Friday 11 November 2016

.ತಲಾಕ್: ಮುಸ್ಲಿಂ ಸಮುದಾಯ ಹೆಣೆಯಬೇಕಾದ ಪ್ರತಿತಂತ್ರ

        ತಲಾಕ್ ಮತ್ತು ಸಮಾನ ನಾಗರಿಕ ಸಂಹಿತೆಯ ಕುರಿತಾಗಿ ಮುಸ್ಲಿಮ್ ಸಮುದಾಯದೊಳಗೆ ಹುಟ್ಟಿಕೊಂಡಿರುವ ಚರ್ಚೆಯನ್ನು ಎರಡು ರೀತಿಯಲ್ಲಿ ಕೊನೆಗೊಳಿಸಬಹುದು. ಒಂದು- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ಸಕಲ ಆರೋಪವನ್ನೂ ಹೊರಿಸಿ ಸುಮ್ಮನಾಗುವುದು. ಇನ್ನೊಂದು- ಈ ಎರಡೂ ವಿಷಯಗಳನ್ನು ನೆಪ ಮಾಡಿಕೊಂಡು ಮುಸ್ಲಿಮ್ ಸಮುದಾಯದ ಆಂತರಿಕ ಅಭಿವೃದ್ಧಿಗೆ ನೀಲನಕ್ಷೆಯನ್ನು ರೂಪಿಸುವುದು. ಇವತ್ತು, ತಲಾಕ್‍ನ ಸುತ್ತ ಟಿ.ವಿ.ಗಳಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ಉತ್ಪ್ರೇಕ್ಷೆ ಇರಬಹುದು. ಪತ್ರಿಕೆಗಳ ಬರಹಗಳಲ್ಲಿ ಸುದ್ದಿ ವೈಭವೀಕರಣ ನಡೆದಿರಬಹುದು. ಮುಸ್ಲಿಮ್ ಸಮುದಾಯದೊಳಗೆ ವಿಚ್ಛೇದಿತೆಯರೇ ತುಂಬಿಕೊಂಡಿರುವರೇನೋ ಎಂದು ನಂಬುವ ರೀತಿಯಲ್ಲಿ ಅವು ವರ್ತಿಸುತ್ತಿರಬಹುದು. ಇದು ಖಂಡಿತ ಖಂಡನಾರ್ಹ. ಹಾಗಂತ, ಮುಸ್ಲಿಮ್ ಸಮುದಾಯದೊಳಗೆ ತ್ರಿವಳಿ ತಲಾಕ್‍ನ ಅನುಪಾತ ಶೂನ್ಯಮಟ್ಟದಲ್ಲೇನೂ ಇಲ್ಲವಲ್ಲ ಅಥವಾ ಮುಸ್ಲಿಮ್ ಸಮುದಾಯದ ವಿಚ್ಛೇದಿತೆಯರನ್ನು ಇತರ ಸಮುದಾಯಗಳ ವಿಚ್ಛೇದಿತೆಯರಿಗೆ ಹೋಲಿಸಿ ಸಮರ್ಥಿಸಿಕೊಳ್ಳುವುದು ಇದಕ್ಕಿರುವ ಪರಿಹಾರವೂ ಅಲ್ಲವಲ್ಲ. ಮುಸ್ಲಿಮ್ ಸಮುದಾಯದ ಸದ್ಯದ ಸ್ಥಿತಿಗತಿಗಳು ಹೇಗಿವೆ? ಅವು ಉತ್ತಮವೇ, ಅತ್ಯುತ್ತಮವೇ, ಕೆಟ್ಟವೇ ಅಥವಾ ತೀರಾ ಗಂಭೀರವೇ? ಸಾಚಾರ್ ಮತ್ತು ರಂಗನಾಥ್ ಮಿಶ್ರಾ ಆಯೋಗಗಳು ಮುಸ್ಲಿಮ್ ಸಮುದಾಯದ ಮೇಲೆ ಅಧ್ಯಯನಗಳನ್ನು ನಡೆಸಿವೆ. ಮಾತ್ರವಲ್ಲ, ಈ ಸಮುದಾಯ ಅತೀ ಗಂಭೀರಾವಸ್ಥೆಯಲ್ಲಿ ಬದುಕುತ್ತಿದೆ ಎಂದೂ ಹೇಳಿವೆ. ಹಾಗಂತ ಈ ಗಂಭೀರಾವಸ್ಥೆಯಿಂದ ಸಮುದಾಯವನ್ನು ಹೊರತರುವುದಕ್ಕೆ ‘ಜಯಂತಿ’ಗಳಿಂದಂತೂ ಸಾಧ್ಯವಿಲ್ಲ.  ಏನಿದ್ದರೂ ಸರಕಾರದ ಮೇಲೆ ಪದೇಪದೇ ಆರೋಪಗಳನ್ನು ಹೊರಿಸುತ್ತಾ ಸಾಗುವುದರಿಂದ ಮುಸ್ಲಿಮ್ ಸಮುದಾಯದ ಅಭಿವೃದ್ಧಿ ಸಾಧ್ಯವೇ? ಆರೋಪಗಳ ಆಚೆಗೆ ಸಮುದಾಯ ಹೇಗೆಲ್ಲ ಸಕ್ರಿಯವಾಗಬಹುದು? ಅಭಿವೃದ್ಧಿಯನ್ನು ಗುರಿಯಾಗಿಸಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು?
         ಮುಸ್ಲಿಮ್ ಸಮುದಾಯದಲ್ಲಿ ಎರಡು ಬಹುಮುಖ್ಯ ನಿಧಿಗಳಿವೆ. ಒಂದು- ಮಸೀದಿಯಾದರೆ ಇನ್ನೊಂದು ಜನಸಂಪತ್ತು. ದುರಂತ ಏನೆಂದರೆ, ಇತರ ಸಮುದಾಯಗಳಿಗೆ ಹೋಲಿಸಿದರೆ ಅಮೂಲ್ಯವೆಂದೇ ಹೇಳಬಹುದಾದ ಈ ಎರಡು ನಿಧಿಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಸಮುದಾಯ ಪದೇ ಪದೇ ವಿಫಲವಾಗುತ್ತಿರುವುದು. ಇವತ್ತು ಮುಸ್ಲಿಮ್ ಸಮುದಾಯ ಮಸೀದಿಗಳ ಕೊರತೆಯಿಂದ ಬಳಲುತ್ತಿಲ್ಲ. ಆದರೆ ಈ ಮಸೀದಿಗಳ ಸದುಪಯೋಗದ ದೃಷ್ಟಿಯಿಂದ ಹೇಳುವುದಾದರೆ, ನಿಜಕ್ಕೂ ಬಳಲುತ್ತಿದೆ. ಮಸೀದಿ ಅಂದಮೇಲೆ ಅದಕ್ಕೊಂದು ಕಮಿಟಿ ಇರುತ್ತದೆ. ಅಧ್ಯಕ್ಷರಿರುತ್ತಾರೆ. ಕಾರ್ಯಕಾರಿ ಸದಸ್ಯರಿರುತ್ತಾರೆ. ಉಸ್ತಾದ್ (ಧರ್ಮಗುರು) ಇರುತ್ತಾರೆ. ಮಾತ್ರವಲ್ಲ, ಮಸೀದಿಯ ವ್ಯಾಪ್ತಿಗೆ ಒಳಪಟ್ಟು ಇಂತಿಷ್ಟು ಮನೆಗಳೂ ಇರುತ್ತವೆ. ಬಹುಶಃ, ಮುಸ್ಲಿಮ್ ಸಮುದಾಯದಲ್ಲಿ ಮಸೀದಿಗೆ ಒಳಪಡದ ಮತ್ತು ತಿಂಗಳು ತಿಂಗಳು ವಂತಿಗೆ ಕೊಡದ ಮನೆಗಳಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ಇಷ್ಟೊಂದು ವ್ಯವಸ್ಥಿತ ರೀತಿಯಲ್ಲಿ ಮಸೀದಿ ಕೇಂದ್ರಿತ ಚಟುವಟಿಕೆಗಳು ನಡೆಯುತ್ತಿರುವಾಗ, ಸಮುದಾಯದ ಅಭಿವೃದ್ಧಿಗಾಗಿ ನೀಲನಕ್ಷೆಯನ್ನು ರೂಪಿಸುವುದು ಅಸಾಧ್ಯ ಏನಲ್ಲ. ಒಂದು ಮಸೀದಿಯ ವ್ಯಾಪ್ತಿಯೊಳಗೆ ಎಷ್ಟು ಮನೆಗಳಿವೆ ಎಂಬುದು ಪ್ರತಿ ಮಸೀದಿಯ ವಂತಿಗೆ ಪಟ್ಟಿಯಲ್ಲಿ ದಾಖಲಾಗಿರುತ್ತದೆ. ಆದ್ದರಿಂದ, ಆ ಪಟ್ಟಿಯಲ್ಲಿ ದಾಖಲಾಗದ ಇತರ ಅಂಶಗಳ ಕಡೆಗೆ ಪ್ರತಿ ಮಸೀದಿಯೂ ಗಂಭೀರವಾಗಿ ಗಮನ ಹರಿಸುವ ಮನಸು ಮಾಡಿದರೆ ಸಮುದಾಯದ ಅಭಿವೃದ್ಧಿಯು ಸರಕಾರಗಳು ಅಚ್ಚರಿಪಡುವಷ್ಟು ವೇಗದಲ್ಲಿ ನಡೆದು ಬಿಡುವುದಕ್ಕೆ ಅವಕಾಶವಿದೆ. ಇದಕ್ಕೆ ಮಸೀದಿ ಕಮಿಟಿಗಳು ಮಾಡಬೇಕಾದ ಪುಟ್ಟ ಕೆಲಸವೇನೆಂದರೆ, ತುರ್ತಾಗಿ ಒಂದು ಸಭೆ ಕರೆಯುವುದು. ಸಮುದಾಯದ ಅಭಿವೃದ್ಧಿಯೇ ಸಭೆಯ ಮುಖ್ಯ ಅಜೆಂಡಾ ಆಗುವುದು ಮತ್ತು ಮಸೀದಿ ವ್ಯಾಪ್ತಿಯೊಳಗಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸುವುದು. ಸಮುದಾಯದ ಅಭಿವೃದ್ಧಿ ಎಂಬ ಏಕ ಅಜೆಂಡಾಕ್ಕಾಗಿ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬದಿಗಿಟ್ಟು ಮುಂದುವರಿಯಲು ತೀರ್ಮಾನಿಸುವುದು. ಇಷ್ಟಾದರೆ, ತಲಾಕನ್ನು ‘ಚರ್ಚಾಸ್ಪದ’ವನ್ನಾಗಿ ಮಾಡಿದವರಿಗೆ ಪ್ರಾಯೋಗಿಕವಾಗಿ ಉತ್ತರ ಕೊಡುವ ಚಟುವಟಿಕೆ ಪ್ರಾರಂಭವಾಯಿತೆಂದೇ ಹೇಳಬಹುದು. ಒಂದು ಮನೆಯಿಂದ ವಂತಿಗೆಯನ್ನು ವಸೂಲು ಮಾಡುವುದೆಂದರೆ, ಆ ಮನೆಗೂ ಮಸೀದಿಗೂ ಸಂಬಂಧ ಇದೆ ಎಂದರ್ಥ. ಆದರೆ ಈ ಸಂಬಂಧ ತೀರಾ ತೆಳುವಾದುದು. ಮಸೀದಿಯೊಂದು ವಂತಿಗೆಯ ರೂಪದಲ್ಲಿ ಹಣವನ್ನು ಪಡಕೊಳ್ಳುತ್ತದೆಯೇ ಹೊರತು, ನಿಷ್ಠೆಯಿಂದ ವಂತಿಗೆ ಪಾವತಿಸುವ ಆ ವ್ಯಕ್ತಿಯ ಕ್ಷೇಮಕ್ಕಾಗಿ ಏನನ್ನೂ ಮರಳಿ ನೀಡುವುದಿಲ್ಲ. ಒಂದು ರೀತಿಯಲ್ಲಿ, ಇದು ಏಕಮುಖ ಸೇವೆ. ಮಸೀದಿ ಮೇಲಿನ ಗೌರವದಿಂದಾಗಿ ಈ ಸೇವೆ ಇವತ್ತಿನ ವರೆಗೂ ಯಾವ ಅಡ್ಡಿಯೂ ಇಲ್ಲದೇ ಮುಂದುವರಿಯುತ್ತಾ ಬಂದಿದೆ. ಸದ್ಯ ಮಸೀದಿಗಳು ಮಾಡಬೇಕಾದ ಕೆಲಸ ಏನೆಂದರೆ, ಈ ಏಕಮುಖ ಸೇವೆಯನ್ನು ದ್ವಿಮುಖಗೊಳಿಸುವುದು. ಮಸೀದಿಗಾಗಿ ವಂತಿಗೆ ಕೊಡುವ (ಕೊಡಲು ಅಶಕ್ತರಾದವರನ್ನೂ ಕೊಟ್ಟವರ ಪಟ್ಟಿಯಲ್ಲೇ ಸೇರಿಸಬೇಕು) ವ್ಯಕ್ತಿಯ ಕ್ಷೇಮಕ್ಕಾಗಿ ಯೋಜನೆಯನ್ನು ರೂಪಿಸುವುದು. ಒಂದು ಮಸೀದಿಯ ವ್ಯಾಪ್ತಿಗೆ ಒಳಪಟ್ಟ ಮನೆಗಳ ಸಂಪೂರ್ಣ ಸರ್ವೇ ನಡೆಸುವುದು. ಒಂದು ಮನೆಯಲ್ಲಿ ವಾಸಿಸುವವರ ಸಂಖ್ಯೆ, ಮನೆಯ ಸ್ವರೂಪ, ಗಂಡು-ಹೆಣ್ಣು, ವಿದ್ಯಾರ್ಹತೆ, ದುಡಿಯುವವರು, ನಿರುದ್ಯೋಗಿಗಳು, ವಿವಾಹಿತರು, ಅವಿವಾಹಿತರು, ವಿಕಲ ಚೇತನರು, ರೋಗಿಗಳು, ಶಿಕ್ಷಣ ಪಡೆಯುತ್ತಿರುವವರು.. ಮುಂತಾದುವುಗಳ ಸಮಗ್ರ ವಿವರ ಸಂಗ್ರಹಿಸುವುದು. ಪಡಿತರ ಚೀಟಿ, ಮತದಾನ ಚೀಟಿ, ಆಧಾರ್ ಕಾರ್ಡ್, ಆರೋಗ್ಯ ಕಾರ್ಡ್, ಶೌಚಾಲಯ, ಮನೆಯ ಒಟ್ಟು ವರಮಾನ, ವಿಧವೆಯರಿದ್ದರೆ, ಅನಾಥರು, ವಿಚ್ಛೇದಿತೆಯರಿದ್ದರೆ.. ಎಲ್ಲವನ್ನೂ ದಾಖಲಿಸಿಕೊಳ್ಳುವುದು. ನಿಜವಾಗಿ, ಒಂದು ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ಇಂಥದ್ದೊಂದು ಸರ್ವೆ ಇವತ್ತಿನ ದಿನಗಳಲ್ಲಿ ಬಹಳ ಅಗತ್ಯ. ಈ ಸರ್ವೇಯಿಂದ ಆಗಬಹುದಾದ ಬಹಳ ದೊಡ್ಡ ಪ್ರಯೋಜನ ಏನೆಂದರೆ, ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವುದಕ್ಕೆ ಸುಲಭವಾಗುತ್ತದೆ. ಸರಕಾರದ ಸಾಕಷ್ಟು ಫಂಡ್‍ಗಳು ಅರ್ಹ ಫಲಾನುಭವಿಗಳ ಕೊರತೆಯನ್ನು ನೆಪ ಮಾಡಿಕೊಂಡು ಹಿಂದಕ್ಕೆ ಹೋಗುವುದಿದೆ. ಅವನ್ನು ಸದುಪಯೋಗಪಡಿಸುವುದಕ್ಕೂ ಈ ಸರ್ವೆ ನೆರವಾಗಬಹುದು. ಸರಕಾರಿ ಸೌಲಭ್ಯವನ್ನು ತನ್ನ ಮಸೀದಿ ವ್ಯಾಪ್ತಿಯ ಮನೆಗಳಿಗೆ ತಲುಪಿಸುವುದಕ್ಕಾಗಿ ಪ್ರತಿ ಮಸೀದಿಯೂ ಅರೆಕಾಲಿಕವೋ ಪೂರ್ಣಕಾಲಿಕವೋ ಆದ ನೌಕರರನ್ನು ನೇಮಿಸಿಕೊಳ್ಳುವುದು ಇನ್ನೂ ಉತ್ತಮ ಅಥವಾ ಮಸೀದಿಯ ಉಸ್ತಾದರು ಸ್ವಯಂ ಪ್ರೇರಿತರಾಗಿ ಈ ಕೆಲಸವನ್ನು ವಹಿಸಿಕೊಂಡರೂ ಆಗಬಹುದು. ಮಸೀದಿ ಉಸ್ತಾದರು ಸರಕಾರಿ ಸೌಲಭ್ಯವನ್ನು ತನ್ನ ಜನರಿಗೆ ತಲುಪಿಸುವುದಕ್ಕಾಗಿ ಸರಕಾರಿ ಅಧಿಕಾರಿಯನ್ನೋ ಶಾಸಕರನ್ನೋ ಭೇಟಿಯಾಗುವುದೆಂದರೆ ಅಲ್ಲೊಂದು ಗೌರವದ ವಾತಾವರಣವಿರುತ್ತದೆ. ತಕ್ಷಣಕ್ಕೆ ಅದು ಮಂಜೂರಾಗುವುದಕ್ಕೂ ಅವಕಾಶವಿರುತ್ತದೆ. ಹಾಗೆಯೇ ಪ್ರತಿ ಮಸೀದಿಗೆ ಒಳಪಟ್ಟವರಲ್ಲಿ ವಿದೇಶಿ ಉದ್ಯೋಗಿಗಳಿರಬಹುದು. ಅವರನ್ನು ಈ ಅಭಿವೃದ್ಧಿ ಅಜೆಂಡಾದಲ್ಲಿ ಭಾಗಿಯಾಗಿಸುವುದಕ್ಕೆ ಮಸೀದಿ ಉಸ್ತಾದರಿಗೆ ಸಾಧ್ಯವಿದೆ. ಅಲ್ಲದೇ, ಮುಸ್ಲಿಮ್ ಸಮುದಾಯದಲ್ಲೇ ವಿಶೇಷವಾದ ಝಕಾತ್ ವ್ಯವಸ್ಥೆಯಿದೆ. ಜೊತೆಗೇ ಅನೇಕಾರು ಎನ್‍ಜಿಓಗಳಿವೆ. ದಾನಿಗಳಿದ್ದಾರೆ. ಅವರೆಲ್ಲರಿಂದಲೂ ಸಮುದಾಯದ ಏಳಿಗೆಗಾಗಿ ದೇಣಿಗೆಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ, ಪ್ರತಿ ಮಸೀದಿಗೆ ತನ್ನ ವ್ಯಾಪ್ತಿಯೊಳಗಿನ ಮನೆಗಳ ಸಮಗ್ರ ಸರ್ವೇ ನಡೆಸುವುದಲ್ಲದೆ ಅದನ್ನು ದಾಖಲಿಸಿಕೊಂಡು ಅಭಿವೃದ್ಧಿಗೆ ಪೂರಕವಾದ ನೀಲನಕ್ಷೆಯನ್ನು ರೂಪಿಸಿದರೆ ಅಭೂತಪೂರ್ವವೆನ್ನಬಹುದಾದ ಬದಲಾವಣೆ ಖಂಡಿತ ಸಾಧ್ಯವಾಗಬಹುದು. ಮಾತ್ರವಲ್ಲ, ತಲಾಕ್, ಸಮಾನ ನಾಗರಿಕ ಸಂಹಿತೆ, ಬಹುಪತ್ನಿತ್ವ, ಭಯೋತ್ಪಾದನೆ.. ಮುಂತಾದುವುಗಳನ್ನೇ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡವರು ತಮ್ಮ ಅಜೆಂಡಾವನ್ನೇ ಬದಲಿಸಿಕೊಳ್ಳುವಂತೆ ಮಾಡುವುದಕ್ಕೂ ಇದು ಕಾರಣವಾಗಬಹುದು

No comments:

Post a Comment