Thursday, 25 February 2016

‘ಕಾವಲುನಾಯಿ’ಯನ್ನು ಗಲ್ಲಿಗೇರಿಸುವ ‘ಸುದ್ದಿಮನೆ’ಗಳು

ವಿಶ್ವ ದೀಪಕ್
      ‘ಕಾವಲು ನಾಯಿ’ ಎಂಬ ಗೌರವಾರ್ಹ ಪದದ ಸಕಲ ಗೌರವವನ್ನೂ ಕಿತ್ತೊಗೆದು, ತಮಾಷೆ ಮತ್ತು ವ್ಯಂಗ್ಯದ ಪ್ರತಿರೂಪವಾಗಿ ಅದನ್ನು ಮಾಧ್ಯಮಗಳು ಕುಲಗೆಡಿಸಿ ಈಗಾಗಲೇ ವರ್ಷಗಳೇ ಕಳೆದಿವೆ. ‘ಮಾಧ್ಯಮ ಪ್ರಜಾತಂತ್ರದ ನಾಲ್ಕನೇ ಆಧಾರ ಸ್ತಂಭ, ಅವು ಕಾವಲುನಾಯಿಯ ಪಾತ್ರವನ್ನು ನಿಭಾಯಿಸಬೇಕು..’ ಎಂದು ಯಾರಾದರೂ ವೇದಿಕೆಯಿಂದ ಇವತ್ತು ಕರೆ ಕೊಟ್ಟರೆ ಚಪ್ಪಾಳೆಯ ಬದಲು ವ್ಯಂಗ್ಯ ಭರಿತ ನಗುವೇ ಪ್ರತಿಕ್ರಿಯೆಯಾಗುವ ಪರಿಸ್ಥಿತಿಯಿದೆ. ನಾಯಿ ತನ್ನ ಜನ್ಮಜಾತ ಗುಣವನ್ನು ಕಳಕೊಂಡಿದೆ (ಕೆಲವೊಂದು ಅಪವಾದಗಳನ್ನು ಹೊರತುಪಡಿಸಿ). ಮಾತ್ರವಲ್ಲ, ತನ್ನ ಗುರುತಿಗೆ ತಕ್ಕುದಲ್ಲದ ಗುಣವನ್ನು ಬೆಳೆಸಿಕೊಳ್ಳುತ್ತಲೂ ಇದೆ. ಇದೀಗ ಝೀ ನ್ಯೂಸ್ ಚಾನೆಲ್‍ನ ನಿರ್ಮಾಪಕ ವಿಶ್ವ ದೀಪಕ್ ಅವರು ‘ಕಾವಲು ನಾಯಿ’ಯ ಈ ದೌರ್ಬಲ್ಯವನ್ನು ಪ್ರತಿಭಟಿಸಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಾಗಂತ, ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ರಾಜೀನಾಮೆ ಮತ್ತು ಸೇರ್ಪಡೆಗಳು ಹೊಸತಲ್ಲವಾದರೂ ವಿಶ್ವ ದೀಪಕ್‍ನ ಪ್ರಕರಣ ಅವುಗಳಿಗಿಂತ ತೀರಾ ಭಿನ್ನ. ಅವರು ವೇತನವನ್ನು ತನ್ನ ರಾಜೀನಾಮೆಗೆ ಕಾರಣವಾಗಿ ಕೊಟ್ಟಿಲ್ಲ. ವೃತ್ತಿ ತಾರತಮ್ಯ, ವರ್ಣ ತಾರತಮ್ಯ ಮತ್ತು ಶೋಷಣೆಗಳಂತಹ ಸಹಜ ಕಾರಣಗಳನ್ನು ಅವರು ಪಟ್ಟಿ ಮಾಡಿಲ್ಲ. ಅವರು ವೃತ್ತಿ ಮೌಲ್ಯವನ್ನು ಕಾರಣವಾಗಿ ಕೊಟ್ಟಿದ್ದಾರೆ. ಝೀ ನ್ಯೂಸ್ ಚಾನೆಲ್‍ನ ಸುದ್ದಿ ಮನೆಯಲ್ಲಿ (Newsroom) ‘ಕಾವಲು ನಾಯಿಯ ದಫನವಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ (JNU) ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಆ ಇಡೀ ಪ್ರಕರಣವನ್ನು ಝೀ ನ್ಯೂಸ್ ಚಾನೆಲ್ ಅತ್ಯಂತ ಪಕ್ಷಪಾತಿಯಾಗಿ ಮತ್ತು ABVP ಪರವಾಗಿ ನಿರ್ಲಜ್ಜೆಯಿಂದ ತಿರುಚಿ ಪ್ರಸಾರ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಇಂಥದ್ದೊಂದು ಚಾನೆಲ್‍ನ ಭಾಗವಾಗಲು ತನ್ನ ವೃತ್ತಿ ಧರ್ಮ ಒಪ್ಪುತ್ತಿಲ್ಲ ಎಂದು ಚಾನೆಲ್‍ನ ಮುಖ್ಯ ನಿರೂಪಕ ರೋಹಿತ್ ಸರ್ದಾನರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಅವರು ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿ ಪದ ಸ್ವೀಕರಿಸಿದ ಬಳಿಕ ತನ್ನ ಚಾನೆಲ್ ಹೇಗೆ ಮೋದಿ ಮೇನಿಯಾದಿಂದ ಪ್ರಭಾವಿತವಾಯಿತು ಮತ್ತು ಮೋದಿಯವರ ರಾಯಭಾರಿಯಂತೆ ಹೇಗೆ ಕೆಲಸ ಮಾಡಿತು ಎಂಬುದನ್ನೂ ಆತ ವಿವರಿಸಿದ್ದಾರೆ. ನಿಜವಾಗಿ, ವಿಶ್ವ ದೀಪಕ್‍ರ ಆರೋಪವನ್ನು ಇಂಚಿಂಚಾಗಿ ಸಾಬೀತುಪಡಿಸುವುದಕ್ಕೆ JNU ಪ್ರಕರಣವೊಂದೇ ಧಾರಾಳ ಸಾಕು. ದೆಹಲಿಯ ಪೊಲೀಸರು ಕನ್ಹರ್ಯ ಕುಮಾರ್ ವಿರುದ್ಧ FIR (ಪ್ರಥಮ ಮಾಹಿತಿ ವರದಿ) ಸಿದ್ಧಪಡಿಸಿದುದೇ ಝೀ ನ್ಯೂಸ್ ಚಾನೆಲ್‍ನ ವರದಿಯನ್ನು ಆಧರಿಸಿ! ಝೀ ನ್ಯೂಸ್ ಪ್ರಸಾರ ಮಾಡಿದ ವೀಡಿಯೋ ಕ್ಲಿಪ್ ಅನ್ನು FIRನಲ್ಲಿ ಪುರಾವೆಯಾಗಿ ಮಂಡಿಸಲಾಗಿದೆ! ಅಷ್ಟಕ್ಕೂ, ಒಂದು ನಿರ್ದಿಷ್ಟ ಟಿ.ವಿ. ಚಾನೆಲ್ ಅನ್ನು ದೆಹಲಿ ಪೊಲೀಸರು ಈ ಮಟ್ಟದಲ್ಲಿ ಆಶ್ರಯಿಸಿಕೊಂಡದ್ದೇಕೆ? JNU ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸ್ ಇಲಾಖೆಯ ಸಾಕಷ್ಟು ಪೊಲೀಸರು ಮತ್ತು ಕಾನ್‍ಸ್ಟೇಬಲ್‍ಗಳು ಸ್ಥಳದಲ್ಲಿ ಉಪಸ್ಥಿತರಿದ್ದರು. ಅಲ್ಲಿಯ ಭಾಷಣ ಮತ್ತು ಘೋಷಣೆಗಳಿಗೆ ಅವರು ದೃಕ್‍ಸಾಕ್ಷಿಯೂ ಆಗಿದ್ದರು. ಹೀಗಿದ್ದೂ FIR ಸಿದ್ಧಪಡಿಸಲು ಝೀ ನ್ಯೂಸ್ ಚಾನೆಲ್ ಪ್ರಸಾರ ಮಾಡಿದ ಸುದ್ದಿಯನ್ನು ಪೊಲೀಸರು ಆಧಾರವಾಗಿ ಪರಿಗಣಿಸಿದ್ದೇಕೆ? ಕಾನ್‍ಸ್ಟೇಬಲ್‍ಗಳ ಮತ್ತು ಪೊಲೀಸರ ಬದಲು ಚಾನೆಲ್ ಅನ್ನು ನಂಬಲರ್ಹ ಸಾಕ್ಷವಾಗಿ ಅವರು ಗುರುತಿಸಿದ್ದೇಕೆ? ವಿಶ್ವ ದೀಪಕ್ ವ್ಯಕ್ತಪಡಿಸಿದ ಅನುಮಾನವೂ ಇದುವೇ. ಝೀ ನ್ಯೂಸ್ ಚಾನೆಲ್ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳ ಮಧ್ಯೆ ಪೂರ್ವ ನಿರ್ಧರಿತ ತಿಳುವಳಿಕೆ ನಡೆದಿರಬಹುದೇ? ಆ ಪ್ರತಿಭಟನಾ ಸಭೆಯನ್ನು ‘ದೇಶ ವಿರೋಧಿ’ಯಾಗಿಸುವ ಹುನ್ನಾರವೊಂದಕ್ಕೆ ತೆರೆಮರೆಯಲ್ಲಿ ಸಂಚು ಏರ್ಪಟ್ಟಿರಬಹುದೇ? ನರೇಂದ್ರ ಮೋದಿಯವರು ಪ್ರಧಾನಿಯಾದಂದಿನಿಂದ ತಾನಿರುವ ‘ಸುದ್ದಿಮನೆ’ಯು ಕಾವಲು ನಾಯಿ ಹೊಣೆಗಾರಿಕೆಯಿಂದ ಹೊರಬಂದು ಮೋದಿಯ ‘ಕಾವಲು’ ಕಾಯುವ ಹೊಣೆಗಾರಿಕೆ ವಹಿಸಿಕೊಂಡದ್ದನ್ನು ನೋಡುತ್ತ ಬಂದಿರುವ ವಿಶ್ವ ದೀಪಕ್‍ನ ಈ ಅನುಮಾನ ತೀರಾ ಗಂಭೀರವಾದದ್ದು.
  ಅಂದಹಾಗೆ, ಪ್ರಜಾತಂತ್ರವನ್ನು ರಾಜಕಾರಣಿಗಳ ಕೈಗೆ ಒಪ್ಪಿಸಿ ಬಿಟ್ಟು ಸುಮ್ಮನಾದರೆ ಏನೆಲ್ಲ ಅನಾಹುತಗಳಾಗಬಹುದು ಎಂಬುದಕ್ಕೆ ತುರ್ತುಸ್ಥಿತಿಯೂ ಸೇರಿದಂತೆ ಸ್ವತಂತ್ರ ಭಾರತದಲ್ಲಿ ಅನೇಕಾರು ಉದಾಹರಣೆಗಳಿವೆ. ಹತ್ತಾರು ಹತ್ಯಾಕಾಂಡಗಳು, ಕೋಮುಗಲಭೆಗಳು ಮತ್ತು ಅದರ ನಂತರದ ಬೆಳವಣಿಗೆಗಳು ಮತ್ತೆ ಮತ್ತೆ ರಾಜಕಾರಣದ ಅಪಾಯವನ್ನು ವಿವರಿಸುತ್ತಲೇ ಇದೆ. ಇಂಥ ಸಂದರ್ಭಗಳಲ್ಲೆಲ್ಲ ನಾಗರಿಕರು ಭರವಸೆಯಾಗಿ ಆಯ್ಕೆ ಮಾಡಿಕೊಳ್ಳುವುದು ಮಾಧ್ಯಮವನ್ನು. ಅದು ಸತ್ಯ ಸುದ್ದಿಯನ್ನು ಒದಗಿಸಲಿ ಎಂದು ಜನರು ಕಾಯುತ್ತಾರೆ. ಪ್ರಭುತ್ವದ ಸುಳ್ಳುಗಳನ್ನು ಬೆತ್ತಲೆ ಮಾಡಲಿ ಎಂದು ಹಾರೈಸುತ್ತಾರೆ. ಅಷ್ಟಕ್ಕೂ, ಪ್ರಭುತ್ವಕ್ಕೆ ಹೋಲಿಸಿದರೆ ಪತ್ರಕರ್ತರು ತೀರಾ ದುರ್ಬಲರು. ಅವರಿಗೆ ಕಾವಲು ಭಟರಿಲ್ಲ. ಪೆನ್ನು, ಕ್ಯಾಮರಾಗಳೇ ಅವರ ಆಯುಧ. ಪ್ರಭುತ್ವದ ಬಂದೂಕಿನ ಎದುರು ಈ ಆಯುಧಗಳು ಏನೇನೂ ಅಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೂ ಪೆನ್ನು ಮತ್ತು ಕ್ಯಾಮರಾಗಳು ಈ ದೇಶದಲ್ಲಿ ಬಂದೂಕುಗಳನ್ನು ಅನೇಕಾರು ಬಾರಿ ಮೆಟ್ಟಿ ನಿಂತಿವೆ. ಈ ಬಂದೂಕುಗಳ ಕಣ್ತಪ್ಪಿಸಿ ಪ್ರಭುತ್ವವನ್ನು ಬೆತ್ತಲೆಗೊಳಿಸುವ ಶ್ರಮ ನಡೆಸಿವೆ ಮತ್ತು ಯಶಸ್ವಿಯಾಗಿವೆ. ಆದ್ದರಿಂದಲೇ ಇವತ್ತೂ ಜನರು ರಾಜಕಾರಣಿಗಳಿಗಿಂತ ಪತ್ರಕರ್ತರನ್ನು ಹೆಚ್ಚು ನಂಬುತ್ತಾರೆ. JNU ಪ್ರಕರಣದಲ್ಲಿ BJP ಮತ್ತು ABVPಗಳು ನೀಡುತ್ತಿರುವ ಹೇಳಿಕೆಗಳು ಮತ್ತು ಉದುರಿಸುತ್ತಿರುವ ‘ದೇಶಪ್ರೇಮ’ದ ಅಣಿಮುತ್ತುಗಳನ್ನೆಲ್ಲ ಜಾಲಾಡಿ, ಒಂದೊಂದನ್ನೇ ಒಡೆದು, ಕಾಳೆಷ್ಟು-ಜೊಳ್ಳೆಷ್ಟು ಎಂದು ಪ್ರತ್ಯೇಕಿಸಿ ದೇಶವನ್ನು ಜಾಗೃತಗೊಳಿಸಿದ್ದು ಮಾಧ್ಯಮವೇ. ಮಾಧ್ಯಮ ಎಚ್ಚರಿಕೆ ಇಲ್ಲದೇ ಇರುತ್ತಿದ್ದರೆ ಇವತ್ತು ಉಮರ್ ಖಾಲಿದ್ ಪಾಕಿಸ್ತಾನಿ ಟೆರರಿಸ್ಟ್ ಆಗಿರುತ್ತಿದ್ದ. ಶೆಹ್ಲಾ ಮಾನವ ಬಾಂಬ್ ಆಗಿರುತ್ತಿದ್ದಳು. ಕನ್ಹಯ್ಯನನ್ನು ಅಫ್ಝಲ್ ಗುರುವಿನ ಸ್ಥಾನದಲ್ಲಿ ಕೂರಿಸಿ ‘ಯಾವಾಗ ಗಲ್ಲು’ ಎಂದು ರಾಜಕಾರಣಿಗಳು ಪ್ರಶ್ನಿಸುತ್ತಿದ್ದರು. ಆದರೆ BJP ಮತ್ತು ಅದರ ಬೆಂಬಲಿಗರ ಹುಸಿ ದೇಶಪ್ರೇಮ ಬಣ್ಣವನ್ನು ಮಾಧ್ಯಮದ ಒಂದು ಗುಂಪು ಪರಿಣಾಮಕಾರಿಯಾಗಿಯೇ ಬಯಲಿಗೆಳೆಯುತ್ತಿದೆ. ವಿದ್ಯಾರ್ಥಿಗಳ ಮೇಲೆ ಹೊರಿಸಲಾಗುತ್ತಿರುವ ಪ್ರತಿ ಆರೋಪಗಳನ್ನೂ ಅಧಿಕಾರಯುತವಾಗಿ ಪ್ರಶ್ನಿಸುತ್ತಿದೆ. ಈ ಬೆಳವಣಿಗೆಯನ್ನು ಖುಷಿಯಿಂದ ವೀಕ್ಷಿಸುತ್ತಿರುವ ಈ ಸಂದರ್ಭದಲ್ಲಿಯೇ ಮಾಧ್ಯಮಗಳ ಕೆಲವು ಸುದ್ದಿ ಮನೆಗಳು ಹೇಗೆ ಪ್ರಭುತ್ವದ ತುತ್ತೂರಿಗಳಾಗಿ ವರ್ತಿಸುತ್ತಿವೆ ಎಂಬುದರತ್ತ ವಿಶ್ವ ದೀಪಕ್ ಬೆಳಕು ಚೆಲ್ಲಿದ್ದಾರೆ. ಸುದ್ದಿ ಮನೆಯೊಳಗಿದ್ದು ಅಲ್ಲಿನ ಪ್ರತಿಯೊಂದು ಚಟುವಟಿಕೆಯನ್ನು ಹತ್ತಿರದಿಂದ ನೋಡುತ್ತಾ ಬೆಳೆದವರಾದ ಕಾರಣ ವಿಶ್ವದೀಪಕ್‍ರ ಮಾತನ್ನು ಮಾಧ್ಯಮ ಜಗತ್ತು ಮತ್ತು ಓದುಗ ವಲಯ ಗಂಭೀರವಾಗಿ ಸ್ವೀಕರಿಸಬೇಕಿದೆ. ನೀವು ವೀಕ್ಷಿಸುತ್ತಿರುವ ಮತ್ತು ಓದುತ್ತಿರುವ ಸುದ್ದಿಗಳು ಅಥವಾ ವೀಡಿಯೋಗಳು ಸಂಪೂರ್ಣ ಪಾರದರ್ಶಕವಾಗಿರಬೇಕಿಲ್ಲ ಎಂದವರು ಮುನ್ನೆಚ್ಚರಿಕೆ ನೀಡಿದ್ದಾರೆ. ಇದು ತೀರಾ ಕ್ಷುಲ್ಲಕವಲ್ಲ. ಮಾಧ್ಯಮ ರಂಗವು ಆಳುವವರ ‘ಹೊಗಳುಭಟ’ವಾಗಿ ಪರಿವರ್ತನೆಗೊಳ್ಳುತ್ತಿದೆ ಎಂಬುದು ಪ್ರಜಾತಂತ್ರದ ಪಾಲಿಗೆ ಅಪಾಯದ ಮುನ್ಸೂಚನೆ. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಅಲ್ಲಿನ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳ ಮೇಲೆ ಇಂಥ ಆರೋಪ ಜೋರಾಗಿಯೇ ಕೇಳಿ ಬಂದಿತ್ತು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಈ ಆರೋಪವನ್ನು ದೃಢೀಕರಿಸುವಷ್ಟು ಅಲ್ಲಿನ ಮಾಧ್ಯಮ ರಂಗದ ಕಾರ್ಯನಿರ್ವಹಣೆ ಚಿಂತಾಜನಕವಾಗಿತ್ತು.
  ಪ್ರಭುತ್ವದ ಓಲೈಕೆಯಲ್ಲಿ ಸುದ್ದಿ ಮನೆಯೊಂದು ನಿರತವಾಗುತ್ತದೆಂದರೆ ಸತ್ಯದ ದಫನವಾಗಲು ಪ್ರಾರಂಭವಾಗಿದೆ ಎಂದರ್ಥ. ಈಗಾಗಲೇ ಕೆಲವು ನಿರ್ದಿಷ್ಟ ‘ಸುದ್ದಿ ಮನೆ’ಗಳು ಈ ದಫನ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿವೆ. ಅವುಗಳಿಗೆ ಈಗಿನ ಪ್ರಭುತ್ವ ಹೇಳುತ್ತಿರುವುದೆಲ್ಲ ಪರಮ ಪವಿತ್ರ ಸುದ್ದಿಗಳಾಗುತ್ತಿವೆ. ಅದಕ್ಕಾಗಿ ಅವು ಪುರಾವೆಗಳನ್ನು ಉತ್ಪಾದಿಸುತ್ತಿವೆ. ವಿಶ್ವದೀಪಕ್ ಈ ಬೆಳವಣಿಗೆಯನ್ನೇ ಪ್ರಶ್ನಿಸಿದ್ದಾರೆ. ಅವರ ಈ ಬಂಡಾಯವು ಸುದ್ದಿಮನೆಗಳನ್ನು ಸ್ವಚ್ಛಗೊಳಿಸುವಲ್ಲಿ ಅಥವಾ ದಫನ ಕಾರ್ಯದಲ್ಲಿ ನಿರತವಾಗಿರುವ ಸುದ್ದಿ ಮನೆಗಳನ್ನು ಎಚ್ಚರಗೊಳಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸೋಣ.

Thursday, 18 February 2016

ಹೆಡ್ಲಿ ವಿಚಾರಣೆ ಮತ್ತು ಕಾಡುವ ಸಂದೇಹಗಳು

       ಡೇವಿಡ್ ಹೆಡ್ಲಿ ಎಂಬುದು ಅಮೇರಿಕದ ಇನ್ನೊಂದು ಹೆಸರೋ ಎಂದು ಸಂದೇಹಿಸಬೇಕಾದ ಸಂದರ್ಭ ಸೃಷ್ಟಿಯಾಗಿದೆ. 2008 ನವೆಂಬರ್ 26ರಂದು (26/11) ಮುಂಬೈಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಅತಿ ಪ್ರಮುಖ ಆರೋಪಿಯಾಗಿದ್ದಾನೆ ಹೆಡ್ಲಿ. ಆತ ಸದ್ಯ ಅಮೇರಿಕದ ಜೈಲಲ್ಲಿದ್ದಾನೆ. ಅಲ್ಲಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈಯ ಟಾಡಾ ಹೈಕೋರ್ಟ್‍ನ ವಿಚಾರಣೆಗೆ ಒಳಗಾಗಿದ್ದಾನೆ. ದಂಗುಬಡಿಸುವ ಸಾಕ್ಷ್ಯಗಳನ್ನು ನೀಡಿದ್ದಾನೆ. ಆ ಸಾಕ್ಷ್ಯಗಳು ಎಷ್ಟು ಪ್ರಬಲವಾಗಿವೆ ಎಂದರೆ, ಯಾರೇ ಆಗಲಿ ಪಾಕಿಸ್ತಾನದೊಂದಿಗೆ ಸಂಬಂಧ ಸ್ಥಾಪಿಸುವ ಮೊದಲು ಎರಡೆರಡು ಬಾರಿ ಆಲೋಚಿಸುವಷ್ಟು. ಮುಂಬೈ ದಾಳಿಯನ್ನು ಪ್ರಾಯೋಜಿಸಿದ್ದೇ ಪಾಕಿಸ್ತಾನ ಎಂದಾತ ಹೇಳಿದ್ದಾನೆ. ಐಎಸ್‍ಐ, ಲಖ್ವಿ, ಹಫೀಝï, ಸಾಜಿದ್ ಮೀರ್, ಲಷ್ಕರೆ ತ್ವಯ್ಯಿಬ.. ಮುಂತಾದುವುಗಳ ಜೊತೆಗೆ ತನಗಿದ್ದ ನಿಕಟ ಸಂಬಂಧ ಮತ್ತು ಇವರಿಗೂ ಪಾಕ್ ಆಡಳಿತಕ್ಕೂ ನಡುವೆ ಇದ್ದ ನಂಟನ್ನು ವಿವರಿಸಿದ್ದಾನೆ. ಹೀಗೆ, 160 ಮಂದಿಯನ್ನು ಬಲಿ ಪಡೆದ ಭಯಾನಕ ಭಯೋತ್ಪಾದನಾ ಕೃತ್ಯವೊಂದರ ಮೂಲವು ಪಾಕಿಸ್ತಾನದಲ್ಲಿದೆ ಎಂದು ಅಮೇರಿಕನ್ ಜೈಲಲ್ಲಿರುವ ಅಮೇರಿಕನ್ ಪ್ರಜೆಯೊಬ್ಬ ಸಾಕ್ಷ್ಯ ನುಡಿದ ಬೆನ್ನಿಗೇ ಅಮೇರಿಕವು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಯಂತ್ರಗಳೂ ಸೇರಿದಂತೆ 700 ಮಿಲಿಯನ್ ಡಾಲರ್ ಮೌಲ್ಯದ ಯುದ್ಧೋಪಕರಣಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಸಿದ್ಧವಾಗಿದೆ. ಇದರಲ್ಲಿ ಎಫ್-16 ಮಾದರಿಯ ಯುದ್ಧ ವಿಮಾನಗಳೂ ಸೇರಿವೆ. ಏನಿದರ ಅರ್ಥ? ಉತ್ತರ ಕೊರಿಯಾ, ಇರಾನ್, ಕ್ಯೂಬಾ, ವೆನೆಝುವೇಲಾಗಳು ಒಂದಲ್ಲ ಒಂದು ರೀತಿಯಲ್ಲಿ ಅಮೇರಿಕದ ದಿಗ್ಬಂಧನಗಳಿಗೆ ಒಳಗಾಗುತ್ತಿರುವ ಈ ದಿನಗಳಲ್ಲಿ ಪಾಕಿಸ್ತಾನವು ಪುರಸ್ಕಾರಕ್ಕೆ ಒಳಗಾಗುವುದು ಯಾವುದರ ಕಾರಣದಿಂದ? ಭಾರತದ ವಿದೇಶಾಂಗ ನೀತಿಯ ವೈಫಲ್ಯಕ್ಕೆ ಇದರಲ್ಲಿ ಎಷ್ಟಂಶ ಪಾಲಿದೆ? ಕಾಂಗ್ರೆಸ್ ಸರಕಾರದ ಮೃದು ನೀತಿಯಿಂದಾಗಿ ಪಾಕ್ ಕೊಬ್ಬಿದೆ ಎಂದು ಹೇಳುತ್ತಿದ್ದ ಬಿಜೆಪಿಯು ಇದೀಗ ಅಧಿಕಾರದಲ್ಲಿದ್ದೂ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಕ್ಕೆ ಭೇಟಿ ಕೊಟ್ಟೂ ಅಮೇರಿಕದ ಈ ಧೋರಣೆಗೆ ಕಾರಣಗಳೇನು? ಬಿಜೆಪಿ ಕೂಡ ಅದೇ ಕಾಂಗ್ರೆಸ್‍ನ ವಿದೇಶಾಂಗ ನೀತಿಯನ್ನೇ ಅನುಸರಿಸುತ್ತಿದೆಯೇ ಅಥವಾ ಕಾಂಗ್ರೆಸ್‍ನ ವಿದೇಶಾಂಗ ನೀತಿಯಷ್ಟೂ ಪ್ರಭಾವ ಬೀರಲು ಬಿಜೆಪಿ ವಿಫಲವಾಗಿದೆಯೇ? ನರೇಂದ್ರ ಮೋದಿಯವರ ವಿದೇಶ ಪ್ರವಾಸವು ಒಂದು ‘ಜಾಲಿ ಟ್ರಿಪ್’ ಆಗುವುದಕ್ಕಷ್ಟೇ ಸೀಮಿತವಾಗಿದೆಯೇ? ಅಮೇರಿಕವೇಕೆ ಹೆಡ್ಲಿಯ ಸಾಕ್ಷ್ಯಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ? ಭಾರತೀಯ ಮುಖ್ಯಧಾರೆಯ ಪತ್ರಿಕೆಗಳಲ್ಲಿ ಸುಮಾರು ಒಂದು ವಾರಗಳ ತನಕ ಹೆಡ್ಲಿಯ ಸಾಕ್ಷ್ಯಗಳು ಮುಖಪುಟದಲ್ಲಿ ಪ್ರಧಾನ ಸುದ್ದಿಯಾಗಿ ಪ್ರಕಟವಾಗಿವೆ. ಆಂಗ್ಲಭಾಷೆಯ ಟಿ.ವಿ. ಮಾಧ್ಯಮಗಳು ಪ್ರೈಮ್ ಟೈಮ್‍ನಲ್ಲಿ ಈ ಸಾಕ್ಷ್ಯಗಳನ್ನೆತ್ತಿಕೊಂಡು ಒಂದಕ್ಕಿಂತ ಹೆಚ್ಚು ಬಾರಿ ಚರ್ಚಿಸಿವೆ. ಇವೆಲ್ಲ ಭಾರತದಲ್ಲಿರುವ ಅಮೇರಿಕನ್ ರಾಜತಾಂತ್ರಿಕರಿಗೆ ಮತ್ತು ಅವರ ಮೂಲಕ ಅಮೇರಿಕನ್ ಆಡಳಿತಕ್ಕೆ ತಲುಪದಿರುವುದಕ್ಕೆ ಸಾಧ್ಯವೇ ಇಲ್ಲ. ‘ಅಮೇರಿಕದ ಔಷಧ ಜಾರಿ ಸಂಸ್ಥೆಯ ಅಧಿಕಾರಿ’ ಎಂಬ ಮುಖವಾಡದಲ್ಲಿ ಹೆಡ್ಲಿಯು ಭಾರತಕ್ಕೆ ಏಳೆಂಟು ಬಾರಿ ಬಂದಿದ್ದ. ಆದರೆ ಹಾಗೆ ಬಂದ ಆತ ಮುಂಬೈ ದಾಳಿಗೆ ಬೇಕಾದ ತಯಾರಿಗಳನ್ನು ನಡೆಸಿದ್ದ. ಮಾಹಿತಿಗಳನ್ನು ಸಂಗ್ರಹಿಸಿದ್ದ. ನಕಾಶೆಗಳನ್ನು ತಯಾರಿಸಿದ್ದ. ಅಲ್ಲದೇ ಮುಂಬೈ ದಾಳಿಯ ಬಳಿಕವೂ ಆತ ಭಾರತಕ್ಕೆ ಭೇಟಿ ಕೊಟ್ಟಿದ್ದಾನೆ. ಇವೆಲ್ಲವೂ ಇದೀಗ ವಿಚಾರಣೆಯ ವೇಳೆ ಬಹಿರಂಗವಾಗಿದೆ. ಹಾಗಂತ, ಅಮೇರಿಕಕ್ಕೆ ಇವೆಲ್ಲವೂ ಗೊತ್ತಿರಲಿಲ್ಲವೇ? ತನ್ನ ಪ್ರಜೆಯೊಬ್ಬ ‘Drug Enforcement Administration Informer’ ಆಗಿ ಭಾರತಕ್ಕೆ ಪದೇ ಪದೇ ತೆರಳಿ ಏನೇನು ಮಾಡುತ್ತಿದ್ದಾನೆ ಎಂಬುದನ್ನು ತಿಳಿಯಲಾರದಷ್ಟು ಅಮೇರಿಕ ದುರ್ಬಲವಾಗಿತ್ತೇ? ಲಾಡೆನ್, ಅವ್ಲಾಕಿ, ಸದ್ದಾಮ್ ಹುಸೇನ್‍ರನ್ನು ಪತ್ತೆ ಹಚ್ಚುವಷ್ಟು ಅಥವಾ ಇರಾನಿನ ಅತಿ ರಹಸ್ಯ ಅಣುಸ್ಥಾವರಗಳಲ್ಲಿ ಏನೇನು ನಡೆಯುತ್ತಿವೆ ಮತ್ತು ಎಷ್ಟು ಪ್ರಮಾಣದಲ್ಲಿ ಯುರೇನಿಯಂ ಸಂವರ್ಧನೆಯ ಕಾರ್ಯ ನಡೆದಿದೆ ಎಂದೆಲ್ಲಾ ತಿಳಿದುಕೊಳ್ಳುವಷ್ಟು ಸಮರ್ಥವಾಗಿರುವ ರಾಷ್ಟ್ರವೊಂದಕ್ಕೆ ಹೆಡ್ಲಿ ಪದೇ ಪದೇ ಭಾರತ ಮತ್ತು ಪಾಕಿಸ್ತಾನಕ್ಕೆ ಯಾಕೆ ಹೋಗುತ್ತಿದ್ದಾನೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವೇ? ಅಮೇರಿಕದ ಬಗ್ಗೆ ಹೀಗೆ ಹೇಳುವುದು ಇವತ್ತಿನ ದಿನಗಳಲ್ಲಿ ಹಾಸ್ಯಾಸ್ಪದವಾದೀತು. ಒಂದೋ ಅಮೇರಿಕ ಈ ಎಲ್ಲವನ್ನೂ ಹೆಡ್ಲಿಯಿಂದ ಗೊತ್ತಿದ್ದೇ ಮಾಡಿಸಿದೆ ಅಥವಾ ವೀಡಿಯೋ ಕಾನ್ಫರೆನ್ಸ್ ನ ಮೂಲಕ ಇದೀಗ ವೈಭವೀಕೃತ ಸುಳ್ಳುಗಳನ್ನು ಹಂಚಲಾಗುತ್ತಿದೆ.
  ನಿಜವಾಗಿ, ಪಾಕಿಸ್ತಾನ ಎಂಬುದು ಭಾರತೀಯರಿಗೆ ಒಂದು ರಾಷ್ಟ್ರದ ಹೆಸರಾಗಿಯಷ್ಟೇ ಉಳಿದುಕೊಂಡಿಲ್ಲ ಎಂಬುದು ಅಮೇರಿಕಕ್ಕೆ ಚೆನ್ನಾಗಿ ಗೊತ್ತು. ಭಾರತೀಯ ಚುನಾವಣಾ ಕ್ಷೇತ್ರದ ಫಲಿತಾಂಶವನ್ನು ನಿರ್ಣಯಿಸುವ ಸಾಮರ್ಥ್ಯ ಪಾಕಿಸ್ತಾನ ಎಂಬ ಹೆಸರಿಗಿದೆ. ನರೇಂದ್ರ ಮೋದಿಯವರಂತೂ ‘ಪಾಕಿಸ್ತಾನ್’ನಿಂದ ಧಾರಾಳ ಫಸಲನ್ನು ಕೊಯ್ದಿದ್ದಾರೆ. ‘ಮಿಯಾಂ ಮುಷರ್ರಫ್’ ಎಂಬ ಪದಪುಂಜವನ್ನು ಅವರು ಉತ್ಪಾದಿಸಿದ್ದಾರೆ. ಗಡಿಯಲ್ಲಿ ಯೋಧರೋರ್ವರ ತಲೆ ಉರುಳಿಸಲಾದ ಘಟನೆಯನ್ನು ಮೋದಿಯವರ ಪಕ್ಷ ರಾಜಕೀಯ ಲಾಭಕ್ಕೆ ಎತ್ತಿಕೊಂಡಿತ್ತು. ಮುಂಬೈ ದಾಳಿಗೆ ಅತ್ಯಂತ ಪ್ರಚೋದನಾತ್ಮಕ ಶೈಲಿಯಲ್ಲಿ ಅದು ಪ್ರತಿಕ್ರಿಯಿಸಿತ್ತು. ಕಾಂಗ್ರೆಸ್ ಸರಕಾರವನ್ನು ‘ಷಂಡ’ ಎಂದು ಜರೆಯಲು ಆ ಘಟನೆಯನ್ನು ಅದು ಬಳಸಿಕೊಂಡಿತ್ತು. ಇಂಥ ಪಕ್ಷವೇ ಅಧಿಕಾರಕ್ಕೇರುವುದೆಂದರೆ ಒಂದು ರೀತಿಯಲ್ಲಿ ಕೆಂಡದ ಮೇಲೆ ಕಾಲಿಟ್ಟಂತೆ. ನಿರೀಕ್ಷೆಗಳ ಭಾರವೊಂದು ಆ ಸರಕಾರದ ಮೇಲಿರುತ್ತದೆ. ಈ ಕಾರಣದಿಂದಲೇ ಈಗಿನ ಬೆಳವಣಿಗೆಗಳ ಬಗ್ಗೆ ಅನುಮಾನ ಪಡಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕನ್ ಆಡಳಿತದ ಮಧ್ಯೆ ಸಹಕಾರದ ಮಾತುಕತೆಗಳೇನಾದರೂ ನಡೆದಿರಬಹುದೇ? ಮುಂಬೈ ದಾಳಿಯಲ್ಲಿ ಪಾಕ್ ಕೈವಾಡದ ಕುರಿತು ಅಮೇರಿಕದಲ್ಲಿದ್ದುಕೊಂಡೇ ಹೆಡ್ಲಿಯಿಂದ ಸಾಕ್ಷ್ಯಗಳನ್ನು ಹೇಳಿಸುವುದು ಮತ್ತು ಅದಕ್ಕೆ ಬದಲಾಗಿ ಭಾರತವು ಹೆಡ್ಲಿಗೆ ಕ್ಷಮಾದಾನ ನೀಡಿ ಆತನ ಗಡೀಪಾರಿಗೆ ಒತ್ತಾಯಿಸದಿರುವುದೂ ಈ ತಿಳುವಳಿಕೆಯಲ್ಲಿ ಸೇರಿರಬಹುದೇ? ಯಾಕೆಂದರೆ, ಹೀಗೆ ಮಾಡುವುದರಿಂದ ಅಮೇರಿಕಕ್ಕೆ ಎರಡು ರೀತಿಯ ಲಾಭಗಳಿವೆ ಮತ್ತು ನರೇಂದ್ರ ಮೋದಿಯವರಿಗೆ ಒಂದು ಲಾಭವಿದೆ. ಮೋದಿಯವರ ಲಾಭ ಏನೆಂದರೆ, ಅಮೇರಿಕದಲ್ಲಿರುವ ಮುಂಬೈ ದಾಳಿಯ ಆರೋಪಿಯನ್ನೇ ವಿಚಾರಣೆಗೊಳಪಡಿಸಿದ ಚಾಣಾಕ್ಷ ಎಂಬ ಇಮೇಜ್ ಅನ್ನು ಬೆಳೆಸಿಕೊಳ್ಳಬಹುದು. ಪಾಕಿಸ್ತಾನದ ವಿರುದ್ಧ ಭಾರತದಲ್ಲಿ ಮತ್ತೊಮ್ಮೆ ಭಾವನಾತ್ಮಕ ವಾತಾವರಣವನ್ನು ಉಂಟು ಮಾಡಬಹುದು. ಹಫೀಝï ಸಈದ್, ಲಕ್ವಿ, ಹಾಮಿದ್ ಮೀರ್ ಸಹಿತ ಎಲ್ಲ ಆರೋಪಿಗಳನ್ನೂ ಭಾರತಕ್ಕೆ ಹಸ್ತಾಂತರಿಸಿ ಎಂದು ಪಾಕ್‍ಗೆ ಕರೆ ಕೊಡುತ್ತಾ ಭಾರತೀಯರ ‘ದೇಶಪ್ರೇಮ’ವನ್ನು ಬಡಿದೆಬ್ಬಿಸಬಹುದು. ಹಾಗಂತ, ಅಮೇರಿಕ ಬಯಸುವುದೂ ಇದೇ ವಾತಾವರಣವನ್ನು. ಹೆಡ್ಲಿಯಿಂದ ಸಾಕ್ಷ್ಯ ನುಡಿಸಿದರೆ ಒಂದು ಕಡೆ ಭಾರತದಲ್ಲಿ ಪಾಕ್ ವಿರೋಧಿ ಆವೇಶಗಳು ಕಾಣಿಸಿಕೊಳ್ಳುವಾಗ ಇನ್ನೊಂದು ಕಡೆ ಪಾಕ್‍ನ ಮೇಲೆಯೂ ಇದು ಒತ್ತಡವನ್ನು ಹೇರುತ್ತದೆ. ಭಾರತ ಎಲ್ಲಾದರೂ ಕಾಲು ಕೆರೆದು ಜಗಳಕ್ಕಿಳಿದರೆ ಎಂಬ ಅನುಮಾನವನ್ನು ಹುಟ್ಟಿಸುತ್ತದೆ. ಮೊದಲೇ ನರೇಂದ್ರ ಮೋದಿಯವರು ಪಾಕ್ ವಿರೋಧಿಯಾಗಿ ಗುರುತಿಸಿಕೊಂಡವರು. ಈ ಸಾಕ್ಷ್ಯದ ಕಾರಣದಿಂದಾಗಿ ಅವರು, ಅವರ ಪಕ್ಷ ಮತ್ತು ಮಾಧ್ಯಮಗಳು ಕೂಡ ಪಾಕ್‍ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬಹುದು. ಅಂಥ ಸಂದರ್ಭದಲ್ಲಿ ಪಾಕ್ ಸ್ವರಕ್ಷಣೆಯ ಬಗ್ಗೆ ಹೆಚ್ಚೆಚ್ಚು ಚಿಂತಿಸಬಹುದು. ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿ ಅಮೇರಿಕದೊಂದಿಗೆ ಈ ಹಿಂದೆ ನಡೆಸಲಾದ ಒಪ್ಪಂದಗಳನ್ನು ಕಾರ್ಯರೂಪಕ್ಕೆ ತರಲು ಅಥವಾ ತುರ್ತಾಗಿ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುವ ಒಡಂಬಡಿಕೆಯನ್ನು ಮಾಡಿಕೊಳ್ಳಲು ಅದು ಮುಂದಾಗಬಹುದು. ಬಹುಶಃ ಹೆಡ್ಲಿಯ ಸಾಕ್ಷ್ಯ ಮತ್ತು ಅದರ ಬೆನ್ನಿಗೇ ಪಾಕಿಸ್ತಾನಕ್ಕೆ ಅಮೇರಿಕದಿಂದ ಯುದ್ಧೋಪಕರಣಗಳ ಮಾರಾಟದ ಹಿಂದೆ ಇಂಥದ್ದೊಂದು ತಂತ್ರ ಇದ್ದಿರಬಹುದೇ? ಹೆಡ್ಲಿಯನ್ನು ಮುಂದಿಟ್ಟು ಭಾರತ ಮತ್ತು ಪಾಕ್‍ಗಳೆರಡನ್ನೂ ಪ್ರಚೋದಿಸಿ ಪಾಕ್‍ಗೆ ಯುದ್ಧಾಸ್ತ್ರಗಳನ್ನು ಮಾರುವ ಹಾಗೂ ಭಾರತದಲ್ಲಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಧಕ್ಕೆಯಾಗದಂತೆ ಕಾಪಾಡುವ ಹುನ್ನಾರ ಇದರ ಹಿಂದಿರಬಹುದೇ? ಅಮೇರಿಕದ ನರಿಬುದ್ಧಿಯ ಪರಿಚಯ ಇರುವ ಯಾರೂ ಇಂಥದ್ದೊಂದು ಸಾಧ್ಯತೆಯನ್ನು ತಿರಸ್ಕರಿಸಲಾರರು.

Thursday, 11 February 2016

ಧರಣಿ ಮಂಡಲದಲ್ಲಿ ತಬ್ಬಲಿಯಾದ ಪುಣ್ಯಕೋಟಿಯ ಕತೆ

       ಗೋಮಾಂಸ ನಿಷೇಧವು ಎಷ್ಟಂಶ ಪ್ರಾಯೋಗಿಕ ಮತ್ತು ವ್ಯಾವಹಾರಿಕ ಎಂಬ ಚರ್ಚೆ ಇಂದು ನಿನ್ನೆಯದಲ್ಲ. ಗೋಮಾಂಸ ನಿಷೇಧಕ್ಕೆ ಈ ದೇಶದಲ್ಲಿ ಒಂದು ಗುಂಪು ಒತ್ತಾಯಿಸುವಾಗ ಇನ್ನೊಂದು ಗುಂಪು, ಅದನ್ನು ಆಹಾರವಾಗಿ ಸಮರ್ಥಿಸುತ್ತಲೂ ಇದೆ. ಅಲ್ಲದೇ, ಇಡೀ ಚರ್ಚೆಯನ್ನು ಹಿಂದೂ-ಮುಸ್ಲಿಮ್ ಆಗಿ ಪರಿವರ್ತಿಸುವ ಶ್ರಮಗಳು ನಡೆಯುತ್ತಲೂ ಇವೆ. ಇಂಥ ಹೊತ್ತಿನಲ್ಲಿ ಹರ್ಯಾಣದ ಬಿಜೆಪಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಈ ಚರ್ಚೆಗೆ ಹೊಸತೊಂದು ತಿರುವನ್ನು ಕೊಟ್ಟಿದ್ದಾರೆ. ಗೋಮಾಂಸ ಸೇವನೆಯ ನಿಷೇಧದಿಂದ ವಿದೇಶಿಯರನ್ನು ಹೊರಗಿಡುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಹರ್ಯಾಣದಲ್ಲಿರುವ ವಿದೇಶಿಯರು ಗೋಮಾಂಸ ಸೇವಿಸಬಹುದು ಮತ್ತು ಅದಕ್ಕಾಗಿ ಅವರಿಗೆ ವಿಶೇಷ ಪರವಾನಿಗೆ ನೀಡಲಾಗುವುದು ಎಂದವರು ಹೇಳಿದ್ದಾರೆ. ತಿನ್ನುವ ಮತ್ತು ಕುಡಿಯುವ ವಿಷಯದಲ್ಲಿ ಪ್ರತಿಯೊಬ್ಬರಿಗೂ ವೈಯಕ್ತಿಕವಾದ ಜೀವನ ಕ್ರಮವಿದ್ದು, ಅದನ್ನು ವಿರೋಧಿಸಬೇಕಿಲ್ಲ ಎಂದೂ ಅವರು ವಾದಿಸಿದ್ದಾರೆ. ಇದಕ್ಕೆ ಸಮರ್ಥನೆಯಾಗಿ, ಗುಜರಾತ್‍ನಲ್ಲಿ ಮದ್ಯಪಾನಕ್ಕೆ ನಿಷೇಧ ಇದ್ದರೂ ವಿದೇಶಿಯರಿಗೆ ವಿಶೇಷ ಪರವಾನಿಗೆ ನೀಡಿರುವುದನ್ನು ದಿ ಹಿಂದೂ ಪತ್ರಿಕೆಗೆ (2016 ಫೆಬ್ರವರಿ 7 - ಪುಟ: 15) ನೀಡಿರುವ ಸಂದರ್ಶನದಲ್ಲಿ ಅವರು ಉಲ್ಲೇಖಿಸಿದ್ದಾರೆ. ನಿಜವಾಗಿ, 2015ರ ಕೊನೆಯಲ್ಲಿ ಅವರೇ ಜಾರಿಗೆ ತಂದಿರುವ ‘ಹರ್ಯಾಣ ಗೋರಕ್ಷಣೆ ಮತ್ತು ಗೋ ಅಭಿವೃದ್ಧಿ ಕಾಯ್ದೆ’ಯ ಸ್ಪಷ್ಟ ಅಣಕ ಇದು. ಈ ಕಾಯ್ದೆಯ ಪ್ರಕಾರ, ಗೋವುಗಳ ಸಾಗಾಟ, ಗೋಹತ್ಯೆ, ಗೋಮಾಂಸ ಸೇವನೆ ಮತ್ತು ಗೋಮಾಂಸ ರಫ್ತು ಮುಂತಾದುವುಗಳಲ್ಲಿ ಭಾಗಿಯಾದವರಿಗೆ 3 ರಿಂದ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅಂದಹಾಗೆ, ಈ ಕಾಯ್ದೆಯನ್ನು ಜಾರಿಗೊಳಿಸುವುದರ ಹಿಂದಿನ ಉದ್ದೇಶ ಏನಾಗಿತ್ತು? ಮನೋಹರಲಾಲ್ ಖಟ್ಟರ್ ಅವರು ಈ  ನಿಷೇಧ ಕಾಯ್ದೆಗೆ ಏನೆಲ್ಲ ಕಾರಣಗಳನ್ನು ಕೊಟ್ಟಿದ್ದರು? ಗೋವು ಮಾತೆ, ಪೂಜನೀಯ, ಮುಕ್ಕೋಟಿ ದೇವತೆಗಳ ಆವಾಸ ಸ್ಥಾನ ಎಂಬುದು ಆ ಕಾರಣಗಳಲ್ಲಿ ಸೇರಿತ್ತಲ್ಲವೇ? ಹಾಲು ಕೊಡುವ ಮತ್ತು ಸೆಗಣಿ-ಮೂತ್ರ ಸಹಿತ ಸರ್ವೋಪಯೋಗಿಯಾದ ಗೋವಿನ ರಕ್ತ ಹರಿಸುವುದು ಭಾರತ ಮಾತೆಗೆ ಮಾಡುವ ಕಳಂಕ ಎಂದು ಅವರ ಬೆಂಬಲಿಗರು ಈ ಕಾಯ್ದೆಯನ್ನು ಸಮರ್ಥಿಸಿಕೊಂಡಿರಲಿಲ್ಲವೇ? ಗೋಮಾಂಸ ಸೇವನೆಯು ಭಯೋತ್ಪಾದನೆಗೆ ಕಾರಣವಾಗುತ್ತದೆ ಎಂದವರೂ ಇದ್ದರಲ್ಲವೇ?
  ನಿಜವಾಗಿ, ಗೋವನ್ನು ರಾಜಕೀಯ ಪ್ರಾಣಿಯಾಗಿ ಪರಿಚಯಿಸಿದ್ದು ಬಿಜೆಪಿಯೇ. ಗೋವನ್ನು ಮುಂದಿಟ್ಟುಕೊಂಡು ನಡೆಸಲಾದ ಪ್ರತಿಭಟನೆ, ಹಲ್ಲೆ, ಕೊಲೆ, ಗಲಭೆಗಳಲ್ಲಿ ಸ್ಥಳೀಯ ಬಿಜೆಪಿ ನಾಯಕರಿಂದ ಹಿಡಿದು ರಾಷ್ಟ್ರಮಟ್ಟದ ನಾಯಕರ ವರೆಗೆ ಅನೇಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿದ್ದಾರೆ. ದಾದ್ರಿ ಘಟನೆಯು ಇದಕ್ಕೆ ಇತ್ತೀಚಿನ ಉದಾಹರಣೆ ಮಾತ್ರ. ಹಾಜಬ್ಬ-ಹಸನಬ್ಬ ಪ್ರಕರಣವಂತೂ ನಮ್ಮ ನಡುವೆಯೇ ನಡೆದಿರುವಂಥದ್ದು. ಹೀಗಿರುತ್ತಾ, ಹರ್ಯಾಣದಲ್ಲಿರುವ ವಿದೇಶಿಯರು ಗೋಮಾಂಸ ಸೇವಿಸಬಹುದು ಅಂದರೆ ಏನರ್ಥ? ಇದು ಗೋಮಾತೆಗೆ ಮಾಡುವ ಅವಮಾನ, ಮೋಸವಲ್ಲವೇ? ವಿದೇಶಿಯರು ಗೋಮಾಂಸ ಸೇವಿಸುವಾಗ ಭಾರತೀಯರು ಅದರಲ್ಲೂ ಹರ್ಯಾಣಿಗರ ಭಾವನೆಗೆ ಧಕ್ಕೆಯಾಗುವುದಿಲ್ಲವೇ? ಅಲ್ಲದೇ, ತಿನ್ನುವ ಮತ್ತು ಕುಡಿಯುವ ವಿಷಯದಲ್ಲಿ ವೈಯಕ್ತಿಕ ಶೈಲಿ ಇರುವುದು ವಿದೇಶಿಯರಿಗೆ ಮಾತ್ರ ಅಲ್ಲವಲ್ಲ. ಹರ್ಯಾಣಿಗರಿಗೂ ಅದು ಇರಬೇಕಲ್ಲವೇ? ತನಗೆ ಓಟು ಹಾಕಿದ, ತನ್ನನ್ನು ಬೆಂಬಲಿಸಿದ, ಇಲ್ಲಿನ ಸಂವಿಧಾನ-ಪ್ರಜಾತಂತ್ರ, ಸಂಸ್ಕೃತಿ, ಅಭಿವೃದ್ಧಿಗಾಗಿ ದುಡಿಯುವ ಜನರ ಜೀವನ ಶೈಲಿಗೆ ಬೆಲೆ ಕೊಡದ ಖಟ್ಟರ್ ಅವರು ವಿದೇಶಿಯರ ಜೀವನ ಶೈಲಿಗೆ ಮಹತ್ವ ಕೊಡುವುದೇಕೆ? ವಿದೇಶಿಯರಿಗೆ ಲಭ್ಯವಾಗಿರುವುದನ್ನು ದೇಶೀಯರಿಗೆ ಅಲಭ್ಯಗೊಳಿಸುವುದು ಯಾವ ನೀತಿ? ಎಂಥ ದ್ವಂದ್ವ? ಗೋವು ಪೂಜನೀಯ ಪ್ರಾಣಿ, ಮಾಂಸದ ಪ್ರಾಣಿಯಲ್ಲ ಎಂಬ ಖಟ್ಟರ್ ಅವರ ನಿಲುವು ಪ್ರಾಮಾಣಿಕವೇ ಆಗಿರುತ್ತಿದ್ದರೆ ಸ್ವದೇಶಿ ಮತ್ತು ವಿದೇಶಿ ಎನ್ನದೇ ಸರ್ವರಿಗೂ ಗೋಮಾಂಸವನ್ನು ಅಲಭ್ಯಗೊಳಿಸಬೇಕಾಗಿತ್ತು. ಆ ಮೂಲಕ ಗೋಹತ್ಯೆಯನ್ನು ತಡೆಯುವಲ್ಲಿ ತನ್ನ ನಿಲುವು ಪ್ರಾಮಾಣಿಕವಾದುದು ಎಂದು ಸಾರಬೇಕಿತ್ತು. ಆದರೆ ಗುಜರಾತ್‍ನಲ್ಲಿ ವಿದೇಶಿಯರಿಗೆ ಮದ್ಯಪಾನ ಮಾಡಲು ಇರುವ ಪರವಾನಿಗೆಯನ್ನು ಎತ್ತಿಕೊಂಡು ಖಟ್ಟರ್ ಅವರು ತನ್ನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೀಗೆ ತನ್ನ ಗೋಪ್ರೇಮ ಎಷ್ಟು ನಕಲಿಯಾದುದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಗೋವಿಗೂ ಮದ್ಯಪಾನಕ್ಕೂ ಎಲ್ಲಿಯ ಹೋಲಿಕೆ? ಗೋವಿನಂತೆ ಮದ್ಯವನ್ನು ಯಾರಾದರೂ ಪೂಜಿಸುತ್ತಾರಾ? ಗೋವಿಗಿರುವ ನೆಲೆ ಮತ್ತು ಬೆಲೆ ಮದ್ಯಪಾನಕ್ಕಿದೆಯೇ? ಆರೋಗ್ಯ ಮತ್ತು ಕೌಟುಂಬಿಕ ಕಾರಣಗಳನ್ನು ಮುಂದಿಟ್ಟುಕೊಂಡು ನಿಷೇಧಿಸಲಾದ ಮದ್ಯವನ್ನು, ಸಂಪೂರ್ಣ ಧಾರ್ಮಿಕ ಕಾರಣಕ್ಕಾಗಿ ನಿಷೇಧಿಸಲಾದ ಗೋಹತ್ಯೆಯೊಂದಿಗೆ ಹೋಲಿಸುವುದು ಎಷ್ಟು ಸರಿ? ಗೋವಿಗೆ ಖಟ್ಟರ್ ಅವರು ಕೊಡುತ್ತಿರುವ ಬೆಲೆಯೇ ಇದು?
  ಅಂದಹಾಗೆ, ರಾಜಕಾರಣಿಗಳ ಮಟ್ಟಿಗೆ ಗೋವು ಅನುಕೂಲ ಸಿಂಧು ಪ್ರಾಣಿ. ಬಳಸಬೇಕಾದಲ್ಲಿ ಬಳಸಿ ಎಸೆಯಬೇಕಾದಲ್ಲಿ ಅವರು ಅದನ್ನು ಎಸೆದು ಬಿಡುತ್ತಾರೆ. ವಿಶೇಷ ಏನೆಂದರೆ, ಗೋವನ್ನು ಬಳಸುವಾಗ ಅವರಲ್ಲಿ ಧಾರ್ಮಿಕವಾದ ಮತ್ತು ಭಾವನಾತ್ಮಕವಾದ ಕಾರಣಗಳಿರುತ್ತವೆ. ಎಸೆಯುವಾಗ ಅತ್ಯಂತ ವ್ಯಾವಹಾರಿಕವಾದ ತರ್ಕಗಳಿರುತ್ತವೆ. ಖಟ್ಟರ್ ಅವರು ಇವತ್ತು ಅಂಥದ್ದೇ ಒಂದು ತರ್ಕವನ್ನು ತನ್ನ ‘ಎಸೆಯುವ ನೀತಿ’ಗೆ ಬಳಸಿಕೊಂಡಿದ್ದಾರೆ. ಅವರು ತನ್ನ ಈ ಹೊಸ ಗೋಮಾಂಸ ನೀತಿಯನ್ನು ಪ್ರಕಟಿಸುವುದಕ್ಕಿಂತ ಮೊದಲು ಜಪಾನ್‍ಗೆ ಭೇಟಿ ಕೊಟ್ಟಿದ್ದರು. ಅಲ್ಲಿನ ಸುಝುಕಿ ಕಂಪೆನಿಯ ಮುಖ್ಯಸ್ಥರೊಂದಿಗೆ ಭೇಟಿಯಾಗಿ ಹರ್ಯಾಣದಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು. ಈ ದೇಶದ ಮುಂದುವರಿದ ರಾಜ್ಯಗಳಲ್ಲಿ ಹರ್ಯಾಣಕ್ಕೆ ಈಗ 14ನೇ ಸ್ಥಾನವಿದೆ. ಆ ಸ್ಥಾನವನ್ನು ಪ್ರಮುಖ 5 ಸ್ಥಾನಗಳೊಳಗೆ ತರಬೇಕೆಂಬ ಗುರಿ ಅವರದು. ಅದಕ್ಕಾಗಿ ಚೀನಾ, ಅಮೇರಿಕ, ಜಪಾನ್, ಕೆನಡದ ಉದ್ಯಮಿಗಳನ್ನು ಅವರು ಹರ್ಯಾಣದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದಾರೆ. ಸುಮಾರು 11 ಲಕ್ಷ ಕೋಟಿ ರೂಪಾಯಿಯ ಹೂಡಿಕೆ ಮಾಡುವ ಮತ್ತು 2 ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆಯನ್ನು ಅವರು ಹಮ್ಮಿಕೊಂಡಿದ್ದಾರೆ. ಮುಖ್ಯವಾಗಿ, ಚೀನಾ ಮತ್ತು ಜಪಾನ್‍ಗಳು ಹರ್ಯಾಣದಲ್ಲಿ ಹೂಡಿಕೆ ಮಾಡುವ ಉಮೇದು ತೋರಿವೆ. ವಾಂಡ ಗುಂಪು ಸುಮಾರು 65 ಸಾವಿರ ಕೋಟಿ ರೂಪಾಯಿ ಹೂಡಿಕೆಗೆ ಈಗಾಗಲೇ ಸಮ್ಮತಿಸಿದೆ. ಅದಕ್ಕಾಗಿ 3 ಸಾವಿರ ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಅಟೋಮೊಬೈಲ್ ಮತ್ತು ಸೇವಾ ಕ್ಷೇತ್ರದಲ್ಲಿ ವಿದೇಶಿ ಕಂಪೆನಿಗಳು ಈಗಾಗಲೇ ಹರ್ಯಾಣದಲ್ಲಿ ಚಟುವಟಿಕೆಯಲ್ಲಿವೆ. ಮುಖ್ಯವಾಗಿ ಜಪಾನ್ ಮತ್ತು ಚೀನಿಯರ ಪ್ರಮುಖ ಆಹಾರವೇ ಗೋಮಾಂಸ. ಈ ಎರಡು ರಾಷ್ಟ್ರಗಳ ಪ್ರಮುಖ ಕಂಪೆನಿಗಳನ್ನು ಹರ್ಯಾಣದತ್ತ ಆಕರ್ಷಿಸಬೇಕಾದರೆ ಗೋಮಾಂಸ ನಿಷೇಧದಲ್ಲಿ ರಾಜಿ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆಯಿದೆ. ಆದ್ದರಿಂದಲೇ, ಖಟ್ಟರ್ ಅವರು ಗೋವು ಮತ್ತು 11 ಲಕ್ಷ ಕೋಟಿ ರೂಪಾಯಿಗಳನ್ನು ಮುಖಾಮುಖಿಗೊಳಿಸಿದ್ದಾರೆ. ಈ ಮುಖಾಮುಖಿಯಲ್ಲಿ ಗೋವು ಸೋಲೊಪ್ಪಿಕೊಂಡಿದೆ. ಸುಝುಕಿ, ವಾಂಡದಂಥ ದೈತ್ಯ ಕಂಪೆನಿಗಳು ಜಯಶಾಲಿಯಾಗಿವೆ. ಹಾಗಂತ, ಗೋವಿಗೆ ಮೋಸ ಮಾಡುವವರಲ್ಲಿ ಮನೋಹರ್ ಲಾಲ್ ಖಟ್ಟರ್ ಒಂಟಿಯಲ್ಲ. ಅವರ ಪಕ್ಷದವರಿಗೆ ಹೋಲಿಸಿದರೆ ಖಟ್ಟರ್ ತುಸು ಒಳ್ಳೆಯವರು. ತಾನು ಏನು ಎಂಬುದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆದರೆ ಅವರ ಪಕ್ಷ ಅವರಷ್ಚೂ ಪ್ರಾಮಾಣಿಕವಾಗಿಲ್ಲ. ಒಂದು ಕಡೆ ಗೋಮಾಂಸ ನಿಷೇಧಕ್ಕೆ ಒತ್ತಾಯಿಸುತ್ತಾ ಇನ್ನೊಂದು ಕಡೆ ಈ ಹಿಂದಿಗಿಂತಲೂ ಹೆಚ್ಚು ಉತ್ಸಾಹದಿಂದ ವಿದೇಶಕ್ಕೆ ಗೋಮಾಂಸವನ್ನು ಅದು ರಫ್ತು ಮಾಡುತ್ತಿದೆ.
        ಏನೇ ಆಗಲಿ, ಜಪಾನ್ ಮತ್ತು ಚೀನಾದ ಕೆಲವು ಉದ್ಯಮಿಗಳು ಮನೋಹರ್ ಲಾಲ್ ಖಟ್ಟರ್ ಅವರ ಗೋಪ್ರೇಮದ ನಿಜ ಮುಖವನ್ನು ಬಯಲುಗೊಳಿಸಿದ್ದಾರೆ. ಅವರಿಗೆ ಅಭಿನಂದನೆಗಳು.

Friday, 5 February 2016

ಫ್ರೀಜರ್ ನಲ್ಲಿರುವ ಮಾಂಸದ ಜಾತಿ ಯಾವುದು?

       ದಾದ್ರಿಯ ಮುಹಮ್ಮದ್ ಅಖ್ಲಾಕ್ ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದ ರೋಹಿತ್ ವೇಮುಲರು ಈ ದೇಶದಲ್ಲಿ ಅಸ್ತಿತ್ವದಲ್ಲಿರುವ ಎರಡು ಬಗೆಯ ವಿಚಾರಧಾರೆಯನ್ನು ಮುಖಾಮುಖಿಗೊಳಿಸಿ ಹೊರಟು ಹೋಗಿದ್ದಾರೆ. ಈ ಮುಖಾಮುಖಿಯನ್ನು ಮನುಷ್ಯಪರ ಮತ್ತು ಮನುಷ್ಯ ವಿರೋಧಿ ವಿಚಾರಧಾರೆಗಳ ಮುಖಾಮುಖಿ ಎಂದೂ ವ್ಯಾಖ್ಯಾನಿಸಬಹುದು. ರೋಹಿತ್ ವೇಮುಲನ ಆತ್ಮಹತ್ಯೆಗಿಂತ ಮೊದಲು ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್‍ರನ್ನು ಥಳಿಸಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ದೇಶದ ಒಂದು ವರ್ಗ ವ್ಯಕ್ತಪಡಿಸಿದ ಪ್ರತಿಕ್ರಿಯೆಯನ್ನು ರೋಹಿತ್ ವೇಮುಲನ ಅತ್ಮಹತ್ಯೆಗೆ ಅದೇ ಗುಂಪು ವ್ಯಕ್ತಪಡಿಸಿದ ಪ್ರತಿಕ್ರಿಯೆಯೊಂದಿಗೆ ಹೋಲಿಸಿ ನೋಡಿದರೆ, ಈ ಗುಂಪಿನ ವಿಚಾರಧಾರೆ ಎಷ್ಟು ಅಪಾಯಕಾರಿ ಅನ್ನುವುದು ಸ್ಪಷ್ಟವಾಗುತ್ತದೆ. ಅಖ್ಲಾಕ್ ಹತ್ಯೆಯ ವಿರುದ್ಧ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿರುವಾಗ ಈ ವಿಚಾರಧಾರೆಯ ಮಂದಿ ಆ ಹತ್ಯೆಯನ್ನು ಗೋಹತ್ಯೆಗೆ ಸ್ಥಳೀಯರ ಪ್ರತಿಕ್ರಿಯೆ ಎಂದು ವ್ಯಾಖ್ಯಾನಿಸ ತೊಡಗಿದರು. ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷಿದ್ಧವಾಗಿರುವುದರಿಂದ ಈ ಹತ್ಯೆ ಸಮರ್ಥನೀಯ ಎಂಬ ರೀತಿಯಲ್ಲಿ ಮಾತಾಡತೊಡಗಿದರು. ಇದಕ್ಕೆ ಪೂರಕವಾಗಿ ಕರುವೊಂದು ನಾಪತ್ತೆಯಾಗಿರುವ ಮತ್ತು ರುಂಡ ಪತ್ತೆಯಾಗಿರುವ ವದಂತಿಗಳನ್ನು ಹಬ್ಬಿಸಿದರು. ಅಖ್ಲಾಕ್‍ನನ್ನು ಹತ್ಯೆ ಮಾಡಿದ್ದು ಸರಿ ಎಂದು ವಾದಿಸುವ ವಾತಾವರಣವೊಂದನ್ನು ಅವರು ಹುಟ್ಟು ಹಾಕಿದರು. ಅದಕ್ಕೆ ತಕ್ಕುದಾದ ಸಮರ್ಥನೆಗಳನ್ನು ಉತ್ಪಾದಿಸಿ ಹಂಚತೊಡಗಿದರು. ಇದು ಉತ್ತರ ಪ್ರದೇಶ ಸರಕಾರದ ಮೇಲೆ ಎಷ್ಟರ ಮಟ್ಟಿಗೆ ಒತ್ತಡ ಹೇರಿತೆಂದರೆ, ಅಖ್ಲಾಕ್‍ನ ಮನೆಯ ಫ್ರೀಜರ್‍ನಲ್ಲಿದ್ದ ಮಾಂಸ ದನದ್ದೋ ಅಲ್ಲ ಆಡಿನದ್ದೋ ಎಂಬುದರ ಪರೀಕ್ಷೆಗೆ ಅದು ಮುಂದಾಯಿತು. ಒಂದು ರೀತಿಯಲ್ಲಿ, ಬಲಪಂಥೀಯ ವಿಚಾರಧಾರೆಗೆ ಸಿಕ್ಕ ಗೆಲುವು ಇದು. ಫಾರೆನ್ಸಿಕ್ ಪರೀಕ್ಷೆಯಲ್ಲಿ ಮಾಂಸ ಗೋವಿನದ್ದು ಎಂದು ಸಾಬೀತಾದರೆ, ಇನ್ನಷ್ಟು ತಾರಕ ದನಿಯಲ್ಲಿ ಆ ಹತ್ಯೆಯನ್ನು ಸಮರ್ಥಿಸಿಕೊಳ್ಳಬಹುದು. ಕುಸಿಯುತ್ತಿರುವ ಗೋವುಗಳ ಸಂಖ್ಯೆಯ ಕೃತಕ ಅಂಕಿ-ಅಂಶಗಳನ್ನು ಕೊಟ್ಟು ಇದಕ್ಕೆಲ್ಲಾ ಮುಸ್ಲಿಮರ ಗೋಮಾಂಸ ಪ್ರೇಮವೇ ಕಾರಣ ಎಂದು ಹೇಳಬಹುದು. ಗೋರಕ್ಷಣೆಯ ಹೆಸರಲ್ಲಿ ಉತ್ತರ ಪ್ರದೇಶದಾದ್ಯಂತ ಅಭಿಯಾನ ಕೈಗೊಳ್ಳಬಹುದು. ಗೋಹತ್ಯೆಗೆ ಪ್ರತಿಹತ್ಯೆಯೇ ಪರಿಹಾರ ಎಂದೂ ಘೋಷಿಸಬಹುದು. ಒಂದು ವೇಳೆ, ಆ ಮಾಂಸ ಗೋವಿನದ್ದಲ್ಲ ಎಂದು ಸಾಬೀತಾಯಿತು ಅಂತಿಟ್ಟುಕೊಳ್ಳಿ. ಆಗಲೂ ಹಿಂಜರಿಯಬೇಕಿಲ್ಲ. ಫಾರೆನ್ಸಿಕ್ ಪರೀಕ್ಷೆಯ ವಿಶ್ವಾಸಾರ್ಹತೆಯನ್ನೇ ಆಗ ಪ್ರಶ್ನಿಸಿದರಾಯಿತು. ಪರೀಕ್ಷಾ ವರದಿಯನ್ನು ಸಮಾಜವಾದಿ ಪಕ್ಷವು ತಿರುಚಿದೆ ಎಂದು ಆರೋಪಿಸಿದರಾಯಿತು. ಮುಸ್ಲಿಮರನ್ನು ಓಲೈಸುವುದಕ್ಕಾಗಿ ಸಮಾಜವಾದಿ ಪಕ್ಷವು ಗೋವನ್ನು ಆಡನ್ನಾಗಿ ಪರಿವರ್ತಿಸಿದೆ ಎಂದು  ಹೇಳಿದರಾಯಿತು. ಒಟ್ಟಿನಲ್ಲಿ, ಫಲಿತಾಂಶ ಏನೇ ಬಂದರೂ ಲಾಭ ಮಾತ್ರ ಹತ್ಯೆ ನಡೆಸಿದವರಿಗೇ ಸಿಗುತ್ತದೆ. ಅಂತಿಮವಾಗಿ ನಡೆದದ್ದೂ ಇದುವೇ. ಇಡೀ ಪರೀಕ್ಷಾ ಫಲಿತಾಂಶವನ್ನೇ ಆ ವಿಚಾರಧಾರೆಯ ಮಂದಿ ತಿರಸ್ಕರಿಸಿದರು. ಇದರ ನಡುವೆಯೇ ಘಟನೆಗೆ ಅಖ್ಲಾಕ್‍ರ ಮಗನ ಪ್ರೇಮ ಪ್ರಕರಣವೇ ಕಾರಣ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಪತ್ರಿಕಾಗೋಷ್ಠಿ ಕರೆದು ಹೇಳಿಕೊಂಡಿತು. ಹಿಂದೂ ಹುಡುಗಿಯನ್ನು ಆತ ಪ್ರೀತಿಸುತ್ತಿದ್ದ ಎಂದು ಹೇಳಿ ಅದು ಆ ಹತ್ಯೆಯನ್ನು ಸಮರ್ಥಿಸಿಕೊಂಡಿತು. ಹೀಗೆ ಕ್ರೌರ್ಯವೊಂದರ ಸುತ್ತ ವಿವಿಧ ಬಗೆಯ ಅನುಮಾನಗಳನ್ನು ಸೃಷ್ಟಿಸಿ ಕೊನೆಗೆ ಆ ಕ್ರೌರ್ಯದ ಬದಲು ಅನುಮಾನಗಳ ಸುತ್ತವೇ ಸಮಾಜ ಚರ್ಚಿಸುವಂತೆ ಮಾಡುವ ಕಲೆ ಅದಕ್ಕೆ ಕರಗತವಾಗಿದೆ. ವೇಮುಲನ ವಿಷಯದಲ್ಲೂ ಇದೇ ತಂತ್ರವನ್ನು ಪ್ರಯೋಗಿಸಲಾಗಿದೆ. ಆತನ ಆತ್ಮಹತ್ಯೆಗೆ ಯಾರು ಮತ್ತು ಯಾವುದೆಲ್ಲ ಕಾರಣ ಎಂಬುದು ಚರ್ಚೆಯಾಗಬೇಕಾದ ಈ ಹೊತ್ತಿನಲ್ಲಿ ಆತ ದಲಿತನೋ ಅಲ್ಲ ಹಿಂದುಳಿದ ವರ್ಗದವನೋ ಎಂಬೊಂದು ಚರ್ಚೆಯನ್ನು ಈ ವಿಚಾರಧಾರೆ ಹುಟ್ಟು ಹಾಕಿದೆ. ಮಾತ್ರವಲ್ಲ, ಆತ ದಲಿತನೇ ಅಲ್ಲ ಎಂದೂ ಅದು ಘೋಷಿಸಿದೆ. ಸ್ಮೃತಿ ಇರಾನಿ, ಸುಶ್ಮಾ ಸ್ವರಾಜ್‍ರಿಂದ ಹಿಡಿದು ಹೈದರಾಬಾದ್ ವಿಶ್ವವಿದ್ಯಾನಿಲಯದ ABVPಯ ಅಧ್ಯಕ್ಷನವರೆಗೆ ವೇಮುಲನ ಜಾತಿಯ ಬಗ್ಗೆ ವಿವಿಧ ಬಗೆಯ ಹೇಳಿಕೆಗಳು ಹೊರಬೀಳುತ್ತಿವೆ. ಒಂದು ವೇಳೆ ಈ ತಂತ್ರದಲ್ಲಿ ಈ ಮಂದಿ ಯಶಸ್ವಿಯಾದರೆ ಬಳಿಕ ವೇಮುಲನನ್ನೇ ಅಪರಾಧಿ ಸ್ಥಾನದಲ್ಲಿ ಕೂರಿಸಬಹುದು. ಈ ವರೆಗೆ ನಡೆದ ಎಲ್ಲ ಹೋರಾಟಗಳನ್ನೂ ಅವರು ಗೇಲಿ ಮಾಡಬಹುದು. ಸುಳ್ಳು ದಾಖಲೆ ಸೃಷ್ಟಿಸಿ ದಲಿತ ಸೌಲಭ್ಯಗಳನ್ನು ಕಸಿದ ವಂಚಕನಂತೆ ವೇಮುಲನನ್ನು ಬಿಂಬಿಸಬಹುದು.
  ನಿಜವಾಗಿ, ಈ ರೀತಿ ಸತ್ಯವನ್ನು ತಿರುಚುವುದು ಹತ್ಯೆಗಿಂತಲೂ ಕ್ರೂರವಾದುದು. ಅಷ್ಟಕ್ಕೂ, ಅಖ್ಲಾಕ್‍ನ ಮನೆಯಲ್ಲಿದ್ದುದು ಗೋಮಾಂಸವೆಂದೇ ಇಟ್ಟುಕೊಳ್ಳೋಣ. ಅದಕ್ಕೆ ಹತ್ಯೆ ಉತ್ತರವೇ? ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಬೆಂಬಲ ನೀಡುವ ಈ ಬಗೆಯ ಹೇಳಿಕೆಗಳಿಂದ ಏನನ್ನು ನಿರೀಕ್ಷಿಸಬಹುದು? ವೇಮುಲನಿಗೆ ಸಂಬಂಧಿಸಿಯೂ ನಾವು ಇವೇ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಆತ ದಲಿತನಲ್ಲದೇ ಇರಬಹುದು, ಹಿಂದುಳಿದ ವರ್ಗಕ್ಕೇ ಸೇರಿರಬಹುದು. ಹಾಗಂತ, ಆ ಆತ್ಮಹತ್ಯೆ ಕ್ಷುಲ್ಲಕವೇ? ಹಿಂದುಳಿದ ವರ್ಗದ ಹುಡುಗನನ್ನು ಬಯಲಲ್ಲಿ ಮಲಗಿಸುವುದು ಸಮರ್ಥನೀಯವೇ? ಆತನಿಗೆ ಸಲ್ಲಬೇಕಾದ ವೇತನವನ್ನು ತಡೆಹಿಡಿಯುವುದು ಮತ್ತು ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಮೃತಿ ಇರಾನಿಯವರ ಇಲಾಖೆಯಿಂದ ಮೇಲಿಂದ ಮೇಲೆ ಪತ್ರ ರವಾನೆಯಾಗುವುದು ಸಮ್ಮತವೇ? ಹಿಂದುಳಿದ ವರ್ಗದ ವಿದ್ಯಾರ್ಥಿಯನ್ನು ದೇಶದ್ರೋಹಿ ಎಂದು ಕರೆದು ಹಿಂಸಿಸಬಹುದೇ? ಅಷ್ಟಕ್ಕೂ, ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ವೇಮುಲನ ಗುರುತು ಹೇಗಿತ್ತು? ಅಲ್ಲಿನ ಕುಲಪತಿಗಳು, ಪ್ರೊಫೆಸರ್‍ಗಳು ಮತ್ತು ಇತರ ವಿದ್ಯಾರ್ಥಿಗಳೆಲ್ಲ ವೇಮುಲನನ್ನು ಏನೆಂದು ಪರಿಗಣಿಸಿದ್ದರು, ದಲಿತ ಎಂದೇ ಅಲ್ಲವೇ? ಆತನು ಪರಿಚಯಿಸಿಕೊಂಡದ್ದೂ ಹಾಗೆಯೇ ತಾನೇ? ಹೀಗಿರುವಾಗ, ಆತ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ದಲಿತ ದೌರ್ಜನ್ಯದ ಪ್ರತಿನಿಧಿಯಾಗಿದ್ದಾನೆ ಎಂದು ಒಪ್ಪಿಕೊಳ್ಳುವುದಕ್ಕೆ ಯಾಕೆ ಈ ಮಂದಿ ಹಿಂದೇಟು ಹಾಕಬೇಕು? ವಿಶ್ವವಿದ್ಯಾನಿಲಯವು ಆತನನ್ನು ಗುರುತಿಸಿರುವುದು ದಲಿತನಾಗಿಯೇ. ಆದ್ದರಿಂದ  ದಲಿತನೋರ್ವ ಎದುರಿಸಬಹುದಾದ ಸಕಲ ಸವಾಲುಗಳನ್ನೂ ಆತ ಎದುರಿಸಬೇಕಾದುದು ಸಹಜ. 2007 ರಿಂದ 13ರ ಮಧ್ಯೆ ಹೈದರಾಬಾದ್‍ನ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ 11 ಮಂದಿ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಏನೆಲ್ಲ ಜಾತಿ ಸಂಬಂಧಿ ಕಾರಣಗಳಿದ್ದುವೋ ಅವೆಲ್ಲವೂ ವೇಮುಲ ಆತ್ಮಹತ್ಯೆಯ ಹಿಂದೆಯೂ ಇರುವುದಕ್ಕೆ ಎಲ್ಲ ಸಾಧ್ಯತೆಯೂ ಇದೆ. 2013ರಲ್ಲಿ ಅಂಧ್ರಪ್ರದೇಶದ ಹೈಕೋರ್ಟ್ ಈ ಆತ್ಮಹತ್ಯೆಗಳ ಬಗ್ಗೆ ಸ್ವಪ್ರೇರಿತ ದೂರನ್ನೂ ದಾಖಲಿಸಿಕೊಂಡಿತ್ತು. ಶಿಕ್ಷಣ ತಜ್ಞ ಅನೂಪ್ ಸಿಂಗ್ ಅವರ ಅಧ್ಯಯನ, ಸ್ಯಾಮ್ಸನ್ ಓವಿಚೇಗನ್ ಅವರು 2013ರಲ್ಲಿ ನಡೆಸಿದ ಅಧ್ಯಯನ ಮತ್ತು 2010ರಲ್ಲಿ ಮೇರಿ ಥಾರ್ನ್‍ಟೋನ್ ಅವರು ನಡೆಸಿದ ಅಧ್ಯಯನಗಳೆಲ್ಲ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ದಲಿತರ ಮೇಲಾಗುತ್ತಿರುವ ತಾರತಮ್ಯ ನೀತಿಯನ್ನು ವಿವರವಾಗಿ ವಿಶ್ಲೇಷಿಸಿದ್ದುವು. 5-6 ತಿಂಗಳಿನಿಂದ ವೇತನವಿಲ್ಲದೇ, ಲೈಬ್ರರಿ, ಹಾಸ್ಟೆಲ್‍ಗಳಿಗೆ ಪ್ರವೇಶಿಸಲಾಗದೇ ಮತ್ತು ಆ ಕಾರಣಗಳಿಂದಾಗಿ ಅಧ್ಯಯನಕ್ಕೆ ಪುಸ್ತಕಗಳನ್ನು ಪಡೆಯಲಾಗದೇ ಒದ್ದಾಡುತ್ತಿರುವ ವೇಮುಲು ಸಹಿತ ಐವರು ಯುವಕರ ಬಗ್ಗೆ ಒಂದೇ ಒಂದು ಗೆರೆಯ ಕಾಳಜಿಯ ಮಾತನ್ನೂ ಆಡದೇ, `ಅವರ ವಿರುದ್ಧ ಏನು ಕ್ರಮ ಕೈಗೊಂಡಿರಿ' ಎಂದು ವಿಶ್ವವಿದ್ಯಾನಿಲಯದ ಉಪಕುಲಪತಿಯವರನ್ನು ಮಾನವ ಸಂಪನ್ಮೂಲ ಇಲಾಖೆಯು ಪ್ರಶ್ನಿಸಿ ಐದೈದು ಬಾರಿ ಪತ್ರ ಕಳುಹಿಸುತ್ತದಲ್ಲ, ಇದಕ್ಕೆ ಏನೆನ್ನಬೇಕು? ಇದರಲ್ಲಿ ಅಸಹಜವಾದುದು ಏನೂ ಇಲ್ಲವೇ? ಹಾಗಂತ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ಘರ್ಷಣೆ ಹೊಸತೇನೂ ಅಲ್ಲ. ಆದ್ದರಿಂದ, ವೇಮುಲ
ತೊಡಗಿಸಿಕೊಂಡಿರುವ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ (ASA) ಎಂಬ ವಿದ್ಯಾರ್ಥಿ ಸಂಘಟನೆಯು ABVP ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ ಎಂಬ ಆರೋಪವನ್ನು ಅಭೂತಪೂರ್ವ ಘಟನೆಯಾಗಿ ನೋಡಬೇಕಾಗಿಯೂ ಇಲ್ಲ. ಈ ಘಟನೆಗಿಂತ ಮೊದಲು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ABVP  ವಿದ್ಯಾರ್ಥಿಗಳು `ಮುಝಫ್ಫರ್ ನಗರ್ ಅಭೀ ಬಾಕಿ ಹೆ' ಎಂಬ ಡಾಕ್ಯುಮೆಂಟರಿ ಪ್ರದರ್ಶನವನ್ನು ತಡೆಯುವ ನೆಪದಲ್ಲಿ ದಾಂಧಲೆ ನಡೆಸಿದ್ದರು. ಜಮ್ಮು ಕಾಶ್ಮೀರದಲ್ಲಂತೂ ABVP  ವಿದ್ಯಾರ್ಥಿಗಳು ನಡೆಸಿದ ದಾಂಧಲೆ ಮತ್ತು ಹಲ್ಲೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಕಳೆದ ವಾರ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಹೋದ ದಿ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಮತ್ತು ಖ್ಯಾತ ಪತ್ರಕರ್ತ ಸಿದ್ಧಾರ್ಥ್ ವರದರಾಜನ್‍ರನ್ನು ಇದೇ ಸಂಘಟನೆಯ ವಿದ್ಯಾರ್ಥಿಗಳು ಉಪಕುಲಪತಿಯವರ ಕಚೇರಿಯಲ್ಲಿ ಬಂಧನಕ್ಕೆ ಒಳಪಡಿಸಿದ್ದರು. ಹಾಗಂತ, ಸ್ಮೃತಿ ಇರಾನಿಯವರ ಮಾನವ ಸಂಪನ್ಮೂಲ ಇಲಾಖೆಯಿಂದ ಸಂಬಂದಿತ ವಿಶ್ವ ವಿದ್ಯಾನಿಲಯಗಳಿಗೆ ಈ ಬಗ್ಗೆ ಎಷ್ಟು ಪತ್ರಗಳು ಹೋಗಿವೆ? ಈ ವಿದ್ಯಾರ್ಥಿಗಳಲ್ಲಿ ದೇಶದ್ರೋಹವನ್ನು ಶಂಕಿಸಿ ‘ಬಂಡಾರು ದತ್ತಾತ್ರೇಯರು' ಎಷ್ಟು ಪತ್ರಗಳನ್ನು ಸ್ಮೃತಿ ಇರಾನಿಯವರಿಗೆ ಕಳುಹಿಸಿದ್ದಾರೆ?
     ಅಖ್ಲಾಕ್ ಮತ್ತು ವೇಮುಲರಿಬ್ಬರೂ ಸೇರಿ ಬಲಪಂಥೀಯ ವಿಚಾರಧಾರೆಯ ಕ್ರೌರ್ಯ ಮನಃಸ್ಥಿತಿ ಮತ್ತು ಆ ಕ್ರೌರ್ಯವನ್ನು ಸಮರ್ಥಿಸಿಕೊಳ್ಳುವ ಕ್ರೂರ ಸುಳ್ಳುಗಳನ್ನು ದೇಶದ ಮುಂದೆ ಅನಾವರಣಗೊಳಿಸಿದ್ದಾರೆ. ಅವರಿಬ್ಬರ ಪ್ರಾಣತ್ಯಾಗವು ಈ ವಿಚಾರಧಾರೆಯನ್ನು ಶಾಶ್ವತವಾಗಿ ಇಲ್ಲವಾಗಿಸಲು ಯಶಸ್ವಿಯಾಗಲಿ.