Monday, 17 October 2016

ಆಧುನಿಕ ಜೀವನ ವಿಧಾನವನ್ನು ಪ್ರಶ್ನೆಗೊಳಪಡಿಸಿದ ಮಗು

      ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟೊಯೋಟಾ ಮೋಟಾರು ಕಂಪೆನಿಯು ಕಳೆದವಾರ ಜಪಾನ್‍ನಲ್ಲಿ ತನ್ನ ಹೊಸ ಉತ್ಪನ್ನವನ್ನು ಬಿಡುಗಡೆಗೊಳಿಸಿತು. ಹೆಸರು ಕಿರೋಬೋ ಮಿನಿ. ರೊಬೋಟ್ ಮಗು. ಈ ಮಗು ಕಣ್ಣು ಮಿಟುಕಿಸುತ್ತದೆ. ಮಗುವಿನ ಭಾಷೆಯಲ್ಲಿ ಮುದ್ದಾಗಿ ಮಾತಾಡುತ್ತದೆ. ಅತ್ತಿತ್ತ ಜೋಲಿ ಹೊಡೆಯುತ್ತದೆ. ಪುಟ್ಟ ಮಗುವಿನ ಆಕಾರದಲ್ಲಿ ಅದನ್ನು ವಿನ್ಯಾಸ ಮಾಡಲಾಗಿದೆ. ಮಕ್ಕಳಿಲ್ಲದವರಿಗೆ ಒಂದು ಮಗುವನ್ನು ಒದಗಿಸುವ ಪ್ರಯತ್ನ ಟೊಯೋಟಾ ಕಂಪೆನಿಯದು. ಜೀವಂತ ಮಗುವಿಗೆ ಹೋಲಿಸಿದರೆ ಈ ಮಗು ತಾಂತ್ರಿಕವಾಗಿ ಹೆಚ್ಚು ಮುಂದು. ಕ್ಯಾಮರಾ, ಬ್ಲೂಟೂತ್ ಮತ್ತು ಮೈಕ್ರೋಫೋನ್‍ಗಳಿಂದ ಈ ಮಗು ಸಜ್ಜಿತವಾಗಿದೆ. ಮುಂದಿನ ವರ್ಷ ಈ ಮಗುವಿನಲ್ಲಿ ಇನ್ನಷ್ಟು ಮಗುತನವನ್ನು ಅಳವಡಿಸಿ ಬಿಡುಗಡೆಗೊಳಿಸುವುದು ಕಂಪೆನಿಯ ಗುರಿ. ಜಪಾನ್‍ನಲ್ಲಿ ಸದ್ಯ ಕಿರೋಬೋ ಮಿನಿ ಸುದ್ದಿಯಲ್ಲಿದೆ. ಅದರ ಮಗುತನ ಮತ್ತು ಬೆಲೆಯ ಬಗ್ಗೆ ಸಾರ್ವಜನಿಕರಲ್ಲಿ ಜಿಜ್ಞಾಸೆ ಪ್ರಾರಂಭವಾಗಿದೆ. ಅಷ್ಟಕ್ಕೂ, ಈ ಕಿರೋಬೋ ಮಿನಿಯನ್ನು ಬಿಡುಗಡೆಗೊಳಿಸಲು ಟೊಯೋಟಾ ಕಂಪೆನಿ ಭಾರತದ ಬದಲು ಜಪಾನನ್ನು ಯಾಕೆ ಆಯ್ಕೆ ಮಾಡಿಕೊಂಡಿತು ಎಂಬ ಪ್ರಶ್ನೆ ಸಹಜವಾದುದು. ಅತ್ಯಧಿಕ ಜನಸಂಖ್ಯೆ ಇರುವ ದೇಶ ನಮ್ಮದು. ಜನಸಂಖ್ಯೆ ಹೆಚ್ಚಿದ್ದ ಕಡೆ ವ್ಯಾಪಾರವೂ ಹೆಚ್ಚಾಗುತ್ತದೆ. ಭಾರತದ ಜನಸಂಖ್ಯೆಗೆ ಹೋಲಿಸಿದರೆ ತೀರಾ ಅತ್ಯಲ್ಪವೆನ್ನಬಹುದಾದ ಜನಸಂಖ್ಯೆ ಜಪಾನ್‍ನದ್ದು. ಆದರೂ ಕಿರೋಬೋ ಮಿನಿ ಜಪಾನ್‍ನಲ್ಲೇ ಯಾಕೆ ಬಿಡುಗಡೆಗೊಂಡಿದೆ ಎಂಬ ಪ್ರಶ್ನೆಗೆ ಉತ್ತರವೂ ಈ ಜನಸಂಖ್ಯೆಯೇ. ಜಪಾನ್‍ನಲ್ಲಿ ಮಕ್ಕಳು ಹುಟ್ಟುತ್ತಿಲ್ಲ. ಯುವ ತಲೆಮಾರಿನಲ್ಲಿ ಮಗು ಜನಪ್ರಿಯವಾಗುತ್ತಿಲ್ಲ. ಜಪಾನ್‍ನ ಪ್ರತಿ 10 ಯುವತಿಯರಲ್ಲಿ ಓರ್ವಳು ಮದುವೆಯೇ ಆಗುತ್ತಿಲ್ಲ. ಇನ್ನು, ಮದುವೆಯಾದವರಲ್ಲೂ ಮಕ್ಕಳ ಬಗ್ಗೆ ತೀವ್ರ ನಿರಾಸಕ್ತಿ ಬೆಳೆಯುತ್ತಿದೆ. ಮಕ್ಕಳು ರಹಿತ ಕುಟುಂಬ ಎಂಬುದು ಜಪಾನ್‍ನಲ್ಲಿ ಇವತ್ತು ಅಚ್ಚರಿಯ ವಿಷಯವಲ್ಲ. ಹೆರಿಗೆಯನ್ನು ಇಷ್ಟಪಡದ ಜೀವನ ವಿಧಾನ ಅಲ್ಲಿ ಜನಪ್ರಿಯವಾಗತೊಡಗಿದೆ. ಕಿರೋಬೋ ಮಿನಿಯನ್ನು ಬಿಡುಗಡೆಗೊಳಿಸಲು ಟೊಯೋಟಾ ಕಂಪೆನಿ ಜಪಾನ್ ಅನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಹಿನ್ನೆಲೆಯಾಗಿರುವುದೂ ಇದುವೇ. ಜಪಾನಿಗರಿಗೆ ಮಗು ಬೇಕು. ಅದರ ತುಂಟಾಟಗಳೂ ಬೇಕು. ಆದರೆ ಆ ಮಗುವನ್ನು ಹೊಂದುವ ಪ್ರಕ್ರಿಯೆಯನ್ನು ಅವರು ಇಷ್ಟಪಡುವುದಿಲ್ಲ. ಗರ್ಭಧಾರಣೆ, ಪ್ರಸವ, ಮಗುವಿನ ಲಾಲನೆ-ಪಾಲನೆ ಇವೆಲ್ಲವನ್ನೂ ಅವರು ಅತ್ಯಂತ ತ್ರಾಸದಾಯಕವಾಗಿ ಪರಿಗಣಿಸತೊಡಗಿದ್ದಾರೆ. ಬಹುಶಃ, ಆಧುನಿಕ ಮತ್ತು ಸಾಂಪ್ರದಾಯಿಕ ಜೀವನ ದೃಷ್ಟಿಕೋನಗಳ ನಡುವಿನ ಸಂಘರ್ಷ ಇದು. ಸಾಂಪ್ರದಾಯಿಕ ಜೀವನ ಕ್ರಮದಲ್ಲಿ ಮದುವೆ ಒಂದು ಹೊಣೆಗಾರಿಕೆ. ಪ್ರೌಢರಾದ ಹೆಣ್ಣು ಮತ್ತು ಗಂಡನ್ನು ಶಾಸ್ತ್ರೋಕ್ತವಾಗಿ ಒಂದಾಗಿಸುವುದನ್ನು ತಮ್ಮ ಧಾರ್ಮಿಕ ಹೊಣೆಗಾರಿಕೆ ಎಂದು ಸಮಾಜ ಭಾವಿಸುತ್ತದೆ. ಆ ಪ್ರಕ್ರಿಯೆಯಲ್ಲಿ ಕೆಲವು ನಿಯಮಗಳಿವೆ. ಗಂಡು-ಹೆಣ್ಣಿನ ಪ್ರಕೃತಿ ಸಹಜ ಆಕರ್ಷಣೆಯನ್ನು ಮಾನ್ಯ ಮಾಡುವುದಷ್ಟೇ ಈ ಜೋಡಿಯಾಗಿಸುವುದರ ಉದ್ದೇಶ ಅಲ್ಲ. ಅಲ್ಲಿ ಮಗುವಿನ ಬೇಡಿಕೆಯೂ ಇರುತ್ತದೆ. ಆವರೆಗೆ ಬರೇ ಹೆಣ್ಣು ಮತ್ತು ಗಂಡು ಆಗಿದ್ದವರು ಈ ಮದುವೆಯ ಮೂಲಕ ಪತಿ-ಪತ್ನಿಯರಾಗುತ್ತಾರೆ. ಆ ಬಳಿಕ ತಂದೆ ಮತ್ತು ತಾಯಿಯಾಗಬೇಕು. ಆ ಬಳಿಕ ಅಜ್ಜ-ಅಜ್ಜಿಯಾಗಬೇಕು. ಹೀಗೆ ಮಗುತನದಿಂದ ಮಾಗಿ, ಪ್ರೌಢರಾಗಿ, ದಂಪತಿಗಳೆನಿಸಿಕೊಂಡು, ಹೆತ್ತವರಾಗಿ ಮತ್ತು ಕೊನೆಗೆ ಮಗುವನ್ನು ಲಾಲಿಸುವ ಹಿರಿಯರಾಗಿ ವಿಕಾಸ ಹೊಂದುತ್ತಾ ಹೋಗುವುದನ್ನು ಸಾಂಪ್ರದಾಯಿಕ ಜೀವನ ಕ್ರಮದಲ್ಲಿ ಪ್ರಕೃತಿ ಸಹಜ ಪ್ರಕ್ರಿಯೆಯಾಗಿ ಒಪ್ಪಿಕೊಳ್ಳಲಾಗಿದೆ. ಬಹುಶಃ, ಈ ಜೀವನ ದೃಷ್ಟಿಕೋನವನ್ನು ಇವತ್ತಿನ ತಂತ್ರಜ್ಞಾನಾಧಾರಿತ ಜೀವನ ವಿಧಾನ ಪ್ರಶ್ನೆಗೊಳಪಡಿಸುತ್ತಿದೆ. ಕಿರೋಬೋ ಮಿನಿ ಈ ಪ್ರಶ್ನೆಯಿಂದ ಹುಟ್ಟಿಕೊಂಡ ಕೂಸು. ಜಪಾನ್‍ನ ಜನಸಂಖ್ಯೆಯ ಕಾಲುಭಾಗದಷ್ಟು ಮಂದಿ ಇವತ್ತು 65 ವರ್ಷವನ್ನು ದಾಟಿದವರಾಗಿದ್ದಾರೆ. ಕೈಗಾರಿಕಾ ಕ್ಷೇತ್ರ ಜನಸಂಪತ್ತಿನ ಬರವನ್ನು ಎದುರಿಸುತ್ತಿದೆ. ಜಗತ್ತಿನಲ್ಲಿಯೇ ಇಂಡಸ್ಟ್ರಿಯಲ್ ರೋಬೋಟ್ ಅನ್ನು ಬಳಸುವ ರಾಷ್ಟ್ರಗಳ ಪಟ್ಟಿಯಲ್ಲಿ ಜಪಾನ್ ಅತ್ಯಂತ ಮುಂದಿದೆ. ಮನುಷ್ಯರ ಬದಲಿಗೆ ರೋಬೋಟ್‍ಗಳನ್ನು ಮನೆ, ಕಚೇರಿ, ಉತ್ಪಾದನಾ ರಂಗದಲ್ಲಿ ಬಳಸುವುದಕ್ಕೆ ಮುಂದಾಗಲೇಬೇಕಾದ ಅನಿವಾರ್ಯತೆಯನ್ನು ಅದು ಇವತ್ತು ಎದುರಿಸುತ್ತಿದೆ.   
       
     ನಿಜವಾಗಿ, ಕಿರೋಬೋ ಮಿನಿಯನ್ನು ನಾವು ಕಂಪ್ಯೂಟರ್, ಮೊಬೈಲ್, ಟಿ.ವಿ., ರೇಡಿಯೋಗಳಂತೆ ಬರೇ ಒಂದು ಉತ್ಪನ್ನವಾಗಿ ಪರಿಗಣಿಸುವಂತಿಲ್ಲ. ಈ ಉತ್ಪನ್ನಗಳಿಂದಾಗಿ ಮಾನವನ ಬಳಕೆಯು ಕಡಿಮೆಯಾಗಿರಬಹುದು. ಒಂದು ಕಂಪ್ಯೂಟರ್‍ಗೆ 10 ಮಂದಿಯ ಕೆಲಸವನ್ನು ಮಾಡುವ ಸಾಮರ್ಥ್ಯ ಇರಬಹುದು. ಆದರೆ ಅದು ಮಗುರಹಿತ ಪರ್ಯಾಯ ಜಗತ್ತನ್ನು ಕಲ್ಪಿಸಿಕೊಂಡು ಬಂದಿರುವುದಲ್ಲ. ಆದರೆ ಕಿರೋಬೋ ಮಿನಿಯ ಹುಟ್ಟೇ ಮಗುರಹಿತ ಜಗತ್ತನ್ನು ಗುರಿಯಾಗಿಸಿಕೊಂಡಿದೆ. ಆದ್ದರಿಂದಲೇ, ಕಿರೋಬೋ ಮಿನಿಯನ್ನು ನಾವು ನಮ್ಮ ಜೀವನ ಪದ್ಧತಿಯ ಬಗ್ಗೆ ಅವಲೋಕನ ನಡೆಸಲು ಅವತರಿಸಿರುವ ಮಗು ಎಂಬ ನೆಲೆಯಲ್ಲಿ ಪರಿಗಣಿಸಬೇಕಾಗಿದೆ. ತಂತ್ರಜ್ಞಾನಾಧಾರಿತ ಜೀವನ ಕ್ರಮದಲ್ಲಿ ಒಂದು ಕರ್ಣಾನಂದಕರ ಘೋಷಣೆ ಇದೆ. ಎಲ್ಲರೂ ದುಡಿಯುವುದು ಮತ್ತು ಅವರಿಷ್ಟದಂತೆ ಬದುಕುವುದು. ಬಾಹ್ಯನೋಟಕ್ಕೆ ಈ ಘೋಷಣೆಯಲ್ಲಿ ಅನಾಹುತಕಾರಿಯಾದುದೇನೂ ಇಲ್ಲ. ಆದರೆ ಈ ಜೀವನ ಕ್ರಮದ ಬಹುದೊಡ್ಡ ದೋಷ ಏನೆಂದರೆ, ಹೊಣೆಗಾರಿಕೆ ರಹಿತ ಬದುಕನ್ನು ಪ್ರಚೋದಿಸುವುದು. ನನಗಿಷ್ಟ ಬಂದಂತೆ, ಇಷ್ಟವಾದವರ ಜೊತೆ, ಇಷ್ಟವಾದಷ್ಟು ದಿನ ಇರುವೆ.. ಎಂಬ ಅತಿ ಸ್ವತಂತ್ರವಾದವನ್ನು ಅದು ಪ್ರತಿಪಾದಿಸುತ್ತದೆ. ಈ ನಿಲುವಿನಲ್ಲಿ ಹೊಣೆರಹಿತವಾದ ಎಲ್ಲವೂ ಇದೆ. ಮಗು ಎಂಬುದು ಹೊಣೆರಹಿತ ಜೀವನ ವಿಧಾನದ ಉತ್ಪನ್ನ ಅಲ್ಲ. ಅದರಲ್ಲಿ ಜವಾಬ್ದಾರಿಯುತ ಹೆಣ್ಣು-ಗಂಡಿನ ಪಾತ್ರ ಇರುತ್ತದೆ. ಮದುವೆಯ ಮೂಲಕ ಈ ಜವಾಬ್ದಾರಿಗೆ ಆರಂಭವನ್ನು ನೀಡಲಾಗುತ್ತದೆ. ಒಂದಷ್ಟು ಮಂದಿ ಆ ಜವಾಬ್ದಾರಿಗೆ ಸಾಕ್ಷಿಯಾಗಿರುತ್ತಾರೆ. ದಾಂಪತ್ಯವು ಇಷ್ಟವಿದ್ದಷ್ಟು ದಿನ ಒಟ್ಟಾಗಿ ಇರುವ ಸಂಬಂಧವೇ ಆಗಿದ್ದರೂ ಅದರ ಆರಂಭ ಅಂಥದ್ದೊಂದು ಘೋಷಣೆಯ ಮೂಲಕ ಆಗಿರುವುದಿಲ್ಲ. ಮದುವೆಯನ್ನು ಒಂದು ಪವಿತ್ರ ಒಪ್ಪಂದವಾಗಿ ಇಲ್ಲಿ ಪರಿಗಣಿಸಲಾಗುತ್ತದೆ. ಹೆಣ್ಣು ಮತ್ತು ಗಂಡು ದೈಹಿಕ ಆಕರ್ಷಣೆಯಾಚೆಗೆ ಜವಾಬ್ದಾರಿಯಿಂದ ಮತ್ತು ಪರಸ್ಪರ ಕೊಡು-ಕೊಳ್ಳುವಿಕೆಯ ಮೂಲಕ ಬದುಕು ಸಾಗಿಸಿಕೊಂಡು ಹೋಗುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗುತ್ತದೆ. ಅಲ್ಲಿ ದುಡಿತವೂ ಇದೆ. ತ್ಯಾಗವೂ ಇದೆ. ಪತಿಗಾಗಿ ಪತ್ನಿಯೂ ಪತ್ನಿಗಾಗಿ ಪತಿಯೂ ಅಭಿಪ್ರಾಯಗಳನ್ನು ಬಿಟ್ಟು ಕೊಡುವ ಮತ್ತು ಸಂಬಂಧವನ್ನು ಎಂದೂ ಬಿಟ್ಟು ಕೊಡದ ಪ್ರಬುದ್ಧತೆಯೂ ಇದೆ. ಈ ಜವಾಬ್ದಾರಿಯುತ ಬದುಕಿನ ಭಾಗವೇ ಮಗು. ಆದ್ದರಿಂದಲೇ ಕಿರೋಬೋ ಮಿನಿಯ ಹುಟ್ಟಿಗೆ ನಾವು ಸಂಭ್ರಮಿಸುವುದಕ್ಕಿಂತ ಹೆಚ್ಚು ಆತಂಕ ಪಡಬೇಕಾಗಿದೆ. ನಮ್ಮ ಬೇಜವಾಬ್ದಾರಿಯನ್ನು ಸೂಚಿಸುವ ಮಗು ಅದು. ಆಧುನಿಕ ಜಗತ್ತಿನಲ್ಲಿ ದಾಂಪತ್ಯ ದೃಷ್ಟಿಕೋನ ಎಷ್ಟು ಹೊಣೆರಹಿತವಾಗಿದೆ ಎಂಬುದನ್ನು ಪರಿಣಾಮಕಾರಿಯಾಗಿ ಸಾರುವ ಮಗುವೂ ಅದುವೇ.


No comments:

Post a Comment