Wednesday, 24 August 2016

ನಾಗರಿಕತೆ ಮತ್ತು ಅನಾಗರಿಕತೆಯ ಮುಖಾಮುಖಿ

       ಅನಾಗರಿಕತೆ ಎಂಬ ಪದದಿಂದ ‘ಅ’ವನ್ನು ಕಿತ್ತು ಹಾಕಿದರೆ ಉಳಿಯುವ ಪದದಲ್ಲಿ ಒಂದು ಸೌಖ್ಯ ಭಾವವಿದೆ. ಕಿತ್ತು ಹಾಕುವುದು ‘ಅ’ ಎಂಬ ಏಕೈಕ ಶಬ್ದವನ್ನಾದರೂ ಅದರಿಂದಾಗಿ ಒಂದು ಪದಗುಚ್ಛದಲ್ಲಿ ಆಗುವ ವ್ಯತ್ಯಾಸ ಅಪಾರವಾದುದು. ಜನರ ಗುಂಪನ್ನು ನಾವು ನಾಗರಿಕ ಮತ್ತು ಅನಾಗರಿಕ ಎಂದು ವಿಭಜಿಸುವಾಗ ಅಲ್ಲಿ ಮನುಷ್ಯರ ಎರಡು ತಂಡಗಳಷ್ಟೇ ತಯಾರಾಗುವುದಲ್ಲ. ಎರಡು ಮನಸ್ಥಿತಿಯನ್ನು ಪ್ರತಿನಿಧಿಸುವ ಎರಡು ತಂಡಗಳು ತಯಾರಾಗುತ್ತವೆ. ನಾಗರಿಕತೆ ಎಂಬುದು ಮೌಲ್ಯಗಳನ್ನು ಪ್ರತಿನಿಧಿಸುವ ಪದ. ಶಾಂತಿ, ಮಾನವೀಯತೆ, ಕರುಣೆ, ನ್ಯಾಯ, ಸತ್ಯ, ಪ್ರಾಮಾಣಿಕತೆ, ಸಹಿಷ್ಣು.. ಮುಂತಾದ ಗುಣಗಳು ತುಂಬಿ ತುಳುಕುವ ಒಂದು ಸಾಮಾಜಿಕ ಜೀವನ ವಿಧಾನದ ಗುರುತು ಇದು. ಅನಾಗರಿಕತೆ ಈ ಎಲ್ಲವುಗಳ ವಿರೋಧಿ. ಅದು ಅಶಾಂತವಾಗಿರುತ್ತದೆ, ಅಮಾನವೀಯವಾಗಿರುತ್ತದೆ, ಅಸಹಿಷ್ಣುವಾಗಿರುತ್ತದೆ. ಇನ್ನೊಂದು ಆಗಸ್ಟ್ 15 ಈ ದೇಶಕ್ಕೆ ವಿದಾಯ ಕೋರುತ್ತಿರುವ ಈ ಹೊತ್ತಿನಲ್ಲಿ, ಅನಾಗರಿಕತೆ ಮತ್ತು ನಾಗರಿಕತೆಯನ್ನು ಮುಖಾಮುಖಿಯಾಗಿಸಿ ನಾವು ವಿಶ್ಲೇಷಿಸಬೇಕಾಗಿದೆ. ಅಷ್ಟಕ್ಕೂ, ಒಂದು ದೇಶ ಸಂಪೂರ್ಣ ನಾಗರಿಕ ಗುಣಗಳಿಂದ ಮಾತ್ರವೇ ತುಂಬಿ ತುಳುಕುತ್ತಿರುವುದಕ್ಕೆ ಸಾಧ್ಯವೇ ಇಲ್ಲ. ಎಲ್ಲೆಲ್ಲೂ ಶಾಂತಿ, ಎಲ್ಲೆಲ್ಲೂ ಮಾನವೀಯತೆ ಎಂಬಂತಹ ವಾತಾವರಣ ಮಾತ್ರವೇ ನೆಲೆಸಿರುವ ಭೂಭಾಗ ಜಗತ್ತಿನಲ್ಲಿರುವುದು ಅಸಾಧ್ಯ. ಮನುಷ್ಯರಿರುವಲ್ಲೆಲ್ಲಾ ಶಾಂತಿಯೂ ಇರುತ್ತದೆ. ಅಶಾಂತಿಯೂ ಇರುತ್ತದೆ. ಮಾನವೀಯತೆಯೂ ಇರುತ್ತದೆ. ಅಮಾನವೀಯತೆಯೂ ಇರುತ್ತದೆ. ಆದರೆ ಯಾವ ಹಂತದಲ್ಲೂ ಅಮಾನವೀಯತೆ ವಿಜ್ರಂಭಿಸುವುದನ್ನು ಮತ್ತು ಅದು ಪ್ರಾಬಲ್ಯ ಸಾಧಿಸುವುದನ್ನು ನಾಗರಿಕ ಸಮಾಜ ಇಷ್ಟಪಡುವುದಿಲ್ಲ. 28ನೇ ವರ್ಷದಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವ ಮೊದಲು ಇರೋಮ್ ಶರ್ಮಿಳಾರ ಮುಂದೆ ಎರಡು ಆಯ್ಕೆಗಳಿದ್ದುವು. ಒಂದು, ಭೂಗತವಾಗಿದ್ದುಕೊಂಡು, ನಾಗರಿಕ ಸಮಾಜ ಒಪ್ಪಿಕೊಂಡಿರುವ ಎಲ್ಲ ಹೋರಾಟ ಮಾದರಿಗಳನ್ನೂ ತಿರಸ್ಕರಿಸಿ ಗೆರಿಲ್ಲಾ ಮಾರ್ಗವನ್ನು ಆಯ್ದುಕೊಳ್ಳುವುದು. ಇನ್ನೊಂದು, ಅನಾಗರಿಕ ಅನ್ನಬಹುದಾದ ಎಲ್ಲ ಹೋರಾಟ ದಾರಿಗಳಿಂದಲೂ ದೂರ ಇದ್ದುಕೊಂಡು ನ್ಯಾಯಯುತ ಹೋರಾಟ ಮಾದರಿಯನ್ನು ಆಯ್ಕೆ ಮಾಡುವುದು. 16 ವರ್ಷಗಳ ಕಾಲ ಸತತ ಉಪವಾಸ ಸತ್ಯಾಗ್ರಹದಿಂದ ಇದೀಗ ಇರೋಮ್ ಹೊರಬಂದರೂ ಆಕೆ ಇವತ್ತು ಸರ್ವರ ಗೌರವಕ್ಕೆ ಪಾತ್ರವಾಗಿರುವುದೇ ಆಕೆಯ ವಿಧಾನ ಎಷ್ಟು ಮಾನವೀಯವಾದುದು ಎಂಬುದಕ್ಕೆ ಸ್ಪಷ್ಟ ಪುರಾವೆ. ಇದಕ್ಕೆ ತೀರಾ ವಿರುದ್ಧವಾದ ಹೋರಾಟ ಮಾದರಿಯನ್ನು ನಾವು ಗುಜರಾತ್‍ನ ಉನಾದಲ್ಲಿ ಕಂಡಿದ್ದೇವೆ. ದಲಿತರನ್ನು ಬೆತ್ತಲೆಗೊಳಿಸಿ ಥಳಿಸಿದವರು ಅವನ್ನು ಒಂದು ಹೋರಾಟ ಮಾದರಿಯಾಗಿ ಬಿಂಬಿಸುತ್ತಾರೆ. ಕೇವಲ ಉನಾದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶದ ದಾದ್ರಿಯಲ್ಲಿ, ಕರ್ನಾಟಕದ ಕರಾವಳಿ ಭಾಗಗಳಲ್ಲಿ, ಮಧ್ಯ ಪ್ರದೇಶದಲ್ಲಿ, ದೆಹಲಿಯಲ್ಲಿ.. ಸಹಿತ ಎಲ್ಲೆಡೆಯೂ ಅವರು ಇದೇ ಮಾದರಿಯನ್ನು ತಮ್ಮ ಐಡೆಂಟಿಟಿಯಾಗಿ ಬಿಂಬಿಸುತ್ತಲೂ ಇದ್ದಾರೆ. ಆದ್ದರಿಂದಲೇ, ಇವೆರಡೂ ಮುಖಾಮುಖಿ ವಿಶ್ಲೇಷಣೆಗೆ ಒಳಪಡಬೇಕೆಂದು ಬಯಸುವುದು. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪುತ್ರ ವಿಯೋಗವಾದುದನ್ನು ಸಂಭ್ರಮಿಸಿದ ಮಂದಿ ಕೂಡ ಇದೇ ‘ಥಳಿಸುವ’ ಗುಂಪಿನ ಬೆಂಬಲಿಗರಾಗಿದ್ದಾರೆ. ಸಾಹಿತಿಗಳಾದ ಅನಂತಮೂರ್ತಿ ಮತ್ತು ಕಲ್ಬುರ್ಗಿಯವರ ಸಾವಿಗೂ ಸಂಭ್ರಮಿಸಿದ್ದು ಇದೇ ಮನಸ್ಥಿತಿ. ಅಷ್ಟಕ್ಕೂ, ಸಾವನ್ನು ಆನಂದಿಸುವಂತಹ ಈ ಮನಸ್ಥಿತಿಯ ಹುಟ್ಟು ಎಲ್ಲಿ? ನಾಗರಿಕ ಸಮಾಜದ ಪಾಲಿಗೆ ಆ ಮನಸ್ಥಿತಿ ಎಲ್ಲಿಯವರೆಗೆ ಸಹ್ಯ? ವಿಷಾದ ಏನೆಂದರೆ, ಇಂಥ ಮನಸ್ಥಿತಿಯ ಹುಟ್ಟು ಅಲ್ಲ, ಆ ಮನಸ್ಥಿತಿಯನ್ನು ಪೋಷಿಸಿ ಬೆಳೆಸುವವರು ಈ ನಾಗರಿಕ ಸಮಾಜದಲ್ಲಿ ನಾಗರಿಕತೆಯ ಪೋಷಾಕಿನಲ್ಲೇ ಬದುಕುತ್ತಿದ್ದಾರೆ ಎಂಬುದು. 120 ಕೋಟಿ ಜನಸಂಖ್ಯೆಯಲ್ಲಿ ಸರ್ವರೂ ಶಾಂತಿ ಮತ್ತು ಮಾನವೀಯತೆಯ ಕಟ್ಟಾಳುವಾಗಿರುತ್ತಾರೆ ಎಂದು ನಿರೀಕ್ಷಿಸುವುದು ಬಾಲಿಶ. ಆದರೆ ಶಾಂತಿ ಮತ್ತು ಮಾನವೀಯ ಗುಣಗಳನ್ನು ಪ್ರೀತಿಸುವ ಸಮಾಜದ ಲಕ್ಷಣ ಏನೆಂದರೆ, ಅಮಾನವೀಯವಾದುದನ್ನು ಲಾಭ-ನಷ್ಟಗಳ ತಕ್ಕಡಿಯಲ್ಲಿಟ್ಟು ನೋಡದೇ ವಿರೋಧಿಸುವುದು. ಈ ಪ್ರಕ್ರಿಯೆ ಜೀವಂತವಾಗಿರುವಷ್ಟು ದಿನ ಸಮಾಜದಲ್ಲಿ ಅನಾಗರಿಕರು ಪ್ರಾಬಲ್ಯ ಪಡೆಯುವುದಕ್ಕೆ ಸಾಧ್ಯವಿಲ್ಲ. ಸಿದ್ಧರಾಮಯ್ಯನವರ ಮಗನ ಸಾವನ್ನು ಆನಂದಿಸಿದವರು ತಮ್ಮ ಕೃತ್ಯಕ್ಕೆ ಸ್ವತಃ ನಾಚಿಕೊಳ್ಳುವಂತಹ ವಾತಾವರಣ ಯಾಕೆ ನಿರ್ಮಾಣವಾಯಿತೆಂದರೆ, ನಾಗರಿಕ ಸಮಾಜದಲ್ಲಿ ಆ ಮನಸ್ಥಿತಿಗೆ ತೀವ್ರ ಖಂಡನೆ ವ್ಯಕ್ತವಾದುದರಿಂದ. ಪಕ್ಷ-ಬೇಧ ಮರೆತು ರಾಜಕೀಯ ನಾಯಕರು ಸಿದ್ಧರಾಮಯ್ಯನವರ ನೋವಿನಲ್ಲಿ ಭಾಗಿಯಾದುದರಿಂದ. ಇದು ಅನಾಗರಿಕ ಮನಸ್ಥಿತಿಗೆ ಸಡ್ಡು ಹೊಡೆವ ಪ್ರತಿಕ್ರಿಯೆ. ಸಿದ್ಧರಾಮಯ್ಯರನ್ನು ಆಲಿಂಗಿಸಿಕೊಂಡು ಡಿ.ವಿ. ಸದಾನಂದ ಗೌಡ ಹರಿಸಿದ ಕಣ್ಣೀರು  ಅತ್ಯಂತ ಪ್ರಬಲ ಸಂದೇಶವನ್ನು ರವಾನಿಸಿತು. ಆನಂದಿಸಿದವರು ಸ್ವತಃ ಆ ಸಂದೇಶಕ್ಕೆ ತತ್ತರಿಸಿ ಹೋದರು. ಇಂಥ ಪ್ರಕ್ರಿಯೆ ಪ್ರಾಬಲ್ಯಕ್ಕೆ ಬರುತ್ತಿರುವಷ್ಟು ದಿನ ಯಾವ ಅನಾಗರಿಕತೆಯೂ ಸಾಮಾಜಿಕ ಮನ್ನಣೆ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ. ಉನಾ ಆಗಲಿ ದಾದ್ರಿ ಆಗಲಿ ಎಲ್ಲವೂ ಇವತ್ತು ಸಾಧ್ಯ ಆಗಿರುವುದರ ಹಿಂದೆ ನಮ್ಮನ್ನಾಳುವವರ ಮೌನಕ್ಕೆ ಪಾತ್ರ ಇದೆ. ಅವರ ಕುಮ್ಮಕ್ಕಿಗೆ ಪಾಲು ಇದೆ.
       ನಾಗರಿಕತೆ ಮತ್ತು ಅನಾಗರಿಕತೆಯ ನಡುವಿನ ವ್ಯತ್ಯಾಸದ ಗೆರೆಯನ್ನು ತೀರಾ ತೀರಾ ತೆಳುವಾಗಿಸುವ ಪೀಳಿಗೆಯೊಂದರ ಬಗ್ಗೆ ಆಗಸ್ಟ್ 15ರ ನಂತರ ಭಾರತ ಗಂಭೀರವಾಗಿ ಆಲೋಚಿಸಬೇಕು. ಒಂದು ದೇಶದ ಐಡೆಂಟಿಟಿಯು ಆ ದೇಶದಲ್ಲಿ ಅಸ್ತ್ತಿತ್ವದಲ್ಲಿರುವ ಶಾಂತಿ ಮತ್ತು ಮಾನವೀಯತೆಯನ್ನು ಆಧಾರವಾಗಿಸಿಕೊಂಡಿರುತ್ತದೆ. ದೇಶ ಎಷ್ಟೇ ದೊಡ್ಡದಿರಲಿ ಮತ್ತು ಜನಸಂಖ್ಯೆ ಎಷ್ಟೇ ಕೋಟಿಗಳ ಲೆಕ್ಕದಲ್ಲಿರಲಿ, ಅವೆಲ್ಲವನ್ನೂ ನಕಾರಾತ್ಮಕಗೊಳಿಸುವುದಕ್ಕೆ ಒಂದು ಉನಾ, ಒಂದು ದಾದ್ರಿ ಧಾರಾಳ ಸಾಕು. ಈ ದೇಶದಲ್ಲಂತೂ ಉನಾದಂತಹ ಘಟನೆ ಮಾಮೂಲಿ ಪಟ್ಟಿಯನ್ನು ಸೇರುವಷ್ಟು ಪರಿಚಿತವೆನಿಸಿಕೊಳ್ಳುತ್ತಿದೆ. ದಲಿತರು, ಮುಸ್ಲಿಮರು ಮತ್ತು ದುರ್ಬಲ ವರ್ಗದವರು ಪದೇ ಪದೇ ಆಹಾರ, ಮೈಬಣ್ಣ, ಜಾತಿ, ಆಚಾರಗಳ ನೆಪದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇದ್ದಾರೆ. ಸಮಾಜದಿಂದ ಶಾಂತಿ ಮರೆಯಾಗುತ್ತಿದೆ. ನಗರಗಳು, ಗ್ರಾಮಗಳು, ಹಳ್ಳಿಗಳೆಲ್ಲ ಅಮಾನವೀಯ ಕೃತ್ಯಗಳಿಗೆ ಸಾಕ್ಷಿಯಾಗುತ್ತಿವೆ. ಸೆಗಣಿ ತಿನ್ನಿಸುವವರು, ಥಳಿಸುವವರು ಮತ್ತು ಜಾತಿಯ ಕಾರಣಕ್ಕಾಗಿಯೇ ದೇವಾಲಯಗಳಿಂದ ಹೊರ ದಬ್ಬುವವರು ಹೆಚ್ಚುತ್ತಿದ್ದಾರೆ. ಒಂದು ದೇಶದ ಪಾಲಿಗೆ ಇದು ಅತ್ಯಂತ ಹೀನ ಕೃತ್ಯ. ಇದು ಬದಲಾಗಬೇಕು. ಈ ವಾತಾವರಣಕ್ಕೆ ತಡೆ ಬೀಳದೇ ಹೋದರೆ ಇದನ್ನೇ ನೋಡಿಕೊಂಡು ಬೆಳೆಯುವ ಪೀಳಿಗೆಯೊಂದು ಮುಂದೆ ಇದನ್ನೇ ನಾಗರಿಕತೆಯಾಗಿ ಪರಿಭಾವಿಸುವುದಕ್ಕೆ ಅವಕಾಶವಾಗುತ್ತದೆ. ಶಾಂತ ಮತ್ತು ಮಾನವೀಯ ಸಮಾಜದ ನಿರ್ಮಾಣ ಯಾವುದಾದರೊಂದು ನಿರ್ದಿಷ್ಟ ಧರ್ಮ-ಜಾತಿ-ಪಂಗಡದ ಬಯಕೆಯಲ್ಲ, ಅದು ಎಲ್ಲರ ಅಗತ್ಯ.
ಆದ್ದರಿಂದ ಅಂಥದ್ದೊಂದು ಸುಖೀ ಭಾವದ ಸಮಾಜದ ಕಟ್ಟುವಲ್ಲಿ ವ್ಯವಸ್ಥೆ ಮುತುವರ್ಜಿ ತೋರಬೇಕು. ಅನಾಗರಿಕರನ್ನು ಮತ್ತು ಅಮಾನವೀಯತೆಯ ಪ್ರತಿಪಾದಕರನ್ನು ದುರ್ಬಲಗೊಳಿಸಬೇಕು. ಕಾನೂನು ಪ್ರಾಬಲ್ಯಕ್ಕೆ ಬರಲಿ. ಶಾಂತಿ-ಮಾನವೀಯತೆ ನೆಲೆಗೊಳ್ಳಲಿ.

No comments:

Post a Comment