ನೇತ್ರಾವತಿಯಲ್ಲಿ ತಾಯಿ, ಮಕ್ಕಳ ಆತ್ಮಹತ್ಯೆ |
ಆತ್ಮಹತ್ಯೆಯನ್ನು ತೀರಾ ಒಳಪುಟದ ನಿಧನ ಕಾಲಮ್‍ನ ಬಳಿ ಪ್ರಕಟಿಸಿ ಸುಮ್ಮನಾಗುತ್ತವೆ. ಒಂದು ವೇಳೆ ಆತ್ಮಹತ್ಯೆಗೆ ಬ್ರೇಕಿಂಗ್ ನ್ಯೂಸ್‍ನ ಗೌರವ ಸಿಗಬೇಕೆಂದರೆ ಜಿಯಾ ಖಾನ್‍ಳಂಥ ಸೆಲೆಬ್ರಿಟಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಕು. ದುರಂತ ಏನೆಂದರೆ, ಆತ್ಮಹತ್ಯೆಯ ಕುರಿತಂತೆ ಇವತ್ತು ಸಾರ್ವಜನಿಕವಾಗಿ ನೆಲೆಗೊಂಡಿರುವ ಈ ನಿರ್ಲಕ್ಷ್ಯದ ಮನಃಸ್ಥಿತಿಯೇ ಒಂದು ಹಂತದ ವರೆಗೆ ಆತ್ಮಹತ್ಯೆಗೆ ಪ್ರಚೋದಕವಾಗುತ್ತಿದೆ.
1. ತನ್ನಿಬ್ಬರು ಮಕ್ಕಳೊಂದಿಗೆ ತಾಯಿಯೋರ್ವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2. 74 ವರ್ಷದ ನಿವೃತ್ತ ಶಿಕ್ಷಕ ಮತ್ತು ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಐವರು ಪುತ್ರಿಯರು ಮತ್ತು ಓರ್ವ ಪುತ್ರ ಇದ್ದಾರೆ.
3. ತಮ್ಮ ಶವಸಂಸ್ಕಾರಕ್ಕಾಗಿ ಎಲ್ಲಾ ಏರ್ಪಾಟುಗಳನ್ನು ಮಾಡಿಟ್ಟು ವೃದ್ಧ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಏಕೈಕ ಮಗನು ತಮ್ಮನ್ನು ನಿರ್ಲಕ್ಷಿಸಿದುದೇ ಇದಕ್ಕೆ ಕಾರಣ..
ಕಳೆದೊಂದು ವಾರದಲ್ಲಿ ಪ್ರಕಟವಾದ ಮಾಧ್ಯಮ ಸುದ್ದಿಗಳಿವು. ಇಂಥ ಸುದ್ದಿಗಳು ಇವತ್ತು ಎಷ್ಟು ಸಾಮಾನ್ಯ ಅಂದರೆ, ಇವಕ್ಕೆ ಯಾವ ಊರಿನ ಹೆಸರು ಕೊಟ್ಟರೂ ಅಚ್ಚರಿ ಆಗುವುದಿಲ್ಲ. ಯಾಕೆಂದರೆ ಎಲ್ಲ ಊರುಗಳಲ್ಲೂ ಇವತ್ತು ಆತ್ಮಹತ್ಯೆಗಳು ಮಾಮೂಲಿ ಅನ್ನಿಸತೊಡಗಿವೆ. ಮಾತ್ರವಲ್ಲ, ಆ ಕುರಿತಂತೆ ಹುಟ್ಟಿಕೊಳ್ಳುವ ಹೆಚ್ಚಿನ ಚರ್ಚೆಗಳು ಆತ್ಮಹತ್ಯೆ ಮಾಡಿಕೊಂಡವರನ್ನೇ ಅಪರಾಧಿಗಳೆಂದು ಬಿಂಬಿಸಿ ಕೊನೆಗೊಳ್ಳುತ್ತಲೂ ಇವೆ. ನಿಜವಾಗಿ ಅತ್ಯಾಚಾರದ ಕುರಿತಂತೆ ನಾವೆಷ್ಟು ಗಂಭೀರವಾಗುತ್ತೇವೋ ಆತ್ಮಹತ್ಯೆಯ ಕುರಿತಂತೆಯೂ ಅಷ್ಟೇ ಗಂಭೀರತೆ ಪ್ರದರ್ಶಿಸಬೇಕಾಗಿದೆ. ಅತ್ಯಾಚಾರಕ್ಕೆ ಹತ್ತು-ಹಲವು ಕಾರಣಗಳು ಇರುವಂತೆಯೇ ಆತ್ಮಹತ್ಯೆಗೂ ಅಂಥ ಕಾರಣಗಳು ಇವೆ. ಆದ್ದರಿಂದ ಆತ್ಮಹತ್ಯೆಗೈದವರನ್ನು ನರಕಕ್ಕೋ ಸ್ವರ್ಗಕ್ಕೋ ಅಟ್ಟಿ ಸುಮ್ಮನಾಗುವುದು, ಈ ಎಲ್ಲ ಕಾರಣಗಳನ್ನೂ ನಿರ್ಲಕ್ಷಿಸಿದಂತಾಗುತ್ತದೆ.
ಈ ಜಗತ್ತಿನಲ್ಲಿ ಯಾರೂ ಸಂತಸವನ್ನು ತಡಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಂಡದ್ದಿಲ್ಲ. ನದಿಗೆ ಹಾರುವ ತಾಯಿ, ನೇಣು ಹಾಕಿಕೊಳ್ಳುವ ಯುವತಿ, ಬದುಕು ಕೊನೆಗೊಳಿಸುವ ವೃದ್ಧ ಹೆತ್ತವರು.. ಎಲ್ಲರಲ್ಲೂ ಒಂದೊಂದು ಬಗೆಯ ಕಾರಣಗಳಿವೆ. ಇಷ್ಟಕ್ಕೂ, ಯುವತಿ ಧರಿಸಿದ ಉಡುಪನ್ನು ತೋರಿಸಿ ಅತ್ಯಾಚಾರವನ್ನು ಸಮರ್ಥಿಸಿದರೆ ಏನಾದೀತು? ಯುವತಿ ರಾತ್ರಿ ಒಂಟಿಯಾಗಿ ಹೋದುದನ್ನೇ ಅತ್ಯಾಚಾರಕ್ಕೆ ಕಾರಣವೆಂದು ಹೇಳಿ ಆಕೆಯನ್ನೇ ಅಪರಾಧಿಯಾಗಿ ಬಿಂಬಿಸುವ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ. ನಿಜವಾಗಿ, ಆತ್ಮಹತ್ಯೆಯನ್ನೇ ಅಪರಾಧಿಯೆಂದು ದೂರಿದಂತೆಯೇ ಇದು. ಅಸಮರ್ಪಕ ಬಟ್ಟೆ ಧರಿಸುವುದು, ಒಂಟಿಯಾಗಿ ಹೋಗುವುದೆಲ್ಲ ಅತ್ಯಾಚಾರಕ್ಕಿರುವ ಹಲವು ದೊಡ್ಡ ಕಾರಣಗಳ ಪೈಕಿ ಸಣ್ಣದೊಂದು ಅಂಶವೇ ಹೊರತು ಅವೇ ಮುಖ್ಯ ಕಾರಣಗಳಲ್ಲ. ಹಾಗೆಯೇ ಆತ್ಮಹತ್ಯೆ ಕೂಡ. ದಿನನಿತ್ಯದ ಬದುಕಿನಲ್ಲಿ ಆತ್ಮಹತ್ಯೆಗೆ ನೂರಾರು ಅಂಶಗಳು ಪ್ರಚೋದಕವಾಗಿರುತ್ತವೆ. ಆ ಹಂತದಲ್ಲಿ ಸರಿಯೋ ತಪ್ಪೋ ಎಂದು ಆಲೋಚಿಸುವುದಕ್ಕೂ ಅವಕಾಶವಿಲ್ಲದಷ್ಟು ಆ ಕಾರಣಗಳು ಬಲವಾಗಿರುತ್ತವೆ. ಆತ್ಮಹತ್ಯೆಯನ್ನು ತಪ್ಪು ಅನ್ನುವುದು ಸುಲಭ. ಆದರೆ ಅಂಥದ್ದೊಂದು ಪರಿಸ್ಥಿತಿಯನ್ನು ಓರ್ವ ತಾಯಿಗೋ ಹೆತ್ತವರಿಗೋ ತಂದಿಟ್ಟವರ ಬಗ್ಗೆ ಈ ಸಮಾಜದ ಅಭಿಪ್ರಾಯವೇನು? ಆತ್ಮಹತ್ಯೆಯನ್ನೇ ಅಪರಾಧಿ ಎಂದು ಬಿಂಬಿಸಿದ ಕೂಡಲೇ ಅದಕ್ಕೆ ಪ್ರಚೋದನೆ ಕೊಟ್ಟವರು ಅರ್ಧದಷ್ಟು ಗೆದ್ದಿರುತ್ತಾರೆ. ಆತ್ಮಹತ್ಯೆಗಿರುವ ಶಿಕ್ಷೆ, ಪಾಪಗಳಲ್ಲಿ ಅದಕ್ಕಿರುವ ಸ್ಥಾನ-ಮಾನಗಳ ಸುತ್ತ ಚರ್ಚೆ ಸಾಗಿದಂತೆಯೇ ಅವರ ಇಮೇಜು ಉತ್ತಮಗೊಳ್ಳುತ್ತಾ ಹೋಗು ತ್ತದೆ. ಆತ್ಮಹತ್ಯೆಯಲ್ಲಿ ತಮ್ಮ ಪಾತ್ರವು ಚರ್ಚೆಯಾಗದಂತೆ ನೋಡಿಕೊಳ್ಳುವುದಕ್ಕೆ ಅವರಿಗೆ ಅಂಥದ್ದೊಂದು ಚರ್ಚೆಯ ಅಗತ್ಯವೂ ಇರುತ್ತದೆ. ನಿಧಾನವಾಗಿ ಅವರು ತಮ್ಮನ್ನು ಪರಮ ಪ್ರಾಮಾಣಿಕರಂತೆ ಮತ್ತು ಆತ್ಮಹತ್ಯೆ ಮಾಡಿದವರನ್ನೇ ಪರಮ ಪಾಪಿಗಳಂತೆ ಬಿಂಬಿಸಿ ಬದುಕುವುದಕ್ಕೆ ಈ ಚರ್ಚೆಗಳು ಅವಕಾಶ ಮಾಡಿಕೊಡುತ್ತವೆ.
ಅಂದಹಾಗೆ, ಇಂಥದ್ದೊಂದು ಅವಕಾಶ ಆತ್ಮಹತ್ಯೆಗೆ ಪ್ರಚೋದಿಸಿದವರಿಗೆ ಮಾತ್ರ ಇರುವುದಲ್ಲ. ಅತ್ಯಾಚಾರಿ ಮತ್ತು ಅಂಥ ಮನಃಸ್ಥಿತಿಯಿರುವವರೂ ಇಂಥ ಚರ್ಚೆಗಳಿಂದ ಲಾಭ ಪಡಕೊಳ್ಳುವುದಿದೆ. ಅತ್ಯಾಚಾರಕ್ಕೀಡಾದ ಯುವತಿಯ ಉಡುಪು, ವರ್ತನೆಗಳನ್ನೇ ಪ್ರಮುಖ ಅಪರಾಧದಂತೆ ಬಿಂಬಿಸಿ ನಡೆಯುವ ಚರ್ಚೆಗಳು ನಿಧಾನವಾಗಿ 'ಅತ್ಯಾಚಾರ'ವೆಂಬ ಕ್ರೌರ್ಯದ ತೂಕವನ್ನು ಕಡಿಮೆಗೊಳಿಸುತ್ತಾ ಸಾಗುತ್ತದೆ. ನಿಜವಾಗಿ, ಇವತ್ತು ಅಪರಾಧ ಪ್ರವೃತ್ತಿಗಳು ಹೆಚ್ಚಾಗುವುದಕ್ಕೆ ಕಾರಣ, ಸಾರ್ವಜನಿಕವಾಗಿ ನೆಲೆಗೊಂಡಿರುವ ಇಂಥ ಮನಃಸ್ಥಿತಿಗಳೇ. ಆದ್ದರಿಂದ ಆತ್ಮಹತ್ಯೆ ಮತ್ತು ಅತ್ಯಾಚಾರಗಳ ಸುತ್ತ ಏರ್ಪಡುವ ಚರ್ಚೆಗಳಿಂದ ಅಪರಾಧಿಗಳಿಗೆ ಲಾಭವಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯ ಇದೆ. ಆತ್ಮಹತ್ಯೆ ಸರಿಯೋ ತಪ್ಪೋ ಅನ್ನುವುದಕ್ಕಿಂತ ವೃದ್ಧರನ್ನು, ತಾಯಂದಿರನ್ನು ಅಂಥ ಕೃತ್ಯಕ್ಕೆ ದೂಡುವ ಪಾಪಿಗಳ ಸುತ್ತ ಗಂಭೀರ ಚರ್ಚೆಗಳು ನಡೆಯಬೇಕಿದೆ. ಒಂದು ಮನೆಯ ಸೊಸೆ ಆತ್ಮಹತ್ಯೆ ಮಾಡಿ ಕೊಳ್ಳುವುದೆಂದರೆ, ಅದನ್ನು ಆ ಮನೆಗೆ ಮಾತ್ರ ಸೀಮಿತಗೊಳಿಸಿ ನೋಡಬೇಕಾದ ಅಗತ್ಯವಿಲ್ಲ. ಆ ಸೊಸೆಗಿಂತ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿರುವ ಆದರೆ ಆತ್ಮಹತ್ಯೆಗೆ ಧೈರ್ಯವಿಲ್ಲದ ಅಸಂಖ್ಯ ಸೊಸೆಯಂದಿರ ಬಗ್ಗೆ ಆಲೋಚಿಸುವುದಕ್ಕೆ ಅಂಥ ಪ್ರಕರಣಗಳು ಪ್ರಚೋದಕವಾಗಬೇಕು. ಆತ್ಮಹತ್ಯೆಗೆ ಪ್ರಚೋದಕವಾಗುವ ಶೋಷಕರ ಬಗ್ಗೆ ಅಥವಾ ಅತ್ಯಾಚಾರಿಗಳ ಕ್ರೂರ ಮನಃಸ್ಥಿತಿಯ ಬಗ್ಗೆ ಒತ್ತು ಕೊಟ್ಟು ಮಾತಾಡದೇ ಆತ್ಮಹತ್ಯೆಯನ್ನು ಮಹಾ ಪಾಪವೆಂದೋ ಉಡುಪನ್ನು ಮಹಾ ಅಪರಾಧಿಯೆಂದೋ ಸಾರುವುದು ಅಂತಿಮವಾಗಿ ಶೋಷಕರಿಗೆ ಸಮಾಧಾನ ತಂದುಕೊಡಬಲ್ಲುದೇ ಹೊರತು ಅವರಲ್ಲಿ ಪರಿವರ್ತನೆಯನ್ನಲ್ಲ. ಆದ್ದರಿಂದ ಆತ್ಮಹತ್ಯೆ, ಅತ್ಯಾಚಾರಗಳ ಸುತ್ತ ನಡೆಯುವ ನಮ್ಮ ಚರ್ಚೆಗಳೆಲ್ಲ ಶೋಷಿತರಲ್ಲಿ ಧೈರ್ಯ ತುಂಬುವಂತಿರಲಿ. ಶೋಷಕರಲ್ಲಿ ಭೀತಿ ಮೂಡಿಸುವಂತಿರಲಿ.