ಮುತೀಉರ್ರಹ್ಮಾನ್ ಸಿದ್ದೀಖಿ |
ಮುತೀಉರ್ರಹ್ಮಾನ್ ಸಿದ್ದೀಖಿ ಎಂಬ ಯುವ ಪತ್ರಕರ್ತ ಕೇವಲ 6 ತಿಂಗಳ ಅವಧಿಯಲ್ಲಿ ಯಶಸ್ವಿ ಕಾರ್ಯಾಚರಣೆಯೊಂದನ್ನು ನಡೆಸಿ ಗಮನ ಸೆಳೆದಿದ್ದಾನೆ. ಆ ಮೂಲಕ ಮಾಧ್ಯಮ ಮತ್ತು ಪೊಲೀಸ್ ಇಲಾಖೆಯಲ್ಲಿರುವ ಕೆಲವು ಅಪಾಯಕಾರಿ ಭಯೋತ್ಪಾದಕರನ್ನು ಆತ ವಿಳಾಸ ಸಮೇತ ಬಹಿರಂಗಪಡಿಸಿದ್ದಾನೆ. ಇದಕ್ಕಾಗಿ ಆತ ಪೆನ್ನು ಬಳಸಿಲ್ಲ. ಭಾಷಣ ಮಾಡಿಲ್ಲ. 6 ತಿಂಗಳ ಕಾಲ ಜೈಲಲ್ಲಿ ಕೂರುವ ಮುಖಾಂತರ ತಣ್ಣಗೆ ಈ ಕಾರ್ಯಾಚರಣೆಯನ್ನು ನಡೆಸಿದ್ದಾನೆ. 2012 ಆಗಸ್ಟ್ 30ರಂದು ಬೆಂಗಳೂರಿನಲ್ಲಿ ಪೊಲೀಸರು ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ್ದರು. ಒಂದಿಬ್ಬರು ಪತ್ರಕರ್ತರು ಮತ್ತು ರಾಜಕಾರಣಿಗಳ ಹತ್ಯೆ ನಡೆಸುವ ಭಾರೀ ಭಯೋತ್ಪಾದಕ ಸಂಚನ್ನು ತಾವು ವಿಫಲಗೊಳಿಸಿರುವುದಾಗಿ ಹೇಳಿಕೊಂಡಿದ್ದರು. ಬಂಧಿತ 15 ಮಂದಿಯಲ್ಲಿ ಇಬ್ಬರು ಇರಾನ್‍ಗೆ ಭೇಟಿ ಕೊಟ್ಟಿದ್ದು, ಆ ಬಳಿಕ ಪಾಕಿಸ್ತಾನಕ್ಕೆ ತೆರಳಿ ಐ.ಎಸ್.ಐ. ಏಜೆಂಟರೊಂದಿಗೆ ಮಾತುಕತೆ ನಡೆಸಿದ್ದನ್ನೂ ವಿವರಿಸಿದ್ದರು. ಅಲ್ಲದೇ 3 ತಿಂಗಳ ಸತತ ನಿಗಾದ ಬಳಿಕ ಈ 15 ಮಂದಿಯನ್ನು ಬಂಧಿಸಲಾಗಿದೆಯೆಂದೂ ಹೇಳಿಕೊಂಡಿದ್ದರು. ಅದರ ಮರುದಿನದಿಂದಲೇ ರಾಜ್ಯದಲ್ಲಿ ಅಕ್ಷರ ಭಯೋತ್ಪಾದನೆಗಳು ಪ್ರಾರಂಭವಾಗಿದ್ದುವು. ಬಂಧಿತ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪತ್ರಕರ್ತ ಮುತೀಉರ್ರಹ್ಮಾನ್ ಸಿದ್ದೀಕಿ ಇಡೀ ಭಯೋತ್ಪಾದಕ ಸಂಚಿನ ರೂವಾರಿ ಎಂದು ಕೆಲವು ಪತ್ರಿಕೆಗಳು ಬರೆದುವು. ಪತ್ರಕರ್ತನ ಸೋಗಿನಲ್ಲಿ ಆತ ಹೇಗೆ ವಿಧ್ವಂಸಕ ಕೃತ್ಯಕ್ಕೆ ಮಾಹಿತಿ ಸಂಗ್ರಹಿಸುತ್ತಿದ್ದ ಎಂದು ಅವು ತನಿಖಾ ವರದಿಯನ್ನು ಪ್ರಕಟಿಸಿದುವು. ಕೃಷ್ಣರಾಜ ಸಾಗರ ಅಣೆಕಟ್ಟನ್ನು ಸ್ಫೋಟಿಸುವ ಸಂಚಿನ ಹೊಣೆಯನ್ನೂ ಈ ಪತ್ರಕರ್ತನ ಮೇಲೆ ಹೊರಿಸಲಾಯಿತು. ಮಾಧ್ಯಮ ಭಯೋತ್ಪಾದನೆಯ ಪ್ರಭಾವ ಎಷ್ಟಿತ್ತೆಂದರೆ, ಸ್ವತಃ ಡೆಕ್ಕನ್ ಹೆರಾಲ್ಡ್ ಪತ್ರಿಕೆಯೇ ಒಂದು ಹಂತದ ವರೆಗೆ ತಬ್ಬಿಬ್ಬಾಯಿತು. ಮುತೀಉರ್ರಹ್ಮಾನ್‍ನ ಆ ವರೆಗಿನ ಪತ್ರಿಕಾ ವೃತ್ತಿಯಲ್ಲಿ ಅನುಮಾನಿತ ಅಂಶಗಳು ಕಂಡಿಲ್ಲವಾದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಕ್ಕೆ ಮತ್ತು ತನ್ನ ಪತ್ರಕರ್ತನನ್ನು ಸಮರ್ಥಿಸಿಕೊಳ್ಳುವುದಕ್ಕೆ ಅದು ಹಿಂದೇಟು ಹಾಕಿತು. ಆದರೆ ಮುತೀಉರ್ರಹ್ಮಾನ್ ತನ್ನ ಸಂಘಟನೆಯ ಸದಸ್ಯನೆಂದು ಎಸ್.ಐ.ಓ.(ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ)ನ ರಾಜ್ಯಾಧ್ಯಕ್ಷ ಅಶ್ಫಾಕ್ ಅಹ್ಮದ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಘೋಷಿಸಿದರು. ಮುತೀಉರ್ರಹ್ಮಾನ್ ಅಮಾಯಕ ಎಂದವರು ಸಾರಿದರು.
ದುರಂತ ಏನೆಂದರೆ, ರಾಜ್ಯದ ಪತ್ರಕರ್ತ ಸಂಘಟನೆಗಳು ಮುತೀಉರ್ರಹ್ಮಾನ್‍ನ ಬಂಧನದ ಕುರಿತಂತೆ ಮೌನ ವಹಿಸಿದ್ದು. ಪತ್ರಕರ್ತ ನವೀನ್ ಸೂರಿಂಜೆಯ ಬಂಧನದ ಸಂದರ್ಭದಲ್ಲಿ ತೋರಿದ ಧೈರ್ಯವನ್ನು ಅವು ಮುತೀಉರ್ರಹ್ಮಾನ್‍ನ ಬಂಧನದ ಸಂದರ್ಭದಲ್ಲಿ ತೋರಿಸಲೇ ಇಲ್ಲ. ಪ್ರತಿಭಟನೆ ನಡೆಸಬೇಕಾಗಿದ್ದ ಅನೇಕ ಪತ್ರಕರ್ತರು ಯಾರೋ ಹೆಣೆದ ಷಡ್ಯಂತ್ರದ ದಾಳವಾಗಿ ಬಿಟ್ಟರು. ಆತನ ಮೇಲೆ ಹೊರಿಸಲಾದ ಆರೋಪಗಳೆಲ್ಲ ನಿಜವಾಗಿರಬಹುದು ಎಂದು ನಂಬುವ ಸ್ಥಿತಿಗೆ ಅನೇಕ ಪತ್ರಕರ್ತರು ತಲುಪಿ ಬಿಟ್ಟಿದ್ದರು. ಇಷ್ಟಕ್ಕೂ, ಕೆಲವು ಪತ್ರಿಕೆಗಳು ಕಲ್ಪಿತ ಸುದ್ದಿಗಳನ್ನು ಆಕರ್ಷಕ ಹೆಡ್‍ಲೈನ್‍ನೊಂದಿಗೆ ಪ್ರತಿದಿನವೂ ಪ್ರಕಟಿಸುತ್ತಿರುವಾಗ ಗೊಂದಲ ಉಂಟಾಗದಿರುವುದಾದರೂ ಹೇಗೆ? ಹೆಚ್ಚಿನೆಲ್ಲ ಪತ್ರಿಕೆಗಳು ಮುತೀಉರ್ರಹ್ಮಾನ್‍ನನ್ನು ಭಯೋತ್ಪಾದಕನಂತೆ ಚಿತ್ರಿಸಿ ಸಂಪಾದಕೀಯ ಬರೆಯುವಾಗ, ಆತನ ಬಗ್ಗೆ ನಾಲ್ಕು ಕೊಂಡಾಟದ ವಾಕ್ಯ ಬರೆಯುವುದಕ್ಕೆ ಸಾಮಾನ್ಯ ಪತ್ರಕರ್ತನಿಗೆ ಧೈರ್ಯ ಎಲ್ಲಿಂದ ಬರಬೇಕು? ನಿಜವಾಗಿ, ಮಾಧ್ಯಮಗಳಲ್ಲಿರುವ ಒಂದು ವರ್ಗವು ಭಯೋತ್ಪಾದನೆಯ ಭೂತವನ್ನು ಹಬ್ಬಿಸಿ, ಇಡೀ ಕನ್ನಡ ಪತ್ರಿಕೋದ್ಯಮವನ್ನೇ ಕುಲಗೆಡಿಸಿಬಿಟ್ಟಿತ್ತು. ಪತ್ರಕರ್ತನ ಬಂಧನದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುವುದು ದೇಶದ್ರೋಹವಾದೀತೋ ಎಂದು ಪ್ರಮುಖ ಪತ್ರಕರ್ತರೂ ಭಯಪಡುವಷ್ಟು ಈ ಭೂತ ಪ್ರಭಾವಶಾಲಿಯಾಗಿತ್ತು. ಆದ್ದರಿಂದಲೇ, ಮುತೀಉರ್ರಹ್ಮಾನ್‍ನ ಬಂಧನದ ವಿರುದ್ಧ ರಾಜ್ಯದಲ್ಲಿ ಪತ್ರಕರ್ತರಿಂದ ಒಂದೇ ಒಂದು ಪ್ರತಿಭಟನೆ ನಡೆಯಲಿಲ್ಲ. ಆತನ ಅಮಾಯಕತನವನ್ನು ಕನಿಷ್ಠ ಆತನ ಪತ್ರಕರ್ತ ಮಿತ್ರರು ಮತ್ತು ಸಂಪಾದಕರಿಗೂ ಘೋಷಿಸಲು ಸಾಧ್ಯವಾಗಲಿಲ್ಲ. ಇಷ್ಟಕ್ಕೂ, ಪತ್ರಕರ್ತರ ಸ್ಥಿತಿಯೇ ಹೀಗಾದರೆ ಇನ್ನು ಜನಸಾಮಾನ್ಯರ ಬಗ್ಗೆ ಹೇಳುವುದಾದರೂ ಏನನ್ನು? ಈ ಪತ್ರಕರ್ತರು ಮತ್ತು ಸಂಪಾದಕರು ಬರೆದ ಸುದ್ದಿಗಳನ್ನಲ್ಲವೇ ಅವರೂ ಓದುತ್ತಿರುವುದು? ಸುದ್ದಿಗಳೆಲ್ಲ ಮುತೀಉರ್ರಹ್ಮಾನ್‍ನನ್ನು ‘ಜಿಹಾದಿ ಪತ್ರಕರ್ತ' ಎಂದು ಕರೆಯುವಾಗ ಅವರು ಅದಕ್ಕಿಂತ ಭಿನ್ನವಾಗಿ ಆಲೋಚಿಸುವುದಕ್ಕೆ ಸಾಧ್ಯವಿದೆಯೇ?
ಇದೀಗ ಮುತೀಉರ್ರಹ್ಮಾನ್‍ನ ಬಿಡುಗಡೆಗೆ ನ್ಯಾಯಾಲಯವೇ ಆದೇಶಿಸಿದೆ. ಆತನ ಮೇಲೆ ಯಾವೊಂದು ಆರೋಪವನ್ನೂ ಪೊಲೀಸರು ಹೊರಿಸಿಲ್ಲ. ವಿಷಾದ ಏನೆಂದರೆ, ಮುತೀಉರ್ರಹ್ಮಾನ್‍ನಿಗೆ ಖಳನಾಯಕನ ವೇಷ ತೊಡಿಸಿ, ಎರಡು ವಾರಗಳ ತನಕ ಮುಖಪುಟದಲ್ಲಿ ಕೂರಿಸಿದ ಪತ್ರಿಕೆಗಳು, ಆತನ ಬಿಡುಗಡೆಯ ಸುದ್ದಿಗೆ ಆ ಮಟ್ಟದ ಪ್ರಚಾರ ನೀಡದೇ ಇರುವುದು. ಆ ಕುರಿತಂತೆ ಸಂಪಾದಕೀಯ ಬರೆಯದೇ ಇರುವುದು. ಓರ್ವ ಅಮಾಯಕನನ್ನು ಭಯೋತ್ಪಾದಕನಂತೆ ಬಿಂಬಿಸಿದ ಪತ್ರಿಕೆಗಳು ಯಾಕಾಗಿ ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡವು? ಈ ದೇಶದಲ್ಲಿ ಭಯೋತ್ಪಾದನೆಯ ಆರೋಪ ಹೊತ್ತುಕೊಂಡ ವ್ಯಕ್ತಿಯೊಬ್ಬ ಎದುರಿಸಬೇಕಾದ ಸಮಸ್ಯೆಗಳು ಏನೆಂಬುದು ಮಾಧ್ಯಮ ಮಿತ್ರರಿಗೆ ಗೊತ್ತಿಲ್ಲವೇ? ಭಯೋತ್ಪಾದನೆಯೆಂಬುದು ಕಳ್ಳತನದ ಆರೋಪದಂತೆ ಅಲ್ಲವಲ್ಲ. ನ್ಯಾಯಾಲಯವು ಅಮಾಯಕನೆಂದು ಬಿಡುಗಡೆಗೊಳಿಸಿದರೂ ಸಮಾಜ ಅಪರಾಧಿಯಂತೆಯೇ ನೋಡುತ್ತದಲ್ಲವೇ? ಸರಕಾರಿ ಇಲಾಖೆ ಇಲ್ಲವೇ ಖಾಸಗಿ ಸಂಸ್ಥೆಗಳಲ್ಲೂ ಉದ್ಯೋಗ ಸಿಗುವುದು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗುತ್ತದಲ್ಲವೇ? ಇಂಥ ವಾತಾವರಣದಲ್ಲಿ, ಸಮಾಜವನ್ನು ತಿದ್ದಬೇಕಾದ ಮಾಧ್ಯಮಗಳೇಕೆ ಬೆನ್ನು ತಿರುಗಿಸುತ್ತವೆ? ಸಮಾಜವನ್ನು ತಪ್ಪು ದಾರಿಗೆಳೆಯುವುದಷ್ಟೇ ಮಾಧ್ಯಮಗಳ ಜವಾಬ್ದಾರಿಯೇ?
ಏನೇ ಆಗಲಿ, ಮುತೀಉರ್ರಹ್ಮಾನ್ ಎಂಬ ಸಾಮಾನ್ಯ ಪತ್ರಕರ್ತನೋರ್ವ ಮಾಧ್ಯಮ ಕ್ಷೇತ್ರದಲ್ಲಿರುವ ಕೆಲವು ಭಯೋತ್ಪಾದಕರ ಪರಿಚಯವನ್ನು ಮಾಡಿಕೊಟ್ಟಿದ್ದಾನೆ. ಅವರು ಯಾವ್ಯಾವ ಪತ್ರಿಕೆಯಲ್ಲಿ, ಯಾವ್ಯಾವ ಸ್ಥಾನದಲ್ಲಿದ್ದಾರೆಂಬುದನ್ನೂ ಬಹಿರಂಗಕ್ಕೆ ತಂದಿದ್ದಾನೆ. ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳು ಸುದ್ದಿಯ ಹೆಸರಲ್ಲಿ ಹೇಗೆ ಅಪ್ಪಟ ಸುಳ್ಳುಗಳನ್ನು ಹೇಳಬಲ್ಲವು ಎಂಬುದಕ್ಕೂ ಕನ್ನಡಿ ಹಿಡಿದಿದ್ದಾನೆ. ಆದ್ದರಿಂದ, 6 ತಿಂಗಳು ಜೈಲಲ್ಲಿದ್ದರೂ ಪರವಾಗಿಲ್ಲ, ಶಾಶ್ವತವಾಗಿ ಜೈಲಲ್ಲೇ ಇರಬೇಕಾದವರ ಪಟ್ಟಿಯೊಂದನ್ನು ಸಮಾಜದ ಮುಂದಿಟ್ಟನಲ್ಲ, ಅದಕ್ಕಾಗಿ ಆತನಿಗೆ ಅಭಿನಂದನೆ ಸಲ್ಲಿಸಬೇಕು.