Thursday 17 November 2016

ನುಡಿದ ಮಾತನು ನುಂಗಿ ನಡೆದರೆ ಮೆಚ್ಚನಾ ಪರಮಾತ್ಮನು....

ಮೀನಾಕ್ಷಿ ಲೇಖಿ
       ಕಮಲ (ತಾವರೆ) ಮತ್ತು ಊಸರವಳ್ಳಿ ಎರಡಕ್ಕೂ ಪ್ರತ್ಯೇಕ ಅಸ್ತಿತ್ವಗಳಿವೆ. ಕಮಲ ಅರಳುವುದೇ ನೀರಿನಲ್ಲಿ. ಅದು ಬಣ್ಣ ಬದಲಿಸುವುದಿಲ್ಲ. ನೋಡಿದ ತಕ್ಷಣ ಕಮಲ ಎಂದು ಗುರುತಿಸಬಹುದಾದಷ್ಟು ಸೀದಾಸಾದಾ ಗುಣ ಅದರದು. ಆದರೆ ಊಸರವಳ್ಳಿ ಇದಕ್ಕೆ ತದ್ವಿರುದ್ಧ. ಅದು ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸುತ್ತಿರುತ್ತದೆ. ಬಣ್ಣ ಬದಲಾವಣೆ ಎಂಬುದು ಅದರ ಪ್ರಾಕೃತಿಕ ನಿಯಮ. ನೋಡ ನೋಡುತ್ತಲೇ ಬಣ್ಣ ಬದಲಾಯಿಸುವುದನ್ನು ಅದು ಕರಗತ ಮಾಡಿಕೊಂಡಿದೆ. ಆದ್ದರಿಂದಲೇ, ಮನುಷ್ಯರಾರೂ ತಾವು ಊಸರವಳ್ಳಿಗೆ ಹೋಲಿಕೆಯಾಗುವುದನ್ನು ಇಷ್ಟಪಡುವುದಿಲ್ಲ. ನಮ್ಮ ನಡುವಿನ ಯಾವ ರಾಜಕೀಯ ಪಕ್ಷವೂ ಊಸರವಳ್ಳಿಯನ್ನು ತಮ್ಮ ಪಕ್ಷದ ಚಿಹ್ನೆಯಾಗಿ ಆಯ್ಕೆ ಮಾಡಿ ಕೊಂಡಿದ್ದೂ ಇಲ್ಲ. ದುರಂತ ಏನೆಂದರೆ, ಕಮಲವನ್ನು ಚಿಹ್ನೆಯಾಗಿ ಆಯ್ಕೆ ಮಾಡಿಕೊಂಡಿರುವ ಪಕ್ಷದ ವರ್ತನೆಯನ್ನು ನೋಡುವಾಗ ಕಮಲದ ಬದಲು ಅದಕ್ಕೆ ಊಸರವಳ್ಳಿ ಅತ್ಯಂತ ಸೂಕ್ತ ಆಯ್ಕೆಯಾಗುತ್ತಿತ್ತೇನೋ ಎಂದೆನಿಸುತ್ತದೆ. ಕಮಲ ಪಕ್ಷದ ನಾಯಕರ ಮಾತು-ಕೃತಿ-ಹಾವ-ಭಾವಗಳು ಯಾವ ರೀತಿಯಲ್ಲೂ ಕಮಲಕ್ಕೆ ಹೋಲಿಕೆಯಾಗುತ್ತಿಲ್ಲ. 2014ರ ಆರಂಭದಲ್ಲಿ ಕೈ ಪಕ್ಷದ ಆಡಳಿತವು ನೋಟು ರದ್ದತಿಯ ಬಗ್ಗೆ ಮಾತಾಡಿತ್ತು. 2005 ಮಾರ್ಚ್ 31ರಿಂದ ಮೊದಲು ಪ್ರಕಟವಾದ ನೋಟುಗಳನ್ನು ರದ್ದುಪಡಿಸುವುದಕ್ಕೆ ಕೈ ಆಡಳಿತ ಮುಂದಾಗಿತ್ತು. ದೇಶದಾದ್ಯಂತ ಈ ಕುರಿತಂತೆ ಚರ್ಚೆಗಳೂ ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ನೋಟು ರದ್ಧತಿ ಚಿಂತನೆಯನ್ನು ಪ್ರಬಲವಾಗಿ ವಿರೋಧಿಸಿದ್ದು ಕಮಲ ಪಕ್ಷ. ಆ ಪಕ್ಷದ ಸಂಸದರಾಗಿದ್ದ ಮತ್ತು ವಕ್ತಾರೆಯಾಗಿದ್ದ ಮೀನಾಕ್ಷಿ ಲೇಖಿಯವರು ಅದನ್ನು ‘ಬಡವ ವಿರೋಧಿ ಚಿಂತನೆ’ ಎಂದು ಟೀಕಿಸಿದ್ದರು. ವಿದೇಶದಿಂದ ಕಪ್ಪು ಹಣವನ್ನು ವಾಪಸು ತರಬೇಕೆಂಬ ಕೂಗನ್ನು ಮರೆಸಲು ಕೈ ಪಕ್ಷವು ನಡೆಸುತ್ತಿರುವ ತಂತ್ರ ಇದು ಎಂದೂ ವಿಶ್ಲೇಷಿಸಿದ್ದರು. ನೋಟು ರದ್ಧತಿಯನ್ನು ವಿರೋಧಿಸಿ ಅವರು ಮಾತಾಡಿದ ವೀಡಿಯೋ ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೊದಲು ಕಮಲ ಪಕ್ಷದ ಅರುಣ್ ಜೇಟ್ಲಿಯವರು ಆಧಾರ್ ಕಾರ್ಡನ್ನು ತೀವ್ರವಾಗಿ ವಿರೋಧಿಸಿದ್ದರು. ಜಿಎಸ್‍ಟಿ ಮತ್ತು ಎಫ್‍ಡಿಐ (ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ 100% ನೇರ ವಿದೇಶಿ ಹೂಡಿಕೆ)ಯನ್ನೂ ಖಂಡಿಸಿದ್ದರು. ಅದು ಕಮಲ ಪಕ್ಷದ ಅಧಿಕೃತ ನಿಲುವೂ ಆಗಿತ್ತು. ಇದೀಗ ಕೈ ಪಕ್ಷ ಅಧಿಕಾರ ಕಳೆದುಕೊಂಡು ಎರಡೂವರೆ ವರ್ಷಗಳು ಕಳೆದಿವೆ. ಕಮಲ ಪಕ್ಷ ಅಧಿಕಾರದಲ್ಲಿದೆ. ವಿಷಾದ ಏನೆಂದರೆ, ಕಮಲ ಪಕ್ಷದಲ್ಲಿ ಕಮಲ ಒಂದು ಚಿಹ್ನೆಯಾಗಿ ಉಳಿದಿದೆಯೇ ಹೊರತು ಗುಣವಾಗಿ ಅಲ್ಲ. ಅದರ ವರ್ತನೆಯನ್ನು ಆಧಾರವಾಗಿಸಿ ಯಾರಾದರೂ ಚಿಹ್ನೆ ನಿರ್ಧರಿಸುವುದಾದರೆ ಅದಕ್ಕೆ ಕಮಲದ ಬದಲು ಊಸರವಳ್ಳಿಯನ್ನು ಚಿಹ್ನೆಯಾಗಿ ನೀಡುವ ಎಲ್ಲ ಸಾಧ್ಯತೆಯೂ ಇದೆ. ಇವತ್ತು ಕಮಲ ಪಕ್ಷ ಆಶ್ರಯಿಸಿಕೊಂಡಿರುವುದೇ ಆಧಾರ್ ಕಾರ್ಡ್ ಅನ್ನು. ಆಧಾರ್ ಕಾರ್ಡ್ ಇಲ್ಲದೇ ಇವತ್ತು ಯಾವುದೂ ನಡೆಯಲ್ಲ ಎಂಬ ಸ್ಥಿತಿ ಇದೆ. ವಿದೇಶಿ ನೇರ ಹೂಡಿಕೆಗೆ ಚಿಲ್ಲರೆ ಮಾರುಕಟ್ಟೆಯನ್ನು ಅದು ಮುಕ್ತವಾಗಿ ಇಟ್ಟಿದೆ. ಜಿಎಸ್‍ಟಿ ಇನ್ನೇನು ಜಾರಿಯಾಗುವ ಕೊನೆಯ ಹಂತದಲ್ಲಿದೆ. ಅಲ್ಲದೇ, 2014ರಲ್ಲಿ ಬಡವರ ವಿರೋಧಿಯಾಗಿದ್ದ ನೋಟು ರದ್ಧತಿಯು ಈಗ ‘ಬಡವ ಉದ್ಧಾರಕ’ ಆಗುತ್ತಿದೆ. ಇಲ್ಲಿ ಉಲ್ಲೇಖಿಸಬೇಕಾದ ಇನ್ನೊಂದು ಅಂಶವೆಂದರೆ, ಟಿಪ್ಪು ಸುಲ್ತಾನ್. ಕರ್ನಾಟಕ ಸರಕಾರ ಪ್ರಕಟಿಸಿರುವ ‘ಟಿಪ್ಪು ಸುಲ್ತಾನ್: ಎ ಕ್ರುಸೇಡರ್ ಫಾರ್ ಚೇಂಜ್’ ಎಂಬ
ಬಿ. ಶೇಖ್ ಅಲಿಯವರ ಸಂಶೋಧನಾತ್ಮಕ ಕೃತಿಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರ ಅನಿಸಿಕೆಗಳಿವೆ. ಆ ಅನಿಸಿಕೆಯಲ್ಲಿ ಅವರು ಟಿಪ್ಪುವನ್ನು ಮೈಸೂರು ಸಾಮ್ರಾಜ್ಯದ ಹುಲಿ ಎಂದಿದ್ದಾರೆ. ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಹೊಂದಿದ್ದ ಸುಧಾರಕ ಎಂದು ಕೊಂಡಾಡಿದ್ದಾರೆ. ಟಿಪ್ಪುವಿನ ರಾಷ್ಟ್ರ ಪರಿಕಲ್ಪನೆ, ಕೈಗಾರಿಕಾ ನೀತಿ ಮತ್ತು ಸೈನಿಕ ಕೌಶಲ್ಯಗಳನ್ನು ಹೊಗಳಿದ್ದಾರೆ. ಮಾತ್ರವಲ್ಲ, ಪಕ್ಷದ ನಾಯಕರಾಗಿರುವ ಯಡಿಯೂರಪ್ಪನವರು ಟಿಪ್ಪುವಿಗೆ ಸಂಬಂಧಿಸಿದ ಒಂದು ಕಾರ್ಯಕ್ರಮದಲ್ಲಿ ಟಿಪ್ಪು ಪೇಟವನ್ನು ಮುಡಿಗೇರಿಸಿಕೊಂಡು ಥೇಟ್ ಟಿಪ್ಪು ಸುಲ್ತಾನ್‍ನಂತೆ ಫೋಸ್ ಕೊಟ್ಟದ್ದೂ ಈ ಹಿಂದೆ ನಡೆದಿದೆ, ಅದು ಚಿತ್ರಸಹಿತ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಒಂದು ವೇಳೆ, ಕಮಲವು ಪಕ್ಷದ ಸೈದ್ಧಾಂತಿಕ ಮುಖದ ಅನ್ವರ್ಥ ರೂಪವೇ ಆಗಿರುತ್ತಿದ್ದರೆ, ಈ ಊಸರವಳ್ಳಿ ಗುಣಗಳೆಲ್ಲ ಆ ಪಕ್ಷಕ್ಕೆ ಸಿದ್ಧಿಸಿದ್ದು ಹೇಗೆ? ಹಾಗಂತ, ಈ ಪ್ರಶ್ನೆ ಕೇವಲ ಕಮಲ ಪಕ್ಷಕ್ಕೆ ಮಾತ್ರ ಮೀಸಲಿಡಬೇಕಾದ ಅಗತ್ಯವೇನೂ ಇಲ್ಲ. ಆದರೆ ಕಮಲ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಮತ್ತು ಈ ಹಿಂದಿನ ತನ್ನ ಎಲ್ಲ ನಿಲುವುಗಳಿಗೆ ತದ್ದಿರುದ್ಧವಾಗಿ ಇವತ್ತು  ವರ್ತಿಸುತ್ತಿರುವುದರಿಂದ ಪ್ರಶ್ನಿಸಲಾಗುತ್ತಿದೆ  ಅಷ್ಟೇ.
ಟಿಪ್ಪು ಆದ ಯಡಿಯೂರಪ್ಪ ಮತ್ತು ಶೆಟ್ಟರ್

        ನಿಜವಾಗಿ, ರಾಜಕೀಯ ಕ್ಷೇತ್ರಕ್ಕೆ ಮಾತ್ರವಲ್ಲ, ಬದುಕಿನ ಎಲ್ಲ ಕ್ಷೇತ್ರಕ್ಕೂ ಕಮಲ ಯೋಗ್ಯವಾದುದು. ಊಸರವಳ್ಳಿ ಅಯೋಗ್ಯವಾದುದು. ಒಂದು- ಪ್ರಾಮಾಣಿಕತೆಗೆ ಅನ್ವರ್ಥವಾದರೆ, ಇನ್ನೊಂದು- ಅಪ್ರಾಮಾಣಿಕತೆಗೆ ಅನ್ವರ್ಥ. ಆದ್ದರಿಂದಲೇ, ಯಾವ ಪಕ್ಷಕ್ಕೂ ಊಸರವಳ್ಳಿ ಬೇಡ. ಎಲ್ಲ ಪಕ್ಷಗಳೂ ಮೌಲ್ಯಗಳ ಬಗ್ಗೆ ಮಾತಾಡುತ್ತವೆ. ಪುಣ್ಯ ಪುರುಷರ ಮಹಾತ್ಮೆಗಳನ್ನು ಹಾಡುತ್ತವೆ. ಸಂತರು, ಋಷಿ ಗಳು, ಮಹಾತ್ಮರನ್ನು ಕ್ಷಣಕ್ಷಣಕ್ಕೂ ಸ್ಮರಿಸಿಕೊಳ್ಳುತ್ತವೆ. ಆದರೆ ವರ್ತನೆಯಲ್ಲಿ ಮಾತ್ರ ಪಕ್ಕಾ ಊಸರವಳ್ಳಿಯಾಗುತ್ತವೆ. ಈ ಸ್ವಭಾವದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವುದು ಕಮಲ ಪಕ್ಷ. ಟಿಪ್ಪುವನ್ನು ಇಂದ್ರ-ಚಂದ್ರ ಎಂದು ಹೊಗಳಿದವರೇ ಇವತ್ತು ಖಳ-ಮತಾಂಧ ಎಂದು ದೂರುತ್ತಿದ್ದಾರೆ. ಹಾಗಂತ, ಇವರು ಟಿಪ್ಪುವಿನಂತೆ ಪೇಟ ತೊಟ್ಟು ಟಿಪ್ಪುವೇ ಆದಾಗಲೂ ಟಿಪ್ಪು ಏನೂ ಜೀವಂತ ಇರಲಿಲ್ಲ. ಆಗ ಟಿಪ್ಪು ಏನಾಗಿದ್ದನೋ ಅದುವೇ ಈಗಲೂ ಆಗಿದ್ದಾನೆ. ಆದ್ದರಿಂದ ಆಗ ಆತ ವಿಝನರಿ ಆಗಿದ್ದರೆ ಈಗಲೂ ಅದುವೇ ಆಗಿರಬೇಕು. 2014ರಲ್ಲಿ ನೋಟು ರದ್ಧತಿ ಬಡವ ವಿರೋಧಿಯಾಗಿದ್ದರೆ ಈ 2016ರಲ್ಲೂ ಅದು ಬಡವ ವಿರೋಧಿಯಾಗುವುದಕ್ಕೇ ಹೆಚ್ಚು ಅರ್ಹ. ಆಧಾರ್ ಕಾರ್ಡ್ ಮತ್ತು ಎಫ್‍ಡಿಐಗಳು 2014ರಲ್ಲಿ ದೇಶಕ್ಕೆ ಕಂಟಕವೆಂದಾದರೆ 2016ರಲ್ಲಿ ಅದು ದೇಶಪ್ರೇಮಿಯಾಗುವುದಕ್ಕೆ ಸಾಧ್ಯವೇ ಇಲ್ಲ. ನಿಜವಾಗಿ, ಇದು ಕಮಲದ ಗುಣ. ಕಮಲ ಬಣ್ಣ ಬದಲಾಯಿಸುವುದಿಲ್ಲ. ನೋಡಿದ ತಕ್ಷಣ ಗುರುತು ಹಚ್ಚಬಹುದಾದಷ್ಟು ನಿಶ್ಚಿತ ರೂಪ ಅದಕ್ಕೆ ಇದೆ. ಆದರೆ ಅದನ್ನು ಚಿಹ್ನೆಯಾಗಿ ಒಪ್ಪಿಕೊಂಡ ಪಕ್ಷ ಉದ್ದಕ್ಕೂ ಊಸರವಳ್ಳಿಯ ಗುಣವನ್ನೇ ಪ್ರದರ್ಶಿಸುತ್ತಿದೆ. ಚಿಹ್ನೆ ಕಮಲದ್ದಾದರೂ ವರ್ತನೆ ಊಸರವಳ್ಳಿಯದ್ದು. ಟಿಪ್ಪುವಿನ ಪೇಟ ತೊಟ್ಟು ಸ್ವತಃ ಟಿಪ್ಪುವಿನಂತಾದ ಯಡಿಯೂರಪ್ಪ ಮತ್ತು ನೋಟು ರದ್ಧತಿ ಇದಕ್ಕೆ ಅತ್ಯುತ್ತಮ ಉದಾಹರಣೆ.

Friday 11 November 2016

.ತಲಾಕ್: ಮುಸ್ಲಿಂ ಸಮುದಾಯ ಹೆಣೆಯಬೇಕಾದ ಪ್ರತಿತಂತ್ರ

        ತಲಾಕ್ ಮತ್ತು ಸಮಾನ ನಾಗರಿಕ ಸಂಹಿತೆಯ ಕುರಿತಾಗಿ ಮುಸ್ಲಿಮ್ ಸಮುದಾಯದೊಳಗೆ ಹುಟ್ಟಿಕೊಂಡಿರುವ ಚರ್ಚೆಯನ್ನು ಎರಡು ರೀತಿಯಲ್ಲಿ ಕೊನೆಗೊಳಿಸಬಹುದು. ಒಂದು- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ಸಕಲ ಆರೋಪವನ್ನೂ ಹೊರಿಸಿ ಸುಮ್ಮನಾಗುವುದು. ಇನ್ನೊಂದು- ಈ ಎರಡೂ ವಿಷಯಗಳನ್ನು ನೆಪ ಮಾಡಿಕೊಂಡು ಮುಸ್ಲಿಮ್ ಸಮುದಾಯದ ಆಂತರಿಕ ಅಭಿವೃದ್ಧಿಗೆ ನೀಲನಕ್ಷೆಯನ್ನು ರೂಪಿಸುವುದು. ಇವತ್ತು, ತಲಾಕ್‍ನ ಸುತ್ತ ಟಿ.ವಿ.ಗಳಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ಉತ್ಪ್ರೇಕ್ಷೆ ಇರಬಹುದು. ಪತ್ರಿಕೆಗಳ ಬರಹಗಳಲ್ಲಿ ಸುದ್ದಿ ವೈಭವೀಕರಣ ನಡೆದಿರಬಹುದು. ಮುಸ್ಲಿಮ್ ಸಮುದಾಯದೊಳಗೆ ವಿಚ್ಛೇದಿತೆಯರೇ ತುಂಬಿಕೊಂಡಿರುವರೇನೋ ಎಂದು ನಂಬುವ ರೀತಿಯಲ್ಲಿ ಅವು ವರ್ತಿಸುತ್ತಿರಬಹುದು. ಇದು ಖಂಡಿತ ಖಂಡನಾರ್ಹ. ಹಾಗಂತ, ಮುಸ್ಲಿಮ್ ಸಮುದಾಯದೊಳಗೆ ತ್ರಿವಳಿ ತಲಾಕ್‍ನ ಅನುಪಾತ ಶೂನ್ಯಮಟ್ಟದಲ್ಲೇನೂ ಇಲ್ಲವಲ್ಲ ಅಥವಾ ಮುಸ್ಲಿಮ್ ಸಮುದಾಯದ ವಿಚ್ಛೇದಿತೆಯರನ್ನು ಇತರ ಸಮುದಾಯಗಳ ವಿಚ್ಛೇದಿತೆಯರಿಗೆ ಹೋಲಿಸಿ ಸಮರ್ಥಿಸಿಕೊಳ್ಳುವುದು ಇದಕ್ಕಿರುವ ಪರಿಹಾರವೂ ಅಲ್ಲವಲ್ಲ. ಮುಸ್ಲಿಮ್ ಸಮುದಾಯದ ಸದ್ಯದ ಸ್ಥಿತಿಗತಿಗಳು ಹೇಗಿವೆ? ಅವು ಉತ್ತಮವೇ, ಅತ್ಯುತ್ತಮವೇ, ಕೆಟ್ಟವೇ ಅಥವಾ ತೀರಾ ಗಂಭೀರವೇ? ಸಾಚಾರ್ ಮತ್ತು ರಂಗನಾಥ್ ಮಿಶ್ರಾ ಆಯೋಗಗಳು ಮುಸ್ಲಿಮ್ ಸಮುದಾಯದ ಮೇಲೆ ಅಧ್ಯಯನಗಳನ್ನು ನಡೆಸಿವೆ. ಮಾತ್ರವಲ್ಲ, ಈ ಸಮುದಾಯ ಅತೀ ಗಂಭೀರಾವಸ್ಥೆಯಲ್ಲಿ ಬದುಕುತ್ತಿದೆ ಎಂದೂ ಹೇಳಿವೆ. ಹಾಗಂತ ಈ ಗಂಭೀರಾವಸ್ಥೆಯಿಂದ ಸಮುದಾಯವನ್ನು ಹೊರತರುವುದಕ್ಕೆ ‘ಜಯಂತಿ’ಗಳಿಂದಂತೂ ಸಾಧ್ಯವಿಲ್ಲ.  ಏನಿದ್ದರೂ ಸರಕಾರದ ಮೇಲೆ ಪದೇಪದೇ ಆರೋಪಗಳನ್ನು ಹೊರಿಸುತ್ತಾ ಸಾಗುವುದರಿಂದ ಮುಸ್ಲಿಮ್ ಸಮುದಾಯದ ಅಭಿವೃದ್ಧಿ ಸಾಧ್ಯವೇ? ಆರೋಪಗಳ ಆಚೆಗೆ ಸಮುದಾಯ ಹೇಗೆಲ್ಲ ಸಕ್ರಿಯವಾಗಬಹುದು? ಅಭಿವೃದ್ಧಿಯನ್ನು ಗುರಿಯಾಗಿಸಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು?
         ಮುಸ್ಲಿಮ್ ಸಮುದಾಯದಲ್ಲಿ ಎರಡು ಬಹುಮುಖ್ಯ ನಿಧಿಗಳಿವೆ. ಒಂದು- ಮಸೀದಿಯಾದರೆ ಇನ್ನೊಂದು ಜನಸಂಪತ್ತು. ದುರಂತ ಏನೆಂದರೆ, ಇತರ ಸಮುದಾಯಗಳಿಗೆ ಹೋಲಿಸಿದರೆ ಅಮೂಲ್ಯವೆಂದೇ ಹೇಳಬಹುದಾದ ಈ ಎರಡು ನಿಧಿಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಸಮುದಾಯ ಪದೇ ಪದೇ ವಿಫಲವಾಗುತ್ತಿರುವುದು. ಇವತ್ತು ಮುಸ್ಲಿಮ್ ಸಮುದಾಯ ಮಸೀದಿಗಳ ಕೊರತೆಯಿಂದ ಬಳಲುತ್ತಿಲ್ಲ. ಆದರೆ ಈ ಮಸೀದಿಗಳ ಸದುಪಯೋಗದ ದೃಷ್ಟಿಯಿಂದ ಹೇಳುವುದಾದರೆ, ನಿಜಕ್ಕೂ ಬಳಲುತ್ತಿದೆ. ಮಸೀದಿ ಅಂದಮೇಲೆ ಅದಕ್ಕೊಂದು ಕಮಿಟಿ ಇರುತ್ತದೆ. ಅಧ್ಯಕ್ಷರಿರುತ್ತಾರೆ. ಕಾರ್ಯಕಾರಿ ಸದಸ್ಯರಿರುತ್ತಾರೆ. ಉಸ್ತಾದ್ (ಧರ್ಮಗುರು) ಇರುತ್ತಾರೆ. ಮಾತ್ರವಲ್ಲ, ಮಸೀದಿಯ ವ್ಯಾಪ್ತಿಗೆ ಒಳಪಟ್ಟು ಇಂತಿಷ್ಟು ಮನೆಗಳೂ ಇರುತ್ತವೆ. ಬಹುಶಃ, ಮುಸ್ಲಿಮ್ ಸಮುದಾಯದಲ್ಲಿ ಮಸೀದಿಗೆ ಒಳಪಡದ ಮತ್ತು ತಿಂಗಳು ತಿಂಗಳು ವಂತಿಗೆ ಕೊಡದ ಮನೆಗಳಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ಇಷ್ಟೊಂದು ವ್ಯವಸ್ಥಿತ ರೀತಿಯಲ್ಲಿ ಮಸೀದಿ ಕೇಂದ್ರಿತ ಚಟುವಟಿಕೆಗಳು ನಡೆಯುತ್ತಿರುವಾಗ, ಸಮುದಾಯದ ಅಭಿವೃದ್ಧಿಗಾಗಿ ನೀಲನಕ್ಷೆಯನ್ನು ರೂಪಿಸುವುದು ಅಸಾಧ್ಯ ಏನಲ್ಲ. ಒಂದು ಮಸೀದಿಯ ವ್ಯಾಪ್ತಿಯೊಳಗೆ ಎಷ್ಟು ಮನೆಗಳಿವೆ ಎಂಬುದು ಪ್ರತಿ ಮಸೀದಿಯ ವಂತಿಗೆ ಪಟ್ಟಿಯಲ್ಲಿ ದಾಖಲಾಗಿರುತ್ತದೆ. ಆದ್ದರಿಂದ, ಆ ಪಟ್ಟಿಯಲ್ಲಿ ದಾಖಲಾಗದ ಇತರ ಅಂಶಗಳ ಕಡೆಗೆ ಪ್ರತಿ ಮಸೀದಿಯೂ ಗಂಭೀರವಾಗಿ ಗಮನ ಹರಿಸುವ ಮನಸು ಮಾಡಿದರೆ ಸಮುದಾಯದ ಅಭಿವೃದ್ಧಿಯು ಸರಕಾರಗಳು ಅಚ್ಚರಿಪಡುವಷ್ಟು ವೇಗದಲ್ಲಿ ನಡೆದು ಬಿಡುವುದಕ್ಕೆ ಅವಕಾಶವಿದೆ. ಇದಕ್ಕೆ ಮಸೀದಿ ಕಮಿಟಿಗಳು ಮಾಡಬೇಕಾದ ಪುಟ್ಟ ಕೆಲಸವೇನೆಂದರೆ, ತುರ್ತಾಗಿ ಒಂದು ಸಭೆ ಕರೆಯುವುದು. ಸಮುದಾಯದ ಅಭಿವೃದ್ಧಿಯೇ ಸಭೆಯ ಮುಖ್ಯ ಅಜೆಂಡಾ ಆಗುವುದು ಮತ್ತು ಮಸೀದಿ ವ್ಯಾಪ್ತಿಯೊಳಗಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸುವುದು. ಸಮುದಾಯದ ಅಭಿವೃದ್ಧಿ ಎಂಬ ಏಕ ಅಜೆಂಡಾಕ್ಕಾಗಿ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬದಿಗಿಟ್ಟು ಮುಂದುವರಿಯಲು ತೀರ್ಮಾನಿಸುವುದು. ಇಷ್ಟಾದರೆ, ತಲಾಕನ್ನು ‘ಚರ್ಚಾಸ್ಪದ’ವನ್ನಾಗಿ ಮಾಡಿದವರಿಗೆ ಪ್ರಾಯೋಗಿಕವಾಗಿ ಉತ್ತರ ಕೊಡುವ ಚಟುವಟಿಕೆ ಪ್ರಾರಂಭವಾಯಿತೆಂದೇ ಹೇಳಬಹುದು. ಒಂದು ಮನೆಯಿಂದ ವಂತಿಗೆಯನ್ನು ವಸೂಲು ಮಾಡುವುದೆಂದರೆ, ಆ ಮನೆಗೂ ಮಸೀದಿಗೂ ಸಂಬಂಧ ಇದೆ ಎಂದರ್ಥ. ಆದರೆ ಈ ಸಂಬಂಧ ತೀರಾ ತೆಳುವಾದುದು. ಮಸೀದಿಯೊಂದು ವಂತಿಗೆಯ ರೂಪದಲ್ಲಿ ಹಣವನ್ನು ಪಡಕೊಳ್ಳುತ್ತದೆಯೇ ಹೊರತು, ನಿಷ್ಠೆಯಿಂದ ವಂತಿಗೆ ಪಾವತಿಸುವ ಆ ವ್ಯಕ್ತಿಯ ಕ್ಷೇಮಕ್ಕಾಗಿ ಏನನ್ನೂ ಮರಳಿ ನೀಡುವುದಿಲ್ಲ. ಒಂದು ರೀತಿಯಲ್ಲಿ, ಇದು ಏಕಮುಖ ಸೇವೆ. ಮಸೀದಿ ಮೇಲಿನ ಗೌರವದಿಂದಾಗಿ ಈ ಸೇವೆ ಇವತ್ತಿನ ವರೆಗೂ ಯಾವ ಅಡ್ಡಿಯೂ ಇಲ್ಲದೇ ಮುಂದುವರಿಯುತ್ತಾ ಬಂದಿದೆ. ಸದ್ಯ ಮಸೀದಿಗಳು ಮಾಡಬೇಕಾದ ಕೆಲಸ ಏನೆಂದರೆ, ಈ ಏಕಮುಖ ಸೇವೆಯನ್ನು ದ್ವಿಮುಖಗೊಳಿಸುವುದು. ಮಸೀದಿಗಾಗಿ ವಂತಿಗೆ ಕೊಡುವ (ಕೊಡಲು ಅಶಕ್ತರಾದವರನ್ನೂ ಕೊಟ್ಟವರ ಪಟ್ಟಿಯಲ್ಲೇ ಸೇರಿಸಬೇಕು) ವ್ಯಕ್ತಿಯ ಕ್ಷೇಮಕ್ಕಾಗಿ ಯೋಜನೆಯನ್ನು ರೂಪಿಸುವುದು. ಒಂದು ಮಸೀದಿಯ ವ್ಯಾಪ್ತಿಗೆ ಒಳಪಟ್ಟ ಮನೆಗಳ ಸಂಪೂರ್ಣ ಸರ್ವೇ ನಡೆಸುವುದು. ಒಂದು ಮನೆಯಲ್ಲಿ ವಾಸಿಸುವವರ ಸಂಖ್ಯೆ, ಮನೆಯ ಸ್ವರೂಪ, ಗಂಡು-ಹೆಣ್ಣು, ವಿದ್ಯಾರ್ಹತೆ, ದುಡಿಯುವವರು, ನಿರುದ್ಯೋಗಿಗಳು, ವಿವಾಹಿತರು, ಅವಿವಾಹಿತರು, ವಿಕಲ ಚೇತನರು, ರೋಗಿಗಳು, ಶಿಕ್ಷಣ ಪಡೆಯುತ್ತಿರುವವರು.. ಮುಂತಾದುವುಗಳ ಸಮಗ್ರ ವಿವರ ಸಂಗ್ರಹಿಸುವುದು. ಪಡಿತರ ಚೀಟಿ, ಮತದಾನ ಚೀಟಿ, ಆಧಾರ್ ಕಾರ್ಡ್, ಆರೋಗ್ಯ ಕಾರ್ಡ್, ಶೌಚಾಲಯ, ಮನೆಯ ಒಟ್ಟು ವರಮಾನ, ವಿಧವೆಯರಿದ್ದರೆ, ಅನಾಥರು, ವಿಚ್ಛೇದಿತೆಯರಿದ್ದರೆ.. ಎಲ್ಲವನ್ನೂ ದಾಖಲಿಸಿಕೊಳ್ಳುವುದು. ನಿಜವಾಗಿ, ಒಂದು ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ಇಂಥದ್ದೊಂದು ಸರ್ವೆ ಇವತ್ತಿನ ದಿನಗಳಲ್ಲಿ ಬಹಳ ಅಗತ್ಯ. ಈ ಸರ್ವೇಯಿಂದ ಆಗಬಹುದಾದ ಬಹಳ ದೊಡ್ಡ ಪ್ರಯೋಜನ ಏನೆಂದರೆ, ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವುದಕ್ಕೆ ಸುಲಭವಾಗುತ್ತದೆ. ಸರಕಾರದ ಸಾಕಷ್ಟು ಫಂಡ್‍ಗಳು ಅರ್ಹ ಫಲಾನುಭವಿಗಳ ಕೊರತೆಯನ್ನು ನೆಪ ಮಾಡಿಕೊಂಡು ಹಿಂದಕ್ಕೆ ಹೋಗುವುದಿದೆ. ಅವನ್ನು ಸದುಪಯೋಗಪಡಿಸುವುದಕ್ಕೂ ಈ ಸರ್ವೆ ನೆರವಾಗಬಹುದು. ಸರಕಾರಿ ಸೌಲಭ್ಯವನ್ನು ತನ್ನ ಮಸೀದಿ ವ್ಯಾಪ್ತಿಯ ಮನೆಗಳಿಗೆ ತಲುಪಿಸುವುದಕ್ಕಾಗಿ ಪ್ರತಿ ಮಸೀದಿಯೂ ಅರೆಕಾಲಿಕವೋ ಪೂರ್ಣಕಾಲಿಕವೋ ಆದ ನೌಕರರನ್ನು ನೇಮಿಸಿಕೊಳ್ಳುವುದು ಇನ್ನೂ ಉತ್ತಮ ಅಥವಾ ಮಸೀದಿಯ ಉಸ್ತಾದರು ಸ್ವಯಂ ಪ್ರೇರಿತರಾಗಿ ಈ ಕೆಲಸವನ್ನು ವಹಿಸಿಕೊಂಡರೂ ಆಗಬಹುದು. ಮಸೀದಿ ಉಸ್ತಾದರು ಸರಕಾರಿ ಸೌಲಭ್ಯವನ್ನು ತನ್ನ ಜನರಿಗೆ ತಲುಪಿಸುವುದಕ್ಕಾಗಿ ಸರಕಾರಿ ಅಧಿಕಾರಿಯನ್ನೋ ಶಾಸಕರನ್ನೋ ಭೇಟಿಯಾಗುವುದೆಂದರೆ ಅಲ್ಲೊಂದು ಗೌರವದ ವಾತಾವರಣವಿರುತ್ತದೆ. ತಕ್ಷಣಕ್ಕೆ ಅದು ಮಂಜೂರಾಗುವುದಕ್ಕೂ ಅವಕಾಶವಿರುತ್ತದೆ. ಹಾಗೆಯೇ ಪ್ರತಿ ಮಸೀದಿಗೆ ಒಳಪಟ್ಟವರಲ್ಲಿ ವಿದೇಶಿ ಉದ್ಯೋಗಿಗಳಿರಬಹುದು. ಅವರನ್ನು ಈ ಅಭಿವೃದ್ಧಿ ಅಜೆಂಡಾದಲ್ಲಿ ಭಾಗಿಯಾಗಿಸುವುದಕ್ಕೆ ಮಸೀದಿ ಉಸ್ತಾದರಿಗೆ ಸಾಧ್ಯವಿದೆ. ಅಲ್ಲದೇ, ಮುಸ್ಲಿಮ್ ಸಮುದಾಯದಲ್ಲೇ ವಿಶೇಷವಾದ ಝಕಾತ್ ವ್ಯವಸ್ಥೆಯಿದೆ. ಜೊತೆಗೇ ಅನೇಕಾರು ಎನ್‍ಜಿಓಗಳಿವೆ. ದಾನಿಗಳಿದ್ದಾರೆ. ಅವರೆಲ್ಲರಿಂದಲೂ ಸಮುದಾಯದ ಏಳಿಗೆಗಾಗಿ ದೇಣಿಗೆಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ, ಪ್ರತಿ ಮಸೀದಿಗೆ ತನ್ನ ವ್ಯಾಪ್ತಿಯೊಳಗಿನ ಮನೆಗಳ ಸಮಗ್ರ ಸರ್ವೇ ನಡೆಸುವುದಲ್ಲದೆ ಅದನ್ನು ದಾಖಲಿಸಿಕೊಂಡು ಅಭಿವೃದ್ಧಿಗೆ ಪೂರಕವಾದ ನೀಲನಕ್ಷೆಯನ್ನು ರೂಪಿಸಿದರೆ ಅಭೂತಪೂರ್ವವೆನ್ನಬಹುದಾದ ಬದಲಾವಣೆ ಖಂಡಿತ ಸಾಧ್ಯವಾಗಬಹುದು. ಮಾತ್ರವಲ್ಲ, ತಲಾಕ್, ಸಮಾನ ನಾಗರಿಕ ಸಂಹಿತೆ, ಬಹುಪತ್ನಿತ್ವ, ಭಯೋತ್ಪಾದನೆ.. ಮುಂತಾದುವುಗಳನ್ನೇ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡವರು ತಮ್ಮ ಅಜೆಂಡಾವನ್ನೇ ಬದಲಿಸಿಕೊಳ್ಳುವಂತೆ ಮಾಡುವುದಕ್ಕೂ ಇದು ಕಾರಣವಾಗಬಹುದು

Saturday 5 November 2016

ಟಿಪ್ಪು ಜಯಂತಿ ಯಾರ ಅಗತ್ಯ?

ರೇಷ್ಮೆ
      ಟಿಪ್ಪು ಸುಲ್ತಾನ್ ಏನು ಮತ್ತು ಏನಲ್ಲ ಎಂಬ ಬಗ್ಗೆ ಹುಟ್ಟಿಕೊಂಡಿರುವ ಚರ್ಚೆ ಬಿರುಸನ್ನು ಪಡಕೊಳ್ಳತೊಡಗಿದೆ. ಟಿಪ್ಪು ಪರ ಮತ್ತು ವಿರುದ್ಧ ಮಾಹಿತಿಗಳ ವಿನಿಮಯ ಆಗುತ್ತಿದೆ. ಟಿ.ವಿ. ಚಾನೆಲ್‍ಗಳಲ್ಲಿ ಕಂಠಶೋಷಣೆ ಪ್ರಾರಂಭವಾಗಿದೆ. ಟಿಪ್ಪುವಿನ ಹೆಸರಲ್ಲಿ ನಡೆಯುತ್ತಿರುವ ಭಾಷಣ, ಪ್ರತಿಭಟನೆಗಳು ಸಹಜ ಶಬ್ದಮಾಲಿನ್ಯಕ್ಕೆ ಹೆಚ್ಚುವರಿ ಕೊಡುಗೆಗಳನ್ನೂ ನೀಡತೊಡಗಿದೆ. ಇವೆಲ್ಲದ ನಡುವೆ ನಿಜ ಟಿಪ್ಪು ಕಳೆದು ಹೋಗುತ್ತಿರುವನೇನೋ ಅನ್ನುವ ಆತಂಕವೂ ಕಾಡುತ್ತಿದೆ. ನಿಜಕ್ಕೂ ಟಿಪ್ಪು ಯಾರ ಪ್ರತಿನಿಧಿ? ವೈಯಕ್ತಿಕವಾಗಿ ಆತ ಯಾವ ಧರ್ಮವನ್ನೇ ಅನುಸರಿಸಲಿ, ಓರ್ವ ರಾಜನಾಗಿ ಆತನ ಕಾರ್ಯ ನಿರ್ವಹಣೆ ಹೇಗಿತ್ತು? ಆತನ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನದಲ್ಲಿದ್ದವರೆಲ್ಲ ಯಾರು? ಅವರು ಯಾವ ಧರ್ಮದ ಪ್ರತಿನಿಧಿಗಳು? ಟಿಪ್ಪು ಭಯಂಕರ ಮತಾಂಧನೇ ಆಗಿರುತ್ತಿದ್ದರೆ ಆತನ ಆಸ್ಥಾನದಲ್ಲಿ ದಿವಾನ್ ಕೃಷ್ಣರಾವ್ ವಿತ್ತಮಂತ್ರಿಯಾಗಿ, ಪೂರ್ಣಯ್ಯ ಕಂದಾಯ ಮಂತ್ರಿಯಾಗಿ, ಶಿವಾಜಿ ಮತ್ತು ರಾಮರಾವ್‍ರು ಅಶ್ವದಳದ ದಂಡನಾಯಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಿತ್ತೇ? ಲಾಲಾ ಮುಹ್ತಾಬ್ ರಾಯ್, ಹರಿಸಿಂಗ್, ನರಸಿಂಹ ರಾವ್, ಶ್ರೀನಿವಾಸ್ ರಾವ್, ಶ್ರೀಪತಿ ರಾವ್ ಮುಂತಾದವರು ಇಸ್ಲಾಮ್‍ಗೆ ಮತಾಂತರವಾಗದೆಯೇ ಮತ್ತು ಹಿಂದೂಗಳಾಗಿದ್ದುಕೊಂಡೇ ಟಿಪ್ಪುವಿನ ಮಂತ್ರಿಮಂಡಲದಲ್ಲಿ ಉನ್ನತ ಸ್ಥಾನವನ್ನು ಪಡೆದರಲ್ಲ, ಹೇಗೆ? 1791ರಲ್ಲಿ ರಘುನಾಥ ರಾವ್ ನೇತೃತ್ವದ ಮರಾಠಾ ದಾಳಿಕೋರರು ಶೃಂಗೇರಿಯ ಶಾರದಾ ಮಂದಿರಕ್ಕೆ ಹಾನಿ ಮಾಡಿ, ಸ್ವರ್ಣ ಪಲ್ಲಕ್ಕಿಯನ್ನು ಹೊತ್ತೊಯ್ದಾಗ ಮತ್ತು ಶಾರದಾ ಮೂರ್ತಿಯನ್ನು ಗರ್ಭ ಗುಡಿಯಿಂದೆತ್ತಿ ಹೊಸಕ್ಕೆಸೆದಾಗ, ಅದನ್ನು ಮರುಸ್ಥಾಪಿಸಿದ್ದು ಟಿಪ್ಪು. ಮರಾಠರ ದಾಳಿಯ ಸಂದರ್ಭದಲ್ಲಿ ಮಂದಿರದಿಂದ ತಪ್ಪಿಸಿಕೊಂಡು ಕಾರ್ಕಳದಲ್ಲಿ ಆಶ್ರಯ ಪಡೆದಿದ್ದ ಶಂಕರಾಚಾರ್ಯರನ್ನು ಮರಳಿ ಕರೆತಂದದ್ದು ಟಿಪ್ಪು. ಭವಿಷ್ಯದ ಸಂಭಾವ್ಯ ದಾಳಿಯಿಂದ ಮಂದಿರವನ್ನು ರಕ್ಷಿಸುವುದಕ್ಕಾಗಿ ಸೇನೆಯ ಒಂದು ತುಕಡಿಯನ್ನು ಕಾವಲಿಗೆ ನೇಮಿಸಿದ್ದೂ ಟಿಪ್ಪುವೇ. ನಂಜನಗೂಡು ತಾಲೂಕಿನ ಶ್ರೀಲಕ್ಷ್ಮೀಕಾಂತ್ ಮಂದಿರ ಮತ್ತು ಶ್ರೀ ಕಣ್ವೇಶ್ವರ ಮಂದಿರ, ಮೇಲುಕೋಟೆಯ ಶ್ರೀ ನಾರಾಯಣ ಸ್ವಾಮಿ ಮಂದಿರ, ಶ್ರೀರಂಗಪಟ್ಟಣದ ಶ್ರೀ ರಂಗನಾಥ ಮಂದಿರಕ್ಕೂ ಆತ ಸಂದರ್ಭಾನುಸಾರ ನೆರವನ್ನು ನೀಡಿದ್ದಾನೆ. ಕೇರಳದ ಕಲ್ಲಿಕೋಟೆಯ ವೆಂಕಟೇಶ್ವರ ಮಂದಿರಕ್ಕೆ 195 ಹೆಕ್ಟೇರ್ ಜಮೀನು ಕೊಟ್ಟಿದ್ದು ಟಿಪ್ಪುವೇ. ಪೊನ್ನಾಣಿಯ ಗುರುವಾಯೂರ್ ಮಂದಿರಕ್ಕೆ 135 ಹೆಕ್ಟೇರ್ ಜಮೀನು ಮಂಜೂರು ಮಾಡಿರುವುದೂ ಆತನೇ. ಒಂದು ವೇಳೆ ಆತ ದೇಗುಲ ಭಂಜಕನೇ ಆಗಿರುತ್ತಿದ್ದರೆ ಶ್ರೀರಂಗಪಟ್ಟಣದಲ್ಲಿ ಶ್ರೀರಂಗನಾಥ ದೇಗುಲ ಇರುತ್ತಿತ್ತೇ? ಆತನ ಅರಮನೆಯ ಕೂಗಳತೆಯ ದೂರದಲ್ಲಿರುವ ನರಸಿಂಹ ಮತ್ತು ಗಂಗಾಧರ ಮಂದಿರಗಳು ಜೀವಂತ ಇರುವುದಕ್ಕೆ ಸಾಧ್ಯವಿತ್ತೇ?
      ಅಂದಹಾಗೆ, ಟಿಪ್ಪು ಸುಲ್ತಾನ್ ರಾಜ ಮಾತ್ರ ಅಲ್ಲ, ಮನುಷ್ಯ ಕೂಡ. ಆದ್ದರಿಂದ ಓರ್ವ ಮನುಷ್ಯನಲ್ಲಿರಬಹುದಾದ ಸಹಜ ದೌರ್ಬಲ್ಯಗಳಿಂದ ಹೊರತುಪಡಿಸಿ ಆತನನ್ನು ನೋಡಬೇಕಾದ ಯಾವ ಅಗತ್ಯವೂ ಇಲ್ಲ. ರಾಜನೆಂಬ ನೆಲೆಯಲ್ಲಿ ಆತ ಹಿಂದೂಗಳ ವಿರುದ್ಧವೂ ಕ್ರಮ ಕೈಗೊಂಡಿರಬಹುದು. ಕ್ರೈಸ್ತರ ವಿರುದ್ಧವೂ ಕ್ರಮ ಜರುಗಿಸಿರಬಹುದು. ಮುಸ್ಲಿಮರ ಮೊಹರಂ ಮೆರವಣಿಗೆ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನೂ ಟಿಪ್ಪು ನಿಷೇಧಿಸಿದ್ದ. ಹಾಗಂತ ಆತನನ್ನು ಮುಸ್ಲಿಮ್ ವಿರೋಧಿ ಎಂದು ಕರೆಯಬಹುದೇ? ಆಡಳಿತದ ಭಾಗವಾಗಿ ಆತ ಕೈಗೊಂಡಿರಬಹುದಾದ ಕ್ರಮಗಳನ್ನು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂದು ವಿಭಜಿಸಿ ವಿಶ್ಲೇಷಿಸುವುದು ಎಷ್ಟರ ಮಟ್ಟಿಗೆ ಸಮರ್ಥನೀಯ? ಅಷ್ಟಕ್ಕೂ, ಈ ಬಗೆಯ ಸೀಳು ವಿಶ್ಲೇಷಣೆಗಳು ಕೇವಲ ಟಿಪ್ಪುವಿಗೆ ಯಾಕೆ ಸೀಮಿತವಾಗಬೇಕು? ಶಿವಾಜಿ ಮತ್ತು ಒಡೆಯರ್‍ಗಳ ಸಹಿತ ಎಲ್ಲ ರಾಜರುಗಳನ್ನೂ ಈ ಬಗೆಯ ವಿಶ್ಲೇಷಣೆಗೆ ಒಳಪಡಿಸಬಹುದಲ್ಲವೇ? ಅದರ ಆಧಾರದಲ್ಲಿ ಅವರನ್ನು ಮತಾಂಧರು, ಮುಸ್ಲಿಮ್, ಹಿಂದೂ, ಕ್ರೈಸ್ತ ವಿರೋಧಿಗಳೆಂದು ಪಟ್ಟ ಕಟ್ಟಬಹುದಲ್ಲವೇ? ನಿಜವಾಗಿ, ಟಿಪ್ಪುವನ್ನು ಮತಾಂಧನೆಂದು ಬಿಂಬಿಸ ಬಯಸುವವರಿಗೆ ಆತನ ಒಂದೇ ಒಂದು ಉತ್ತಮ ಅಂಶವೂ ಕಾಣಿಸುತ್ತಿಲ್ಲ. ಕನ್ನಂಬಾಡಿ ಅಣೆಕಟ್ಟಿಗೆ ನೀಲನಕ್ಷೆಯನ್ನು ರೂಪಿಸಿದ್ದು, ನಾಡಿಗೆ ರೇಷ್ಮೆ ಬೆಳೆಯನ್ನು ಪರಿಚಯಿಸಿ ತಳ ಸಮುದಾಯದ ಮಂದಿಗೆ ಉದ್ಯೋಗ ಗಿಟ್ಟುವಂತೆ ಮಾಡಿದ್ದು, ಬೆಂಗಳೂರಿನಲ್ಲಿ ಲಾಲ್‍ಬಾಗ್ ಸ್ಥಾಪಿಸಿದ್ದು, ಜಮೀನ್ದಾರಿ ಪದ್ಧತಿಯ ನಿರ್ನಾಮಕ್ಕೆ ಕ್ರಮ ಕೈಗೊಂಡಿದ್ದು, ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕೃಷಿ ನೀತಿಯನ್ನು ಜಾರಿಗೆ ತಂದು ದಲಿತರನ್ನು ಸಬಲರಾಗಿಸಿದ್ದು, ನೀರಾವರಿಗಾಗಿ ಅನೇಕ ಕೆರೆ-ಕಟ್ಟೆಗಳನ್ನು ನಿರ್ಮಿಸಿದ್ದು, ಸಂಪೂರ್ಣ ಪಾನನಿಷೇಧವನ್ನು ಜಾರಿಗೆ ತಂದಿದ್ದು.. ಇವು ಯಾವುದನ್ನೂ ಅವರು ತಪ್ಪಿಯೂ ಉಲ್ಲೇಖಿಸುತ್ತಿಲ್ಲ. ಭಾರತೀಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿ ದಲಿತರಿಗೆ ಕೃಷಿ ಭೂಮಿಯ ಒಡೆತನ ದಕ್ಕಿಸಿ ಕೊಟ್ಟದ್ದು ಟಿಪ್ಪು. ಇವತ್ತಿಗೂ ಉನಾ ಚಳವಳಿ, ಚಲೋ ಉಡುಪಿ ಚಳವಳಿಯ ಬೇಡಿಕೆಗಳಲ್ಲಿ ಇದೂ ಒಂದು. ದಲಿತ ಮಹಿಳೆಯರಿಗೆ ಸೊಂಟದಿಂದ ಮೇಲೆ ಉಡುಪು ಧರಿಸದಂತೆ ಕೊಡಗಿನಲ್ಲಿ ಮೇಲ್ಜಾತಿಯ ಮಂದಿ ವಿಧಿಸಿದ್ದ ನಿಷೇಧವನ್ನು ರದ್ದುಗೊಳಿಸಿದ್ದು ಟಿಪ್ಪು. ಅಂದಿನ ದಮನಿತ ಸಮುದಾಯದ ಮಟ್ಟಿಗೆ ಅದು ಅತಿದೊಡ್ಡ ವಿಮೋಚನೆಯಾಗಿತ್ತು. ಮಾನ ಮುಚ್ಚುವುದು ಮನುಷ್ಯನ ಪ್ರಕೃತಿ ಸಹಜ ಬಯಕೆ. ಕೊಡಗಿನಲ್ಲಿ ಆ ಮೂಲ ಸ್ವಾತಂತ್ರ್ಯವನ್ನೇ ದಲಿತರ ಪಾಲಿಗೆ ನಿಷೇಧಿಸಲಾಗಿತ್ತು. ಟಿಪ್ಪುವಿನ ಮೇಲೆ ಮತಾಂತರದ ಆರೋಪ ಹೊರಿಸುವವರು ಆ ಮತಾಂತರಕ್ಕೆ ಸಾಮಾನ್ಯವಾಗಿ ಕೊಡಗನ್ನು ಪುರಾವೆಯಾಗಿ ತೋರಿಸುವುದಿದೆ. ಆದರೆ, ಅಲ್ಲಿ ಆಚರಣೆಯಲ್ಲಿದ್ದ ಕಟು ಜಾತಿ ವ್ಯವಸ್ಥೆ ಮತ್ತು ತಳ ಸಮುದಾಯದ ಮೇಲಿನ ಶೋಷಣೆಯನ್ನು ಅವರು ಉಲ್ಲೇಖಿಸುವುದೇ ಇಲ್ಲ. ಮಾತ್ರವಲ್ಲ, ಈ ಶೋಷಣೆಗಳಿಂದ ವಿಮೋಚನೆಗೊಳಿಸಿದ ಟಿಪ್ಪುವಿನ ಮೇಲೆ ಆ ಮಂದಿ ಆಕರ್ಷಿತರಾಗಿರಬಹುದೆಂಬ ಸಾಧ್ಯತೆಯ ಕಡೆಗೂ ಅವರು ಗಮನ ಹರಿಸುವುದಿಲ್ಲ. 1782ರ ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ದಕ್ಷಿಣ ಕನ್ನಡದ ಮಂಗಳೂರಿನ ಕ್ರೈಸ್ತರು ಗುಪ್ತವಾಗಿ ಬ್ರಿಟಿಷರಿಗೆ ನೆರವಾಗಿದ್ದರು, ಕರ್ನಲ್ ಮ್ಯಾಥ್ಯೂಸ್ ಮತ್ತು ಕ್ಯಾಂಬೆಲ್‍ಗೆ ಸಹಕರಿಸಿದ್ದರು ಎಂಬ ಶಂಕೆಯಲ್ಲಿ ಕ್ರೈಸ್ತರ ಮೇಲೆ ಆತ ಶಿಸ್ತಿನ ಕ್ರಮ ಕೈಗೊಂಡದ್ದೂ ಇದೆ. ಒಂದು ರೀತಿಯಲ್ಲಿ, ಓರ್ವ ರಾಜನಾಗಿ ಟಿಪ್ಪು ಆ ಕಾಲದಲ್ಲಿ ಏನನ್ನು ಮಾಡಬಹುದೋ ಅದನ್ನು ಮಾಡಿದ್ದಾನೆ. ಅದರಲ್ಲಿ ಸಾಮ್ರಾಜ್ಯ ವಿಸ್ತರಣೆಯ ಉದ್ದೇಶವೂ ಇರಬಹುದು. ಅಧಿಕಾರ ಉಳಿಸುವ ಗುರಿಯೂ ಇರಬಹುದು. ಒಂದು ವೇಳೆ ಮತಾಂತರವೇ ಆತನ ನಿಜ ಉದ್ದೇಶ ಆಗಿರುತ್ತಿದ್ದರೆ, ಆತನ ರಾಜಧಾನಿ ಶ್ರೀರಂಗಪಟ್ಟಣ ಮತ್ತು ಮೈಸೂರುಗಳಲ್ಲಿ ಇವತ್ತು ಮುಸ್ಲಿಮರೇ ತುಂಬಿರಬೇಕಿತ್ತಲ್ಲವೇ? ಇಲ್ಲೆಲ್ಲ ಈಗ ಇರುವ ದೇವಸ್ಥಾನಗಳಿಂದ ಅದಾನ್‍ನ ಕರೆಯೇ ಮೊಳಗುತ್ತಿರಬೇಕಿತ್ತಲ್ಲವೇ?
      ದುರಂತ ಏನೆಂದರೆ, ನಿಜ ಟಿಪ್ಪುವನ್ನು ಓದುವ ಮತ್ತು ಅದನ್ನು ಹೇಳುವ ಸಹನೆ ಇವತ್ತು ಯಾರಲ್ಲೂ ಕಾಣಿಸುತ್ತಿಲ್ಲ. ಟಿಪ್ಪು ಬೆಂಬಲಿಗರಲ್ಲೂ ವಿರೋಧಿಗಳಲ್ಲೂ ಅನಗತ್ಯ ವೈಭವೀಕರಣದ ಮಾತುಗಳಷ್ಟೇ ಕೇಳಿಬರುತ್ತಿವೆ. ನಿಜವಾದ ಟಿಪ್ಪು ಖಂಡಿತ ಇದರಾಚೆಗೆ ಇದ್ದಾನೆ. ಆ ಟಿಪ್ಪುವನ್ನು ಬಣ್ಣದ ಕನ್ನಡಕವನ್ನು ಬಳಸೆದೆಯೇ ಅಧ್ಯಯನ ನಡೆಸುವ ಅಗತ್ಯ ಇದೆ. ಟಿಪ್ಪು ನಿರ್ದಿಷ್ಟ ಧರ್ಮಕ್ಕೆ ಸೇರಿದ ರಾಜನಲ್ಲ. ಆತ ಒಂದು ಸಾಮ್ರಾಜ್ಯದ ಎಲ್ಲರ ರಾಜ. ಆತನ ಸರಿ ಮತ್ತು ತಪ್ಪುಗಳನ್ನು ಓರ್ವ ರಾಜನೆಂಬ ನೆಲೆಯಲ್ಲಿ ಸಹಜವಾಗಿ ಸ್ವೀಕರಿಸುತ್ತಲೇ ಜಯಂತಿ ಆಚರಣೆಯ ಔಚಿತ್ಯ ಚರ್ಚೆಗೊಳಗಾಗಬೇಕಾಗಿದೆ. ಜಯಂತಿ ಆಚರಣೆಯಿಂದ ಮುಸ್ಲಿಮ್ ಸಮುದಾಯಕ್ಕೆ ಆಗುವ ಪ್ರಯೋಜನಗಳೇನು ಎಂಬ ಅವಲೋಕನವೂ ನಡೆಯಬೇಕಾಗಿದೆ. ಇದರೊಳಗಿನ ರಾಜಕೀಯವನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಟಿಪ್ಪು ಒಂದು ದಿನದ ‘ಮಹಾನ್' ಆಗುವುದು ಅಥವಾ ಮತಾಂಧ ಆಗುವುದು ಜನರ ಅಗತ್ಯವೋ ರಾಜಕೀಯದ ಅಗತ್ಯವೋ ಎಂಬುದನ್ನು ಜನರು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ.