ಪಾಕಿಸ್ತಾನದ ಜಿನ್ನಾ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಮಲಗಿರುವ ಸರಬ್ಜಿತ್ ಸಿಂಗ್‍ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಕ್ಕೆ ಒಂದೊಳ್ಳೆಯ ರೂಪಕದಂತಿದ್ದಾನೆ. ಹಾಗೆಯೇ, ಇಟ್ಟಿಗೆಯಿಂದ ಆತನ ತಲೆ ಒಡೆದ ಅಫ್ತಾಬ್ ಮತ್ತು ಮುದಸ್ಸರ್ ಎಂಬಿಬ್ಬರು ಕೈದಿಗಳು, ಪತಿಯನ್ನು ನೋಡಿ ಕಣ್ಣೀರಿಳಿಸುತ್ತಿರುವ ಪತ್ನಿ, ಮಕ್ಕಳು ಮತ್ತು ತುಟಿ ಸೇವೆ ಮಾಡುತ್ತಿರುವ ಎರಡೂ ಸರಕಾರಗಳು- ಇವರೆಲ್ಲ ಈ ರೂಪಕದ ವಿವಿಧ ಪಾತ್ರಗಳಂತೆ ಕಾಣಿಸುತ್ತಿದ್ದಾರೆ. ನಿಜವಾಗಿ ಅಫ್ತಾಬ್ ಮತ್ತು ಮುದಸ್ಸರ್ ಎಂಬುದು ಬರೇ ಎರಡು ಹೆಸರುಗಳಷ್ಟೇ ಅಲ್ಲ. ಅದೊಂದು ಮನಸ್ಥಿತಿ. ಅಂಥ ಮನ ಸ್ಥಿತಿಯ ಮಂದಿ ಉಭಯ ದೇಶಗಳಲ್ಲಿ ಧಾರಾಳ ಇದ್ದಾರೆ. ಅವರಲ್ಲಿ ವಿಚಿತ್ರವಾದ ಆವೇಶವೊಂದಿದೆ. ಅದೇನೆಂದರೆ, ತನ್ನ ದೇಶದ ಎಲ್ಲ ಸಮಸ್ಯೆಗಳಿಗೂ ಪಾಕಿಸ್ತಾನ ಅಥವಾ ಭಾರತವೇ ಕಾರಣ ಎಂಬುದು. ಭಾರತದಲ್ಲಿ ಎಲ್ಲಾದರೂ ಬಾಂಬ್ ಸ್ಫೋಟಿಸಿ ಬಿಟ್ಟರೆ ತಕ್ಷಣ ಈ ಮನಸ್ಥಿತಿಯ ಮಂದಿ ಪಾಕ್‍ನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಸ್ಫೋಟಕ್ಕೆ ಕಾರಣವೆಂದು ಪಾಕ್ ಮೂಲದ ವಿವಿಧ ಸಂಘಟನೆಗಳ ಹೆಸರನ್ನು ಮಾಧ್ಯಮಗಳ ಮೂಲಕ ತೇಲಿಬಿಡಲಾಗುತ್ತದೆ. ಮುದಸ್ಸರ್ ಮತ್ತು ಅಫ್ತಾಬ್‍ರು ಇಟ್ಟಿಗೆಗಳಿಂದ ಸರಬ್ಜಿತ್‍ನ ಮೇಲೆ ದಾಳಿ ಮಾಡಿದ್ದರೆ, ಈ ಮಂದಿ ಬಾಂಬ್‍ಗಳ ಮೂಲಕ ಪಾಕ್‍ನ ಮೇಲೆ ದಾಳಿ ಮಾಡಿ ಎಂದು ಒತ್ತಾಯಿಸುತ್ತಾರೆ. ಪಾಕ್‍ನ ಜೊತೆಗಿರುವ ಕ್ರೀಡಾ, ರಾಜಕೀಯ, ವ್ಯಾವಹಾರಿಕ ಸಂಬಂಧಗಳನ್ನು ರದ್ದುಪಡಿಸುವಂತೆ ಪ್ರತಿಭಟನೆಗಳು ಏರ್ಪಡುತ್ತವೆ. ಇಂಥದ್ದೇ ಅತಿರೇಕಗಳು ಪಾಕ್‍ನಲ್ಲೂ ನಡೆಯುತ್ತವೆ. ಇಷ್ಟಕ್ಕೂ, ಇಟ್ಟಿಗೆಗಳನ್ನು ಹಿಡಿಯುವ, ಆವೇಶಗೊಳ್ಳುವ ಮಂದಿಗೆ ವಾಸ್ತವ ಪರಿಸ್ಥಿತಿಯ ಅರಿವಿದೆ ಎಂದಲ್ಲ. ಮುದಸ್ಸರ್ ಮತ್ತು ಅಫ್ತಾಬ್‍ನ ಮಟ್ಟಿಗೆ ಸರಬ್ಜಿತ್ ಸಿಂಗ್ ಓರ್ವ ಭಯೋತ್ಪಾದಕ. ಅಷ್ಟಕ್ಕೂ ಅವರಿಬ್ಬರಿಗೆ ಸರಬ್ಜಿತ್‍ನ ಬಗ್ಗೆ, ಆತನ ಮೇಲಿರುವ ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ಗೊತ್ತಿದೆ ಎಂದಲ್ಲ. ಅವರಿಬ್ಬರಿಗೆ ಮತ್ತು ಅಂಥ ಕೋಟ್ಯಂತರ ಮಂದಿಗೆ, ಸರಬ್ಜಿತ್‍ನನ್ನು ಭಯೋತ್ಪಾದಕ ಎಂದು ವ್ಯವಸ್ಥೆಯೇ ಪರಿಚಯಿಸಿಕೊಟ್ಟಿದೆ. ಆದರೆ, ಈ ವ್ಯವಸ್ಥೆ ಎಷ್ಟು ನಂಬಿಕೆಗೆ ಅರ್ಹ, ಇದರ ಹಿಂದೆ ರಾಜಕೀಯ ದುರುದ್ದೇಶಗಳು ಇದ್ದಿರಲಾರದೇ.. ಎಂಬುದನ್ನೆಲ್ಲ ಈ 'ಇಟ್ಟಿಗೆ'ಗಳು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. 'ಇಟ್ಟಿಗೆ'ಗಳ ಈ ದೌರ್ಬಲ್ಯವು ವ್ಯವಸ್ಥೆಗೂ ಚೆನ್ನಾಗಿ ಗೊತ್ತು. ಆದ್ದರಿಂದಲೇ ಸರಕಾರವೊಂದು ಇಕ್ಕಟ್ಟಿನಲ್ಲಿ ಸಿಲುಕಿದರೆ, ಹಗರಣಗಳಲ್ಲಿ ಸಿಲುಕಿಕೊಂಡರೆ ಉಭಯ ರಾಷ್ಟ್ರಗಳಲ್ಲಿ ಎಲ್ಲಾದರೂ ಬಾಂಬ್ ಸ್ಫೋಟಗೊಳ್ಳುವುದಿದೆ. ತಕ್ಷಣ ಉಭಯ ರಾಷ್ಟ್ರಗಳ ಗಡಿಯಲ್ಲಿ ಉದ್ವಿಘ್ನತೆ ಕಾಣಿಸಿಕೊಳ್ಳುತ್ತದೆ. ಗಡಿಯ ಎರಡೂ ಕಡೆ 'ಸರಬ್ಜಿತ್‍ಗಳ' ಬಂಧನವಾಗುತ್ತದೆ. ಆ ಬಳಿಕ ಹಗರಣಗಳು ಮಾಧ್ಯಮಗಳಿಂದ ಮಾಯವಾಗಿ ಸರಬ್ಜಿತ್‍ಗಳು ಚರ್ಚೆಗೆ ಒಳಗಾಗುತ್ತಾರೆ. ದುರಂತ ಏನೆಂದರೆ, ದೇಶಪ್ರೇಮವೆಂದರೆ ಇನ್ನೊಂದು ರಾಷ್ಟ್ರವನ್ನು ಮತ್ತು ಅಲ್ಲಿನ ಪ್ರಜೆಗಳನ್ನು ವಿರೋಧಿಸುವುದು ಎಂದೇ ನಂಬಿರುವ ಈ 'ಇಟ್ಟಿಗೆ'ಗಳಿಗೆ ಇವು ಅರ್ಥವಾಗುವುದಿಲ್ಲ. ಆದ್ದರಿಂದಲೇ ಭಾರತದ ಯಾವುದೇ ಒಂದು ನಗರದಲ್ಲಿ ಕಡ್ಲೆಪುರಿ ಮಾರಿ ಜೀವನ ಸಾಗಿಸುವ ಬಡ ಪಾಕಿಸ್ತಾನಿಯನ್ನೂ ಈ 'ಮಂದಿ' ಭಯೋತ್ಪಾದಕನಂತೆ ನೋಡುವುದು. ಲಷ್ಕರೆ ತ್ವಯ್ಯಿಬದ್ದೋ ಐಎಸ್‍ಐ ನದ್ದೋ ಏಜೆಂಟ್ ಎಂದು ಹುಯಿಲೆಬ್ಬಿಸುವುದು. ಹೀಗೆ ದಿಕ್ಕು ತಪ್ಪಿದ ಮನಸ್ಥಿತಿಗೆ ಬಲಿಯಾಗಿ ಉಭಯ ದೇಶಗಳ ಜೈಲುಗಳಲ್ಲಿ ನೂರಾರು ಮಂದಿ ಇವತ್ತೂ ಕೊಳೆಯುತ್ತಿದ್ದಾರೆ. ಅಲ್ಲದೇ, ಅಂಥವರ ಮೇಲೆ ಆರೋಪ ಹೊರಿಸುವುದಕ್ಕೆ ಪೋಲೀಸರಿಗೂ ಕಷ್ಟವಿಲ್ಲ. ಕಡ್ಲೆಪುರಿ ಮಾರುತ್ತಾ ಈತ ಐಎಸ್‍ಐಗೆ ಕೆಲಸ ಮಾಡುತ್ತಿದ್ದ ಅಂದರೂ ನಂಬುವಂಥ ವಾತಾವರಣವನ್ನು ಉಭಯ ದೇಶಗಳಲ್ಲೂ ಇವತ್ತು ನಿರ್ಮಿಸಿ ಬಿಡಲಾಗಿದೆ. ಬಳಿಕ, ಜೈಲುಗಳಲ್ಲಿ ಅವರು ಸರಬ್ಜಿತ್‍ನಂತೆ ಕೋಮಾವಸ್ಥೆಯಲ್ಲಿ ಬದುಕಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ಅವರ ಪತ್ನಿ ಮಕ್ಕಳಾದರೂ ಏನು ಮಾಡಿಯಾರು? ಕಣ್ಣೀರಲ್ಲದೇ ಬೇರೆ ಯಾವ ಮಾರ್ಗಗಳು ಅವರ ಬಳಿಯಿರುತ್ತವೆ? ಭಾರತ ಮತ್ತು ಪಾಕ್‍ಗಳ ಜೈಲಲ್ಲಿರುವ ನೂರಾರು ಸರಬ್ಜಿತ್‍ಗಳ ಸದ್ಯದ ಪರಿಸ್ಥಿತಿ ಇದು. ಅಷ್ಟಕ್ಕೂ, ಅಕ್ಕಪಕ್ಕದ ಎರಡು ರಾಷ್ಟ್ರಗಳ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಸರಬ್ಜಿತ್‍ನಂಥವರು ಮತ್ತೆ ಮತ್ತೆ ಬಲಿಯಾಗುತ್ತಿರುವುದನ್ನು ನಾವು ಎಷ್ಟರ ವರೆಗೆ ಸಹಿಸಿಕೊಳ್ಳಬೇಕು? ಪಾಕ್ ಹೇಳುವಂತೆ, ಒಂದು ವೇಳೆ ಸರಬ್ಜಿತ್ ಅಲ್ಲಿ ಬಾಂಬ್ ಸ್ಫೋಟಿಸಿದ್ದರೂ ಅದು ಆತನದೇ ಆಯ್ಕೆಯಾಗಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಭಾರತೀಯ ವ್ಯವಸ್ಥೆ ಆತನನ್ನು ಆ ಕೃತ್ಯಕ್ಕೆ ದಾಳವಾಗಿ ಬಳಸಿಕೊಂಡಿತ್ತು. ತಮ್ಮ ರಾಜಕೀಯ ದುರುದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ವ್ಯವಸ್ಥೆ ಅಮಾಯಕರನ್ನು ಅಪರಾಧಿಗಳನ್ನಾಗಿ ಮಾರ್ಪಡಿಸುತ್ತಿವೆ ಎಂದಲ್ಲವೇ ಇದರರ್ಥ? ಇದು ಬರೇ ಸರಬ್ಜಿತ್‍ಗೆ ಮಾತ್ರ ಸೀಮಿತ ಅಲ್ಲ. ಕಸಬ್ ಕೂಡ ಇಂಥದ್ದೊಂದು ದುರುದ್ದೇಶದ ಬಲಿಪಶುವೇ? ಆದ್ದರಿಂದ ಸರಬ್ಜಿತ್‍ನ ಸದ್ಯದ ಕೋಮಾಸ್ಥಿತಿಗೆ ಆ ಇಬ್ಬರು ಕೈದಿಗಳಷ್ಟೇ ಕಾರಣ ಅನ್ನುವುದು ತಪ್ಪು. ಅವರು ಗೋಡೆಯೊಂದರ ಬರೇ ಎರಡು ಇಟ್ಟಿಗೆಗಳು ಮಾತ್ರ. ಇಂಥ ಸಾವಿರಾರು ಇಟ್ಟಿಗೆಗಳನ್ನು ಬಳಸಿ ವ್ಯವಸ್ಥೆಯು ಸುಳ್ಳಿನ ದೊಡ್ಡದೊಂದು ಬಂಗಲೆಯನ್ನೇ ಕಟ್ಟಿಬಿಟ್ಟಿದೆ. ಉಭಯ ರಾಷ್ಟ್ರಗಳ ಮಧ್ಯೆ ಸಂಬಂಧ ಬಿಗಡಾಯಿಸುವುದಕ್ಕೆ, ಸ್ಫೋಟ ಕೃತ್ಯ ಗಳನ್ನು ನಡೆಸುವುದಕ್ಕೆ, ಪ್ರತಿಭಟನೆ, ಮುರ್ದಾಬಾದ್ ಘೋಷಿಸುವುದಕ್ಕೆ.. ಸಿದ್ಧರಿರುವ ವ್ಯಕ್ತಿಗಳನ್ನು ಆ ಬಂಗಲೆಯೊಳಗೆ ತಯಾರಿಸಲಾಗುತ್ತದೆ. ಕೊನೆಗೆ ಬಂಗಲೆಯಿಂದ ಕೆಲವೊಂದು ‘ಇಟ್ಟಿಗೆಗಳು’ ಹೊರಬಿದ್ದು ಅನಿವಾರ್ಯ ಸಂದರ್ಭಗಳಲ್ಲಿ ಸದ್ದು ಮಾಡುತ್ತವೆ. ಆ ಸದ್ದು ಉಭಯ ರಾಷ್ಟ್ರಗಳ ಸಂಬಂಧವನ್ನು ಉದ್ವಿಘ್ನಗೊಳಿಸುತ್ತವೆ. ಕೊನೆಗೆ ಆ ಇಟ್ಟಿಗೆಗಳನ್ನು ಆ ರಾಷ್ಟ್ರ ಈ ರಾಷ್ಟ್ರಕ್ಕೆ ಎಸೆಯುವುದೂ ಈ ರಾಷ್ಟ್ರ ಆ ರಾಷ್ಟ್ರಕ್ಕೆ ಎಸೆಯುವುದೂ ನಡೆದು ಅಂತಿಮವಾಗಿ, ಇಟ್ಟಿಗೆಗಳು ಒಂಟಿಯಾಗಿ ಬಿಡುತ್ತವೆ. ಕೊನೆಗೆ ಯಾವುದೋ ಒಂದು ಹಂತದಲ್ಲಿ ಅವು ಕೋಮಾ ಸ್ಥಿತಿಗೆ ತಲುಪಿಬಿಡುತ್ತವೆ.
ಏನೇ ಆಗಲಿ, ಸರಬ್ಜಿತ್‍ನಂಥ ಸ್ಥಿತಿ ಇನ್ನಾರಿಗೂ ಬರದಂತೆ ಆಗಬೇಕಾದರೆ ಉಭಯ ದೇಶಗಳ ರಾಜಕೀಯ ಆಲೋಚನೆಗಳು ಶುದ್ಧವಾಗಬೇಕು. ಉದ್ವಿಘ್ನ ವಾತಾವರಣವನ್ನು ಸೃಷ್ಟಿಸಿ ಲಾಭ ದೋಚುವ ರಾಜಕೀಯವು ಅಂತ್ಯ ಕಾಣಬೇಕು. ಇಲ್ಲದಿದ್ದರೆ ಅಫ್ತಾಬ್, ಮುದಸ್ಸರ್‍ನಂಥ ಇಟ್ಟಿಗೆಗಳು, ಸರಬ್ಜಿತ್‍ನಂಥ ಕೈದಿಗಳು ಮತ್ತು ಕಣ್ಣೀರಿಳಿಸುವ ಪತ್ನಿ, ಮಕ್ಕಳು ಸದಾ ಸೃಷ್ಟಿಯಾಗುತ್ತಲೇ ಇರುತ್ತಾರೆ.