Tuesday 27 June 2017

‘ಚರ್ಚ್‍ನಲ್ಲಿ ರೋಬೋಟ್’ ಮತ್ತು ಧರ್ಮ

     ಜರ್ಮನಿಯ ಕ್ರೈಸ್ತ ಧರ್ಮದ ಪ್ರೊಟೆಸ್ಟೆಂಟ್ ವಿಭಾಗವು ಹೊಸ ಪ್ರಯೋಗವೊಂದಕ್ಕೆ ಚಾಲನೆ ನೀಡಿದೆ. ಚರ್ಚ್‍ನಲ್ಲಿ ಫಾಸ್ಟರ್ ಬದಲು ರೋಬೋಟ್‍ನ ಮೂಲಕ ಆಶೀರ್ವಾದ ಕೊಡಿಸುವ ಪ್ರಯತ್ನ ನಡೆಸಿದೆ. ಜರ್ಮನಿಯ ವಿಟ್ಟನ್‍ಬರ್ಗ್ ಪಟ್ಟಣದಲ್ಲಿರುವ ಚರ್ಚ್‍ನಲ್ಲಿ ‘ಬ್ಲೆಸ್ಸಿಂಗ್ ಯು-2’ ಎಂಬ ಹೆಸರಿನ ಈ ರೋಬೋಟ್ ಚಟುವಟಿಕೆ ಪ್ರಾರಂಭಿಸಿದೆ. ಟಚ್ ಸ್ಕ್ರೀನ್ ಸೌಲಭ್ಯ ಇರುವ ಲೋಹದ ಪೆಟ್ಟಿಗೆ. ಅದಕ್ಕೆ ಎರಡು ಕೈ, ತಲೆ, ಕಣ್ಣುಗಳು ಮತ್ತು ಡಿಜಿಟಲ್ ಬಾಯಿ. ಅದನ್ನು ಮುಟ್ಟಿದ ಕೂಡಲೇ ನಿಮಗೆ ಯಾವ ಧ್ವನಿಯಲ್ಲಿ ಆಶೀರ್ವಾದ ಬೇಕು ಎಂದು ಅದು ಪ್ರಶ್ನಿಸುತ್ತದೆ. ಹೆಣ್ಣಿನದ್ದೋ ಗಂಡಿನದ್ದೋ? ಆ ಬಳಿಕ ಮಂದಹಾಸ ಬೀರಿ ಕೈ ಎತ್ತಿ, ‘ದೇವನು ರಕ್ಷಿಸಲಿ ಮತ್ತು ಆಶೀರ್ವದಿಸಲಿ’ ಎಂದು ಹರಸುತ್ತದೆ. ಕೆಲವು ಬೈಬಲ್ ವಾಕ್ಯಗಳನ್ನು ಉಚ್ಚರಿಸುತ್ತದೆ. ಸ್ವಯಂ ಚಾಲಿತವಾಗಿ ಕೆಲಸ ಮಾಡುವ ಈ ರೋಬೋಟ್, ಕೈ ಎತ್ತುವಾಗ ಬೆಳಕು ಕಾಣಿಸಿಕೊಳ್ಳುತ್ತದೆ. ಪ್ರೊಟೆಸ್ಟೆಂಟ್ ಪಂಥದ ಸುಧಾರಕರಾದ ಮಾರ್ಟಿನ್ ಲೂಥರ್ ಅವರ ‘ದಿ ನೈಂಟಿಫೈವ್ ಥೀಸಿಸ್’ಗೆ 500 ವರ್ಷಗಳು ಸಂದ ನೆನಪಿನಲ್ಲಿ ಈ ರೋಬೋಟ್ ಫಾಸ್ಪರ್ ಅನ್ನು ಸ್ಥಾಪಿಸಲಾಗಿದೆ. ಭಕ್ತರಲ್ಲೂ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ಒಂದು ಕಡೆ, ಚರ್ಚ್‍ಗೆ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ ಎಂದು ಅದರ ವಕ್ತಾರ ಸೆಬಾಸ್ಟಿಯನ್ ಗೆಹ್ರಾನ್ ಹೇಳುವಾಗ ಇನ್ನೊಂದು ಕಡೆ, ಭಕ್ತರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಫಾಸ್ಪರ್‍ಗೆ ರೋಬೋಟ್ ಬದಲಿಯಾಗದು ಮತ್ತು ರೋಬೋಟ್ ಕೊಡುವ ಆಶೀರ್ವಾದವು ಮನುಷ್ಯರು ಕೊಡುವ ಆಶೀರ್ವಾದದಂತೆ ಪ್ರಭಾವಿಯಾಗದು ಎಂದವರು ಹೇಳಿದ್ದಾರೆ.
     ಮನುಷ್ಯ ಮತ್ತು ಯಂತ್ರ - ಇವೆರಡೂ ವೈರಿಯಲ್ಲ. ಮನುಷ್ಯ ಇಲ್ಲದಿರುತ್ತಿದ್ದರೆ ಯಂತ್ರವೇ ಇರುತ್ತಿರಲಿಲ್ಲ. ಮನುಷ್ಯ ವಿಕಾಸ ಜೀವಿ. ಪ್ರತಿ ಕ್ಪಣ ಆತ ವಿಕಾಸವಾಗುತ್ತಾ ಇರುತ್ತಾನೆ. ನಿನ್ನೆ ಇದ್ದಂತೆ ಆತ ಇವತ್ತು ಇರಬೇಕಿಲ್ಲ. ನಿನ್ನೆ ಸಾಮಾನ್ಯ ವ್ಯಕ್ತಿಯಾಗಿದ್ದ ಆತ ನಾಳೆ ಸಂಶೋಧಕನಾಗಿ ಗುರುತಿಸಬಲ್ಲ. ಎವರೆಸ್ಟ್ ಪರ್ವವನ್ನೋ ಕ್ಯಾನ್ಸರ್‍ಗೆ ಹೊಸ ಔಷಧವನ್ನೋ ಹೊಸ ಮಾದರಿಯ ವಾಹನವನ್ನೋ ಸಂಶೋಧಿಸಿ ಸುದ್ದಿ ಮಾಡಬಲ್ಲ. 50 ವರ್ಷಗಳ ಹಿಂದೆ ಊಹಿಸಿಯೂ ಇರದ ಅನೇಕಾರು ಸೌಲಭ್ಯಗಳು ಇವತ್ತಿನ ಪೀಳಿಗೆಗೆ ಲಭ್ಯವಾಗಿವೆ. ಹಗ್ಗದ ಮೂಲಕ ಬಾವಿಯಿಂದ ನೀರೆತ್ತುವ ಕ್ರಮ ಇವತ್ತಿನ ಪಟ್ಟಣದಲ್ಲಿರುವ ಆಧುನಿಕ ತಲೆಮಾರಿಗೆ ಬಹುತೇಕ ಗೊತ್ತೇ ಇರಲಾರದು. ಟೆಲಿಗ್ರಾಂ ಎಂಬ ವ್ಯವಸ್ಥೆ ಇವತ್ತಿನ ಮೊಬೈಲ್ ಪೀಳಿಗೆಗೆ ಹೇಳಿದರೂ ಅರ್ಥವಾಗದಷ್ಟು ಹಳತಾಗಿದೆ. ಹಸುವಿನಿಂದ ಹಾಲು ಕರೆಯುವುದಕ್ಕೂ ಇವತ್ತು ಯಂತ್ರ ಬಂದಿದೆ. ಅಡಿಕೆ ಮರದಿಂದ ಅಡಿಕೆ ಕೀಳುವುದಕ್ಕೂ ಯಂತ್ರ ಬಂದಿದೆ. ಸಂವಹನ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯಂತೂ ಅತೀ ವೇಗದ್ದು ಮತ್ತು ಅಪೂರ್ವವಾದದ್ದು. ಇದರ ಜೊತೆಗೇ ಒಂದು ಅಪಾಯದ ಸೂಚನೆಯನ್ನೂ ವಿಟ್ಟನ್‍ಬರ್ಗ್‍ನ ಚರ್ಚ್‍ನಲ್ಲಿ ಸ್ಥಾಪಿಸಲಾಗಿರುವ ರೋಬೋಟ್ ಜಗತ್ತಿಗೆ ರವಾನಿಸುತ್ತಿದೆ. ಮನುಷ್ಯ ತಾನೇ ನಿರ್ಮಿಸಿದ ಯಂತ್ರವನ್ನು ಅವಲಂಬಿಸಿ ಕೊನೆಗೆ ಯಂತ್ರವನ್ನೇ ಸರ್ವಸ್ವ ಎಂದು ನಂಬುವ ಸ್ಥಿತಿಗೆ ತಲುಪುತ್ತಿದ್ದಾನೆಯೇ? ಆತನ ಆಲೋಚನೆಗಳು ಯಂತ್ರದಂತೆಯೇ ಜಡವಾಗತೊಡಗಿದೆಯೇ? ಮನುಷ್ಯ ಮತ್ತು ಯಂತ್ರದ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವಲ್ಲಿ ಆತ ಎಡವುತ್ತಿದ್ದಾನೆಯೇ?
    ಅಷ್ಟಕ್ಕೂ, ಇನ್ನು ನೂರು ವರ್ಷ ಸಂದರೂ ‘ಬ್ಲೆಸ್ ಯು-2’ ಎಂಬ ರೋಬೋಟ್ ತನ್ನ ಧ್ವನಿ, ಮಾತು, ನಗು, ಬೆಳಕು.. ಯಾವುದರಲ್ಲೂ ಸ್ವಯಂ ಪ್ರೇರಿತವಾಗಿ ಯಾವ ಬದಲಾವಣೆ ಮಾಡಿಕೊಳ್ಳದು. ಯಾಕೆಂದರೆ ಅದಕ್ಕೆ ವಿಕಾಸವಾಗುವ ಸಾಮಥ್ರ್ಯ ಇಲ್ಲ. ಮನುಷ್ಯ ಅದಕ್ಕೆ ವಿಕಾಸ ಗುಣವನ್ನು ತುಂಬಿದಾಗಲೇ ಅದು ಆ ಗುಣವನ್ನು ಪ್ರದರ್ಶಿಸಬಲ್ಲದು. ದುರಂತ ಏನೆಂದರೆ, ಯಂತ್ರವನ್ನು ಸಂಶೋಧಿಸಿದ ಮನುಷ್ಯನೇ ಯಂತ್ರವನ್ನು ಆರಾಧಿಸುವ ಅಥವಾ ಅತಿಯಾಗಿ ಅವಲಂಬಿಸುವ ಹಂತಕ್ಕೆ ತಲುಪಿಬಿಟ್ಟಿz್ದÁನೆ. ವಿದ್ಯುತ್ ಇಲ್ಲ ಅಂದರೆ ಮನೆಯಲ್ಲಿ ಅಕ್ಕಿ ಇದ್ದೂ ಬೇಳೆ ಕಾಲು ಇದ್ದೂ ನೀರು ಇದ್ದೂ ಮತ್ತು ಮೆಣಸು ಸಹಿತ ಪದಾರ್ಥ ಸಂಬಂಧಿ ವಸ್ತುಗಳೂ ಇದ್ದೂ ಹಸಿವಿನಿಂದಿರಬೇಕಾದ ಸ್ಥಿತಿ ಇವತ್ತಿನದು. ಇದರ ಇನ್ನೊಂದು ಮುಖವಾಗಿ ನಾವು ‘ಬ್ಲೆಸ್ ಯು-2’ ರೋಬೋಟನ್ನು ಎತ್ತಿಕೊಳ್ಳಬಹುದು. ಧರ್ಮ, ಅದು ಪ್ರತಿಪಾದಿಸುವ ಮೌಲ್ಯಗಳು ಮತ್ತು ಮನುಷ್ಯ ಅದರಿಂದ ಪಡೆಯುವ ಹಿತಾನುಭವವನ್ನು ಅಗ್ಗವಾಗಿ ಕಾಣುವುದರ ಪ್ರತೀಕ ಆ ರೋಬೋಟ್. ಪಾಸ್ಟರ್ ಕೊಡುವ ಆಶೀರ್ವಾದಕ್ಕೂ ರೋಬೋಟ್ ಕೊಡುವ ಆಶೀರ್ವಾದಕ್ಕೂ ನಡುವೆ ಇರುವ ವ್ಯತ್ಯಾಸಗಳು ಅನೇಕ. ಮನುಷ್ಯ ಭಾವುಕ ಜೀವಿ. ಆತ ಇತರರ ಭಾವನೆಗಳಿಗೆ ಸ್ಪಂದಿಸಬಲ್ಲ. ತನ್ನ ಮುಂದಿರುವವರ ಮಾತುಗಳಲ್ಲಿ ನೋವನ್ನೋ ಹರ್ಷವನ್ನೋ ಗುರುತಿಸಬಲ್ಲ. ಅದಕ್ಕೆ ಪರಿಹಾರವನ್ನೂ ಒದಗಿಸಬಲ್ಲ. ಧರ್ಮವೆಂಬುದು ಇನ್ನೊಬ್ಬರಿಗೆ ಸ್ಪಂದಿಸುವ, ಮೌಲ್ಯಯುತ ಬದುಕನ್ನು ಪ್ರತಿಪಾದಿಸುವ ಮತ್ತು ಕಾಲದ ಬದಲಾವಣೆಯನ್ನು ಗುರುತಿಸಿ ಮಾತಾಡುವ ಜಂಗಮ ಸ್ವರೂಪಿಯೇ ಹೊರತು ಸ್ಥಾವರವಲ್ಲ. ರೋಬೋಟ್ ಎಂಬುದು ಸ್ಥಾವರ. ಅದಕ್ಕೆ ತನ್ನ ಮುಂದಿರುವುದು ಹೆಣ್ಣೋ ಗಂಡೋ ಎಂಬುದು ತಿಳಿಸಿದರಷ್ಟೇ ಗೊತ್ತಾಗುತ್ತದೆ. ಅವರ ಭಾವನೆಗಳೇನು ಎಂಬುದೂ ತಿಳಿಸಿದರಷ್ಟೇ ಗೊತ್ತಾಗುತ್ತದೆ. ಎಲ್ಲವೂ ತಿಳಿಸಿದರೆ ಮಾತ್ರ ಗೊತ್ತಾಗುವ ಮತ್ತು ಸ್ವಯಂ ಕಲಿಯಲೋ ಕಲಿಸಲೋ ಓದಲೋ ಬಾರದ, ಜಡ ಸ್ವರೂಪಿಯದು. ಆದ್ದರಿಂದ, ಧರ್ಮದ ಸಂಕೇತಗಳನ್ನು ಯಂತ್ರಕ್ಕೆ ಕಟ್ಟಿ ಹಾಕುವುದೆಂದರೆ, ಧರ್ಮವನ್ನು ಸ್ಥಾವರಗೊಳಿಸುವುದು ಎಂದರ್ಥ. ಒಂದು ಧರ್ಮ ಆಕರ್ಷಣೀಯ ಆಗುವುದು ಅದನ್ನು ಅನುಸರಿಸುವವರ ಬದುಕನ್ನು ನೋಡಿಕೊಂಡು. ಅವರು ಮೌಲ್ಯವಂತರಾದರೆ ಆ ಧರ್ಮವೂ ಮೌಲ್ಯವಂತವಾಗುತ್ತದೆ. ಪಾಸ್ಟರ್, ಮೌಲ್ವಿ, ಸ್ವಾಮೀಜಿ.. ಮುಂತಾದುವುಗಳೆಲ್ಲ ಬರೇ ಹೆಸರುಗಳಲ್ಲ. ಅವು ಧಾರ್ಮಿಕ ಮೌಲ್ಯಗಳ ಪ್ರತೀಕಗಳೂ ಹೌದು. ಆದ್ದರಿಂದಲೇ, ಓರ್ವ ಸ್ವಾಮೀಜಿಯೋ ಮೌಲ್ವಿಯೋ ಭ್ರಷ್ಟತನವೆಸಗಿದರೆ ಸಾಮಾನ್ಯರ ಭ್ರಷ್ಟತನಕ್ಕಿಂತ ಹೆಚ್ಚು ಅದು ಸುದ್ದಿಗೀಡಾಗುವುದು. ಅದು ಆ ಸ್ಥಾನದ ಗೌರವ. ರೋಬೋಟ್ ಆ ಸ್ಥಾನವನ್ನು ತುಂಬಲಾರದು. ಮೌಖಿಕವಾಗಿ ಅದು ಮೌಲ್ಯವನ್ನು ಪ್ರತಿಪಾದಿಸಬಹುದೇ ಹೊರತು ಪ್ರಾಯೋಗಿಕವಾಗಿ ಅದು ಯಾವ ಮೌಲ್ಯವನ್ನೂ ಅನುಸರಿಸಿ ಮಾದರಿಯಾಗದು. ಹೀಗಿದ್ದೂ, ವಿಟ್ಟನ್‍ಬರ್ಗ್ ಚರ್ಚ್‍ನಲ್ಲಿರುವ ರೋಬೋಟ್‍ನಿಂದ ಜನರು ಆಕರ್ಷಿತರಾಗುತ್ತಿದ್ದಾರೆ ಎಂಬುದು ಮನುಷ್ಯ ಧಾರ್ಮಿಕವಾಗಿ ನಿಷ್ಕಾಳಜಿಯ ಧೋರಣೆಯನ್ನು ಹೊಂದುತ್ತಿದ್ದಾನೆ ಅನ್ನುವುದನ್ನೇ ಸೂಚಿಸುತ್ತದೆ.
     ಯಂತ್ರಗಳಿಗೆ ಅವುಗಳದ್ದೇ  ಆದ ಅನೇಕಾರು ಮಿತಿಗಳಿವೆ. ಅವುಗಳಿಗೆ ಹೋಲಿಸಿದರೆ ಮನುಷ್ಯ ಎಲ್ಲ ಮಿತಿಗಳನ್ನೂ ಒಂದು ಹಂತದ ವರೆಗೆ ಮೀರಿ ಬದುಕಬಲ್ಲಷ್ಟು ಸಮರ್ಥ. ಆದರೆ ಅದೇ ವೇಳೆ ಕೆಲವೊಮ್ಮೆ ಯಂತ್ರವೇ ಪರಮೋಚ್ಚ ಎಂದು ಭಾವಿಸಿ ಬದುಕುವಷ್ಟು ದಡ್ಡ. ಯಂತ್ರವನ್ನು ಪಾಸ್ಟರ್‍ಗೆ ಬದಲಾಗಿ ಸ್ಥಾಪಿಸಲಾದ ಘಟನೆ ಇದಕ್ಕೊಂದು ಉದಾಹರಣೆ. ಮುಂದೊಂದು ದಿನ ಪೂಜೆ, ಪುನಸ್ಕಾರ, ವಿವಿಧ ಧಾರ್ಮಿಕ ಆಚರಣೆಗಳನ್ನು ನಿರ್ವಹಿಸುವ ಯಂತ್ರಗಳ ಸಂಶೋಧನೆಯೂ ನಡೆಯಬಹುದು. ಪೂಜಾರಿಯೋ ಮೌಲ್ವಿಯೋ ಬೇಕಾಗಿಲ್ಲ ಎಂಬ ಸ್ಥಿತಿಯೂ ಉಂಟಾಗಬಹುದು. ಇದರ ಪರಿಣಾಮ ಏನೆಂದರೆ, ಮನುಷ್ಯರು ಯಂತ್ರಗಳಾಗುವುದು. ಧರ್ಮ ಯಂತ್ರದಂತೆ ಜಡವಾಗುವುದು. ಬ್ಲೆಸ್ ಯು-2 ರೋಬೋಟ್ ಇದನ್ನೇ ಹೇಳುತ್ತದೆ.


No comments:

Post a Comment