Monday 27 March 2017

ಯೋಗಿ ಆದಿತ್ಯನಾಥ ಮತ್ತು ಆಶಾವಾದ

     ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ದಿನವೇ, ದೇಶದಾದ್ಯಂತ ಒಂದು ಲಕ್ಷ ಮದ್ರಸಗಳಲ್ಲಿ ಶೌಚಾಲಯವನ್ನು ಕಟ್ಟಿಸುವ ಮತ್ತು ಮಧ್ಯಾಹ್ನದೂಟವನ್ನು ಒದಗಿಸುವ ಯೋಜನೆಯನ್ನು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಪ್ರಕಟಿಸಿದ್ದಾರೆ. ಇದರ ಮರುದಿನವೇ ಘೋಷಿಸಲಾದ ಯೋಗಿ ಆದಿತ್ಯನಾಥ್‍ರ ಸಚಿವ ಸಂಪುಟದಲ್ಲಿ ಮುಹ್ಸಿನ್ ರಝಾ ಎಂಬವರು ಕಾಣಿಸಿಕೊಂಡಿದ್ದಾರೆ. ಏನಿದರ ಅರ್ಥ? ಬಿಜೆಪಿಗೆ ಒಳಗೊಂದು ಹೊರಗೊಂದು ಮುಖವಿದೆಯೇ? ಒಳಗಿನ ಮುಖವು ಹೊರಗಿನ ಮುಖಕ್ಕಿಂತ ಮೃದುವೇ, ಜಾತ್ಯತೀತವೇ? ‘ಸಬ್‍ಕಾ ವಿಕಾಸ್’ ಅನ್ನು ಕ್ಷೀಣ ಮಟ್ಟದಲ್ಲಾದರೂ ಅದು ಪ್ರತಿಪಾದಿಸುತ್ತದೆಯೇ? ಯೋಗಿ ಆದಿತ್ಯನಾಥ್‍ರ ವಿಚಾರಧಾರೆ ಏನು ಅನ್ನುವುದು ಈ ದೇಶಕ್ಕೆ ಚೆನ್ನಾಗಿ ಗೊತ್ತು. ಬಿಜೆಪಿಯನ್ನು ಇವತ್ತು ಮುಸ್ಲಿಮ್ ವಿರೋಧಿಯಾಗಿ ಯಾರಾದರೂ ಗುರುತಿಸುತ್ತಿದ್ದರೆ, ಅದಕ್ಕೆ ಯೋಗಿ ಆದಿತ್ಯನಾಥ್‍ರ ಕೊಡುಗೆ ಬಹಳ ಇದೆ. ಅವರು ಬಿಜೆಪಿಯ ಉಗ್ರ ಮುಖ. ಇಂಥವರು ಮುಖ್ಯಮಂತ್ರಿಯಾಗಿ ಆಯ್ಕೆಯಾದುದನ್ನು ಘೋಷಿಸಿದ ದಿನವೇ ಅವರ ವ್ಯಕ್ತಿತ್ವಕ್ಕೆ ತೀರಾ ಹೊಂದದ ಯೋಜನೆಯನ್ನು ಬಿಜೆಪಿ ಪ್ರಕಟಿಸಿದ್ದೇಕೆ? ಅದು ಆದಿತ್ಯನಾಥ್‍ರಿಗೆ ಬಿಜೆಪಿ ಪರೋಕ್ಷವಾಗಿ ರವಾನಿಸಿದ ಸಂದೇಶವೇ? ನಿಮ್ಮ ವಿಚಾರಧಾರೆಯಲ್ಲಿ ಸಮತೋಲನವಿಲ್ಲ ಎಂಬುದನ್ನು ಬಿಜೆಪಿ ಈ ಮೂಲಕ ಸಾರಿದೆಯೇ? ಅದೇ ವೇಳೆ, ಮುಹ್ಸಿನ್ ರಝಾರನ್ನು ಯೋಗಿ ಆದಿತ್ಯನಾಥ್‍ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ವಿಧಾನಸಭೆಯ ಸದಸ್ಯರೂ ಅಲ್ಲ, ವಿಧಾನ ಪರಿಷತ್‍ನ ಸದಸ್ಯರೂ ಅಲ್ಲ. ಇಷ್ಟಿದ್ದೂ, ಅವರು ಸಚಿವ ಸಂಪುಟಕ್ಕೆ ಯಾವ ಕಾರಣಕ್ಕಾಗಿ ಸೇರ್ಪಡೆಗೊಂಡರು? ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದ ಬಿಜೆಪಿಯು ಯಾಕೆ ಮುಸ್ಲಿಮ್ ಮುಕ್ತ ಸಚಿವ ಸಂಪುಟವನ್ನು ರಚಿಸಲಿಲ್ಲ? ಮುಸ್ಲಿಮರಿಗೆ ಟಿಕೆಟು ಕೊಡದ ಪಕ್ಷವೊಂದು ಹಾಗೆ ಮಾಡುವುದರಲ್ಲಿ ಅಚ್ಚರಿಯೇನೂ ಇಲ್ಲವಲ್ಲ. ಅಲ್ಲದೇ ತನ್ನ ವಿಚಾರಧಾರೆಯ ಮೇಲೆ ತನಗಿರುವ ಬದ್ಧತೆಯನ್ನು ಅದು ಸಾರ್ವಜನಿಕವಾಗಿ ಮತ್ತೊಮ್ಮೆ ತೋರ್ಪಡಿಸಿಕೊಂಡ ಹಾಗೂ ಆಗುತ್ತಿತ್ತು. ಒಂದು ಕಡೆ ಯೋಗಿ ಆದಿತ್ಯನಾಥ್‍ರ ಉಗ್ರ ವಿಚಾರಧಾರೆ, ಇನ್ನೊಂದು ಕಡೆ ಈ ವಿಚಾರಧಾರೆಗೆ ತಕ್ಕುದಾದ ಸಚಿವ ಸಂಪುಟ.. ಇದು ಹೆಚ್ಚು ಸೂಕ್ತವಾಗಿತ್ತಲ್ಲವೇ? ಮುಸ್ಲಿಮರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸದಿದ್ದುದನ್ನೇ ಸಾಮಥ್ರ್ಯವಾಗಿ ಬಿಂಬಿಸಿಕೊಂಡ ಪಕ್ಷ ಬಿಜೆಪಿ. ಸುಮಾರು 20% ಮುಸ್ಲಿಮರಿರುವ ರಾಜ್ಯವೊಂದರಲ್ಲಿ ಇಂಥದ್ದೊಂದು ನಿರ್ಧಾರಕ್ಕೆ ಗಟ್ಟಿ ಗುಂಡಿಗೆ ಬೇಕು. ಭಾರತದ ಜಾತ್ಯತೀತ ಗುಣವನ್ನೇ ಪ್ರಶ್ನಿಸುವ ನಿರ್ಧಾರ ಇದು. ಕನಿಷ್ಠ ಸಮತೋಲನಕ್ಕಾದರೂ ಒಂದಿಬ್ಬರು ಮುಸ್ಲಿಮರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕಾದ ಸಾಮಾಜಿಕ ಹೊಣೆಗಾರಿಕೆ ಅದರ ಮೇಲಿತ್ತು. ಆದರೆ ಹಾಗೆ ಮಾಡದಿರುವುದರಿಂದಲೇ ಲಾಭ ಇದೆ ಅಂದುಕೊಂಡ ಬಿಜೆಪಿಯು, ಸಚಿವ ಸಂಪುಟದ ರಚನೆಯ ಸಂದರ್ಭದಲ್ಲಿ ಆ ಲಾಭದ ಲೆಕ್ಕಾಚಾರವನ್ನು ಕೈ ಬಿಟ್ಟದ್ದೇಕೆ? ಇದು ಅನಿವಾರ್ಯವಾಗಿತ್ತೇ? ಹೊರಗಿನ ಉಗ್ರ ಮುಖಕ್ಕಿಂತ ಹೊರತಾದ ಮೃದು ಮುಖವನ್ನು ಅದು ಹೊಂದಿದೆಯೇ ಅಥವಾ ಹೊಂದಬೇಕಾದ ಒತ್ತಡವೊಂದು ಅದರ ಮೇಲಿದೆಯೇ? ಆ ಒತ್ತಡವನ್ನು ಹೇರಿದ್ದು ಯಾರು?
     ಬಹುಶಃ, ಸರ್ವ ಮನುಷ್ಯರ ಹಕ್ಕುಗಳಿಗಾಗಿ ಹಾಗೂ ತಾರತಮ್ಯ ರಹಿತ ಆಡಳಿತಕ್ಕಾಗಿ ಧ್ವನಿಯೆತ್ತುತ್ತಿರುವ ಎಲ್ಲರ ಗೆಲುವು ಇದು ಎಂದೇ ಅನಿಸುತ್ತದೆ. ಈ ದೇಶದಲ್ಲಿರುವ ಪ್ರಜಾತಂತ್ರದ ಮೇಲೆ ಇನ್ನೂ ಈ ಆದಿತ್ಯನಾಥ್‍ರ ವಿಚಾರಧಾರೆಗೆ ಪ್ರಾಬಲ್ಯವನ್ನು ಹೊಂದಲು ಸಾಧ್ಯವಾಗಿಲ್ಲ. ಚುನಾವಣೆಯ ಸಂದರ್ಭದಲ್ಲಿ ಅಗತ್ಯಕ್ಕಿಂತಲೂ ಉಗ್ರವಾಗಿರುವ ಈ ಮುಖ, ಚುನಾವಣೆಯ ಬಳಿಕ ಮೃದುವಾಗುತ್ತದೆ ಅಥವಾ ಮೃದುವಾಗಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಅದಕ್ಕೆ ಈ ದೇಶದ ಮಂದಿ ಪ್ರಜಾತಂತ್ರದ ಮೇಲೆ ಪ್ರಕಟಿಸುತ್ತಿರುವ ವಿಶ್ವಾಸವೇ ಕಾರಣ. ಪ್ರಜಾತಂತ್ರ ಈ ದೇಶದಲ್ಲಿ ಒಂದು ಸಾಧ್ಯತೆಯನ್ನು ಸೃಷ್ಟಿಸಿದೆ. ಕಟು ಏಕಮುಖೀ ಚಿಂತನೆಯೂ ನಿರ್ಣಾಯಕ ಸಂದರ್ಭದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲೇಬೇಕಾದ ಸಾಧ್ಯತೆ ಅದು. ಬಿಜೆಪಿಯೂ ಇದಕ್ಕೆ ಹೊರತಲ್ಲ. ಶಿವಸೇನೆಯೂ ಹೊರತಲ್ಲ. ಸದ್ಯ ಜಾತ್ಯತೀತ ಪಕ್ಷಗಳ ಸ್ವಯಂಕೃತಾಪರಾಧಗಳು ಜನರನ್ನು ನಿರಾಶರನ್ನಾಗಿಸಿದೆ. ಯಾವುದೇ ನಿರಾಶೆಯು ಕೆಲವೊಮ್ಮೆ ತಪ್ಪಾದ ಚಿಂತನೆಯನ್ನು ಬೆಂಬಲಿಸುವಷ್ಟು ಅವರು ನಿರುತ್ಸಾಹಿಯಾಗಿಸುವುದಿದೆ. ಅಂಥ ಸಂದರ್ಭದಲ್ಲಿ ಉಗ್ರ ವಿಚಾರಧಾರೆಯನ್ನು ಮೃದುವಾಗಿ ಕಾಣಬಹುದಾದ ಸಾಧ್ಯತೆಯೂ ಇದೆ. ಬಿಜೆಪಿ ಸದ್ಯ ಇಂಥದ್ದೊಂದು ವಾತಾವರಣದ ಲಾಭವನ್ನು ಪಡಕೊಳ್ಳುತ್ತಿದೆ. ಜೊತೆಗೇ ಅದರೊಳಗೊಂದು ಭೀತಿಯೂ ಇದೆ. ಇದೇ ಉಗ್ರ ವಿಚಾರಧಾರೆಯು ಎಲ್ಲಿಯ ವರೆಗೆ ಫಸಲು ಕೊಡಬಲ್ಲುದು? ಜಾತ್ಯತೀತ ಶಕ್ತಿಗಳು ಮುಂದಕ್ಕೆ ಮತ್ತೆ ತಮ್ಮ ತಪ್ಪುಗಳಿಂದ ಹೊರಬಂದು ದೇಶದ ಜಾತ್ಯತೀತ ಸ್ವರೂಪಕ್ಕೆ ಮತ್ತೆ ಚೌಕಟ್ಟನ್ನು ಕಟ್ಟತೊಡಗಿದರೆ, ಆಗ ಈ ವಿಚಾರಧಾರೆಯೂ ಇಷ್ಟೇ ವ್ಯಾಪಕವಾಗಿ ಸ್ವಾಗತಿಸಲ್ಪಡಬಹುದೇ?
ಪ್ರಜಾತಂತ್ರ ವ್ಯವಸ್ಥೆ ಇರುವವರೆಗೆ ಏಕಮುಖ ವಿಚಾರಧಾರೆ ಹೆಚ್ಚು ದಿನ ಬಾಳಿಕೆ ಬರಲು ಸಾಧ್ಯವಿಲ್ಲ. ಈ ದೇಶಕ್ಕೊಂದು ವಿಚಾರಧಾರೆಯನ್ನು ಕಟ್ಟಿಕೊಟ್ಟದ್ದು ಸಂವಿಧಾನ. ಕಾಂಗ್ರೆಸ್ ಆಗಲಿ, ಜನತಾ ಪರಿವಾರವಾಗಲಿ ಅಥವಾ ಬಿಜೆಪಿಯೇ ಆಗಲಿ ಸಂವಿಧಾನವನ್ನು ತಿರಸ್ಕರಿಸಿ ಮಾತಾಡಿಲ್ಲ. ಯಾಕೆಂದರೆ, ಹಾಗೆ ಮಾಡುವುದು ಅತ್ಯಂತ ಅಪಾಯಕಾರಿ ಎಂಬುದು ಅವುಗಳಿಗೆ ಗೊತ್ತು. ಯೋಗಿ ಆದಿತ್ಯನಾಥ್‍ರು ಇವತ್ತು ಏನನ್ನು ಪ್ರತಿಪಾದಿಸುತ್ತಿದ್ದಾರೋ ಅದು ಸಂಪೂರ್ಣ ಸಾಂವಿಧಾನಿಕವಲ್ಲ ಎಂಬುದು ಈ ದೇಶದ ಜನರಿಗೆ ಗೊತ್ತು. ಆದ್ದರಿಂದಲೇ ಅವರ ಮಾತುಗಳಿಗೆ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಕೆಲವೊಮ್ಮೆ ಬಿಜೆಪಿಯೇ ಇಂಥ ಮಾತುಗಳಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದೆ. ನಿಜವಾಗಿ, ಬಿಜೆಪಿಯ ವಿಚಾರಧಾರೆ ಸಂವಿಧಾನಕ್ಕೆ ಪೂರಕ ಅಲ್ಲದೇ ಇರಬಹುದು. ಆದರೆ, ಅದನ್ನು ಧೈರ್ಯದಿಂದ ಪ್ರಸ್ತುತಪಡಿಸಲು ಈ ದೇಶದ ಪ್ರಜಾತಂತ್ರ ವ್ಯವಸ್ಥೆ ಅನುವು ಮಾಡಿಕೊಡುತ್ತಿಲ್ಲ. ಪ್ರಜಾತಂತ್ರವನ್ನು ದುರ್ಬಲಗೊಳಿಸುವ ಸಣ್ಣ ಪ್ರಯತ್ನವೂ ಇಲ್ಲಿ ಈಗಲೂ ದೊಡ್ಡ ಚರ್ಚಾ ವಿಷಯವಾಗುತ್ತಿದೆ. ಆದ್ದರಿಂದಲೇ ಬಿಜೆಪಿ ಚುನಾವಣೆಯ ಸಂದರ್ಭದಲ್ಲಿ ಏನೇ ಕಾರ್ಯತಂತ್ರವನ್ನು ರೂಪಿಸಲಿ ಮತ್ತು ಹೇಳಿಕೆಗಳನ್ನು ಕೊಡಲಿ, ನಿರ್ಣಾಯಕ ಸಂದರ್ಭದಲ್ಲಿ ಜಾತ್ಯತೀತ ಆಗಲೇ ಬೇಕಾದ ಸಂದಿಗ್ಧಕ್ಕೆ ಸಿಲುಕುತ್ತಿದೆ. ಇದಕ್ಕಿರುವ ಇನ್ನೊಂದು ಕಾರಣ, ಸದ್ಯದ ವಾತಾವರಣ ಯಾವ ಸಮಯದಲ್ಲೂ ಬದಲಾಗಿ ಬಿಡಬಹುದು ಅನ್ನುವುದು. ಇವತ್ತು ಜಾತ್ಯತೀತ ಪಕ್ಷಗಳ ವಿರುದ್ಧ ಜನರು ಮುನಿಸಿರಬಹುದು. ನಾಳೆ, ಬಿಜೆಪಿಯ ಉಗ್ರ ವಿಚಾರಧಾರೆಯ ವಿರುದ್ಧವೂ ಇದೇ ವಾತಾವರಣ ಸೃಷ್ಟಿಯಾಗಬಾರದು ಎಂದೇನಿಲ್ಲ. ಆದ್ದರಿಂದಲೇ, ಅದು ಸಮತೋಲನದ ಹೆಜ್ಜೆ ಹಾಕುತ್ತಿದೆ. ಮುಹ್ಸಿನ್ ರಝಾ ಮತ್ತು ಶೌಚಾಲಯಗಳು ಈ ಸಂದಿಗ್ಧತೆಯನ್ನು ಪ್ರತಿನಿಧಿಸುವ ಎರಡು ಉದಾಹರಣೆಗಳು. ನಿಜವಾಗಿ, ಬಿಜೆಪಿಯ ಭಾಷೆಯಲ್ಲಿ ಶೌಚಾಲಯ ಕಟ್ಟಿಸುವುದೆಂದರೆ ಮುಸ್ಲಿಮ್ ಓಲೈಕೆ ಮತ್ತು ತುಷ್ಠೀಕರಣ. ಕಾಂಗ್ರೆಸ್ ಅನ್ನು ಈ ಹಿಂದೆ ಹಲವು ಬಾರಿ ಇದೇ ಕಾರಣಕ್ಕಾಗಿ ಅದು ಹೀಗೆ ಟೀಕಿಸಿದೆ. ಆದರೆ, ಈಗ ಅದನ್ನೇ ಮಾಡಬೇಕಾದ ಅನಿವಾರ್ಯತೆ ಅದಕ್ಕಿದೆ. ಇದು ಪ್ರಜಾತಂತ್ರದ ಗೆಲುವು. ಈ ಗೆಲುವೇ ಮುಂದಿನ ಆಶಾವಾದವೂ ಹೌದು.

No comments:

Post a Comment