Thursday 23 November 2017

ಹೆಣ್ಣು ಹೆಚ್ಚೋ ಗಂಡು ಹೆಚ್ಚೋ?

      ಹೆಣ್ಣು ಎಷ್ಟು ಅಮೂಲ್ಯ ಅನ್ನುವುದನ್ನು ಸಾಬೀತುಪಡಿಸುವ ಘಟನೆಗಳು ಆಗಾಗ ನಮ್ಮೆದುರು ನಡೆಯುತ್ತಲೇ ಇರುತ್ತವೆ. ಕಳೆದವಾರ ಪೂಜಾ ಬಿಜರ್ನಿಯ ಎಂಬ ದೆಹಲಿಯ ಹೆಣ್ಣು ಮಗಳು ಸುದ್ದಿಗೀಡಾದಳು. ಇಳಿ ವಯಸ್ಸಿನ ತಂದೆಗೆ ಆಕೆ ತನ್ನ ಯಕೃತ್ತನ್ನೇ (ಲಿವರ್) ದಾನ ಮಾಡಿದಳು. ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ ಅವರಿಬ್ಬರ ಫೋಟೋವನ್ನು ವೈದ್ಯರಾದ ರಜಿತ್ ಭೂಷಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಹೊಟ್ಟೆಯ ಭಾಗದಲ್ಲಿ ಮೂಡಿರುವ ಆಳವಾದ ಗಾಯದ ಗುರುತಿನ ನಡುವೆಯೂ ನಗುವ ಆ ಹೆಣ್ಣು ಮಗಳ ಫೋಟೋ, ಫ್ರೇಮ್ ಹಾಕಿ ಕಾಪಿಡಬೇಕಾದಷ್ಟು ಅಮೂಲ್ಯವಾದುದು.
     ಅಂದಹಾಗೆ, ಹೆಣ್ಣಿಗೆ ನಮ್ಮ ದೇಶದಲ್ಲಿ ಯಾವ ಸ್ಥಾನ-ಮಾನವಿದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಅಂಕಿ-ಅಂಶಗಳ ಮೊರೆ ಹೋಗಬೇಕಾಗಿಲ್ಲ. ಈ ದೇಶದಲ್ಲಿ ಜಾರಿಯಲ್ಲಿರುವ ‘ಲಿಂಗ ಪತ್ತೆ ಪರೀಕ್ಷೆ ತಡೆ ಕಾನೂನೇ’ ಇದನ್ನು ಚೆನ್ನಾಗಿ ವಿವರಿಸುತ್ತದೆ. ಈ ಆಧುನಿಕ ಕಾಲದಲ್ಲೂ ಈ ದೇಶದ ಓರ್ವ ತಾಯಿಗೆ ತನ್ನ ಹೊಟ್ಟೆಯಲ್ಲಿರುವುದು ಹೆಣ್ಣೋ-ಗಂಡೋ ಎಂಬುದು ಗೊತ್ತಾಗುವುದೇ ಪ್ರಸವದ ಬಳಿಕ. ಅಷ್ಟಕ್ಕೂ, ಗರ್ಭ ಧರಿಸುವುದು ಹೆಣ್ಣು. 9 ತಿಂಗಳು ಹೊಟ್ಟೆಯಲ್ಲಿಟ್ಟುಕೊಳ್ಳುವುದೂ ಹೆಣ್ಣು. ಈ ಅವಧಿಯಲ್ಲಿ ಎದುರಾಗುವ ಸರ್ವ ಗರ್ಭ ಸಂಬಂಧಿ ಸಮಸ್ಯೆಗಳನ್ನು ತಾಳಿಕೊಳ್ಳುವುದೂ ಹೆಣ್ಣೇ. ಆದರೂ ಆಕೆಗೆ ತನ್ನ ಹೊಟ್ಟೆಯಲ್ಲಿರುವ ಶಿಶು ಗಂಡೋ-ಹೆಣ್ಣೋ ಎಂಬುದನ್ನು ತಿಳಿದುಕೊಳ್ಳುವ ಸ್ವಾತಂತ್ರ್ಯ ಇಲ್ಲ. ನಿಜವಾಗಿ, ಪ್ರಸವ ಪೂರ್ವದಲ್ಲೇ ಶಿಶುವಿನ ಲಿಂಗ ಬಹಿರಂಗವಾಗುವುದರಿಂದ ಅನೇಕಾರು ಪ್ರಯೋಜನಗಳಿವೆ. ಹೆಣ್ಣು ಮಗುವನ್ನು ಬಯಸುವ ತಂದೆ ಆ ಕುರಿತಂತೆ ತನ್ನೊಳಗೆ ಕನಸುಗಳನ್ನು ಹೆಣೆಯಬಲ್ಲ. ಹೆಣ್ಣು ಮಕ್ಕಳ ಮನಸ್ಥಿತಿ ಹೇಗಿರುತ್ತದೆ, ಅದರೊಂದಿಗೆ ಅಪ್ಪನಾಗಿ ತನ್ನ ವರ್ತನೆ ಹೇಗಿರಬೇಕು, ಯಾವ ರೀತಿ ಬೆಳೆಸಬೇಕು, ಯಾವ ಹೆಸರು ಉತ್ತಮ, ತಾನೆಷ್ಟು ಸಮಯ ಮೀಸಲಿಡಬೇಕು…ಇತ್ಯಾದಿಗಳನ್ನು ನಿರ್ಣಯಿಸುವುದಕ್ಕೆ ಪ್ರಸವ ಪೂರ್ವದಲ್ಲೇ ಆತನಿಗೆ ಅದು ಅವಕಾಶ ನೀಡುತ್ತದೆ. ನಿರ್ದಿಷ್ಟ ಮಗುವನ್ನು ಸ್ವಾಗತಿಸುವುದಕ್ಕೆ ಬೇಕಾದ ತಯಾರಿ ನಡೆಸಲು ಸಮಯಾವಕಾಶವೂ ಸಿಕ್ಕಂತಾಗುತ್ತದೆ. ಸಾಮಾನ್ಯವಾಗಿ, ತಾಯಿಯ ಹೊಟ್ಟೆಯೊಳಗಿರುವ ಮಗು ಹೊರ ಜಗತ್ತಿನ ಚಲನೆಗಳನ್ನು ಆಲಿಸುತ್ತದೆ ಎಂದುವಿ ಜ್ಞಾನ ಹೇಳುತ್ತದೆ. ತಾಯಿಯ ಭಾವನೆಗಳು ಮಗುವಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಸಂಗೀತ ಆಲಿಸುವ ತಾಯಿಯಿಂದ ಮಗು ಸಂಗೀತದ ಭಾವಗಳನ್ನು ಹೀರಬಹುದು. ತಾಯಿಯ ಖುಷಿ ಮಗುವಿಗೂ ರವಾನೆಯಾಗಬಹುದು. ತಾಯಿಯ ನೋವು ಮಗುವಿಗೂ ಅರಿವಾಗಬಹುದು. ಒಂದು ವೇಳೆ, ಹುಟ್ಟಲಿರುವ ಮಗು ಹೆಣ್ಣೋ-ಗಂಡೋ ಎಂಬುದು ಹೆತ್ತವರಿಗೆ ಪ್ರಸವ ಪೂರ್ವದಲ್ಲೇ ಗೊತ್ತಾದರೆ ಅವರು ಮಗುವನ್ನು ನಿರ್ದಿಷ್ಟ ಹೆಸರಲ್ಲೇ ಸಂಬೋಧಿಸಬಹುದು. ಅದೇ ಭಾವದಲ್ಲಿ ಪರಸ್ಪರ ಮಾತುಕತೆ ನಡೆಸಬಹುದು. ಇವೆಲ್ಲವೂ ಹೊಟ್ಟೆಯೊಳಗಿನ ಮಗುವನ್ನು ಒಂದು ಹಂತದ ವರೆಗೆ ತಟ್ಟಿಯೇ ತಟ್ಟುತ್ತದೆ. ಅಷ್ಟಕ್ಕೂ, ಹೊಟ್ಟೆಯೊಳಗೆ ಹೆಣ್ಣು ಮಗುವಿದ್ದೂ ಅದರ ಅರಿವಿರ ತಾಯಿ-ತಂದೆಯರಿಬ್ಬರೂ ಗಂಡು ಮಗುವಿನ ಕನಸನ್ನು ಹಂಚಿಕೊಳ್ಳುತ್ತಾ ಆ ಬಗ್ಗೆ ಮಾತುಕತೆ-ಭಾವನೆಗಳನ್ನು ವಿನಿಮಯಗೊಳಿಸುತ್ತಾ ಬದುಕುವುದು ಶಿಶುವಿನ ಮೇಲೆ ಯಾವ ಪರಿಣಾಮವನ್ನು ಬೀರಬಹುದು? ಆರೋಗ್ಯಪೂರ್ಣ ಮಗುವಿನ ದೃಷ್ಟಿಯಿಂದ ಹೆತ್ತವರ ಪ್ರಸವಪೂರ್ವ ಚಟುವಟಿಕೆಗಳೂ ಬಹುಮುಖ್ಯ ಎಂಬುದನ್ನು ನಾವು ಒಪ್ಪುವುದಾದರೆ, ಪ್ರಸವಪೂರ್ವದಲ್ಲೇ  ಶಿಶುವಿನ ‘ಲಿಂಗ’ವನ್ನು ಬಹಿರಂಗಪಡಿಸುವುದು ಅಗತ್ಯ ಎಂದು ಹೇಳಬೇಕಾಗುತ್ತದೆ. ಗಲ್ಫ್ ರಾಷ್ಟ್ರಗಳಲ್ಲಿ ಇದು ಜಾರಿಯಲ್ಲೂ ಇದೆ. ಆದರೆ ನಮ್ಮಲ್ಲಿ ಇದು ಕಾನೂನುಬಾಹಿರ. ಕಾರಣ ಏನೆಂದರೆ, ಹೆಣ್ಣು ಮಗುವಿನ ಬಗೆಗೆ ಈ ದೇಶದಲ್ಲಿರುವ ತಾತ್ಸಾರ. ಈ ತಾತ್ಸಾರ ಭಾವವು ಅಂತಿಮವಾಗಿ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೋ, ಗರ್ಭದಲ್ಲೇ ಮಗುವಿಗೆ ಪೋಷಕಾಹಾರ ಸಿಗದೇ ನಿತ್ರಾಣವಾಗುವಂತೆ ನೋಡಿಕೊಳ್ಳುವುದಕ್ಕೋ ಅಥವಾ ಪಾರಂಪರಿಕ ಮದ್ದನ್ನು ಬಳಸಿ ಗರ್ಭದಲ್ಲೇ ಶಿಶು ಸಾಯುವಂತೆ ಮಾಡುವುದಕ್ಕೋ ಕಾರಣವಾಗಬಹುದು ಎಂಬ ಭಯ ನಮ್ಮನ್ನಾಳುವವರಲ್ಲಿದೆ. ಹಾಗಂತ, ಈ ಭಯವನ್ನು ವಿನಾ ಕಾರಣ ಎಂದು ಹೇಳುವಂತೆಯೂ ಇಲ್ಲ. ಹೀಗೆ ಭಯಪಟ್ಟುಕೊಳ್ಳುವುದಕ್ಕೆ ಆಧಾರವಾಗಿ ಅಸಂಖ್ಯ ಘಟನೆಗಳು ಈ ದೇಶದಲ್ಲಿ ನಡೆದಿವೆ ಮತ್ತು ನಡೆಯುತ್ತಲೂ ಇವೆ. ಹೆಣ್ಣು ಮತ್ತು ಗಂಡಿನ ನಡುವೆ ಅಂತರವನ್ನು ತೋರುವ ಹೆತ್ತವರು ನಮ್ಮಲ್ಲಿ ಧಾರಾಳ ಇದ್ದಾರೆ . ಗಂಡಿಗೆ ವಂಶೋದ್ಧಾರಕ ಎಂಬ ಗೌರವ ಸಲ್ಲುವಾಗ ಹೆಣ್ಣಿಗೆ ಕುಲದಿಂದ ಹೊರಗಿನವಳು ಎಂಬ ಅಗೌರವ ಸಲ್ಲುತ್ತದೆ.
      ನಿಜವಾಗಿ, ಹೆಣ್ಣು ಮತ್ತು ಗಂಡನ್ನು ಅಳೆಯಬೇಕಾದುದು ಅವರು ಗಳಿಸಬಹುದಾದ ವರಮಾನದ ಆಧಾರದಲ್ಲೋ ದೈಹಿಕ ಸಾಮರ್ಥ್ಯದ ಆಧಾರದಲ್ಲೋ ಅಲ್ಲ. ಗಂಡು-ಹೆಣ್ಣು ಎರಡೂ ಪ್ರಕೃತಿಯ ವಿಶಿಷ್ಟ ಕೊಡುಗೆಗಳು. ಹೆಣ್ಣಿಗಿಂತ ಭಿನ್ನ ಸಾಮಥ್ರ್ಯವನ್ನು ಹೇಗೆ ಗಂಡಿನಲ್ಲಿ ಹುದುಗಿಸಿಡಲಾಗಿದೆಯೋ ಹಾಗೆಯೇ ಗಂಡಿಗಿಂತ ಭಿನ್ನ ಸಾಮಥ್ರ್ಯವನ್ನು ಹೆಣ್ಣಿನಲ್ಲೂ ತುಂಬಿಡಲಾಗಿದೆ. ಇಬ್ಬರಲ್ಲೂ ವಿಭಿನ್ನ ಪ್ರತಿಭೆಗಳಿವೆ. ಪೂಜಾ ಇದನ್ನು ಸಾರುವ ಒಂದು ಪುಟ್ಟ ಉದಾಹರಣೆ ಮಾತ್ರ. ಒಂದು ವೇಳೆ, ಹೆಣ್ಣು ಗಂಡಿಗಿಂತ ಕೀಳು ಆಗಿರುತ್ತಿದ್ದರೆ ಪೂಜಾಳ ಯಕೃತ್ ಆಕೆಯ ತಂದೆಯ ದೇಹಕ್ಕೆ ಹೊಂದಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಅವರ ದೇಹ ಆಕೆಯ ಯಕೃತನ್ನು ತಿರಸ್ಕರಿಸಬೇಕಿತ್ತು. ಗಂಡಿನ ಯಕೃತನ್ನು ಮಾತ್ರ ಸ್ವೀಕರಿಸಬೇಕಿತ್ತು. ಆದರೆ ಪ್ರಕೃತಿ ಎಂದೂ ಮನುಷ್ಯರ ನಡುವೆ ಇಂಥ ವಿಭಜನೆಯನ್ನು ಮಾಡಿಯೇ ಇಲ್ಲ. ಅದು ಗಂಡು ಮತ್ತು ಹೆಣ್ಣನ್ನು ಎರಡು ಅಚ್ಚರಿಗಳಾಗಿ ಜಗತ್ತಿನ ಮುಂದಿಟ್ಟಿದೆಯೇ ಹೊರತು ಒಂದನ್ನು ಇನ್ನೊಂದರ ಎದುರು ಅವಮಾನಿಸಿಲ್ಲ. ದುರ್ಬಲಗೊಳಿಸಿಲ್ಲ. ತನ್ನ ಯಕೃತನ್ನು ತಂದೆಗೆ ದಾನ ಮಾಡುವ ಮೂಲಕ ಪ್ರಕೃತಿಯ ಈ ಸಂದೇಶವನ್ನು ಪೂಜಾ ಜನರಿಗೆ ತಲುಪಿಸಿದ್ದಾ ಳೆ. ಮಾತ್ರವಲ್ಲ, ‘ಗಂಡು ಬಯಕೆ’ಯ ಹೆತ್ತವರಿಗೆ ಹೆಣ್ಣು ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ. ಪವಿತ್ರ ಕುರ್‍ಆನ್ ಅಂತೂ ಹೆಣ್ಣನ್ನು ಗಂಡಿಗಿಂತ ಮೇಲ್ದರ್ಜೆಯಲ್ಲಿರಿಸಿ ಗೌರವಿಸಿದೆ. ಇಬ್ಬರು ಹೆಣ್ಮಕ್ಕಳನ್ನು ಪಡೆದ ಹೆತ್ತವರು ಸ್ವರ್ಗ ದಕ್ಕಬಲ್ಲ ಸೌಭಾಗ್ಯಶಾಲಿಗಳು ಎಂದು ಪ್ರವಾದಿ(ಸ) ಹೇಳಿದ್ದಾರೆ. ಹೆಣ್ಣು ಶಿಶುವಿನ ಹತ್ಯೆಯು ಘೋರ ಪಾಪ ಎಂದು ಪವಿತ್ರ ಕುರ್‍ಆನ್ ಎಚ್ಚರಿಸಿದೆ. ತಾಯಿಯ (ಹೆಣ್ಣಿನ) ಪಾದದಡಿ ಸ್ವರ್ಗವಿದೆ ಎಂದು ಪ್ರವಾದಿ(ಸ) ಹೇಳಿದ್ದಾರೆ. ತಂದೆಗೆ ಯಕೃತನ್ನು ದಾನ ಮಾಡುವ ಮೂಲಕ ಹೆಣ್ಣಿನ ಕುರಿತಾದ ಈ ಎಲ್ಲ ಹೇಳಿಕೆಗಳಿಗೆ ಪೂಜಾ ನ್ಯಾಯ ತುಂಬಿದ್ದಾಳೆ. ಇಂಥವರ ಸಂಖ್ಯೆ ಬೆಳೆಯಲಿ. 

Friday 17 November 2017

870 ದಿನಗಳು ಮತ್ತು...

      ಯೋಧರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷದ ನಾಯಕರು ಆಗಾಗ ವ್ಯಕ್ತಪಡಿಸುತ್ತಿರುವ ಹೆಮ್ಮೆ, ಅಭಿಮಾನ, ಗೌರವಗಳೆಲ್ಲ ಎಷ್ಟು ಪ್ರಾಮಾಣಿಕ ಎಂಬುದನ್ನು ಕಳೆದವಾರ ದೆಹಲಿಯ ಜಂತರ್ ಮಂತರ್ ಸ್ಪಷ್ಟಪಡಿಸಿತು. ಏಕ ಶ್ರೇಣಿ, ಏಕ ಪಿಂಚಣಿ ಎಂಬ ಆಗ್ರಹವನ್ನು ಮುಂದಿಟ್ಟು ಕಳೆದ 870 ದಿನಗಳಗಿಂತಲೂ ಅಧಿಕ ಸಮಯದಿಂದ ಜಂತರ್ ಮಂತರ್‍ನಲ್ಲಿ ಪ್ರತಿಭಟಿಸುತ್ತಿದ್ದ ಮಾಜಿ ಯೋಧರನ್ನು ದೆಹಲಿ ಪೊಲೀಸರು ಬಲವಂತದಿಂದ ತೆರವುಗೊಳಿಸಿದರು. ಹಾಗೆ ತೆರವುಗೊಂಡ ಈ ವಯೋವೃದ್ಧ ಯೋಧರು ಪಾರ್ಲಿಮೆಂಟ್ ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತರು. ಅಲ್ಲಿಂದಲೂ ತೆರವುಗೊಳಿಸಲಾಯಿತು. ಹಾಗಂತ, ಜಂತರ್ ಮಂತರ್‍ನಲ್ಲಿ ಯಾವುದೇ ಪ್ರತಿಭಟನೆ ಹಮ್ಮಿಕೊಳ್ಳಬಾರದೆಂದು ರಾಷ್ಟ್ರೀಯ ಹಸಿರು ಆಯೋಗವು ನೀಡಿದ ನಿರ್ದೇಶನದಂತೆ ತಾವು ಕ್ರಮ ಕೈಗೊಂಡಿರುವುದಾಗಿ ದೆಹಲಿ ಪೊಲೀಸರು ತಮ್ಮನ್ನು ಸಮರ್ಥಿಸಿಕೊಳ್ಳಬಹುದು. ಆದರೆ ನಿವೃತ್ತ ಯೋಧರು (IESM - ಭಾರತದ ಮಾಜಿ ನಿವೃತ್ತ ಯೋಧರ ಚಳವಳಿ) ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದು ನಿನ್ನೆ ಮೊನ್ನೆಯಲ್ಲ. 2015 ರಿಂದಲೇ ಈ ಪ್ರತಿಭಟನೆ ಆರಂಭವಾಗಿದೆ. ಮನ್‍ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು 6ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ 2008ರಲ್ಲಿ ಹುಟ್ಟಿಕೊಂಡದ್ದೇ IESM. ಏಕ ಶ್ರೇಣಿ, ಏಕ ಪಿಂಚಣಿಯನ್ನು ಆಗ್ರಹಿಸಿ ಆ ಬಳಿಕದಿಂದ ನಿವೃತ್ತ ಯೋಧರು ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸುತ್ತಾ ಬಂದರು. ಯುಪಿಎ ಸರಕಾರವು ಏಕ ಶ್ರೇಣಿ ಏಕ ಪಿಂಚಣಿ ಆಗ್ರಹವನ್ನು ಒಪ್ಪಿಕೊಳ್ಳುವ ಸೂಚನೆ ಕೊಟ್ಟಿತ್ತಾದರೂ 2014ರ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಯೋಧರ ಆಗ್ರಹಕ್ಕೆ ದನಿಗೂಡಿಸಿದರು. ಅಧಿಕಾರಕ್ಕೆ ಬಂದರೆ ಏಕ ಶ್ರೇಣಿ ಏಕ ಪಿಂಚಣಿ ಬೇಡಿಕೆಯನ್ನು ಪೂರೈಸುವುದಾಗಿ ಮಾತು ಕೊಟ್ಟರು. ಕೇವಲ ಇದೊಂದೇ ಅಲ್ಲ, ಗಡಿಯಲ್ಲಿ ಹುತಾತ್ಮಾರಾಗುತ್ತಿರುವ ಯೋಧರಿಗಾಗಿ ಚುನಾವಣಾ ಭಾಷಣ ಮಾಡಿದಲ್ಲೆಲ್ಲ ಅವರು ಮರುಗಿದರು. ಭಾರತೀಯ ಯೋಧರ ಒಂದು ತಲೆಗೆ ಪಾಕ್ ಯೋಧರ ಹತ್ತು ತಲೆಯನ್ನು ಕತ್ತರಿಸಿ ತರುವುದಾಗಿ ಬಿಜೆಪಿ ನಾಯಕರು ಘೋಷಿಸಿದ್ದು ಇದೇ ಸಂದರ್ಭದಲ್ಲಿ. ಯೋಧರು ಗಡಿಯಲ್ಲಿ ಎಚ್ಚರದಿಂದಿರುವುದರಿಂದ ನಾವು ಸುಖವಾಗಿ ನಿದ್ದೆ ಮಾಡುತ್ತೇವೆ ಎಂಬಂತಹ ಹತ್ತು ಹಲವು ಭಾವುಕ ಮಾತುಗಳನ್ನು ಅವರು ತೇಲಿಸಿ ಬಿಟ್ಟರು. ಆದರೆ ಯಾವಾಗ ನರೇಂದ್ರ ಮೋದಿಯವರು ಪ್ರಧಾನಿಯಾದರೋ ಏಕ ಶ್ರೇಣಿ ಏಕ ಪಿಂಚಣಿ ಎಂಬುದು ನಿಧಾನವಾಗಿ ತೆರೆಮರೆಗೆ ಸರಿಯತೊಡಗಿತು. ನಿವೃತ್ತ ಯೋಧರು 2015 ಜೂನ್‍ನಲ್ಲಿ ಮತ್ತೆ ಚಳವಳಿಗೆ ಧುಮುಕಿದರು. ಅದರ ಪರಿಣಾಮವಾಗಿ ನರೇಂದ್ರ ಮೋದಿ ಸರಕಾರವು ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತಾದರೂ ಯೋಧರ ಒಂದು ದೊಡ್ಡ ಗುಂಪು ಅಸಮಾಧಾನ ವ್ಯಕ್ತಪಡಿಸಿತು. ತಮ್ಮ ಆಗ್ರಹದ ಪ್ರಕಾರ ಮತ್ತು ಭರವಸೆ ನೀಡಿದ ಪ್ರಕಾರ ನಿಯಮಾವಳಿಗಳನ್ನು ಇದರಲ್ಲಿ ರಚಿಸಲಾಗಿಲ್ಲ ಎಂದು ಅದು ಆರೋಪಿಸಿತು. ಪ್ರತಿಭಟನೆ ಪ್ರಾರಂಭಿಸಿತು. ಅಂದಿನಿಂದ ಇಂದಿನವರೆಗೆ ಈ ಯೋಧರು ಪ್ರತಿಭಟಿಸು ತ್ತಲೇ ಇದ್ದಾರೆ. 870 ದಿನಗಳಿಗಿಂತಲೂ ಹೆಚ್ಚು ದಿನ ಈ ಹಿರಿ ವಯಸ್ಸಿನ ಯೋಧರನ್ನು ಬೀದಿ ಪಾಲಾಗಿಸಿದ ಸರಕಾರವೊಂದು ಇದೀಗ ಅವರ ತೆರವು ಕಾರ್ಯಾಚರಣೆಗೂ ತಮಗೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದೆ. ನಿಜವಾಗಿ, ಪ್ರಶ್ನಿಸಬೇಕಾದದ್ದು ತೆರವು ಕಾರ್ಯಾಚರಣೆಯನ್ನಲ್ಲ, 2 ವರ್ಷಕ್ಕಿಂತಲೂ ಹೆಚ್ಚು ಕಾಲ ಯೋಧರನ್ನು ಸರಕಾರವೊಂದು ಬೀದಿಪಾಲು ಮಾಡಿತಲ್ಲ, ಇದು ಎಷ್ಟು ಸರಿ? ಯೋಧರ ಸೇವೆಯನ್ನು ಪಟ್ಟಿ ಮಾಡಿ ಕೇಳುಗರನ್ನು ಭಾವುಕಗೊಳಿಸುವ ಪಕ್ಷವೊಂದು ಹೀಗೆ ಯೋಧರನ್ನು ನಿಷ್ಕರುಣೆಯಿಂದ ನಡೆಸಿಕೊಳ್ಳುವುದು ನೈತಿಕವೇ? ಏಕ ಶ್ರೇಣಿ ಏಕ ಪಿಂಚಣಿ ನಿಯಮವನ್ನು ಯೋಧರ ಒಂದು ಗುಂಪು ಒಪ್ಪಿಕೊಂಡಿದೆ ಎಂಬುದು ಇನ್ನೊಂದು ಗುಂಪನ್ನು ಸತಾಯಿಸುವುದಕ್ಕಿರುವ ಪರವಾನಿಗೆ ಆಗುತ್ತದೆಯೇ? ಸದ್ಯ ಪ್ರತಿಭಟನೆಯಲ್ಲಿ ತೊಡಗಿರುವವರಲ್ಲಿ ಭೂ, ವಾಯು ಮತ್ತು ನೌಕಾ ದಳದ ಪ್ರಮುಖ ನಿವೃತ್ತ ಅಧಿಕಾರಿಗಳಿದ್ದಾರೆ. ಕೇಂದ್ರದ ಏಕಶ್ರೇಣಿ ಏಕಪಿಂಚಣಿ ಯೋಜನೆಯನ್ನು ಒಪ್ಪಿಕೊಂಡ ಯೋಧರು ಹೇಗೆ ದೇಶ ಸೇವಕರೋ ಒಪ್ಪಿಕೊಳ್ಳದ ಇವರೂ ದೇಶಸೇವಕರೇ. ಯೋಧರ ಯೋಗಕ್ಷೇಮಕ್ಕೆ ಆದ್ಯತೆ ಕೊಡುವ ರೀತಿಯಲ್ಲಿ ಸೇನಾ ನೆಲೆಗಳಿಗೆ ಭೇಟಿ, ಯೋಧರ ಜೊತೆ ದೀಪಾವಳಿ ಆಚರಣೆ ಇತ್ಯಾದಿಗಳನ್ನು ಸರಕಾರ ಮಾಡುತ್ತದಲ್ಲ, ಇದರ
ಅರ್ಥವೇನು? ಇವೆಲ್ಲ ಕ್ಯಾಮರಾ ಕೇಂದ್ರಿತ ಕಾರ್ಯಕ್ರಮಗಳೇ? ಬರೇ ತುಟಿ ಸೇವೆಗಳೇ?
     2014ರ ಲೋಕಸಭಾ ಚುನಾವಣೆಯಲ್ಲಿ ಯೋಧರು ಮುಖ್ಯ ಚರ್ಚಾವಿಷಯವಾಗಿದ್ದರು. ಒಂದೆಡೆ ಪಾಕಿಸ್ತಾನವನ್ನು ಹಳಿಯುವುದು ಮತ್ತು ಇನ್ನೊಂದೆಡೆ ಭಾರತೀಯ ಯೋಧರ ಯೋಗ ಕ್ಷೇಮದ ಬಗ್ಗೆ ಕರುಣಾಭರಿತ ಮಾತುಗಳನ್ನಾಡುವುದನ್ನು ಬಿಜೆಪಿ ಅಭ್ಯಾಸ ಮಾಡಿಕೊಂಡಿತ್ತು. ಗಡಿಯಲ್ಲಿ ಯೋಧರ ಮೇಲೆ ನಡೆಯುವ ಪ್ರತಿ ದಾಳಿ ಪ್ರಕರಣವನ್ನೂ ಬಿಜೆಪಿ ಚುನಾವಣಾ ವಿಷಯವಾಗಿ ಮಾರ್ಪಡಿಸಿಕೊಂಡಿತ್ತು. ಒಂದು ವೇಳೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕ್ ಧ್ವಂಸಗೊಳ್ಳುತ್ತದೆ, ಗಡಿ ಶಾಂತವಾಗುತ್ತದೆ, ಯೋಧರೆಲ್ಲ ಚೆನ್ನಾಗಿ ನಿದ್ದೆ ಮಾಡುತ್ತಾರೆ.. ಇತ್ಯಾದಿ ಇತ್ಯಾದಿ ನಿರೀಕ್ಷೆಗಳ ಗಂಟನ್ನು ಬಿಜೆಪಿ ಬೆಂಬಲಿಗರು ದೇಶದಾದ್ಯಂತ ಹರಡಲು ಯಶಸ್ವಿಯಾಗಿದ್ದರು. ಸದ್ಯ ಆ ಪೌರುಷದ ಹೇಳಿಕೆ ಮತ್ತು ಹುಟ್ಟಿಸಿದ ನಿರೀಕ್ಷೆಗಳಿಗೆ ಮೂರೂವರೆ ವರ್ಷಗಳು ಸಂದಿವೆ. ದುರಂತ ಏನೆಂದರೆ, ಈ ಮೂರೂವರೆ ವರ್ಷಗಳಲ್ಲಿ 870ಕ್ಕಿಂತಲೂ ಅಧಿಕ ದಿನ ನಮ್ಮ ದೇಶದ ಹೆಮ್ಮೆಯ ಯೋಧರು ನ್ಯಾಯ ಕೇಳುತ್ತಾ ಬೀದಿಯಲ್ಲಿ ಕಳೆದಿದ್ದಾರೆ. ಗಡಿಯಲ್ಲಿರುವ ಯೋಧರ ಯೋಗಕ್ಷೇಮದ ವಿಷಯ ಬಿಟ್ಟು ಬಿಡಿ, ಗಡಿಯೊಳಗಿರುವ ವಯೋವೃದ್ಧ ಯೋಧರ ಯೋಗಕ್ಷೇಮಕ್ಕೇ ಸ್ಪಂದಿಸಲು ಈ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಗಡಿಯಂತೂ ಉದ್ವಿಘ್ನತೆಯಲ್ಲೇ  ಇದೆ. ಯುಪಿಎ ಸರಕಾರ ಇರುವಾಗ ಗಡಿಯಿಂದ ಯಾವೆಲ್ಲ ದುಃಖಕರ ಸುದ್ದಿಗಳು ಬರುತ್ತಿತ್ತೋ ಅವು ಈಗಲೂ ಮುಂದುವರಿದಿವೆ. ಪಾಕಿಸ್ತಾನವಂತೂ ಮೂರೂವರೆ ವರ್ಷಗಳ ಹಿಂದೆ ಹೇಗಿತ್ತೋ ಹಾಗೆಯೇ ಇದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯೋಧರ ಕುರಿತಂತೆ ಮಾಡಿರುವ ಭಾಷಣದ ತುಣುಕುಗಳನ್ನು ಇವತ್ತು ಯಾರಾದರೂ ಮರು ಕೇಳಿಸಿಕೊಂಡರೆ ಆ ನರೇಂದ್ರ ಮೋದಿ ಈಗಿನ ಪ್ರಧಾನಿ ನರೇಂದ್ರ ಮೋದಿ ಅಲ್ಲವೇ ಅಲ್ಲ ಎಂದು ಖಂಡಿತ ಹೇಳಿಯಾರು. ಅಂದಿನ ಭಾಷಣಗಾರ ಮೋದಿಗೂ ಇಂದಿನ ಪ್ರಧಾನಿ ಮೋದಿಗೂ ವಿವರಿಸಲಾಗದ ಅಂತರ ಇದೆ. 870 ದಿನಗಳಿಂದ ಬೀದಿಯಲ್ಲಿರುವ ನಿವೃತ್ತ ಯೋಧರು ಇದಕ್ಕೆ ಒಂದು ಉದಾಹರಣೆ ಮಾತ್ರ.

Monday 6 November 2017

ಅಕ್ಟೋಬರ್ 30ರ ಪತ್ರಿಕೆಗಳು

     ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿ, ವರದಿ, ವಿಶ್ಲೇಷಣೆಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಸಿಗುವ ಆದರ ಮತ್ತು ಆದ್ಯತೆಯು ಇತರ ಸುದ್ದಿಗಳಿಗೆ ಲಭ್ಯವಾಗುವುದಿಲ್ಲ ಎಂಬ ದೂರನ್ನು ಕಳೆದವಾರ ಮಾಧ್ಯಮ ಕ್ಷೇತ್ರ ಮತ್ತೊಮ್ಮೆ ಸಾಬೀತುಪಡಿಸಿದೆ. ಅಕ್ಟೋಬರ್ 29ರ ಆದಿತ್ಯವಾರದಂದು ರಾಯಚೂರಿನಲ್ಲಿ ರಾಜ್ಯಮಟ್ಟದ ಸಮಾವೇಶವೊಂದು ನಡೆಯಿತು. 10 ಸಾವಿರಕ್ಕಿಂತಲೂ ಅಧಿಕ ಮಂದಿ ಇದರಲ್ಲಿ ಭಾಗವಹಿಸಿದರು. ಹೆಚ್ಚಿನವರು ಮಹಿಳೆಯರು. ‘ಮದ್ಯ ನಿಷೇಧ ಆಂದೋಲನ ಕರ್ನಾಟಕ’ ಎಂಬ ಏಕ ವೇದಿಕೆಯ ಅಡಿ ಸುಮಾರು 32 ಸಂಘಟನೆಗಳು ಜೊತೆಗೂಡಿ ಏರ್ಪಡಿಸಿದ ಈ ಸಭೆಯಲ್ಲಿ ‘ನಶಾ ಮುಕ್ತ್ ಭಾರತ್’ ಸಂಘಟನೆಯ ಮುಖ್ಯಸ್ಥೆ ಮೇಧಾ ಪಾಟ್ಕರ್ ಭಾಗವಹಿಸಿ ದ್ದರು. ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಯಾಗಬೇಕು ಎಂದು ಸಭೆ ಒತ್ತಾಯಿಸಿತು. ಅಂದಹಾಗೆ ಕೃಷಿಗೆ ಹೆಸರುವಾಸಿಯಾದ ನಾಡೊಂದು ಕೃಷಿಗೆ ಸಂಬಂಧಿಸಿಯೇ ಇಲ್ಲದ ವಿಷಯದ ಮೇಲೆ ಬೃಹತ್ ಸಭೆಯೊಂದನ್ನು ಏರ್ಪಡಿಸುವುದು, ಚರ್ಚೆ ನಡೆಸುವುದು ಮತ್ತು ಭಾರೀ ಸಂಖ್ಯೆಯಲ್ಲಿ ಜನ ಸೇರುವುದೆಲ್ಲ ಅಕ್ಟೋಬರ್ 30 ರಂದು ಪ್ರಕಟವಾಗುವ ಪತ್ರಿಕೆಗಳಲ್ಲಿ ಮುಖ್ಯ ಸುದ್ದಿಯಾಗಬೇಕಿತ್ತು, `ಸಂಪಾದಕೀಯ ವಸ್ತು’ ಆಗಬೇಕಿತ್ತು ಎಂದು ಬಯಸುವುದು ತಪ್ಪಲ್ಲ. ಆದರೆ ಈ ನಿರೀಕ್ಷೆಗೆ ವಿರುದ್ಧವಾಗಿ ಪತ್ರಿಕೆಗಳು ವರ್ತಿಸಿದುವು. ನಿಜವಾಗಿ, ಈ ದೇಶದಲ್ಲಿ ಪ್ರತಿದಿನ ರಾಜಕೀಯ ರಹಿತ ಅಸಂಖ್ಯ ಜನಮುಖಿ ಕಾರ್ಯಕ್ರಮಗಳು ನಡೆಯುತ್ತವೆ. ಯೋಜನೆಗಳು ರೂಪು ಪಡೆಯುತ್ತವೆ. ಮನೆಯಿಲ್ಲದವರಿಗೆ ಮನೆ ಕಟ್ಟಿ ಕೊಡುವ, ಆಹಾರದ ವ್ಯವಸ್ಥೆ ಮಾಡುವ, ಮಾಸಾಶನ ನೀಡುವ, ಸ್ವಉದ್ಯೋಗಕ್ಕೆ ನೆರವು ನೀಡುವ, ಬಾವಿ ತೋಡುವ, ಚಿಕಿತ್ಸೆ ವೆಚ್ಚವನ್ನು ಭರಿಸುವ, ಸಾಮಾಜಿಕ ಪಿಡುಗುಗಳ ವಿರುದ್ಧ ಜನಜಾಗೃತಿ ಮೂಡಿಸುವ.. ಇತ್ಯಾದಿ ಘಟನೆಗಳು ನಡೆಯುತ್ತಲೇ ಇರುತ್ತವೆ. ರಾಜಕಾರಣಿಯೋರ್ವರ ಹಳಸಲು ಹೇಳಿಕೆಗಿಂತ ಎಷ್ಟೋ ಪಾಲು ಬೆಲೆಬಾಳುವ ಚಟುವಟಿಕೆಗಳು ಇವು. ಆದರೆ ಇಂಥ ಚಟುವಟಿಕೆಗಳು ಸಾಮಾನ್ಯವಾಗಿ ಪತ್ರಿಕೆಗಳ ಒಳಪುಟದ ತೀರಾ ಒಳಗೆ ಒಂದು ಕಾಲಂನಲ್ಲಿ ಸತ್ತು ಹೋಗುವುದೇ ಹೆಚ್ಚು. ಒಂದು ವೇಳೆ, ರಾಜಕಾರಣಿಗಳು ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಪತ್ರಿಕೆಗಳ ಒಂದು ಕಾಲಂ ಅವಮಾನದಿಂದ ಇಂಥ ಸುದ್ದಿಗಳು ಪಾರುಗೊಂಡು ಎರಡು ಕಾಲಂ ಎಂಬಷ್ಟು ಮೇಲ್ದರ್ಜೆಗೇರುವುದಿದೆ. ಅದರಾಚೆಗೆ ಇಂಥ ಚಟುವಟಿಕೆಗಳಿಗೆ ಪತ್ರಿಕೆಗಳಲ್ಲಿ ಮಾನ್ಯತೆ ಲಭ್ಯವಾಗುವುದಿಲ್ಲ. ಇದನ್ನು ಬದಲಿಸುವುದು ಹೇಗೆ? ರಾಜಕೀಯ ಸುದ್ದಿಗಳೇಕೆ ಮಾಧ್ಯಮಗಳಿಗೆ ಇಷ್ಟ?
     ಸಾಮಾನ್ಯವಾಗಿ ಇವತ್ತು ಜನರ ಆದ್ಯತೆಯನ್ನು ನಿರ್ಧರಿಸುವುದೇ ಪತ್ರಿಕೆಗಳು. ಅವು ಯಾವುದನ್ನು ಚರ್ಚಾರ್ಹ ಎಂಬುದಾಗಿ ಬಿಂಬಿಸುತ್ತದೋ ಅದನ್ನೇ ಜನರು ಚರ್ಚಾರ್ಹವಾಗಿ ಸ್ವೀಕರಿಸುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿದರೂ ಇದು ವ್ಯಕ್ತವಾಗುತ್ತದೆ. ಅಲ್ಲಿ ಅತ್ಯಂತ ಹೆಚ್ಚು ಬರಹಗಳು ಕಾಣಿಸಿಕೊಳ್ಳುವುದೇ ರಾಜಕೀಯದ ಮೇಲೆ. ತನ್ನ ಮನೆಯ ಪಕ್ಕವೇ ಇರುವ `ಚರಂಡಿ’ ಅವ್ಯವಸ್ಥೆಯನ್ನು ಹೇಳಿಕೊಳ್ಳುವುದಕ್ಕಿಂತ ಮೋದಿಯನ್ನೋ ಸಿದ್ಧರಾಮಯ್ಯರನ್ನೋ ಗುರಿಯಾಗಿ ಬರೆಯುವುದರಲ್ಲಿ ವ್ಯಕ್ತಿ ಸುಖ ಪಡುತ್ತಾನೆ. ನೀರಿಲ್ಲದ ಊರಿಗೆ ಬಾವಿ ತೋಡಿಸಿಕೊಟ್ಟ ಸುದ್ದಿಗಿಂತ ಹೆಚ್ಚು ರಾಜಕಾರಣಿಯೋರ್ವರ ಹೇಳಿಕೆಯ ಮೇಲಿನ ಪ್ರತಿಕ್ರಿಯೆಗೆ ಲೈಕ್ ಮತ್ತು ಕಾಮೆಂಟ್‍ಗಳು ಲಭ್ಯವಾಗುತ್ತವೆ. ಅಷ್ಟಕ್ಕೂ, ಪತ್ರಿಕೆಯೊಂದು ರಾಯಚೂರಿನಲ್ಲಿ ನಡೆದ ಮದ್ಯನಿಷೇಧದಂತಹ ಕಾರ್ಯ ಕ್ರಮಕ್ಕೆ ಆದ್ಯತೆಯನ್ನು ಕೊಟ್ಟರೆ ಏನಾದೀತು? ರಾಜಕೀಯ ಸುದ್ದಿಗಳ ಬದಲು ಸಾಮಾಜಿಕ ಸುದ್ದಿಗಳಿಗೆ ಅವು ಮಹತ್ವ ಕೊಡುವುದರಿಂದ ಏನೆಲ್ಲ ಬದಲಾವಣೆಗಳಾಗಬಹುದು? ಇದರ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳು ಏನೇನು? ರಾಜಕೀಯವು ಜನರ ನಾಡಿಮಿಡಿತವನ್ನು ನಿರ್ಧರಿಸುತ್ತದೆ ಎಂಬುದು ನಿಜ. ದೇಶದ ಭವಿಷ್ಯ ರಾಜಕೀಯ ನಿರ್ಧಾರವನ್ನು ಅವಲಂಬಿಸಿಕೊಂಡಿದೆ. ಪಾಕ್‍ನ ವಿರುದ್ಧ ಯುದ್ಧ ಬೇಕೋ ಬೇಡವೋ ಎಂಬುದನ್ನು ಜನಸಾಮಾನ್ಯ ನಿರ್ಧರಿಸಲಾರ. ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಮತ್ತು ತಗ್ಗಿಸುವ ಎರಡೂ ಸಾಮರ್ಥ್ಯ ರಾಜಕೀಯಕ್ಕಿದೆ.  ಆದರೂ ಇವತ್ತು ಮಾಧ್ಯಮಗಳು ರಾಜಕೀಯ ಸುದ್ದಿಗಳಿಗೆ ಕೊಡುತ್ತಿರುವ ಆದ್ಯತೆಗಳು ಬರೇ ಇವನ್ನು ಮಾತ್ರ ಅವಲಂಬಿಸಿರುವುದೇ ಅಥವಾ ನಿರ್ಲಕ್ಷ್ಯ ಧೋರಣೆಯೇ?
       ಮಾಧ್ಯಮ ಕ್ಷೇತ್ರವೆಂಬುದು ಸ್ವತಂತ್ರ ವ್ಯವಸ್ಥೆ. ಇಲ್ಲಿ ರಾಜಕಾರಣಿ ವಿಮರ್ಶೆಗೊಳಗಾಗಬೇಕು. ಆಡಳಿತ ವ್ಯವಸ್ಥೆಯನ್ನು ಪರೀಕ್ಷೆಗೊಡ್ಡಬೇಕು. ಪಕ್ಪಮೋಹ, ಜಾತಿಮೋಹ, ಭಾಷೆ ಮೋಹಗಳಂ ಹೊರಗೆ ನಿಂತು ನೋಡುವ ಕಣ್ಣು ಇರಬೇಕು. ಜೊತೆಗೇ ರಾಜಕೀಯ ವ್ಯವಸ್ಥೆಯ ತಪ್ಪುಗಳನ್ನು ಎತ್ತಿ ಹೇಳುತ್ತಾ, ಜನರನ್ನು ಎಚ್ಚರಿಸುತ್ತಾ ಮತ್ತು ಅಗತ್ಯವೆಂದು ಕಂಡುಬಂದಾ ಗಲೆಲ್ಲ ಜನರನ್ನು ಪ್ರತಿಚಳವಳಿಗೆ ಸಜ್ಜುಗೊಳಿಸುತ್ತಾ ನಿರ್ಮಾಣಾತ್ಮಕ ಪಾತ್ರದಲ್ಲಿ ಗುರುತಿಸಿಕೊಳ್ಳಬೇಕು. ರಾಯಚೂರು ಸಮಾವೇಶವು ಪತ್ರಿಕೆಗಳ ಆದ್ಯತಾ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕಿತ್ತೆಂದು ಅನಿಸುವುದು ಈ ಕಾರಣಕ್ಕೆ. ಮದ್ಯ ಒಂದು ಸಾಮಾಜಿಕ ಪಿಡುಗು. ಬಡವರೇ ಹೆಚ್ಚಿರುವ ಈ ದೇಶದ ಪಾಲಿಗೆ ಮದ್ಯವು ನಿಧಾನ ರೋಗವಾಗಿ ಮಾರ್ಪಟಿರುವುದು ಎಲ್ಲರಿಗೂ ಗೊತ್ತು. ಅಲ್ಲದೇ ಇದರಿಂದ ತೊಂದರೆಗೊಳಪಡುತ್ತಿರುವವರಲ್ಲಿ ಅತ್ಯಂತ ಹೆಚ್ಚಿರುವುದು ಮಹಿಳೆಯರೇ. ಇವನ್ನೆಲ್ಲ ಸರಕಾರವೇ ಬಿಡುಗಡೆಗೊಳಿಸುವ ಅಂಕಿ ಅಂಶಗಳೇ ಕಾಲಕಾಲಕ್ಕೆ ದೃಢಪಡಿಸುತ್ತಲೂ ಇವೆ. ಇಷ್ಟಿದ್ದೂ, ಮದ್ಯವು ಯಾಕೆ ನಿಷೇಧಕ್ಕೆ ಒಳಪಡುತ್ತಿಲ್ಲ ಅನ್ನುವ ಪ್ರಶ್ನೆ ಅಸಹಜವೋ ಅಗಂಭೀರವೋ ಆಗಬೇಕಿಲ್ಲ. ಜನರ ನಾಡಿಮಿಡಿತಕ್ಕೆ ಸ್ಪಂದಿಸಬೇಕಾದ ರಾಜಕಾರಣಿಗಳು ಅದರಲ್ಲಿ ವಿಫಲವಾದಾಗ ಜನರು ಸಂಘಟಿತರಾಗುತ್ತಾರೆ. ಸಭೆ ಸೇರುತ್ತಾರೆ. ಇಂಥ ಸಮಯದಲ್ಲಿ ಪತ್ರಿಕೆಗಳು ತಮ್ಮ ಆದ್ಯತಾ ಪಟ್ಟಿಯಲ್ಲಿ ಬದಲಾವಣೆ ತರದೇ ಹೋದರೆ, ಅವು ರಾಜಕಾರಣದ ಮುಖವಾಣಿ ಎಂಬ ಬಿರುದಿಗೆ ಹೆಚ್ಚು ನಿಕಟವಾಗುತ್ತದೆ. ಒಂದು ರೀತಿಯಲ್ಲಿ, ಪ್ರತಿಭಟನೆ, ಸಾಮಾಜಿಕ ಚಟುವಟಿಕೆಗಳೆಂಬುದು ರಾಜಕೀಯ ವ್ಯವಸ್ಥೆಯ ವೈಫಲ್ಯದ ಸಂಕೇತ. ವ್ಯವಸ್ಥೆ ಸರಿ ಇದ್ದರೆ ಪ್ರತಿಭಟನೆಯ ಅಗತ್ಯವೇ ಇಲ್ಲ. ಆದ್ದರಿಂದ ರಾಜಕೀಯರಹಿತ ಸುದ್ದಿಗಳಿಗೆ ಆದ್ಯತೆಯನ್ನು ಕೊಟ್ಟು ಪತ್ರಿಕೆಗಳು ರಾಜಕೀಯ ವ್ಯವಸ್ಥೆಯನ್ನು ತರಾಟೆಗೆತ್ತಿಕೊಳ್ಳಲಿ ಎಂದು ಬಯಸುವುದು. ರಾಯಚೂರು ಸಮಾವೇಶ ಮುಖ್ಯವಾಗಬೇಕಾದದ್ದೂ ಈ ಹಿನ್ನೆಲೆಯಲ್ಲೇ. ಆದರೆ ಹಾಗಾಗಿಲ್ಲ ಅನ್ನುವುದು ವಿಷಾದಕರ.