Sunday, 18 September 2016

ಗಣೇಶ ವಿಸರ್ಜನೆ ಮತ್ತು ಸಾದಾತ್ ಖಾನ್: ನಮ್ಮೆಲ್ಲರ ಜೇಬಲ್ಲಿ ಇರಲೇಬೇಕಾದ ದೃಶ್ಯ

        ವಾರದ ಹಿಂದೆ ಗಣೇಶ ವಿಸರ್ಜನೆಯ ವೇಳೆ ತೆಪ್ಪ ಮುಳುಗಿ 12 ಮಂದಿ ಯುವಕರು ತುಂಗಭದ್ರಾ ನದಿ ಪಾಲಾದ ಘಟನೆಯಿಂದ ದುಃಖತಪ್ತವಾದ ಶಿವಮೊಗ್ಗದ ಹಾಡೋನಹಳ್ಳಿ ಗ್ರಾಮವು ಆ ಶೋಕದಲ್ಲೂ ಸಾದಾತ್ ಖಾನ್ ನೇತೃತ್ವದ ಮುಳುಗು ತಜ್ಞರ ತಂಡವನ್ನು ಶ್ಲಾಘಿಸಿದೆ. ಯುವಕರನ್ನು ಕಳೆದುಕೊಂಡು ಗ್ರಾಮವು ನದಿದಂಡೆಯಲ್ಲಿ ಬೀಡು ಬಿಟ್ಟಿದ್ದರೆ, ಸಾದಾತ್ ಖಾನ್ ನೇತೃತ್ವದ ತಂಡ ನದಿಯಲ್ಲಿತ್ತು. ಬಹುಶಃ, ಮನುಷ್ಯ ಪ್ರೇಮಕ್ಕೆ ಸಾಕ್ಷಿಯಾದ ಅಪೂರ್ವ ಕ್ಷಣ ಅದು. ದಂಡೆಯಲ್ಲಿರುವವರು ಮತ್ತು ನದಿಯಲ್ಲಿರುವವರ ನಡುವೆ ಮನುಷ್ಯರು ಎಂಬೊಂದು ಸಮಾನ ಅಂಶವನ್ನು ಬಿಟ್ಟರೆ ಉಳಿದಂತೆ ಧರ್ಮ, ಸಂಸ್ಕೃತಿ, ಆಚರಣೆ, ಭಾಷೆ, ಪೂಜಾ ಮಾದರಿ.. ಎಲ್ಲದರಲ್ಲೂ ಎತ್ತಿ ಹೇಳಬಹುದಾದಷ್ಟು ವ್ಯತ್ಯಾಸಗಳಿದ್ದುವು. ಸ್ಪಷ್ಟವಾಗಿ ಹೇಳಬೇಕೆಂದರೆ, ವಿಗ್ರಹವನ್ನು ಪೂಜಿಸುವ ಯುವಕರಿಗಾಗಿ ವಿಗ್ರಹವನ್ನು ಪೂಜಿಸದ ತಂಡ ನದಿಯಲ್ಲಿತ್ತು. ಧರ್ಮದ ನೆಪದಲ್ಲಿ ಥಳಿಸುವ, ದ್ವೇಷಿಸುವ ಮತ್ತು ಕೊಲೆಗೈಯುವವರ ಪಾಲಿಗೆ ಫ್ರೇಮ್ ಹಾಕಿ ಕೊರಳಲ್ಲಿ ತೂಗು ಹಾಕಿಕೊಳ್ಳಬೇಕಾದ ದೃಶ್ಯ ಇದು. ಧರ್ಮ ಮತ್ತು ಅದರ ಆಚರಣಾ ಪದ್ಧತಿಗಳು ಮನುಷ್ಯ ವಿಭಜನೆಯ ಸಂಕೇತವಲ್ಲ ಎಂದು ಬಲವಾಗಿ ಮತ್ತೆ ಮತ್ತೆ ಸಾರಿದ ಸಂದರ್ಭವೂ ಹೌದು. ಈ ಕಾರಣದಿಂದಲೇ ಕಣ್ಣೀರಿನ ಮಧ್ಯೆಯೂ ಸಾದಾತ್ ಖಾನ್ ತಂಡವನ್ನು ಆ ಗ್ರಾಮ ಅಭಿನಂದಿಸಿದೆ. ಮನಸಾರೆ ಕೊಂಡಾಡಿದೆ.
       ನಿಜವಾಗಿ, ಹಬ್ಬಗಳು ಇವತ್ತು ಸಂಭ್ರಮದ ಕ್ಷಣಗಳಾಗಿಯಷ್ಟೇ ಉಳಿದಿಲ್ಲ. ಹಬ್ಬಗಳಿಗೆ ಬೇಲಿಗಳನ್ನು ಹಾಕಲಾಗಿದೆ. ಹಬ್ಬ ಎಂದರೆ ಒಂದಷ್ಟು ಭಯ, ಒಂದಷ್ಟು ಆತಂಕ ಮತ್ತು ಒಂದಷ್ಟು ಅನುಮಾನಗಳ ಸಂಗ್ರಹ ರೂಪವಾಗಿಯೂ ಸಮಾಜದಲ್ಲಿ ಗುರುತಿಗೀಡಾಗಿದೆ. ಸದ್ಯ ಹಬ್ಬಕ್ಕೆ ಎರಡು ರೀತಿಯ ಪೂರ್ವ ತಯಾರಿಗಳನ್ನು ಮಾಡಲಾಗುತ್ತದೆ. ಒಂದು- ಆಹಾರ, ಉಡುಪು ಮತ್ತಿತರ ವಿಷಯಗಳಿಗೆ ಸಂಬಂಧಿಸಿದ್ದರೆ ಇನ್ನೊಂದು ಹಬ್ಬದ ದಿನಕ್ಕೆ ಸಂಬಂಧಿಸಿದ್ದು. ಒಂದು ಧರ್ಮದ ಹಬ್ಬದ ದಿನದಂದು ಇನ್ನೊಂದು ಧರ್ಮದ ಮಂದಿ ತುಸು ಆತಂಕದಿಂದಲೇ ಬೀದಿಗಿಳಿಯುವ ವಾತಾವರಣ ನಿರ್ಮಾಣವಾಗುತ್ತಿದೆ. ಹಬ್ಬಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಿ ಎಂದು ಪೊಲೀಸರನ್ನು ವಿನಂತಿಸಿಕೊಳ್ಳುವುದು ನಡೆಯುತ್ತದೆ. ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಬಾರಿಕೊಡ್‍ಗಳನ್ನು ಅಲ್ಲಲ್ಲಿ ರಸ್ತೆಗೆ ಅಡ್ಡವಾಗಿ ಇಡಲಾಗುತ್ತದೆ. ‘ಶಾಂತಿಯುತ ಹಬ್ಬಾಚರಣೆಗೆ ಕರೆ..’ ಎಂಬ ಶೀರ್ಷಿಕೆಯಲ್ಲಿ ಜಿಲ್ಲಾಧಿಕಾರಿಯದ್ದೋ ಪೊಲೀಸ್ ಕಮೀಷನರ್‍ರದ್ದೋ ವಿನಂತಿಯನ್ನು ಪತ್ರಿಕೆಗಳು ಪ್ರಕಟಿಸುತ್ತವೆ. ಬಹುಶಃ ಆಚರಿಸುವುದು ಹಬ್ಬವನ್ನೋ ಅಲ್ಲ, ಕುಸ್ತಿಯನ್ನೋ ಎಂದು ಅನುಮಾನಿಸುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಘಟನೆ ನಮಗೆ ಮುಖ್ಯವಾಗಬೇಕು. ಅಲ್ಲಿ ನಡೆದಿರುವುದು ದುರಂತವೊಂದೇ ಅಲ್ಲ. ದುರಂತದ ನೋವನ್ನೂ ಮರೆಸುವ ಮಾನವೀಯ ಘಟನೆಯೂ ನಡೆದಿದೆ. ಗಣೇಶ ವಿಸರ್ಜನೆ ಎಂಬುದು ಹಿಂದೂಗಳಿಗೆ ಸಂಬಂಧಿಸಿದ್ದು. ಗಣೇಶ ವಿಗ್ರಹದ ವಿಸರ್ಜನೆಯನ್ನು ನದಿ ಮಧ್ಯದಲ್ಲಿ ನಡೆಸಬೇಕೋ ಅಲ್ಲ ದಂಡೆಯಲ್ಲಿ ಮಾಡಿದರೆ ಸಾಕೋ, ಧಾರ್ಮಿಕ ಆಚರಣೆಗಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯ ಇದೆಯೇ.. ಎಂಬುದೆಲ್ಲ ಆ ಧರ್ಮದ ಒಳಗಡೆಯೇ ಚರ್ಚೆಗೊಳಗಾಗಬೇಕಾದದ್ದು. ಇದು ಕೇವಲ ಗಣೇಶ ವಿಸರ್ಜನೆಗೆ ಸಂಬಂಧಿಸಿ ಮಾತ್ರ ಹೇಳಬೇಕಾದುದಲ್ಲ, ಮೊಸರು ಕುಡಿಕೆಯನ್ನು ಒಡೆಯುವ ಸಂದರ್ಭಕ್ಕೂ ಅನ್ವಯಿಸಿ ಇದನ್ನು  ಹೇಳಬೇಕಾಗಿದೆ. ಶಿವಮೊಗ್ಗ ದುರಂತಕ್ಕಿಂತ ವಾರಗಳ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಓರ್ವ ಹದಿಹರೆಯದ ಯುವಕ ಮಡಿಕೆ ಒಡೆಯುವ ಭರದಲ್ಲಿ ಆಯತಪ್ಪಿ ಕೆಳಬಿದ್ದು ಸಾವಿಗೀಡಾಗಿದ್ದಾನೆ. ಇವು ಮತ್ತು ಇಂಥ ಇನ್ನಿತರ ಅನಾಹುತಗಳು ಹಬ್ಬಗಳ ಬಾಹ್ಯ ಆತಂಕಗಳಾದರೆ, ಆಂತರಿಕ ಆತಂಕಗಳಂತೂ ಇದನ್ನೂ ಮೀರುವಷ್ಟು ಅಪಾಯಕಾರಿಯಾಗಿ ಬೆಳೆಯುತ್ತಿವೆ. ಹಬ್ಬಗಳನ್ನು ಇವತ್ತು ಸಮಾಜ ಹೇಗೆ ವರ್ಗೀಕರಿಸಿಕೊಳ್ಳುತ್ತಿವೆಯೆಂದರೆ, ಅದರ ಸುಖ ಮತ್ತು ಆನಂದದಲ್ಲಿ ತನ್ನ ಧರ್ಮದವರ ಹೊರತು ಇನ್ನಾರೂ ಪಾಲುದಾರರಾಗಬಾರದೆಂಬಂತೆ ವರ್ತಿಸುತ್ತಿದೆ. ‘ದೀಪಾವಳಿಯ ಖುಷಿ ಹಿಂದೂಗಳಲ್ಲಿ ಮಾತ್ರ ಇರಬೇಕು, ಆ ಖುಷಿಯನ್ನು ಮುಸ್ಲಿಮರೊಂದಿಗೆ ಹಂಚಿಕೊಳ್ಳುವ ಸನ್ನಿವೇಶಗಳು ನಿರ್ಮಾಣವಾಗಬಾರದು, ಒಟ್ಟಾಗಿ ಒಂದು ಕಡೆ ಕೂತು ಹಬ್ಬ ಮತ್ತು ಅದು ಸಾರುವ ಮೌಲ್ಯಗಳ ಕುಶಲೋಪರಿ ನಡೆಸುವಂತಾಗಬಾರದು..’ ಎಂದು ಅಲಿಖಿತವಾಗಿಯೇ ತೀರ್ಮಾನಿಸಿಕೊಂಡಂತಹ ವಾತಾವರಣ ಬಲಪಡೆಯತೊಡಗಿದೆ. ಈದ್‍ಗೆ ಸಂಬಂಧಿಸಿಯೂ ಇದೇ ಮಾತನ್ನು ಹೇಳಬಹುದು. ಈದ್‍ನ ಖುಷಿಯನ್ನು ಮುಸ್ಲಿಮನೋರ್ವ ತನ್ನ ಹಿಂದೂ ನೆರೆಯವರೊಂದಿಗೆ ಹಂಚಿಕೊಳ್ಳುವುದಕ್ಕೂ ತಾನು ಮತ್ತು ತನ್ನ ಧರ್ಮದವರ ಜೊತೆಗೂಡಿ ಮಾತ್ರ ಆಚರಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಮುಸ್ಲಿಮರ ಟೊಪ್ಪಿ, ಗಡ್ಡ, ಹೊಸ ಉಡುಪು, ಪ್ರಾಣಿ ಹತ್ಯೆ, ಆಲಿಂಗನ, ಅಲ್ಲಾಹು ಅಕ್ಬರ್, ನಮಾಝ.. ಇತ್ಯಾದಿಗಳೆಲ್ಲವೂ ಇನ್ನೋರ್ವ ಮುಸ್ಲಿಮರಿಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಈದ್ ಅಂದರೆ ಏನು ಮತ್ತು ಅದರ ಆಚರಣಾ ವಿಧಾನ ಹೇಗೆ ಎಂಬುದನ್ನು ಓರ್ವ ಮುಸ್ಲಿಮ್ ಇನ್ನೋರ್ವ ಮುಸ್ಲಿಮನಿಗೆ ಹೇಳಿಕೊಡಬೇಕಿಲ್ಲ. ಆದರೆ ಹಿಂದೂ ಧರ್ಮಾನುಯಾಯಿಗೆ ಇದರ ಅರಿವು ಸ್ಪಷ್ಟವಾಗಿ ಇರಬೇಕಿಲ್ಲ. ಆತ/ಕೆ ಅಲ್ಲಾಹು ಅಕ್ಬರ್‍ಗೆ, ಪ್ರಾಣಿ ಹತ್ಯೆಗೆ, ಟೊಪ್ಪಿಗೆ.. ಎಲ್ಲಕ್ಕೂ ಅವರದೇ ಆದ ಅಥವಾ ಯಾರಿಂದಲೋ ಕೇಳಿದ ಅರ್ಥವನ್ನು ಕೊಟ್ಟಿರಬಹುದು. ಆ ಅರ್ಥದಲ್ಲಿ ಅಪಾಯಕಾರಿ ಅಂಶಗಳೂ ಇರಬಹುದು. ಇವು ಮತ್ತು ಇಂಥ ಇನ್ನಿತರ ಅನೇಕಾರು ಕಲ್ಪಿತ ಅಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವ ಅತ್ಯುತ್ತಮ ಸಂದರ್ಭವೇ ಪರಸ್ಪರ ಖುಷಿಯ ವಿನಿಮಯ ಮಾಡಿಕೊಳ್ಳುವುದು. ಆಗ ಗಣೇಶ ವಿಸರ್ಜನೆಯನ್ನು ನದಿಯ ಮಧ್ಯದಲ್ಲಿ ಯಾಕೆ ವಿಸರ್ಜಿಸಬೇಕು ಎಂಬುದೂ ಚರ್ಚೆಗೊಳಗಾಗುತ್ತದೆ. ಈದ್‍ನ ದಿನದಂದು ಪ್ರಾಣಿಯನ್ನು ಯಾಕೆ ಹತ್ಯೆ ಮಾಡುತ್ತೀರಿ ಎಂಬುದು ಅವಲೋಕನಕ್ಕೆ ಒಳಗಾಗುತ್ತದೆ. ಇಂಥ ಕುಶಲೋಪರಿಯಿಂದ ಆಗುವ ಪ್ರಮುಖ ಬದಲಾವಣೆ ಏನೆಂದರೆ, ಕಲ್ಪಿತ ಅರ್ಥಗಳು ಸಾವಿಗೀಡಾಗಿ ನಿಜ ಅರ್ಥಗಳು ಉಸಿರು ಪಡಕೊಳ್ಳುವುದು. ದುರಂತ ಏನೆಂದರೆ, ಸದ್ಯ ಈ ಬಗೆಯ ಕೊಡು ಕೊಳ್ಳುವಿಕೆಯ ವಾತಾವರಣ ಕಡಿಮೆಗೊಳ್ಳುತ್ತಿದೆ. ನನ್ನ ಹಬ್ಬ ಮತ್ತು ನಿನ್ನ ಹಬ್ಬ ಎಂಬುದಾಗಿ ಹಬ್ಬವನ್ನೂ ಅದರ ಆನಂದವನ್ನೂ ಸಮಾಜ ವಿಭಜಿಸತೊಡಗಿದೆ. ಕಣ್ಣೀರು ಮತ್ತು ಸಂತಾಪಗಳಲ್ಲೂ ವಿಭಜನೆಗಳಾಗುತ್ತಿವೆ. ಆದ್ದರಿಂದಲೇ, ಶಿವಮೊಗ್ಗದ ತುಂಗಭದ್ರೆಯಲ್ಲಿ ದುರಂತ ಸಾವನ್ನು ಕಂಡ 12 ಯುವಕರೂ ಮತ್ತು ಅವರ ಮೃತದೇಹವನ್ನು ಹುಡುಕಾಡಿ ನದಿ ದಂಡೆಗೆ ತಲುಪಿಸಿದ ಸಾದಾತ್ ಖಾನ್ ನೇತೃತ್ವದ ತಂಡವೂ ನಮ್ಮೊಳಗೆ ಚರ್ಚೆಗೆ ಅರ್ಹವಾಗುವುದು. ಮೃತದೇಹಕ್ಕೆ ಜನರನ್ನು ಭಾವುಕಗೊಳಿಸುವ ಸಾಮಥ್ರ್ಯವಿದೆ. ಹೆಣ್ಣು-ಗಂಡು, ಹಿಂದೂ-ಮುಸ್ಲಿಮ್ ಎಂಬ ವಿಭಜನೆಯಿಲ್ಲದೆಯೇ ಸರ್ವರಲ್ಲೂ ಕಣ್ಣೀರು ತರಿಸುವ ಶಕ್ತಿ ಮೃತದೇಹಕ್ಕಿದೆ. ಬಹುಶಃ, ಮನುಷ್ಯರೆಲ್ಲರನ್ನೂ ಒಂದೇ ಎಂದು ಘಂಟಾಘೋಷವಾಗಿ ಸಾರುವ ಪ್ರಾಕೃತಿಕ ಕುರುಹು ಇದು. ಆದರೆ ನಾವು ಖುಷಿಯಲ್ಲಿರುವಾಗ ಈ ಪ್ರಾಕೃತಿಕ ಸತ್ಯವನ್ನು ನಿರ್ಲಕ್ಷಿಸಿಕೊಂಡು ಬದುಕುತ್ತೇವೆ. ಅವರನ್ನು ದ್ವೇಷಿಸುತ್ತೇವೆ. ಅವರ ದುಃಖವನ್ನು ಕೆಲವೊಮ್ಮೆ ಖುಷಿಯಂತೆ ಅನುಭವಿಸುತ್ತೇವೆ. ಆದರೆ ಇದು ಪ್ರಕೃತಿ ವಿರೋಧಿ ಎಂಬುದನ್ನು ಶಿವಮೊಗ್ಗದ ದುರಂತ ನಮಗೆ ನೆನಪಿಸಿದೆ. ಪರಸ್ಪರ ಸುಖ ಮತ್ತು ದುಃಖದಲ್ಲಿ ಭಾಗಿಗಳಾಗುವುದೇ ಧರ್ಮದ ತಿರುಳು ಎಂಬುದನ್ನು ಈ ಘಟನೆ ಅತ್ಯಂತ ಪ್ರಬಲವಾಗಿ ಪ್ರತಿಪಾದಿಸಿದೆ. ಆದ್ದರಿಂದ, ಸಾದಾತ್ ಮತ್ತು ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತಲೇ ದುಃಖಿತ ಕುಟುಂಬಕ್ಕೆ ನಾವೆಲ್ಲ ಸಾಂತ್ವನವನ್ನು ಹೇಳಬೇಕಾಗಿದೆ.      

No comments:

Post a Comment