Thursday, 29 January 2015

ಬಿಳಿ ಜಗತ್ತಿನ ನೈನಾ ಪಾಮ್‍ರ ಎದುರು ಸುದ್ದಿಯಾಗದ 'ಮಾಲಿ'ಗಳು..

    ಚಾರ್ಲಿ ಹೆಬ್ಡೋ, ಒಬಾಮ ಭಾರತ ಭೇಟಿ, ದಾವೋಸ್ ಆರ್ಥಿಕ ಶೃಂಗಸಭೆ, ಆಸ್ಟ್ರೇಲಿಯನ್ ಓಪನ್ ಟೆನ್ನಿಸ್‍ನಿಂದ ಫೆಡರರ್ ನಿರ್ಗಮನ.. ಮುಂತಾದ ದೊಡ್ಡ ಸುದ್ದಿಗಳ ನಡುವೆ ಸಿಲುಕಿಕೊಂಡು ನಜ್ಜುಗುಜ್ಜಾದ ರೀತಿಯಲ್ಲಿ ಮಾಲಿ ಎಂಬ ರಾಷ್ಟ್ರದ ಕುರಿತಾದ ಸಣ್ಣ ಸುದ್ದಿಯೊಂದು ಕಳೆದ ವಾರ ಆಯ್ದ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಆಫ್ರಿಕನ್ ರಾಷ್ಟ್ರವಾದ ಮಾಲಿಯು ಎಬೋಲ ರೋಗದಿಂದ ಮುಕ್ತವಾಗಿದೆ ಎಂಬುದೇ ಆ ಸುದ್ದಿ. ಒಂದು ರಾಷ್ಟ್ರಕ್ಕೆ ಎಬೋಲ ಮುಕ್ತ ಸರ್ಟಿಫಿಕೇಟ್ ಸಿಗಬೇಕಾದರೆ ಅದು ಕೆಲವು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಬೇಕಾಗುತ್ತದೆ. ಸತತ 42 ದಿನಗಳ ವರೆಗೆ ಯಾವುದೇ ಹೊಸ ವೈರಸ್ ಪತ್ತೆಯಾಗಬಾರದೆಂಬುದು ಅವುಗಳಲ್ಲಿ ಒಂದು. ನಿಜವಾಗಿ, 2013 ಡಿ. 26ರಿಂದ ಈವರೆಗೆ 8623 ಮಂದಿ ಎಬೋಲಕ್ಕೆ ಬಲಿಯಾಗಿರುವಾಗ ಮತ್ತು ಈಗಲೂ 21,759 ಮಂದಿ ಎಬೋಲ ಪೀಡಿತರಾಗಿ ಸಂಕಟಪಡುತ್ತಿರುವಾಗ, ಮಾಲಿಯ ಸಾಧನೆ ಸಣ್ಣದಲ್ಲ. ಎಬೋಲಕ್ಕೆ ಸಿಲುಕಿ ಅಸ್ತವ್ಯಸ್ತಗೊಂಡ ಗಿನಿಯ ಎಂಬ ದೇಶದೊಂದಿಗೆ ಮಾಲಿ 80 ಕಿ.ವಿೂ.ಗಳಷ್ಟು ಉದ್ದಕ್ಕೆ ಗಡಿಯನ್ನು ಹಂಚಿಕೊಂಡಿದೆ. ಅಮೇರಿಕ, ಬ್ರಿಟನ್, ಫ್ರಾನ್ಸ್ ಗಳಿಗೆ ಹೋಲಿಸಿದರೆ ಆರ್ಥಿಕವಾಗಿಯೂ ತಾಂತ್ರಿಕವಾಗಿಯೂ ಏನೇನೂ ಅಲ್ಲದ ರಾಷ್ಟ್ರವೊಂದು ಮಾರಣಾಂತಿಕ ಕಾಯಿಲೆಯ ವಿರುದ್ಧ ಸಾಧಿಸಿದ ಈ ವಿಜಯವು ದೊಡ್ಡ ಸುದ್ದಿಗೆ ಖಂಡಿತ ಅರ್ಹವಾದದ್ದು. ಒಂದು ವೇಳೆ, ಇಂಥದ್ದೊಂದು ಸಾಧನೆಯು ಮುಂದುವರಿದ ರಾಷ್ಟ್ರವೊಂದರಲ್ಲಿ ಆಗಿರುತ್ತಿದ್ದರೆ ಅದು ಪಡೆಯಬಹುದಾದ ಸುದ್ದಿಯ ಸ್ವರೂಪ ಹೇಗಿರುತ್ತಿತ್ತು? ಥಾಮಸ್ ಎರಿಕ್ ಡಂಕನ್ ಎಂಬ ಎಬೋಲ ಪೀಡಿತ ವ್ಯಕ್ತಿ ಅಮೇರಿಕದಲ್ಲಿ ಸಾವಿಗೀಡಾಗುವವರೆಗೆ ಎಬೋಲವು ಒಬಾಮರಿಗೆ ಅಥವಾ ಅಲ್ಲಿನ ಮಾಧ್ಯಮಗಳಿಗೆ ಗಂಭೀರ ಸುದ್ದಿಯೇ ಆಗಿರಲಿಲ್ಲ. ಡಂಕನ್‍ನ ಸಾವು ಎಬೋಲವನ್ನು ಜಾಗತಿಕವಾಗಿ ಸುದ್ದಿಯ ಕೇಂದ್ರವಾಗಿಸಿತು. ಎಲ್ಲಿಯ ವರೆಗೆಂದರೆ, ಡಂಕನ್‍ರನ್ನು ಉಪಚರಿಸಿದ ದಾದಿ ನೈನಾ ಪಾಮ್‍ಳನ್ನು ಎಬೋಲ ಬಾಧಿಸಿದಾಗ ಇಡೀ ಅಮೇರಿಕನ್ ಸಮಾಜವೇ ಎಬೋಲದ ಬಗ್ಗೆ ಮಾತನಾಡತೊಡಗಿತು. ಅಂತಿಮವಾಗಿ ನೈನಾ ಪಾಮ್ ಎಬೋಲ ಮುಕ್ತವಾದದ್ದು ಮತ್ತು ಸ್ವತಃ ಒಬಾಮರೇ ಆಕೆಯನ್ನು ಆಲಂಗಿಸಿ ಸ್ವಾಗತಿಸಿದ್ದು ಜಾಗತಿಕ ಸುದ್ದಿಯಾಯಿತು. ಅಷ್ಟಕ್ಕೂ, ಎಬೋಲದ ಅಪಾಯವನ್ನು ಪರಿಗಣಿಸಿದರೆ ಇದರಲ್ಲಿ ಉತ್ಪ್ರೇಕ್ಷೆಯೇನೂ ಕಾಣಿಸುವುದಿಲ್ಲ. ಎಬೋಲದ ಕುರಿತು ಸಾರ್ವಜನಿಕ ಜಾಗೃತಿಯನ್ನು ಮೂಡಿಸುವುದಕ್ಕೆ ಇಂಥ ಬೆಳವಣಿಗೆಗಳು ಖಂಡಿತ ಸಹಕಾರಿ. ಆದರೆ ಓರ್ವ ಡಂಕನ್‍ನ ಬಗ್ಗೆ ಅಥವಾ ಓರ್ವಳು ದಾದಿಯ ಕುರಿತು ಮಾಧ್ಯಮಗಳು ತೋರಿದ ಕಾಳಜಿಯ ಕಾಲಂಶವನ್ನಾದರೂ ಎಬೋಲ ಪೀಡಿತ ಆಫ್ರಿಕದ ಬಗ್ಗೆ ತೋರಬಹುದಿತ್ತಲ್ಲವೇ? ಅಲ್ಲಿ ಸಾವಿರಾರು ಡಂಕನ್‍ಗಳು ಮತ್ತು ನೈನಾ ಪಾಮ್‍ಗಳು ಎಬೋಲ ಪೀಡಿತರಾಗಿದ್ದೂ ಅವು ಸುದ್ದಿಯ ಕೇಂದ್ರಗಳಾಗದೆ ಹೋದುದು ಯಾತಕ್ಕಾಗಿ? ಮಾಲಿಗಿಂತ ಮೊದಲು ನೈಜೀರಿಯಾ ಮತ್ತು ಸೆನೆಗಲ್‍ಗಳು ಎಬೋಲ ಮುಕ್ತವಾಗಿದ್ದುವು. ಎಬೋಲದಿಂದ ತತ್ತರಿಸಿರುವ ಗಿನಿಯ, ಸಿಯೋರಾ ಲಿಯೋನ್, ಲೈಬೀರಿಯಾ.. ಮುಂತಾದ ರಾಷ್ಟ್ರಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿರುವ ಈ ಬಡ ರಾಷ್ಟ್ರಗಳು ರೋಗ ಮುಕ್ತತೆಗಾಗಿ ಏನೇನೆಲ್ಲ ಮಾಡಿದುವು ಎಂಬ ಬಗ್ಗೆ ಎಲ್ಲೂ ಮಾಹಿತಿಗಳೇ ಇಲ್ಲವೇಕೆ? ನೈನಾ ಪಾಮ್‍ರನ್ನು ಒಬಾಮ ಅಪ್ಪಿಕೊಂಡಂತೆ ಮಾಲಿಯ ಅಧ್ಯಕ್ಷರು ರೋಗಿಗಳ ಬಗ್ಗೆ ಹೇಗೆ ನಡೆದುಕೊಂಡರು ಮತ್ತು ಎಷ್ಟಂಶ ಕ್ರಿಯಾಶೀಲರಾಗಿದ್ದರು ಎಂಬುದೆಲ್ಲ ಸುದ್ದಿಯೇ ಆಗದಿದ್ದುದು ಯಾವ ಕಾರಣದಿಂದ?
 2013 ಡಿ. 26ರಂದು ಗಿನಿಯ ಎಂಬ ಕಪ್ಪು ರಾಷ್ಟ್ರದ ಮೆಲಿಯಂಡು ಗ್ರಾಮದಲ್ಲಿ 2 ವರ್ಷದ ಮಗುವನ್ನು ಬಲಿ ಪಡೆಯುವುದರೊಂದಿಗೆ ಎಬೋಲವು ನಾಗರಿಕ ಜಗತ್ತಿಗೆ ಪ್ರವೇಶಿಸಿತು. ನಿಜವಾಗಿ, ಮೆಲಿಯಂಡು ಎಂಬುದು ಕಾಡುಗಳಿಂದ ಆವೃತ್ತವಾದ ಪ್ರದೇಶ. ಆಫ್ರಿಕನ್ ಖಂಡದ ಈ ರಾಷ್ಟ್ರದಲ್ಲಿ ಹೇರಳವಾದ ಗಣಿಸಂಪತ್ತು ಇದೆ. ಬೆಲೆಬಾಳುವ ಮರಮುಟ್ಟುಗಳಿವೆ. ಈ ಎರಡು ಸಂಪತ್ತುಗಳು ಗಿನಿಯವನ್ನು ರಾಜಕೀಯ ಅಸ್ಥಿರತೆಗೆ ತಳ್ಳಿದುವು. ನಾಗರಿಕ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟವು. ಬಹುರಾಷ್ಟ್ರೀಯ ಕಂಪೆನಿಗಳು ಇಲ್ಲಿನ ಪ್ರಾಕೃತಿಕ ಸಂಪತ್ತಿನ ಮೇಲೆ ಯಾವ ರೀತಿಯಲ್ಲಿ ಮುಗಿಬಿದ್ದುವೆಂದರೆ, ಅಲ್ಲಿನ ಭೌಗೋಳಿಕ ರಚನೆಯೇ ಬದಲಾದುವು. ಟಿಂಬರ್ ಮತ್ತು ಮೈನಿಂಗ್ ಕಂಪೆನಿಗಳು ಗಿನಿಯದ ಕಾಡು ಪ್ರದೇಶವನ್ನು ಬಂಜರು ಮಾಡತೊಡಗಿದುವು. ಇದರಿಂದಾಗಿ ಕಾಡುಪ್ರಾಣಿಗಳು ನೆಲೆ ಕಳಕೊಂಡವಲ್ಲದೇ ಅವು ನಾಗರಿಕ ಜಗತ್ತನ್ನು ಪ್ರವೇಶಿಸಿದುವು. ಮುಖ್ಯವಾಗಿ, ರೋಗಾಣುಗಳನ್ನು ಹೊತ್ತೊಯ್ಯಬಲ್ಲಂತಹ ಬಾವಲಿಗಳು (Fruit bats) ಜನವಾಸ ಪ್ರದೇಶಕ್ಕೆ ನುಗ್ಗಿದುವು. ಅಲ್ಲದೇ ಮೊಲ ಮುಂತಾದ ಕಾಡು ಪ್ರಾಣಿಗಳು ನೆಲೆ ಕಳೆದುಕೊಂಡು ಬೇಟೆಗಾರರಿಗೆ ಸುಲಭ ತುತ್ತಾದುವು. ಹೀಗೆ ಕಾಡಿಗೆ ಸೀಮಿತವಾಗಿದ್ದ ಅಥವಾ ಪ್ರಾಣಿಗಳ ಮಧ್ಯೆ ಹರಡಿಕೊಂಡಿದ್ದ ರೋಗವೊಂದು ಮನುಷ್ಯನ ಅತಿಕ್ರಮಣದಿಂದಾಗಿ ನಾಡಿಗೆ ಕಾಲಿಟ್ಟಿತು. ವೈರಸ್ ತಗುಲಿಸಿಕೊಂಡ ಕಾಡು ಪ್ರಾಣಿಗಳನ್ನು ಬೇಟೆಯಾಡಿ ತಿಂದ ಮೆಲಿಯಂಡು ಪ್ರದೇಶದ ಮಂದಿ ಈ ರೋಗದ ಮೊದಲ ಗ್ರಾಹಕರಾದರು.
 ದುರಂತ ಏನೆಂದರೆ, ಆಫ್ರಿಕನ್ ಖಂಡದ ಬಡರಾಷ್ಟ್ರಗಳ ವಿಫುಲ ಪ್ರಾಕೃತಿಕ ಸಂಪತ್ತನ್ನು ಮುಗಿಬಿದ್ದು ಕೊಳ್ಳೆ ಹೊಡೆಯುತ್ತಿರುವ ಯಾವ ರಾಷ್ಟ್ರಗಳೂ ಇವತ್ತು ಎಬೋಲದ ಬಗ್ಗೆ ಮಾತಾಡುತ್ತಿಲ್ಲ. ಅಲ್ಲಿನ ಪ್ರಾಕೃತಿಕ ಸಂಪತ್ತಿಗೆ ಬದಲಾಗಿ ಎಬೋಲವನ್ನು ಉಡುಗೊರೆಯಾಗಿ ಕೊಟ್ಟ ಅವುಗಳು ಇವತ್ತು ಎಬೋಲಕ್ಕೆ ಮದ್ದು ಹುಡುಕುವ ಮತ್ತು ಆ ಮೂಲಕ ಮತ್ತೆ ಅವೇ ರಾಷ್ಟ್ರಗಳಿಂದ ದುಡ್ಡು ದೋಚುವ ಉಮೇದಿನಲ್ಲಿವೆ. ಏಡ್ಸನ್ನು ಲಾಭದಾಯಕ ಉದ್ಯಮವಾಗಿ ಮಾಡಿಕೊಂಡಿದ್ದೂ ಇವೇ
ರಾಷ್ಟ್ರಗಳು. ಬಲಾಢ್ಯ ರಾಷ್ಟ್ರಗಳು ತಮ್ಮ ಲ್ಯಾಬೋರೇಟರಿಗಳಲ್ಲಿ ಏಡ್ಸ್ ವೈರಸನ್ನು ಸೃಷ್ಟಿಸಿ ಅದನ್ನು ಆಫ್ರಿಕನ್ ರಾಷ್ಟ್ರಗಳ ಮೇಲೆ ಪ್ರಯೋಗಿಸಿವೆ ಎಂಬ ವಾದದಲ್ಲಿ ನಂಬಿಕೆ ಇಟ್ಟವರು ಆಫ್ರಿಕದಲ್ಲಿ ಈಗಲೂ ಇದ್ದಾರೆ. ಆದ್ದರಿಂದಲೇ, ಎಬೋಲಕ್ಕೆ ಬಲಾಢ್ಯ ರಾಷ್ಟ್ರಗಳೇ ಹೊಣೆ ಎಂದು ಆರೋಪಿಸಿ ಆ ಖಂಡದಲ್ಲಿ ಪ್ರತಿಭಟನೆಗಳು ನಡೆದದ್ದು, ಪಾಶ್ಚಾತ್ಯ ರಾಷ್ಟ್ರಗಳ ಲ್ಯಾಬೋರೇಟರಿಯಲ್ಲಿ ಎಬೋಲವನ್ನು ಹುಟ್ಟು ಹಾಕಲಾಗಿದೆ ಎಂದವರು ದೂರಿದ್ದರು. ಅಂದಹಾಗೆ, ಕಪ್ಪು ಮನುಷ್ಯರು ಈ ಭೂಮಿಯಲ್ಲಿ ಬಿಳಿಯರ ವಿವಿಧ ಬಗೆಯ ಪ್ರಯೋಗಗಳಿಗೆ ಬಲಿಯಾಗುತ್ತಲೇ ಬಂದಿದ್ದಾರೆ. ಏಡ್ಸ್ ಮತ್ತು ಎಬೋಲ ಆ ಪ್ರಯೋಗಗಳ ಆಧುನಿಕ ಮಾದರಿ ಎಂದು ಅಂದುಕೊಳ್ಳುವುದಕ್ಕೆ ಪೂರಕವಾದ ಧಾರಾಳ ಪುರಾವೆಗಳು ಚರಿತ್ರೆಯ ಉದ್ದಕ್ಕೂ ಇವೆ. ಇಂಥ ಸ್ಥಿತಿಯಲ್ಲಿ, ಆಫ್ರಿಕನ್ ಖಂಡದ ಮೇಲೆ ಎರಗಿರುವ ಏಡ್ಸ್ ಮತ್ತು ಎಬೋಲದ ಹಿಂದೆ ಗುಮಾನಿ ಪಡುವುದನ್ನು ಅಪರಾಧವಾಗಿ ಕಾಣಬೇಕಿಲ್ಲ.
 ಏನೇ ಆಗಲಿ, ಪ್ರಾಕೃತಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದ ಮನುಷ್ಯನಿಗೆ ಪ್ರಕೃತಿಯು ಎಬೋಲವನ್ನು ಉಡುಗೊರೆಯಾಗಿ ನೀಡಿದೆ ಎಂಬ ವ್ಯಾಖ್ಯಾನವನ್ನು ಒಪ್ಪಿಕೊಂಡರೂ, ಬಲಾಢ್ಯ ರಾಷ್ಟ್ರಗಳು ಅಪರಾಧ ಮುಕ್ತವಾಗುವುದಿಲ್ಲ. ಆ ಸಂಪತ್ತನ್ನು ಲೂಟಿ ಮಾಡುವಲ್ಲಿ ನೇತೃತ್ವ ವಹಿಸಿದ್ದೇ ಅಲ್ಲಿನ ಕಂಪೆನಿಗಳು. ಇಷ್ಟಿದ್ದೂ, ಎಬೋಲದ ಬಗ್ಗೆ ಅವು ತೀರಾ ನಿರ್ಲಕ್ಷ್ಯವನ್ನಷ್ಟೇ ತಾಳಿದುವು. ಐಸಿಸ್ ಮುಕ್ತ ಜಗತ್ತಿನ ಬಗ್ಗೆ ಅಮೇರಿಕ ಘೋಷಣೆ ಹೊರಡಿಸಿರುವಂತೆಯೇ  ಎಬೋಲ ಮುಕ್ತ ಆಫ್ರಿಕನ್ ಖಂಡದ ಬಗ್ಗೆ ಅಮೇರಿಕದಿಂದ ಯಾವ ನೀಲನಕ್ಷೆಯೂ ಪ್ರಕಟವಾಗಿಲ್ಲ. ಡಂಕನ್‍ರಿಗೆ ಶ್ರದ್ಧಾಂಜಲಿ ಸಲ್ಲಿಸುವಲ್ಲಿಂದ ನೈನಾ ಪಾಮ್‍ರನ್ನು ಆಲಂಗಿಸುವಲ್ಲಿಗೆ ಒಬಾಮರ ಎಬೋಲ ವಿರೋಧಿ ಹೋರಾಟವು ಕೊನೆಗೊಂಡಿತು.ಆದ್ದರಿಂದಲೇ,
ಎಬೋಲ ಮುಕ್ತ ಮಾಲಿಯು ದೊಡ್ಡ ಸುದ್ದಿಯಾಗದಿರುವುದರ ಹಿಂದೆ ಅನುಮಾನ ಮೂಡುವುದು. ಇವತ್ತು ರೋಗವೇ ಒಂದು ಬೃಹತ್ ಉದ್ಯಮವಾಗಿರುವಾಗ ಯಾವುದನ್ನೂ ಅಲ್ಲಗಳೆಯುವಂತಿಲ್ಲ.

Tuesday, 20 January 2015

ಜಯೇಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಭಜನಾ ಮಂದಿರ ಮತ್ತು ಹಿಂದೂ ಹೃದಯ ಸಂಗಮ

    ಪುತ್ತೂರಿನಲ್ಲಿ ನಡೆದ ವಿರಾಟ್ ಹಿಂದೂ ಹೃದಯ ಸಂಗಮವನ್ನು ಹೃದಯ ಜೋಡಿಸುವ ಎರಡು ಘಟನೆಗಳಿಗಾಗಿ ಅಭಿನಂದಿಸಬೇಕಾಗಿದೆ. ಈ ಕಾರ್ಯಕ್ರಮವನ್ನು ಸಂಘಟಿಸಿದವರ ಉದ್ದೇಶ ಏನೆಂಬುದು ಪ್ರಜ್ಞಾಸಿಂಗ್ ಠಾಕೂರ್‍ಳ ಬೃಹತ್ ಕಟೌಟನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದಾಗಲೇ ಜನರಿಗೆ ಮನವರಿಕೆಯಾಗಿತ್ತು. ಮಾಲೆಗಾಂವ್ ಮಸೀದಿಯ ದಫನ ಭೂಮಿಯಲ್ಲಿ ಮತ್ತು ಸಂಜೋತಾ ಎಕ್ಸ್ ಪ್ರೆಸ್‍ನಲ್ಲಿ ಬಾಂಬಿಟ್ಟ ಆರೋಪದಲ್ಲಿ ಜೈಲಲ್ಲಿರುವ ಶಂಕಿತ ಭಯೋತ್ಪಾದಕಿಯನ್ನು 'ಹಿಂದೂ ಹೃದಯ ಸಂಗಮ'ವು ಕಟೌಟ್‍ನಲ್ಲಿ ನಿಲ್ಲಿಸಿ ಗೌರವಿಸುತ್ತದೆಂದರೆ ಆ ಕಾರ್ಯಕ್ರಮವು ಹೇಗಿರಬಹುದು ಮತ್ತು ಅಲ್ಲಿನ ಭಾಷಣಗಳಲ್ಲಿ ಏನೆಲ್ಲ ತುಂಬಿರಬಹುದು ಎಂಬುದನ್ನು ಊಹಿಸುವುದು ಕಷ್ಟದ್ದೇನೂ ಆಗಿರಲಿಲ್ಲ. ತೊಗಾಡಿಯಾ ಮತ್ತು ಡಾ| ಪ್ರಭಾಕರ ಭಟ್ಟರ ಹೆಸರುಗಳು ಭಾಷಣಗಾರರ ಪಟ್ಟಿಯಲ್ಲಿ ಇರುವಾಗ ಆ ಕಾರ್ಯಕ್ರಮವು ಹಿಂದೂ ಮೌಲ್ಯಗಳ ಪ್ರತಿಪಾದನೆಗೆ ವಿೂಸಲಾಗಿರುತ್ತದೆ ಎಂದು ನಂಬುವುದಕ್ಕೆ ಸಾಧ್ಯವೂ ಇರಲಿಲ್ಲ. ಆದ್ದರಿಂದಲೇ, ಈ ಕಾರ್ಯಕ್ರಮಕ್ಕಿಂತ ಮೊದಲೇ ಪೊಲೀಸರು ಶಾಂತಿ ಸಭೆಯನ್ನು ನಡೆಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಿದ್ದರು. ಒಂದು ಬಗೆಯ ಭೀತಿ ಮತ್ತು ಸೂತಕದ ವಾತಾವರಣವು ಜಿಲ್ಲೆಯನ್ನಿಡೀ ಆವರಿಸಿಕೊಂಡಿತ್ತು. ಇದಕ್ಕೆ ಪೂರಕವಾಗಿಯೇ ಕಾರ್ಯಕ್ರಮವೂ ನಡೆಯಿತು. ವೇದಿಕೆಯಿಂದ ತೂರಿಬಂದ ಭಾಷಣಗಳು ಎಷ್ಟು ಹರಿತ ಮತ್ತು ಪ್ರಚೋದನಕಾರಿಯಾಗಿತ್ತೆಂಬುದಕ್ಕೆ ಕಾರ್ಯಕ್ರಮವನ್ನು ಆಲಿಸಿ ಹೊರಟು ಹೋದವರ ದಾಂಧಲೆಯೇ ಸಾಕ್ಷಿಯಾಗಿತ್ತು. ಆದರೂ ಎರಡು ಘಟನೆಗಳಿಗಾಗಿ ನಾವು ಈ ಸಂಗಮವನ್ನು ಸದಾ ನೆನಪಿಟ್ಟುಕೊಳ್ಳಬೇಕಾಗಿದೆ. ಕಾರ್ಯಕ್ರಮ ಜರುಗಿದ ಪ್ರದೇಶದ ವ್ಯಾಪ್ತಿಯಲ್ಲೇ ಬರುವ ಕರಾಯ ಎಂಬಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಗೋಪಾಲ ಕೃಷ್ಣ ಭಜನಾ ಮಂದಿರವಿದೆ. ಇವು ಎದುರು-ಬದುರಾಗಿ ನಿಂತಿವೆ. ಹಿಂದೂ ಹೃದಯ ಸಂಗಮದಿಂದ ಮರಳಿದವರು ಈ ಮಸೀದಿಯ ಮೇಲೆ ದಾಳಿ ನಡೆಸಿದ್ದಾರೆ. ಮಸೀದಿಯ ಒಳಹೊಕ್ಕು ದಾಂಧಲೆ ನಡೆಸಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಒಂದೇ ಒಂದು ಕಲ್ಲು ಗೋಪಾಲ ಕೃಷ್ಣ ಭಜನಾ ಮಂದಿರದ ಮೇಲೆ ಬಿದ್ದಿಲ್ಲ. ಬಹುಶಃ ‘ಹೃದಯ ಸಂಗಮ’ದ ಸಂಘಟಕರು ಮತ್ತು ದಾಂಧಲೆಕೋರರಿಗೆ ನಿಜವಾದ ಧರ್ಮಭಕ್ತರು ರವಾನಿಸಿದ ಮೊದಲ ಧರ್ಮ ಸಂದೇಶ ಇದು. ಇನ್ನೊಂದು, ವಿಶ್ವನಾಥ ಶೆಟ್ಟಿ ಮತ್ತು ಜಯೇಶ್ ಶೆಟ್ಟಿಯವರದು. ದಾಂಧಲೆಕೋರರ ಆವೇಶಕ್ಕೆ ಬೆದರಿ ಓಡಿ ಬಂದ ಮುಹಮ್ಮದ್ ಬಾವಾರಿಗೆ ವಿಶ್ವನಾಥ್ ಶೆಟ್ಟಿಯವರು ತಮ್ಮ ಮನೆಯ ಬಾಗಿಲು ತೆರೆದು ರಕ್ಷಣೆ ಒದಗಿಸಿದರು. ಅವರ ಪತ್ನಿ ಮತ್ತು ಮಕ್ಕಳನ್ನು ಜಯೇಶ್ ಶೆಟ್ಟಿಯವರು ತಮ್ಮ ಮನೆಯೊಳಗೆ ಕೂರಿಸಿದರು. ನಿಜವಾಗಿ, ವಿರಾಟ್ ಹಿಂದೂ ಹೃದಯ ಸಂಗಮದ ಪ್ರಮುಖ ಮೈಲುಗಲ್ಲುಗಳಾಗಿ ಈ ಎರಡು ಘಟನೆಗಳನ್ನು ನಾವು ಪರಿಗಣಿಸಬೇಕಾಗಿದೆ. ಒಂದು ವೇಳೆ, ಈ ಎರಡು ಘಟನೆಗಳು ನಡೆಯದೇ ಇರುತ್ತಿದ್ದರೆ ಇಡೀ ‘ಹೃದಯ ಸಂಗಮ’ವು ದಾಂಧಲೆಗೆ, ವಿಷಕಾರಿ ಭಾಷಣಗಳಿಗೆ ಮತ್ತು ಧರ್ಮ ವಿರೋಧಿ ಆವೇಶಗಳಿಗಾಗಿ ಮಾತ್ರ ಸುದ್ದಿಗೀಡಾಗುತ್ತಿತ್ತು. ಎಷ್ಟು ಮಂದಿ ಸಾವಿಗೀಡಾದರು, ವಿಧವೆ, ಅನಾಥರಾದರು, ಬಂಧನಕ್ಕೀಡಾದರು, ಎಷ್ಟು ನಷ್ಟವಾಯಿತು.. ಎಂಬಿತ್ಯಾದಿಗಳ ಲೆಕ್ಕಾಚಾರಗಳಲ್ಲಿ ಕೊನೆಗೊಳ್ಳುತ್ತಿತ್ತು. ಬಹುಶಃ, ಇಂಥದ್ದೊಂದು ಲೆಕ್ಕಾಚಾರ ಮತ್ತು ವಾತಾವರಣವು ದಾಂಧಲೆಕೋರರ ಬಯಕೆಯೂ ಆಗಿತ್ತು. ಮಸೀದಿಗೆ ಅಥವಾ ಭಜನಾ ಮಂದಿರಕ್ಕೆ ಕಲ್ಲು ಬಿದ್ದಷ್ಟೂ ಜನರಲ್ಲಿ ಅಭದ್ರತೆ ಹೆಚ್ಚಾಗುತ್ತದೆ. ರಕ್ತ ಹರಿದಷ್ಟೂ ಅನುಮಾನ ಬಲಗೊಳ್ಳುತ್ತದೆ. ದಾಂಧಲೆಗಳು ಜನರನ್ನು ಧಾರ್ಮಿಕವಾಗಿ ಧ್ರುವೀಕರಣಗೊಳಿಸುತ್ತದೆ. ಈ ಧ್ರುವೀಕರಣವು ಆ ಬಳಿಕ ಓಟುಗಳಾಗಿಯೂ ಪರಿವರ್ತನೆಗೊಳ್ಳುತ್ತಿದೆ. ಅಷ್ಟಕ್ಕೂ, ವಿರಾಟ್ ಹಿಂದೂ ಸಂಗಮದ ಹಿಂದೆ ಯಾವ ರಾಜಕೀಯ ಪಕ್ಷದ ಹಿಡಿತವಿದೆ ಎಂಬುದನ್ನು ಅರಿತುಕೊಳ್ಳುವುದಕ್ಕೆ ವಿಶೇಷ ತನಿಖೆಯೇನೂ ಬೇಕಾಗಿಲ್ಲ. ಈ ಹಿಂದಿನ ಸಮಾಜೋತ್ಸವಗಳೇ ಇದಕ್ಕೆ ಅತ್ಯುತ್ತಮ ಪುರಾವೆ. ಈ ಕಾರ್ಯಕ್ರಮಕ್ಕಿಂತ ಎರಡು ವಾರಗಳ ಮೊದಲಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದರು. ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವುದು ಅವರ ಉದ್ದೇಶವಾಗಿತ್ತು. ಈ ಉದ್ದೇಶವನ್ನು ಜಾರಿಗೊಳಿಸುವುದು ಹೇಗೆ ಎಂಬುದನ್ನು ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ತೋರಿಸಿಕೊಟ್ಟಿದ್ದರು.
ಮನಮೋಹನ್ ಸಿಂಗ್‍ರ ಕಾಂಗ್ರೆಸ್ ಸರಕಾರವನ್ನು ಪದಚ್ಯುತಗೊಳಿಸುವ ಉದ್ದೇಶದೊಂದಿಗೆ ಉತ್ತರ ಪ್ರದೇಶಕ್ಕೆ ಹೋದ ಅವರು ಅಲ್ಲಿ ‘ಮುಝಫ್ಫರ್ ನಗರ'ದ ಮೂಲಕ ತನ್ನ ಗುರಿಯನ್ನು ಮುಟ್ಟಿದ್ದರು. ಆದ್ದರಿಂದಲೇ, ಪುತ್ತೂರು ಹಿಂದೂ ಹೃದಯ ಸಂಗಮದ ಭಾಷಣಗಳು ಮತ್ತು ದಾಂಧಲೆಗಳ ಬಗ್ಗೆ ಅನುಮಾನ ಪಡಬೇಕಾಗಿದೆ. ಕರ್ನಾಟಕದಿಂದ ಕಾಂಗ್ರೆಸ್ ಸರಕಾರವನ್ನು ಪದಚ್ಯುತಗೊಳಿಸಬಲ್ಲ ಚಾರಿತ್ರ್ಯವಂತ ನಾಯಕರಾಗಲಿ, ನೀತಿವಂತ ವ್ಯಕ್ತಿಗಳಾಗಲಿ ಬಿಜೆಪಿಯಲ್ಲಿಲ್ಲ. ಕೆಡುಕು ಎಂಬ ಪದ ಯಾವೆಲ್ಲ ಮತ್ತು ಏನೆಲ್ಲ ಅಂಶಗಳನ್ನು ಧ್ವನಿಸುತ್ತದೆಯೋ ಅವೆಲ್ಲವನ್ನೂ ಇಡಿಯಾಗಿ ಧ್ವನಿಸುವ ಒಂದು ಪುಂಡರ ತಂಡವಷ್ಟೇ ರಾಜ್ಯ ಬಿಜೆಪಿಯಲ್ಲಿದೆ. ಈ ನಾಯಕರನ್ನಷ್ಟೇ ನಂಬಿಕೊಂಡು ಕಾಂಗ್ರೆಸ್ ರಹಿತ ಕರ್ನಾಟಕದ ಜಾರಿಗೆ ಇಳಿದರೆ ‘ಬಿಜೆಪಿ ರಹಿತ ಕರ್ನಾಟಕವಷ್ಟೇ’ ಸೃಷ್ಟಿಯಾದೀತು ಎಂಬ ಸತ್ಯವನ್ನು ಅಮಿತ್ ಶಾ ಈಗಾಗಲೇ ಕಂಡುಕೊಂಡಿದ್ದಾರೆ. ಆದ್ದರಿಂದ, ಈ ಕೊರತೆಯನ್ನು ತುಂಬುವುದಕ್ಕಾಗಿ ಹಿಂದೂ ಸಂಗಮದಂಥ ಕಾರ್ಯಕ್ರಮವನ್ನು ಬಳಸಿಕೊಳ್ಳುವುದು ಅಮಿತ್ ಶಾರ ಪಾಲಿಗೆ ಅನಿವಾರ್ಯವಾಗಿದೆ. ಒಂದು ರೀತಿಯಲ್ಲಿ, ಹಿಂದೂ ಸಮಾಜೋತ್ಸವಗಳು ಏರ್ಪಾಡಾಗುವುದೇ ರಾಜಕೀಯ ಲೆಕ್ಕಾಚಾರದಲ್ಲಿ. ಅಲ್ಲಿಂದ ಕೇಳಿ ಬರುವ ಭಾಷಣಗಳಲ್ಲಿ ಅತ್ಯಂತ ಹೆಚ್ಚು ಪ್ರಸ್ತಾಪವಾಗುವುದೂ ಅನ್ಯಧರ್ಮಗಳು ಮತ್ತು ಅದರ ಅನುಯಾಯಿಗಳೇ. ಪುತ್ತೂರಿನಲ್ಲಿ ನಡೆದಿರುವುದೂ ಇದೇ. ಆದರೆ ಜಯೇಶ್ ಮತ್ತು ವಿಶ್ವನಾಥ ಶೆಟ್ಟಿಯವರು ಈ ಮಾದರಿಯನ್ನು ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ. ಮುಸ್ಲಿಮರನ್ನು ಮತ್ತು ಅವರ ಆರಾಧನಾಲಯಗಳನ್ನು ಕಾಣುವಾಗ ಆವೇಶಗೊಳ್ಳುವ ‘ಹಿಂದೂ ಹೃದಯ ಸಂಗಮ'ದ ಮಾದರಿಗೆ ಪರ್ಯಾಯವಾಗಿ ಮುಸ್ಲಿಮರಿಗೆ ರಕ್ಷಣೆ ಒದಗಿಸುವ ‘ಹೃದಯ ಸಂಗಮ’ದ ಮಾದರಿಯನ್ನು ಅವರು ಪ್ರಸ್ತುತಪಡಿಸಿದ್ದಾರೆ. ಆದ್ದರಿಂದ, ಈ ಎರಡು ಮಾದರಿಗಳನ್ನು ರಾಜ್ಯದ ಮಂದಿ ಮುಖಾಮುಖಿಗೊಳಿಸಿ ವಿಶ್ಲೇಷಿಸಬೇಕಾಗಿದೆ. ಈ ರಾಜ್ಯಕ್ಕೆ ಇವತ್ತು ಅಗತ್ಯವಿರುವ ಮಾದರಿ ಯಾವುದು? ಹಿಂದೂ ಹೃದಯ ಸಂಗಮಕ್ಕೆ ಯಾವ ಮಾದರಿ ಆಧಾರವಾಗಿರಬೇಕು? ಯಾರು ಅದರ ಪ್ರತಿನಿಧಿಗಳಾಗಬೇಕು- ಜಯೇಶ್ ಶೆಟ್ಟಿ, ವಿಶ್ವನಾಥ್ ಶೆಟ್ಟಿಯೋ ಅಥವಾ ತೊಗಾಡಿಯಾ, ಪ್ರಭಾಕರ ಭಟ್ಟರೋ? ಹಾಗೆಯೇ, ಮುಸ್ಲಿಮರೂ ಈ ಸಂದರ್ಭವನ್ನು  ಸ್ವಅವಲೋಕನಕ್ಕೆ ಬಳಸಿಕೊಳ್ಳಬೇಕು. ತಮಗೆ ಮಾದರಿಯಾಗಬೇಕಾದುದು ಯಾವುದು- ಯಾವ ಹಾನಿಯೂ ತಟ್ಟದ ಗೋಪಾಲಕೃಷ್ಣ ಭಜನಾ ಮಂದಿರವೋ ಅಥವಾ..
   ನಿಜವಾಗಿ, ವಿರಾಟ್ ಹಿಂದೂ ಹೃದಯ ಸಂಗಮ ಎಂಬ ಧ್ಯೇಯವಾಕ್ಯ ಮತ್ತು ಅದು ಧ್ವನಿಸುವ ಸಂದೇಶವು ಖಂಡಿತ ಅಪಾಯಕಾರಿಯಲ್ಲ. ಹಿಂದೂ ಧರ್ಮೀಯರನ್ನು ಒಂದೆಡೆ ಸೇರಿಸುವುದು, ಹಿಂದೂ ಧರ್ಮದ ಮೌಲ್ಯಗಳ ಬಗ್ಗೆ ಚರ್ಚಿಸುವುದು, ಹೃದಯಗಳನ್ನು ಜೋಡಿಸುವುದೆಲ್ಲ ಯಾವುದೇ ಸಮಾಜದ ಪಾಲಿಗೆ ಆತಂಕಕಾರಿ ಸಂಗತಿಗಳಲ್ಲ. ಆದರೆ, ಆತಂಕವನ್ನು ಹುಟ್ಟಿಸುವುದಕ್ಕಾಗಿ ಇಂಥ ಸಭೆಗಳನ್ನು ಏರ್ಪಡಿಸಲಾಗುತ್ತಿದೆಯೋ ಎಂದು ಅನುಮಾನಿಸಲೇಬೇಕಾದ ರೀತಿಯಲ್ಲಿ ಘಟನೆಗಳು ನಡೆಯುತ್ತಿರುವುದನ್ನು ನೋಡುವಾಗ ಧ್ಯೇಯವಾಕ್ಯದ ಪ್ರಾಮಾಣಿಕತೆಯನ್ನೇ ಸಂಶಯಿಸಬೇಕಾಗುತ್ತದೆ. ಹಿಂದೂ ಹೃದಯ ಸಂಗಮದ ವೇದಿಕೆಯಿಂದ ಕೇಳಿ ಬರುವ ಮಾತುಗಳು ಮತ್ತು ಅದನ್ನು ಆಲಿಸಿದ ಮಂದಿಯ ದಾಂಧಲೆಗಳನ್ನು ಅವಲೋಕಿಸುವಾಗ ಆ ಧ್ಯೇಯವಾಕ್ಯಕ್ಕೂ ಹಿಂದೂ ಧರ್ಮಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಬೇಕಾಗುತ್ತದೆ. ಹಿಂದೂಗಳ ಹೃದಯವನ್ನು ಜೋಡಿಸುವುದಕ್ಕೆ ಮುಸ್ಲಿಮರ ಹೃದಯವನ್ನು ಒಡೆಯಬೇಕೇ? ಇನ್ನೊಂದು ಧರ್ಮೀಯರನ್ನು ಮತ್ತು ಅವರ ಆರಾಧನಾಲಯಗಳನ್ನು ಘಾಸಿಗೊಳಿಸುವುದರಲ್ಲಿ ಹಿಂದೂ ಧರ್ಮದ ಹಿತ ಅಡಗಿದೆಯೇ? ಯಾರು ಹಿಂದೂ ಧರ್ಮಕ್ಕೆ ಇಂಥದ್ದೊಂದು ಕಳಂಕವನ್ನು ಹಚ್ಚುತ್ತಿರುವುದು? ಅವರ ಉದ್ದೇಶವೇನು? ಅವರಿಂದ ಹಿಂದೂ ಧರ್ಮಕ್ಕೆ ಎಷ್ಟರ ಮಟ್ಟಿಗೆ ಹಿತವಿದೆ? ಅವರನ್ನೇಕೆ ಹಿಂದೂ ಸಮಾಜ ತರಾಟೆಗೆ ಎತ್ತಿಕೊಳ್ಳಬಾರದು? ಕೊರಳಪಟ್ಟಿ ಹಿಡಿದು ಹಿಂದೂ ಧರ್ಮದ ನಿಜ ಮೌಲ್ಯವನ್ನು ಅವರಿಗೆ ತಿಳಿ ಹೇಳಬಾರದು? ಹಿಂದೂ ಸಮಾಜವು ಈ ಕುರಿತಂತೆ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ.
 

Tuesday, 13 January 2015

ಮುಸ್ಲಿಮ್ ಸಂವೇದನೆಯ ಅಭಾವದಲ್ಲಿ ಮಾಧ್ಯಮ

    ಫ್ರಾನ್ಸ್ ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿಯಲ್ಲಿ ನಡೆದ ಹತ್ಯಾಕಾಂಡ, ಭಟ್ಕಳದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ಮತ್ತು ಇವುಗಳನ್ನು ಆಧಾರವಾಗಿಟ್ಟುಕೊಂಡು ಮಾಧ್ಯಮಗಳಲ್ಲಿ ಪ್ರತಿದಿನ ಪ್ರಕಟವಾಗುತ್ತಿರುವ ಸುದ್ದಿ-ವರದಿ-ವಿಶ್ಲೇಷಣೆಗಳನ್ನು ಗಮನಿಸುವಾಗ, ‘ಮಾಧ್ಯಮಗಳಲ್ಲಿ ಮುಸ್ಲಿಮ್ ಸಂವೇದನೆ' ಎಷ್ಟಿವೆ ಮತ್ತು ಎಷ್ಟಿರಬೇಕಿತ್ತು ಎಂಬ ವಿಷಯದ ಸುತ್ತ ಗಂಭೀರ ಚರ್ಚೆಯೊಂದು ನಡೆಯಲೇಬೇಕಾದ ಅಗತ್ಯವಿದೆಯೆಂದು ತೋರುತ್ತದೆ. ಸಾಹಿತ್ಯದಲ್ಲಿ ದಲಿತ ಸಂವೇದನೆ, ಮಹಿಳಾ ಸಂವೇದನೆ ಎಂಬುದರಿಂದ ತೊಡಗಿ ‘ಮಾಧ್ಯಮಗಳಲ್ಲಿ ದಲಿತ ಸಂವೇದನೆ’ ಎಂಬಲ್ಲಿವರೆಗೆ ಇವತ್ತು ವಿವಿಧ ಬಗೆಯ ಕಾರ್ಯಾಗಾರಗಳು ನಡೆಯುತ್ತವೆ.ಮಾಧ್ಯಮಗಳ ನಿರ್ಣಾಯಕ ಸ್ಥಾನದಲ್ಲಿ ದಲಿತರು ಎಷ್ಟಿದ್ದಾರೆ, ಇನ್ನಿತರ ವಿಭಾಗಗಳಲ್ಲಿ ಅವರ ಪಾಲು ಎಷ್ಟು... ಎಂಬುದನ್ನೆಲ್ಲ ವಿಶ್ಲೇಷಿಸುವುದಕ್ಕೆ ಚರ್ಚಾಗೋಷ್ಟಿಗಳು ನಡೆಯುತ್ತವೆ.  ಆದರೆ ‘ಮಾಧ್ಯಮಗಳಲ್ಲಿ ಮುಸ್ಲಿಮ್ ಸಂವೇದನೆ’ ಎಂಬುದರ ಸುತ್ತ ಚರ್ಚಾಗೋಷ್ಠಿಗಳು ಬಹುತೇಕ ನಡೆಯುತ್ತಲೇ ಇಲ್ಲ. ಈ ಕುರಿತಂತೆ ಮಾಧ್ಯಮಗಳು ಗಂಭೀರವೂ ಆಗಿಲ್ಲ. ನಿಜವಾಗಿ, ಮಾಧ್ಯಮಗಳೆಂಬುದು ಸಮಾಜಕ್ಕೆ ಹಿಡಿಯುವ ಕನ್ನಡಿ. ಈ ಕನ್ನಡಿಯಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ ಎಂಬ ಭೇದ ಮತ್ತು ವಿಂಗಡಣೆಯಿಲ್ಲದೇ ಸರ್ವ ಸರಿ ಮತ್ತು ತಪ್ಪುಗಳೂ ಪ್ರತಿಫಲನವಾಗಬೇಕು. ಅಲ್ಲಿನ ಭಾವುಕತೆ, ಸಾಂಸ್ಕøತಿಕ ವೈಶಿಷ್ಟ್ಯತೆ, ತಲ್ಲಣ, ಹಾಸ್ಯ.. ಎಲ್ಲವುಗಳಿಗೂ ಸ್ಪೇಸ್ ಸಿಗಬೇಕು. ದುರಂತ ಏನೆಂದರೆ, ಮಾಧ್ಯಮಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ತೃಣಮಾತ್ರವಾಗಿರುವುದರಿಂದಲೋ ಏನೋ ಅವರ ಸಂವೇದನೆಗಳಿಗೆ ತೀರಾ ಕಡಿಮೆ ಜಾಗವಷ್ಟೇ ಸಿಗುತ್ತಿವೆ. ಮುಸ್ಲಿಮರ ತಪ್ಪುಗಳನ್ನು ಮಾತ್ರ ಹೆಚ್ಚಿನ ಬಾರಿ ಬಿಂಬಿಸುವ ಈ ಕನ್ನಡಿ, ಅದರಲ್ಲೂ ಸಾಕಷ್ಟು ಬಾರಿ ಅವರ ತಪ್ಪುಗಳನ್ನು ಉಬ್ಬಿಸಿಯೋ ಅಥವಾ ಅವರ ಹೆಸರಲ್ಲಿ ಸ್ವತಃ ತಪ್ಪುಗಳನ್ನು ಸೃಷ್ಟಿಸಿಯೋ ತೋರಿಸುತ್ತಿದೆ. ಮುಸ್ಲಿಮರ ತಪ್ಪುಗಳು ಅತಿ ವರ್ಣನೆಯಿಂದ ಕೂಡಿರಲೇಬೇಕು ಮತ್ತು ವ್ಯಕ್ತಿಯ ತಪ್ಪುಗಳನ್ನು ಅವನ ಧರ್ಮದ ತಪ್ಪುಗಳಾಗಿ ಬಿಂಬಿಸಲೇಬೇಕು ಎಂಬೊಂದು ಹಠವನ್ನೂ ಅದು ಪ್ರದರ್ಶಿಸುತ್ತಿದೆ. ಮಾಧ್ಯಮಗಳ ಈ ಪಕ್ಷಪಾತಿ ಧೋರಣೆಯನ್ನು ಖಂಡಿಸಿಯೇ ಎರಡ್ಮೂರು ವರ್ಷಗಳ  ಹಿಂದೆ ಭಟ್ಕಳದಲ್ಲಿ ಬಂದ್ ಆಚರಿಸಲಾಗಿತ್ತು. ವಿವಿಧ ವೇದಿಕೆಗಳಲ್ಲಿ ಈ ಕುರಿತಂತೆ ಧಾರಾಳ ಅಭಿಪ್ರಾಯಗಳು ಮಂಡನೆಯಾಗಿವೆ. ಪ್ರತಿಭಟನೆಗಳು ನಡೆದಿವೆ. ಆದರೂ ದೊಡ್ಡದೊಂದು ಬದಲಾವಣೆ ಮಾಧ್ಯಮ ಕ್ಷೇತ್ರದಲ್ಲಿ ಈವರೆಗೂ ಆಗಿಲ್ಲ. ಏನು ಕಾರಣ? ಮಾಧ್ಯಮ ಕ್ಷೇತ್ರದಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ತೀರಾ ತೀರಾ ಕಡಿಮೆಯಾಗಿರುವುದಕ್ಕೆ ಮುಸ್ಲಿಮರಲ್ಲಿ ಪ್ರತಿಭೆ ಇಲ್ಲದಿರುವುದು ಕಾರಣವೋ ಅಥವಾ ಇದಕ್ಕೆ ಹೊರತಾದ ಕಾರಣಗಳಿವೆಯೋ? ಫ್ರಾನ್ಸಿನ ಮುಖ್ಯ ಮಸೀದಿಯ ಧಾರ್ಮಿಕ ಗುರು ಹಸನ್ ಚಲ್‍ಗೋಮಿಯವರು ಚಾರ್ಲಿ ಹೆಬ್ಡೋದ ಕಚೇರಿಯಲ್ಲಿ ಹೂವು ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ್ದರು. ಭಯೋತ್ಪಾದಕರು ತಮ್ಮನ್ನು ನರಕಕ್ಕೆ ಮಾರಿಕೊಂಡಿದ್ದಾರೆ ಎಂದೂ ಹೇಳಿದ್ದರು. ಫ್ರಾನ್ಸಿನ ಅಧ್ಯಕ್ಷ ಕರೆದ ಹೆಬ್ಡೋ ಐಕ್ಯತಾ ರಾಲಿಯಲ್ಲಿ ಸಾವಿರಾರು ಮುಸ್ಲಿಮರು ಭಾಗವಹಿಸಿದ್ದರು. ಭಯೋತ್ಪಾದಕರ ದಾಳಿಗೀಡಾಗಿ ಸಾವನ್ನಪ್ಪಿದ ಪೊಲೀಸಧಿಕಾರಿ ಅಹ್ಮದ್ ಮೆರಾಬೆಟ್‍ನ ಸಹೋದರ ಮಲಿಕ್ ಕೂಡ, ‘ಇಡೀ ಪ್ರಕರಣಕ್ಕೆ ಒಂದೇ ಬ್ರಶ್‍ನಿಂದ ಬಣ್ಣ ಬಳಿಯಬೇಡಿ’ ಎಂದು ಮಾಧ್ಯಮಗಳೊಂದಿಗೆ ವಿನಂತಿಸಿದ್ದರು. ನಿಜವಾಗಿ, ಮುಸ್ಲಿಮರ ಬಗ್ಗೆ ಅನುಮಾನ ಮತ್ತು ಅಸಹನೆಯ ಅಭಿಪ್ರಾಯಗಳು ಧ್ರುವೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಇಂಥ ಸುದ್ದಿಗಳಿಗೆ ಮಾಧ್ಯಮಗಳು ಪ್ರಾಶಸ್ತ್ಯ ನೀಡಬೇಕಾಗಿತ್ತು. ಇಂಥ ಸುದ್ದಿಗಳನ್ನು ಒತ್ತುಕೊಟ್ಟು ಪ್ರಕಟಿಸುವುದರಿಂದ ತಪ್ಪು ಸಂದೇಶಗಳು ರವಾನೆಯಾಗುವುದು ತಪ್ಪಬಹುದಿತ್ತು. ಆದರೆ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ದೊಡ್ಡ ಗುಂಪು ಈ ವಿಷಯದಲ್ಲಿ ಎಡವಿತು.ಚಾರ್ಲಿ ಹೆಬ್ದೋದ ಮೇಲೆ ದಾಳಿ ಮಾಡಿದ ಆ ಇಬ್ಬರು ಭಯೋತ್ಪಾದಕರನ್ನು ಎತ್ತಿಕೊಂಡು ಇಡೀ ಇಸ್ಲಾಂ ಅನ್ನೇ ತೀವ್ರವಾದದ ಮೊನೆಯಲ್ಲಿಟ್ಟು  ತೂಗುತ್ತಿರುವಾಗಲೂ ಚಾರ್ಲಿ ಹೆಬ್ದೋ ಕಚೇರಿಯಲ್ಲಿ ಹತ್ಯೆಗೀಡಾದವರಲ್ಲಿ ಮುಸ್ತಫಾ ಅವ್ರಾದ್ ಎಂಬ ಮುಸ್ಲಿಂ ಉದ್ಯೋಗಿಯೂ ಇದ್ದ ಎಂಬುದನ್ನು ನೆನಪಿಸಿಕೊಳ್ಳಲೂ ಮರೆಯಿತು. ಆ ಇಬ್ಬರು ಭಯೋತ್ಪಾದಕರನ್ನು ಎತ್ತಿಕೊಂಡು ಇಸ್ಲಾಮನ್ನು ತೀವ್ರವಾದಿ ಎಂದು ಕರೆಯುವುದಾದರೆ ಮುಸ್ತಫಾನನ್ನು ಏನೆಂದು ಕರೆಯಬೇಕು? ಆತನೇಕೆ ಇಸ್ಲಾಮಿನ ಉದಾರವಾದದ ಸಂಕೇತವಾಗಬಾರದು?
     ಮಾಧ್ಯಮ ಕ್ಷೇತ್ರವು ಮುಸ್ಲಿಮ್ ಸಂವೇದನೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಿಲ್ಲ ಎಂಬ ಭಾವನೆಯು ಸಮಾಜದಲ್ಲಿ ನಿರಾಕರಿಸಲಾಗದಷ್ಟು ಆಳವಾಗಿ ಇವತ್ತು ಬೇರೂರಿದೆ. ಇದಕ್ಕೆ ಮಾಧ್ಯಮ ಕ್ಷೇತ್ರದ ಮೇಲಿನ ಅಸೂಯೆ ಖಂಡಿತ ಕಾರಣ ಅಲ್ಲ. ವರ್ಷಾಂತರಗಳಿಂದ ಅನುಭವಿಸುತ್ತಾ ಬಂದಿರುವ ಪಕ್ಷಪಾತದ ಅನುಭವಗಳೇ ಈ ದೂರುಗಳಿಗೆ ಕಾರಣ. ಈ ಹಿನ್ನೆಲೆಯಲ್ಲಿ, ಮಾಧ್ಯಮ ಕ್ಷೇತ್ರ ಸ್ವ ಅವಲೋಕನಕ್ಕೆ ಒಳಗಾಗಬೇಕಾದ ಅಗತ್ಯವಿದೆ. ಮುಸ್ಲಿಮ್ ಸಂವೇದನೆ ಅಂದರೇನು, ಅವರ ತಲ್ಲಣಗಳು ಮತ್ತು ಅಭಿಪ್ರಾಯಗಳೇನು, ಅವನ ಭಾವನೆ, ಧಾರ್ಮಿಕ ಚಿಂತನೆ ಗಳೇನು, ವಿವಿಧ ಘಟನೆಗಳ ಸಂದರ್ಭಗಳಲ್ಲಿ ಅವರ ನಿಲುವುಗಳೇನು ಎಂಬುದಕ್ಕೆಲ್ಲ ಮಾಧ್ಯಮ ಕ್ಷೇತ್ರ ಕನಿಷ್ಠ ಕಿವಿ ಕೊಡುವ ತಾಳ್ಮೆಯನ್ನಾದರೂ ಪ್ರದರ್ಶಿಸಬೇಕು. ಸದ್ಯದ ದಿನಗಳು ಹೇಗಿವೆಯೆಂದರೆ, ತಾಳ್ಮೆಯಿಲ್ಲದ ಮತ್ತು ಮಾಡುವ ಸುದ್ದಿಯ ಗಾಂಭೀರ್ಯತೆಯನ್ನು ಗ್ರಹಿಸಲಾಗದ ಮಂದಿಯಿಂದ ಈ ಕ್ಷೇತ್ರ ತುಂಬಿಹೋಗಿವೆಯೇನೋ ಎಂದು ಅನುಮಾನ ಪಡಬೇಕಾಗುತ್ತದೆ. ಈ ಕಾರಣದಿಂದಲೇ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸಿ ಭಟ್ಕಳದಲ್ಲಿ ಮೊನ್ನೆ ಬಂದ್ ಗೆ  ಕರೆ ಕೊಡಲಾಯಿತು. ವ್ಯವಸ್ಥೆಯ ಪ್ರಾಮಾಣಿಕತೆಯನ್ನೇ ನಂಬದ ಸ್ಥಿತಿಯೊಂದು ಅಲ್ಲಿ ನಿರ್ಮಾಣವಾಗಿದೆ. ಮಾಧ್ಯಮಗಳ ಮತ್ತು ವ್ಯವಸ್ಥೆಯ ತಪ್ಪು ಹೆಜ್ಜೆಗಳು ಒಂದು ಇಡೀ ನಗರದ ಮನಸ್ಥಿತಿಯನ್ನೇ ಹೇಗೆ ಬದಲಿಸಿಬಿಡಬಲ್ಲುದು ಎಂಬುದಕ್ಕೆ ಇದುವೇ ಅತ್ಯುತ್ತಮ ಉದಾಹರಣೆ. ಇಂಥದ್ದೊಂದು ವಾತಾವರಣದ ಹಿನ್ನೆಲೆಯಲ್ಲಿ ಮುಸ್ಲಿಮ್ ಸಂವೇದನೆ ಅತ್ಯಂತ ಗಂಭೀರ ಚರ್ಚಾವಸ್ತುವಾಗುವ ಅಗತ್ಯವಿದೆ. ಮಾಧ್ಯಮಗಳಿಗೂ ಮುಸ್ಲಿಮ್ ಸಂವೇದನೆಗಳಿಗೂ ಎಷ್ಟರ ಮಟ್ಟಿಗೆ ಸಂಬಂಧ ಮತ್ತು ಅರಿವು ಇದೆ? ಭಯೋತ್ಪಾದನೆಯ ಬಗ್ಗೆ ಮಾಧ್ಯಮ ಕ್ಷೇತ್ರದ ಪ್ರತಿನಿಧಿಯೊಬ್ಬ ಸುದ್ದಿ ತಯಾರಿಸುವಾಗ ಮುಸ್ಲಿಮ್ ಸಂವೇದನೆಯನ್ನು ಎಷ್ಟರ ಮಟ್ಟಿಗೆ ಅರಿತುಕೊಂಡಿರುತ್ತಾನೆ/ಳೆ ಮತ್ತು ಅರಿತಿರಬೇಕು? ಒಂದು ಪ್ರದೇಶದಲ್ಲಾಗುವ ಸ್ಫೋಟದ ಬಗ್ಗೆ ಆ ಸಮಾಜದ ಆಲೋಚನೆಗಳು ಏನೆಲ್ಲ ಮತ್ತು ಹೇಗೆಲ್ಲ ಇವೆ ಎಂಬುದನ್ನೆಲ್ಲ ತೆರೆದ ಮನಸ್ಸಿನಿಂದ ತಿಳಿದುಕೊಳ್ಳುವ ದಾಹ ಮಾಧ್ಯಮ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಬೇಕಾಗಿದೆ.
   ಮುಸ್ಲಿಮ್ ಪ್ರತಿಭೆಗಳಿಗೆ ಮಾಧ್ಯಮ ಕ್ಷೇತ್ರ ಬಾಗಿಲು ತೆರೆಯುವುದು ಎಷ್ಟು ಮುಖ್ಯವೋ ಪೂರ್ವಾಗ್ರಹ ಪೀಡಿತ ಆಲೋಚನೆಗಳಿಂದ ಮಾಧ್ಯಮ ಕ್ಷೇತ್ರ ಹೊರಬರಬೇಕಾದುದೂ ಅಷ್ಟೇ ಮುಖ್ಯ. ಮುಸ್ಲಿಮ್ ಆಲೋಚನೆಗಳಿಗೆ ಮಾಧ್ಯಮ ಕ್ಷೇತ್ರ ಹೆಚ್ಚೆಚ್ಚು ಸ್ಪೇಸ್ ಕೊಟ್ಟಂತೆಯೇ ಅವುಗಳ ಕುರಿತಾದ ಅನುಮಾನಗಳೂ ನಿಧಾನಕ್ಕೆ ದೂರ ಸರಿಯಬಲ್ಲುದು. ಆದ್ದರಿಂದ ಮುಸ್ಲಿಮ್ ಸಂವೇದನೆ'ಯು ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳ ಸಂಪಾದಕೀಯ ಸಭೆಗಳಲ್ಲೂ ಹೊರಗೂ ಚರ್ಚೆಗೀಡಾಗಲಿ ಮತ್ತು ಪರಸ್ಪರ ವಿಶ್ವಾಸ ವೃದ್ಧಿಸುವ ಹಾಗೂ ಪೂರ್ವಗ್ರಹ ರಹಿತ ಸತ್ಯಸುದ್ದಿಗಳ ಪ್ರಸಾರಕ್ಕೆ ಈ ಕ್ಷೇತ್ರ ತಮ್ಮನ್ನು ತೆರೆದುಕೊಳ್ಳಲಿ.

Tuesday, 6 January 2015

ಪ್ರಜಾತಂತ್ರದ ಮೂಲಗುಣವನ್ನು ನಾಶಪಡಿಸುತ್ತಿರುವ ಮೋದಿ

   ಮನಮೋಹನ್ ಸಿಂಗ್‍ರನ್ನು ಮೌನಮೋಹನ ಎಂದು ಕರೆದು ಗೇಲಿ ಮಾಡಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಎಷ್ಟು ಮೌನವಾಗಿರುವರೆಂದರೆ, ಮೌನದಲ್ಲಿ ಮನಮೋಹನ್ ಸಿಂಗ್‍ರನ್ನೇ ವಿೂರಿಸಿದ್ದಾರೆ. ಅವರು ಪಾರ್ಲಿಮೆಂಟ್‍ನಲ್ಲಿದ್ದೂ ಮಾತಾಡುವುದಿಲ್ಲ. ಘರ್‍ವಾಪಸಿಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ವಾರಗಟ್ಟಲೆ ಪ್ರತಿಭಟನೆ ನಡೆಸಿಯೂ ಅವರು ಮೌನ ಮುರಿಯಲಿಲ್ಲ. ಯೋಗಿ ಆದಿತ್ಯನಾಥ್, ಸಾಧ್ವಿ ನಿರಂಜನ್, ಸಾಕ್ಷಿ ಮಹಾರಾಜ್, ಸುಶ್ಮಾ ಸ್ವರಾಜ್‍ರ ವಿವಾದಿತ ಹೇಳಿಕೆಗಳಿಗೂ ಅವರು ಪ್ರತಿಕ್ರಿಯಿಸಿಲ್ಲ. ಈ ನಡುವೆ ಇಡೀ ದೇಶವೇ ಗಂಭೀರ ಚರ್ಚೆಗೆ ಒಡ್ಡಬೇಕಾದ ಎರಡು ಮಸೂದೆಗಳನ್ನು ಮೋದಿಯವರು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿದ್ದಾರೆ. 2013ರಲ್ಲಿ ಕಾಂಗ್ರೆಸ್ (ಯುಪಿಎ) ಸರಕಾರವು ರೈತರು ಮತ್ತು ಜವಿೂನು ಮಾಲಿಕರ ಹಿತಾಸಕ್ತಿ ಕಾಯುವ ಉದ್ದೇಶದಿಂದ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯ ಪ್ರಕಾರ, ಬಹುರಾಷ್ಟ್ರೀಯ ಕಂಪೆನಿಗಳೋ ಅಥವಾ ಇನ್ನಿತರ ಯಾವುದೇ ಉದ್ಯಮಿಗಳೋ ಭೂಸ್ವಾಧೀನವನ್ನು ಬಯಸುವುದಾದಲ್ಲಿ ರೈತನ ಅಥವಾ ಭೂಮಾಲಿಕನ ಒಪ್ಪಿಗೆ ಪಡೆಯಬೇಕಾಗಿತ್ತು. ಅಲ್ಲದೇ ಪರಿಹಾರ ನೀಡುವ ಸಂದರ್ಭದಲ್ಲಿ ಭೂಮಾಲಿಕರಿಗೆ ಮಾತ್ರವಲ್ಲ, ಅಲ್ಲಿ ಕೆಲಸ ಮಾಡುತ್ತಿರುವ ಕೃಷಿ ಕಾರ್ಮಿಕರು ಹಾಗೂ ಜವಿೂನನ್ನು ಆಶ್ರಯವನ್ನಾಗಿ ಮಾಡಿಕೊಂಡವರನ್ನೂ ಪರಿಗಣಿಸಬೇಕೆಂಬ ನಿಯಮ ಇತ್ತು. ಆದರೆ ಮೋದಿಯವರ ಹೊಸ ಕಾಯ್ದೆಯು ಈ ಎರಡೂ ಜನಪರ ನಿಯಮವನ್ನೇ ಕಿತ್ತು ಹಾಕಿದೆ. ಭೂಸ್ವಾಧೀನದ ಸಂದರ್ಭದಲ್ಲಿ ಮಾಲಿಕರು/ ರೈತರ ಒಪ್ಪಿಗೆಯ ಅಗತ್ಯವಿಲ್ಲ ಎಂದು ಮಾತ್ರವಲ್ಲ, ಅದು ಕೃಷಿ ಭೂಮಿಯಾಗಿದ್ದರೂ ಸ್ವಾಧೀನ ಪಡಿಸಬಹುದು ಎಂಬ ಜನವಿರೋಧಿ ವಿಧಿಯನ್ನು ಹೊಸ ಕಾಯ್ದೆಯಲ್ಲಿ ಸೇರಿಸಿಕೊಂಡಿದೆ. ಕೈಗಾರಿಕೋದ್ಯಮಕ್ಕೆ ಆದ್ಯತೆ ನೀಡುವ ನೆಪದಲ್ಲಿ ಕೃಷಿಕರನ್ನು ನಿರ್ಗತಿಕರನ್ನಾಗಿ ಮಾಡುವ ಈ ಹೊಸ ಕಾಯ್ದೆಯನ್ನು ಇನ್ನೂ ಪಾರ್ಲಿಮೆಂಟಿನಲ್ಲಿ ಮಂಡಿಸಿಯೇ ಇಲ್ಲ. ರೈತರನ್ನು ಬಲಿಕೊಟ್ಟು ಉದ್ಯಮಿಗಳನ್ನು ತೃಪ್ತಿಪಡಿಸುವ ಈ ಕಾಯ್ದೆಯು ಪಾರ್ಲಿಮೆಂಟಿನಲ್ಲಿ ಚರ್ಚೆಗೊಳಗಾಗದೇ ಮತ್ತು ಈ ಬಗ್ಗೆ ಮೋದಿಯವರಿಂದ ಯಾವ ವಿವರಣೆಯೂ ಪ್ರಕಟವಾಗದೆಯೇ ಜಾರಿಯಾಗಲು ಹೋಗುತ್ತಿರುವುದು ಸೂಚಿಸುವುದೇನನ್ನು? ಘರ್‍ವಾಪಸಿಯ ಕಾರಣದಿಂದ ಪಾರ್ಲಿಮೆಂಟ್ ಕಲಾಪ ನಡೆಯದಿರುವುದರಿಂದ ಸುಗ್ರೀವಾಜ್ಞೆಯ ಮೊರೆ ಹೋಗಬೇಕಾಯಿತು ಎಂದು ಬಿಜೆಪಿ ವಾದಿಸಬಹುದು. ಆದರೆ ಪಾರ್ಲಿಮೆಂಟ್ ಸ್ಥಗಿತಗೊಂಡದ್ದು ವಿರೋಧ ಪಕ್ಷಗಳ ಅಸಹಕಾರದಿಂದಲ್ಲ, ಮೋದಿಯವರ ಮೌನದಿಂದ. ಘರ್‍ವಾಪಸಿಯ ಹೆಸರಲ್ಲಿ ಸಂಘಫರಿವಾರವು ದೇಶದಾದ್ಯಂತ ಆತಂಕದ ವಾತಾವರಣವನ್ನು ಸೃಷ್ಟಿಸುತ್ತಿರುವಾಗ ಮತ್ತು ಬಿಜೆಪಿಯ ಸಂಸದರೇ ಅದರ ಪರ ಬಹಿರಂಗ ಹೇಳಿಕೆ ಕೊಡುತ್ತಿದ್ದಾಗ ವಿರೋಧ ಪಕ್ಷಗಳು ಮೋದಿಯವರ ಸ್ಪಷ್ಟೀಕರಣವನ್ನು ಬಯಸುವುದು ಸಹಜವಾಗಿತ್ತು. ಆದರೆ ಆ ಇಡೀ ಪ್ರಕರಣದ ಸೂತ್ರದಾರ ಮೋದಿಯವರೇ ಏನೋ ಅನ್ನುವಷ್ಟರ ಮಟ್ಟಿಗೆ ಅವರು ಮೌನ ವಹಿಸಿದರು. ಪಾರ್ಲಿಮೆಂಟಿನ ಚಳಿಗಾಲದ ಅವಧಿ ಮುಗಿಯಲಿ ಎಂದು ಕಾಯುವಂತಿತ್ತು ಅವರ ನಡೆ. ಒಂದು ವೇಳೆ ಈ ಕಾಯ್ದೆಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಿದರೆ ವಿವಾದಕ್ಕೀಡಾಗಬಹುದು ಮತ್ತು ಆ ಕಾರಣದಿಂದಾಗಿ ಮಾಧ್ಯಮಗಳಲ್ಲೂ ಚರ್ಚೆಗೀಡಾಗಿ ಸರಕಾರದ ವರ್ಚಸ್ಸು ಕುಂದಬಹುದು ಎಂಬ ಭಯವೂ ಅದರಲ್ಲಿ ಇದ್ದಂತಿತ್ತು. ಆದ್ದರಿಂದಲೇ, ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ದೊಡ್ಡ ಗಂಡಾಂತರವನ್ನೇ ಸೃಷ್ಟಿಸಬಲ್ಲ ಕಾಯ್ದೆಯೊಂದನ್ನು ಕದ್ದು ಮುಚ್ಚಿ ಜಾರಿಗೊಳಿಸಲು ಮುಂದಾಗಿದ್ದಾರೆ. ಸುಗ್ರೀವಾಜ್ಞೆ ಎಂಬುದು ತುರ್ತು ಸಂದರ್ಭದಲ್ಲಿ ಕಾಯ್ದೆಯೊಂದನ್ನು ಜಾರಿಗೊಳಿಸುವುದಕ್ಕಾಗಿ ಅಳವಡಿಸಿಕೊಂಡ ಪರ್ಯಾಯ ಮಾರ್ಗ. ಸಹಜ ಸಂದರ್ಭದಲ್ಲಿ ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಅನೈತಿಕ ಮತ್ತು ಅಸಾಧುವಾಗುತ್ತದೆ.
 ಎಪ್ಪತ್ತರ ದಶಕದಲ್ಲಿ ಇಂದಿರಾಗಾಂಧಿಯವರು ತುರ್ತು ಸ್ಥಿತಿಯನ್ನು ಘೋಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಹೇಗೆ ನಡೆದುಕೊಂಡರೋ ಅದೇ ರೀತಿಯಲ್ಲಿ ಇವತ್ತು ಮೋದಿಯವರೂ ನಡಕೊಳ್ಳುತ್ತಿದ್ದಾರೆ. ಹೊರನೋಟಕ್ಕೆ ಅವರು ಮಾಧ್ಯಮ ಸ್ನೇಹಿಯಂತೆ ಕಾಣಬಹುದು. ಆದರೆ ಮಾಧ್ಯಮಗಳನ್ನು ಹತ್ತಿರಕ್ಕೂ ಅವರು ಬಿಟ್ಟುಕೊಳ್ಳುತ್ತಿಲ್ಲ. ಸರಕಾರದ ಕುರಿತಂತೆ ಮಾಧ್ಯಮಗಳಿಗೆ ಸಿಗಬಹುದಾದ ಎಲ್ಲ ಮಾಹಿತಿ ಒರತೆಗಳನ್ನೂ ಅವರು ಹತ್ತಿಕ್ಕುತ್ತಿದ್ದಾರೆ. 2002ರ ಗುಜರಾತ್ ಹತ್ಯಾಕಾಂಡದ ಬಳಿಕ ಅವರು ಮಾಧ್ಯಮಗಳನ್ನು ಹೊರಗಿಟ್ಟೆ ಬದುಕತೊಡಗಿದರು. ಮುಖ್ಯಮಂತ್ರಿಯಾಗಿ ಅವರು ನಡೆಸುತ್ತಿದ್ದ ಮತ್ತು ನಡೆಸಬೇಕಾಗಿದ್ದ ಪತ್ರಿಕಾಗೋಷ್ಠಿಗಳೇ ಬಳಿಕ ನಿಂತು ಹೋದುವು. ಅವರ ವಕ್ತಾರರಂತೂ ಬಾಯಿಪಾಠ ಮಾಡಿದವರಂತೆ ಮಾಧ್ಯಮಗಳಿಗೆ ಏನನ್ನು ಮತ್ತು ಎಷ್ಟನ್ನು ತಿಳಿಸಬೇಕೋ ಅಷ್ಟನ್ನೇ ಉಲಿದು ಎದ್ದು ಹೋಗತೊಡಗಿದರು. ಒಂದು ರೀತಿಯಲ್ಲಿ, ಅವರ ಮಾಧ್ಯಮ ಅಸ್ಪೃಶ್ಯ ನಿಲುವು ಅವರ ಸುತ್ತ ಕುತೂಹಲದ ಹುತ್ತವೊಂದನ್ನು ನಿಧಾನಕ್ಕೆ ನಿರ್ಮಿಸತೊಡಗಿತು. ಅವರ ಒಂದು ಸಂದರ್ಶನಕ್ಕೆ ಮಾಧ್ಯಮಗಳು ಹಾತೊರೆಯುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಿತು. ಇದೇ ವೇಳೆ, ತನ್ನ ವರ್ಚಸ್ಸನ್ನು ವೃದ್ಧಿಸುವುದಕ್ಕಾಗಿ ವಿದೇಶದ ದುಬಾರಿ ಜಾಹೀರಾತು ಸಂಸ್ಥೆಗಳನ್ನು ಅವರು ನೇಮಿಸಿಕೊಂಡರು. ಪ್ರಧಾನಿಯಾದ ಬಳಿಕವೂ ಮೋದಿ ಇದೇ ತಂತ್ರವನ್ನು ಅನುಸರಿಸುತ್ತಿದ್ದಾರೆ. ಮಾಧ್ಯಮಗಳನ್ನು ದೂರ ಇಟ್ಟೇ ಮಣಿಸುವ ತಂತ್ರವನ್ನು ಅವರು ಅಳವಡಿಸಿಕೊಂಡಿದ್ದಾರೆ. ಅವರು ಪತ್ರಿಕಾಗೋಷ್ಠಿ ನಡೆಸುವುದಿಲ್ಲ. ಆ ಮೂಲಕ ಮಾಧ್ಯಮ ವರ್ಗದಿಂದ ಎದುರಾಗಬಹುದಾದ ಇರಿಸು-ಮುರಿಸಿನ ಪ್ರಶ್ನೆಗಳಿಗೆ ಅವಕಾಶವನ್ನೇ ಕೊಡುತ್ತಿಲ್ಲ. ತನ್ನ ವಿಚಾರಗಳನ್ನು ಹೇಳಿಕೊಳ್ಳುವುದಕ್ಕೆ ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳ ಬಳಿ ಹೋಗದೇ ಟ್ವೀಟರ್, ಆಕಾಶವಾಣಿಯಂಥ ಪರ್ಯಾಯ ಮಾಧ್ಯಮಗಳನ್ನು ಅವರು ಬಳಸುತ್ತಿದ್ದಾರೆ. ನಿಜವಾಗಿ, ಪ್ರಧಾನಿ ಎಂದರೆ ಬಹುರಾಷ್ಟ್ರೀಯ ಕಂಪೆನಿಯ ಸಿಇಓ ಅಲ್ಲ. ಪ್ರಧಾನಿಗೆ ಉತ್ತರದಾಯಿತ್ವ ಇದೆ. ಜನಪ್ರತಿನಿಧಿಯೆಂಬ ನೆಲೆಯಲ್ಲಿ ಜನರ ಪ್ರಶ್ನೆ, ಅನುಮಾನಗಳಿಗೆ ಉತ್ತರಿಸಲೇಬೇಕಾದ ಹೊಣೆಗಾರಿಕೆಯಿದೆ. ಟ್ವಿಟರ್, ಆಕಾಶವಾಣಿ, ಸಾರ್ವಜನಿಕ ಕಾರ್ಯಕ್ರಮ ಮುಂತಾದುವುಗಳೆಲ್ಲ ಏಕಮುಖವಾದದ್ದು. ಕೇಳುಗರಿಗೆ ಅವರ ಅಭಿಪ್ರಾಯಗಳನ್ನು ಪ್ರಶ್ನಿಸುವ ಅವಕಾಶವೇ ಅಲ್ಲಿರುವುದಿಲ್ಲ. ಆದ್ದರಿಂದಲೇ, ಪತ್ರಿಕೆ ಮತ್ತು ಟಿ.ವಿ. ಮಾಧ್ಯಮ ಮುಖ್ಯವಾಗುವುದು. ಆದರೆ ಮೋದಿಯವರು ಈ ಮಾಧ್ಯಮಗಳ ಮುಖಾಮುಖಿಯನ್ನು ತಪ್ಪಿಸಿಕೊಳ್ಳುತ್ತಲೇ ಬರುತ್ತಿದ್ದಾರೆ. ಮಾತ್ರವಲ್ಲ, ತನ್ನ ಸಚಿವರನ್ನೂ ಮಾಧ್ಯಮಗಳಿಂದ ಬಹುತೇಕ ದೂರವೇ ಇಟ್ಟಿದ್ದಾರೆ. ಭೂಸ್ವಾಧೀನದಂಥ ಬಹುಗಂಭೀರ ಕಾಯ್ದೆಯ ಜಾರಿಯ ಸಂದರ್ಭದಲ್ಲೂ ಅವರು ಮಾಧ್ಯಮಗಳೊಂದಿಗೆ ಮಾತಾಡುತ್ತಿಲ್ಲ. ಇದೇ ರೀತಿಯ ವರ್ತನೆಗಾಗಿ ಮನಮೋಹನ್ ಸಿಂಗ್‍ರನ್ನು ಮೌನಮೋಹನ ಅನ್ನುತ್ತಿದ್ದ ಮೋದಿ ಇದೀಗ ಸ್ವಯಂ ಮೌನಿಯಾಗಿರುವುದು ಏನನ್ನು ಸೂಚಿಸುತ್ತದೆ? ಹಿಪಾಕ್ರಸಿಯನ್ನೇ, ಬೇಜವಾಬ್ದಾರಿಯನ್ನೇ, ಪಲಾಯನವಾದ, ಅಬದ್ಧತೆಯನ್ನೇ?
 ಸರಕಾರವೊಂದು ಸರ್ವಾಧಿಕಾರಿಯಂತೆ ವರ್ತಿಸುವುದಕ್ಕೆ ತುರ್ತು ಸ್ಥಿತಿಯ ಜಾರಿಯೇ ಆಗಬೇಕಿಲ್ಲ. ಪ್ರಜಾತಂತ್ರ ವ್ಯವಸ್ಥೆಯ ಒಳಗಿದ್ದುಕೊಂಡೇ ಸರ್ವಾಧಿಕಾರಿಯಾಗಬಹುದು. ಜನರ ಪ್ರಶ್ನೆಗಳಿಗೆ ಉತ್ತರಿಸದೆಯೇ, ಜನವಿರೋಧಿ ಕಾಯ್ದೆಗಳನ್ನು ಬಲವಂತದಿಂದ ಜಾರಿಗೊಳಿಸುತ್ತಲೇ, ಮಾಧ್ಯಮ ಸಂವಾದಗಳನ್ನು ತಪ್ಪಿಸಿಕೊಳ್ಳುತ್ತಾ, ಇಡೀ ಸರಕಾರವನ್ನೇ ಗೃಹ ಬಂಧನದಲ್ಲಿಡುತ್ತಾ ಸಾಗುವುದು ಪ್ರಜಾತಂತ್ರದ ಲಕ್ಷಣವಲ್ಲ. ಪಾರದರ್ಶಕತೆ ಪ್ರಜಾತಂತ್ರದ ಜೀವಾಳ. ಇಲ್ಲಿ ಚರ್ಚೆ, ಸಂವಾದ, ಪ್ರಶ್ನೆ, ಟೀಕೆ, ಅನುಮಾನ, ಪ್ರತಿಭಟನೆ ಸಹಜವಾದುದು. ಆದರೆ ಮೋದಿ ಪ್ರಜಾತಂತ್ರದ ಈ ಮೂಲ ಗುಣವನ್ನೇ ನಿಧಾನವಾಗಿ ನಾಶ ಮಾಡುತ್ತಿದ್ದಾರೆ. ತಾನು ಹೇಳುವುದನ್ನು ಮಾತ್ರ ನೀವು ಆಲಿಸಬೇಕು, ಪ್ರಶ್ನಿಸಬಾರದು ಎಂಬ ದರ್ಪವನ್ನು ಪ್ರದರ್ಶಿಸುತ್ತಿದ್ದಾರೆ. ಇಂದಿರಾ ಗಾಂಧಿಯವರು ತುರ್ತು ಸ್ಥಿತಿಯ ಮೂಲಕ ಒರಟಾಗಿ ಮಾಡಿದುದನ್ನು ಮೋದಿಯವರು ಬುದ್ಧಿವಂತಿಕೆಯಿಂದ ತುಸು ಮೃದುವಾಗಿ ಮಾಡುತ್ತಿದ್ದಾರಷ್ಟೇ. ಈ ವರ್ತನೆ ಆಕ್ಷೇಪಾರ್ಹ ಮತ್ತು ಜನವಿರೋಧಿಯಾದುದು. ಘೋಷಿತ ಸರ್ವಾಧಿಕಾರಿಗಿಂತ ಅಘೋಷಿತ ಸರ್ವಾಧಿಕಾರಿ ಹೆಚ್ಚು ಅಪಾಯಕಾರಿ.