Thursday 17 May 2018

ಶ್ರೀಜಿತ್ ಕಳೆದ 770 ದಿನಗಳು ಮತ್ತು…



   `ಏಕ ವ್ಯಕ್ತಿ ಪ್ರತಿಭಟನೆ’ಯಾಗಿ ಗುರುತಿಸಿಕೊಂಡು ಕೇರಳದ ಹೊರಗೂ ಗಮನ ಸೆಳೆದಿದ್ದ ಶ್ರೀಜಿತ್ ಎಂಬ ಯುವಕನ ಸತ್ಯಾಗ್ರಹಕ್ಕೆ ಕೊನೆಗೂ ಜಯಲಭಿಸಿದೆ. ಆದರೆ ಈ ಜಯವನ್ನು ಆಚರಿಸಬೇಕಿರುವ ಶ್ರೀಜಿತ್ ಕಳೆದ 770 ದಿನಗಳ ಸತ್ಯಾಗ್ರಹದಿಂದ ಬಸವಳಿದಿದ್ದಾನೆ. ದೇಹ ಕೃಶವಾಗಿದೆ. ಕೆನ್ನೆ ಗುಳಿ ಬಿದ್ದಿದೆ. ತನ್ನ ಬೇಡಿಕೆಯನ್ನು ಈಡೇರಿಸಿ ಕೇಂದ್ರ ಸರಕಾರ ಕಳುಹಿಸಿದ ಪತ್ರವನ್ನು ಕೇರಳ ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯಿಂದ ಪಡಕೊಂಡು ನಕ್ಕಾಗಲೂ ಕಳೆಗುಂದಿದ ವಾತಾವರಣವೊಂದು ಅಲ್ಲಿತ್ತು. ಇದಕ್ಕಾಗಿ 770 ದಿನಗಳ ವರೆಗೆ ಯಾಕೆ ಸತಾಯಿಸಿದಿರಿ ಅನ್ನುವ ಪ್ರಶ್ನೆಯೊಂದನ್ನು ಶ್ರೀಜಿತ್ ಮೌನವಾಗಿ ಈ ವ್ಯವಸ್ಥೆಯ ಮುಂದಿಟ್ಟಿದ್ದ. ಹಾಗಂತ, ಶ್ರೀಜಿತ್ ಈ ವ್ಯವಸ್ಥೆಯ ಮುಂದಿಟ್ಟಿದ್ದ ಬೇಡಿಕೆ ಸ್ವಹಿತಾಸಕ್ತಿಯದ್ದೋ ಆರ್ಥಿಕವಾಗಿ ಲಾಭಕರವಾದದ್ದೋ ಆಗಿರಲಿಲ್ಲ. ಕೇರಳ ಪೋಲೀಸ್ ಕಂಪ್ಲೆಂಟ್ ಅಥಾರಿಟಿಯು (ಕೆಪಿಸಿಎ) ಗಂಭೀರ ದೋಷಾರೋಪಣೆ ಹೊರಿಸಿದ ಪ್ರಕರಣವೊಂದರ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬುದು ಆತನ ಬೇಡಿಕೆಯಾಗಿತ್ತು. 2014 ಮೇ 21ರಂದು ಶ್ರೀಜಿತ್‍ನ ಅಣ್ಣ ಶ್ರೀವಿಜಿಯ ಸಾವು ಸಂಭವಿಸುತ್ತದೆ. ಪೋಲೀಸ್ ಕಸ್ಟಡಿಯಲ್ಲಿದ್ದಾಗಲೇ ನಡೆದ ಈ ಸಾವಿಗೆ ವಿಷ ¸ ಸೇವನೆಯೇ ಕಾರಣ ಎಂದು ಇಲಾಖೆ ಸ್ಪಷ್ಟಣೆಯನ್ನು ನೀಡುತ್ತದೆ. ಲುಂಗಿಯಲ್ಲಿ ಆತ ವಿಷ ಪದಾರ್ಥವನ್ನು ಅಡಗಿಸಿಟ್ಟಿದ್ದ ಎಂಬ ¸ ಸಮರ್ಥನೆಯನ್ನೂ ಕೊಡುತ್ತದೆ. ಮೊಬೈಲ್ ಕಳ್ಳತನದ ಸಾಮಾನ್ಯ ಆರೋಪವನ್ನು ಹೊತ್ತುಕೊಂಡ ವ್ಯಕ್ತಿಯೋರ್ವ ವಿಷ ಸೇವನೆ ಯಂಥ ಅ ಸಾಮಾನ್ಯ ಕ್ರಮಕ್ಕೆ ಧೈರ್ಯ ಮಾಡಬಲ್ಲನೇ, ಅದಕ್ಕಾಗಿ ವಿಷ ಸಂಗ್ರಹಿಸಿ ಇಟ್ಟುಕೊಳ್ಳಬಲ್ಲನೇ ಅನ್ನುವ ಪ್ರಶ್ನೆ ಶ್ರೀಜಿತ್‍ನಂತೆಯೇ ಹಲವರನ್ನು ಆ ಸಂದರ್ಭದಲ್ಲಿ ಕಾಡಿತ್ತು. ಆದರೆ ಪೋಲೀಸ್ ತನಿಖೆಯಲ್ಲಿ ಈ ಪ್ರಶ್ನೆಗೆ ಯಾವ ಮಹತ್ವವೂ ಲಭಿಸಿರಲಿಲ್ಲ. ‘ಸ್ವಯಂಪ್ರೇರಿತವಾಗಿ ವಿಷ ¸ ಸೇವಿಸಿರು ವುದೇ ಸಾವಿಗೆ ಕಾರಣ’ ಎಂದು ಅದು ಷರಾ ಬರೆದಿತ್ತು. ಅಲ್ಲದೇ, ಆತನದ್ದೆಂದು ಹೇಳಲಾದ ಡೆತ್ ನೋಟನ್ನು ಪೋಲೀಸ್ ತನ ಖೆಯಲ್ಲಿ ಪುರಾವೆಯಾಗಿ ಎತ್ತಿ ಹೇಳಲಾಗಿತ್ತು. ಒಂದು ರೀತಿಯಲ್ಲಿ, ಆತ್ಮಹತ್ಯೆ ಪ್ರಕರಣವಾಗಿ ಬಹುತೇಕ ಮುಗಿದು ಹೋಗಿದ್ದ ಪ್ರಕರಣಕ್ಕೆ ಮತ್ತೆ ಜೀವ ತುಂಬಿದ್ದು 2016ರಲ್ಲಿ ನಡೆದ ಕೇರಳ ಪೋಲೀಸ್ ಕಂಪ್ಲೇಂಟ್ ಅಥಾರಿಟಿಯ (ಕೆ.ಪಿ.ಸಿ.ಎ.) ತನಿಖೆ. ಅದು ಶ್ರೀವಿಜಿಯ ಸಾವನ್ನು ಕಸ್ಟಡಿ ಸಾವು ಎಂದು ಘೋಷಿಸಿತು. ಪಾರಶ್ಶಾಲ ಪೋಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಗೋಪಕುಮಾರ್ ಮತ್ತು ಎಎಸ್‍ಐ ಪಿಲಿಪ್ಪೋಸ್ ಎಂಬಿಬ್ಬರು ಶ್ರೀವಿಜಿಗೆ ಚಿತ್ರಹಿಂಸೆಯನ್ನು ನೀಡಿ, ಬಲವಂತದಿಂದ ವಿಷ ತಿನ್ನಿಸಿರುವರೆಂದು ಅದು ಕಂಡುಕೊಂಡಿತ್ತು.
ಅಲ್ಲದೇ ಡೆತ್ ನೋಟ್‍ನ ಬಗ್ಗೆ ಫಾರೆನ್ಸಿಕ್ ಇಲಾಖೆಯ ವರದಿಯ ಪ್ರಾಮಾಣಿಕತೆಯ ಮೇಲೂ ಅದು ಅನುಮಾನವನ್ನು ವ್ಯಕ್ತಪಡಿಸಿತು. ಹೈಕೋರ್ಟ್‍ನ ಮಾಜಿ ನ್ಯಾಯಾಧೀಶರಾಗಿದ್ದ ನಾರಾಯಣ ಕುರುಪ್ ಅವರ ನೇತೃತ್ವದಲ್ಲಿ ನಡೆದ ಈ ಕೆಪಿಸಿಎಯ ತನಿಖೆಯ ಫಲಿತಾಂಶವು ಶ್ರೀಜಿತ್ ಕುಟುಂಬ ವನ್ನು ಆಘಾತಕ್ಕೆ ಒಳಪಡಿಸಿತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕುಟುಂಬ ಆಗ್ರಹಿಸಿತು. ತಿರುವನಂತಪುರದಲ್ಲಿರುವ ಸರಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿಯ ಮುಂದೆ ಅಂದಿನಿಂದ ಶ್ರೀಜಿತ್ ಸತ್ಯಾಗ್ರಹಕ್ಕೆ ಕುಳಿತುಕೊಂಡ. ಆತ ಇವತ್ತು ಈ ವ್ಯವಸ್ಧೆಯ ಮೇಲೆ ಎಷ್ಟು ಭರವಸೆರಹಿತವಾಗಿ ಬದುಕುತ್ತಿರುವನೆಂದರೆ, ತನ್ನ ಬೇಡಿಕೆಯನ್ನು ಒಪ್ಪಿಕೊಂಡು ಕೇಂದ್ರ ಸರಕಾರ ಹೊರಡಿಸಿದ ದೃಢೀಕರಣ ಪತ್ರವನ್ನೂ ನಂಬುತ್ತಿಲ್ಲ. ಸಿಬಿಐಯು ತನಿಖೆ ಆರಂಭಿಸಿದ ಬಳಿಕವೇ ತಾನು ಸತ್ಯಾಗ್ರಹದಿಂದ ವಿರಮಿಸುವೆನೆಂದು ಆತ ಹೇಳಿ ಕೊಂಡಿದ್ದಾನೆ.
ನಿಜವಾಗಿ, ಶ್ರೀಜಿತ್ ಈ ದೇಶದ ಎದುರು ಕೆಲವು ಪ್ರಶ್ನೆಗಳನ್ನು ಇಟ್ಟಿದ್ದಾನೆ. ಈ ಪ್ರಶ್ನೆಗಳಿಗೆ ಈ ದೇಶ ಮುಖಾಮುಖಿಯಾಗದೇ ಹೋದರೆ ಅದು ಈ ದೇಶದ ವ್ಯವಸ್ಥೆಯನ್ನು ಇನ್ನಷ್ಟು ನಿರಂಕುಷತೆಯೆಡೆಗೆ ಕೊಂಡೊಯ್ಯಬಹುದು. ಈ ದೇಶದಲ್ಲಿ ಪ್ರತಿನಿತ್ಯ ಬಂಧನ, ವಿಚಾರಣೆ, ಬಿಡುಗಡೆ, ಸಾವು.. ಇತ್ಯಾದಿಗಳು ನಡೆಯುತ್ತಲೇ ಇರುತ್ತವೆ. 120 ಕೋಟಿಯಷ್ಟು ಜನಸಂಖ್ಯೆಯಿರುವ ದೇಶವೊಂದರಲ್ಲಿ ಇವೆಲ್ಲ ಸಹಜ ಎಂದು ನಾವು ಸಮರ್ಥಿಸಿಕೊಳ್ಳಬಹುದಾದರೂ ಇವುಗಳಲ್ಲಿ ಅಸಹಜವಾದುದೂ ಇರುತ್ತದೆ ಅನ್ನುವುದನ್ನು ಶ್ರೀಜಿತ್ ದೇಶದ ಮುಂದಿ ಟ್ಟಿದ್ದಾನೆ.ಪೋಲೀಸರು ಬಂಧಿಸುವ ವ್ಯಕ್ತಿ ನಿಜಕ್ಕೂ ಬಂಧನಕ್ಕೆ ಅರ್ಹನಾಗಿಯೇ ಇರಬೇಕೆಂದಿಲ್ಲ. ಪೋಲೀಸ್ ಇಲಾಖೆಯಲ್ಲಿರುವ ಕೆಲವರ ಸ್ವಾಹಿತಾಸಕ್ತಿಯ ಕಾರಣಕ್ಕಾಗಿ ಆತನ ಬಂಧನವಾಗಿರಬಹುದು. ಇನ್ನಾರನ್ನೋ ತೃಪ್ತಿಪಡಿಸುವುದಕ್ಕಾಗಿ ಆತನನ್ನು ‘ಫಿಕ್ಸ್’ ಮಾಡಿರಬಹುದು. ಅಂದಹಾಗೆ, ಶ್ರೀವಿಜಿ ಮೊಬೈಲ್ ಕದ್ದಿರಲೇ ಇಲ್ಲ ಎಂದೂ ಹೇಳಲಾಗುತ್ತದೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಆತನ ಮೇಲೆ ಪ್ರಕರಣವನ್ನು ಫಿಕ್ಸ್ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಆರೋಪವೂ ಇದೆ. ದುರಂತ ಏನೆಂದರೆ, ಹೀಗೆ ಅನ್ಯಾಯಕ್ಕೊಳಗಾದವರಲ್ಲಿ ಶ್ರೀವಿಜಿ ಮೊದಲಿಗನೇನಲ್ಲ. ಭಯೋತ್ಪಾದನೆಯ ಹೆಸರಲ್ಲಿ ಹತ್ತು-ಹದಿನೈದು ವರ್ಷಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡವರಿದ್ದಾರೆ. ವರ್ಷಗಟ್ಟಲೆ ಹಿಂಸೆ ಅನುಭವಿಸಿದವರಿದ್ದಾರೆ. ಪತ್ರಕರ್ತರು, ಪ್ರೊಫೆಸರ್‍ಗಳು, ವಿದ್ಯಾರ್ಥಿಗಳೂ ಸೇರಿದಂತೆ ದೊಡ್ಡದೊಂದು ಗುಂಪು ಈ ಬಗೆಯ ಹಿಂಸೆಗೆ ಬಲಿಯಾಗಿದೆ. ಯೌವನವನ್ನು ಜೈಲಲ್ಲಿ ಕಳೆದು ಕೊನೆಗೆ ನಿರಪರಾಧಿಯಾಗಿ ಬಿಡುಗಡೆಗೊಳ್ಳುವಾಗ ಅವರು ಸಂತಸಪಡುವುದ ಕ್ಕಿಂತ ದುಃಖಿಸುವುದೇ ಹೆಚ್ಚು. ಶ್ರೀಜಿತ್‍ನಂತೆ ಅವರಲ್ಲೂ ಅನೇಕಾರು ಪ್ರಶ್ನೆಗಳಿರುತ್ತವೆ. ತಮ್ಮನ್ನು ಭಯೋತ್ಪಾದ ಕರಾಗಿ ಗುರುತಿಸಲು ಮತ್ತು ಎಫ್‍ಐಆರ್ ದಾಖಲಿಸಲು ಇದ್ದ ಕಾರಣಗಳೇನು? ಧರ್ಮವೇ, ವೇಷಭೂಷಣಗಳೇ, ಭಾಷೆಯೇ? ಯಾರ ಪಿತೂರಿಯು ಇದರ ಹಿಂದೆ ಕೆಲಸ ಮಾಡಿದೆ? ನಿರಪರಾಧಿಯೋರ್ವನನ್ನು ಹೀಗೆ ಜೈಲಲ್ಲಿಟ್ಟು ವರ್ಷಗಟ್ಟಲೆ ಕೊಳೆಯಿಸಿ ಕೊನೆಗೆ ಏನೂ ಆಗಿಲ್ಲವೆಂಬಂತೆ ಬಿಡುಗಡೆಗೊಳಿಸುವುದೆಂದರೆ ಏನರ್ಥ? ಪರಿಹಾರವೇನು? ಯಾಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮನುಷ್ಯ ಇಷ್ಟು ಅಗ್ಗವಾಗುತ್ತಾನೆ?
ಶ್ರೀವಿಜಿಯ ಸಾವು ಶ್ರೀಜಿತ್‍ನಂಥ ಛಲಗಾರ ತಮ್ಮನನ್ನು ಈ ಸಮಾಜಕ್ಕೆ ಪರಿಚಯಿಸಿದ್ದಷ್ಟೇ ಅಲ್ಲ, ನಮ್ಮ ವ್ಯವಸ್ಥೆ ಹೊದ್ದುಕೊಂಡಿರುವ ಚರ್ಮ ಎಷ್ಟು ದಪ್ಪಗಿನದು ಎಂಬುದನ್ನೂ ಪರಿಚಯಿಸಿದೆ. ಹತ್ಯೆ ಎಂದು ಹೇಳಲಾದ ಒಂದು ಸಾವಿನ ಸುತ್ತ ತನಿಖೆ ನಡೆಸುವಂತೆ ಈ ವ್ಯವಸ್ಥೆಯನ್ನು ಒಪ್ಪಿಸಬೇಕಾದರೆ 770 ದಿನಗಳ ವರೆಗೆ ಸತ್ಯಾಗ್ರಹ ನಡೆಸಬೇಕು ಅನ್ನುವುದೇ ದೊಡ್ಡ ವ್ಯಂಗ್ಯ. 770 ದಿನಗಳ ಸತ್ಯಾಗ್ರಹದ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಬದಲು ಆರಂಭದಲ್ಲೇ ಒಪ್ಪಿಸಲು ತೀರ್ಮಾನಿಸಿರುತ್ತಿದ್ದರೆ ಶ್ರೀಜಿತ್ ಕೃಶನಾಗುತ್ತಿದ್ದನೇ? ಪಡಬಾರದ ಹಿಂಸೆ ಅನುಭವಿಸುತ್ತಿದ್ದನೇ?
ಏನೇ ಆಗಲಿ, ಪಟ್ಟು ಬಿಡದೇ ಹೋರಾಡಿದ ಶ್ರೀಜಿತ್‍ಗೆ ಅಭಿನಂದನೆಯನ್ನು ಸಲ್ಲಿಸಬೇಕು. ಆತ ನಿರಪರಾಧಿಗಳ ಸಂಕಟಕ್ಕೆ ಮತ್ತೊಮ್ಮೆ ದನಿ ಯಾಗಿದ್ದಾನೆ. ವ್ಯವಸ್ಥೆಯನ್ನು ಪೋರೆದಿರುವ ಅಪ್ರಾಮಾಣಿಕತೆಗೆ ಹೊಡೆತ ನೀಡಿದ್ದಾನೆ. ಆತನಿಗೆ ಅಭಿನಂದನೆಗಳು.

ಒಳಗಿನ ಹೊಗೆ, ಹೊರಗಿನ ಧಗೆಯಲ್ಲಿ ಬೇಯುತ್ತಿರುವ ಬಿಜೆಪಿ..



      2019ರ ಲೋಕಸಭಾ ಚುನಾವಣೆಯು ಬಿಜೆಪಿಯ ಪಾಲಿಗೆ 2014ರಷ್ಟು ಸುಲಭವಾಗಿರುವುದಿಲ್ಲ ಅನ್ನುವುದನ್ನು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನೇ ದಿನೇ ಖಚಿತಪಡಿಸತೊಡಗಿವೆ. 2014ರಲ್ಲಿ ಬಿಜೆಪಿಯನ್ನು ಏಕಕಂಠದಿಂದ ಬೆಂಬಲಿಸಿದ್ದ ದಲಿತರೇ 2019ರಲ್ಲಿ ಬಿಜೆಪಿಯ ಸೋಲನ್ನು ಬರೆಯಲಿದ್ದಾರೆ ಎಂಬುದೂ ದೃಢವಾಗತೊಡಗಿದೆ. ಈ ದೇಶದಲ್ಲಿ ಸುಮಾರು 30 ಕೋಟಿಯಷ್ಟು ದಲಿತರಿದ್ದಾರೆ. 66 ದಲಿತ ಮೀಸಲು ಲೋಕಸಭಾ ಕ್ಷೇತ್ರಗಳಿವೆ. ಮಾತ್ರವಲ್ಲ, 2014ರಲ್ಲಿ ಈ 66ರಲ್ಲಿ 40 ಸ್ಥಾನಗಳನ್ನು ಗೆದ್ದಿದ್ದು ಬಿಜೆಪಿಯೇ. ಆದರೆ, ಬಿಜೆಪಿಯನ್ನು ದಲಿತ ಸಮೂಹವು ಇಷ್ಟು ಪ್ರಬಲವಾಗಿ ಬೆಂಬಲಿಸಿದ ಹೊರತಾಗಿಯೂ ಕೇಂದ್ರ ಸಚಿವ ಸಂಪುಟದಲ್ಲಿ ದಲಿತರಿಗೆ ಅರ್ಹಪಾಲು ಸಿಕ್ಕಿಲ್ಲ ಅನ್ನುವ ಅಸಮಾಧಾನ ಬಿಜೆಪಿಯ ದಲಿತ ಪ್ರತಿನಿಧಿಗಳಲ್ಲಿ ಆರಂಭದಲ್ಲೇ ಇತ್ತು. ಪಾಸ್ವಾನ್, ಅಟವಳೆ, ಗೆಹ್ಲೋಟ್, ಜಿಗಜಿಣಗಿಯಂಥ ದಲಿತ ಪ್ರತಿನಿಧಿಗಳಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕರೂ ಅದು ನಾಮ್‍ಕಾವಾಸ್ತೆ ಅನ್ನುವುದು ಸ್ವತಃ ಅವರಿಗೂ ಗೊತ್ತಿತ್ತು. ಈ ಅಸಮಾಧಾನವನ್ನು ಅವರು ಬಹಿರಂಗ ವೇದಿಕೆಗಳಲ್ಲಿ ವ್ಯಕ್ತಪಡಿಸದಿದ್ದರೂ ಆಂತರಿಕವಾಗಿ ಪರಸ್ಪರ ಹಂಚಿಕೊಳ್ಳುತ್ತಿದ್ದರು ಎಂಬುದು ಬಹಿರಂಗ ರಹಸ್ಯ. ಈ ನಡುವೆ, 2014ರ ಬಳಿಕ ದಲಿತರ ಮೇಲೆ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ಪ್ರಕರಣಗಳಲ್ಲಿ ಮಹತ್ವದ ಏರಿಕೆಗಳೂ ಕಾಣಿಸಿಕೊಂಡವು. ಈ ಏರಿಕೆ ಬಿಜೆಪಿಯ ದಲಿತ ಸಂಸದರಿಗೆ ಮತ್ತು ದಲಿತ ಮುಖಂಡರಿಗೆ ಗೊತ್ತಿರಲಿಲ್ಲ ಎಂದಲ್ಲ. ಅವರನ್ನು ಒಳಗೊಳಗೇ ಈ ಬೆಳವಣಿಗೆಗಳು ಇರಿಯುತ್ತಿದ್ದುವು. ಅದಕ್ಕಿಂತಲೂ ಮುಖ್ಯವಾಗಿ, ದಲಿತ ಸಮೂಹದಲ್ಲಿ ಬಿಜೆಪಿಯ ಮೇಲಿನ ಆಕರ್ಷಣೆಯನ್ನು ಇವು ನಿಧಾನಕ್ಕೆ ಕಡಿಮೆಗೊಳಿಸತೊಡಗಿದ್ದುವು. ಆದರೆ, ಇದು ಪ್ರಥಮವಾಗಿ ದೊಡ್ಡ ಮಟ್ಟದಲ್ಲಿ ಪ್ರಕಟವಾದದ್ದು 2016ರಲ್ಲಿ ನಡೆದ ವೇಮುಲಆತ್ಮಹತ್ಯೆ ಪ್ರಕರಣ ಮತ್ತು ಗುಜರಾತ್‍ನ ಊನಾದಲ್ಲಿ ನಡೆದ ದಲಿತ ಯುವಕರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ. ಇವೆರಡೂ ಘಟನೆಗಳು ಬಿಜೆಪಿಯ ಘೋಷಿತ ‘ದಲಿತ ಪರ’ ನೀತಿಯನ್ನು ಅಲುಗಾಡಿಸಿದುವು. ‘ಬಿಜೆಪಿಯು ದಲಿತ ವಿರೋಧಿ’ ಎಂಬ ಭಾವನೆಯನ್ನು ದಲಿತರಲ್ಲಿ ದೃಢಗೊಳಿಸುವುದಕ್ಕೆ ಊನಾದ ನಾಲ್ವರು ಯುವಕರ ದೀನಸ್ಥಿತಿ ದೊಡ್ಡ ಪಾತ್ರವನ್ನು ನಿರ್ವಹಿಸಿತು. ಆ ಬಳಿಕ, ಮಹಾರಾಷ್ಟ್ರದ ಭೀಮಾ-ಕೋರೆಗಾಂವ್‍ನಲ್ಲಿ ನಡೆದ ಘಟನೆಯಂತೂ ದಲಿತರಲ್ಲಿ ಭಾರೀ ಆಕ್ರೋಶವನ್ನು ಹುಟ್ಟು ಹಾಕಿತು. ‘ಮೇಲ್ಜಾತಿಯ ವಿರುದ್ಧ ದಲಿತರ ವಿಜಯ’ ಎಂಬುದಾಗಿ ಗುರುತಿಸಿಕೊಂಡಿರುವ ಭೀಮಾ-ಕೋರೆಗಾಂವ್ ಘಟನೆಯ 200ನೇ ವಿಜಯೋತ್ಸವದಲ್ಲಿ ಭಾಗವಹಿಸಿದ ದಲಿತರ ಮೇಲೆ ಮೇಲ್ಜಾತಿಯ ಮಂದಿ ಹಲ್ಲೇ ನಡೆಸಿದರು. ಇಡೀ ಕಾರ್ಯಕ್ರಮ ಅಸ್ತವ್ಯಸ್ತವಾಯಿತು.
     ಇದರ ಬಳಿಕ ಉತ್ತರ ಪ್ರದೇಶದ ಶಹರಾಣ್‍ಪುರದಲ್ಲಿ ಅಂಬೇಡ್ಕರ್ ಜನ್ಮಶತಮಾನೋತ್ಸವದ ಪ್ರಯುಕ್ತ ದಲಿತರು ಹಮ್ಮಿಕೊಂಡ ಮೆರವಣಿಗೆಯು ದಲಿತರು ಮತ್ತು ರಾಜಪೂತ್ ಸಮುದಾಯದ ನಡುವಿನ ಘರ್ಷಣೆಯಾಗಿ ಮುಕ್ತಾಯವನ್ನು ಕಂಡಿತು. ಸುಮಾರು 25ಕ್ಕಿಂತಲೂ ಅಧಿಕ ದಲಿತರ ಮನೆಗಳು ಬೆಂಕಿಗೆ ಆಹುತಿಯಾದುವು. ಅಪಾರ ನಾಶ-ನಷ್ಟವೂ ಸಂಭವಿಸಿತು. ಈ ಅಸಮಾಧಾನದ ಬೆನ್ನಿಗೇ ಇದೀಗ ಸುಪ್ರೀಮ್ ಕೋರ್ಟು ಎಸ್‍ಸಿ-ಎಸ್‍ಟಿ ಕಾಯ್ದೆಗೆ ಸಂಬಂಧಿಸಿ ನೀಡಿರುವ ತೀರ್ಪು ಬೆಂಕಿಗೆ ತುಪ್ಪವನ್ನು ಸುರಿದಂತಾಗಿದೆ. ಎಸ್‍ಸಿ-ಎಸ್‍ಟಿ ಕಾಯ್ದೆಯು ದುರ್ಬಳಕೆಯಾಗುತ್ತಿದೆ ಎಂದು ಕೇಂದ್ರ ಸರಕಾರವು ಸುಪ್ರೀಮ್ ಕೋರ್ಟಿನಲ್ಲಿ ವಾದಿಸಿತ್ತು. ಈ ವಾದದ ಆಧಾರದಲ್ಲಿಯೇ ಈ ಕಾಯ್ದೆಯನ್ನು ದುರ್ಬಲಗೊಳಿಸಬಹುದಾದ ರೀತಿಯ ತೀರ್ಪನ್ನು ಸುಪ್ರೀಮ್ ಕೋರ್ಟು ನೀಡಿತ್ತು. ‘ಈ ಕಾಯ್ದೆಯ ಅಡಿಯಲ್ಲಿ ದಲಿತರು ದೂರು ದಾಖಲಿಸಿದರೆ, ತಕ್ಷಣ ಎಫ್‍ಐಆರ್ ಮಾಡಬಾರದು ಮತ್ತು ಯಾರನ್ನೂ ಬಂಧಿಸಬಾರದು’ ಎಂದು ಸುಪ್ರೀಮ್ ಕೋರ್ಟು ತೀರ್ಪು ನೀಡಿದ್ದರೆ ಮತ್ತು ದೂರಿನ ಮೇಲೆ ತನಿಖೆ ನಡೆಸಿದ ವರದಿ ಬಂದ ಬಳಿಕವೇ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದರೆ ಅದಕ್ಕೆ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಕೇಂದ್ರ ವ್ಯಕ್ತಪಡಿಸಿದ ಅಭಿಪ್ರಾಯವೇ ಮೂಲ ಕಾರಣ. ಆದರೆ ತೀರ್ಪಿನ ವಿರುದ್ಧ ದಲಿತರು ಪ್ರತಿಭಟನೆಗಿಳಿದಾಗ ತೀರ್ಪು ಮರು ಪರಿಶೀಲಿಸುವಂತೆ ಕೇಂದ್ರ ಮನವಿ ಮಾಡಿಕೊಂಡಿತು. ಕೇಂದ್ರದ ಈ ನಡೆಗೆ ಸುಪ್ರೀಮ್ ಕೋರ್ಟು ಅಸಮಾಧಾನವನ್ನೂ ವ್ಯಕ್ತಪಡಿಸಿತು. ‘ನಿಮ್ಮ ಅಭಿಪ್ರಾಯದ ಆಧಾರದಲ್ಲಿಯೇ’ ತೀರ್ಪು ನೀಡಿರುವುದಾಗಿಯೂ ಅದು ಸಮರ್ಥಿಸಿಕೊಂಡಿತು. ಒಂದು ರೀತಿಯಲ್ಲಿ,
     ಕಳೆದ ನಾಲ್ಕು ವರ್ಷಗಳಿಂದ ದಲಿತರಲ್ಲಿ ಸಂಗ್ರವಾಗುತ್ತಿದ್ದ ಅಸಮಾಧಾನದ ಹೊಗೆಯು ಎಸ್‍ಸಿ-ಎಸ್‍ಟಿ ಕಾಯ್ದೆಯ ಹೆಸರಲ್ಲಿ ಆಕ್ರೋಶವಾಗಿ ಹೊರಹೊಮ್ಮಿದೆ ಎಂದೇ ಹೇಳಬೇಕಾಗುತ್ತದೆ. ದಲಿತರ ಈ ಪ್ರತಿಭಟನೆಯನ್ನು ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರಗಳು ನಿರ್ವಹಿಸಿದ ರೀತಿಯೂ ಇಲ್ಲಿ ಗಮನಾರ್ಹ. ಉತ್ತರ ಪ್ರದೇಶದ ಬುಂದೇಲ್‍ಖಂಡ್ ಪ್ರದೇಶವು ದಲಿತರ ಪ್ರಾಬಲ್ಯಕ್ಕಾಗಿಯೇ ಗುರುತಿಸಿಕೊಂಡಿದೆ. ಮಾಯಾವತಿಯವರ ಪಕ್ಷದ ಭದ್ರ ಕೋಟೆಯಾಗಿಯೂ ಇದನ್ನು ಪರಿಗಣಿಸಲಾಗುತ್ತದೆ. ಆದರೆ, 2017ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಎಲ್ಲ 19 ಕ್ಷೇತ್ರಗಳನ್ನೂ ಬಿಜೆಪಿಯೇ ಬುಟ್ಟಿಗೆ ಹಾಕಿಕೊಂಡಿತ್ತು. ಅಚ್ಚರಿಯ ವಿಷಯ ಏನೆಂದರೆ, ಎಸ್‍ಸಿ-ಎಸ್‍ಟಿ ತೀರ್ಪು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅತ್ಯಂತ ಹೆಚ್ಚು ನಾಶ-ನಷ್ಟ ಅನುಭವಿಸಿದ್ದು ಇದೇ ಬುಂದೇಲ್‍ಖಂಡ್. ದಲಿತರ ಮೇಲೆ ಯೋಗಿ ಸರಕಾರ ನಿರ್ದಯವಾಗಿ ನಡೆದುಕೊಂಡಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದರೇ ಅಸಮಾಧಾನ ಹೊರಹಾಕುವಷ್ಟು ಈ ದೌರ್ಜನ್ಯ ಚರ್ಚೆಗೆ ಒಳಗಾಗಿದೆ. ಕಳೆದ 4 ವರ್ಷಗಳಲ್ಲಿ ದಲಿತರಿಗೆ ಬಿಜೆಪಿ ಏನ್ನು ಮಾಡಿಲ್ಲ ಎಂದು ಬಿಜೆಪಿ ಸಂಸದ ಯಶ್ವಂತ್ ಸಿಂಗ್ ಬಹಿರಂಗ ಹೇಳಿಕೆ ನೀಡಿದ್ದು ಈ ದೌರ್ಜನ್ಯದ ಬಳಿಕ. ಇವರಲ್ಲದೇ ಸಾವಿತ್ರಿಭಾೈ ಫುಲೆ, ಚೋಟೇಲಾಲ್ ಕಾರ್‍ವಾನ್ ಮತ್ತು ಅಶೋಕ್ ಕುಮಾರ್ ದೋಹ್ರಿ ಎಂಬ ಮೂವರು ಬಿಜೆಪಿ ದಲಿತ ಸಂಸದರೂ ವಾರಗಳ ಹಿಂದೆ ಬಿಜೆಪಿಯನ್ನು ಟೀಕಿಸಿದ್ದಾರೆ. ಸಂವಿಧಾನದ ಕುರಿತು, ದಲಿತ ಸಬಲೀಕರಣದ ಕುರಿತು ಸ್ವಪಕ್ಷದ ನಿಲುವನ್ನು ಪ್ರಶ್ನಿಸಿದ್ದಾರೆ. ಹೀಗೆ ದಿನೇ ದಿನೇ ಒಳಗಿನಿಂದಲೇ ಏಳುತ್ತಿರುವ ಈ ಬಂಡಾಯದ ಧ್ವನಿಗೆ ಸ್ವತಃ ಬಿಜೆಪಿಯೂ ಭಯಪಡತೊಡಗಿದೆ. 50% ದಲಿತರು ವಾಸಿಸುತ್ತಿರುವ ಗ್ರಾಮಗಳಲ್ಲಿ ಬಿಜೆಪಿಯ ಹಾಲಿ ಸಂಸದ ಅಥವಾ ಸಚಿವರು ಒಂದು ದಿನ ವಾಸ್ತವ್ಯ ಹೂಡಬೇಕೆಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಆದೇಶಿಸಿರುವುದಕ್ಕೆ ಮುಖ್ಯ ಕಾರಣ ಈ ಭಯವೇ.     
        2014ರಲ್ಲಿ ಬಿಜೆಪಿಯ ಮುಂದೆ ಮನಮೋಹನ್ ಸಿಂಗ್ ಇದ್ದರು. ಭ್ರಷ್ಟಾಚಾರವೂ ಇತ್ತು. ಅಲ್ಲದೇ ಪಾಕಿಸ್ತಾನವೂ ಇತ್ತು. ಆದರೆ 2019ರಲ್ಲಿ ಬರೇ ಪಾಕಿಸ್ತಾನ ಮಾತ್ರವೇ ಉಳಿದಿರುತ್ತದೆ. ಅದೂ ಕೂಡ ನರೇಂದ್ರ ಮೋದಿಯವರಿಂದ ಏನೇನೂ ಮಾಡಲಾಗದ ಮತ್ತು ಮನಮೋಹನ್ ಸಿಂಗ್ ಅವಧಿಯಲ್ಲಿ ಹೇಗಿತ್ತೋ ಹಾಗೆಯೇ ಇರುವ ಪಾಕಿಸ್ತಾನ. ಆದ್ದರಿಂದ, 2019ರಲ್ಲಿ ಪಾಕಿಸ್ತಾನದ ಹೆಸರೆತ್ತುವುದಕ್ಕೆ ಬಿಜೆಪಿ ಹಿಂಜರಿಯುವ ಸಾಧ್ಯತೆಯೇ ಹೆಚ್ಚು. ಉಳಿದಂತೆ, ಬಿಜೆಪಿ ಇರುವ ಅವಕಾಶ ಏನೆಂದರೆ, ತನ್ನ ಸಾಧನೆಗಳನ್ನು ಹೇಳಿಕೊಂಡು ಜನರನ್ನು ಒಲಿಸುವುದು. ಇದಂತೂ ಬಿಜೆಪಿಯ ಪಾಲಿಗೆ ದೊಡ್ಡ ಸವಾಲು. ಸಾಧನೆಗಿಂತ ಸಮಸ್ಯೆಯನ್ನೇ ಅದು ಈ ದೇಶದ ಜನರಿಗೆ ಈವರೆಗೆ ನೀಡುತ್ತಾ ಬಂದಿದೆ. ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬಂದ ಮೋದಿ ಸರಕಾರದ ವರ್ಚಸ್ಸು, ಇನ್ನೊಂದು ವರ್ಷದಲ್ಲಿ ಹೆಚ್ಚಬಹುದಾದ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ. ಈಗಿನ ಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಮುಂದಿನ ಪ್ರತಿ ದಿನಗಳೂ ಬಿಜೆಪಿಯ ಜನಪ್ರಿಯತೆಯನ್ನು ಇನ್ನಷ್ಟು ಕಡಿಮೆಗೊಳಿಸುತ್ತಲೇ ಹೋಗುವ ಸಂಭವವೇ ಹೆಚ್ಚು. ಬಹುಶಃ, ಬಿಜೆಪಿ 2019ರ ಬದಲು 2018ರ ಕೊನೆಯಲ್ಲೇ ಲೋಕಸಭಾ ಚುನಾವಣೆ ಘೋಷಿಸಿದರೂ ಅಚ್ಚರಿಯಿಲ್ಲ.

ಬಿಜೆಪಿಯ ಸೋಲನ್ನು ಆಸಿಫಾ ಬರೆಯುವಳೇನೋ

 
 
    ಕಳೆದ ಫೆಬ್ರವರಿಯಲ್ಲಿ ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಹಿಂದೂ ಏಕ್ತಾ ಮಂಚ್ ನಡೆಸಿದ ರ್ಯಾಲಿಗೂ ಇದೇ ಎಪ್ರಿಲ್‍ನಲ್ಲಿ ಜಾರ್ಖಂಡ್‍ನ  ರಾಮ್‍ಘರ್ ನಲ್ಲಿ ಬಿಜೆಪಿ ನಡೆಸಿದ ರಾಲಿಗೂ (ಟೈಮ್ ಆಫ್ ಇಂಡಿಯಾ, ಎಪ್ರಿಲ್ 11) ಒಂದಕ್ಕಿಂತ ಹೆಚ್ಚು ಸಾಮ್ಯತೆಗಳಿವೆ. 8ರ ಹರೆಯದ  ಬಾಲೆಯನ್ನು ಹುರಿದು ಮುಕ್ಕಿದ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಕಥುವಾದಲ್ಲಿ ರಾಲಿ ನಡೆದಿದ್ದರೆ, ಗೋಮಾಂಸ ಸಾಗಿಸುತ್ತಿದ್ದಾರೆಂದು ಆರೋಪಿಸಿ ಅಲೀಮುದ್ದೀನ್ ಅನ್ಸಾರಿಯನ್ನು 2017 ಜೂನ್ 9 ರಂದು ಥಳಿಸಿ ಕೊಂದವರನ್ನು ಅಮಾಯಕರೆಂದು  ವಾದಿಸಿ ರಾಮ್‍ಘರ್ ನಲ್ಲಿ ರಾಲಿ ನಡೆಸಲಾಯಿತು.
ರಾಮ್ ಘರ್ ನ ರಾಲಿಗೆ ನೇತೃತ್ವ ನೀಡಿದ ಬಿಜೆಪಿಯ ಮಾಜಿ ಶಾಸಕ ಶಂಕರ್ ಚೌಧರಿಯವರು, ರಾಳಿಗಿಂತ ಮೊದಲು ದುರ್ಗಾ ದೇವಾಲಯದಲ್ಲಿ ತಲೆ ಬೋಳಿಸಿದರು. ಪೊಲೀಸ್ ಕಸ್ಟಡಿಯಲ್ಲಿ ಅಲೀಮುದ್ದೀನ್ ಸಾವಿಗೀಡಾಗಿದ್ದಾನೆಯೇ ಹೊರತು ಗುಂಪು ಆತನನ್ನು ಥಳಿಸಿಯೇ ಇಲ್ಲ ಎಂದು ವಾದಿಸಿದರು. ಬಿಜೆಪಿಯ ಜಿಲ್ಲಾ ಮಾಧ್ಯಮ ಮುಖ್ಯಸ್ಥ ನಿತ್ಯಾನಂದ್ ಮಹತೋ ಸೇರಿದಂತೆ 11 ಮಂದಿಗೆ ತ್ವರಿತಗತಿ ನ್ಯಾಯಾಲಯವು ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಅವರು  ಪ್ರಶ್ನಿಸಿದರು. ಇಡೀ ರಾಲಿಯಲ್ಲಿ ಭಾರತದ ರಾಷ್ಟ್ರ ಧ್ವಜ, ಭಾರತ್ ಮಾತಾಕಿ ಜೈ ಮತ್ತು ಕೇಸರಿ ಧ್ವಜಗಳು ರಾರಾಜಿಸಿದುವು. ಅಂದಹಾಗೆ,  ಕಥುವಾದಲ್ಲಿ ಹಿಂದೂ ಏಕ್ತಾ ಮಂಚ್ ಎಂಬ ವೇದಿಕೆಯಡಿ ನಡೆಸಲಾದ ರಾಲಿಯಲ್ಲಿ ಬಿಜೆಪಿಯ ಇಬ್ಬರು ಸಚಿವರು ಭಾಗವಹಿಸಿದರು. ¨ ಭಾರತದ ರಾಷ್ಟ್ರ ಧ್ವಜ, ಭಾರತ್ ಮಾತಾಕಿ ಜೈಗಳು ಈ ರಾಲಿಯಲ್ಲೂ ಕಾಣಿಸಿದುವು. ವಿಷಾದ ಏನೆಂದರೆ, ಎರಡೂ ರಾಲಿಗಳನ್ನು ಸಂಘಟಿಸಿದ್ದು ಬಿಜೆಪಿ ಮತ್ತು ಈ ರಾಲಿಗಳಲ್ಲಿ ಅಸಿಫಾ ಮತ್ತು ಅಲೀಮುದ್ದೀನ್ ಅನ್ಸಾರಿಯನ್ನು  ಹತ್ಯೆಗೈದವರನ್ನು ಬಿಡುಗಡೆಗೊಳಿಸಿ ಎಂದು ಆಗ್ರಹಿಸ ಲಾಯಿತು. ಏನಿದರ ಅರ್ಥ? ಬಿಜೆಪಿಯ ರಾಷ್ಟ್ರವಾದಿ ಸಿದ್ಧಾಂತವು ಮುಸ್ಲಿಮ್  ವಿರೋಧಿ ಆಧಾರದಡಿಯಲ್ಲಿ ರಚಿತವಾಗಿದೆಯೇ? ಮುಸ್ಲಿಮರ ವಿರುದ್ಧ ಮಾಡುವ ಯಾವುದೇ ಕ್ರೌರ್ಯವು ಸಹ್ಯ ಎಂದು ಅದು  ಪ್ರತಿಪಾದಿಸುತ್ತಿದೆಯೇ? ಅಲೀಮುದ್ದೀನ್ ಅನ್ಸಾರಿಯನ್ನು ನಡು ಬೀದಿಯಲ್ಲಿಟ್ಟು ಥಳಿಸಿದ ವಿಡಿಯೋ ಈ ದೇಶದ ಕೋಟ್ಯಾಂತರ ಮಂದಿಯ  ಮೊಬೈಲ್‍ನಲ್ಲಿ ಇವತ್ತಿಗೂ ಇದೆ. ಆತ ಗೋ ಮಾಂಸ ಸಾಗಿಸುತ್ತಿದ್ದನೋ ಇಲ್ಲವೋ ಅನ್ನುವುದು ನಂತರದ ವಿಚಾರ. ಬೇಡ, ಗೋ ಮಾಂಸ  ಸಾಗಿಸುತ್ತಿದ್ದನೆಂದೇ ಇಟ್ಟುಕೊಳ್ಳೋಣ. ಅದನ್ನು ಪ್ರಶ್ನಿಸುವ ವಿಧಾನ ಯಾವುದು? ಪ್ರಶ್ನಿಸಬೇಕಾದವರು ಯಾರು? ಖಾಸಗಿ ಗುಂಪಿಗೆ ವ್ಯಕ್ತಿಯ  ಮೇಲೆ ಕೈ ಮಾಡುವ ಅಧಿಕಾರವನ್ನು ಈ ದೇಶದ ಕಾನೂನ ನೀಡಿಯೇ ಇಲ್ಲ. ಆದರೆ ಬಿಜೆಪಿ ಪದೇ ಪದೇ ಈ ಬಹುಮುಖ್ಯ ಪ್ರಶ್ನೆಯಿಂದ  ತಪ್ಪಿಸಿಕೊಳ್ಳುತ್ತಿರುವುದು ಯಾಕಾಗಿ? ಸಂತ್ರಸ್ತರು ಮುಸ್ಲಿಮರಾದರೆ ಅದನ್ನು ಸಂಭ್ರಮಿಸುವ ಮತ್ತು ಆರೋಪಿಗಳ ಪರವೇ ರಾಲಿ ನಡೆಸುವ  ಹಂತಕ್ಕೆ ಬಿಜೆಪಿ ಮುಟ್ಟಿರುವುದು ಏತಕ್ಕೆ? ದೇಶವನ್ನು ಆಳುತ್ತಿರುವ ಪಕ್ಷವೊಂದು ಈ ರೀತಿಯಾಗಿ ವರ್ತಿಸುತ್ತಿರುವುದಕ್ಕೆ ರಾಜಕೀಯ  ಕಾರಣವೇ? 8ರ ಹರೆಯದ ಬಾಲೆಯನ್ನು ಹುರಿದು ಮುಕ್ಕಿದವರ ಪರ ರಾಲಿ ನಡೆಸಿದರೆ ಬಿಜೆಪಿಗೆ ಓಟು ಸಿಗುತ್ತದೆಯೇ? ಮುಸ್ಲಿಮರ  ವಿರುದ್ಧ ಹಲ್ಲೆ ಹತ್ಯೆ, ಅತ್ಯಾಚಾರ ನಡೆಸುವುದರಿಂದ ಬಿಜೆಪಿಯ ಓಟುಗಳ ಸಂಖ್ಯೆಯಲ್ಲಿ ಏರಿಕೆ ಉಂಟಾಗುತ್ತ ದೆಂದಾದರೆ, ಆ ಓಟು  ಹಾಕುವವರು ಯಾರು? ಅವರ ಮನಃಸ್ಥಿತಿ ಏನು?
ನಿಜ; ಅತ್ಯಾಚಾರ, ಹತ್ಯೆ, ಹಲ್ಲೆ ಇತ್ಯಾದಿಗಳು ಪ್ರಧಾನಿ ನರೇಂದ್ರ ಮೋದಿಯರ ಅಧಿಕಾರಾವಧಿಯಲ್ಲಿ ಆರಂಭವಾದದ್ದಲ್ಲ ಮತ್ತು ಅವರು  ಅಧಿಕಾರದಿಂದ ಕೆಳಗಿಳಿದ ಕೂಡಲೇ ಇವೆಲ್ಲ ದಿಢೀರಾಗಿ ಕೊನೆ ಗೊಳ್ಳುತ್ತದೆಂದು ಭಾವಿಸಬೇಕಾಗಿಯೂ ಇಲ್ಲ. ಆದರೆ, ಒ೦ದು ಸರಕಾರದ  ಯೋಗ್ಯತೆ ಗೊತ್ತಾಗುವುದು- ಈ ಎಲ್ಲ ಸಂದರ್ಭಗಳಲ್ಲಿ ಅದರ ಪ್ರತಿಕ್ರಿಯೆ ಏನಾಗಿರುತ್ತದೆ ಎಂಬುದರ ಆಧಾರದಲ್ಲಿ. ಅಸಿಫಾಳನ್ನು ಹುರಿದು  ಮುಕ್ಕಿದ್ದು ಜನವರಿಯಲ್ಲಿ. ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಹಿಂದೂ ಏಕ್ತಾ ಮಂಚ್ ರಾಲಿ ನಡೆಸಿದ್ದು ಫೆಬ್ರವರಿಯಲ್ಲಿ.  ಬಿಜೆಪಿಯ ಇಬ್ಬರು ಸಚಿವರು ಇದೇ ರಾಲಿಯಲ್ಲಿ ಭಾಗವಹಿಸಿದ್ದರು. ಒಂದು ವೇಳೆ, ಬಿಜೆಪಿಗೆ ಈ ಬಗ್ಗೆ ಅತೃಪ್ತಿ ಇದ್ದಿದ್ದೇ ಆಗಿದ್ದರೆ, ತಕ್ಷಣಕ್ಕೆ  ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರಿಗೆ ಸೂಚನೆ ಕೊಡಬಹುದಿತ್ತು. ದುರಂತ  ಏನೆಂದರೆ, ಈ ಘಟನೆ ನಡೆದು ಎರಡು ತಿಂಗಳವರೆಗೆ ಬಿಜೆಪಿ ಮೌನ ಪಾಲಿಸಿತು. ಯಾವಾಗ ದೇಶಾದ್ಯಂತ ಈ ಬಗ್ಗೆ ಆಕ್ರೋಶ  ವ್ಯಕ್ತವಾಯಿತೋ ಆ ಬಳಿಕ ಅನಿವಾರ್ಯವೆಂಬಂತೆ ಆ ಸಚಿವರ ರಾಜಿನಾಮೆ ಪಡಕೊಳ್ಳಲು ಪಕ್ಷ ತೀರ್ಮಾನಿಸಿತು. ಇದರರ್ಥವೇನು?  ಒಂದು ಜವಾಬ್ದಾರಿಯುತ ಪಕ್ಷ ನಡಕೊಳ್ಳಬೇಕಾದ ರೀತಿಯೇ ಇದು? ಫೆಬ್ರವರಿಯಿಂದ ಎಪ್ರಿಲ್ ವರೆಗಿನ ಈ ಎರಡು ತಿಂಗಳ ಅವಧಿಯಲ್ಲಿ  ಬಿಜೆಪಿ ಯಾಕೆ ಈ ಇಬ್ಬರು ಸಚಿವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ? ಒಂದುವೇಳೆ, ಬಾಲೆಯನ್ನು ಹತೈಗೈದ ಕೃತ್ಯಕ್ಕೆ ರಾಷ್ಟ್ರೀಯ ವಾಗಿ ಪ್ರತಿಭಟನೆ ವ್ಯಕ್ತವಾಗದೆ ಇರುತ್ತಿದ್ದರೆ ಇನ್ನೂ ಆ ಸಚಿವರಿಬ್ಬರನ್ನು ಬಿಜೆಪಿ ಅಧಿಕಾರದಲ್ಲಿ ಮುಂದುವರಿಸುತ್ತಿತ್ತಲ್ಲವೇ?
     ಜಮ್ಮುವಿನ ಕಥುವಾ ಮತ್ತು ಜಾರ್ಖಂಡ್‍ನ ರಾಮ್ ಘರ್ ನಲ್ಲಿ ನಡೆದ ರಾಲಿಗಳು ಈ ದೇಶಕ್ಕೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ.  ಅದು ಏನೆಂದರೆ, ಸಂತ್ರಸ್ತರು ಮುಸ್ಲಿಮರಾಗಿದ್ದರೆ ಮತ್ತು ಆರೋಪಿಗಳು ಮುಸ್ಲಿಮೇತರರಾಗಿದ್ದರೆ ಬಿಜೆಪಿ ಆರೋಪಿಗಳ ಪರ ನಿಲ್ಲುತ್ತದೆ.  ಆರೋಪಿಗಳನ್ನು ರಕ್ಷಿಸುವುದಕ್ಕಾಗಿ ಅದರ ಸಚಿವರೇ ರಾಲಿ ನಡೆಸುತ್ತಾರೆ. ಪಕ್ಷದ ನಾಯಕರು ತಲೆ ಬೋಳಿಸುತ್ತಾರೆ. ಆಸಿಫಾ ಮತ್ತು ಅಲೀಮುದ್ದೀನ್ ಅನ್ಸಾರಿ ಇಬ್ಬರೂ ಇದಕ್ಕೆ ಅತ್ಯಂತ ತಾಜಾ ಉದಾಹರಣೆಗಳು. ಬಿಜೆಪಿಗೂ ಬಿಜೆಪಿಯೇತರ ಪಕ್ಷಗಳಿಗೂ ನಡುವೆ ಇರುವ ದೊಡ್ಡ  ವ್ಯತ್ಯಾಸ ಇದು. ದೇಶಾದ್ಯಂತ ಇವತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದರೆ ಅದಕ್ಕೆ ಅದರ ಈ ವಿಭಜನವಾದಿ ರಾಜಕೀಯ  ಸಿದ್ಧಾಂತವೇ ಪ್ರಮುಖ ಕಾರಣ. ಒಂದು ರಾಷ್ಟ್ರೀಯ ಪಕ್ಷವಾಗಿ ಇರಬೇಕಾದ ವಿಶಾಲ ಧೋರಣೆ ಮತ್ತು ಸಮತಾಭಾವ ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ. ಅದು ಪ್ರತಿಪಾದಿಸುವ ಭಾರತ ತೀರಾ ಚಿಕ್ಕದು. ಆ ಭಾರತದಲ್ಲಿ ಎಲ್ಲರೂ ಸಮಾನರಲ್ಲ. ಈ ಭಾರತದಲ್ಲಿ ಅಪರಾಧವೊಂದು ಅಪರಾಧವಾಗಿ ಪರಿಗಣಿತವಾಗುವುದಕ್ಕೂ ಕೆಲವಾರು ಮಿತಿಗಳಿವೆ. ಅತ್ಯಾಚಾರವನ್ನು ಶಿಕ್ಷಾರ್ಹ ಕ್ರೌರ್ಯವೆಂದು ಪರಿಗಣಿಸಬೇಕೋ  ಬೇಡವೋ ಅನ್ನುವುದು ಅತ್ಯಾಚಾರಕ್ಕೊಳಗಾದವರ ಧರ್ಮ ಮತ್ತು  ಅತ್ಯಾಚಾರಗೈದವರ ಧರ್ಮವನ್ನು ನೋಡಿ ತೀರ್ಮಾನಿಸಲಾಗುತ್ತದೆ. ಸದ್ಯದ ಬಿಜೆಪಿ ಇದು. ಕಥುವಾದ ಕುರಿತಂತೆ ಅದರ ವರ್ತನೆ ಇದಕ್ಕೆ  ಪುರಾವೆಯಾಗಿ ದೇಶದ ಮುಂದಿದೆ. ರಾಮ್ ಘರ್ ನಲ್ಲಿ ನಡೆದ ರಾಲಿಯೂ ಇದರ ಬೆನ್ನಿಗಿದೆ. ಬಹುಶಃ, 2019ರ ಲೋಕಸಭಾ  ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಆಸಿಫಾ ಬರೆಯುವಳೇನೋ?

ಮಕ್ಕಳು ನಾಚಿಕೊಳ್ಳಬೇಕಾದ ವಿಧೇಯಕ

   

    ಇಡೀ ಜಗತ್ತಿನಲ್ಲಿ ಪತ್ರಕರ್ತರ ಕ್ಯಾಮರಾದ ಕಣ್ಣಿಗೆ ಮತ್ತು ಬರಹಗಾರರ ಲೇಖನಿಯ ಮೊನೆಗೆ ಸಿಗದ ಎರಡು
ಗುಂಪುಗಳೆಂದರೆ, ಹಿರಿಯರು ಮತ್ತು ಮಕ್ಕಳು. ಇದಕ್ಕೆ ಕಾರಣವೂ ಇದೆ. ಮಕ್ಕಳು ಮಾಧ್ಯಮಗಳ ಪಾಲಿಗೆ ಸಂಪನ್ಮೂಲಗಳಲ್ಲ. ಅವರು ಪತ್ರಿಕೆಗಳನ್ನು ಓದುವ ಸಾಧ್ಯತೆ ಕಡಿಮೆ. ಟಿ.ವಿ. ಚಾನೆಲ್‍ಗಳಲ್ಲಿ ಅವರ ಆಯ್ಕೆ ಕಾರ್ಟೂನ್ ಚಿತ್ರಗಳನ್ನು ಪ್ರಸಾರ ಮಾಡುವ ಚಾನೆಲ್‍ಗಳೇ ಹೊರತು ನ್ಯೂಸ್ ಅಥವಾ ಮನರಂಜನೆಯ ಚಾನೆಲ್‍ಗಳಲ್ಲ. ಸ್ವತಂತ್ರ ನಿರ್ಧಾರವನ್ನು ತಳೆಯಬಲ್ಲ ಸಾಮಥ್ರ್ಯ ಮಕ್ಕಳಿಗೆ ಇಲ್ಲದೇ ಇರುವುದರಿಂದ, ಅವರನ್ನು ಕೇಂದ್ರೀಕರಿಸಿ ಮಾಧ್ಯಮಗಳು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವೂ ಇರುವುದಿಲ್ಲ. ಆದ್ದರಿಂದಲೇ ಟಿ.ವಿ. ಚಾನೆಲ್‍ಗಳಲ್ಲಿ ಮತ್ತು ವಾರ್ತಾ ಮಾಧ್ಯಮಗಳಲ್ಲಿ ಮಕ್ಕಳು
ಸುದ್ದಿಯ ಕೇಂದ್ರವಾಗದೇ ಇರುವುದು. ಉತ್ತರ ಪ್ರದೇಶದ ಘೋರಕ್‍ಪುರ್ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸಾವಿನಂಥ ಘಟನೆಗಳು ಮತ್ತು ಅತ್ಯಾಚಾರದಂಥ ಕ್ರೌರ್ಯಗಳು ನಡೆದಾಗ ಮಾತ್ರ ಮಕ್ಕಳು ಮಾಧ್ಯಮಗಳ ಕಣ್ಮಣಿ ಆಗಿಬಿಡುತ್ತಾರೆ. ಆಗ ಒಂದೆರಡು ದಿನಗಳ ಕಾಲ ಮಕ್ಕಳು ಮಾಧ್ಯಮಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. ಇದರಾಚೆಗೆ ಮಾಧ್ಯಮ ಜಗತ್ತಿಗೂ ಮಕ್ಕಳಿಗೂ ನಡುವೆ ಸಂಬಂಧ ಅಷ್ಟಕ್ಕಷ್ಟೇ. ಅಂದಹಾಗೆ, ಇಂಥ ಇನ್ನೊಂದು ಗುಂಪೂ ಇದೆ. ಅದು ದುಡಿಯಲು ಸಾಧ್ಯವಿಲ್ಲದ ಮತ್ತು ವೃದ್ಧಾಪ್ಯ ಸಹಜ ತೊಂದರೆಯನ್ನು ಅನುಭವಿಸುತ್ತಿರುವ ಹಿರಿಯರದ್ದು. ಅವರೂ ಕೂಡಾ ಮಾಧ್ಯಮಗಳ ಕಣ್ಣಿಗೆ ಗೋಚರಿಸುವುದು ಬಹಳ ಕಡಿಮೆ. ಇದಕ್ಕೆ ಕಾರಣ ಏನೆಂದರೆ, ಅವರಲ್ಲಿ ಮಾತನಾಡುವ ಶಕ್ತಿ ಕಡಿಮೆಯಾಗಿರುತ್ತದೆ. ಮಧ್ಯ ವಯಸ್ಕರಂತೆ ಪ್ರತಿಭಟಿಸುವ ಮತ್ತು ದೊಡ್ಡ ದನಿಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸುವ ಶಕ್ತಿ ಅವರಲ್ಲಿ ಕುಗ್ಗಿರುತ್ತದೆ. ಸಾಮಾನ್ಯವಾಗಿ, ಮಾಧ್ಯಮಗಳ ಶಕ್ತಿ ಕೇಂದ್ರ ಇರುವುದು ಪಟ್ಟಣಗಳಲ್ಲಿ. ಹಿರಿಯರಾಗಲಿ ಕಿರಿಯರಾಗಲಿ ಪಟ್ಟಣ ಕೇಂದ್ರಿತವಾಗಿ ಸಭೆಗಳನ್ನು ನಡೆಸದ ಹೊರತು ಮಾಧ್ಯಮಗಳ ಗಮನ ಸೆಳೆಯುವುದಕ್ಕೆ ಅವಕಾಶಗಳು ಕಡಿಮೆ. ಹಿರಿಯರ ಸಮಸ್ಯೆ ಏನೆಂದರೆ, ಪಟ್ಟಣಗಳಿಗೆ ಬಂದು ಹೋಗುವ ದೈಹಿಕ ಸಾಮಥ್ರ್ಯ ಕುಗ್ಗಿರುತ್ತದೆ. ಒಂದು ವೇಳೆ, ಅವರು ಪಟ್ಟಣಕ್ಕೆ ಬಂದರೂ ಮಾತಾಡುವುದಾದರೂ ಯಾವ ಧೈರ್ಯದಿಂದ? ಮುಖ್ಯವಾಗಿ ವೃದ್ಧಾಪ್ಯಕ್ಕೆ ಕಾಲಿಟ್ಟಿರುವ ಮತ್ತು ಮನೆಯಲ್ಲಿ ಮಕ್ಕಳ ಸಹಾಯದ ಹೊರತು ಜೀವನ ಬಂಡಿ ಸಾಗಿಸಲು ಸಾಧ್ಯವಿಲ್ಲದ ಹಿರಿಯರ ಸಮಸ್ಯೆಗಳೇನಿದ್ದರೂ ಮನೆಯದ್ದೇ ಆಗಿರುತ್ತದೆ. ಅವರ ಆರೈಕೆಯ ಬಗ್ಗೆ, ಮನೆ ಮಂದಿಯ ಶುಶ್ರೂಷೆಯ ಕುರಿತು, ಕಾಡುತ್ತಿರುವ ಅನಾರೋಗ್ಯದ ಕುರಿತು.. ಹೀಗೆ ದೂರುಗಳೇನಿದ್ದರೂ ತನ್ನ ಮತ್ತು ತನ್ನ ಮನೆಯ ಸುತ್ತವೇ ಕೇಂದ್ರೀಕೃತವಾಗಿರುವ ಸಾಧ್ಯತೆಗಳೇ ಅಧಿಕವಿರುವುದರಿಂದ ಇವುಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಕ್ಕೆ ಅನೇಕಾರು ಅಡೆತಡೆಗಳು ಖಂಡಿತ ಎದುರಾಗುತ್ತವೆ. ತನ್ನ ಮನೆಯವರು ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರಿಕೊಳ್ಳಲು ವೃದ್ಧಾಪ್ಯದಲ್ಲಿರುವ ಯಾವ ಹಿರಿಯರೂ ಧೈರ್ಯ ತೋರುವ ಸಾಧ್ಯತೆ ಇಲ್ಲ. ಯಾಕೆಂದರೆ, ಹಾಗೆ ದೂರಿಕೊಂಡ ಬಳಿಕವೂ ಅದೇ ಮನೆಗೆ ಆ ವೃದ್ಧರು ಹೋಗಬೇಕಾಗುತ್ತದೆ. ಆ ಮನೆಯವರೇ ಆ ಬಳಿಕವೂ ಉಪಚರಿಸಬೇಕಾಗುತ್ತದೆ. ಸ್ವತಃ ಏನೇನೂ ಮಾಡಲಾಗದ ಮತ್ತು ದೈಹಿಕ ಸಾಮಥ್ರ್ಯ ಕಳಕೊಂಡಿರುವ ಹಿರಿಯರಿಂದ ಇಂಥದ್ದೊಂದು ಧೈರ್ಯದ ನಡೆಯನ್ನು ನಿರೀಕ್ಷಿಸಲು ಖಂಡಿತ ಸಾಧ್ಯವಿಲ್ಲ. ಆದ್ದರಿಂದಲೇ, ವೃದ್ಧರ ಪ್ರತಿಭಟನೆ ಎಂಬುದು ಶೂನ್ಯ ಅನ್ನುವಷ್ಟು ಅಪರೂಪವಾಗಿರುವುದು. ಹಾಗಂತ, ಈ ದೇಶದಲ್ಲಿ ವೃದ್ಧಾಪ್ಯದಲ್ಲಿರುವವರೆಲ್ಲ ಸುಖವಾಗಿ ಬದುಕುತ್ತಿದ್ದಾರೆ ಎಂದಲ್ಲ. ಈ ಹಿಂದಿನ ಹಲವು ಸಮೀಕ್ಷೆಗಳು ಅವರ ನರಕಮಯ ಬದುಕನ್ನು ದೇಶದ ಮುಂದಿಟ್ಟಿವೆ. ಶೇ. 70ಕ್ಕಿಂತ ಹೆಚ್ಚಿನ ಹಿರಿಯರು ಮನೆಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಅನ್ನುವುದನ್ನು ಒಂದಕ್ಕಿಂತ ಹೆಚ್ಚಿನ ಸಮೀಕ್ಷೆಗಳು ದೃಢಪಡಿಸಿವೆ. ಆದ್ದರಿಂದಲೇ, ಕೇಂದ್ರ ಸರಕಾರ ತರಲುದ್ದೇಶಿಸಿರುವ, ‘ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಮತ್ತು ಶ್ರೇಯೋಭಿವೃದ್ಧಿ 2018 ತಿದ್ದುಪಡಿ ವಿಧೇಯಕ’ ಎಂಬ ಹೊಸ ಕಾಯಿದೆಯು ಸ್ವಾಗತಾರ್ಹವೆನಿಸುವುದು. ಇದರ ಪ್ರಕಾರ, ವೃದ್ಧಾಪ್ಯದಲ್ಲಿರುವ ಪೋಷಕರನ್ನು ಮನೆಯಿಂದ ಹೊರದಬ್ಬುವ ಮತ್ತು ಅವರಿಗೆ ಕಿರುಕುಳ ನೀಡುವ ಮಕ್ಕಳಿಗೆ ಈ ಹಿಂದೆ ವಿಧಿಸಲಾಗುತ್ತಿದ್ದ ಶಿಕ್ಷೆಯ ಪ್ರಮಾಣವನ್ನು ದುಪ್ಪಟ್ಟುಗೊಳಿಸಲಾಗಿದೆ. ಈ ಹಿಂದೆ ಇಂಥ ಮಕ್ಕಳಿಗೆ ವಿಧಿಸಬಹುದಾಗಿದ್ದ ಜೈಲುಶಿಕ್ಷೆ 3 ತಿಂಗಳ ಅವಧಿಯದ್ದು. ಈಗ ಅದನ್ನು 6 ತಿಂಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಅಲ್ಲದೇ, ಮಲತಾಯಿ, ಮಲತಂದೆ, ಮಕ್ಕಳು, ಮೊಮ್ಮಕ್ಕಳು, ದತ್ತು ಮಕ್ಕಳು, ಅಳಿಯ, ಸೊಸೆ, ಅಪ್ರಾಪ್ತ ವಯಸ್ಕರು.. ಮುಂತಾದ ಪದಗಳ ವ್ಯಾಖ್ಯಾನವನ್ನು ವಿಸ್ತರಿಸಿ ನೋಡುವ ವಿಚಾರವೂ ಹೊಸ ವಿಧೇಯಕದಲ್ಲಿದೆ. ಈ ಹಿಂದಿನ ಕಾಯ್ದೆಯಲ್ಲಿ ನಿರ್ವಹಣೆ ಎಂಬ ಪದದ ವ್ಯಾಖ್ಯಾನವು ತೀರಾ ಸೀಮಿತವಾಗಿತ್ತು. ಆದ್ದರಿಂದ, ಈ ಪದದ ಅರ್ಥ ವ್ಯಾಖ್ಯಾನವನ್ನು, ಆಹಾರ, ಬಟ್ಟೆ, ವಸತಿ, ಆರೋಗ್ಯ, ಆರೈಕೆ, ಭದ್ರತೆಯ ಅಂಶಗಳ ಆಚೆಗೂ ವಿಸ್ತರಿಸುವ ಇರಾದೆಯನ್ನು ಕೇಂದ್ರ ಸರಕಾರ ಹೊಂದಿದೆ. ಈ ಹಿಂದಿನ ಕಾಯ್ದೆಯಲ್ಲಿರುವ ಇನ್ನೊಂದು ಪ್ರಮುಖ ಅಂಶವೆಂದರೆ, ತಂದೆ-ತಾಯಿಗೆ ನೀಡಬೇಕಿರುವ ಮಾಸಿಕ ನಿರ್ವಹಣಾ ವೆಚ್ಚದ ಗರಿಷ್ಠ ಮಿತಿ 10 ಸಾವಿರ ರೂಪಾಯಿಗಿಂತ ಹೆಚ್ಚಿರಬಾರದು ಅನ್ನುವುದು. ಆದರೆ 207ರ ಈ ಕಾಯ್ದೆಯ ಮಾನದಂಡವು ಈ 2018ರ ವೇಳೆಗೆ ಅಪ್ರಸಕ್ತವಾಗಿ ಕಾಣುತ್ತಿರುವುದರಿಂದ ಮಕ್ಕಳ ದುಡಿಮೆ ಮತ್ತು ವರಮಾನದ ಆಧಾರದ ಮೇಲೆ ಇದನ್ನು ನಿರ್ಧರಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದೆ.
     ನಿಜವಾಗಿ, ವೃದ್ಧ ಪೋಷಕರ ಪೋಷಣೆಗೆ ವಿಧೇಯಕವನ್ನು ಹೊರಡಿಸಬೇಕಾದ ಸನ್ನಿವೇಶ ಈ ದೇಶದಲ್ಲಿದೆ ಅನ್ನುವುದೇ ಅತ್ಯಂತ ವಿಷಾದಕರ ಸಂಗತಿ. ಇವತ್ತು ವೃದ್ಧಾಪ್ಯಕ್ಕೆ ತಲುಪಿರುವ ಹೆತ್ತವರು ಒಂದು ಕಾಲದಲ್ಲಿ ಮಕ್ಕಳಾಗಿ ಬದುಕಿದವರು. ಯೌವನ, ಮಧ್ಯ ವಯಸ್ಕತನ ಮತ್ತು ಹಿರಿತನವನ್ನು ದಾಟಿ ಈ ಹಂತಕ್ಕೆ ಅವರು ಮುಟ್ಟಿರುತ್ತಾರೆ. ಇವತ್ತು ಈ ವೃದ್ಧ ಹೆತ್ತವರನ್ನು ಆರೈಕೆ ಮಾಡಲು ಯಾವ ಮಕ್ಕಳು ಹಿಂಜರಿಯುತ್ತಿದ್ದಾರೋ ಅವರೂ ಮುಂದೊಂದು ದಿನ ಅದೇ ವೃದ್ಧಾಪಕ್ಕೆ ತಲುಪುವವರೇ ಆಗಿರುತ್ತಾರೆ. ಈ ಮಕ್ಕಳ ಬಾಲ್ಯವನ್ನು ಸಂತಸಮಯಗೊಳಿಸಿದವರು ಈಗ ವೃದ್ಧಾಪ್ಯಕ್ಕೆ ತಲುಪಿರುವ ಹೆತ್ತವರೇ. ಇವರಿಗೆ ಶಿಕ್ಪಣ ನೀಡಿದವರು, ಹಗಲೂ ರಾತ್ರಿ ಇವರ ಶ್ರೇಯೋಭಿವೃದ್ಧಿಗಾಗಿ ಪರಿತಪಿಸಿದವರು, ಮಾರ್ಗದರ್ಶನ ಮಾಡಿ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದವರೂ ಇವರೇ. ಈ ಮಕ್ಕಳು ಇವತ್ತು ಉತ್ತಮ ಉದ್ಯೋಗದಲ್ಲಿರುವುದಾದರೆ ಮತ್ತು ದೊಡ್ಡ ಮೊತ್ತದ ಸಂಪಾದನೆಯಲ್ಲಿ ತೊಡಗಿರುವವರಾದರೆ ಅದಕ್ಕೆ ಬಹುಮುಖ್ಯ ಕಾರಣ ಈ ಹೆತ್ತವರೇ. ಇವತ್ತು ತಮ್ಮ ಕಾಲ ಮೇಲೆ ನಿಂತಿರುವ ಪ್ರತಿ ಮಗನೂ/ಮಗಳೂ ತಾವು ದಾಟಿ ಬಂದ ಆ ಬಾಲ್ಯವನ್ನು ಮತ್ತು ಆ ಬಳಿಕದ ಬದುಕನ್ನು ಒಮ್ಮೆ ಅವಲೋಕನಕ್ಕೆ ಒಳಪಡಿಸಿದರೆ ತಾವೆಷ್ಟು ತಮ್ಮ ಹೆತ್ತವರಿಗೆ ಋಣಿಯಾಗಿರಬೇಕೆಂಬುದು ಖಂಡಿತ ಮನವರಿಕೆಯಾಗುವುದು. ಮಾತ್ರವಲ್ಲ, ಹೀಗೆ ಆತ್ಮಾವಲೋಕನ ನಡೆಸಿದ ಯಾವ ಮಗುವೂ ತನ್ನ ಹೆತ್ತವರನ್ನು ನಿರ್ಲಕ್ಷಿಸಲು ಸಾಧ್ಯವೂ ಇಲ್ಲ. ಆದರೂ ವೃದ್ಧಾಪ್ಯಕ್ಕೆ ತಲುಪಿರುವ ಹೆಚ್ಚಿನ ಪೋಷಕರು ಇವತ್ತು ದುಃಖದಲ್ಲಿದ್ದಾರೆ. ಮಕ್ಕಳ ಮೇಲೆ ಅವರಲ್ಲಿ ಪುಟ್ಟಗಟ್ಟಲೆ ದೂರುಗಳಿವೆ. ಅವರ ಪರವಾಗಿ ಸರಕಾರವೇ ವಿಧೇಯಕ ತರಬೇಕಾದಷ್ಟು ಈ ದೂರುಗಳು ಗಂಭೀರವೂ ಆಗಿವೆ. ಪವಿತ್ರ ಕುರ್‍ಆನ್ ಅಂತೂ ಹೆತ್ತವರ ಪೋಷಣೆಗೆ ಎಷ್ಟು ಮಹತ್ವ ಕೊಟ್ಟಿದೆಯೆಂದರೆ, ಅವರ ಬಗ್ಗೆ ‘ಛೆ’ ಎಂಬ ಪದವನ್ನೂ ಮಕ್ಕಳು ಬಳಸಬಾರದು ಎಂದು ತಾಕೀತು ಮಾಡಿದೆ. ಹೆತ್ತವರ ಕೋಪಕ್ಕೆ ತುತ್ತಾದ ಮಕ್ಕಳು ನರಕಕ್ಕೆ ಮಾತ್ರ ಅರ್ಹರು ಎಂದೂ ಎಚ್ಚರಿಸಿದೆ. ಹೆತ್ತವರನ್ನು ನೋಯಿಸುವ ಮಕ್ಕಳ ಸಂಖ್ಯೆ ಶೂನ್ಯವಾಗಲಿ ಎಂದೇ ಪ್ರಾರ್ಥಿಸೋಣ.


ಅತ್ಯಾಚಾರಿಗೆ ಮರಣದಂಡನೆ- ಎಲ್ಲಿಯವರೆಗೆ?

     
 
  ದೇಶದಲ್ಲಿ ಅತ್ಯಾಚಾರದ ಸುತ್ತ ಗಂಭೀರ ಚರ್ಚೆಯೊಂದರ ಹುಟ್ಟಿಗೆ ಜಮ್ಮುವಿನ ಕಥುವಾದ ಬಾಲೆ ಮರು ಚಾಲನೆಯನ್ನು ನೀಡಿದ್ದಾಳೆ.  2013ರಲ್ಲಿ ನಿರ್ಭಯ ಈ ಚರ್ಚೆಗೆ ಆರಂಭವನ್ನು ಕೊಟ್ಟಿದ್ದಳು. ನಿರ್ಭಯ ಮತ್ತು ಕಥುವಾದ ಬಾಲೆಯ ನಡುವಿನ ವ್ಯತ್ಯಾಸ ಏನೆಂದರೆ,  ಪ್ರಾಯ. ನಿರ್ಭಯ ವಯಸ್ಕರ ಪಟ್ಟಿಯಲ್ಲಿ ಗುರುತಿಸಿಕೊಂಡರೆ, ಕಥುವಾದ ಬಾಲೆ ಅಪ್ರಾಪ್ತರ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತಾಳೆ. ನಿಜವಾಗಿ,  ನಿರ್ಭಯ ಪ್ರಕರಣದ ಬಳಿಕ ಜನರು ದೊಡ್ಡ ಮಟ್ಟದಲ್ಲಿ ಬೀದಿಗಿಳಿದ ಪ್ರಕರಣ ಕಥುವಾ. ನಿರ್ಭಯ ಪ್ರಕರಣವು ಈ ದೇಶದ ವ್ಯವಸ್ಥೆಯ  ಮೇಲೆ ಎಷ್ಟು ದೊಡ್ಡ ಒತ್ತಡವನ್ನು ಹಾಕಿತೆಂದರೆ, ಭಾರತೀಯ ಅಪರಾಧ ದಂಡಸಂಹಿತೆಗೆ ತಿದ್ದುಪಡಿ ತರಬೇಕಾದಷ್ಟು. ಹೆಣ್ಣನ್ನು ಅತ್ಯಾಚಾರ  ಮಾಡಿ ಕೊಲೆಗೈಯುವವರಿಗೆ ಈ ತಿದ್ದುಪಡಿ ಮೂಲಕ ಮರಣದಂಡನೆ ಶಿಕ್ಷೆಯನ್ನು ಘೋಷಿಸಲಾಯಿತು. 2013ರಲ್ಲಿ ಆದ ಈ ಕಾನೂನಿಗೆ  ಬಹುದೊಡ್ಡ ಬೆಂಬಲ ವ್ಯಕ್ತವಾಯಿತು. ಆಗಿನ ಮನ್‍ಮೋಹನ್ ಸಿಂಗ್ ಸರಕಾರವು ನಿರ್ಭಯ ನಿಧಿಯನ್ನು ಸ್ಥಾಪಿಸಿತು. ಮಹಿಳೆಯರೇ ನಿ ರ್ವಹಿಸುವ ಪೋಸ್ಟ್ ಆಫೀಸ್, ರಿಕ್ಷಾ, ಬಸ್ಸ್‍ಗಳೂ ಸುದ್ದಿಗೀಡಾದುವು. ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ತುಂಬುವ ದೊಡ್ಡ ಮಟ್ಟದ  ಪ್ರಯತ್ನಗಳೂ ನಡೆದುವು. ಆದರೂ, 2013ರ ಬಳಿಕದ ಈ 2018ರ ವರೆಗಿನ ಸ್ಥಿತಿಯನ್ನು ಅವಲೋಕಿಸಿದರೆ ಅತ್ಯಾಚಾರ ಮತ್ತು ಹತ್ಯೆ  ಘಟನೆಗಳಲ್ಲಿ ಇಳಿಕೆಯೇನೂ ಕಂಡು ಬಂದಿಲ್ಲ ಅನ್ನುವುದು ಗೊತ್ತಾಗುತ್ತದೆ. ಕಳೆದ ನಾಲ್ಕು ವರ್ಷಗಳ ಅಂಕಿ ಅಂಶಗಳು ‘2013ರ  ಮರಣದಂಡನೆ ಕಾನೂನು ಮಹಿಳಾ ಪೀಡಕರನ್ನು ಬೆದರಿಸಿಲ್ಲ’ ಅನ್ನುವುದನ್ನು ಬಾರಿ ಬಾರಿಗೂ ನೆನಪಿಸುತ್ತಿದೆ. ಆ ಕಾನೂನಿನ ಪ್ರಕಾರ,  ಅತ್ಯಾಚಾರಗೈದು ಕೊಲೆಗೈದವರಿಗೆ ಮರಣದಂಡನೆಯಾದರೆ, ಅತ್ಯಾಚಾರಗೈದವರಿಗೆ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ. ಆದರೂ ಮಹಿಳಾ  ಪೀಡನೆಯಲ್ಲಿ ಇಳಿಕೆಯಾಗದೇ ಇರುವುದು ಏನನ್ನು ಸೂಚಿಸುತ್ತದೆ? ಹೀಗಿರುತ್ತಾ, ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ  ಸುಗ್ರೀವಾಜ್ಞೆಯಿಂದ ಯಾವ ಬದಲಾವಣೆ ಸಾಧ್ಯವಾಗಬಹುದು? ಇಲ್ಲೋಂದು ಗಂಭೀರ ಅಂಶವಿದೆ. ಅತ್ಯಾಚಾರಿಗಳಿಗೆ ಕಾನೂನು ಪ್ರಕಾರ  ಶಿಕ್ಷೆಯಾಗಬೇಕೆಂದರೆ, ಆ ಶಿಕ್ಷೆಗಿಂತ ಮೊದಲಿನ ಪ್ರಕ್ರಿಯೆಗಳು ಸರಿಯಾಗಿ ನಡೆದಿರಬೇಕಾಗುತ್ತದೆ. ಪ್ರಕರಣವನ್ನು ದಾಖಲಿಸುವ ಪೋಲಿಸರಿಂದ  ಹಿಡಿದು ಫಾರೆನ್ಸಿಕ್ ವರದಿಯ ವರೆಗೆ, ಎಫ್‍ಐಆರ್ ತಯಾರಿಸುವಲ್ಲಿಂದ ಮೊದಲ್ಗೊಂಡು ನ್ಯಾಯಾಲಯದ ವಿಚಾರಣೆಯವರೆಗೆ ಪ್ರತಿ ¸ ಸಂದರ್ಭವೂ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ.
      ಅತ್ಯಾಚಾರವೆಂಬುದು ಈ ದೇಶದಲ್ಲಿ ಈಗಲೂ ಮುಚ್ಚಿಡಬೇಕಾದ ಒಂದು ¸ ಸಂಗತಿಯಾಗಿಯೇ ಗುರುತಿಸಿಕೊಂಡಿದೆ. ಯಾಕೆ ಮುಚ್ಚಿಡುವುದೆಂದರೆ, ಸಂತ್ರಸ್ತೆಯ ಮುಂದಿನ ಬದುಕು ಸುರಕ್ಷಿತವಾಗಿರುವುದಕ್ಕಾಗಿ. ಒಂದು  ವೇಳೆ ಬಹಿರಂಗವಾದರೆ, ಆಕೆಯ ವಿವಾಹಕ್ಕೆ ಅದು ಅಡ್ಡಿಯಾಗಬಹುದು. ಸಾಮಾಜಿಕ ಬಹಿಷ್ಕಾರಕ್ಕೋ ಸಮಾಜದ ಅಸ್ಪøಶ್ಯ ವರ್ತನೆಗೋ  ಅದು ಕಾರಣವಾಗಬಹುದು. ಆ ಹೆಣ್ಣು ಜೀವನದುದ್ದಕ್ಕೂ ಸಮಾಜದಲ್ಲಿ ಅಂತರವನ್ನು ಕಾಯ್ದುಕೊಂಡ ರೀತಿಯಲ್ಲಿ ಬದುಕಬೇಕಾಗಬಹುದು.  ಒಂದು ವೇಳೆ, ಈ ಮಾತಿಗೆ ಸಡ್ಡು ಹೊಡೆದು ಓರ್ವ ಹೆಣ್ಣು ಮಗಳು ತನ್ನ ಮೇಲಾದ ಅತ್ಯಾಚಾರವನ್ನು ಪ್ರಶ್ನಿಸುತ್ತಾಳೆಂದೇ  ಇಟ್ಟುಕೊಂಡರೂ ಅದು ತೀರಾ ಸಲೀಸಲ್ಲ. ಮೊಟ್ಟ ಮೊದಲು ಪೊಲೀಸ್ ಠಾಣೆಯಲ್ಲಿ ಆಕೆಯ ಪರೀಕ್ಷೆ ನಡೆಯುತ್ತದೆ. ಈ ದೇಶದ ಪೊಲೀಸು  ಠಾಣೆಗಳೆಷ್ಟು ಸಭ್ಯವಾಗಿವೆ ಎಂಬುದು ಎಲ್ಲರಿಗೂ ಗೊತ್ತು. ಲೈಂಗಿಕ ಪೀಡನೆಯ ದೂರಿನೊಂದಿಗೆ ಓರ್ವಳು ಠಾಣೆ ಪ್ರವೇಶಿಸಿದರೆ ಆಕೆಯನ್ನೇ  ಕುಲಟೆಯಂತೆ ನೋಡುವ ಸಂದರ್ಭಗಳೇ ಹೆಚ್ಚು. ಉನ್ನಾವೋದ ಹದಿಹರೆಯದ ಹೆಣ್ಣು ಅನುಭವಿಸಿದ್ದೂ ಇದನ್ನೇ. ಪೊಲೀಸರು ಪ್ರಕರಣ  ದಾಖಲಿಸುವ ಮೊದಲು ಕೇಳುವ ಪ್ರಶ್ನೆಗಳು ಕೆಲವೊಮ್ಮೆ ಅತ್ಯಾಚಾರಕ್ಕಿಂತಲೂ ಭೀಭತ್ಸವಾಗಿರುತ್ತದೆ ಎಂದು ಸಂತ್ರಸ್ತರು ಈ ಹಿಂದೆ ಹೇಳಿ ಕೊಂಡದ್ದೂ ಇದೆ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನನ್ನು 2013ರಲ್ಲಿ ಜಾರಿಗೊಳಿಸಿದ್ದರೂ ಅದೇಕೆ ಇನ್ನೂ  ಅತ್ಯಾಚಾರಿಗಳಲ್ಲಿ ಭಯ ಹುಟ್ಟಿಸಲು ಯಶಸ್ವಿಯಾಗಿಲ್ಲ ಅನ್ನುವುದಕ್ಕಿರುವ ಮೊದಲ ಉತ್ತರ ಪೊಲೀಸು ಠಾಣೆಗಳು. ಅಲ್ಲಿ ಸಮರ್ಪಕವಾಗಿ  ಎಫ್‍ಐಆರ್ ದಾಖಲಾದರೆ, ಫಾರೆನ್ಸಿಕ್ ವರದಿಗಳೂ ಸಹಿತ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಶ್ರಮವಹಿಸಿ ಪುರಾವೆಗಳನ್ನು ಸಂಗ್ರಹಿಸುವುದು  ನಡೆದರೆ ಅತ್ಯಾಚಾರಿ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ದುರಂತ ಏನೆಂದರೆ, ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಬಿದ್ದು ಹೋಗುವುದೇ ದುರ್ಬಲ ಎಫ್‍ಐಆರ್‍ಗಳಿಂದ. ಅತ್ಯಾಚಾರದ ದೂರಿನ ಬಗ್ಗೆ ಪೊಲೀಸು ಠಾಣೆಗಳು ಉಡಾಫೆ ಭಾವದಿಂದಿರುವುದೇ ಇದಕ್ಕೆ ಕಾರಣ. ಇನ್ನು, ¸ಸಂತ್ರಸ್ತೆಯು ಪೆÇಲೀಸರ ಇರಿಯುವ ಪ್ರಶ್ನೆಗಳನ್ನು ಎದುರಿಸುವ ಛಲವಂತಿಕೆ ತೋರಿಸಿದರೂ, ಮುಜುಗರದ ಸನ್ನಿವೇಶ ಅಲ್ಲಿಗೇ ಕೊನೆಗೊಳ್ಳ¨ ಬೇಕೆಂದಿಲ್ಲ. ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯಲ್ಲೂ ಅದನ್ನು ಎದುರಿಸಬೇಕಾಗಿ ಬರುತ್ತದೆ.
      ಅತ್ಯಾಚಾರಿಯ ಪರ ವಾದಿಸುವ  ನ್ಯಾಯವಾದಿಯಿಂದ ಉಗ್ರ ಕ್ರಾಸ್ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಅಲ್ಲದೇ ದೂರು ದಾಖಲಾಗಿ ನ್ಯಾಯಾಲಯದಲ್ಲಿ  ವಿಚಾರಣೆಯ ಹಂತಕ್ಕೆ ಬರುವಾಗ ಪ್ರಕರಣಕ್ಕೆ ವರ್ಷಗಳೂ ಸಂದಿರುತ್ತವೆ. ಈ ಅವಧಿಯಲ್ಲಿ ಸಾಕ್ಷಿದಾರರು ಮೇಲೆ ವಿವಿಧ ರೀತಿಯ  ಒತ್ತಡಗಳಿಗೆ ಒಳಗಾಗಿರುವುದಕ್ಕೂ ಅವಕಾಶವಿರುತ್ತದೆ. ಆರೋಪಿಗಳು ಬೆದರಿಕೆ ಹಾಕಿ ಸಾಕ್ಷಿದಾರರು ಸಾಕ್ಷಿ ಬದಲಿಸುವಂತೆ ಮಾಡುವುದೂ  ಇದೆ. ಒಂದು ರೀತಿಯಲ್ಲಿ, ನಮ್ಮ ವ್ಯವಸ್ಥೆ ಹೇಗಿದೆಯೆಂದರೆ, ಒಮ್ಮೆ ಅತ್ಯಾಚಾರಕ್ಕೀಡಾದ ಹೆಣ್ಣನ್ನು ಮತ್ತೆ ಮತ್ತೆ ಅತ್ಯಾಚಾರ ಮಾಡುವಂತಿದೆ.  ಈ ಎಲ್ಲ ಸಂದರ್ಭಗಳನ್ನು ಎದುರಿಸಿ ನಿಲ್ಲುವುದಕ್ಕೆ ಹೆಣ್ಣಿಗೆ ಬಲವಾದ ಬೆಂಬಲ ಸಿಗದು ಹೊರತು ಸಾಧ್ಯವಿಲ್ಲ. ನಗರ ಪ್ರದೇಶದ, ಹೆಚ್ಚು  ಕಲಿತ ಮತ್ತು ಸಾಮಾಜಿಕ ಸಂಘಟನೆಗಳೊಂದಿಗೆ ತೊಡಗಿಸಿಕೊಂಡ ಹೆಣ್ಣು ಇಂಥ ಛಾತಿಯನ್ನು ತೋರಿಸಬಲ್ಲಳೇ ಹೊರತು ಹಳ್ಳಿಯ ಬಡ  ಹೆಣ್ಣು ಮಗಳು ಇಷ್ಟೊಂದು ಧೈರ್ಯ ತೋರುವುದಕ್ಕೆ ಕಷ್ಟವಿದೆ. ಇಷ್ಟಿದ್ದೂ, ಅತ್ಯಾಚಾರ ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿವೆ. ಅಂದರೆ,  ಅದರರ್ಥ- ಇಂಥ ಕ್ರೌರ್ಯಗಳ ಸಂಖ್ಯೆ ಸಾಕಷ್ಟಿದೆ ಮತ್ತು ಅವುಗಳಲ್ಲಿ ತೀರಾ ಸಣ್ಣ ಸಂಖ್ಯೆಯ ಪ್ರಕರಣಗಳು ಮಾತ್ರ ಬಹಿರಂಗಕ್ಕೆ ಬರುತ್ತಿವೆ  ಎಂದಾಗಿದೆ. ದುರಂತ ಏನೆಂದರೆ, ಹೀಗೆ ಬಹಿರಂಗಕ್ಕೆ ಬರುವ ಪ್ರಕರಣಗಳು ದುರ್ಬಲ ಎಫ್.ಐ.ಆರ್. ಮತ್ತು ಕಾನೂನು ಪ್ರಕ್ರಿಯೆಗಳ  ಜಟಿಲತೆಯಿಂದಾಗಿ ಬಹುತೇಕ ಬಿದ್ದು ಹೋಗುತ್ತವೆ. ಆದ್ದರಿಂದಲೇ, 2013ರ ಮರಣ ದಂಡನೆ ಕಾನೂನಿನ ಬಳಿಕ ಎಷ್ಟು ಮಂದಿ  ಅತ್ಯಾಚಾರಿಗಳಿಗೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಯಾಗಿದೆಯೆಂದು ಹುಡುಕಿದರೆ ದೀರ್ಘ ನಿರಾಶೆಯೊಂದೇ ಉತ್ತರವಾಗಿ  ಸಿಗುತ್ತದೆ. ಹೀಗಿರುವಾಗ, ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಮರಣ ದಂಡನೆ ವಿಧಿಸುವ ಕಾನೂನು ಮಕ್ಕಳಿಗೆ ಎಷ್ಟು ನೆಮ್ಮದಿಯನ್ನು ನೀಡ ಬಹುದು ಎಂಬ ಪ್ರಶ್ನೆಗೆ ಬಲ ಬರುವುದು. ಬರೇ ಕಾನೂನು ರೂಪಿಸುವುದರಿಂದ ಅಪರಾಧ ಕೃತ್ಯಗಳು ಕಡಿಮೆಗೊಳ್ಳಲು ಸಾಧ್ಯವಿಲ್ಲ.  ಕಾನೂನು ಪರಿಣಾಮಕಾರಿಯಾಗುವುದು ಅದಕ್ಕೆ ಪೂರಕವಾಗಿ ಕೆಲಸ ಮಾಡುವ ಅಧಿಕಾರಿಗಳು ಲಭ್ಯವಾದಾಗ. ಮೊದಲು ನಮ್ಮ ಪೊಲೀಸು  ಠಾಣೆಗಳನ್ನು ಜನಸ್ನೇಹಿಯಾಗಿಸಬೇಕು. ಅಲ್ಲಿಗೆ ಬರುವ ದೂರುಗಳನ್ನು ಧರ್ಮ, ಜಾತಿ, ರಾಜಕೀಯ ಒಲವು ಇತ್ಯಾದಿಗಳಿಗೆ ಅನುಸಾರವಾಗಿ  ವಿಭಜಿಸಿ ತೂಗುವುದಕ್ಕೆ ಅಂತ್ಯ ಹಾಡಿ ಸಂಪೂರ್ಣ ಪಾರದರ್ಶಕ ವಾತಾವರಣವನ್ನು ಜಾರಿಗೆ ತರಬೇಕು. ಪೊಲೀಸು ಠಾಣೆಗಳು  ನ್ಯಾಯಪೂರ್ಣವಾಗಿ ಕಾರ್ಯವೆಸಗಲು ಪ್ರಾರಂಭಿಸಿದರೆ ಈಗ ಇರುವ ಕಾನೂನುಗಳೇ ಅಪರಾಧಿಗಳನ್ನು ಮಟ್ಟ ಹಾಕಲು ಧಾರಾಳ ಸಾಕು.
      ಸದ್ಯ ಸುಧಾರಣೆಯಾಗಬೇಕಾದುದು ಕಾನೂನುಗಳಲ್ಲಲ್ಲ, ಪೊಲೀಸು ಠಾಣೆಗಳಲ್ಲಿ. ಅವು ಜವಾಬ್ದಾರಿ ಅರಿತು ಕಾರ್ಯಪ್ರವೃತ್ತವಾದರೆ  ಅತ್ಯಾಚಾರಗಳು ಕಡಿಮೆಗೊಳ್ಳುವುದಕ್ಕೆ ಹೊಸ ಕಾನೂನಿನ ಅಗತ್ಯವೇ ಬರಲಾರದು.

ಅವರು ಎಲ್ಲರ ಮುಹಮ್ಮದ್(ಸ)

      ಪ್ರವಾದಿ ಮುಹಮ್ಮದ್(ಸ) ಎರಡು ಕಾರಣಗಳಿಂದಾಗಿ ಸದಾ ಚರ್ಚೆಯಲ್ಲಿರುತ್ತಾರೆ.
1. ಅವರ ಅಂಧ ಅನುಯಾಯಿಗಳು.
2. ಅವರ ಅಂಧ ವಿರೋಧಿಗಳು.
    ಪ್ರವಾದಿ ಮುಹಮ್ಮದ್‍ರನ್ನು(ಸ) ಈ ಎರಡು ಗುಂಪಿನಿಂದ ಹೊರತಂದು ಚರ್ಚೆಗೊಳಗಾಗಿಸಬೇಕಾದ ಅಗತ್ಯ ಇದೆ. ಪ್ರವಾದಿ ಮುಹಮ್ಮದ್‍ರಿಗಿಂತ ಮೊದಲು ಮತ್ತು ಆ ಬಳಿಕ ಸಾಕಷ್ಟು ವರ್ಚಸ್ವಿ ನಾಯಕರು ಈ ಜಗತ್ತಿಗೆ ಬಂದು ಹೋಗಿದ್ದಾರೆ. ಅಲ್ಲದೇ, ದೊಡ್ಡದೊಂದು ಅನುಯಾಯಿ ವರ್ಗವನ್ನೂ ಗಿಟ್ಟಿಸಿಕೊಂಡಿದ್ದಾರೆ. ಆದರೆ ಇವರೆಲ್ಲರ ಮಿತಿ ಏನೆಂದರೆ, ಬರಬರುತ್ತಾ ಇವರ ಅನುಯಾಯಿಗಳ ಸಂಖ್ಯೆಯಲ್ಲಿ ವ್ಯವಕಲನ ಆಗುತ್ತಾ ಹೋಗುವುದು. ಅವರ ವಿಚಾರಧಾರೆಯಲ್ಲಿ ಸವಕಲು ಅನ್ನಬಹುದಾದ ವಿಷಯಗಳು ದಿನ ಕಳೆದಂತೆಯೇ ಹೆಚ್ಚುತ್ತಾ ಸಾಗುವುದು. ಇವತ್ತು ಜಗತ್ತಿನ ಅತ್ಯಂತ ಹೆಚ್ಚು ಜನಪ್ರಿಯ ಹೆಸರುಗಳಲ್ಲಿ ಮುಹಮ್ಮದ್ ಎಂಬುದು ಒಂದು. ಮಾತ್ರವಲ್ಲ, ಈ ಹೆಸರನ್ನು ತಮ್ಮ ಮಕ್ಕಳಿಗೆ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯಲ್ಲೂ ಏರಿಕೆ ಆಗುತ್ತಲೇ ಇದೆ. ಒಂದು ವೇಳೆ ಈ ಬೆಳವಣಿಗೆಯನ್ನು ಜಗತ್ತಿನ ಇತರ ಜನಪ್ರಿಯ ನಾಯಕರಿಗೆ ಹೋಲಿಕೆ ಮಾಡಿ ನೋಡುವುದಾದರೆ, ಗಾಢ ನಿರಾಶೆಯೊಂದು ಕಾಡುತ್ತದೆ. ಮಾವೋ, ಕಾರ್ಲ್‍ಮಾರ್ಕ್ಸ್, ಬಸವಣ್ಣ, ಮಹಾವೀರ, ಬುದ್ಧ, ಗಾಂಧೀಜಿ, ಮದರ್ ಥೆರೆಸಾ... ಮುಂತಾದ ಎಲ್ಲರೂ ತಂತಮ್ಮ ಕಾಲಗಳಲ್ಲಿ ಬಹುದೊಡ್ಡ ಸುಧಾರಣೆಯ ನೊಗ ಹೊತ್ತು ಬದುಕಿದವರು. ಅವರ ವಿಚಾರಧಾರೆಗೆ ಜಾಗತಿಕವಾಗಿ ಇವತ್ತೂ ಮಾನ್ಯತೆಯಿದೆ. ಪಠ್ಯ ಪುಸ್ತಕಗಳಲ್ಲಿ ಅವರನ್ನು ಕಲಿಸುವ ಏರ್ಪಾಟೂ ಇದೆ. ಇಷ್ಟಿದ್ದೂ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಎಂಬ ಹೆಸರನ್ನು ತಮ್ಮ ಮಕ್ಕಳಿಗೆ ಹೆಸರಾಗಿ ಆಯ್ಕೆ ಮಾಡಿಕೊಳ್ಳುವ ಹೆತ್ತವರು ಇವತ್ತು ವಿರಳಾತಿ ವಿರಳವಾಗುತ್ತಿದ್ದಾರೆ. ಗಾಂಧಿ ಹುಟ್ಟಿರುವ ಗುಜರಾತ್‍ನಲ್ಲೇ ಈ ಹೆಸರಿನ ಬರ ಎದ್ದು ಕಾಣುತ್ತಿದೆ. ಮಾರ್ಕ್ಸ್ ಆಗಲಿ, ಮಾವೋ ಆಗಲಿ, ಬುದ್ಧ ಆಗಲಿ ಎಲ್ಲರೂ ಈ ಬಿಸಿಯನ್ನು ತಟ್ಟಿಸಿಕೊಂಡವರೇ. ಈ ಎಲ್ಲರ ಕಾಲಾನಂತರ ಜಗತ್ತು ಅವರನ್ನು ಮರೆತೋ ಅಥವಾ ಅವರ ಬೋಧನೆಯ ಕೆಲವೊಂದಿಷ್ಟನ್ನು ಮಾತ್ರ ಸ್ವೀಕರಿಸಿ ಉಳಿದುದನ್ನು ಕೈಬಿಟ್ಟೋ ತನ್ನ ಪಾಡಿಗೆ ತಾನು ಬದುಕುತ್ತಿದೆ. ಆದರೆ ಪ್ರವಾದಿ ಮುಹಮ್ಮದ್(ಸ) ಇಂಥದ್ದೊಂದು ಅವಜ್ಞೆಗೆ ಒಳಗಾಗಲೇ ಇಲ್ಲ. ಅವರು ಹುಟ್ಟಿದ್ದು ಅರಬ್ ರಾಷ್ಟ್ರದಲ್ಲಿ. ಆದರೆ ಇವತ್ತು ಅರಬ್ ರಾಷ್ಟ್ರಗಳು ಹೇಗೋ ಹಾಗೆಯೇ ಅರಬ್ ರಾಷ್ಟ್ರಗಳಿಗಿಂತ ಹೊರಗೂ ಅವರು ಅನುಯಾಯಿಗಳನ್ನು ಪಡೆದುಕೊಂಡಿದ್ದಾರೆ. ಅರಬಿ ಭಾಷೆ ಬಲ್ಲವರಿಗಷ್ಟೇ ಅವರು ಪರಿಚಿತರಲ್ಲ. ಜಗತ್ತಿನ ಬಹುತೇಕ ಎಲ್ಲ ಭಾಷೆ ಬಲ್ಲವರಿಗೂ ಅವರು ಪರಿಚಿತರು. ಪ್ರತಿ ಭಾಷೆಯಲ್ಲೂ ಅವರನ್ನು ವಿವರಿಸುವ ಪುಸ್ತಕಗಳಿವೆ. ಅವರ ವಚನಗಳ ಸಂಗ್ರಹವಿದೆ. ಅವರು ಜಗತ್ತಿನ ಮುಂದಿರಿಸಿದ ಪವಿತ್ರ ಕುರ್‍ಆನಿನ ಅನುವಾದ ಗ್ರಂಥಗಳಿವೆ. ಬಹುಶಃ ಪ್ರವಾದಿ ಮುಹಮ್ಮದ್(ಸ)ರಷ್ಟು ವೇಗವಾಗಿ ಬೆಳೆದ, ವ್ಯಾಪಿಸಿದ, ಜನಪ್ರಿಯಗೊಂಡ ಇನ್ನೋರ್ವ ವ್ಯಕ್ತಿ ಈ ಜಗತ್ತಿನಲ್ಲಿ ಬೇರೆ ಇರಲಾರರು ಎಂದು ಹೇಳುವುದಕ್ಕೆ ಪುರಾವೆಗಳ ಅಗತ್ಯ ಬೇಕಾಗದು.
    ಅಂಧತೆ ಎಂಬ ಪದವು ಕುರುಡುತನವನ್ನು ಸಂಕೇತಿಸುತ್ತದೆ. ಪ್ರವಾದಿ ಮುಹಮ್ಮದ್(ಸ)ರ ಅನುಯಾಯಿಗಳಲ್ಲಿ ಮತ್ತು ಅವರ ವಿರೋಧಿಗಳಲ್ಲಿ ಈ ಅಂಧತೆಗೆ ಪಾಲಂತೂ ಇದ್ದೇ ಇದೆ. ಇದು ಜಗತ್ತಿನ ಎಲ್ಲ ಮಹಾನ್ ವ್ಯಕ್ತಿಗಳು ಎದುರಿಸುತ್ತಿರುವ ಸಮಸ್ಯೆ. ಪ್ರವಾದಿ ಮುಹಮ್ಮದರು(ಸ) ಜಗತ್ತಿನ ಎಲ್ಲ ಭಾಷೆಗಳಲ್ಲೂ ಪರಿಚಿತರಾಗಿರುವುದರಿಂದ ಅಂಧ ಅನುಯಾಯಿಗಳು ಮತ್ತು ಅಂಧ ವಿರೋಧಿಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ಅಲ್ಲಗಳೆಯಬೇಕಿಲ್ಲ. ಸದ್ಯ ಪ್ರವಾದಿ ಮುಹಮ್ಮದ್(ಸ)ರ ಅನುಯಾಯಿಗಳ ಹೊಣೆಗಾರಿಕೆ ಏನೆಂದರೆ, ಅವರನ್ನು ಈ ಎರಡೂ ಗುಂಪಿನಿಂದ ಹೊರತಂದು ಸಮಾಜದ ಮುಂದಿಡುವುದು. ಅವರನ್ನು ನಿಜ ನೆಲೆಯಲ್ಲಿ ಓದುವ, ಚರ್ಚಿಸುವ, ಅಧ್ಯಯನ ನಡೆಸುವ ಮತ್ತು ವೈಚಾರಿಕ ನೆಲೆಯಲ್ಲಿ ವಾದ-ಪ್ರತಿವಾದಗಳಿಗೆ ಮುಕ್ತ ವಾತಾವರಣ ಉಂಟು ಮಾಡುವುದು. ಪ್ರವಾದಿಯವರು(ಸ) ತಮ್ಮ ಜೀವಿತ ಕಾಲದಲ್ಲಿ ಬದುಕಿದ್ದೇ ಹೀಗೆ. ಹುಟ್ಟಿದೂರನ್ನು ಮೀರಿ ವ್ಯಾಪಿಸಿದ್ದೂ ಹಾಗೆ. ಅವರು ಭಾಷಾತೀತ, ದೇಶಾತೀತ, ವರ್ಣಾತೀತ, ಕಾಲಾತೀತರು. ಅವರನ್ನು ಹಾಗೆಯೇ ಉಳಿಸಿಕೊಳ್ಳಬೇಕು ಮತ್ತು ಹಾಗೆಯೇ ಓದಿಸಬೇಕು. ಅವರು ಎಲ್ಲರ ಮುಹಮ್ಮದ್(ಸ).

ಮೌಲಾನಾ ಇಮ್ದಾದುಲ್ಲಾ ಮತ್ತು ಸನ್ಯಾನ್ಯ ಚೌಬೆ

      ಮೌಲಾನಾ ಇಮ್ದಾದುಲ್ಲಾ ಮತ್ತು ಅಶ್ವನಿ ಚೌಬೆ- ಈ ಇಬ್ಬರ ನಡುವೆ ಒಂದು ವಿಷಯವನ್ನು ಹೊರತುಪಡಿಸಿದರೆ, ಉಳಿದಂತೆ ಯಾವ ಹೋಲಿಕೆಯೂ ಇಲ್ಲ. ಮೌಲಾನಾ ಇಮ್ದಾದುಲ್ಲಾರಿಗೆ ಮದುವೆಯಾಗಿದೆ ಮತ್ತು ಮಕ್ಕಳಿದ್ದಾರೆ. ಅಶ್ವನಿ ಚೌಬೆಗೆ ಮದುವೆಯಾಗಿದೆ ಮತ್ತು ಮಕ್ಕಳಿದ್ದಾರೆ. ಇಲ್ಲಿಗೆ ಈ ಹೋಲಿಕೆ ಮುಗಿಯುತ್ತದೆ. ಇಮ್ದಾದುಲ್ಲಾರು ಪಶ್ಚಿಮ ಬಂಗಾಳದ ಅಸನ್‍ಸೋಲ್ ಎಂಬಲ್ಲಿಯ ನೂರಾನಿ ಮಸೀದಿಯ ಧರ್ಮಗುರು. ವಾರಗಳ ಹಿಂದೆ ಈ ಪ್ರದೇಶದಲ್ಲಿ ನಡೆದ ರಾಮನವಮಿ ಮೆರವಣಿಗೆಯ ವೇಳೆ ಘರ್ಷಣೆ ಸ್ಫೋಟಗೊಂಡಿತು. ಈ ಘರ್ಷಣೆಯ ಬಗ್ಗೆ ಎಪ್ರಿಲ್ 2ರಂದು ಪ್ರಕಟವಾದ ದ ಹಿಂದೂ ಪತ್ರಿಕೆಯಲ್ಲಿ ವಿಸ್ತೃತವಾದ ವರದಿಯಿದೆ. `ಟೋಪಿವಾಲೆ ಬಿ ಸರ್ ಜುಕಾಕೆ ಜೈ ಶ್ರೀರಾಮ್ ಬೋಲೇಗಾ’ ಎಂಬ ಹಾಡನ್ನು ಈ ಮೆರವಣಿಗೆಯಲ್ಲಿ ಮತ್ತೆ ಮತ್ತೆ ನುಡಿಸಲಾಗಿರುವುದನ್ನು ವರದಿಯು ಬೊಟ್ಟು ಮಾಡಿದೆ. ಗಲಭೆ ಸ್ಫೋಟಗೊಂಡಾಗ ಇಮ್ದಾದುಲ್ಲಾರ 16ರ ಹರೆಯದ ಮಗ ಸಿಬ್ಗತುಲ್ಲಾ ತನ್ನ ಅಣ್ಣನೊಂದಿಗೆ ಮಸೀದಿಗೆ ತೆರಳಿದ್ದ. ಆತನನ್ನು ಗುಂಪು ಥಳಿಸಿ ಕೊಂದಿತ್ತು. ಮರುದಿನ ಶವ ಪತ್ತೆಯಾಯಿತು. ಮೃತದೇಹದ ಅಂತ್ಯ ಸಂಸ್ಕಾರದ ವೇಳೆ ನೂರಾನಿ ಮಸೀದಿಯಲ್ಲಿ ಹತ್ತು ಸಾವಿರಕ್ಕಿಂತಲೂ ಅಧಿಕ ಮಂದಿ ಸೇರಿದ್ದರು. ಒಂದು ಕಡೆ, ಜನರು ಭಾವುಕರಾಗಿದ್ದರೆ ಇನ್ನೊಂದು ಕಡೆ, ಈ ಭಾವುಕತೆಯೇ ಜನರನ್ನು ಉದ್ರಿಕ್ತತೆಯೆಡೆಗೆ ತಳ್ಳುವ ಸಂಭವವೂ ಅಧಿಕವಾಗಿತ್ತು. ಅಷ್ಟೊಂದು ದೊಡ್ಡ ಗುಂಪು ಉದ್ರಿಕ್ತವಾಗಿ ವರ್ತಿಸಿದರೆ ಆಗಬಹುದಾದ ಅನಾಹುತವನ್ನು ನಿರೀಕ್ಷಿಸುವುದಕ್ಕೂ ಸಾಧ್ಯವಿರಲಿಲ್ಲ. ಈ ಸಂದರ್ಭದಲ್ಲಿ ತನ್ನ ಮಗನ ಮೃತದೇಹವನ್ನು ಜೊತೆಯಿಟ್ಟುಕೊಂಡೇ ಧರ್ಮಗುರು ಇಮ್ದಾದುಲ್ಲಾ ಮೈಕ್ ಎತ್ತಿಕೊಂಡರು. `ನನ್ನನ್ನು ಪ್ರೀತಿಸುತ್ತೀರೆಂದಾದರೆ, ನೀವು ಶಾಂತಿಯುತವಾಗಿ ವರ್ತಿಸಬೇಕು. ನನ್ನ ಮಗನ ಹತ್ಯೆಯ ಹೆಸರಲ್ಲಿ ಇನ್ನಷ್ಟು ಜೀವಗಳು ಬಲಿಯಾಗುವುದನ್ನು ನಾನು ಬಯಸುವುದಿಲ್ಲ. ಒಂದು ವೇಳೆ ನೀವು ಹಿಂಸಾಚಾರಕ್ಕಿಳಿದರೆ, ನಾನು ಈ ಮಸೀದಿಯನ್ನೂ ಈ ಊರನ್ನೂ ಬಿಟ್ಟು ತೆರಳುವೆ’ ಎಂದು ಘೋಷಿಸಿದರು. ಈ ಘೋಷಣೆ ಅಲ್ಲಿನ ವಾತಾವರಣವನ್ನೇ ಬದಲಿಸಿತು ಎಂದು ಪೊಲೀಸರೇ ಹೇಳಿದ್ದಾರೆ. ಎಲ್ಲಿಯವರೆಗೆಂದರೆ, ಅವರ ಈ ಘೋಷಣೆಯನ್ನು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಶ್ಲಾಘಿಸಿ ಹೇಳಿಕೆ ಕೊಡಬೇಕಾದ ಒತ್ತಡಕ್ಕೆ ಸಿಲುಕಿದರು. ಆರೆಸ್ಸೆಸ್ ಕೂಡ ಶ್ಲಾಘಿಸಿತು. ಅಸನ್‍ಸೋಲ್‍ನಲ್ಲಿ ವಾಸಿಸುತ್ತಿರುವ ಬಂಗಾಳದ ಖ್ಯಾತ ಸಾಹಿತಿ ಜೋಯಾ ಮಿತ್ರ ಧರ್ಮಗುರು ಇಮ್ದಾದುಲ್ಲಾರನ್ನು ಮನಸಾರೆ ಹೊಗಳಿದರು.
     ರಾಮನವಮಿಯ ನಿಮಿತ್ತ ಬಿಹಾರದಲ್ಲೂ ಮೆರವಣಿಗೆಗಳು ನಡೆದುವು. ಇಂಥದ್ದೊಂದು ಮೆರವಣಿಗೆಯ ನೇತೃತ್ವವನ್ನು ಕೇಂದ್ರ ಸಚಿವ ಅಶ್ವನಿ ಚೌಬೆಯ ಪುತ್ರ 36ರ ಹರೆಯದ ಅರಿಜಿತ್ ಶಾಶ್ವತ್ ವಹಿಸಿಕೊಂಡಿದ್ದ. ಯುವಕರೇ ಹೆಚ್ಚಾಗಿದ್ದ ಆ ಮೆರವಣಿಗೆಯು ನಾಥ್‍ನಗರದಲ್ಲಿ ಘರ್ಷಣೆಗೆ ಕಾರಣವಾಯಿತು. ಜಿಲ್ಲಾಡಳಿತದಿಂದ ಪರವಾನಿಗೆಯನ್ನು ಪಡೆಯದೇ ನಾಥ್‍ನಗರಕ್ಕೆ ಮೆರವಣಿಗೆಯನ್ನು ಕೊಂಡೊಯ್ಯಲಾಗಿತ್ತು. ಅಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲಾಯಿತು. ಅನೇಕ ಮನೆ, ಅಂಗಡಿಗಳು ಘರ್ಷಣೆಯಲ್ಲಿ ಧ್ವಂಸವಾದುವು. ಅರಿಜಿತ್ ಶಾಶ್ವತ್‍ನ ನಿರೀಕ್ಷಣಾ ಜಾಮೀನನ್ನು ತಳ್ಳಿಹಾಕಿದ ನ್ಯಾಯಾಲಯ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತು. ವಿಷಯ ಇದಲ್ಲ. ಈ ಬೆಳವಣಿಗೆಗೆ ಅರಿಜಿತ್ ಶಾಶ್ವತ್‍ನ ತಂದೆ ನೀಡಿರುವ ಪ್ರತಿಕ್ರಿಯೆ ಗಮನಾರ್ಹವಾಗಿತ್ತು. ಅವರ ಪ್ರತಿಕ್ರಿಯೆ ನಾಥ್‍ನಗರದ ಘೋಷಣೆಗಳಿಗಿಂತಲೂ ಪ್ರಚೋದನಾತ್ಮಕವಾಗಿತ್ತು. ಅವರು ಮಗನನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡರು. ಮಗನ ಮೇಲೆ ದಾಖಲಿಸಲಾದ ಎಫ್‍ಐಆರನ್ನು ಕಸದ ಬುಟ್ಟಿಗೆ ಸೇರಬೇಕಾದ ಕಾಗದದ ತುಂಡು ಎಂದು ಅಣಕಿಸಿದರು.
     ಇಬ್ಬರು ಮಕ್ಕಳ ಬಗ್ಗೆ ಅವರ ತಂದೆಯಂದಿರ ನಿಲುವುಗಳಿವು. ತಪ್ಪನ್ನೇ ಮಾಡದ ಹರೆಯದ ಮಗನೊಬ್ಬ ಉಸಿರು ಮರೆತು ಮಲಗಿರುವುದನ್ನು ಸಹಿಸಿಕೊಳ್ಳುವುದಕ್ಕೆ ಯಾವ ತಂದೆಗೂ ಸಾಧ್ಯವಿಲ್ಲ. ಆ ಕ್ಪಣದಲ್ಲೂ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದಕ್ಕೆ ಅಪಾರ ಎದೆಗಾರಿಕೆ ಬೇಕು. ನಾಲ್ಕೈದು ತಿಂಗಳ ಹಿಂದೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಬಶೀರ್ ಎಂಬವರ ಹತ್ಯೆ ನಡೆಯಿತು. ಇದಕ್ಕಿಂತ ಒಂದು ದಿನ ಮೊದಲು ಇದೇ ಪರಿಸರದಲ್ಲಿ ನಡೆದ ದೀಪಕ್ ರಾವ್ ಎಂಬ ಯುವಕನ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆಯನ್ನು ನಡೆಸಲಾಗಿತ್ತು. ಆ ಸಮಯದಲ್ಲೂ ಸಾವಿರಾರು ಮಂದಿ ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ಆಗ ಬಶೀರ್ ಕುಟುಂಬದ ಸದಸ್ಯರು ಶಾಂತಿ ಕಾಪಾಡುವಂತೆ ಮತ್ತು ಹಿಂಸಾಚಾರಕ್ಕಿಳಿಯದಂತೆ ನೆರೆದವರಲ್ಲಿ ಮನವಿ ಮಾಡಿಕೊಂಡಿದ್ದರು. ಆ ಮನವಿ ಅಲ್ಲಿನ ವಾತಾವರಣವನ್ನೇ ಬದಲಿಸಿತ್ತು. ಯುವಕರ ಆಕ್ರೋಶ, ಆವೇಶಗಳನ್ನು ಅದು ನಿಯಂತ್ರಿಸಿತು. ಮಾತ್ರವಲ್ಲ, ಈ ಬೆಳವಣಿಗೆ ಸರ್ವತ್ರ ಶ್ಲಾಘನೆಗೂ ಒಳಗಾಯಿತು.
     ಮೌಲಾನಾ ಇಮ್ದಾದುಲ್ಲಾ ಮತ್ತು ಹತ್ಯೆಗೀಡಾದ ಬಶೀರ್ ಕುಟುಂಬದ ನಡುವೆ ಸಾವಿರಾರು ಮೈಲುಗಳ ಅಂತರವಿದೆ. ಇವರಿಬ್ಬರೂ ಈ ಮೊದಲು ಭೇಟಿಯಾಗಿಲ್ಲ. ಅಲ್ಲದೇ, ಬಶೀರ್ ಅವರ ಹತ್ಯೆ ನಡೆದಿರುವ ಬಗ್ಗೆ ಇಮ್ದಾದುಲ್ಲಾರಿಗೆ ಗೊತ್ತಿರುವ ಸಾಧ್ಯತೆಯೂ ಇಲ್ಲ. ಇದರ ಹೊರತಾಗಿಯೂ ಈ ಎರಡೂ ಕುಟುಂಬಗಳ ವರ್ತನೆಯಲ್ಲಿ ಸಾಮ್ಯತೆ ಇದೆ. ಜೀವಪರ ಸಂದೇಶಗಳಿವೆ. ನಿಜವಾಗಿ, ಓರ್ವರ ಹತ್ಯೆಗೆ ಇನ್ನಾರನ್ನೋ ಬಲಿ ಪಡೆಯಲು ಪ್ರಚೋದಿಸುವುದು ಅಧರ್ಮ ಮಾತ್ರವಲ್ಲ ಅಪಾಯಕಾರಿಯೂ ಹೌದು. ಮೌಲಾನ ಇಮ್ದಾದುಲ್ಲಾರ ಮಗನ ಹತ್ಯೆಗೈದವರಿಗೆ ಶಿಕ್ಷೆ ನೀಡಬೇಕಾದುದು ವ್ಯವಸ್ಥೆಯ ಹೊಣೆಗಾರಿಕೆ. ಜನರು ಆ ಹೊಣೆಗಾರಿಕೆಯನ್ನು ನಿರ್ವಹಿಸಲು ಹೊರಟರೆ ವ್ಯವಸ್ಥೆಯನ್ನು ಅಪ್ರಸ್ತುತಗೊಳಿಸಿದಂತೆ ಮತ್ತು ಅನ್ಯಾಯಕ್ಕೆ ದಾರಿ ತೆರೆದಂತೆ. ಜನರು ಪೊಲೀಸರೂ ಅಲ್ಲ, ನ್ಯಾಯಾಂಗವೂ ಅಲ್ಲ. ದುರಂತ ಏನೆಂದರೆ, ಇವತ್ತು ಜನರನ್ನು ದೊಂಬಿಗೆ ಪ್ರಚೋದಿಸಲಾಗುತ್ತಿದೆ. ಅಶ್ವನಿ ಚೌಬೆಯಂಥವರು, ಬಾಬುಲ್ ಸುಪ್ರಿಯೋ, ಶೋಭಾ ಕರಂದ್ಲಾಜೆಯಂಥ ಅನೇಕರು ತೀರಾ ಪ್ರಚೋದನಾತ್ಮಕವಾಗಿ ಮಾತಾಡುತ್ತಿದ್ದಾರೆ. ಸಾರ್ವಜನಿಕರು ಉದ್ರಿಕ್ತಗೊಳ್ಳಬಹುದಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿರುವವರು ಕಾನೂನನ್ನೇ ಕೈಗೆತ್ತಿಕೊಳ್ಳುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಥಳಿತ, ಹತ್ಯೆ, ಹಲ್ಲೆ.. ಇತ್ಯಾದಿಗಳನ್ನು ಪ್ರತೀಕಾರದ ಹೆಸರಲ್ಲೋ  ಪಾಠ ಕಲಿಸುವ ಹೆಸರಲ್ಲೋ ನಡೆಸುತ್ತಿದ್ದಾರೆ. ಇನ್ನೊಂದು ಧರ್ಮದವರನ್ನು ಇರಿಯುವ, ತಿವಿಯುವ ಮತ್ತು ವ್ಯಂಗ್ಯಕ್ಕೆ ಒಳಪಡಿಸುವ ಮಾತುಗಳನ್ನು ಧಾರಾಳವಾಗಿ ಆಡುತ್ತಿದ್ದಾರೆ. ಪ್ರಚೋದಿಸುವುದು ಮತ್ತು ಆ ಬಳಿಕ ಪ್ರತೀಕಾರದ ಹೆಸರಲ್ಲಿ ಇನ್ನಷ್ಟು ಅನಾಹುತಗಳನ್ನು ಹುಟ್ಟು ಹಾಕುವುದು ಇವರ ಉದ್ದೇಶವೋ ಗೊತ್ತಿಲ್ಲ. ಏನೇ ಇದ್ದರೂ, ಈ ಬಗೆಯ ವರ್ತನೆಗಳಿಂದ ಸಾರ್ವಜನಿಕರು ಪ್ರಚೋದಿತರಾಗಬಾರದು. ಶಾಂತಿಯುತ ಬದುಕು ಎಲ್ಲರ ಬಯಕೆ. ಪ್ರಚೋದನಾತ್ಮಕ ಹೇಳಿಕೆ ಮತ್ತು ವರ್ತನೆಗಳಿಗೆ ಅದೇ ಮಾದರಿಯ ಪ್ರತಿ ಹೇಳಿಕೆ ಮತ್ತು ವರ್ತನೆ ಉತ್ತರ ಅಲ್ಲ. ಮೌಲಾನಾ ಇಮ್ದಾದುಲ್ಲಾ ಮತ್ತು ಬಶೀರ್ ಕುಟುಂಬಗಳ ವರ್ತನೆ ಮುಖ್ಯವಾಗುವುದು ಇಲ್ಲೇ.  ಸಮಾಜ ಆತ್ಮಾವಲೋಕನಕ್ಕೆ ತೆರೆದುಕೊಳ್ಳಬೇಕಾದ ಸಂದರ್ಭ ಇದು.


2019ರ ಬಳಿಕ ಪ್ರಧಾನಿ ಮೋದಿ ಎಲ್ಲಿ?

     ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ದಿನೇ ದಿನೇ ಕುಸಿಯುತ್ತಿರುವುದು ಬಿಜೆಪಿಯ ಒಳಗೂ ಅದರ ಬೆಂಬಲಿಗ ಸಂಘಟನೆಗಳಲ್ಲೂ ಗಂಭೀರ ಅವಲೋಕನಕ್ಕೆ ಒಳಗಾಗುತ್ತಿದೆ ಅನ್ನುವ ಸುದ್ದಿಯಿದೆ. 2019 ಲೋಕಸಭಾ ಚುನಾವಣೆಯನ್ನು 2018ರಲ್ಲೇ ನಡೆಸಿದರೆ ಹೇಗೆ ಎಂದು ಚಿಂತಿಸುವ ಹಂತಕ್ಕೆ ಪಕ್ಷದ ಚಿಂತಕ ಛಾವಡಿ ತಲುಪಿ ಬಿಟ್ಟಿದೆ ಎಂಬ ಮಾತೂ ಕೇಳಿಬರುತ್ತಿದೆ. 2014ರಲ್ಲಿ ನರೇಂದ್ರ ಮೋದಿಯವರು ದೆಹಲಿ ರಾಜಕಾರಣಕ್ಕೆ ಹೊರಗಿನವರಾಗಿದ್ದರು. ಸತತ ಮೂರನೇ ಬಾರಿಗೆ ಆಡಳಿತ ನಡೆಸುತ್ತಿದ್ದ ಪ್ರಧಾನಿ ಮನ್‍ಮೋಹನ್ ಸಿಂಗ್ ಸರಕಾರವಂತೂ ಪ್ರಮಾದಗಳ ಸುಳಿಯಲ್ಲಿತ್ತು. ಅಣ್ಣಾ ಹಜಾರೆ ಮತ್ತು ನಿರ್ಭಯ ಇಬ್ಬರೂ ಸೇರಿ ಆಡಳಿತ ವಿರೋಧಿ ಅಲೆಯೊಂದನ್ನು ದೇಶದಾದ್ಯಂತ ಎಬ್ಬಿಸಲು ಶಕ್ತರಾಗಿದ್ದರು. ನರೇಂದ್ರ ಮೋದಿ ಅದನ್ನು ಸಮರ್ಥವಾಗಿ ಬಳಸಿಕೊಂಡರು. ಅವರ ವಾಗ್ವೈಖರಿ ವಿಶಿಷ್ಟವಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅವರ ಶಾಂತ ಧ್ವನಿಯು ಮೋದಿಯವರ ನಿರ್ಭಿಡೆಯ ಧ್ವನಿಯೆದುರು ಮಂಕಾದಂತೆ ಕಂಡಿತು. ಮನ್‍ಮೋಹನ್ ಸಿಂಗ್ ಅವರು ಮಾತಿಗೆ ಮೊದಲು ಪದಗಳನ್ನು ಅಳೆದೂ ತೂಗಿ ನೋಡುತ್ತಿದ್ದರೆ ಮೋದಿಯವರು ಪದಗಳಿಗೆ ಜರಡಿ ಹಿಡಿಯದೇ ಆಡುತ್ತಿದ್ದರು. ಅವರ ಮಟ್ಟಿಗೆ ಯಾವ ಪದಗಳೂ ಅಸ್ಪೃಶ್ಯ ಆಗಿರಲಿಲ್ಲ. ಆಡಿದ್ದೆಲ್ಲವೂ ಮಾತು, ಹೇಳಿದ್ದೆಲ್ಲವೂ ಪ್ರಣಾಳಿಕೆಯಾಗಿ ಬಿಟ್ಟಿತು. ನರೇಂದ್ರ ಮೋದಿಯವರಿಗೆ ಇದ್ದ ಅನುಕೂಲ ಏನೆಂದರೆ, ಅವರಿಗೊಬ್ಬ ಶತ್ರು ಇದ್ದ. ಯುಪಿಎ ಎಂಬ ಆ ಶತ್ರುವನ್ನು ಜನರ ಮುಂದೆ ನಿಲ್ಲಿಸಿ ಝಾಡಿಸುವುದು ಸುಲಭವೂ ಆಗಿತ್ತು. ಮನ್‍ಮೋಹನ್ ಸಿಂಗ್‍ರನ್ನು ಮೌನಮೋಹನ ಎಂದು ಕರೆಯುವಲ್ಲಿಂದ ಹಿಡಿದು ಪಾಕಿಸ್ತಾನದ ವರೆಗೆ ಅವರ ಕದನ ಕ್ಷೇತ್ರ ತುಂಬಾ ವಿಶಾಲವಾಗಿತ್ತು. ಅವರಿಗೆ ತಾನೇನು ಮಾಡಿದೆ ಎಂದು ಹೇಳಿಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಎದುರಿನ ಶತ್ರು ಏನೆಲ್ಲ ಮಾಡಲಿಲ್ಲ ಎಂದು ಹೇಳುವ ಅಗತ್ಯವಷ್ಟೇ ಇತ್ತು. ಈ ಬಗೆಯ ಸನ್ನಿವೇಶ ಚುನಾವಣಾ ರಂಗಸ್ಥಳದಲ್ಲಿ ವಿರೋಧ ಪಕ್ಪಗಳಿಗೆ ಅತ್ಯಂತ ಅನುಕೂಲಕರವಾಗಿರುತ್ತದೆ. ನರೇಂದ್ರ ಮೋದಿಯವರು ಈ ವಾತಾವರಣವನ್ನು ಚೆನ್ನಾಗಿ ಬಳಸಿಕೊಂಡರು. ತಾನು ಏನು ಅನ್ನುವುದಕ್ಕಿಂತ ಎದುರಿನವರು ಏನಲ್ಲ ಅನ್ನುವುದಕ್ಕೆ ಒತ್ತು ಕೊಟ್ಟರು. ತಾನು ದಮನಿತ ಸಮುದಾಯದವ ಎಂದು ಬಿಂಬಿಸಿಕೊಂಡರು. ಚಾಯ್‍ವಾಲಾ ಮತ್ತು ಶೆಹೆಝಾದ (ರಾಜಕುಮಾರ)- ಈ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರಾಗಬಹುದು ಎಂಬ ಪ್ರಶ್ನೆಯನ್ನೂ ಮುಂದಿಟ್ಟರು. ಅವರ ಭಾಷೆ, ಶತ್ರುವಿನ ದೌರ್ಬಲ್ಯಗಳನ್ನು ಹುಡುಕಿ ಎತ್ತಿ ಹೇಳುವ ಶೈಲಿ, ಚುರುಕುತನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೆಹಲಿಯ ಮಾಮೂಲಿ ಮುಖಕ್ಕಿಂತ ಅಪರಿಚಿತವಾದ ಹೊಸ ಮುಖವು ಜನರನ್ನು ಕ್ಪಣ ಆಕರ್ಷಿಸಿತು. ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ನ್ಯಾಯಾಂಗೀಯ ಸುಧಾರಣೆಗಳ ಬಗ್ಗೆ ಅವರಲ್ಲಿ ಖಚಿತ ನಿಲುವುಗಳೇನೂ ಇರದೇ ಇದ್ದರೂ ಮತ್ತು ಆರ್ಥಿಕತೆಯ ಒಳಹೊಕ್ಕು ಮಾತಾಡುವ ಸಾಮಥ್ರ್ಯ ಶೂನ್ಯವಾಗಿದ್ದರೂ ಮಾತಿನ ಓಘದಲ್ಲಿ ಅವನ್ನೆಲ್ಲ ನಗಣ್ಯವಾಗಿಸಲು ಅವರು ಯಶಸ್ವಿಯಾದರು. ಆದ್ದರಿಂದಲೇ, 2009ರ ಚುನಾವಣೆಗೆ ಹೋಲಿಸಿದರೆ 2014ರ ಚುನಾವಣೆಯಲ್ಲಿ ಒಟ್ಟು 8% ಹೆಚ್ಚುವರಿ ಮತದಾನವಾಯಿತು. ದೊಡ್ಡ ಸಂಖ್ಯೆಯಲ್ಲಿ ಯುವ ಮತದಾರರು 2014ರಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ನಿಜವಾಗಿ, ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಧಾನಿ ನರೇಂದ್ರ ಮೋದಿಯಾಗಿಸಿದ್ದೇ  ಈ ಯುವ ಮತದಾರರು. ಅವರು ಚಲಾಯಿಸಿದ ಮತವು ಫಲಿತಾಂಶವನ್ನು ನಿರ್ಧರಿಸಿತು. 2009ರಲ್ಲಿ ಚಲಾವಣೆಯಾದ ಮತಕ್ಕಿಂತ 15% ಹೆಚ್ಚುವರಿ ಮತ ಚಲಾವಣೆಯಾದ 70 ಲೋಕಸಭಾ ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿತು. 2009ರಲ್ಲಿ ಚಲಾವಣೆಯಾದುದಕ್ಕಿಂತ 10ರಿಂದ 15 ಶೇಕಡಾದಷ್ಟು ಹೆಚ್ಚು ಮತದಾನವಾದ 145 ಕ್ಷೇತ್ರಗಳ ಪೈಕಿ 125 ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತು. 10% ಹೆಚ್ಚು ಮತದಾನವಾದ 267 ಕ್ಷೇತ್ರಗಳ ಪೈಕಿ 123 ಕ್ಷೇತ್ರಗಳಲ್ಲಿ ಬಿಜೆಪಿ ಮೇಲುಗೈ ಪಡೆಯಿತು. ಆದರೆ 2009ಕ್ಕಿಂತ ಕಡಿಮೆ ಮತ ಚಲಾವಣೆಯಾದ 61 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಮಿತ್ರಪಕ್ಪಗಳು ಪಡೆದುಕೊಂಡಿರುವುದು ಬರೇ 21 ಕ್ಷೇತ್ರಗಳನ್ನು. ನರೇಂದ್ರ ಮೋದಿಯವರು ಪ್ರಧಾನಿಯಾಗುವಲ್ಲಿ ಯುವ ಮತದಾರರ ಪಾತ್ರ ಏನು ಅನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ, ನರೇಂದ್ರ ಮೋದಿಯವರು ಪ್ರಧಾನಿಯಾಗಿ ನಾಲ್ಕು ವರ್ಷಗಳು ಸಂದ ಈ ಸಂದರ್ಭದಲ್ಲಿ ಸ್ಥಿತಿ ಹೇಗಿದೆಯೆಂದರೆ, ಅವರ ಮೇಲೆ ಭರವಸೆ ಇಟ್ಟಿದ್ದ ಯುವ ಸಮೂಹ ಗಾಢ ನಿರಾಶೆಯೆಡೆಗೆ ಸಾಗುತ್ತಿದೆ. ಒಂದು ಬಗೆಯ ಅಸಂತೃಪ್ತಿ ಮತ್ತು ಆಕ್ರೋಶ ನಿಧಾನಕ್ಕೆ ರೂಪು ಪಡೆಯುತ್ತಿದೆ. ಆದ್ದರಿಂದಲೇ, ನೋಟು ನಿಷೇಧ ಮತ್ತು ಜಿಎಸ್‍ಟಿಯನ್ನು ಒಂದು ಹಂತದ ವರೆಗೆ ಮೌನವಾಗಿ ಸಹಿಸಿಕೊಂಡ ಸಮಾಜ, ಎಸ್‍ಸಿ-ಎಸ್‍ಟಿ ಕಾಯ್ದೆಯ ವಿಷಯದಲ್ಲಿ ಮೋದಿಯವರ ನಿಲುವನ್ನು ಬೀದಿಗಿಳಿದು ಬೃಹತ್ ಮಟ್ಟದಲ್ಲಿ ಪ್ರತಿಭಟಿಸಿತು. ಇದಕ್ಕಿಂತ ಮೊದಲು ದೇಶದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮೋದಿ ನೀತಿಯ ವಿರುದ್ಧ ಬೀದಿಗಿಳಿದಿದ್ದರು. ಇತ್ತೀಚೆಗಿನ ಕಥುವಾ ಮತ್ತು ಉನ್ನಾವೋ ಅತ್ಯಾಚಾರ ಘಟನೆಗಳ ವಿಷಯದಲ್ಲಂತೂ ಯುವ ಸಮೂಹ ಬಿಜೆಪಿಯನ್ನೇ ನೇರ ಆರೋಪಿ ಸ್ಥಾನದಲ್ಲಿ ಕೂರಿಸಿತು. ಈ ಪ್ರತಿಭಟನೆಯ ತೀವ್ರತೆ ಎಷ್ಟಿತ್ತೆಂದರೆ, 2012ರಲ್ಲಿ ನಿರ್ಭಯ ಪ್ರಕರಣದಲ್ಲಿ ಎಷ್ಟಿತ್ತೋ ಅಷ್ಟು. ಅಂದು ಮನ್‍ಮೋಹನ್ ಸಿಂಗ್ ಅವರು ಆ ಪ್ರತಿಭಟನೆಗೆ ಬೆದರಿ ಹೊಸ ಕಾನೂನೊಂದನ್ನೇ ರಚಿಸುವ ಅನಿವಾರ್ಯತೆಗೆ ಸಿಲುಕಿದರೆ ಈ ಅತ್ಯಾಚಾರ ಘಟನೆಗಳಿಂದ ತತ್ತರಿಸಿದ ನರೇಂದ್ರ ಮೋದಿಯವರು ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನೊಂದನ್ನು ಜಾರಿಗೊಳಿಸಿದರು. ಈ ಬೆಳವಣಿಗೆಯೇ ಮೋದಿ ಸರಕಾರದ ಸದ್ಯದ ಸ್ಥಿತಿಯನ್ನು ಹೇಳುತ್ತದೆ.
  ನಿಜವಾಗಿ, ನರೇಂದ್ರ ಮೋದಿಯವರು ಪ್ರತಿನಿಧಿಸುವ ಬಲಪಂಥೀಯ ವಿಚಾರಧಾರೆಗೆ ಭಾರತದಲ್ಲಿ ಮಾತ್ರ ಮಾನ್ಯತೆ ದಕ್ಕಿರುವುದಲ್ಲ. ಜಾಗತಿಕವಾಗಿ ಒಂದಕ್ಕಿಂತ ಹೆಚ್ಚು ರಾಷ್ಟ್ರಗಳು ಬಲಪಂಥೀಯ ವಿಚಾರಧಾರೆಗೆ ಮಾನ್ಯತೆ ನೀಡಿವೆ. ರಷ್ಯಾದ ಅಧ್ಯಕ್ಪ ವ್ಲಾದಿಮಿರ್ ಪುತಿನ್ ಮತ್ತು ಅಮೇರಿಕದ ಅಧ್ಯಕ್ಪ ಟ್ರಂಪ್ ಅವರು ಈ ವಿಚಾರಧಾರೆಯ ಈಗಿನ ಅತ್ಯಂತ ಜನಪ್ರಿಯ ಮುಖಗಳಾದರೆ, 2009ರಿಂದ ಅಧಿಕಾರದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, 2010ರಿಂದ ಆಡಳಿತ ನಡೆಸುತ್ತಿರುವ ಹಂಗೇರಿಯ ಅಧ್ಯಕ್ಪ ವಿಕ್ಟರ್ ಓರ್‍ಬಾನ್, 2016ರಲ್ಲಿ ಫಿಲಿಪ್ಪೀನ್ಸ್‍ನ ಅಧ್ಯಕ್ಪರಾಗಿ ಆಯ್ಕೆಯಾದ ರೋಡ್ರಿಗೋ ಡುಟ್‍ಕೆಟ್ ಮತ್ತು ಉಗಾಂಡದಲ್ಲಿ 5ನೇ ಬಾರಿ ಅಧ್ಯಕ್ಪರಾಗಿ ಆಯ್ಕೆಯಾದ ಯೋವರಿ ಮುಸೆವೇನಿ ಮುಂತಾದವರು ನರೇಂದ್ರ ಮೋದಿಯವರಂತೆ ಬಲಪಂಥೀಯ ವಿಚಾರಧಾರೆಯನ್ನೇ ಪ್ರತಿನಿಧಿಸುವವರು. ಆದರೆ ಈ ದೇಶದಲ್ಲಿ ಜಾತ್ಯತೀತ ಮೌಲ್ಯಗಳು ಎಷ್ಟು ಆಳವಾಗಿ ಬೇರೂರಿ ಬಿಟ್ಟಿವೆಯೆಂದರೆ, ಕೇವಲ ನಾಲ್ಕು ವರ್ಷಗಳಲ್ಲೇ  ಓರ್ವ ಜಾತ್ಯತೀತ ವಿರೋಧಿ ಪ್ರಬಲ ನಾಯಕ ತೆರೆಮರೆಗೆ ಸರಿಯುವ ಸೂಚನೆ ನೀಡುತ್ತಿದ್ದಾರೆ. ಅವರ ಹೊಳಪು ಮಬ್ಬಾಗತೊಡಗಿದೆ. 2014ರಲ್ಲಿ ಅವರು ಉದುರಿಸಿದ ಡಯಲಾಗ್‍ಗಳು ಹಳತಾಗಿವೆ. ಹಳತಿನ ಜಾಗದಲ್ಲಿ ಹೊಸ ಡಯಲಾಗನ್ನು ಹೆಣೆಯುವುದಕ್ಕೆ ಅವರಲ್ಲಿ ಏನೇನೂ ಇಲ್ಲ. ಸ್ವಿಸ್ ಬ್ಯಾಂಕ್‍ನಿಂದ ಕಪ್ಪು ಹಣವನ್ನು ತಂದು ಪ್ರತಿ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಪ ತುಂಬುವಲ್ಲಿಂದ ಹಿಡಿದು ಪಾಕಿಸ್ತಾನಕ್ಕೆ ಪಾಠ ಕಲಿಸುವವರೆಗೆ 2014ರಲ್ಲಿ ಮೋದಿ ಯಾವೆಲ್ಲ ಭರವಸೆಗಳನ್ನು ಹುಟ್ಟು ಹಾಕಿದ್ದರೋ ಅವೆಲ್ಲವೂ ನಾಲ್ಕು ವರ್ಷಗಳ ಅಧಿಕಾರದ ಬಳಿಕವೂ ಈಡೇರದ ಭರವಸೆಗಳಾಗಿಯೇ ಉಳಿದುಕೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಯೋಧರು ಪಾಕ್ ಗಡಿಯಲ್ಲಿ ಪ್ರಾಣ ತೆತ್ತಷ್ಟು ಮನ್‍ಮೋಹನ್‍ರ ಎರಡು ಪೂರ್ಣ ಅವಧಿಗಳಲ್ಲೂ ತೆತ್ತಿರಲಿಲ್ಲ ಎಂದು ಹೇಳಲಾಗುತ್ತದೆ. ಯಾವೆಲ್ಲ ಸುಧಾರಣೆಗಳನ್ನು ಮತ್ತು ಬದಲಾವಣೆಗಳನ್ನು ಯುವ ಮತದಾರರು ನಿರೀಕ್ಷಿಸಿದ್ದರೋ ಅವೆಲ್ಲವೂ ನಿರಾಶೆಯಾಗಿ ಪರಿವರ್ತನೆಯಾಗತೊಡಗಿದೆ. ಮೋದಿ ವರ್ಚಸ್ಸು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಕುಸಿಯತೊಡಗಿದೆ. ಅವರ ಭಾಷಣಗಳು ಸಪ್ಪೆಯಾಗತೊಡಗಿವೆ. 2014ರಲ್ಲಿ ತಮಾಷೆಯ ವಸ್ತುವಾಗಿದ್ದ ರಾಹುಲ್ ಗಾಂಧಿಯವರು ಈಗ ಪ್ರಬಲ ಮಾತುಗಾರನಾಗಿ ಮತ್ತು ಪ್ರತಿಸ್ಪರ್ಧಿಯಾಗಿ ಬೆಳೆದಿರುವುದೇ ಮೋದಿಯವರ ಜನಪ್ರಿಯತೆ ಕುಸಿದಿರುವುದಕ್ಕೆ ಉತ್ತಮ ಪುರಾವೆ. ಈಗಿನ ಭಾರತವು ಮೋದಿಯನ್ನು ಹೊರತುಪಡಿಸಿದ ನಾಯಕನನ್ನು ಹುಡುಕತೊಡಗಿದೆ. ಒಂದು ವೇಳೆ ಯುವ ಸಮೂಹದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಈ ವಿಷಾದ ಭಾವವು ಹೀಗೆಯೇ ಮುಂದುವರಿದರೆ 2019ರ ಚುನಾವಣೆಯ ಬಳಿಕ ಮೋದಿ ಪ್ರಧಾನಿಯಾಗಿ ಉಳಿಯುವ ಸಾಧ್ಯತೆ ತೀರಾ ಕಡಿಮೆ.