Wednesday, 29 July 2015

ಧರ್ಮವಿಲ್ಲದ ಅಪರಾಧ ಮತ್ತು ಯಾಕೂಬ್ ಮೆಮನ್ ನ ಧರ್ಮ..

  ಜುಲೈ 24ರಂದು ಪ್ರಕಟವಾದ ಭಾರತದ ಗುಪ್ತಚರ ವಿಭಾಗದ (ರಾ) ಮಾಜಿ ಮುಖ್ಯಸ್ಥ ಬಿ. ರಾಮನ್‍ರ ಲೇಖನವು ಯಾಕೂಬ್ ಮೇಮನ್ ಗಲ್ಲು ಶಿಕ್ಷೆಯ ಕುರಿತಾದ ಚರ್ಚೆಗೆ ಹೊಸ ತಿರುವನ್ನು ಕೊಟ್ಟಿದೆ. ಅಲ್ಲದೇ, ಯಾಕೂಬ್ ಮೇಮನ್‍ಗೆ ಕ್ಷಮಾದಾನ ನೀಡಬೇಕೆಂದು ವಿನಂತಿಸಿ ನಿವೃತ್ತ ನ್ಯಾಯಾಧೀಶರುಗಳಾದ ಪಿ.ಬಿ. ಸಾವಂತ್, ಎಸ್.ಎನ್. ಭಾರ್ಗವ, ಕೆ. ಚಂದ್ರು, ಖ್ಯಾತ ಪತ್ರಕರ್ತ ಎನ್. ರಾಮ್, ಬಿಜೆಪಿ ಸಂಸದ ಶತ್ರುಘ್ನ ಸಿನ್ಹ, ಖ್ಯಾತ ನ್ಯಾಯವಾದಿಗಳಾದ ರಾಮ್ ಜೇಠ್ಮಲಾನಿ, ಇಂದಿರಾ ಜೈಸಿಂಗ್, ಸಿನಿಮಾ ರಂಗದ ಮಹೇಶ್ ಭಟ್, ನಸೀರುದ್ದೀನ್ ಶಾ.. ಮುಂತಾದವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದಿರುವುದು- ಈ ಚರ್ಚೆಯನ್ನು ಹಿಂದೂ-ಮುಸ್ಲಿಮ್ ಆಗಿಸುವುದರಿಂದಲೂ ತಡೆದಿದೆ. ಅಪರಾಧಕ್ಕೆ ಧರ್ಮವಿಲ್ಲ. ಅಪರಾಧಿಗಳು ಯಾವ ಧರ್ಮದ ಪ್ರತಿನಿಧಿಗಳೂ ಅಲ್ಲ, ಆಗಬಾರದು ಕೂಡ. ಈ ಮೌಲ್ಯವನ್ನು ಆಧಾರವಾಗಿಟ್ಟುಕೊಂಡೇ ನಾವು ಯಾಕೂಬ್ ಮೇಮನ್ ಪ್ರಕರಣವನ್ನು ಚರ್ಚೆಗೆತ್ತಿಕೊಳ್ಳಬೇಕಾಗಿದೆ. ಮೇಮನ್‍ನ ಅರ್ಜಿಯೊಂದನ್ನು (ಕ್ಯುರೇಟಿವ್) ಸುಪ್ರೀಮ್ ಕೋರ್ಟ್ ಇನ್ನೂ ಇತ್ಯರ್ಥಪಡಿಸುವುದಕ್ಕಿಂತ ಮೊದಲೇ, ಜುಲೈ 30ರಂದು ಆತನನ್ನು ಗಲ್ಲಿಗೇರಿಸುವುದಾಗಿ ಮಹಾರಾಷ್ಟ್ರದ ಬಿಜೆಪಿ ಸರಕಾರವು ಘೋಷಿಸಿತು. ಈ ತುರ್ತಿನ ಉದ್ದೇಶವೇನು? ಈ ಹಿಂದಿನ ಯಾವ ಪ್ರಕರಣದಲ್ಲಾದರೂ ಗಲ್ಲಿಗೇರಿಸಲು ಇಷ್ಟೊಂದು ಅವಸರವನ್ನು ತೋರಲಾಗಿತ್ತೇ? ಅಪರಾಧಿಗೆ ತನ್ನನ್ನು ಸಮರ್ಥಿಸಿಕೊಳ್ಳುವುದಕ್ಕೋ ಅಥವಾ ಕ್ಷಮಾದಾನ ಪಡೆಯುವುದಕ್ಕೋ ಸಕಲ ಅವಕಾಶಗಳನ್ನೂ ಮುಕ್ತವಾಗಿಡುವುದು ನ್ಯಾಯದ ಬೇಡಿಕೆ. ಮಹಾರಾಷ್ಟ್ರ ಸರಕಾರ ಈ ಮೂಲಭೂತ ಸ್ವಾತಂತ್ರ್ಯವನ್ನೇ ಯಾಕೂಬ್‍ನಿಗೆ ನಿರಾಕರಿಸುವ ರೀತಿಯಲ್ಲಿ ವರ್ತಿಸಿದ್ದೇಕೆ? ಯಾಕೂಬ್‍ನ ಗಲ್ಲನ್ನು ನ್ಯಾಯಾಲಯಕ್ಕಿಂತ ನಿರ್ದಿಷ್ಟ ವರ್ಗದ ರಾಜಕಾರಣಿಗಳು ಬಯಸುತ್ತಿದ್ದಾರೆಯೇ? ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಗಳು ‘ಗಲ್ಲನ್ನು' ನಿರ್ಧರಿಸುವ ಹಂತಕ್ಕೆ ತಲುಪುವುದು ಯಾವುದರ ಸೂಚನೆ? ಅಷ್ಟಕ್ಕೂ, ಮೊನ್ನೆ ಜುಲೈ 24ರಂದು ರಾಮನ್‍ರ ರೀಡಿಫ್ ಡಾಟ್ ಕಾಮ್‍ನಲ್ಲಿ ಲೇಖನ ಪ್ರಕಟವಾಗುವವರೆಗೆ ‘ಯಾಕೂಬ್‍ನನ್ನು ಮುಂಬೈಯ ರೈಲ್ವೆ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದರೆಂದೇ..’ ನಂಬಲಾಗಿತ್ತು. ಆತನ ವಿಚಾರಣೆಯ ಸಂದರ್ಭದಲ್ಲಿ, ಗಲ್ಲು ಶಿಕ್ಷೆಯನ್ನು ವಿಧಿಸುವಾಗ ಮತ್ತು ರಾಷ್ಟ್ರಪತಿಯವರು ಆತನ ಕ್ಷಮಾದಾನ ಅರ್ಜಿ ತಿರಸ್ಕರಿಸುವಾಗಲೂ ಇದನ್ನೇ ಸತ್ಯವೆಂದು ನಂಬಲಾಗಿತ್ತು. ಆದರೆ ಆತ ಪಾಕಿಸ್ತಾನದಿಂದ ಬಂದು ಭಾರತದ ಅಧಿಕಾರಿಗಳ ಮುಂದೆ ಶರಣಾಗತನಾಗಿದ್ದ ಎಂದು ಆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ರಾಮನ್‍ರು ಇದೀಗ ಬಹಿರಂಗಪಡಿಸಿದ್ದಾರೆ. ಈ ಮೂಲಕ, ಕಳೆದ 21 ವರ್ಷಗಳಿಂದ ನಾವು ಸತ್ಯವೆಂದು ನಂಬಿಕೊಂಡಿದ್ದ ವಿಷಯವೊಂದು ಸುಳ್ಳು ಎಂಬುದು ಇದೀಗ ಗೊತ್ತಾಗಿದೆ. ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಪೊಲೀಸರ ಈ ಸುಳ್ಳನ್ನೂ ನ್ಯಾಯಾಲಯ ಪುರಾವೆಯಾಗಿ ಪರಿಗಣಿಸಿರಬಹುದಲ್ಲವೇ? ಅಲ್ಲದೇ, ಪ್ರಕರಣದ ವಿಚಾರಣೆ ನಡೆಸಿದ ಟಾಡಾ ನ್ಯಾಯಾಲಯವು 100 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿತ್ತು. ಅದರಲ್ಲಿ ಯಾಕೂಬ್ ಮೇಮನ್ ಸೇರಿದಂತೆ 11 ಮಂದಿಗೆ ಮರಣ ದಂಡನೆಯನ್ನು ವಿಧಿಸಿತ್ತು. ಈ 11 ಮಂದಿಯಲ್ಲಿ ಯಾಕೂಬ್ ಹೊರತಾದ 10 ಮಂದಿಯ ಮೇಲೂ ಗುರುತರ ಆರೋಪಿಗಳಿದ್ದುವು. ಬಾಂಬ್ ಇರಿಸಿದ ಮತ್ತು ಪ್ರಕರಣದಲ್ಲಿ ನೇರವಾಗಿ ಭಾಗಿಯಾದವರೆಂದು ಅವರನ್ನು ಗುರುತಿಸಲಾಗಿತ್ತು. ಅವರಲ್ಲಿ ಕೆಲವರು ಪಾಕಿಸ್ತಾನಕ್ಕೆ ತೆರಳಿ ಬಾಂಬ್ ಸ್ಫೋಟಿಸುವ ಬಗ್ಗೆ ತರಬೇತಿ ಪಡೆದವರೆಂದು ನ್ಯಾಯಾಲಯವೇ ಹೇಳಿತ್ತು. ಆದರೆ, ಯಾಕೂಬ್‍ನ ಮೇಲೆ ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾದ ಆರೋಪವಿತ್ತೇ ಹೊರತು ನೇರವಾಗಿ ಭಾಗಿಯಾಗಿರುವ ಯಾವ ಆರೋಪವೂ ಇರಲಿಲ್ಲ. ಆದರೂ ಯಾಕೂಬ್‍ನ ಮರಣ ದಂಡನೆಯನ್ನು ಖಾಯಂಗೊಳಿಸಿದ ನ್ಯಾಯಾಲಯ ಉಳಿದ 10 ಮಂದಿಯ ಮರಣ ದಂಡನೆಯನ್ನು ಜೀವಾವಧಿ ಸಹಿತ ವಿವಿಧ ಶಿಕ್ಷೆಗಳಾಗಿ ತಗ್ಗಿಸಿತ್ತು. ಹಾಗಂತ, ಇಲ್ಲಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುತ್ತಿಲ್ಲ. ಅದನ್ನು ಗೌರವಿಸುತ್ತಲೇ ಯಾಕೂಬ್‍ನ ಮರಣದಂಡನೆಯಲ್ಲಿ ಆತ ಟೈಗರ್ ಮೇಮನ್‍ನ ಸಹೋದರ ಎಂಬ ಅಂಶವು ಪರಿಣಾಮವನ್ನು ಬೀರಿರಬಹುದೇ ಅನ್ನುವ ಅನುಮಾನವೂ ಮೂಡುತ್ತದೆ. ‘ಟೈಗರ್ ಮೇಮನ್ ಮಾಡಿದ ಅಪರಾಧಕ್ಕೆ ತನ್ನನ್ನು ಗಲ್ಲಿಗೆ ಕೊಡಲಾಗುತ್ತಿದೆ’ ಎಂಬ ಭಾವವೊಂದು ಯಾಕೂಬ್ ಸಹಿತ ಸುಪ್ರೀಮ್ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಮಾರ್ಕಾಂಡೇಯ ಕಾಟ್ಜುರಂತಹವರಲ್ಲೂ ಇದೆ. ನಿಜವಾಗಿ, ಮುಂಬೈ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬುದನ್ನು ಸಾಬೀತುಪಡಿಸಬಲ್ಲ ಏಕೈಕ ಸಾಕ್ಷ್ಯವೇ ಯಾಕೂಬ್ ಮೇಮನ್. ಆತ ಆ ಇಡೀ ಪ್ರಕರಣವನ್ನು ತನಿಖಾಧಿಕಾರಿಗಳ ಮುಂದೆ ವಿವರಿಸಿದ್ದ. ಆ ಸ್ಫೋಟದಲ್ಲಿ ಪಾಕ್ ಯಾವೆಲ್ಲ ನೆರವನ್ನು ನೀಡಿತ್ತು ಎಂಬುದನ್ನೂ ವಿವರಿಸಿದ್ದ. ಅಲ್ಲದೇ, ತನ್ನ ಕುಟುಂಬದ 8 ಮಂದಿ ಸದಸ್ಯರು ಪಾಕ್‍ನಿಂದ ಭಾರತಕ್ಕೆ ಬರುವಂತೆ ನೋಡಿಕೊಂಡಿದ್ದ. ಇವತ್ತು ಯಾಕೂಬ್‍ನನ್ನು ಗಲ್ಲಿಗೇರಿಸಿದುದರಿಂದ ಅತ್ಯಂತ ಸಂತಸಪಡುವವರಲ್ಲಿ ಪಾಕಿಸ್ತಾನವೂ ಒಂದಾಗಬಹುದು. ಯಾಕೆಂದರೆ, ಮುಂಬೈ ಸ್ಫೋಟದಲ್ಲಿ ಪಾಕ್ ಪಾತ್ರವನ್ನು ಸಾಬೀತುಪಡಿಸುವ ಸಾಕ್ಷ್ಯವನ್ನು ಭಾರತ ಈ ಮೂಲಕ ಶಾಶ್ವತವಾಗಿ ಕಳೆದುಕೊಂಡಿತು.
 ಯಾಕೂಬ್ ಮೇಮನ್‍ನು ಜೈಲಿನಲ್ಲಿ ಪವಿತ್ರ ಕುರ್‍ಆನನ್ನು ಇಂಗ್ಲಿಷ್‍ಗೆ ಅನುವಾದಿಸಿದ್ದ, ಆತನಿಗೆ ಮರಣದಂಡನೆ ವಿಧಿಸದಂತೆ ಒತ್ತಾಯಿಸಿ ಆತನಿರುವ ನಾಗ್ಪುರ ಜೈಲಿನ ಇತರ ಕೈದಿಗಳು ಒಂದು ದಿನದ ಉಪವಾಸ ಆಚರಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು, ಜೈಲಿನಲ್ಲಿ ಆತನ ನಡವಳಿಕೆ ಅತ್ಯುತ್ತಮವಾಗಿತ್ತು, ಕಳೆದ ವರ್ಷ ನಕ್ಸಲೀಯ ನಂಟಿನ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ಉಪನ್ಯಾಸಕ ಸಾಯಿಬಾಬರಿಗೆ ಆತ ಉರ್ದು ಕಲಿಸಿದ್ದ.. ಮುಂತಾದುವುಗಳೆಲ್ಲ ಯಾಕೂಬ್‍ನನ್ನು ನಿರಪರಾಧಿಯೆಂದು ಸಾಬೀತುಪಡಿಸುವುದಿಲ್ಲ, ನಿಜ. ಆದರೂ ಯಾಕೂಬ್ ಮೇಮನನ್ನು ಗಲ್ಲಿಗೇರಿಸಲು ನಮ್ಮ ವ್ಯವಸ್ಥೆ ತೋರುವ ಅವಸರವನ್ನು ನೋಡುವಾಗ ಹೀಗೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಯಾಕೂಬ್ ಶರಣಾಗತನಾದದ್ದು 1994ರಲ್ಲಿ. ಆದರೆ ಇದಕ್ಕಿಂತ 5 ವರ್ಷಗಳ ಮೊದಲೇ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಗಿದೆ. ಪಂಜಾಬ್‍ನ ಮುಖ್ಯಮಂತ್ರಿಯಾಗಿದ್ದ ಬಿಯಂತ್ ಸಿಂಗ್‍ರನ್ನು ಕೊಲ್ಲಲಾಗಿದೆ. ಪಂಜಾಬ್‍ನ ಖಾಲಿಸ್ತಾನ್ ಹೋರಾಟವೂ ತುಂಬಾ ಹಳೆಯದು. ಆದರೆ ಈ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದವರಿಗೆ ವಿಧಿಸಲಾಗಿರುವ ಮರಣದಂಡನೆಯನ್ನು ನಮ್ಮ ವ್ಯವಸ್ಥೆ ಈವರೆಗೂ ಜಾರಿಗೊಳಿಸಿಲ್ಲ. ರಾಷ್ಟ್ರಪತಿಯವರಿಂದ ಕ್ಷಮಾದಾನದ ಅರ್ಜಿಯು ತಿರಸ್ಕರಿಸಲ್ಪಟ್ಟ ಬಳಿಕವೂ ಅವರ ಸಹಿತ ಸುಮಾರು 25 ಮಂದಿ ಕೈದಿಗಳು ಇನ್ನೂ ಜೀವಂತವಾಗಿಯೇ ಇದ್ದಾರೆ. ಹೀಗಿರುವಾಗ ಸರದಿಯನ್ನು ತಪ್ಪಿಸಿ ಹಿಂದಿನವರನ್ನು  ಹಾಗೆಯೇ ಉಳಿಸಿಕೊಂಡು ಈತನನ್ನು  ಗಲ್ಲಿಗೆ ಕೊಡುವ ಆಸಕ್ತಿಯನ್ನು ಮಹಾರಾಷ್ಟ್ರದ ಸರಕಾರ ತೋರಲು ಏನು ಕಾರಣ? ಇತರ ಪ್ರಕರಣಗಳಲ್ಲಿ ಇಲ್ಲದ ಅವಸರವೊಂದು ಈ ಪ್ರಕರಣದಲ್ಲಿ ದಿಢೀರ್ ಆಗಿ ಕಾಣಿಸಿಕೊಂಡಿರುವುದೇಕೆ? ಗಲ್ಲಿಗೇರಿಸುವುದನ್ನು ತಡ ಮಾಡಿದರೆ ಯಾಕೂಬ್‍ನಿಗೆ ಮುಂದೊಂದು ದಿನ ಕ್ಷಮಾದಾನ ಸಿಗಬಹುದೆಂಬ ಲೆಕ್ಕಾಚಾರವೊಂದು ಇದರ ಹಿಂದಿರಬಹುದೇ? ರಾಜಕೀಯ ನಾಯಕರ ವೈಯಕ್ತಿಕ ಹಿತಾಸಕ್ತಿಗಳು ಈ ಗಲ್ಲು ಪ್ರಕರಣದಲ್ಲಿ ಪಾತ್ರ ವಹಿಸಿವೆಯೇ? ಅಪರಾಧಿಗಳಿಗೆ ಧರ್ಮವಿಲ್ಲ ಎಂದು ಎಷ್ಟೇ ವಾದಿಸಿದರೂ ಮತ್ತು ಅಪರಾಧಕ್ಕೆ ಧರ್ಮವನ್ನು ಜೋಡಿಸುವುದನ್ನು ನಾವೆಷ್ಟೇ ಬಲವಾಗಿ ಖಂಡಿಸಿದರೂ ನಮ್ಮನ್ನಾಳುವವರ ನಡವಳಿಕೆಗಳು  ನಮ್ಮ ಅಂತರಾತ್ಮವನ್ನು ಚುಚ್ಚುತ್ತಲೇ ಇವೆ.
 ಸಾವಿರಾರು ಮಂದಿಯ ಸಾವಿಗೆ ಕಾರಣವಾದ ಕೋಮುಗಲಭೆಗಳ ರೂವಾರಿಗಳು ಈ ದೇಶದಲ್ಲಿ ಈ ವರೆಗೂ ನೇಣುಗಂಭದ ಹತ್ತಿರವೂ ಸುಳಿದಿಲ್ಲ. ಗುಜರಾತ್‍ನ ನರೋಡಾ ಪಾಟಿಯಾದಲ್ಲಿ 97 ಮಂದಿಯ ಹತ್ಯೆಗೆ ನೇತೃತ್ವ ನೀಡಿದ್ದ ಮಾಯಾ ಕೊಡ್ನಾನಿಯ ಮರಣ ದಂಡನೆಯು ಜೀವಾವಧಿಯಾಗಿ ಪರಿವರ್ತನೆಯಾಗಿದೆ. ಮುಂಬೈ ಬಾಂಬ್ ಸ್ಫೋಟಕ್ಕಿಂತ ಮೊದಲು ನಡೆದ ಮುಂಬೈ ಕೋಮು ಗಲಭೆಯಲ್ಲಿ ಸಾವಿರಕ್ಕಿಂತ ಅಧಿಕ ಮಂದಿ ಸಾವಿಗೀಡಾಗಿದ್ದರು. ಈ ಗಲಭೆಯಲ್ಲಿ ಶಿವಸೇನೆ ಮತ್ತು ಬಿಜೆಪಿಯು ಪ್ರಮುಖ ಪಾತ್ರ ವಹಿಸಿದ್ದನ್ನು ಶ್ರೀ ಕೃಷ್ಣ ಆಯೋಗ ವಿವರವಾಗಿ ಹೇಳಿತ್ತು. ಆದರೆ ಶಿವಸೇನೆಯ ನಾಯಕ ಮಧುಕರ್ ಸರ್‍ಪೋತೆದಾರ್‍ರಿಗೆ ಕೆಳ ನ್ಯಾಯಾಲಯವು ಜುಜುಬಿ ಒಂದು ವರ್ಷದ ಶಿಕ್ಷೆ ಘೋಷಿಸಿದ್ದನ್ನು ಬಿಟ್ಟರೆ ಇನ್ನಾರೂ ಶಿಕ್ಷೆಯ ಹತ್ತಿರವೇ ಸುಳಿಯಲಿಲ್ಲ. ಅಲ್ಲದೇ ಮಧುಕರ್‍ರನ್ನು ಒಂದು ದಿನದ ಮಟ್ಟಿಗಾದರೂ ಜೈಲಿಗೆ ಕಳುಹಿಸಲು ನಮ್ಮ ವ್ಯವಸ್ಥೆಗೆ ಸಾಧ್ಯವಾಗಲಿಲ್ಲ. ಅವರು ಮೇಲಿನ ಕೋರ್ಟಿಗೆ ಹೋದರು. ತೀರ್ಪು ಬರುವುದಕ್ಕಿಂತ ಮೊದಲೇ ಅವರು ಮೃತಪಟ್ಟರು. ಇದರ ಜೊತೆಗೇ, ಮಾಲೆಗಾಂವ್, ಸಮ್ಜೋತಾ, ಅಜ್ಮೀರ್ ಸ್ಫೋಟಗಳ ಕುರಿತಾದ ನಿಧಾನಗತಿಯ ತನಿಖೆಯನ್ನು ಇಟ್ಟು ನೋಡುವಾಗ ಯಾಕೂಬ್ ಮೇಮನ್ ಪ್ರಕರಣದಲ್ಲಿ ಸರಕಾರ ತೋರಿದ ಅವಸರವು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಯಾಕೂಬ್ ಅಪರಾಧಿಯೇ ಆಗಿರಬಹುದು. ಆದರೂ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿ ಆತ ಭಾರತಕ್ಕೆ ಶರಣಾಗಿದ್ದ. ಆತನ ವಿಷಯದಲ್ಲಿ ನ್ಯಾಯಾಲಯದ ನಿಲುವು ಕಠಿಣವಾಯಿತೆಂಬ ಅಭಿಪ್ರಾಯವು ಪ್ರಮುಖ ನ್ಯಾಯತಜ್ಞರಲ್ಲೂ ಇದೆ. ಆದ್ದರಿಂದ, ಈ ಎಲ್ಲವೂ ಸಾವಧಾನವಾಗಿ ಚರ್ಚೆಗೀಡಾಗಬೇಕಿತ್ತು. ತಮ್ಮನ (ಟೈಗರ್ ಮೇಮನ್) ಕೃತ್ಯಕ್ಕೆ ಅಣ್ಣನನ್ನು ಗಲ್ಲಿಗೇರಿಸಲಾಯಿತೆಂಬ ಅಪವಾದವೊಂದು ಭಾರತೀಯ ನ್ಯಾಯಾಂಗದ ಮೇಲೆ ಹೊರಿಸದಿರುವುದಕ್ಕಾಗಿಯಾದರೂ ಈ ಪ್ರಕರಣ ಮರುಪರಿಶೀಲನೆಗೆ ಒಳಪಡಬೇಕಿತ್ತು.

Wednesday, 22 July 2015

ಇಫ್ತಾರ್ ಪಾರ್ಟಿ ಮತ್ತು ಪ್ರಧಾನಿ ಮೋದಿ

ಪಾರ್ಲಿಮೆಂಟ್ ಭವನದ ಹತ್ತಿರ ಏರ್ಪಡಿಸಲಾದ ಇಫ್ತಾರ್ ಪಾರ್ಟಿಯಲ್ಲಿ ಇಂದ್ರೇಶ್ ಕುಮಾರ್
     ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಆಯೋಜಿಸಿದ ಇಫ್ತಾರ್ ಪಾರ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸದೇ ಇರುವ ಮೂಲಕ ‘ಸೆಕ್ಯುಲರ್' ಚರ್ಚೆಯನ್ನು ಮತ್ತೊಮ್ಮೆ ಚಾಲ್ತಿಗೆ ತಂದಿದ್ದಾರೆ. ಕಳೆದ ವರ್ಷವೂ ಅವರು ರಾಷ್ಟ್ರಪತಿ ಭವನದ ಇಫ್ತಾರ್ ಪಾರ್ಟಿಯಿಂದ ತಪ್ಪಿಸಿಕೊಂಡಿದ್ದರು. ಮೋದಿಯವರ ಈ ನಡೆಯನ್ನು ಆರೆಸ್ಸೆಸ್ ಕೊಂಡಾಡಿದೆ. ತನ್ನ ಮುಖವಾಣಿ ಆರ್ಗನೈಝರ್ ಪತ್ರಿಕೆಯಲ್ಲಿ ‘ದ ಸೆಕ್ಯುಲರ್ ಟೋಕನಿಸಂ' (ಜಾತ್ಯತೀತ ಗುರುತು) ಎಂಬ ಶೀರ್ಷಿಕೆಯಲ್ಲಿ ಈ ಕುರಿತಂತೆ ಅದು ಸಂಪಾದಕೀಯವನ್ನು ಬರೆದಿದೆ. ಆದರೆ, ಇದಾದ ಕೆಲವೇ ದಿನಗಳಲ್ಲಿ ಆರೆಸ್ಸೆಸ್‍ನ ಅಂಗಸಂಸ್ಥೆಯಾದ ಮುಸ್ಲಿಮ್ ರಾಷ್ಟ್ರೀಯ ಮಂಚ್ (ಎಂ.ಆರ್.ಎಂ.) ಒಂದಕ್ಕಿಂತ ಹೆಚ್ಚು ಇಫ್ತಾರ್ ಪಾರ್ಟಿಗಳನ್ನು ಆಯೋಜಿಸಿತು. ದೆಹಲಿಯ ಪಾರ್ಲಿಮೆಂಟ್ ಭವನದ ಹತ್ತಿರ ಏರ್ಪಡಿಸಲಾದ ಇಫ್ತಾರ್ ಪಾರ್ಟಿಯಲ್ಲಿ ಕೇಂದ್ರ ಸಚಿವ ಹರ್ಷವರ್ಧನ್ ಹಾಗೂ ಆರೆಸ್ಸೆಸ್ ಹಿರಿಯ ನಾಯಕ ಮತ್ತು ಎಂ.ಆರ್.ಎಂ.ನ ಸ್ಥಾಪಕ ಇಂದ್ರೇಶ್ ಕುಮಾರ್ ಭಾಗವಹಿಸಿದರು. ಆ ನಂತರ ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಲಕ್ನೋಗಳಲ್ಲೂ ಎಂ.ಆರ್.ಎಂ. ಇಫ್ತಾರ್ ಪಾರ್ಟಿಯನ್ನು ಏರ್ಪಡಿಸಿತು. ಅದರಲ್ಲಿ ಆರೆಸ್ಸೆಸ್‍ನ ಪ್ರಚಾರಕ್ ಮತ್ತು ಎಂ.ಆರ್.ಎಂ.ನ ರಾಷ್ಟ್ರೀಯ ಸಹಸಂಚಾಲಕ್ ಮಹಿರಾಜ್‍ಧ್ವಜ್ ಸಿಂಗ್ ಭಾಗವಹಿಸಿದರು. ಒಂದು ಕಡೆ, ಇಫ್ತಾರ್ ಪಾರ್ಟಿಯನ್ನು ತಪ್ಪಿಸಿಕೊಂಡ ನರೇಂದ್ರ ಮೋದಿಯವರನ್ನು ಕೊಂಡಾಡುತ್ತಲೇ ಇನ್ನೊಂದು ಕಡೆ, ತನ್ನ ಅಂಗಸಂಸ್ಥೆಯ ಮೂಲಕವೇ ಇಫ್ತಾರ್ ಪಾರ್ಟಿಯನ್ನು ಆಯೋಜಿಸುವುದು ಮತ್ತು ಸ್ವಯಂ ಅದರಲ್ಲಿ ಭಾಗವಹಿಸುವುದು - ಏನಿದರ ಉದ್ದೇಶ? ಇದು ದ್ವಂದ್ವವೋ ತಂತ್ರವೋ? ಎಂ.ಆರ್.ಎಂ. ಆಯೋಜಿಸುವ ಇಫ್ತಾರ್ ಪಾರ್ಟಿಯು ‘ಅಲ್ಪಸಂಖ್ಯಾತೀಕರಣ'ಕ್ಕೆ ಪ್ರೋತ್ಸಾಹ ಅಥವಾ ತುಷ್ಠೀಕರಣ ಆಗುವುದಿಲ್ಲವಾದರೆ ರಾಷ್ಟ್ರಪತಿಯವರ ಇಫ್ತಾರ್ ಕೂಟ ಯಾಕೆ ಹಾಗಾಗಬೇಕು? ಅದರಿಂದ ತಪ್ಪಿಸಿಕೊಂಡ ಪ್ರಧಾನಿಯರನ್ನೇಕೆ ಮೆಚ್ಚಿಕೊಳ್ಳಬೇಕು? ಅಷ್ಟಕ್ಕೂ, ರಾಷ್ಟ್ರಪತಿಯವರು ರಾಜಕಾರಣಿ ಅಲ್ಲವಲ್ಲ. ಅಲ್ಲದೇ, ಇಫ್ತಾರ್‍ನಿಂದ ಅವರು ಪಡಕೊಳ್ಳುವುದಕ್ಕೆ ಏನೇನೂ ಇಲ್ಲ. ನಿಜವಾಗಿ, ಈ ದೇಶದ ಸೆಕ್ಯುಲರ್ ಪರಂಪರೆಯನ್ನು ಎತ್ತಿ ಹಿಡಿಯುವ ತಾಣ ರಾಷ್ಟ್ರಪತಿ ಭವನ. ರಾಜಕಾರಣಿಗಳು ಒಂದೊಮ್ಮೆ ಸಂವಿಧಾನಬಾಹಿರವಾಗಿ ವರ್ತಿಸಬಹುದು. ಅಗ್ಗದ ಜನಪ್ರಿಯತೆಗಾಗಿ ಪರಮ ಸುಳ್ಳನ್ನೂ ಆಡಬಹುದು. ಭ್ರಷ್ಟರು, ಮಾನವ ದ್ವೇಷಿಗಳೂ ಆಗಬಹುದು. ಆದರೆ ರಾಷ್ಟ್ರಪತಿಯವರಿಗೆ ಇಂಥ ದರ್ದು ಇಲ್ಲ. ಅವರು ಜನಪ್ರತಿನಿಧಿ ಅಲ್ಲ, ಜನರ ಓಟಿನ ಹಂಗೂ ಅವರಿಗಿಲ್ಲ. ಆದ್ದರಿಂದಲೇ, ರಾಷ್ಟ್ರಪತಿಯವರು ಆಯೋಜಿಸುವ ಇಫ್ತಾರ್ ಪಾರ್ಟಿಯನ್ನೂ ಮತ್ತು ರಾಜಕೀಯ ಪಕ್ಷವೊಂದು ಆಯೋಜಿಸುವ ಇಫ್ತಾರ್ ಪಾರ್ಟಿಯನ್ನೂ ಬೇರೆ ಬೇರೆಯಾಗಿ ನೋಡಬೇಕಾಗುತ್ತದೆ. ಹಾಗಂತ, ಪ್ರಧಾನಿ ನರೇಂದ್ರ ಮೋದಿಯವರಿಗೆ ಅಥವಾ ಆರೆಸ್ಸೆಸ್‍ಗೆ ಈ ವ್ಯತ್ಯಾಸದ ಅರಿವು ಇಲ್ಲ ಅನ್ನುವುದು ನಮ್ಮ ದಡ್ಡತನವಾಗುತ್ತದೆ. ಬಹುಶಃ, ಅವರು ಇನ್ನಾವುದನ್ನೋ ವಿರೋಧಿಸುತ್ತಿದ್ದಾರೆ. ಎಂ.ಆರ್.ಎಂ. ಆಯೋಜಿಸುತ್ತಿರುವುದು ಇಫ್ತಾರ್ ಪಾರ್ಟಿಗಳನ್ನಲ್ಲ ಎಂದು ನಾವು ಈ ಕಾರಣದಿಂದಲೇ ಹೇಳಬೇಕಾಗುತ್ತದೆ. ಅದು ಇಫ್ತಾರ್ ಪಾರ್ಟಿ ಎಂಬ ಶೀರ್ಷಿಕೆಯಡಿಯಲ್ಲಿ ಆರೆಸ್ಸೆಸ್‍ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮುಸ್ಲಿಮರನ್ನು ಸೆಳೆಯುವುದೇ ಅದರ ಉದ್ದೇಶ. ಆರೆಸ್ಸೆಸ್‍ನ ಬಗ್ಗೆ ಮೃದು ಧೋರಣೆಯನ್ನು ತಳೆಯುವ ಮತ್ತು ಅದರ ಅಜೆಂಡಾಗಳನ್ನು ಸಮರ್ಥಿಸಿ ಮಾತಾಡುವ ಮುಸ್ಲಿಮರನ್ನು ತಯಾರಿಸುವುದಕ್ಕೆ ಅದು ಇಫ್ತಾರ್ ಪಾರ್ಟಿಯನ್ನು ಒಂದು ತಂತ್ರವಾಗಿ ಬಳಸಿಕೊಳ್ಳುತ್ತಿದೆ. ಇದನ್ನು ಅರಿತೇ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ರಾಷ್ಟ್ರಪತಿಯವರ ಇಫ್ತಾರ್‍ನಲ್ಲಿ ಈ ಒಳ ಉದ್ದೇಶಗಳಿಲ್ಲ. ಅದು ನೇರವಾಗಿ ಒಂದು ಧರ್ಮದ ಭಾವನೆಗಳಿಗೆ ಸ್ಪಂದಿಸುವ ಗುಣವನ್ನಷ್ಟೇ ಹೊಂದಿದೆ. ಈ ಸ್ಪಂದನೆ ನರೇಂದ್ರ ಮೋದಿಯವರಿಗೆ ಬೇಕಾಗಿಲ್ಲ. 
    ಸೆಕ್ಯುಲರ್ ಎಂಬ ಪದವನ್ನು ನಿಂದಿಸಿ, ತೆಗಳಿ, ಅಪಹಾಸ್ಯಗೊಳಿಸಿ, ನಜ್ಜುಗುಜ್ಜಾಗಿಸಿದ ಕೀರ್ತಿ ಮೋದಿ ಮತ್ತು ಅವರ ಬೆಂಬಲಿಗರಿಗೆ ಸಲ್ಲಬೇಕು. ಸೆಕ್ಯುಲರ್ ಎಂದು ಗುರುತಿಸಿಕೊಳ್ಳುವುದು ದೇಶದ್ರೋಹವೇನೋ ಎಂದು ಭಯಪಡುವಷ್ಟರ ಮಟ್ಟಿಗೆ ಅವರು ಕಳೆದ ಚುನಾವಣೆಯಲ್ಲೂ ಅದಕ್ಕಿಂತ ಮೊದಲೂ ವರ್ತಿಸಿದರು. ಕಳೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ‘ಸೆಕ್ಯುಲರ್' ಪದವಿಲ್ಲದ ಸಂವಿಧಾನದ ಪ್ರತಿಯನ್ನು ಜಾಹೀರಾತಾಗಿ ಪ್ರಕಟಿಸಿದರು. ‘ಸಿಕ್‍ಲರ್, ‘ಲದ್ದಿ'(ಬುದ್ಧಿ)ಜೀವಿಗಳು, ‘ವ್ಯಾಧಿ'ಜೀವಿಗಳು.. ಮುಂತಾದ ವ್ಯಂಗ್ಯಭರಿತ ಪದಗಳ ಮೂಲಕ ಜಾತ್ಯತೀತವಾದಿಗಳನ್ನು ಚುಚ್ಚಿದರು. ವಿಶೇಷ ಏನೆಂದರೆ, ಮುಸ್ಲಿಮರ ಇಫ್ತಾರ್, ಈದ್, ನಮಾಝ್‍ಗಳಲ್ಲಿ ಮುಸ್ಲಿಮೇತರ ರಾಜಕಾರಣಿಗಳು ಭಾಗವಹಿಸಿದರೆ ಅದನ್ನು ಸೋಗಲಾಡಿ ಸೆಕ್ಯುಲರ್‍ತನ ಅನ್ನುವ ಇವರೇ ಮುಸ್ಲಿಮ್ ರಾಜಕಾರಣಿಗಳು ಜಾತ್ರೆ, ಹಬ್ಬ, ಯೋಗಗಳಲ್ಲಿ ಭಾಗವಹಿಸಿದರೆ ಅದನ್ನು ಭಾರತೀಯತೆ ಅನ್ನುತ್ತಾರೆ. ಅದು ‘ಸಿಕ್‍ಲರ್' ಆಗುವುದೂ ಇಲ್ಲ, ಭಾಗವಹಿಸಿದವರು ಸೋಗಲಾಡಿಗಳೂ ಆಗುವುದಿಲ್ಲ. ನಿಜವಾಗಿ, ಭಾರತೀಯರು ಹಿಂದೂ ಮತ್ತು ಮುಸ್ಲಿಮ್ ಆಗಿ ವಿಭಜನೆಗೊಳ್ಳುವ ಸಂದರ್ಭವೊಂದಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರವು ವೇದಿಕೆಯನ್ನು ಸಿದ್ಧಪಡಿಸುತ್ತಿದೆ. ಈ ಹಿಂದೆ ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದ ವೇಳೆ ಮೋದಿಯವರು ಮುಸ್ಲಿಮರ ಟೋಪಿಯನ್ನು ಧರಿಸುವುದಕ್ಕೆ ನಿರಾಕರಿಸಿದ್ದರು. ಅಷ್ಟಕ್ಕೂ, ಟೋಪಿ ಧರಿಸುವ ಅಥವಾ ಧರಿಸದೇ ಇರುವ ಸ್ವಾತಂತ್ರ್ಯ ನರೇಂದ್ರ ಮೋದಿಯವರಿಗೆ ಖಂಡಿತ ಇದೆ. ಅವರ ಧಾರ್ಮಿಕ ಭಾವನೆಗೆ ಅದು ಧಕ್ಕೆ ತರುತ್ತದೆ ಎಂದಾದರೆ ಅವರ ನಿರ್ಧಾರವನ್ನು ಗೌರವಿಸಲೇಬೇಕಾಗುತ್ತದೆ. ಆದರೆ ನರೇಂದ್ರ ಮೋದಿಯವರು ಆ ಘಟನೆಯ ಹಿಂದೆ ಮತ್ತು ಆ ಬಳಿಕ ನಡೆದುಕೊಂಡ ರೀತಿಯನ್ನು ಅವಲೋಕಿಸುವಾಗ ಅವರ ಟೋಪಿ ನಿರಾಕರಣೆಯ ಉದ್ದೇಶ ಶುದ್ಧಿಯು ಪ್ರಶ್ನಾರ್ಹಗೊಳ್ಳುತ್ತದೆ. ಅವರು ಆ ಬಳಿಕ ವಿವಿಧ ರಾಜ್ಯಗಳಿಗೆ ಭೇಟಿ ಕೊಟ್ಟಿದ್ದಾರೆ. ಆಗೆಲ್ಲ ಅಲ್ಲಿನ ಟೋಪಿಯನ್ನೋ ಸಾಂಪ್ರದಾಯಿಕ ಬಟ್ಟೆಗಳನ್ನೋ ತೊಟ್ಟಿದ್ದಾರೆ. ಆಗೆಲ್ಲ ಅವರಿಗೆ ಅದು ಸೋಗಲಾಡಿಯಾಗಿ ಕಾಣಿಸಿಲ್ಲ. ಕೇವಲ ಮುಸ್ಲಿಮರಿಗೆ ಸಂಬಂಧಿಸಿದ ಗುರುತುಗಳಲ್ಲಷ್ಟೇ ಅವರು ಸೋಗಲಾಡಿತನವನ್ನು ಕಾಣುತ್ತಿದ್ದಾರೆ. ಒಂದು ರೀತಿಯಲ್ಲಿ, ಮುಸ್ಲಿಮ್ ಐಡೆಂಟಿಟಿಯ ಕುರಿತಂತೆ ಅವರಲ್ಲಿ ತಿರಸ್ಕಾರ ಭಾವವಿದೆ. ಮುಸ್ಲಿಮ್ ಆಚರಣೆಗಳನ್ನು ಅವರು ನೋಡುವ ದೃಷ್ಟಿಕೋನಕ್ಕೂ ಇತರ ಆಚಾರ-ವಿಚಾರಗಳನ್ನು ನೋಡುವ ದೃಷ್ಟಿಕೋನಕ್ಕೂ ಬಹಳ ಅಂತರ ಕಾಣುತ್ತಿದೆ. ಅವರು ಮುಸ್ಲಿಮರೊಂದಿಗೆ ಬೆರೆಯುವುದನ್ನು ಮತ್ತು ಆತ್ಮೀಯತೆ ಪ್ರಕಟಿಸುವುದನ್ನು ಸ್ವಇಚ್ಛೆಯಿಂದಲೇ ತಪ್ಪಿಸಿಕೊಳ್ಳುತ್ತಿದ್ದಾರೆ. ಬಹುಶಃ, ಮುಸ್ಲಿಮರನ್ನು ದೂರ ಇಟ್ಟಷ್ಟೂ ತಾನು ಹಿಂದೂಗಳಿಗೆ ಹತ್ತಿರವಾಗುವೆನೆಂಬ ನಂಬಿಕೆಯೊಂದು ಅವರಲ್ಲಿರಬೇಕು.. ಆದ್ದರಿಂದಲೇ ಅವರು ಯೋಗಿ ಆದಿತ್ಯನಾಥ್, ಸಾಧ್ವಿ ಪ್ರಾಚಿ, ಬಾಲಿಕಾ ಸರಸ್ವತಿ.. ಮುಂತಾದವರನ್ನು ಸಹಿಸಿಕೊಂಡಿರುವುದು. ಇವರೆಲ್ಲ ಮಾತಾಡಿದಷ್ಟೂ ತನ್ನ ವರ್ಚಸ್ಸು ವೃದ್ಧಿಯಾಗುತ್ತದೆಂದು ಅವರು ಭಾವಿಸಿರಬೇಕು. 
     ಏನೇ ಆಗಲಿ, ರಾಷ್ಟ್ರಪತಿಯವರ ಇಫ್ತಾರ್ ಕೂಟಕ್ಕೆ ಹಾಜರಾಗದ ಪ್ರಧಾನಿಯವರನ್ನು ಮೆಚ್ಚಿಕೊಳ್ಳುವ ಆರೆಸ್ಸೆಸ್ ಇನ್ನೊಂದೆಡೆ ತನ್ನದೇ ಅಂಗಸಂಸ್ಥೆಯಾದ ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ಮೂಲಕ ಇಫ್ತಾರ್ ಪಾರ್ಟಿಯನ್ನು ಏರ್ಪಡಿಸಿದ್ದು ಮತ್ತು ಅದರಲ್ಲಿ ಸ್ವಯಂ ಭಾಗವಹಿಸಿದ್ದನ್ನು ನಾವು ಬರೇ ದ್ವಂದ್ವವಾಗಿಯಷ್ಟೇ ಕಾಣಬೇಕಿಲ್ಲ. ಒಂದು ವೇಳೆ ಅದು ದ್ವಂದ್ವ ಎಂದಾದರೆ ಅದು ಪೂರ್ಣವಾಗಿ ಅರಿವಿದ್ದೇ ಮಾಡಿದ ದ್ವಂದ್ವ. ಅದರ ಹಿಂದೆ ದುರುದ್ದೇಶವಿದೆ. ನರೇಂದ್ರ ಮೋದಿಯವರು ಆ ದುರುದ್ದೇಶದ ಒಂದು ತುದಿಯಾದರೆ ಇನ್ನೊಂದು ತುದಿ ಮುಸ್ಲಿಮ್ ರಾಷ್ಟ್ರೀಯ ಮಂಚ್. ಆಂತರಿಕವಾಗಿ ಅವರಿಬ್ಬರ ಮಧ್ಯೆ ಯಾವ ದ್ವಂದ್ವವೂ ಇಲ್ಲ. ಅವರಿಬ್ಬರೂ ಒಂದು ಯೋಜಿತ ಅಜೆಂಡಾದ ಪಾತ್ರಧಾರಿಗಳಷ್ಟೇ. 


Wednesday, 15 July 2015

ದೂರಿನೊಂದಿಗೆ ನಿರ್ಗಮಿಸದಿರಲಿ..

    ‘ದೂರು' ಸಾರ್ವತ್ರಿಕವಾದುದು. ಹೆತ್ತವರಿಗೆ ಮಕ್ಕಳ ಮೇಲೆ ದೂರುಗಳಿರುತ್ತವೆ. ಮಕ್ಕಳಿಗೆ ಶಿಕ್ಷಕರ ಮೇಲೆ ದೂರುಗಳಿರುತ್ತವೆ. ರೋಗಿಗಳಿಗೆ ವೈದ್ಯರ ಮೇಲೆ ದೂರುಗಳಿರುತ್ತವೆ. ವ್ಯವಸ್ಥೆಯ ಮೇಲೆ ನಾಗರಿಕರಿಗೆ ದೂರುಗಳಿರುತ್ತವೆ. ಪೊಲೀಸರು, ಶ್ರೀಮಂತರು, ರಾಜಕಾರಣಿಗಳು, ಅಧಿಕಾರಿಗಳು, ವಿದ್ವಾಂಸರು, ಪತಿ, ಪತ್ನಿ.. ಹೀಗೆ ದೂರುಗಳ ಸರಣಿ ಬಹಳ ದೀರ್ಘವಾದುದು. ನಿಜವಾಗಿ, ರಮಝಾನ್ ಆಗಮಿಸುವುದೇ ಈ ಎಲ್ಲ ದೂರುಗಳ ಪರಿಹಾರದ ಭರವಸೆಯೊಂದಿಗೆ. ಅದು ‘ದೂರುರಹಿತ’ ಸುಂದರ ಜಗತ್ತೊಂದನ್ನು ಕಟ್ಟಿಕೊಡುತ್ತದೆ. ಹಸಿವಿನ ದೂರಿಗೆ ಅದರಲ್ಲಿ ಉತ್ತರವಿದೆ. ಅಧಿಕಾರಿಗಳ ವಂಚನೆಗೆ ಅದರಲ್ಲಿ ಪರಿಹಾರವಿದೆ. ಹೊಣೆರಹಿತ ರಾಜಕಾರಣಿ, ‘ಪತಿಧರ್ಮ'ವನ್ನು ಪಾಲಿಸದ ಪತಿ, ಪೋಷಕ ಧರ್ಮವನ್ನು ಅನುಸರಿಸದ ಹೆತ್ತವರು, ಸತ್ಯ ಹೇಳದ ವಿದ್ವಾಂಸ, ವಂಚಕ ವ್ಯಾಪಾರಿ.. ಎಲ್ಲದಕ್ಕೂ ಅದು ಪರಿಹಾರದ ಭರವಸೆಯಾಗಿ ಆಗಮಿಸುತ್ತದೆ, ತರಬೇತಿ ಕೊಡುತ್ತದೆ. ಅದರ ಒಂದು ತಿಂಗಳ ತರಬೇತಿ ಎಷ್ಟು ಪ್ರಭಾವಶಾಲಿ ಎಂದರೆ ಬಹುತೇಕ ದೂರುಗಳೇ ಸ್ಥಗಿತಗೊಳ್ಳುತ್ತವೆ. ಉಪವಾಸ ಆಚರಿಸಿದ ಪ್ರತಿಯೊಬ್ಬನೂ/ಳೂ ಈ ‘ದೂರುರಹಿತ’ ಸಮಾಜದ ಭಾಗವಾಗಬಯಸುತ್ತಾನೆ. ಆದರೂ ಪುಟ್ಟದೊಂದು ಅಂಜಿಕೆ, ರಮಝಾನ್‍ನ ನಿರ್ಗಮನದೊಂದಿಗೆ ದೂರುಗಳು ಮರುಕಳಿಸಬಹುದೇ? ರಮಝಾನ್ ಹೇಳಿಕೊಟ್ಟ ಪಾಠವನ್ನು ಉಲ್ಲಂಘಿಸುವ ವಿದ್ಯಾರ್ಥಿಗಳು ಕಾಣಿಸಿಕೊಂಡಾರೇ? ದೂರುಗಳೇ ಪ್ರಾಬಲ್ಯವನ್ನು ಪಡೆಯಬಲ್ಲಂತಹ ವಾತಾವರಣವನ್ನು ಅವರು ಸೃಷ್ಟಿಸುವರೇ? ನಿರ್ಗಮಿಸುತ್ತಿರುವ ರಮಝಾನ್‍ನ ಜೊತೆಜೊತೆಗೇ ಕಾಡುವ ನೋವುಗಳಿವು.
    ಪ್ರತಿವರ್ಷವೂ ರಮಝಾನ್‍ನ ಆಗಮನ ಮತ್ತು ನಿರ್ಗಮನ ನಡೆಯುತ್ತಲೇ ಇರುತ್ತದೆ. ಮಾತ್ರವಲ್ಲ, ಈ ಆಗಮನ ಮತ್ತು ನಿರ್ಗಮನದ ಎರಡೂ ಸಂದರ್ಭಗಳಲ್ಲೂ ಮುಸ್ಲಿಮರಲ್ಲಿ ಸಡಗರ ಇರುತ್ತದೆ. ಆದರೆ, ಈ ಎರಡು ಸಡಗರಗಳ ನಡುವಿನ ವ್ಯತ್ಯಾಸ ಏನೆಂದರೆ, ಆಗಮನದ ಸಡಗರದಲ್ಲಿರದ ಭಾವತೀವ್ರತೆಯೊಂದು ನಿರ್ಗಮನದ ಸಡಗರದಲ್ಲಿರುತ್ತದೆ. ಸಾಮಾನ್ಯವಾಗಿ, ರಮಝಾನ್‍ನ ಆಗಮನದ ಸಮಯದಲ್ಲಿ ಮುಸ್ಲಿಮರು ಹೊಸ ಬಟ್ಟೆ ಧರಿಸುವುದಿಲ್ಲ, ಪರ್ಫ್ಯೂಮ್ ಪೂಸುವುದಿಲ್ಲ. ಬಗೆಬಗೆಯ ಆಹಾರಗಳನ್ನು ತಯಾರಿಸಿ ಖುಷಿ ಪಡುವುದಿಲ್ಲ. ಆದರೆ ನಿರ್ಗಮನದ ಸಮಯದಲ್ಲಿ ಇವೆಲ್ಲವೂ ಇರುತ್ತದೆ. ಆದರೂ ಉಪವಾಸಿಗರು ಭಾವುಕರಾಗುವುದೇಕೆ? ಹೊಸ ಬಟ್ಟೆ, ಪರ್ಫ್ಯೂಮ್, ಆಲಿಂಗನ, ಶುಭಾಶಯ.. ಇವೆಲ್ಲವುಗಳ ಹೊರತಾಗಿಯೂ ಭಾವತೀವ್ರತೆಯೊಂದು ಹರಿದಾಡಲು ಕಾರಣವೇನು? ಬಾಹ್ಯವಾಗಿ ನೋಡುವಾಗ ರಮಝಾನ್‍ನ ಆಗಮನಕ್ಕಿಂತ ಹೆಚ್ಚು ಸಡಗರ ಪಡಬೇಕಾದ ಸಂದರ್ಭ ನಿರ್ಗಮನದ್ದು. ಹೊಸಬಟ್ಟೆ..ಗಳೆಲ್ಲ ಹೇಳುವುದೂ ಅದನ್ನೇ. ಆದರೂ ಇದಕ್ಕೆ ವ್ಯತಿರಿಕ್ತವಾದ ಭಾವುಕ ವಾತಾವರಣವೊಂದು ಉಪವಾಸಿಗರ ನಡುವೆ ಸೃಷ್ಟಿಯಾಗುವುದರ ಒಳಗುಟ್ಟು ಏನಿರಬಹುದು? ಬಹುಶಃ, ರಮಝಾನ್ ಬರೇ ಹಸಿವು, ಬಾಯಾರಿಕೆ, ಸುಸ್ತು, ತೂಕ ಇಳಿತದ ಹೆಸರಷ್ಟೇ ಆಗಿರುತ್ತಿದ್ದರೆ ಅದರ ನಿರ್ಗಮನಕ್ಕೆ ಅತ್ಯಂತ ಸಂತಸಪಡುವವರಲ್ಲಿ ಉಪವಾಸಿಗರು ಮುಂದಿರುತ್ತಿದ್ದರು. ಅಷ್ಟಕ್ಕೂ, ‘ಸಂಕಷ್ಟ' ಕೊಡುವ ಒಂದು ತಿಂಗಳನ್ನು ಇಷ್ಟಪಡುವವರಾದರೂ ಯಾರಿರುತ್ತಾರೆ? ಆದರೆ, ಉಪವಾಸ ಅದರಾಚೆಗಿನ ಕಾರಣಕ್ಕಾಗಿಯೇ ಮುಖ್ಯವಾಗಿರುತ್ತದೆ. ರಮಝಾನ್ ಬರೇ ಒಂದು ತಿಂಗಳಷ್ಟೇ ಅಲ್ಲ, ಅದೊಂದು ಮೌಲ್ಯದ ಹೆಸರು. ಆದ್ದರಿಂದಲೇ ಅದರ ನಿರ್ಗಮನವು ಹೃದಯವನ್ನು ಆರ್ದ್ರಗೊಳಿಸುತ್ತದೆ. ಹೊಸಬಟ್ಟೆ ಧರಿಸಿದ ಉಪವಾಸಿಗನ/ಳ ಕಣ್ಣಂಚನ್ನು ಒದ್ದೆ ಮಾಡುತ್ತದೆ. ನಿಜವಾಗಿ, ಈ ಭಾವುಕತೆ ಈದ್‍ನ ಬಳಿಕವೂ ಉಪವಾಸಿಗರಲ್ಲಿ ವ್ಯಕ್ತಗೊಳ್ಳುತ್ತಿರಬೇಕು. ಸುಳ್ಳು, ಮೋಸ, ಹಿಂಸೆ, ಅಹಂ, ಅನೈತಿಕತೆಯಂತಹ ಸಾಮಾಜಿಕ ವಾತಾವರಣದಲ್ಲಿ ತಾನು ‘ಉಪವಾಸಿ’ ಆಗಬೇಕು. ಅಸಮಾನತೆ ಮತ್ತು ಅಸಹಿಷ್ಣುತೆಯ ಸಮಾಜದಲ್ಲಿ ‘ಉಪವಾಸಿ'ಯು ಪರಿಹಾರ ಆಗಬೇಕು. ‘ರಮಝಾನ್ ಕಲಿಸಿದ ಮೌಲ್ಯದೊಂದಿಗೆ ಎಂದೆಂದೂ ರಾಜಿ ಇಲ್ಲ..' ಎಂಬೊಂದು ಸೂಚನಾ ಫಲಕವನ್ನು ‘ಉಪವಾಸಿ’ ಸದಾ ತನ್ನ ಎದೆಯಲ್ಲಿ ತೂಗು ಹಾಕಿರಬೇಕು. ಇಲ್ಲದಿದ್ದರೆ ಪರಿಹಾರದೊಂದಿಗೆ ಆಗಮಿಸಿದ ರಮಝಾನ್ ದೂರಿನೊಂದಿಗೆ ನಿರ್ಗಮಿಸೀತು. ಹಾಗಾಗದಿರಲಿ.

Thursday, 9 July 2015

ಕ್ರಿಸ್ಟಿನಾ, ರೋಹಿಣಿ, ವ್ಯಾಪಂ ಮತ್ತು ಬಿಜೆಪಿ

    ಭ್ರಷ್ಟಾಚಾರದಲ್ಲಿ ಬಿಜೆಪಿಯು ಮತ್ತೊಂದು ಕಾಂಗ್ರೆಸ್ ಆಗುವ ಎಲ್ಲ ಲಕ್ಷಣಗಳನ್ನೂ ತೋರ್ಪಡಿಸತೊಡಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅವರ ಪತ್ನಿ ಸಾಧನಾ ಸಿಂಗ್, ಛತ್ತೀಸ್‍ಗಢ ಮುಖ್ಯಮಂತ್ರಿ ರಮಣ್‍ಸಿಂಗ್ ಮತ್ತು ಪತ್ನಿ ವೀಣಾ, ರಾಜಸ್ಥಾನ ಮುಖ್ಯಮಂತ್ರಿ ವಿಜಯ ರಾಜೇ ಸಿಂಧಿಯಾ, ಮಹಾರಾಷ್ಟ್ರದ ಇಬ್ಬರು ಮಂತ್ರಿಗಳಾದ ಪಂಕಜಾ ಮುಂಡೆ ಮತ್ತು ವಿನೋದ್ ತಾವಡೆ.. ಎಲ್ಲರ ಮೇಲೂ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಬಲವಾದ ಆರೋಪಗಳು ಕೇಳಿ ಬಂದಿವೆ. ಅದರಲ್ಲೂ ಮಧ್ಯಪ್ರದೇಶದ ವ್ಯಾಪಂ (ವ್ಯಾವಸಾಯಿಕ್ ಪರೀಕ್ಷಾ ಮಂಡಲ್ - ವ್ಯಾಪಂ) ಹಗರಣವಂತೂ ಅತ್ಯಂತ ಭಯಾನಕವಾದುದು. ಅದರಲ್ಲಿ ರಾಜ್ಯಪಾಲ ರಾಮ್‍ನರೇಶ್ ಯಾದವ್‍ರೇ ಭಾಗಿಯಾಗಿರುವ ಅನುಮಾನವಿದೆ. 2000ದಷ್ಟು ಆರೋಪಿಗಳನ್ನು ಬಂಧಿಸಲಾಗಿದೆ. 700 ಮಂದಿ ಆರೋಪಿಗಳನ್ನು ಹುಡುಕಲಾಗುತ್ತಿದೆ. ಆರೋಪಿಗಳು ಇಲ್ಲವೇ ಪ್ರಕರಣಕ್ಕೆ ಸಾಕ್ಷಿದಾರರಾದವರಲ್ಲಿ 45 ಮಂದಿ ಈಗಾಗಲೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ವಿಶೇಷ ಏನೆಂದರೆ, ಹೀಗೆ ಸಾವಿಗೀಡಾದವರಲ್ಲಿ 25-30 ವರ್ಷದೊಳಗಿನವರೇ ಹೆಚ್ಚಿನವರು. ಬಹುತೇಕರ ಸಾವಿಗೆ ರಸ್ತೆ ಅಪಘಾತ ಕಾರಣ! ವೈದ್ಯಕೀಯ ಪ್ರವೇಶ ಪರೀಕ್ಷೆ, ಪೊಲೀಸ್ ನೇಮಕಾತಿ, ಶಿಕ್ಷಕರು, ಬ್ಯಾಂಕ್ ಅಧಿಕಾರಿಗಳೂ ಸೇರಿದಂತೆ ವಿವಿಧ ಸರಕಾರಿ ಹುದ್ದೆಗಳಿಗೆ ಮಾಡಲಾಗುವ ನೇಮಕಾತಿ ಪೂರ್ವ ಪರೀಕ್ಷೆಗಳಲ್ಲಿ ವ್ಯಾಪಕ ಅಕ್ರಮ ನಡೆದಿರುವ ಹಗರಣ ಇದು. ಲಂಚ ಪಡೆದು ಅನರ್ಹರನ್ನು ನೇಮಕಗೊಳಿಸಿದ ಈ ಹಗರಣದಲ್ಲಿ ಉನ್ನತ ಅಧಿಕಾರಿಗಳು ಶಾವಿೂಲಾಗಿರುವುದು ಬಹುತೇಕ ದೃಢಪಟ್ಟಿದೆ. ಸಂಘಪರಿವಾರವು ಈ ಹಗರಣದಲ್ಲಿ ಭಾಗಿಯಾಗಿದೆ ಎಂಬ ಅನುಮಾನವೂ ಬಲವಾಗಿದೆ. 2007ರಿಂದ 2013ರ ವರೆಗೆ ನಡೆದ ಈ ಅಕ್ರಮ ವ್ಯವಹಾರದಲ್ಲಿ 2 ಸಾವಿರ ಕೋಟಿ ರೂಪಾಯಿ ಕೈ ಬದಲಾಗಿದೆ ಎನ್ನಲಾಗುತ್ತಿದೆ. ನಿಜವಾಗಿ, ಕೇವಲ ಭ್ರಷ್ಟಾಚಾರ ಎಂಬ ನಾಲ್ಕಕ್ಷರಕ್ಕೆ ಸೀಮಿತಗೊಳಿಸಬೇಕಾದ ಹಗರಣವಲ್ಲ ಇದು. ಇಲ್ಲಿ ಭ್ರಷ್ಟಾಚಾರಕ್ಕಿಂತ ಭೀಕರವಾದ ಕ್ರೌರ್ಯವಿದೆ. ಮನ್‍ಮೋಹನ್ ಸಿಂಗ್ ನೇತೃತ್ವದ ಸರಕಾರದಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿತ್ತು. ಕಳೆದ ಲೋಕಸಭಾ ಚುನಾವಣೆಯನ್ನು ಬಿಜೆಪಿ ಎದುರಿಸಿದ್ದೇ ಈ ಭ್ರಷ್ಟಾಚಾರವನ್ನು ಎತ್ತಿಕೊಂಡು. ಆದರೆ, ಭ್ರಷ್ಟಾಚಾರದಲ್ಲಿ ಬಿಜೆಪಿಗೂ ಕಾಂಗ್ರೆಸ್‍ಗೂ ನಡುವೆ ಇರುವ ಪ್ರಮುಖ ವ್ಯತ್ಯಾಸ ಏನೆಂಬುದನ್ನು ‘ವ್ಯಾಪಂ' ಹಗರಣ ಸ್ಪಷ್ಟಪಡಿಸಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿ ಸಾಕ್ಷ್ಯ ನುಡಿದವರನ್ನು, ತನಿಖೆ ನಡೆಸುವವರನ್ನು ಅಥವಾ ಆರೋಪಿಗಳನ್ನು ಹತ್ಯೆ ನಡೆಸುವಷ್ಟು ಕಾಂಗ್ರೆಸ್ ಕ್ರೂರವಾಗಿರಲಿಲ್ಲ. ಅಷ್ಟರ ಮಟ್ಟಿಗೆ ಅದು ಸಂವಿಧಾನ ಬದ್ಧತೆಯನ್ನು ಪ್ರದರ್ಶಿಸಿತ್ತು. ತನಿಖಾ ಪ್ರಕ್ರಿಯೆಗೆ ಅದು ಇಚ್ಛಿಸಿಯೋ ಇಚ್ಛಿಸದೆಯೋ ಸಹಕರಿಸುವ ಗುಣವನ್ನು ಪ್ರದರ್ಶಿಸಿತ್ತು. ಆದರೆ ಬಿಜೆಪಿಯಲ್ಲಿ ಈ ಗುಣವೇ ಕಾಣಿಸುತ್ತಿಲ್ಲ. ಅದು ಹಗರಣವನ್ನು ಸಾಬೀತುಪಡಿಸಬಲ್ಲ ಪುರಾವೆಗಳನ್ನೆಲ್ಲ ‘ಹತ್ಯೆ’ ಮಾಡತೊಡಗಿದೆ. ಕೇವಲ ‘ವ್ಯಾಪಂ’ ಒಂದೇ ಅಲ್ಲ, ಮಾನವ ಹಕ್ಕುಗಳ ಕುರಿತಂತೆ ಆಮ್ನೆಸ್ಟಿ ಇಂಟರ್‍ನ್ಯಾಶನಲ್‍ಗಾಗಿ ಸಂಶೋಧನೆ ನಡೆಸುತ್ತಿದ್ದ ಭಾರತ ಮೂಲದ ಅಮೇರಿಕನ್ ಯುವತಿ ಕ್ರಿಸ್ಟಿನಾ ಮೆಹ್ತಾರನ್ನು ಮೋದಿ ಸರಕಾರವು ಭಾರತದಿಂದ ಗುಪ್ತವಾಗಿ ಗಡೀಪಾರು ಮಾಡಿರುವುದು ಕಳೆದ ವಾರ ಬಹಿರಂಗವಾಗಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಆಕೆ ಸಂಶೋಧನೆಗೆ ಇಳಿದಿರುವುದೇ ಇದಕ್ಕೆ ಕಾರಣವೆಂದು ಕ್ರಿಸ್ಟಿನಾ ಹೇಳಿದ್ದಾರೆ. 2012ರಿಂದ ಕ್ರಿಸ್ಟಿನಾ ಭಾರತದಲ್ಲಿದ್ದರು. ಮನ್‍ಮೋಹನ್ ಸಿಂಗ್ ಸರಕಾರವು ಆಕೆಯ ಸಂಶೋಧನಾ ಚಟುವಟಿಕೆಗಳಿಗೆ ಅಡ್ಡಿಪಡಿಸಿರಲಿಲ್ಲ. ಅಲ್ಲದೇ, ಹಾಗೇ ಅಡ್ಡಿಪಡಿಸುವುದು ಸಾಂವಿಧಾನಿಕವೂ ಅಲ್ಲ. ಜಾಗತಿಕವಾಗಿ ಭಾರತಕ್ಕೆ ‘ಪ್ರಬಲ ಪ್ರಜಾತಂತ್ರ ರಾಷ್ಟ್ರ' ಎಂಬೊಂದು ಗೌರವವಿದೆ. ಇದಕ್ಕೆ ಈ ರಾಷ್ಟ್ರದಲ್ಲಿರುವ ಪ್ರಜಾಸತ್ತೆ, ಸ್ವಾತಂತ್ರ್ಯ, ನಾಗರಿಕ ಹಕ್ಕುಗಳು, ವಾಕ್ ಸ್ವಾತಂತ್ರ್ಯ.. ಮುಂತಾದುವುಗಳೇ ಕಾರಣ. ಹಾಗೆಂದ ತಕ್ಷಣ, ಈ ದೇಶದಲ್ಲಿ ಇವೆಲ್ಲವೂ ಇಲ್ಲಿನ ನಾಗರಿಕರಿಗೆ ಸರಿಯಾಗಿ ಲಭ್ಯವಾಗುತ್ತಿವೆ ಎಂದಲ್ಲ. ಮಾನವ ಹಕ್ಕುಗಳ ಉಲ್ಲಂಘನೆ ಇಲ್ಲಿ ಸಹಜವಾಗಿಯೇ ನಡೆಯುತ್ತಿದೆ. ಅಕ್ರಮ, ಅನ್ಯಾಯ, ದೌರ್ಜನ್ಯ, ಭ್ರಷ್ಟಾಚಾರ.. ಎಲ್ಲದಕ್ಕೂ ಈ ದೇಶದಲ್ಲಿ ಜಾಗ ಇದೆ. ಆದ್ದರಿಂದಲೇ, ಈ ಕುರಿತಂತೆ ಯಾರಾದರೂ ಸಂಶೋಧನೆಗೆ ಇಳಿದರೆ ಅದನ್ನು ದೇಶದ್ರೋಹದಂತೆ ನೋಡಬೇಕಾದ ಅಗತ್ಯವೂ ಇಲ್ಲ. ಆದರೆ, ಬಿಜೆಪಿ ಇದನ್ನೂ ಸಹಿಸುತ್ತಿಲ್ಲ. ಕಾಶ್ಮೀರದಲ್ಲಾದ ಮತ್ತು ಆಗುತ್ತಿರುವ ನಾಗರಿಕ ಹಕ್ಕುಗಳ ದಮನವು ಬಹಿರಂಗಕ್ಕೆ ಬರುವುದನ್ನು ಅದು ಸಹಿಸುತ್ತಿಲ್ಲ. ಕ್ರಿಸ್ಟಿನಾಳನ್ನು ತಕ್ಷಣದಿಂದ ದೇಶ ಬಿಟ್ಟು ತೊಲಗುವಂತೆ ಆದೇಶಿಸಿದ್ದು ಮತ್ತು ಆಕೆಯ ವೀಸಾವನ್ನು ರದ್ದುಪಡಿಸಿದ್ದೇ ಅದರ ‘ವ್ಯಾಪಂ’ ಗುಣವನ್ನು ಸ್ಪಷ್ಟಪಡಿಸುತ್ತದೆ.
 ನಿಜವಾಗಿ, ಬಿಜೆಪಿ ಹೊಸದೊಂದು ಆಡಳಿತ ವಿಧಾನವನ್ನು ಪರಿಚಯಿಸುತ್ತಿರುವಂತೆ ಕಾಣಿಸುತ್ತಿದೆ. ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೃದು ಧೋರಣೆಯನ್ನು ತಾಳುವಂತೆ ತನ್ನ ಮೇಲೆ ಒತ್ತಡ ಹೇರಲಾಗಿದೆ ಎಂಬುದನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಈ ಸ್ಫೋಟದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್, ಇಂದ್ರೇಶ್ ಕುಮಾರ್, ಶ್ರೀಕಾಂತ್ ಪುರೋಹಿತ್ ಮುಂತಾದವರು ಮುಖ್ಯ ಆರೋಪಿಗಳಾಗಿದ್ದಾರೆ. ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‍ಳೊಂದಿಗೆ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದನೆಂದು ಹೇಳಲಾದ ಸುನೀಲ್ ಜೋಶಿಯ ನಿಗೂಢ ಸಾವಿನ ತನಿಖೆಯನ್ನು ಕೇಂದ್ರ ತನಿಖಾ ತಂಡವು (ಎನ್.ಐ.ಎ.) ಇದೀಗ ಮಧ್ಯಪ್ರದೇಶ ಸರಕಾರಕ್ಕೆ ವಹಿಸಿಕೊಟ್ಟು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದೆ. ಇದರ ಜೊತೆಗೇ ವ್ಯಾಪಂ ಹಗರಣದ ‘ಸರಣಿ ಸಾವು'ಗಳನ್ನು ಇಟ್ಟು ನೋಡುವಾಗ, ಭಯಾನಕ ಆಡಳಿತ ಕ್ರಮವೊಂದು ರೂಪು ತಾಳುತ್ತಿರುವಂತೆ ಕಾಣಿಸುತ್ತಿದೆ. ಮೋದಿ ಸರಕಾರವು ತನ್ನ ವಿರುದ್ಧ ಬೆರಳು ತೋರಬಹುದಾದ ಅಥವಾ ತನಗೆ ಕಳಂಕ ತಟ್ಟಬಹುದಾದ ಯಾವ ‘ಸತ್ಯಗಳನ್ನೂ’ ಸಹಿಸುತ್ತಿಲ್ಲ. ಅಂದಹಾಗೆ, ಮನ್‍ಮೋಹನ್ ಸಿಂಗ್ ಸರಕಾರದಲ್ಲಿ ಭ್ರಷ್ಟಾಚಾರಿಗಳು ಇಷ್ಟು ಪ್ರಬಲರಾಗಿರಲಿಲ್ಲ. ಕಾಮನ್‍ವೆಲ್ತ್ ಮತ್ತು 2ಜಿ ಹಗರಣಗಳಂಥ ಬೃಹತ್ ಭ್ರಷ್ಟಾಚಾರದ ಆರೋಪವನ್ನು ಎದುರಿಸಿದ ಹೊರತಾಗಿಯೂ ಅದು ನ್ಯಾಯ ಪ್ರಕ್ರಿಯೆಯನ್ನು ಗೌರವಿಸಿತ್ತು. ನಿರ್ಭಯ ಪ್ರಕರಣದಲ್ಲಿ ನಾಗರಿಕ ಸಮೂಹವೇ ಜಂತರ್ ಮಂತರ್‍ನಲ್ಲಿ ಸೇರಿದಾಗಲೂ ಸರಕಾರ ಗರಿಷ್ಠ ಸಹನೆಯನ್ನು ತೋರಿತ್ತು. ಲೋಕ್‍ಪಾಲ್ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಪ್ರತಿಭಟನೆಯಲ್ಲಿ ತೊಡಗಿದಾಗ ಆ ಚಳವಳಿಯನ್ನೇ ನಾಶ ಮಾಡುವುದಕ್ಕಾಗಿ ‘ಹಜಾರೆ ಹತ್ಯೆ'ಗೆ ಅದು ಎಂದೂ ಮುಂದಾಗಲಿಲ್ಲ. ಅಷ್ಟರ ಮಟ್ಟಿಗೆ ಪ್ರಜಾತಂತ್ರಕ್ಕೆ ತಲೆಬಾಗುವ ಗುಣವನ್ನು ಅದು ಪ್ರದರ್ಶಿಸಿತ್ತು. ನಿಜವಾಗಿ, ಅಧಿಕಾರದಲ್ಲಿರುವವರಿಗೆ ಸಾಕ್ಷ್ಯ

ರೋಹಿಣಿ ಸಾಲ್ಯಾನ್
ಗಳನ್ನು ನಾಶಪಡಿಸುವುದು ಕಷ್ಟವೇನಲ್ಲ. ಅಪಘಾತದ ಮೂಲಕವೋ ಇನ್ನಿತರ ರೂಪದಲ್ಲೋ ಹತ್ಯೆ ನಡೆಸುವುದು ತ್ರಾಸದಾಯಕವೂ ಅಲ್ಲ. ಆದರೆ ಕಾಂಗ್ರೆಸ್ ತೋರಿದ ಈ ಸೌಜನ್ಯವನ್ನೂ ಬಿಜೆಪಿ ಇವತ್ತು ತೋರಿಸುತ್ತಿಲ್ಲ. ಅದು ತನ್ನ ಮುಖ ಉಳಿಸಿಕೊಳ್ಳುವುದಕ್ಕಾಗಿ ‘ಹತ್ಯೆ', ‘ಗಡೀಪಾರು' ಮತ್ತು ಒತ್ತಡಗಳ ತಂತ್ರವನ್ನು ಪ್ರಯೋಗಿಸತೊಡಗಿದೆ. ಭ್ರಷ್ಟಾಚಾರ ಮುಕ್ತ ಭಾರತದ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಬಿಜೆಪಿಯು ಭ್ರಷ್ಟಾಚಾರದ ಬದಲು ಅದನ್ನು ಪ್ರಶ್ನಿಸಿದವರನ್ನೇ ‘ಭಾರತ ಮುಕ್ತ’ಗೊಳಿಸಲು ಮುಂದಾಗಿರುವಂತಿದೆ. ಇದಕ್ಕೆ ಕ್ರಿಸ್ಟಿನಾ, ವ್ಯಾಪಂ ಹತ್ಯೆಗಳು ಮತ್ತು ರೋಹಿಣಿ ಸಾಲ್ಯಾನ್ ಅತ್ಯುತ್ತಮ ಉದಾಹರಣೆ.

Tuesday, 7 July 2015

ಮೋದಿಯವರೇಕೆ ಮೌನಮೋಹನರ ದಾರಿಯನ್ನು ಆಯ್ಕೆ ಮಾಡಿಕೊಂಡರು?

     ಪ್ರಧಾನಿ ನರೇಂದ್ರ ಮೋದಿಯವರ ದೀರ್ಘ ಮೌನಕ್ಕೆ ಕಾರಣಗಳೇನು? ಮನ್‍ಮೋಹನ್ ಸಿಂಗ್‍ರನ್ನು ಮೌನಮೋಹನ ಎಂದು ಕರೆದಿದ್ದ ಮತ್ತು ಅಪಾರ ವಾಚಾಳಿಯಾಗಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಮನ್‍ಮೋಹನ್ ಸಿಂಗ್‍ರನ್ನೂ ನಾಚಿಸುವಷ್ಟು ಮೌನಕ್ಕೆ ಜಾರುತ್ತಿರುವುದೇಕೆ? ಒಂದು ಕಡೆ, ಮೋದಿಯವರನ್ನು ಸೂಪರ್‍ಮ್ಯಾನ್ ಆಗಿ ಬಿಂಬಿಸಲಾಗುತ್ತಿದೆ. ಅವರು ಆಡಿದ್ದೇ ಆಟ ಎಂಬ ರೀತಿಯಲ್ಲಿ ಪ್ರಚಾರಗಳಿವೆ. ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರ ಸಚಿವ ಸಂಪುಟದ ಸದಸ್ಯರು ಮಾತಾಡುತ್ತಿದ್ದರು. ಅಡ್ವಾಣಿ, ಅರುಣ್ ಶೌರಿ, ಯಶವಂತ್ ಸಿನ್ಹ, ಸುಶ್ಮಾ, ಜಸ್ವಂತ್ ಸಿಂಗ್, ಜೇಟ್ಲಿ.. ಎಲ್ಲರಲ್ಲೂ ಮಾಧ್ಯಮದೊಂದಿಗೆ ಹಂಚಿಕೊಳ್ಳುವುದಕ್ಕೆ ಅಭಿಪ್ರಾಯಗಳಿದ್ದುವು. ವಾಜಪೇಯಿಯವರೂ ಎಂದೂ ಪ್ರಶ್ನೆಗಳಿಂದ ತಪ್ಪಿಸಿಕೊಂಡವರಲ್ಲ. ಪ್ರತಿಕ್ರಿಯೆ, ಸಂವಾದ, ಆತ್ಮಗತ.. ಇವೆಲ್ಲ ಜನಪ್ರತಿನಿಧಿಯ ಬದುಕಿನ ಭಾಗ ಎಂಬುದಕ್ಕೆ ವಾಜಪೇಯಿ ಹೊರತಾಗಿರಲಿಲ್ಲ. ಆದರೆ ಮೋದಿಯವರು ಮಾತ್ರವಲ್ಲ, ಅವರ ಸಚಿವ ಸಂಪುಟವೇ ಇವತ್ತು ಮೌನವನ್ನು ಹೊದ್ದುಕೊಂಡು ಮಲಗಿದಂತೆ ವರ್ತಿಸುತ್ತಿದೆ. ಸುಶ್ಮಾ, ಜೇಟ್ಲಿ, ಗಡ್ಕರಿ, ರಾಜನಾಥ್, ಅನಂತಕುಮಾರ್.. ಎಲ್ಲರನ್ನೂ ಗಾಢ ಮೌನ ಆವರಿಸಿಬಿಟ್ಟಿದೆ. ನಿಜವಾಗಿ, ದಶಕಗಳ ಕಾಲ ವಿರೋಧ ಪಕ್ಷದಲ್ಲಿದ್ದು ರಾಜಕಾರಣವನ್ನು ಹತ್ತಿರದಿಂದ ನೋಡಿದ್ದ ವಾಜಪೇಯಿಯವರು ಅತ್ಯಂತ ಅನುಭವಿ ವ್ಯಕ್ತಿ. ಬಿಜೆಪಿಯಲ್ಲಿ ಅವರಷ್ಟು ಪ್ರಬಲ ನಾಯಕ ಇನ್ನೊಬ್ಬರಿರಲಿಲ್ಲ. ಬಿಜೆಪಿ ಅಧಿಕಾರಕ್ಕೇರುವಷ್ಟು ಸ್ಥಾನಗಳನ್ನು ಗಳಿಸಿಕೊಟ್ಟದ್ದು ಅಡ್ವಾಣಿಯವರ ರಥಯಾತ್ರೆ ಮತ್ತಿತರ ‘ಭೀಕರ’ ರಾಜಕೀಯ ತಂತ್ರಗಳಾದರೂ ನಾಯಕತ್ವದ ಸಂದರ್ಭದಲ್ಲಿ ಮುಂಚೂಣಿಗೆ ಬಂದದ್ದು ವಾಜಪೇಯಿ. ಅಂದಿನ ಕಾಲದಲ್ಲಿ ಬಿಜೆಪಿಯ ಪಾಲಿಗೆ ಅವರು ಸೂಪರ್ ಮ್ಯಾನ್. ಪಕ್ಷದ ಒಳಗೆ ಮತ್ತು ಹೊರಗೆ ಅಂಥದ್ದೊಂದು ವರ್ಚಸ್ಸನ್ನು ಅವರು ಬೆಳೆಸಿಕೊಂಡಿದ್ದರು. ಆದರೂ ಅವರ ಅಧಿಕಾರಾವಧಿಯಲ್ಲಿ ಮೌನ ಪ್ರಾಬಲ್ಯತೆಯನ್ನು ಪಡೆದಿರಲಿಲ್ಲ. ಅವರಿಗೆ ಹೋಲಿಸಿದರೆ ನರೇಂದ್ರ ಮೋದಿಯವರು ಅನನುಭವಿ. ಗುಜರಾತ್‍ನ ಮುಖ್ಯಮಂತ್ರಿಯಾಗಿ ಸೀಮಿತ ರಾಜಕೀಯ ಅನುಭವಗಳು ಅವರಿಗಿದೆಯೇ ಹೊರತು ದೆಹಲಿ ರಾಜಕಾರಣ ಅವರಿಗೆ ಅಪರಿಚಿತ. ಗುಜರಾತ್‍ನ ಬಿಜೆಪಿ ಶಾಸಕರನ್ನು ನಿಭಾಯಿಸುವುದಕ್ಕೂ ದೆಹಲಿಯಲ್ಲಿರುವ ಬಿಜೆಪಿಯ ನಾಯಕರು ಮತ್ತು ಹಿರಿಯ ಸಂಸದರನ್ನು ನಿಭಾಯಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಗುಜರಾತ್‍ಗೆ ಮೋದಿಯವರು ಆಲದ ಮರವೇ ಆಗಿರಬಹುದು. ಆದರೆ ದೆಹಲಿಯಲ್ಲಿ ಅಂಥ ಆಲದ ಮರವಾಗಲು ಆಸೆಪಡುವ ಅನೇಕ ನಾಯಕರಿದ್ದಾರೆ. ಅಲ್ಲಿ ರಾಜಕೀಯ ಮಹತ್ವಾಕಾಂಕ್ಷೆಯಿದೆ. ವೈಯಕ್ತಿಕ ವರ್ಚಸ್ಸಿದೆ. ಹೀಗಿರುವಾಗ, ಗುಜರಾತ್‍ನ ಶಾಸಕರ ನಡುವಿನಿಂದ ನೇರವಾಗಿ ದೆಹಲಿಯ ಸಂಸದರ ನಡುವಿಗೆ ಬಂದ ವ್ಯಕ್ತಿ ಸುಲಭವಾಗಿ ವ್ಯವಹರಿಸುವುದು ಸಾಧ್ಯವಿಲ್ಲ. ಸದ್ಯ ಮೋದಿಯವರ ಮೌನಕ್ಕೂ ಈ ಅನನುಭವಕ್ಕೂ ಸಂಬಂಧ ಇರಬಹುದೇ? ತನ್ನ ಸಂಪುಟದ ಸಚಿವರ ಮೇಲೆ ಕ್ರಮ ಕೈಗೊಳ್ಳುವಷ್ಟು ಅವರು ಪ್ರಬಲರಾಗಿಲ್ಲವೇ? ಅವರ ಸಂಪುಟದ ಸದಸ್ಯರು ಮೌನವಾಗಿರುವುದಕ್ಕೆ ಅವರ ಇಂಗಿತ ಕಾರಣವೋ ಅಥವಾ ಅದರ ಹಿಂದೆ ಬೇರೇನಾದರೂ ಒಳ ಉದ್ದೇಶಗಳಿವೆಯೇ? ಮೋದಿಯವರು ಸುಶ್ಮಾ ಸ್ವರಾಜ್ ಮತ್ತು ವಿಜಯ ರಾಜೇ ಸಿಂಧಿಯರವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಡಿ, ಬರೇ ಸಂಸದರಷ್ಟೇ ಆಗಿರುವ ಯೋಗಿ ಆದಿತ್ಯನಾಥ್‍ರಂಥವರ ಬಾಯಿಯನ್ನೇ ಮುಚ್ಚಿಸಲಾಗುತ್ತಿಲ್ಲ. ಸಾಧ್ವಿ ಪ್ರಾಚಿಯಂಥ ಬೆಂಬಲಿಗರಂತೂ ಮೋದಿಯವರಿಗೆ ನಿತ್ಯ ಕಸಿವಿಸಿಯನ್ನುಂಟು ಮಾಡುತ್ತಿದ್ದಾರೆ. ಒಂದು ವೇಳೆ, ಮೋದಿಯವರು ಅಂಥ ಮಾತುಗಳನ್ನು ಇಷ್ಟಪಡುತ್ತಾರೆ ಎಂದೇ ವಾದಿಸಿದರೂ ಅದರಿಂದಾಗಿ ಅವರ ಅಂತಾರಾಷ್ಟ್ರೀಯ ವರ್ಚಸ್ಸಿಗೆ ತೀವ್ರ ಧಕ್ಕೆಯಾಗುತ್ತದೆ ಎಂಬುದೂ ಅಷ್ಟೇ ನಿಜ. ಹೊಸ ಹೊಸ ವಿನ್ಯಾಸದ ಮತ್ತು ಲಕ್ಷಾಂತರ ಬೆಲೆಬಾಳುವ ಉಡುಪು ಧರಿಸುವ ಮೋದಿಯವರಿಗೆ ವರ್ಚಸ್ಸಿನ ಬಯಕೆಯಿದೆ. ಪ್ರಬಲ ನಾಯಕನಾಗಿ ಗುರುತಿಗೀಡಾಗುವ ಹಪಹಪಿಕೆಯಿದೆ. ಹೀಗಿರುತ್ತಾ, ತನ್ನ ವರ್ಚಸ್ಸಿಗೆ ಧಕ್ಕೆ ಬರುವಂತೆ ಮಾತಾಡುವವರನ್ನು ಅವರು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹೀಗಿದ್ದೂ, ಅವರು ಏನನ್ನೂ ಮಾಡುತ್ತಿಲ್ಲ. ಏನಿದರ ಅರ್ಥ? ಅವರಿಗಿರುವ ಸೂಪರ್‍ಮ್ಯಾನ್ ಇಮೇಜ್ ಬರೇ ಜಾಹೀರಾತು ಕಂಪೆನಿಗಳ ಕಸರತ್ತೇ? ಅವರು ಪಕ್ಷದೊಳಗೆ ಕೇವಲ ಕಾಮನ್‍ಮ್ಯಾನ್ ಅಷ್ಟೇ ಆಗಿರುವರೇ ಅಥವಾ ಆಗುತ್ತಿರುವರೇ? ಬಿಜೆಪಿಯಲ್ಲಿ ಅವರ ಸಾಮರ್ಥ್ಯ ಸೀಮಿತವಾಗಿದೆಯೇ?
 ಅಷ್ಟಕ್ಕೂ, ಮನ್‍ಮೋಹನ್ ಸಿಂಗ್ ನೇತೃತ್ವದ ಸರಕಾರ ಅಧಿಕಾರ ಕಳೆದುಕೊಂಡದ್ದೇ ಭ್ರಷ್ಟಾಚಾರದ ಕಾರಣಕ್ಕಾಗಿ. ಮನ್‍ಮೋಹನ್‍ರು ದಿನೇ ದಿನೇ ಮೌನಕ್ಕೆ ಜಾರಿದಷ್ಟೂ ಪ್ರತಿಭಟನೆಗಳು ಹೆಚ್ಚಾದುವು. ಅಂದು ಸಿಂಗ್ ಅಸಹಾಯಕರಾಗಿದ್ದರು. ವೈಯಕ್ತಿಕವಾಗಿ ಅವರು ಭ್ರಷ್ಟರಲ್ಲ. ಆದರೆ ದೆಹಲಿ ರಾಜಕೀಯದ ಒಳಸುಳಿಗೆ ಅವರು ಅಪರಿಚಿತರಾಗಿದ್ದರು. ಪ್ರಧಾನಿಯಾಗಿದ್ದರೂ ಸಂಪುಟ ಸದಸ್ಯರ ಮೇಲೆ ಕ್ರಮ ಕೈಗೊಳ್ಳುವ ಸಾಮರ್ಥ್ಯ ಅವರಲ್ಲಿರಲಿಲ್ಲ. ಅವರ ಅಸಹಾಯಕತೆ ಕಾಂಗ್ರೆಸ್ಸಿನ ವರ್ಚಸ್ಸಿಗೆ ದಿನೇ ದಿನೇ ಕಳಂಕವನ್ನು ತಂದೊಡ್ಡತೊಡಗಿತು. ಆ ಕಳಂಕದ ಲಾಭ ಪಡೆದೇ ಇವತ್ತು ಮೋದಿಯವರು ಪ್ರಧಾನಿಯಾಗಿದ್ದಾರೆ. ಆದರೆ, ಇದೀಗ ಅವರ ಸಂಪುಟಕ್ಕೂ ಕಳಂಕ ತಟ್ಟಿದೆ. ಮುಖ್ಯಮಂತ್ರಿಗಳು, ಸಚಿವರು ಶಂಕಿತರ ಪಟ್ಟಿಯಲ್ಲಿದ್ದಾರೆ. ಕಪ್ಪು ಹಣಕ್ಕಾಗಿ ಮನ್‍ಮೋಹನ್ ಸರಕಾರವನ್ನು ಕಟುವಾಗಿ ಟೀಕಿಸಿದ್ದವರು ಮೋದಿ. ಇದೀಗ ಅವರ ಪಕ್ಷೀಯರೇ ಓರ್ವ ಕಪ್ಪು ಹಣದ ವ್ಯಕ್ತಿಗೆ ಗೊತ್ತಿದ್ದೇ ನೆರವಾದ ಗುರುತರ ಆರೋಪವನ್ನು ಎದುರಿಸುತ್ತಿದ್ದಾರೆ. ಹೀಗಿದ್ದೂ, ನರೇಂದ್ರ ಮೋದಿಯವರು ಈ ಬಗ್ಗೆ ಕೈ-ಬಾಯಿ ಎರಡನ್ನೂ ಕಟ್ಟಿ ಮೌನವಾಗಿರುವುದನ್ನು ಬರೇ ರಾಜಕೀಯ ತಂತ್ರ ಎಂದು ಕರೆದು ಸುಮ್ಮನಾಗಬಹುದೇ? ನಿಜವಾಗಿ, ಈ ರಾಜಕೀಯ ತಂತ್ರವೇ ಮನ್‍ಮೋಹನ್‍ರನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಅದೇ ತಂತ್ರವನ್ನು ಮತ್ತೆ ಮೋದಿಯವರು ಆರಿಸಿಕೊಂಡಾರೇ ಅಥವಾ ಹೊರಗೆ ಬಿಂಬಿಸಿಕೊಂಡಿರುವಷ್ಟು ಅವರು ಪ್ರಬಲರಾಗಿಲ್ಲವೇ? ಸುಶ್ಮಾ, ರಾಜೇ ಅಥವಾ ಇನ್ನಿತರ ಕೇಂದ್ರ ನಾಯಕರನ್ನು ಮುಟ್ಟುವುದು ರಾಜಕೀಯವಾಗಿ ಅವರ ಆತ್ಮಹತ್ಯೆಯಾಗಬಹುದೇ? ಮಾಧ್ಯಮಗಳೊಂದಿಗೆ ಅಲ್ಲವಾದರೂ ಕನಿಷ್ಠ ‘ಮನ್ ಕಿ ಬಾತ್'ನಲ್ಲಾದರೂ ಲಲಿತ್ ಗೇಟ್‍ನ (ಲಲಿತ್ ಮೋದಿ ಹಗರಣ) ಬಗ್ಗೆ ಅವರು ಪ್ರಸ್ತಾಪಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಈ ದೇಶದ ಪ್ರಧಾನಿಯಾಗಿ ಈ ಬಗ್ಗೆ ಮಾತಾಡುವ ಹೊಣೆಗಾರಿಕೆಯೂ ಅವರಿಗಿತ್ತು. ನಾಯಕ ತನ್ನ ಸಂಗಡಿಗರ ಬಗ್ಗೆ ಸದಾ ಮೌನವಾಗುವುದು ಒಂದೋ ಅಸಹಾಯಕತೆಯಿಂದ ಅಥವಾ ತೀವ್ರ ನಿರ್ಲಕ್ಷ್ಯತನದಿಂದ. ಇವೆರಡೂ ಕೂಡ ಪಕ್ಷದ ದೃಷ್ಟಿಯಿಂದ ಹಿನ್ನಡೆಯೇ. ಜನರು ಇಂಥ ವರ್ತನೆಯನ್ನು ನಕಾರಾತ್ಮಕವಾಗಿ ಪರಿಗಣಿಸುತ್ತಾರೆ. ಒಂದೋ ಭ್ರಷ್ಟಾಚಾರಕ್ಕೆ ಬೆಂಬಲ ಇಲ್ಲವೇ ದುರ್ಬಲ ನಾಯಕತ್ವ ಎಂದು ಜನರು ಷರಾ ಬರೆದು ಬಿಡುತ್ತಾರೆ. ಮನ್‍ಮೋಹನ್ ಸಿಂಗ್‍ರನ್ನು ಜನರು ತೂಗಿದ್ದು ಇದೇ ತಕ್ಕಡಿಯಲ್ಲಿ. ಆದ್ದರಿಂದಲೇ, ನರೇಂದ್ರ ಮೋದಿಯವರ ಬಗ್ಗೆ ಅನುಮಾನ ಮೂಡುವುದು. ಅವರೇಕೆ ಮನ್‍ಮೋಹನ್ ದಾರಿಯಲ್ಲೇ ಸಾಗುತ್ತಿದ್ದಾರೆ? ಈ ದಾರಿ ಅವರು ಸ್ವತಃ ಬಯಸಿ ಆಯ್ಕೆ ಮಾಡಿಕೊಂಡದ್ದೋ ಅಥವಾ ಅನಿವಾರ್ಯತೆಯೋ? ಮನ್ ಕಿ ಬಾತ್‍ನಲ್ಲಿ ಲಲಿತ್ ಗೇಟ್‍ನ ಬಗ್ಗೆ ಪ್ರಸ್ತಾಪಿಸದಂತೆ ಅವರನ್ನು ನಿರ್ಬಂಧಿಸಿದ್ದು ಯಾರು? ಅವರು ನಿಜಕ್ಕೂ ಬಿಜೆಪಿಯಲ್ಲಿ ಸೂಪರ್‍ಮ್ಯಾನ್ ಹೌದೇ? ಪಕ್ಷೀಯರ ಮೇಲೆ ಅವರ ಸಾಮರ್ಥ್ಯ ಎಷ್ಟಿದೆ? ತನ್ನ ನಿರೀಕ್ಷೆಯಂತೆ ಪಕ್ಷವನ್ನು ಮುಂದಕ್ಕೆ ಕೊಂಡೊಯ್ಯಲಾಗದ ಅಸಹಾಯಕತೆಯೊಂದು ಅವರನ್ನು ಆವರಿಸಿದೆಯೇ? ಅದರ ಸೂಚನೆ ಈ ಮೌನವೇ? ಹೇಳಲಾಗದು.