ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಲಾರಿಯೊಂದು ಹರಿದ ಪ್ರಕರಣ ಕರ್ನಾಟಕದ ಹಾಸನವನ್ನು ಮಾತ್ರವಲ್ಲ, ರಾಜ್ಯವನ್ನೇ ಆಘಾತಕ್ಕೆ ಸಿಲುಕಿಸಿದೆ. ಈ ಅಪಘಾತದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಎರಡು ಡಜನ್‌ನಷ್ಟು ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ ಪ್ರವೀಣ್ ಕುಮಾರ್, ಮಿಥುನ್ ಮತ್ತು ಸುರೇಶ್ ಎಂಬವರು ಹಾಸನದ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು. ಗಾಯಗೊಂಡವರಲ್ಲೂ ವಿದ್ಯಾರ್ಥಿಗಳಿದ್ದಾರೆ. ದುರಂತ ಏನೆಂದರೆ,
ಈ ಅಪಘಾತ ನಡೆದ ಬೆನ್ನಿಗೇ ಲಾರಿ ಚಾಲಕನ ಧರ್ಮವನ್ನು ಹುಡುಕಾಡಲಾಗಿದೆ. ಆತನನ್ನು ಮುಸ್ಲಿಮ್ ಎಂದು ಪ್ರಚಾರ ಮಾಡಲಾಗಿದೆ. ಈ ಅಪಪ್ರಚಾರ ಎಷ್ಟು ಅಪಾಯಕಾರಿ ಹಂತಕ್ಕೆ ತಲುಪಿತ್ತೆಂದರೆ, ಸ್ವತಃ ಸಚಿವ ಕೃಷ್ಣ ಭೈರೇಗೌಡರೇ ಎಚ್ಚರಿಕೆ ನೀಡಬೇಕಾಯಿತು. ಚಾಲಕನ ಹೆಸರು ಭುವನೇಶ್ ಎಂಬುದನ್ನು ಅಡಗಿಸಿಟ್ಟು, ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು. ನಿಜವಾಗಿ,
ಈ ಅಪಘಾತ ನಮ್ಮಲ್ಲಿ ಯಾವ ಬಗೆಯ ಚರ್ಚೆಯನ್ನು ಹುಟ್ಟು ಹಾಕಬೇಕಿತ್ತು? ಚಾಲಕನ ಧರ್ಮ ಇಲ್ಲಿ ಮುಖ್ಯವಾಗಬೇಕಿತ್ತೋ ಅಥವಾ ಚಾಲಕ ಸೇವಿಸಿದ ಮದ್ಯ ಮುಖ್ಯವಾಗಬೇಕಿತ್ತೋ? ಅಪಘಾತದಲ್ಲೂ ಚಾಲಕನ ಧರ್ಮವನ್ನು ಹುಡುಕುವ ಮನಸ್ಥಿತಿ ಯಾವುದು? ಇದು ಯಾರ ಅಗತ್ಯ? ಇಂಥದ್ದೊಂದು ಹುಡುಕಾಟ ನಡೆಸಿದವರ ಉದ್ದೇಶ ಏನು? ಅಪಘಾತದಲ್ಲಿ ತಮ್ಮವರನ್ನು ಕಳಕೊಂಡವರಾಗಲಿ, ಗಾಯಗೊಂಡವರಾಗಲಿ ಯಾರೂ ಚಾಲಕನ ಧರ್ಮದ ಬಗ್ಗೆ ಪ್ರಶ್ನೆಯನ್ನೇ ಎತ್ತಿಲ್ಲ. ಅದರ ಬದಲು ಈ ಸಂತ್ರಸ್ತ ಕುಟುಂಬದ ಒಂದಕ್ಕಿಂತ ಹೆಚ್ಚು ಮಂದಿ ಈ ಬಗೆಯ ಮೆರವಣಿಗೆಯನ್ನೇ ವಿರೋಧಿಸಿದ್ದಾರೆ. ಹೀಗಿರುವಾಗ, ಸಂತ್ರಸ್ತರಿಗೆ ಮತ್ತು ಅವರ ಕುಟುಂಬಕ್ಕೆ ಇಲ್ಲದ ತಕರಾರೊಂದನ್ನು ಅವರಿಗೆ ಸಂಬಂಧಿಸಿಯೇ ಇಲ್ಲದ ಇನ್ನಾರೋ ಎತ್ತಿರುವುದು ಏಕೆ? ಒಂದುವೇಳೆ,
ಹೀಗೆ ಚಾಲಕನ ಧರ್ಮವನ್ನು ಹುಡುಕಿದವರ ಬೆನ್ನು ಹತ್ತುತ್ತಾ ಹೋದರೆ ಅವರು ನಿರ್ದಿಷ್ಟ ರಾಜಕೀಯ ಪಕ್ಷದ ಮತ್ತು ಕೆಲವು ಸಂಘಟನೆಗಳ ವ್ಯಕ್ತಿಗಳಾಗಿ ಪತ್ತೆಯಾಗಬಲ್ಲರು. ಧರ್ಮದ್ವೇಷವನ್ನೇ ಉಸಿರಾಗಿಸಿಕೊಂಡಿರುವ ಮತ್ತು ಹಿಂದೂ ಹಾಗೂ ಮುಸ್ಲಿಮರನ್ನು ವೈರಿಗಳಂತೆ ಬಿಂಬಿಸುವುದನ್ನೇ ಖಾಯಂ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಇವರಿಗೆ ರಾಜಕೀಯ ಅಧಿಕಾರ ಪಡೆಯುವುದನ್ನು ಬಿಟ್ಟರೆ ಬೇರೆ ಯಾವ ಗುರಿಗಳೂ ಇಲ್ಲ. ಮುಸ್ಲಿಮರನ್ನು ಸದಾ ದ್ವೇಷಿಸುವುದರಿಂದ ಅಧಿಕಾರ ಸದಾ ತಮ್ಮ ಸುಪರ್ದಿಯಲ್ಲೇ ಉಳಿಯಲಿದೆ ಎಂದು ಬಲವಾಗಿ ನಂಬಿರುವ ಸಮುದಾಯ ಇದು. ಇದಕ್ಕಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಎಷ್ಟು ಸಾಧ್ಯವೋ ಅಷ್ಟು ವಿಷವನ್ನು ಇವರು ಹರಡುತ್ತಿರುತ್ತಾರೆ. ಪರಸ್ಪರರು ಸೌಹಾರ್ದವಾಗಿ ಬೆರೆಯದಂತೆ ಶ್ರಮಿಸುತ್ತಿರುತ್ತಾರೆ. ಎಲ್ಲೋ ನಡೆದ ಒಂಟಿ ಘಟನೆಯನ್ನು ಎತ್ತಿಕೊಂಡು ಇಡೀ ಮುಸ್ಲಿಮ್ ಸಮುದಾಯವೇ ಹೀಗೆ ಎಂದು ಬಿಂಬಿಸುತ್ತಿರುತ್ತಾರೆ. ಈ ಎಲ್ಲದರ ಉದ್ದೇಶ ರಾಜಕೀಯ ಅಧಿಕಾರ ಒಂದೇ ಆಗಿರುತ್ತದೆ. ಇದೇವೇಳೆ,
ಅಪರಾಧಿ ತನ್ನ ಸಮುದಾಯದವನೇ ಎಂದು ಗೊತ್ತಾದ ಕೂಡಲೇ ಇವರು ಬಾಯಿ ಮುಚ್ಚಿಕೊಳ್ಳುತ್ತಾರೆ. ಹಾಸನ ಘಟನೆಯಲ್ಲೂ ನಡೆದಿರುವುದು ಇದುವೇ. ಯಾವಾಗ ಸಚಿವರು ಎಚ್ಚರಿಕೆ ನೀಡಿದರೋ ಮತ್ತು ಭುವನೇಶ್ ಎಂಬವನೇ ಚಾಲಕ ಎಂಬುದು ಸಾರ್ವಜನಿಕವಾಗಿ ಬಹಿರಂಗವಾಯಿತೋ ಈ ಗುಂಪು ಮೌನವಾಗಿದೆ. ಕನಿಷ್ಠ ಸತ್ತವರು ಮತ್ತು ಗಾಯಗೊಂಡವರ ಬಗ್ಗೆ ಸಾಂತ್ವನದ ಮಾತುಗಳನ್ನೂ ಆಡಿಲ್ಲ. ಭುವನೇಶ್‌ನನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸಿಯೂ ಇಲ್ಲ. ಆತನ ವಿರುದ್ಧ ಒಂದೇ ಒಂದು ಪ್ರತಿಭಟನೆಯನ್ನೂ ಮಾಡಿಲ್ಲ. ಮೆರವಣಿಗೆಯ ಮೇಲೆ ಉದ್ದೇಶಪೂರ್ವಕವಾಗಿಯೇ ಲಾರಿ ಹತ್ತಿಸಲಾಗಿದೆ ಎಂದೂ ಹೇಳಿಲ್ಲ. ಒಂದುವೇಳೆ, ಚಾಲಕ ಮುಸ್ಲಿಮ್ ಆಗಿರುತ್ತಿದ್ದರೆ ಪ್ರತಿಭಟನೆಯ ಮೇಲೆ ಪ್ರತಿಭಟನೆ ನಡೆಯುತ್ತಿತ್ತು. ಆತನನ್ನು ಗಲ್ಲಿಗೇರಿಸುವಂತೆ ಒತ್ತಾಯ ಕೇಳಿಬರುತ್ತಿತ್ತು. ಘಟನೆಯನ್ನು ಉದ್ದೇಶಪೂರ್ವಕ ಕೃತ್ಯ, ದ್ವೇಷದ ಕೃತ್ಯ ಎಂದೆಲ್ಲಾ ಪ್ರಚಾರ ಮಾಡಲಾಗುತ್ತಿತ್ತು. ನಿಜ ಏನೆಂದರೆ,
ಈ ಘಟನೆಯು ಮದ್ಯಪಾನದ ವಿರುದ್ಧ ಸಾರ್ವಜನಿಕ ಆಕ್ರೋಶ ಭುಗಿಲೇಳುವುದಕ್ಕೆ ಕಾರಣ ಆಗಬೇಕಿತ್ತು. ಮದ್ಯ ಮಾರಾಟದ ಆದಾಯದಿಂದ ಸರಕಾರ ನಡೆಯಬೇಕಿಲ್ಲ ಎಂದು ಕೂಗಬೇಕಿತ್ತು. ಮದ್ಯ ಮುಕ್ತ ಕರ್ನಾಟಕ ಮಾಡುವ ಸಂಕಲ್ಪದ ಜನಜಾಗೃತಿ ಅಭಿಯಾನಕ್ಕೆ ಕಾರಣ ಆಗಬೇಕಿತ್ತು. ಸರಕಾರದ ಮದ್ಯನೀತಿಯನ್ನು ಪ್ರಶ್ನಿಸಿ ಸರಣಿ ಕಾರ್ಯಕ್ರಮಗಳಿಗೆ ನಾಂದಿ ಹಾಡುವ ಘಟನೆ ಆಗಬೇಕಿತ್ತು. ಆದರೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಸಾವು-ನೋವು ಉಂಟಾದ ಬಳಿಕವೂ ಯಾರೊಬ್ಬರಿಂದಲೂ ಸರಕಾರದ ಮದ್ಯ ನೀತಿಯನ್ನು ಪ್ರಶ್ನಿಸುವ ಪ್ರಯತ್ನವೇ ನಡೆದಿಲ್ಲ. ಚಾಲಕನ ಧರ್ಮ ನೋಡಿದವರಲ್ಲಿ ಯಾರೂ ಮದ್ಯಮುಕ್ತ ಕರ್ನಾಟಕಕ್ಕಾಗಿ ಒತ್ತಾಯಿಸಿಲ್ಲ. ಮದ್ಯ ನಿಷೇಧಿಸುವಂತೆ ಒತ್ತಾಯ ಕೇಳಿ ಬಂದಿಲ್ಲ. 2022ರಲ್ಲಿ ಕೇವಲ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣಕ್ಕಾಗಿಯೇ 3268 ಅಪಘಾತಗಳು ಸಂಭವಿಸಿವೆ. 150ಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. 2024ರಲ್ಲಿ ಈ ಅಂಕಿ-ಅಂಶದಲ್ಲಿ ಇನ್ನಷ್ಟು ಏರಿಕೆ ಉಂಟಾಗಿದೆ. ಅಂದಹಾಗೆ,
ಮದ್ಯಪಾನವು ಕೇವಲ ವಾಹನ ಚಾಲಕರನ್ನು ಮಾತ್ರ ದಾರಿ ತಪ್ಪಿಸುವುದಲ್ಲ, ಸಮಾಜದ ನೆಮ್ಮದಿಯನ್ನೇ ಅದು ಭಂಗಗೊಳಿಸುತ್ತದೆ. ಈ ದೇಶದ ಕೋಟ್ಯಂತರ ಮನೆಗಳನ್ನು ಈ ಮದ್ಯವು ನರಕಮಯಗೊಳಿಸಿದೆ. ಮದ್ಯಪಾನಿಯಾದ ಪುರುಷರು ಮನೆಯ ಮಹಿಳೆಯರ ಮೇಲೆ ಹಲ್ಲೆ ನಡೆಸುವುದು ಮತ್ತು ಹತ್ಯೆ ನಡೆಸುವುದೆಲ್ಲ ಪ್ರತಿದಿನವೆಂಬಂತೆ ವರದಿಯಾಗುತ್ತಿದೆ. ರಾತ್ರಿಯಾಗುವುದಕ್ಕೆ ಹೆದರುವ ಕೋಟ್ಯಂತರ ಮಹಿಳೆಯರು ಈ ದೇಶದಲ್ಲಿದ್ದಾರೆ. ಹೆಚ್ಚಿನ ಮನೆಯ ಪುರುಷರು ರಾತ್ರಿ ಮನೆಗೆ ಮರಳುವಾಗ ಮದ್ಯ ಸೇವಿಸುತ್ತಾರೆ. ಕೂಲಿ ಕಾರ್ಮಿಕರಲ್ಲಿ ಈ ಅಭ್ಯಾಸ ಹೆಚ್ಚಿದೆ. ದುಡಿದ ಹಣವನ್ನು ಮದ್ಯದಂಗಡಿಗೆ ಕೊಡುವುದಲ್ಲದೇ ಮನೆಗೆ ಬಂದು ಪತ್ನಿ-ಮಕ್ಕಳ ಮೇಲೆ ಕೈ ಮಾಡುವ ಕ್ರೌರ್ಯಗಳು ಈ ದೇಶದಲ್ಲಿ ಸಾಮಾನ್ಯವಾಗಿದೆ. ಈ ಕ್ರೌರ್ಯವನ್ನು ಮನೆಯ ಮಹಿಳೆಯರು ಮತ್ತು ಮಕ್ಕಳು ಸಹಿಸಿಕೊಳ್ಳುತ್ತಾರೆ. ಮರ್ಯಾದೆಗೆ ಅಂಜಿ ಯಾರಲ್ಲೂ ಹೇಳುವುದಿಲ್ಲ. ಈ ಗುಣವನ್ನೇ ಮದ್ಯಪಾನಿಗಳು ದುರುಯೋಗಿಸಿಕೊಳ್ಳುತ್ತಾರೆ. ಆದರೂ,
ಈ ಬಗ್ಗೆ ಯಾವ ತಕರಾರನ್ನೂ ವ್ಯಕ್ತಪಡಿಸದ ಗುಂಪೊಂದು ಮುಸ್ಲಿಮರೇ ಇಲ್ಲಿನ ಸಮಸ್ಯೆ ಎಂದು ಬಿಂಬಿಸುವುದಕ್ಕೆ ಶಕ್ತಿಮೀರಿ ಯತ್ನಿಸುತ್ತಿವೆ. ಒಂದುವೇಳೆ, ಇವರಿಗೆ ಹಿಂದೂ ಧರ್ಮೀಯರ ಏಳಿಗೆಯೇ ಮುಖ್ಯ ಎಂದಾಗಿದ್ದರೆ, ಸಂಪೂರ್ಣ ಪಾನ ನಿಷೇಧಕ್ಕಾಗಿ ಒತ್ತಾಯಿಸಬೇಕಿತ್ತು. ಈ ದೇಶದಲ್ಲಿ ಮದ್ಯಪಾನದ ಅಡ್ಡಪರಿಣಾಮಕ್ಕೆ ಅತ್ಯಂತ ಹೆಚ್ಚು ತುತ್ತಾಗುತ್ತಿರುವುದು ಮುಸ್ಲಿಮರಲ್ಲ. ಮದ್ಯಪಾನದ ವಿರುದ್ಧ ಇಸ್ಲಾಮ್‌ನಲ್ಲಿ ಕಟ್ಟುನಿಟ್ಟಿನ ಆದೇಶ ಇರುವುದರಿಂದ ಮುಸ್ಲಿಮರಲ್ಲಿ ಮದ್ಯಪಾನಿಗಳು ತೀರಾತೀರಾ ಕಡಿಮೆಯಿದ್ದಾರೆ. ಆದರೆ,
ಹಿಂದೂ ಸಮುದಾಯ ಇದರಿಂದ ತೀವ್ರ ತೊಂದರೆಯನ್ನು ಎದುರಿಸುತ್ತಿದೆ. ದುಡಿದ ಹಣವನ್ನು ಕುಟುಂಬದ ಖರ್ಚಿಗೆ ಬಳಸುವ ಬದಲು ಮದ್ಯದಂಗಡಿಗೆ ಸುರಿಯುವ ಪುರುಷರು ಧಾರಾಳ ಇದ್ದಾರೆ. ಇವರನ್ನು ಇದರಿಂದ ಮುಕ್ತಗೊಳಿಸಿದರೆ ಕೋಟ್ಯಂತರ ಮನೆಗಳಿಗೆ ನೆಮ್ಮದಿ ಸಿಗಬಹುದು. ಕೋಟ್ಯಂತರ ಮಹಿಳೆಯರು ಮತ್ತು ಮಕ್ಕಳು ಗೃಹಹಿಂಸೆಯಿಂದ ರಕ್ಷಣೆ ಹೊಂದಬಹುದು. ಇವೆಲ್ಲ ಎಲ್ಲರಿಗೂ ಗೊತ್ತು. ಮದ್ಯಪಾನದಿಂದಾಗಿ ಈ ದೇಶದಲ್ಲಿ ಆಗುತ್ತಿರುವ ಸಾವುಗಳು, ಹಿಂಸೆಗಳು ಮತ್ತು ಕಾಯಿಲೆಗಳ ಅಂಕಿ-ಅAಶಗಳನ್ನು ಪ್ರತಿವರ್ಷ ಕೇಂದ್ರ ಸರಕಾರ ಬಿಡುಗಡೆಗೊಳಿಸುತ್ತಿರುತ್ತದೆ. ಇಷ್ಟಿದ್ದೂ ಇದರ ವಿರುದ್ಧ ಏನೊಂದೂ ಮಾತಾಡದೇ ಬರೇ ಹಿಂದೂ-ಮುಸ್ಲಿಮ್ ಎಂದು ಹೇಳುತ್ತಾ ದ್ವೇಷ ಬಿತ್ತುವವರನ್ನು ಏನೆಂದು ಕರೆಯಬೇಕು? ಇವರು ಯಾವ ಧರ್ಮದ ರಕ್ಷಕರು? ಇವರು ಯಾರ ಹಿತೈಷಿಗಳು? ಇವರಿಗೆ ಹಿಂದೂ ಸಮುದಾಯದ ಕಲ್ಯಾಣವೇ ಮುಖ್ಯ ಎಂದಾಗಿದ್ದರೆ ಧರ್ಮದ್ವೇಷವನ್ನು ಕೈಬಿಟ್ಟು ಸಂಪೂರ್ಣ ಪಾನ ನಿಷೇಧಕ್ಕೆ ಒತ್ತಾಯಿಸುತ್ತಿದ್ದರು. ಅವರ ಗುರಿ ಬರೇ ರಾಜಕೀಯ ಅಧಿಕಾರ ಅನ್ನುವುದನ್ನು ಹಾಸನದ ಘಟನೆ ಸ್ಪಷ್ಟಪಡಿಸಿದೆ.
.jpg)
No comments:
Post a Comment