Wednesday, 27 July 2016

ಗೋರಕ್ಷಣೆ: ಸರಕಾರ ಹೊರಗುತ್ತಿಗೆ ಕೊಟ್ಟಿದೆಯೇ?

       ಗೋರಕ್ಷಣೆ, ಗೋರಕ್ಷಣಾ ದಳ್, ಗೋರಕ್ಷಕರು.. ಮುಂತಾದುವುಗಳ ಸಾಮಾಜಿಕ ನೆಲೆ-ಬೆಲೆ ಏನು? ಇವಕ್ಕೆ ಸಾಮಾಜಿಕ ಮಾನ್ಯತೆ ಇದೆಯೇ? ಈ ಗುಂಪು ಯಾವ ಸಮಾಜ ಮತ್ತು ಯಾವ ಸಮುದಾಯದ ಪ್ರತಿನಿಧಿ? ಸಾಮಾನ್ಯವಾಗಿ ಯಾವುದೇ ಒಂದು ಕೃತ್ಯಕ್ಕೆ ಎರಡು ಮುಖಗಳಿರುತ್ತವೆ. ಒಂದು ಸಂವಿಧಾನಬದ್ಧವಾದರೆ ಇನ್ನೊಂದು ವಿರುದ್ಧ. ವೀರಪ್ಪನ್‍ನನ್ನು ಈ ನೆಲೆಯಲ್ಲಿ ನಾವು ಎತ್ತಿಕೊಳ್ಳಬಹುದು. ಅವನ ಚಟುವಟಿಕೆ ಕಾನೂನಿನ ದೃಷ್ಟಿಯಲ್ಲಿ ಅಪ್ಪಟ ಕ್ರೌರ್ಯ. ಸಂವಿಧಾನ ವಿರೋಧಿ. ನ್ಯಾಯ ವಿರೋಧಿ. ಹಾಗಂತ, ವೀರಪ್ಪನ್‍ಗೂ ಸಮಾಜಕ್ಕೂ ನಡುವಿನ ನಂಟು ಸಂಪೂರ್ಣ ಕಡಿದು ಹೋಗಿರಲಿಲ್ಲ. ಅಂಥದ್ದೊಂದು ಅನುಕಂಪದ ವಾತಾವರಣ ವೀರಪ್ಪನ್‍ನ ಜೊತೆಗಿತ್ತು. ಸಂದರ್ಭಾನುಸಾರ ಆತ ಒದಗಿಸುತ್ತಿರಬಹುದಾದ ನೆರವು, ಆತನ ಬಗ್ಗೆ ಎಲ್ಲೋ ಹೇಗೋ ಹುಟ್ಟಿಕೊಂಡು ಬೆಳೆದಿರಬಹುದಾದ ಅತಿಮಾನುಷ ಕಲ್ಪನೆಯ ಪ್ರಭಾವ, ತಪ್ಪು ಮಾಹಿತಿ, ಭಯ.. ಮುಂತಾದುವುಗಳ ಪಾತ್ರವೂ ಈ ಅನುಕಂಪದ ಹಿಂದಿರಬಹುದು. ಆದರೆ ಇವಾವುವೂ ಅವರ ಈ ಅನುಕಂಪವನ್ನು ನ್ಯಾಯಯುತಗೊಳಿಸಲು ಸಕಾರವೆನಿಸುವುದಿಲ್ಲ. ಸದ್ಯ ನಾವು ವೀರಪ್ಪನ್‍ನನ್ನು ದೃಶ್ಯದಿಂದ ಹೊರಗಿಟ್ಟು ಆ ಜಾಗದಲ್ಲಿ ಗೋರಕ್ಷಕ್ ದಳ್‍ನಂತಹ ಸ್ವಘೋಷಿತ ಗೋರಕ್ಷಕರನ್ನು ತಂದು ಕೂರಿಸಿದರೆ, ನಮ್ಮಲ್ಲಿ ಮೂಡಬಹುದಾದ ಅಭಿಪ್ರಾಯಗಳೇನು? ಈ ಮಂದಿಗೆ ಸಮಾಜದಿಂದ ಅನುಕಂಪ ಲಭ್ಯವಾಗುತ್ತಿದೆಯೇ? ಇವರ ಕೃತ್ಯಗಳು ಸಮಾಜದ ಭಾವನೆಯನ್ನು ಪ್ರತಿನಿಧಿಸುತ್ತವೆಯೇ? ಇವರನ್ನು ಬೆಂಬಲಿಸುವ ಮಂದಿಯ ಸಂಖ್ಯೆ ಎಷ್ಟು? ಅವರ ಸ್ಥಾನ-ಮಾನಗಳು ಏನೇನು?
     ಗೋರಕ್ಷಣೆಯ ನೆಪದಲ್ಲಿ ಇವತ್ತು ನಡೆಯುತ್ತಿರುವ ಹಲ್ಲೆ-ದರೋಡೆ-ಹತ್ಯೆಗಳು ರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಟ್ಟಿವೆ.  ಗೋಮಾಂಸವನ್ನು ಸಾಗಿಸುತ್ತಿದ್ದಾರೆ ಎಂಬ ನೆಪದಲ್ಲಿ ಮಧ್ಯಪ್ರದೇಶದಲ್ಲಿ  ಇಬ್ಬರು ಮುಸ್ಲಿಂ ಮಹಿಳೆಯರನ್ನು ಥಳಿಸಿದ ಮತ್ತು ಗುಜರಾತ್‍ನಲ್ಲಿ ದಲಿತರ ಮೇಲೆ ನಡೆಸಲಾ
ದ ಹಲ್ಲೆಗಿಂತ ಎರಡ್ಮೂರು ವಾರಗಳ ಹಿಂದೆ ದೆಹಲಿಯಲ್ಲಿ ಗೋಸಾಗಾಟದ ಆರೋಪದಲ್ಲಿ ಇಬ್ಬರಿಗೆ ಬಲವಂತದಿಂದ ಸೆಗಣಿ, ಗೋಮೂತ್ರವನ್ನು ಕುಡಿಸಿ, ಅದನ್ನು ಚಿತ್ರೀಕರಿಸಿ ಹರಿಯಬಿಡಲಾಗಿತ್ತು. ಇಂಥದ್ದು ಪದೇ ಪದೇ ನಡೆಯುತ್ತಿದೆ ಮತ್ತು ಹೆಚ್ಚಿನ ಪ್ರಕರಣಗಳು ಪ್ರತಿಭಟನೆಗಳ ಹಂಗೂ ಇಲ್ಲದೆ ಸತ್ತು ಹೋಗುತ್ತಿವೆ. ನಿಜವಾಗಿ, ಸೂಕ್ತ ಪರವಾನಿಗೆ ಇಲ್ಲದೇ ದನದ ಮಾಂಸ ಎಂದಲ್ಲ, ಮರ ಸಾಗಾಟ ಕೂಡ ಅಪರಾಧವೇ. ಕೋಳಿ, ಆಡು, ಅಕ್ಕಿ.. ಸಾಗಾಟವೂ ಅಪರಾಧವೇ. ಆದರೆ, ಈ ಅಕ್ರಮ ಚಟುವಟಿಕೆಗಳನ್ನು ತಡೆಯುವ ನ್ಯಾಯಯುತ ದಾರಿ ಯಾವುದು? ಅಕ್ರಮವಾಗಿ ಸಾಗಾಟ ಮಾಡುವ ಯಾವುದೇ ವ್ಯಕ್ತಿ, ಅದನ್ನು ಕದ್ದು ಮುಚ್ಚಿ ಮಾಡುತ್ತಾನೆ. ಸಮಾಜದ ಕಣ್ಣಿನಿಂದ ತಪ್ಪಿಸಿಕೊಂಡು ತನ್ನ ಕೃತ್ಯವನ್ನು ಎಸಗುತ್ತಾನೆ. ಅದಕ್ಕಿರುವ ಕಾರಣ ಏನೆಂದರೆ, ಅದು ಕಾನೂನು ವಿರೋಧಿ ಎಂಬ ಸ್ಪಷ್ಟ ಅರಿವು. ಆದ್ದರಿಂದಲೇ, ಆತ ತನ್ನ ಈ ಅಕ್ರಮ ಕೃತ್ಯಕ್ಕಾಗಿ ತಂಡ ಕಟ್ಟುವ ಸಂದರ್ಭ ಒದಗಿದರೂ ಧರ್ಮಸೂಚಕ ಹೆಸರನ್ನೋ ನಂಟನ್ನೋ ಜೋಡಿಸದೆಯೇ ತಂಡ ರೂಪಿಸುತ್ತಾನೆ. ಆದರೆ ಗೋವಿನ ರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಗುರುತಿಸಿಕೊಳ್ಳುವುದೇ ನಿರ್ದಿಷ್ಟ ಧರ್ಮದ ಐಡೆಂಟಿಟಿಯೊಂದಿಗೆ. ಗೋಮಾಂಸವನ್ನು ಅಕ್ರಮವಾಗಿ ಸಾಗಿಸುವುದು ಹೇಗೆ ಕಾನೂನು ವಿರೋಧಿಯೋ ಹಾಗೆಯೇ ಅದನ್ನು ತಡೆಯುವ ನೆಪದಲ್ಲಿ ನಡೆಯುವ ಸರ್ವ ಕ್ರೌರ್ಯಗಳೂ ಕಾನೂನು ವಿರೋಧಿಯೇ. ಸಾಂವಿಧಾನಿಕವಾಗಿ ಈ ಎರಡಕ್ಕೂ ಮಾನ್ಯತೆಯಿಲ್ಲ. ಆದರೆ ಇವತ್ತಿನ ಪರಿಸ್ಥಿತಿ ಎಷ್ಟು ವಿಡಂಬನೆಯಿಂದ ಕೂಡಿದೆಯೆಂದರೆ, ಸತ್ತ ದನದ ಚರ್ಮವನ್ನು ಸಕ್ರಮವಾಗಿಯೇ ಸುಲಿದವರು ಅಥವಾ ಮಾಂಸ ಸಾಗಾಟ ಮಾಡಿದವರು ಮತ್ತು ಆಹಾರವಾಗಿ ಬಳಸಿದವರು ಕಾನೂನು ಭಂಜಕರಂತೆ ಥಳಿತಕ್ಕೆ ಒಳಗಾಗುತ್ತಾರೆ. ಅದೇ ವೇಳೆ ನಿಜಕ್ಕೂ ಕಾನೂನು ಭಂಜನೆಯಲ್ಲಿ ಭಾಗಿಯಾದವರು ಕಾನೂನು ಪೋಷಕರಂತೆ ಧ್ವನಿ ಎತ್ತರಿಸಿ ಮಾತಾಡುತ್ತಾರೆ. ಮಾತ್ರವಲ್ಲ, ಈ ಅಕ್ರಮ ಚಟುವಟಿಕೆಗೆ ಧರ್ಮಸೂಚಕ ಹೆಸರಿನ ತಂಡವನ್ನು ಕಟ್ಟಿಕೊಳ್ಳುತ್ತಾರೆ. ಆದ್ದರಿಂದಲೇ, ಕೆಲವು ಪ್ರಶ್ನೆಗಳನ್ನು ಸಮಾಜದ ಮುಂದೆ ಇಡಬೇಕಾದ ಅನಿವಾರ್ಯತೆ ಇದೆ. ಭೂಗತವಾಗಿ ಮಾಡುವ ಕೃತ್ಯಗಳನ್ನು ಬಹಿರಂಗವಾಗಿ ಮಾಡುವುದಕ್ಕೆ ಇರುವ ಪರವಾನಿಗೆಯಾಗಿ ‘ಧರ್ಮ’ ಬಳಕೆಯಾಗುತ್ತಿದೆಯೇ? ಗೋರಕ್ಷಕ್ ದಳ್ ಮಾಡುತ್ತಿರುವ ಕೃತ್ಯಗಳು ಯಾವ ನೆಲೆಯಲ್ಲೂ ಕಾನೂನುಬದ್ಧವೂ ಅಲ್ಲ, ಧರ್ಮಬದ್ಧವೂ ಅಲ್ಲ. ಅತ್ಯಂತ ಅಮಾನುಷವಾಗಿ ಅದು ವರ್ತಿಸುತ್ತದೆ. ಸೆಗಣಿ ತಿನ್ನಿಸುವ, ಥಳಿಸಿ ಕೊಲ್ಲುವ ಮತ್ತು ಬೆತ್ತಲೆ ಮಾಡುವ ಚಟುವಟಿಕೆಗಳಾವುವೂ ಧರ್ಮಬದ್ಧವಾಗಿರಲು ಸಾಧ್ಯವಿಲ್ಲ. ಯಾವುದೇ ಕ್ರಮವು ಧರ್ಮಸಮ್ಮತ ಅಥವಾ ಧರ್ಮವಿರೋಧಿಯಾಗಲು ಕೆಲವು ನಿಯಮ-ನಡಾವಳಿಗಳಿವೆ. ಹಾಗಿದ್ದೂ, ಗೋರಕ್ಷಕ್ ದಳ್‍ನಂತಹ ಅಕ್ರಮ ತಂಡಗಳು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯವಾಹಿನಿಯಲ್ಲೇ ಇನ್ನೂ ಅಸ್ತಿತ್ವ ಉಳಿಸಿಕೊಳ್ಳಲು ಕಾರಣವೇನು? ಅದರ ಚಟುವಟಿಕೆಗಳೆಲ್ಲವೂ ಭೂಗತವಾಗಿ ಮಾಡುವುದಕ್ಕಷ್ಟೇ ಅರ್ಹವಾಗಿದ್ದರೂ ಅದು ರಕ್ಷಕ ಗುರುತಿನೊಂದಿಗೆ ಉಳಿದುಕೊಂಡಿರುವುದರ ಹಿನ್ನೆಲೆ ಏನು?
     ನಿಜವಾಗಿ, ಅಕ್ರಮ ಎಂಬ ಪದ ಸರ್ವ ಬಗೆಯ ಅಕ್ರಮ ಚಟುವಟಿಕೆಗಳನ್ನೂ ಪ್ರತಿನಿಧಿಸುತ್ತದೆ. ಅಕ್ರಮವಾಗಿ ತಿನ್ನುವುದು, ಕುಡಿಯುವುದು, ಕಡಿಯುವುದು, ಸಾಗಿಸುವುದು ಹೇಗೆ ಅಪರಾಧವೋ ಅದನ್ನು ಅಕ್ರಮ ರೀತಿಯಲ್ಲಿ ತಡೆಯುವುದೂ ಅಪರಾಧವೇ. ಆದ್ದರಿಂದಲೇ, ಗೋರಕ್ಷಣೆಯ ಹೆಸರಲ್ಲಿ ಹುಟ್ಟಿಕೊಂಡಿರುವ ರಕ್ಷಕ ತಂಡ ನಿಷೇಧಕ್ಕೆ ಒಳಗಾಗಬೇಕಾದ ತುರ್ತು ಅಗತ್ಯವಿದೆ. ನಿಜವಾಗಿ, ರಕ್ಷಣೆ ಅಥವಾ ನಿರ್ಮೂಲನೆಯು ಸರಕಾರದ್ದೇ ಜವಾಬ್ದಾರಿಯಾಗಿರುತ್ತದೆ. ಅದನ್ನು ಯಾವುದೇ ಖಾಸಗಿ ತಂಡವೊಂದು ಗುತ್ತಿಗೆ ಪಡಕೊಳ್ಳುವುದೇ ಸಂವಿಧಾನ ವಿರೋಧಿ. ಮನುಷ್ಯರ ಕ್ಷೇಮಾಭಿವೃದ್ಧಿಯ ಜವಾಬ್ದಾರಿ ಹೇಗೆ ಸರಕಾರದ್ದೋ ಹಾಗೆಯೇ ಪ್ರಾಣಿ-ಪಕ್ಷಿ, ಸಸ್ಯ ಸಂಕುಲಗಳ ಕ್ಷೇಮಾಭಿವೃದ್ಧಿಯ ಜವಾಬ್ದಾರಿಯೂ ಸರಕಾರದ್ದೇ. ಸರಕಾರದ ಹೊರತಾದ ಗುಂಪೊಂದು ಇವುಗಳಲ್ಲಿ ಮಧ್ಯ ಪ್ರವೇಶಿಸುವುದೆಂದರೆ, ಅದು ಸರಕಾರದ ದೌರ್ಬಲ್ಯ ಮತ್ತು ವೈಫಲ್ಯವನ್ನು ಸಾರಿದಂತೆ.ಆದ್ದರಿಂದ,  ಒಂದೋ ಸರಕಾರ ಗೋರಕ್ಷಕ್ ದಳ್‍ನಂತಹ ಖಾಸಗಿ ಗುತ್ತಿಗೆ ಕಂಪೆನಿಗಳನ್ನು ನಿಷೇಧಿಸಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸಬೇಕು ಅಥವಾ ಗೋರಕ್ಷಣೆಯ ಹೊಣೆಗಾರಿಕೆಯನ್ನು ಸದ್ಯ ಗೋರಕ್ಷಣ್ ದಳದಂತಹ ಖಾಸಗಿ ತಂಡಗಳಿಗೆ ವಹಿಸಿಕೊಟ್ಟಿರುವೆ ಎಂದು ಬಹಿರಂಗವಾಗಿ ಸಾರಬೇಕು. ಒಂದು ವೇಳೆ, ಸರಕಾರಿ ವ್ಯವಸ್ಥೆಯಲ್ಲಿ ಇಂಥ
ಹೊರಗುತ್ತಿಗೆಗೆ  ಅವಕಾಶ ಇದೆಯೆಂದಾದರೆ- ಹಾಲು, ಮೊಸರು, ಕೋಳಿ, ಮೀನು, ಆಡು, ಲಿಂಬೆ, ಮಾವು, ಹಲಸು.. ಮುಂತಾದವುಗಳ ರಕ್ಷಣೆಯ ಹೆಸರಲ್ಲೂ ತಂಡಗಳನ್ನು ಕಟ್ಟಿಕೊಳ್ಳುವುದಕ್ಕೆ ಅವಕಾಶ ಇರಬೇಕಾಗುತ್ತದೆ.  ಹಾಗಾದರೆ, ಗೋರಕ್ಷಣ್ ದಳದಂತೆಯೇ ಗೋಹಾಲು ರಕ್ಷಕ ದಳ, ಮೊಸರು ರಕ್ಷಕ ದಳ, ಮೀನು ರಕ್ಷಕ ದಳ..ಗಳ ಕಾರ್ಯಾಚರಣೆಗೂ ಅವಕಾಶ ಮಾಡಿಕೊಡಬೇಕಾಗುತ್ತದೆ. ಮಾತ್ರವಲ್ಲ, ‘ಗೋವು ಮಾತ್ರವಲ್ಲ, ಅದರ ಹಾಲೂ ಪವಿತ್ರವಾಗಿದ್ದು, ಕರುವಿನ ಹೊರತು ಇನ್ನಾರೂ ಅದನ್ನು ಕುಡಿಯಬಾರದು..’ ಎಂದು ವಾದಿಸಿಕೊಂಡು ಹಾಲು ರಕ್ಷಕ್ ದಳ ಹಾದಿ-ಬೀದಿಯಲ್ಲಿ ಥಳಿಸುವುದನ್ನೂ ಸಹಿಸಿಕೊಳ್ಳಬೇಕಾಗುತ್ತದೆ.   
        ಏನೇ ಆಗಲಿ, ಗೋರಕ್ಷಣೆಯ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ಗೋರಕ್ಷಣ್ ದಳದಂತಹ ತಂಡಗಳು ಎಲ್ಲ ರೀತಿಯಲ್ಲೂ ನಿಷೇಧಕ್ಕೆ ಅರ್ಹವಾಗಿವೆ. ಅಕ್ರಮ ಚಟುವಟಿಕೆಯನ್ನು ತಡೆಯಬೇಕಾದುದು ಸರಕಾರವೇ ಹೊರತು ಖಾಸಗಿ ತಂಡಗಳಲ್ಲ. ಈ ಬಗ್ಗೆ ಸರಕಾರ ಬಿಗು ನಿಲುವು ತಳೆದರೆ, ಹಾದಿ-ಬೀದಿಯಲ್ಲಿ ಯಾರೂ ಬೆತ್ತಲಾಗಲಾರರು.


No comments:

Post a Comment