Saturday, 9 August 2025

ಕಲಬುರಗಿಯ ಗೋರಿ, ಛತ್ತೀಸ್‌ಗಢದ ನನ್‌ಗಳು ಮತ್ತು ಕುಕ್ಕರಿನಲ್ಲಿರುವ ಜನಸಾಮಾನ್ಯರು





ಸುಳ್ಳುಗಳನ್ನು ಹೇಗೆ ಉತ್ಪಾದಿಸಲಾಗುತ್ತದೆ ಮತ್ತು ದ್ವೇಷವನ್ನು ಹರಡುವುದಕ್ಕೆ ಈ ಸುಳ್ಳುಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದಕ್ಕೆ ನಮ್ಮದೇ ರಾಜ್ಯದ ಕಲಬುರಗಿ ಮತ್ತು ಛತ್ತೀಸ್‌ಗಢದ ಘಟನೆಗಳನ್ನು ತಾಜಾ ಉದಾಹರಣೆಯಾಗಿ ಎತ್ತಿಕೊಳ್ಳಬಹುದು.

‘ಕಲಬುರಗಿಯ ಅಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಕ್ಯಾಂಪಸ್‌ನಲ್ಲಿ ರಾತೋರಾತ್ರಿ ಅಕ್ರಮವಾಗಿ ಗೋರಿಗಳ ನಿರ್ಮಾಣ ಮಾಡಲಾಗಿದೆ, ಕಾಂಪೌಂಡ್  ಕಟ್ಟಲಾಗುತ್ತಾ ಇದೆ ಮತ್ತು ಬಣ್ಣವನ್ನೂ ಬಳಿಯಲಾಗುತ್ತಾ ಇದೆ..’ ಎಂಬಂತಹ ಸುದ್ದಿಗಳು ಕನ್ನಡದ ಪ್ರಮುಖ ಟಿವಿ ಚಾನೆಲ್‌ಗಳಲ್ಲಿ ದಿನದ ಹಿಂದೆ ಪ್ರಸಾರವಾಗಿತ್ತು. ವಕ್ಫ್ನ ಹೆಸರಲ್ಲಿ ಈಗಾಗಲೇ ಮುಸ್ಲಿಮ್ ದ್ವೇಷಿ ವಾತಾವರಣವನ್ನು ಸೃಷ್ಟಿ ಮಾಡಲು ಮಾಧ್ಯಮಗಳು ಯಶಸ್ವಿಯಾಗಿರುವುದರಿಂದ ಈ ‘ಗೋರಿ’ಯು ಈಗಾಗಲೇ ಆಗಿರುವ ಗಾಯಕ್ಕೆ ಉಪ್ಪು ಸವರಿದಂತಾಗುವುದು ಸಹಜ. ವಕ್ಫ್ ಎಂದರೆ ಹಿಂದೂಗಳ ಭೂಮಿಯನ್ನು ಕಬಳಿಸುವುದರ ಹೆಸರು ಎಂದು ನಂಬಿರುವವರಿಗೆ ಈ ‘ಗೋರಿ’ ಸುದ್ದಿ ಅವರ ನಂಬಿಕೆಗೆ ಇನ್ನಷ್ಟು ಪುಷ್ಠಿಯನ್ನು ಕೊಡುವ ಕೆಲಸ ಮಾಡುತ್ತದೆ. ಅಂದಹಾಗೆ,

650 ಎಕರೆಗಿಂತಲೂ ವಿಸ್ತಾರ ಪ್ರದೇಶವನ್ನು ಹೊಂದಿರುವ ವಿವಿ ಕ್ಯಾಂಪಸ್‌ನಲ್ಲಿ ಗೋರಿಗಳಿಲ್ಲವೇ ಎಂಬ ಪ್ರಶ್ನೆಗೆ, ಇದೆ ಎಂಬುದೇ ಸರಿಯಾದ ಉತ್ತರ. ಕೇವಲ ಗೋರಿಗಳು ಮಾತ್ರವಲ್ಲ, ದೇವಸ್ಥಾನಗಳೂ ಇವೆ. ಇಲ್ಲಿ ಬಂದೇ ನವಾಝï ದರ್ಗಾ ಮತ್ತು ಗೈಬ್‌ಪೀರ್ ದರ್ಗಾಗಳು ಇರುವಂತೆಯೇ, ಬೀರಲಿಂಗೇಶ್ವರ ದೇವಸ್ಥಾನ ಮತ್ತು ಲಕ್ಷ್ಮೀ ದೇವಸ್ಥಾನಗಳೂ ಇವೆ. ಮಾತ್ರವಲ್ಲ, ಈ ಎರಡೂ ಗೋರಿಗಳು ರಾತೋರಾತ್ರಿ ಹುಟ್ಟಿಕೊಂಡವುಗಳಲ್ಲ. ಇವುಗಳಿಗೆ ನೂರಾರು ವರ್ಷಗಳ ಇತಿಹಾಸ ಇದೆ. ದೇವಸ್ಥಾನಗಳಿಗೂ ಇಂಥz್ದೆÃ ಪುರಾತನ ಹಿನ್ನೆಲೆ ಇದೆ ಎಂಬುದೇ ನಿಜ.

ಛತ್ತೀಸ್‌ಗಢ ಪ್ರಕರಣವಂತೂ ಇದಕ್ಕಿಂತಲೂ ಘೋರವಾಗಿದೆ. ಜಾರ್ಖಂಡಿನ ಮೂರು ಬುಡಕಟ್ಟು ಯುವತಿಯರು ಮತ್ತು ಓರ್ವ ಯುವಕನೊಂದಿಗೆ ಛತ್ತೀಸ್‌ಗಢದ ರೈಲ್ವೇ ನಿಲ್ದಾಣಕ್ಕೆ ಬಂದ ಕ್ರೈಸ್ತ ಭಗಿನಿಯರಾದ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್ ಪ್ರೀತಿ ಅವರನ್ನು ರೈಲ್ವೇ ಅಧಿಕಾರಿ ನೋಡುತ್ತಾರೆ. ಇದನ್ನು ಮತಾಂತರದ ಹುನ್ನಾರ ಎಂದು ಅಂದುಕೊAಡ ಅವರು ನೇರ ಸಂಘಪರಿವಾರಕ್ಕೆ ಮಾಹಿತಿ ಕೊಡುತ್ತಾರೆ. ಅದರ ಸ್ಥಳೀಯ ನಾಯಕ ಜ್ಯೋತಿ ಶರ್ಮಾ ತನ್ನ ತಂಡದೊಂದಿಗೆ ಬರುತ್ತಾನೆ. ಪೊಲೀಸರ ಎದುರೇ ಆತ ಆ ಬುಡಕಟ್ಟು ವ್ಯಕ್ತಿಗಳ ಮೇಲೆ ಏರಿ ಹೋಗುತ್ತಾನೆ. ಆತನ ಆದೇಶದಂತೆ ಪೊಲೀಸರು ಮತಾಂತರ ಮತ್ತು ಮಾನವ ಕಳ್ಳಸಾಗಾಣಿಕೆಯ ಕೇಸು ದಾಖಲಿಸುತ್ತಾರೆ. ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿರುವ ಇವರುಗಳು ಇದೀಗ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಆಘಾತಕಾರಿ ಸಂಗತಿಗಳಿವೆ. ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಿ ಈ ಯುವತಿಯರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಜ್ಯೋತಿ ಶರ್ಮಾನ ಸೂಚನೆಯಂತೆ ಪೊಲೀಸರು ಕಸ್ಟಡಿಯಲ್ಲಿಟ್ಟು ತಮ್ಮನ್ನು ಥಳಿಸಿದ್ದಾರೆ, ತನ್ನ ಬೆಂಬಲಿಗರಿಂದ  ಅತ್ಯಾಚಾರ ಮಾಡಿಸುವುದಾಗಿ ಆತ ಬೆದರಿಸಿದ್ದಾನೆ. ಆತನ ವಿರುದ್ಧ ನಾವು ಕೊಟ್ಟ ದೂರನ್ನೂ ಪೊಲೀಸರು ದಾಖಲಿಸಿಲ್ಲ, ನಾವು ಮತಾಂತರವಾಗಿಲ್ಲ, ಇದು ಮಾನವ ಕಳ್ಳಸಾಗಾಣಿಕೆಯೂ ಅಲ್ಲ... ಎಂದೆಲ್ಲಾ  ಅವರು ಕ್ಯಾಮರಾಗಳ ಮುಂದೆಯೇ ಮತ್ತು ಅಷ್ಟೂ ಪತ್ರಕರ್ತರ ಎದುರೇ ಹೇಳಿದ್ದಾರೆ.

ಈ ಎರಡೂ ಘಟನೆಗಳಲ್ಲಿ ಕೆಲವು ಮೂಲಭೂತ ಪ್ರಶ್ನೆಗಳಿವೆ. ರೈಲ್ವೇ ಅಧಿಕಾರಿಗೆ ಅನುಮಾನ ಬಂದರೆ ಆತ ಮೊದಲು ತಿಳಿಸಬೇಕಾದದ್ದು ಯಾರಿಗೆ? ಪೊಲೀಸರಿಗೋ ಅಲ್ಲ, ಸಂಘಪರಿವಾರಕ್ಕೋ? ಒಂದುವೇಳೆ, ರಾತೋರಾತ್ರಿ ಅಕ್ರಮವಾಗಿ ಗೋರಿ ಕಟ್ಟಲಾಗುತ್ತಿದೆ ಎಂಬ ಸುದ್ದಿ ಓರ್ವ ಪತ್ರಕರ್ತನಿಗೆ ಸಿಕ್ಕರೆ ಮೊದಲಾಗಿ ಆತ ಮಾಡಬೇಕಾದದ್ದೇನು? ಮಾಧ್ಯಮ ಮುಖ್ಯಸ್ಥರಿಗೆ ತಿಳಿಸುವುದು. ಆ ಮುಖ್ಯಸ್ಥ ಮಾಡಬೇಕಾದದ್ದೇನು? ಹಿಂದೆ ಮುಂದೆ ನೋಡದೇ ಬ್ರೇಕಿಂಗ್ ನ್ಯೂಸ್ ಕೊಡೋದೋ ಅಥವಾ ಸತ್ಯ ಏನೆಂದು ಸ್ಪಷ್ಟಪಡಿಸಿ ಮಾಹಿತಿ ಕೊಡುವಂತೆ ಪತ್ರಕರ್ತನಿಗೆ ಸೂಚಿಸುವುದೋ? ಆದರೆ ಈ ವಿವೇಚನೆಯೇ ಇವತ್ತು ಮಾಧ್ಯಮ ಹೊಣೆಗಾರರಿಂದಲೂ ಮತ್ತು ಸರಕಾರಿ ಅಧಿಕಾರಿಗಳಿಂದಲೂ ಕಾಣೆಯಾಗುತ್ತಿದೆ ಎಂಬುದನ್ನೇ ಈ ಎರಡೂ ಘಟನೆಗಳು ಎತ್ತಿ ಹೇಳುತ್ತಿವೆ. ಹಾಗಂತ,

ಇದೊAದು ಪ್ರಮಾದ, ಗೊತ್ತಿಲ್ಲದೇ ಆಗಿರುವಂಥ ಸಹಜ ತಪ್ಪುಗಳು ಎಂದೆಲ್ಲಾ ಸಮರ್ಥಿಸುವ ಹಾಗಿಲ್ಲ. ತಾನು ಯಾರಿಗೆ ದೂರು ಕೊಡಬೇಕು ಎಂಬುದು ಓರ್ವ ರೈಲ್ವೇ ಅಧಿಕಾರಿಗೆ ಗೊತ್ತೇ ಇರುತ್ತದೆ. ತನಗೆ ಸಿಕ್ಕ ಸುದ್ದಿಯನ್ನು ನಿಕಷಕ್ಕೆ ಒಡ್ಡಿ ಪ್ರಸಾರ ಮಾಡಬೇಕು ಎಂಬ ವಿವೇಕ ಪತ್ರಿಕಾ ಮುಖ್ಯಸ್ಥನಿಗೂ ಇರುತ್ತದೆ. ಹಾಗಿದ್ದರೆ ಮತ್ತೇಕೆ ಈ ಬಗೆಯ ನಿರ್ಲಕ್ಷ್ಯಗಳು ನಡೆಯುತ್ತಿವೆ ಎಂಬ ಪ್ರಶ್ನೆ ಇರಬಹುದು. ನಿಜವಾಗಿ, ಇವು ನಿರ್ಲಕ್ಷ್ಯವೂ ಅಲ್ಲ, ಅವಿವೇಕವೂ ಅಲ್ಲ. ಪ್ರಮಾದವೂ ಅಲ್ಲ. ಉದ್ದೇಶಪೂರ್ವಕವಾಗಿಯೇ ಇಂಥವುಗಳು ನಡೆಯುತ್ತಿವೆ ಎಂದೇ ಹೇಳಬೇಕಾಗಿದೆ. ಇದೊಂದು ಸಂಚು. ಯೋಜನಾಬದ್ಧವಾಗಿಯೇ ನಡೆಯುತ್ತಿರುವ ಸಂಚು.

ಮುಸ್ಲಿಮರನ್ನು ಖಳರಂತೆ, ಹಿಂದೂ ವಿರೋಧಿಗಳಂತೆ, ಜನಸಂಖ್ಯಾ ಸ್ಫೋಟ ಮಾಡುವವರಂತೆ, ಹಿಂದೂಗಳ ಭೂಮಿಯನ್ನು ಕಬಳಿಸುವವರಂತೆ, ದೇಶದ್ರೋಹಿಗಳಂತೆ, ಪಾಕಿಸ್ತಾನ ಪ್ರೇಮಿಗಳಂತೆ.. ಇತ್ಯಾದಿ ಇತ್ಯಾದಿಯಾಗಿ ದಿನಾ ಸುದ್ದಿಗಳನ್ನು ಉತ್ಪಾದಿಸುವುದನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಒಂದು ಬೃಹತ್ ಜಾಲ ಈ ದೇಶದಲ್ಲಿದೆ. ಮುಸ್ಲಿಮ್ ಯುವಕ ಹಿಂದೂ ಯುವತಿಯನ್ನು ಪ್ರೀತಿಸಿದರೆ ಅದನ್ನು ಲವ್ ಜಿಹಾದ್ ಅನ್ನುವ ಈ ಗುಂಪು, ಮುಸ್ಲಿಮ್ ಯುವತಿ ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದರೆ ಸೌಹಾರ್ದ ಎಂದು ಸುದ್ದಿ ಮಾಡುತ್ತವೆ. ಜಾನುವಾರು ಸಾಗಾಟದಲ್ಲಿ ಮುಸ್ಲಿಮ್ ವ್ಯಕ್ತಿ ಇದ್ದರೆ ತಕ್ಷಣ ಅದನ್ನು ‘ಅಕ್ರಮ ಗೋಸಾಗಾಟ’ ಎಂದು ಸುದ್ದಿ ಬರುತ್ತದೆ. ಮುಸ್ಲಿಮ್ ವ್ಯಕ್ತಿಯೋರ್ವ ತಪ್ಪು ಮಾಡುವುದನ್ನು ‘ಧರ್ಮ ಕಲಿಸಿದ ಅಪರಾಧ’ ಎಂದು ಹೇಳುತ್ತಲೇ ಅದೇ ತಪ್ಪನ್ನು ಹಿಂದೂ ವ್ಯಕ್ತಿ ಮಾಡಿದರೆ ಅದನ್ನು ವೈಯಕ್ತಿಕ ತಪ್ಪು ಎಂದು ಸದ್ದಿಲ್ಲದೇ ಸರಿಸಿ ಬಿಡುತ್ತವೆ. ಯಾವುದೇ ಅಪರಾಧ ಕೃತ್ಯಕ್ಕೂ ಧರ್ಮದ ಬಣ್ಣ ಕೊಡುವುದು ಮತ್ತು ಇಸ್ಲಾಮನ್ನು ಕಟಕಟೆಯಲ್ಲಿ ನಿಲ್ಲಿಸುವುದು ಈ ಗುಂಪಿನ ತಂತ್ರವಾಗಿದೆ. ಇಸ್ಲಾಮಿನ ಕುರಿತಂತೆ ಭೀತಿಯನ್ನು ಅಥವಾ ಫೋಬಿಯಾವನ್ನು ಹಬ್ಬಿಸುವುದು ಮತ್ತು ಸಾರ್ವಜನಿಕರಲ್ಲಿ ಮುಸ್ಲಿಮರ ಬಗ್ಗೆ ಅಸಹನೆಯನ್ನು ಸೃಷ್ಟಿಸುವುದಕ್ಕೂ ಈ ಗುಂಪು ಹೇಸುತ್ತಿಲ್ಲ. ಇಂಥ ಸುಳ್ಳುಗಳನ್ನು ದಿನಾ ಓದುತ್ತಾ ಮತ್ತು ವೀಕ್ಷಿಸುತ್ತಾ ಬರುವ ಜನಸಾಮಾನ್ಯರಿಗೆ ನಿಧಾನವಾಗಿ ಇದು ನಿಜ ಇರಬಹುದು ಎಂದೇ ಅನಿಸತೊಡಗುತ್ತದೆ. ಮುಸ್ಲಿಮರೇ ದೇಶದ ಬಹುದೊಡ್ಡ ಸಮಸ್ಯೆ ಎಂದು ಅವರು ಅಂದುಕೊಳ್ಳತೊಡಗುತ್ತಾರೆ. ಹೀಗೆ ಜನಸಾಮಾನ್ಯರು ಭಾವಿಸತೊಡಗಿದ ದಿನದಿಂದ ರಾಜಕಾರಣಿಗಳು ಸುರಕ್ಷಿತರಾಗುತ್ತಾರೆ. ಈ ಜನಸಾಮಾನ್ಯರಿಗೆ ಅವರ ಭ್ರಷ್ಟಾಚಾರಕ್ಕಿಂತ ಮುಸ್ಲಿಮರೇ ಮುಖ್ಯವಾಗುತ್ತಾರೆ. ಅಭಿವೃದ್ಧಿಗಿಂತಲೂ ಮುಸ್ಲಿಮ್ ಇಶ್ಯುಗಳೇ ಜನಸಾಮಾನ್ಯರಿಗೆ ಮುಖ್ಯವಾಗುತ್ತದೆ. ಮುಸ್ಲಿಮರ ಬಗ್ಗೆ ಹೀಗೆ ಸುಳ್ಳು ಸುಳ್ಳೇ ಬಿತ್ತಲಾದ ಭೀತಿಯು ಇದರ ಹಿಂದಿರುವ ರಾಜಕೀಯ ಶಕ್ತಿಗಳಿಗೆ ಮತ ಚಲಾಯಿಸಲೇಬೇಕಾದ ಒತ್ತಡವನ್ನು ಜನಸಾಮಾನ್ಯರ ಮೇಲೆ ಹಾಕುತ್ತಲೇ ಇರುತ್ತದೆ. ಇವರು ಮತ ಚಲಾಯಿಸುತ್ತಾ ಹೋಗುತ್ತಾರೆ. ಮತ ಪಡೆದವರು ಮುಸ್ಲಿಮ್ ಭೀತಿಯನ್ನು ಮಾಧ್ಯಮಗಳ ಮೂಲಕ ಹಂಚುತ್ತಲೇ ಇರುತ್ತಾರೆ.

ಕಲಬುರಗಿಯ ಗೋರಿಗಳಾಗಲಿ ಛತ್ತೀಸ್‌ಗಢದ ನನ್ ಪ್ರಕರಣವಾಗಲಿ ಈ ಎರಡನ್ನೂ ನೋಡಬೇಕಾದದ್ದು ಕಾನೂನಿನ ದೃಷ್ಟಿಯಿಂದಲೇ ಹೊರತು ಮುಸ್ಲಿಮ್ ಮತ್ತು ಕ್ರೈಸ್ತ ಎಂಬ ಕನ್ನಡಿಯಲ್ಲಲ್ಲ. ಓರ್ವ ಪತ್ರಕರ್ತ ಮತ್ತು ಅಧಿಕಾರಿ ಈ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದರೆ ಗೋರಿ ಬ್ರೇಕಿಂಗ್ ನ್ಯೂಸ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ, ಅದೊಂದು ಸುದ್ದಿಯೇ ಅಲ್ಲ. ನೂರಾರು ವರ್ಷಗಳಿಂದ ಅಲ್ಲಿರುವ ಗೋರಿಗಳ ಬಗ್ಗೆ ಯಾರು ಸುಳ್ಳುಗಳನ್ನು ಹರಡಿದ್ದಾರೋ ಅವರನ್ನೇ ಪತ್ರಕರ್ತ ಹುಡುಕಿಕೊಂಡು ಹೋಗುತ್ತಾನೆ. ಅವರನ್ನೇ ಸಮಾಜದ ಮುಂದೆ ಬ್ರೇಕ್ ಮಾಡುತ್ತಾನೆ. ರೈಲ್ವೇ ಅಧಿಕಾರಿಯೂ ಇಂಥದ್ದೇ  ವಿವೇಚನೆಯನ್ನು ಪ್ರದರ್ಶಿಸುತ್ತಾನೆ. ತನ್ನ ಅನುಮಾನವನ್ನು ಪೊಲೀಸರಿಗೆ ತಿಳಿಸಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಾನೆ. ಸಾರ್ವಜನಿಕರನ್ನು ಅನಗತ್ಯ ಆತಂಕಕ್ಕೆ ತಳ್ಳದೇ ಕಾನೂನಿನಡಿ ಪರಿಹಾರ ಕಂಡುಕೊಳ್ಳುತ್ತಾನೆ. ಆದರೆ, ಫೋಬಿಯಾದ ಈ ಕಾಲದಲ್ಲಿ ಮಾಧ್ಯಮಗಳೂ ವಿವೇಚನೆಯನ್ನು ಕಳಕೊಂಡು ಬಿಟ್ಟಿವೆ. ಅಧಿಕಾರಿಗಳೂ ಸೂಕ್ಷ್ಮತೆಯನ್ನು ಕಳಕೊಳ್ಳುತ್ತಿದ್ದಾರೆ. ಜನಸಾಮಾನ್ಯರಂತೂ ಸತ್ಯ-ಸುಳ್ಳಿನ ಕುಕ್ಕರಿನಲ್ಲಿ ದಿನಾ ಬೇಯುತ್ತಿದ್ದಾರೆ.

No comments:

Post a Comment