Friday, 21 October 2016

ಶೇ.16ರ ಮೇಲೆ ಶೇ. 80ರಷ್ಟು ಶಂಕೆ

        ಸಮಾನ ನಾಗರಿಕ ಸಂಹಿತೆಯ ಸ್ವರೂಪವನ್ನು ಸಿದ್ಧಗೊಳಿಸುವ ಉದ್ದೇಶದಿಂದ ರಚಿತವಾದ ಕೇಂದ್ರ ಕಾನೂನು ಆಯೋಗದ ಎದುರು ಹೈದರಾಬಾದ್‍ನ 13ರ ಬಾಲೆಯೋರ್ವಳು ದೊಡ್ಡದೊಂದು ಪ್ರಶ್ನೆಯನ್ನು ಬಿಟ್ಟು ಹೋಗಿದ್ದಾಳೆ. ಹೆಸರು ಆರಾಧನಾ. ಜೈನ ಧರ್ಮಿಯಳು. ಜೈನ ಧರ್ಮದ ಸಂಪ್ರದಾಯದಂತೆ ಪವಿತ್ರ ‘ಚೌಮಾಸ’ದ ಅವಧಿಯಲ್ಲಿ ಈಕೆ 68 ದಿವಸಗಳ ವರೆಗೆ ಉಪವಾಸ ಕೂರುತ್ತಾಳೆ. ಈ ಉಪವಾಸ ಜೈನ ಸಮುದಾಯದಲ್ಲಿ ವೈಭವೀಕರಣಗೊಳ್ಳುತ್ತದೆ. ಭಕ್ತರು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಮದುಮಗಳಂತೆ ಆಕೆಯನ್ನು ಶೃಂಗರಿಸಲಾಗುತ್ತದೆ. ಆಕೆ ಇವುಗಳಿಂದ ರೋಮಾಂಚಿತಳಾಗುತ್ತಾಳೆ. ಜೈನ ಧರ್ಮದ ಹಿರಿಯರು ಅನ್ನ, ನೀರನ್ನು ತ್ಯಜಿಸಿ ಸ್ವಇಚ್ಛೆಯಿಂದ ದೇಹ ತ್ಯಾಗಮಾಡುವುದಕ್ಕಾಗಿ ‘ಸಲ್ಲೇಖನಾ ವೃತ’ ಕೈಗೊಳ್ಳುವುದು ಸಹಜವಾಗಿದ್ದರೂ ಮತ್ತು ವೈಯಕ್ತಿಕ ಹಕ್ಕಾಗಿ ಅದು ಪರಿಗಣಿತವಾಗಿದ್ದರೂ ಬಾಲೆಯೋರ್ವಳು ದೀರ್ಘ ಉಪವಾಸಕ್ಕೆ ಮುಂದಾಗುವುದು ಹೊಸತು. ಸ್ವಧರ್ಮೀಯರ ಗೌರವ ಮತ್ತು ಭಾವುಕತೆಯು ಆ ಬಾಲೆಯನ್ನು ನಿಗದಿತ 68 ದಿನಗಳ ಕಾಲ ಉಪವಾಸ ಪೂರ್ತಿಗೊಳಿಸುವಂತೆ ಒತ್ತಡಕ್ಕೆ ತಳ್ಳುತ್ತದೆ. ಆಕೆ ಉಪವಾಸ ಪೂರ್ತಿಗೊಳಿಸುತ್ತಾಳೆ. ಈ ಧಾರ್ಮಿಕ ಉಪವಾಸವನ್ನು ಪ್ರಶಂಸಿಸಿ ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾಗುತ್ತದೆ. ಸಮಾರಂಭ ಏರ್ಪಾಡಾಗುತ್ತದೆ. ಗಣ್ಯರು ಭಾಗವಹಿಸುತ್ತಾರೆ. ಇದಾಗಿ ಎರಡು ದಿನಗಳಲ್ಲಿ ಈಕೆ ಅಸ್ವಸ್ಥಗೊಳ್ಳುತ್ತಾಳೆ. ಬಹು ಅಂಗಾಂಗಗಳ ವೈಫಲ್ಯದಿಂದಾಗಿ ಸಾವಿಗೀಡಾಗುತ್ತಾಳೆ. ಆದರೆ ಈ ಸಾವೂ ವೈಭವೀಕರಣಗೊಳ್ಳುತ್ತದೆ. ‘ಬಾಲ ತಪಸ್ವಿ’ ಎಂದು ಕೊಂಡಾಡಲಾಗುತ್ತದೆ. ಅಂತಿಮ ಸಂಸ್ಕಾರದ ಮೆರವಣಿಗೆಯಲ್ಲಿ 600ಕ್ಕಿಂತಲೂ ಅಧಿಕ ಮಂದಿ ಪಾಲುಗೊಳ್ಳುತ್ತಾರಲ್ಲದೇ ಅಂತಿಮ ಮೆರವಣಿಗೆಗೆ ‘ಶೋಭಾಯಾತ್ರೆ’ ಎಂದು ಹೆಸರಿಸಲಾಗುತ್ತದೆ. ದುರಂತ ಏನೆಂದರೆ, ಈ ಬಾಲೆಯ ಸಾವಿನ ಒಂದು ವಾರದ ಬಳಿಕ ಬಿಡುಗಡೆಗೊಂಡ ಕಾನೂನು ಆಯೋಗದ 16 ಪ್ರಶ್ನೆಗಳಲ್ಲಿ ಈ ಮಗು ಎತ್ತಿದ ಬಹುಮುಖ್ಯ ಪ್ರಶ್ನೆಗೆ ಯಾವ ಸ್ಥಾನವನ್ನೂ ಕೊಟ್ಟಿಲ್ಲ. ನನ್ನ ಮೃತ್ಯುವನ್ನು ಯಾವ ಪಟ್ಟಿಯಲ್ಲಿ ಸೇರಿಸುತ್ತೀರಿ? ಇದು ವೈಯಕ್ತಿಕ ಹಕ್ಕೋ ಅಥವಾ ಹಿಂಸೆಯೋ ಅಥವಾ ಆತ್ಮಹತ್ಯೆಯೋ? ನನ್ನ ಹಿರಿಯರು ಕೈಗೊಳ್ಳುವ ಸಲ್ಲೇಖನಾ ವೃತದ ವ್ಯಾಖ್ಯಾನ ಏನು? ಅದು ಜೈನ ಧರ್ಮೀಯರ ವೈಯಕ್ತಿಕ ಹಕ್ಕುಗಳ ಚೌಕಟ್ಟಿನೊಳಗೆ ಬರುತ್ತದೋ ಅಥವಾ ಅದನ್ನು ಆತ್ಮಹತ್ಯೆಯ ಪ್ರಯತ್ನ ಎಂದು ಪರಿಗಣಿಸುತ್ತೀರೋ? ಹಾಗಂತ, ಪ್ರಶ್ನೆ ಇಲ್ಲಿಗೇ ಮುಗಿಯುವುದಿಲ್ಲ. ಹಿಂದೂ ಸಮುದಾಯದಲ್ಲಿ ವಿಧವೆಯರು ಅಸಹಜ ಬದುಕನ್ನು ಬದುಕುತ್ತಿದ್ದಾರೆ. ಪ್ರತಿ ವರ್ಷ ಹೋಳಿ, ದೀಪಾವಳಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ವೃಂದಾವನದಲ್ಲಿ ವಿಧವೆಯರು ಸುದ್ದಿಗೀಡಾಗುವುದಿದೆ. ಪತಿಯನ್ನು ಕಳೆದುಕೊಂಡು ವಿಧವೆಯಾದವರು ತಮ್ಮ ಉಳಿದ ಬದುಕನ್ನು ಶ್ರೀಕೃಷ್ಣನ ಭಜನೆ ಮಾಡುತ್ತಾ ವೃಂದಾವನದಲ್ಲಿ ಕಳೆಯುವುದು ಮೋಕ್ಷಾರ್ಹ ಎಂದು ಹಿಂದೂ ಧರ್ಮೀಯರಲ್ಲಿ ನಂಬಿಕೆಯಿದೆ. ಇಂಥ ಸಾವಿರಾರು ವಿಧವೆಯರ ದಯನೀಯ ಬದುಕಿನ ಕುರಿತಂತೆ ಮೂರ್ನಾಲ್ಕು ವರ್ಷಗಳ ಹಿಂದೆ ಸುಪ್ರೀಮ್ ಕೋರ್ಟ್ ತೀವ್ರ ಅಘಾತವನ್ನು ವ್ಯಕ್ತಪಡಿಸಿತ್ತು. ವೃಂದಾವನದಲ್ಲಿ ಸಾವಿಗೀಡಾಗುವ ವಿಧವೆಯರನ್ನು ಕತ್ತರಿಸಿ ಗೋಣಿ ಚೀಲದಲ್ಲಿ ಹಾಕಿ ಎಸೆಯುತ್ತಿರುವ ಘಟನೆಗಳ ಕುರಿತಂತೆ ಓರ್ವ ಅರ್ಜಿದಾರರು ಕೋರ್ಟ್‍ನ ಗಮನಕ್ಕೆ ತಂದಿದ್ದರು. ಕೃಷ್ಣನ ಭಜನೆ ಮಾಡುತ್ತಾ ತುತ್ತು ಅನ್ನಕ್ಕಾಗಿ ಪರದಾಡುವ ಅವರ ಸ್ಥಿತಿಯನ್ನು ಅರ್ಜಿಯಲ್ಲಿ ವಿವರಿಸಲಾಗಿತ್ತು. ಎಷ್ಟೋ ವಿಧವೆಯರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಕುಟುಂಬಸ್ಥರು ಬಲವಂತದಿಂದ ಅಲ್ಲಿ ಬಿಟ್ಟು ಹೋಗುತ್ತಿದ್ದರು. ಈ ಬಗ್ಗೆ ಕೋರ್ಟು ತನಿಖೆಗೂ ಆದೇಶಿಸಿತ್ತು. ಪ್ರಶ್ನೆ ಇದಲ್ಲ. ಇದು ಮಹಿಳೆಯರ ಮೇಲೆ ಎಸಗಲಾಗುವ ದೌರ್ಜನ್ಯವೋ, ಹಕ್ಕು ಹರಣವೋ, ಗೌರವವೋ ಆಥವಾ ಧಾರ್ಮಿಕ ವಿಧಿಯೋ? ಕಾನೂನು ಆಯೋಗದ ನಿಲುವೇನು? ಅದು ಬಿಡುಗಡೆಗೊಳಿಸಿದ 16 ಪ್ರಶ್ನೆಗಳಲ್ಲಿ ಅರಾಧನಳ ಪ್ರಶ್ನೆಗಳಿಗೆ, ವೃಂದಾವನದ ವಿಧವೆಯರ ಪ್ರಶ್ನೆಗಳಿಗೆ ಮತ್ತು ಮಠ-ಮಂದಿರಗಳಲ್ಲಿರುವ ಪಂಕ್ತಿಬೇಧ, ಮಡೆಸ್ನಾನದಂಥ ಹತ್ತಾರು ಸಂಪ್ರದಾಯಗಳಿಗೆ ಸಂಬಂಧಿಸಿ ಯಾವ ಪ್ರಶ್ನೆಯನ್ನೂ ಕೇಳಿಲ್ಲವಲ್ಲ, ಯಾಕೆ? 16 ಪ್ರಶ್ನೆಗಳಲ್ಲಿ ಮುಸ್ಲಿಮರ ವೈಯಕ್ತಿಕ ಹಕ್ಕುಗಳನ್ನೇ ಹೆಚ್ಚಾಗಿ ಶಂಕೆಯ ಮೊನೆಯಲ್ಲಿ ನಿಲ್ಲಿಸಿರುವುದೇಕೆ? ಈ ದೇಶದಲ್ಲಿ ಮುಸ್ಲಿಮರಿರುವುದು ಕೇವಲ 18 ಕೋಟಿ. ಇವರಿಗೆ ಹೋಲಿಸಿದರೆ ಹಿಂದೂಗಳ ಜನಸಂಖ್ಯೆ 80 ಕೋಟಿಯಷ್ಟಿದೆ. ಆದರೆ, ಕಾನೂನು ಆಯೋಗದ ಶಂಕೆಗೆ ಒಳಗಾಗಿರುವ ಪ್ರಶ್ನೆಗಳಲ್ಲಿ 80%ವೂ ನೇರವಾಗಿಯೋ ಪರೋಕ್ಷವಾಗಿಯೋ ಮುಸ್ಲಿಮರಿಗೇ ಸಂಬಂಧಿದವು. ಯಾಕೆ ಹೀಗೆ? ಕೇಂದ್ರದ ಉದ್ದೇಶವು ಶುದ್ಧವಾಗಿದ್ದರೆ ವಿವಾಹ, ತಲಾಕ್, ಜೀವನಾಂಶ, ದತ್ತು ಸ್ವೀಕಾರ, ಬಹುಪತ್ನಿತ್ವ... ಮುಂತಾದ ಮುಸ್ಲಿಮ್ ವೈಯಕ್ತಿಕ ನಿಯಮಗಳಡಿಯಲ್ಲಿ ಬರುವ ವಿಷಯಗಳೇ ಯಾಕೆ ಕಾಣಿಸಿಕೊಳ್ಳುತ್ತಿತ್ತು? ಅಷ್ಟಕ್ಕೂ, ಈ 16 ಪ್ರಶ್ನೆಗಳು ಕೊಡುವ ಸೂಚನೆಯೇನು? ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆ ಇಷ್ಟು ವಿಷಯಗಳಿಗೆ ಸಂಬಂಧಿಸಿ ಮಾತ್ರ ರಚನೆಗೊಳ್ಳುತ್ತದೆ ಎಂದೇ ಅಲ್ಲವೇ? ಯಾಕೆ ಮುಸ್ಲಿಮರ ವೈಯಕ್ತಿಕ ನಿಯಮಗಳಿಗೆ ಸಂಬಂಧಿಸಿದಂತೆ ಮಾತ್ರ ಸಮಾನ ನಾಗರಿಕ ಸಂಹಿತೆ ರಚನೆಯಾಗಬೇಕು? ಇತರೆಲ್ಲ ವಿಷಯಗಳನ್ನು ಯಾಕೆ ಇದರಿಂದ ಹೊರಗಿಡಲಾಗಿದೆ? 16 ಪ್ರಶ್ನೆಗಳಲ್ಲಿ ಪಂಕ್ತಿಬೇಧ, ಮಡೆಸ್ನಾನ, ವಿಧವೆಯರ ಸಂಕಟ, ಸಲ್ಲೇಖನಾ ವ್ರತ... ಸಹಿತ ಈ ದೇಶದ ವಿವಿಧ ಜಾತಿ-ಧರ್ಮಗಳಲ್ಲಿರುವ ನೂರಾರು ವೈಯಕ್ತಿಕ ನಿಯಮಗಳ ಬಗ್ಗೆ ಯಾವ ಉಲ್ಲೇಖವೂ ಇಲ್ಲವೇಕೆ? ಮುಸ್ಲಿಮರ ವೈಯಕ್ತಿಕ ಹಕ್ಕನ್ನು ರದ್ದು ಪಡಿಸುವುದೇ ಈ ಸಂಹಿತೆಯ ಮುಖ್ಯ ಉದ್ದೇಶ ಎಂಬುದೇ ಇದು ಕೊಡುವ ಸೂಚನೆಯಲ್ಲವೇ? ಸಮತೋಲನಕ್ಕಾಗಿ ಮಾತ್ರ ಪ್ರಶ್ನಾವಳಿಯಲ್ಲಿ ಕೈಸ್ತರ ಕ್ಯೂರಿಂಗ್ ಪದ್ಧತಿಯನ್ನು, ಅಂತರ್ಜಾತಿ ಮದುವೆಯಂಥ ಒಂದೆರಡು ವಿಷಯಗಳನ್ನು ಸೇರಿಸಲಾಗಿದೆ ಎಂದು ಅನಿಸುವುದಿಲ್ಲವೇ? 20%ಕ್ಕಿಂತ ಕಡಿಮೆ ಇರುವ ಸಮುದಾಯದಲ್ಲಿ 80%ಕ್ಕಿಂತ ಅಧಿಕ ಸಮಸ್ಯೆಗಳನ್ನು ಪತ್ತೆ ಹಚ್ಚುವುದು ಮತ್ತು 80% ಇರುವ ಸಮುದಾಯದಲ್ಲಿ ಗಂಭೀರವಾದ ಸಮಸ್ಯೆಗಳೇ ಕಾಣದಿರುವುದು ಏನನ್ನು ಸೂಚಿಸುತ್ತದೆ? ಅಂದಹಾಗೆ,
      ಮುಸ್ಲಿಮರ ವಿವಾಹ, ತಲಾಕ್, ಬಹುಪತ್ನಿತ್ವ, ಜೀವನಾಂಶ, ದತ್ತು ಸ್ವೀಕಾರ ಮುಂತಾದುವುಗಳ ಬಗ್ಗೆ ಪ್ರಶ್ನೆ ಕೇಳುವುದಕ್ಕಿಂತ ಮೊದಲು ಉತ್ತರಿಸುವವರ ಅರ್ಹತೆಯನ್ನೂ ಪರಿಶೀಲಿಸಬೇಡವೇ? ಕ್ರೈಸ್ತರ ವಿಚ್ಛೇದನ ಪ್ರಕ್ರಿಯೆಯ ಭಾಗವಾಗಿರುವ ಎರಡು ವರ್ಷಗಳ ಕ್ಯೂರಿಂಗ್ ಅವಧಿಯ ಕುರಿತು ಈ ದೇಶದಲ್ಲಿ ಎಷ್ಟಂಶ ಮಾಹಿತಿಯಿದೆ? ಕಾನೂನು ಆಯೋಗ ಬಿಡುಗಡೆಗೊಳಿಸಿರುವ 16 ಪ್ರಶ್ನೆಗಳಿಗೆ ದೇಶದ ಧಾರ್ಮಿಕ, ಸಾಮಾಜಿಕ, ಸ್ವಯಂಸೇವಾ ಸಂಘಟನೆಗಳು, ಅಲ್ಪಸಂಖ್ಯಾತ ವಿಭಾಗಗಳು, ರಾಜಕೀಯ ಪಕ್ಷಗಳು, ಸರಕಾರಿ ಸಂಸ್ಥೆ ಮತ್ತಿತರ ಸಂಘ ಸಂಸ್ಥೆಗಳು 45 ದಿನಗಳೊಳಗೆ ಉತ್ತರಿಸಬೇಕೆಂದು ಗಡುವು ವಿಧಿಸುವಾಗ ಅವು ಉತ್ತರಿಸುವುದಕ್ಕೆ ಎಷ್ಟು ಅರ್ಹ ಎಂಬುದನ್ನೂ ನೋಡಬೇಡವೇ? 20% ದಷ್ಟು ಇರುವ ಅಲ್ಪಸಂಖ್ಯಾತ ವಿಭಾಗಗಳ ಸಂಘ ಸಂಸ್ಥೆಗಳು ಎಷ್ಟಿರಬಹುದು? 80% ಜನಸಂಖ್ಯೆಯಿರುವ ಸಮುದಾಯದಲ್ಲಿ ಸಂಘ ಸಂಸ್ಥೆಗಳು ಎಷ್ಟಿರಬಹುದು? ತಲಾಕ್, ಜೀವನಾಂಶ, ಕ್ಯೂರಿಂಗ್... ಮುಂತಾದುವುಗಳ ಬಗ್ಗೆ ಇವುಗಳಿಂದ ವ್ಯಕ್ತವಾಗುವ ಉತ್ತರಗಳು ಹೇಗಿರಬಹುದು? ಯಾವುದು ಬಹುಮತವನ್ನು ಪಡೆಯಬಹುದು?
       ಈ ದೇಶದಲ್ಲಿ ಮುಸ್ಲಿಮ್ ವೈಯಕ್ತಿಕ ನಿಯಮಗಳ ಬಗ್ಗೆ ಎಷ್ಟು ಅಜ್ಞಾನವಿದೆ ಎಂಬುದಕ್ಕೆ ತಲಾಕ್‍ನ ಸುತ್ತ ಹೆಚ್ಚಿನ ಟಿವಿ ವಾಹಿನಿಗಳಲ್ಲಿ ನಡೆಯುತ್ತಿರುವ ಚರ್ಚೆಗಳೇ ಸಾಕ್ಷಿ. ವಿಚ್ಛೇದನ ಎಂಬ ಕನ್ನಡ ಪದದ ಪರ್ಯಾಯ ಪದ ತಲಾಕ್ ಎಂಬುದೇ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ತ್ರಿವಳಿ ತಲಾಕ್‍ನ ಬಗ್ಗೆ ಎಷ್ಟು ಘೋರ ತಪ್ಪು ತಿಳುವಳಿಕೆಯಿದೆಯೆಂದರೆ, ಪತಿ-ಪತ್ನಿ ಮೂರ್ನಾಲ್ಕು ವರ್ಷಗಳಿಂದ ವಿಚ್ಛೇದನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕೊನೆಗೆ ತಲಾಕ್, ತಲಾಕ್, ತಲಾಕ್ ಎಂದು ಹೇಳಿ ಬಿಟ್ಟರೆ ಅದನ್ನೇ ತ್ರಿವಳಿ ತಲಾಕ್ ಎಂದು ಹೇಳಿಬಿಡುವಷ್ಟು. ನಿಜವಾಗಿ, ತಲಾಕ್‍ನ ದುರುಪಯೋಗವಾಗಿರುವುದಕ್ಕಿಂತ ಹೆಚ್ಚು ಈ ದೇಶದಲ್ಲಿ ಸತ್ಯದ ದುರುಪಯೋಗವಾಗಿದೆ. ಸುಳ್ಳಿನ ವೈಭವೀಕರಣವಾಗಿದೆ. ಇದಕ್ಕೆ ಕಾನೂನು ಆಯೋಗದ 16 ಪ್ರಶ್ನೆಗಳು ಪರಿಹಾರ ಅಲ್ಲ. ಮುಸ್ಲಿಮ್ ಸಮುದಾಯದೊಳಗೆ ಇವತ್ತು ಸುಧಾರಣಾ ಕ್ರಾಂತಿಯೊಂದು ಚಾಲನೆಯಲ್ಲಿದೆ. ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಜಾಗೃತಿಯನ್ನು ಮೂಡಿಸುವಲ್ಲಿ ಈ ಕ್ರಾಂತಿ ಇವತ್ತು ಯಶಸ್ವಿಯಾಗಿದೆ. ತಲಾಕ್ ದುರುಪಯೋಗದ ವಿಷಯದಲ್ಲೂ ಇದು ಖಂಡಿತ ಸಾಧ್ಯವಾಗುತ್ತದೆ. 30 ವರ್ಷಗಳ ಹಿಂದಿನ ಪರಿಸ್ಥಿತಿಗೂ ಇವತ್ತಿಗೂ ನಡುವೆ ಹೋಲಿಸಿದರೆ ಈ ಕ್ಷೇತ್ರದಲ್ಲಾದ ಮಹತ್ತರ ಸುಧಾರಣೆ ಬರಿಗಣ್ಣಿಗೂ ಕಾಣುವಂತಹದ್ದು. ಇದು ಕಾನೂನಿನ ಸಮಸ್ಯೆಯಲ್ಲ. ಆಂತರಿಕ ಸುಧಾರಣೆಗೆ ಸಂಬಂಧಿಸಿದ್ದು. ಆದರೆ ರಾಜಕೀಯಕ್ಕೆ ಇವೆಲ್ಲ ಬೇಕಿಲ್ಲ, ಅಷ್ಟೇ.

No comments:

Post a Comment