Sunday, 4 September 2016

ನಮ್ಮೊಳಗನ್ನು ತಟ್ಟಬೇಕಾದ ಮೂರು ಚಿತ್ರಗಳು

ಗೊಟ್‍ಚಕ್ ಮತ್ತು ಅನಿತಾ ದಂಪತಿ


       ಕಳೆದವಾರ ಮಾಧ್ಯಮಗಳಲ್ಲಿ ಪ್ರಕಟವಾದ 3 ಚಿತ್ರಗಳು ಮನಸ್ಸನ್ನು ಬಿಡದೇ ಕಾಡಿದುವು. ಕಣ್ಣನ್ನು ಮಂಜಾಗಿಸಿದುವು. ಈ ಮೂರು ಚಿತ್ರಗಳಲ್ಲಿ ಒಂದು, ಒಡಿಸ್ಸಾದ ದನಾ ಮಾಂಝಿಯದು. ಇನ್ನೊಂದು, ಕೆನಡಾದ ಆರೈಕೆ ಕೇಂದ್ರ(ವೃದ್ಧಾಶ್ರಮ)ದಲ್ಲಿರುವ 83 ವರ್ಷದ ಓಫ್ರಾಂ ಗೊಟ್‍ಚಕ್ ಮತ್ತು 81 ವರ್ಷದ ಅನಿತಾ ಎಂಬ ದಂಪತಿಗಳದು. ಮತ್ತೊಂದು, ಸಿರಿಯದ ಅಲೆಪ್ಪೋದಲ್ಲಿ ಓರ್ವ ತಂದೆ ತನ್ನ ಗಾಯಗೊಂಡ ಮಗಳನ್ನು ಎತ್ತಿಕೊಂಡು ಓಡುವ ಚಿತ್ರ. ಇವು ಬರೇ ಚಿತ್ರಗಳಲ್ಲ. ನೂರಾರು ಪುಟಗಳಲ್ಲಿ ಮತ್ತು ಅಸಂಖ್ಯ ಅಕ್ಷರಗಳೊಂದಿಗೆ ಹೇಳುವ ಜೀವನ ಪಾಠದ 3 ಕೃತಿಗಳಿವು. ಯಾರಾದರೂ ಈ 3 ಚಿತ್ರಗಳನ್ನು ಜೋಡಿಸಿ ತಮ್ಮ ಪಕ್ಕದಲ್ಲೋ  ಅಲಮಾರಿನಲ್ಲೋ  ಕಚೇರಿಯಲ್ಲೋ  ಇಟ್ಟುಬಿಟ್ಟರೆ ಅದು ಅವರನ್ನು ಮನುಷ್ಯ ದ್ರೋಹಿಯಾಗುವುದರಿಂದ ಸದಾ ಕಾಪಾಡಬಹುದು.
      ಕೆನಡದ ಆರೈಕೆ ಕೇಂದ್ರದಲ್ಲಿ ಪರಸ್ಪರ ಭೇಟಿಯಾದ ಗೊಟ್‍ಚಕ್ ಮತ್ತು ಅನಿತಾ ದಂಪತಿಗಳ ಚಿತ್ರವನ್ನು ಅವರ ಮೊಮ್ಮಗಳು ಆ್ಯಶ್ಲೆ ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಆ್ಯಶ್ಲೆಯ ಅಜ್ಜ ಗೊಟ್‍ಚಕ್‍ರಿಗೆ ಮರೆವು ರೋಗವಿತ್ತು. ಅಜ್ಜಿ ಅನಿತಾ ವಯೋವೃದ್ಧರಾದುದರಿಂದ ಪತಿಯ ಆರೈಕೆ ಮಾಡುವುದು ಸುಲಭ ಸಾಧ್ಯವಾಗಿರಲಿಲ್ಲ. ಇವರ ಮಗಳು ಅಥವಾ ಆ್ಯಶ್ಲೆಯ ತಾಯಿ ಡಯಾನ ರಿಗೂ ಇತ್ತೀಚೆಗೆ ಹೃದಯ ಸಂಬಂಧಿ ಚಿಕಿತ್ಸೆ ನಡೆದಿತ್ತು. ಹೀಗೆ ಗೊಟ್‍ಚಕ್ ಅನಿವಾರ್ಯವಾಗಿ 8 ತಿಂಗಳ ಹಿಂದೆ ಕಳೆದ ಜನವರಿಯಲ್ಲಿ ಆರೈಕೆ ಕೇಂದ್ರಕ್ಕೆ ಸೇರ್ಪಡೆಗೊಂಡರು. ಇದಾಗಿ ನಾಲ್ಕು ತಿಂಗಳಾದ ಬಳಿಕ ಅನಿತಾರ ಆರೋಗ್ಯವೂ ಕೈಕೊಟ್ಟಿತು. ಆದರೆ ಅವರಿಗೆ ಪತಿ ಗೊಟ್‍ಚಕ್‍ರ ಆರೈಕೆ ಕೇಂದ್ರದಲ್ಲಿ ಸ್ಥಳಾವಕಾಶ ಅಲಭ್ಯವಾದುದರಿಂದಾಗಿ ಸುಮಾರು 30 ಕಿ.ವಿೂ. ದೂರದ ಇನ್ನೊಂದು ಆರೈಕೆ ಕೇಂದ್ರಕ್ಕೆ ಸೇರ್ಪಡೆಗೊಳಿಸಬೇಕಾಯಿತು. ಇದು ಅವರಿಬ್ಬರ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ವಾರದಲ್ಲಿ ಒಂದು ಬಾರಿ ಮಾತ್ರ ಭೇಟಿಯಾಗಬಹುದಾದ ಆ ವಾತಾವರಣದಿಂದ ಅವರಿಬ್ಬರೂ ತೀವ್ರ ನೊಂದರು. ಅವರ ಮಗಳು ಮತ್ತು ಮೊಮ್ಮಗಳು ಸೇರಿಕೊಂಡು ವಾರದಲ್ಲೊಮ್ಮೆ ಗೊಟ್‍ಚಾಕ್‍ರನ್ನು ಅನಿತಾರ ಹತ್ತಿರ ತರುತ್ತಾರೆ. ಅವರು ಭೇಟಿಯಾಗುತ್ತಾರೆ. ಮಾತುಕತೆಯಾಗುತ್ತದೆ. ಹೀಗೆ ಮಾತುಕತೆಯಲ್ಲಿ ಏರ್ಪಟ್ಟಾಗ ಆ್ಯಶ್ಲೆ ಕ್ಲಿಕ್ಕಿಸಿದ ಆ ಚಿತ್ರ ಫೇಸ್ ಬುಕ್‍ನಲ್ಲಿ ಸಾವಿರಾರು ಬಾರಿ ಶೇರ್ ಆಯಿತು. ಅಸಂಖ್ಯ ಮಂದಿ ಪ್ರತಿಕ್ರಿಯಿಸಿದರು. ಗಡಿ, ಭಾಷೆ, ಧರ್ಮ, ಚರ್ಮಗಳ ಹಂಗಿಲ್ಲದೇ ಜನರು ಆ ಚಿತ್ರಕ್ಕಾಗಿ ಮರುಗಿದರು. ಭೇಟಿಯಾಗಿ ಪರಸ್ಪರ ಬೇರ್ಪಡಲೆಬೇಕಾದ ಸಂದರ್ಭ ಬಂದಾಗ ಆ ದಂಪತಿಗಳಿಬ್ಬರೂ ಒದ್ದೆ ಕಣ್ಣನ್ನು ಒರೆಸಿಕೊಳ್ಳುವ ಚಿತ್ರ ಅದು. ಈ ಇಳಿ ವಯಸ್ಸಲ್ಲೂ ತನ್ನ ಪತ್ನಿಯನ್ನು ಪುಟ್ಟ ಮೊಲವೇ ಎಂದು ಕರೆಯುವಷ್ಟು ಪ್ರೇಮಮಯಿ ಆ ಅಜ್ಜ. ಪ್ರತಿ ವಾರವೂ ಅವರಿಬ್ಬರೂ ಮಾತುಕತೆಯಾಡುತ್ತಾರೆ. ಬೇರ್ಪಡುವಾಗ ಕಣ್ಣೀರಿಳಿಸುತ್ತಾರೆ. ಈ ಚಿತ್ರದಿಂದ ಜಗತ್ತು ಎಷ್ಟು ಪ್ರಭಾವಿತವಾಯಿತು ಎಂದರೆ, ಅವರಿಬ್ಬರನ್ನೂ ಒಟ್ಟಿಗೆ ಇರಿಸುವಂತೆ ಆ ಆರೈಕೆ ಕೇಂದ್ರವನ್ನು ನಡೆಸುತ್ತಿರುವ ಸಂಸ್ಥೆಯೊಂದಿಗೆ ಕೇಳಿಕೊಂಡಿತು.
ಸಿರಿಯದ ತಂದೆ ಮತ್ತು ಮಗಳು
      ಇನ್ನೊಂದು ಚಿತ್ರ, ಸಿರಿಯದ ತಂದೆ ಮತ್ತು ಮಗಳದ್ದು. ಅಮೇರಿಕ, ಟರ್ಕಿ, ರಶ್ಯಾ ಮತ್ತು ಸಿರಿಯಾಗಳು ಸುರಿಸುವ ಬಾಂಬುಗಳಿಗೆ ಸಿಕ್ಕ ಮಗಳನ್ನು ಓರ್ವ ಅಪ್ಪ ಎತ್ತಿಕೊಂಡು ಓಡುವ ದೃಶ್ಯ. ವಿವರಣೆಯ ಅಗತ್ಯವೇ ಇಲ್ಲದಷ್ಟು ಆ ಚಿತ್ರ ಹೃದಯವನ್ನು ತಟ್ಟುತ್ತದೆ. 5 ವರ್ಷಗಳ ಹಿಂದೆ ಸಿರಿಯನ್ನರು ಇಂಥದ್ದೊಂದು  ಪಟವನ್ನು ನಿರೀಕ್ಷಿಸಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ  ಇವತ್ತು ಅವರೇ ಇಂಥ ಹೃದಯ ವಿದ್ರಾವಕ ಪಟಕ್ಕೆ ಪಾತ್ರವಾಗುತ್ತಿದ್ದಾರೆ.
      ಮೂರನೆಯದು, ಒಡಿಸ್ಸಾದ ದನಾ ಮಾಂಜಿಯದು. ಪತ್ನಿಯ ಶವವನ್ನು ಹೊತ್ತುಕೊಂಡು ನಡೆವ ಆತನ ಪಕ್ಕವೇ ಕೈ ಚೀಲವನ್ನು ಹಿಡಿದುಕೊಂಡು ಹಿಂಬಾಲಿಸುವ ಆತನ ಮಗಳು. ಸಾವು ಎಂಬುದೇ ಭಾವುಕ. ಇಂಥದ್ದರಲ್ಲಿ ಈ ದೃಶ್ಯವನ್ನು ನಾವು ಹೇಗೆ ವಿಶ್ಲೇಷಿಸಬಹುದು? ಶವಕ್ಕೆ ಸಂಬಂಧವೇ ಇಲ್ಲದ ಅಜ್ಞಾತ ವ್ಯಕ್ತಿಯೊಬ್ಬ ಶವ ಸಾಗಿಸುವುದಕ್ಕೂ ಸ್ವತಃ ಪತಿ ಮತ್ತು ಮಗಳು ಒಂದು ಹೊರೆಯಂತೆ ಹೊತ್ತುಕೊಂಡು ಸಾಗುವುದಕ್ಕೂ ನಡುವೆ ಇರುವ ಅಂತರವೇನು? ಆ ತಂದೆ ಮತ್ತು ಮಗಳು ಆ ಸಂದರ್ಭದಲ್ಲಿ ಅನುಭವಿಸಿರಬಹುದಾದ ನೋವು ಏನಿದ್ದೀತು? ತನ್ನ ತಾಯಿಯನ್ನು ಗೌರವಯುತವಾಗಿ ಮಣ್ಣು ಮಾಡುವುದಕ್ಕೆ ಈ 125 ಕೋಟಿ ಜನಸಂಖ್ಯೆಯಲ್ಲಿ ಒಂದು ನರಪಿಳ್ಳೆಯೂ ಇಲ್ಲವಲ್ಲ ಎಂಬುದು ಆ ಮಗುವನ್ನು ಹೇಗೆಲ್ಲ ಕಾಡಿರಬಹುದು?
ಕಣ್ಣೀರಿಳಿಸುವ ದಂಪತಿ, ತಾಯಿಯ ಮೃತದೇಹದ ಜೊತೆಗೆ ಕಣ್ಣೀರಿಳಿಸುತ್ತಾ ನಡೆಯುವ ಮಗಳು ಮತ್ತು ತನ್ನ ಮಗಳನ್ನು ಎತ್ತಿಕೊಂಡು ಓಡುವ ಅಪ್ಪ.. ಈ ಮೂರನ್ನೂ ನಾವು ಬರೇ ಬಿಡಿ ಚಿತ್ರಗಳಾಗಿಯಷ್ಟೇ ಕಾಣಬೇಕಿಲ್ಲ. ಇವು ನಾವು ಬದುಕುವ ಸಮಾಜದ ಪ್ರತಿಬಿಂಬಗಳು. ನಾವು ಏನಾಗಿದ್ದೇವೆ ಮತ್ತು ಏನಾಗಬೇಕಿದೆ ಎಂಬುದನ್ನು ಸೂಚ್ಯವಾಗಿ ಹೇಳುವ
ದನಾ ಮಾಂಝಿ
ದೃಶ್ಯಕಾವ್ಯಗಳು. ನಮ್ಮ ಮನುಷ್ಯ ದ್ರೋಹಿ, ಜೀವ ವಿರೋಧಿ ನಿಲುವುಗಳನ್ನು ತತ್ತರಗೊಳಿಸುವುದಕ್ಕೆ ಈ ಮೂರು ಚಿತ್ರಗಳು ದಾರಾಳ ಸಾಕು. ಸಿರಿಯಾದ ಆ ಅಪ್ಪ-ಮಗಳ ಜಾಗದಲ್ಲಿ ನಾವು ನಮ್ಮನ್ನೊಮ್ಮೆ ಕಲ್ಪಿಸಿಕೊಳ್ಳೋಣ. ಗೊಟ್‍ಚಾಕ್ ಮತ್ತು ಅನಿತಾರನ್ನು ಆ ಪಟದಿಂದ ಅಳಿಸಿ ಅಲ್ಲಿ ನಮ್ಮನ್ನು ಇಟ್ಟು ನೋಡೋಣ. ಮಾಂಜಿಯಂತೆ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಸಿಲುಕಿಕೊಳ್ಳುವ ಸನ್ನಿವೇಶವನ್ನೊಮ್ಮೆ ಊಹಿಸಿಕೊಳ್ಳೋಣ. ನಿಜವಾಗಿ, ಕಡಿ-ಕೊಲ್ಲು-ದ್ವೇಷಿಸು ಎಂದೆಲ್ಲಾ ವಿಭಜಿಸುವವರನ್ನು ತಲುಪಬೇಕಾದ ಚಿತ್ರಗಳಿವು. ಬದುಕು ಎಷ್ಟು ಅಶಾಶ್ವತ, ಹೃಸ್ವ ಮತ್ತು ಭಾವನಾತ್ಮಕ ಎಂಬುದನ್ನು ಇವು ಹೇಳಿಕೊಡಬಲ್ಲುದು. ಅಷ್ಟಕ್ಕೂ, ಬ್ರಿಟನ್, ಭಾರತ ಮತ್ತು ಸಿರಿಯಾಗಳು ಪರಸ್ಪರ ದೂರದೂರದ ರಾಷ್ಟ್ರಗಳಾಗಿದ್ದರೂ ಮತ್ತು ಜನರ ಬಣ್ಣ, ಭಾಷೆ, ಸಂಸ್ಕೃತಿ ಎಲ್ಲದರಲ್ಲೂ ಅಪಾರ ವ್ಯತ್ಯಾಸಗಳಿದ್ದರೂ ಆ ಮೂರು ಚಿತ್ರಗಳು ನಮ್ಮ ಅಂತಃಕರಣವನ್ನು ಒಂದೇ ರೀತಿಯಲ್ಲಿ ತಟ್ಟುವುದಕ್ಕೆ ಮತ್ತು ಭಾವನಾತ್ಮಕವಾಗಿ ನಮ್ಮೆಲ್ಲರನ್ನೂ ಒಂದೇ ದಾರದಲ್ಲಿ ಪೋಣಿಸುವುದಕ್ಕೆ ಕಾರಣವೇನು? ನಾವು ಮನುಷ್ಯರಾಗಲು ಕೇವಲ ಇಷ್ಟು ಮತ್ತು ಇಷ್ಟೇ ಆಲೋಚಿಸಿದರೆ ದಾರಾಳ ಸಾಕು.

1 comment:

  1. ಕ್ಷಮಿಸಿ ನಾನು ಕಣ್ಣೀರು ಸುರಿಸಬಲ್ಲೆ ಅಷ್ಟೇ

    ReplyDelete