Wednesday 24 May 2017

ಮುಸ್ಲಿಮ್ ಸಬಲೀಕರಣ: ಒಳ-ಹೊರಗೆ..

     ಸಾಚಾರ್ ವರದಿ ಮತ್ತು ರಂಗನಾಥ್ ಮಿಶ್ರಾ ವರದಿಗಳನ್ನು ಮುಂದಿಟ್ಟುಕೊಂಡು ಮುಸ್ಲಿಮ್ ಸಮುದಾಯದ ಒಳಗೂ ಹೊರಗೂ ಚರ್ಚೆಗಳಾಗುತ್ತಿವೆ. ವಿದ್ವತ್‍ಪೂರ್ಣ ಭಾಷಣಗಳಾಗುತ್ತಿವೆ. ಮುಸ್ಲಿಮ್ ಸಮುದಾಯದ ವಿವಿಧ ಸಂಘಟನೆಗಳು ಈ ವರದಿಗಳ ಆಧಾರದಲ್ಲಿಯೇ ಅಥವಾ ಈ ವರದಿಯನ್ನು ನೆಪ ಮಾಡಿಕೊಂಡೇ ಅಭಿವೃದ್ಧಿಯ ನೀಲನಕ್ಷೆಯನ್ನು ರೂಪಿಸುತ್ತಿವೆ. ಸರ್ವೇಗಳಾಗುತ್ತಿವೆ. ಬಾಹ್ಯನೋಟಕ್ಕೆ ಇವು ಅತ್ಯಂತ ಪ್ರಶಂಸಾರ್ಹ ಚಟುವಟಿಕೆಗಳಾಗಿ ಕಂಡರೂ ಇವು ಎತ್ತುವ ಅತಿ ಮಹತ್ವಪೂರ್ಣ ಪ್ರಶ್ನೆಗಳಿವೆ. ಸಾಚಾರ್ ಆಯೋಗವು ಪತ್ತೆ ಹಚ್ಚಿರುವ ಸಮಸ್ಯೆಗಳಿಗೆ ಮೂಲ ಕಾರಣಕರ್ತರು ಯಾರು? ರಂಗನಾಥ್ ಮಿಶ್ರಾ ಆಯೋಗವು ಎತ್ತಿ ಹೇಳಿರುವ ಸಮಸ್ಯೆಗಳ ಹೊಣೆಯನ್ನು ಯಾರು ಹೊರಬೇಕು? ಸರಕಾರಕ್ಕೆ ಒಂದು ಸಮುದಾಯದ ಸ್ಥಿತಿ-ಗತಿಗಳ ಕುರಿತು ಅಧ್ಯಯನ ನಡೆಸಬೇಕಾದ ಅಗತ್ಯ ಬರುತ್ತದೆಂದರೆ, ಅದನ್ನು ಬರೇ ಪ್ರಶಂಸನೀಯ ನಡೆಯೆಂಬುದಾಗಿ ಗುರುತಿಸಿದರಷ್ಟೇ ಸಾಕೇ ಅಥವಾ ಅದಕ್ಕೆ ನಕಾರಾತ್ಮಕವಾದ ಮುಖವೊಂದೂ ಇರಬಹುದೇ? ಇದ್ದರೆ ಅದು ಯಾವುದು? ಮುಸ್ಲಿಮ್ ಸಮುದಾಯದ ಒಳಗಿನ ಸಂಘಟನೆಗಳು ಈ ವರದಿಯ ಹೆಸರಲ್ಲಿ ರಚಿಸಿರುವ ನೀಲನಕ್ಷೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ಎಷ್ಟು ಸಮತೋಲನದಿಂದ ಕೂಡಿವೆ? ಇದು ಮುಸ್ಲಿಮ್ ಸಮುದಾಯದ ವಿರುದ್ಧ ಇತರ ಸಮುದಾಯಗಳನ್ನು ಎತ್ತಿ ಕಟ್ಟುವ ಅಥವಾ ಅವರಲ್ಲಿ ಅಸೂಯೆಯೊಂದನ್ನು ಹುಟ್ಟು ಹಾಕುವುದಕ್ಕೆ ಪ್ರೇರಕವಾಗುವ ರೀತಿಯಲ್ಲಿ ಇವೆಯೇ?
    ಈ ದೇಶದ ಎಲ್ಲರಿಗೂ ಇರುವುದು ಒಂದೇ ಸಂವಿಧಾನ. ಅದು ಮನುಷ್ಯರ ನಡುವೆ ತಾರತಮ್ಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಬ್ರಾಹ್ಮಣ ಶ್ರೇಷ್ಠತೆಯನ್ನೂ ದಲಿತ ನಿಕೃಷ್ಟತೆಯನ್ನೂ ಅದು ತಳ್ಳಿ ಹಾಕಿದೆ. ಮುಸ್ಲಿಮರ ಅಸ್ತಿತ್ವವನ್ನೂ ಮತ್ತು ಫಾರ್ಸಿಗಳ ಅಸ್ತಿತ್ವವನ್ನೂ ಅದು ಸಮಾನವಾಗಿ ಗೌರವಿಸಿದೆ. ಹಾಗಿದ್ದೂ, ಸ್ವಾತಂತ್ರ್ಯದ ಬಳಿಕದ ಈ ದೀರ್ಘ 7 ದಶಕಗಳ ಅವಧಿಯಲ್ಲಿ ಅಭಿವೃದ್ಧಿ ಯೋಜನೆಗಳು ಯಾಕೆ ಎಲ್ಲರನ್ನೂ ಸಮಾನವಾಗಿ ತಲುಪಿಲ್ಲ? ಒಂದು ಸರಕಾರವು ಮುಸ್ಲಿಮರ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು ಸಾಚಾರ್ ಆಯೋಗವನ್ನು ರಚಿಸುತ್ತದೆಂದರೆ ಅದು ಮುಸ್ಲಿಮ್ ಸಮುದಾಯವನ್ನು ಸಮಾನ ನೆಲೆಯಲ್ಲಿ ನೋಡಿಲ್ಲ ಎಂದೂ ಆಗುತ್ತದಲ್ಲವೇ? ಸಂವಿಧಾನಕ್ಕೆ ಎಲ್ಲರೂ ಸಮಾನವೆಂದ ಮೇಲೆ ಸರಕಾರದ ಅಭಿವೃದ್ಧಿ ಯೋಜನೆಗಳೂ ಸಮಾನವಾಗಿ ಹಂಚಿಕೆಯಾಗಬೇಕಲ್ಲವೇ? ಎಲ್ಲ ಭಾರತೀಯರೂ ಅದರ ಸಮಾನ ಫಲಾನುಭವಿಗಳಾಗಿರಬೇಕಲ್ಲವೇ? ಆದರೆ ಹೀಗೆ ಆಗಿಲ್ಲ ಅನ್ನುವುದಕ್ಕೆ ಸಾಚಾರ್ ಮತ್ತು ರಂಗನಾಥ್ ಮಿಶ್ರಾ ವರದಿಗಳೇ ಪುರಾವೆ. ಮಾತ್ರವಲ್ಲ, ಈ ಎರಡೂ ಆಯೋಗಗಳನ್ನು ರಚಿಸುವ ಮೂಲಕ ಖುದ್ದು ಸರಕಾರವೇ ತನ್ನ ವೈಫಲ್ಯವನ್ನು ಒಪ್ಪಿಕೊಂಡಿದೆ. ಒಂದು ವ್ಯವಸ್ಥೆ ಈ ಮಟ್ಟದಲ್ಲಿ ವಿಫಲವಾದುದಕ್ಕೆ ಕಾರಣಗಳೇನು? ಉದ್ದೇಶಪೂರ್ವಕ ಅಸಡ್ಡೆಯೋ ಅಥವಾ ಕಾರ್ಯಾಂಗದೊಳಗಿನ ಪಿತೂರಿಗಳೋ? ನಿಜವಾಗಿ, ಸಾಚಾರ್ ಮತ್ತು ರಂಗನಾಥ್ ಮಿಶ್ರಾ ವರದಿಗಳನ್ನಿಟ್ಟುಕೊಂಡು ಮುಸ್ಲಿಮ್ ಸಮುದಾಯದ ಸಬಲೀಕರಣದ ಚರ್ಚೆಗಳನ್ನು ಏರ್ಪಡಿಸುವಾಗಲೆಲ್ಲ ಈ ವಿಷಯಗಳು ಮುನ್ನೆಲೆಗೆ ಬರಬೇಕು. ಯಾಕೆಂದರೆ, ವರದಿಗಳು ಬರೇ ವರದಿಗಳಷ್ಟೇ. ಅದು ಕಾರ್ಯ ರೂಪಕ್ಕೆ ಬರುವುದು ಇದೇ ಶಾಸಕಾಂಗ ಮತ್ತು ಕಾರ್ಯಾಂಗಗಳ ಮೂಲಕ. ಕಳೆದ 7 ದಶಕಗಳಲ್ಲಿ ನಮ್ಮ ಶಾಸಕಾಂಗ ಮತ್ತು ಕಾರ್ಯಾಂಗಗಳು ದಲಿತರನ್ನು ಮತ್ತು ಮುಸ್ಲಿಮರನ್ನು ಈ ದೇಶದ ಇತರ ಪ್ರಜೆಗಳಿಗೆ ಸರಿಸಮಾನವಾಗಿ ಕಾಣಲು ಹಿಂದೇಟು ಹಾಕಿವೆ ಎಂಬುದನ್ನು ವರದಿಗಳೇ ಸ್ಪಷ್ಟಪಡಿಸುತ್ತವೆ. ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಜನಪ್ರತಿನಿಧಿಗಳು ಮತ್ತು ಅದನ್ನು ಜಾರಿಗೊಳಿಸುವ ಅಧಿಕಾರಿಗಳು ದಲಿತರು ಮತ್ತು ಮುಸ್ಲಿಮರನ್ನು ನಿಕೃಷ್ಟವಾಗಿ ನೋಡಿದ್ದಾರೆ. ಅದರ ಫಲಿತಾಂಶವೇ ಎರಡು ವರದಿಗಳು. ಇದರ ಇನ್ನೊಂದು ಪರಿಣಾಮ ಏನೆಂದರೆ, ಮುಸ್ಲಿಮರ ಸಬಲೀಕರಣವನ್ನು ಗುರಿಯಾಗಿಸಿಕೊಂಡು ಸಂಘಟನೆಗಳೂ ತಂಡಗಳೂ ಮುಸ್ಲಿಮರೊಳಗೇ ಹುಟ್ಟಿಕೊಂಡವು. ಅಭಿವೃದ್ಧಿಯ ನೀಲನಕ್ಷೆಗಳನ್ನು ಅವು ರಚಿಸತೊಡಗಿದುವು. ಇದು ತಪ್ಪು ಎಂದಲ್ಲ. ಆದರೆ ಇದರ ಇನ್ನೊಂದು ಮುಖ ಏನೆಂದರೆ, ಮುಸ್ಲಿಮ್ ಸಮುದಾಯವು ಇತರ ಸಮುದಾಯಗಳಿಂದ ನಿಧಾನಕ್ಕೆ ಪ್ರತ್ಯೇಕಗೊಂಡದ್ದು. ಅಭಿವೃದ್ಧಿಯ ನೀಲನಕ್ಷೆಗಳು ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡಾಗ ಮತ್ತು ಮುಸ್ಲಿಮರಿಗಿಂತಲೂ ನಿಕೃಷ್ಟ ಸ್ಥಿತಿಯಲ್ಲಿರುವ ಇತರ ಸಮುದಾಯಗಳಿಗೆ ಅದು ವಿಸ್ತರಿಸುವ ಗುಣಲಕ್ಷಣ ಹೊಂದದಾಗ ಅಲ್ಲಿ ಸಹಜ ಪ್ರತ್ಯೇಕತೆಯೊಂದು ಏರ್ಪಡುತ್ತದೆ. ಬಡತನಕ್ಕೆ ಧರ್ಮದ ಹಂಗಿಲ್ಲ. ಬಡತನ ಮುಸ್ಲಿಮರ ಜೊತೆಗಿದ್ದರೂ ದಲಿತರ ಜೊತೆಗಿದ್ದರೂ ಪರಿಣಾಮದಲ್ಲಿ ವ್ಯತ್ಯಾಸವೇನಿಲ್ಲ. ಆದರೆ ಮುಸ್ಲಿಮರನ್ನೇ ಗುರಿಯಾಗಿಟ್ಟುಕೊಂಡು ಮಾಡಲಾಗುವ ಸಬಲೀಕರಣದ ಯೋಜನೆಗಳು ಮತ್ತು ಆಡಲಾಗುವ ಮಾತುಗಳು, ಸೆಮಿನಾರ್‍ಗಳು ಇತರ ಸಮುದಾಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳೂ ಇರುತ್ತವೆ ಅಥವಾ ಅವರನ್ನು ಮುಸ್ಲಿಮರ ಮೇಲೆ ಎತ್ತಿಕಟ್ಟುವುದಕ್ಕೆ ಸಮಯ ಸಾಧಕರಿಗೆ ಅವಕಾಶಗಳನ್ನು ಒದಗಿಸಿ ಕೊಡುವುದಕ್ಕೂ ಸಾಧ್ಯವಿದೆ. ಅಕ್ಕ-ಪಕ್ಕ ಇರುವ ಎರಡು ಸಮುದಾಯಗಳ ಎರಡು ಮನೆಗಳಲ್ಲಿ ಒಂದು ಮನೆಯವರು ಸಬಲರಾಗುತ್ತಾ ಹೋಗುವುದು ಮತ್ತು ಅದಕ್ಕೆ ಆ ಸಮುದಾಯದ ಸಂಘಟನೆಗಳ ನೀಲನಕ್ಷೆಗಳೇ ಕಾರಣವಾಗುತ್ತಿರುವುದನ್ನು ಇನ್ನೊಂದು ಮನೆಯವರು ಸಕಾರಾತ್ಮಕವಾಗಿಯೇ ನೋಡಬೇಕಿಲ್ಲ. ನಕಾರಾತ್ಮಕವಾದ ದೃಷ್ಟಿಕೋನಕ್ಕೂ ಅವಕಾಶ ಇದೆ. ಇದನ್ನೇ ಎತ್ತಿಕೊಂಡು ಕೋಮುವಾದಿಗಳು ಸಲಬಗೊಂಡ ಪಕ್ಕದ ಮನೆಯವರ ವಿರುದ್ಧ ಇವರನ್ನು ಎತ್ತಿ ಕಟ್ಟುವ ಮತ್ತು ಅಸೂಯೆ ಭಾವವನ್ನು ಬಿತ್ತುವುದಕ್ಕೂ ಅವಕಾಶ ಇದೆ. ತಮ್ಮ ಹಿಂದುಳಿಯುವಿಕೆಯ ಕೀಳರಿಮೆಯನ್ನು ಮುಂದುವರಿದವರ ಮೇಲೆ ಹಗೆ ತೀರಿಸುವ ಮೂಲಕ ತೃಪ್ತಿಪಡಿಸಿಕೊಳ್ಳುವುದಕ್ಕೂ ಅವಕಾಶ ಇದೆ. ಸದ್ಯ ಕೋಮುಗಲಭೆಯ ಹೆಸರಲ್ಲಿ ಮತ್ತು ಗೋವು ಮತ್ತಿತರವುಗಳ ನೆಪದಲ್ಲಿ ಮುಸ್ಲಿಮರ ಮೇಲೆ ಆಗುತ್ತಿರುವ ಹಲ್ಲೆ ಹಾಗೂ ಹತ್ಯೆಗಳಲ್ಲಿ ನಾವಿದನ್ನು ಗುರುತಿಸಬಹುದು. ದಲಿತ, ಬಡವ, ದಮನಿತ ವರ್ಗದ ಯುವಕರೇ ಈ ಕ್ರೌರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಇನ್ನಷ್ಟು ಸತ್ಯಗಳು ಹೊರಬೀಳಲೂ ಬಹುದು.
    ಇಲ್ಲಿ ಎರಡು ರೀತಿಯ ತಪ್ಪುಗಳಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಒಂದು, ಸರಕಾರದ ಕಡೆಯಿಂದಾದರೆ ಇನ್ನೊಂದು ಸಂಘಟನೆಗಳ ಕಡೆಯಿಂದ. ಬಡತನಕ್ಕೆ ಈ ಸಂಘಟನೆಗಳು ಗೆರೆಯನ್ನೆಳೆದಿವೆ. ಆ ಗೆರೆಯ ಹೊರಗಿನ ಬಡತನವನ್ನು ಅವು ಸಮುದಾಯದ ಬಡತನವಾಗಿ ಪರಿಗಣಿಸದೇ ಇರುವ ಸಾಧ್ಯತೆಗಳೂ ಉಂಟಾಗಿ, ನಾವು ಮತ್ತು ಅವರು ಎಂಬ ವಿಭಜನೆ ಅಗೋಚರವಾಗಿ ಸೃಷ್ಟಿಯಾಗಿರುವ ಸಾಧ್ಯತೆಗಳೂ ಇವೆ. ಎಲ್ಲರೂ ಇರುವ ಜನರ ಗುಂಪಿನಿಂದ ಕೆಲವರನ್ನು ಪ್ರತ್ಯೇಕಗೊಳಿಸಿ ಅವರ ಸಬಲೀಕರಣಕ್ಕಾಗಿ ಮಾತ್ರ ಪ್ರಯತ್ನಿಸುವುದು ಗುಂಪಿನ ಇತರರಲ್ಲಿ ದ್ವೇಷವನ್ನೂ ಹುಟ್ಟಿಸಬಹುದು. ಸಬಲಗೊಂಡವರ ಮೇಲೆ ಅಸೂಯೆಗೂ ಕಾರಣವಾಗಬಹುದು. ಸಂದರ್ಭ ನೋಡಿಕೊಂಡು ಅವರಿಗೆ ನಷ್ಟವನ್ನುಂಟು ಮಾಡುವುದಕ್ಕೂ ಅವರು ಯತ್ನಿಸಬಹುದು. ಆದ್ದರಿಂದಲೇ ಸಬಲೀಕರಣ ಎಂಬುದರ ವ್ಯಾಪ್ತಿಯೊಳಗೆ ಎಲ್ಲ ಮರ್ದಿತರು ಮತ್ತು ದುರ್ಬಲರನ್ನು ತರುವ ಪ್ರಯತ್ನಗಳಾಗಬೇಕಾಗಿದೆ. ಸಮುದಾಯ ಎಂಬ ಗೆರೆಯನ್ನು ಸಮಾಜ ಎಂಬ ಗೆರೆಯಾಗಿ ಪರಿವರ್ತಿಸಲು ಶ್ರಮಿಸಬೇಕಾಗಿದೆ. ಇದು ಇಂದಿನ ಅಗತ್ಯ.

Friday 19 May 2017

ಐಸಿಸ್ ಗೆ ಸೇರುವ ಮುಸ್ಲಿಂ ಯುವಕರು ಮತ್ತು ದಿಗ್ಗಿ ಬಾಂಬ್

 
    ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯೊಂದು (ಟ್ವೀಟ್) ತೀವ್ರ ಚರ್ಚೆಗೆ ಕಾರಣವಾಗಿದೆ. ತೆಲಂಗಾಣದ ಪೊಲೀಸ್ ಮಹಾ ನಿರ್ದೇಶಕರು ಈ ಟ್ವೀಟನ್ನು ವಿರೋಧಿಸಿದ್ದಾರೆ. ಬಿಜೆಪಿಯ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಅವರು ಈ ಟ್ವೀಟ್ ಅನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಇನ್ನೊಂದೆಡೆ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಕೇಸೂ ದಾಖಲಾಗಿದೆ. ದಿಗ್ವಿಜಯ್ ಸಿಂಗ್ ಹೇಳಿದ್ದು ಇಷ್ಟೇ - “ಮುಸ್ಲಿಮ್ ಯುವಕರನ್ನು ಮೂಲಭೂತವಾದಿಗಳಾಗುವಂತೆ ಮತ್ತು ಐಸಿಸ್ ಗುಂಪನ್ನು ಸೇರಿಕೊಳ್ಳುವಂತೆ ಪ್ರಚೋದಿಸುವ ಸಲುವಾಗಿ ತೆಲಂಗಾಣ ಪೊಲೀಸರು ಐಸಿಸ್‍ನ ನಕಲಿ ವೆಬ್‍ಸೈಟನ್ನು ತೆರೆದಿದ್ದಾರೆ..”
     ನಿಜವಾಗಿ, ಈ ಬಗೆಯ ಅಭಿಪ್ರಾಯ ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ ಮತ್ತು ಇಂಥ ಅಭಿಪ್ರಾಯಗಳು ಸಾರ್ವಜನಿಕವಾಗಿ ಚಾಲ್ತಿಯಲ್ಲಿರುವುದೂ ರಹಸ್ಯವಲ್ಲ. ಭಯೋತ್ಪಾದನೆಯ ಆರೋಪದಲ್ಲಿ 15 ವರ್ಷಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡ ಜಾವೇದ್ ಅಲಿ ಎಂಬವ ಈ ಹಿಂದೆ ಇಂಥದ್ದೇ ಆರೋಪವನ್ನು ಹೊರಿಸಿದ್ದ. ಆ ಕುರಿತಂತೆ ದೀರ್ಘ ಪತ್ರವನ್ನೂ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದ. ಪೊಲೀಸರ ಸೂಚನೆಯಂತೆ ತಾನು ಹೇಗೆ ಮುಸ್ಲಿಮ್ ಯುವಕರನ್ನು ಭಯೋತ್ಪಾದನಾ ಸಂಚಿನಲ್ಲಿ ಭಾಗಿಗೊಳಿಸಿದೆ ಎಂದಾತ ವಿವರಿಸಿದ್ದ. ಮಾಧ್ಯಮಗಳಲ್ಲಿ ಇದು ಸುದ್ದಿಗೂ ಒಳಗಾಗಿತ್ತು. ಅಲ್ಲದೇ, ಇಂಥದ್ದೊಂದು ಸಾಧ್ಯತೆಯನ್ನು ಸಾರಾಸಗಟಾಗಿ ತಿರಸ್ಕರಿಸುವ ಸಂದರ್ಭವೂ ಇವತ್ತಿನದ್ದಲ್ಲ. ಐಸಿಸ್ ಅನ್ನೇ ಎತ್ತಿಕೊಳ್ಳಿ ಅಥವಾ ತಾಲಿಬಾನ್, ಅಲ್‍ಕಾಯ್ದಾ ಮತ್ತಿತರ ವಿನಾಶಕ ಗುಂಪುಗಳನ್ನೇ ಪರಿಗಣಿಸಿ. ಅವುಗಳ ಹುಟ್ಟು ಮತ್ತು ಬೆಳವಣಿಗೆಯನ್ನು ಪರಿಶೀಲಿಸುತ್ತಾ ಹೋದಂತೆ ನಾವು ಅಮೇರಿಕಕ್ಕೋ ಯುರೋಪಿಯನ್ ರಾಷ್ಟ್ರಗಳಿಗೋ ಅಥವಾ ಇಸ್ರೇಲ್‍ಗೋ ತಲುಪಿಬಿಡುತ್ತೇವೆ. ತಾಲಿಬಾನನ್ನು ಬೆಳೆಸಿದ್ದೇ  ಅಮೇರಿಕ. ಹಾಗಂತ, ತಾಲಿಬಾನ್‍ಗಳಲ್ಲಿರುವವರೆಲ್ಲ ಮುಸ್ಲಿಮ್ ನಾಮಧಾರಿಗಳೇ ಎಂಬುದು ನಿಜ. ಆದರೆ, ಅವರ ಚಟುವಟಿಕೆಗಳಾದರೋ ನಾಗರಿಕ ಜಗತ್ತು ಒಪ್ಪಿಕೊಳ್ಳದಷ್ಟು ಶಿಲಾಯುಗಕ್ಕೆ ಸೇರಿದ್ದು. ಹೀಗಿದ್ದೂ, ವೈಚಾರಿಕವಾಗಿ ಅತ್ಯಂತ ಮುಂದುವರಿದ ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಮುಂಚೂಣಿಯಲ್ಲಿ ನಿಂತು ಮಾತಾಡುವ ರಾಷ್ಟ್ರವೊಂದು ಶಿಲಾಯುಗದ ಭಾಷೆಯಲ್ಲಿ ಮಾತಾಡುವ ಗುಂಪನ್ನು ಬೆಂಬಲಿಸುವುದಕ್ಕೆ ಹೇಗೆ ಸಾಧ್ಯವಾಯಿತು? ಅಮೇರಿಕವು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟ ರಾಷ್ಟ್ರ. ಮಹಿಳಾ ಹಕ್ಕುಗಳನ್ನು ಪ್ರಬಲವಾಗಿ ಪ್ರತಿಪಾದಿಸುವ ರಾಷ್ಟ್ರ. ಜಗತ್ತಿನ ಎಲ್ಲ ಸದ್‍ಮೌಲ್ಯಗಳೂ ತನ್ನ ಗಡಿಯೊಳಗಿವೆ ಎಂಬ ಹಮ್ಮು ತೋರುವ ರಾಷ್ಟ್ರ. ಇಂಥ ದೇಶವೊಂದು ಈ ಯಾವ ಕೆಟಗರಿಯೊಳಗೂ ಬರದ ಗುಂಪನ್ನು ಬೆಂಬಲಿಸುವುದಕ್ಕೆ ಏನು ಸಮರ್ಥನೆಯಿದೆ? ತನ್ನ ವಿಚಾರಧಾರೆಗೆ ಯಾವ ನೆಲೆಯಲ್ಲೂ ಒಗ್ಗದ ಗುಂಪನ್ನು ಬೆಂಬಲಿಸುವುದಕ್ಕೆ ಅಮೇರಿಕಕ್ಕೆ ಸಾಧ್ಯವೆಂದಾದರೆ ಅದು ಕೊಡುವ ಸಂದೇಶವೇನು? ತನ್ನ ಉದ್ದೇಶ ಸಾಧನೆಗಾಗಿ ಒಂದು ದೇಶ ಯಾವ ಮಟ್ಟಕ್ಕೂ ಇಳಿಯಬಹುದು ಎಂಬುದನ್ನೇ ಅಲ್ಲವೇ? ಅಲ್‍ಕಾಯಿದಾ ಮತ್ತು ಐಸಿಸ್‍ನ ಹುಟ್ಟು ಮತ್ತು ಬೆಳವಣಿಗೆಯಲ್ಲೂ ಇಂಥದ್ದೊಂದು ಅನುಮಾನ ಆರಂಭದಿಂದಲೂ ಇದೆ. ಐಸಿಸ್‍ನ ನಾಯಕ ಅಬೂಬಕರ್ ಬಗ್ದಾದಿ ಎಂಬವ ಅಮೇರಿಕದ ಜೈಲಲ್ಲಿದ್ದು ಬಿಡುಗಡೆಗೊಂಡವ ಎಂಬುದು ಇದಕ್ಕಿರುವ ಹಲವು ಪುರಾವೆಗಳಲ್ಲಿ ಒಂದು ಮಾತ್ರ. ಅಲ್‍ಕಾಯ್ದಾ ಸುದ್ದಿಯಲ್ಲಿರುವ ವರೆಗೆ ಐಸಿಸ್‍ನ ಪತ್ತೆಯೇ ಇರಲಿಲ್ಲ. ಯಾವಾಗ ಐಸಿಸ್ ಹುಟ್ಟಿಕೊಂಡಿತೋ ಅಲ್‍ಕಾಯ್ದಾ ನಾಪತ್ತೆಯಾಯಿತು. ಅಂದಹಾಗೆ, ಇವುಗಳು ಮಾತಾಡುವ ಭಾಷೆ ಒಂದೇ - ಹಿಂಸೆಯದ್ದು. ಚಟುವಟಿಕೆಯೂ ಒಂದೇ - ಹಿಂಸೆ. ಅವುಗಳಲ್ಲಿರುವವರ ಹೆಸರುಗಳೂ ಒಂದೇ - ಮುಸ್ಲಿಮ್. ಇವರೇಕೆ ಹೀಗೆ, ಇವರ ತರಬೇತಿ ಎಲ್ಲಿ ನಡೆಯುತ್ತೆ, ಶಸ್ತ್ರಾಸ್ತ್ರಗಳು ಎಲ್ಲಿಂದ, ಆದಾಯ ಏನು, ಅವರು ಮಾರುತ್ತಿರುವರೆಂದು ಹೇಳಲಾಗುವ ಪೆಟ್ರೋಲ್‍ನ ಗ್ರಾಹಕರು ಯಾರು.. ಇಂಥ ಅಸಂಖ್ಯ ಪ್ರಶ್ನೆಗಳು ಆಗಾಗ ಮುನ್ನೆಲೆಗೆ ಬರುವುದೂ ಚರ್ಚೆಗೊಳಗಾಗುವದೂ ನಡೆಯುತ್ತಲೇ ಇರುತ್ತದೆ. ಅಂದಹಾಗೆ, ಇಂಥ ವಿನಾಶಕ ಗುಂಪುಗಳಲ್ಲಿರುವವರೆಲ್ಲ ಮುಸ್ಲಿಮರೇ. ಅವರು ವಿನಾಶ ಮಾಡುತ್ತಿರುವುದೂ ಮುಸ್ಲಿಮ್ ರಾಷ್ಟ್ರಗಳಲ್ಲೇ. ಆದರೆ ವಿನಾಶ ವಿರೋಧಿ ಹೋರಾಟ ಕೈಗೊಳ್ಳುವವರು ಮಾತ್ರ ಈ ವಿನಾಶದ ಅನುಭವ ತೀರಾ ತೀರಾ ಕಡಿಮೆ ಪ್ರಮಾಣದಲ್ಲಿ ಆಗಿರುವ ರಾಷ್ಟ್ರಗಳ ಮಂದಿ. ಭಯೋತ್ಪಾದನಾ ವಿರೋಧಿ ಹೋರಾಟದ ಹೆಸರಲ್ಲಿ ಅಮೆರಿಕ ಡಝನ್‍ಗಟ್ಟಲೆ ರಾಷ್ಟ್ರಗಳ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಅದು ವಿಶ್ವಸಂಸ್ಥೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತಾಲಿಬಾನನ್ನು ಪೋಷಿಸಿ ಬೆಳೆಸಿದ ಬಳಿಕವೇ ಅಮೆರಿಕದ ಅವಳಿ ಕಟ್ಟಡ ಉರುಳಿದ್ದು. ಆದ್ದರಿಂದ ತಾನು ಭಯೋತ್ಪಾದನಾ ವಿರೋಧಿ ಹೋರಾಟವನ್ನು ಕೈಗೊಳ್ಳಲು ಅವಳಿ ಕಟ್ಟಡದ ಧ್ವಂಸವೇ ಕಾರಣ ಎಂದು ಅದು ವಾದಿಸುವುದರಲ್ಲಿ ಯಾವ ನ್ಯಾಯವೂ ಇಲ್ಲ. ಬಹುಶಃ, ರಾಜಕೀಯ ಕಾರಣಗಳು ಇಂಥ ಗುಂಪುಗಳ ಹುಟ್ಟಿನ ಹಿಂದಿರಬಹುದು ಎಂದು ಬಲವಾಗಿ ಅನಿಸುವುದು ಇಂಥ ಕಾರಣಗಳಿಂದಲೇ. ಐಸಿಸ್‍ನಲ್ಲಿ ಯಾರಿದ್ದಾರೆ, ಅವರ ಹೆಸರುಗಳೇನು ಮತ್ತು ಅವರೆಷ್ಟು ಕರ್ಮಠ ಧರ್ಮಾನುಯಾಯಿಗಳು ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಅವರನ್ನು ಹಾಗೆ ಒಂದುಗೂಡಿಸುವಲ್ಲಿ ತೆರೆಯ ಹಿಂದೆ ನಡೆದಿರುವ ತಂತ್ರಗಳೇನು, ಆ ಶಕ್ತಿಗಳು ಯಾರು ಎಂಬುದೇ ಮುಖ್ಯವಾಗುತ್ತದೆ. ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆಯನ್ನು ನಾವು ಎತ್ತಿಕೊಳ್ಳಬೇಕಾದುದು ಈ ಎಲ್ಲ ಹಿನ್ನೆಲೆಯಲ್ಲಿ. ಈ ದೇಶದಲ್ಲಿ ಸ್ಫೋಟವಾಗುವ ಬಾಂಬುಗಳಿಗೆಲ್ಲ ಮುಸ್ಲಿಮರೇ ಕಾರಣ ಎಂಬುದು ಕರ್ನಲ್ ಪುರೋಹಿತ್, ಸಾದ್ವಿ ಪ್ರಜ್ಞಾಸಿಂಗ್, ಅಸೀಮಾನಂದ ಸಹಿತ ಹಲವರ ಬಂಧನವಾಗುವ ವರೆಗೆ ಚಾಲ್ತಿಯಲ್ಲಿತ್ತು. ಇವರ ಬಂಧನವಾಗುವರೆಗೆ ಮುಸ್ಲಿಮ್ ಆರೋಪಿಯ ಹೆಸರಿನ ಜಾಗದಲ್ಲಿ `ಅಸೀಮಾನಂದ’ ಎಂಬ ಗುರುತನ್ನು ಒಪ್ಪಿಕೊಳ್ಳಲು ಯಾರೂ ಸಿದ್ಧರಿರಲಿಲ್ಲ. ಕರ್ಕರೆಯನ್ನೇ ಅಪರಾಧಿ ಸ್ಥಾನದಲ್ಲಿ ಕೂರಿಸುವಷ್ಟರ ಮಟ್ಟೆಗೆ ‘ಅಸೀಮಾನಂದ' ಪರಿವಾರವು ಪ್ರತಿರೋಧ ಒಡ್ಡಿತ್ತು. ಆದರೆ ಅದು ನಿಜ ಮತ್ತು ಅದು ಸಾಧ್ಯ ಎಂಬುದನ್ನು ಮಾಲೆಗಾಂವ್ ಸ್ಫೋಟದಲ್ಲಿ ಇತ್ತೀಚೆಗೆ ಹೈ ಕೋರ್ಟ್ ನೀಡಿದ ತೀರ್ಪು ಸ್ಪಷ್ಟ ಪಡಿಸಿದೆ. ಆದ್ದರಿಂದ, ಇಂದಿನ ದಿನಗಳಲ್ಲಿ ಯಾವುದೂ ಅಸಾಧ್ಯವಿಲ್ಲ. ನಮ್ಮ ಕಣ್ಣಿಗೆ ಸ್ಫೋಟ ಮತ್ತು ಅದರಿಂದಾಗುವ ನಾಶ-ನಷ್ಟಗಳಷ್ಟೇ ಕಾಣಿಸುತ್ತವೆ. ಆಡಳಿತಗಾರರು ಕೊಡುವ ಕಾರಣಗಳೇ ನಮ್ಮ ಪಾಲಿಗೆ ಅಂತಿಮವೂ ಆಗಿರುತ್ತದೆ. ಆದರೆ `ನಿಜ’ ಅಷ್ಟೇ ಆಗಿರಬೇಕಿಲ್ಲ ಅಥವಾ ಅದುವೇ ಆಗಿರಬೇಕೆಂದೂ ಇಲ್ಲ. ಮಕ್ಕಾ ಮಸೀದಿ, ಅಜ್ಮೀರ್, ಮಾಲೆಗಾಂವ್, ಸಂಜೋತಾ ಎಕ್ಸ್‍ಪ್ರೆಸ್ ಮುಂತಾದ ಸ್ಫೋಟ ಪ್ರಕರಣಗಳ ಆರೋಪದಲ್ಲಿ `ಅಸೀಮಾನಂದ’ ಬಳಗವನ್ನು ಬಂಧಿಸುವ ಮೊದಲು ಇದೇ ಪ್ರಕರಣಗಳ ಆರೋಪದಲ್ಲಿ ನೂರರಷ್ಟು ಮುಸ್ಲಿಮ್ ಯುವಕರನ್ನು ಬಂಧಿಸಲಾಗಿತ್ತು. ವರ್ಷಗಳ ವರೆಗೆ ಜೈಲಲ್ಲಿ ಕೂಡಿಡಲಾಗಿತ್ತು. ತೀವ್ರ ಹಿಂಸೆಗೂ ಅವರು ಗುರಿಯಾಗಿದ್ದರು. ಅವರು ಜೈಲ್ಲಿನಲ್ಲಿರುವವರೆಗೆ  ಈ ದೇಶದ ಮಾಧ್ಯಮಗಳು ಅವರನ್ನು ಭಯೋತ್ಪಾದಕರೆಂದೇ ಬಣ್ಣಿಸಿದ್ದುವು. ಈ ದೇಶದ ಬಹುಸಂಖ್ಯಾತ ಮಂದಿ ಅವರನ್ನು ಅಪರಾಧಿಗಳೆಂದು ನಂಬಿಯೂ ಇದ್ದರು. ಆದರೆ `ಅಸೀಮಾನಂದ' ತಂಡದ ಬಂಧನದೊಂದಿಗೆ ಆ ನಂಬಿಕೆಯಲ್ಲಿ ದೊಡ್ಡದೊಂದು ಪಲ್ಲಟ ಉಂಟಾಯಿತು. ನಿಜವಾಗಿ, ಸಾರ್ವಜನಿಕ ಅಭಿಪ್ರಾಯಗಳು ಯಾವಾಗಲೂ ಇಷ್ಟೇ. ಆಡಳಿತಗಾರರು ಹೇಳಿದ್ದನ್ನು ಅಥವಾ ಬಾಹ್ಯವಾಗಿ ಕಾಣುವುದನ್ನಷ್ಟೇ ನಂಬುತ್ತಾರೆ. ಆದರೆ ಅದಕ್ಕೆ ಹೊರತಾದ ಕಾರಣಗಳೂ ಖಂಡಿತ ಇರುತ್ತವೆ. ಮಹಾರಾಷ್ಟ್ರದ ನಿವೃತ್ತ ಪೊಲೀಸ್ ಅಧಿಕಾರಿ ಮುಶ್ರಿಪ್ ಅವರು `ಕರ್ಕರೆಯನ್ನು ಕೊಂದದ್ದು ಯಾರು’ ಎಂಬ ಕೃತಿಯಲ್ಲಿ ಇಂಥ ಕಾಣದ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ರಾಜಕೀಯಕ್ಕೆ ಕೋಮುಗಲಭೆಗಳೂ ಬೇಕು, ಹತ್ಯಾಕಾಂಡಗಳೂ ಬೇಕು, ಜಾತ್ರೋತ್ಸವಗಳೂ ಬೇಕು. ಸಂದರ್ಭಕ್ಕೆ ತಕ್ಕಂತೆ ಎಲ್ಲವನ್ನೂ ಅದು ಸುದುಪಯೋಗ ಅಥವಾ ದುರುಪಯೋಗ ಮಾಡಿಕೊಳ್ಳುತ್ತಲೇ ಇರುತ್ತದೆ. ದಿಗ್ವಿಜಯ್ ಸಿಂಗ್ ಅವರ ಅಭಿಪ್ರಾಯವು ಮುಖ್ಯವಾಗುವುದು ಇಂಥ ಕಾರಣಗಳಿಂದ. ಅವರ ಅಭಿಪ್ರಾಯ ಸುಳ್ಳಾಗಲಿ ಎಂದಷ್ಟೇ ಹಾರೈಸಬೇಕಾಗಿದೆ.

Thursday 11 May 2017

ಕಾರ್ತಿಕ್ ರಾಜ್: ಜೆಹಾದಿಗಳು ಯಾರು?

       ಧರ್ಮಸ್ಥಳದ ಸೌಜನ್ಯ, ತೀರ್ಥಹಳ್ಳಿಯ ನಂದಿತಾ ಮತ್ತು ಮಂಗಳೂರು ಸಮೀಪದ ಕೊಣಾಜೆಯ ಕಾರ್ತಿಕ್ ರಾಜ್ - ಈ ಮೂರೂ ಸಾವುಗಳ ಬಗ್ಗೆ ರಾಜ್ಯ ಬಿಜೆಪಿ ಮಾತಾಡಿದ್ದು ಅತ್ಯಂತ ಏಕಮುಖವಾಗಿ. ಬಿಜೆಪಿ ಎಂಬುದು ಬಿಹಾರದ ನಿಷೇಧಿತ ರಣವೀರ ಸೇನೆಯಂತೆ ಖಾಸಗಿ ಗುಂಪಲ್ಲ ಅಥವಾ ಯಾವುದಾದರೂ ನಿರ್ದಿಷ್ಟ ಜಾತಿ, ಧರ್ಮ ಇಲ್ಲವೇ ಭಾಷೆಯ ಹಿತವನ್ನೇ ಗುರಿಯಾಗಿಟ್ಟುಕೊಂಡು ಕಾರ್ಯಪ್ರವೃತ್ತವಾಗಿರುವ ಸಂಘಟನೆಯೂ ಅಲ್ಲ. ಅದು ಅಧಿಕೃತ ರಾಜಕೀಯ ಪಕ್ಪ. ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಅದರ ಘೋಷಣೆ. ಇಂಥದ್ದೊಂದು  ಪಕ್ಷ ರಣವೀರ ಸೇನೆಯ ಭಾಷೆಯಲ್ಲಿ ಮಾತಾಡುವುದೆಂದರೆ ಏನರ್ಥ? ಮೇಲೆ ಉಲ್ಲೇಖಿಸಲಾದ ಮೂರೂ ಪ್ರಕರಣಗಳ ಸಂದರ್ಭದಲ್ಲಿ ಬಿಜೆಪಿ ನೀಡಿದ ಹೇಳಿಕೆ ಮತ್ತು ಮಾಡಿದ ಪ್ರತಿಭಟನೆಗಳು ಸಾರ್ವಜನಿಕವಾಗಿ ಆ ಪಕ್ಷದ ವಿಶ್ವಾಸಾರ್ಹತೆಯನ್ನು ಶಂಕಿಸುವಂತೆ ಮಾಡಿದೆ. ಅದರಲ್ಲೂ 2016 ಅಕ್ಟೋಬರ್‍ನಲ್ಲಿ ನಡೆದ ಕಾರ್ತಿಕ್ ರಾಜ್ ಎಂಬವರ ಹತ್ಯೆಯನ್ನಂತೂ ಬಿಜೆಪಿ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿತ್ತು. ಯಡಿಯೂರಪ್ಪನವರು ಗೃಹಸಚಿವ ಪರಮೇಶ್ವರ್ ಅವರಿಗೆ ಬರೆದ ಪತ್ರವನ್ನು ಪಕ್ಷದ ಮಾಧ್ಯಮ ಸಂಚಾಲಕ ಎಸ್. ಶಾಂತಾರಾಮ್ ಅವರು 2016 ಅಕ್ಟೋಬರ್ 24ರಂದು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದರು. ಪಕ್ಷದ ಅಧಿಕೃತ ಲೆಟರ್‍ಹೆಡ್‍ನಲ್ಲಿ ಮುದ್ರಿಸಲಾದ ಆ ಹೇಳಿಕೆ ಹೀಗಿತ್ತು:
“ಮಂಗಳೂರಿನ ಕೊಣಾಜೆಯಲ್ಲಿ ಹಿಂದುತ್ವ ವಿಚಾರಕ್ಕೆ ಬದ್ಧವಾಗಿದ್ದ ಯುವಕ ಕಾರ್ತಿಕ್ ರಾಜ್ ಅವರ ಹತ್ಯೆಯು ಜೆಹಾದಿ ಶಕ್ತಿಗಳು ರಾಜ್ಯದಲ್ಲಿ ನಡೆಸುತ್ತಿರುವ ರಾಜಕೀಯ ಹತ್ಯಾ ಸರಣಿಯ ಇತ್ತೀಚಿನ ಘಟನೆಯಾಗಿದೆ.. ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯ ವಿವಿಧ ಪ್ರಕರಣಗಳ ಹಿಂದೆ ವ್ಯವಸ್ಥಿತ ಸಂಚಿದೆ ಹಾಗೂ ಈ ಹತ್ಯೆಗಳೆಲ್ಲವೂ ಒಂದೇ ಮಾದರಿಯಲ್ಲಿ ಘಟಿಸುತ್ತಿವೆ. ಈ ಹಿಂದೆಯೂ ನಾನು ಈ ಕುರಿತಾಗಿ ಹೇಳಿದ್ದು ಇದೀಗ ಭಾನುವಾರ ಕಾರ್ತಿಕ್ ರಾಜ್ ಹತ್ಯೆಯು ನನ್ನ ಹೇಳಿಕೆಯನ್ನು ಮತ್ತಷ್ಟು ಪುಷ್ಟೀಕರಿಸಿದೆ. ಇತರ ಹತ್ಯೆಗಳಂತೆಯೇ ದುಷ್ಕರ್ಮಿಗಳು ಕಾರ್ತಿಕ್ ರಾಜ್ ಮೇಲೆ ಹಿಂದಿನಿಂದ ದಾಳಿ ನಡೆಸಿz್ದÁರೆ. ಅಲ್ಲದೇ ಇದಕ್ಕೆ ಖಡ್ಗ ಬಳಕೆಯಾಗಿದೆ. ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಇಬ್ಬರು ದುಷ್ಕರ್ಮಿಗಳೂ ಪತ್ತೆಯಾಗಬಾರದು ಎನ್ನುವ ಕಾರಣಕ್ಕೆ ಹೆಲ್ಮೆಟ್ ಮತ್ತು ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದರು. ಬೆಂಗಳೂರಿನ ಕಾಮರಾಜ್ ರಸ್ತೆಯಲ್ಲಿ ನಡೆದ ರುದ್ರೇಶ್ ಅವರ ಹತ್ಯೆಯಲ್ಲೂ ಇದೇ ರೀತಿಯ ವ್ಯವಸ್ಥಿತ ಸಂಚು ಇತ್ತು. ಈ ಹಿಂದಿನ ಬಹುತೇಕ ಎಲ್ಲ ಕೃತ್ಯಗಳಲ್ಲೂ ಒಂದೇ ರೀತಿಯ ತಂತ್ರವನ್ನು ಅನುಸರಿಸಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣಗಳನ್ನು ಗಮನಿಸಿದರೆ ಇವೆಲ್ಲದರ ಹಿಂದೆ ಒಂದೇ ಸಂಸ್ಥೆಗೆ ಸೇರಿದ ಶಕ್ತಿಗಳು ಶಾಮೀಲಾಗಿರುವಂತೆ ಕಾಣುತ್ತಿದೆ.. ರಾಜ್ಯದ ಗೃಹಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಅವರಿಗೆ ನನ್ನದೊಂದು ಪ್ರಶ್ನೆಯಿದೆ. ಜಿಹಾದಿ ಶಕ್ತಿಗಳ ಕೈಯಲ್ಲಿ ಇನ್ನೂ ಅದೆಷ್ಟು ಹತ್ಯೆಗಳಾಗುವ ವರೆಗೆ ನಿಮ್ಮ ಜಾಣ ಮೌನ ಮುಂದುವರಿಯುತ್ತದೆ ಹಾಗೂ ಇಂತಹ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಇನ್ನೂ ಎಷ್ಟು ಹತ್ಯೆಗಳಾಗುವ ವರೆಗೆ ಕಾಯುತ್ತೀರಿ..?”
ಕಾರ್ತಿಕ್ ರಾಜ್ ಹತ್ಯೆಗೆ ಸಂಬಂಧಿಸಿ ರಾಜ್ಯ ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆ (BJP Karnataka ITCell)ಯಲ್ಲಿ ಹೀಗೆ ಪ್ರತಿಕ್ರಿಯೆ ನೀಡಲಾಗಿತ್ತು:
One more activist from konaje mangaluru shri Karthik Raj was killed by Jehadi forces @BJP4Karnataka condemns same &shri@BSYBJP statement : (ಜಿಹಾದಿ ಶಕ್ತಿಗಳಿಂದ ಮಂಗಳೂರಿನ ಕೊಣಾಜೆಯಲ್ಲಿ ಇನ್ನೋರ್ವ ಕಾರ್ಯಕರ್ತನ ಹತ್ಯೆಯಾಗಿದೆ.) ಅಲ್ಲದೇ, ಯಡಿಯೂರಪ್ಪ ಮತ್ತು ಸ್ಥಳೀಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾರ್ತಿಕ್ ರಾಜ್ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿಯಿಂದ ಪ್ರತಿಭಟನೆಯೂ ನಡೆದಿತ್ತು. ಪೆÇಲೀಸರಿಗೆ ಗಡುವನ್ನೂ ವಿಧಿಸಲಾಗಿತ್ತು. ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರತಿಭಟನೆಯಲ್ಲಿ ಮಾತಾಡುತ್ತಾ ಎಚ್ಚರಿಸಿದ್ದರು. ಮಾತ್ರವಲ್ಲ, ಈ ಬೆಂಕಿ ಮಾತು ರಾಜ್ಯದಲ್ಲಿ ತೀವ್ರ ಚರ್ಚೆಗೂ ಕಾರಣವಾಗಿತ್ತು. ಓರ್ವ ಸಂಸದ ಸಮಾಜ ಘಾತುಕರ ಭಾಷೆಯಲ್ಲಿ ಮಾತಾಡಬಹುದೇ? ಬೆಂಕಿ ಹಚ್ಚುವೆ, ಕೊಲ್ಲುವೆ, ಮಾನಭಂಗ ಮಾಡುವೆ.. ಮುಂತಾದುವುಗಳೆಲ್ಲ ಭೂಗತ ಜಗತ್ತಿನ ಭಾಷೆಗಳು. ನಾಗರಿಕ ಸಮಾಜ ಎಂದೂ ಇಂಥ ಭಾಷೆ ಮತ್ತು ಚಟುವಟಿಕೆಗಳನ್ನು ಒಪ್ಪುವುದಿಲ್ಲ. ಇದನ್ನು ಒಪ್ಪುವ ಸಮಾಜ ನಾಗರಿಕ ಸಮಾಜವಾಗಿ ಗುರುತಿಸಿಕೊಳ್ಳುವುದಕ್ಕೆ ಅರ್ಹವೂ ಅಲ್ಲ. ಆದ್ದರಿಂದಲೇ, ಸುಮಾರು 10 ಲಕ್ಷದಷ್ಟು ಮಂದಿಯನ್ನು ಸಂಸತ್‍ನಲ್ಲಿ ಪ್ರತಿನಿಧಿಸುವ ವ್ಯಕ್ತಿಯೋರ್ವ ಗೂಂಡಾ ಭಾಷೆಯಲ್ಲಿ ಮಾತಾಡಿರುವುದಕ್ಕೆ ಎಲ್ಲೆಡೆ ಅಚ್ಚರಿ ವ್ಯಕ್ತವಾಯಿತು. ಓರ್ವ ಸಂಸದ ತನ್ನದೇ ಕ್ಷೇತ್ರಕ್ಕೆ ಬೆಂಕಿ ಹಚ್ಚುವುದರಿಂದ ತೊಂದರೆಗೆ ಒಳಗಾಗುವವರು ಯಾರು? ಹತ್ಯೆಯನ್ನು ತಡೆಯುವುದಕ್ಕೆ ನಾಡಿಗೆ ಬೆಂಕಿ ಹಚ್ಚುವುದು ಪರಿಹಾರವೇ.. ಮುಂತಾದ ಪ್ರಶ್ನೆಗಳನ್ನು ಅವರು ಎದುರಿಸಿದರು. ಕೊನೆಗೆ ತನ್ನ ಮಾತಿಗೆ ವಿಷಾದವನ್ನೂ ಸೂಚಿಸಿದರು. ಆದರೆ ಈಗಲೂ ಸಂಸದರ ಆ ಭಾಷಾ ಪ್ರಯೋಗ ಜಿಲ್ಲೆಯಲ್ಲಿ ಆಗಾಗ ಪ್ರಸ್ತಾಪವಾಗುತ್ತಲೇ ಇದೆ. ಇಂಥ ಸಂದರ್ಭದಲ್ಲೇ  ಕಾರ್ತಿಕ್ ರಾಜ್‍ರನ್ನು ಹತ್ಯೆಗೈದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಟುಂಬ ಕಲಹವೇ ಹತ್ಯೆಗೆ ಕಾರಣ ಎಂಬುದು ಪತ್ತೆಯಾಗಿದೆ. ಕಾರ್ತಿಕ್ ರಾಜ್‍ನ ತಂಗಿಯೇ ಹತ್ಯೆಗೆ ಸುಪಾರಿ ಕೊಟ್ಟಿದ್ದಳು. ಆಕೆಯ ಸಹೋದ್ಯೋಗಿ ಗೆಳೆಯ ಗೌತಮ್ ಮತ್ತು ಆತನ ತಮ್ಮ ಗೌರವ್ ಸೇರಿಕೊಂಡು ಈ ಹತ್ಯೆಯನ್ನು ನಡೆಸಿದ್ದರು. ಆದ್ದರಿಂದ, ಈಗ ಮಾತಾಡಬೇಕಾದದ್ದು ಬಿಜೆಪಿ, ಯಡಿಯೂರಪ್ಪ ಮತ್ತು ಸಂಸದ ನಳಿನ್ ಕುಮಾರ್. ಈ ಹಿಂದೆ ನೀಡಿದ ಹೇಳಿಕೆಯ ಬಗ್ಗೆ ಬಿಜೆಪಿಯು ನಿಲುವು ಏನು? ಜಿಹಾದಿ ಶಕ್ತಿಗಳು ಎಂದು ಅದು ಯಾವ ಅರ್ಥದಲ್ಲಿ ಹೇಳಿದೆ? ಆ ಹೇಳಿಕೆ ರಾಜ್ಯದ ಜನತೆಯ ಮೇಲೆ ಬೀರಿರಬಹುದಾದ ಪರಿಣಾಮಗಳು ಏನೇನು? ಒಂದು ನಿರ್ದಿಷ್ಟ ಧರ್ಮದ ಬಗ್ಗೆ ನಕಾರಾತ್ಮಕ ಸಂದೇಶವನ್ನು ಆ ಹೇಳಿಕೆ ರವಾನಿಸಿರುವ ಸಾಧ್ಯತೆ ಇಲ್ಲವೇ? ಅಷ್ಟಕ್ಕೂ, ಘಟನೆ ನಡೆದ ತಕ್ಷಣ ಇಂಥದ್ದೊಂದು ಹೇಳಿಕೆ ಕೊಡುವ ಅನಿವಾರ್ಯತೆ ಬಿಜೆಪಿಗೆ ಏನಿತ್ತು? ಜೆಹಾದಿ ಶಕ್ತಿಗಳ ಕೈವಾಡವನ್ನು ಶಂಕಿಸಿ ಬಿಜೆಪಿ ಹೇಳಿಕೆ ಬಿಡುಗಡೆಗೊಳಿಸುವಾಗ ತನಿಖೆ ಇನ್ನೂ ಆರಂಭಿಕ ಹಂತದಲ್ಲಷ್ಟೇ ಇತ್ತು. ಪೊಲೀಸರ ಮುಂದೆ ಹತ್ಯೆಯ ಸ್ಪಷ್ಟ ಚಿತ್ರಣ ಇನ್ನೂ ಬಂದಿರಲಿಲ್ಲ. ಹೀಗಿರುತ್ತಾ, ಬಿಜೆಪಿಯು ಜಿಹಾದಿ ಶಕ್ತಿಗಳು ಎಂದು ಕಣ್ಣಾರೆ ಕಂಡಂತೆ ಹೇಳಿಕೊಂಡದ್ದು ಯಾಕೆ? ಪ್ರಕರಣದ ದಿಕ್ಕು ತಪ್ಪಿಸುವ ಒಳ ಉದ್ದೇಶವೊಂದು ಆ ಹೇಳಿಕೆಯಲ್ಲಿತ್ತೇ?
ರಾಜ್ಯವನ್ನು ಆಳಿದ ಮತ್ತು ದೇಶವನ್ನು ಆಳುತ್ತಿರುವ ಜವಾಬ್ದಾರಿಯುತ ರಾಜಕೀಯ ಪಕ್ಷವೆಂಬ ನೆಲೆಯಲ್ಲಿ ರಾಜ್ಯ ಬಿಜೆಪಿಯ ವರ್ತನೆ ಅತ್ಯಂತ ಖಂಡನಾರ್ಹವಾದುದು. ನಕ್ಸಲರಂತೆ ಮತ್ತು ಭೂಗತ ದೊರೆಗಳಂತೆ ಒಂದು ರಾಜಕೀಯ ಪಕ್ಷ ಮಾತಾಡುವುದು ಅತ್ಯಂತ ಅಪಾಯಕಾರಿ. ತನಿಖೆಗೆ ಮೊದಲೇ ಒಂದು ಘಟನೆಯನ್ನು ಇದಮಿತ್ಥಂ ಎಂದು ಖಚಿತವಾಗಿ ಹೇಳುವುದು ತನಿಖೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದು ಮುಖ್ಯಮಂತ್ರಿಯಾಗಿ ಅನುಭವವಿರುವ ಯಡಿಯೂರಪ್ಪರಿಗೆ ಚೆನ್ನಾಗಿ ಗೊತ್ತು. ಆದ್ದರಿಂದ ಯಡಿಯೂರಪ್ಪ ಮತ್ತು ಬಿಜೆಪಿಯು ರಾಜ್ಯ ಜನತೆಯೊಂದಿಗೆ ಕ್ಷಮೆ ಯಾಚಿಸಬೇಕು. ತನಿಖೆಯ ದಿಕ್ಕು ತಪ್ಪಿಸುವ ಯಾವ ದುರುದ್ದೇಶವೂ ತನ್ನ ಹೇಳಿಕೆಗಿರಲಿಲ್ಲ ಎಂಬುದನ್ನು ರಾಜ್ಯ ಜನತೆಗೆ ಮನವರಿಕೆ ಮಾಡಿಸಲು ಕ್ಷಮೆ ಯಾಚನೆಯು ಅತ್ಯಂತ ಅಗತ್ಯವಾಗಿದೆ. ಜೊತೆಗೇ ‘ಬೆಂಕಿ ಹಚ್ಚುವ’ ಸಂಸದರು ಸ್ವತಃ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಆದ ವಿಳಂಬಕ್ಕೆ ತನ್ನ ಮತ್ತು ತನ್ನ ಪಕ್ಷದ ವರ್ತನೆಗೂ ಪಾಲಿದೆ ಎಂಬುದನ್ನು ಪ್ರಾಮಾಣಿಕವಾಗಿ ಸಾರ್ವಜನಿಕರ ಮುಂದೆ ಅವರು ಒಪ್ಪಿಕೊಳ್ಳಬೇಕು. ಆದರೆ ಬಿಜೆಪಿಯ ಈ ವರೆಗಿನ ವರ್ತನೆಯನ್ನು ಪರಿಗಣಿಸಿ ಹೇಳುವುದಾದರೆ ಅದು ಇಂಥದ್ದೊಂದು ಪಶ್ಚಾತ್ತಾಪ ಭಾವವನ್ನು ವ್ಯಕ್ತಪಡಿಸುವ ಸಾಧ್ಯತೆಯೇ ಇಲ್ಲ. ಇದರ ಬದಲು ಯಡಿಯೂರಪ್ಪ ಮತ್ತು ಈಶ್ವರಪ್ಪರ ನಡುವಿನ ಕಿತ್ತಾಟಕ್ಕೆ ಜಿಹಾದಿ ಶಕ್ತಿಗಳೇ ಕಾರಣ ಎಂದು ಅದು ಹೇಳಿಕೆ ಹೊರಡಿಸುವ ಸಾಧ್ಯತೆಯೇ ಹೆಚ್ಚು.

Thursday 4 May 2017

ಅಸ್ಪೃಶ್ಯತೆಯನ್ನು ತೊಲಗಿಸಲು ವಿಫಲವಾದ ಸಂವಿಧಾನ ಮತ್ತು ತಲಾಕ್

      ಸಮಾನ ನಾಗರಿಕ ಸಂಹಿತೆ ಮತ್ತು ತಲಾಕ್‍ನ ಕುರಿತಾದ ಚರ್ಚೆಯನ್ನು ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ (AIMPLB) ಹೊಸದೊಂದು ಮಜಲಿಗೆ ಒಯ್ದಿದೆ. ತಲಾಕನ್ನು ದುರುಪಯೋಗಿಸುವವರ ವಿರುದ್ಧ ಸಾಮಾಜಿಕ ಬಹಿಷ್ಕಾರ ಹೇರಬೇಕೆಂದು ಅದು ಕರೆಕೊಟ್ಟಿದೆ. ತಲಾಕನ್ನು ದುರುಪಯೋಗಿಸಿದವರ ವಿರುದ್ಧ ಹರ್ಯಾಣದ ಮೇವಾತ್‍ನಲ್ಲಿ 25 ವರ್ಷಗಳ ಹಿಂದೆಯೇ ಸಾಮಾಜಿಕ ಬಹಿಷ್ಕಾರ ಹೇರಲಾದುದನ್ನು ಮತ್ತು ದುರುಪಯೋಗವನ್ನು ತಡೆಯುವಲ್ಲಿ ಅದು ಪರಿಣಾಮಕಾರಿಯಾದುದನ್ನು ಬೋರ್ಡ್ ಉಲ್ಲೇಖಿಸಿದೆ. ನಿಜವಾಗಿ, ಬೋರ್ಡ್‍ನ ಈ ಕರೆ ಬಹು ಆಯಾಮವುಳ್ಳದ್ದು. ಒಂದು ಕಡೆ, ಕೇಂದ್ರ ಸರಕಾರವು ತಲಾಕ್‍ನ ವಿಷಯದಲ್ಲಿ ಅತಿ ಆಸಕ್ತಿಯನ್ನು ತೋರುತ್ತಿದೆ. ಮುಸ್ಲಿಮ್ ಮಹಿಳೆಯರ ಹಿತ ರಕ್ಷಕನಂತೆ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ. ತ್ರಿವಳಿ ತಲಾಕ್‍ನಿಂದ ಕಂಗೆಟ್ಟ ಮಹಿಳೆಯರನ್ನು ಭೇಟಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಕಾರ್ಯಕರ್ತರಿಗೆ ಆದೇಶಿಸಿದ್ದಾರೆ. ಇನ್ನೊಂದು ಕಡೆ, ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್‍ನಲ್ಲಿ ಒಂದಕ್ಕಿಂತ ಹೆಚ್ಚು ದೂರುಗಳಿವೆ. ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಕುರಿತೂ ಅದು ಕೇಂದ್ರದ ಅಭಿಪ್ರಾಯವನ್ನು ಕೇಳಿದೆ. ಇಂಥ ಸಂದರ್ಭದಲ್ಲಿ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ನ ನಿಲುವು ಮಹತ್ವಪೂರ್ಣವಾಗುತ್ತದೆ. ಯಾವುದೇ ಒಂದು ಸಮಸ್ಯೆಯನ್ನು ಬಗೆಹರಿಸುವುದಕ್ಕಿಂತ ಮೊದಲು ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದು ಬಹುಮುಖ್ಯ ಅಂಶ. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಈಗ ಮತ್ತು ಈ ಮೊದಲೂ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಂಡಿದೆ. ಭಿನ್ನಾಭಿಪ್ರಾಯ ಇರುವುದು ಇದನ್ನು ಪರಿಹರಿಸುವ ವಿಧಾನ ಯಾವುದು ಎಂಬುದರಲ್ಲಿ. ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರಕಾರವು ಒಲವು ತೋರುತ್ತಿದ್ದರೆ, ಆಂತರಿಕ ಸುಧಾರಣೆಯನ್ನು ಇದಕ್ಕೆ ಪರಿಹಾರವಾಗಿ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಮುಂದಿಡುತ್ತಿದೆ. ಸಾಮಾಜಿಕ ಬಹಿಷ್ಕಾರ ಎಂಬುದು ಈ ನಿಟ್ಟಿನಲ್ಲಿ ಅತ್ಯಂತ ಕ್ರಾಂತಿಕಾರಿ ಪ್ರಸ್ತಾಪ. ನಿಜವಾಗಿ ವಿವಾಹ, ವಿಚ್ಛೇದನ, ಆಸ್ತಿ ಹಕ್ಕು, ದತ್ತು ಸ್ವೀಕಾರ.. ಮುಂತಾದ ವಿಷಯಗಳನ್ನು ಕೋರ್ಟ್‍ನ ಹೊರಗೆ ಶರೀಅತ್‍ನಂತೆ ಬಗೆಹರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಮುಸ್ಲಿಮರಿಗೆ ಒದಗಿಸಿದ್ದು ಕೇಂದ್ರ ಸರಕಾರವೋ ಸುಪ್ರೀಮ್ ಕೋರ್ಟೋ ಅಲ್ಲ, ಅಂಬೇಡ್ಕರ್ ಕೊಡಮಾಡಿದ ಭಾರತೀಯ ಸಂವಿಧಾನ. ಅದೇ ಸಂವಿಧಾನವು ಅಸ್ಪೃಶ್ಯತೆಯನ್ನು ಉಚ್ಛಾಟಿಸುವುದಕ್ಕೆ ಬಿಗಿ ನಿಯಮಗಳನ್ನೂ ಘೋಷಿಸಿದೆ. ಒಂದಕ್ಕಿಂತ ಹೆಚ್ಚು ಪರಿಚ್ಛೇದಗಳನ್ನೂ ಅಳವಡಿಸಿಕೊಂಡಿದೆ. ಆದರೆ, ಈ ಸಂವಿಧಾನಕ್ಕೆ 6 ದಶಕಗಳು ಸಂದ ಬಳಿಕವೂ ಅದರ ಪರಿಚ್ಛೇದಗಳನ್ನು ಮತ್ತು ಬಿಗು ನಿಲುವುಗಳನ್ನು ಭಾರತೀಯ ಸಮಾಜವು ಎಷ್ಟು ಬಾಲಿಶವಾಗಿ ಪರಿಗಣಿಸಿದೆ ಎಂಬುದಕ್ಕೆ ಪ್ರತಿದಿನ ದೇಶದಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯ ಪ್ರಕರಣಗಳೇ ಸಾಕ್ಷಿ. ಇವತ್ತಿಗೂ ದಲಿತರಿಗೆ ದೇಗುಲ ಪ್ರವೇಶವು ಅತಿ ಸಾಹಸದ ಚಟುವಟಿಕೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈ ದೇಶದ ಆಯಕಟ್ಟಿನ ಭಾಗಗಳಿಗೆ ದಲಿತ ಇನ್ನೂ ಏರಿಲ್ಲ ಅಥವಾ ಏರುವ ಪ್ರಯತ್ನವನ್ನು ಮಧ್ಯದಲ್ಲೇ ತಡೆಯಲಾಗುತ್ತದೆ. ಸಂವಿಧಾನ ರಚಿಸುವಾಗ ಈ ದೇಶದಲ್ಲಿ ಯಾವ ವರ್ಗ ನಿರ್ಣಾಯಕ ಸ್ಥಾನವನ್ನು ಅಲಂಕರಿಸಿತ್ತೋ ಮತ್ತು ನೀತಿ-ನಿರೂಪಣೆಯ ಸ್ಥಾನದಲ್ಲಿ ಕುಳಿತಿತ್ತೋ ಬಹುತೇಕ ಇಂದೂ ಅದೇ ವರ್ಗ ಆ ಸ್ಥಾನವನ್ನು ಉಳಿಸಿಕೊಂಡಿದೆ. ಸಂವಿಧಾನ ರಚಿಸುವಾಗ ಇದ್ದ ತಲೆಮಾರು ಗತಿಸಿ ಹೋಗಿ ಹೊಸ ತಲೆಮಾರು ಬಂದ ಬಳಿಕವೂ ಪರಿಸ್ಥಿತಿಯಲ್ಲಿ ನಿರೀಕ್ಷಿತ ಸುಧಾರಣೆ ಉಂಟಾಗದಿರಲು ಕಾರಣವೇನು? ನಿಜವಾಗಿ, ಅಸ್ಪೃಶ್ಯತೆಯು ಮನಸ್ಸಿಗೆ ಸಂಬಂಧಿಸಿದ್ದು. ಕಾನೂನು ಎಂಬುದು ಭಯ ಹುಟ್ಟಿಸಬಹುದೇ ಹೊರತು ಮನಸ್ಸಿನ ಕಾಯಿಲೆಗೆ ಔಷಧಿ ಆಗಲಾರದು. ಮನಸ್ಸಿನಲ್ಲಿ ಅಸ್ಪೃಶ್ಯತೆಯ ರೋಗವನ್ನು ಉಳಿಸಿಕೊಂಡಿರುವ ವ್ಯಕ್ತಿ ಕಾನೂನಿನಿಂದ ತಪ್ಪಿಸಿಕೊಳ್ಳಲು ತಂತ್ರವನ್ನು ಹುಡುಕಬಹುದೇ ಹೊರತು ರೋಗದಿಂದ ಮುಕ್ತವಾಗಲು ಪ್ರಯತ್ನಿಸಲಾರ. ಆತನೊಳಗಿನ ರೋಗವು ಅಸ್ಪೃಶ್ಯತೆಯನ್ನು ಆಚರಿಸುವುದಕ್ಕೆ ಹೊಸ ವಿಧಾನಗಳನ್ನು ಖಂಡಿತ ಹುಡುಕುತ್ತದೆ. ರೋಹಿತ್ ವೇಮುಲನನ್ನು ಕೊಂದದ್ದು ಆ ಕಾಯಿಲೆಯ ಸುಧಾರಿತ ವಿಧಾನ. ಮೇಲ್ವರ್ಗಕ್ಕೆ ಹೋಲಿಸಿದರೆ ಅಸ್ಪೃಶ್ಯರ ಸಂಖ್ಯೆ ಈ ದೇಶದಲ್ಲಿ ಬಹಳ ದೊಡ್ಡದು. ಆದರೆ ರಾಜಕೀಯ ಕ್ಷೇತ್ರದಲ್ಲಿ ಅವರು ನಿರ್ಧಾರ ಕೈಗೊಳ್ಳುವ ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆಯೇ? ಮಾಧ್ಯಮ ಕ್ಷೇತ್ರದಲ್ಲಿ ಅವರ ಪಾತ್ರ ಏನು? ಸಂಪಾದಕರಲ್ಲಿ ಎಷ್ಟು ಮಂದಿ ದಲಿತರಿದ್ದಾರೆ? ಶೈಕ್ಷಣಿಕ ರಂಗದಲ್ಲಿ ಎಷ್ಟು ಮಂದಿ ದಲಿತರು ನಿರ್ಣಾಯಕ ಹುದ್ದೆಯಲ್ಲಿದ್ದಾರೆ? ಆರ್ಥಿಕವಾಗಿ ಅವರ ಸ್ಥಾನಮಾನ ಏನು? ಅಂಬಾನಿಯಂಥ ಒಬ್ಬನೇ ಒಬ್ಬ ದಲಿತ ಉದ್ಯಮಿ ಯಾಕೆ ಬೆಳೆದು ಬರುತ್ತಿಲ್ಲ? ಯಾಕೆಂದರೆ ಸಂವಿಧಾನ ರಚಿಸುವಾಗ ಆಚರಣೆಯಲ್ಲಿದ್ದ ಅಸ್ಪೃಶ್ಯತಾ ಮನಸ್ಸು ಈಗಲೂ ಜೀವಂತವಿದೆ. ಕಾನೂನಿಗೆ ಹೆದರಿ ಕೆಲವೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಅದು ಮುಟ್ಟಿಸಿಕೊಳ್ಳುತ್ತದೆ. ಆದರೆ ಈ ಮುಟ್ಟಿಸಿಕೊಳ್ಳುವ ಅನಿವಾರ್ಯತೆಯು ಅವರೊಳಗೆ ಇನ್ನೊಂದು ಬಗೆಯ ದ್ವೇಷವನ್ನೂ ಹುಟ್ಟು ಹಾಕಿದೆ. ಆ ದ್ವೇಷ ಎಷ್ಟು ಅಪಾಯಕಾರಿಯಾಗಿದೆಯೆಂದರೆ, ದಲಿತರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಬೆಳೆಯದಂತೆ ಮಟ್ಟ ಹಾಕಲಾಗುತ್ತದೆ. ಬಾಹ್ಯವಾಗಿ ಅವರನ್ನು ಮುಟ್ಟುತ್ತಲೇ ಆಂತರಿಕವಾಗಿ ಮಾರು ದೂರ ಎಸೆಯಲಾಗುತ್ತದೆ. ಕ್ರಿಮಿನಲ್ ಕೃತ್ಯಗಳಲ್ಲಿ ಅವರನ್ನು ಸಿಲುಕಿಕೊಳ್ಳುವಂತೆ ಮಾಡಲಾಗುತ್ತದೆ. ಒಂದು ರೀತಿಯಲ್ಲಿ, ಅಸ್ಪೃಶ್ಯ ವಿರೋಧಿ ಕಾನೂನಿನ ಅಡ್ಡ ಪರಿಣಾಮವಿದು. ಅಸ್ಪೃಶ್ಯ ಮನಸು ಈ ದೇಶದಲ್ಲಿ ಜಾಗೃತವಾಗಿರುವುದರಿಂದಲೇ, ಮುಸ್ಲಿಮ್ ಸಂಘಟನೆಗಳೆಲ್ಲ ಒಟ್ಟು ಸೇರಿಕೊಂಡು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಎಂಬ ಏಕ ವೇದಿಕೆಯನ್ನು ರಚಿಸಿಕೊಂಡಂತೆ ಮತ್ತು ತಲಾಕ್ ದುರುಪಯೋಗದ ವಿರುದ್ಧ ಬಹಿಷ್ಕಾರ ಘೋಷಣೆ ಹೊರಡಿಸಿದಂತೆ ಹಿಂದೂ ಸಂಘಟನೆಗಳೆಲ್ಲ ಒಂದೇ ವೇದಿಕೆ ರಚಿಸಿಕೊಂಡು ಅಸ್ಪೃಶ್ಯತೆಯನ್ನು ಆಚರಿಸುವವರ ವಿರುದ್ಧ ಬಹಿಷ್ಕಾರ ಘೋಷಣೆ ಹೊರಡಿಸದೇ ಇರುವುದು.
     ನಿಜವಾಗಿ, ಕೇಂದ್ರ ಸರಕಾರ ಇವತ್ತು ಆಸಕ್ತಿ ತೋರಿಸಬೇಕಾಗಿರುವುದು ತಲಾಕ್‍ನ ವಿಚಾರದಲ್ಲಿ ಅಲ್ಲ. ಹಿಂದೂ ಸಂಘಟನೆಗಳ ಏಕ ವೇದಿಕೆಯನ್ನು ರಚಿಸುವುದಕ್ಕೆ ಪ್ರೇರಣೆ ಕೊಟ್ಟು ದಲಿತರ ಬಾಳನ್ನು ಹಸನುಗೊಳಿಸುವುದಕ್ಕೆ ಶ್ರಮಿಸಬೇಕಾಗಿತ್ತು. ಅಂದಹಾಗೆ, ದಲಿತರಿಗೆ ಬೀದಿಯಲ್ಲಿ ಥಳಿಸುವುದಷ್ಟೇ ದೌರ್ಜನ್ಯವಲ್ಲ. ಅವರು ಬೆಳೆಯದಂತೆ ಮತ್ತು ಸದಾ ಅಪರಾಧಿಗಳಾಗಿಯೋ ಆರೋಪಿಗಳಾಗಿಯೋ ಉಳಿಯುವಂತೆ ಮಾಡುವುದೇ ಅತೀ ದೊಡ್ಡ ದೌರ್ಜನ್ಯ. ಇದಕ್ಕೆ ಹೋಲಿಸಿದರೆ ತಲಾಕ್ ದುರುಪಯೋಗ ಏನೇನೂ ಅಲ್ಲ. ದುರುಪಯೋಗ ಎಂಬ ಪದವೇ ಅದು ತಪ್ಪಾದ ಕ್ರಮ ಎಂಬುದನ್ನು ಸಾರುತ್ತದೆ. ಯಾವುದೇ ಒಂದು ಧರ್ಮದಲ್ಲಿ ಅದರ ನಿಯಮವನ್ನು ತಪ್ಪಾಗಿ ಪಾಲಿಸುವವರ ಸಂಖ್ಯೆಯೇ ಅಧಿಕವಾಗಿರುವುದಕ್ಕೆ ಸಾಧ್ಯವಿಲ್ಲವಲ್ಲ. ತಲಾಕ್ ದುರುಪಯೋಗದ ಸ್ಥಿತಿಯೂ ಇದುವೇ.
      ವಿವಾಹ ಮತ್ತು ವಿಚ್ಛೇದನಾ ಕ್ರಮಗಳು ಎಲ್ಲ ಮುಸ್ಲಿಮರ ಪಾಲಿಗೂ ಏಕ ಪ್ರಕಾರ. ತೀರಾ ತೀರಾ ತೀರಾ ಕಡಿಮೆ ಸಂಖ್ಯೆಯಲ್ಲಿ ಈ ಕ್ರಮದಂತೆ ವಿವಾಹವಾಗದ ಮತ್ತು ವಿಚ್ಛೇದನ ನೀಡದ ಘಟನೆಗಳು ನಡೆಯುತ್ತಿವೆ. ಈ ಸಂಖ್ಯೆಗೆ ಹೋಲಿಸಿದರೆ ಸಾಮಾಜಿಕ ಬಹಿಷ್ಕಾರವೆಂಬುದು ಅತಿದೊಡ್ಡ ಪ್ರಹಾರ. ಆದರೂ ಇದನ್ನು ಸ್ವಾಗತಿಸಬೇಕು. ಇಂಥ ಪ್ರಕರಣಗಳ ಸಂಖ್ಯೆ ಅತ್ಯಲ್ಪ ಎಂಬುದು ಸಂತ್ರಸ್ತರನ್ನು ನಿರ್ಲಕ್ಷಿಸುವುದಕ್ಕೆ ಕಾರಣವಾಗಬಾರದು. ತಲಾಕ್‍ನ ದುರುಪಯೋಗದಲ್ಲಿ ಮುಸ್ಲಿಮ್ ಸಮುದಾಯದ ಬಡತನಕ್ಕೆ ಬಹುಮುಖ್ಯ ಪಾತ್ರ ಇದೆ. ಆರ್ಥಿಕವಾಗಿ ಹಿಂದುಳಿದ ಮುಸ್ಲಿಮ್ ಕುಟುಂಬಗಳಲ್ಲೇ ಇಂಥ ದುರುಪಯೋಗದ ಪ್ರಕರಣಗಳು ಹೆಚ್ಚಾಗಿ ಕಾಣಿಸುತ್ತಿವೆ. ವಿಷಾದ ಏನೆಂದರೆ, ತಲಾಕ್ ದುರುಪಯೋಗದ ಬಗ್ಗೆ ಕಾಳಜಿ ತೋರುವ ಬಿಜೆಪಿಯು ತೆಲಂಗಾಣ ಸರಕಾರವು ಮುಸ್ಲಿಮರ ಸಬಲೀಕರಣಕ್ಕಾಗಿ ಜಾರಿಗೊಳಿಸಲು ಹೊರಟಿರುವ 12% ಮೀಸಲಾತಿಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಇದರ ಅರ್ಥ ಏನು?
ಏನೇ ಆಗಲಿ, ತಲಾಕ್‍ನ ದುರುಪಯೋಗದ ಬಗ್ಗೆ ಕಟು ನಿಲುವನ್ನು ತಾಳಿದ ಪರ್ಸನಲ್ ಲಾ ಬೋರ್ಡ್‍ಗೆ ಕೃತಜ್ಞತೆ ಸಲ್ಲಿಸುತ್ತಲೇ, ಜಾತಿ-ಕುಲದ ಹೆಸರಲ್ಲಿ ಆಗುತ್ತಿರುವ ಶೋಷಣೆಯಿಂದ ಭಾರತೀಯ ಸಮಾಜವನ್ನು ಮುಕ್ತಗೊಳಿಸಲು ಈ ನಿರ್ಧಾರ ಮೇಲ್ಪಂಕ್ತಿಯಾಗಲಿ ಎಂದು ಹಾರೈಸೋಣ.