Friday 23 September 2016

ಹಿಂದೂ ಮುಖಂಡರ ಹತ್ಯೆಗೆ ಸಂಚು ಹೆಣೆದವರು ಮತ್ತು ನ್ಯಾಯ

       ನ್ಯಾಯ ಎಂಬ ಪದದ ಆರಂಭದಲ್ಲಿ ‘ಅ’ವನ್ನು ಸೇರಿಸಿದರೆ ಆಗುವ ಅರ್ಥವ್ಯತ್ಯಾಸ (ಅನ್ಯಾಯ) ಬಹಳ ದೊಡ್ಡದು. ಹಾಗಂತ, ಒಂದು ಬಿಡಿ ಅಕ್ಷರವಾಗಿ ‘ಅ’ದಲ್ಲಿ ಯಾವ ತಪ್ಪಿತಸ್ಥ ಗುಣವೂ ಇಲ್ಲ. ಕನ್ನಡ ಅಕ್ಷರಮಾಲೆಯ ಇತರೆಲ್ಲ ಅಕ್ಷರಗಳಂತೆ ‘ಅ’ವೂ ಒಂದು. ಅದನ್ನು ನಾವು ಎಲ್ಲಿ ಮತ್ತು ಹೇಗೆಲ್ಲ ಬಳಸುತ್ತೇವೋ ಅದನ್ನು ಹೊಂದಿಕೊಂಡು ಅದು ತನ್ನನ್ನು ಪ್ರಸ್ತುತಪಡಿಸುತ್ತದೆ. ನ್ಯಾಯಾಲಯದ ಮಟ್ಟಿಗೂ ನಾವು ಇದೇ ಮಾತನ್ನು ಹೇಳಬಹುದು. ನ್ಯಾಯವನ್ನು ನೀಡುವ ಮಂದಿರ ಎಂಬ ನೆಲೆಯಲ್ಲಿ ನ್ಯಾಯಾಲಯ ಅತ್ಯಂತ ಗೌರವಾರ್ಹವಾದುದು. ಆದ್ದರಿಂದಲೇ, ಅಲ್ಲಿನ ಚಟುವಟಿಕೆಗಳನ್ನು ಜನರು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಅನ್ಯಾಯದಿಂದ ನ್ಯಾಯವನ್ನು ಪಡಕೊಳ್ಳುವ ಏಕೈಕ ಆಲಯ ಎಂಬುದಾಗಿ ಭರವಸೆ ಇಟ್ಟು ಬದುಕುತ್ತಾರೆ. ಒಂದು ವೇಳೆ, ಈ ಭರವಸೆಯನ್ನು ಸುಳ್ಳು ಮಾಡುವ ಸನ್ನಿವೇಶಗಳು ಮತ್ತೆ ಮತ್ತೆ ಸಂಭವಿಸತೊಡಗಿದರೆ, ಜನರ ಪ್ರತಿಕ್ರಿಯೆ ಏನಿದ್ದೀತು? ನ್ಯಾಯವನ್ನು ನಿರೀಕ್ಷಿಸುತ್ತಾ ದಿನಗಳನ್ನು ಕಳೆದೂ ಕಳೆದೂ ಸುಸ್ತಾದವವರು ಕೊನೆಗೆ ನ್ಯಾಯಾಲಯಕ್ಕೆ ‘ಅ’ವನ್ನು ಸೇರಿಸುವುದಕ್ಕೆ ತೀರ್ಮಾನಿಸಿದರೆ ಅದರ ಹೊಣೆಗಾರಿಕೆಯನ್ನು ಯಾರ ಮೇಲೆ ಹೊರಿಸಬೇಕು? ಕಳೆದ ವಾರ ಎನ್‍ಐಎ(ರಾಷ್ಟ್ರೀಯ ತನಿಖಾ ದಳ)ಯ ವಿಶೇಷ ನ್ಯಾಯಾಲಯವು ನೀಡಿದ ನ್ಯಾಯವು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ, ಪ್ರಮೋದ್ ಮುತಾಲಿಕ್, ಪತ್ರಕರ್ತ ಪ್ರತಾಪ್ ಸಿಂಹ, ಉದ್ಯಮಿ ವಿಜಯ ಸಂಕೇಶ್ವರ.. ಮುಂತಾದವರ ಹತ್ಯೆ ನಡೆಸಲು ಸಂಚು ರೂಪಿಸಿದ್ದರೆಂದು ಆರೋಪಿಸಿ 2012ರಲ್ಲಿ ಸುಮಾರು 13 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ವಿಶೇಷ ನ್ಯಾಯಾಲಯವು ಆರೋಪಿಗಳಿಗೆ ಐದು ವರ್ಷಗಳ ಸಾದಾ ಶಿಕ್ಷೆಯನ್ನು ಘೋಷಿಸಿದೆ. ಆರೋಪಿಗಳು ತಪ್ಪೊಪ್ಪಿಕೊಂಡಿರುವುದೇ ಈ ಶಿಕ್ಷೆಗೆ ಆಧಾರ ಎಂದೂ ಅದು ಹೇಳಿದೆ. ಅಂದಹಾಗೆ, ಹೊರನೋಟಕ್ಕೆ ಈ ವಿಚಾರಣಾ ಪ್ರಕ್ರಿಯೆಯಲ್ಲಿ ಅಸಹಜವಾದುದು ಯಾವುದೂ ಇಲ್ಲ. ಆರೋಪಿಗಳು ತಪ್ಪೊಪ್ಪಿಕೊಳ್ಳುವುದು ಮತ್ತು ನ್ಯಾಯಾಲಯ ನ್ಯಾಯ ತೀರ್ಮಾನ ಕೈಗೊಳ್ಳುವುದೆಲ್ಲ ನ್ಯಾಯ ಪ್ರಕ್ರಿಯೆಯ ಸಹಜ ವಿಧಾನ. ಕಳೆದವಾರ ಪತ್ರಿಕೆಗಳು ಕೂಡ, ‘ಹಿಂದೂ ಮುಖಂಡರ ಹತ್ಯಾ ಸಂಚು: ಆರೋಪಿಗಳಿಗೆ ಶಿಕ್ಷೆ..’ ಎಂಬ ಧಾಟಿಯಲ್ಲೇ ಸುದ್ದಿ ಪ್ರಕಟಿಸಿದ್ದುವು. ದುರಂತ ಏನೆಂದರೆ, ಈ ಪ್ರಕರಣಕ್ಕೆ ಈ ಬಾಹ್ಯಮುಖವಷ್ಟೇ ಇರುವುದಲ್ಲ. ಆಂತರಿಕವಾದ ಇನ್ನೊಂದು ಮುಖವೂ ಇದೆ. ಆ ಮುಖ
ಅತ್ಯಂತ ಆಘಾತಕಾರಿಯಾದುದು. ಈ ಪ್ರಕರಣದ ಆರೋಪಿಗಳು 4 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಜೈಲಲ್ಲಿದ್ದಾರೆ. ಆದರೂ ಅವರಿಗೆ ಜಾಮೀನಿನಲ್ಲಿ ಹೊರಬರುವ ಅವಕಾಶವನ್ನು ನ್ಯಾಯಾಲಯ ನೀಡಿಲ್ಲ. ಜಾಮೀನು ಪಡೆದು ಹೊರಬರುವ ಪ್ರಕರಣ ಇದಾಗಿದ್ದರೂ ಅವರಿಗೆ ಈ ಅವಕಾಶವನ್ನು ನಿರಾಕರಿಸಲಾಗಿದೆ ಎಂಬ ಅಭಿಪ್ರಾಯ ನ್ಯಾಯತಜ್ಞರದು. ಈ ಪ್ರಕರಣವನ್ನು ವಿಚಾರಣೆ ನಡೆಸಲೆಂದೇ ಎನ್.ಐ.ಎ.ಯು ವಿಶೇಷ ನ್ಯಾಯಾಲಯವನ್ನು ರಚಿಸಿತು. ತ್ವರಿತಗತಿಯಲ್ಲಿ ವಿಚಾರಣೆ ನಡೆದು ತೀರ್ಪು ಹೊರಬರಬೇಕೆಂಬುದೇ ಇದರ ಉದ್ದೇಶವಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಈ ಪ್ರಕರಣದ ವಿಚಾರಣೆ ಎಷ್ಟು ಆಮೆಗತಿಯಲ್ಲಿ ನಡೆಯಿತೆಂದರೆ, ಆರೋಪಿಗಳು ನ್ಯಾಯಾಂಗದ ಮೇಲೆಯೇ ಭರವಸೆ ಕಳಕೊಳ್ಳುವಷ್ಟು. ಈವರೆಗೆ ಬರೇ 23 ಸಾಕ್ಷಿಗಳ ವಿಚಾರಣೆಯಷ್ಟೇ ನಡೆದಿದೆ. ಒಟ್ಟು 350ರಷ್ಟು ಸಾಕ್ಷಿಗಳಲ್ಲಿ ಬರೇ 23 ಸಾಕ್ಷಿಗಳ ವಿಚಾರಣೆಯಷ್ಟೇ ಈ 4 ವರ್ಷಗಳಲ್ಲಿ ನಡೆದಿದೆ ಎಂಬುದರ ಅರ್ಥ ಏನು? ಇದು ಸಹಜವೋ ಅಸಹಜವೋ? ಈ ಗತಿಯಲ್ಲಿ ವಿಚಾರಣಾ ಪ್ರಕ್ರಿಯೆ ನಡೆದರೆ ಉಳಿದ 327 ಮಂದಿ ಸಾಕ್ಷಿಗಳ ವಿಚಾರಣೆ ಮುಗಿಯಲು ಎಷ್ಟು ವರ್ಷಗಳು ಬೇಕಾದೀತು? 5 ವರ್ಷಗಳ ಸಾದಾ ಶಿಕ್ಷೆಗೆ ಅರ್ಹವಾದಂತಹ ಆರೋಪವನ್ನು ಹೊತ್ತುಕೊಂಡವರು ಜೀವನಪರ್ಯಂತ ಜೈಲಲ್ಲಿರಬೇಕಾದಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತಲ್ಲವೇ? ಯಾವುದೇ ವ್ಯಕ್ತಿಯನ್ನು ಮಾನಸಿಕವಾಗಿ ಹಿಂಸಿಸುವ ಪ್ರಶ್ನೆ ಇದು. ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸುವುದಕ್ಕಿಂತ ತಪ್ಪೊಪ್ಪಿಕೊಂಡು ಜೈಲಿನಿಂದ ಹೊರಬರುವುದೇ ಬುದ್ಧಿವಂತಿಕೆ ಎಂದು ತೀರ್ಮಾನಿಸುವುದಕ್ಕೆ ಒತ್ತಾಯಿಸುವ ಸನ್ನಿವೇಶ ಇದು. ಆದ್ದರಿಂದಲೇ, ಈ 13 ಮಂದಿ ಆರೋಪಿಗಳು ಸನ್ನಿವೇಶದ ಒತ್ತಡಕ್ಕೆ ಒಳಗಾಗಿದ್ದಾರೆ. ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೇ ಈ ತಪ್ಪೊಪ್ಪಿಕೊಳ್ಳುವಿಕೆಯ ಹಿಂದೆಯೂ ಅನುಮಾನವಿದೆ. ಆರೋಪಿಗಳು ಮತ್ತು ವ್ಯವಸ್ಥೆಯ ನಡುವೆ ಚೌಕಾಶಿ ಮಾತುಕತೆಗಳು ನಡೆದಿವೆ ಎಂದೂ ಹೇಳಲಾಗುತ್ತದೆ. ಇವೆಲ್ಲ ನಿಜ ಎಂದಾದರೆ, ಕಳೆದವಾರ ತೀರ್ಪು ನೀಡಲಾದ ದಿನವನ್ನು ನಮ್ಮ ನ್ಯಾಯಾಂಗ ವ್ಯವಸ್ಥೆಯ ಪಾಲಿಗೆ ಅತ್ಯಂತ ವಿಷಾದಕರ ದಿನವಾಗಿ ಪರಿಗಣಿಸಬೇಕಾಗುತ್ತದೆ. ಅಷ್ಟಕ್ಕೂ, ವಿಶೇಷ ನ್ಯಾಯಾಲಯದ ರಚನೆಯ ಬಳಿಕವೂ ವಿಚಾರಣಾ ಪ್ರಕ್ರಿಯೆ ಇಷ್ಟು ನಿಧಾನಗೊಳ್ಳಲು ಕಾರಣವೇನು? ಈ ನಿಧಾನ ಸಹಜವೇ ಅಥವಾ ಉದ್ದೇಶಪೂರ್ವಕವೇ?
       ಯಾವುದೇ ಒಂದು ಪ್ರಕರಣವೂ ಕೆಲವು ನಿರ್ದಿಷ್ಟ ಪ್ರಕ್ರಿಯೆಗಳನ್ನು ದಾಟಿ ಹೋಗಬೇಕಾಗುತ್ತದೆ. ಸಾಕ್ಷಿಗಳ ವಿಚಾರಣೆ, ವಕೀಲರು ಮತ್ತು ಪ್ರಾಸಿಕ್ಯೂಟರ್‍ಗಳ ನಡುವೆ ವಾದ, ನ್ಯಾಯಾಧೀಶರ ವಿಶ್ಲೇಷಣೆ.. ಇವೆಲ್ಲ ತೀರ್ಪಿನ ಮೊದಲು ನಡೆಯುವ ಸಾಮಾನ್ಯ ಚಟುವಟಿಕೆಗಳು. ಆದರೆ, ಈ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ನಡೆದಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ಸಾಮಾನ್ಯವಾಗಿ ಓರ್ವರನ್ನು ಅಪರಾಧಿ ಮತ್ತು ನಿರಪರಾಧಿ ಎಂದು ಕೋರ್ಟು ತೀರ್ಮಾನಿಸುವುದೇ ಸಾಕ್ಷಿಯ ಆಧಾರದಲ್ಲಿ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಾಕ್ಷಿಗೆ ಅತೀ ಪ್ರಮುಖ ಪಾತ್ರ ಇದೆ. ಕೇರಳದ ಸೌಮ್ಯ ಪ್ರಕರಣದಲ್ಲಿ ಹೈಕೋರ್ಟ್‍ನಿಂದ ಮರಣ ದಂಡನೆಗೆ ಗುರಿಯಾಗಿದ್ದ ಗೋವಿಂದ ಚಾಮಿಯ ಶಿಕ್ಷೆಯನ್ನು ಸುಪ್ರೀಮ್ ಕೋರ್ಟ್ ಕಳೆದವಾರ ಜೀವಾವಧಿ ಶಿಕ್ಷೆಗೆ ಇಳಿಸಿರುವುದಕ್ಕೆ ಪ್ರಮುಖ ಆಧಾರವೇ ಸಾಕ್ಷ್ಯದ ಕೊರತೆ. ಇಷ್ಟೊಂದು ಪ್ರಮುಖ ಆಧಾರವನ್ನೇ ಬುಡಮೇಲು ಮಾಡಬಲ್ಲಂತಹ ಪ್ರಕ್ರಿಯೆಯೊಂದು ವಿಶೇಷ ನ್ಯಾಯಾಲಯದಲ್ಲಿ ನಡೆದಿರುವುದು ಎಲ್ಲಿಯ ವರೆಗೆ ಸಮರ್ಥನೀಯ? ಇದನ್ನೇ ಮಾದರಿಯಾಗಿಸಿಕೊಂಡು ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಬೆಳವಣಿಗೆಗಳು ನಡೆದರೆ ಅದರ ಪರಿಣಾಮ ಏನಾದೀತು? ಆರೋಪಿಗಳನ್ನು ಸತಾಯಿಸಲಿಕ್ಕೆಂದೇ ನೂರಾರು ಸಾಕ್ಷಿಗಳನ್ನು ಪಟ್ಟಿ ಮಾಡುವುದು ಮತ್ತು ಆಮೆಗತಿಯಲ್ಲಿ ವಿಚಾರಣಾ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುವುದೆಲ್ಲ ನಡೆದರೆ ಏನು ಮಾಡುವುದು? ಅದರಿಂದ ನಮ್ಮ ನ್ಯಾಯ ವ್ಯವಸ್ಥೆಗೆ ಅಂಟಬಹುದಾದ ಕಳಂಕ ಯಾವ ರೀತಿಯದು?
      ನಿಜವಾಗಿ, ಆರೋಪಿಗಳು ತಪ್ಪೊಪ್ಪಿಕೊಳ್ಳುವುದಕ್ಕೂ ತಪ್ಪೊಪ್ಪಿಸುವುದಕ್ಕೂ ನ್ಯಾಯ-ಅನ್ಯಾಯದಷ್ಟೇ ವ್ಯತ್ಯಾಸವಿದೆ. ತಪ್ಪೊಪ್ಪಿಸುವುದು ಎಂಬ ಪದದಲ್ಲಿ ಬಲವಂತ ಇದೆ. ಇದು ನ್ಯಾಯಾಂಗದ ಕೆಲಸ ಅಲ್ಲ. ತಮ್ಮ ವಿಚಾರಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಮನ ಸೋತು ಆರೋಪಿಗಳು ಪಶ್ಚಾತ್ತಾಪದಿಂದ ತಪ್ಪೊಪ್ಪಿಕೊಳ್ಳುವಂತೆ ಮಾಡುವುದೇ ನಿಜವಾದ ನ್ಯಾಯ ಪ್ರಕ್ರಿಯೆ ಆದರೆ, ವಿಶೇಷ ನ್ಯಾಯಾಲಯವು ಈ ಹಿನ್ನೆಲೆಯಲ್ಲಿ ವಿಫಲವಾಗಿದೆ ಎಂದೇ ಹೇಳಬೇಕಾಗುತ್ತದೆ.

No comments:

Post a Comment