Monday, 8 August 2016

ಮಕ್ವಾನ ಹಿಂತಿರುಗಿಸಿದ ದಲಿತ ಪ್ರಶಸ್ತಿ ಮತ್ತು ವಿಲ್ಸನ್ ರ ಮ್ಯಾಗ್ಸೇಸೆ

      ಸಫಾಯಿ ಕರ್ಮಚಾರಿ ಆಂದೋಲನ್ ಎಂಬ ಸಂಘವನ್ನು ಕಟ್ಟಿಕೊಂಡು ಮಲ ಹೊರುವ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಬೆಂಜವಾಡ ವಿಲ್ಸನ್ ಅವರು ಮ್ಯಾಗ್ಸೇಸೆ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಸುದ್ದಿಯು ಪತ್ರಿಕೆಗಳಲ್ಲಿ ಪ್ರಕಟವಾಗುವುದಕ್ಕಿಂತ ಒಂದು ದಿನ ಮೊದಲು ಗುಜರಾತ್‍ನ ಪ್ರಮುಖ ಸಾಹಿತಿ ಅಮೃತ್‍ಲಾಲ್ ಮಕ್ವಾನಾ ಅವರು ತಮಗೆ ಗುಜರಾತ್ ಸರಕಾರ ನೀಡಿರುವ ಸಾಹಿತ್ಯ ಪ್ರಶಸ್ತಿ ಮತ್ತು 25 ಸಾವಿರ ರೂಪಾಯಿ ಮೊತ್ತವನ್ನು ಸರಕಾರಕ್ಕೆ ಹಿಂತಿರುಗಿಸಿದರು. ವಿಶೇಷ ಏನೆಂದರೆ, ವಿಲ್ಸನ್ ಮತ್ತು ಮಕ್ವಾನ ಇಬ್ಬರೂ ದಲಿತರು. ಅಷ್ಟು ಮಾತ್ರವಲ್ಲ, ಇವರಿಬ್ಬರೂ ದಲಿತ ಸಬಲೀಕರಣವನ್ನೇ ಗುರಿಯಾಗಿಸಿಕೊಂಡವರು. 2014ರಲ್ಲಿ ಗುಜರಾತ್ ಸರಕಾರವು ಉತ್ತಮ ದಲಿತ ಸಾಹಿತ್ಯ ಪುರಸ್ಕಾರಕ್ಕೆ ಮಕ್ವಾನರನ್ನು ಆಯ್ಕೆ ಮಾಡಿರುವುದಕ್ಕೆ, ರಾಜ್ಯದ ದಲಿತರ ಸಂಕಷ್ಟಭರಿತ ಜೀವನದ ಮೇಲೆ ಅವರು ಬರೆದ ಸಾಹಿತ್ಯ ಕೃತಿಯೇ ಪ್ರಮುಖ ಕಾರಣವಾಗಿತ್ತು. ಆದರೆ ಇದೀಗ ಅವರ ಆ ಕೃತಿಯನ್ನೇ ಅಣಕಿಸುವಂತೆ, ಗುಜರಾತ್‍ನಲ್ಲಿ ದಲಿತರ ಮೇಲೆ ಹಲ್ಲೆ ನಡೆದಿದೆ. ಹಾಗಂತ, ಸತ್ತ ದನದ ಚರ್ಮ ಸುಲಿದ ಕಾರಣಕ್ಕಾಗಿ ಉನಾದಲ್ಲಿ ದಲಿತ ಯುವಕರ ಮೇಲೆ ನಡೆದ ಹಲ್ಲೆ ಕೇವಲ ಮಕ್ವಾನರನ್ನು ಮಾತ್ರ ಕೆರಳಿಸಿದ್ದಲ್ಲ. ಗುಜರಾತ್‍ನಾದ್ಯಂತ ದಲಿತರನ್ನು ಬೀದಿಗಿಳಿಯುವಂತೆ ಮಾಡಿದೆ. ಸತ್ತ ದನಗಳು ಚರ್ಮ ಸುಲಿಸಿಕೊಳ್ಳದೇ ಗುಜರಾತ್‍ನಾದ್ಯಂತ ದಫನಕ್ಕೆ ಒಳಗಾಗುತ್ತಿವೆ. ದಲಿತರ ಅಸಹಕಾರದಿಂದಾಗಿ ಸುರೇಂದ್ರ ನಗರ್ ಜಿಲ್ಲೆಯೊಂದರಲ್ಲೇ ಒಂದೇ ದಿನ ಸುಮಾರು 80 ದನಗಳನ್ನು ಚರ್ಮ ಸಮೇತ ವ್ಯವಸ್ಥೆಯೇ ದಫನ ಮಾಡಬೇಕಾಗಿ ಬಂದಿದೆ. ನಿಜವಾಗಿ, ಈ ದೇಶದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ದಲಿತರು ಓರ್ವರೇ ಅಲ್ಲ. ಬಹುಶಃ, ಮುಸ್ಲಿಮರು ಈ ದೌರ್ಜನ್ಯದ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಸಾಧ್ಯತೆಯೇ ಹೆಚ್ಚು. ಉನಾ ಘಟನೆಯ ವಾರದ ಬಳಿಕ ಮಧ್ಯಪ್ರದೇಶದಲ್ಲಿ ಇದೇ ದನದ ನೆಪದಲ್ಲಿ ಇಬ್ಬರು ಮುಸ್ಲಿಮ್ ಮಹಿಳೆಯರನ್ನು ಸಾರ್ವಜನಿಕವಾಗಿಯೇ ಥಳಿಸಲಾಯಿತು. ಇದಕ್ಕಿಂತಲೂ ಆಘಾತಕಾರಿ ಸಂಗತಿ ಏನೆಂದರೆ, ಅರೆಬಿಕ್ ಭಾಷೆ ಕಲಿಸುವುದನ್ನು ವಿರೋಧಿಸಿ ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸಂತ ಥಾಮಸ್ ಪ್ರಾಥಮಿಕ್ ಶಾಲೆಯ ಮೇಲೆ ದಾಳಿ ನಡೆಯಿತು. ತರಗತಿಗೆ ನುಗ್ಗಿ ಕೋಲಾಹಲ ಸೃಷ್ಟಿಸಲಾಯಿತು. ಇಷ್ಟಕ್ಕೂ, ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಸಿ ಹೀಗೆ ಹತ್ಯೆ ಮತ್ತು ಹಲ್ಲೆಗಳಲ್ಲಿ ತೊಡಗಿರುವುದು ಒಂದೇ ಗುಂಪು. ಈ ಗುಂಪಿಗೂ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷಕ್ಕೂ ನೇರಾತಿನೇರ ಸಂಬಂಧ ಇದೆ. ಬಿಜೆಪಿ ತಳಮಟ್ಟದಲ್ಲಿ ಆಶ್ರಯಿಸಿಕೊಂಡಿರುವುದೇ ಈ ಗುಂಪನ್ನು. ಅದು ಈ ಗೂಂಡಾ ಗುಂಪನ್ನು ಬೆಂಬಲಿಸುತ್ತದೆ. ಜೈಲಿನಿಂದ ಬಿಡಿಸಿ ತರುತ್ತದೆ. ನ್ಯಾಯಾಲಯಗಳಲ್ಲಿ ಅವರ ಪರವಾಗಿ ವಾದಿಸುವುದಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತದೆ. ಇವೆಲ್ಲ ಸೂಚಿಸುವುದೇನನ್ನು? ಒಂದು ಕಡೆ ದಲಿತ-ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ಮಾತಾಡುತ್ತಲೇ ಇನ್ನೊಂದು ಕಡೆ ಅವರ ಮೇಲಿನ ಹಲ್ಲೆಕೋರರನ್ನು ರಕ್ಷಿಸುವುದು ಯಾವುದರ ಪ್ರತೀಕ? ನಿಜವಾಗಿ, ಮಕ್ವಾನರು ತನ್ನ ಪುರಸ್ಕಾರವನ್ನು ವ್ಯವಸ್ಥೆಯ ಮುಖಕ್ಕೆ ಎಸೆದಿರುವುದಕ್ಕೆ ಬರೇ ಉನಾ ಘಟನೆ ಒಂದೇ ಕಾರಣ ಇಲ್ಲ. ಗುಜರಾತ್‍ನಲ್ಲಿ ಈ ಹಿಂದೆ ನಡೆದ ದಲಿತ ಹಲ್ಲೆ ಪ್ರಕರಣವನ್ನೂ ಅವರು ಉಲ್ಲೇಖಿಸಿದ್ದಾರೆ. ವಿಲ್ಸನ್ ತನ್ನ ಮ್ಯಾಗ್ಸೇಸೆ ಪುರಸ್ಕಾರವನ್ನು ಇಡಬೇಕಾದ ಭಾರತವೆಂಬ ಕಪಾಟು ಮನುಷ್ಯ ವಿರೋಧಿಗಳಿಂದ ಹೀಗೆ ತುಂಬಿ ಹೋಗಿದೆ ಎಂಬುದನ್ನು ಮಕ್ವಾನ ಈ ಮೂಲಕ ನೆನಪಿಸಿದ್ದಾರೆ.
      ನಿಜವಾಗಿ, ವಿಲ್ಸನ್ ಮತ್ತು ಮಕ್ವಾನ ಈ ದೇಶದ ಎರಡು ಸ್ಥಿತಿಗಳ ಪ್ರತೀಕವಾಗಿದ್ದಾರೆ. ಶ್ರೇಷ್ಠ ಪುರಸ್ಕಾರಕ್ಕೆ ಭಾಜನರಾಗಿಯೂ ಅದನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಿಲ್ಲದ ದುರಂತ ಸ್ಥಿತಿ ಈ ಇಬ್ಬರದು. ಮ್ಯಾಗ್ಸೇಸೆ ಪುರಸ್ಕಾರಕ್ಕೆ ವಿಲ್ಸನ್ ಆಯ್ಕೆಯಾಗಿದ್ದರೂ ಅವರ ಸಮುದಾಯ ಮಲ ಎತ್ತುವ ದೌರ್ಜನ್ಯದಿಂದ ಇನ್ನೂ ಮುಕ್ತವಾಗಿಲ್ಲ. ಅತ್ಯುತ್ತಮ ದಲಿತ ಪುರಸ್ಕಾರ ಪಡೆದ ಹೊರತೂ ಮಕ್ವಾನರ ಸಮುದಾಯ ಸತ್ತ ಪ್ರಾಣಿಯ ಚರ್ಮ ಸುಲಿಯುವ ವೃತ್ತಿಯಿಂದ ಹೊರಬಂದಿಲ್ಲ. ಈ ಎರಡೂ ವೃತ್ತಿಗಳು ತಲೆತಲಾಂತರದಿಂದ ಈ ಸಮುದಾಯದಲ್ಲೇ ಯಾಕೆ ಗಿರಕಿ ಹೊಡೆಯುತ್ತಿದೆ ಎಂಬ ಪತ್ತೆ ಕಾರ್ಯದಲ್ಲಿ ಒಂದೊಮ್ಮೆ ತೊಡಗಿದ್ದೇ ಆದರೆ, ಅಂತಿಮವಾಗಿ ನಾವು ತಲುಪುವುದು - ದಲಿತರು ಮತ್ತು ಮುಸ್ಲಿಮರ ಮೇಲೆ ಹಲ್ಲೆ ನಡೆಸುವವರನ್ನು ರಾಜಕೀಯವಾಗಿ ಸಾಕುವವರ ಅಂಗಳಕ್ಕೆ. ಮುಸ್ಲಿಮರೆಲ್ಲ ಮಾಂಸೋದ್ಯಮದಲ್ಲಿ ತೊಡಗುವುದನ್ನು ಈ ಮಂದಿ ಬಯಸುತ್ತಾರೆ. ದಲಿತರು ಮಲ ಎತ್ತುವ, ಚರ್ಮ ಸುಲಿಯುವ ಅಧಮ ಮನಸ್ಥಿತಿಯಲ್ಲೇ ಬೆಳೆಯುವುದನ್ನು ಅವರು ಇಷ್ಟಪಡುತ್ತಾರೆ. ಈ ವಾತಾವರಣವನ್ನು ಉಳಿಸಿ, ಕಾಪಾಡಲಿಕ್ಕಾಗಿ ಶ್ರಮಿಸುತ್ತಾರೆ. ಮುಸ್ಲಿಮರು ಮತ್ತು ದಲಿತರು ಉನ್ನತ ಶಿಕ್ಷಣ ಪಡೆಯುವುದನ್ನು ಬೇರೆ ಬೇರೆ ವಿಧಾನಗಳ ಮೂಲಕ ತಡೆಯುತ್ತಿರುತ್ತಾರೆ. ಸ್ಕಾರ್ಫ್‍ನ ನೆಪದಲ್ಲಿ ಒಂದು ಕಡೆ ಮುಸ್ಲಿಮ್ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡುವಾಗ ಇನ್ನೊಂದು ಕಡೆ ನಿತ್ಯ ಕಿರುಕುಳ ಮತ್ತು ಅವಮಾನದಿಂದ ಬೇಯಿಸಿ ದಲಿತರನ್ನು ‘ವೇಮುಲ’ ಮತ್ತು ‘ಅಶ್ವತಿ’ಗೊಳಿಸಲಾಗುತ್ತದೆ. ಈ ಎರಡೂ ಸಮುದಾಯ ಇದ್ದ ಸ್ಥಿತಿಯಲ್ಲೇ ಉಳಿಯಬೇಕೆಂಬುದು ಅವರ ತಂತ್ರ. ಅವರು ಅಧಿಕಾರ ಪಡೆಯಬೇಕಾದರೆ ಹಿಂದುಳಿದ ಮುಸ್ಲಿಮರು ಇರಲೇಬೇಕು. ಈ ಹಿಂದುಳಿದವರ ಮೇಲೆ ಹಲ್ಲೆ, ದೌರ್ಜನ್ಯಗಳನ್ನು ಆಗಾಗ ನಡೆಸುತ್ತಾ, ಅವರನ್ನು ಸಂತ್ರಸ್ತ ಮನಸ್ಥಿತಿಯಲ್ಲೇ ಉಳಿಸಿಕೊಳ್ಳುತ್ತಾ, ಅದನ್ನೇ ತಮ್ಮ ಪಾಲಿನ ಸಾಧನೆಯಾಗಿ ಮತ್ತು ಈ ಸಾಧನೆಯನ್ನು ಧಾರ್ಮಿಕವಾಗಿ ಮತ್ತು ರಾಜಕೀಯವಾಗಿ ನಗದೀಕರಿಸಿಕೊಳ್ಳುವ ಅವಕಾಶ ಇರಬೇಕು. ಅಂದಹಾಗೆ, ಇಂಥ ಹೀನಕೃತ್ಯಕ್ಕೆ ಸ್ಥಿತಿವಂತ ಸಮುದಾಯ ಯಾವ ಕೊಡುಗೆಯನ್ನು ಖಂಡಿತ ನೀಡಲಾರದು. ಆದ್ದರಿಂದಲೇ, ‘ಹಿಂದುಳಿದ’ ಒಂದು ಸಮುದಾಯ ಸದಾ ಅಸ್ತಿತ್ವದಲ್ಲಿ ಇರಬೇಕಾಗುತ್ತದೆ. ದಲಿತರನ್ನು ತಲೆತಲಾಂತರದಿಂದಲೇ ಹಿಂದುಳಿದ ಮನಸ್ಥಿತಿಯಲ್ಲಿ ಉಳಿಸಿಕೊಂಡು ಬರಲಾಗಿರುವುದರಿಂದ ಅವರನ್ನು ಅದೇ ಸ್ಥಿತಿಯಲ್ಲಿ ಮತ್ತು ಅದೇ ವೃತ್ತಿಯಲ್ಲಿ ಉಳಿಸಿಕೊಳ್ಳುವುದು ಪ್ರಾಯೋಗಿಕವಾಗಿ ಹೆಚ್ಚು ಸುಲಭ. ಹೀಗೆ ಎರಡು ‘ಹಿಂದುಳಿದ’ ಸಮುದಾಯವನ್ನು ಉಳಿಸಿಕೊಂಡು ಮತ್ತು ಬಳಸಿಕೊಂಡು ಒಂದು ರಾಜಕೀಯ ಸಿದ್ಧಾಂತ ಅಧಿಕಾರದ ರುಚಿಯನ್ನು ಅನುಭವಿಸುತ್ತಿದೆ. ಅಷ್ಟಕ್ಕೂ, ಅರೆಬಿಕ್ ಅನ್ನು ಒಂದು ಭಾಷೆಯಾಗಿ ಶಾಲೆಯಲ್ಲಿ ಕಲಿಸಬಾರದೆಂದು ಆಗ್ರಹಿಸಿ ಈ ದೇಶದ ಇನ್ನೆಲ್ಲೂ ಈ ವರೆಗೂ ದಾಳಿ ನಡೆದಿಲ್ಲ. ದಕ್ಷಿಣ ಕನ್ನಡದಲ್ಲಿ ಇದೀಗ ಅರೆಬಿಕ್‍ನ ಹೆಸರಲ್ಲಿ ಮೊಟ್ಟಮೊದಲ ದಾಳಿ ನಡೆದಿದೆ. ಬಹುಶಃ, ಮುಸ್ಲಿಮರನ್ನು ಸದಾ ಅಪರಾಧಿಗಳ ಸ್ಥಾನದಲ್ಲಿ ಕೂರಿಸುವುದಕ್ಕೆ ವಿಷಯಗಳ ಕೊರತೆಯೇನೂ ಇಲ್ಲ ಎಂಬುದನ್ನು ಸಾರಿದ ವಿಕ್ಷಣ ಸಂದರ್ಭವೂ ಇದುವೇ. ಈ ವರೆಗೆ ಗೋವು, ಮದ್ರಸ, ಭಯೋತ್ಪಾದನೆ, ಸ್ಕಾರ್ಫ್...  ಮುಂತಾದುವುಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದೀಗ ಅರೆಬಿಕ್. ಹಾಗಂತ ಅರೆಬಿಕ್ ಎಂಬುದು ಫ್ರೆಂಚ್, ಜರ್ಮನ್, ಇಂಗ್ಲಿಷ್‍ನಂತೆ ಕೇವಲ ಒಂದು ಸಂವಹನ ಮಾಧ್ಯಮವೇ ಹೊರತು ಬೇರೇನೂ ಅಲ್ಲ. ದಾಳಿಗೊಳಗಾದ ಶಾಲೆಯಲ್ಲಿ ಅರೆಬಿಕ್‍ನಂತೆಯೇ ಫ್ರೆಂಚ್ ಮತ್ತು ಇಂಗ್ಲಿಷನ್ನೂ ಕಲಿಸಲಾಗುತ್ತಿತ್ತು. ದಾಳಿಕೋರರ ಉದ್ದೇಶವೇನು ಎಂಬುದನ್ನು ಇದುವೇ ಸ್ಪಷ್ಟಪಡಿಸುತ್ತದೆ. ಅವರು ಅರೆಬಿಕ್‍ನ ವಿರೋಧಿಗಳಲ್ಲ. ಅವರು ಮುಸ್ಲಿಮರ ವಿರೋಧಿಗಳು. ಯಾವುದಾದರೊಂದು ರೀತಿಯಲ್ಲಿ ಮುಸ್ಲಿಮರನ್ನು ತಪ್ಪಿತಸ್ಥರಂತೆ ಮತ್ತು ತಿರಸ್ಕೃತ ಸಮುದಾಯದಂತೆ ನಡೆಸಿಕೊಳ್ಳುತ್ತಾ ಸಂತ್ರಸ್ತ ವಾತಾವರಣವೊಂದು ಈ ಸಮುದಾಯದಲ್ಲಿ ನೆಲೆಸಿರಬೇಕೆಂಬುದು ಅವರ ಮುಖ್ಯ ಗುರಿ. ದಲಿತರು ಮಲದ ಗುಂಡಿ ಮತ್ತು ಚರ್ಮದ ಕೊಟ್ಟಿಗೆಯಲ್ಲೇ ಜೀವ ತೇದು ತೇದು ಕೊನೆಯುಸಿರೆಳೆಯಬೇಕೆಂಬುದೂ ಅವರದೇ ಮಹದಾಸೆ. ನಿಜವಾಗಿ, ಅವರ ರಾಜಕೀಯ ಸಿದ್ಧಾಂತದ ಅಳಿವು-ಉಳಿವು ಈ ಮಂದಿಯನ್ನೇ ಆಶ್ರಯಿಸಿದೆ. ಸಂತ್ರಸ್ತ ಮನಸ್ಥಿತಿ ಮತ್ತು ಹಿಂದುಳಿಯುವಿಕೆ, ಎರಡೂ ಈ ರಾಜಕೀಯದ ಮೂಲ ತಾಯಿ ಬೇರು. ಇವರಿಬ್ಬರನ್ನೂ ಪರಸ್ಪರ ಎತ್ತಿ ಕಟ್ಟುವುದು ಮತ್ತು ಇಬ್ಬರ ಮೇಲೂ ಒಂದೇ ಬಗೆಯ ಹಲ್ಲೆಗಳಾಗುವುದು ಈ ರಾಜಕೀಯ ಚದುರಂಗದಾಟದ ಜಾಣ ನಡೆಯಾಗಿದೆ. ಉತ್ತರ ಪ್ರದೇಶದ ಅಖ್ಲಾಕ್ ಕುಟುಂಬದ ಮೇಲೂ ಮತ್ತು ಗುಜರಾತ್‍ನ ಉನಾದಲ್ಲಿ ದಲಿತ ಯುವಕರ ಮೇಲೂ ನಡೆದಿರುವ ಹಲ್ಲೆ ಇದನ್ನೇ ಸೂಚಿಸುತ್ತದೆ. ಎರಡರ ಕಾರಣವೂ ಒಂದೇ. ಆದರೆ, ಹಲ್ಲೆಗೊಳಗಾಗಿರುವವರು ಮಾತ್ರ ಬೇರೆ ಬೇರೆ. ದಲಿತರು ಮತ್ತು ಮುಸ್ಲಿಮರನ್ನು ಈ ರಾಜಕೀಯ ಸಿದ್ಧಾಂತ ಒಂದೇ ತಕ್ಕಡಿಯಲ್ಲಿಟ್ಟಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆಗಳ ಅಗತ್ಯ ಇಲ್ಲ. ಅಂದಹಾಗೆ,
       ವಿಲ್ಸನ್‍ರ ಮ್ಯಾಗ್ಸೇಸೆ ಸಾಧನೆಯನ್ನು ಪೂರ್ಣ ಪ್ರಮಾಣದಲ್ಲಿ ಆನಂದಿಸುವ ಸ್ಥಿತಿಯಲ್ಲಿ ಈ ದೇಶ ಇಲ್ಲ ಎಂಬುದನ್ನು ಮಕ್ವಾನ್‍ರು ತನ್ನ ಪ್ರಶಸ್ತಿ ಹಿಂದಿರುಗಿಸುವಿಕೆಯ ಮೂಲಕ ಸೂಚ್ಯವಾಗಿ ತಿಳಿಸಿದ್ದಾರೆ. ಆದ್ದರಿಂದ ಮಲದ ವಿರುದ್ಧ ಜಾಗೃತಿ ಮೂಡಿಸಿದ ವಿಲ್ಸನ್‍ರು ಮಲಿನ ಮನಸ್ಸುಗಳ ಬಗ್ಗೆಯೂ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಗಲಿ ಎಂದಷ್ಟೇ ಈ ಸಂದರ್ಭದಲ್ಲಿ ಹಾರೈಸಬಹುದು.


No comments:

Post a Comment