Thursday 31 August 2017

ಪ್ರವಾದಿ ಇಬ್ರಾಹೀಮ್ ಪ್ರಸ್ತುತಪಡಿಸಿದ ಶ್ರಮಸಂಸ್ಕೃತಿ

    ಶ್ರಮಸಂಸ್ಕೃತಿ  ಅನ್ನುವ ಪದಗುಚ್ಛವಿದೆ. ಕಾರ್ಲ್ ಮಾರ್ಕ್ಸ್ ನ ಚಿಂತನೆ ಹರಳುಗಟ್ಟುವುದೇ ಶ್ರಮಸಂಸ್ಕೃತಿಯ ಮೇಲೆ. ಬಸವಣ್ಣ ಬೋಧಿಸಿದ `ಕಾಯಕವೇ ಕೈಲಾಸ' ಎಂಬ ತತ್ವ ಪದವು ಲಿಂಗಾಯತ ಧರ್ಮದ ಮೂಲ ಬೇರು. ಬುದ್ಧನೂ ಇದಕ್ಕೆ ಹೊರತಲ್ಲ. ಇವುಗಳ ಜೊತೆಗೇ ಇಸ್ಲಾಮ್, ಕ್ರೈಸ್ತ ಮತ್ತು ಯಹೂದಿ- ಈ ಮೂರೂ ಧರ್ಮಗಳು ಗೌರವಿಸುವ ಮತ್ತು ಮಾನ್ಯ ಮಾಡುವ ಪ್ರವಾದಿ ಇಬ್ರಾಹೀಮ್(ಅ)ರು ಪರಿಚಯ ಪಡಿಸಿದ ಶ್ರಮಸಂಸ್ಕೃತಿಯನ್ನು ಹೋಲಿಸಿ ನೋಡಿದರೆ ಹೇಗನಿಸುತ್ತದೆ? ಬುದ್ಧ, ಬಸವ, ಮಾರ್ಕ್ಸ್ ಮತ್ತು ಇಂಥ ಇನ್ನಿತರ ಸುಧಾರಕರ ಚಿಂತನೆಗಳಿಗೂ ಪ್ರವಾದಿ ಇಬ್ರಾಹೀಮರ(ಅ) ಚಿಂತನೆಗೂ ನಡುವೆ ಇರುವ ಪ್ರಮುಖ ವ್ಯತ್ಯಾಸ ಏನೆಂದರೆ, ಅದು ಆಧ್ಯಾತ್ಮಿಕತೆ. ಇಬ್ರಾಹೀಮರು(ಅ) ಶ್ರಮಸಂಸ್ಕೃತಿಯನ್ನು ಆಧ್ಯಾತ್ಮಿಕತೆ ಯೊಂದಿಗೆ ಜೋಡಿಸಿದರು. ಅವರು ಶ್ರಮವನ್ನೇ ಕೈಲಾಸ ಅನ್ನಲಿಲ್ಲ. ಶ್ರಮ ಮತ್ತು ಕೈಲಾಸವನ್ನು ವಿಭಜಿಸಿ, ಒಂದನ್ನೊಂದು ಪೋಣಿಸಿದರು. ಶ್ರಮ ಜೀವಂತ ವ್ಯಕ್ತಿಗೆ ಸಂಬಂಧಿಸಿದ್ದು. ಕೈಲಾಸವಾದರೋ ಶ್ರಮದ ಸಂಕಲ್ಪಕ್ಕೆ ಹೊಂದಿಕೊಂಡು ಮರಣಾನಂತರ ಲಭ್ಯವಾಗುವಂಥದ್ದು ಎಂದು ವಾದಿಸಿದರು. ಇರಾಕ್‍ನ ಉರ್ ಎಂಬ ಪಟ್ಟಣದಿಂದ ಬಹುದೂರದ ಮಕ್ಕಾಕ್ಕೆ ಪತ್ನಿ ಹಾಜರಾ ಮತ್ತು ಹಸುಳೆ ಇಸ್ಮಾಈಲ್‍ರ ಜೊತೆ ಅವರು ಪಯಣ ಬೆಳೆಸಿದ್ದು, ಮಕ್ಕಾದ ನಿರ್ಜನ ಭೂಮಿಯಲ್ಲಿ ಪತ್ನಿ ಮತ್ತು ಮಗುವನ್ನು ತಂಗುವಂತೆ ಹೇಳಿದ್ದು ಮತ್ತು ಮಗುವಿನ ಕಾಲಬುಡದಲ್ಲಿ ನೀರಿನ ಒರತೆ ಚಿಮ್ಮಿದ್ದು... ಇವೆಲ್ಲದರಲ್ಲಿ ಬರೇ ಶ್ರಮವೊಂದೇ ಗೋಚರವಾಗುವುದಲ್ಲ, ದೇವನ ಮೇಲಿನ ಅಚಲ ವಿಶ್ವಾಸ ಮತ್ತು ಅದಕ್ಕೆ ಲಭ್ಯವಾದ ಪುರಸ್ಕಾರವೂ ಗೋಚರವಾಗುತ್ತದೆ. ಬರೇ ಹೊಟ್ಟೆಪಾಡಿನ (ಶ್ರಮ) ಗುರಿಯೊಂದಿಗೆ ಇಬ್ರಾಹೀಮ್ ಮತ್ತು ಅವರ ಕುಟುಂಬ ಯಾತ್ರೆ ಹೊರಟಿರುತ್ತಿದ್ದರೆ ಮಕ್ಕಾದಲ್ಲಿ ಹಾಜರಾರು ಹೇಗೆ ವರ್ತಿಸುತ್ತಿದ್ದರು? ಇಬ್ರಾಹೀಮರೊಂದಿಗೆ ಏನೆಂದು ಪ್ರಶ್ನಿಸುತ್ತಿದ್ದರು? ಆಧ್ಯಾತ್ಮಿಕ ರಹಿತ ಯಾತ್ರೆ (ಶ್ರಮ) ಮತ್ತು ಆಧ್ಯಾತ್ಮಿಕ ಸಹಿತ ಯಾತ್ರೆಗಳು ಮುಖಾಮುಖಿಯಾಗುವುದು ಇಲ್ಲೇ. ಮಕ್ಕಾದಲ್ಲಿ ತಂಗುವಂತೆ ಹೇಳಿ ಹೊರಟು ನಿಂತ ಪತಿ ಇಬ್ರಾಹೀಮ್‍ರರೊಂದಿಗೆ(ಅ) ಹಾಜರಾ- ‘ಇದು ದೇವನ ಆದೇಶವೇ’ ಎಂದು ಪ್ರಶ್ನಿಸುತ್ತಾರೆ. ಇಹಲೋಕ ಮತ್ತು ಪರಲೋಕ ಎಂಬ ಆಧ್ಯಾತ್ಮಿಕ ಸತ್ಯವನ್ನು ಒಪ್ಪಿಕೊಂಡ ಹಾಗೂ ಇಹದ ಜೀವನವನ್ನು ಆಧಾರವಾಗಿಸಿಕೊಂಡು ಪಾರತ್ರಿಕ ಕೈಲಾಸ ಲಭ್ಯವಾಗುತ್ತದೆ ಎಂದು ವಿಶ್ವಾಸವಿಡುವವರಿಂದ ಮಾತ್ರ ಇಂಥ ಪ್ರಶ್ನೆ ಸಾಧ್ಯ. ‘ನಾನಿಲ್ಲಿರುವುದು ದೇವನ ಇಚ್ಛೆ ಎಂದಾದರೆ, ಹಾಗೆಯೇ ಆಗಲಿ’ ಎಂದು ಹಾಜರಾ ಹೇಳುತ್ತಾರೆ. ಮಾತ್ರವಲ್ಲ, ಮಗುವಿಗೆ ನೀರಿನ ಅಗತ್ಯ ಕಂಡು ಬಂದಾಗ ಹುಡುಕಲಾರಂಭಿಸುತ್ತಾರೆ. ಬೆಟ್ಟಗಳ ನಡುವೆ ಅಲೆಯುತ್ತಾರೆ. ಆಗ ಉದ್ಭವವಾಗುವ ನೀರಿನ ಚಿಲುಮೆಯೇ ಝಂ ಝಂ. ಅದು ಶ್ರಮ ಮತ್ತು ದೇವನ ಮೇಲಿನ ಅಚಂಚಲ ವಿಶ್ವಾಸದ ಪ್ರತೀಕ. ಬರೇ ಶ್ರಮ ಅಥವಾ ಬರೇ ವಿಶ್ವಾಸಗಳ ಆಚೆಗಿನ ಕತೆಯೊಂದನ್ನು ಝಂ ಝಂ ಹೇಳುತ್ತದೆ. ಶ್ರಮ ಮತ್ತು ದೇವ ವಿಶ್ವಾಸವು ಅಪೂರ್ವ ಮತ್ತು ಅನೂಹ್ಯವಾದ ಸಾಧನೆಯನ್ನು ಮಾಡಿಸಬಲ್ಲುದು ಅನ್ನುವುದಕ್ಕೆ ಸಾಕ್ಷಿ ಝಂ ಝಂ. ಸಾಮಾನ್ಯವಾಗಿ ಬರೇ ಶ್ರಮವನ್ನೇ ಗುರಿಯಾಗಿಸಿಕೊಂಡು, ಅದನ್ನೇ ಕೈಲಾಸವೆಂದುಕೊಂಡು ಮತ್ತು ಮರಣಾನಂತರ ಏನೂ ಇಲ್ಲ ಎಂದುಕೊಂಡು ಬದುಕುವವರು ಹಾಜರಾರ ಸ್ಥಾನದಲ್ಲಿರುತ್ತಿದ್ದರೆ ಅಲ್ಲಿ ನಡೆಯಬಹುದಾಗಿದ್ದ ಮಾತುಕತೆಯ ಸನ್ನಿವೇಶವನ್ನೊಮ್ಮೆ ಕಲ್ಪಿಸಿಕೊಳ್ಳಿ. ನೀರಿಲ್ಲದ ಮತ್ತು ಜನವಾಸವಿಲ್ಲದ ಪ್ರದೇಶದಲ್ಲಿ ತಾಯಿ ಮತ್ತು ಮಗುವು ತಂಗುವಂತೆ ಹೇಳುವುದೇ ಅತೀ ದೊಡ್ಡ ಪ್ರಮಾದವಾಗಿ ಆಧ್ಯಾತ್ಮಿಕರಹಿತ ಶ್ರಮಸಂಸ್ಕೃತಿ  ವ್ಯಾಖ್ಯಾನಿಸುವ ಸಾಧ್ಯತೆಯಿದೆ. ಆದ್ದರಿಂದಲೇ, ಪ್ರವಾದಿ ಇಬ್ರಾಹೀಮ್(ಅ) ಪ್ರಸ್ತುತಪಡಿಸಿದ ಶ್ರಮಸಂಸ್ಕೃತಿ  ವಿಭಿನ್ನವಾದುದು. ಅವರ ಶ್ರಮಸಂಸ್ಕೃತಿಯಲ್ಲಿ ದೇವನು ಹೊರಗಲ್ಲ, ಒಳಗೆ. ದೇವನ ಮೇಲಿನ ವಿಶ್ವಾಸವು- ಎಷ್ಟೇ ಕಠಿಣ ಮತ್ತು ಅಪಾಯಕಾರಿ ಶ್ರಮವನ್ನೂ ಸುಲಭಗೊಳಿಸಬಲ್ಲುದು ಎಂದು ಅದು ಸಾರುತ್ತದೆ. ಇದಕ್ಕೆ ಹಾಜರಾ ಮತ್ತು ಝಂ ಝಂ ಉತ್ತಮ ಉದಾಹರಣೆ. 5 ಸಾವಿರ ವರ್ಷಗಳಷ್ಟು ಹಿಂದೆ ಆಗಿ ಹೋದ ಶ್ರಮವು ಸಾರ್ವಕಾಲಿಕ ಶ್ರಮಸಂಸ್ಕೃತಿಯಾಗಿ ಮಾರ್ಪಾಟುಗೊಂಡಿರುವುದು ಮತ್ತು ಪ್ರತಿವರ್ಷ ಈ ಶ್ರಮಸಂಸ್ಕೃತಿಯ ಭಾಗವಾಗಲು ವಿಶ್ವಾದ್ಯಾಂತ ಜನರಿಂದ ಪೈಪೋಟಿ ನಡೆಯುತ್ತಿರುವುದು ಆ ಶ್ರಮದ ಮಹತ್ವ ಮತ್ತು ಯಶಸ್ಸನ್ನು ಹೇಳುತ್ತದೆ. ಆದ್ದರಿಂದಲೇ ಹಜ್ಜ್ ವಿಭಿನ್ನ, ಸಾರ್ವಕಾಲಿಕ. 

Friday 25 August 2017

ಕಾವ್ಯ: ಪ್ರತಿಭಟನಾಕಾರರ ಗುರಿ ಯಾರು?

     ಸಾವು ಆಘಾತಕಾರಿ. ಅದರಲ್ಲೂ ಹದಿಹರೆಯದ ಮಕ್ಕಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪುವುದು ಈ ಆಘಾತದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆ ಇಂಥದ್ದೊಂದು ಆಘಾತದಲ್ಲಿದೆ. ಕಾವ್ಯ ಪೂಜಾರಿ ಎಂಬ 10ನೇ ತರಗತಿಯ ವಿದ್ಯಾರ್ಥಿನಿ ಈ ಆಘಾತದ ಕೇಂದ್ರ ಬಿಂದು. ಪ್ರತಿಷ್ಠಿತ ಆಳ್ವಾಸ್ ಶಿಕ್ಪಣ ಸಂಸ್ಥೆಯ ಹಾಸ್ಟೆಲ್‍ನಲ್ಲಿ ಈ ಮಗು ಶವವಾಗಿ ದೊರೆತಿದೆ. ಇದಕ್ಕಿಂತ ಒಂದು ದಿನ ಮೊದಲು ಈ ಮಗು ತನ್ನ ತಾಯಿಯೊಂದಿಗೆ ಆಡಿರುವ ಮಾತುಗಳು, ಆ ಮಾತುಗಳಲ್ಲಿದ್ದ ಲವಲವಿಕೆ, ನೆಮ್ಮದಿ ಭಾವವನ್ನು ಪರಿಗಣಿಸುವಾಗ ಮರುದಿನ ಶವವಾಗುವ ಮಗು ಇದು ಎಂದು ನಂಬುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ದೂರವಾಣಿಯಲ್ಲಿ ಮಗು ಆಡಿರುವ ಮಾತುಗಳು ಸಹಜವಾಗಿತ್ತು. ಓರ್ವ ತಾಯಿ ಮತ್ತು ಮಗು ಸಹಜ ಸನ್ನಿವೇಶಗಳಲ್ಲಿ ಹೇಗೆ ಮಾತಾಡಬಹುದೋ ಹಾಗೆ ಅವರಿಬ್ಬರೂ ಮಾತಾಡಿಕೊಂಡಿದ್ದರು. ಆದ್ದರಿಂದಲೇ, ಈ ಮಾತುಕತೆಯ ಮರುದಿನ ಆ ಮಗು ಶವವಾಗಿರುವುದನ್ನು ಸಹಜ ಆತ್ಮಹತ್ಯೆ ಎಂದು ಒಪ್ಪಲು ಆ ಹೆತ್ತವರು ಮಾತ್ರವಲ್ಲ, ಸಾಮಾನ್ಯ ಮಂದಿಯೂ ಸಿದ್ಧವಾಗುತ್ತಿಲ್ಲ. ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಇದೇ ವೇಳೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಮೋಹನ್ ಆಳ್ವರನ್ನು ಬೆಂಬಲಿಸಿ ಒಂದಕ್ಕಿಂತ ಹೆಚ್ಚು ಸಭೆಗಳಾಗಿವೆ. ಪತ್ರಿಕಾಗೋಷ್ಠಿಗಳು ನಡೆದಿವೆ. ಇಡೀ ಪ್ರಕರಣ ತಿರುವು ಪಡಕೊಳ್ಳುವುದೇ ಇಲ್ಲಿ. ಎರಡ್ಮೂರು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಯುವತಿಯ ಹತ್ಯೆ ನಡೆದಿತ್ತು. ಅದೂ ಅನೇಕಾರು ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿತ್ತು. ಪ್ರತಿಭಟನೆಗಳೂ ನಡೆದುವು. ಅದೇ ವೇಳೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಪರವೂ ಸಭೆಗಳು ನಡೆದುವು. ಸದ್ಯ ಸೌಜನ್ಯ ಪ್ರಕರಣ ಬಹುತೇಕ ಮುಚ್ಚಿ ಹೋದ ಸ್ಥಿತಿಯಲ್ಲಿದೆ. ಸೌಜನ್ಯಳ ಹೆತ್ತವರೇ ನ್ಯಾಯ ನಿರಾಕರಣೆಯ ಭಾವದಲ್ಲಿz್ದÁರೆ. ಈ ಮಗುವಿನ ಸ್ಥಿತಿಯೂ ಇದುವೇ ಆಗಬಹುದೇ?
     ಅಷ್ಟಕ್ಕೂ, ಕಾವ್ಯ ಮತ್ತು ಸೌಜನ್ಯ ಪ್ರಕರಣಗಳಲ್ಲಿ ಪರ ಮತ್ತು ವಿರುದ್ಧ ಸಭೆಗಳೇಕೆ ನಡೆದುವು? ಇವು ಈ ಪ್ರಕರಣಗಳ ಮೇಲೆ ಬೀರಿದ ಮತ್ತು ಬೀರಬಹುದಾದ ಪರಿಣಾಮಗಳೇನು? ಈ ಮೊದಲು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಂದಿತಾ ಎಂಬ ಮಗುವಿನ ಸಾವು ಸಂಭವಿಸಿತ್ತು. ಆ ಇಡೀ ಪ್ರಕರಣವನ್ನು ಬಿಜೆಪಿ ನಿಭಾಯಿಸಿದ್ದು ಅತ್ಯಂತ ಉನ್ಮಾದದ ರೀತಿಯಲ್ಲಿ. ಇಡೀ ಶಿವಮೊಗ್ಗವನ್ನೇ ಅದು ಭೀತಿಯಲ್ಲಿ ಕೆಡವಿತು. ತಪ್ಪಿತಸ್ಥರಾರು ಎಂಬುದನ್ನು ಅದು ತನಿಖೆಗೆ ಮೊದಲೇ ಪತ್ತೆಹಚ್ಚಿ, ತೀರ್ಥಹಳ್ಳಿಗೆ ಬೆಂಕಿ ಹಚ್ಚುವ ಶ್ರಮ ನಡೆಸಿತು. ಕರ್ಫ್ಯೂ, ಲಾಠಿ ಏಟು ಎಲ್ಲವೂ ನಡೆದುವು. ಆದರೆ, ಸೌಜನ್ಯ ಮತ್ತು ಕಾವ್ಯ ಪೂಜಾರಿ ಪ್ರಕರಣದಲ್ಲಿ ಇದೇ ಬಿಜೆಪಿ ಯಾವ ಉತ್ಸಾಹವನ್ನೂ ತೋರಿಸುತ್ತಿಲ್ಲ. ಅದರ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಲೂ ಇಲ್ಲ. ಇದಕ್ಕೆ ಕಾರಣಗಳೇನು? ಅದರ ಪ್ರತಿಭಟನೆಗಳೇಕೆ ಸೆಲೆಕ್ಟಿವ್ ಆಗುತ್ತಿದೆ?
      ಸೌಜನ್ಯ ಮತ್ತು ಕಾವ್ಯ ಪ್ರಕರಣವು ನಾಗರಿಕರ ಪ್ರಜ್ಞೆಯನ್ನು ತಿವಿದ ಎರಡು ಘಟನೆಗಳಾಗಿಯಷ್ಟೇ ನಾವು ಗುರುತಿಸಬೇಕಾದುದಲ್ಲ. ಬಿಜೆಪಿಯ ಹಿಪಾಕ್ರಸಿಯನ್ನು ಬಹಿರಂಗಕ್ಕೆ ತಂದ ಪ್ರಕರಣವಾಗಿಯೂ ನಾವು ಗುರುತಿಸಬೇಕಾಗಿದೆ. ಅದೇವೇಳೆ, ಯಾವ ರೀತಿಯ ಪ್ರತಿಭಟನೆಗಳು ನ್ಯಾಯವನ್ನು ತಂದುಕೊಡಬಹುದು ಎಂಬ ಅವಲೋಕನಕ್ಕೆ ಕಾರಣವಾಗಬೇಕಾದ ಪ್ರಕರಣವಾಗಿಯೂ ನಾವು ಎತ್ತಿಕೊಳ್ಳಬೇಕಾಗಿದೆ. ಸೌಜನ್ಯ ಮತ್ತು ಕಾವ್ಯರಿಗಾಗಿ ನಡೆದ ಪ್ರತಿಭಟನೆಗಳ ಕೇಂದ್ರ ಬಿಂದು ಅವರಿಬ್ಬರು ಆಗುವ ಬದಲು ಉದ್ದೇಶಪೂರ್ವಕವೋ ಅನುದ್ದೇಶಪೂರ್ವಕವೋ ವೀರೇಂದ್ರ ಹೆಗಡೆ ಮತ್ತು ಮೋಹನ್ ಆಳ್ವ ಆದದ್ದನ್ನೂ ನಾವಿಲ್ಲಿ ಗುರುತಿಸಬೇಕು. ಆಳ್ವಾಸ್ ಶಿಕ್ಪಣ ಸಂಸ್ಥೆಯ 26 ಸಾವಿರ ವಿದ್ಯಾರ್ಥಿಗಳಲ್ಲಿ ಕಾವ್ಯ ಒಬ್ಬಳು. ಈ ಬೃಹತ್ ಶಿಕ್ಪಣ ಸಂಸ್ಥೆಗೆ ಮೋಹನ್ ಆಳ್ವ ಹೊಣೆಗಾರರು ಎಂಬ ಕಾರಣಕ್ಕಾಗಿ ಕಾವ್ಯಳ ಸಾವಿಗೆ ಅವರು ಉತ್ತರದಾಯಿಯಾಗುತ್ತಾರೆಯೇ ಹೊರತು ಇನ್ನಾವ ಕಾರಣಕ್ಕಾಗಿಯೂ ಅಲ್ಲ. ಇಷ್ಟು ಬೃಹತ್ ಸಂಖ್ಯೆಯ ವಿದ್ಯಾರ್ಥಿ ಸಮೂಹದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಭೇಟಿಯಾಗಿ, ಯೋಗಕ್ಷೇಮ ವಿಚಾರಿಸಿಕೊಂಡು ಹೋಗುವುದಕ್ಕೆ ಅವರಿಂದ ಸಾಧ್ಯವೂ ಇಲ್ಲ. ಅದು ಪ್ರಾಯೋಗಿಕವೂ ಅಲ್ಲ. ಇದು ಕಾವ್ಯಳ ಸಾವಿಗೆ ನ್ಯಾಯವನ್ನು ಕೋರಿ ಪ್ರತಿಭಟಿಸುವ ಪ್ರತಿಯೊಬ್ಬರಿಗೂ ಗೊತ್ತಿರಬೇಕು. ಆದರೆ ಕಾವ್ಯಳ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳು ಮತ್ತು ಪ್ರತಿಭಟನಾ ನಿರತರ ಭಾಷಣಗಳು ಈ ವಾಸ್ತವವನ್ನು ಕಡೆಗಣಿಸುವ ರೀತಿಯಲ್ಲಿತ್ತು ಮತ್ತು ಇವೆ ಎಂಬುದು ವಿಷಾದಕರ. ಈ ಹಿಂದೆ ಸೌಜನ್ಯ ಪ್ರಕರಣದಲ್ಲಿಯೂ ಇವೇ ತಪ್ಪುಗಳಾಗಿದ್ದುವು. ಪ್ರತಿಭಟನಾಕಾರರ ಗುರಿ ನ್ಯಾಯ ಆಗಿರಬೇಕೇ ಹೊರತು ಮೋಹನ್ ಆಳ್ವ ಅಥವಾ ವೀರೇಂದ್ರ ಹೆಗ್ಗಡೆ ಆಗಿರಬಾರದು. ಯಾವಾಗ ಈ ಗುರಿ ನಿರ್ಣಯದಲ್ಲಿ ಪ್ರತಿಭಟನಾಕಾರರು ಎಡವಿದರೋ ಕಾವ್ಯ ಮತ್ತು ಸೌಜನ್ಯ ಮರೆಗೆ ಸರಿದು ವೀರೇಂದ್ರ ಹೆಗಡೆ ಮತ್ತು ಮೋಹನ್ ಆಳ್ವರೇ ಇಡೀ ಪ್ರತಿಭಟನೆಯ ಕೇಂದ್ರ ಬಿಂದುವಾದರು. ಇದು ಅನಪೇಕ್ಷಿತ. ತಪ್ಪಿತಸ್ಥರು ಯಾರು ಅನ್ನುವುದು ಪತ್ತೆಯಾಗುವ ಮೊದಲೇ ಇಂತಿಂಥವರೇ ತಪ್ಪಿತಸ್ಥರು ಎಂದು ಹೇಳುವುದು ಅನೇಕ ಬಾರಿ ನಿಜವಾದ ತಪ್ಪಿತಸ್ಥರು ತಪ್ಪಿಸಿಕೊಳ್ಳುವುದಕ್ಕಷ್ಟೇ ನೆರವಾಗುತ್ತದೆ. ಸೌಜನ್ಯ ಪ್ರಕರಣವು ಅಂಥದ್ದೊಂದು ಸನ್ನಿವೇಶಕ್ಕೆ ಕಾರಣವಾಯಿತೋ ಎಂಬ ಅನುಮಾನ ಹುಟ್ಟಿಕೊಳ್ಳುವುದೂ ಈ ಕಾರಣದಿಂದಲೇ. ಕಾವ್ಯಳ ಸಾವು ಸಹಜವೋ ಅಸಹಜವೋ ಅದನ್ನು ನಿರ್ಣಯಿಸಬೇಕಾದದ್ದು ತನಿಖಾ ಸಂಸ್ಥೆಗಳು. ಸಾರ್ವಜನಿಕರಾಗಿ ನಮ್ಮ ಜವಾಬ್ದಾರಿ ಏನೆಂದರೆ, ತಪ್ಪಿತಸ್ಥರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೇರುವುದು. ಸೂಕ್ತ ರೀತಿಯಲ್ಲಿ ತನಿಖೆಯಾಗುವಂತೆ ನೋಡಿಕೊಳ್ಳುವುದು. ಇದರ ಹೊರತಾಗಿ ನಮಗೆ ನಾವೇ ನ್ಯಾಯಾಧೀಶರಾದರೆ ಅದು ಇಡೀ ಪ್ರಕರಣಕ್ಕೆ ಬೇರೆಯದೇ ಆದ ತಿರುವನ್ನು ಕೊಡಬಹುದು. ಅದರಿಂದಾಗಿ ಚರ್ಚಾ ವೇದಿಕೆಯಿಂದ ಕಾವ್ಯ ಮರೆಯಾಗಿ ಅಲ್ಲಿ ಇನ್ನಾರೋ ವಿರಾಜಮಾನರಾಗಬಹುದು. ವೈಯಕ್ತಿಕ ದ್ವೇಷಗಳನ್ನು ತೀರಿಸುವ ವೇದಿಕೆಯಾಗಿ ಪ್ರತಿಭಟನಾ ಸಭೆಗಳು ಮಾರ್ಪಾಟು ಹೊಂದಬಹುದು. ಸೌಜನ್ಯ ಬಹುತೇಕ ಈ ಬಗೆಯ ಚರ್ಚೆಗಳಲ್ಲಿ ಕಳೆದು ಹೋಗಿದ್ದಾಳೆ. ಪ್ರತಿಭಟನೆ ಮತ್ತು ಮಾಧ್ಯಮ ಚರ್ಚೆಗಳ ಕೇಂದ್ರ ಬಿಂದು ಆಕೆ ಆಗುವ ಬದಲು ಇನ್ನಾರೋ ಆಗಿ ಇಡೀ ಸನ್ನಿವೇಶವೇ ಗೊಂದಲಪೂರ್ಣವಾದದ್ದು ನಮಗೆ ಗೊತ್ತಿದೆ. ಕಾವ್ಯ ಹಾಗಾಗಬಾರದು. ಕಾವ್ಯ ಯಾವ ಶಿಕ್ಪಣ ಸಂಸ್ಥೆಯಲ್ಲಿ ಕಲಿಯುತ್ತಿದ್ದಳು ಮತ್ತು ಆ ಶಿಕ್ಪಣ ಸಂಸ್ಥೆಯ ಮುಖ್ಯಸ್ಥರು ಯಾರು ಅನ್ನುವುದು ಮುಖ್ಯವಲ್ಲ. ಯಾವಾಗ ಇದು ಪ್ರಾಮುಖ್ಯತೆ ಪಡೆಯುತ್ತದೋ ಆವಾಗ ಕಾವ್ಯ ಬದಿಗೆ ಸರಿಯುತ್ತಾಳೆ. ನಮಗೆ ಕಾವ್ಯಳ ಸಾವಿಗೆ ಕಾರಣವೇನು ಅನ್ನುವುದು ಮುಖ್ಯವಾಗಬೇಕು. ಪ್ರತಿಭಟನಾ ಸಭೆಗಳು ಈ ಮುಖ್ಯ ವಿಷಯದ ಮೇಲೆಯೇ ಗಮನ ಹರಿಸಬೇಕು. ಬಿಜೆಪಿಯ ಮಟ್ಟಿಗೆ ಕಾವ್ಯ ಮುಖ್ಯ ಅಲ್ಲ. ಆಕೆ ಯಾವ ಶಿಕ್ಪಣ ಸಂಸ್ಥೆಯಲ್ಲಿ ಕಲಿಯುತ್ತಿದ್ದಾಳೆ ಅನ್ನುವುದೇ ಮುಖ್ಯ. ಸೌಜನ್ಯ ಪ್ರಕರಣದಲ್ಲೂ ಅದು ಈ ನೀತಿಯನ್ನೇ ಅನುಸರಿಸಿತ್ತು. ಕಾವ್ಯ ಪರ ಪ್ರತಿಭಟನೆ ಹಾಗಾಗದಿರಲಿ. ಕಾವ್ಯಳೇ ಮುಖ್ಯವಾಗಲಿ.

Friday 11 August 2017

32 + 16= ?

        ಇರೋಮ್ ಶರ್ಮಿಳಾ ಮತ್ತು ಮೇಧಾ ಪಾಟ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಇವರಲ್ಲಿ ಇರೋಮ್ ಶರ್ಮಿಳಾ ಸದ್ಯ ಕೊಡೈಕನಾಲ್‍ನಲ್ಲಿ ಮದುವೆ ತಯಾರಿಯಲ್ಲಿ ಬ್ಯುಝಿಯಾಗಿದ್ದಾರೆ. ಮೇಧಾ ಪಾಟ್ಕರ್ ಅವರು ಮಧ್ಯ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ. ವಿಷಾದ ಏನೆಂದರೆ, ಬಹುತೇಕ ಕನ್ನಡ ಪತ್ರಿಕೆಗಳು (ಸತ್ಯಾಗ್ರಹದ 15 ದಿನಗಳ ವರೆಗೆ.) ಮೇಧಾರ ಸತ್ಯಾಗ್ರಹದ ಸುದ್ದಿಯನ್ನು ಪ್ರಕಟಿಸಿಯೇ ಇಲ್ಲ. ಅದೇ ವೇಳೆ, ರಾಷ್ಟ್ರಮಟ್ಟದ ಇಂಗ್ಲಿಷ್ ಪತ್ರಿಕೆಗಳು ಈ ಸತ್ಯಾಗ್ರಹಕ್ಕೆ ಒಳಪುಟದಲ್ಲಿ ಒಂದು ಕಾಲಂನಷ್ಟು ಜಾಗವನ್ನಷ್ಟೇ ಕೊಟ್ಟಿವೆ. ಇದಕ್ಕೆ ಹೋಲಿಸಿದರೆ ಇರೋಮ್ ಭಾಗ್ಯಶಾಲಿ. ಆಕೆ ಕೊಡೈಕನಾಲ್‍ನಲ್ಲಿ ತಂಗಿರುವುದು, ಬ್ರಿಟಿಷ್ ಪೌರತ್ವ ಪಡೆದಿರುವ ಡೆಸ್ಮಾಂಡ್ ಕುಟಿನ್ಹೊ ಜೊತೆ ಅಂತರ್ಧಮೀಯ ವಿವಾಹಕ್ಕಾಗಿ ನೋಂದಣಿ ಮಾಡಿಕೊಂಡಿರುವುದು ಮತ್ತು ಹಿಂದೂ ಮಕ್ಕಳ ಕಚ್ಚಿಯಂಥ ಸಂಘಟನೆಗಳು ಆ ಮದುವೆಗೆ ವಿರೋಧ ಸೂಚಿಸಿ ದೂರು ದಾಖಲಿಸಿರುವುದೆಲ್ಲ ಮಾಧ್ಯಮಗಳ ಪಾಲಿಗೆ ರಸವತ್ತಾದ ಸುದ್ದಿಯಾಗಿ ಮಾರ್ಪಾಟುಗೊಂಡಿದೆ. 2000 ಇಸವಿಯಲ್ಲಿ ಇರೋಮ್ ಶರ್ಮಿಳಾ ಆಮರಣಾಂತ ಉಪವಾಸವನ್ನು ಕೈಗೊಂಡು ದೇಶದಾದ್ಯಂತ ಸುದ್ದಿಯಾಗಿದ್ದರು. ಹರೆಯದ ಯುವತಿಯೊಬ್ಬಳು ಪ್ರಜಾಸತ್ತಾತ್ಮಕ ವಿಧಾನದ ಮೂಲಕ ವ್ಯವಸ್ಥೆಯನ್ನು ಎದುರಿಸುವ ನಿರ್ಧಾರ ತಳೆದುದು ಅತ್ಯಂತ ಧೈರ್ಯದ ಕೆಲಸ. ಮಣಿಪುರದ ಮೇಲೆ ಕೇಂದ್ರ ಸರಕಾರ ಹೇರಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(AFSPA )ಯನ್ನು ಹಿಂತೆಗೆಯಬೇಕು ಎಂಬುದು ಯುವತಿಯ ಬೇಡಿಕೆಯಾಗಿತ್ತು. ಆ ಯುವತಿ ಅನ್ನ, ನೀರು ತ್ಯಜಿಸಿದಳು. ಕನ್ನಡಿ ನೋಡಲ್ಲ, ತಲೆಗೂದಲು ಬಾಚಲ್ಲ ಎಂದು ಶಪಥಗೈದಳು. ಆಕೆಯ ಸಾವನ್ನು ತಪ್ಪಿಸುವುದಕ್ಕಾಗಿ ಸರಕಾರ ಆಗಾಗ ಬಂಧಿಸಿ ನಳಿಕೆಯ ಮೂಲಕ ಬಲವಂತದಿಂದ ಆಹಾರವನ್ನು ಕೊಡಲು ಪ್ರಾರಂಭಿಸಿತು. ಕ್ರಮೇಣ ಮಾಧ್ಯಮಗಳೂ ಆಕೆಯ ಸತ್ಯಾಗ್ರಹದ ಮೇಲೆ ಆಸಕ್ತಿಯನ್ನು ಕಳಕೊಳ್ಳತೊಡಗಿದುವು. ಜನರು ನಿಧಾನಕ್ಕೆ ಅವರ ಸುತ್ತಲಿನಿಂದ ಕರಗತೊಡಗಿದರು. ಬಳಿಕ ವರ್ಷಕ್ಕೊಮ್ಮೆ ಸ್ಮರಣೆಗೆ ಒಳಗಾಗುವ ವ್ಯಕ್ತಿತ್ವವಾಗಿ ಇರೋಮ್ ಬದಲಾದರು. ಹಾಗಂತ, ಇರೋಮ್ ತನ್ನ ಶಪಥದಲ್ಲಿ ಯಾವ ರಾಜಿಯನ್ನೂ ಮಾಡಿಕೊಂಡಿರಲಿಲ್ಲ. ಮಾತ್ರವಲ್ಲ, ಮಣಿಪುರದಲ್ಲಿರುವ ಸಶಸ್ತ್ರ ಪಡೆಗಳು ಪರಮ ದಯಾಳುವಾಗಿಯೂ ಮಾರ್ಪಟ್ಟಿರಲಿಲ್ಲ. ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಮಣಿಪುರದಲ್ಲಿ 2000 ಇಸವಿಯ ಬಳಿಕವೂ ಧಾರಾಳ ನಡೆದಿದೆ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ನೇತೃತ್ವದಲ್ಲಿ ನಡೆದ ತನಿಖಾ ಸಮಿತಿಯು 1500 ಎನ್‍ಕೌಂಟರ್‍ಗಳ ಬಗ್ಗೆ ಶಂಕೆ ವ್ಯಕ್ತಪಡಿಸಿ ಸುಪ್ರೀಮ್ ಕೋರ್ಟ್‍ಗೆ ವರದಿಯನ್ನು ನೀಡಿದೆ. ಆ ಬಗ್ಗೆ ಸುಪ್ರೀಮ್ ಕೋರ್ಟ್ ತನಿಖೆಗೂ ಆದೇಶಿಸಿದೆ. ಇಷ್ಟಿದ್ದೂ ಇರೋಮ್‍ರ ಹೋರಾಟವು ನಿಧಾನವಾಗಿ ಜನರ ನಿರ್ಲಕ್ಷ್ಯಕ್ಕೆ ಯಾಕೆ ಒಳಗಾಯಿತೆಂಬ ಪ್ರಶ್ನೆ ಖಂಡಿತ ಪ್ರಸ್ತುತ. ವ್ಯವಸ್ಥೆ ಅತ್ಯಂತ ಯೋಜಿತವಾಗಿ ಆಕೆಯ ವಿರುದ್ಧ ಅಪಪ್ರಚಾರದಲ್ಲಿ ತೊಡಗಿತು. ಆಕೆಯ ಹೋರಾಟ ಮಾದರಿಯನ್ನು ಅಪ್ರಸ್ತುತವೆಂದು ಸಾರಿತು. ಇರೋಮ್‍ರದ್ದು ನಕಾರಾತ್ಮಕ ಸಿದ್ಧಾಂತವೆಂದು ಪ್ರತಿಪಾದಿಸಿತು. ಮಣಿಪುರದ ಪಾಲಿಗೆ ಅಪಾಯಕಾರಿಯಾಗಿರುವ ಸಶಸ್ತ್ರ ಕಾಯ್ದೆಯನ್ನು ಹಿಂಪಡೆಯದೆಯೇ ಇರೋಮ್‍ರನ್ನೇ ಅಪಾಯಕಾರಿಯಾಗಿ ಬಿಂಬಿಸುವ ಶ್ರಮ ನಡೆಯಿತು. ಅಂತಿಮವಾಗಿ 2016ರ ಆಗಸ್ಟ್ ನಲ್ಲಿ ಇರೋಮ್ ತನ್ನ 16 ವರ್ಷಗಳ ಸತ್ಯಾಗ್ರಹಕ್ಕೆ ವಿದಾಯ ಕೋರಿದರು. ಪ್ರಜಾ (People resurgence and Justice Allaiance ) ಎಂಬ ಪಕ್ಷವನ್ನು ಕಟ್ಟಿ ರಾಜಕೀಯಕ್ಕೆ ಧುಮುಕಿದರು. ಮಣಿಪುರ ವಿಧಾನಸಭೆಗೆ ಸ್ಪರ್ಧಿಸಿದರು. ಆದರೆ ಅವರಿಗೆ ಲಭಿಸಿದ್ದು ಬರೇ 90 ಮತ. ಮಣಿಪುರದ ಜನತೆಗಾಗಿ ಅತಿ ಬೆಲೆಬಾಳುವ ಯೌವನವನ್ನೇ ಧಾರೆಯೆರೆದ ಇರೋಮ್‍ರಿಗೆ ಸಿಕ್ಕ ಪುರಸ್ಕಾರ ಇದು.
     ಇರೋಮ್‍ಗೆ ಹೋಲಿಸಿದರೆ ಮೇಧಾ ಇನ್ನೂ ಹೋರಾಟದ ಕಣದಲ್ಲಿದ್ದಾರೆ. 1985ರಲ್ಲಿ ನರ್ಮದಾ ಬಚಾವೋ ಆಂದೋಲನ್ (NBA) ಅನ್ನು ಕಟ್ಟಿ ಸತತ 32 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಮೇಧಾ ಈ ಇಳಿ ವಯಸ್ಸಿನಲ್ಲೂ ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿದ್ದಾರೆ. ನರ್ಮದಾ ಅಣೆಕಟ್ಟಿನ ಗೇಟ್‍ಗಳನ್ನು ಮುಚ್ಚಲು ಕೇಂದ್ರ ಸರಕಾರವು ಗುಜರಾತ್‍ಗೆ ಅನುಮತಿ ನೀಡಿರುವುದರಿಂದ ಮಧ್ಯಪ್ರದೇಶದ ನಾಲ್ಕು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶಗಳು ಮುಳುಗಲಿದ್ದು 40 ಸಾವಿರ ಕುಟುಂಬಗಳು ನಿರಾಶ್ರಿತವಾಗಲಿವೆ ಎಂಬುದು ಅವರ ಆತಂಕ. ಈ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡದೆಯೇ ಗೇಟ್ ಮುಚ್ಚುವ ಕ್ರಮ ಕೈಗೊಳ್ಳಬಾರದೆಂಬುದು ಅವರ ಆಗ್ರಹ. ನಿಜವಾಗಿ 1985ರಲ್ಲಿ ನರ್ಮದಾ ಚಳುವಳಿಯನ್ನು ರೂಪಿಸುವಾಗ ಮೇಧಾ ಆಗಿನ್ನೂ ಯುವತಿ. ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶಗಳಿಗೆ ನೀರು ಮತ್ತು ವಿದ್ಯುತ್ ಒದಗಿಸುವ ಉದ್ದೇಶದ ಬೃಹತ್ ನರ್ಮದಾ ಅಣೆಕಣ್ಣು ಯೋಜನೆಯ ಬಗ್ಗೆ ಮೇಧಾ ಅಧ್ಯಯನಕ್ಕಿಳಿದರು. ಅದನ್ನು ಸುತ್ತಿಕೊಂಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಪ್ರಶ್ನಿಸಿದರು. ಯೋಜನೆಯಿಂದ ನಿರಾಶ್ರಿತರಾಗಲಿರುವ ಲಕ್ಷಾಂತರ ಮಂದಿಗೆ ಪುನರ್ವಸತಿ ಮತ್ತು ಪರಿಹಾರಕ್ಕಾಗಿ ಆಗ್ರಹಿಸಿದರು. ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದರು. ವಿಷಾದ ಏನೆಂದರೆ, ವ್ಯವಸ್ಥೆ ಮೇಧಾರ ದೇಶ ಬದ್ಧತೆಯನ್ನೇ ಪ್ರಶ್ನಿಸತೊಡಗಿತು. ಅಭಿವೃದ್ಧಿ ವಿರೋಧಿ ಎಂಬ ಪುಕಾರನ್ನು ಹಬ್ಬಿಸಿತು. ಅವರ ವಿರುದ್ಧ ಕೈಗೊಳ್ಳಲಾದ ನಕಾರಾತ್ಮಕ ಪ್ರಚಾರ ಯುದ್ಧವು ಎಷ್ಟು ಪ್ರಬಲವಾಗಿತ್ತೆಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಈಶಾನ್ಯ ಮುಂಬಯಿ ಕ್ಷೇತ್ರದಿಂದ ಸ್ಪರ್ಧಿಸಿದ ಮೇಧಾರನ್ನು ಮತದಾರರನ್ನು ತಿರಸ್ಕರಿಸಿದರು. ಬರೇ 8.9% ಮತಗಳೊಂದಿಗೆ ಅವರು 3ನೇ ಸ್ಥಾನಕ್ಕೆ ಕುಸಿದರು.
     ಬ್ರಿಟಿಷರನ್ನು ಮಣಿಸಿದ ಗಾಂಧೀಜಿಯ ಹೋರಾಟ ಮಾದರಿಯನ್ನು ನೆಚ್ಚಿಕೊಂಡು ಹೋರಾಟಕ್ಕೆ ಧುಮುಕಿದ ಇಬ್ಬರು ಉತ್ಸಾಹಿ ಯುವತಿಯರನ್ನು ಅದೇ ಗಾಂಧೀಜಿಯ ಭಾರತವು ಅತ್ಯಂತ ವ್ಯವಸ್ಥಿತವಾಗಿ ಹತ್ತಿಕ್ಕಿದ ವಿಷಾದಕರ ಚರಿತ್ರೆ ಇದು. ಒಂದು ಕಡೆ ನಕ್ಸಲೀಯರ ಶಸ್ತ್ರಸಜ್ಜಿತ ಹೋರಾಟ ಮಾದರಿಯನ್ನು ವ್ಯವಸ್ಥೆಯು ದೇಶವಿರೋಧಿ ಪಟ್ಟಿಯಲ್ಲಿಟ್ಟು ಸೇನೆಯ ಮೂಲಕ ಹತ್ತಿಕ್ಕುತ್ತಿದ್ದರೆ ಇನ್ನೊಂದು ಕಡೆ ಅತ್ಯಂತ ಪ್ರಜಾಸತ್ತಾತ್ಮಕವಾದ ಹೋರಾಟ ಮಾದರಿಯನ್ನು ಅಪಪ್ರಚಾರ ಮತ್ತು ನಿರ್ಲಕ್ಷ್ಯ ಧೋರಣೆಯ ಮೂಲಕ ದಮನಿಸುತ್ತಿದೆ. ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳ ಮೇಲೆ ಜನರು ಭರವಸೆ ಕಳಕೊಳ್ಳುವುದಕ್ಕೆ ಪೂರಕವಾದ ವಾತಾವರಣವನ್ನು ಅದು ನಿರ್ಮಿಸುತ್ತಿದೆ. ನಿಜವಾಗಿ, ಪ್ರತಿಭಟನೆ ಎಂಬುದು ಪ್ರಜಾತಂತ್ರದ ಉಸಿರು. ವ್ಯವಸ್ಥೆಯನ್ನು ಸದಾ ಎಚ್ಚರದಲ್ಲಿಡುವ ಬಲು ದೊಡ್ಡ ಅಸ್ತ್ರ ಇದು. ಆದರೆ ಕಾರ್ಪೋರೇಟ್ ವ್ಯವಸ್ಥೆ ಈ ಪ್ರತಿಭಟನೆಗೆ ಭಯಪಡುತ್ತದೆ. ತಮ್ಮ ಯೋಜನೆಯ ದಾರಿಯಲ್ಲಿ ‘ಪ್ರತಿಭಟನೆ’ಯನ್ನು ಅದು ಹಂಪ್‍ಗಳೆಂದು ಪರಿಗಣಿಸುತ್ತದೆ. ಹಂಪ್ ಇಲ್ಲದ ಸರಾಗ ದಾರಿ ಅದರ ಅಗತ್ಯ. ಇಂಥ ದಾರಿಯನ್ನು ಒದಗಿಸಬೇಕೆಂದರೆ ಪ್ರತಿಭಟನೆಯಲ್ಲಿ ಆಸಕ್ತಿಯನ್ನು ಕಳಕೊಂಡ ಯುವ ತಲೆಮಾರನ್ನು ತಯಾರುಗೊಳಿಸಬೇಕಾದ ಅಗತ್ಯ ಇದೆ. ಪ್ರತಿಭಟನೆಯನ್ನು ಅಭಿವೃದ್ಧಿ ವಿರೋಧಿ ಎಂದು ಮುದ್ರೆ ಒತ್ತಬೇಕೆಂದು ಕಾರ್ಪೋರೇಟ್ ಜಗತ್ತು ಬಯಸುತ್ತಿದೆ. ಅಂದಹಾಗೆ, ಹಿಂಸಾತ್ಮಕ ಪ್ರತಿಭಟನೆಯನ್ನು ಮಟ್ಟ ಹಾಕುವುದು ತುಂಬಾ ಸುಲಭ. ನಕ್ಸಲಿಸಂ ಇದಕ್ಕೆ ಅತ್ಯುತ್ತಮ ಉದಾಹರಣೆ. ಆದರೆ ಅಹಿಂಸಾತ್ಮಕ ಹೋರಾಟ ಮಾದರಿಯನ್ನು ಮಟ್ಟ ಹಾಕುವುದು ಸುಲಭ ಅಲ್ಲ. ಸದ್ಯ ವ್ಯವಸ್ಥೆ ಇದರಲ್ಲಿ ಯಶಸ್ಸು ಪಡೆಯುತ್ತಿದೆ. ಇರೋಮ್ ಮತ್ತು ಮೇಧಾ ಇದಕ್ಕೆ ಒಳ್ಳೆಯ ಉದಾಹರಣೆ.


Tuesday 8 August 2017

ದೇಶಪ್ರೇಮದ ಅಭಿಯಾನಕ್ಕೆ ಅನ್ವರ್ಥವಾಗಬಹುದೇ ಹೆರ್ನೆಯ ಮೊಲಗಳು?

      ಪ್ರವಾಹ ಪೀಡಿತ ನ್ಯೂಝಿಲ್ಯಾಂಡಿನಿಂದ ಕಳೆದವಾರ ವರದಿಯಾದ ಸಚಿತ್ರ ಸುದ್ದಿಯೊಂದು ಜಾಗತಿಕ ಅಚ್ಚರಿಗೆ ಕಾರಣವಾಯಿತು. ಕುರಿಗಾಹಿಯಾಗಿರುವ 65 ವರ್ಷದ ಹೆರ್ನೆ ಎಂಬವರು ತನ್ನ ನೀರು ತುಂಬಿದ ಜಮೀನಿನಿಂದ ಕುರಿಗಳ ಹಿಂಡನ್ನು ಸುರಕ್ಷಿತ ಪ್ರದೇಶಕ್ಕೆ ತಲುಪಿಸಲು ತೀರ್ಮಾನಿಸಿದರು. ಆಗ ಅವರಿಗೆ ಕುರಿಗಳ ಮೇಲೆ 3 ಕಾಡು ಮೊಲಗಳು ಕುಳಿತಿರುವುದು ಕಾಣಿಸಿತು. ಎರಡು ಮೊಲಗಳು ಒಂದೇ ಕುರಿಯ ಬೆನ್ನಿನ ಮೇಲೆ ಕುಳಿತಿದ್ದರೆ, ಇನ್ನೊಂದು ಮತ್ತೊಂದರ ಮೇಲೆ ಕುಳಿತಿತ್ತು. ಸುರಕ್ಷಿತ ಸ್ಥಳಕ್ಕೆ ತಲುಪುವ ವರೆಗೆ ಆ ಮೊಲಗಳು ಕುರಿಯ ಮೇಲಿಂದ ಕದಲಿರಲಿಲ್ಲ. ಹೆರ್ನೆ ಆ ದೃಶ್ಯವನ್ನು ಕ್ಲಿಕ್ಕಿಸಿ ಹಂಚಿಕೊಂಡರು. ನಿಜವಾಗಿ ಆ ಮೊಲಗಳ ಸಾವು ಮತ್ತು ಬದುಕು ಹೆರ್ನೆ ಮತ್ತು ಕುರಿಗಳನ್ನು ಅವಲಂಬಿಸಿತ್ತು. ಒಂದು ವೇಳೆ ಮೊಲಗಳು ತನ್ನ ಬೆನ್ನನ್ನು ಅಲುಗಾಡಿಸಿ ಮೊಲಗಳನ್ನು ಕೆಳಗೆ ಬೀಳಿಸುತ್ತಿದ್ದರೆ ಅಥವಾ ಹೆರ್ನೆ ಅವುಗಳನ್ನು ಓಡಿಸುತ್ತಿದ್ದರೆ ಅವು ನೀರಿಗೆ ಬಿದ್ದು ಅಪಾಯಕ್ಕೆ ಸಿಲುಕಿಕೊಳ್ಳುತ್ತಿತ್ತು. ಬಹುಶಃ ಪ್ರಧಾನಿ ನರೇಂದ್ರ ಮೋದಿ ಸರಕಾರದ ಹೊಸ ಯೋಜನೆಯೊಂದು ಕೋಟ್ಯಂತರ ಮಂದಿ ಭಾರತೀಯರ ಪಾಲಿಗೆ ಈ ಮೊಲದ ಸ್ಥಿತಿಯನ್ನು ತಂದೊಡ್ಡಬಹುದೇ ಅನ್ನುವ ಅನುಮಾನ ಕಾಡತೊಡಗಿದೆ. ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಚಲೇಜಾವ್ ಚಳವಳಿಗೆ 75 ವರ್ಷಗಳು ತುಂಬುವ ಹಿನ್ನೆಲೆಯಲ್ಲಿ ಮತ್ತು ಬ್ರಿಟಿಷರಿಂದ ಸ್ವತಂತ್ರಗೊಂಡ ಭಾರತಕ್ಕೆ 70 ವರ್ಷಗಳಾಗುವ ಆಧಾರದಲ್ಲಿ ‘ನಾನು ನನ್ನ ದೇಶವನ್ನು ಬೆಂಬಲಿಸುತ್ತೇನೆ’ ಎಂಬ ಘೋಷವಾಕ್ಯದೊಡನೆ ಪ್ರಜಾ ಆಂದೋಲನವನ್ನು ಕೈಗೊಳ್ಳಲು ಸರಕಾರ ಉದ್ದೇಶಿಸಿದೆ. ಯುವ ಸಮೂಹದಲ್ಲಿ ದೇಶಪ್ರೇಮವನ್ನು ಉತ್ತೇಜಿಸುವುದು ಇದರ ಗುರಿ. ಜೊತೆಗೇ ಕೇಂದ್ರ ಸರಕಾರದ ಸಾಧನೆಯನ್ನು ಜನರ ಬಳಿಗೆ ತಲುಪಿಸುವ ಉದ್ದೇಶವೂ ಈ ಆಂದೋಲನಕ್ಕಿದೆ.
     ದೇಶಪ್ರೇಮ ಮತ್ತು ದೇಶದ್ರೋಹದ ಬಗ್ಗೆ ಅತ್ಯಂತ ಏಕಮುಖ ನಿಲುವನ್ನು ಹೊಂದಿರುವ ಪಕ್ಷವೊಂದು ಹಮ್ಮಿಕೊಳ್ಳುವ ‘ನಾನು ನನ್ನ ದೇಶವನ್ನು ಬೆಂಬಲಿಸುತ್ತೇನೆ’ ಎಂಬ ಅಭಿಯಾನವು ಹೇಗಿರಬಹುದು ಮತ್ತು ಅದು ಯಾವೆಲ್ಲ ಆಯಾಮಗಳನ್ನು ಹೊಂದಬಹುದೇ ಎಂಬುದೇ ಇಲ್ಲಿನ ಬಹುಮುಖ್ಯ ಪ್ರಶ್ನೆ. ಈ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಗೋ ಪ್ರೇಮದ ಹೆಸರಲ್ಲಿ ಈ ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಈ ಪ್ರಶ್ನೆಯ ಹುಟ್ಟಿಗೆ ಮೊದಲ ಕಾರಣವೆನ್ನಬಹುದು. ಗೋವಿನ ಬಗ್ಗೆ ಕೇಂದ್ರ ಸರಕಾರ ಮತ್ತು ಅದರ ಬೆಂಬಲಿಗ ವರ್ಗದ ನಿಲುವು ಏನಿದೆಯೋ ಅದು ಈ ದೇಶದ ಸರ್ವರನ್ನೂ ಪ್ರತಿನಿಧಿಸುತ್ತಿಲ್ಲ. ಗೋವಿಗೆ ಈ ವರ್ಗ ಕೊಡುವ ವ್ಯಾಖ್ಯಾನಕ್ಕಿಂತ ಭಿನ್ನವಾದ ಹತ್ತು ಹಲವು ವ್ಯಾಖ್ಯಾನಗಳು ಈ ದೇಶದಲ್ಲಿವೆ. ಪ್ರತಿವಾದಗಳಿವೆ. ಗೋಮಾಂಸವನ್ನು ನಿಷೇಧಿಸಬೇಕು ಎಂಬ ಆಗ್ರಹಕ್ಕೆ ವಿರುದ್ಧವಾದ ಆಗ್ರಹಗಳು ದೇಶಾದ್ಯಾಂತ ಇವೆ. ನಿಜವಾಗಿ, ಈ ಎರಡೂ ವಾದಗಳು ಭಾರತೀಯವೇ. ಒಂದನ್ನು ಭಾರತೀಯ ಮತ್ತು ಇನ್ನೊಂದನ್ನು ಅಭಾರತೀಯ ಎಂದು ವಿಂಗಡಿಸುವುದು ಮಹಾತ್ಮಾ ಗಾಂಧೀಯವರನ್ನು ದೇಶಪ್ರೇಮಿಯಾಗಿಯೂ ಸುಭಾಶ್ ಚಂದ್ರ ಬೋಸ್‍ರನ್ನು ದೇಶದ್ರೋಹಿಯಾಗಿಯೂ ವಿಂಗಡಿಸಿದಂತೆ. ನಿಜವಾಗಿ ಇಂಥ ಅಸಹಿಷ್ಣುವಾದವೇ ದೇಶದ್ರೋಹ. ಸದ್ಯ ಕೇಂದ್ರ ಸರಕಾರ ಮತ್ತು ಅದರ ಬೆಂಬಲಿಗ ಗುಂಪು ಗೋಪ್ರೇಮದ ವಿಷಯದಲ್ಲಿ ಸರ್ವರೂ ಈ ಸಂಕುಚಿತ ವಾದವನ್ನು ಅಂಗೀಕರಿಸುವಂತೆ ಬಲವಂತಪಡಿಸುತ್ತಿದೆ. ಗೋಪ್ರೇಮವನ್ನು ‘ದೇಶಪ್ರೇಮ’ಕ್ಕೆ ಪರ್ಯಾಯ ಪದವಾಗಿ ರೂಢಿಗೆ ತರಲು ಪ್ರಯತ್ನಿಸುತ್ತಿದೆ. ತನ್ನ ವಾದವನ್ನು ಒಪ್ಪದವರ ಮೇಲೆ ಸವಾರಿ ಮಾಡುತ್ತಿದೆ. ಬೀದಿಯಲ್ಲಿ ಥಳಿಸುವ, ಮೂತ್ರ ಕುಡಿಸುವ, ಹತ್ಯೆಗೈಯುವ ಮತ್ತು ಜೈಶ್ರೀರಾಮ್ ಹೇಳಿಸುವ ಕ್ರೌರ್ಯಗಳನ್ನು ಈ ಗುಂಪು ಮಾಡುತ್ತಾ ಬಂದಿದೆ. ಹೀಗಿರುವಾಗ `ನಾನು ನನ್ನ ದೇಶವನ್ನು ಬೆಂಬಲಿಸುತ್ತೇನೆ’ ಅನ್ನುವ ಜನಾಂದೋಲನ ಯಾವ ತಿರುವನ್ನು ಪಡಕೊಳ್ಳಬಹುದು? ಈ ವರ್ಗದ ಕೈಯಲ್ಲಿ ಈ ಅಭಿಯಾನ ಯಾವೆಲ್ಲ ಅನಾಹುತಗಳನ್ನು ಹುಟ್ಟುಹಾಕಬಹುದು? ಜೆಎನ್‍ಯುನ ಕನ್ಹಯ್ಯ ಕುಮಾರ್ ಮತ್ತು ಅವರ ತಂಡವನ್ನು ಈ ಗುಂಪು ಹೇಗೆ ದೇಶದ್ರೋಹಿಯಾಗಿ ಚಿತ್ರಿಸಿತು ಅನ್ನುವುದು ಎಲ್ಲರಿಗೂ ಗೊತ್ತು. ‘ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ, ಯುದ್ಧ ಕೊಂದಿದೆ’ ಎಂದ ಗುರ್‍ಮೆಹರ್ ಕೌರ್ ಎಂಬ ಹುತಾತ್ಮ ಯೋಧನ ಮಗಳ ಮೇಲೆ ಈ ವರ್ಗ ಹರಿಹಾಯ್ದ ರೀತಿಯನ್ನು ನೋಡಿದರೆ, ಈ ಅಭಿಯಾನದ ಕೊನೆ ಹೇಗಾಗಬಹುದು ಎಂಬ ಆತಂಕವನ್ನು ಸಹಜವೆನ್ನಬೇಕಾಗುತ್ತದೆ. ಈ ಅಭಿಯಾನದ ಬೆಂಬಲಿಗರನ್ನೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರಂತೆ ತಿರುಚುವುದಕ್ಕೂ ಅವಕಾಶ ಇದೆ.
    ನಿಜವಾಗಿ, ದೇಶವನ್ನು ಬೆಂಬಲಿಸುವುದು ಎಂಬ ಘೋಷವಾಕ್ಯವೇ ಗೊಂದಲಪೂರಿತ. ಈ ಅಭಿಯಾನದ ಪ್ರಸ್ತುತತೆ ಮತ್ತು ಅದು ಒಳಗೊಂಡಿರಬಹುದಾದ ರಾಜಕೀಯ ದುರುದ್ದೇಶವನ್ನು ಎತ್ತಿಕೊಂಡು ಯಾರಾದರೂ ಈ ಅಭಿಯಾನದ ಅಗತ್ಯವನ್ನು ಪ್ರಶ್ನಿಸಿದರೆ ಅವರನ್ನು ದೇಶದ್ರೋಹಿ ಪಟ್ಟಿಯಲ್ಲಿಡುವ ಎಲ್ಲ ಸಾಧ್ಯತೆಗಳಿಗೂ ಇದು ಅವಕಾಶ ಮಾಡಿಕೊಡಬಹುದು. ಗೋಪ್ರೇಮದ ವಾದವನ್ನು ಹೇಗೆ ಏಕಮುಖಿಗೊಳಿಸಲಾಗಿದೆಯೋ ಅದೇ ರೀತಿಯಲ್ಲಿ ‘ದೇಶವನ್ನು ಬೆಂಬಲಿಸುತ್ತೇನೆ’ ಎಂಬುದನ್ನು ಸಂಕುಚಿತಗೊಳಿಸಿ, ಥಳಿತ-ಬಡಿತ-ಹತ್ಯೆಗಳ ವರೆಗೆ ತಂದು ಮುಟ್ಟಿಸುವುದಕ್ಕೂ ಅವಕಾಶ ಇದೆ. ಈ ದೇಶಕ್ಕೆ ನೆಹರೂರಿಂದ ಹಿಡಿದು ಮನಮೋಹನ್ ಸಿಂಗ್‍ರ ವರೆಗೆ ದೊಡ್ಡದೊಂದು ರಾಜಕೀಯ ಪರಂಪರೆಯಿದೆ. ಕಳೆದ 70 ವರ್ಷಗಳಲ್ಲಿ ಈ ದೇಶ ಏನೆಲ್ಲ ಕಂಡಿದೆಯೋ, ಅವೆಲ್ಲಕ್ಕೂ ಹಕ್ಕುದಾರರಿದ್ದಾರೆ. ಜೈಜವಾನ್-ಜೈ ಕಿಸಾನ್ ಆಗಿರಬಹುದು, ಅಣ್ವಸ್ತ್ರ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದಿರಬಹುದು, ಬಾಹ್ಯಾಕಾಶ ಯೋಜನೆಯಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಿದ್ದಿರಬಹುದು, ಆಹಾರ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವತ್ತ ಶ್ರಮಿಸಿದ್ದಿರಬಹುದು.. ಎಲ್ಲದಕ್ಕೂ ಈ ಕಳೆದ 70 ವರ್ಷಗಳ ರಾಜಕೀಯ ಚಿಂತನೆಗಳಿಗೆ ಬಹುಮುಖ್ಯ ಪಾತ್ರ ಇದೆ. ಆದರೆ ಕೇಂದ್ರ ಸರಕಾರದ ಅಭಿಯಾನವು ಈ ಸತ್ಯಗಳನ್ನೆಲ್ಲ ಮರೆಯಿಸಿಟ್ಟು ‘ಎಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ’ ಎಂಬ ಸುಳ್ಳನ್ನು ತೇಲಿಸಿ ಬಿಡುವ ಸಂದರ್ಭವಾಗಿಯೂ ಈ ಅಭಿಯಾನವು ದುರ್ಬಳಕೆಗೀಡಾಗುವ ಸಾಧ್ಯತೆಯಿದೆ. ಹೊರನೋಟಕ್ಕೆ ಈ ಅಭಿಯಾನವು ಯುವ ಸಮೂಹದಲ್ಲಿ ದೇಶಪ್ರೇಮವನ್ನು ಉತ್ತೇಜಿಸುವ ಮಹತ್ವಪೂರ್ಣ ಯೋಜನೆಯಂತೆ ಕಂಡರೂ ಆಂತರಿಕವಾಗಿ ಕೇಂದ್ರದ ವರ್ಚಸ್ಸನ್ನು ಹೆಚ್ಚಿಸುವ ಮತ್ತು ಮುಂದಿನ ಚುನಾವಣೆಗೆ ಪ್ರಚಾರ ಕಾರ್ಯವನ್ನು ಹಮ್ಮಿಕೊಳ್ಳುವ ಅಭಿಯಾನದಂತೆಯೇ ಕಾಣಿಸುತ್ತಿದೆ.
       ದೇಶಪ್ರೇಮ ಎಂಬುದು ಬಲವಂತದಿಂದ ಹುಟ್ಟಿಸುವಂಥದ್ದಲ್ಲ. ಅದು ಸಹಜವಾಗಿ ಹುಟ್ಟಿಕೊಳ್ಳಬೇಕಾದ ಭಾವನೆ. ಅದಕ್ಕೆಂದೇ ಒಂದು ಅಭಿಯಾನದ ಅಗತ್ಯ ಖಂಡಿತ ಇಲ್ಲ. ಸರಕಾರಗಳು ತನ್ನ ಪ್ರಜೆಗಳನ್ನು ತನ್ನವರಂತೆ ನೋಡಿದಾಗ ಮತ್ತು ಸರ್ವರನ್ನೂ ಒಂದೇ ರೀತಿಯಲ್ಲಿ ಪರಿಗಣಿಸಿದಾಗ ಇದು ಸಹಜವಾಗಿಯೇ ಪ್ರಕಟವಾಗುತ್ತದೆ. ಇದನ್ನು ಒಪ್ಪದ ಅಥವಾ ಅನುಸರಿಸದ ಆಡಳಿತ ವರ್ಗಕ್ಕೆ ದೇಶಪ್ರೇಮಿಗಳನ್ನು ಬಲವಂತದಿಂದ ತಯಾರಿಸುವ ಅಗತ್ಯ ಕಂಡುಬರುತ್ತದೆ. ಬಹುಶಃ ಮುಂದಿನ ದಿನಗಳಲ್ಲಿ ಗೋರಕ್ಪಕ ಪಡೆ ದೇಶಪ್ರೇಮಿ ವೇಷದಲ್ಲಿ ಬೀದಿಗಿಳಿಯಬಹುದು ಮತ್ತು ಒಂದೋ ಅಭಿಯಾನವನ್ನು ಬೆಂಬಲಿಸಿ ಇಲ್ಲವೇ ದೇಶದ್ರೋಹಿಯಾಗಿ ಎಂದು ಒತ್ತಡ ಹೇರಬಹುದು. ಹೆರ್ನೆಯ ಕೈಯಲ್ಲಿ ಮೊಲಗಳ ಸಾವು-ಬದುಕು ಇದ್ದಂತೆ ಈ ಅಭಿಯಾನವನ್ನು ಪ್ರಶ್ನಿಸಿದವರ ಬದುಕು ಇವರ ಮರ್ಜಿಯನ್ನು ಅವಲಂಬಿಸುವ ಸಾಧ್ಯತೆ ಇದೆ.