Wednesday, 18 January 2017

ಲೈಂಗಿಕ ದೌರ್ಜನ್ಯವನ್ನು ಹುಡುಕುವ ಕ್ಯಾಮರಾಗಳು ಮತ್ತು ಕೆರೆಗೆ ಹಾರುವ ಬಾಬುಗೌಡರು

       ಕಳೆದವಾರ ಮಾಧ್ಯಮ ಕ್ಷೇತ್ರ ಸಾಕಷ್ಟು ಬ್ಯುಸಿಯಾಗಿದ್ದುವು. ಅತ್ಯಾಚಾರ, ಚುಡಾವಣೆ, ಲೈಂಗಿಕ ದೌರ್ಜನ್ಯ ಮುಂತಾದುವುಗಳ ಸುತ್ತ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಧಾರಾಳ ಬೆವರು ಸುರಿಸಿದುವು. ಪುಟಗಳನ್ನೂ ಸಮಯವನ್ನೂ ಮೀಸಲಿರಿಸಿದುವು. ಇದೇ ವೇಳೆ ನಮ್ಮೊಳಗನ್ನು ತೀವ್ರವಾಗಿ ತಟ್ಟಲೇಬೇಕಾದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಎಂಬಲ್ಲಿ ನಡೆಯಿತು. ಒಂದೇ ಮನೆಯ ನಾಲ್ಕು ಮಂದಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ವ್ಯವಸ್ಥೆ ಹೇಗೆ ಮನುಷ್ಯರ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಈ ಕುಟುಂಬ. ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಸಾವಿಗೀಡಾದರೆ ಓರ್ವ ಬದುಕುಳಿದಿದ್ದಾನೆ. ಈ ಬದುಕುಳಿದವನ ಮೇಲೆ ತಮ್ಮವರ ಸಾವು ಯಾವ ರೀತಿಯ ಆಘಾತಕಾರಿ ಪರಿಣಾಮವನ್ನು ಬೀರಬಹುದು ಎಂಬುದು ಒಂದು ಪ್ರಶ್ನೆಯಾದರೆ, ಸಾವು ಯಾಕೆ ಒಂದು ಆಯ್ಕೆಯಾಗಿ ಅಥವಾ ‘ಪರಿಹಾರ’ವಾಗಿ ಇನ್ನೂ ಅಸ್ತಿತ್ವದಲ್ಲಿ ಇದೆ ಎಂಬ ಪ್ರಶ್ನೆ ಇನ್ನೊಂದು. ಹಾಗಂತ, ಆತ್ಮಹತ್ಯೆಯನ್ನು ಪ್ರಶ್ನಿಸಿ ಸಿನಿಮಾ ತಯಾರಿಸಬಹುದು. ನಾಟಕ ರಚಿಸಬಹುದು. ಕಾದಂಬರಿಯನ್ನೋ ಲೇಖನವನ್ನೋ ಬರೆಯಬಹುದು. ಇವೆಲ್ಲದರ ಬಳಿಕವೂ ಮುಖ್ಯ ಪ್ರಶ್ನೆಯೊಂದು ಹಾಗೆಯೇ ಉಳಿಯುತ್ತದೆ. ಓರ್ವ ವ್ಯಕ್ತಿಯನ್ನು ಆತ್ಮಹತ್ಯೆಗೆ ಒತ್ತಾಯಿಸುವ ಮೂಲಭೂತ ಅಂಶ ಯಾವುದು? ಯಾರಿಂದ ಮತ್ತು ಯಾವುದರಿಂದ ಆ ಆತ್ಮಹತ್ಯೆ ಪ್ರಚೋದಿತವಾಗಿದೆ? ಅಂದಹಾಗೆ, ಈ ಆತ್ಮಹತ್ಯೆಯ ಹಿಂದೆ ಎಂಡೋಸಲ್ಫಾನ್ ಎಂಬ ಕ್ರೌರ್ಯದ ಹಿನ್ನೆಲೆಯಿದೆ. ಮನೆಯೊಂದು ಎಂಡೋ ಪೀಡಿತರ ಕುಟುಂಬವಾಗಿ ಮಾರ್ಪಟ್ಟರೆ ಆ ಮನೆಯ ಆಲೋಚನೆಗಳು ಹೇಗಿರಬಹುದು? ವಿಕ್ಷಿಪ್ತರು, ವಿಕಲಚೇತನರು, ಚಾಪೆಗೇ ಸೀಮಿತವಾದವರ ಜೀವನಚಕ್ರ ಏನಿರಬಹುದು? ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಮತ್ತು ಈ ಆತ್ಮಹತ್ಯೆಯನ್ನು ನಾವು ಮುಖಾಮುಖಿಗೊಳಿಸಬೇಕಾದ ಅನಿವಾರ್ಯತೆ ಎದುರಾಗುವುದು ಇಲ್ಲೇ. ರಾತ್ರಿ ಪಾರ್ಟಿಯನ್ನು ಒಂದು ಹಂತದವರೆಗೆ ‘ಹೊಟ್ಟೆ ತುಂಬಿದವರ ಖಯಾಲಿ' ಎಂದು ಹೇಳಬಹುದು. ಅಲ್ಲಿಗೆ ಎಂಡೋ ಸಂತ್ರಸ್ತರು ಬರಲ್ಲ. ಯಾಕೆ ಬರಲ್ಲ ಅಂದರೆ, ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಸೌಂದರ್ಯ ಅವರಿಗಿಲ್ಲ. ದೈಹಿಕವಾಗಿಯೂ ಮಾನಸಿಕವಾಗಿಯೂ ಸ್ವಸ್ಥರಲ್ಲ. ಹೆಚ್ಚಿನವರಿಗೆ ಮನೆ ಬಿಟ್ಟು ಹೊರಬರಲೂ ಆಗುತ್ತಿಲ್ಲ. ಹಾಗಂತ, ಇವರ ಸಂಖ್ಯೆ ಬೆಂಗಳೂರಿನಲ್ಲಿ ರಾತ್ರಿ ಪಾರ್ಟಿಯಲ್ಲಿ ಸೇರಿದವರಿಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚು. ದಕ್ಷಿಣ ಕನ್ನಡ ಒಂದರಲ್ಲಿಯೇ ಮೂರು ಸಾವಿರಕ್ಕಿಂತ ಅಧಿಕ ಎಂಡೋ ಪೀಡಿತರಿದ್ದಾರೆ. ಕೇರಳದ ಕಾಸರಗೋಡು ಮತ್ತಿತರ ಕಡೆಯೂ ಇದ್ದಾರೆ. ದುರಂತ ಏನೆಂದರೆ, ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ ಪತ್ರಕರ್ತರಲ್ಲಿ ಶೇ. 1ರಷ್ಟು ಮಂದಿಯೂ ಈ ಮನುಷ್ಯರನ್ನು ಭೇಟಿಯಾಗಿಲ್ಲ. ತಮ್ಮ ಕ್ಯಾಮರಾಗಳಲ್ಲಿ ಇವರನ್ನು ಚಿತ್ರೀಕರಿಸಿಕೊಂಡಿಲ್ಲ. ಲೈವ್ ಚರ್ಚೆಗಳು ನಡೆದಿಲ್ಲ. ಮನುಷ್ಯರಿಗೆ ಈ ಪ್ರದೇಶ ಎಷ್ಟು ಸುರಕ್ಷಿತ ಎಂಬ ಬಗ್ಗೆ ವಿಶ್ಲೇಷಣೆಗಳು ನಡೆದಿಲ್ಲ. ಅಂಕಿ-ಅಂಶಗಳ ಸಂಗ್ರಹವಾಗಿಲ್ಲ. ಅಷ್ಟಕ್ಕೂ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಒಂದು ಹಂತದಲ್ಲಿ ಅದರ ಪ್ರಭಾವದಿಂದ ಹೊರಬರಲೂ ಬಹುದು. ಕಾಲವು ಅವರಿಂದ ಅದನ್ನು ಮರೆಸಿ ಬಿಡಲೂಬಹುದು ಅಥವಾ ಅವರು ಸ್ವತಃ ಲೈಂಗಿಕ ದೌರ್ಜನ್ಯ ವಿರೋಧಿ ಹೋರಾಟಗಾರರಾಗಿ ಪರಿವರ್ತನೆಯಾಗುವ ಮೂಲಕ ಪ್ರತೀಕಾರ ತೀರಿಸಲೂ ಬಹುದು. ಆದರೆ, ಎಂಡೋ ಸಂತ್ರಸ್ತರಿಗೆ ಇಂಥದ್ದೊಂದು ಅವಕಾಶವೇ ಇಲ್ಲ. ಅದಕ್ಕೆ ತುತ್ತಾದವರು ಬಹುತೇಕ ಶಾಶ್ವತವಾಗಿ ಅದೇ ಸ್ಥಿತಿಯಲ್ಲಿ ಕೊರಗುತ್ತಾ ಬದುಕಬೇಕಾಗುತ್ತದೆ. ಯಾರೇ ಆಗಲಿ, ದೈಹಿಕ ಅಂಗಾಂಗಳು ಸ್ವಸ್ಥವಾಗಿರುವುದನ್ನು ಇಷ್ಟಪಡುತ್ತಾರೆ. ಆರೋಗ್ಯಪೂರ್ಣವಾಗಿರುವುದು, ಸುಂದರವಾಗಿರುವುದು ಇವೆಲ್ಲ ಮಾನವ ಸಹಜ ಬಯಕೆಗಳು. ಎಂಡೋಸಲ್ಫಾನ್ ವಿರೋಧಿಸುವುದೇ ಇವುಗಳನ್ನು. ಅದಕ್ಕೆ ತುತ್ತಾದವರು ಸಹಜ ಸೌಂದರ್ಯವನ್ನು ಕಳಕೊಳ್ಳುತ್ತಾರೆ. ದೈಹಿಕ ಅಂಗರಚನೆಗಳು ಊನಗೊಳ್ಳುತ್ತವೆ. ಆದ್ದರಿಂದಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೂ ಅವರಲ್ಲಿ ಹಿಂಜರಿಕೆ ಉಂಟಾಗುತ್ತದೆ. ಇದೇ ಸ್ಥಿತಿ ಮುಂದುವರಿಯುತ್ತಾ ಅವರನ್ನು ವಿಕ್ಷಿಪ್ತತೆಯೆಡೆಗೆ ಕೊಂಡೊಯ್ಯುತ್ತದೆ. ಆದ್ದರಿಂದ, ಬೆಂಗಳೂರಿನ ಲೈಂಗಿಕ ದೌರ್ಜನ್ಯಕ್ಕೆ ಕೊಕ್ಕಡದ ಎಂಡೋ ದೌರ್ಜನ್ಯವನ್ನು ಮುಖಾಮುಖಿಗೊಳಿಸಿದರೆ ಹಾಗೂ ಬೆಂಗಳೂರಿಗೆ ಸಿಕ್ಕ ಪ್ರಚಾರದ ಮತ್ತು ಆಡಳಿತಾತ್ಮಕ ಸಾಂತ್ವನದ ಅಣುವಿನಷ್ಟು ಮಹತ್ವವೂ ಕೊಕ್ಕಡದ ಎಂಡೋ ದೌರ್ಜನ್ಯಕ್ಕೆ ಸಿಗದೇ ಹೋಗಿದ್ದರೆ ಅದರಲ್ಲಿ ತಮ್ಮ ಹೃದಯ ಶೂನ್ಯತೆಗೆ ಎಷ್ಟು ಪಾಲು ಇದೆ ಎಂಬ ಬಗ್ಗೆ ಮಾಧ್ಯಮದ ಮಂದಿ ಆತ್ಮಾವಲೋಕನ ನಡೆಸಬೇಕಾಗಿದೆ. ಬೆಂಗಳೂರಿನ ಲೈಂಗಿಕ ದೌರ್ಜನ್ಯವನ್ನು ನಾವು ಹೇಗೆ ಆಡಳಿತಾತ್ಮಕ ವೈಫಲ್ಯ ಎಂದು ಕರೆಯುತ್ತೇವೋ ಅಷ್ಟೇ ಮತ್ತು ಅದಕ್ಕಿಂತಲೂ ಹೆಚ್ಚಿನ ಆಡಳಿತಾತ್ಮಕ ವೈಫಲ್ಯ ಎಂಡೋ ಪೀಡಿತರದ್ದು. ಆ ಭಾಗದಲ್ಲಿ ಗೇರು ತೋಟಗಳ ಮೇಲೆ ಸರಕಾರ ಎಂಡೋಸಲ್ಫಾನ್ ಸಿಂಪಡಿಸಿರುವುದರ ಅಡ್ಡ ಪರಿಣಾಮದ ಫಲಿತಾಂಶವೇ ಈ ಸಂತ್ರಸ್ತರು. ವ್ಯವಸ್ಥೆಯೊಂದು ಬೇಜವಾಬ್ದಾರಿಯುತವಾಗಿ ನಡೆದುಕೊಂಡರೆ ಏನಾಗಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಇದು.
     ಮಾಧ್ಯಮ ಜಗತ್ತಿನ ಸಂವೇದನೆಯನ್ನು ಮತ್ತು ಸ್ಪಂದನಾ ಸಾಮರ್ಥ್ಯವನ್ನು ಮರು ಅವಲೋಕನಕ್ಕೆ ಒಳಪಡಿಸಲು ಬಾಬುಗೌಡ, ಗಂಗಮ್ಮ, ಸದಾನಂದ ಮತ್ತು ನಿತ್ಯಾನಂದ ಎಂಬ ಎಂಡೋ ಪೀಡಿತರ ಸಾವು ನಿಮಿತ್ತವಾಗಬೇಕು. ನಗರ ಪ್ರದೇಶದ, ಆಕರ್ಷಕವಾಗಿ ಮಾತಾಡಬಲ್ಲ, ಕೈ ತುಂಬ ದುಡ್ಡು ಎಣಿಸುವ, ಸುಂದರವಾಗಿರುವ, ದುಬಾರಿ ವಾಹನಗಳಲ್ಲಿ ಓಡಾಡುವ ಜನರ ಸುತ್ತಲೇ ಇವತ್ತು ಜರ್ನಲಿಸಂ ಸುತ್ತುತ್ತಿದೆಯೇ? ಅವರ ಸಮಸ್ಯೆಯನ್ನೇ ಇಡೀ ದೇಶದ ಸಮಸ್ಯೆಯಾಗಿ ಮತ್ತು ದೇಶದ ಘನತೆಯ ವಿಷಯವಾಗಿ ಪರಿಗಣಿಸುತ್ತಿವೆಯೇ? ಅವರನ್ನೇ ಭಾರತವಾಗಿಸುವ ತಪ್ಪುಗಳು ನಡೆಯುತ್ತಿವೆಯೇ? ಭಾರತವೆಂದರೆ ನಗರ ಪ್ರದೇಶಗಳೇ ಅಲ್ಲವಲ್ಲ. ನಗರಗಳಲ್ಲಿರುವವರು ಮಾತ್ರವೇ ಮನುಷ್ಯರೂ ಅಲ್ಲವಲ್ಲ. ನಿಜವಾದ ಭಾರತ ನಗರಗಳ ಹೊರಗಿದೆ. ಗಂಭೀರವಾದ ಸಮಸ್ಯೆಗಳೂ ಅಲ್ಲೇ ಇವೆ. ಮಾಧ್ಯಮ ಜಗತ್ತಿನ ಲೇಖನಿಗಳು, ಕ್ಯಾಮರಾಗಳು ಆ ಕಡೆಗೆ ಮುಖ ಮಾಡಬೇಕಾಗಿದೆ. ಟಿ.ವಿ.ಗಳ ಚರ್ಚೆಗಳಲ್ಲಿ ಎಂಡೋ ಪೀಡಿತರನ್ನು, ಸಾಲಗಾರ ರೈತರನ್ನು, 365 ದಿನ ದುಡಿದೂ ಹೊಟ್ಟೆ-ಬಟ್ಟೆ ತುಂಬಲಾರದವರನ್ನು, ಸೋರುವ ಮಾಡನ್ನೂ ಮಾಡಿನೊಳಗಿನ ಮನುಷ್ಯರನ್ನೂ, ಅವರ ತಲ್ಲಣಗಳನ್ನೂ ನಗರಗಳ ಮುಂದೆ ಇಡಬೇಕಾಗಿದೆ. ಆ ಮೂಲಕ ನಗರದ ಮನುಷ್ಯರನ್ನು ಮತ್ತು ನಗರವಲ್ಲದ ಮನುಷ್ಯರನ್ನು ಮುಖಾಮುಖಿಗೊಳಿಸಬೇಕಾಗಿದೆ. ಅಂದಹಾಗೆ,
      ಆತ್ಮಹತ್ಯೆ ಪರಿಹಾರ ಅಲ್ಲ ಸರಿ. ಅದು ತಪ್ಪೂ ಹೌದು. ಆದರೆ, ವ್ಯವಸ್ಥೆ ಬಿಡಿ ಮಾಧ್ಯಮಗಳೂ ಸಂವೇದನೆಯನ್ನು ಕಳಕೊಂಡರೆ ಮತ್ತು ವ್ಯವಸ್ಥೆಯ ಮೇಲೆ ಒತ್ತಡ ಹಾಕುವ ಜವಾಬ್ದಾರಿಯಿಂದ ನುಣುಚಿಕೊಂಡರೆ, ಸಂತ್ರಸ್ತರು ಮಾನಸಿಕ ಸ್ವಸ್ಥತೆಯನ್ನು ಕಳಕೊಳ್ಳಲಾರರೆಂದು ಹೇಗೆ ಹೇಳುವುದು? ನಿಜವಾಗಿ, ಬೆಂಗಳೂರಿನ ‘ಲೈಂಗಿಕ ದೌರ್ಜನ್ಯ’ದ ಆರು ದಿನಗಳ ಬಳಿಕ ನಡೆದ ಬಾಬುಗೌಡ ಕುಟುಂಬದ ಆತ್ಮಹತ್ಯೆಯು ವ್ಯವಸ್ಥೆ ಮತ್ತು ಮಾಧ್ಯಮ ಜಗತ್ತಿನ ಸಂವೇದನಾರಹಿತ ಮನಸ್ಥಿತಿಗೆ ತೋರಿದ ತೀವ್ರ ಪ್ರತಿಭಟನೆಯೆಂದೇ ಹೇಳಬೇಕು. ಮಾತ್ರವಲ್ಲ, ಈ ಪ್ರತಿಭಟನೆಯು ಉಳಿದ ಸಂತ್ರಸ್ತರ ಆಯ್ಕೆಯೂ ಆಗುವ ಮೊದಲು ನಾವೆಲ್ಲ ಎಚ್ಚೆತ್ತುಕೊಳ್ಳಬೇಕು. ನಗರ ಕೇಂದ್ರಿತ ಜರ್ನಲಿಸಂ ಅನ್ನು ಸಮಸ್ಯೆ ಕೇಂದ್ರಿತ ಜರ್ನಲಿಸಂ ಆಗಿ ಇದು ಪರಿವರ್ತಿಸಬೇಕು. ವಿಷಾದ ಏನೆಂದರೆ, ಮಾಧ್ಯಮ ಜಗತ್ತು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಬಾಬುಗೌಡ ಕುಟುಂಬದ ಸಾವಿಗೆ ಸಣ್ಣ ಸುದ್ದಿಯ ಹೊರತಾಗಿ ಬೇರೆ ಯಾವ ಮಹತ್ವವನ್ನೂ ಅವು ಕೊಟ್ಟಿಲ್ಲ. ಅವು ಇನ್ನೂ ಲೈಂಗಿಕ ದೌರ್ಜನ್ಯವನ್ನು ಹುಡುಕುತ್ತಾ ನಗರಗಳಲ್ಲೇ ಇವೆ.

No comments:

Post a Comment