ಈ ವರ್ತಮಾನದ ಹತ್ತು ಹಲವು ಸವಾಲುಗಳ ಎದುರು ಹಜ್ಜ್ ನ ಪ್ರಸ್ತುತತೆ ಏನು? ಜಗತ್ತಿನ 160 ಕೋಟಿ ಮುಸ್ಲಿಮರಲ್ಲಿ ಬರೇ ಲಕ್ಷಾಂತರ ಮಂದಿ ಮುಸ್ಲಿಮರು ಮಾತ್ರ ತವಾಫ್‍ನಲ್ಲಿ, ಸಈಯಲ್ಲಿ, ಅರಫಾ, ಮುಝ್ದಲಿಫಾದಲ್ಲಿ... ಹೀಗೆ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಒಟ್ಟು ಸೇರುವುದು, ಪ್ರಾರ್ಥಿಸುವುದು, ಕಣ್ಣೀರಾಗುವುದೆಲ್ಲ ಏನು? ದುಡ್ಡಿದ್ದವ ಹಜ್ಜ್ ನಿರ್ವಹಿಸಬೇಕು ಅನ್ನುವುದು ತೀರಾ ಸರಳ ಮಾತು. ಆದರೆ ಈ ಮಾತನ್ನು ತೀರಾ ಗಂಭೀರ ಮತ್ತು ಚಿಂತನಾರ್ಹಗೊಳಿಸುವುದಕ್ಕೆ ಕೆಲವು ಪ್ರಶ್ನೆಗಳಿವೆ. ದುಡ್ಡಿದ್ದವ ಯಾಕೆ ಹಜ್ಜ್ ನಿರ್ವಹಿಸಲೇಬೇಕು? ಹಜ್ಜ್ ನಿರ್ವಹಣೆ ಎಂಬುದು ಇವತ್ತಿನ ದಿನಗಳಲ್ಲಿ ತೀರಾ ಸಲೀಸಿನದ್ದಲ್ಲ. ಹೋಗಬೇಕೆಂದು ತೀರ್ಮಾನಿಸಿದರೂ ಅಡೆ-ತಡೆಗಳಿರುವ ನಿಯಮ ನಿಬಂಧನೆಗಳು ಇವತ್ತಿನದು. ಅರ್ಜಿ ಹಾಕಿ ಕಾಯಬೇಕು. ಲಕ್ಷಾಂತರ ರೂಪಾಯಿ ಪ್ರಯಾಣಕ್ಕೆ ತೆರಬೇಕು. ವ್ಯಾಪಾರ, ಉದ್ಯೋಗ, ಕುಟುಂಬ, ಮಕ್ಕಳು, ಪತ್ನಿ... ಎಲ್ಲವನ್ನೂ ಮತ್ತು ಎಲ್ಲರನ್ನೂ ಬಿಟ್ಟು ಕೆಲವಾರು ದಿನಗಳ ಕಾಲ ಒಂಟಿಯಾಗಬೇಕು. ಅಲ್ಲದೆ, ಮಕ್ಕಾದ ವಾತಾವರಣ ಪರಿಚಿತವಲ್ಲ. ಆರೋಗ್ಯ ಕೈ ಕೊಡುವ ಸಾಧ್ಯತೆ ಇರುತ್ತದೆ. ಲಕ್ಷಾಂತರ ಮಂದಿ ಸೇರುವ ಸ್ಥಳವಾಗಿರುವುದರಿಂದ ಅನಾಹುತಗಳ ಸಾಧ್ಯತೆಯೂ ಇರುತ್ತದೆ. ಇಷ್ಟೆಲ್ಲ ಅಪಾಯ-ಅಭದ್ರತೆಯನ್ನು ಎದುರಿಸಿಕೊಂಡು ಯಾತ್ರೆ ಹೋಗುವುದಕ್ಕಿಂತ ಅಷ್ಟೇ ಮೊತ್ತವನ್ನು ಇಲ್ಲಿನ ಅರ್ಹರಿಗೆ ಕೊಟ್ಟು ನಿಶ್ಚಿಂತೆಯಿಂದ ಇರಬಹುದಲ್ಲ... ಎಂಬ ಪ್ರಶ್ನೆಯೊಂದು ಮೂಡುವುದು ಅಪರಾಧವಾಗಬೇಕಿಲ್ಲ. ನಿಜವಾಗಿ, ಹಜ್ಜ್ ಮಹತ್ವಪೂರ್ಣ ಎನಿಸಿಕೊಳ್ಳುವುದು ಇಂಥ ಪ್ರಶ್ನೆಗಳಿಂದ. ದುಡ್ಡಿದ್ದವ ಹಜ್ಜ್ ನಿರ್ವಹಿಸಲೇಬೇಕು ಅನ್ನುವುದು ಆರಾಧನೆಯ ಬಾಹ್ಯ ವ್ಯಾಖ್ಯಾನವೇ ಹೊರತು ದುಡ್ಡಿಗೂ ಹಜ್ಜ್ ಗೂ ನಡುವೆ ಆಳ ಸಂಬಂಧವೇನೂ ಇಲ್ಲ. ದುಡ್ಡು ಹಜ್ಜ್ ಅನ್ನು ಕಡ್ಡಾಯಗೊಳಿಸಬಹುದು. ಆದರೆ, ಹಜ್ಜ್ ಅನ್ನು ಫಲಪ್ರದಗೊಳಿಸುವುದು ದುಡ್ಡು ಅಲ್ಲ. ದುಡ್ಡಿಗೂ ಹಜ್ಜ್ ಗೂ ನಡುವೆ ಇರುವ ಸಂಬಂಧ ಇಷ್ಟೇ. ಹಜ್ಜ್ ಗೆ ಸಂಬಂಧಿಸಿ ಹಣ ಕೇವಲ ಒಂದು ನಿಮಿತ್ತ ಮಾತ್ರ. ಹಜ್ಜ್ ಈ ದುಡ್ಡಿನಾಚೆಗೆ ವಿಶಾಲವಾದದ್ದೊಂದು ಜಗತ್ತನ್ನು ತೆರೆದುಕೊಡುತ್ತದೆ. ಆ ಜಗತ್ತಿನಲ್ಲಿ ನಡೆದ ಘಟನೆಗಳಿಗೂ ದುಡ್ಡಿಗೂ ಎಷ್ಟು ತೆಳುವಾದ ಸಂಬಂಧ ಎಂದರೆ, ದುಡ್ಡು ಆ ಜಗತ್ತಿನ ಇಡೀ ಪ್ರಕ್ರಿಯೆಯಲ್ಲಿ ಅತೀ ಕೊನೆಯ ಸ್ಥಾನದಲ್ಲಷ್ಟೇ ನಿಲ್ಲುವಷ್ಟು. ಆ ಜಗತ್ತಿನ ನಾಯಕ ಪ್ರವಾದಿ ಇಬ್ರಾಹೀಮ್(ಅ). ಅವರ ಯೋಚನೆ, ಯೋಜನೆ, ಪ್ರಯಾಣ, ವಿಶ್ವಾಸ... ಪ್ರತಿಯೊಂದರಲ್ಲೂ ಸಿದ್ಧ ಚೌಕಟ್ಟನ್ನು ಒಡೆಯುವ ಹೊಸತನವಿದೆ. ಅವರು ಅಗರ್ಭ ಶ್ರೀಮಂತರಾಗಿದ್ದುಕೊಂಡು ಇರಾಕ್‍ನಿಂದ ಮಕ್ಕಾಕ್ಕೆ ಆಗಮಿಸಲಿಲ್ಲ. ತನ್ನ ಪತ್ನಿ- ಮಗನನ್ನು ಮಕ್ಕಾದಲ್ಲಿ ಕೂರಿಸಿ ಹೋಗುವಾಗ ಚೀಲ ತುಂಬ ಹಣವನ್ನು ಒಪ್ಪಿಸಿ ಹೋಗಲಿಲ್ಲ. ಸ್ವಲ್ಪ ಖರ್ಜೂರ ಮತ್ತು ಸ್ವಲ್ಪ ನೀರು ಇದ್ದ ಬಡವ. ಅವರು ಅಂದಿನ ಸುಪರಿಚಿತ ಆರಾಧನಾ ಕ್ರಮವನ್ನು ಪ್ರಶ್ನಿಸುವಾಗಲೂ ದುಡ್ಡಿದ್ದವ ಆಗಿರಲಿಲ್ಲ. ಆದರೆ ಜಗತ್ತಿನ ಸರ್ವ ಶ್ರೀಮಂತರನ್ನೂ ಮಕ್ಕಾಕ್ಕೆ ಆಕರ್ಷಿಸುವಷ್ಟು ಮತ್ತು ಆ ಆಕರ್ಷಣೆ ಕಡ್ಡಾಯವಾಗುವಷ್ಟು ಅಪೂರ್ವ ವ್ಯಕ್ತಿತ್ವ ಅವರೊಳಗಿತ್ತು. ಅವರು ಆ ವರೆಗಿನ ಅಲೋಚನಾ ಪದ್ಧತಿಯನ್ನೇ ಒಡೆದರು. ಅವರು ಚರ್ಚಿಸಿದ್ದು ಅಲ್ಲಾಹನನ್ನೇ ಆಗಿದ್ದರೂ ಅವರು ಆ ಅಲ್ಲಾಹನನ್ನು ಚರ್ಚಿಸಿದ ವಿಧಾನ ತೀರಾ ನವೀನವಾದದ್ದು. ಸೂರ್ಯ, ಚಂದ್ರ, ನಕ್ಷತ್ರಗಳ ಕುರಿತಂತೆ ಅವರು ಆಡಿದ ಮಾತು ಮತ್ತು ಚಿಂತಿಸಿದ ವಿಧಾನ ಅತ್ಯಂತ ಜಾಣತನದ್ದು. ಅವರು ತಮ್ಮ ಬದುಕಿನುದ್ದಕ್ಕೂ ಒಂದು ವಿಶಿಷ್ಟ ಆಲೋಚನಾ ಪದ್ಧತಿ, ಧೈರ್ಯ ಮತ್ತು ಅಚಲ ಸೈದ್ಧಾಂತಿಕ ಬದ್ಧತೆಯನ್ನು ಪ್ರದರ್ಶಿಸಿದರು. ನಿಜವಾಗಿ, ಶ್ರೀಮಂತರಲ್ಲದ ಅವರು ಮತ್ತು ಅವರ ಪತ್ನಿ, ಮಗ ಜಗತ್ತಿನ ಸರ್ವ ಶ್ರೀಮಂತರಿಗೆ ಕಡ್ಡಾಯವಾಗಿರುವುದು ಈ ಎಲ್ಲ ಕಾರಣಗಳಿಂದಾಗಿ. ಒಂದು ರೀತಿಯಲ್ಲಿ, ಏಕ ಕಾಲದಲ್ಲಿ ಶ್ರೀಮಂತಿಕೆಯನ್ನು ನಗಣ್ಯಗೊಳಿಸುವುದೂ ಮತ್ತು ಸೈದ್ಧಾಂತಿಕ ಬದ್ಧತೆಯನ್ನು ಅಗ್ರಗಣ್ಯ ಗೊಳಿಸುವುದೂ ಇಲ್ಲಿ ನಡೆಯುತ್ತದೆ. ತನ್ನ ವಿಚಾರದ ಮೇಲೆ ಅಚಲ ವಿಶ್ವಾಸವನ್ನು ಇಟ್ಟುದುದಕ್ಕಾಗಿ ಹುಟ್ಟಿದೂರು ಉರ್‍ನಿಂದ ಹೊರಬಿದ್ದು, ಬಳಿಕ ತನ್ನ ಸುಖ, ಆನಂದ, ಖುಷಿ ಎಲ್ಲವೂ ಆಗಿರುವ ಪತ್ನಿ-ಮಗನನ್ನು ಮಕ್ಕಾದಲ್ಲಿ ಬಿಟ್ಟು ಖಾಲಿ ಕೈಯಲ್ಲಿ ಹೊರಟು ಹೋದ ಓರ್ವ ವಿಚಾರಶೀಲ ದೇವ ಪ್ರೇಮಿ ಅವರು. ಇವತ್ತಿನ ಹಾಜಿಯ ಮುಂದಿರುವ ಗಂಭೀರ ಸವಾಲು ಇದು. ತಾನು ಆ ದೇವ ಪ್ರೇಮಿ ಇಬ್ರಾಹೀಮರ(ಅ) ಎಷ್ಟು ಶೇಕಡಾ ಇದ್ದೇನೆ, ಸೈದ್ಧಾಂತಿಕ ಬದ್ಧತೆಯಲ್ಲಿ ಅವರು ಮತ್ತು ತಾನು ಎಲ್ಲೆಲ್ಲಿ ಇದ್ದೇವೆ?
ಲಕ್ಷಾಂತರ ಖರ್ಚು ಮಾಡುವುದೊಂದೇ ಹಜ್ಜ್ ಅಲ್ಲ, ಈ ಪ್ರಶ್ನೆಗೆ ಉತ್ತರವಾಗುವುದೇ ಹಜ್ಜ್.
ಲಕ್ಷಾಂತರ ಖರ್ಚು ಮಾಡುವುದೊಂದೇ ಹಜ್ಜ್ ಅಲ್ಲ, ಈ ಪ್ರಶ್ನೆಗೆ ಉತ್ತರವಾಗುವುದೇ ಹಜ್ಜ್.
No comments:
Post a Comment