಲ್ಲಾ ಇಸ್ಲಾಮ್-ಅಲ್ಲಾ ಇಸ್ಲಾಮ್’, ‘ಪ್ರವಾದಿ ಮುಹಮ್ಮದ್(ಸ)’, ‘ಪವಿತ್ರ ಕುರ್‍ಆನ್‍ನಲ್ಲಿ ಕಿತ್ತು ಹಾಕಬೇಕಾದ ಭಾಗಗಳು’, ‘ಹತ್ಯಾಕಾಂಡಕ್ಕೆ ಪ್ರಚೋದಕವಾಗುವ ಸೂಕ್ತಗಳು’, ‘ಪೊಲಿಟಿಕಲ್ ಇಸ್ಲಾಮ್’.. ಮುಂತಾದುವುಗಳೇ ಚರ್ಚೆಗಳ ಕೇಂದ್ರ ಬಿಂದುವಾಗಿಬಿಟ್ಟಿದೆ. ಈ ಚರ್ಚೆಯಲ್ಲಿ ಶ್ರದ್ಧಾ ಕಪೂರ್ ಮಾಯವಾಗಿ ಬಿಟ್ಟಿದ್ದಾರೆ. ಆ ಭಯೋತ್ಪಾದಕರು ಕಲಿತ ಸೆಕ್ಯುಲರ್ ವಿಶ್ವವಿದ್ಯಾಲಯಗಳು ಕಣ್ಮರೆಯಾಗಿವೆ. ಅವರ ಸೆಕ್ಯುಲರ್ ಮನೋಭಾವದ ಹೆತ್ತವರು ಕೂಡಾ ಚರ್ಚೆಯ ವ್ಯಾಪ್ತಿಯೊಳಗೆ ಸೇರಿಕೊಳ್ಳುತ್ತಿಲ್ಲ. ಇಡೀ ಚರ್ಚೆಯಲ್ಲಿ ಒಂದು ಬಗೆಯ ಸೆಲೆಕ್ಟಿವ್‍ನೆಸ್ ಕಾಣಿಸುತ್ತಿದೆ. ನಿಜವಾಗಿ, ಇಡೀ ಚರ್ಚೆಯ ಕೇಂದ್ರ ಬಿಂದುವಾಗಬೇಕಾದದ್ದು ಐಸಿಸ್. ಐಸಿಸ್‍ನ ಹುಟ್ಟು ಎಲ್ಲಿ, ಅದರ ಸಂಸ್ಥಾಪಕ ಯಾರು, ಆತ ಎಲ್ಲಿ ಓದಿದವ, ಎಷ್ಟು ದೊಡ್ಡ ಮೌಲ್ವಿ, ಆತನಿಗೂ ಇಸ್ಲಾಮ್‍ಗೂ ಏನು ಮತ್ತು ಎತ್ತಣ ಸಂಬಂಧ, ಐಸಿಸ್‍ಗೆ ಇಷ್ಟು ವ್ಯಾಪಕ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಹರಿದುಬರುತ್ತಿರುವುದು ಎಲ್ಲಿಂದ ಮತ್ತು ಅದರ ದುಡ್ಡಿನ ಮೂಲ ಯಾವುದು, ಅವರಿಂದ ಪೆಟ್ರೋಲನ್ನು ಖರೀದಿಸುತ್ತಿರುವವರು ಯಾರು ಮತ್ತು ಅವರು ಯಾವ ಕಂಪೆನಿಗೆ ಸೇರಿದವರು, ಅವರಿಗೂ ಜಾಗತಿಕ ಪೆಟ್ರೋ ಮಾರುಕಟ್ಟೆಗೂ ಇರುವ ಸಂಬಂಧ ಏನು, ತಂತ್ರಜ್ಞರು ಯಾರು.. ಎಂಬಲ್ಲಿಂದ ಹಿಡಿದು, ಐಸಿಸ್‍ನ ಹುಟ್ಟಿಗೆ, ಬೆಳವಣಿಗೆಗೆ ಮತ್ತು ಕ್ರೌರ್ಯಕ್ಕೆ ಬೆಂಬಲವಾಗಿ ನಿಂತವರು ಯಾರು ಮತ್ತು ಅವರಿಗೂ ಇಸ್ಲಾಮ್‍ಗೂ ಯಾವ ರೀತಿಯ ಸಂಬಂಧ ಇದೆ.. ಎಂಬಲ್ಲಿ ವರೆಗೆ ವಿಸ್ತೃತ ಚರ್ಚೆ ನಡೆಯಬೇಕಾದುದು ಎಲ್ಲ ರೀತಿಯಲ್ಲಿ ನ್ಯಾಯಯುತವಾಗಿತ್ತು. ಆದರೆ ಇವತ್ತು ಐಸಿಸ್ ಬಹುತೇಕ ಚರ್ಚೆಯಲ್ಲಿ ನಾಪತ್ತೆಯಾಗಿದೆ. ಚರ್ಚೆಯ ಮಧ್ಯೆ ಅಲ್ಲೊಮ್ಮೆ ಇಲ್ಲೊಮ್ಮೆ ಉಲ್ಲೇಖಕ್ಕೆ ಒಳಗಾಗುವುದನ್ನು ಬಿಟ್ಟರೆ ಉಳಿದಂತೆ ಐಸಿಸ್ ಯಾವ ಧರ್ಮವನ್ನು ಪ್ರತಿನಿಧಿಸುವುದಿಲ್ಲವೋ ಆ ಧರ್ಮವನ್ನೇ ಐಸಿಸ್‍ನ ಕೃತ್ಯಗಳಿಗೆ ಹೊಣೆಯೆಂಬಂತೆ ಬಿಂಬಿಸಿ ಚರ್ಚೆಗೊಳಪಡಿಸಲಾಗುತ್ತಿದೆ. ಈ ಚರ್ಚೆಗಳ ಮಧ್ಯೆ ಮಧ್ಯೆ ಕೇರಳದಲ್ಲಿ ಒಂದು ಜಡನ್ ಮಂದಿಯಿಂದ ಐಸಿಸ್‍ಗೆ ಸೇರ್ಪಡೆ, ಬಂಗಾಳದಲ್ಲಿ ಐಸಿಸ್ ವ್ಯಕ್ತಿಯ ಬಂಧನ, ಐಸಿಸ್ ಸೇರ್ಪಡೆಯನ್ನು ವಿರೋಧಿಸಿದ ತಾಯಿಯನ್ನೇ ಕೊಂದ ಸೌದಿ ಯುವಕ.. ಎಂಬಿತ್ಯಾದಿ ಬ್ರೇಕಿಂಗ್ ಸುದ್ದಿಗಳನ್ನು ಉಲ್ಲೇಖಿಸಲಾಗುತ್ತಿದೆ. ಅಷ್ಟಕ್ಕೂ, ಕೊಲೆಗಡುಕರು ಪವಿತ್ರ ಕುರ್‍ಆನ್ ಓದುತ್ತಾರೆಂಬುದು ಅಥವಾ ಅಲ್ಲಾಹು ಅಕ್ಬರ್, ಜಿಹಾದ್.. ಮುಂತಾದ ಪದಗಳನ್ನು ಉಚ್ಚರಿಸುತ್ತಾರೆಂಬುದು ಅವರನ್ನು ಇಸ್ಲಾಮ್‍ನ ಪ್ರತಿನಿಧಿಗಳಾಗಿಸಬಲ್ಲುದೇ? ಐಸಿಸ್ ಅನ್ನು ನೋಡಿಕೊಂಡು ಪವಿತ್ರ ಕುರ್‍ಆನಿನ ಮೇಲೆ ಆರೋಪ ಹೊರಿಸುವುದೆಂದರೆ, ಅಶ್ವತಿಗೆ ಫಿನಾಯಿಲ್ ಕುಡಿಸಿದ ವಿದ್ಯಾರ್ಥಿನಿಯರನ್ನು ನೋಡಿ ನರ್ಸಿಂಗ್ ಪಠ್ಯಗಳ ಮೇಲೆ ಆರೋಪ ಹೊರಿಸಿದಷ್ಟೇ ಹಾಸ್ಯಾಸ್ಪದವಾಗುವುದಿಲ್ಲವೇ?
  ಅಷ್ಟಕ್ಕೂ, ಪವಿತ್ರ ಕುರ್‍ಆನಿನ ಸೂಕ್ತಗಳು ಎಷ್ಟು ಶಾಂತಿಪೂರ್ಣ ಮತ್ತು ಮನುಷ್ಯ ಪ್ರೇಮಿ ಎಂಬುದಕ್ಕೆ ಧಾರಾಳ ಉದಾಹರಣೆಗಳನ್ನು ಇಲ್ಲಿ ನೀಡಬಹುದು. ಆದರೆ ಸದ್ಯದ ಅಗತ್ಯ ಈ ಸೂಕ್ತಗಳ ಉಲ್ಲೇಖ ಅಲ್ಲ. ಈಗಿನ ತುರ್ತು ಅಗತ್ಯ ಏನೆಂದರೆ, ಈ ಸೂಕ್ತಗಳಿಗೆ ತೀರಾ ವಿರುದ್ಧವಾಗಿ ವರ್ತಿಸುವ ಐಸಿಸ್‍ನ ಬಗ್ಗೆ ಅತ್ಯಂತ ಪ್ರಾಮಾಣಿಕ ವಿಶ್ಲೇಷಣೆ ನಡೆಸುವುದು. ಅದರ ಸ್ಥಾಪಕನ ಕುರ್‍ಆನ್ ಪಾಂಡಿತ್ಯವನ್ನೊಮ್ಮೆ ತಲಾಶೆಗೆ ಒಳಪಡಿಸುವುದು. ಆತನ ತೆಕ್ಕೆಗೆ ಬೀಳುವ ಅಥವಾ ಬೀಳಿಸುತ್ತಿರುವವರ ಸಂಪರ್ಕ ಜಾಲವನ್ನು ಪತ್ತೆ ಹಚ್ಚುವುದು. ಇಂಥ ಪ್ರಯತ್ನಗಳಾಗಿಬಿಟ್ಟರೆ ಐಸಿಸ್‍ಗೂ ಇಸ್ಲಾಮ್‍ಗೂ ನಡುವೆ ಇರುವ ಸಂಬಂಧ ಏನು ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಯಾವ ಚರ್ಚೆಯೂ ಈ ಬಗೆಯ ತಿರುವನ್ನು ಪಡಕೊಳ್ಳುವುದೇ ಇಲ್ಲ. ಹಾಗಂತ, ಐಸಿಸ್ ಎಂಬುದು ಭೂಲೋಕದ ಹೊರಗೆ ಅಸ್ತಿತ್ವದಲ್ಲಿರುವ ಜೀವಿಗಳ ಹೆಸರೇನೂ ಅಲ್ಲವಲ್ಲ, 160 ಕೋಟಿ ಮುಸ್ಲಿಮರಿರುವ ಈ ಜಗತ್ತಿನಲ್ಲಿ ಸುಮಾರು ಸಾವಿರ ಸಂಖ್ಯೆಯಲ್ಲಿರುವ ಒಂದು ಗುಂಪಿನ ಕ್ರೌರ್ಯವನ್ನು ಎತ್ತಿಕೊಂಡು, ಈ 160 ಕೋಟಿ ಮಂದಿ ಅನುಸರಿಸುವ ಧರ್ಮಗ್ರಂಥವೇ ಇದಕ್ಕೆ ಕಾರಣ ಅನ್ನುವುದು ಮತ್ತು ಅದನ್ನು ತಿದ್ದಬೇಕು ಅನ್ನುವುದು ಯಾವ ಬಗೆಯ ಪ್ರಗತಿಪರತೆ? ನಿಜವಾಗಿ, ತಪಾಸಣೆಗೆ ಒಳಪಡಿಸಬೇಕಾದುದು ಈ ಸಾವಿರ ಸಂಖ್ಯೆಯಲ್ಲಿರುವ ಮಂದಿಯನ್ನು. ಅವರಿಗೆ ಹಣಕಾಸು ನೆರವು ನೀಡುತ್ತಿರುವವರನ್ನು. ಅವರನ್ನು ಈ ಕೃತ್ಯದಲ್ಲಿ ಭಾಗಿಯಾಗಿಸುವವರನ್ನು ಮತ್ತು ಈ ಕೊಲೆಗಡುಕರ ಧಾರ್ಮಿಕ ಜ್ಞಾನವನ್ನು.
  ಸಾಮಾನ್ಯವಾಗಿ ಐಸಿಸ್, ಅಲ್‍ಖಾಯ್ದಾ, ತಾಲಿಬಾನ್, ಅಲ್‍ಶಬಾಬ್ ಮುಂತಾದುವುಗಳ ಹುಟ್ಟಿಗೂ ಅಮೇರಿಕ, ಫ್ರಾನ್ಸ್, ರಶ್ಯಾ.. ಮುಂತಾದ ರಾಷ್ಟ್ರಗಳ ಅತಿಕ್ರಮಣಕ್ಕೂ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಸದ್ದಾಮ್‍ರನ್ನು ಪದಚ್ಯುತಗೊಳಿಸಿದ ಬಳಿಕ ಐಸಿಸ್ ಹುಟ್ಟಿಕೊಂಡಿತು. ಅಫಘಾನಿಸ್ತಾನದಲ್ಲಿ ಅಮೇರಿಕ ಮತ್ತು ರಶ್ಯಾದ ಅತಿಕ್ರಮಣಗಳು ಅಲ್‍ಖಾಯ್ದಾ, ತಾಲಿಬಾನ್‍ಗಳನ್ನು ಹುಟ್ಟುಹಾಕಿತು. ಒಂದು ರೀತಿಯಲ್ಲಿ, ಈ ಗುಂಪುಗಳ ಹುಟ್ಟಿಗೆ ಸ್ಥಳೀಯ ರಾಜಕೀಯ ಕಾರಣಗಳಿವೆಯೇ ಹೊರತು ಧರ್ಮಕ್ಕೂ ಅವಕ್ಕೂ ಸಂಬಂಧ ಇರುವ ಯಾವ ಕುರುಹುಗಳೂ ಕಾಣಿಸುತ್ತಿಲ್ಲ. ತಮ್ಮ ಗುಂಪಿನ ಬೆಳವಣಿಗೆಗಾಗಿ ಆ ಬಳಿಕ ಧರ್ಮದ
ಹೆಸರನ್ನೋ ಪದಗಳನ್ನೋ ಅವು ಬಳಸಿಕೊಂಡಿರಬಹುದು. ಅಷ್ಟೇ ಅಲ್ಲ, ತಮ್ಮ ಹುಟ್ಟಿಗೆ ಕಾರಣರಾದವರನ್ನೇ ಆ ಬಳಿಕ ಅವು ತಮ್ಮ ಪೋಷಕರಾಗಿ ಸ್ವೀಕರಿಸಿರಲೂಬಹುದು. ಜನರನ್ನು ಸೆಳೆಯಲು ರಾಜಕಾರಣಿಗಳು ಯಾವೆಲ್ಲ ಕಸರತ್ತುಗಳನ್ನು ನಡೆಸಬಹುದೋ ಆ ಎಲ್ಲ ಕಸರತ್ತುಗಳನ್ನು ಈ ಗುಂಪುಗಳೂ ಇದೀಗ ಮಾಡುತ್ತಿರಬಹುದು. ತಮ್ಮ ಗುಂಪಿಗೆ ಜನರನ್ನು ಒದಗಿಸುವ ಸಾಮರ್ಥ್ಯ ಎಲ್ಲಿಯವರೆಗೆ ಅಲ್ಲಾಹು ಅಕ್ಬರ್, ಜಿಹಾದ್ ಮುಂತಾದ ಪದಗಳಿಗೆ ಇವೆಯೋ ಅಲ್ಲಿಯ ವರೆಗೆ ಆ ಪದಗಳ ದುರ್ಬಳಕೆ ಮಾಡುತ್ತಿರಬಹುದು. ಒಂದೊಮ್ಮೆ ಈ ಪದಗಳಿಂದ ಬೇಳೆ ಬೇಯುತ್ತಿಲ್ಲ ಎಂಬುದು ಮನದಟ್ಟಾದರೆ, ಬೇರೆ ಬೆಲೆಬಾಳುವ ಪದಗಳ ಮೊರೆ ಹೋಗಬಹುದು. ಹಾಗಂತ, ಈ ವಿಶಾಲ ಜಗತ್ತಿನಲ್ಲಿ  ಪದಗಳಿಗೆ ಕೊರತೆಯೇನೂ ಇಲ್ಲವಲ್ಲ.
  ಅಂದಹಾಗೆ, ಈ ದೇಶದಲ್ಲಿ ಸದ್ಯ ನಡೆಯುತ್ತಿರುವ ಚರ್ಚೆಯ ದಿಕ್ಕು ತಪ್ಪಿದೆ. ನಿಜವಾಗಿಯೂ ಚರ್ಚೆಗೀಡಾಗಬೇಕಾದವರು ಚರ್ಚೆಯಿಂದ ತಪ್ಪಿಸಿಕೊಂಡಿದ್ದಾರೆ. ಒಂದು ವೇಳೆ, ಅವರನ್ನು ಚರ್ಚೆಯ ವ್ಯಾಪ್ತಿಗೆ ಒಳಪಡಿಸಿದರೆ ಮತ್ತು ಅವರೇ ಚರ್ಚೆಯ ಕೇಂದ್ರಬಿಂದುವಾದರೆ ಪವಿತ್ರ ಕುರ್‍ಆನ್ ಏನು ಮತ್ತು ಅವರು ಏನು ಎಂಬುದು ಸ್ಪಷ್ಟವಾಗುತ್ತದೆ. ಅಲ್ಲಿಯ ವರೆಗೆ ಗೊಂದಲಗಳು, ವದಂತಿಗಳು ಮತ್ತು ಸುಳ್ಳುಗಳಿಗಷ್ಟೇ ಜಯ ಸಿಗಬಹುದು.

No comments:

Post a Comment