Thursday 29 September 2016

ದಲಿತ ಸ್ವಾಭಿಮಾನದ ಪ್ರಜ್ಞೆಗೆ ಪ್ರತಿಯಾಗಿ ಹುಟ್ಟಿಕೊಂಡಿತೇ ಗೋಮಾತೆ?

       ಸತ್ತ ಹಸುವಿನ ಕಳೇಬರವನ್ನು ಎತ್ತಲು ನಿರಾಕರಿಸಿದುದಕ್ಕೆ ಗುಜರಾತ್‍ನ ಅಹ್ಮದಾಬಾದ್ ಸಮೀಪದ ಕರ್ಜಾ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ನಡೆಸಲಾದ ಹಲ್ಲೆಯು ಸಾರುವ ಸಂದೇಶ ಏನು? ಹಸು ಸತ್ತಿರುವುದು ದಲಿತರ ಮನೆಯಲ್ಲಲ್ಲ. ಆ ಹಸುವಿನ ಸಾವಿಗೂ ಈ ದಲಿತ ಕುಟುಂಬಕ್ಕೂ ಯಾವ ಸಂಬಂಧವೂ ಇಲ್ಲ. ಆ ಹಸುವನ್ನು ಅವಮಾನಿಸಿದ್ದೊ, ಅದನ್ನು ಕಳ್ಳತನ ಮಾಡಿದ್ದೋ ಅಥವಾ ಆ ಹಸುವಿನ ಮಾಲಕರೊಂದಿಗೆ ಹಸು ಸಂಬಂಧಿ ಜಗಳ ನಡೆಸಿದ್ದೋ ಯಾವುದೂ ಈ ದಲಿತ ಕುಟುಂಬದಿಂದ ನಡೆದಿಲ್ಲ. ಸತ್ತ ಹಸುವಿಗೂ ಅದು ಇರುವ ಪ್ರದೇಶಕ್ಕೂ ಮತ್ತು ಈ ದಲಿತ ಕುಟುಂಬಕ್ಕೂ ಏನೇನೂ ಸಂಬಂಧ ಇಲ್ಲದಿದ್ದರೂ ಗರ್ಭಿಣಿಯ ಹೊಟ್ಟೆಗೆ ತುಳಿಯಲು ಹಾಗೂ ಗಂಟೆಗಳ ಕಾಲ ಆ ಕುಟುಂಬದ ಸದಸ್ಯರನ್ನು ಥಳಿಸಲು ಹಲ್ಲೆಕೋರರನ್ನು ಪ್ರಚೋದಿಸಿದ್ದು ಯಾವುದು? ತಾವು ಮೇಲ್ಜಾತಿಯಾದ ಠಾಕೂರರು ಎಂಬುದೇ ಮತ್ತು ಅವರು ದಲಿತರು ಎಂಬುದೇ? ನಿಜವಾಗಿ, ಗೋವಿನ ವಿಷಯದಲ್ಲಿ ಠಾಕೂರ್ ಸಮುದಾಯಕ್ಕೂ ದಲಿತ ಸಮುದಾಯಕ್ಕೂ ನಡುವೆ ವೈಚಾರಿಕ ಭಿನ್ನತೆಗಳಿವೆ. ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂಬ ಧ್ವನಿಯು ಠಾಕೂರ್‍ರಂಥ ಮೇಲ್ಜಾತಿ ಸಮುದಾಯವನ್ನು ಪ್ರತಿನಿಧಿಸುತ್ತದೆ. ಗೋವಿನ ವೈಭವೀಕರಣದಲ್ಲಿ ಈ ಗುಂಪಿನ ಪಾತ್ರ ಬಹಳ ದೊಡ್ಡದು. ಗೋವಿನ ಹೆಸರಲ್ಲಿ ಆಗುತ್ತಿರುವ ಥಳಿತ, ಹಲ್ಲೆ, ಹತ್ಯೆಗಳನ್ನೆಲ್ಲ ‘ಗೋಮಾತೆ’ ಎಂಬ ಏಕೈಕ ಭಾವುಕ ಚೌಕಟ್ಟಿನೊಳಗಿಟ್ಟು ಬಹಿರಂಗವಾಗಿಯೋ ಆಂತರಿಕವಾಗಿಯೋ ಸಮರ್ಥಿಸುತ್ತಾ ಬಂದಿರುವುದು ಇದೇ ಗುಂಪು.ಗೋವಿನ ದೇಹದಲ್ಲಿ ಎಷ್ಟು ಕೋಟಿ ದೇವತೆಗಳಿವೆ, ಅದರ ಹಾಲು, ಸೆಗಣಿ, ಮೂತ್ರ ಮುಂತಾದುವುಗಳು ಹೇಗೆ ಜನೋಪಯೋಗಿ ಎಂಬುದನ್ನೆಲ್ಲ ವಿವಿಧ ಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತಿರುವ ಶ್ರೇಯವೂ ಈ ಗುಂಪಿಗೇ ಸಲ್ಲುತ್ತದೆ. ಒಂದು ರೀತಿಯಲ್ಲಿ, ಈ ಗುಂಪು ಗೋವನ್ನು ಪೂಜಾರ್ಹವಾಗಿ ಬಿಂಬಿಸಿದೆ. ಆರಾಧ್ಯವನ್ನಾಗಿ ಮಾಡಿದೆ. ತಾಯಿಗೆ ಸಮನಾರ್ಥದಲ್ಲಿ ವ್ಯಾಖ್ಯಾನಿಸಿದೆ. ಇದಕ್ಕೆ ಹೋಲಿಸಿದರೆ, ದಲಿತರು ಈ ನಂಬಿಕೆಯ ಸನಿಹಕ್ಕೂ ಬರುವುದಿಲ್ಲ. ಅವರಿಗದು ಆಹಾರ. ಹಾಗೆಯೇ ಸತ್ತ ದನದ ಚರ್ಮ ಸುಲಿಯುವುದು, ಅದರ ಕಳೇಬರವನ್ನು ವಿಲೇವಾರಿ ಮಾಡುವುದೆಲ್ಲ ಅವರ ಪಾಲಿಗೆ ಬರೇ ಒಂದು ಉದ್ಯೋಗ. ನಿಜವಾಗಿ, ಗೋವನ್ನು ತಾಯಿಯೆಂದು ಪರಿಗಣಿಸುವವರಿಗೆ ಸ್ವತಃ ಅದರ ಚರ್ಮ ಸುಲಿಯುವಾಗ ಆಗಬಹುದಾದ ಅನುಭವಕ್ಕೂ ಹಣಕ್ಕಾಗಿ ಚರ್ಮ ಸುಲಿಯುವವರಿಗೆ ಆಗಬಹುದಾದ ಅನುಭವಕ್ಕೂ ಪದಗಳಲ್ಲಿ ವ್ಯಕ್ತಪಡಿಸಲಾಗದಷ್ಟು ಆಧ್ಯಾತ್ಮಿಕ ಅಂತರ ಇದೆ. ದಲಿತನೋರ್ವ ಭಾವನೆಗಳಿಲ್ಲದೇ ಅದರ ಚರ್ಮವನ್ನು ಸುಲಿಯಬಲ್ಲ. ಮಣ್ಣು ಮಾಡಬಲ್ಲ. ಆದರೆ ಗೋವನ್ನು ಮಾತೆಯಾಗಿ ಪರಿಗಣಿಸುವವರಿಗೆ ಅದು ಅಷ್ಟು ಸುಲಭ ಅಲ್ಲ. ಅವರು ಚರ್ಮ ಸುಲಿಯುವ ಮತ್ತು ಮಣ್ಣು ಮಾಡುವ ಪ್ರತಿ ಸಂದರ್ಭವನ್ನೂ ಪೂರ್ಣ ಆಧ್ಯಾತ್ಮಿಕ ತೃಪ್ತಿಯೊಂದಿಗೆ ಅನುಭವಿಸಬಲ್ಲರು. ಇಷ್ಟಿದ್ದೂ, ಸಾವಿಗೀಡಾಗುವ ಮಾತೆ(ಗೋವು)ಯನ್ನು ಈ ಗುಂಪು ದಲಿತರ ಕೈಗೆ ಒಪ್ಪಿಸುವುದೇಕೆ? ಅವರ ಕೈಯಲ್ಲಿ ಚರ್ಮ ಸುಲಿಸುವುದೇಕೆ? ಅವರಿಂದಲೇ ಮಣ್ಣು ಮಾಡಿಸುವುದೇಕೆ? ಜೀವಂತ ಇರುವಾಗ ಗೋವಿನ ಮೇಲೆ ತೋರಲಾಗುವ ಗೌರವ ಮತ್ತು ಆದರವು ಸತ್ತ ಕೂಡಲೇ ಅನಾದರವಾಗಿ ಪಲ್ಲಟವಾಗುವುದು ಯಾಕಾಗಿ? ಗೋವನ್ನು ಮಾತೆಯಾಗಿ ಗೌರವಿಸುವವರು ಅದನ್ನು ಅಷ್ಟೇ ಗೌರವದಿಂದ ಮಣ್ಣು ಮಾಡುವುದರಿಂದ ಯಾಕೆ ತಪ್ಪಿಸಿಕೊಳ್ಳುತ್ತಾರೆ?
       ನಿಜವಾಗಿ, ದುರಂಹಕಾರ ಮತ್ತು ಮೇಲರಿಮೆ ಎಂಬೆರಡು ಮನುಷ್ಯ ವಿರೋಧಿ ದುರ್ಗುಣಗಳೇ ಈ ನಿಲುವುಗಳಿಗೆ ಮೂಲ ಕಾರಣ. ಈ ದೇಶದಲ್ಲಿ ಯಾರು ಯಾವ ವೃತ್ತಿಯನ್ನು ಮಾಡಬೇಕು, ಯಾರು ಯಾವ ಆಹಾರವನ್ನು ಸೇವಿಸಬೇಕು, ಯಾವುದು ಸಂಸ್ಕೃತಿ, ಯಾವುದು ಇತಿಹಾಸ, ಯಾವುದು ದೇಶಪ್ರೇಮ.. ಮುಂತಾದುವುಗಳನ್ನೆಲ್ಲ ನಿರ್ಧರಿಸುವುದೂ ಈ ಚಿಂತನೆಗಳೇ. ಈ ದೇಶದಲ್ಲಿ ದಲಿತರ ಪಾಲಿಗೆ ಗೋಮಾಂಸ ಪರಂಪರಾಗತ ಆಹಾರ. ಸತ್ತ ಗೋವಿನ ಚರ್ಮ ಸುಲಿಯುವುದನ್ನು ಮತ್ತು ವಿಲೇವಾರಿ ಮಾಡುವುದನ್ನು ಕೂಡ ಅವರು ಪರಂಪರಾಗತ ವೃತ್ತಿಯಂತೆ ಮಾಡಿಕೊಂಡು ಬಂದಿದ್ದಾರೆ. ಇದಕ್ಕೊಂದು ದೀರ್ಘ ಇತಿಹಾಸವಿದೆ. ಆದರೆ ಕಳೆದ ಶತಮಾನದಿಂದ ಈಚೆಗೆ ಈ ಮೇಲ್ಜಾತಿ ಗುಂಪು ಗೋವನ್ನು ತಮ್ಮ ಸಾಮಾಜಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಯುಧವಾಗಿ ಬಳಸುವ ತಂತ್ರಕ್ಕೆ ಇಳಿಯಿತು. ಈ ತಂತ್ರಕ್ಕೆ ದಲಿತ ಸಮುದಾಯದಲ್ಲಿ ಜಾಗೃತವಾಗುತ್ತಿರುವ ಸ್ವಾಭಿಮಾನ ಪ್ರಜ್ಞೆಯೂ ಒಂದು ಕಾರಣವಾಗಿರಬಹುದು. ಮಂಡಲ್ ವರದಿ ಮತ್ತಿತರ ದಲಿತ ಕೇಂದ್ರಿತ ಸಬಲೀಕರಣ ಚಳವಳಿಗಳಿಗೂ ಪಾತ್ರ ಇರಬಹುದು. ಇಂಥ ಸ್ಥಿತಿಯಲ್ಲಿ, ದಲಿತರ ಈ ಸ್ವಾಭಿಮಾನದ ಪ್ರಜ್ಞೆಗೆ ಪ್ರತಿಯಾಗಿ ಈ ಗುಂಪು ಗೋವನ್ನು ಅಖಾಡಕ್ಕೆ ಇಳಿಸಿತು. ದಲಿತ ಸಮೂಹದಲ್ಲಿ ಬೆಳೆಯುತ್ತಿರುವ ಜಾಗೃತಿಯನ್ನು ಪರಿಗಣಿಸಿದರೆ, ಇಂಥದ್ದೊಂದು ನಿರ್ಧಾರ ಈ ಗುಂಪಿನ ಪಾಲಿಗೆ ಅನಿವಾರ್ಯವಾಯಿತು ಎಂದೂ ಹೇಳಬಹುದು. ತಲೆತಲಾಂತರದಿಂದ ದಲಿತ ಸಮುದಾಯವನ್ನು ರಸ್ತೆಯಿಂದ, ದೇವಾಲಯದಿಂದ, ಸಾರ್ವಜನಿಕ ಬಾವಿಯಿಂದ ಮತ್ತು ಒಟ್ಟಾರೆಯಾಗಿ ಹೇಳಬೇಕೆಂದರೆ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬಹುದಾದ ಸರ್ವ ಸಂದರ್ಭಗಳಿಂದಲೂ ತಡೆದ ಈ ಗುಂಪು ಕ್ರಮೇಣ ತಮ್ಮ ಈ ಕ್ರೌರ್ಯಕ್ಕೆ ಪ್ರಬಲ ಪ್ರತಿರೋಧ ಎದುರಾಗತೊಡಗಿದಾಗ ಪ್ರತಿಯಾಗಿ ಆವಿಷ್ಕರಿಸಿಕೊಂಡ ಆಯುಧವೇ ಗೋವು. ವಿಶೇಷ ಏನೆಂದರೆ, ಗೋವನ್ನು ಮಾತೆಯಾಗಿ ಪ್ರತಿಷ್ಠಾಪಿಸುವ ಮೂಲಕ ಆ ಗುಂಪು ದಲಿತರ ಮೇಲಷ್ಟೇ ಅಧಿಕಾರ ಸ್ಥಾಪಿಸುವ ಸಾಮರ್ಥ್ಯವನ್ನು ಪಡಕೊಂಡದ್ದಲ್ಲ, ಗೋಮಾಂಸವನ್ನು ಸೇವಿಸುವ ಸಮಾಜದ ಬಡವರು, ದಮನಿತರು ಮತ್ತು ಇತರ ಧರ್ಮೀಯರ ಮೇಲೂ ದಮನಕಾರಿ ನೀತಿಯನ್ನು ಪ್ರಯೋಗಿಸುವ ಪರವಾನಿಗೆಯನ್ನು ಪಡಕೊಂಡಿತು. ಒಂದು ವೇಳೆ, ಗೋವಿನ ಮೇಲೆ ಅವರಿಗೆ ಆದರ ಇರುವುದೇ ಆಗಿರುತ್ತಿದ್ದರೆ, ಕನಿಷ್ಠ ಅದನ್ನು ಚರ್ಮ ಸುಲಿಯದೆಯೇ ಸ್ವತಃ ಮಣ್ಣು ಮಾಡುವುದನ್ನು ಪುಣ್ಯ ಕಾರ್ಯ ಎಂದು ಪರಿಗಣಿಸಬೇಕಿತ್ತು. ಎಲ್ಲೇ ಗೋವು ಸತ್ತರೂ ಅಲ್ಲಿಗೆ ಧಾವಿಸಿ ಬಂದು ಅದರ ಮಣ್ಣು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಈ ಗುಂಪಿಗೆ ತಮ್ಮ ದಮನ ನೀತಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಒಂದು ಪ್ರಾಣಿಯಾಗಿ ಗೋವು ಬೇಕಿತ್ತೇ ಹೊರತು ‘ಮಾತೆ’ಯಾಗಿ ಅಲ್ಲ. ಆದ್ದರಿಂದಲೇ, ಅದರ ಚರ್ಮ ಸುಲಿಯುವುದನ್ನು ಅವರು ವಿರೋಧಿಸಲಿಲ್ಲ. ಸ್ವತಃ ಮಣ್ಣು ಮಾಡುವುದಕ್ಕೂ ಮುಂದಾಗಲಿಲ್ಲ. ಇವೆರಡನ್ನೂ ಪರಂಪರಾಗತ ದಲಿತ ವೃತ್ತಿಗಳಾಗಿಯೇ ಇರಗೊಟ್ಟರು. ಆದರೆ ದಲಿತರ ಮೆನುವಿನಲ್ಲಿ ಗೋಮಾಂಸ ಇರಬಾರದು ಎಂದು ಆದೇಶಿಸಿದರು. ಈ ಹಿಂದೆ ದಲಿತರನ್ನು ಹೇಗೆ ಪರಾವಲಂಬಿಗಳಾಗಿ ನಡೆಸಿಕೊಂಡು ಬರಲಾಗಿತ್ತೋ ಅದರದ್ದೇ ಮುಂದುವರಿಕೆ ಇದು. ತಾವು ಏನನ್ನು ತಿನ್ನಬಾರದೆಂದು ಆದೇಶಿಸುತ್ತೇವೋ ಅದನ್ನು ಅನುಸರಿಸಬೇಕು. ಯಾವ ವೃತ್ತಿಯಲ್ಲಿ ಮುಂದುವರಿಯಬೇಕೆಂದು ಹೇಳುತ್ತೇವೋ ಅದಕ್ಕೆ ವಿರುದ್ಧ ನಡೆಯಬಾರದು. ಶತಮಾನಗಳ ಹಿಂದೆಯೂ ಮತ್ತು ಈಗಲೂ ದಲಿತರಿಗೆ ಸ್ವತಃ ತೀರ್ಮಾನಿಸಿಕೊಳ್ಳುವ ಸ್ವಾತಂತ್ರ್ಯವಿಲ್ಲ ಎಂಬ ಧಾರ್ಷ್ಟ್ಯ ಇದು. ಗುಜರಾತ್‍ನ ಕರ್ಜಾ ಗ್ರಾಮದ ಘಟನೆ ನೀಡುತ್ತಿರುವ ಸಂದೇಶವೂ ಇದುವೇ. ಉನಾ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತು ಅದನ್ನು ಕೇಂದ್ರೀಕರಿಸಿ ಚಳವಳಿಗಳು ಹುಟ್ಟಿಕೊಳ್ಳುತ್ತಿರುವ ಈ ಸಂದರ್ಭದಲ್ಲೂ ಅದೇ ಉನಾ ಇರುವ ಗುಜರಾತ್‍ನಲ್ಲೇ ಇಂಥ ಘಟನೆ ನಡೆದಿರುವುದು ಆ ಮನಃಸ್ಥಿತಿಯು ಎಷ್ಟು ಕ್ರೂರ, ಎಷ್ಟು ನಿರ್ಭಯ ಮತ್ತು ಎಷ್ಟು ಅಪಾಯಕಾರಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸದ್ಯದ ತುರ್ತು ಏನೆಂದರೆ, ಗೋವನ್ನು ಅವರ ಒತ್ತೆಯಿಂದ ಬಿಡಿಸಿಕೊಂಡು ಸಮಾಜಕ್ಕೆ ಅರ್ಪಿಸುವುದು. ಗೋವಿನ ಪೇಟೆಂಟನ್ನು ಯಾವೊಬ್ಬ ಖಾಸಗಿ ವ್ಯಕ್ತಿಗೂ ಗುಂಪಿಗೂ ಸಂಘಟನೆಗೂ ನೀಡಲಾಗಿಲ್ಲ ಎಂಬುದಾಗಿ ಸಮಾಜಕ್ಕೆ ಸ್ಪಷ್ಟಪಡಿಸುವುದು. ಅದಕ್ಕಾಗಿ ಪರಿಣಾಮಕಾರಿ ಚಳವಳಿ, ರಾಲಿ, ಪ್ರದರ್ಶನಗಳನ್ನು ಏರ್ಪಡಿಸುವುದು. ಅಂದಹಾಗೆ,
        ಗೋವು ಸ್ವತಂತ್ರಗೊಳ್ಳುವುದೆಂದರೆ, ದಲಿತರೂ ಸ್ವತಂತ್ರಗೊಂಡಂತೆ. ಉನಾ ಮತ್ತು ಕರ್ಜಾಗಳು ಸಾರುತ್ತಿರುವುದೂ ಇದನ್ನೇ.

Friday 23 September 2016

ಹಿಂದೂ ಮುಖಂಡರ ಹತ್ಯೆಗೆ ಸಂಚು ಹೆಣೆದವರು ಮತ್ತು ನ್ಯಾಯ

       ನ್ಯಾಯ ಎಂಬ ಪದದ ಆರಂಭದಲ್ಲಿ ‘ಅ’ವನ್ನು ಸೇರಿಸಿದರೆ ಆಗುವ ಅರ್ಥವ್ಯತ್ಯಾಸ (ಅನ್ಯಾಯ) ಬಹಳ ದೊಡ್ಡದು. ಹಾಗಂತ, ಒಂದು ಬಿಡಿ ಅಕ್ಷರವಾಗಿ ‘ಅ’ದಲ್ಲಿ ಯಾವ ತಪ್ಪಿತಸ್ಥ ಗುಣವೂ ಇಲ್ಲ. ಕನ್ನಡ ಅಕ್ಷರಮಾಲೆಯ ಇತರೆಲ್ಲ ಅಕ್ಷರಗಳಂತೆ ‘ಅ’ವೂ ಒಂದು. ಅದನ್ನು ನಾವು ಎಲ್ಲಿ ಮತ್ತು ಹೇಗೆಲ್ಲ ಬಳಸುತ್ತೇವೋ ಅದನ್ನು ಹೊಂದಿಕೊಂಡು ಅದು ತನ್ನನ್ನು ಪ್ರಸ್ತುತಪಡಿಸುತ್ತದೆ. ನ್ಯಾಯಾಲಯದ ಮಟ್ಟಿಗೂ ನಾವು ಇದೇ ಮಾತನ್ನು ಹೇಳಬಹುದು. ನ್ಯಾಯವನ್ನು ನೀಡುವ ಮಂದಿರ ಎಂಬ ನೆಲೆಯಲ್ಲಿ ನ್ಯಾಯಾಲಯ ಅತ್ಯಂತ ಗೌರವಾರ್ಹವಾದುದು. ಆದ್ದರಿಂದಲೇ, ಅಲ್ಲಿನ ಚಟುವಟಿಕೆಗಳನ್ನು ಜನರು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಅನ್ಯಾಯದಿಂದ ನ್ಯಾಯವನ್ನು ಪಡಕೊಳ್ಳುವ ಏಕೈಕ ಆಲಯ ಎಂಬುದಾಗಿ ಭರವಸೆ ಇಟ್ಟು ಬದುಕುತ್ತಾರೆ. ಒಂದು ವೇಳೆ, ಈ ಭರವಸೆಯನ್ನು ಸುಳ್ಳು ಮಾಡುವ ಸನ್ನಿವೇಶಗಳು ಮತ್ತೆ ಮತ್ತೆ ಸಂಭವಿಸತೊಡಗಿದರೆ, ಜನರ ಪ್ರತಿಕ್ರಿಯೆ ಏನಿದ್ದೀತು? ನ್ಯಾಯವನ್ನು ನಿರೀಕ್ಷಿಸುತ್ತಾ ದಿನಗಳನ್ನು ಕಳೆದೂ ಕಳೆದೂ ಸುಸ್ತಾದವವರು ಕೊನೆಗೆ ನ್ಯಾಯಾಲಯಕ್ಕೆ ‘ಅ’ವನ್ನು ಸೇರಿಸುವುದಕ್ಕೆ ತೀರ್ಮಾನಿಸಿದರೆ ಅದರ ಹೊಣೆಗಾರಿಕೆಯನ್ನು ಯಾರ ಮೇಲೆ ಹೊರಿಸಬೇಕು? ಕಳೆದ ವಾರ ಎನ್‍ಐಎ(ರಾಷ್ಟ್ರೀಯ ತನಿಖಾ ದಳ)ಯ ವಿಶೇಷ ನ್ಯಾಯಾಲಯವು ನೀಡಿದ ನ್ಯಾಯವು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ, ಪ್ರಮೋದ್ ಮುತಾಲಿಕ್, ಪತ್ರಕರ್ತ ಪ್ರತಾಪ್ ಸಿಂಹ, ಉದ್ಯಮಿ ವಿಜಯ ಸಂಕೇಶ್ವರ.. ಮುಂತಾದವರ ಹತ್ಯೆ ನಡೆಸಲು ಸಂಚು ರೂಪಿಸಿದ್ದರೆಂದು ಆರೋಪಿಸಿ 2012ರಲ್ಲಿ ಸುಮಾರು 13 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ವಿಶೇಷ ನ್ಯಾಯಾಲಯವು ಆರೋಪಿಗಳಿಗೆ ಐದು ವರ್ಷಗಳ ಸಾದಾ ಶಿಕ್ಷೆಯನ್ನು ಘೋಷಿಸಿದೆ. ಆರೋಪಿಗಳು ತಪ್ಪೊಪ್ಪಿಕೊಂಡಿರುವುದೇ ಈ ಶಿಕ್ಷೆಗೆ ಆಧಾರ ಎಂದೂ ಅದು ಹೇಳಿದೆ. ಅಂದಹಾಗೆ, ಹೊರನೋಟಕ್ಕೆ ಈ ವಿಚಾರಣಾ ಪ್ರಕ್ರಿಯೆಯಲ್ಲಿ ಅಸಹಜವಾದುದು ಯಾವುದೂ ಇಲ್ಲ. ಆರೋಪಿಗಳು ತಪ್ಪೊಪ್ಪಿಕೊಳ್ಳುವುದು ಮತ್ತು ನ್ಯಾಯಾಲಯ ನ್ಯಾಯ ತೀರ್ಮಾನ ಕೈಗೊಳ್ಳುವುದೆಲ್ಲ ನ್ಯಾಯ ಪ್ರಕ್ರಿಯೆಯ ಸಹಜ ವಿಧಾನ. ಕಳೆದವಾರ ಪತ್ರಿಕೆಗಳು ಕೂಡ, ‘ಹಿಂದೂ ಮುಖಂಡರ ಹತ್ಯಾ ಸಂಚು: ಆರೋಪಿಗಳಿಗೆ ಶಿಕ್ಷೆ..’ ಎಂಬ ಧಾಟಿಯಲ್ಲೇ ಸುದ್ದಿ ಪ್ರಕಟಿಸಿದ್ದುವು. ದುರಂತ ಏನೆಂದರೆ, ಈ ಪ್ರಕರಣಕ್ಕೆ ಈ ಬಾಹ್ಯಮುಖವಷ್ಟೇ ಇರುವುದಲ್ಲ. ಆಂತರಿಕವಾದ ಇನ್ನೊಂದು ಮುಖವೂ ಇದೆ. ಆ ಮುಖ
ಅತ್ಯಂತ ಆಘಾತಕಾರಿಯಾದುದು. ಈ ಪ್ರಕರಣದ ಆರೋಪಿಗಳು 4 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಜೈಲಲ್ಲಿದ್ದಾರೆ. ಆದರೂ ಅವರಿಗೆ ಜಾಮೀನಿನಲ್ಲಿ ಹೊರಬರುವ ಅವಕಾಶವನ್ನು ನ್ಯಾಯಾಲಯ ನೀಡಿಲ್ಲ. ಜಾಮೀನು ಪಡೆದು ಹೊರಬರುವ ಪ್ರಕರಣ ಇದಾಗಿದ್ದರೂ ಅವರಿಗೆ ಈ ಅವಕಾಶವನ್ನು ನಿರಾಕರಿಸಲಾಗಿದೆ ಎಂಬ ಅಭಿಪ್ರಾಯ ನ್ಯಾಯತಜ್ಞರದು. ಈ ಪ್ರಕರಣವನ್ನು ವಿಚಾರಣೆ ನಡೆಸಲೆಂದೇ ಎನ್.ಐ.ಎ.ಯು ವಿಶೇಷ ನ್ಯಾಯಾಲಯವನ್ನು ರಚಿಸಿತು. ತ್ವರಿತಗತಿಯಲ್ಲಿ ವಿಚಾರಣೆ ನಡೆದು ತೀರ್ಪು ಹೊರಬರಬೇಕೆಂಬುದೇ ಇದರ ಉದ್ದೇಶವಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಈ ಪ್ರಕರಣದ ವಿಚಾರಣೆ ಎಷ್ಟು ಆಮೆಗತಿಯಲ್ಲಿ ನಡೆಯಿತೆಂದರೆ, ಆರೋಪಿಗಳು ನ್ಯಾಯಾಂಗದ ಮೇಲೆಯೇ ಭರವಸೆ ಕಳಕೊಳ್ಳುವಷ್ಟು. ಈವರೆಗೆ ಬರೇ 23 ಸಾಕ್ಷಿಗಳ ವಿಚಾರಣೆಯಷ್ಟೇ ನಡೆದಿದೆ. ಒಟ್ಟು 350ರಷ್ಟು ಸಾಕ್ಷಿಗಳಲ್ಲಿ ಬರೇ 23 ಸಾಕ್ಷಿಗಳ ವಿಚಾರಣೆಯಷ್ಟೇ ಈ 4 ವರ್ಷಗಳಲ್ಲಿ ನಡೆದಿದೆ ಎಂಬುದರ ಅರ್ಥ ಏನು? ಇದು ಸಹಜವೋ ಅಸಹಜವೋ? ಈ ಗತಿಯಲ್ಲಿ ವಿಚಾರಣಾ ಪ್ರಕ್ರಿಯೆ ನಡೆದರೆ ಉಳಿದ 327 ಮಂದಿ ಸಾಕ್ಷಿಗಳ ವಿಚಾರಣೆ ಮುಗಿಯಲು ಎಷ್ಟು ವರ್ಷಗಳು ಬೇಕಾದೀತು? 5 ವರ್ಷಗಳ ಸಾದಾ ಶಿಕ್ಷೆಗೆ ಅರ್ಹವಾದಂತಹ ಆರೋಪವನ್ನು ಹೊತ್ತುಕೊಂಡವರು ಜೀವನಪರ್ಯಂತ ಜೈಲಲ್ಲಿರಬೇಕಾದಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತಲ್ಲವೇ? ಯಾವುದೇ ವ್ಯಕ್ತಿಯನ್ನು ಮಾನಸಿಕವಾಗಿ ಹಿಂಸಿಸುವ ಪ್ರಶ್ನೆ ಇದು. ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸುವುದಕ್ಕಿಂತ ತಪ್ಪೊಪ್ಪಿಕೊಂಡು ಜೈಲಿನಿಂದ ಹೊರಬರುವುದೇ ಬುದ್ಧಿವಂತಿಕೆ ಎಂದು ತೀರ್ಮಾನಿಸುವುದಕ್ಕೆ ಒತ್ತಾಯಿಸುವ ಸನ್ನಿವೇಶ ಇದು. ಆದ್ದರಿಂದಲೇ, ಈ 13 ಮಂದಿ ಆರೋಪಿಗಳು ಸನ್ನಿವೇಶದ ಒತ್ತಡಕ್ಕೆ ಒಳಗಾಗಿದ್ದಾರೆ. ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೇ ಈ ತಪ್ಪೊಪ್ಪಿಕೊಳ್ಳುವಿಕೆಯ ಹಿಂದೆಯೂ ಅನುಮಾನವಿದೆ. ಆರೋಪಿಗಳು ಮತ್ತು ವ್ಯವಸ್ಥೆಯ ನಡುವೆ ಚೌಕಾಶಿ ಮಾತುಕತೆಗಳು ನಡೆದಿವೆ ಎಂದೂ ಹೇಳಲಾಗುತ್ತದೆ. ಇವೆಲ್ಲ ನಿಜ ಎಂದಾದರೆ, ಕಳೆದವಾರ ತೀರ್ಪು ನೀಡಲಾದ ದಿನವನ್ನು ನಮ್ಮ ನ್ಯಾಯಾಂಗ ವ್ಯವಸ್ಥೆಯ ಪಾಲಿಗೆ ಅತ್ಯಂತ ವಿಷಾದಕರ ದಿನವಾಗಿ ಪರಿಗಣಿಸಬೇಕಾಗುತ್ತದೆ. ಅಷ್ಟಕ್ಕೂ, ವಿಶೇಷ ನ್ಯಾಯಾಲಯದ ರಚನೆಯ ಬಳಿಕವೂ ವಿಚಾರಣಾ ಪ್ರಕ್ರಿಯೆ ಇಷ್ಟು ನಿಧಾನಗೊಳ್ಳಲು ಕಾರಣವೇನು? ಈ ನಿಧಾನ ಸಹಜವೇ ಅಥವಾ ಉದ್ದೇಶಪೂರ್ವಕವೇ?
       ಯಾವುದೇ ಒಂದು ಪ್ರಕರಣವೂ ಕೆಲವು ನಿರ್ದಿಷ್ಟ ಪ್ರಕ್ರಿಯೆಗಳನ್ನು ದಾಟಿ ಹೋಗಬೇಕಾಗುತ್ತದೆ. ಸಾಕ್ಷಿಗಳ ವಿಚಾರಣೆ, ವಕೀಲರು ಮತ್ತು ಪ್ರಾಸಿಕ್ಯೂಟರ್‍ಗಳ ನಡುವೆ ವಾದ, ನ್ಯಾಯಾಧೀಶರ ವಿಶ್ಲೇಷಣೆ.. ಇವೆಲ್ಲ ತೀರ್ಪಿನ ಮೊದಲು ನಡೆಯುವ ಸಾಮಾನ್ಯ ಚಟುವಟಿಕೆಗಳು. ಆದರೆ, ಈ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ನಡೆದಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ಸಾಮಾನ್ಯವಾಗಿ ಓರ್ವರನ್ನು ಅಪರಾಧಿ ಮತ್ತು ನಿರಪರಾಧಿ ಎಂದು ಕೋರ್ಟು ತೀರ್ಮಾನಿಸುವುದೇ ಸಾಕ್ಷಿಯ ಆಧಾರದಲ್ಲಿ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಾಕ್ಷಿಗೆ ಅತೀ ಪ್ರಮುಖ ಪಾತ್ರ ಇದೆ. ಕೇರಳದ ಸೌಮ್ಯ ಪ್ರಕರಣದಲ್ಲಿ ಹೈಕೋರ್ಟ್‍ನಿಂದ ಮರಣ ದಂಡನೆಗೆ ಗುರಿಯಾಗಿದ್ದ ಗೋವಿಂದ ಚಾಮಿಯ ಶಿಕ್ಷೆಯನ್ನು ಸುಪ್ರೀಮ್ ಕೋರ್ಟ್ ಕಳೆದವಾರ ಜೀವಾವಧಿ ಶಿಕ್ಷೆಗೆ ಇಳಿಸಿರುವುದಕ್ಕೆ ಪ್ರಮುಖ ಆಧಾರವೇ ಸಾಕ್ಷ್ಯದ ಕೊರತೆ. ಇಷ್ಟೊಂದು ಪ್ರಮುಖ ಆಧಾರವನ್ನೇ ಬುಡಮೇಲು ಮಾಡಬಲ್ಲಂತಹ ಪ್ರಕ್ರಿಯೆಯೊಂದು ವಿಶೇಷ ನ್ಯಾಯಾಲಯದಲ್ಲಿ ನಡೆದಿರುವುದು ಎಲ್ಲಿಯ ವರೆಗೆ ಸಮರ್ಥನೀಯ? ಇದನ್ನೇ ಮಾದರಿಯಾಗಿಸಿಕೊಂಡು ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಬೆಳವಣಿಗೆಗಳು ನಡೆದರೆ ಅದರ ಪರಿಣಾಮ ಏನಾದೀತು? ಆರೋಪಿಗಳನ್ನು ಸತಾಯಿಸಲಿಕ್ಕೆಂದೇ ನೂರಾರು ಸಾಕ್ಷಿಗಳನ್ನು ಪಟ್ಟಿ ಮಾಡುವುದು ಮತ್ತು ಆಮೆಗತಿಯಲ್ಲಿ ವಿಚಾರಣಾ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುವುದೆಲ್ಲ ನಡೆದರೆ ಏನು ಮಾಡುವುದು? ಅದರಿಂದ ನಮ್ಮ ನ್ಯಾಯ ವ್ಯವಸ್ಥೆಗೆ ಅಂಟಬಹುದಾದ ಕಳಂಕ ಯಾವ ರೀತಿಯದು?
      ನಿಜವಾಗಿ, ಆರೋಪಿಗಳು ತಪ್ಪೊಪ್ಪಿಕೊಳ್ಳುವುದಕ್ಕೂ ತಪ್ಪೊಪ್ಪಿಸುವುದಕ್ಕೂ ನ್ಯಾಯ-ಅನ್ಯಾಯದಷ್ಟೇ ವ್ಯತ್ಯಾಸವಿದೆ. ತಪ್ಪೊಪ್ಪಿಸುವುದು ಎಂಬ ಪದದಲ್ಲಿ ಬಲವಂತ ಇದೆ. ಇದು ನ್ಯಾಯಾಂಗದ ಕೆಲಸ ಅಲ್ಲ. ತಮ್ಮ ವಿಚಾರಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಮನ ಸೋತು ಆರೋಪಿಗಳು ಪಶ್ಚಾತ್ತಾಪದಿಂದ ತಪ್ಪೊಪ್ಪಿಕೊಳ್ಳುವಂತೆ ಮಾಡುವುದೇ ನಿಜವಾದ ನ್ಯಾಯ ಪ್ರಕ್ರಿಯೆ ಆದರೆ, ವಿಶೇಷ ನ್ಯಾಯಾಲಯವು ಈ ಹಿನ್ನೆಲೆಯಲ್ಲಿ ವಿಫಲವಾಗಿದೆ ಎಂದೇ ಹೇಳಬೇಕಾಗುತ್ತದೆ.

Sunday 18 September 2016

ಗಣೇಶ ವಿಸರ್ಜನೆ ಮತ್ತು ಸಾದಾತ್ ಖಾನ್: ನಮ್ಮೆಲ್ಲರ ಜೇಬಲ್ಲಿ ಇರಲೇಬೇಕಾದ ದೃಶ್ಯ

        ವಾರದ ಹಿಂದೆ ಗಣೇಶ ವಿಸರ್ಜನೆಯ ವೇಳೆ ತೆಪ್ಪ ಮುಳುಗಿ 12 ಮಂದಿ ಯುವಕರು ತುಂಗಭದ್ರಾ ನದಿ ಪಾಲಾದ ಘಟನೆಯಿಂದ ದುಃಖತಪ್ತವಾದ ಶಿವಮೊಗ್ಗದ ಹಾಡೋನಹಳ್ಳಿ ಗ್ರಾಮವು ಆ ಶೋಕದಲ್ಲೂ ಸಾದಾತ್ ಖಾನ್ ನೇತೃತ್ವದ ಮುಳುಗು ತಜ್ಞರ ತಂಡವನ್ನು ಶ್ಲಾಘಿಸಿದೆ. ಯುವಕರನ್ನು ಕಳೆದುಕೊಂಡು ಗ್ರಾಮವು ನದಿದಂಡೆಯಲ್ಲಿ ಬೀಡು ಬಿಟ್ಟಿದ್ದರೆ, ಸಾದಾತ್ ಖಾನ್ ನೇತೃತ್ವದ ತಂಡ ನದಿಯಲ್ಲಿತ್ತು. ಬಹುಶಃ, ಮನುಷ್ಯ ಪ್ರೇಮಕ್ಕೆ ಸಾಕ್ಷಿಯಾದ ಅಪೂರ್ವ ಕ್ಷಣ ಅದು. ದಂಡೆಯಲ್ಲಿರುವವರು ಮತ್ತು ನದಿಯಲ್ಲಿರುವವರ ನಡುವೆ ಮನುಷ್ಯರು ಎಂಬೊಂದು ಸಮಾನ ಅಂಶವನ್ನು ಬಿಟ್ಟರೆ ಉಳಿದಂತೆ ಧರ್ಮ, ಸಂಸ್ಕೃತಿ, ಆಚರಣೆ, ಭಾಷೆ, ಪೂಜಾ ಮಾದರಿ.. ಎಲ್ಲದರಲ್ಲೂ ಎತ್ತಿ ಹೇಳಬಹುದಾದಷ್ಟು ವ್ಯತ್ಯಾಸಗಳಿದ್ದುವು. ಸ್ಪಷ್ಟವಾಗಿ ಹೇಳಬೇಕೆಂದರೆ, ವಿಗ್ರಹವನ್ನು ಪೂಜಿಸುವ ಯುವಕರಿಗಾಗಿ ವಿಗ್ರಹವನ್ನು ಪೂಜಿಸದ ತಂಡ ನದಿಯಲ್ಲಿತ್ತು. ಧರ್ಮದ ನೆಪದಲ್ಲಿ ಥಳಿಸುವ, ದ್ವೇಷಿಸುವ ಮತ್ತು ಕೊಲೆಗೈಯುವವರ ಪಾಲಿಗೆ ಫ್ರೇಮ್ ಹಾಕಿ ಕೊರಳಲ್ಲಿ ತೂಗು ಹಾಕಿಕೊಳ್ಳಬೇಕಾದ ದೃಶ್ಯ ಇದು. ಧರ್ಮ ಮತ್ತು ಅದರ ಆಚರಣಾ ಪದ್ಧತಿಗಳು ಮನುಷ್ಯ ವಿಭಜನೆಯ ಸಂಕೇತವಲ್ಲ ಎಂದು ಬಲವಾಗಿ ಮತ್ತೆ ಮತ್ತೆ ಸಾರಿದ ಸಂದರ್ಭವೂ ಹೌದು. ಈ ಕಾರಣದಿಂದಲೇ ಕಣ್ಣೀರಿನ ಮಧ್ಯೆಯೂ ಸಾದಾತ್ ಖಾನ್ ತಂಡವನ್ನು ಆ ಗ್ರಾಮ ಅಭಿನಂದಿಸಿದೆ. ಮನಸಾರೆ ಕೊಂಡಾಡಿದೆ.
       ನಿಜವಾಗಿ, ಹಬ್ಬಗಳು ಇವತ್ತು ಸಂಭ್ರಮದ ಕ್ಷಣಗಳಾಗಿಯಷ್ಟೇ ಉಳಿದಿಲ್ಲ. ಹಬ್ಬಗಳಿಗೆ ಬೇಲಿಗಳನ್ನು ಹಾಕಲಾಗಿದೆ. ಹಬ್ಬ ಎಂದರೆ ಒಂದಷ್ಟು ಭಯ, ಒಂದಷ್ಟು ಆತಂಕ ಮತ್ತು ಒಂದಷ್ಟು ಅನುಮಾನಗಳ ಸಂಗ್ರಹ ರೂಪವಾಗಿಯೂ ಸಮಾಜದಲ್ಲಿ ಗುರುತಿಗೀಡಾಗಿದೆ. ಸದ್ಯ ಹಬ್ಬಕ್ಕೆ ಎರಡು ರೀತಿಯ ಪೂರ್ವ ತಯಾರಿಗಳನ್ನು ಮಾಡಲಾಗುತ್ತದೆ. ಒಂದು- ಆಹಾರ, ಉಡುಪು ಮತ್ತಿತರ ವಿಷಯಗಳಿಗೆ ಸಂಬಂಧಿಸಿದ್ದರೆ ಇನ್ನೊಂದು ಹಬ್ಬದ ದಿನಕ್ಕೆ ಸಂಬಂಧಿಸಿದ್ದು. ಒಂದು ಧರ್ಮದ ಹಬ್ಬದ ದಿನದಂದು ಇನ್ನೊಂದು ಧರ್ಮದ ಮಂದಿ ತುಸು ಆತಂಕದಿಂದಲೇ ಬೀದಿಗಿಳಿಯುವ ವಾತಾವರಣ ನಿರ್ಮಾಣವಾಗುತ್ತಿದೆ. ಹಬ್ಬಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಿ ಎಂದು ಪೊಲೀಸರನ್ನು ವಿನಂತಿಸಿಕೊಳ್ಳುವುದು ನಡೆಯುತ್ತದೆ. ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಬಾರಿಕೊಡ್‍ಗಳನ್ನು ಅಲ್ಲಲ್ಲಿ ರಸ್ತೆಗೆ ಅಡ್ಡವಾಗಿ ಇಡಲಾಗುತ್ತದೆ. ‘ಶಾಂತಿಯುತ ಹಬ್ಬಾಚರಣೆಗೆ ಕರೆ..’ ಎಂಬ ಶೀರ್ಷಿಕೆಯಲ್ಲಿ ಜಿಲ್ಲಾಧಿಕಾರಿಯದ್ದೋ ಪೊಲೀಸ್ ಕಮೀಷನರ್‍ರದ್ದೋ ವಿನಂತಿಯನ್ನು ಪತ್ರಿಕೆಗಳು ಪ್ರಕಟಿಸುತ್ತವೆ. ಬಹುಶಃ ಆಚರಿಸುವುದು ಹಬ್ಬವನ್ನೋ ಅಲ್ಲ, ಕುಸ್ತಿಯನ್ನೋ ಎಂದು ಅನುಮಾನಿಸುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಘಟನೆ ನಮಗೆ ಮುಖ್ಯವಾಗಬೇಕು. ಅಲ್ಲಿ ನಡೆದಿರುವುದು ದುರಂತವೊಂದೇ ಅಲ್ಲ. ದುರಂತದ ನೋವನ್ನೂ ಮರೆಸುವ ಮಾನವೀಯ ಘಟನೆಯೂ ನಡೆದಿದೆ. ಗಣೇಶ ವಿಸರ್ಜನೆ ಎಂಬುದು ಹಿಂದೂಗಳಿಗೆ ಸಂಬಂಧಿಸಿದ್ದು. ಗಣೇಶ ವಿಗ್ರಹದ ವಿಸರ್ಜನೆಯನ್ನು ನದಿ ಮಧ್ಯದಲ್ಲಿ ನಡೆಸಬೇಕೋ ಅಲ್ಲ ದಂಡೆಯಲ್ಲಿ ಮಾಡಿದರೆ ಸಾಕೋ, ಧಾರ್ಮಿಕ ಆಚರಣೆಗಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯ ಇದೆಯೇ.. ಎಂಬುದೆಲ್ಲ ಆ ಧರ್ಮದ ಒಳಗಡೆಯೇ ಚರ್ಚೆಗೊಳಗಾಗಬೇಕಾದದ್ದು. ಇದು ಕೇವಲ ಗಣೇಶ ವಿಸರ್ಜನೆಗೆ ಸಂಬಂಧಿಸಿ ಮಾತ್ರ ಹೇಳಬೇಕಾದುದಲ್ಲ, ಮೊಸರು ಕುಡಿಕೆಯನ್ನು ಒಡೆಯುವ ಸಂದರ್ಭಕ್ಕೂ ಅನ್ವಯಿಸಿ ಇದನ್ನು  ಹೇಳಬೇಕಾಗಿದೆ. ಶಿವಮೊಗ್ಗ ದುರಂತಕ್ಕಿಂತ ವಾರಗಳ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಓರ್ವ ಹದಿಹರೆಯದ ಯುವಕ ಮಡಿಕೆ ಒಡೆಯುವ ಭರದಲ್ಲಿ ಆಯತಪ್ಪಿ ಕೆಳಬಿದ್ದು ಸಾವಿಗೀಡಾಗಿದ್ದಾನೆ. ಇವು ಮತ್ತು ಇಂಥ ಇನ್ನಿತರ ಅನಾಹುತಗಳು ಹಬ್ಬಗಳ ಬಾಹ್ಯ ಆತಂಕಗಳಾದರೆ, ಆಂತರಿಕ ಆತಂಕಗಳಂತೂ ಇದನ್ನೂ ಮೀರುವಷ್ಟು ಅಪಾಯಕಾರಿಯಾಗಿ ಬೆಳೆಯುತ್ತಿವೆ. ಹಬ್ಬಗಳನ್ನು ಇವತ್ತು ಸಮಾಜ ಹೇಗೆ ವರ್ಗೀಕರಿಸಿಕೊಳ್ಳುತ್ತಿವೆಯೆಂದರೆ, ಅದರ ಸುಖ ಮತ್ತು ಆನಂದದಲ್ಲಿ ತನ್ನ ಧರ್ಮದವರ ಹೊರತು ಇನ್ನಾರೂ ಪಾಲುದಾರರಾಗಬಾರದೆಂಬಂತೆ ವರ್ತಿಸುತ್ತಿದೆ. ‘ದೀಪಾವಳಿಯ ಖುಷಿ ಹಿಂದೂಗಳಲ್ಲಿ ಮಾತ್ರ ಇರಬೇಕು, ಆ ಖುಷಿಯನ್ನು ಮುಸ್ಲಿಮರೊಂದಿಗೆ ಹಂಚಿಕೊಳ್ಳುವ ಸನ್ನಿವೇಶಗಳು ನಿರ್ಮಾಣವಾಗಬಾರದು, ಒಟ್ಟಾಗಿ ಒಂದು ಕಡೆ ಕೂತು ಹಬ್ಬ ಮತ್ತು ಅದು ಸಾರುವ ಮೌಲ್ಯಗಳ ಕುಶಲೋಪರಿ ನಡೆಸುವಂತಾಗಬಾರದು..’ ಎಂದು ಅಲಿಖಿತವಾಗಿಯೇ ತೀರ್ಮಾನಿಸಿಕೊಂಡಂತಹ ವಾತಾವರಣ ಬಲಪಡೆಯತೊಡಗಿದೆ. ಈದ್‍ಗೆ ಸಂಬಂಧಿಸಿಯೂ ಇದೇ ಮಾತನ್ನು ಹೇಳಬಹುದು. ಈದ್‍ನ ಖುಷಿಯನ್ನು ಮುಸ್ಲಿಮನೋರ್ವ ತನ್ನ ಹಿಂದೂ ನೆರೆಯವರೊಂದಿಗೆ ಹಂಚಿಕೊಳ್ಳುವುದಕ್ಕೂ ತಾನು ಮತ್ತು ತನ್ನ ಧರ್ಮದವರ ಜೊತೆಗೂಡಿ ಮಾತ್ರ ಆಚರಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಮುಸ್ಲಿಮರ ಟೊಪ್ಪಿ, ಗಡ್ಡ, ಹೊಸ ಉಡುಪು, ಪ್ರಾಣಿ ಹತ್ಯೆ, ಆಲಿಂಗನ, ಅಲ್ಲಾಹು ಅಕ್ಬರ್, ನಮಾಝ.. ಇತ್ಯಾದಿಗಳೆಲ್ಲವೂ ಇನ್ನೋರ್ವ ಮುಸ್ಲಿಮರಿಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಈದ್ ಅಂದರೆ ಏನು ಮತ್ತು ಅದರ ಆಚರಣಾ ವಿಧಾನ ಹೇಗೆ ಎಂಬುದನ್ನು ಓರ್ವ ಮುಸ್ಲಿಮ್ ಇನ್ನೋರ್ವ ಮುಸ್ಲಿಮನಿಗೆ ಹೇಳಿಕೊಡಬೇಕಿಲ್ಲ. ಆದರೆ ಹಿಂದೂ ಧರ್ಮಾನುಯಾಯಿಗೆ ಇದರ ಅರಿವು ಸ್ಪಷ್ಟವಾಗಿ ಇರಬೇಕಿಲ್ಲ. ಆತ/ಕೆ ಅಲ್ಲಾಹು ಅಕ್ಬರ್‍ಗೆ, ಪ್ರಾಣಿ ಹತ್ಯೆಗೆ, ಟೊಪ್ಪಿಗೆ.. ಎಲ್ಲಕ್ಕೂ ಅವರದೇ ಆದ ಅಥವಾ ಯಾರಿಂದಲೋ ಕೇಳಿದ ಅರ್ಥವನ್ನು ಕೊಟ್ಟಿರಬಹುದು. ಆ ಅರ್ಥದಲ್ಲಿ ಅಪಾಯಕಾರಿ ಅಂಶಗಳೂ ಇರಬಹುದು. ಇವು ಮತ್ತು ಇಂಥ ಇನ್ನಿತರ ಅನೇಕಾರು ಕಲ್ಪಿತ ಅಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವ ಅತ್ಯುತ್ತಮ ಸಂದರ್ಭವೇ ಪರಸ್ಪರ ಖುಷಿಯ ವಿನಿಮಯ ಮಾಡಿಕೊಳ್ಳುವುದು. ಆಗ ಗಣೇಶ ವಿಸರ್ಜನೆಯನ್ನು ನದಿಯ ಮಧ್ಯದಲ್ಲಿ ಯಾಕೆ ವಿಸರ್ಜಿಸಬೇಕು ಎಂಬುದೂ ಚರ್ಚೆಗೊಳಗಾಗುತ್ತದೆ. ಈದ್‍ನ ದಿನದಂದು ಪ್ರಾಣಿಯನ್ನು ಯಾಕೆ ಹತ್ಯೆ ಮಾಡುತ್ತೀರಿ ಎಂಬುದು ಅವಲೋಕನಕ್ಕೆ ಒಳಗಾಗುತ್ತದೆ. ಇಂಥ ಕುಶಲೋಪರಿಯಿಂದ ಆಗುವ ಪ್ರಮುಖ ಬದಲಾವಣೆ ಏನೆಂದರೆ, ಕಲ್ಪಿತ ಅರ್ಥಗಳು ಸಾವಿಗೀಡಾಗಿ ನಿಜ ಅರ್ಥಗಳು ಉಸಿರು ಪಡಕೊಳ್ಳುವುದು. ದುರಂತ ಏನೆಂದರೆ, ಸದ್ಯ ಈ ಬಗೆಯ ಕೊಡು ಕೊಳ್ಳುವಿಕೆಯ ವಾತಾವರಣ ಕಡಿಮೆಗೊಳ್ಳುತ್ತಿದೆ. ನನ್ನ ಹಬ್ಬ ಮತ್ತು ನಿನ್ನ ಹಬ್ಬ ಎಂಬುದಾಗಿ ಹಬ್ಬವನ್ನೂ ಅದರ ಆನಂದವನ್ನೂ ಸಮಾಜ ವಿಭಜಿಸತೊಡಗಿದೆ. ಕಣ್ಣೀರು ಮತ್ತು ಸಂತಾಪಗಳಲ್ಲೂ ವಿಭಜನೆಗಳಾಗುತ್ತಿವೆ. ಆದ್ದರಿಂದಲೇ, ಶಿವಮೊಗ್ಗದ ತುಂಗಭದ್ರೆಯಲ್ಲಿ ದುರಂತ ಸಾವನ್ನು ಕಂಡ 12 ಯುವಕರೂ ಮತ್ತು ಅವರ ಮೃತದೇಹವನ್ನು ಹುಡುಕಾಡಿ ನದಿ ದಂಡೆಗೆ ತಲುಪಿಸಿದ ಸಾದಾತ್ ಖಾನ್ ನೇತೃತ್ವದ ತಂಡವೂ ನಮ್ಮೊಳಗೆ ಚರ್ಚೆಗೆ ಅರ್ಹವಾಗುವುದು. ಮೃತದೇಹಕ್ಕೆ ಜನರನ್ನು ಭಾವುಕಗೊಳಿಸುವ ಸಾಮಥ್ರ್ಯವಿದೆ. ಹೆಣ್ಣು-ಗಂಡು, ಹಿಂದೂ-ಮುಸ್ಲಿಮ್ ಎಂಬ ವಿಭಜನೆಯಿಲ್ಲದೆಯೇ ಸರ್ವರಲ್ಲೂ ಕಣ್ಣೀರು ತರಿಸುವ ಶಕ್ತಿ ಮೃತದೇಹಕ್ಕಿದೆ. ಬಹುಶಃ, ಮನುಷ್ಯರೆಲ್ಲರನ್ನೂ ಒಂದೇ ಎಂದು ಘಂಟಾಘೋಷವಾಗಿ ಸಾರುವ ಪ್ರಾಕೃತಿಕ ಕುರುಹು ಇದು. ಆದರೆ ನಾವು ಖುಷಿಯಲ್ಲಿರುವಾಗ ಈ ಪ್ರಾಕೃತಿಕ ಸತ್ಯವನ್ನು ನಿರ್ಲಕ್ಷಿಸಿಕೊಂಡು ಬದುಕುತ್ತೇವೆ. ಅವರನ್ನು ದ್ವೇಷಿಸುತ್ತೇವೆ. ಅವರ ದುಃಖವನ್ನು ಕೆಲವೊಮ್ಮೆ ಖುಷಿಯಂತೆ ಅನುಭವಿಸುತ್ತೇವೆ. ಆದರೆ ಇದು ಪ್ರಕೃತಿ ವಿರೋಧಿ ಎಂಬುದನ್ನು ಶಿವಮೊಗ್ಗದ ದುರಂತ ನಮಗೆ ನೆನಪಿಸಿದೆ. ಪರಸ್ಪರ ಸುಖ ಮತ್ತು ದುಃಖದಲ್ಲಿ ಭಾಗಿಗಳಾಗುವುದೇ ಧರ್ಮದ ತಿರುಳು ಎಂಬುದನ್ನು ಈ ಘಟನೆ ಅತ್ಯಂತ ಪ್ರಬಲವಾಗಿ ಪ್ರತಿಪಾದಿಸಿದೆ. ಆದ್ದರಿಂದ, ಸಾದಾತ್ ಮತ್ತು ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತಲೇ ದುಃಖಿತ ಕುಟುಂಬಕ್ಕೆ ನಾವೆಲ್ಲ ಸಾಂತ್ವನವನ್ನು ಹೇಳಬೇಕಾಗಿದೆ.      

Saturday 10 September 2016

ದುಡ್ಡು, ಹಜ್ಜ್ ಮತ್ತು ಪ್ರಶ್ನೆ

       ಈ ವರ್ತಮಾನದ ಹತ್ತು ಹಲವು ಸವಾಲುಗಳ ಎದುರು ಹಜ್ಜ್ ನ ಪ್ರಸ್ತುತತೆ ಏನು? ಜಗತ್ತಿನ 160 ಕೋಟಿ ಮುಸ್ಲಿಮರಲ್ಲಿ ಬರೇ ಲಕ್ಷಾಂತರ ಮಂದಿ ಮುಸ್ಲಿಮರು ಮಾತ್ರ ತವಾಫ್‍ನಲ್ಲಿ, ಸಈಯಲ್ಲಿ, ಅರಫಾ, ಮುಝ್ದಲಿಫಾದಲ್ಲಿ... ಹೀಗೆ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಒಟ್ಟು ಸೇರುವುದು, ಪ್ರಾರ್ಥಿಸುವುದು, ಕಣ್ಣೀರಾಗುವುದೆಲ್ಲ ಏನು? ದುಡ್ಡಿದ್ದವ ಹಜ್ಜ್ ನಿರ್ವಹಿಸಬೇಕು ಅನ್ನುವುದು ತೀರಾ ಸರಳ ಮಾತು. ಆದರೆ ಈ ಮಾತನ್ನು ತೀರಾ ಗಂಭೀರ ಮತ್ತು ಚಿಂತನಾರ್ಹಗೊಳಿಸುವುದಕ್ಕೆ ಕೆಲವು ಪ್ರಶ್ನೆಗಳಿವೆ. ದುಡ್ಡಿದ್ದವ ಯಾಕೆ ಹಜ್ಜ್ ನಿರ್ವಹಿಸಲೇಬೇಕು? ಹಜ್ಜ್ ನಿರ್ವಹಣೆ ಎಂಬುದು ಇವತ್ತಿನ ದಿನಗಳಲ್ಲಿ ತೀರಾ ಸಲೀಸಿನದ್ದಲ್ಲ. ಹೋಗಬೇಕೆಂದು ತೀರ್ಮಾನಿಸಿದರೂ ಅಡೆ-ತಡೆಗಳಿರುವ ನಿಯಮ ನಿಬಂಧನೆಗಳು ಇವತ್ತಿನದು. ಅರ್ಜಿ ಹಾಕಿ ಕಾಯಬೇಕು. ಲಕ್ಷಾಂತರ ರೂಪಾಯಿ ಪ್ರಯಾಣಕ್ಕೆ ತೆರಬೇಕು. ವ್ಯಾಪಾರ, ಉದ್ಯೋಗ, ಕುಟುಂಬ, ಮಕ್ಕಳು, ಪತ್ನಿ... ಎಲ್ಲವನ್ನೂ ಮತ್ತು ಎಲ್ಲರನ್ನೂ ಬಿಟ್ಟು ಕೆಲವಾರು ದಿನಗಳ ಕಾಲ ಒಂಟಿಯಾಗಬೇಕು. ಅಲ್ಲದೆ, ಮಕ್ಕಾದ ವಾತಾವರಣ ಪರಿಚಿತವಲ್ಲ. ಆರೋಗ್ಯ ಕೈ ಕೊಡುವ ಸಾಧ್ಯತೆ ಇರುತ್ತದೆ. ಲಕ್ಷಾಂತರ ಮಂದಿ ಸೇರುವ ಸ್ಥಳವಾಗಿರುವುದರಿಂದ ಅನಾಹುತಗಳ ಸಾಧ್ಯತೆಯೂ ಇರುತ್ತದೆ. ಇಷ್ಟೆಲ್ಲ ಅಪಾಯ-ಅಭದ್ರತೆಯನ್ನು ಎದುರಿಸಿಕೊಂಡು ಯಾತ್ರೆ ಹೋಗುವುದಕ್ಕಿಂತ ಅಷ್ಟೇ ಮೊತ್ತವನ್ನು ಇಲ್ಲಿನ ಅರ್ಹರಿಗೆ ಕೊಟ್ಟು ನಿಶ್ಚಿಂತೆಯಿಂದ ಇರಬಹುದಲ್ಲ... ಎಂಬ ಪ್ರಶ್ನೆಯೊಂದು ಮೂಡುವುದು ಅಪರಾಧವಾಗಬೇಕಿಲ್ಲ. ನಿಜವಾಗಿ, ಹಜ್ಜ್ ಮಹತ್ವಪೂರ್ಣ ಎನಿಸಿಕೊಳ್ಳುವುದು ಇಂಥ ಪ್ರಶ್ನೆಗಳಿಂದ. ದುಡ್ಡಿದ್ದವ ಹಜ್ಜ್ ನಿರ್ವಹಿಸಲೇಬೇಕು ಅನ್ನುವುದು ಆರಾಧನೆಯ ಬಾಹ್ಯ ವ್ಯಾಖ್ಯಾನವೇ ಹೊರತು ದುಡ್ಡಿಗೂ ಹಜ್ಜ್ ಗೂ ನಡುವೆ ಆಳ ಸಂಬಂಧವೇನೂ ಇಲ್ಲ. ದುಡ್ಡು ಹಜ್ಜ್ ಅನ್ನು ಕಡ್ಡಾಯಗೊಳಿಸಬಹುದು. ಆದರೆ, ಹಜ್ಜ್ ಅನ್ನು ಫಲಪ್ರದಗೊಳಿಸುವುದು ದುಡ್ಡು ಅಲ್ಲ. ದುಡ್ಡಿಗೂ ಹಜ್ಜ್ ಗೂ ನಡುವೆ ಇರುವ ಸಂಬಂಧ ಇಷ್ಟೇ. ಹಜ್ಜ್ ಗೆ ಸಂಬಂಧಿಸಿ ಹಣ ಕೇವಲ ಒಂದು ನಿಮಿತ್ತ ಮಾತ್ರ. ಹಜ್ಜ್ ಈ ದುಡ್ಡಿನಾಚೆಗೆ ವಿಶಾಲವಾದದ್ದೊಂದು ಜಗತ್ತನ್ನು ತೆರೆದುಕೊಡುತ್ತದೆ. ಆ ಜಗತ್ತಿನಲ್ಲಿ ನಡೆದ ಘಟನೆಗಳಿಗೂ ದುಡ್ಡಿಗೂ ಎಷ್ಟು ತೆಳುವಾದ ಸಂಬಂಧ ಎಂದರೆ, ದುಡ್ಡು ಆ ಜಗತ್ತಿನ ಇಡೀ ಪ್ರಕ್ರಿಯೆಯಲ್ಲಿ ಅತೀ ಕೊನೆಯ ಸ್ಥಾನದಲ್ಲಷ್ಟೇ ನಿಲ್ಲುವಷ್ಟು. ಆ ಜಗತ್ತಿನ ನಾಯಕ ಪ್ರವಾದಿ ಇಬ್ರಾಹೀಮ್(ಅ). ಅವರ ಯೋಚನೆ, ಯೋಜನೆ, ಪ್ರಯಾಣ, ವಿಶ್ವಾಸ... ಪ್ರತಿಯೊಂದರಲ್ಲೂ ಸಿದ್ಧ ಚೌಕಟ್ಟನ್ನು ಒಡೆಯುವ ಹೊಸತನವಿದೆ. ಅವರು ಅಗರ್ಭ ಶ್ರೀಮಂತರಾಗಿದ್ದುಕೊಂಡು ಇರಾಕ್‍ನಿಂದ ಮಕ್ಕಾಕ್ಕೆ ಆಗಮಿಸಲಿಲ್ಲ. ತನ್ನ ಪತ್ನಿ- ಮಗನನ್ನು ಮಕ್ಕಾದಲ್ಲಿ ಕೂರಿಸಿ ಹೋಗುವಾಗ ಚೀಲ ತುಂಬ ಹಣವನ್ನು ಒಪ್ಪಿಸಿ ಹೋಗಲಿಲ್ಲ. ಸ್ವಲ್ಪ ಖರ್ಜೂರ ಮತ್ತು ಸ್ವಲ್ಪ ನೀರು ಇದ್ದ ಬಡವ. ಅವರು ಅಂದಿನ ಸುಪರಿಚಿತ ಆರಾಧನಾ ಕ್ರಮವನ್ನು ಪ್ರಶ್ನಿಸುವಾಗಲೂ ದುಡ್ಡಿದ್ದವ ಆಗಿರಲಿಲ್ಲ. ಆದರೆ ಜಗತ್ತಿನ ಸರ್ವ ಶ್ರೀಮಂತರನ್ನೂ ಮಕ್ಕಾಕ್ಕೆ ಆಕರ್ಷಿಸುವಷ್ಟು ಮತ್ತು ಆ ಆಕರ್ಷಣೆ ಕಡ್ಡಾಯವಾಗುವಷ್ಟು ಅಪೂರ್ವ ವ್ಯಕ್ತಿತ್ವ ಅವರೊಳಗಿತ್ತು. ಅವರು ಆ ವರೆಗಿನ ಅಲೋಚನಾ ಪದ್ಧತಿಯನ್ನೇ ಒಡೆದರು. ಅವರು ಚರ್ಚಿಸಿದ್ದು ಅಲ್ಲಾಹನನ್ನೇ ಆಗಿದ್ದರೂ ಅವರು ಆ ಅಲ್ಲಾಹನನ್ನು ಚರ್ಚಿಸಿದ ವಿಧಾನ ತೀರಾ ನವೀನವಾದದ್ದು. ಸೂರ್ಯ, ಚಂದ್ರ, ನಕ್ಷತ್ರಗಳ ಕುರಿತಂತೆ ಅವರು ಆಡಿದ ಮಾತು ಮತ್ತು ಚಿಂತಿಸಿದ ವಿಧಾನ ಅತ್ಯಂತ ಜಾಣತನದ್ದು. ಅವರು ತಮ್ಮ ಬದುಕಿನುದ್ದಕ್ಕೂ ಒಂದು ವಿಶಿಷ್ಟ ಆಲೋಚನಾ ಪದ್ಧತಿ, ಧೈರ್ಯ ಮತ್ತು ಅಚಲ ಸೈದ್ಧಾಂತಿಕ ಬದ್ಧತೆಯನ್ನು ಪ್ರದರ್ಶಿಸಿದರು. ನಿಜವಾಗಿ, ಶ್ರೀಮಂತರಲ್ಲದ ಅವರು ಮತ್ತು ಅವರ ಪತ್ನಿ, ಮಗ ಜಗತ್ತಿನ ಸರ್ವ ಶ್ರೀಮಂತರಿಗೆ ಕಡ್ಡಾಯವಾಗಿರುವುದು ಈ ಎಲ್ಲ ಕಾರಣಗಳಿಂದಾಗಿ. ಒಂದು ರೀತಿಯಲ್ಲಿ, ಏಕ ಕಾಲದಲ್ಲಿ ಶ್ರೀಮಂತಿಕೆಯನ್ನು ನಗಣ್ಯಗೊಳಿಸುವುದೂ ಮತ್ತು ಸೈದ್ಧಾಂತಿಕ ಬದ್ಧತೆಯನ್ನು ಅಗ್ರಗಣ್ಯ ಗೊಳಿಸುವುದೂ ಇಲ್ಲಿ ನಡೆಯುತ್ತದೆ. ತನ್ನ ವಿಚಾರದ ಮೇಲೆ ಅಚಲ ವಿಶ್ವಾಸವನ್ನು ಇಟ್ಟುದುದಕ್ಕಾಗಿ ಹುಟ್ಟಿದೂರು ಉರ್‍ನಿಂದ ಹೊರಬಿದ್ದು, ಬಳಿಕ ತನ್ನ ಸುಖ, ಆನಂದ, ಖುಷಿ ಎಲ್ಲವೂ ಆಗಿರುವ ಪತ್ನಿ-ಮಗನನ್ನು ಮಕ್ಕಾದಲ್ಲಿ ಬಿಟ್ಟು ಖಾಲಿ ಕೈಯಲ್ಲಿ ಹೊರಟು ಹೋದ ಓರ್ವ ವಿಚಾರಶೀಲ ದೇವ ಪ್ರೇಮಿ ಅವರು. ಇವತ್ತಿನ ಹಾಜಿಯ ಮುಂದಿರುವ ಗಂಭೀರ ಸವಾಲು ಇದು. ತಾನು ಆ ದೇವ ಪ್ರೇಮಿ ಇಬ್ರಾಹೀಮರ(ಅ) ಎಷ್ಟು ಶೇಕಡಾ ಇದ್ದೇನೆ, ಸೈದ್ಧಾಂತಿಕ ಬದ್ಧತೆಯಲ್ಲಿ ಅವರು ಮತ್ತು ತಾನು ಎಲ್ಲೆಲ್ಲಿ ಇದ್ದೇವೆ?
     ಲಕ್ಷಾಂತರ ಖರ್ಚು ಮಾಡುವುದೊಂದೇ ಹಜ್ಜ್ ಅಲ್ಲ, ಈ ಪ್ರಶ್ನೆಗೆ ಉತ್ತರವಾಗುವುದೇ ಹಜ್ಜ್.

Sunday 4 September 2016

ನಮ್ಮೊಳಗನ್ನು ತಟ್ಟಬೇಕಾದ ಮೂರು ಚಿತ್ರಗಳು

ಗೊಟ್‍ಚಕ್ ಮತ್ತು ಅನಿತಾ ದಂಪತಿ


       ಕಳೆದವಾರ ಮಾಧ್ಯಮಗಳಲ್ಲಿ ಪ್ರಕಟವಾದ 3 ಚಿತ್ರಗಳು ಮನಸ್ಸನ್ನು ಬಿಡದೇ ಕಾಡಿದುವು. ಕಣ್ಣನ್ನು ಮಂಜಾಗಿಸಿದುವು. ಈ ಮೂರು ಚಿತ್ರಗಳಲ್ಲಿ ಒಂದು, ಒಡಿಸ್ಸಾದ ದನಾ ಮಾಂಝಿಯದು. ಇನ್ನೊಂದು, ಕೆನಡಾದ ಆರೈಕೆ ಕೇಂದ್ರ(ವೃದ್ಧಾಶ್ರಮ)ದಲ್ಲಿರುವ 83 ವರ್ಷದ ಓಫ್ರಾಂ ಗೊಟ್‍ಚಕ್ ಮತ್ತು 81 ವರ್ಷದ ಅನಿತಾ ಎಂಬ ದಂಪತಿಗಳದು. ಮತ್ತೊಂದು, ಸಿರಿಯದ ಅಲೆಪ್ಪೋದಲ್ಲಿ ಓರ್ವ ತಂದೆ ತನ್ನ ಗಾಯಗೊಂಡ ಮಗಳನ್ನು ಎತ್ತಿಕೊಂಡು ಓಡುವ ಚಿತ್ರ. ಇವು ಬರೇ ಚಿತ್ರಗಳಲ್ಲ. ನೂರಾರು ಪುಟಗಳಲ್ಲಿ ಮತ್ತು ಅಸಂಖ್ಯ ಅಕ್ಷರಗಳೊಂದಿಗೆ ಹೇಳುವ ಜೀವನ ಪಾಠದ 3 ಕೃತಿಗಳಿವು. ಯಾರಾದರೂ ಈ 3 ಚಿತ್ರಗಳನ್ನು ಜೋಡಿಸಿ ತಮ್ಮ ಪಕ್ಕದಲ್ಲೋ  ಅಲಮಾರಿನಲ್ಲೋ  ಕಚೇರಿಯಲ್ಲೋ  ಇಟ್ಟುಬಿಟ್ಟರೆ ಅದು ಅವರನ್ನು ಮನುಷ್ಯ ದ್ರೋಹಿಯಾಗುವುದರಿಂದ ಸದಾ ಕಾಪಾಡಬಹುದು.
      ಕೆನಡದ ಆರೈಕೆ ಕೇಂದ್ರದಲ್ಲಿ ಪರಸ್ಪರ ಭೇಟಿಯಾದ ಗೊಟ್‍ಚಕ್ ಮತ್ತು ಅನಿತಾ ದಂಪತಿಗಳ ಚಿತ್ರವನ್ನು ಅವರ ಮೊಮ್ಮಗಳು ಆ್ಯಶ್ಲೆ ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಆ್ಯಶ್ಲೆಯ ಅಜ್ಜ ಗೊಟ್‍ಚಕ್‍ರಿಗೆ ಮರೆವು ರೋಗವಿತ್ತು. ಅಜ್ಜಿ ಅನಿತಾ ವಯೋವೃದ್ಧರಾದುದರಿಂದ ಪತಿಯ ಆರೈಕೆ ಮಾಡುವುದು ಸುಲಭ ಸಾಧ್ಯವಾಗಿರಲಿಲ್ಲ. ಇವರ ಮಗಳು ಅಥವಾ ಆ್ಯಶ್ಲೆಯ ತಾಯಿ ಡಯಾನ ರಿಗೂ ಇತ್ತೀಚೆಗೆ ಹೃದಯ ಸಂಬಂಧಿ ಚಿಕಿತ್ಸೆ ನಡೆದಿತ್ತು. ಹೀಗೆ ಗೊಟ್‍ಚಕ್ ಅನಿವಾರ್ಯವಾಗಿ 8 ತಿಂಗಳ ಹಿಂದೆ ಕಳೆದ ಜನವರಿಯಲ್ಲಿ ಆರೈಕೆ ಕೇಂದ್ರಕ್ಕೆ ಸೇರ್ಪಡೆಗೊಂಡರು. ಇದಾಗಿ ನಾಲ್ಕು ತಿಂಗಳಾದ ಬಳಿಕ ಅನಿತಾರ ಆರೋಗ್ಯವೂ ಕೈಕೊಟ್ಟಿತು. ಆದರೆ ಅವರಿಗೆ ಪತಿ ಗೊಟ್‍ಚಕ್‍ರ ಆರೈಕೆ ಕೇಂದ್ರದಲ್ಲಿ ಸ್ಥಳಾವಕಾಶ ಅಲಭ್ಯವಾದುದರಿಂದಾಗಿ ಸುಮಾರು 30 ಕಿ.ವಿೂ. ದೂರದ ಇನ್ನೊಂದು ಆರೈಕೆ ಕೇಂದ್ರಕ್ಕೆ ಸೇರ್ಪಡೆಗೊಳಿಸಬೇಕಾಯಿತು. ಇದು ಅವರಿಬ್ಬರ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ವಾರದಲ್ಲಿ ಒಂದು ಬಾರಿ ಮಾತ್ರ ಭೇಟಿಯಾಗಬಹುದಾದ ಆ ವಾತಾವರಣದಿಂದ ಅವರಿಬ್ಬರೂ ತೀವ್ರ ನೊಂದರು. ಅವರ ಮಗಳು ಮತ್ತು ಮೊಮ್ಮಗಳು ಸೇರಿಕೊಂಡು ವಾರದಲ್ಲೊಮ್ಮೆ ಗೊಟ್‍ಚಾಕ್‍ರನ್ನು ಅನಿತಾರ ಹತ್ತಿರ ತರುತ್ತಾರೆ. ಅವರು ಭೇಟಿಯಾಗುತ್ತಾರೆ. ಮಾತುಕತೆಯಾಗುತ್ತದೆ. ಹೀಗೆ ಮಾತುಕತೆಯಲ್ಲಿ ಏರ್ಪಟ್ಟಾಗ ಆ್ಯಶ್ಲೆ ಕ್ಲಿಕ್ಕಿಸಿದ ಆ ಚಿತ್ರ ಫೇಸ್ ಬುಕ್‍ನಲ್ಲಿ ಸಾವಿರಾರು ಬಾರಿ ಶೇರ್ ಆಯಿತು. ಅಸಂಖ್ಯ ಮಂದಿ ಪ್ರತಿಕ್ರಿಯಿಸಿದರು. ಗಡಿ, ಭಾಷೆ, ಧರ್ಮ, ಚರ್ಮಗಳ ಹಂಗಿಲ್ಲದೇ ಜನರು ಆ ಚಿತ್ರಕ್ಕಾಗಿ ಮರುಗಿದರು. ಭೇಟಿಯಾಗಿ ಪರಸ್ಪರ ಬೇರ್ಪಡಲೆಬೇಕಾದ ಸಂದರ್ಭ ಬಂದಾಗ ಆ ದಂಪತಿಗಳಿಬ್ಬರೂ ಒದ್ದೆ ಕಣ್ಣನ್ನು ಒರೆಸಿಕೊಳ್ಳುವ ಚಿತ್ರ ಅದು. ಈ ಇಳಿ ವಯಸ್ಸಲ್ಲೂ ತನ್ನ ಪತ್ನಿಯನ್ನು ಪುಟ್ಟ ಮೊಲವೇ ಎಂದು ಕರೆಯುವಷ್ಟು ಪ್ರೇಮಮಯಿ ಆ ಅಜ್ಜ. ಪ್ರತಿ ವಾರವೂ ಅವರಿಬ್ಬರೂ ಮಾತುಕತೆಯಾಡುತ್ತಾರೆ. ಬೇರ್ಪಡುವಾಗ ಕಣ್ಣೀರಿಳಿಸುತ್ತಾರೆ. ಈ ಚಿತ್ರದಿಂದ ಜಗತ್ತು ಎಷ್ಟು ಪ್ರಭಾವಿತವಾಯಿತು ಎಂದರೆ, ಅವರಿಬ್ಬರನ್ನೂ ಒಟ್ಟಿಗೆ ಇರಿಸುವಂತೆ ಆ ಆರೈಕೆ ಕೇಂದ್ರವನ್ನು ನಡೆಸುತ್ತಿರುವ ಸಂಸ್ಥೆಯೊಂದಿಗೆ ಕೇಳಿಕೊಂಡಿತು.
ಸಿರಿಯದ ತಂದೆ ಮತ್ತು ಮಗಳು
      ಇನ್ನೊಂದು ಚಿತ್ರ, ಸಿರಿಯದ ತಂದೆ ಮತ್ತು ಮಗಳದ್ದು. ಅಮೇರಿಕ, ಟರ್ಕಿ, ರಶ್ಯಾ ಮತ್ತು ಸಿರಿಯಾಗಳು ಸುರಿಸುವ ಬಾಂಬುಗಳಿಗೆ ಸಿಕ್ಕ ಮಗಳನ್ನು ಓರ್ವ ಅಪ್ಪ ಎತ್ತಿಕೊಂಡು ಓಡುವ ದೃಶ್ಯ. ವಿವರಣೆಯ ಅಗತ್ಯವೇ ಇಲ್ಲದಷ್ಟು ಆ ಚಿತ್ರ ಹೃದಯವನ್ನು ತಟ್ಟುತ್ತದೆ. 5 ವರ್ಷಗಳ ಹಿಂದೆ ಸಿರಿಯನ್ನರು ಇಂಥದ್ದೊಂದು  ಪಟವನ್ನು ನಿರೀಕ್ಷಿಸಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ  ಇವತ್ತು ಅವರೇ ಇಂಥ ಹೃದಯ ವಿದ್ರಾವಕ ಪಟಕ್ಕೆ ಪಾತ್ರವಾಗುತ್ತಿದ್ದಾರೆ.
      ಮೂರನೆಯದು, ಒಡಿಸ್ಸಾದ ದನಾ ಮಾಂಜಿಯದು. ಪತ್ನಿಯ ಶವವನ್ನು ಹೊತ್ತುಕೊಂಡು ನಡೆವ ಆತನ ಪಕ್ಕವೇ ಕೈ ಚೀಲವನ್ನು ಹಿಡಿದುಕೊಂಡು ಹಿಂಬಾಲಿಸುವ ಆತನ ಮಗಳು. ಸಾವು ಎಂಬುದೇ ಭಾವುಕ. ಇಂಥದ್ದರಲ್ಲಿ ಈ ದೃಶ್ಯವನ್ನು ನಾವು ಹೇಗೆ ವಿಶ್ಲೇಷಿಸಬಹುದು? ಶವಕ್ಕೆ ಸಂಬಂಧವೇ ಇಲ್ಲದ ಅಜ್ಞಾತ ವ್ಯಕ್ತಿಯೊಬ್ಬ ಶವ ಸಾಗಿಸುವುದಕ್ಕೂ ಸ್ವತಃ ಪತಿ ಮತ್ತು ಮಗಳು ಒಂದು ಹೊರೆಯಂತೆ ಹೊತ್ತುಕೊಂಡು ಸಾಗುವುದಕ್ಕೂ ನಡುವೆ ಇರುವ ಅಂತರವೇನು? ಆ ತಂದೆ ಮತ್ತು ಮಗಳು ಆ ಸಂದರ್ಭದಲ್ಲಿ ಅನುಭವಿಸಿರಬಹುದಾದ ನೋವು ಏನಿದ್ದೀತು? ತನ್ನ ತಾಯಿಯನ್ನು ಗೌರವಯುತವಾಗಿ ಮಣ್ಣು ಮಾಡುವುದಕ್ಕೆ ಈ 125 ಕೋಟಿ ಜನಸಂಖ್ಯೆಯಲ್ಲಿ ಒಂದು ನರಪಿಳ್ಳೆಯೂ ಇಲ್ಲವಲ್ಲ ಎಂಬುದು ಆ ಮಗುವನ್ನು ಹೇಗೆಲ್ಲ ಕಾಡಿರಬಹುದು?
ಕಣ್ಣೀರಿಳಿಸುವ ದಂಪತಿ, ತಾಯಿಯ ಮೃತದೇಹದ ಜೊತೆಗೆ ಕಣ್ಣೀರಿಳಿಸುತ್ತಾ ನಡೆಯುವ ಮಗಳು ಮತ್ತು ತನ್ನ ಮಗಳನ್ನು ಎತ್ತಿಕೊಂಡು ಓಡುವ ಅಪ್ಪ.. ಈ ಮೂರನ್ನೂ ನಾವು ಬರೇ ಬಿಡಿ ಚಿತ್ರಗಳಾಗಿಯಷ್ಟೇ ಕಾಣಬೇಕಿಲ್ಲ. ಇವು ನಾವು ಬದುಕುವ ಸಮಾಜದ ಪ್ರತಿಬಿಂಬಗಳು. ನಾವು ಏನಾಗಿದ್ದೇವೆ ಮತ್ತು ಏನಾಗಬೇಕಿದೆ ಎಂಬುದನ್ನು ಸೂಚ್ಯವಾಗಿ ಹೇಳುವ
ದನಾ ಮಾಂಝಿ
ದೃಶ್ಯಕಾವ್ಯಗಳು. ನಮ್ಮ ಮನುಷ್ಯ ದ್ರೋಹಿ, ಜೀವ ವಿರೋಧಿ ನಿಲುವುಗಳನ್ನು ತತ್ತರಗೊಳಿಸುವುದಕ್ಕೆ ಈ ಮೂರು ಚಿತ್ರಗಳು ದಾರಾಳ ಸಾಕು. ಸಿರಿಯಾದ ಆ ಅಪ್ಪ-ಮಗಳ ಜಾಗದಲ್ಲಿ ನಾವು ನಮ್ಮನ್ನೊಮ್ಮೆ ಕಲ್ಪಿಸಿಕೊಳ್ಳೋಣ. ಗೊಟ್‍ಚಾಕ್ ಮತ್ತು ಅನಿತಾರನ್ನು ಆ ಪಟದಿಂದ ಅಳಿಸಿ ಅಲ್ಲಿ ನಮ್ಮನ್ನು ಇಟ್ಟು ನೋಡೋಣ. ಮಾಂಜಿಯಂತೆ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಸಿಲುಕಿಕೊಳ್ಳುವ ಸನ್ನಿವೇಶವನ್ನೊಮ್ಮೆ ಊಹಿಸಿಕೊಳ್ಳೋಣ. ನಿಜವಾಗಿ, ಕಡಿ-ಕೊಲ್ಲು-ದ್ವೇಷಿಸು ಎಂದೆಲ್ಲಾ ವಿಭಜಿಸುವವರನ್ನು ತಲುಪಬೇಕಾದ ಚಿತ್ರಗಳಿವು. ಬದುಕು ಎಷ್ಟು ಅಶಾಶ್ವತ, ಹೃಸ್ವ ಮತ್ತು ಭಾವನಾತ್ಮಕ ಎಂಬುದನ್ನು ಇವು ಹೇಳಿಕೊಡಬಲ್ಲುದು. ಅಷ್ಟಕ್ಕೂ, ಬ್ರಿಟನ್, ಭಾರತ ಮತ್ತು ಸಿರಿಯಾಗಳು ಪರಸ್ಪರ ದೂರದೂರದ ರಾಷ್ಟ್ರಗಳಾಗಿದ್ದರೂ ಮತ್ತು ಜನರ ಬಣ್ಣ, ಭಾಷೆ, ಸಂಸ್ಕೃತಿ ಎಲ್ಲದರಲ್ಲೂ ಅಪಾರ ವ್ಯತ್ಯಾಸಗಳಿದ್ದರೂ ಆ ಮೂರು ಚಿತ್ರಗಳು ನಮ್ಮ ಅಂತಃಕರಣವನ್ನು ಒಂದೇ ರೀತಿಯಲ್ಲಿ ತಟ್ಟುವುದಕ್ಕೆ ಮತ್ತು ಭಾವನಾತ್ಮಕವಾಗಿ ನಮ್ಮೆಲ್ಲರನ್ನೂ ಒಂದೇ ದಾರದಲ್ಲಿ ಪೋಣಿಸುವುದಕ್ಕೆ ಕಾರಣವೇನು? ನಾವು ಮನುಷ್ಯರಾಗಲು ಕೇವಲ ಇಷ್ಟು ಮತ್ತು ಇಷ್ಟೇ ಆಲೋಚಿಸಿದರೆ ದಾರಾಳ ಸಾಕು.