Saturday, 29 October 2016

ಬಾಲಿವುಡ್‍ನ ನೈತಿಕತೆಯನ್ನು ಪ್ರಶ್ನೆಗೊಳಪಡಿಸಿದ ಬ್ರಾಸ್‍ನನ್

       ಕಳೆದವಾರ ಅಪರೂಪದ ಕ್ಷಮಾಯಾಚನೆಯೊಂದು ನಡೆಯಿತು. ಕ್ಷಮೆ ಯಾಚಿಸಿದವರು ಜೇಮ್ಸ್ ಬಾಂಡ್ ಸಿನಿಮಾ ಖ್ಯಾತಿಯ ಹಾಲಿವುಡ್ ನಟ ಪಿಯರ್ಸ್ ಬ್ರಾಸ್‍ನನ್. ‘ತನ್ನಿಂದಾಗಿ ಯಾರಿಗಾದರೂ ತೊಂದರೆ ಆಗಿದ್ದರೆ ದಯವಿಟ್ಟು ಕ್ಷಮಿಸಿ...’ ಎಂದವರು ಭಾರತೀಯರಲ್ಲಿ ವಿನಂತಿಸಿದ್ದಾರೆ. ಹಾಗಂತ, ಬ್ರಾಸ್‍ನನ್ ಪಾಕಿಸ್ತಾನದವರಲ್ಲ ಅಥವಾ ಹಿಂದಿ ಸಿನಿಮಾ ನಿರ್ದೇಶಕ ಕರಣ್ ಜೋಹರ್‍ರಿಂದ 5 ಕೋಟಿ ರೂಪಾಯಿಯನ್ನು ದರೋಡೆಗೈದು ಭಾರತೀಯ ಸೇನೆಗೆ ನೀಡಲು ಮುಂದಾದವರಲ್ಲಿ ಬ್ರಾಸ್‍ನನ್‍ಗೆ ಯಾವ ಪಾತ್ರವೂ ಇಲ್ಲ. ಪಾನ್ ಬಹಾರ್ ಎಂಬ ಪಾನ್ ಮಸಾಲದ ಉತ್ಪನ್ನದಲ್ಲಿ ಅವರ ಭಾವಚಿತ್ರ ಪ್ರಕಟವಾಗುತ್ತಿದೆ ಎಂಬುದಕ್ಕಾಗಿ ಅವರು ಭಾರತೀಯರ ಕ್ಷಮೆ ಕೋರಿದ್ದಾರೆ. ಕ್ಯಾನ್ಸರ್‍ಕಾರಕ ಅಂಶಗಳುಳ್ಳ ಪಾನ್ ಮಸಾಲದ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿರುವ ಬಗ್ಗೆ ಪ್ರಶ್ನೆಗಳು ಎದುರಾಗಿತ್ತು. ಕ್ಯಾನ್ಸರ್‍ನಿಂದಾಗಿ ಮೊದಲ ಪತ್ನಿ ಮತ್ತು ಮಗಳನ್ನು ಕಳಕೊಂಡಿರುವ ವ್ಯಕ್ತಿಯೋರ್ವ ಕ್ಯಾನ್ಸರ್‍ಕಾರಕ ಉತ್ಪನ್ನಕ್ಕೆ ರೂಪದರ್ಶಿಯಾದುದು ಎಷ್ಟು ಸಮರ್ಥನೀಯ ಎಂಬ ಆಕ್ಷೇಪಗಳೂ ಎದುರಾಗಿದ್ದುವು. ಇದಕ್ಕೆ ಬ್ರಾಸ್‍ನನ್ ಉತ್ತರಿಸಿದ್ದಾರೆ. ತಾನು ಪಾನ್ ಬಹಾರ್ ಉತ್ಪನ್ನಕ್ಕೆ ರೂಪದರ್ಶಿಯೇ ಆಗಿಲ್ಲ ಎಂದೂ ಅವರು ಹೇಳಿದ್ದಾರೆ. ಮಾತ್ರವಲ್ಲ, ತನ್ನ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡ ಕಂಪೆನಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಕ್ಷಣದಿಂದ ತನ್ನ ಭಾವಚಿತ್ರ ಬಳಕೆ ಮಾಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.
       ಅಂದಹಾಗೆ, ಮಾಡದ ತಪ್ಪಿಗೆ ಕ್ಷಮೆ ಕೋರಿದ ಬ್ರಾಸ್‍ನನ್‍ರನ್ನು ನಮ್ಮ ಬಾಲಿವುಡ್‍ನಲ್ಲಿ (ಹಿಂದಿ ಸಿನಿಮಾ ರಂಗ) ತಂದು ಕೂರಿಸಿದರೆ ಏನಾಗಬಹುದು? ಬ್ರಾಸ್‍ನನ್ ದಡ್ಡ ಎನಿಸಿಕೊಳ್ಳಲಾರರೇ? ಕಳೆದ ವರ್ಷ ನಟ-ನಟಿಯರಾದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಪ್ರೀತಿ ಝಿಂಟಾರಿಗೆ ನ್ಯಾಯಾಲಯ ನೋಟೀಸ್ ಜಾರಿ ಮಾಡಿತ್ತು. ಮ್ಯಾಗಿ ಉತ್ಪನ್ನದ ಪ್ರಚಾರದಲ್ಲಿ ಅವರು ಭಾಗಿಯಾಗಿದ್ದುದೇ ಇದಕ್ಕೆ ಕಾರಣವಾಗಿತ್ತು. ಹಾಗಂತ ಅವರು ಭಾರತೀಯರಲ್ಲಿ ಕ್ಷಮೆಯನ್ನೇನೂ ಕೋರಲಿಲ್ಲ. ನಿಜವಾಗಿ, 100 ಕೋಟಿಗಿಂತಲೂ ಅಧಿಕ ಜನಸಂಖ್ಯೆಯಿರುವ ಈ ದೇಶವು ಉತ್ಪನ್ನಗಳ ಪಾಲಿಗೆ ಬಹುದೊಡ್ಡ ಮಾರುಕಟ್ಟೆ. ಯುರೋಪಿನ ಹತ್ತಾರು ರಾಷ್ಟ್ರಗಳನ್ನು ಒಗ್ಗೂಡಿಸಿದರೂ ಲಭ್ಯವಾಗದ ಬೃಹತ್ ಗ್ರಾಹಕ ವರ್ಗವೊಂದು ಭಾರತದಲ್ಲಿ ಲಭ್ಯವಿದೆ. ಈ ವರ್ಗವನ್ನು ತಲುಪಲು ಮತ್ತು ಅವರ ವಿಶ್ವಾಸ ಗಳಿಸಲು ಎರಡು ರೀತಿಯಲ್ಲಿ ಸಾಧ್ಯವಿದೆ ಎಂದು ಕಂಪೆನಿಗಳು ತಿಳಿದುಕೊಂಡಿವೆ. ಒಂದು- ಉತ್ಪನ್ನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಇರುವುದು. ಇನ್ನೊಂದು- ಗುಣಮಟ್ಟಕ್ಕೆ ಕಡಿಮೆ ಮಹತ್ವವನ್ನು ಕೊಟ್ಟು ಜನರನ್ನು ತಲುಪುವ ಸುಲಭ ದಾರಿಗಳನ್ನು ಕಂಡುಕೊಳ್ಳುವುದು. ದುರಂತ ಏನೆಂದರೆ, ಈ ಎರಡನೇ ವಿಧಾನ ಇವತ್ತು ಅತ್ಯಂತ ಫಲಪ್ರದವಾಗಿದೆ. ಸಿನಿಮಾ ನಟರು ಮತ್ತು ಕ್ರೀಡಾಪಟುಗಳನ್ನು ಮದ್ಯ ಕಂಪೆನಿಗಳು ಧಾರಾಳ ಬಳಸಿಕೊಳ್ಳುತ್ತಿವೆ. ತಂಬಾಕು ಕಂಪೆನಿಗಳೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ವಿಸ್ಕಿಯ ಜಾಹೀರಾತಿನಲ್ಲಿ ಶಾರುಕ್ ಖಾನ್, ಪ್ರಿಯಾಂಕ ಚೋಪ್ರಾ ಮತ್ತಿತರರಿದ್ದಾರೆ. ಪಾನ್ ಮಸಾಲಾಗಳ ಜಾಹೀರಾತಿನಲ್ಲಿ ಅಜಯ್ ದೇವ್‍ಗನ್, ಸೈಫ್ ಅಲಿ ಖಾನ್ ಮುಂತಾದವರಿದ್ದಾರೆ. ಇವರಲ್ಲದೇ, ಆರೋಗ್ಯಕ್ಕೆ ಹಾನಿಕರವೆಂದು ಬಗೆಯಲಾದ ತಂಬಾಕುಜನ್ಯ ಉತ್ಪನ್ನಗಳ ಜಾಹೀರಾತಿನಲ್ಲಿ ವಿವಿಧ ಕ್ಷೇತ್ರಗಳ ಪ್ರಸಿದ್ಧರು ಭಾಗಿಯಾಗಿದ್ದಾರೆ. ಈ ಕಾರಣದಿಂದಲೇ, ಅವು ಶರವೇಗದಲ್ಲಿ ಜನರ ನಡುವೆ ಪರಿಚಿತವೂ ಜನಪ್ರಿಯವೂ ಆಗುತ್ತಿದೆ. ಜನರು ತಮ್ಮ ಹೀರೋಗಳ ಹುಚ್ಚು ಅಭಿಮಾನದಲ್ಲಿ ಆ ಉತ್ಪನ್ನಗಳ ಗ್ರಾಹಕರಾಗುತ್ತಾರೆ. ಬಳಿಕ ದಾಸರಾಗುತ್ತಾರೆ. ಇದು ಕಂಪೆನಿಗಳಿಗೂ ಗೊತ್ತು. ನಟಿಸುವವರಿಗೂ ಗೊತ್ತು. ಆದ್ದರಿಂದಲೇ, ಬ್ರಾಸ್‍ನನ್‍ರ ಕ್ಷಮೆ ಕೋರುವಿಕೆ ಮುಖ್ಯವಾಗುವುದು. ಓರ್ವ ‘ಪ್ರಸಿದ್ಧ’ರ ಹೊಣೆಗಾರಿಕೆಗಳು ಏನೇನು? ಅವರು ಬರಿದೇ ರೂಪದರ್ಶಿಗಳು ಮಾತ್ರವೇ? ಸಮಾಜಕ್ಕೂ ಅವರಿಗೂ ಸಂಬಂಧ ಇಲ್ಲವೇ? ಸಾಮಾಜಿಕ ಬದ್ಧತೆ, ಸಾಮಾಜಿಕ ಆರೋಗ್ಯ, ರೋಗಮುಕ್ತ ಸಮಾಜ.. ಮುಂತಾದುವುಗಳಿಗೆ ಅವರ ಕೊಡುಗೆಗಳೇನು? ಇವುಗಳಲ್ಲಿ ಅವರು ವಹಿಸುವ ಪಾತ್ರ ಯಾವುದು? ನಿಜವಾಗಿ, ಬಾಲಿವುಡ್ ಕ್ಷೇತ್ರ ಇವತ್ತು ಅಸ್ತಿತ್ವದಲ್ಲಿರುವುದೇ ಜನರಿಂದಾಗಿ. ಈ ಜನರಲ್ಲಿ ಬಡವರಿದ್ದಾರೆ, ಶ್ರೀಮಂತರಿದ್ದಾರೆ, ಮಹಿಳೆಯರಿದ್ದಾರೆ, ಯುವಕರಿದ್ದಾರೆ. ಈ ಜನರ ಬೆಂಬಲದಿಂದಾಗಿಯೇ ಈ ದೇಶದಲ್ಲಿ ಸಾಮಾನ್ಯನೋರ್ವ ಹೀರೋ ಆಗಿದ್ದಾನೆ/ಳೆ. ಬಾಲಿವುಡ್ ಕ್ಷೇತ್ರದಲ್ಲಿ ಇವತ್ತು ಕೋಟ್ಯಂತರ ರೂಪಾಯಿ ಹೂಡಿಕೆಯಾಗುತ್ತಿದ್ದರೆ, ಅದರ ಹಿಂದಿನ ಧೈರ್ಯ ಈ ಬೃಹತ್ ಬಡವ-ಶ್ರೀಮಂತರನ್ನೊಳಗೊಂಡ ಭಾರತೀಯರೇ. ಹೀಗಿರುವಾಗ, ಈ ಕ್ಷೇತ್ರ ತನ್ನ ಈ ಬೃಹತ್ ಗ್ರಾಹಕ ವರ್ಗವನ್ನು ಏನೆಂದು ಪರಿಗಣಿಸಬೇಕು? ಇವರ ಬಗ್ಗೆ ಯಾವ ನಿಲುವನ್ನು ಹೊಂದಬೇಕು? ತಂಬಾಕು ಉತ್ಪನ್ನಗಳಲ್ಲಿ ಕ್ಯಾನ್ಸರ್‍ಕಾರಕ ಅಂಶಗಳಿವೆ ಎಂಬುದು ತೀರಾ ಬಡ ಭಾರತೀಯನಿಗೆ ಗೊತ್ತಿಲ್ಲದೇ ಇರಬಹುದು. ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕರ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಅಥವಾ ಅದಕ್ಕೆ ಮಹತ್ವ ಕೊಡದ ಭಾರತೀಯ ಇರಬಹುದು. ಆದರೆ ಇವುಗಳ ಪ್ರಚಾರದಲ್ಲಿ ಭಾಗಿಯಾಗುವ ಸಿನಿಮಾ ತಾರೆಯರಿಗೆ ಇದು ಖಂಡಿತ ಗೊತ್ತು. ಗೊತ್ತಿದ್ದೂ ಅದರ ಪ್ರಚಾರದಲ್ಲಿ ಭಾಗಿಯಾಗುತ್ತಾರೆಂದರೆ ಅದನ್ನು ಜನರಿಗೆ ಮಾಡುವ ದ್ರೋಹ ಎಂದಲ್ಲದೇ ಬೇರೇನೆಂದು ಕರೆಯಬೇಕು? ಹಾಗಂತ, ಈ ದ್ರೋಹವನ್ನು ಬರೇ ಉತ್ಪನ್ನಗಳ ಜಾಹೀರಾತಿಗೆ ಮಾತ್ರ ಸೀಮಿತಗೊಳಿಸಬೇಕಾಗಿಲ್ಲ. ಕಲೆಯ ಹೆಸರಲ್ಲಿ ಮೌಲ್ಯಗಳ ಕೊಲೆಯನ್ನೂ ಇಲ್ಲಿ ನಡೆಸಲಾಗುತ್ತದೆ. ಸಾಮಾನ್ಯವಾಗಿ ಸಿನಿಮಾಗಳ ಮೇಲೆ ಪತ್ರಿಕೆಗಳಲ್ಲಿ ವಿಶ್ಲೇಷಣೆ ನಡೆಸುವವರು, ‘ಸದಭಿರುಚಿ’ಯ ಸಿನಿಮಾ ಎಂದು ಬರೆಯುವುದಿದೆ. ‘ಕುಟುಂಬ ಸಮೇತ ಹೋಗಿ ನೋಡಬಹುದಾದ ಚಿತ್ರ’ ಎಂಬ ಸರ್ಟಿಫಿಕೇಟನ್ನೂ ನೀಡುವುದಿದೆ. ಅಂದಹಾಗೆ, ಇಂಥ ಪದ ಬಳಕೆಗಳು ಕೊಡುವ ಸೂಚನೆಯೇನು? ಕುಟುಂಬ ಸಮೇತ ನೋಡಲು ಅಸಾಧ್ಯವಾದ ಮತ್ತು ಸದಭಿರುಚಿಗೆ ವಿರುದ್ಧವಾದ ಸಿನಿಮಾಗಳೂ ತಯಾರಾಗುತ್ತವೆ ಎಂಬುದನ್ನೇ ಅಲ್ಲವೇ?
        ನಿಜವಾಗಿ, ಮಾಡದ ತಪ್ಪಿಗೆ ಬ್ರಾಸ್‍ನನ್ ಕ್ಷಮೆ ಕೋರುವ ಮೂಲಕ ಕೆಲವು ಪ್ರಶ್ನೆಗಳ ಹುಟ್ಟಿಗೆ ಕಾರಣರಾಗಿದ್ದಾರೆ. ಆ ಪ್ರಶ್ನೆ ನೈತಿಕತೆಯದ್ದು. ಸಾಮಾಜಿಕ ಬದ್ಧತೆಯದ್ದು. ವ್ಯಕ್ತಿಯ ಹೊಣೆಗಾರಿಕೆಯದ್ದು. ಓರ್ವ ನಟ ಅಥವಾ ನಟಿ ಅಥವಾ ರೂಪದರ್ಶಿ ಬರೇ ಅಷ್ಟೆಯೇ ಅಥವಾ ಅದರಾಚೆಗೆ ಅವರಿಗೂ ಸಮಾಜಕ್ಕೂ ಸಂಬಂಧ ಇದೆಯೇ? ಒಂದು ಉತ್ಪನ್ನ ಜನರ ಆರೋಗ್ಯವನ್ನು ಕೆಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಾದಲ್ಲಿ ಪ್ರಚಾರಕ ಏನು ಮಾಡಬೇಕು? ‘ತಾನು ಬರೇ ಪ್ರಚಾರಕ, ಉತ್ಪನ್ನದ ಗುಣಮಟ್ಟಕ್ಕೂ ತನಗೂ ಸಂಬಂಧ ಇಲ್ಲ..’ ಎಂಬುದು ಆತನ ನಿಲುವಾಗಬಹುದೇ? ಈ ನಿಲುವು ಸಮರ್ಥನೀಯವೇ? ಅನಾರೋಗ್ಯಕಾರಿಯಾದ ಉತ್ಪನ್ನವನ್ನು ಖರೀದಿಸುವಂತೆ ಆತ ಜನರೊಂದಿಗೆ ವಿನಂತಿಸುವುದು ಅಪರಾಧ ಅಲ್ಲವೇ? ಜನರು ಆ ಉತ್ಪನ್ನದ ಮೇಲೆ ಭರವಸೆ ತಾಳುವಂತೆ ನಟಿಸುವುದು ಜನದ್ರೋಹವಲ್ಲವೇ? ತಮ್ಮನ್ನು ಬೆಳೆಸಿದ ಜನರನ್ನೇ ಈ ಮಟ್ಟದಲ್ಲಿ ಮೂರ್ಖರಾಗಿಸುವುದು ಯಾಕೆ ಕೊಲೆ ಸಂಚು ಎನಿಸಿಕೊಳ್ಳಬಾರದು? ಅಸಂಖ್ಯ ಮಂದಿ ಇವತ್ತು ನಿರ್ದಿಷ್ಟ ಮದ್ಯದ ಬ್ರಾಂಡ್‍ಗೆ, ತಂಬಾಕು ಉತ್ಪನ್ನಗಳಿಗೆ ಅಥವಾ ಜಂಕ್ ಫುಡ್‍ಗಳಿಗೆ ಗ್ರಾಹಕರಾಗಿರುವುದು ಅದರ ಪ್ರಚಾರಕರಾದ ನಟ-ನಟಿಯರಿಂದಾಗಿ. ಅವರೇ ಆ ಉತ್ಪನ್ನದ ವಿಶ್ವಾಸ. ಅವರೇ ಆ ಉತ್ಪನ್ನದ ಗುಣಮಟ್ಟಕ್ಕೆ ಖಾತರಿ. ಅವರ ಮೇಲಿನ ಅಭಿಮಾನದಿಂದಾಗಿ ಆ ಉತ್ಪನ್ನ ಜನರ ಮನೆ ಸೇರುತ್ತದೆ. ಹೊಟ್ಟೆ ತುಂಬುತ್ತದೆ ಮತ್ತು ನಿಧಾನಕ್ಕೆ ಅವರನ್ನೇ ಬಲಿ ಪಡೆಯುತ್ತದೆ. ಆದ್ದರಿಂದಲೇ ಬ್ರಾಸ್‍ನನ್ ಮುಖ್ಯವಾಗುತ್ತಾರೆ.

No comments:

Post a Comment