ಮುಸ್ಲಿಮ್ ಸಮುದಾಯವನ್ನು ಧಮನಿಸುವ ಪ್ರಕ್ರಿಯೆ ಎಷ್ಟು ಬಹಿರಂಗವಾಗಿ ಮತ್ತು ನಿರ್ಲಜ್ಜವಾಗಿ ನಡೆಯುತ್ತಿದೆ ಅನ್ನುವುದಕ್ಕೆ ಐ ಲವ್ ಮುಹಮ್ಮದ್ ವಿವಾದವೇ ಅತ್ಯುತ್ತಮ ಉದಾಹರಣೆ. ನಾನು ಮುಹಮ್ಮದ್‌ರನ್ನು ಪ್ರೀತಿಸುತ್ತೇನೆ ಎಂಬುದು ನಿಷೇಧಿತ ಪದ ಅಲ್ಲ. ಪ್ರಚೋದನಾತ್ಮಕ ಪದವೂ ಅಲ್ಲ. ಸಮುದಾಯಗಳ ನಡುವೆ ಘರ್ಷಣೆಗೆ ಪ್ರೇರಣೆ ನೀಡುವ ಪದವೂ ಅಲ್ಲ. ಪ್ರವಾದಿ ಮುಹಮ್ಮದ್(ಸ)ರ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುವ ನಿರುಪದ್ರವಿ ಘೋಷಣೆ ಅದು. ಇಂಥ ಘೋಷಣೆಗಳು ಈ ದೇಶಕ್ಕೆ ಹೊಸತೂ ಅಲ್ಲ. ಇಲ್ಲಿ ಜೈ ಶ್ರೀರಾಮ್ ಎಂದು ಕೂಗಲಾಗುತ್ತದೆ. ಜೈ ಹನುಮಾನ್ ಎಂದೂ ಕೂಗಲಾಗುತ್ತದೆ. ಹರಹರ ಮಹಾದೇವ್ ಎಂಬ ಘೋಷಣೆಯನ್ನೂ ಮಾಡಲಾಗುತ್ತದೆ. ಐ ಲವ್ ಮೋದಿ, ಐ ಲವ್ ಯೋಗಿ ಎಂಬಿತ್ಯಾದಿ ಘೋಷಣೆಗಳೂ ಆಗಾಗ ಕೇಳಿ ಬರುತ್ತಿರುತ್ತವೆ. ಈ ಯಾವುದಕ್ಕೂ ಈ ದೇಶದಲ್ಲಿ ವಿರೋಧವೂ ವ್ಯಕ್ತವಾಗಿಲ್ಲ. ಹೀಗಿರುವಾಗ ಐ ಲವ್ ಮುಹಮ್ಮದ್ ಎಂಬ ಘೋಷಣೆಗೆ ಮತ್ತು ಬ್ಯಾನರ್‌ಗಳಿಗೆ ಯಾಕೆ ವಿರೋಧ ವ್ಯಕ್ತವಾಗುತ್ತಿದೆ? ಈ ಘೋಷಣೆಯಿಂದ ಯಾರಿಗೆ ತೊಂದರೆ ಇದೆ? ಯಾಕೆ ತೊಂದರೆಯಿದೆ?
ಮಿಲಾದುನ್ನಬಿ ಪ್ರಯುಕ್ತ ಸೆಪ್ಟೆಂಬರ್ 4ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಸ್ಥಳೀಯ ಮುಸ್ಲಿಮರು ಐ ಲವ್ ಮುಹಮ್ಮದ್ ಎಂಬ ಬ್ಯಾನರನ್ನು ತಾವು ಮೆರವಣಿಗೆಯಲ್ಲಿ ಸಾಗುವ ದಾರಿಯಲ್ಲಿ ತೂಗು ಹಾಕಿದರು. ಇದರ ವಿರುದ್ಧ ಸಂಘಪರಿವಾರ ಆಕ್ಷೇಪ ಎತ್ತಿತು. ಇದು ಹೊಸ ಪದ್ಧತಿ ಎಂಬುದೇ ಅವರ ತಕರಾರಿಗೆ ಕಾರಣವಾಗಿತ್ತು. ಅವರು ಆಕ್ಷೇಪಿಸಿದ್ದಷ್ಟೇ ಅಲ್ಲ, ಬ್ಯಾನರುಗಳನ್ನು ಕಿತ್ತು ಬಿಸಾಕಿದರು. ಪೊಲೀಸರು ಹೀಗೆ ಕಾನೂನುಬಾಹಿರವಾಗಿ ವರ್ತಿಸಿದವರ ಬದಲು ಬ್ಯಾನರು ತೂಗು ಹಾಕಿದ ಮುಸ್ಲಿಮರ ಮೇಲೆಯೇ ಪ್ರಕರಣ ದಾಖಲಿಸಿದರು. ಆ ಬಳಿಕ ಉತ್ತರ ಪ್ರದೇಶದ ಉನ್ನಾವೋದಲ್ಲೂ ಐ ಲವ್ ಮುಹಮ್ಮದ್ ಬ್ಯಾನರನ್ನು ಮುಸ್ಲಿಮರು ಪ್ರದರ್ಶಿಸಿದರು. ಪೊಲೀಸರು 5 ಮಂದಿಯನ್ನು ಬಂಧಿಸಿದರು. ಆ ಬಳಿಕ ಉತ್ತರ ಪ್ರದೇಶದ ಮಹಾರಾಜ್ ಗಂಜ್‌ನಲ್ಲಿ ಮುಸ್ಲಿಮರು ಮೆರವಣಿಗೆಯಲ್ಲಿ ಸಾಗಲು ಯತ್ನಿಸಿದಾಗ ಅದನ್ನು ಪೊಲೀಸರು ತಡೆದರು. ಬಳಿಕ ವಿಧಾನ ಭವನದ ಎದುರು ಮುಸ್ಲಿಮ್ ಮಹಿಳೆಯರು ಪ್ರತಿಭಟನೆ ನಡೆಸಿದರು. ಇದಾದ ಬಳಿಕ ಬರೇಲ್ವಿಯಲ್ಲಿ ಪ್ರತಿಭಟನೆ ನಡೆಸಲು ಸೇರಿದ್ದ ಮುಸ್ಲಿಮರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಮೌಲಾನಾ ತೌಕೀರ್ ರಝಾ ಖಾನ್ ಸಹಿತ ಹಲವರನ್ನು ಬಂಧಿಸಿದರು. ಆ ಬಳಿಕ ಈ ಐ ಲವ್ ಮುಹಮ್ಮದ್ ಪ್ರತಿಭಟನೆಯು ಉತ್ತರಾಖಂಡ, ಗುಜರಾತ್, ತೆಲಂಗಾಣ, ಕರ್ನಾಟಕದ ದಾವಣಗೆರೆ ಸಹಿತ ವಿವಿಧ ಕಡೆಗಳಿಗೆ ಹರಡಿತು. ಈ ವರೆಗೆ ಪೊಲೀಸರು 40ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. 1340ಕ್ಕಿಂತಲೂ ಅಧಿಕ ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. 20ಕ್ಕಿಂತಲೂ ಅಧಿಕ ಎಫ್‌ಐಆರ್‌ಗಳು ದಾಖಲಾಗಿವೆ. ಇವುಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶವೊಂದರಲ್ಲೇ ನಡೆದಿವೆ. ನಿಜವಾಗಿ,
ಐ ಲವ್ ಮುಹಮ್ಮದ್ ಬ್ಯಾನರನ್ನು ಕಿತ್ತು ಹಾಕಿದವರ ಬದಲು ಮುಸ್ಲಿಮರ ವಿರುದ್ಧವೇ ಪ್ರಕರಣ ದಾಖಲಿಸುವ ಮೂಲಕ ಕಾನ್ಪುರದ ಪೊಲೀಸರು ತಪ್ಪು ಮಾಡಿದ್ದರು. ಅವರನ್ನು ಮೇಲಿನ ಅಧಿಕಾರಿಗಳು ತಿದ್ದಬೇಕಿತ್ತು. ಆದರೆ, ಮಾಡಿದ ತಪ್ಪನ್ನು ತಿದ್ದುವ ಬದಲು ಆ ತಪ್ಪನ್ನೇ ಸಮರ್ಥಿಸುವುದಕ್ಕಾಗಿ ಪೊಲೀಸರು ಇನ್ನಷ್ಟು ತಪ್ಪುಗಳನ್ನು ಎಸಗುತ್ತಾ ಹೋದರು. ಆ ಬಳಿಕ ಅದು ಪ್ರತಿಷ್ಠೆಯ ಸಂಗತಿಯಾಗಿ ಮಾರ್ಪಟ್ಟಿತು. ಇದನ್ನು ಬಿಟ್ಟರೆ, ಅದರಾಚೆಗೆ ಐ ಲವ್ ಮುಹಮ್ಮದ್ ಬ್ಯಾನರ್‌ಗೆ ವಿರೋಧವನ್ನು ವ್ಯಕ್ತಪಡಿಸುವುದಕ್ಕೆ ಬೇಕಾದ ಕಾರಣಗಳೇ ಕಾಣಿಸುತ್ತಿಲ್ಲ. ಹಾಗಂತ, ಸಂಘಪರಿವಾರದ ವಿರೋಧವನ್ನು ಗಂಭೀರವಾಗಿ ಪರಿಗಣಿಸಬೇಕಿರಲಿಲ್ಲ. ಮುಸ್ಲಿಮ್ ದ್ವೇಷವನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡಿರುವವರೇ ಅದರಲ್ಲಿz್ದÁರೆ. ಆದರೆ, ಪ್ರಭುತ್ವ ಹಾಗಲ್ಲವಲ್ಲ. ಅದು ವಿವೇಚನೆಯಿಂದ ವರ್ತಿಸಬೇಕಾಗುತ್ತದೆ. ಧಾರ್ಮಿಕ ತಾರತಮ್ಯದ ಹೊರಗೆ ನಿಂತು ಆಲೋಚಿಸಬೇಕಾಗುತ್ತದೆ. ಆದರೆ, ಪ್ರಭುತ್ವವೇ ಸಂಘಪರಿವಾರದ ವಕ್ತಾರನಂತೆ ವರ್ತಿಸತೊಡಗಿದರೆ ಅದನ್ನು ಏನೆಂದು ಕರೆಯಬೇಕು?
ಸಬ್‌ಕಾ ಸಾಥ್, ಸಬ್‌ಕಾ ವಿಶ್ವಾಸ್ ಎಂಬ ಘೋಷವಾಕ್ಯವನ್ನು ಬಹಿರಂಗದಲ್ಲಿ ಪ್ರದರ್ಶಿಸುತ್ತಾ ಆಂತರಿಕವಾಗಿ ಇದಕ್ಕೆ ವಿರುದ್ಧವಾಗಿ ಬಿಜೆಪಿ ನಡಕೊಳ್ಳುತ್ತಿರುವುದಕ್ಕೆ ಈ ಐ ಲವ್ ಮುಹಮ್ಮದ್ ಮತ್ತೊಂದು ಸಾಕ್ಷ್ಯವಾಗಿ ದೇಶದ ಮುಂದಿದೆ. ಕನಿಷ್ಠ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ತಿದ್ದುವ ಪ್ರಯತ್ನವನ್ನು ಬಿಜೆಪಿ ಹೈಕಮಾಂಡ್ ಈವರೆಗೂ ಮಾಡಿಲ್ಲ. ಅಲ್ಲದೇ, ಐ ಲವ್ ಮುಹಮ್ಮದ್ ಬ್ಯಾನರ್‌ನಿಂದ ದೇಶದ ಏಕತೆ, ಸಮಗ್ರತೆ ಮತ್ತು ಕೋಮು ಸೌಹಾರ್ದಕ್ಕೆ ಏನು ತೊಂದರೆ ಇದೆ ಎಂದೂ ಹೇಳುತ್ತಿಲ್ಲ. ಏನಿದರ ಅರ್ಥ? ಒಂದುಕಡೆ, ಕೇಂದ್ರದ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಚಿವನಿಲ್ಲ. ಬಿಜೆಪಿಯ ಹಲವು ನಾಯಕರು ಮುಸ್ಲಿಮ್ ವಿರೋಧಿ ಹೇಳಿಕೆಯನ್ನು ಬಹಿರಂಗವಾಗಿಯೇ ನೀಡುತ್ತಿದ್ದಾರೆ. ಇವನ್ನು ಸಮರ್ಥಿಸುವಂತೆ ಕೇಂದ್ರ ಸರಕಾರವೂ ನಡಕೊಳ್ಳುತ್ತಿದೆ. ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ ಇರುವ ಹಲವಾರು ಅಂಶಗಳು ಈ ಬಗ್ಗೆ ಸಮರ್ಥನೆಯನ್ನು ನೀಡುತ್ತಿದೆ. ಈ ಬಗ್ಗೆ ಮುಸ್ಲಿಮ್ ಸಮುದಾಯ ವಿವರವಾಗಿ ಕೇಂದ್ರ ಸರಕಾರಕ್ಕೆ ತಿಳಿಸಿದರೂ ಅದು ಕೇಳಿಸಿಕೊಂಡಿಲ್ಲ. ಬರೇ ಮುಸ್ಲಿಮ್ ದ್ವೇಷವನ್ನೇ ಆಡಳಿತ ನೀತಿಯಾಗಿಸಿರುವಂತೆ ವರ್ತಿಸುತ್ತಿದೆ. ಅಂದಹಾಗೆ,
ಅನ್ಯಾಯ ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ. ಅಸತ್ಯ ಹೆಚ್ಚು ಸಮಯ ಎಲ್ಲರನ್ನೂ ಮರುಳುಗೊಳಿಸಲು ಶಕ್ತವಾಗುವುದೂ ಇಲ್ಲ. ಅಂತಿಮ ಗೆಲುವು ನ್ಯಾಯದ್ದೇ ಆಗಿರುತ್ತದೆ. ಸತ್ಯವೇ ಅಂತಿಮ ಜಯ ದಾಖಲಿಸುತ್ತದೆ. ಸತ್ಯವಂತರ ಪಾಲಿಗೆ ಎಂದೆಂದಿಗೂ ಆತ್ಮವಿಶ್ವಾಸವನ್ನು ತಂದುಕೊಡುವುದು ಈ ಭರವಸೆಯೇ ಆಗಿದೆ. ತಪ್ಪೇ ಮಾಡದವರನ್ನು ಅಪರಾಧಿಗಳಂತೆ ಬಿಂಬಿಸುವುದಕ್ಕೆ ಮತ್ತು ಒಂದು ಹಂತದವರೆಗೆ ದಂಡಿಸುವುದಕ್ಕೆ ಪ್ರಭುತ್ವಕ್ಕೆ ಸಾಧ್ಯವಿದೆ. ಮಾತ್ರವಲ್ಲ, ತನ್ನೆಲ್ಲಾ ಪ್ರಚಾರ ಮಾಧ್ಯಮವನ್ನು ಬಳಸಿ ಸತ್ಯವನ್ನೇ ಸುಳ್ಳು ಎಂದು ನಂಬಿಸಲೂ ಸಾಧ್ಯವಿದೆ. ಆದರೆ ಇಂಥವುಗಳ ಆಯುಷ್ಯ ದೀರ್ಘವಾಗಿರುವುದಿಲ್ಲ. ದಮನಿತರು ಸದಾಕಾಲ ದಮನಿತರೇ ಆಗಿರುವುದಿಲ್ಲ. ಅವರ ನೆರವಿಗೆ ಸತ್ಯ ಬಂದೇ ಬರುತ್ತದೆ ಮತ್ತು ಅಸತ್ಯವು ಬೆತ್ತಲಾಗಿ ತೆರೆಮರೆಗೆ ಸರಿದೇ ಸರಿಯುತ್ತದೆ. ಇಂಥ ಘಟನಾವಳಿಗಳಿಗೆ ಇತಿಹಾಸವು ಅದೆಷ್ಟೋ ಬಾರಿ ಸಾಕ್ಷ್ಯ ವಹಿಸಿದೆ. ಈ ಐತಿಹಾಸಿಕ ಸತ್ಯಕ್ಕೆ ಬೆನ್ನು ಹಾಕಿದವರೇ ಅನ್ಯಾಯದಲ್ಲಿ ನಿರತರಾಗಿz್ದÁರೆ. ಅಧಿಕಾರದ ಬಲದಲ್ಲಿ ನ್ಯಾಯವನ್ನೇ ಅನ್ಯಾಯವೆಂದು ಮುದ್ರೆಯೊತ್ತಿ ಪ್ರಚಾರ ಮಾಡುತ್ತಿದ್ದಾರೆ. ಪ್ರಶ್ನಿಸಿದವರನ್ನು ದಮನಿಸುತ್ತಿದ್ದಾರೆ. ನಿಜವಾಗಿ,
ಐ ಲವ್ ಮುಹಮ್ಮದ್ ಬ್ಯಾನರನ್ನು ಮತ್ತು ಘೋಷಣೆಯನ್ನು ಪ್ರಭುತ್ವ ಬೆಂಬಲಿಸಬೇಕಿತ್ತು. ಅದರಲ್ಲಿ ಆಕ್ಷೇಪ ವ್ಯಕ್ತಪಡಿಸುವಂಥದ್ದು ಏನೂ ಇರಲಿಲ್ಲ. ಅದು ಪ್ರವಾದಿ ಮುಹಮ್ಮದ್(ಸ)ರ ಮೇಲಿನ ಅದಮ್ಯ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಸನ್ನಿವೇಶವೇ ಹೊರತು ಬೇರೇನೂ ಅಲ್ಲ. ಪ್ರವಾದಿ ನುಡಿದಂತೆ ನಡೆಯುವುದರಿಂದ ಈ ದೇಶಕ್ಕೆ ಯಾವ ತೊಂದರೆಯೂ ಇಲ್ಲ. `ಘೋಷಣೆ ಮಾತ್ರ ಸಾಲದು, ಅದರಂತೆ ನಡೆಯಿರಿ' ಎಂದು ಹೇಳಿ ಹರಸಬೇಕಾದ ಮತ್ತು ಪೊಲೀಸ್ ರಕ್ಷಣೆ ನೀಡಿ ಬೆನ್ನಿಗೆ ನಿಲ್ಲಬೇಕಾದ ಪ್ರಭುತ್ವವೊಂದು ಹಾಗೆ ಮಾಡದೇ ಆ ವಿಚಾರವನ್ನೇ ದಮನಿಸುವುದೆಂದರೆ ಅದರಲ್ಲಿ ಧರ್ಮದ್ವೇಷವನ್ನಲ್ಲದೇ ಬೇರೇನನ್ನೂ ಕಾಣಲು ಸಾಧ್ಯವಿಲ್ಲ. ಪ್ರವಾದಿ ಮುಹಮ್ಮದ್(ಸ) ಅವರಿಗೆ ಈ ದೇಶದಲ್ಲಿ ಸುಮಾರು 20 ಕೋಟಿ ಅನುಯಾಯಿಗಳಿದ್ದಾರೆ. ಉತ್ತರ ಪ್ರದೇಶದಲ್ಲಿ ದೇಶದಲ್ಲೇ ಪ್ರಸಿದ್ಧವಾದ ದಾರುಲ್ ಉಲೂಮ್ ದೇವ್‌ಬಂದ್ ಮತ್ತು ಬರೇಲ್ವಿಯಂಥ ಪ್ರಮುಖ ಧಾರ್ಮಿಕ ವಿದ್ಯಾಭ್ಯಾಸ ಕೇಂದ್ರಗಳಿವೆ. ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರೂ ಅಲ್ಲಿದ್ದಾರೆ. ಇವರೆಲ್ಲರ ವಿಶ್ವಾಸವನ್ನು ಪಡಕೊಳ್ಳುವ ಮತ್ತು ಒಳ್ಳೆಯ ಅಭಿಯಾನಕ್ಕಾಗಿ ಮುಸ್ಲಿಮರನ್ನು ಅಭಿನಂದಿಸುವ ಬದಲು ಅದನ್ನು ತಡೆಯುವುದಕ್ಕೆ ಪ್ರಭುತ್ವ ಹೊರಟಿರುವುದು ನಿಜಕ್ಕೂ ಆಘಾತಕಾರಿ. ಪ್ರವಾದಿಯ ಸ್ಮರಣೆಯಲ್ಲಿ ಸಾಗುವ ಮೆರವಣಿಗೆಯನ್ನು ಮತ್ತು ತೀರಾ ಸಹಜ ಘೋಷಣೆಯನ್ನು ಅಪಾಯಕಾರಿಯಂತೆ ಮತ್ತು ದೇಶದ್ರೋಹಿಯಂತೆ ನಡೆಸಿಕೊಂಡ ಉತ್ತರ ಪ್ರದೇಶದ ಸರಕರಾದ ನಿಲುವು ಖಂಡನಾರ್ಹ. ಧರ್ಮದ್ವೇಷದ ಈ ನಡೆಗೆ ಮೌನ ಬೆಂಬಲ ನೀಡುತ್ತಿರುವ ಕೇಂದ್ರ ಸರಕಾರದ ನಿಲುವೂ ಅಷ್ಟೇ ಪ್ರಶ್ನಾರ್ಹ.
.jpg)
.jpg)
.jpg)
.jpg)
.jpg)
.jpg)