Thursday, 29 October 2015

15 ವರ್ಷಗಳ ಪ್ರತಿಭಟನೆ ಮತ್ತು ಆತಂಕ

       ಇರೋಮ್ ಶರ್ಮಿಳಾ ಆತಂಕದಲ್ಲಿದ್ದಾರೆ. ತಾನು ಒಂಟಿಯಾಗುತ್ತಿರುವೆನೇ ಎಂಬ ಅನುಮಾನವೊಂದು ಅವರನ್ನು ಕಾಡತೊಡಗಿದೆ. ಮಾಧ್ಯಮಗಳ ಮುಂದೆ ತನ್ನ ಆತಂಕವನ್ನು ಅವರು ಬಹಿರಂಗವಾಗಿಯೇ ತೋಡಿಕೊಂಡಿದ್ದಾರೆ. ತನ್ನ ನಿರಾಹಾರ ಸತ್ಯಾಗ್ರಹ ಪ್ರತಿಭಟನೆಯನ್ನು ಮುಂದುವರಿಸಬೇಕೋ ಕೈ ಬಿಡಬೇಕೋ ಎಂಬ ಕುರಿತು ಜನಮತ ಸಂಗ್ರಹ ನಡೆಸಬೇಕೆಂಬ ಇರಾದೆಯನ್ನೂ ವ್ಯಕ್ತಪಡಿಸಿದ್ದಾರೆ. ಮಣಿಪುರದ ಮೇಲೆ ಹೇರಲಾಗಿರುವ ಸಶಸ್ತ್ರ ದಳದ ವಿಶೇಷಾಧಿಕಾರ ಕಾಯ್ದೆ(AFSPA)ಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟಿಸುತ್ತಿರುವವರು ಈ ಶರ್ಮಿಳಾ. 1980 ಸೆ. 8ರಂದು ಕೇಂದ್ರ ಸರಕಾರವು ಮಣಿಪುರದಲ್ಲಿ ಈ ಕಾಯ್ದೆಯನ್ನು ಹೇರಿದಾಗ ಶರ್ಮಿಳಾ ಪುಟ್ಟ ಹುಡುಗಿ. ಈ ಕಾಯ್ದೆಯ ಬಗ್ಗೆ ಮತ್ತು ಅದು ಪೊಲೀಸರಿಗೆ ಒದಗಿಸುವ ಅಪರಿಮಿತ ಅಧಿಕಾರಗಳ ಬಗ್ಗೆ ತಿಳಿದುಕೊಳ್ಳುವ ವಯಸ್ಸು ಅದಾಗಿರಲಿಲ್ಲ. ಆದರೆ 2000ನೇ ಇಸವಿ ನವೆಂಬರ್ 2ರಂದು ಸಶಸ್ತ್ರ ಪಡೆಯ ಯೋಧರು ಮಣಿಪುರದ ರಾಜಧಾನಿ ಇಂಫಾಲ್‍ನಿಂದ 8 ಕಿ.ವಿೂ. ದೂರದ ಮಲ್ಲಮ್‍ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ 10 ಮಂದಿಯ ಗುಂಪನ್ನು ಸುತ್ತುವರಿದು ಗುಂಡಿಕ್ಕಿ ಹತ್ಯೆಗೈದಾಗ ಶರ್ಮಿಳಾ ಬೆಳೆದಿದ್ದರು. ಈ ಪರಿಸರದಲ್ಲಿ ಆ ಮೊದಲು ಸ್ಫೋಟಗೊಂಡಿದ್ದ ಬಾಂಬನ್ನು (ಅದರಲ್ಲಿ ಯಾರೂ ಗಾಯಗೊಂಡಿರಲೂ ಇಲ್ಲ) ಆ ಗುಂಡಿನ ದಾಳಿಗೆ ಯೋಧರು ಕಾರಣವಾಗಿ ಕೊಟ್ಟದ್ದನ್ನು ಶರ್ಮಿಳಾ ಒಪ್ಪಿಕೊಳ್ಳಲಿಲ್ಲ. ಈ ಘಟನೆಯ ಎರಡು ದಿನಗಳ ಬಳಿಕ ಆಕೆ ನಿರಾಹಾರ ಸತ್ಯಾಗ್ರಹವನ್ನು ಆರಂಭಿಸಿದರು. ಯೋಧರಿಗೆ ನಿರಂಕುಶ ಅಧಿಕಾರವನ್ನು ಕೊಡುವ ಕಾನೂನನ್ನು ಕೇಂದ್ರ ಸರಕಾರವು ರಾಜ್ಯದಿಂದ ಮರಳಿ ಪಡೆಯದೇ ತಾನು ಸತ್ಯಾಗ್ರಹವನ್ನು ನಿಲ್ಲಿಸಲಾರೆ ಎಂದು ಘೋಷಿಸಿದರು. ಆ ಸಂದರ್ಭದಲ್ಲಿ ಶರ್ಮಿಳಾ ತುಂಬು ಯೌವನೆ. ಎಲ್ಲರಂತೆ ಉದ್ಯೋಗ, ಮದುವೆ, ಮಕ್ಕಳು, ಕುಟುಂಬ ಎಂದು ಕನಸು ಕಾಣುವ ವಯಸ್ಸು. ಶರ್ಮಿಳಾ ದಿನಗಳೆದಂತೆ ರಾಷ್ಟ್ರೀಯ ಸುದ್ದಿಯಾದಳು. ಮಣಿಪುರದಲ್ಲಿ ಸಶಸ್ತ್ರ ಪಡೆಯ ಯೋಧರು ನಡೆಸುತ್ತಿರುವ ದೌರ್ಜನ್ಯಗಳನ್ನು ಮಾಧ್ಯಮಗಳು ವಿಶೇಷ ಆಸಕ್ತಿಯಿಂದ ಪ್ರಕಟಿಸತೊಡಗಿದುವು. ಶರ್ಮಿಳಾ ನಿಶ್ಶಕ್ತಳಾದಳು. ಸರಕಾರ ಆಕೆಯನ್ನು ಬಂಧಿಸಿ ಮೂಗಿನ ಮೂಲಕ ದ್ರವಾಹಾರ ನೀಡಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ಮಾನವ ಹಕ್ಕು ಹೋರಾಟಗಾರರು ಶರ್ಮಿಳಾರ ಪರ ಧ್ವನಿಯೆತ್ತಿದರು. ‘ಸೇವ್ ಶರ್ಮಿಳಾ ಆರ್ಗನೈಝೇಶನ್' ಎಂಬ ಹೆಸರಲ್ಲಿ ತಂಡವೊಂದೂ ರಚನೆಯಾಯಿತು. ಶರ್ಮಿಳಾ ಆಸ್ಪತ್ರೆಯಿಂದ ಬಿಡುಗಡೆಗೊಂಡಾಗ ಸ್ವಾಗತಿಸುವುದಕ್ಕೆ ಸಾವಿರಾರು ಮಂದಿ ಸೇರುತ್ತಿದ್ದರು. ಆಕೆಯ ಸಂದರ್ಶನ, ವರದಿ, ಸುದ್ದಿಗಳು ರಾಷ್ಟ್ರಮಟ್ಟದಲ್ಲಿ ಆಗಾಗ ಪ್ರಕಟಗೊಳ್ಳುತ್ತಲೇ ಇದ್ದುವು. ಹೀಗೆ ಕಳೆದ 15 ವರ್ಷಗಳಿಂದ ಅತ್ಯಂತ ಬದ್ಧತೆಯಿಂದ ಸತ್ಯಾಗ್ರಹವನ್ನು ಮುಂದುವರಿಸಿಕೊಂಡು ಬಂದಿರುವ ಶರ್ಮಿಳಾರಿಗೆ ಈಗ ಒಂಟಿತನದ ಅನುಭವವಾಗುತ್ತಿದೆ. ಆಕೆ ಬಂಧನಕ್ಕೀಡಾದರೂ ಬಿಡುಗಡೆಗೊಂಡರೂ ಈಗ ಜನ ಸೇರುತ್ತಿಲ್ಲ. ಸೇವ್ ಶರ್ಮಿಳಾ ಆರ್ಗನೈಝೇಶನ್‍ನ ಮಂದಿಯೇ ಪ್ರತಿಭಟನೆಯಲ್ಲಿ ಆಸಕ್ತಿಯನ್ನು ಕಳಕೊಂಡಿದ್ದಾರೆ. ಮಾನವ ಹಕ್ಕು ಹೋರಾಟಗಾರರು ತಣ್ಣಗಾಗಿದ್ದಾರೆ. ಏರು ಯೌವನದಲ್ಲಿ ಹೋರಾಟವೊಂದನ್ನು ಹುಟ್ಟು ಹಾಕಿದ ಶರ್ಮಿಳಾರಿಗೆ ಈಗ ಮಧ್ಯವಯಸ್ಸು. ಜೊತೆಗಿದ್ದವರೆಲ್ಲ ಮದುವೆ, ಮಕ್ಕಳು, ಕುಟುಂಬ ಎಂದು ಚೆಲ್ಲಾಪಿಲ್ಲಿಯಾಗಿರುವಾಗ ಮತ್ತು ಹೊಸ ತಲೆಮಾರು ಈ ಸತ್ಯಾಗ್ರಹದಲ್ಲಿ ಆಕರ್ಷಣೆ ಕಳಕೊಂಡಿರುವಾಗ ಶರ್ಮಿಳಾ ಸಹಜವಾಗಿ ಮರು ಅವಲೋಕನಕ್ಕೆ ಇಳಿದಿದ್ದಾರೆ. ಈ ಪ್ರತಿಭಟನೆ ಎಲ್ಲಿಯ ವರೆಗೆ ಎಂಬೊಂದು ಪ್ರಶ್ನೆ ಅವರನ್ನು ಆಳವಾಗಿ ಇರಿಯತೊಡಗಿದೆ. ಅಷ್ಟಕ್ಕೂ,
  ಮಣಿಪುರದ ಜೆ.ಎನ್. ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಸುಸಜ್ಜಿತ ಕೋಣೆಯಲ್ಲಿ ಮೂಗಿನಲ್ಲಿ ದ್ರವಾಹಾರ ಸೇವಿಸುತ್ತಿರುವ ಶರ್ಮಿಳಾರಿಗಾಗಿ ಪ್ರತಿ ತಿಂಗಳು 80 ಸಾವಿರ ರೂಪಾಯಿ ಖರ್ಚು ಮಾಡುತ್ತಿರುವ ಅಲ್ಲಿನ ಸರಕಾರಕ್ಕೆ ಈ ಸುದ್ದಿ ಅತ್ಯಂತ ಇಷ್ಟ ಆಗಬಹುದು. ಶರ್ಮಿಳಾ ಸತ್ಯಾಗ್ರಹ ತ್ಯಜಿಸುವುದನ್ನು ಅದು ಎರಡೂ ಕೈಗಳಿಂದ ಸ್ವಾಗತಿಸಬಹುದು. ಆದರೆ ಈ ಬೆಳವಣಿಗೆ ಪ್ರತಿಭಟನೆಯ ಮೇಲೆ ಬೀರಬಹುದಾದ ಪರಿಣಾಮಗಳೇನು? ಪ್ರಜಾತಂತ್ರ ನೀಡಿರುವ ಪ್ರತಿಭಟನೆ ಎಂಬ ಅಸ್ತ್ರದ ಬಗ್ಗೆ ಯುವ ಪೀಳಿಗೆ ಹೊಂದಿರುವ ತೀವ್ರ ವೈರಾಗ್ಯದ ಸೂಚನೆಯಲ್ಲವೇ ಶರ್ಮಿಳಾರ ಆತಂಕ? ಶರ್ಮಿಳ ದ್ರವಾಹಾರ ಸೇವಿಸಿದರೂ ಘನಾಹಾರ ಸೇವಿಸಿದರೂ ಏನೂ ಬದಲಾವಣೆ ಆಗದು ಎಂಬೊಂದು ವಾತಾವರಣ ಸೃಷ್ಟಿಯಾಗಲು ಏನು ಕಾರಣ, ಯಾರು ಕಾರಣ? ಹಾಗಂತ, ವೈಯಕ್ತಿಕವಾಗಿ ಈ ಪ್ರತಿಭಟನೆಯ ಅಗತ್ಯ ಶರ್ಮಿಳಾರಿಗೆ ಖಂಡಿತಕ್ಕೂ ಇಲ್ಲ. ಮಲ್ಲಮ್‍ನಲ್ಲಿ ಸಾವಿಗೀಡಾಗ 16 ಮಂದಿಯಲ್ಲಿ ಆಕೆಯ ಮನೆಯವರು ಬಿಡಿ ಸಂಬಂಧಿಕರೂ ಇರುವ ಸಾಧ್ಯತೆ ಇಲ್ಲ. ಆಕೆ ಮನಸ್ಸು ಮಾಡಿದ್ದರೆ ಆಕೆಯ ವಯಸ್ಸಿನವರು ಇವತ್ತು ಆರಾಮವಾಗಿ ಬದುಕುತ್ತಿರುವಂತೆ, ಮಕ್ಕಳು, ಕುಟುಂಬ ಎಂದು ಎಲ್ಲೋ ಬದುಕುತ್ತಿರಬಹುದಿತ್ತು. ಇಷ್ಟಿದ್ದೂ, ಒಂದು ರಾಜ್ಯದ ಜನತೆಯ ಮೇಲಿನ ಕಾಳಜಿಯಿಂದ ಅತಿ ಕಷ್ಟಕರವಾದ ನಿರಾಹಾರ ಸತ್ಯಾಗ್ರಹಕ್ಕೆ ಮುಂದಾಗಿ ಇವತ್ತು ಆಕೆ ಜನ ಬೆಂಬಲದ ಕೊರತೆಯನ್ನು ಎದುರಿಸುತ್ತಿದ್ದರೆ ಅದಕ್ಕೆ ಹೊಸ ತಲೆಮಾರನ್ನೇ ಹೊಣೆಯಾಗಿಸಬೇಕಾಗುತ್ತದೆ. ಆಧುನಿಕ ಪೀಳಿಗೆಯ ಭಾಷೆಯಲ್ಲಿ ಹೇಳುವುದಾದರೆ ಪ್ರತಿಭಟನೆ ಎಂಬುದೇ ನಾಲಾಯಕ್ಕು. ಹೊಸ ತಲೆಮಾರು ಇವತ್ತು ಪ್ರತಿಭಟನೆಯಲ್ಲಿ ಆಸಕ್ತಿಯನ್ನೇ ಕಳಕೊಳ್ಳತೊಡಗಿದೆ. ಆಧುನಿಕ ಜೀವನ ಕ್ರಮವು ಎಂಜಾಯ್‍ಮೆಂಟ್ ಲೈಫ್‍ಸ್ಟೈಲ್ ಅನ್ನು ಕಲಿಸುತ್ತಿದೆಯೇ ಹೊರತು ಹೋರಾಟ ಮನೋಭಾವವನ್ನೇ ಸಮಾಜದಿಂದ ಕಿತ್ತುಕೊಳ್ಳುತ್ತಿದೆ. ‘ನಮ್ಮಷ್ಟಕ್ಕೆ ನಾವು' ಎಂಬೊಂದು ಸ್ವಹಿತಾಸಕ್ತಿ ಮನೋಭಾವವು ಯುವಪೀಳಿಗೆಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇನ್ನು, ಗೋವಿನ ವಿಷಯದಲ್ಲೋ ಭಿನ್ನ ಧರ್ಮದ ಯುವಕ-ಯುವತಿಯರ ಪ್ರೇಮದ ವಿಷಯದಲ್ಲೋ ಅಥವಾ ಮಸೀದಿ-ಮಂದಿರಕ್ಕೆ ಬಿದ್ದ ಕಲ್ಲಿನ ಹೆಸರಿನಲ್ಲೋ ತಕ್ಷಣಕ್ಕೆ ಸೇರುವ ನೂರಾರು ಯುವಕರಲ್ಲಿ ಬಹುತೇಕ ಯಾರೊಬ್ಬರೂ ಜನಪರ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ನೀರು, ವಿದ್ಯುತ್, ರಸ್ತೆ, ನಿರುದ್ಯೋಗ, ಬೆಲೆ ಏರಿಕೆ.. ಮುಂತಾದ ವಿಷಯಗಳನ್ನೆತ್ತಿಕೊಂಡು ಏರ್ಪಡಿಸಲಾಗುವ ಪ್ರತಿಭಟನೆಗಳಲ್ಲಿ ಜನಸಂಖ್ಯೆ ಶೂನ್ಯ ಅನ್ನುವಷ್ಟು ಕಡಿಮೆ. ಇಂಥ ಸ್ಥಿತಿಯಲ್ಲಿ ಶರ್ಮಿಳಾರ ಆತಂಕವನ್ನು ನಾವು ಕೇವರ ಅವರೊಬ್ಬರಿಗೇ ಸೀಮಿತಗೊಳಿಸಿ ನೋಡಬೇಕಿಲ್ಲ. ನಿಜವಾಗಿ, ಪ್ರತಿಭಟನೆಯಲ್ಲಿ ಜನರು ಆಸಕ್ತಿಯನ್ನು ಕಳೆದುಕೊಂಡು ಬಿಟ್ಟರೆ ಅದರಿಂದ ಅತ್ಯಂತ ಖುಷಿಯಾಗುವುದು ಪ್ರಭುತ್ವಕ್ಕೆ. ಪ್ರತಿಭಟನೆಯನ್ನು ಪ್ರತಿ ಸಂದರ್ಭದಲ್ಲೂ ಸೋಲಿಸುವುದಕ್ಕೆ ಪ್ರಭುತ್ವ ಯಾವಾಗಲೂ ಹೊಂಚು ಹಾಕುತ್ತಲೇ ಇರುತ್ತದೆ. ಶರ್ಮಿಳಾ ಅದರ ಸೂಚನೆಯನ್ನು ನೀಡಿದ್ದಾರೆ. ಹಾಗಂತ, ಒಂದೂವರೆ ದಶಕದಿಂದ ನಿರಾಹಾರ ಸತ್ಯಾಗ್ರಹದಲ್ಲಿರುವ ಶರ್ಮಿಳಾ, ಇನ್ನೂ ಆಕೆಯೇ ಆ ಪ್ರತಿಭಟನೆಯನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ಹೇಳುವುದು ಕ್ರೌರ್ಯವಾಗುತ್ತದೆ. ತನ್ನ ಬದುಕಿನ ಬಹು ಅಮೂಲ್ಯ ಸಮಯವನ್ನು ಆಕೆ ಆ ಹೋರಾಟಕ್ಕಾಗಿ ಅರ್ಪಿಸಿದ್ದಾರೆ. ಇವತ್ತು ಅವರು ಈ ಪ್ರತಿಭಟನೆಯಿಂದ ಬಿಡುವನ್ನು ಬಯಸುವುದಾದರೆ ಜನರು ಅದಕ್ಕೆ ಅವಕಾಶ ಮಾಡಿಕೊಡಬೇಕು. ಇತರರು ಆ ಪ್ರತಿಭಟನೆಯ ನೇತೃತ್ವವನ್ನು ವಹಿಸಿಕೊಳ್ಳಬೇಕು. ಪ್ರತಿಭಟನೆಗೆ ಭಿನ್ನ ದಿಕ್ಕು, ಹೊಸ ಚೈತನ್ಯವನ್ನು ಒದಗಿಸಬೇಕು.
  ಏನೇ ಆಗಲಿ, ಪ್ರತಿಭಟನೆ ಎಂಬ ಪ್ರಜಾತಂತ್ರ್ಯದ ಬಹು ಅಮೂಲ್ಯ ಅಸ್ತ್ರವು ನಾಲಾಯಕ್ಕು ಆಗದಂತೆ ನೋಡಿಕೊಳ್ಳಬೇಕಾದ ಅಗತ್ಯ ಎಲ್ಲರ ಮೇಲೂ ಇದೆ. ಬದಲಾದ ಕಾಲಕ್ಕೆ ತಕ್ಕಂತೆ ಅದಕ್ಕೆ ಹೊಸ ರೂಪ, ಭಾವ, ಅಂದವನ್ನು ನೀಡಬೇಕಾಗಿದೆ. ಶರ್ಮಿಳಾರ ಆತಂಕವು ಸುಳ್ಳಾಗಲಿ ಮತ್ತು ಅವರಿಗೆ ಯಶಸ್ಸು ಸಿಗಲಿ ಎಂದೇ ಹಾರೈಸೋಣ.

Wednesday, 21 October 2015

ಮಾಂಸವು ಆಹಾರವಾಗಿ ಇದ್ದರೂ ಇಲ್ಲದಿದ್ದರೂ..

     ಛತ್ತೀಸ್‍ಗಢವು ಭಾರತದ ಭಾಗವೋ ಅಥವಾ ಪ್ರತ್ಯೇಕ ರಾಷ್ಟ್ರವೋ ಎಂದು ಪ್ರಶ್ನಿಸಬೇಕಾದಂಥ ಆತಂಕಕಾರಿ ಬೆಳವಣಿಗೆಯೊಂದು ಸೃಷ್ಟಿಯಾಗಿದೆ. ಅಲ್ಲಿನ ಹೈಕೋರ್ಟಿಗೂ ಇಂಥದ್ದೇ ಅನುಭವವಾಗಿದೆ. ಛತ್ತೀಸ್‍ಗಢದ ಬಸ್ತಾರ್ ಜಿಲ್ಲೆಯ ಸುಮಾರು 50 ಗ್ರಾಮಗಳು ಹಿಂದೂ ಅಲ್ಲದವರ ಪ್ರಾರ್ಥನೆ, ಭಾಷಣ ಮತ್ತು ಧರ್ಮ ಪ್ರಚಾರಗಳಿಗೆ ನಿಷೇಧವನ್ನು ಹೇರಿವೆ. ಈ ಗ್ರಾಮಗಳಲ್ಲಿ ಹಿಂದೂ ಅಲ್ಲದವರಿಗೆ ಕೂಲಿಯಾಳುಗಳು ಸಿಗುವುದಿಲ್ಲ. ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕೆ ತಡೆ ಒಡ್ಡಲಾಗುತ್ತದೆ. ಕುಡಿಯುವ ನೀರು, ಆಹಾರ ಖರೀದಿಗೂ ಅಘೋಷಿತ ಬಹಿಷ್ಕಾರವಿದೆ. ಛತ್ತೀಸ್‍ಗಢದ ಕ್ರೈಸ್ತ ಸಂಘಟನೆ ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಈ ಸಂಗತಿಯನ್ನು ಹೈಕೋರ್ಟ್‍ನ ಮುಂದಿಟ್ಟಾಗ ಅದು ಪರಿಸ್ಥಿತಿಗೆ ಅಸಹನೆ ವ್ಯಕ್ತಪಡಿಸಿದೆ. ಸರಕಾರದಿಂದ ವರದಿಯನ್ನೂ ಅಪೇಕ್ಷಿಸಿದೆ. ನಿಜವಾಗಿ, ಈ ಬಹಿಷ್ಕಾರದ ಹಿಂದೆ ಒಂದು ಕತೆಯಿದೆ. ಈ ಕತೆ ಸಂಪೂರ್ಣವಾಗಿ ಸಂಘಪರಿವಾರದಿಂದ ರಚಿತವಾದುದು. ಸಂಘಪರಿವಾರದ ಸಲಹೆಯಂತೆ ಈ ಬಹಿಷ್ಕಾರವನ್ನು ಹೇರಲಾಗಿದೆ ಎಂದು ಅದರ ಬಸ್ತಾರ್ ಜಿಲ್ಲಾಧ್ಯಕ್ಷ ಸುರೇಶ್ ಯಾದವ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಒಂದು ಕಡೆ, ಗೋವಿನ ಹೆಸರಲ್ಲಿ ಥಳಿಸಿ ಕೊಲ್ಲಲಾಗುತ್ತಿದ್ದರೆ ಇನ್ನೊಂದೆಡೆ ಈ ಥಳಿಸಿ ಕೊಲ್ಲುವವರ ಮುಖವಾಣಿಯಾದ ಪಾಂಚಜನ್ಯ ಪತ್ರಿಕೆಯು, ‘ಗೋಹತ್ಯೆ ಮಾಡುವವರನ್ನು ಹತ್ಯೆ ನಡೆಸಬೇಕು’ ಎಂದು ಕರೆ ಕೊಡುತ್ತದೆ. ಮಗದೊಂದೆಡೆ, ಗುಜರಾತ್‍ನಲ್ಲಿ ಗಾರ್ಬಾ ನೃತ್ಯಕ್ಕೆ ಮುಸ್ಲಿಮರಿಗೆ ಬಹಿಷ್ಕಾರ ಹಾಕಲಾಗುತ್ತದೆ. ಅಷ್ಟಕ್ಕೂ, ಥಳಿತ, ಹತ್ಯೆ, ಬಹಿಷ್ಕಾರ, ದ್ವೇಷ ಭಾಷಣಗಳೇ ಇತ್ತೀಚೆಗೆ ಪ್ರತಿದಿನದ ಸುದ್ದಿಗಳಾಗಿರುವುದಕ್ಕೆ ಕಾರಣಗಳೇನು? ಈ ಎಲ್ಲದರಲ್ಲೂ ಬಿಜೆಪಿ ಮತ್ತು ಅದರ ಬೆಂಬಲಿಗ ಗುಂಪು ಆರೋಪಿ ಸ್ಥಾನದಲ್ಲಿರುವುದರಿಂದ ಈ ಪ್ರಶ್ನೆಗೆ ಮತ್ತಷ್ಟು ಬಲ ಬರುತ್ತದೆ. ಅಭಿವೃದ್ಧಿಯ ಹೆಸರಲ್ಲಿ ಚುನಾವಣೆಯನ್ನು ಎದುರಿಸಿದ ನರೇಂದ್ರ ಮೋದಿಯವರು ಇಂಥದ್ದೊಂದು ಸನ್ನಿವೇಶವನ್ನು ಬಯಸಿದ್ದರೇ? ಅಭಿವೃದ್ಧಿ ಅವರ ನಿಜವಾದ ಗುರಿ ಆಗಿರಲಿಲ್ಲವೇ? ಒಂದು ಕಡೆ ಗೋವಿನ ಹೆಸರಲ್ಲಿ ಥಳಿಸಿ ಕೊಲ್ಲುವಾಗ ಇನ್ನೊಂದು ಕಡೆ ಪ್ರತಿದಿನ ಟನ್ನುಗಟ್ಟಲೆ ಮಾಂಸವು ವಿದೇಶಕ್ಕೆ ರಫ್ತಾಗುತ್ತಾ ಇದೆ. ಆದರೆ ವಿದೇಶಕ್ಕೆ ಗೋಮಾಂಸ ರಫ್ತು ಮಾಡುವ ಬೃಹತ್ ಕಂಪೆನಿಗಳ ವಿರುದ್ಧ ಥಳಿಸಿ ಕೊಲ್ಲುವ ಮಂದಿ ಯಾವ ಪ್ರತಿಭಟನೆಯನ್ನೂ ಮಾಡುತ್ತಿಲ್ಲ. ಅಲ್ಲಿಗೆ ಗೋವುಗಳನ್ನು ಸಾಗಿಸುವ ವಾಹನಗಳ ಮೇಲೆ ದಾಳಿ ನಡೆಸುತ್ತಿಲ್ಲ. ಅದರ ಮಾಲಿಕರು, ವ್ಯವಸ್ಥಾಪಕರು, ಕೆಲಸಗಾರರ ವಿರುದ್ಧ ಮೊಕದ್ದಮೆ ಹೂಡುತ್ತಿಲ್ಲ. ಮಾಂಸೋದ್ಯಮದಲ್ಲಿ ತೊಡಗಿರುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿಯವರಿಗೆ ಸಂಪೂರ್ಣ ಅಧಿಕಾರ ಇದ್ದರೂ ಅದಕ್ಕಾಗಿ ಈ ಮಂದಿ ಒತ್ತಾಯಿಸುತ್ತಿಲ್ಲ. ಈ ದ್ವಂದ್ವಕ್ಕೆ ಏನೆನ್ನಬೇಕು?
  ಬಹಿಷ್ಕಾರ ಎಂಬ ಪದಕ್ಕೆ ಈ ದೇಶದಲ್ಲಿ ಪ್ರಾಚೀನ ಇತಿಹಾಸ ಇದೆ. ಈ ಪದದ ತೀವ್ರತೆಯನ್ನು ಮೊಟ್ಟಮೊದಲು ಅನುಭವಿಸಿದವರು ದಲಿತರು. ಅಂಬೇಡ್ಕರ್‍ರಿಗೂ ಇದರ ಬಿಸಿ ತಟ್ಟಿದೆ. ಸಾರ್ವಜನಿಕ ಬಾವಿಯಿಂದ, ಅಂಗಡಿಯಿಂದ, ದೇವಸ್ಥಾನಗಳಿಂದ, ಸಾರ್ವಜನಿಕ ಸ್ಥಳಗಳಿಂದ ಬಹಿಷ್ಕೃತಗೊಂಡೇ ಶತಮಾನವನ್ನು ಅವರು ಕಳೆದಿದ್ದಾರೆ. ಅದರ ಪರಿಣಾಮ ಎಷ್ಟು ಭೀಕರ ಪ್ರಮಾಣದಲ್ಲಿ ಆಗಿದೆಯೆಂಬುದು ಇವತ್ತಿಗೂ ಸರಕಾರಿ ಕಚೇರಿಗಳು, ಮಾಧ್ಯಮದ ಆಯಕಟ್ಟಿನ ಜಾಗಗಳು, ಪೊಲೀಸ್ ಇಲಾಖೆ, ಪ್ರಭುತ್ವ, ರಾಜಕೀಯ ಪಕ್ಷಗಳ ಪ್ರಮುಖ ಸ್ಥಾನಗಳಲ್ಲಿ ಯಾರಿದ್ದಾರೆಂಬುದನ್ನು ಪರಿಶೀಲಿಸಿದರೆ ಸ್ಪಷ್ಟವಾಗುತ್ತದೆ. ಸ್ವಾತಂತ್ರ್ಯಾನಂತರ ದಲಿತ ವರ್ಗಕ್ಕೆ ವಿೂಸಲಾತಿಯನ್ನು ಒದಗಿಸಿದ್ದರೂ ಅವರು ವ್ಯವಸ್ಥೆಯ ಆಯಕಟ್ಟಿನ ಜಾಗಕ್ಕೆ ತಲುಪಬೇಕಾದಷ್ಟು ಪ್ರಮಾಣದಲ್ಲಿ ತಲುಪಿಲ್ಲ. ರಾಜಕೀಯದಲ್ಲಿ ಅವರು ತಮ್ಮ ಸಂಖ್ಯೆಗೆ ಅನುಗುಣವಾಗಿ ಬಲಶಾಲಿಯಾಗಿಲ್ಲ. ಮಾಧ್ಯಮಗಳ ನೀತಿ ನಿರೂಪಣಾ ಹಂತಕ್ಕೆ ಅವರಿನ್ನೂ ಏರಿಲ್ಲ. ದಲಿತ ಸಬಲೀಕರಣಕ್ಕಾಗಿ ಸರಕಾರ ಸರಣಿ ಕಾನೂನುಗಳನ್ನು ರಚಿಸಿದ ಬಳಿಕವೂ ಇವತ್ತೂ ದಲಿತರೆಂಬ ಕಾರಣಕ್ಕಾಗಿ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದೀಗ, ದಲಿತರನ್ನು ಬಹಿಷ್ಕಾರದ ಮೂಲಕ ಸತಾಯಿಸಿದ ಅದೇ ಗುಂಪು ಬಹಿಷ್ಕಾರದ ಹೊಸ ನಮೂನೆಯನ್ನು ಪ್ರಸ್ತುತಪಡಿಸುತ್ತಿದೆ. ಆದಿವಾಸಿ-ಹಿಂದುಳಿದ ಮಂದಿಯೇ ಹೆಚ್ಚಿರುವ ಬಸ್ತಾರ್‍ನಂತಹ ಜಿಲ್ಲೆಯಿಂದಲೇ ಈ ಬಹಿಷ್ಕಾರವನ್ನು ಜಾರಿಗೊಳಿಸುವ ಅತ್ಯಂತ ಬುದ್ದಿsವಂತಿಕೆಯನ್ನು ಅದು ಪ್ರದರ್ಶಿಸುತ್ತಲೂ ಇದೆ. ಈ ಬಹಿಷ್ಕಾರ ದಲಿತ ಬಹಿಷ್ಕಾರಕ್ಕಿಂತ ಹೆಚ್ಚು ಭಯಾನಕವಾದುದು. ಗೋವಿನ ಹೆಸರಲ್ಲಿ, ಮತಾಂತರ, ಸಂಸ್ಕೃತಿ, ವಿದೇಶಿ ಮೂಲದ ಹೆಸರಲ್ಲಿ ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ಭಾರತೀಯತೆಯಿಂದ ಪ್ರತ್ಯೇಕಿಸಿ ಹೇಳುವುದು ಸುಲಭ ಮತ್ತು ಹೆಚ್ಚು ಭಾವನಾತ್ಮಕ. ‘ನಮ್ಮ ಪೂಜಾರ್ಹ ಪ್ರಾಣಿಯನ್ನು ಅವರು ಬೇಕೆಂದೇ ಅವಮಾನಿಸುತ್ತಾರೆ’ ಎಂದು ಹೇಳುವಾಗ ಅಲ್ಲೊಂದು ಭಾವುಕತೆ ಸೃಷ್ಟಿಯಾಗುತ್ತದೆ. ‘ಅವರಿಂದಾಗಿ ನಮ್ಮ ಸಂಸ್ಕøತಿ ಹಾಳಾಗಿದೆ, ನಮ್ಮ ಆಹಾರದಲ್ಲಿ ಧರ್ಮ ವಿರೋಧಿ ಅಂಶಗಳು ಸೇರಿಕೊಂಡಿವೆ..’ ಎಂದೆಲ್ಲಾ ಹೇಳುವಾಗ ಒಂದರ ವೈಭವೀಕರಣ ಮತ್ತು ಇನ್ನೊಂದರ ಅಸಹ್ಯೀಕರಣ ಕೂಡ ನಡೆಯುತ್ತದೆ. ಈ ಅಸಹ್ಯೀಕರಣವೇ ಅಂತಿಮವಾಗಿ ಸಮಾಜವನ್ನು ನಾವು ಮತ್ತು ಅವರು ಎಂದು ವಿಭಜಿಸುವುದಕ್ಕೆ ನೀಲನಕ್ಷೆಯನ್ನು ಒದಗಿಸುತ್ತದೆ. ದಲಿತರನ್ನು ಈ ದೇಶದಲ್ಲಿ ಬಹಿಷ್ಕಾರಕ್ಕೆ ತುತ್ತಾಗಿಸಿದ್ದು ಅವರ ಆಹಾರ, ಸಂಸ್ಕೃತಿ, ವರ್ಣ, ವೇಷ-ಭೂಷಣಗಳನ್ನು ಅಸಹ್ಯಗೊಳಿಸುವ ಮೂಲಕವೇ ಆಗಿತ್ತು. ಅವರನ್ನು ಸಂಸ್ಕೃತಿಹೀನರಂತೆ ಕಾಣಲಾಯಿತು. ಪದೇ ಪದೇ ಅವರ ವರ್ಣವನ್ನು ಹೀನೈಸಲಾಯಿತು. ಅವರ ಆಹಾರ ಪದ್ಧತಿಯನ್ನು ತುಚ್ಛೀಕರಿಸಲಾಯಿತು. ಹೀಗೆ ನಿಧಾನವಾಗಿ ಅವರು ಸಮಾಜದ ಮುಖ್ಯ ಧಾರೆಯಿಂದ ಕಳೆದುಹೋಗುತ್ತಾ ಆತ್ಮವಿಶ್ವಾಸವನ್ನು ಕಳಕೊಳ್ಳತೊಡಗಿದರು. ಇದೀಗ ಅದೇ ಮಾದರಿಯ ಪ್ರಯೋಗವನ್ನು ದೇಶದಾದ್ಯಂತ ಜಾರಿಗೊಳಿಸುವ ಪ್ರಯತ್ನವೊಂದು ನಡೆಯುತ್ತಿರುವಂತೆ ತೋರುತ್ತಿದೆ. ನಾವು ಮತ್ತು ಅವರು ಎಂಬೊಂದು ವಿಭಜನೆ. ಅವರು ಗೋವು ತಿನ್ನುವವರು, ಮತಾಂತರ ಮಾಡುವವರು, ಹೆಣ್ಣು ಮಕ್ಕಳನ್ನು ದುರುಪಯೋಗಿಸುವವರು.. ಎಂದೆಲ್ಲಾ ಹೇಳುತ್ತಾ ‘ಅವರಿಂದ' ಮುಕ್ತವಾದ ಪ್ರದೇಶಗಳನ್ನು ಹುಟ್ಟು ಹಾಕುವುದು. ಅವರಿಲ್ಲದ ಸಮಾಜವನ್ನು ಕಟ್ಟಿಕೊಳ್ಳುವುದು. ಬಸ್ತಾರ್ ಇದರ ಮುನ್ಸೂಚನೆ ಎಂದೇ ಹೇಳಬೇಕಾಗುತ್ತದೆ.
  ಅಷ್ಟಕ್ಕೂ, ಈ ದೇಶದಲ್ಲಿ ಮಾಂಸಾಹಾರವನ್ನು ಪ್ರಾರಂಭಿಸಿದ್ದು ಮುಸ್ಲಿಮರೂ ಅಲ್ಲ, ಅದನ್ನು ವಿದೇಶಕ್ಕೆ ರಫ್ತು ಮಾಡುವಲ್ಲಿ ಅವರ ಕೈವಾಡವೂ ಇಲ್ಲ. ಈ ದೇಶದ ಒಟ್ಟು ಕಸಾಯಿಖಾನೆಗಳಲ್ಲಿ ಆಗುತ್ತಿರುವ ಮಾಂಸಕ್ಕಿಂತ ಹೆಚ್ಚು ಮಾಂಸವು ವಿದೇಶಕ್ಕೆ ರಫ್ತಾಗುತ್ತಿರುವುದನ್ನು ಮುಚ್ಚಿಟ್ಟು ಇವತ್ತು ಗೋಹತ್ಯೆಯನ್ನು ಮುಸ್ಲಿಮರ ತಲೆಗೆ ಕಟ್ಟಲಾಗುತ್ತಿದೆ. ಅವರನ್ನು ಭಯೋತ್ಪಾದಕರಂತೆ ಮತ್ತು ಅಸಹಿಷ್ಣುಗಳಂತೆ ಬಿಂಬಿಸಲಾಗುತ್ತಾ ಇದೆ. ಆದರೆ ಇದು ವಾಸ್ತವ ಅಲ್ಲ. ಈ ಪ್ರಚಾರದ ಹಿಂದೆ ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ದಲಿತೀಕರಣಗೊಳಿಸುವ ಸಂಚೊಂದು ನಡೆಯುತ್ತಿರುವಂತೆ ತೋರುತ್ತಿದೆ. ಒಂದು ಕಡೆ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಲೇ ಇನ್ನೊಂದೆಡೆ ನಡೆಯುತ್ತಿರುವ ಈ ಸಂಚನ್ನು ಭಾರತೀಯರು ವಿಫಲಗೊಳಿಸಬೇಕು. ಈ ದೇಶ ಎಲ್ಲರದು. ಎಲ್ಲರೂ ಜೊತೆಯಾಗಿ ಬಾಳುವ ತಾರತಮ್ಯ ರಹಿತ ಭಾರತ ನಮ್ಮ ಗುರಿಯಾಗಬೇಕು. ಮಾಂಸವು ಆಹಾರವಾಗಿ ಇದ್ದರೂ ಇಲ್ಲದಿದ್ದರೂ..

Wednesday, 14 October 2015

ಅಖ್ಲಾಕ್‍ ನ ಮಾಂಸ, ಕಲ್ಬುರ್ಗಿ ವೈಚಾರಿಕತೆ ಮತ್ತು ಪ್ರಶಸ್ತಿಗಳ ಪ್ರತಿಭಟನೆ

      ಹಿಂಸೆ ಮತ್ತು ಪಾರಿತೋಷಕ ಜೊತೆಜೊತೆಗೇ ಸಾಗಲು ಸಾಧ್ಯವಿಲ್ಲ ಎಂಬ ಪ್ರತಿಭಟನಾ ಸಂದೇಶವೊಂದು ಸಾಹಿತ್ಯ
ವಲಯದಿಂದ ರವಾನೆಯಾಗಿದೆ. ಈ ಪ್ರತಿಭಟನೆಗೆ ನೇತೃತ್ವ ನೀಡಿರುವವರು 88 ವರ್ಷದ ಸಾಹಿತಿ ನಯನತಾರಾ ಸೆಹಗಲ್. ಅವರು ತಮಗೆ ಸಂದಿರುವ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ. 1975ರಲ್ಲಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದಾಗ ಅದನ್ನು ಖಂಡಿಸಿ ಪ್ರತಿಭಟಿಸಿದವರು ಸೆಹಗಲ್. ಆಗ ಅವರ ಜೊತೆಗೆ ಅರುಣ್ ಶೌರಿ, ಕುಲದೀಪ್ ನಯ್ಯರ್, ರಜನಿ ಕೊಟಾರಿ, ಜಾರ್ಜ್ ಫರ್ನಾಂಡಿಸ್ ಮುಂತಾದವರು ಸೇರಿಕೊಂಡಿದ್ದರು. ಅವತ್ತು ಬಿಜೆಪಿಯ ಮಂದಿ ಸೆಹಗಲ್‍ರನ್ನು ಎಷ್ಟು ಮೆಚ್ಚಿಕೊಂಡಿದ್ದರೆಂದರೆ ಅವರನ್ನು ಮಾದರಿ ಸಾಹಿತಿಯೆಂದು ಘೋಷಿಸಿದ್ದರು. ಅದೇ ಸೆಹಗಲ್‍ರು ಇವತ್ತು ನರೇಂದ್ರ ಮೋದಿಯವರ ವಿರುದ್ಧ ದನಿಯೆತ್ತಿದ್ದಾರೆ. ಅವರ ಮೌನವನ್ನು ಪ್ರಶ್ನಿಸಿದ್ದಾರೆ. ಗೋವಿನ ಹೆಸರಲ್ಲಿ ನಡೆಯುತ್ತಿರುವ ಕ್ರೌರ್ಯ ಮತ್ತು ಪ್ರಗತಿಪರರ ಮೇಲಿನ ದಾಳಿಗೆ ಅವರು ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹಾಗಂತ, ಈ ಪ್ರತಿಭಟನೆಯಲ್ಲಿ ಸೆಹಗಲ್ ಒಂಟಿಯಲ್ಲ. ಚಂಪಾ, ಕುಂವೀ, ಅರವಿಂದ ಮಾಲಗತ್ತಿ, ಅಮನ್ ಸೇಥಿ, ಅಶೋಕ್ ವಾಜಪೇಯಿ, ರಹಮತ್ ತರೀಕೆರೆ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸು ಮಾಡಿಯೋ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಯೋ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಸಾಹಿತಿ ಸುಧೀಂದ್ರ ಕುಲಕರ್ಣಿಯವರಿಗೆ ಮಸಿ ಬಳಿಯಲಾಗಿದೆ. ಪಾಕ್ ಗಾಯಕ ಗುಲಾಮ್ ಅಲಿಯವರ ಕಾರ್ಯಕ್ರಮವನ್ನು ಶಿವಸೇನೆಯ ಒತ್ತಡದ ಮೇರೆಗೆ ರದ್ದುಗೊಳಿಸಲಾಗಿದೆ. ಒಂದು ರೀತಿಯಲ್ಲಿ, ‘ದ್ವಿತೀಯ ತುರ್ತು ಪರಿಸ್ಥಿತಿಯೊಂದು’ ಭಾಗಶಃ ಜಾರಿಯಲ್ಲಿರುವಂತೆ ತೋರುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರದ ಬಗ್ಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಏನೆಲ್ಲ ಅನುಮಾನ ಪಡಲಾಗಿತ್ತೋ ಅವೆಲ್ಲವನ್ನೂ ನಿಜಗೊಳಿಸುವ ತುರ್ತೊಂದು ಇವತ್ತು ಎಲ್ಲೆಡೆಯೂ ಕಾಣಿಸುತ್ತಿದೆ. ಬಿಜೆಪಿ ಮತ್ತು ಅದರ ಬೆಂಬಲಿಗ ವಲಯವು ಹಿಂದೆಂದಿಗಿಂತಲೂ ಹೆಚ್ಚು ಆವೇಶಭರಿತವಾಗಿ ಮಾತಾಡುತ್ತಿದೆ. ಈ ಗುಂಪು ತಮಗೆ ವಿರುದ್ಧವಾದ ಯಾವುದನ್ನು ಸಹಿಸುತ್ತಿಲ್ಲ. ವೈಚಾರಿಕ ಭಿನ್ನಾಭಿಪ್ರಾಯಕ್ಕೆ ಬೆಲೆಯನ್ನೇ ನೀಡುತ್ತಿಲ್ಲ. ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾದುದನ್ನೆಲ್ಲ ದೇಶವಿರೋಧಿ ಮತ್ತು ಧರ್ಮ ವಿರೋಧಿಯಂತೆ ಚಿತ್ರೀಕರಿಸುತ್ತಿದೆ. ಅಖ್ಲಾಕ್‍ನ ಸಾವನ್ನೂ ಸಮರ್ಥಿಸುವಷ್ಟರ ಮಟ್ಟಿಗೆ ಈ ಗುಂಪು ಸಂವೇದನಾರಹಿತವಾಗಿ ವರ್ತಿಸುತ್ತಿದೆ. ಈ ಎಲ್ಲ ಸಂದರ್ಭಗಳಲ್ಲಿ ಮಾತಾಡಬೇಕಿದ್ದ ಪ್ರಧಾನಿಯವರು ದೀರ್ಘ ಮೌನಕ್ಕೆ ಜಾರಿದ್ದಾರೆ. ಅಡ್ಡಾದಿಡ್ಡಿಯಾಗಿ ಮಾತಾಡುತ್ತಿರುವ ತನ್ನ ಸಂಪುಟ ಸಹೋದ್ಯೋಗಿಗಳನ್ನು ಮತ್ತು ಕಾರ್ಯಕರ್ತ ಪಡೆಯನ್ನು ತರಾಟೆಗೆತ್ತಿಕೊಳ್ಳುವ ಯಾವ ಪ್ರಯತ್ನವನ್ನೂ ಅವರು ಮಾಡುತ್ತಿಲ್ಲ. ದುರಂತ ಏನೆಂದರೆ, 1975ರಲ್ಲಿ ಸೆಹಗಲ್‍ರನ್ನು ಬೆಂಬಲಿಸಿದ್ದ ಅದೇ ಬಿಜೆಪಿ ಈ 2015ರಲ್ಲಿ ಅವರನ್ನು ವಿರೋಧಿಯಂತೆ ಕಾಣುತ್ತಿದೆ. ಅವರ ನಿಲುವನ್ನು ಗೇಲಿ ಮಾಡುತ್ತಿದೆ. ಆದ್ದರಿಂದಲೇ, ಸದ್ಯದ ವಾತಾವರಣವನ್ನು ನಾವು `ತುರ್ತು ಸ್ಥಿತಿ ಮರಳುವ' ಸೂಚನೆಯೆಂದೇ ಪರಿಗಣಿಸಬೇಕಾಗಿದೆ.
ಸೆಹಗಲ್

 ಅಷ್ಟಕ್ಕೂ, ಅಸಹಿಷ್ಣು ಭಾಷೆಯಲ್ಲಿ ಮಾತಾಡುತ್ತಿರುವ ಗುಂಪಿನ ಎದುರು ಸೆಹಗಲ್‍ರ ಗುಂಪು ಸಂಖ್ಯೆಯಲ್ಲಿ ತೀರ ಸಣ್ಣದು. ಅಸಹಿಷ್ಣು ಗುಂಪಿನ ಭಾಷೆಗೆ ವ್ಯಾಕರಣ ಇಲ್ಲ. ಪದ ಬಳಕೆಯಲ್ಲಿ ವಿವೇಚನೆಯಿಲ್ಲ. ದೇಹ ಭಾಷೆಯಲ್ಲಿ ಪ್ರೀತಿಯಿಲ್ಲ. ಆ ಗುಂಪು ಸಂದರ್ಭಕ್ಕೆ ತಕ್ಕಂತೆ ಅಸ್ತ್ರವನ್ನೂ ಎತ್ತಿಕೊಳ್ಳಬಲ್ಲುದು. ರಕ್ತವನ್ನೂ ಹರಿಸಬಲ್ಲುದು. ಅದು ದೇಶದ ಸಂವಿಧಾನವನ್ನು ಗೌರವಿಸುತ್ತಿಲ್ಲ. ಧಾರ್ಮಿಕ ವೈವಿಧ್ಯತೆಯನ್ನು ಇಷ್ಟಪಡುತ್ತಿಲ್ಲ. ಮನುಷ್ಯರನ್ನು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂದು ಮುಂತಾಗಿ ಅದು ವಿಭಜಿಸುತ್ತಿದೆಯಲ್ಲದೇ ದ್ವೇಷವನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ನೆಚ್ಚಿಕೊಂಡಿದೆ. ಇದಕ್ಕೆ ಹೋಲಿಸಿದರೆ ಸೆಹಗಲ್‍ರ ಗುಂಪು ತೀರಾ ಅಲ್ಪಸಂಖ್ಯಾಕ. ಅದರ ಮುಂದಿರುವ ಆಯ್ಕೆಗಳೂ ಅಷ್ಟೇ ಅಲ್ಪಸಂಖ್ಯಾಕ. ಈ ಗುಂಪಿನ ಅಸ್ತ್ರವೆಂದರೆ ಪೆನ್ನು ಮಾತ್ರ. ಅದು ಬಳಸುವ ಭಾಷೆಯಲ್ಲಿ ವ್ಯಾಕರಣ ಇದೆ. ಪದ ಸೌಂದರ್ಯವಿದೆ. ದೇಹಭಾಷೆಯಲ್ಲಿ ಆಕರ್ಷಣೆಯಿದೆ. ಸಂದರ್ಭಕ್ಕೆ ತಕ್ಕಂತೆ ಅಸ್ತ್ರವನ್ನು ಎತ್ತಿಕೊಳ್ಳುವ ಮತ್ತು ದ್ವೇಷ ಕಾರುವ ಗುಣ ಈ ಗುಂಪಿಗೆ ಸಿದ್ಧಿಸಿಲ್ಲ. ಈ ಗುಂಪು ಹಿಂಸೆಗೆ ಕರೆ ಕೊಡುವುದಿಲ್ಲ. ಮನುಷ್ಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಿಲ್ಲ. ಆದ್ದರಿಂದಲೇ ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರ ಹತ್ಯೆ ನಡೆದ ಬಳಿಕವೂ ಈ ಗುಂಪು ಯಾರನ್ನೂ ಥಳಿಸಿ ಕೊಂದಿಲ್ಲ. ನಿಜವಾಗಿ, ಸಾಹಿತ್ಯ ವಲಯದ ಈ ಸಾತ್ವಿಕತೆಯು ಇವತ್ತು ಅಖ್ಲಾಕ್‍ನನ್ನು ಕೊಂದ ಮತ್ತು ಕಲ್ಬುರ್ಗಿಯಂತಹವರ ಕೊಲೆಯನ್ನು ಸಮರ್ಥಿಸುತ್ತಿರುವ ಗುಂಪಿನಿಂದ ಪ್ರಬಲ ಸವಾಲನ್ನು ಎದುರಿಸುತ್ತಿದೆ. ಈ ಸವಾಲು ಮಾನದ್ದು, ಪ್ರಾಣದ್ದು ಮತ್ತು ವೈಯಕ್ತಿಕ ಸ್ವಾತಂತ್ರ್ಯದ್ದು. ಈ ಸವಾಲನ್ನು ಮೆಟ್ಟಿ ನಿಲ್ಲಲು ಸಾಹಿತ್ಯ ವಲಯಕ್ಕೆ ಸಾಧ್ಯವಾಗದೇ ಹೋದರೆ, ಆ ಬಳಿಕ ಸಾಹಿತ್ಯವೆಂಬುದು ಈ ಗುಂಪಿನ ಕರಪತ್ರವಾಗಿ ಬಿಡುವ ಅಪಾಯವಿದೆ. ಈ ಗುಂಪು ಪ್ರಬಲವಾಗಿ ಬಿಟ್ಟರೆ ಅಥವಾ ಈ ಗುಂಪಿನ ಬೆದರಿಕೆಗೆ ಸಾಮಾಜಿಕ ಮನ್ನಣೆ ದೊರಕಿಬಿಟ್ಟರೆ ಅದರಿಂದಾಗಿ ಕಳೆದು ಹೋಗುವುದು ಸಾಹಿತಿಗಳಷ್ಟೇ ಅಲ್ಲ, ಸಾಹಿತ್ಯವೂ ಕೂಡ. ಆ ಬಳಿಕ ಕುಂವೀ ಏನನ್ನು ಬರೆಯಬೇಕೆಂದು ಈ ಗುಂಪು ನಿರ್ಧರಿಸುತ್ತದೆ. ಸೆಹಗಲ್‍ರು ಪ್ರಶಸ್ತಿ ವಾಪಸು ಮಾಡಬೇಕೋ ಬೇಡವೋ ಎಂಬುದು ಈ ಗುಂಪಿನ ಅಭಿಪ್ರಾಯದ ಆಧಾರದಲ್ಲಿ ನಿರ್ಧರಿತವಾಗುತ್ತದೆ. ಚಂಪಾ ಅವರು ಏನು ಮಾತಾಡಬೇಕೆಂಬುದನ್ನು ಅದು ನಿರ್ಧರಿಸುತ್ತದೆ. ಸರ್ವಾಧಿಕಾರಿಗಳ ಆಡಳಿತದಲ್ಲಿ ಉದ್ದಕ್ಕೂ ನಡೆದಿರುವುದು ಇದುವೇ. ತನ್ನ ವಿರೋಧಿಗಳ ಲಕ್ಷಾಂತರ ಪುಸ್ತಕಗಳನ್ನು ಸುಡುವ ಮೂಲಕವೇ ಹಿಟ್ಲರ್ ತನ್ನ ಆಡಳಿತಕ್ಕೆ ಚಾಲನೆ ಕೊಟ್ಟಿದ್ದ. ತನ್ನ ನಿರ್ದೇಶನವನ್ನು ಒಪ್ಪದ ಸಾಹಿತಿಗಳನ್ನು ಆತ ಒಂದೋ ಬಲವಂತದಿಂದ ಒಪ್ಪಿಸುತ್ತಿದ್ದ ಅಥವಾ ಕಲ್ಬುರ್ಗಿಯವರಂತೆ ನಡೆಸಿಕೊಳ್ಳುತ್ತಿದ್ದ. ಅಂದಹಾಗೆ,
      ಕಲ್ಬುರ್ಗಿ ಮತ್ತು ಅಖ್ಲಾಕ್‍ರ ಮಧ್ಯೆ ಖಂಡಿತ ವ್ಯತ್ಯಾಸಗಳಿವೆ. ಮಾತ್ರವಲ್ಲ, ಆ ವ್ಯತ್ಯಾಸಕ್ಕೆ ತಕ್ಕಂತೆಯೇ ಅವರನ್ನು ಹತ್ಯೆ ಗೈಯಲಾಗಿದೆ. ಆತಂಕ ಏನೆಂದರೆ, ಈ ಎರಡೂ ಹತ್ಯೆಗಳನ್ನು ಸಮರ್ಥಿಸುತ್ತಿರುವುದು ಒಂದೇ ಗುಂಪು. ಕಲ್ಬುರ್ಗಿಯವರ ಹತ್ಯೆಯನ್ನು ಸಮರ್ಥಿಸುವುದಕ್ಕೆ ಅವರ ನಿಲುವುಗಳನ್ನು  ಈ ಗುಂಪು ಕಾರಣವಾಗಿ ನೀಡುವಾಗ ಅಖ್ಲಾಕ್‍ನ ಹತ್ಯೆಗೆ ದನವನ್ನು ಕಾರಣವಾಗಿ ನೀಡುತ್ತಿದೆ. ಅಲ್ಲದೇ ಇಂಥ ಕೃತ್ಯಗಳಿಗೆ ‘ಹತ್ಯೆಯೇ ಸರಿ’ ಎಂಬ ಪರೋಕ್ಷ ಸೂಚನೆಯನ್ನು ಈ ಗುಂಪು ರವಾನಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಕ್ರೌರ್ಯವೊಂದಕ್ಕೆ ಸಾಮಾಜಿಕ ಮನ್ನಣೆಯನ್ನು ದೊರಕಿಸಿಕೊಳ್ಳುವ ಯತ್ನವನ್ನೂ ಮಾಡುತ್ತಿದೆ. ನಿಜವಾಗಿ, ಅತ್ಯಂತ ಅಪಾಯಕಾರಿ ಸನ್ನಿವೇಶ ಇದು. ಅಖ್ಲಾಕ್‍ರು ಕಾನೂನುಬಾಹಿರ ಆಹಾರವನ್ನು ಸೇವಿಸಿದ್ದರೆ ಅಥವಾ ಸಂಗ್ರಹಿಸಿದ್ದರೆ ಅದನ್ನು ಪ್ರಶ್ನಿಸಬೇಕಾದದ್ದು ಈ ನೆಲದ ನ್ಯಾಯಾಂಗ ವ್ಯವಸ್ಥೆ. ಕಲ್ಬುರ್ಗಿಯವರಿಗೂ ಇದೇ ಮಾನದಂಡ ಅನ್ವಯಿಸುತ್ತದೆ. ಆದರೆ, ಅಖ್ಲಾಕ್‍ನ ಮಾಂಸ ಮತ್ತು ಕಲ್ಬುರ್ಗಿಯವರ ವೈಚಾರಿಕತೆಯನ್ನು ಈ ಗುಂಪು ಅಪರಾಧವಾಗಿ ತೋರಿಸುತ್ತಿದೆಯೇ ಹೊರತು ಅದನ್ನು ತೀರ್ಮಾನಿಸಬೇಕಾದವರು ಯಾರು ಎಂಬ ಮೂಲಭೂತ ಪ್ರಶ್ನೆಗೆ ಉತ್ತರಿಸುತ್ತಲೇ ಇಲ್ಲ. ಆದ್ದರಿಂದ ಈ ಗುಂಪಿನ ಸವಾಲನ್ನು ಸಾಹಿತ್ಯ ವಲಯ ಎದುರಿಸಲೇಬೇಕು. ಈ ಗುಂಪು ಪರ್ಯಾಯ ಸಂವಿಧಾನ ಆಗದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸಾಹಿತಿಗಳ ಪ್ರತಿಭಟನೆಯು ಅತ್ಯಂತ ಯೋಗ್ಯ ಮತ್ತು ಸ್ವಾಗತಾರ್ಹ. ಈ ಪ್ರತಿಭಟನೆಗೆ ಗೆಲುವಾಗಲಿ.




Tuesday, 13 October 2015

ಈ-ಮೇಲ್‍ನ ಜಾಡು ಹಿಡಿದು ವಿಶ್ಲೇಷಣೆ ನಡೆಸುವ ದೇಶದಲ್ಲಿ..

ಡಾ| ಅಥವಳೆ
       ಎಂ.ಎಂ. ಕಲಬುರ್ಗಿಯವರ ಹತ್ಯೆಯೊಂದಿಗೆ ‘ಸನಾತನ ಸಂಸ್ಥಾ' ಎಂಬ ಸಂಘಟನೆಯ ಸುತ್ತ ಚರ್ಚೆಯೊಂದು ಆರಂಭಗೊಂಡಿದೆ. ವಿಚಾರವಾದಿಗಳಾದ ಕಲಬುರ್ಗಿ ಮತ್ತು ಪನ್ಸಾರೆಯವರ ಹತ್ಯೆಯಲ್ಲಿ ಸಾಕಷ್ಟು ಸಾಮ್ಯತೆಗಳಿದ್ದುವು. ಮೋಟರ್ ಸೈಕಲ್‍ನಲ್ಲಿ ಬಂದ ಮುಸುಕುಧಾರಿಗಳು ಅವರಿಬ್ಬರನ್ನೂ ಗುಂಡಿಟ್ಟು ಹತ್ಯೆ ಮಾಡಿದ್ದರು. ಇದೀಗ ಪನ್ಸಾರೆಯವರ ಹತ್ಯೆಯ ಆರೋಪದಲ್ಲಿ ಸನಾತನ ಸಂಸ್ಥಾದ ಪೂರ್ಣಕಾಲಿಕ ಕಾರ್ಯಕರ್ತ ಸವಿೂರ್ ಗಾಯಕ್ವಾಡ್ ಸಹಿತ ಕೆಲವರನ್ನು ಬಂಧಿಸಲಾಗಿದೆ. ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ‘ಸವಿೂರ್ ಗಾಯಕ್ವಾಡ್‍ನನ್ನು ಕಳೆದ ವಾರ ಥಾಣೆಯ ಕೋರ್ಟಿಗೆ ಹಾಜರುಪಡಿಸಿದಾಗ 31 ವಕೀಲರು ಆತನ ಪರ ವಾದಿಸಲು ಕೋರ್ಟಿನಲ್ಲಿ ಸೇರಿದ್ದರು. ಆತನಲ್ಲಿ 31 ಸಿಮ್ ಕಾರ್ಡ್‍ಗಳು ಲಭಿಸಿವೆ. ದಂಪತಿಗಳಾದ ಡಾ| ಜಯಂತ್ ಮತ್ತು ಕುಂದಾ ಅಥವಳೆಯವರು ಸ್ಥಾಪಿಸಿದ ಈ ಸಂಘಟನೆಯ ಗುರಿ ಹಿಂದೂ ರಾಷ್ಟ್ರದ ಸ್ಥಾಪನೆ. 2016ರಿಂದ 2018ರ ನಡುವೆ ಮೂರನೇ ವಿಶ್ವಯುದ್ಧ ನಡೆಯುತ್ತದೆ ಮತ್ತು ‘ಸಮಾಜ ವಿರೋಧಿಗಳ’ ಅಂತ್ಯಕ್ಕೆ ಇದು ಮುಹೂರ್ತವಾಗುತ್ತದೆ ಎಂದೆಲ್ಲಾ ಅದು ತನ್ನ ಮುಖವಾಣಿ ಸನಾತನ ಪ್ರಭಾತ್‍ನಲ್ಲಿ ಹೇಳಿಕೊಂಡದ್ದಿದೆ. 2019ರಿಂದ 2022ರ ವರೆಗೆ ದೇವರ ಆಡಳಿತ ಪ್ರಾರಂಭವಾಗಲಿದ್ದು, 2023ರಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ ಎಂದೂ ಅದು ನಿರೀಕ್ಷೆ ಇಟ್ಟುಕೊಂಡಿದೆ. ಅದರ ವೈರಿಗಳ ಪಟ್ಟಿ ಬಹಳ ದೊಡ್ಡದು. ಅದರಲ್ಲಿ ವಿಚಾರವಾದಿಗಳಿದ್ದಾರೆ, ರಾಜಕೀಯ ಪಕ್ಷಗಳಿವೆ. ಮುಸ್ಲಿಮರು, ಕ್ರೈಸ್ತರಿದ್ದಾರೆ. ಥಾಣೆ ಮತ್ತು ಮಾರ್ಗೋವಾದಲ್ಲಿ ಬಾಂಬ್ ಸ್ಫೋಟಿಸಿದ ಆರೋಪಗಳೂ ಈ ಸಂಘಟನೆಯ ಮೇಲಿದೆ’ (ದಿ ಹಿಂದೂ ಸೆ. 27). ಬಹುಶಃ, ಒಂದು ಸಂಘಟನೆಯ ಬಗ್ಗೆ ನಮ್ಮ ಸರಕಾರ ಮತ್ತು ಅಧಿಕಾರಿಗಳು ಕುತೂಹಲಗೊಳ್ಳುವುದಕ್ಕೆ ಈ ಸಂಘಟನೆ 1995ರಿಂದ ಸಾಗಿ ಬಂದ ಹಾದಿ ಹಾಗೂ ನಿಗೂಢ ಚಟುವಟಿಕೆಗಳು ಧಾರಾಳ ಸಾಕು. ಅದಕ್ಕೆ ಚುನಾವಣಾ ರಾಜಕೀಯದಲ್ಲಿ ವಿಶ್ವಾಸವಿಲ್ಲ. ಚುನಾವಣೆಯಲ್ಲಿ ಭಾಗವಹಿಸದೆಯೇ ಯುದ್ಧದ ಮೂಲಕ ಸಾಮ್ರಾಜ್ಯ ಕಟ್ಟಿದ ಶಿವಾಜಿಯಂತೆ ತನ್ನ ಕನಸಿನ ರಾಷ್ಟ್ರ ಸ್ಥಾಪನೆಯ ಉದ್ದೇಶ ಅದರದ್ದು. ನಿಜವಾಗಿ, ಬಾಂಬ್ ತಯಾರಿ, ಸ್ಫೋಟ, ಹತ್ಯೆ.. ಮುಂತಾದುವುಗಳೆಲ್ಲ ಪ್ರಜಾತಂತ್ರದಲ್ಲಿ ನಂಬಿಕೆಯಿಲ್ಲದವರ ಅಸ್ತ್ರ. ಜನರ ವಿಶ್ವಾಸವನ್ನು ಗಳಿಸಿಕೊಂಡು ಪ್ರಜಾತಂತ್ರದ ಮೂಲಕ ತಮ್ಮ ಗುರಿಯೆಡೆಗೆ ಸಾಗುವುದನ್ನು ಒಪ್ಪಿಕೊಳ್ಳದವರೇ ಬಾಂಬ್ ಎತ್ತಿಕೊಳ್ಳುತ್ತಾರೆ. ಬಂದೂಕು ಬಳಸುತ್ತಾರೆ. ಅಂದಹಾಗೆ, ಈ ದೇಶದಲ್ಲಿ ಹತ್ತಾರು ಸ್ಫೋಟಗಳು ನಡೆದಿವೆ. ಹತ್ಯಾಕಾಂಡ, ವಿಧ್ವಂಸಕಾರಿ ಕೃತ್ಯಗಳು ಘಟಿಸಿವೆ. ಈ ಎಲ್ಲ ಸಂದರ್ಭಗಳಲ್ಲಿ ಈ ದೇಶದ ಮಾಧ್ಯಮಗಳು ಮತ್ತು ರಾಜಕಾರಣಿಗಳು ಮಾತಾಡಿದ್ದಾರೆ. ಅವರ ಪ್ರತಿಕ್ರಿಯೆ ಎಷ್ಟು ತೀವ್ರವಾಗಿತ್ತೆಂದರೆ, ಅನಾಮಿಕ ಮೂಲದಿಂದ ಬರುವ ಈಮೇಲ್‍ಗೂ ಅಪಾರ ಮಹತ್ವ ಲಭ್ಯವಾಗುತ್ತಿತ್ತು. ಆ ಈಮೇಲ್ ಅನ್ನು ಎತ್ತಿಕೊಂಡು ಅದನ್ನು ಕಳುಹಿಸಿರಬಹುದಾದ ವ್ಯಕ್ತಿ, ಸಂಘಟನೆ, ಕಂಪ್ಯೂಟರ್ ಮತ್ತಿತರ ಸರ್ವವನ್ನೂ ವಿಶ್ಲೇಷಿಸಲಾಗುತ್ತಿತ್ತು. ಆ ಈಮೇಲ್ ಅನ್ನು ಕಳುಹಿಸಿದವರ ಉದ್ದೇಶ, ಅದಕ್ಕೆ ಪ್ರಚೋದನೆ ನೀಡಿರುವ ಸಾಹಿತ್ಯ, ಅವರು ಪಡೆದಿರುವ ತರಬೇತಿ, ಅವರ ಸಂಖ್ಯೆ, ಹಣಕಾಸು ವಹಿವಾಟು.. ಸಹಿತ ಎಲ್ಲವನ್ನೂ ಮೂಲಗಳನ್ನು ಉದ್ಧರಿಸಿ ಈ ದೇಶದಲ್ಲಿ ಚರ್ಚಿಸಲಾಗುತ್ತಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಂತೂ ಭಯೋತ್ಪಾದನೆಯ ಬಗ್ಗೆ ಲೆಕ್ಕವಿಲ್ಲದಷ್ಟು ಬಾರಿ ಮಾತಾಡಿದೆ. ಭಯೋತ್ಪಾದನೆಯನ್ನು ನಿರ್ದಿಷ್ಟ ಧರ್ಮಕ್ಕೆ ಹೋಲಿಸಿ ಹೇಳಿಕೆ ಕೊಟ್ಟಿದೆ. ಜಾನುವಾರು ಮಾಂಸದ ಸೇವನೆಯು ಭಯೋತ್ಪಾದನೆಗೆ ಇಂಬು ನೀಡುತ್ತದೆ ಎಂಬ ರೀತಿಯಲ್ಲಿ ಅದರ ನಾಯಕರು ಮತ್ತು ಬೆಂಬಲಿಗರು ಮಾತಾಡಿದ್ದಾರೆ. ಆದರೆ ಸನಾತನ ಸಂಸ್ಥಾದ ಕುರಿತಂತೆ ಈ ಮಂದಿ ಈ ವರೆಗೆ ನೇರವಾಗಿ ಏನನ್ನೂ ಹೇಳಿಲ್ಲ. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಬಲವಾದ ಅನುಮಾನಗಳಿದ್ದಾಗ್ಯೂ ಅದರ ನಿಷೇಧದ ಬಗ್ಗೆ ಮಾತಾಡುತ್ತಿಲ್ಲ. ಕೇಂದ್ರ ಸರಕಾರ ಈಗಾಗಲೇ ಸರಕಾರೇತರ ಸಂಸ್ಥೆಗಳಾದ ಗ್ರೀನ್‍ಪೀಸ್ ಮತ್ತು ತೀಸ್ತಾ ಸೆಟಲ್ವಾಡ್‍ರ ಸಂಸ್ಥೆಯ ಮೇಲೆ ಬಹುತೇಕ ನಿಷೇಧವನ್ನು ಹೇರಿದೆ. ಅವುಗಳ ಚಟುವಟಿಕೆಗಳನ್ನು ಪ್ರತಿಬಂಧಿಸಲಾಗಿದೆ. ಬಾಂಬ್ ಭಯೋತ್ಪಾದನೆಯಲ್ಲಿ ಭಾಗವಹಿಸದ ಈ ಸಂಸ್ಥೆಗಳ ಮೇಲೆ ಸರಕಾರಕ್ಕೆ ಈ ಮಟ್ಟದ ಭಯ ಇದೆಯೆಂದಾದರೆ, ಸನಾತನ ಸಂಸ್ಥಾದ ಕುರಿತಂತೆ ಯಾಕೆ ಯಾವ ಭಯವೂ ಆಗುತ್ತಿಲ್ಲ? ಅದರ ಉದ್ದೇಶದ ಬಗ್ಗೆ ಸರಕಾರದ ನಿಲುವೇನು?
   ಸಾಮಾನ್ಯವಾಗಿ ಭಯೋತ್ಪಾದನೆ ಅಥವಾ ದೇಶ ವಿರೋಧಿ ಚಟುವಟಿಕೆಗಳು ಎಂದ ಕೂಡಲೇ ಇಂಡಿಯನ್ ಮುಜಾಹಿದೀನ್, ಲಷ್ಕರೆ ತ್ವಯ್ಯಿಬ, ಐಸಿಸ್ ಮುಂತಾದ ಹೆಸರುಗಳೇ ಪ್ರತ್ಯಕ್ಷಗೊಳ್ಳುವಂತಹ ವಾತಾವರಣವೊಂದು ಈ ದೇಶದಲ್ಲಿದೆ. ಸಂವಿಧಾನ ವಿರೋಧಿಯಾಗಿ ಆಲೋಚಿಸುವುದಕ್ಕೆ ಇಂಥ ನಿರ್ದಿಷ್ಟ ತಂಡಗಳಿಗಷ್ಟೇ ಸಾಧ್ಯ ಎಂಬ ಭಾವನೆಯನ್ನು ಇಲ್ಲಿ ವ್ಯವಸ್ಥಿತವಾಗಿ ನೆಟ್ಟು ಬೆಳೆಸಲಾಗಿದೆ. ಅದರಲ್ಲಿ ರಾಜಕಾರಣಿಗಳ ಪಾತ್ರವಿದೆ. ಅಧಿಕಾರಿಗಳು ಮತ್ತು ಸಂಘಟನೆಗಳ ಪಾತ್ರವೂ ಇವೆ. ಈ ದೇಶದ ಎಲ್ಲಾದರೂ ಬಾಂಬ್ ಸ್ಫೋಟಗೊಂಡ ತಕ್ಷ

ಣ ಯಾವುದಾದರೂ ಪತ್ರಿಕಾ ಕಚೇರಿಗೆ ಈಮೇಲ್‍ಗಳು ಬರುತ್ತವೆ. ದೂರವಾಣಿ ಕರೆಗಳೂ ಬರುವುದಿದೆ. ಹಾಗೆ ಬಂದ ಕರೆಗಳೋ ಈಮೇಲ್‍ಗಳೋ ಅಥವಾ ಇನ್ನಿತರ ಯಾವುದಾದರೂ ಕುರುಹುಗಳ ಹೆಸರಲ್ಲೋ ನಿರ್ದಿಷ್ಟ ಮಂದಿಯನ್ನು ಹುಡುಕುವ ಪ್ರಯತ್ನಗಳು ನಡೆಯುತ್ತವೆ. ರಾಜಕಾರಣಿಗಳಿಂದ ಹೇಳಿಕೆಗಳ ಮಹಾಪೂರ ಹರಿಯತೊಡಗುತ್ತವೆ. ಆದರೆ, ಕಳೆದ 20 ವರ್ಷಗಳಿಂದ ಈ ದೇಶದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯೊಂದರ ಕುರಿತು ಮಾಧ್ಯಮಗಳು ಮಾತಾಡಿದ್ದು ಶೂನ್ಯ ಎಂಬಷ್ಟು ಕಡಿಮೆ. ಈ ಸಂಘಟನೆಯ ಬಗ್ಗೆ ತನಿಖಾ ಬರಹಗಳು ಈ ವರೆಗೂ ಸರಿಯಾದ ರೀತಿಯಲ್ಲಿ ಪ್ರಕಟವಾಗಿಲ್ಲ. ನಮ್ಮ ರಾಜಕಾರಣಿಗಳಂತೂ ಸನಾತನ ಸಂಸ್ಥಾ ಎಂಬ ಸಂಘಟನೆ ಅಸ್ತಿತ್ವದಲ್ಲಿ ಇದೆಯೆಂದೇ ಒಪ್ಪಿಕೊಳ್ಳದಷ್ಟು ಈ ವಿಷಯದಲ್ಲಿ ಮೌನ ಪಾಲಿಸಿದ್ದಾರೆ. ಯಾಕೆ ಹೀಗೆ? ಸಂವಿಧಾನ ವಿರೋಧಿ ಚಿಂತನೆ ಯಾರಿಂದಲೇ ಬರಲಿ, ಆ ಬಗ್ಗೆ ಪ್ರತಿಕ್ರಿಯಿಸಬೇಕಾದದ್ದು ಮತ್ತು ಅದನ್ನು ಬಲವಾಗಿ ಖಂಡಿಸಬೇಕಾದದ್ದು ಎಲ್ಲರ ಕರ್ತವ್ಯ. ಸನಾತನ ಸಂಸ್ಥಾದ ಆಲೋಚನೆಯೇ ಸಂವಿಧಾನ ವಿರೋಧಿ. ಅದು ಈ ದೇಶದ ಸಂವಿಧಾನವನ್ನು ರದ್ದುಗೊಳಿಸಬಯಸುತ್ತದೆ. ಪ್ರಜಾತಂತ್ರದ ಬದಲು ಚುನಾವಣೆಗಳೇ ಇಲ್ಲದ ಸರ್ವಾಧಿಕಾರ ಆಡಳಿತವನ್ನು ಪ್ರತಿಪಾದಿಸುತ್ತದೆ. ತನ್ನ ನಿಲುವನ್ನು ಪ್ರಶ್ನಿಸುವವರನ್ನು ಅದು ಸಮಾಜ ವಿರೋಧಿಗಳೆಂದು ವರ್ಗೀಕರಿಸುತ್ತದೆ. ಒಂದು ಬಗೆಯ ಭ್ರಮೆಯ ಸುತ್ತ ಅದರ ಕಾರ್ಯಚಟುವಟಿಕೆ ಕೇಂದ್ರೀಕೃತವಾಗಿರುವಂತೆ ಗೋಚರಿಸುತ್ತಿದೆ. ಹೀಗಿರುವಾಗ, 2023ರ ಗುರಿಯನ್ನು ಯಶಸ್ವಿಯಾಗಿ ತಲುಪುವುದಕ್ಕಾಗಿ ಅದು ಯೋಜನೆಗಳನ್ನು ಹಾಕಿಕೊಂಡಿರುವುದಂತೂ ಖಂಡಿತ. ಆ ಯೋಜನೆಗಳು ಯಾವುವು, ಅದರ ಜಾರಿಯ ಹಂತಗಳು ಹೇಗೆ, ಅದು ತನ್ನ ಗುರಿಯ ಈಡೇರಿಕೆಗಾಗಿ ಯಾರ ವಿರುದ್ಧ ಮತ್ತು ಯಾವುದರ ವಿರುದ್ಧ ಯುದ್ಧ ಸಾರುತ್ತದೆ.. ಇವೆಲ್ಲ ಬಹಿರಂಗವಾಗಬೇಕಿದೆ. ಕಲಬುಗಿರ್ಯವರ ಹತ್ಯೆಯು ಆ 2023ರ ನೀಲನಕ್ಷೆಯ ಭಾಗವೇ ಎಂಬುದೂ ಸ್ಪಷ್ಟವಾಗಬೇಕಿದೆ.