Monday 27 March 2017

ಯೋಗಿ ಆದಿತ್ಯನಾಥ ಮತ್ತು ಆಶಾವಾದ

     ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ದಿನವೇ, ದೇಶದಾದ್ಯಂತ ಒಂದು ಲಕ್ಷ ಮದ್ರಸಗಳಲ್ಲಿ ಶೌಚಾಲಯವನ್ನು ಕಟ್ಟಿಸುವ ಮತ್ತು ಮಧ್ಯಾಹ್ನದೂಟವನ್ನು ಒದಗಿಸುವ ಯೋಜನೆಯನ್ನು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಪ್ರಕಟಿಸಿದ್ದಾರೆ. ಇದರ ಮರುದಿನವೇ ಘೋಷಿಸಲಾದ ಯೋಗಿ ಆದಿತ್ಯನಾಥ್‍ರ ಸಚಿವ ಸಂಪುಟದಲ್ಲಿ ಮುಹ್ಸಿನ್ ರಝಾ ಎಂಬವರು ಕಾಣಿಸಿಕೊಂಡಿದ್ದಾರೆ. ಏನಿದರ ಅರ್ಥ? ಬಿಜೆಪಿಗೆ ಒಳಗೊಂದು ಹೊರಗೊಂದು ಮುಖವಿದೆಯೇ? ಒಳಗಿನ ಮುಖವು ಹೊರಗಿನ ಮುಖಕ್ಕಿಂತ ಮೃದುವೇ, ಜಾತ್ಯತೀತವೇ? ‘ಸಬ್‍ಕಾ ವಿಕಾಸ್’ ಅನ್ನು ಕ್ಷೀಣ ಮಟ್ಟದಲ್ಲಾದರೂ ಅದು ಪ್ರತಿಪಾದಿಸುತ್ತದೆಯೇ? ಯೋಗಿ ಆದಿತ್ಯನಾಥ್‍ರ ವಿಚಾರಧಾರೆ ಏನು ಅನ್ನುವುದು ಈ ದೇಶಕ್ಕೆ ಚೆನ್ನಾಗಿ ಗೊತ್ತು. ಬಿಜೆಪಿಯನ್ನು ಇವತ್ತು ಮುಸ್ಲಿಮ್ ವಿರೋಧಿಯಾಗಿ ಯಾರಾದರೂ ಗುರುತಿಸುತ್ತಿದ್ದರೆ, ಅದಕ್ಕೆ ಯೋಗಿ ಆದಿತ್ಯನಾಥ್‍ರ ಕೊಡುಗೆ ಬಹಳ ಇದೆ. ಅವರು ಬಿಜೆಪಿಯ ಉಗ್ರ ಮುಖ. ಇಂಥವರು ಮುಖ್ಯಮಂತ್ರಿಯಾಗಿ ಆಯ್ಕೆಯಾದುದನ್ನು ಘೋಷಿಸಿದ ದಿನವೇ ಅವರ ವ್ಯಕ್ತಿತ್ವಕ್ಕೆ ತೀರಾ ಹೊಂದದ ಯೋಜನೆಯನ್ನು ಬಿಜೆಪಿ ಪ್ರಕಟಿಸಿದ್ದೇಕೆ? ಅದು ಆದಿತ್ಯನಾಥ್‍ರಿಗೆ ಬಿಜೆಪಿ ಪರೋಕ್ಷವಾಗಿ ರವಾನಿಸಿದ ಸಂದೇಶವೇ? ನಿಮ್ಮ ವಿಚಾರಧಾರೆಯಲ್ಲಿ ಸಮತೋಲನವಿಲ್ಲ ಎಂಬುದನ್ನು ಬಿಜೆಪಿ ಈ ಮೂಲಕ ಸಾರಿದೆಯೇ? ಅದೇ ವೇಳೆ, ಮುಹ್ಸಿನ್ ರಝಾರನ್ನು ಯೋಗಿ ಆದಿತ್ಯನಾಥ್‍ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ವಿಧಾನಸಭೆಯ ಸದಸ್ಯರೂ ಅಲ್ಲ, ವಿಧಾನ ಪರಿಷತ್‍ನ ಸದಸ್ಯರೂ ಅಲ್ಲ. ಇಷ್ಟಿದ್ದೂ, ಅವರು ಸಚಿವ ಸಂಪುಟಕ್ಕೆ ಯಾವ ಕಾರಣಕ್ಕಾಗಿ ಸೇರ್ಪಡೆಗೊಂಡರು? ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದ ಬಿಜೆಪಿಯು ಯಾಕೆ ಮುಸ್ಲಿಮ್ ಮುಕ್ತ ಸಚಿವ ಸಂಪುಟವನ್ನು ರಚಿಸಲಿಲ್ಲ? ಮುಸ್ಲಿಮರಿಗೆ ಟಿಕೆಟು ಕೊಡದ ಪಕ್ಷವೊಂದು ಹಾಗೆ ಮಾಡುವುದರಲ್ಲಿ ಅಚ್ಚರಿಯೇನೂ ಇಲ್ಲವಲ್ಲ. ಅಲ್ಲದೇ ತನ್ನ ವಿಚಾರಧಾರೆಯ ಮೇಲೆ ತನಗಿರುವ ಬದ್ಧತೆಯನ್ನು ಅದು ಸಾರ್ವಜನಿಕವಾಗಿ ಮತ್ತೊಮ್ಮೆ ತೋರ್ಪಡಿಸಿಕೊಂಡ ಹಾಗೂ ಆಗುತ್ತಿತ್ತು. ಒಂದು ಕಡೆ ಯೋಗಿ ಆದಿತ್ಯನಾಥ್‍ರ ಉಗ್ರ ವಿಚಾರಧಾರೆ, ಇನ್ನೊಂದು ಕಡೆ ಈ ವಿಚಾರಧಾರೆಗೆ ತಕ್ಕುದಾದ ಸಚಿವ ಸಂಪುಟ.. ಇದು ಹೆಚ್ಚು ಸೂಕ್ತವಾಗಿತ್ತಲ್ಲವೇ? ಮುಸ್ಲಿಮರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸದಿದ್ದುದನ್ನೇ ಸಾಮಥ್ರ್ಯವಾಗಿ ಬಿಂಬಿಸಿಕೊಂಡ ಪಕ್ಷ ಬಿಜೆಪಿ. ಸುಮಾರು 20% ಮುಸ್ಲಿಮರಿರುವ ರಾಜ್ಯವೊಂದರಲ್ಲಿ ಇಂಥದ್ದೊಂದು ನಿರ್ಧಾರಕ್ಕೆ ಗಟ್ಟಿ ಗುಂಡಿಗೆ ಬೇಕು. ಭಾರತದ ಜಾತ್ಯತೀತ ಗುಣವನ್ನೇ ಪ್ರಶ್ನಿಸುವ ನಿರ್ಧಾರ ಇದು. ಕನಿಷ್ಠ ಸಮತೋಲನಕ್ಕಾದರೂ ಒಂದಿಬ್ಬರು ಮುಸ್ಲಿಮರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕಾದ ಸಾಮಾಜಿಕ ಹೊಣೆಗಾರಿಕೆ ಅದರ ಮೇಲಿತ್ತು. ಆದರೆ ಹಾಗೆ ಮಾಡದಿರುವುದರಿಂದಲೇ ಲಾಭ ಇದೆ ಅಂದುಕೊಂಡ ಬಿಜೆಪಿಯು, ಸಚಿವ ಸಂಪುಟದ ರಚನೆಯ ಸಂದರ್ಭದಲ್ಲಿ ಆ ಲಾಭದ ಲೆಕ್ಕಾಚಾರವನ್ನು ಕೈ ಬಿಟ್ಟದ್ದೇಕೆ? ಇದು ಅನಿವಾರ್ಯವಾಗಿತ್ತೇ? ಹೊರಗಿನ ಉಗ್ರ ಮುಖಕ್ಕಿಂತ ಹೊರತಾದ ಮೃದು ಮುಖವನ್ನು ಅದು ಹೊಂದಿದೆಯೇ ಅಥವಾ ಹೊಂದಬೇಕಾದ ಒತ್ತಡವೊಂದು ಅದರ ಮೇಲಿದೆಯೇ? ಆ ಒತ್ತಡವನ್ನು ಹೇರಿದ್ದು ಯಾರು?
     ಬಹುಶಃ, ಸರ್ವ ಮನುಷ್ಯರ ಹಕ್ಕುಗಳಿಗಾಗಿ ಹಾಗೂ ತಾರತಮ್ಯ ರಹಿತ ಆಡಳಿತಕ್ಕಾಗಿ ಧ್ವನಿಯೆತ್ತುತ್ತಿರುವ ಎಲ್ಲರ ಗೆಲುವು ಇದು ಎಂದೇ ಅನಿಸುತ್ತದೆ. ಈ ದೇಶದಲ್ಲಿರುವ ಪ್ರಜಾತಂತ್ರದ ಮೇಲೆ ಇನ್ನೂ ಈ ಆದಿತ್ಯನಾಥ್‍ರ ವಿಚಾರಧಾರೆಗೆ ಪ್ರಾಬಲ್ಯವನ್ನು ಹೊಂದಲು ಸಾಧ್ಯವಾಗಿಲ್ಲ. ಚುನಾವಣೆಯ ಸಂದರ್ಭದಲ್ಲಿ ಅಗತ್ಯಕ್ಕಿಂತಲೂ ಉಗ್ರವಾಗಿರುವ ಈ ಮುಖ, ಚುನಾವಣೆಯ ಬಳಿಕ ಮೃದುವಾಗುತ್ತದೆ ಅಥವಾ ಮೃದುವಾಗಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಅದಕ್ಕೆ ಈ ದೇಶದ ಮಂದಿ ಪ್ರಜಾತಂತ್ರದ ಮೇಲೆ ಪ್ರಕಟಿಸುತ್ತಿರುವ ವಿಶ್ವಾಸವೇ ಕಾರಣ. ಪ್ರಜಾತಂತ್ರ ಈ ದೇಶದಲ್ಲಿ ಒಂದು ಸಾಧ್ಯತೆಯನ್ನು ಸೃಷ್ಟಿಸಿದೆ. ಕಟು ಏಕಮುಖೀ ಚಿಂತನೆಯೂ ನಿರ್ಣಾಯಕ ಸಂದರ್ಭದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲೇಬೇಕಾದ ಸಾಧ್ಯತೆ ಅದು. ಬಿಜೆಪಿಯೂ ಇದಕ್ಕೆ ಹೊರತಲ್ಲ. ಶಿವಸೇನೆಯೂ ಹೊರತಲ್ಲ. ಸದ್ಯ ಜಾತ್ಯತೀತ ಪಕ್ಷಗಳ ಸ್ವಯಂಕೃತಾಪರಾಧಗಳು ಜನರನ್ನು ನಿರಾಶರನ್ನಾಗಿಸಿದೆ. ಯಾವುದೇ ನಿರಾಶೆಯು ಕೆಲವೊಮ್ಮೆ ತಪ್ಪಾದ ಚಿಂತನೆಯನ್ನು ಬೆಂಬಲಿಸುವಷ್ಟು ಅವರು ನಿರುತ್ಸಾಹಿಯಾಗಿಸುವುದಿದೆ. ಅಂಥ ಸಂದರ್ಭದಲ್ಲಿ ಉಗ್ರ ವಿಚಾರಧಾರೆಯನ್ನು ಮೃದುವಾಗಿ ಕಾಣಬಹುದಾದ ಸಾಧ್ಯತೆಯೂ ಇದೆ. ಬಿಜೆಪಿ ಸದ್ಯ ಇಂಥದ್ದೊಂದು ವಾತಾವರಣದ ಲಾಭವನ್ನು ಪಡಕೊಳ್ಳುತ್ತಿದೆ. ಜೊತೆಗೇ ಅದರೊಳಗೊಂದು ಭೀತಿಯೂ ಇದೆ. ಇದೇ ಉಗ್ರ ವಿಚಾರಧಾರೆಯು ಎಲ್ಲಿಯ ವರೆಗೆ ಫಸಲು ಕೊಡಬಲ್ಲುದು? ಜಾತ್ಯತೀತ ಶಕ್ತಿಗಳು ಮುಂದಕ್ಕೆ ಮತ್ತೆ ತಮ್ಮ ತಪ್ಪುಗಳಿಂದ ಹೊರಬಂದು ದೇಶದ ಜಾತ್ಯತೀತ ಸ್ವರೂಪಕ್ಕೆ ಮತ್ತೆ ಚೌಕಟ್ಟನ್ನು ಕಟ್ಟತೊಡಗಿದರೆ, ಆಗ ಈ ವಿಚಾರಧಾರೆಯೂ ಇಷ್ಟೇ ವ್ಯಾಪಕವಾಗಿ ಸ್ವಾಗತಿಸಲ್ಪಡಬಹುದೇ?
ಪ್ರಜಾತಂತ್ರ ವ್ಯವಸ್ಥೆ ಇರುವವರೆಗೆ ಏಕಮುಖ ವಿಚಾರಧಾರೆ ಹೆಚ್ಚು ದಿನ ಬಾಳಿಕೆ ಬರಲು ಸಾಧ್ಯವಿಲ್ಲ. ಈ ದೇಶಕ್ಕೊಂದು ವಿಚಾರಧಾರೆಯನ್ನು ಕಟ್ಟಿಕೊಟ್ಟದ್ದು ಸಂವಿಧಾನ. ಕಾಂಗ್ರೆಸ್ ಆಗಲಿ, ಜನತಾ ಪರಿವಾರವಾಗಲಿ ಅಥವಾ ಬಿಜೆಪಿಯೇ ಆಗಲಿ ಸಂವಿಧಾನವನ್ನು ತಿರಸ್ಕರಿಸಿ ಮಾತಾಡಿಲ್ಲ. ಯಾಕೆಂದರೆ, ಹಾಗೆ ಮಾಡುವುದು ಅತ್ಯಂತ ಅಪಾಯಕಾರಿ ಎಂಬುದು ಅವುಗಳಿಗೆ ಗೊತ್ತು. ಯೋಗಿ ಆದಿತ್ಯನಾಥ್‍ರು ಇವತ್ತು ಏನನ್ನು ಪ್ರತಿಪಾದಿಸುತ್ತಿದ್ದಾರೋ ಅದು ಸಂಪೂರ್ಣ ಸಾಂವಿಧಾನಿಕವಲ್ಲ ಎಂಬುದು ಈ ದೇಶದ ಜನರಿಗೆ ಗೊತ್ತು. ಆದ್ದರಿಂದಲೇ ಅವರ ಮಾತುಗಳಿಗೆ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಕೆಲವೊಮ್ಮೆ ಬಿಜೆಪಿಯೇ ಇಂಥ ಮಾತುಗಳಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದೆ. ನಿಜವಾಗಿ, ಬಿಜೆಪಿಯ ವಿಚಾರಧಾರೆ ಸಂವಿಧಾನಕ್ಕೆ ಪೂರಕ ಅಲ್ಲದೇ ಇರಬಹುದು. ಆದರೆ, ಅದನ್ನು ಧೈರ್ಯದಿಂದ ಪ್ರಸ್ತುತಪಡಿಸಲು ಈ ದೇಶದ ಪ್ರಜಾತಂತ್ರ ವ್ಯವಸ್ಥೆ ಅನುವು ಮಾಡಿಕೊಡುತ್ತಿಲ್ಲ. ಪ್ರಜಾತಂತ್ರವನ್ನು ದುರ್ಬಲಗೊಳಿಸುವ ಸಣ್ಣ ಪ್ರಯತ್ನವೂ ಇಲ್ಲಿ ಈಗಲೂ ದೊಡ್ಡ ಚರ್ಚಾ ವಿಷಯವಾಗುತ್ತಿದೆ. ಆದ್ದರಿಂದಲೇ ಬಿಜೆಪಿ ಚುನಾವಣೆಯ ಸಂದರ್ಭದಲ್ಲಿ ಏನೇ ಕಾರ್ಯತಂತ್ರವನ್ನು ರೂಪಿಸಲಿ ಮತ್ತು ಹೇಳಿಕೆಗಳನ್ನು ಕೊಡಲಿ, ನಿರ್ಣಾಯಕ ಸಂದರ್ಭದಲ್ಲಿ ಜಾತ್ಯತೀತ ಆಗಲೇ ಬೇಕಾದ ಸಂದಿಗ್ಧಕ್ಕೆ ಸಿಲುಕುತ್ತಿದೆ. ಇದಕ್ಕಿರುವ ಇನ್ನೊಂದು ಕಾರಣ, ಸದ್ಯದ ವಾತಾವರಣ ಯಾವ ಸಮಯದಲ್ಲೂ ಬದಲಾಗಿ ಬಿಡಬಹುದು ಅನ್ನುವುದು. ಇವತ್ತು ಜಾತ್ಯತೀತ ಪಕ್ಷಗಳ ವಿರುದ್ಧ ಜನರು ಮುನಿಸಿರಬಹುದು. ನಾಳೆ, ಬಿಜೆಪಿಯ ಉಗ್ರ ವಿಚಾರಧಾರೆಯ ವಿರುದ್ಧವೂ ಇದೇ ವಾತಾವರಣ ಸೃಷ್ಟಿಯಾಗಬಾರದು ಎಂದೇನಿಲ್ಲ. ಆದ್ದರಿಂದಲೇ, ಅದು ಸಮತೋಲನದ ಹೆಜ್ಜೆ ಹಾಕುತ್ತಿದೆ. ಮುಹ್ಸಿನ್ ರಝಾ ಮತ್ತು ಶೌಚಾಲಯಗಳು ಈ ಸಂದಿಗ್ಧತೆಯನ್ನು ಪ್ರತಿನಿಧಿಸುವ ಎರಡು ಉದಾಹರಣೆಗಳು. ನಿಜವಾಗಿ, ಬಿಜೆಪಿಯ ಭಾಷೆಯಲ್ಲಿ ಶೌಚಾಲಯ ಕಟ್ಟಿಸುವುದೆಂದರೆ ಮುಸ್ಲಿಮ್ ಓಲೈಕೆ ಮತ್ತು ತುಷ್ಠೀಕರಣ. ಕಾಂಗ್ರೆಸ್ ಅನ್ನು ಈ ಹಿಂದೆ ಹಲವು ಬಾರಿ ಇದೇ ಕಾರಣಕ್ಕಾಗಿ ಅದು ಹೀಗೆ ಟೀಕಿಸಿದೆ. ಆದರೆ, ಈಗ ಅದನ್ನೇ ಮಾಡಬೇಕಾದ ಅನಿವಾರ್ಯತೆ ಅದಕ್ಕಿದೆ. ಇದು ಪ್ರಜಾತಂತ್ರದ ಗೆಲುವು. ಈ ಗೆಲುವೇ ಮುಂದಿನ ಆಶಾವಾದವೂ ಹೌದು.

Monday 20 March 2017

ಪದೇ ಪದೇ ‘ಸರ್ತಾಜ್’ಗಳೇ ಯಾಕೆ ದೇಶನಿಷ್ಠೆಯನ್ನು ಪ್ರಕಟಿಸಬೇಕು?

      ಕಳೆದ ವಾರ ಎರಡು ಮಹತ್ವಪೂರ್ಣ ಘಟನೆಗಳು ನಡೆದುವು. 1. ಲಕ್ನೋದಲ್ಲಿ ಕೊಲ್ಲಲ್ಪಟ್ಟ ಶಂಕಿತ ಉಗ್ರ ಸೈಫುಲ್ಲಾನ ಬಗ್ಗೆ ಆತನ ತಂದೆ ಮುಹಮ್ಮದ್ ಸರ್ತಾಜ್‍ರ ನಿಷ್ಠುರ ನಿಲುವು. ಅವರು ತನ್ನ ಮಗನ ಮೃತದೇಹವನ್ನು ಪಡೆಯಲು ನಿರಾಕರಿಸಿದರು. ದೇಶಕ್ಕೆ ನಿಷ್ಠೆಯನ್ನು ತೋರದವನು ನಮಗೆ ನಿಷ್ಠೆ ತೋರಬಲ್ಲನೇ ಎಂದವರು ಪ್ರಶ್ನಿಸಿದರು. ಅವರ ಈ ನಿಲುವಿಗೆ ಎಲ್ಲೆಡೆಯಿಂದ ಸ್ವಾಗತ ಲಭಿಸಿತು. ಮಾಧ್ಯಮಗಳು ಹೊಗಳಿದುವು. ಗೃಹ ಸಚಿವ ರಾಜನಾಥ್ ಸಿಂಗ್ ಪ್ರಶಂಸಿಸಿದರು. ಸಂಸತ್ತು ಶ್ಲಾಘಿಸಿತು.
     2. ಇದೇ ಸೈಫುಲ್ಲಾ ಪ್ರಕರಣದಲ್ಲಿ ಕೆಲವರ ಬಂಧನವೂ ನಡೆಯಿತು. ಇದರಲ್ಲಿ ವಾಯು ದಳದ ಮಾಜಿ ಅಧಿಕಾರಿ ಜಿ.ಎಂ. ಖಾನ್ ಎಂಬವರೂ ಸೇರಿದ್ದರು. ಇವರ ಮಕ್ಕಳು ತಂದೆಯ ಬಗ್ಗೆ ತೀವ್ರ ಅಸಂತೋಷವನ್ನು ವ್ಯಕ್ತಪಡಿಸಿದರು. ಅಬ್ದುಲ್ ಕಾದಿರ್ ಅನ್ನುವ ಅವರ ಮಗ ಮಾಧ್ಯಮಗಳೊಂದಿಗೆ ಮಾತಾಡಿದರು. ದೇಶದ ಶತ್ರು ನಮ್ಮ ಶತ್ರುವೂ ಆಗಿದ್ದಾನೆ ಎಂದವರು ಪ್ರತಿಕ್ರಿಯಿಸಿದರು. ಈ ಹೇಳಿಕೆಯೂ ವ್ಯಾಪಕವಾಗಿ ಸ್ವಾಗತಿಸಲ್ಪಟ್ಟಿತು.
      ಮಾರ್ಚ್ 7ರಂದು ಮಧ್ಯ ಪ್ರದೇಶದ ಭೋಪಾಲ್‍ನಿಂದ ಉಜ್ಜೈನಿಗೆ ಸಂಚರಿಸುತ್ತಿದ್ದ ಪ್ರಯಾಣಿಕರ ರೈಲಿನಲ್ಲಿ ಸ್ಫೋಟಕವೊಂದು ಸಿಡಿದು 8 ಮಂದಿ ಗಾಯಗೊಂಡ ಬಳಿಕ ನಡೆದ ಬೆಳವಣಿಗೆಗಳಿವು. ಘಟನೆ ಖಂಡನಾರ್ಹ. ಯಾವುದೇ ಒಂದು ಕೃತ್ಯ ಖಂಡನಾರ್ಹವೆನಿಸಿಕೊಳ್ಳುವುದಕ್ಕೆ ಆ ಕೃತ್ಯದಲ್ಲಿ ಭಾಗಿಯಾದವರು ಯಾರು, ಸಂತ್ರಸ್ತರ ಸಂಖ್ಯೆ ಎಷ್ಟು ಮತ್ತು ಅವರು ಯಾವ ಧರ್ಮಕ್ಕೆ ಸೇರಿದವರು ಎಂಬುದು ಮುಖ್ಯ ಆಗಬಾರದು. ಮನುಷ್ಯರನ್ನು ಕೊಲ್ಲುವ ಅಥವಾ ಬೆದರಿಸುವ ಅಥವಾ ಅವಮಾನಿಸುವ ಉದ್ದೇಶವು ಕೃತ್ಯವೊಂದರ ಹಿಂದಿದೆ ಎಂಬುದು ದಿಟವಾದ ತಕ್ಷಣ, ನಾವದನ್ನು ಪ್ರಶ್ನಿಸಬೇಕು. ಕೃತ್ಯದಲ್ಲಿ ಭಾಗಿಯಾದವರನ್ನು ಖಂಡಿಸಬೇಕು. ಶಂಕಿತ ಉಗ್ರ ಸೈಫುಲ್ಲಾನ ತಂದೆ ಸರ್ತಾಜ್ ಮತ್ತು ಜಿ.ಎಂ. ಖಾನ್‍ರ ಮಗ ಅಬ್ದುಲ್ ಕಾದಿರ್‍ರ ನಿಲುವು ಮುಖ್ಯವಾಗುವುದು ಈ ಹಿನ್ನೆಲೆಯಲ್ಲಿ. ರಾಜನಾಥ್ ಸಿಂಗ್ ಕೂಡಾ ಅದರ ಮಹತ್ವವನ್ನು ಗುರುತಿಸಿದ್ದಾರೆ. ಆದ್ದರಿಂದಲೇ, ಕೆಲವು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಗುಜರಾತ್‍ನಲ್ಲಿ ಸಾವಿರಾರು ಮಂದಿಯ ಹತ್ಯೆ ನಡೆಯಿತು. ಅಸಂಖ್ಯ ಅತ್ಯಾಚಾರ ಪ್ರಕರಣಗಳು ನಡೆದುವು. ಆದರೆ ಒಬ್ಬನೇ ಒಬ್ಬ ಮುಹಮ್ಮದ್ ಸರ್ತಾಜ್ ಅಲ್ಲಿ ಕಾಣಿಸಿಕೊಳ್ಳಲಿಲ್ಲ, ಯಾಕೆ? ಉತ್ತರ ಪ್ರದೇಶದ ಮುಝಫ್ಫರ್ ನಗರ್‍ನಲ್ಲಿ 60ಕ್ಕಿಂತಲೂ ಹೆಚ್ಚು ಮಂದಿಯ ಹತ್ಯೆ ನಡೆಯಿತು. ಅತ್ಯಾಚಾರಗಳಾದುವು. ಕೊಲೆಗಾರರ ಪಟ್ಟಿಯನ್ನು ಪೊಲೀಸರು ಬಿಡುಗಡೆಗೊಳಿಸಿದರು. ಆದರೂ ಒಬ್ಬನೇ ಒಬ್ಬ ಸರ್ತಾಜ್ ಅಲ್ಲಿ ಈವರೆಗೂ ಕಾಣಿಸಿಕೊಂಡಿಲ್ಲವಲ್ಲ, ಏನಿದರ ಅರ್ಥ? ಮುಹಮ್ಮದ್ ಅಖ್ಲಾಕ್ ಎಂಬ ವೃದ್ಧನನ್ನು ತುಳಿದು ಹತ್ಯೆ ಮಾಡಲಾಯಿತು. ಅದರಲ್ಲಿ ಭಾಗಿಯಾದವರು ಯಾರೆಂಬುದನ್ನೂ ಪೊಲೀಸರು ಹೇಳಿದ್ದಾರೆ. ಆದರೂ ಆ ಆರೋಪಿಗಳಿಂದ ಅಂತರ ಕಾಯ್ದುಕೊಳ್ಳುವ ಅಬ್ದುಲ್ ಕಾದಿರ್‍ಗಳು, ಸರ್ತಾಜ್‍ಗಳು ಇನ್ನೂ ಕಾಣಿಸಿಕೊಂಡಿಲ್ಲವೇಕೆ? ಒಂದು ಕಡೆ, ಮುಸ್ಲಿಮರ ದೇಶ ನಿಷ್ಠೆಯನ್ನು ಇದೇ ರಾಜನಾಥ್ ಸಿಂಗ್‍ರ ಬಳಗ ಆಗಾಗ ನಿಕಷಕ್ಕೆ ಒಡ್ಡುತ್ತಲೇ ಇದೆ. ಪಾಕಿಸ್ತಾನಕ್ಕೆ ಕಳುಹಿಸುವ ಬೆದರಿಕೆಯನ್ನು ಹಾಕುತ್ತಲೂ ಇರುತ್ತದೆ. ಈ ಹಿಂದೆ ಕೇರಳದಲ್ಲೂ ಸರ್ತಾಜ್‍ರಂಥದ್ದೇ  ಘಟನೆಯೊಂದು ನಡೆದಿತ್ತು. ಭಾರತ-ಪಾಕ್ ಗಡಿಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಕೇರಳದ ಯುವಕನ ತಂದೆಯೋರ್ವರು ಮಗನ ಮೃತದೇಹವನ್ನು ಪಡೆಯಲು ನಿರಾಕರಿಸಿದ್ದರು. ಯಾಕೆ ರಾಜ್‍ನಾಥ್ ಸಿಂಗ್‍ರ ಬಳಗದಿಂದ ‘ದೇಶನಿಷ್ಠೆ’ಯನ್ನು ಮತ್ತೆ ಮತ್ತೆ ಅನುಮಾನದ ಮೊನೆಯಲ್ಲಿರಿಸಿಕೊಂಡ ಸಮುದಾಯದಿಂದಲೇ ಗರಿಷ್ಠ ದೇಶನಿಷ್ಠೆಯ ನಿಲುವುಗಳು ಪ್ರಕಟವಾಗುತ್ತಿವೆ? ಇಂಥ ನಿಲುವುಗಳನ್ನು ಪ್ರದರ್ಶಿಸಬೇಕಾದ ನೂರಾರು ಸಂದರ್ಭಗಳು ಎದುರಾಗುತ್ತಿದ್ದರೂ ಒಂದೇ ಒಂದು ಬಾರಿ ಇಂಥ ದೇಶನಿಷ್ಠೆಯನ್ನು ಪ್ರದರ್ಶಿಸಲು ಸಿಂಗ್ ಬಳಗ ಮುಂದಾಗಿಲ್ಲವಲ್ಲ, ಇದು ಏನನ್ನು ಸೂಚಿಸುತ್ತದೆ? ಕೇವಲ 8 ಮಂದಿ ಗಾಯಗೊಂಡ ಪ್ರಕರಣಕ್ಕೆ ತಂದೆಯೋರ್ವ ಈ ಮಟ್ಟದಲ್ಲಿ ಪ್ರತಿಕ್ರಿಯಿಸುತ್ತಾರೆಂದಾದರೆ ಮತ್ತು ಅದು ರಾಜನಾಥ್ ಸಿಂಗ್‍ರು ಪಾರ್ಲಿಮೆಂಟ್‍ನಲ್ಲಿ ಪ್ರಸ್ತಾಪಿಸಿ ಗೌರವಿಸುವಷ್ಟು ಪ್ರಾಮುಖ್ಯತೆ ಉಳ್ಳದ್ದೆಂದಾದರೆ ಇಂಥ ನಿಲುವನ್ನು ಅವರ ಬೆಂಬಲಿಗ ಗುಂಪಿನಿಂದ ನಾವು ಯಾಕೆ ನಿರೀಕ್ಷಿಸಬಾರದು? ಸರ್ತಾಜ್‍ರು ಬರೇ ಪೊಲೀಸರ ಹೇಳಿಕೆಯನ್ನೇ ನಂಬಿಕೊಂಡು ಇಂಥದ್ದೊಂದು ಕಠಿಣ ತೀರ್ಮಾನವನ್ನು ಕೈಗೊಂಡಿದ್ದಾರೆ. ನಿಜಕ್ಕೂ, ಕೊಲ್ಲಲ್ಪಟ್ಟ ಸೈಫುಲ್ಲಾ ಮತ್ತು ಬಂಧಿತ ಖಾನ್ ಉಗ್ರರು ಹೌದೋ ಅಲ್ಲವೋ ಅನ್ನುವುದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಿದೆ. ಆದರೆ, ಮನುಷ್ಯ ವಿರೋಧಿ ಕ್ರೌರ್ಯದ ಆರೋಪದಲ್ಲಿ ಪೊಲೀಸರು ಬಂಧಿಸಿದ ಮತ್ತು ಅಪರಾಧಿಗಳಾಗಿ ಗುರುತಿಸಿದವರಲ್ಲಿ ರಾಜನಾಥ್ ಸಿಂಗ್ ಬಳಗಕ್ಕೆ ಸೇರಿದವರ ಸಂಖ್ಯೆ ಎಷ್ಟಿರಬಹುದು? ಬರೇ ಗುಜರಾತ್, ಮುಝಫ್ಫರ್ ನಗರ್, ಅಸ್ಸಾಂ ಎಂದಷ್ಟೇ ಅಲ್ಲ, ದೇಶದಾದ್ಯಂತ ಇಂಥ ಮನುಷ್ಯ ವಿರೋಧಿ ಪ್ರಕರಣಗಳು ಅಸಂಖ್ಯ ನಡೆದಿವೆ. ಕೋಮುಗಲಭೆಗಳ ಹೆಸರಲ್ಲಿ ನಡೆದ ಕ್ರೌರ್ಯಗಳು ಈ ದೇಶದಲ್ಲಿ ಎಷ್ಟು ಸರ್ತಾಜ್‍ಗಳನ್ನು ಕಣ್ಣೀರಿಗೊಳಪಡಿಸಿವೆ, ಎಷ್ಟು ವಿಧವೆಯರನ್ನು, ಅನಾಥರನ್ನು, ತಬ್ಬಲಿ ಮಕ್ಕಳನ್ನು ಸೃಷ್ಟಿಸಿವೆ ಎಂಬುದು ಎಲ್ಲರಿಗೂ ಗೊತ್ತು. ಕಳೆದವಾರವಷ್ಟೇ ರಂಗಕರ್ಮಿ ಯೋಗೇಶ್ ಮಾಸ್ಟರ್‍ರಿಗೆ ಮಸಿ ಬಳಿಯಲಾಗಿದೆ. ಹಲ್ಲೆ ನಡೆಸಲಾಗಿದೆ. ಇದರಲ್ಲಿ ಭಾಗಿಯಾದವರಿಗೂ ರಾಜ್‍ನಾಥ್ ಸಿಂಗ್‍ರ ಪಕ್ಷದ ಬೆಂಬಲಿಗರಿಗೂ ನಡುವೆ ಏನೇನು ಸಂಬಂಧ ಇವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ನೈತಿಕ ಪೊಲೀಸ್‍ಗಿರಿಯ ಹೆಸರಲ್ಲಿ ದಾಳಿ ನಡೆಸುವವರೂ ಬೆತ್ತಲೆಗೊಳಿಸಿ ಥಳಿಸಿವವರೂ ಈ ಬಳಗದಲ್ಲಿದ್ದಾರೆ. ಹೀಗಿದ್ದೂ ಯಾಕೆ ರಾಜನಾಥ್ ದೇಶಪ್ರೇಮಿ ಬಳಗದ ಒಬ್ಬನೇ ಒಬ್ಬ ತಂದೆ ‘ಸರ್ತಾಜ್’ ಆಗುತ್ತಿಲ್ಲ? ಬಾಂಬ್ ಸ್ಫೋಟಿಸುವ ಮೂಲಕ ಜನರನ್ನು ಸಾಯಿಸುವುದು ಹೇಗೆ ಸಂವಿಧಾನ ವಿರೋಧಿಯೋ ಬಂದೂಕು, ಬೆಂಕಿ, ತಲವಾರು.. ಇತ್ಯಾದಿ ಆಯುಧಗಳ ಮೂಲಕ ಜನರನ್ನು ಸಾಯಿಸುವುದು ಕೂಡ ಸಂವಿಧಾನ ವಿರೋಧಿಯೇ. ಮಸಿ ಬಳಿದು ಅವಮಾನಿಸುವುದು ಕೂಡ ಸಂವಿಧಾನ ವಿರೋಧಿಯೇ. ಅತ್ಯಾಚಾರವೂ ಇದೇ ಪಟ್ಟಿಯಲ್ಲಿ ಬರುತ್ತದೆ. ಮನುಷ್ಯರನ್ನು ಅನ್ಯಾಯವಾಗಿ ಸಾಯಿಸುವ ಎಲ್ಲವೂ ಎಲ್ಲರೂ ಮನುಷ್ಯ ವಿರೋಧಿಗಳೇ. ದೇಶದ್ರೋಹಿಗಳೇ. ಆದರೆ, ಮುಸ್ಲಿಮರ ದೇಶನಿಷ್ಠೆಯನ್ನು ಆಗಾಗ ಪ್ರಶ್ನಿಸುವ ರಾಜನಾಥ್ ಸಿಂಗ್‍ರ ಬಳಗ ಈ ವರೆಗೂ ಒಬ್ಬನೇ ಒಬ್ಬ ಸರ್ತಾಜ್‍ರನ್ನು ತಯಾರಿಸಿಲ್ಲ. ತಮ್ಮ ಮಕ್ಕಳಿಂದ ಅಂತರ ಕಾಯ್ದುಕೊಂಡ ದೇಶಪ್ರೇಮಿ ತಂದೆಯನ್ನು ಆ ಬಳಗ ಇನ್ನೂ ಸೃಷ್ಟಿಸಿಲ್ಲ. ಇಷ್ಟಿದ್ದೂ, ಆ ಬಳಗ ತಮ್ಮನ್ನು ದೇಶಪ್ರೇಮಿಯಾಗಿ ಗುರುತಿಸಿಕೊಳ್ಳುತ್ತಿದೆ. ಮುಸ್ಲಿಮರ ದೇಶನಿಷ್ಠೆಯನ್ನು ಅನುಮಾನಿಸುತ್ತಿದೆ. ಇದಕ್ಕೆ ಏನೆನ್ನಬೇಕು? ಇದು ಸತ್ಯದ್ರೋಹ, ನ್ಯಾಯದ್ರೋಹ, ಧರ್ಮದ್ರೋಹ, ದೇಶದ್ರೋಹ, ಆತ್ಮವಂಚನೆಯಲ್ಲವೇ? ಸರ್ತಾಜ್‍ರನ್ನು ಹೊಗಳುವ ನೈತಿಕ ಅರ್ಹತೆ ರಾಜ್‍ನಾಥ್ ಸಿಂಗ್ ಮತ್ತು ಅವರ ಬಳಗಕ್ಕೆ ನಿಜಕ್ಕೂ ಇದೆಯೇ? ಯಾಕೋ ವಿಷಾದವೆನಿಸುತ್ತಿದೆ.

Saturday 4 March 2017

ಡೈರಿ ಮತ್ತು ನೈತಿಕತೆಯ ಪ್ರಶ್ನೆ

     ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಮನೆಯ ಮೇಲೆ 2016 ಮಾರ್ಚ್ 15ರಂದು ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಸಿಕ್ಕಿದೆಯೆನ್ನಲಾಗುವ ಡೈರಿಯು ಈ ಹಿಂದಿನ ಹಲವು ಡೈರಿಗಳ ಬಗ್ಗೆ ಕುತೂಹಲ ತಾಳುವಂತೆ ಮಾಡಿದೆ. ಮೊದಲನೆಯದಾಗಿ, ರಾಜಕಾರಣಿಗಳು ಡೈರಿ ಬರೆದಿಡುತ್ತಾರೆಂಬುದೇ ಅದ್ಭುತ. ಒಂದುವೇಳೆ, ಬರೆದಿಟ್ಟರೂ ಅದು ನೂರು ಶೇಕಡಾ ಪ್ರಾಮಾಣಿಕವಾಗಿರುತ್ತದೆ ಎಂದು ನಾವೆಲ್ಲ ನಂಬುವುದು ಇನ್ನೊಂದು ಅದ್ಭುತ. ಇನ್ನು, ಅವರು ಡೈರಿ ಬರೆಯುತ್ತಾರೆ ಮತ್ತು ಅದು ಪ್ರಾಮಾಣಿಕವೂ ಆಗಿರುತ್ತದೆ ಎಂದೇ ನಾವು ನಂಬಬೇಕೆಂದುಕೊಂಡರೂ, ಸಿದ್ಧರಾಮಯ್ಯನವರ ರಾಜಿನಾಮೆಯೊಂದಿಗೆ ಈ ಹಿಂದಿನ ಎಲ್ಲ ‘ಡೈರಿ ಪಾಪಗಳೂ’ ಪರಿಹಾರವಾಗುತ್ತವೆ ಎಂಬಂತೆ ವರ್ತಿಸುತ್ತಿರುವ ಬಿಜೆಪಿಯ ನಿಲುವು ಪರಮಾದ್ಭುತ.
      ನೈತಿಕತೆ ಎಂಬ ಬಹು ಅಮೂಲ್ಯ ಮತ್ತು ಬಹು ಭಾರವುಳ್ಳ ಮೌಲ್ಯಕ್ಕೆ ಚಿಕ್ಕಾಸಿನ ಗೌರವವನ್ನೂ ನೀಡದವರು ಮತ್ತು ಆ ಶಬ್ದವನ್ನು ಪದೇ ಪದೇ ಬಳಸಿ ಅದರ ಮಾನವನ್ನು ಹರಾಜು ಹಾಕುತ್ತಿರುವವರು ರಾಜಕಾರಣಿಗಳು. ಗೋವಿಂದರಾಜು ಡೈರಿಯ ನೈತಿಕ ಹೊಣೆ ಹೊತ್ತು ಸಿದ್ಧರಾಮಯ್ಯ ರಾಜಿನಾಮೆ ನೀಡಬೇಕೆಂದು ಯಡಿಯೂರಪ್ಪ ಆಗ್ರಹಿಸುತ್ತಿದ್ದಾರೆ. ಹಾಗಾದರೆ, ಗಣಿ ದೊರೆ ಜನಾರ್ಧನ ರೆಡ್ಡಿಯ ಬಂಟ ಖಾರದಪುಡಿ ಮಹೇಶನ ಡೈರಿಯ ಬಗ್ಗೆ ಅವರ ನಿಲುವು ಏನು? ಗಣಿ ಹಗರಣವನ್ನು ತನಿಖೆ ನಡೆಸಿದ್ದ ಯು.ವಿ. ಸಿಂಗ್‍ರ ವರದಿಯಲ್ಲಿ ಆ ಡೈರಿಯ ವಿವರವಿತ್ತಲ್ಲ, ಅದಕ್ಕಾಗಿ ಯಾರು ನೈತಿಕ ಹೊಣೆ ಹೊರಬೇಕು? ಗೋವಿಂದರಾಜು ಅವರ ಡೈರಿಯಲ್ಲಿರುವ ಫಲಾನುಭವಿಗಳ ಹೆಸರಾದರೋ ಸಂಕೇತಾಕ್ಷರಗಳಲ್ಲಿದೆ. ಆರ್‍ಜಿ, ಎಸ್‍ಜಿ, ಕೆಜೆಜಿ, ಡಿಕೆಎಸ್ ಹೀಗೆ. ಇದನ್ನು ನಾವು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಜಾರ್ಜ್, ಶಿವಕುಮಾರ್… ಎಂದೆಲ್ಲ ನಮ್ಮ ಗ್ರಹಿಕೆಗೆ ತಕ್ಕಂತೆ ವಿಸ್ತರಿಸಿ ಓದಬೇಕು. ಆದರೆ ಖಾರದಪುಡಿ ಡೈರಿಯಲ್ಲಿ ಇಂಥ ಸಿಕ್ಕುಗಳೇ ಇಲ್ಲ. ಜುಪಿಟರ್ ಏವಿಯೇಶನ್ ಎಂಬ ನೇರ ಉಲ್ಲೇಖವೇ ಇದೆ. ಈ ಜುಪಿಟರ್‍ನ ಮಾಲಿಕ ಯಾರು ಮತ್ತು ಅವರು ಯಾವ ಪಕ್ಷದ ರಾಜ್ಯಸಭಾ ಸದಸ್ಯರು ಎಂಬುದು ಯಡಿಯೂರಪ್ಪರಿಗೆ ಚೆನ್ನಾಗಿಯೇ ಗೊತ್ತು. ಬಿಜೆಪಿಯ ಕೋಶಾಧಿಕಾರಿಯಾಗಿದ್ದ ಲೆಹರ್ ಸಿಂಗ್‍ರ ನಿವಾಸದ ಮೇಲೆ 2013ರಲ್ಲಿ ದಾಳಿಯಾಗಿತ್ತು. ಆಗ ಸಿಕ್ಕಿದ ಡೈರಿಯಲ್ಲಿ ಬಿಜೆಪಿಯ ವರಿಷ್ಠರಿಗೆ 391 ಕೋಟಿ ರೂಪಾಯಿ ಪಾವತಿಸಿದ ವರದಿಗಳಿವೆ ಎಂದು ಹೇಳಲಾಗುತ್ತದೆ. ಅಲ್ಲದೇ, ಸ್ವತಃ ಲೆಹರ್ ಸಿಂಗ್ ಅವರೇ ಒಂದು ಸಂದರ್ಭದಲ್ಲಿ ಬರೆದ ಪತ್ರದಲ್ಲೂ ಕಪ್ಪ ಕಾಣಿಕೆಯ ಉಲ್ಲೇಖಗಳಿದ್ದುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇನ್ನು, ರಾಜ್ಯವನ್ನು ಬಿಟ್ಟು ರಾಷ್ಟ್ರಮಟ್ಟವನ್ನು ಪರಿಗಣಿಸಿದರೂ ಅಲ್ಲಿಯ ನೈತಿಕತೆಯೇನೂ ಭವ್ಯವಾಗಿಲ್ಲ. ದಶಕಗಳ ಹಿಂದಿನ ಜೈನ-ಹವಾಲಾ ಡೈರಿಯಿಂದ ಇತ್ತೀಚೆಗಿನ ಸಹರಾ-ಬಿರ್ಲಾ ಕಂಪೆನಿಗಳ ಡೈರಿಯವರೆಗೆ ಎಲ್ಲವೂ ಕೊಳಕೇ. ಸಹರಾ-ಬಿರ್ಲಾ ಡೈರಿಯಂತೂ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನೇ ಅನುಮಾನದ ಮೊನೆಯಲ್ಲಿಟ್ಟಿದೆ. ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಸಲ್ಲಿಸಲಾದ ಕಪ್ಪ ಕಾಣಿಕೆಯ ಉಲ್ಲೇಖಗಳು ಅದರಲ್ಲಿವೆ ಎಂದು ಹೇಳಲಾಗುತ್ತದೆ. ಒಂದುವೇಳೆ, ‘ನೈತಿಕ ಹೊಣೆ’ ಎಂಬುದು ನಿಜಕ್ಕೂ ಇತರೆಲ್ಲ ಹೊಣೆಗಳಿಗಿಂತ ಶ್ರೇಷ್ಠವೇ ಆಗಿದ್ದರೆ, ಮೊಟ್ಟ ಮೊದಲು ‘ಸನ್ಯಾಸಿ’ ಆಗಬೇಕಾದವರು ಯಾರು? ಅದು ಬಿಟ್ಟು, 2016 ಮಾರ್ಚ್ 15ಕ್ಕಿಂತ ಮೊದಲಿನ ಯಾವ ಡೈರಿಗೂ ಅನ್ವಯವಾಗದ ನಿಯಮಗಳೆಲ್ಲ ‘ಗೋವಿಂದರಾಜು’ ಡೈರಿಗೆ ಅನ್ವಯವಾಗಬೇಕೆಂದು ವಾದಿಸುವುದು ಯಾವ ಬಗೆಯ ನೈತಿಕತೆ? ಹಾಗಂತ,
      ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪರಮ ಪವಿತ್ರ ಮತ್ತು ಬಿಜೆಪಿ ಪರಮ ನೀಚ ಎಂಬ ಅಭಿಪ್ರಾಯ ಈ ದೇಶದ ಯಾರಲ್ಲೂ ಇರುವ ಸಾಧ್ಯತೆ ಇಲ್ಲ. ಇಂಥದ್ದೊಂದು ವರ್ಗೀಕರಣದ ಹೊರಗೆ ಈ ಎರಡೂ ಪಕ್ಷಗಳು ಇವತ್ತು ಬಂದು ನಿಂತಿವೆ. ಆದ್ದರಿಂದಲೇ, ಬಿಜೆಪಿಯ ಡೈರಿಯ ಆರೋಪಕ್ಕೆ ಕಾಂಗ್ರೆಸ್ ಇನ್ನೊಂದು ಡೈರಿಯ ಮೂಲಕವೇ ಉತ್ತರಕೊಡುವ ಮಟ್ಟಕ್ಕೆ ಇಳಿದಿರುವುದು. ಒಂದು ತಪ್ಪನ್ನು ಇನ್ನೊಂದು ತಪ್ಪಿನ ಮೂಲಕ ಸಮರ್ಥಿಸಿಕೊಳ್ಳುವುದನ್ನೇ ರಾಜಕೀಯ ಎಂದು ಅಂದುಕೊಳ್ಳಬೇಕಾದ ಸ್ಥಿತಿಗೆ ನಾವೆಲ್ಲ ತಲುಪಿ ಬಿಟ್ಟಿದ್ದೇವೆ. ನಿಜವಾಗಿ, ಉದ್ಯಮಿಗಳಿಂದ ಅಥವಾ ಬೇನಾಮಿ ಮೂಲಗಳಿಂದ ರಾಜಕೀಯ ಪಕ್ಷಗಳು ಹಣ ಸಂಗ್ರಹಿಸುವುದು ಎಂಟನೇ ಅದ್ಭುತವೇನೂ ಅಲ್ಲ. ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯೇ ಸಾವಿರಾರು ರೂ. ಖರ್ಚು ಮಾಡಬೇಕಾದ ಅನಿವಾರ್ಯತೆಯಿರುವ ದೇಶದಲ್ಲಿ ರಾಷ್ಟ್ರೀಯ ಪಕ್ಷವೊಂದು ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವುದೆಂದರೆ ಅದು ಎಷ್ಟು ಕೋಟಿ ರೂಪಾಯಿಗಳ ಬಜೆಟ್ ಆಗಿರಬಹುದು? ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗಳು ಅತೀ ಹೆಚ್ಚಿನ ಸ್ಥಾನಗಳಿಗೆ ಸ್ಪರ್ಧಿಸುತ್ತವೆ. ಇಷ್ಟೊಂದು ಸಂಖ್ಯೆಯ ಅಭ್ಯರ್ಥಿಗಳಿಗೆ ಎಷ್ಟು ಕೋಟಿ ರೂಪಾಯಿ ಖರ್ಚು ತಗಲಬಹುದು? ಅವೆಲ್ಲ ಯಾರದ್ದು? ಸೋನಿಯಾಗಾಂಧಿ ಮತ್ತು ಅಮಿತ್ ಶಾ ಅವರು ಈ ಎಲ್ಲ ದುಡ್ಡನ್ನು ಭರಿಸುತ್ತಿದ್ದಾರೆಯೇ? ಇಲ್ಲ ಎಂದಾದರೆ, ಹಣದ ಮೂಲ ಯಾವುದು? ಈ ಪ್ರಶ್ನೆಯನ್ನು ಮತ್ತೂ ಮತ್ತೂ ಕೆದಕುತ್ತಾ ಹೋದರೆ, `ಕಪ್ಪ ಕಾಣಿಕೆಗಳ' ಪಟ್ಟಿ ಬಿಚ್ಚಿಕೊಳ್ಳುತ್ತಾ ಹೋಗಬಹುದು. ಆದ್ದರಿಂದಲೇ, ಈಗ ಬಹಿರಂಗವಾಗಿರುವ ಡೈರಿ ವಿವರಗಳನ್ನು `ಒಪ್ಪತಕ್ಕ ಪುರಾವೆ' ಎಂದು ಕೋರ್ಟ್ ಪರಿಗಣಿಸದಿರಲಿ ಎಂದು ಈ ಎರಡೂ ಪಕ್ಷಗಳು ಖಂಡಿತ ಬಯಸುತ್ತಿರಬಹುದು. ಡೈರಿಯ ಉಲ್ಲೇಖಗಳನ್ನು ಪುರಾವೆಯಾಗಿ ಸ್ವೀಕರಿಸುವುದಕ್ಕೆ ಸುಪ್ರೀಮ್ ಕೋರ್ಟ್ ಈ ಹಿಂದೆ ನಿರಾಕರಿಸಿತ್ತು ಕೂಡ. ಒಂದು ರೀತಿಯಲ್ಲಿ, ಕೋರ್ಟ್‍ನ ಈ ನಿರಾಕರಣೆಯೇ ಯಡಿಯೂರಪ್ಪರಿಗೆ ಇವತ್ತು ಇಮ್ಮಡಿ ಧೈರ್ಯವನ್ನು ಒದಗಿಸಿದೆ. ಡೈರಿಯನ್ನು ಕೋರ್ಟ್ ಒಪ್ಪುವುದಿಲ್ಲವೆಂದ ಮೇಲೆ `ಹಳೆ ಡೈರಿಗಳ' ಬಗ್ಗೆ ಭಯಪಡಬೇಕಾದ ಅಗತ್ಯವೇನೂ ಇಲ್ಲವಲ್ಲ.
    ಸದ್ಯ ನಮ್ಮ ನಡುವೆ ನಿಜಕ್ಕೂ ಚರ್ಚೆಗೊಳಗಾಗಬೇಕಾದದ್ದು ‘ಡೈರಿ’ಗಳು ನಕಲಿಯೋ ಅಸಲಿಯೋ ಎಂಬುದಲ್ಲ. ಅವೆಲ್ಲವನ್ನೂ ಅಸಲಿಯೆಂದೇ ಪರಿಗಣಿಸಿದರೂ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಈ ಕಪ್ಪ ಕಾಣಿಕೆಗಳನ್ನು ತಡೆಗಟ್ಟುವುದು ಹೇಗೆ? ಪಕ್ಷವೊಂದಕ್ಕೆ ಹಣ ಅನಿವಾರ್ಯವಾಗುವುದು ಯಾವೆಲ್ಲ ಕಾರಣಗಳಿಗೆ? ಚುನಾವಣೆ ಎಂಬುದೇ ಅದಕ್ಕೆ ಉತ್ತರವೆಂದಾದರೆ, ಹಣದ ಪೈಪೋಟಿಯನ್ನು ತಗ್ಗಿಸಬಲ್ಲ ಬೇರೇನಾದರೂ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲವೇ? ಪ್ರಜಾತಂತ್ರವೆಂದರೆ ಪ್ರಜೆಗಳ ಸಂಪೂರ್ಣ ಭಾಗಿದಾರಿಕೆಯಿಂದಲೇ ಕಟ್ಟಲಾಗುವ ಸೌಧವೇ ಹೊರತು ಹಣದಿಂದಲ್ಲ. ಹಣದ ಪ್ರಾಬಲ್ಯ ಇರುವವರೆಗೆ ಪ್ರಜಾತಂತ್ರದಲ್ಲಿ ನಿಜವಾದ ಪ್ರಜೆ ಅಪ್ರಸ್ತುತ ಆಗುತ್ತಾನೆ/ಳೆ. ಇವತ್ತು ಎಲ್ಲ ಕಪ್ಪ ಕಾಣಿಕೆಗಳನ್ನೂ ಚುನಾವಣೆಯ ಹಿನ್ನೆಲೆಯಲ್ಲಿಯೇ ಸಂಗ್ರಹಿಸಲಾಗುತ್ತದೆ.  ಹೆಚ್ಚು ಹಣ ಸಂಗ್ರಹಿಸಿದ ಮತ್ತು ಖರ್ಚು ಮಾಡಿದ ಪಕ್ಷವು ಅಧಿಕಾರಕ್ಕೆ ಹೆಚ್ಚು ಹತ್ತಿರವಾಗುವ ದುರಂತವೂ ನಡೆಯುತ್ತಿದೆ. ಈ ಸ್ಥಿತಿಯ ಬದಲಾವಣೆಯ ಹೊರತು `ಡೈರಿ'ಗಳನ್ನು ದೂರಿ ಪ್ರಯೋಜನವೇನೂ ಇಲ್ಲ. ಗೋವಿಂದರಾಜು ಡೈರಿಯನ್ನು ಹಿಡಿದು ಯಡಿಯೂರಪ್ಪ ಇವತ್ತು ಎಷ್ಟೇ ಮಾತಾಡಲಿ, ನಾಳೆ ಇಂಥದ್ದೇ ಇನ್ನೊಂದು ಡೈರಿಯ ಹೊರತು ತನಗೂ ಅಸ್ತಿತ್ವ ಇಲ್ಲ ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತು. ಆದ್ದರಿಂದಲೇ, ಅವರ ಮಾತಿನಲ್ಲಿ ಬರೇ ಅಬ್ಬರವೇ ಇಣುಕುತ್ತಿದೆ. `ನೈತಿಕ ಹೊಣೆ' ಎಂಬ ಪದವನ್ನು ಅವರು ಎಷ್ಟು ಸಹಜವಾಗಿ ಮತ್ತು ಎಷ್ಟು ನಿರ್ವಿಕಾರವಾಗಿ ಉಚ್ಚರಿಸುತ್ತಿದ್ದಾರೆಂದರೆ ಆ ಪದಕ್ಕೂ ನೈತಿಕತೆಗೂ ಯಾವ ಸಂಬಂಧವೇ ಇಲ್ಲ ಎಂಬಷ್ಟು. ಡೈರಿಯ ವಿಷಯದಲ್ಲಿ ಬಿಜೆಪಿಯ ಆಂತರಿಕ ನಿಲುವು ಏನು ಎಂಬುದಕ್ಕೆ ಅವರ ಭಾವರಹಿತ ಅಬ್ಬರದ ಮಾತುಗಳೇ ಸಾಕ್ಷಿ. ಗೋವಿಂದ ರಾಜು ಡೈರಿಯು ಬಿಜೆಪಿಯ ನೈತಿಕ ಬದ್ಧತೆಯನ್ನು ತೆರೆದಿಟ್ಟಿದೆ ಎಂದೂ ಹೇಳಬಹುದು.