ಸನ್ಮಾರ್ಗ ಸಂಪಾದಕೀಯ
ಜುಲೈ 25ರಂದು ಬಾಂಬೆ ಹೈಕೋರ್ಟು ವ್ಯಕ್ತಪಡಿಸಿದ ಪರಾಮರ್ಶೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಪರಾಮರ್ಶೆಗೆ ಕಾರಣವಾದ ಘಟನೆ ಹೀಗಿದೆ-
ಗಾಝಾದಲ್ಲಿ ನಡೆಯುತ್ತಿರುವ ಜನಾಂಗ ನಿರ್ಮೂಲನೆಯ ವಿರುದ್ಧ ಪ್ರತಿಭಟನೆ ನಡೆಸಲು ಆಲ್ ಇಂಡಿಯಾ ಪೀಸ್ ಆಂಡ್ ಸಾಲಿಡಾರಿಟಿ ಫೌಂಡೇಶನ್ (AIPSF) ಎಂಬ ಸಂಘಟನೆಯು ಜೂನ್ 13ರಂದು ಮುಂಬೈಯ ಆಝಾದ್ ಪೊಲೀಸ್ ಠಾಣೆಯಿಂದ ಅನುಮತಿಯನ್ನು ಕೋರಿತ್ತು. ಗಾಝಾದಲ್ಲಿ ನಡೆಯುತ್ತಿರುವ ಜನಾಂಗ ಹತ್ಯೆ ಕೊನೆಗೊಳ್ಳಬೇಕು ಮತ್ತು ಕದನ ವಿರಾಮ ಏರ್ಪಡಬೇಕು ಎಂಬ ಆಗ್ರಹದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಕೋರಿಕೆ ಪತ್ರದಲ್ಲಿ ಪೊಲೀಸರಿಗೆ ತಿಳಿಸಿತ್ತು. ಇದಾಗಿ ನಾಲ್ಕು ದಿನಗಳ ಬಳಿಕ ಜೂನ್ 17ರಂದು ಅನುಮತಿ ನಿರಾಕರಿಸಿ ಪೊಲೀಸರು ಸೂಚನೆ ಹೊರಡಿಸಿದರು. ಆಝಾದ್ ಮೈದಾನದಲ್ಲಿ ಅಂಥ ದ್ದೊಂದು ಪ್ರತಿಭಟನೆಯು ಕಾನೂನು ಸುವ್ಯವಸ್ಥೆಗೆ ತೊಂದರೆಯನ್ನು ಉಂಟು ಮಾಡಬಹುದು ಎಂದು ಅವರು ಕಾರಣವನ್ನು ನೀಡಿದರು. ಇದನ್ನು ಪ್ರಶ್ನಿಸಿ ಸಿಪಿಐಎಂ ಪಕ್ಷವು ಬಾಂಬೆ ಹೈಕೋರ್ಟಿನ ಬಾಗಿಲು ಬಡಿಯಿತು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಧೀಶರಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಖದ್ ಅವರು ವ್ಯಕ್ತಪಡಿಸಿದ ಅಭಿಪ್ರಾಯವೇ ಈಗ ಪ್ರಶ್ನೆಗೆ ಮತ್ತು ಟೀಕೆಗೆ ಒಳಗಾಗಿದೆ.
"ನಮ್ಮ ದೇಶದಲ್ಲೇ ಬೇಕಾದಷ್ಟು ಸಮಸ್ಯೆಗಳಿವೆ, ಆದರೆ ನಮ್ಮ ದೇಶದ ಸಮಸ್ಯೆಗಳನ್ನು ನಿರ್ಲಕ್ಷಿಸಿ ನೀವು ಗಾಝಾ ಮತ್ತು ಫೆಲೆಸ್ತೀನ್ ಕಡೆ ನೋಡುತ್ತಿದ್ದೀರಿ, ಇದು ಸಂಕುಚಿತ ದೃಷ್ಟಿಕೋನ. ನೀವು ನಿಮ್ಮ ದೇಶದೊಳಗೆ ನೋಡಿ. ದೇಶಪ್ರೇಮಿಗಳಾಗಿ. ಈ ದೇಶದ ನಾಗರಿಕರಿಗಾಗಿ ಕೆಲಸ ಮಾಡಿ ದೇಶಪ್ರೇಮವನ್ನು ಪ್ರಕಟಿಸಿ. ಆದರೆ ನೀವು ಇದರ ಬದಲು ಸಾವಿರಾರು ಮೈಲು ದೂರ ಇರುವ ಫೆಲೆಸ್ತೀನ್ ಮತ್ತು ಗಾಝಾದ ಬಗ್ಗೆ ಗಮನ ಹರಿಸಿದ್ದೀರಿ. ಫೆಲೆಸ್ತೀನ್ ಪರ ನಿಲ್ಲಬೇಕೋ ಇಸ್ರೇಲ್ ಪರ ನಿಲ್ಲಬೇಕೋ ಎಂಬುದು ಭಾರತ ಸರಕಾರದ ಕೆಲಸ. ಇಂಥ ಸ್ಥಿತಿಯಲ್ಲಿ, ಭಾರತ ಸರಕಾರವು ಈ ಎರಡರಲ್ಲಿ ಯಾವುದಾದರೊಂದು ರಾಷ್ಟ್ರದ ಪರ ನಿಲುವು ತೆಗೆದುಕೊಳ್ಳಬೇಕಾದಂಥ ಪರಿಸ್ಥಿತಿಯನ್ನು ನೀವೇಕೆ ನಿರ್ಮಿಸುತ್ತಿದ್ದೀರಿ? ಇದು ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರಬಹುದು ಎಂಬುದು ನಿಮಗೆ ಗೊತ್ತಿರಲಿ..’ ಎಂದು ಸಿಪಿಎಂ ಪಕ್ಷದ ನ್ಯಾಯವಾದಿ ಮಿಹಿರ್ ದೇಸಾಯಿ ಅವರಿಗೆ ನ್ಯಾಯಾಧೀಶರು ಹೇಳಿದ್ದಾರೆ. ಅಂದಹಾಗೆ,
ಅಭಿಪ್ರಾಯ ಸ್ವಾತಂತ್ರ‍್ಯ ಮತ್ತು ಪ್ರಜಾತಂತ್ರವನ್ನು ಅತಿಶ್ರೇಷ್ಠವೆಂದು ಬಗೆಯುವ ಸಂವಿಧಾನ ಈ ದೇಶದಲ್ಲಿದೆ. ನ್ಯಾಯಾಲಯ ಅದರ ಅಧೀನದಲ್ಲೇ ಕೆಲಸ ಮಾಡುತ್ತದೆ. ಈ ದೇಶದಲ್ಲಿ ಪೊಲೀಸರು ಸ್ವತಂತ್ರರಲ್ಲ. ಅದನ್ನು ಸರಕಾರ ನಿಯಂತ್ರಿಸುತ್ತದೆ. ಸರಕಾರ ಯಾವ ಪಕ್ಷದ್ದೋ ಆ ಪಕ್ಷದ ನಿಲುವುಗಳನ್ನೇ ಪೊಲೀಸರು ವ್ಯಕ್ತಪಡಿಸುತ್ತಾರೆ. ಇಂಥ ಸ್ಥಿತಿಯಲ್ಲಿ, ಪಕ್ಷಾತೀತ ನ್ಯಾಯವನ್ನು ನಾಗರಿಕರು ನಿರೀಕ್ಷಿಸಬೇಕಾದದ್ದು ನ್ಯಾಯಾಲಯಗಳಿಂದ ಮಾತ್ರ. ಆದರೆ ಬಾಂಬೇ ನ್ಯಾಯಾಲಯದ ಪರಾಮರ್ಶೆಯು ಈ ನಿರೀಕ್ಷೆಗೆ ತಕ್ಕುದಾಗಿಲ್ಲ ಮತ್ತು ದೇಶ ಒಪ್ಪಿಕೊಂಡಿರುವ ಪರಂಪರಾಗತ ವಿದೇಶಾಂಗ ನೀತಿಗೂ ಹೊಂದಿಕೊಳ್ಳುತ್ತಿಲ್ಲ.
ಫೆಲೆಸ್ತೀನನ್ನು ಒಂದು ರಾಷ್ಟ್ರವೆಂದು ತನ್ನ ವಿದೇಶಾಂಗ ನೀತಿಯಾಗಿಯೇ ಒಪ್ಪಿ ಘೋಷಿಸಿದ ರಾಷ್ಟ್ರ ಭಾರತ. ಫೆಲೆಸ್ತೀನಿ ಜನತೆಯನ್ನು ಪ್ರತಿನಿಧಿಸುವ ಅಧಿಕೃತ ಸಂಘಟನೆ ಎಂದು ಫೆಲೆಸ್ತೀನ್ ಲಿಬರೇಶನ್ ಆರ್ಗನೈಝೇಶನ(PLO)ನ್ನು 1974ರಲ್ಲೇ ಅಂಗೀಕರಿಸಿದ ರಾಷ್ಟ್ರವೂ ಭಾರತವೇ. ಆ ಕಾಲದಲ್ಲಿ ಅರಬ್ ರಾಷ್ಟ್ರಗಳನ್ನು ಬಿಟ್ಟರೆ ಪಿಎಲ್‌ಓವನ್ನು ಹೀಗೆ ಘಂಟಾಘೋಷವಾಗಿ ಅಂಗೀಕರಿಸಿದ ಮೊತ್ತಮೊದಲ ಅರಬೇತರ ರಾಷ್ಟçವಾಗಿ ಪ್ರಶಂಸೆಗೆ ಒಳಗಾಗಿರುವುದೂ ಭಾರತವೇ. ಫೆಲೆಸ್ತೀನನ್ನು ಒಂದು ರಾಷ್ಟ್ರವೆಂದು 1988ರಲ್ಲೇ ಭಾರತ ಅಂಗೀಕರಿಸಿದೆ. 2024ರ ಮೋದಿ ಸರಕಾರದ ಅವಧಿಯಲ್ಲಿ ಭಾರತ ಇನ್ನೂ ಒಂದು ಹೆಜ್ಜೆಯನ್ನು ಮುಂದಿಟ್ಟಿತು. ಫೆಲೆಸ್ತೀನಿಯರಿಗೆ ತಮ್ಮದೇ ದೇಶವನ್ನು ಹೊಂದುವ ಮತ್ತು ಸ್ವನಿರ್ಧಾರವನ್ನು ಹೊಂದುವ ಹಕ್ಕೂ ಇದೆ ಎಂದು ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕು ಆಯೋಗದ ಮಂಡಿಸಿದ ಪ್ರಸ್ತಾಪದ ಪರ ಭಾರತ ಮತವನ್ನೂ ಚಲಾಯಿಸಿತು. ಅಲ್ಲದೇ, 1948ರ ನರಮೇಧ ವಿರೋಧಿ ನಿರ್ಣಯಕ್ಕೆ ಸಹಿ ಹಾಕಿದ ದೇಶವೂ ಭಾರತವೇ. ಜೊತೆಗೇ, ಗಾಝಾದಲ್ಲಿ ನಡೆಯುತ್ತಿರುವ ನರಮೇಧಕ್ಕೆ ಭಾರತ ಸರಕಾರ ಈಗಾಗಲೇ ವಿರೋಧವನ್ನೂ ವ್ಯಕ್ತಪಡಿಸಿದೆ. ಮಹಾತ್ಮಾ ಗಾಂಧಿಯಿಂದ ಹಿಡಿದು ಪ್ರಧಾನಿ ಇಂದಿರಾ ಗಾಂಧಿ, ವಾಜಪೇಯಿ ಮತ್ತು ನರೇಂದ್ರ ಮೋದಿಯವರ ವರೆಗೆ ಫೆಲೆಸ್ತೀನ್ ವಿಷಯದಲ್ಲಿ ಭಾರತದ ನಿಲುವು ಬದಲಾಗಿಲ್ಲ. ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿಯ ವಿರುದ್ಧ ಭಾರತ ಹೇಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತುತ್ತಾ ಬಂದಿತ್ತೋ ಅದೇರೀತಿಯಲ್ಲಿ ಫೆಲೆಸ್ತೀನ್ ಪರ ನಿಲುವನ್ನೂ ಭಾರತ ತನ್ನ ವಿದೇಶಾಂಗ ನೀತಿಯಾಗಿಯೇ ಘೋಷಿಸುತ್ತಾ ಬಂದಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿತ್ವದಿಂದ 200 ವರ್ಷಗಳ ಕಾಲ ಎದುರಿಸಿದ ದೌರ್ಜನ್ಯದ ಸ್ವಯಂ ಅನುಭವವೇ ಇವತ್ತು ಇಸ್ರೇಲ್‌ನ ಹಿಡಿತದಲ್ಲಿರುವ ಫೆಲೆಸ್ತೀನಿಯರ ನೋವುಗಳನ್ನು ತಿಳಿದುಕೊಳ್ಳಲು ಭಾರತಕ್ಕೆ ಧಾರಾಳ ಸಾಕು. ಸಾಮ್ರಾಜ್ಯಶಾಹಿತ್ವದ ಪ್ರಬಲ ವಿರೋಧಿಯಾಗಿ ಭಾರತ ಮಾರ್ಪಟ್ಟಿರುವುದು ಮತ್ತು ಅದನ್ನೇ ತನ್ನ ವಿದೇಶಾಂಗ ನೀತಿಯಾಗಿ 1947ರಿಂದಲೇ ಪಾಲಿಸುತ್ತಿರುವುದೂ ಈ ಕಾರಣದಿಂದಲೇ. ಆದರೆ,
ಬಾಂಬೆ ಹೈಕೋರ್ಟಿನ ಪರಾಮರ್ಶೆ ಈ ಕುರಿತಂತೆ ತೀರಾ ನಿರಾಶೆಯನ್ನು ಉಂಟು ಮಾಡುವಂಥದ್ದಾಗಿದೆ. ಕೇಂದ್ರ ಸರಕಾರದ ವಿದೇಶಾಂಗ ನೀತಿಯೂ ಸೇರಿದಂತೆ ಯಾವುದೇ ನಿರ್ಧಾರವನ್ನು ಪ್ರಶ್ನಿಸುವ ಮತ್ತು ಬೆಂಬಲಿಸುವ ಸ್ವಾತಂತ್ರ‍್ಯವನ್ನು ಈ ದೇಶದ ಸಂವಿಧಾನವೇ ನಾಗರಿಕರಿಗೆ ನೀಡುತ್ತದೆ. ಸರಕಾರ ಪ್ರಶ್ನಾತೀತವಲ್ಲ. ಅಲ್ಲದೇ ಗಾಝಾ ವಿಷಯದಲ್ಲಿ ಕೇಂದ್ರ ಸರಕಾರದ ನಿಲುವು ಗಾಝಾದ ವಿರುದ್ಧವೂ ಇಲ್ಲ. ಗಾಝಾಕ್ಕೆ ಔಷಧ ಮತ್ತು ಇನ್ನಿತರ ನೆರವುಗಳನ್ನು ಭಾರತ ಸರಕಾರವೇ ರವಾನಿಸಿದೆ. ಭಾರತೀಯರು ಸ್ವಯಂಪ್ರೇರಿತವಾಗಿ ಗಾಝಾಕ್ಕೆ ನೆರವಾಗುವುದನ್ನು ಸರಕಾರ ನಿಷೇಧಿಸಿಯೂ ಇಲ್ಲ. ಒಂದುವೇಳೆ, ಗಾಝಾದ ನರಮೇಧವನ್ನು ಪ್ರತಿಭಟಿಸುವುದು ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದಾಗಿದ್ದರೆ ಗಾಝಾಕ್ಕೆ ನೆರವಾಗುವ ಮೂಲಕ ಕೇಂದ್ರ ಸರಕಾರವೇ ಅದನ್ನು ಉಲ್ಲಂಘಿಸಿದೆ ಎಂದೇ ಹೇಳಬೇಕಾಗುತ್ತದೆ. ಅಂದಹಾಗೆ,
ಯಾವುದೇ ದೇಶದ ನಾಗರಿಕರು ಒಂದುಕಡೆ ಸೇರಿ ವ್ಯಕ್ತಪಡಿಸುವ ಅಭಿಪ್ರಾಯವು ಅಲ್ಲಿನ ಸರಕಾರದ ಅಭಿಪ್ರಾಯವಾಗಬೇಕೆಂದಿಲ್ಲ. ಸರಕಾರದ ಅಭಿಪ್ರಾಯವನ್ನು ಒಪ್ಪುವ ಮತ್ತು ಒಪ್ಪದೇ ಇರುವ ಸ್ವಾತಂತ್ರ‍್ಯಕ್ಕೆ ಆ ದೇಶದಲ್ಲಿ ಮನ್ನಣೆ ಇದೆ ಎಂಬುದೇ ಅದರ ಅರ್ಥ. ಅಮೇರಿಕದ ಅಧ್ಯಕ್ಷ ಟ್ರಂಪ್ ಅವರು ನೇತನ್ಯಾಹು ಪರ ಬಲವಾಗಿ ನಿಂತಿರುವಾಗ ಅಲ್ಲಿನ ನಾಗರಿಕರು ಟ್ರಂಪ್ ವಿರುದ್ಧ ನಿಂತಿದ್ದಾರೆ. ಗಾಝಾದ ನರಮೇಧದ ವಿರುದ್ಧ ರ‍್ಯಾಲಿ ನಡೆಸುತ್ತಿದ್ದಾರೆ. ಪ್ರತಿದಿನವೆಂಬಂತೆ ಪ್ರತಿಭಟಿಸುತ್ತಿದ್ದಾರೆ. ಯುರೋಪಿನ ಅನೇಕ ರಾಷ್ಟçಗಳಲ್ಲಿ ಆ ರಾಷ್ಟ್ರಗಳ ಅಧಿಕೃತ ವಿದೇಶಾಂಗ ನೀತಿಯ ವಿರುದ್ಧ ಇವತ್ತೂ ಪ್ರತಿಭಟನೆಗಳಾಗುತ್ತಿವೆ. ಇಸ್ರೇಲ್ ನರಮೇಧವನ್ನು ಖಂಡಿಸಿ ಮತ್ತು ಗಾಝಾದ ಜನರ ಪರವಾಗಿ ಅಲ್ಲೆಲ್ಲಾ ಜನರು ಬೀದಿಗಿಳಿದಿದ್ದಾರೆ. ಇದು ಆ ದೇಶಗಳಲ್ಲಿರುವ ಪ್ರಜಾತಂತ್ರವನ್ನು ಮತ್ತು ನಾಗರಿಕ ಸ್ವಾತಂತ್ರ‍್ಯಕ್ಕಿರುವ ಮಹತ್ವವನ್ನು ಹೇಳುತ್ತದೆ. ಆದರೆ,
ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ವಿದೇಶಾಂಗ ನೀತಿ ತೀರಾ ಸ್ಪಷ್ಟವಿದೆ. ಅದು ಸ್ವತಂತ್ರ ಫೆಲೆಸ್ತೀನ್ ರಾಷ್ಟçದ ಪರ ಮತ್ತು ಸಾಮ್ರಾಜ್ಯಶಾಹಿತ್ವದ ವಿರುದ್ಧವಿದೆ. ಅಲ್ಲದೇ, ವಸುದೈವ ಕುಟುಂಬಕಂ ಎಂಬ ಉದಾತ್ತ ಪರಿಕಲ್ಪನೆಯಲ್ಲಿ ವಿಶ್ವಾಸ ಇಟ್ಟ ಮತ್ತು ಅದನ್ನು ಪ್ರತಿಪಾದಿಸುವ ರಾಷ್ಟç ನಮ್ಮದು. ಜಗತ್ತಿನ ಎಲ್ಲರೂ ಒಂದು ಕುಟುಂಬವಾಗಿದ್ದಾರೆ ಎಂಬ ನೀತಿಯಲ್ಲಿ ಇಸ್ರೇಲೂ ಬರುತ್ತದೆ, ಫೆಲೆಸ್ತೀನೂ ಬರುತ್ತದೆ. ಈ ಕುಟುಂಬದಲ್ಲಿ ಓರ್ವನ ಮೇಲೆ ದೌರ್ಜನ್ಯವಾಗುತ್ತಿದೆ ಎಂದಾದರೆ ಕುಟುಂಬದ ಸದಸ್ಯನಾಗಿ ಅದನ್ನು ಪ್ರಶ್ನಿಸಬೇಕಾದ ಹೊಣೆಗಾರಿಕೆ ನಮಗಿದೆ. ಆ ದೌರ್ಜನ್ಯವನ್ನು ಬಲವಂತದಿಂದ ತಡೆಯುವ ಸಾಮರ್ಥ್ಯವಿದ್ದರೆ ಅದನ್ನು ತಡೆಯಬೇಕು. ಒಂದುವೇಳೆ, ಆ ಅವಕಾಶ ಇಲ್ಲವೆಂದಾದರೆ ಅದನ್ನು ಪ್ರಶ್ನಿಸುವ ಸ್ವಾತಂತ್ರ‍್ಯವನ್ನು ಬಳಸಿಕೊಳ್ಳಬೇಕು. ಆ ಮೂಲಕ ದೌರ್ಜನ್ಯ ನಡೆಸುವ ವ್ಯಕ್ತಿಯ ವಿರುದ್ಧ ಉಳಿದ ಸದಸ್ಯರನ್ನು ಒಟ್ಟುಗೂಡಿಸಬೇಕು. ದೌರ್ಜನ್ಯಕೋರನನ್ನು ಶಿಕ್ಷಿಸುವ ಮತ್ತು ಸಂತ್ರಸ್ತನನ್ನು ರಕ್ಷಿಸುವ ಪ್ರಯತ್ನವನ್ನು ಮಾಡಬೇಕು. ಸದ್ಯ ಫೆಲೆಸ್ತೀನ್ ದೌರ್ಜನ್ಯವನ್ನು ಎದುರಿಸುತ್ತಿದೆ. ಇಸ್ರೇಲ್ ಅಪರಾಧಿ ಸ್ಥಾನದಲ್ಲಿದೆ. ಇದನ್ನು ಪ್ರಶ್ನಿಸುವುದನ್ನು ದೇಶಪ್ರೇಮದ ಕೊರತೆ ಎಂಬಂತೆ ನ್ಯಾಯಾಲಯವೇ ಹೇಳುವುದು ದುರದೃಷ್ಟಕರ.
.jpg)
No comments:
Post a Comment