ಝೀಶಾನ್ ಅಲಿ ಖಾನ್ |
ಇವತ್ತಿನ ಸುದ್ದಿಗಳ ಮಾರುಕಟ್ಟೆಯಲ್ಲಿ ನಕಾರಾತ್ಮಕ ಸುದ್ದಿಗಳಿಗೆ ಬಹುಬೇಡಿಕೆಯಿದೆ. ಮಾನಭಂಗ- ಬ್ರೇಕಿಂಗ್ ನ್ಯೂಸ್. ದರೋಡೆ- ಮುಖಪುಟದ ಸುದ್ದಿ. ಕೊಲೆ, ಅತ್ಯಾಚಾರ, ಕ್ರೌರ್ಯಗಳೆಲ್ಲ ವಾರಗಟ್ಟಲೆ ಚರ್ಚಿಸಬಹುದಾದ ಸುದ್ದಿಗಳು. ಹಾಗಂತ ಇವು ಪ್ರಮುಖ ಸುದ್ದಿಗಳಲ್ಲ ಎಂದು ಅರ್ಥವಲ್ಲ. ಆದರೆ ಈ ಸುದ್ದಿಗಳ ನಡುವೆಯೇ ನೂರಾರು ಓಂಕಾರ್‍ಗಳು, ಮುಕುಂದ್‍ರು ಬದುಕುತ್ತಿರುತ್ತಾರೆ. ಅವರು ಮಾನಭಂಗವನ್ನು ಪ್ರಶ್ನಿಸಿರುತ್ತಾರೆ. ಅತ್ಯಾಚಾರವನ್ನು ತಡೆದಿರುತ್ತಾರೆ. ಹತ್ಯಾಕಾಂಡ, ಕ್ರೌರ್ಯಗಳ ವಿರುದ್ಧ ಪ್ರಾಣದ ಹಂಗು ತೊರೆದು ಪ್ರತಿಭಟಿಸಿರುತ್ತಾರೆ. ಆದರೆ ನಕಾರಾತ್ಮಕ ಸುದ್ದಿಗಳ ಮೇಲಿರುವ ನಮ್ಮ ಒಲವು ಅನೇಕ ಬಾರಿ ಇಂಥವರು ಹೀರೋ ಆಗುವುದನ್ನು ತಪ್ಪಿಸಿಬಿಡುತ್ತದೆ. ಈ ದೇಶದಲ್ಲಿ ಕೋಮುಗಲಭೆಗಳು, ಹತ್ಯಾಕಾಂಡಗಳಷ್ಟೇ ನಡೆದಿರುವುದಲ್ಲ. ಅಂಥ ಸಂದರ್ಭದಲ್ಲಿ ಮಾನವೀಯತೆಯ ಅಸಂಖ್ಯ ಘಟನೆಗಳೂ ನಡೆಯುತ್ತಿರುತ್ತವೆ. ಮುಸ್ಲಿಮರನ್ನು ತನ್ನ ಮನೆಯೊಳಗೆ ಕೂರಿಸಿ ರಕ್ಷಿಸಿದ ಹಿಂದೂಗಳಿದ್ದಾರೆ. ಹಿಂದೂಗಳನ್ನು ರಕ್ಷಿಸಿದ ಮುಸ್ಲಿಮರಿದ್ದಾರೆ. ಮುಸ್ಲಿಮರ ಮನೆಗೆ ನೀರು ಒದಗಿಸುವ ಹಿಂದೂ, ಹಿಂದೂಗಳನ್ನು ಮನೆಯ ಸದಸ್ಯರಂತೆ ಪ್ರೀತಿಸುವ ಮುಸ್ಲಿಮ್ ಈ ಸಮಾಜದಲ್ಲಿ ಇವತ್ತೂ ಬದುಕುತ್ತಿದ್ದಾರೆ. ಅವರು ಪರಸ್ಪರ ಮದುವೆ, ಮುಂಜಿ, ಹಬ್ಬಗಳನ್ನು ಹಿಂದೂ-ಮುಸ್ಲಿಮ್ ವಿಭಜನೆಯಿಲ್ಲದೇ ಆಚರಿಸುತ್ತಾರೆ, ಅನುಭವಿಸುತ್ತಾರೆ. ಅವರ ಮೇಲೆ ಮನುಷ್ಯ ವಿರೋಧಿ ಪ್ರಚಾರಗಳು ಪ್ರಭಾವ ಬೀರಿಲ್ಲ. ‘ಲವ್ ಜಿಹಾದ್', ‘ಘರ್ ವಾಪ್‍ಸಿ', ‘ಟೆರರಿಸಂಗಳು ಅವರ ಅನ್ಯೋನ್ಯತೆಯನ್ನು ಕಡಿದು ಬಿಡಲು ಯಶಸ್ವಿಯಾಗಿಲ್ಲ. ನಿಜವಾಗಿ, ಇಂಥ ಮಾನವೀಯ ಘಟನೆಗಳು ಸಮಾಜದ ಮುಂದೆ ಮತ್ತೆ ಮತ್ತೆ ಬರಬೇಕು. ಅವು ಚರ್ಚೆಗೆ ಒಳಪಡಬೇಕು. ಇಂಥವುಗಳಿಗೆ ಹೆಚ್ಚೆಚ್ಚು ಪ್ರಾಮುಖ್ಯತೆ ಲಭಿಸಿದಂತೆಯೇ ಹರೇ ಕೃಷ್ಣ ಎಕ್ಸ್ ಪೋರ್ಟ್ ನಂಥ ಕಂಪೆನಿಗಳು ಮುಜುಗರಕ್ಕೆ ಒಳಗಾಗುತ್ತಲೇ ಹೋಗುತ್ತವೆ. ಅಷ್ಟಕ್ಕೂ, ಮನುಷ್ಯ ವಿರೋಧಿಯಾದ ಕಂಪೆನಿಯನ್ನೋ ವ್ಯಕ್ತಿಯನ್ನೋ ಮುಖ ಮುಚ್ಚಿ ಬದುಕುವಂತೆ ಮಾಡುವುದಕ್ಕೆ ನಾವು ಪ್ರತಿಭಟನೆಯೊಂದನ್ನೇ ಆಶ್ರಯಿಸಿಕೊಳ್ಳಬೇಕಿಲ್ಲ. ಇಂಥ ಮನುಷ್ಯ ಪ್ರೇಮಿ ಮುಖಗಳನ್ನು ಸಾರ್ವಜನಿಕವಾಗಿ ಚರ್ಚೆಗೆ ಒಳಪಡಿಸಿಬಿಟ್ಟರೂ ಸಾಕಾಗುತ್ತದೆ.
ಅಂದಹಾಗೆ, ಝೀಶನ್ ಅಲಿ ಒಂಟಿಯಲ್ಲ. ಆತನಂತೆ ಧರ್ಮದ ಕಾರಣಕ್ಕಾಗಿ ತಿರಸ್ಕೃತಗೊಂಡವರ ದೊಡ್ಡದೊಂದು ಪಟ್ಟಿಯೇ ಈ ದೇಶದಲ್ಲಿದೆ. ಅವರಲ್ಲಿ ಪ್ರತಿಭೆಯಿದೆ, ಶೈಕ್ಷಣಿಕ ಅರ್ಹತೆಯಿದೆ, ದೈಹಿಕವಾದ ಸಾಮರ್ಥ್ಯವೂ ಇದೆ. ಆದರೂ ಅವರು ಸಮಾಜದ ಮುಖ್ಯ ವಾಹಿನಿಯಿಂದ ಆಗಾಗ ತಿರಸ್ಕೃತಗೊಳ್ಳುತ್ತಲೇ ಇರುತ್ತಾರೆ. ಹರೇಕೃಷ್ಣ ಎಕ್ಸ್ ಪೋರ್ಟ್ ಕಂಪೆನಿಯೇನೋ ತನ್ನ ಮನುಷ್ಯ ವಿರೋಧಿ ರೋಗವನ್ನು ಇಮೇಲ್ ಮೂಲಕ ಬಹಿರಂಗವಾಗಿಯೇ ಹೇಳಿಕೊಂಡಿತು. ಆದರೆ ಹೆಚ್ಚಿನೆಲ್ಲ ಸಂಸ್ಥೆಗಳು ಹೀಗೆ ಹೇಳಿಕೊಳ್ಳುವುದಿಲ್ಲ. ಅವು ರೋಗವನ್ನು ಒಳಗೊಳಗೇ ಬಚ್ಚಿಟ್ಟುಕೊಂಡು ಹೊರಗಡೆ ಮನುಷ್ಯ ಪ್ರೇಮದ ಮುಖವಾಡವನ್ನು ಹಾಕಿಕೊಂಡಿರುತ್ತವೆ. ತಮಗೆ ಬಂದ ಅರ್ಜಿಯನ್ನು ದಲಿತರು, ಶೂದ್ರರು, ಮಾದಿಗರು, ಮುಸ್ಲಿಮರು, ಕ್ರೈಸ್ತರು, ಬ್ರಾಹ್ಮಣರು.. ಎಂದು ವಿಭಜಿಸುತ್ತಾ ಪ್ರತಿಭೆಯನ್ನು ಹುಟ್ಟಿನ ಆಧಾರದಲ್ಲಿ ಅವು ವಿಂಗಡಿಸಿಬಿಡುತ್ತವೆ. ನಿಜವಾಗಿ, ಒಂದು ಸಮಾಜದ ಆಲೋಚನಾ ಕ್ರಮವನ್ನೇ ಬದಲಿಸಿಬಿಡಲು ಪ್ರಚೋದನೆ ನೀಡಬಹುದಾದ ಅಪಾಯಕಾರಿ ವರ್ತನೆಗಳಿವು. ಅನೇಕ ಬಾರಿ ಇಂಥ ಪಕ್ಷಪಾತಿ ನಿಲುವುಗಳೇ ವ್ಯಕ್ತಿಯನ್ನು ಕೋಮುವಾದಿಯನ್ನಾಗಿ ಮಾಡಿಬಿಡುತ್ತದೆ. ಉಗ್ರ ಚಿಂತನೆಯೆಡೆಗೆ ದೂಡಿ ಬಿಡುತ್ತದೆ. ದುರಂತ ಏನೆಂದರೆ, ಹೊರನೋಟಕ್ಕೆ ಇಂಥ ಸಂಸ್ಥೆಗಳ ನಿಲುವುಗಳು ಗೋಚರಕ್ಕೆ ಬರುವುದಿಲ್ಲವಾದ್ದರಿಂದ ವ್ಯಕ್ತಿಯ ಕೋಮುವಾದಕ್ಕಾಗಿ ನಾವು ಆತನ ಧರ್ಮವನ್ನು ಹೊಣೆ ಮಾಡುತ್ತೇವೆ. ಆತನ ಉಗ್ರ ಚಿಂತನೆಗೆ ಆತನ ಧರ್ಮದ ವಿಚಾರಧಾರೆಗಳೇ ಕಾರಣ ಅನ್ನುತ್ತೇವೆ. ಆದರೆ ಇವರನ್ನು ಉತ್ಪಾದಿಸುವ ಹರೇಕೃಷ್ಣ ಎಕ್ಸ್ ಪೋರ್ಟ್‍ನಂಥ ಕಂಪೆನಿಗಳು ಯಾವ ಸಂದರ್ಭದಲ್ಲೂ ಕಾನೂನಿನ ವ್ಯಾಪ್ತಿಯೊಳಗೇ ನಿಲ್ಲುವುದೇ ಇಲ್ಲ. ಅವು ಸಮಾಜಕ್ಕೆ ಮತ್ತೆ ಮತ್ತೆ
ಕಂಪೆನಿಯಿಂದ ಬಂದ ಇಮೇಲ್ |