Saturday, 4 March 2017

ಡೈರಿ ಮತ್ತು ನೈತಿಕತೆಯ ಪ್ರಶ್ನೆ

     ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಮನೆಯ ಮೇಲೆ 2016 ಮಾರ್ಚ್ 15ರಂದು ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಸಿಕ್ಕಿದೆಯೆನ್ನಲಾಗುವ ಡೈರಿಯು ಈ ಹಿಂದಿನ ಹಲವು ಡೈರಿಗಳ ಬಗ್ಗೆ ಕುತೂಹಲ ತಾಳುವಂತೆ ಮಾಡಿದೆ. ಮೊದಲನೆಯದಾಗಿ, ರಾಜಕಾರಣಿಗಳು ಡೈರಿ ಬರೆದಿಡುತ್ತಾರೆಂಬುದೇ ಅದ್ಭುತ. ಒಂದುವೇಳೆ, ಬರೆದಿಟ್ಟರೂ ಅದು ನೂರು ಶೇಕಡಾ ಪ್ರಾಮಾಣಿಕವಾಗಿರುತ್ತದೆ ಎಂದು ನಾವೆಲ್ಲ ನಂಬುವುದು ಇನ್ನೊಂದು ಅದ್ಭುತ. ಇನ್ನು, ಅವರು ಡೈರಿ ಬರೆಯುತ್ತಾರೆ ಮತ್ತು ಅದು ಪ್ರಾಮಾಣಿಕವೂ ಆಗಿರುತ್ತದೆ ಎಂದೇ ನಾವು ನಂಬಬೇಕೆಂದುಕೊಂಡರೂ, ಸಿದ್ಧರಾಮಯ್ಯನವರ ರಾಜಿನಾಮೆಯೊಂದಿಗೆ ಈ ಹಿಂದಿನ ಎಲ್ಲ ‘ಡೈರಿ ಪಾಪಗಳೂ’ ಪರಿಹಾರವಾಗುತ್ತವೆ ಎಂಬಂತೆ ವರ್ತಿಸುತ್ತಿರುವ ಬಿಜೆಪಿಯ ನಿಲುವು ಪರಮಾದ್ಭುತ.
      ನೈತಿಕತೆ ಎಂಬ ಬಹು ಅಮೂಲ್ಯ ಮತ್ತು ಬಹು ಭಾರವುಳ್ಳ ಮೌಲ್ಯಕ್ಕೆ ಚಿಕ್ಕಾಸಿನ ಗೌರವವನ್ನೂ ನೀಡದವರು ಮತ್ತು ಆ ಶಬ್ದವನ್ನು ಪದೇ ಪದೇ ಬಳಸಿ ಅದರ ಮಾನವನ್ನು ಹರಾಜು ಹಾಕುತ್ತಿರುವವರು ರಾಜಕಾರಣಿಗಳು. ಗೋವಿಂದರಾಜು ಡೈರಿಯ ನೈತಿಕ ಹೊಣೆ ಹೊತ್ತು ಸಿದ್ಧರಾಮಯ್ಯ ರಾಜಿನಾಮೆ ನೀಡಬೇಕೆಂದು ಯಡಿಯೂರಪ್ಪ ಆಗ್ರಹಿಸುತ್ತಿದ್ದಾರೆ. ಹಾಗಾದರೆ, ಗಣಿ ದೊರೆ ಜನಾರ್ಧನ ರೆಡ್ಡಿಯ ಬಂಟ ಖಾರದಪುಡಿ ಮಹೇಶನ ಡೈರಿಯ ಬಗ್ಗೆ ಅವರ ನಿಲುವು ಏನು? ಗಣಿ ಹಗರಣವನ್ನು ತನಿಖೆ ನಡೆಸಿದ್ದ ಯು.ವಿ. ಸಿಂಗ್‍ರ ವರದಿಯಲ್ಲಿ ಆ ಡೈರಿಯ ವಿವರವಿತ್ತಲ್ಲ, ಅದಕ್ಕಾಗಿ ಯಾರು ನೈತಿಕ ಹೊಣೆ ಹೊರಬೇಕು? ಗೋವಿಂದರಾಜು ಅವರ ಡೈರಿಯಲ್ಲಿರುವ ಫಲಾನುಭವಿಗಳ ಹೆಸರಾದರೋ ಸಂಕೇತಾಕ್ಷರಗಳಲ್ಲಿದೆ. ಆರ್‍ಜಿ, ಎಸ್‍ಜಿ, ಕೆಜೆಜಿ, ಡಿಕೆಎಸ್ ಹೀಗೆ. ಇದನ್ನು ನಾವು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಜಾರ್ಜ್, ಶಿವಕುಮಾರ್… ಎಂದೆಲ್ಲ ನಮ್ಮ ಗ್ರಹಿಕೆಗೆ ತಕ್ಕಂತೆ ವಿಸ್ತರಿಸಿ ಓದಬೇಕು. ಆದರೆ ಖಾರದಪುಡಿ ಡೈರಿಯಲ್ಲಿ ಇಂಥ ಸಿಕ್ಕುಗಳೇ ಇಲ್ಲ. ಜುಪಿಟರ್ ಏವಿಯೇಶನ್ ಎಂಬ ನೇರ ಉಲ್ಲೇಖವೇ ಇದೆ. ಈ ಜುಪಿಟರ್‍ನ ಮಾಲಿಕ ಯಾರು ಮತ್ತು ಅವರು ಯಾವ ಪಕ್ಷದ ರಾಜ್ಯಸಭಾ ಸದಸ್ಯರು ಎಂಬುದು ಯಡಿಯೂರಪ್ಪರಿಗೆ ಚೆನ್ನಾಗಿಯೇ ಗೊತ್ತು. ಬಿಜೆಪಿಯ ಕೋಶಾಧಿಕಾರಿಯಾಗಿದ್ದ ಲೆಹರ್ ಸಿಂಗ್‍ರ ನಿವಾಸದ ಮೇಲೆ 2013ರಲ್ಲಿ ದಾಳಿಯಾಗಿತ್ತು. ಆಗ ಸಿಕ್ಕಿದ ಡೈರಿಯಲ್ಲಿ ಬಿಜೆಪಿಯ ವರಿಷ್ಠರಿಗೆ 391 ಕೋಟಿ ರೂಪಾಯಿ ಪಾವತಿಸಿದ ವರದಿಗಳಿವೆ ಎಂದು ಹೇಳಲಾಗುತ್ತದೆ. ಅಲ್ಲದೇ, ಸ್ವತಃ ಲೆಹರ್ ಸಿಂಗ್ ಅವರೇ ಒಂದು ಸಂದರ್ಭದಲ್ಲಿ ಬರೆದ ಪತ್ರದಲ್ಲೂ ಕಪ್ಪ ಕಾಣಿಕೆಯ ಉಲ್ಲೇಖಗಳಿದ್ದುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇನ್ನು, ರಾಜ್ಯವನ್ನು ಬಿಟ್ಟು ರಾಷ್ಟ್ರಮಟ್ಟವನ್ನು ಪರಿಗಣಿಸಿದರೂ ಅಲ್ಲಿಯ ನೈತಿಕತೆಯೇನೂ ಭವ್ಯವಾಗಿಲ್ಲ. ದಶಕಗಳ ಹಿಂದಿನ ಜೈನ-ಹವಾಲಾ ಡೈರಿಯಿಂದ ಇತ್ತೀಚೆಗಿನ ಸಹರಾ-ಬಿರ್ಲಾ ಕಂಪೆನಿಗಳ ಡೈರಿಯವರೆಗೆ ಎಲ್ಲವೂ ಕೊಳಕೇ. ಸಹರಾ-ಬಿರ್ಲಾ ಡೈರಿಯಂತೂ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನೇ ಅನುಮಾನದ ಮೊನೆಯಲ್ಲಿಟ್ಟಿದೆ. ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಸಲ್ಲಿಸಲಾದ ಕಪ್ಪ ಕಾಣಿಕೆಯ ಉಲ್ಲೇಖಗಳು ಅದರಲ್ಲಿವೆ ಎಂದು ಹೇಳಲಾಗುತ್ತದೆ. ಒಂದುವೇಳೆ, ‘ನೈತಿಕ ಹೊಣೆ’ ಎಂಬುದು ನಿಜಕ್ಕೂ ಇತರೆಲ್ಲ ಹೊಣೆಗಳಿಗಿಂತ ಶ್ರೇಷ್ಠವೇ ಆಗಿದ್ದರೆ, ಮೊಟ್ಟ ಮೊದಲು ‘ಸನ್ಯಾಸಿ’ ಆಗಬೇಕಾದವರು ಯಾರು? ಅದು ಬಿಟ್ಟು, 2016 ಮಾರ್ಚ್ 15ಕ್ಕಿಂತ ಮೊದಲಿನ ಯಾವ ಡೈರಿಗೂ ಅನ್ವಯವಾಗದ ನಿಯಮಗಳೆಲ್ಲ ‘ಗೋವಿಂದರಾಜು’ ಡೈರಿಗೆ ಅನ್ವಯವಾಗಬೇಕೆಂದು ವಾದಿಸುವುದು ಯಾವ ಬಗೆಯ ನೈತಿಕತೆ? ಹಾಗಂತ,
      ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪರಮ ಪವಿತ್ರ ಮತ್ತು ಬಿಜೆಪಿ ಪರಮ ನೀಚ ಎಂಬ ಅಭಿಪ್ರಾಯ ಈ ದೇಶದ ಯಾರಲ್ಲೂ ಇರುವ ಸಾಧ್ಯತೆ ಇಲ್ಲ. ಇಂಥದ್ದೊಂದು ವರ್ಗೀಕರಣದ ಹೊರಗೆ ಈ ಎರಡೂ ಪಕ್ಷಗಳು ಇವತ್ತು ಬಂದು ನಿಂತಿವೆ. ಆದ್ದರಿಂದಲೇ, ಬಿಜೆಪಿಯ ಡೈರಿಯ ಆರೋಪಕ್ಕೆ ಕಾಂಗ್ರೆಸ್ ಇನ್ನೊಂದು ಡೈರಿಯ ಮೂಲಕವೇ ಉತ್ತರಕೊಡುವ ಮಟ್ಟಕ್ಕೆ ಇಳಿದಿರುವುದು. ಒಂದು ತಪ್ಪನ್ನು ಇನ್ನೊಂದು ತಪ್ಪಿನ ಮೂಲಕ ಸಮರ್ಥಿಸಿಕೊಳ್ಳುವುದನ್ನೇ ರಾಜಕೀಯ ಎಂದು ಅಂದುಕೊಳ್ಳಬೇಕಾದ ಸ್ಥಿತಿಗೆ ನಾವೆಲ್ಲ ತಲುಪಿ ಬಿಟ್ಟಿದ್ದೇವೆ. ನಿಜವಾಗಿ, ಉದ್ಯಮಿಗಳಿಂದ ಅಥವಾ ಬೇನಾಮಿ ಮೂಲಗಳಿಂದ ರಾಜಕೀಯ ಪಕ್ಷಗಳು ಹಣ ಸಂಗ್ರಹಿಸುವುದು ಎಂಟನೇ ಅದ್ಭುತವೇನೂ ಅಲ್ಲ. ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯೇ ಸಾವಿರಾರು ರೂ. ಖರ್ಚು ಮಾಡಬೇಕಾದ ಅನಿವಾರ್ಯತೆಯಿರುವ ದೇಶದಲ್ಲಿ ರಾಷ್ಟ್ರೀಯ ಪಕ್ಷವೊಂದು ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವುದೆಂದರೆ ಅದು ಎಷ್ಟು ಕೋಟಿ ರೂಪಾಯಿಗಳ ಬಜೆಟ್ ಆಗಿರಬಹುದು? ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗಳು ಅತೀ ಹೆಚ್ಚಿನ ಸ್ಥಾನಗಳಿಗೆ ಸ್ಪರ್ಧಿಸುತ್ತವೆ. ಇಷ್ಟೊಂದು ಸಂಖ್ಯೆಯ ಅಭ್ಯರ್ಥಿಗಳಿಗೆ ಎಷ್ಟು ಕೋಟಿ ರೂಪಾಯಿ ಖರ್ಚು ತಗಲಬಹುದು? ಅವೆಲ್ಲ ಯಾರದ್ದು? ಸೋನಿಯಾಗಾಂಧಿ ಮತ್ತು ಅಮಿತ್ ಶಾ ಅವರು ಈ ಎಲ್ಲ ದುಡ್ಡನ್ನು ಭರಿಸುತ್ತಿದ್ದಾರೆಯೇ? ಇಲ್ಲ ಎಂದಾದರೆ, ಹಣದ ಮೂಲ ಯಾವುದು? ಈ ಪ್ರಶ್ನೆಯನ್ನು ಮತ್ತೂ ಮತ್ತೂ ಕೆದಕುತ್ತಾ ಹೋದರೆ, `ಕಪ್ಪ ಕಾಣಿಕೆಗಳ' ಪಟ್ಟಿ ಬಿಚ್ಚಿಕೊಳ್ಳುತ್ತಾ ಹೋಗಬಹುದು. ಆದ್ದರಿಂದಲೇ, ಈಗ ಬಹಿರಂಗವಾಗಿರುವ ಡೈರಿ ವಿವರಗಳನ್ನು `ಒಪ್ಪತಕ್ಕ ಪುರಾವೆ' ಎಂದು ಕೋರ್ಟ್ ಪರಿಗಣಿಸದಿರಲಿ ಎಂದು ಈ ಎರಡೂ ಪಕ್ಷಗಳು ಖಂಡಿತ ಬಯಸುತ್ತಿರಬಹುದು. ಡೈರಿಯ ಉಲ್ಲೇಖಗಳನ್ನು ಪುರಾವೆಯಾಗಿ ಸ್ವೀಕರಿಸುವುದಕ್ಕೆ ಸುಪ್ರೀಮ್ ಕೋರ್ಟ್ ಈ ಹಿಂದೆ ನಿರಾಕರಿಸಿತ್ತು ಕೂಡ. ಒಂದು ರೀತಿಯಲ್ಲಿ, ಕೋರ್ಟ್‍ನ ಈ ನಿರಾಕರಣೆಯೇ ಯಡಿಯೂರಪ್ಪರಿಗೆ ಇವತ್ತು ಇಮ್ಮಡಿ ಧೈರ್ಯವನ್ನು ಒದಗಿಸಿದೆ. ಡೈರಿಯನ್ನು ಕೋರ್ಟ್ ಒಪ್ಪುವುದಿಲ್ಲವೆಂದ ಮೇಲೆ `ಹಳೆ ಡೈರಿಗಳ' ಬಗ್ಗೆ ಭಯಪಡಬೇಕಾದ ಅಗತ್ಯವೇನೂ ಇಲ್ಲವಲ್ಲ.
    ಸದ್ಯ ನಮ್ಮ ನಡುವೆ ನಿಜಕ್ಕೂ ಚರ್ಚೆಗೊಳಗಾಗಬೇಕಾದದ್ದು ‘ಡೈರಿ’ಗಳು ನಕಲಿಯೋ ಅಸಲಿಯೋ ಎಂಬುದಲ್ಲ. ಅವೆಲ್ಲವನ್ನೂ ಅಸಲಿಯೆಂದೇ ಪರಿಗಣಿಸಿದರೂ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಈ ಕಪ್ಪ ಕಾಣಿಕೆಗಳನ್ನು ತಡೆಗಟ್ಟುವುದು ಹೇಗೆ? ಪಕ್ಷವೊಂದಕ್ಕೆ ಹಣ ಅನಿವಾರ್ಯವಾಗುವುದು ಯಾವೆಲ್ಲ ಕಾರಣಗಳಿಗೆ? ಚುನಾವಣೆ ಎಂಬುದೇ ಅದಕ್ಕೆ ಉತ್ತರವೆಂದಾದರೆ, ಹಣದ ಪೈಪೋಟಿಯನ್ನು ತಗ್ಗಿಸಬಲ್ಲ ಬೇರೇನಾದರೂ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲವೇ? ಪ್ರಜಾತಂತ್ರವೆಂದರೆ ಪ್ರಜೆಗಳ ಸಂಪೂರ್ಣ ಭಾಗಿದಾರಿಕೆಯಿಂದಲೇ ಕಟ್ಟಲಾಗುವ ಸೌಧವೇ ಹೊರತು ಹಣದಿಂದಲ್ಲ. ಹಣದ ಪ್ರಾಬಲ್ಯ ಇರುವವರೆಗೆ ಪ್ರಜಾತಂತ್ರದಲ್ಲಿ ನಿಜವಾದ ಪ್ರಜೆ ಅಪ್ರಸ್ತುತ ಆಗುತ್ತಾನೆ/ಳೆ. ಇವತ್ತು ಎಲ್ಲ ಕಪ್ಪ ಕಾಣಿಕೆಗಳನ್ನೂ ಚುನಾವಣೆಯ ಹಿನ್ನೆಲೆಯಲ್ಲಿಯೇ ಸಂಗ್ರಹಿಸಲಾಗುತ್ತದೆ.  ಹೆಚ್ಚು ಹಣ ಸಂಗ್ರಹಿಸಿದ ಮತ್ತು ಖರ್ಚು ಮಾಡಿದ ಪಕ್ಷವು ಅಧಿಕಾರಕ್ಕೆ ಹೆಚ್ಚು ಹತ್ತಿರವಾಗುವ ದುರಂತವೂ ನಡೆಯುತ್ತಿದೆ. ಈ ಸ್ಥಿತಿಯ ಬದಲಾವಣೆಯ ಹೊರತು `ಡೈರಿ'ಗಳನ್ನು ದೂರಿ ಪ್ರಯೋಜನವೇನೂ ಇಲ್ಲ. ಗೋವಿಂದರಾಜು ಡೈರಿಯನ್ನು ಹಿಡಿದು ಯಡಿಯೂರಪ್ಪ ಇವತ್ತು ಎಷ್ಟೇ ಮಾತಾಡಲಿ, ನಾಳೆ ಇಂಥದ್ದೇ ಇನ್ನೊಂದು ಡೈರಿಯ ಹೊರತು ತನಗೂ ಅಸ್ತಿತ್ವ ಇಲ್ಲ ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತು. ಆದ್ದರಿಂದಲೇ, ಅವರ ಮಾತಿನಲ್ಲಿ ಬರೇ ಅಬ್ಬರವೇ ಇಣುಕುತ್ತಿದೆ. `ನೈತಿಕ ಹೊಣೆ' ಎಂಬ ಪದವನ್ನು ಅವರು ಎಷ್ಟು ಸಹಜವಾಗಿ ಮತ್ತು ಎಷ್ಟು ನಿರ್ವಿಕಾರವಾಗಿ ಉಚ್ಚರಿಸುತ್ತಿದ್ದಾರೆಂದರೆ ಆ ಪದಕ್ಕೂ ನೈತಿಕತೆಗೂ ಯಾವ ಸಂಬಂಧವೇ ಇಲ್ಲ ಎಂಬಷ್ಟು. ಡೈರಿಯ ವಿಷಯದಲ್ಲಿ ಬಿಜೆಪಿಯ ಆಂತರಿಕ ನಿಲುವು ಏನು ಎಂಬುದಕ್ಕೆ ಅವರ ಭಾವರಹಿತ ಅಬ್ಬರದ ಮಾತುಗಳೇ ಸಾಕ್ಷಿ. ಗೋವಿಂದ ರಾಜು ಡೈರಿಯು ಬಿಜೆಪಿಯ ನೈತಿಕ ಬದ್ಧತೆಯನ್ನು ತೆರೆದಿಟ್ಟಿದೆ ಎಂದೂ ಹೇಳಬಹುದು.

No comments:

Post a Comment