1. ಬಿಜೆಪಿ-ಆರೆಸ್ಸೆಸ್‍ಗಳ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿದ ಗೃಹ ಸಚಿವ ಶಿಂಧೆ..
2. ಯಡಿಯೂರಪ್ಪ ನಿಷ್ಠ 13 ಶಾಸಕರಿಂದ ರಾಜ್ಯಪಾಲರ ಭೇಟಿ. ಸ್ಪೀಕರ್ ನಾಪತ್ತೆ..
3. ಟಿಪ್ಪು ಸುಲ್ತಾನ್ ವಿವಿಯನ್ನು ಬೆಂಬಲಿಸಿದ ಅನಂತಮೂರ್ತಿ..
4. ಬೆಳಗಾಂ ಜಿಲ್ಲೆಯ ಸಂಕೇಶ್ವರದ ಹಿರಣ್ಯಕೇಶಿ ನದಿದಡದಲ್ಲಿ ಹೂತಿಡಲಾಗಿದ್ದ 16 ಭ್ರೂಣಗಳು ಪತ್ತೆ..
ಕಳೆದೊಂದು ವಾರದಲ್ಲಿ ಒಂದಲ್ಲ ಒಂದು ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡ ಶೀರ್ಷಿಕೆಗಳಿವು. ವಿಶೇಷ ಏನೆಂದರೆ, ‘ಭ್ರೂಣ'ದ ಸುದ್ದಿಯನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಸುದ್ದಿಗಳೂ ಪತ್ರಿಕೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಚರ್ಚೆಗೊಳಗಾಗಿವೆ. ಅವುಗಳಿಗೆ ಸಂಬಂದಿಸಿದ ಲೇಖನಗಳು ಪ್ರಕಟವಾಗಿವೆ. ಟಿ.ವಿ. ಗಳಂತೂ, ಶೆಟ್ಟರ್ ಸರಕಾರ ಉಳಿಯುತ್ತೋ ಉರುಳುತ್ತೋ ಅನ್ನುವ ಧಾಟಿಯಲ್ಲಿ ಗಂಟೆಗಟ್ಟಲೆ ಚರ್ಚಿಸಿವೆ. ಟಿಪ್ಪು ಸುಲ್ತಾನ್ ಎಷ್ಟು ಶೇಕಡಾ ಮತಾಂಧ ಮತ್ತು ಎಷ್ಟು ಶೇಕಡಾ ಅಲ್ಲ ಎಂಬ ಬಗ್ಗೆ ‘ಗಂಭೀರ' ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ. ಆದರೆ ಪತ್ರಿಕೆಗಳಲ್ಲಾಗಲಿ, ಟಿ.ವಿ.ಗಲ್ಲಾಗಲಿ, ‘ಭ್ರೂಣ'ಗಳು ಚರ್ಚೆಗೆ ಒಳಗಾಗಿಯೇ ಇಲ್ಲ. ಭ್ರೂಣಕ್ಕೆ ಗಂಭೀರ ಚರ್ಚಾವಸ್ತುವಾಗುವ ಅರ್ಹತೆಯನ್ನು ಮಾಧ್ಯಮಗಳು ಬಿಡಿ, ಮಹಿಳಾವಾದಿಗಳು ಇಲ್ಲವೇ ಸಂಘಟನೆಗಳು ಕೂಡ ಈ ವರೆಗೆ ನೀಡಿಲ್ಲ. ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ ಪ್ರತಿಭಟನಾತ್ಮಕ ಮನಸ್ಥಿತಿಯನ್ನು ಹುಟ್ಟು ಹಾಕಿದಂತೆಯೇ ಭ್ರೂಣಹತ್ಯೆಯ ವಿರುದ್ಧ ಚಳವಳಿಯ ಪ್ರಜ್ಞೆಯನ್ನು ಹುಟ್ಟು ಹಾಕುವಲ್ಲಿ ಮಾಧ್ಯಮಗಳು ಮತ್ತು ಮಹಿಳಾ ಸಂಘಟನೆಗಳು ಮತ್ತೆ ಮತ್ತೆ ಸೋಲುತ್ತಲೇ ಇವೆ.
ನಿಜವಾಗಿ, ಭ್ರೂಣ ಎಂಬುದು ಗೋವಿನಂತೆ ಅಲ್ಲ. ಭ್ರೂಣಕ್ಕೂ ಮನುಷ್ಯನಿಗೂ ಕರುಳ ಬಳ್ಳಿಯ ಸಂಬಂಧ ಇದೆ. ಭ್ರೂಣ ಹತ್ಯೆ ಎಂಬುದು ಓರ್ವ ಮನುಷ್ಯನ ದಾರುಣ ಹತ್ಯೆಗೆ, ಕೊಲೆಗೆ ಸಮಾನ. ದುರಂತ ಏನೆಂದರೆ, ಭ್ರೂಣಗಳಿಗೆ ರಾಜಕೀಯ ಇಮೇಜು ಇಲ್ಲದಿರುವುದು. ಆದರೆ ಗೋವಿಗೆ ಅದು ಲಭ್ಯವಾಗಿ ಬಿಟ್ಟಿದೆ. ಅಕ್ರಮವಾಗಿ ಗೋವಿನ ಸಾಗಾಟ ನಡೆಯುತ್ತದೋ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ರಾತ್ರಿಯೆಲ್ಲಾ ನಿದ್ದೆಗೆಟ್ಟು ಕಾಯುವ ತಂಡಗಳು ನಮ್ಮ ನಡುವೆ ಇವೆ. ಅಕ್ರಮ ಗೋ ಸಾಗಾಟದ ಆರೋಪ ಹೊರಿಸಿ ನಡುಬೀದಿಯಲ್ಲೇ ಥಳಿಸುವ, ಬೆತ್ತಲೆಗೊಳಿಸುವ ಗೋ ಪ್ರೇಮಿಗಳೂ ನಮ್ಮಲ್ಲಿದ್ದಾರೆ. ಗೋಹತ್ಯೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಗಲ್ಲಿಗಲ್ಲಿಗಳಲ್ಲಿ ಪ್ರತಿಭಟನೆ ನಡೆಯುತ್ತದೆ. ವಿಚಾರಗೊಷ್ಟಿಗಳೂ ಸಂವಾದಗಳೂ ನಡೆಯುತ್ತವೆ. ಆದರೆ ಭ್ರೂಣಗಳಿಗೆ ಗೋವಿನ ಸಾಮರ್ಥ್ಯ ಇಲ್ಲದೇ ಇರುವುದರಿಂದ ಗೋವುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅವು ಹತ್ಯೆಗೆ ಒಳಗಾಗುತ್ತಿದ್ದರೂ ಗಂಭೀರ ಸಮಸ್ಯೆಯಾಗಿ ಗುರುತಿಸಿಕೊಳ್ಳುತ್ತಲೇ ಇಲ್ಲ. ಒಂದು ವೇಳೆ ಭ್ರೂಣಗಳಿಗೆ ಮಾತಾಡುವ ಸಾಮರ್ಥ್ಯ ಇರುತ್ತಿದ್ದರೆ, ಅವುಗಳ ಮಾತಿನ ಧಾಟಿಯಾದರೂ ಹೇಗಿರುತ್ತಿತ್ತು? ನಾಲ್ಕು ಕಾಲಿನ ಪ್ರಾಣಿಗೆ ಈ ದೇಶದಲ್ಲಿ ಇರುವ ಗೌರವ ಮತ್ತು ಆದರ, ಮನುಷ್ಯರಿಗೆ ಇಲ್ಲವೇ ಎಂದು ಅದು ಪ್ರಶ್ನಿಸುತ್ತಿತ್ತಲ್ಲವೇ? ಗೋ ಹತ್ಯೆಯನ್ನು ತಡೆಯುವ ಸ್ಪಷ್ಟವಾದ ಕಾನೂನು ಇನ್ನೂ ಜಾರಿಯಾಗಿಲ್ಲದಿದ್ದರೂ ಈಗಾಗಲೇ ಒಂದು ತಂಡ ಗೋವುಗಳ ಕಾವಲಿಗಾಗಿ ಬೀದಿಗಿಳಿದಿರುವುದನ್ನು ಉಲ್ಲೇಖಿಸುತ್ತಾ ‘ನೀವೇಕೆ ಹೀಗೆ’ ಎಂದು ಜನ ಪ್ರತಿನಿಧಿಗಳು, ಮಾಧ್ಯಮ ಮಿತ್ರರು, ಹೋರಾಟಗಾರರನ್ನು ಅದು ಚುಚ್ಚುತ್ತಿತ್ತಲ್ಲವೇ? ತಮ್ಮ ರಕ್ಷಣೆಗಾಗಿ ಲೋಕಾಯುಕ್ತದಂಥ ಪ್ರಬಲ ಕಾನೂನನ್ನು ರಚಿಸುವಂತೆ ಒತ್ತಾಯಿಸುತ್ತಿತ್ತಲ್ಲವೇ?
ಮನುಷ್ಯ ಹೆಚ್ಚೆಚ್ಚು ಆಧುನಿಕಗೊಂಡಂತೆಯೇ ಆಲೋಚನೆಗಳಲ್ಲಿ ಹೆಚ್ಚೆಚ್ಚು ವಿಕಾರಗಳು ತುಂಬಿಕೊಳ್ಳುತ್ತಲೂ ಇವೆ. ಆಧುನಿಕ ಯುವ ಪೀಳಿಗೆಯು ಇಂಗ್ಲಿಷ್ ಭಾಷೆಯನ್ನು ಮಾತ್ರವಲ್ಲ, ಇಂಗ್ಲಿಷ್ ಮೌಲ್ಯಗಳನ್ನು ಕೂಡ ಧಾರಾಳವಾಗಿ ಅಪ್ಪಿಕೊಳ್ಳುತ್ತಿವೆ. ತಮಗೆ ದೊರಕದ ಅವಕಾಶಗಳು ಮಕ್ಕಳಿಗೆ ದೊರಕಲಿ ಎಂಬ ಅಭಿಲಾಷೆಯಿಂದ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಿರುವ ಪೋಷಕರು ಒಂದೆಡೆಯಾದರೆ; ನೈತಿಕ, ಅನೈತಿಕತೆಗಳ ಪರಿವೆಯೇ ಇಲ್ಲದೆ ‘ಆಧುನಿಕ' ವಾಗುತ್ತಿರುವ ಮಕ್ಕಳು ಇನ್ನೊಂದು ಕಡೆ. ಈ ಹಿಂದೆ ನಾವು ಖರೀದಿಸುತ್ತಿದ್ದ ವಸ್ತುಗಳೆಲ್ಲ ರಿಪೇರಿ ಆಗುತ್ತಿದ್ದುವು. ರೇಡಿಯೋ, ಸೈಕಲ್, ಚಪ್ಪಲಿ, ಟಾರ್ಚು, ವಾಚು... ಎಲ್ಲವೂ. ಆದರೆ ಇವತ್ತು ರಿಪೇರಿಗೆ ಒಗ್ಗುವಂಥ ವಸ್ತುಗಳು ತಯಾರಾಗುತ್ತಲೇ ಇಲ್ಲ. ಎಲ್ಲವೂ ಬಳಸಿ ಎಸೆಯುವಂಥದ್ದು. ‘ಆಧುನಿಕ' ಯುವ ಸಮೂಹ ಬೆಳೆಯುತ್ತಿರುವುದೂ ಬಹುತೇಕ ಈ ರೀತಿಯಲ್ಲೇ. ಅವು ರಿಪೇರಿಗೆ ಹೊಂದಿಕೊಳ್ಳುತ್ತಿಲ್ಲ. ನಿಜವಾಗಿ ರಿಪೇರಿ ಎಂಬುದು ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ಹೆಚ್ಚೆಚ್ಚು ಪಕ್ವವಾಗುತ್ತಾ ಬೆಳೆಯುವುದರ ಹೆಸರು. ಹಾನಿಗೀಡಾದ ಸೈಕಲನ್ನು ಮೆಕ್ಯಾನಿಕ್ ರಿಪೇರಿ ಮಾಡುತ್ತಿರುವಾಗ, ಹತ್ತಿರವೇ ನಿಂತ ಮಾಲಿಕ ಅದನ್ನು ನೋಡುತ್ತಿರುತ್ತಾನೆ. ಸೈಕಲ್ ಹಾಳಾಗುವುದಕ್ಕಿರುವ ಕಾರಣಗಳ ಬಗ್ಗೆ ಚರ್ಚಿಸುತ್ತಾನೆ. ಮುಂದೆ ಹೇಗೆಲ್ಲ ಸೈಕಲನ್ನು ಬಳಸಬಾರದು ಎಂಬುದನ್ನು ಕಲಿತುಕೊಳ್ಳು ತ್ತಾನೆ. ಒಂದು ರೀತಿಯಲ್ಲಿ ರಿಪೇರಿ ಎಂಬುದು ಮನುಷ್ಯನ ಪಾಲಿಗೆ ಒಂದು ಪುನರವಲೋಕನವಿದ್ದಂತೆ. ಆದರೆ ಆಧುನಿಕ ಇಂಗ್ಲಿಷ್ ಮೌಲ್ಯಗಳಲ್ಲಿ ಈ ‘ರಿಪೇರಿ'ಗೆ ಅವಕಾಶವೇ ಸಿಗುತ್ತಿಲ್ಲ. ಆದ್ದರಿಂದಲೇ ಗಂಡನ ವಿರುದ್ಧ ಪತ್ನಿ; ಮಕ್ಕಳ ವಿರುದ್ಧ ಹೆತ್ತವರು.. ವಿವಿಧ ಆರೋಪಗಳನ್ನು ಹೊರಿಸುತ್ತಾ ಕೋರ್ಟಿನ ಮೆಟ್ಟಲು ಹತ್ತುತ್ತಿರುವುದು. ದಿನಂಪ್ರತಿ ಅತ್ಯಾಚಾರದ, ಭ್ರಷ್ಟಾಚಾರದ ಸುದ್ದಿಗಳು ಕೇಳಿ ಬರುತ್ತಲೇ ಇರುವುದು.
ಭ್ರಷ್ಟಾಚಾರ ಮತ್ತು ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ ಪ್ರತಿಭಟನೆ ಕಾಣಿಸಿಕೊಂಡಂತೆಯೇ ಭ್ರೂಣ ಹತ್ಯೆಯ ವಿರುದ್ಧವೂ ಯೋಜಿತ ಚಳವಳಿಯೊಂದು ಹುಟ್ಟಿಕೊಳ್ಳಬೇಕಾದ ಅಗತ್ಯ ಇದೆ. ಆಸ್ಪತ್ರೆಗಳೆಂಬ ನಾಲ್ಕು ಗೋಡೆಗಳ ಒಳಗೆ ನಡೆಯುತ್ತಿರುವ ಮನುಷ್ಯ ಹತ್ಯೆಯನ್ನು, ‘ಪಾತಕ’ ಎಂದು ಆಧುನಿಕ ಜಗತ್ತಿಗೆ ಮನವರಿಕೆ ಮಾಡಿಸಬೇಕಾದ ಅನಿವಾರ್ಯತೆ ಇದೆ. ಭ್ರೂಣಗಳಿಗೆ ಬಾಯಿ ಬರುವುದಿಲ್ಲ ಎಂಬುದು ಅವುಗಳ ಮೇಲಿನ ಕ್ರೌರ್ಯಕ್ಕೆ ಸಬೂಬು ಆಗಬಾರದು. ಇಷ್ಟಕ್ಕೂ ಪ್ರಾಣಿಗಳನ್ನು ಪ್ರೀತಿಸುವ, ಅವುಗಳ ಹಕ್ಕುಗಳಿಗಾಗಿ ಧರಣಿ ನಡೆಸುವ ಜಗತ್ತಿನಲ್ಲಿ, ಭ್ರೂಣಗಳಿಗಾಗಿ ಒಂದು ಗಂಟೆಯ ಪ್ರತಿಭಟನೆ ನಡೆಸುವುದಕ್ಕೂ ಜನರಿಲ್ಲ ಅನ್ನುವ ವಾತಾವರಣ ನಿರ್ಮಾಣಗೊಳ್ಳುತ್ತಿರುವುದು ಯಾವುದರ ಸೂಚನೆ? ಮನುಷ್ಯನ ಅರಿವಿನ ಮಟ್ಟ ವಿಸ್ತಾರವಾಗುತ್ತಾ ಹೋದಂತೆಯೇ ನೈತಿಕ ಅರಿವಿನ ಮಟ್ಟದಲ್ಲಿ ಕುಸಿತವಾಗುತ್ತಾ ಬರುತ್ತಿರುವುದೇಕೆ? ಜಗಮಗಿಸುವ ಮಾಲ್‍ಗಳು, ನಗರಗಳು, ಸಿನಿಮಾಗಳ ಮಧ್ಯೆ ಮನುಷ್ಯರು ಮನುಷ್ಯತ್ವವನ್ನೇ ಕಳಕೊಳ್ಳುತ್ತಿರುವರೇ?
ಏನೇ ಆಗಲಿ, ನಿಷ್ಠೆ ಬದಲಿಸಿದ 13 ಶಾಸಕರಿಗಿಂತ ಬೆಳಗಾವಿಯಲ್ಲಿ ಪತ್ತೆಯಾದ 16 ಭ್ರೂಣಗಳು ಖಂಡಿತ ಹೆಚ್ಚು ತೂಕವುಳ್ಳವು. ಒಂದು ವೇಳೆ ಈ ಭ್ರೂಣಗಳನ್ನು ಬೆಳೆಯಲು ಬಿಡುತ್ತಿದ್ದರೆ, 16 ಮೌಲ್ಯವಂತ ಮನುಷ್ಯರು ಈ ಸಮಾಜಕ್ಕೆ ದೊರಕುತ್ತಿದ್ದರೇನೋ. ಆದ್ದರಿಂದ ಭ್ರೂಣಹತ್ಯೆಯಂಥ ಕ್ರೌರ್ಯಗಳ ವಿರುದ್ಧ ಸಾಮಾಜಿಕ ಜಾಗೃತಿ ಮೂಡಲಿ. ನಿಷ್ಠೆ ಬದಲಿಸುವ ರಾಜಕಾರಣಿ ಮತ್ತು ಭ್ರೂಣಹತ್ಯೆ ಇವೆರಡರಲ್ಲಿ ಭ್ರೂಣಕ್ಕೆ ಹೆಚ್ಚಿನ ಆದ್ಯತೆ ಸಿಗಲಿ.