Saturday, 29 October 2016

ಬಾಲಿವುಡ್‍ನ ನೈತಿಕತೆಯನ್ನು ಪ್ರಶ್ನೆಗೊಳಪಡಿಸಿದ ಬ್ರಾಸ್‍ನನ್

       ಕಳೆದವಾರ ಅಪರೂಪದ ಕ್ಷಮಾಯಾಚನೆಯೊಂದು ನಡೆಯಿತು. ಕ್ಷಮೆ ಯಾಚಿಸಿದವರು ಜೇಮ್ಸ್ ಬಾಂಡ್ ಸಿನಿಮಾ ಖ್ಯಾತಿಯ ಹಾಲಿವುಡ್ ನಟ ಪಿಯರ್ಸ್ ಬ್ರಾಸ್‍ನನ್. ‘ತನ್ನಿಂದಾಗಿ ಯಾರಿಗಾದರೂ ತೊಂದರೆ ಆಗಿದ್ದರೆ ದಯವಿಟ್ಟು ಕ್ಷಮಿಸಿ...’ ಎಂದವರು ಭಾರತೀಯರಲ್ಲಿ ವಿನಂತಿಸಿದ್ದಾರೆ. ಹಾಗಂತ, ಬ್ರಾಸ್‍ನನ್ ಪಾಕಿಸ್ತಾನದವರಲ್ಲ ಅಥವಾ ಹಿಂದಿ ಸಿನಿಮಾ ನಿರ್ದೇಶಕ ಕರಣ್ ಜೋಹರ್‍ರಿಂದ 5 ಕೋಟಿ ರೂಪಾಯಿಯನ್ನು ದರೋಡೆಗೈದು ಭಾರತೀಯ ಸೇನೆಗೆ ನೀಡಲು ಮುಂದಾದವರಲ್ಲಿ ಬ್ರಾಸ್‍ನನ್‍ಗೆ ಯಾವ ಪಾತ್ರವೂ ಇಲ್ಲ. ಪಾನ್ ಬಹಾರ್ ಎಂಬ ಪಾನ್ ಮಸಾಲದ ಉತ್ಪನ್ನದಲ್ಲಿ ಅವರ ಭಾವಚಿತ್ರ ಪ್ರಕಟವಾಗುತ್ತಿದೆ ಎಂಬುದಕ್ಕಾಗಿ ಅವರು ಭಾರತೀಯರ ಕ್ಷಮೆ ಕೋರಿದ್ದಾರೆ. ಕ್ಯಾನ್ಸರ್‍ಕಾರಕ ಅಂಶಗಳುಳ್ಳ ಪಾನ್ ಮಸಾಲದ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿರುವ ಬಗ್ಗೆ ಪ್ರಶ್ನೆಗಳು ಎದುರಾಗಿತ್ತು. ಕ್ಯಾನ್ಸರ್‍ನಿಂದಾಗಿ ಮೊದಲ ಪತ್ನಿ ಮತ್ತು ಮಗಳನ್ನು ಕಳಕೊಂಡಿರುವ ವ್ಯಕ್ತಿಯೋರ್ವ ಕ್ಯಾನ್ಸರ್‍ಕಾರಕ ಉತ್ಪನ್ನಕ್ಕೆ ರೂಪದರ್ಶಿಯಾದುದು ಎಷ್ಟು ಸಮರ್ಥನೀಯ ಎಂಬ ಆಕ್ಷೇಪಗಳೂ ಎದುರಾಗಿದ್ದುವು. ಇದಕ್ಕೆ ಬ್ರಾಸ್‍ನನ್ ಉತ್ತರಿಸಿದ್ದಾರೆ. ತಾನು ಪಾನ್ ಬಹಾರ್ ಉತ್ಪನ್ನಕ್ಕೆ ರೂಪದರ್ಶಿಯೇ ಆಗಿಲ್ಲ ಎಂದೂ ಅವರು ಹೇಳಿದ್ದಾರೆ. ಮಾತ್ರವಲ್ಲ, ತನ್ನ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡ ಕಂಪೆನಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಕ್ಷಣದಿಂದ ತನ್ನ ಭಾವಚಿತ್ರ ಬಳಕೆ ಮಾಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.
       ಅಂದಹಾಗೆ, ಮಾಡದ ತಪ್ಪಿಗೆ ಕ್ಷಮೆ ಕೋರಿದ ಬ್ರಾಸ್‍ನನ್‍ರನ್ನು ನಮ್ಮ ಬಾಲಿವುಡ್‍ನಲ್ಲಿ (ಹಿಂದಿ ಸಿನಿಮಾ ರಂಗ) ತಂದು ಕೂರಿಸಿದರೆ ಏನಾಗಬಹುದು? ಬ್ರಾಸ್‍ನನ್ ದಡ್ಡ ಎನಿಸಿಕೊಳ್ಳಲಾರರೇ? ಕಳೆದ ವರ್ಷ ನಟ-ನಟಿಯರಾದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಪ್ರೀತಿ ಝಿಂಟಾರಿಗೆ ನ್ಯಾಯಾಲಯ ನೋಟೀಸ್ ಜಾರಿ ಮಾಡಿತ್ತು. ಮ್ಯಾಗಿ ಉತ್ಪನ್ನದ ಪ್ರಚಾರದಲ್ಲಿ ಅವರು ಭಾಗಿಯಾಗಿದ್ದುದೇ ಇದಕ್ಕೆ ಕಾರಣವಾಗಿತ್ತು. ಹಾಗಂತ ಅವರು ಭಾರತೀಯರಲ್ಲಿ ಕ್ಷಮೆಯನ್ನೇನೂ ಕೋರಲಿಲ್ಲ. ನಿಜವಾಗಿ, 100 ಕೋಟಿಗಿಂತಲೂ ಅಧಿಕ ಜನಸಂಖ್ಯೆಯಿರುವ ಈ ದೇಶವು ಉತ್ಪನ್ನಗಳ ಪಾಲಿಗೆ ಬಹುದೊಡ್ಡ ಮಾರುಕಟ್ಟೆ. ಯುರೋಪಿನ ಹತ್ತಾರು ರಾಷ್ಟ್ರಗಳನ್ನು ಒಗ್ಗೂಡಿಸಿದರೂ ಲಭ್ಯವಾಗದ ಬೃಹತ್ ಗ್ರಾಹಕ ವರ್ಗವೊಂದು ಭಾರತದಲ್ಲಿ ಲಭ್ಯವಿದೆ. ಈ ವರ್ಗವನ್ನು ತಲುಪಲು ಮತ್ತು ಅವರ ವಿಶ್ವಾಸ ಗಳಿಸಲು ಎರಡು ರೀತಿಯಲ್ಲಿ ಸಾಧ್ಯವಿದೆ ಎಂದು ಕಂಪೆನಿಗಳು ತಿಳಿದುಕೊಂಡಿವೆ. ಒಂದು- ಉತ್ಪನ್ನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಇರುವುದು. ಇನ್ನೊಂದು- ಗುಣಮಟ್ಟಕ್ಕೆ ಕಡಿಮೆ ಮಹತ್ವವನ್ನು ಕೊಟ್ಟು ಜನರನ್ನು ತಲುಪುವ ಸುಲಭ ದಾರಿಗಳನ್ನು ಕಂಡುಕೊಳ್ಳುವುದು. ದುರಂತ ಏನೆಂದರೆ, ಈ ಎರಡನೇ ವಿಧಾನ ಇವತ್ತು ಅತ್ಯಂತ ಫಲಪ್ರದವಾಗಿದೆ. ಸಿನಿಮಾ ನಟರು ಮತ್ತು ಕ್ರೀಡಾಪಟುಗಳನ್ನು ಮದ್ಯ ಕಂಪೆನಿಗಳು ಧಾರಾಳ ಬಳಸಿಕೊಳ್ಳುತ್ತಿವೆ. ತಂಬಾಕು ಕಂಪೆನಿಗಳೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ವಿಸ್ಕಿಯ ಜಾಹೀರಾತಿನಲ್ಲಿ ಶಾರುಕ್ ಖಾನ್, ಪ್ರಿಯಾಂಕ ಚೋಪ್ರಾ ಮತ್ತಿತರರಿದ್ದಾರೆ. ಪಾನ್ ಮಸಾಲಾಗಳ ಜಾಹೀರಾತಿನಲ್ಲಿ ಅಜಯ್ ದೇವ್‍ಗನ್, ಸೈಫ್ ಅಲಿ ಖಾನ್ ಮುಂತಾದವರಿದ್ದಾರೆ. ಇವರಲ್ಲದೇ, ಆರೋಗ್ಯಕ್ಕೆ ಹಾನಿಕರವೆಂದು ಬಗೆಯಲಾದ ತಂಬಾಕುಜನ್ಯ ಉತ್ಪನ್ನಗಳ ಜಾಹೀರಾತಿನಲ್ಲಿ ವಿವಿಧ ಕ್ಷೇತ್ರಗಳ ಪ್ರಸಿದ್ಧರು ಭಾಗಿಯಾಗಿದ್ದಾರೆ. ಈ ಕಾರಣದಿಂದಲೇ, ಅವು ಶರವೇಗದಲ್ಲಿ ಜನರ ನಡುವೆ ಪರಿಚಿತವೂ ಜನಪ್ರಿಯವೂ ಆಗುತ್ತಿದೆ. ಜನರು ತಮ್ಮ ಹೀರೋಗಳ ಹುಚ್ಚು ಅಭಿಮಾನದಲ್ಲಿ ಆ ಉತ್ಪನ್ನಗಳ ಗ್ರಾಹಕರಾಗುತ್ತಾರೆ. ಬಳಿಕ ದಾಸರಾಗುತ್ತಾರೆ. ಇದು ಕಂಪೆನಿಗಳಿಗೂ ಗೊತ್ತು. ನಟಿಸುವವರಿಗೂ ಗೊತ್ತು. ಆದ್ದರಿಂದಲೇ, ಬ್ರಾಸ್‍ನನ್‍ರ ಕ್ಷಮೆ ಕೋರುವಿಕೆ ಮುಖ್ಯವಾಗುವುದು. ಓರ್ವ ‘ಪ್ರಸಿದ್ಧ’ರ ಹೊಣೆಗಾರಿಕೆಗಳು ಏನೇನು? ಅವರು ಬರಿದೇ ರೂಪದರ್ಶಿಗಳು ಮಾತ್ರವೇ? ಸಮಾಜಕ್ಕೂ ಅವರಿಗೂ ಸಂಬಂಧ ಇಲ್ಲವೇ? ಸಾಮಾಜಿಕ ಬದ್ಧತೆ, ಸಾಮಾಜಿಕ ಆರೋಗ್ಯ, ರೋಗಮುಕ್ತ ಸಮಾಜ.. ಮುಂತಾದುವುಗಳಿಗೆ ಅವರ ಕೊಡುಗೆಗಳೇನು? ಇವುಗಳಲ್ಲಿ ಅವರು ವಹಿಸುವ ಪಾತ್ರ ಯಾವುದು? ನಿಜವಾಗಿ, ಬಾಲಿವುಡ್ ಕ್ಷೇತ್ರ ಇವತ್ತು ಅಸ್ತಿತ್ವದಲ್ಲಿರುವುದೇ ಜನರಿಂದಾಗಿ. ಈ ಜನರಲ್ಲಿ ಬಡವರಿದ್ದಾರೆ, ಶ್ರೀಮಂತರಿದ್ದಾರೆ, ಮಹಿಳೆಯರಿದ್ದಾರೆ, ಯುವಕರಿದ್ದಾರೆ. ಈ ಜನರ ಬೆಂಬಲದಿಂದಾಗಿಯೇ ಈ ದೇಶದಲ್ಲಿ ಸಾಮಾನ್ಯನೋರ್ವ ಹೀರೋ ಆಗಿದ್ದಾನೆ/ಳೆ. ಬಾಲಿವುಡ್ ಕ್ಷೇತ್ರದಲ್ಲಿ ಇವತ್ತು ಕೋಟ್ಯಂತರ ರೂಪಾಯಿ ಹೂಡಿಕೆಯಾಗುತ್ತಿದ್ದರೆ, ಅದರ ಹಿಂದಿನ ಧೈರ್ಯ ಈ ಬೃಹತ್ ಬಡವ-ಶ್ರೀಮಂತರನ್ನೊಳಗೊಂಡ ಭಾರತೀಯರೇ. ಹೀಗಿರುವಾಗ, ಈ ಕ್ಷೇತ್ರ ತನ್ನ ಈ ಬೃಹತ್ ಗ್ರಾಹಕ ವರ್ಗವನ್ನು ಏನೆಂದು ಪರಿಗಣಿಸಬೇಕು? ಇವರ ಬಗ್ಗೆ ಯಾವ ನಿಲುವನ್ನು ಹೊಂದಬೇಕು? ತಂಬಾಕು ಉತ್ಪನ್ನಗಳಲ್ಲಿ ಕ್ಯಾನ್ಸರ್‍ಕಾರಕ ಅಂಶಗಳಿವೆ ಎಂಬುದು ತೀರಾ ಬಡ ಭಾರತೀಯನಿಗೆ ಗೊತ್ತಿಲ್ಲದೇ ಇರಬಹುದು. ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕರ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಅಥವಾ ಅದಕ್ಕೆ ಮಹತ್ವ ಕೊಡದ ಭಾರತೀಯ ಇರಬಹುದು. ಆದರೆ ಇವುಗಳ ಪ್ರಚಾರದಲ್ಲಿ ಭಾಗಿಯಾಗುವ ಸಿನಿಮಾ ತಾರೆಯರಿಗೆ ಇದು ಖಂಡಿತ ಗೊತ್ತು. ಗೊತ್ತಿದ್ದೂ ಅದರ ಪ್ರಚಾರದಲ್ಲಿ ಭಾಗಿಯಾಗುತ್ತಾರೆಂದರೆ ಅದನ್ನು ಜನರಿಗೆ ಮಾಡುವ ದ್ರೋಹ ಎಂದಲ್ಲದೇ ಬೇರೇನೆಂದು ಕರೆಯಬೇಕು? ಹಾಗಂತ, ಈ ದ್ರೋಹವನ್ನು ಬರೇ ಉತ್ಪನ್ನಗಳ ಜಾಹೀರಾತಿಗೆ ಮಾತ್ರ ಸೀಮಿತಗೊಳಿಸಬೇಕಾಗಿಲ್ಲ. ಕಲೆಯ ಹೆಸರಲ್ಲಿ ಮೌಲ್ಯಗಳ ಕೊಲೆಯನ್ನೂ ಇಲ್ಲಿ ನಡೆಸಲಾಗುತ್ತದೆ. ಸಾಮಾನ್ಯವಾಗಿ ಸಿನಿಮಾಗಳ ಮೇಲೆ ಪತ್ರಿಕೆಗಳಲ್ಲಿ ವಿಶ್ಲೇಷಣೆ ನಡೆಸುವವರು, ‘ಸದಭಿರುಚಿ’ಯ ಸಿನಿಮಾ ಎಂದು ಬರೆಯುವುದಿದೆ. ‘ಕುಟುಂಬ ಸಮೇತ ಹೋಗಿ ನೋಡಬಹುದಾದ ಚಿತ್ರ’ ಎಂಬ ಸರ್ಟಿಫಿಕೇಟನ್ನೂ ನೀಡುವುದಿದೆ. ಅಂದಹಾಗೆ, ಇಂಥ ಪದ ಬಳಕೆಗಳು ಕೊಡುವ ಸೂಚನೆಯೇನು? ಕುಟುಂಬ ಸಮೇತ ನೋಡಲು ಅಸಾಧ್ಯವಾದ ಮತ್ತು ಸದಭಿರುಚಿಗೆ ವಿರುದ್ಧವಾದ ಸಿನಿಮಾಗಳೂ ತಯಾರಾಗುತ್ತವೆ ಎಂಬುದನ್ನೇ ಅಲ್ಲವೇ?
        ನಿಜವಾಗಿ, ಮಾಡದ ತಪ್ಪಿಗೆ ಬ್ರಾಸ್‍ನನ್ ಕ್ಷಮೆ ಕೋರುವ ಮೂಲಕ ಕೆಲವು ಪ್ರಶ್ನೆಗಳ ಹುಟ್ಟಿಗೆ ಕಾರಣರಾಗಿದ್ದಾರೆ. ಆ ಪ್ರಶ್ನೆ ನೈತಿಕತೆಯದ್ದು. ಸಾಮಾಜಿಕ ಬದ್ಧತೆಯದ್ದು. ವ್ಯಕ್ತಿಯ ಹೊಣೆಗಾರಿಕೆಯದ್ದು. ಓರ್ವ ನಟ ಅಥವಾ ನಟಿ ಅಥವಾ ರೂಪದರ್ಶಿ ಬರೇ ಅಷ್ಟೆಯೇ ಅಥವಾ ಅದರಾಚೆಗೆ ಅವರಿಗೂ ಸಮಾಜಕ್ಕೂ ಸಂಬಂಧ ಇದೆಯೇ? ಒಂದು ಉತ್ಪನ್ನ ಜನರ ಆರೋಗ್ಯವನ್ನು ಕೆಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಾದಲ್ಲಿ ಪ್ರಚಾರಕ ಏನು ಮಾಡಬೇಕು? ‘ತಾನು ಬರೇ ಪ್ರಚಾರಕ, ಉತ್ಪನ್ನದ ಗುಣಮಟ್ಟಕ್ಕೂ ತನಗೂ ಸಂಬಂಧ ಇಲ್ಲ..’ ಎಂಬುದು ಆತನ ನಿಲುವಾಗಬಹುದೇ? ಈ ನಿಲುವು ಸಮರ್ಥನೀಯವೇ? ಅನಾರೋಗ್ಯಕಾರಿಯಾದ ಉತ್ಪನ್ನವನ್ನು ಖರೀದಿಸುವಂತೆ ಆತ ಜನರೊಂದಿಗೆ ವಿನಂತಿಸುವುದು ಅಪರಾಧ ಅಲ್ಲವೇ? ಜನರು ಆ ಉತ್ಪನ್ನದ ಮೇಲೆ ಭರವಸೆ ತಾಳುವಂತೆ ನಟಿಸುವುದು ಜನದ್ರೋಹವಲ್ಲವೇ? ತಮ್ಮನ್ನು ಬೆಳೆಸಿದ ಜನರನ್ನೇ ಈ ಮಟ್ಟದಲ್ಲಿ ಮೂರ್ಖರಾಗಿಸುವುದು ಯಾಕೆ ಕೊಲೆ ಸಂಚು ಎನಿಸಿಕೊಳ್ಳಬಾರದು? ಅಸಂಖ್ಯ ಮಂದಿ ಇವತ್ತು ನಿರ್ದಿಷ್ಟ ಮದ್ಯದ ಬ್ರಾಂಡ್‍ಗೆ, ತಂಬಾಕು ಉತ್ಪನ್ನಗಳಿಗೆ ಅಥವಾ ಜಂಕ್ ಫುಡ್‍ಗಳಿಗೆ ಗ್ರಾಹಕರಾಗಿರುವುದು ಅದರ ಪ್ರಚಾರಕರಾದ ನಟ-ನಟಿಯರಿಂದಾಗಿ. ಅವರೇ ಆ ಉತ್ಪನ್ನದ ವಿಶ್ವಾಸ. ಅವರೇ ಆ ಉತ್ಪನ್ನದ ಗುಣಮಟ್ಟಕ್ಕೆ ಖಾತರಿ. ಅವರ ಮೇಲಿನ ಅಭಿಮಾನದಿಂದಾಗಿ ಆ ಉತ್ಪನ್ನ ಜನರ ಮನೆ ಸೇರುತ್ತದೆ. ಹೊಟ್ಟೆ ತುಂಬುತ್ತದೆ ಮತ್ತು ನಿಧಾನಕ್ಕೆ ಅವರನ್ನೇ ಬಲಿ ಪಡೆಯುತ್ತದೆ. ಆದ್ದರಿಂದಲೇ ಬ್ರಾಸ್‍ನನ್ ಮುಖ್ಯವಾಗುತ್ತಾರೆ.

Friday, 21 October 2016

ಶೇ.16ರ ಮೇಲೆ ಶೇ. 80ರಷ್ಟು ಶಂಕೆ

        ಸಮಾನ ನಾಗರಿಕ ಸಂಹಿತೆಯ ಸ್ವರೂಪವನ್ನು ಸಿದ್ಧಗೊಳಿಸುವ ಉದ್ದೇಶದಿಂದ ರಚಿತವಾದ ಕೇಂದ್ರ ಕಾನೂನು ಆಯೋಗದ ಎದುರು ಹೈದರಾಬಾದ್‍ನ 13ರ ಬಾಲೆಯೋರ್ವಳು ದೊಡ್ಡದೊಂದು ಪ್ರಶ್ನೆಯನ್ನು ಬಿಟ್ಟು ಹೋಗಿದ್ದಾಳೆ. ಹೆಸರು ಆರಾಧನಾ. ಜೈನ ಧರ್ಮಿಯಳು. ಜೈನ ಧರ್ಮದ ಸಂಪ್ರದಾಯದಂತೆ ಪವಿತ್ರ ‘ಚೌಮಾಸ’ದ ಅವಧಿಯಲ್ಲಿ ಈಕೆ 68 ದಿವಸಗಳ ವರೆಗೆ ಉಪವಾಸ ಕೂರುತ್ತಾಳೆ. ಈ ಉಪವಾಸ ಜೈನ ಸಮುದಾಯದಲ್ಲಿ ವೈಭವೀಕರಣಗೊಳ್ಳುತ್ತದೆ. ಭಕ್ತರು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಮದುಮಗಳಂತೆ ಆಕೆಯನ್ನು ಶೃಂಗರಿಸಲಾಗುತ್ತದೆ. ಆಕೆ ಇವುಗಳಿಂದ ರೋಮಾಂಚಿತಳಾಗುತ್ತಾಳೆ. ಜೈನ ಧರ್ಮದ ಹಿರಿಯರು ಅನ್ನ, ನೀರನ್ನು ತ್ಯಜಿಸಿ ಸ್ವಇಚ್ಛೆಯಿಂದ ದೇಹ ತ್ಯಾಗಮಾಡುವುದಕ್ಕಾಗಿ ‘ಸಲ್ಲೇಖನಾ ವೃತ’ ಕೈಗೊಳ್ಳುವುದು ಸಹಜವಾಗಿದ್ದರೂ ಮತ್ತು ವೈಯಕ್ತಿಕ ಹಕ್ಕಾಗಿ ಅದು ಪರಿಗಣಿತವಾಗಿದ್ದರೂ ಬಾಲೆಯೋರ್ವಳು ದೀರ್ಘ ಉಪವಾಸಕ್ಕೆ ಮುಂದಾಗುವುದು ಹೊಸತು. ಸ್ವಧರ್ಮೀಯರ ಗೌರವ ಮತ್ತು ಭಾವುಕತೆಯು ಆ ಬಾಲೆಯನ್ನು ನಿಗದಿತ 68 ದಿನಗಳ ಕಾಲ ಉಪವಾಸ ಪೂರ್ತಿಗೊಳಿಸುವಂತೆ ಒತ್ತಡಕ್ಕೆ ತಳ್ಳುತ್ತದೆ. ಆಕೆ ಉಪವಾಸ ಪೂರ್ತಿಗೊಳಿಸುತ್ತಾಳೆ. ಈ ಧಾರ್ಮಿಕ ಉಪವಾಸವನ್ನು ಪ್ರಶಂಸಿಸಿ ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾಗುತ್ತದೆ. ಸಮಾರಂಭ ಏರ್ಪಾಡಾಗುತ್ತದೆ. ಗಣ್ಯರು ಭಾಗವಹಿಸುತ್ತಾರೆ. ಇದಾಗಿ ಎರಡು ದಿನಗಳಲ್ಲಿ ಈಕೆ ಅಸ್ವಸ್ಥಗೊಳ್ಳುತ್ತಾಳೆ. ಬಹು ಅಂಗಾಂಗಗಳ ವೈಫಲ್ಯದಿಂದಾಗಿ ಸಾವಿಗೀಡಾಗುತ್ತಾಳೆ. ಆದರೆ ಈ ಸಾವೂ ವೈಭವೀಕರಣಗೊಳ್ಳುತ್ತದೆ. ‘ಬಾಲ ತಪಸ್ವಿ’ ಎಂದು ಕೊಂಡಾಡಲಾಗುತ್ತದೆ. ಅಂತಿಮ ಸಂಸ್ಕಾರದ ಮೆರವಣಿಗೆಯಲ್ಲಿ 600ಕ್ಕಿಂತಲೂ ಅಧಿಕ ಮಂದಿ ಪಾಲುಗೊಳ್ಳುತ್ತಾರಲ್ಲದೇ ಅಂತಿಮ ಮೆರವಣಿಗೆಗೆ ‘ಶೋಭಾಯಾತ್ರೆ’ ಎಂದು ಹೆಸರಿಸಲಾಗುತ್ತದೆ. ದುರಂತ ಏನೆಂದರೆ, ಈ ಬಾಲೆಯ ಸಾವಿನ ಒಂದು ವಾರದ ಬಳಿಕ ಬಿಡುಗಡೆಗೊಂಡ ಕಾನೂನು ಆಯೋಗದ 16 ಪ್ರಶ್ನೆಗಳಲ್ಲಿ ಈ ಮಗು ಎತ್ತಿದ ಬಹುಮುಖ್ಯ ಪ್ರಶ್ನೆಗೆ ಯಾವ ಸ್ಥಾನವನ್ನೂ ಕೊಟ್ಟಿಲ್ಲ. ನನ್ನ ಮೃತ್ಯುವನ್ನು ಯಾವ ಪಟ್ಟಿಯಲ್ಲಿ ಸೇರಿಸುತ್ತೀರಿ? ಇದು ವೈಯಕ್ತಿಕ ಹಕ್ಕೋ ಅಥವಾ ಹಿಂಸೆಯೋ ಅಥವಾ ಆತ್ಮಹತ್ಯೆಯೋ? ನನ್ನ ಹಿರಿಯರು ಕೈಗೊಳ್ಳುವ ಸಲ್ಲೇಖನಾ ವೃತದ ವ್ಯಾಖ್ಯಾನ ಏನು? ಅದು ಜೈನ ಧರ್ಮೀಯರ ವೈಯಕ್ತಿಕ ಹಕ್ಕುಗಳ ಚೌಕಟ್ಟಿನೊಳಗೆ ಬರುತ್ತದೋ ಅಥವಾ ಅದನ್ನು ಆತ್ಮಹತ್ಯೆಯ ಪ್ರಯತ್ನ ಎಂದು ಪರಿಗಣಿಸುತ್ತೀರೋ? ಹಾಗಂತ, ಪ್ರಶ್ನೆ ಇಲ್ಲಿಗೇ ಮುಗಿಯುವುದಿಲ್ಲ. ಹಿಂದೂ ಸಮುದಾಯದಲ್ಲಿ ವಿಧವೆಯರು ಅಸಹಜ ಬದುಕನ್ನು ಬದುಕುತ್ತಿದ್ದಾರೆ. ಪ್ರತಿ ವರ್ಷ ಹೋಳಿ, ದೀಪಾವಳಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ವೃಂದಾವನದಲ್ಲಿ ವಿಧವೆಯರು ಸುದ್ದಿಗೀಡಾಗುವುದಿದೆ. ಪತಿಯನ್ನು ಕಳೆದುಕೊಂಡು ವಿಧವೆಯಾದವರು ತಮ್ಮ ಉಳಿದ ಬದುಕನ್ನು ಶ್ರೀಕೃಷ್ಣನ ಭಜನೆ ಮಾಡುತ್ತಾ ವೃಂದಾವನದಲ್ಲಿ ಕಳೆಯುವುದು ಮೋಕ್ಷಾರ್ಹ ಎಂದು ಹಿಂದೂ ಧರ್ಮೀಯರಲ್ಲಿ ನಂಬಿಕೆಯಿದೆ. ಇಂಥ ಸಾವಿರಾರು ವಿಧವೆಯರ ದಯನೀಯ ಬದುಕಿನ ಕುರಿತಂತೆ ಮೂರ್ನಾಲ್ಕು ವರ್ಷಗಳ ಹಿಂದೆ ಸುಪ್ರೀಮ್ ಕೋರ್ಟ್ ತೀವ್ರ ಅಘಾತವನ್ನು ವ್ಯಕ್ತಪಡಿಸಿತ್ತು. ವೃಂದಾವನದಲ್ಲಿ ಸಾವಿಗೀಡಾಗುವ ವಿಧವೆಯರನ್ನು ಕತ್ತರಿಸಿ ಗೋಣಿ ಚೀಲದಲ್ಲಿ ಹಾಕಿ ಎಸೆಯುತ್ತಿರುವ ಘಟನೆಗಳ ಕುರಿತಂತೆ ಓರ್ವ ಅರ್ಜಿದಾರರು ಕೋರ್ಟ್‍ನ ಗಮನಕ್ಕೆ ತಂದಿದ್ದರು. ಕೃಷ್ಣನ ಭಜನೆ ಮಾಡುತ್ತಾ ತುತ್ತು ಅನ್ನಕ್ಕಾಗಿ ಪರದಾಡುವ ಅವರ ಸ್ಥಿತಿಯನ್ನು ಅರ್ಜಿಯಲ್ಲಿ ವಿವರಿಸಲಾಗಿತ್ತು. ಎಷ್ಟೋ ವಿಧವೆಯರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಕುಟುಂಬಸ್ಥರು ಬಲವಂತದಿಂದ ಅಲ್ಲಿ ಬಿಟ್ಟು ಹೋಗುತ್ತಿದ್ದರು. ಈ ಬಗ್ಗೆ ಕೋರ್ಟು ತನಿಖೆಗೂ ಆದೇಶಿಸಿತ್ತು. ಪ್ರಶ್ನೆ ಇದಲ್ಲ. ಇದು ಮಹಿಳೆಯರ ಮೇಲೆ ಎಸಗಲಾಗುವ ದೌರ್ಜನ್ಯವೋ, ಹಕ್ಕು ಹರಣವೋ, ಗೌರವವೋ ಆಥವಾ ಧಾರ್ಮಿಕ ವಿಧಿಯೋ? ಕಾನೂನು ಆಯೋಗದ ನಿಲುವೇನು? ಅದು ಬಿಡುಗಡೆಗೊಳಿಸಿದ 16 ಪ್ರಶ್ನೆಗಳಲ್ಲಿ ಅರಾಧನಳ ಪ್ರಶ್ನೆಗಳಿಗೆ, ವೃಂದಾವನದ ವಿಧವೆಯರ ಪ್ರಶ್ನೆಗಳಿಗೆ ಮತ್ತು ಮಠ-ಮಂದಿರಗಳಲ್ಲಿರುವ ಪಂಕ್ತಿಬೇಧ, ಮಡೆಸ್ನಾನದಂಥ ಹತ್ತಾರು ಸಂಪ್ರದಾಯಗಳಿಗೆ ಸಂಬಂಧಿಸಿ ಯಾವ ಪ್ರಶ್ನೆಯನ್ನೂ ಕೇಳಿಲ್ಲವಲ್ಲ, ಯಾಕೆ? 16 ಪ್ರಶ್ನೆಗಳಲ್ಲಿ ಮುಸ್ಲಿಮರ ವೈಯಕ್ತಿಕ ಹಕ್ಕುಗಳನ್ನೇ ಹೆಚ್ಚಾಗಿ ಶಂಕೆಯ ಮೊನೆಯಲ್ಲಿ ನಿಲ್ಲಿಸಿರುವುದೇಕೆ? ಈ ದೇಶದಲ್ಲಿ ಮುಸ್ಲಿಮರಿರುವುದು ಕೇವಲ 18 ಕೋಟಿ. ಇವರಿಗೆ ಹೋಲಿಸಿದರೆ ಹಿಂದೂಗಳ ಜನಸಂಖ್ಯೆ 80 ಕೋಟಿಯಷ್ಟಿದೆ. ಆದರೆ, ಕಾನೂನು ಆಯೋಗದ ಶಂಕೆಗೆ ಒಳಗಾಗಿರುವ ಪ್ರಶ್ನೆಗಳಲ್ಲಿ 80%ವೂ ನೇರವಾಗಿಯೋ ಪರೋಕ್ಷವಾಗಿಯೋ ಮುಸ್ಲಿಮರಿಗೇ ಸಂಬಂಧಿದವು. ಯಾಕೆ ಹೀಗೆ? ಕೇಂದ್ರದ ಉದ್ದೇಶವು ಶುದ್ಧವಾಗಿದ್ದರೆ ವಿವಾಹ, ತಲಾಕ್, ಜೀವನಾಂಶ, ದತ್ತು ಸ್ವೀಕಾರ, ಬಹುಪತ್ನಿತ್ವ... ಮುಂತಾದ ಮುಸ್ಲಿಮ್ ವೈಯಕ್ತಿಕ ನಿಯಮಗಳಡಿಯಲ್ಲಿ ಬರುವ ವಿಷಯಗಳೇ ಯಾಕೆ ಕಾಣಿಸಿಕೊಳ್ಳುತ್ತಿತ್ತು? ಅಷ್ಟಕ್ಕೂ, ಈ 16 ಪ್ರಶ್ನೆಗಳು ಕೊಡುವ ಸೂಚನೆಯೇನು? ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆ ಇಷ್ಟು ವಿಷಯಗಳಿಗೆ ಸಂಬಂಧಿಸಿ ಮಾತ್ರ ರಚನೆಗೊಳ್ಳುತ್ತದೆ ಎಂದೇ ಅಲ್ಲವೇ? ಯಾಕೆ ಮುಸ್ಲಿಮರ ವೈಯಕ್ತಿಕ ನಿಯಮಗಳಿಗೆ ಸಂಬಂಧಿಸಿದಂತೆ ಮಾತ್ರ ಸಮಾನ ನಾಗರಿಕ ಸಂಹಿತೆ ರಚನೆಯಾಗಬೇಕು? ಇತರೆಲ್ಲ ವಿಷಯಗಳನ್ನು ಯಾಕೆ ಇದರಿಂದ ಹೊರಗಿಡಲಾಗಿದೆ? 16 ಪ್ರಶ್ನೆಗಳಲ್ಲಿ ಪಂಕ್ತಿಬೇಧ, ಮಡೆಸ್ನಾನ, ವಿಧವೆಯರ ಸಂಕಟ, ಸಲ್ಲೇಖನಾ ವ್ರತ... ಸಹಿತ ಈ ದೇಶದ ವಿವಿಧ ಜಾತಿ-ಧರ್ಮಗಳಲ್ಲಿರುವ ನೂರಾರು ವೈಯಕ್ತಿಕ ನಿಯಮಗಳ ಬಗ್ಗೆ ಯಾವ ಉಲ್ಲೇಖವೂ ಇಲ್ಲವೇಕೆ? ಮುಸ್ಲಿಮರ ವೈಯಕ್ತಿಕ ಹಕ್ಕನ್ನು ರದ್ದು ಪಡಿಸುವುದೇ ಈ ಸಂಹಿತೆಯ ಮುಖ್ಯ ಉದ್ದೇಶ ಎಂಬುದೇ ಇದು ಕೊಡುವ ಸೂಚನೆಯಲ್ಲವೇ? ಸಮತೋಲನಕ್ಕಾಗಿ ಮಾತ್ರ ಪ್ರಶ್ನಾವಳಿಯಲ್ಲಿ ಕೈಸ್ತರ ಕ್ಯೂರಿಂಗ್ ಪದ್ಧತಿಯನ್ನು, ಅಂತರ್ಜಾತಿ ಮದುವೆಯಂಥ ಒಂದೆರಡು ವಿಷಯಗಳನ್ನು ಸೇರಿಸಲಾಗಿದೆ ಎಂದು ಅನಿಸುವುದಿಲ್ಲವೇ? 20%ಕ್ಕಿಂತ ಕಡಿಮೆ ಇರುವ ಸಮುದಾಯದಲ್ಲಿ 80%ಕ್ಕಿಂತ ಅಧಿಕ ಸಮಸ್ಯೆಗಳನ್ನು ಪತ್ತೆ ಹಚ್ಚುವುದು ಮತ್ತು 80% ಇರುವ ಸಮುದಾಯದಲ್ಲಿ ಗಂಭೀರವಾದ ಸಮಸ್ಯೆಗಳೇ ಕಾಣದಿರುವುದು ಏನನ್ನು ಸೂಚಿಸುತ್ತದೆ? ಅಂದಹಾಗೆ,
      ಮುಸ್ಲಿಮರ ವಿವಾಹ, ತಲಾಕ್, ಬಹುಪತ್ನಿತ್ವ, ಜೀವನಾಂಶ, ದತ್ತು ಸ್ವೀಕಾರ ಮುಂತಾದುವುಗಳ ಬಗ್ಗೆ ಪ್ರಶ್ನೆ ಕೇಳುವುದಕ್ಕಿಂತ ಮೊದಲು ಉತ್ತರಿಸುವವರ ಅರ್ಹತೆಯನ್ನೂ ಪರಿಶೀಲಿಸಬೇಡವೇ? ಕ್ರೈಸ್ತರ ವಿಚ್ಛೇದನ ಪ್ರಕ್ರಿಯೆಯ ಭಾಗವಾಗಿರುವ ಎರಡು ವರ್ಷಗಳ ಕ್ಯೂರಿಂಗ್ ಅವಧಿಯ ಕುರಿತು ಈ ದೇಶದಲ್ಲಿ ಎಷ್ಟಂಶ ಮಾಹಿತಿಯಿದೆ? ಕಾನೂನು ಆಯೋಗ ಬಿಡುಗಡೆಗೊಳಿಸಿರುವ 16 ಪ್ರಶ್ನೆಗಳಿಗೆ ದೇಶದ ಧಾರ್ಮಿಕ, ಸಾಮಾಜಿಕ, ಸ್ವಯಂಸೇವಾ ಸಂಘಟನೆಗಳು, ಅಲ್ಪಸಂಖ್ಯಾತ ವಿಭಾಗಗಳು, ರಾಜಕೀಯ ಪಕ್ಷಗಳು, ಸರಕಾರಿ ಸಂಸ್ಥೆ ಮತ್ತಿತರ ಸಂಘ ಸಂಸ್ಥೆಗಳು 45 ದಿನಗಳೊಳಗೆ ಉತ್ತರಿಸಬೇಕೆಂದು ಗಡುವು ವಿಧಿಸುವಾಗ ಅವು ಉತ್ತರಿಸುವುದಕ್ಕೆ ಎಷ್ಟು ಅರ್ಹ ಎಂಬುದನ್ನೂ ನೋಡಬೇಡವೇ? 20% ದಷ್ಟು ಇರುವ ಅಲ್ಪಸಂಖ್ಯಾತ ವಿಭಾಗಗಳ ಸಂಘ ಸಂಸ್ಥೆಗಳು ಎಷ್ಟಿರಬಹುದು? 80% ಜನಸಂಖ್ಯೆಯಿರುವ ಸಮುದಾಯದಲ್ಲಿ ಸಂಘ ಸಂಸ್ಥೆಗಳು ಎಷ್ಟಿರಬಹುದು? ತಲಾಕ್, ಜೀವನಾಂಶ, ಕ್ಯೂರಿಂಗ್... ಮುಂತಾದುವುಗಳ ಬಗ್ಗೆ ಇವುಗಳಿಂದ ವ್ಯಕ್ತವಾಗುವ ಉತ್ತರಗಳು ಹೇಗಿರಬಹುದು? ಯಾವುದು ಬಹುಮತವನ್ನು ಪಡೆಯಬಹುದು?
       ಈ ದೇಶದಲ್ಲಿ ಮುಸ್ಲಿಮ್ ವೈಯಕ್ತಿಕ ನಿಯಮಗಳ ಬಗ್ಗೆ ಎಷ್ಟು ಅಜ್ಞಾನವಿದೆ ಎಂಬುದಕ್ಕೆ ತಲಾಕ್‍ನ ಸುತ್ತ ಹೆಚ್ಚಿನ ಟಿವಿ ವಾಹಿನಿಗಳಲ್ಲಿ ನಡೆಯುತ್ತಿರುವ ಚರ್ಚೆಗಳೇ ಸಾಕ್ಷಿ. ವಿಚ್ಛೇದನ ಎಂಬ ಕನ್ನಡ ಪದದ ಪರ್ಯಾಯ ಪದ ತಲಾಕ್ ಎಂಬುದೇ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ತ್ರಿವಳಿ ತಲಾಕ್‍ನ ಬಗ್ಗೆ ಎಷ್ಟು ಘೋರ ತಪ್ಪು ತಿಳುವಳಿಕೆಯಿದೆಯೆಂದರೆ, ಪತಿ-ಪತ್ನಿ ಮೂರ್ನಾಲ್ಕು ವರ್ಷಗಳಿಂದ ವಿಚ್ಛೇದನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕೊನೆಗೆ ತಲಾಕ್, ತಲಾಕ್, ತಲಾಕ್ ಎಂದು ಹೇಳಿ ಬಿಟ್ಟರೆ ಅದನ್ನೇ ತ್ರಿವಳಿ ತಲಾಕ್ ಎಂದು ಹೇಳಿಬಿಡುವಷ್ಟು. ನಿಜವಾಗಿ, ತಲಾಕ್‍ನ ದುರುಪಯೋಗವಾಗಿರುವುದಕ್ಕಿಂತ ಹೆಚ್ಚು ಈ ದೇಶದಲ್ಲಿ ಸತ್ಯದ ದುರುಪಯೋಗವಾಗಿದೆ. ಸುಳ್ಳಿನ ವೈಭವೀಕರಣವಾಗಿದೆ. ಇದಕ್ಕೆ ಕಾನೂನು ಆಯೋಗದ 16 ಪ್ರಶ್ನೆಗಳು ಪರಿಹಾರ ಅಲ್ಲ. ಮುಸ್ಲಿಮ್ ಸಮುದಾಯದೊಳಗೆ ಇವತ್ತು ಸುಧಾರಣಾ ಕ್ರಾಂತಿಯೊಂದು ಚಾಲನೆಯಲ್ಲಿದೆ. ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಜಾಗೃತಿಯನ್ನು ಮೂಡಿಸುವಲ್ಲಿ ಈ ಕ್ರಾಂತಿ ಇವತ್ತು ಯಶಸ್ವಿಯಾಗಿದೆ. ತಲಾಕ್ ದುರುಪಯೋಗದ ವಿಷಯದಲ್ಲೂ ಇದು ಖಂಡಿತ ಸಾಧ್ಯವಾಗುತ್ತದೆ. 30 ವರ್ಷಗಳ ಹಿಂದಿನ ಪರಿಸ್ಥಿತಿಗೂ ಇವತ್ತಿಗೂ ನಡುವೆ ಹೋಲಿಸಿದರೆ ಈ ಕ್ಷೇತ್ರದಲ್ಲಾದ ಮಹತ್ತರ ಸುಧಾರಣೆ ಬರಿಗಣ್ಣಿಗೂ ಕಾಣುವಂತಹದ್ದು. ಇದು ಕಾನೂನಿನ ಸಮಸ್ಯೆಯಲ್ಲ. ಆಂತರಿಕ ಸುಧಾರಣೆಗೆ ಸಂಬಂಧಿಸಿದ್ದು. ಆದರೆ ರಾಜಕೀಯಕ್ಕೆ ಇವೆಲ್ಲ ಬೇಕಿಲ್ಲ, ಅಷ್ಟೇ.

Monday, 17 October 2016

ಆಧುನಿಕ ಜೀವನ ವಿಧಾನವನ್ನು ಪ್ರಶ್ನೆಗೊಳಪಡಿಸಿದ ಮಗು

      ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟೊಯೋಟಾ ಮೋಟಾರು ಕಂಪೆನಿಯು ಕಳೆದವಾರ ಜಪಾನ್‍ನಲ್ಲಿ ತನ್ನ ಹೊಸ ಉತ್ಪನ್ನವನ್ನು ಬಿಡುಗಡೆಗೊಳಿಸಿತು. ಹೆಸರು ಕಿರೋಬೋ ಮಿನಿ. ರೊಬೋಟ್ ಮಗು. ಈ ಮಗು ಕಣ್ಣು ಮಿಟುಕಿಸುತ್ತದೆ. ಮಗುವಿನ ಭಾಷೆಯಲ್ಲಿ ಮುದ್ದಾಗಿ ಮಾತಾಡುತ್ತದೆ. ಅತ್ತಿತ್ತ ಜೋಲಿ ಹೊಡೆಯುತ್ತದೆ. ಪುಟ್ಟ ಮಗುವಿನ ಆಕಾರದಲ್ಲಿ ಅದನ್ನು ವಿನ್ಯಾಸ ಮಾಡಲಾಗಿದೆ. ಮಕ್ಕಳಿಲ್ಲದವರಿಗೆ ಒಂದು ಮಗುವನ್ನು ಒದಗಿಸುವ ಪ್ರಯತ್ನ ಟೊಯೋಟಾ ಕಂಪೆನಿಯದು. ಜೀವಂತ ಮಗುವಿಗೆ ಹೋಲಿಸಿದರೆ ಈ ಮಗು ತಾಂತ್ರಿಕವಾಗಿ ಹೆಚ್ಚು ಮುಂದು. ಕ್ಯಾಮರಾ, ಬ್ಲೂಟೂತ್ ಮತ್ತು ಮೈಕ್ರೋಫೋನ್‍ಗಳಿಂದ ಈ ಮಗು ಸಜ್ಜಿತವಾಗಿದೆ. ಮುಂದಿನ ವರ್ಷ ಈ ಮಗುವಿನಲ್ಲಿ ಇನ್ನಷ್ಟು ಮಗುತನವನ್ನು ಅಳವಡಿಸಿ ಬಿಡುಗಡೆಗೊಳಿಸುವುದು ಕಂಪೆನಿಯ ಗುರಿ. ಜಪಾನ್‍ನಲ್ಲಿ ಸದ್ಯ ಕಿರೋಬೋ ಮಿನಿ ಸುದ್ದಿಯಲ್ಲಿದೆ. ಅದರ ಮಗುತನ ಮತ್ತು ಬೆಲೆಯ ಬಗ್ಗೆ ಸಾರ್ವಜನಿಕರಲ್ಲಿ ಜಿಜ್ಞಾಸೆ ಪ್ರಾರಂಭವಾಗಿದೆ. ಅಷ್ಟಕ್ಕೂ, ಈ ಕಿರೋಬೋ ಮಿನಿಯನ್ನು ಬಿಡುಗಡೆಗೊಳಿಸಲು ಟೊಯೋಟಾ ಕಂಪೆನಿ ಭಾರತದ ಬದಲು ಜಪಾನನ್ನು ಯಾಕೆ ಆಯ್ಕೆ ಮಾಡಿಕೊಂಡಿತು ಎಂಬ ಪ್ರಶ್ನೆ ಸಹಜವಾದುದು. ಅತ್ಯಧಿಕ ಜನಸಂಖ್ಯೆ ಇರುವ ದೇಶ ನಮ್ಮದು. ಜನಸಂಖ್ಯೆ ಹೆಚ್ಚಿದ್ದ ಕಡೆ ವ್ಯಾಪಾರವೂ ಹೆಚ್ಚಾಗುತ್ತದೆ. ಭಾರತದ ಜನಸಂಖ್ಯೆಗೆ ಹೋಲಿಸಿದರೆ ತೀರಾ ಅತ್ಯಲ್ಪವೆನ್ನಬಹುದಾದ ಜನಸಂಖ್ಯೆ ಜಪಾನ್‍ನದ್ದು. ಆದರೂ ಕಿರೋಬೋ ಮಿನಿ ಜಪಾನ್‍ನಲ್ಲೇ ಯಾಕೆ ಬಿಡುಗಡೆಗೊಂಡಿದೆ ಎಂಬ ಪ್ರಶ್ನೆಗೆ ಉತ್ತರವೂ ಈ ಜನಸಂಖ್ಯೆಯೇ. ಜಪಾನ್‍ನಲ್ಲಿ ಮಕ್ಕಳು ಹುಟ್ಟುತ್ತಿಲ್ಲ. ಯುವ ತಲೆಮಾರಿನಲ್ಲಿ ಮಗು ಜನಪ್ರಿಯವಾಗುತ್ತಿಲ್ಲ. ಜಪಾನ್‍ನ ಪ್ರತಿ 10 ಯುವತಿಯರಲ್ಲಿ ಓರ್ವಳು ಮದುವೆಯೇ ಆಗುತ್ತಿಲ್ಲ. ಇನ್ನು, ಮದುವೆಯಾದವರಲ್ಲೂ ಮಕ್ಕಳ ಬಗ್ಗೆ ತೀವ್ರ ನಿರಾಸಕ್ತಿ ಬೆಳೆಯುತ್ತಿದೆ. ಮಕ್ಕಳು ರಹಿತ ಕುಟುಂಬ ಎಂಬುದು ಜಪಾನ್‍ನಲ್ಲಿ ಇವತ್ತು ಅಚ್ಚರಿಯ ವಿಷಯವಲ್ಲ. ಹೆರಿಗೆಯನ್ನು ಇಷ್ಟಪಡದ ಜೀವನ ವಿಧಾನ ಅಲ್ಲಿ ಜನಪ್ರಿಯವಾಗತೊಡಗಿದೆ. ಕಿರೋಬೋ ಮಿನಿಯನ್ನು ಬಿಡುಗಡೆಗೊಳಿಸಲು ಟೊಯೋಟಾ ಕಂಪೆನಿ ಜಪಾನ್ ಅನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಹಿನ್ನೆಲೆಯಾಗಿರುವುದೂ ಇದುವೇ. ಜಪಾನಿಗರಿಗೆ ಮಗು ಬೇಕು. ಅದರ ತುಂಟಾಟಗಳೂ ಬೇಕು. ಆದರೆ ಆ ಮಗುವನ್ನು ಹೊಂದುವ ಪ್ರಕ್ರಿಯೆಯನ್ನು ಅವರು ಇಷ್ಟಪಡುವುದಿಲ್ಲ. ಗರ್ಭಧಾರಣೆ, ಪ್ರಸವ, ಮಗುವಿನ ಲಾಲನೆ-ಪಾಲನೆ ಇವೆಲ್ಲವನ್ನೂ ಅವರು ಅತ್ಯಂತ ತ್ರಾಸದಾಯಕವಾಗಿ ಪರಿಗಣಿಸತೊಡಗಿದ್ದಾರೆ. ಬಹುಶಃ, ಆಧುನಿಕ ಮತ್ತು ಸಾಂಪ್ರದಾಯಿಕ ಜೀವನ ದೃಷ್ಟಿಕೋನಗಳ ನಡುವಿನ ಸಂಘರ್ಷ ಇದು. ಸಾಂಪ್ರದಾಯಿಕ ಜೀವನ ಕ್ರಮದಲ್ಲಿ ಮದುವೆ ಒಂದು ಹೊಣೆಗಾರಿಕೆ. ಪ್ರೌಢರಾದ ಹೆಣ್ಣು ಮತ್ತು ಗಂಡನ್ನು ಶಾಸ್ತ್ರೋಕ್ತವಾಗಿ ಒಂದಾಗಿಸುವುದನ್ನು ತಮ್ಮ ಧಾರ್ಮಿಕ ಹೊಣೆಗಾರಿಕೆ ಎಂದು ಸಮಾಜ ಭಾವಿಸುತ್ತದೆ. ಆ ಪ್ರಕ್ರಿಯೆಯಲ್ಲಿ ಕೆಲವು ನಿಯಮಗಳಿವೆ. ಗಂಡು-ಹೆಣ್ಣಿನ ಪ್ರಕೃತಿ ಸಹಜ ಆಕರ್ಷಣೆಯನ್ನು ಮಾನ್ಯ ಮಾಡುವುದಷ್ಟೇ ಈ ಜೋಡಿಯಾಗಿಸುವುದರ ಉದ್ದೇಶ ಅಲ್ಲ. ಅಲ್ಲಿ ಮಗುವಿನ ಬೇಡಿಕೆಯೂ ಇರುತ್ತದೆ. ಆವರೆಗೆ ಬರೇ ಹೆಣ್ಣು ಮತ್ತು ಗಂಡು ಆಗಿದ್ದವರು ಈ ಮದುವೆಯ ಮೂಲಕ ಪತಿ-ಪತ್ನಿಯರಾಗುತ್ತಾರೆ. ಆ ಬಳಿಕ ತಂದೆ ಮತ್ತು ತಾಯಿಯಾಗಬೇಕು. ಆ ಬಳಿಕ ಅಜ್ಜ-ಅಜ್ಜಿಯಾಗಬೇಕು. ಹೀಗೆ ಮಗುತನದಿಂದ ಮಾಗಿ, ಪ್ರೌಢರಾಗಿ, ದಂಪತಿಗಳೆನಿಸಿಕೊಂಡು, ಹೆತ್ತವರಾಗಿ ಮತ್ತು ಕೊನೆಗೆ ಮಗುವನ್ನು ಲಾಲಿಸುವ ಹಿರಿಯರಾಗಿ ವಿಕಾಸ ಹೊಂದುತ್ತಾ ಹೋಗುವುದನ್ನು ಸಾಂಪ್ರದಾಯಿಕ ಜೀವನ ಕ್ರಮದಲ್ಲಿ ಪ್ರಕೃತಿ ಸಹಜ ಪ್ರಕ್ರಿಯೆಯಾಗಿ ಒಪ್ಪಿಕೊಳ್ಳಲಾಗಿದೆ. ಬಹುಶಃ, ಈ ಜೀವನ ದೃಷ್ಟಿಕೋನವನ್ನು ಇವತ್ತಿನ ತಂತ್ರಜ್ಞಾನಾಧಾರಿತ ಜೀವನ ವಿಧಾನ ಪ್ರಶ್ನೆಗೊಳಪಡಿಸುತ್ತಿದೆ. ಕಿರೋಬೋ ಮಿನಿ ಈ ಪ್ರಶ್ನೆಯಿಂದ ಹುಟ್ಟಿಕೊಂಡ ಕೂಸು. ಜಪಾನ್‍ನ ಜನಸಂಖ್ಯೆಯ ಕಾಲುಭಾಗದಷ್ಟು ಮಂದಿ ಇವತ್ತು 65 ವರ್ಷವನ್ನು ದಾಟಿದವರಾಗಿದ್ದಾರೆ. ಕೈಗಾರಿಕಾ ಕ್ಷೇತ್ರ ಜನಸಂಪತ್ತಿನ ಬರವನ್ನು ಎದುರಿಸುತ್ತಿದೆ. ಜಗತ್ತಿನಲ್ಲಿಯೇ ಇಂಡಸ್ಟ್ರಿಯಲ್ ರೋಬೋಟ್ ಅನ್ನು ಬಳಸುವ ರಾಷ್ಟ್ರಗಳ ಪಟ್ಟಿಯಲ್ಲಿ ಜಪಾನ್ ಅತ್ಯಂತ ಮುಂದಿದೆ. ಮನುಷ್ಯರ ಬದಲಿಗೆ ರೋಬೋಟ್‍ಗಳನ್ನು ಮನೆ, ಕಚೇರಿ, ಉತ್ಪಾದನಾ ರಂಗದಲ್ಲಿ ಬಳಸುವುದಕ್ಕೆ ಮುಂದಾಗಲೇಬೇಕಾದ ಅನಿವಾರ್ಯತೆಯನ್ನು ಅದು ಇವತ್ತು ಎದುರಿಸುತ್ತಿದೆ.   
       
     ನಿಜವಾಗಿ, ಕಿರೋಬೋ ಮಿನಿಯನ್ನು ನಾವು ಕಂಪ್ಯೂಟರ್, ಮೊಬೈಲ್, ಟಿ.ವಿ., ರೇಡಿಯೋಗಳಂತೆ ಬರೇ ಒಂದು ಉತ್ಪನ್ನವಾಗಿ ಪರಿಗಣಿಸುವಂತಿಲ್ಲ. ಈ ಉತ್ಪನ್ನಗಳಿಂದಾಗಿ ಮಾನವನ ಬಳಕೆಯು ಕಡಿಮೆಯಾಗಿರಬಹುದು. ಒಂದು ಕಂಪ್ಯೂಟರ್‍ಗೆ 10 ಮಂದಿಯ ಕೆಲಸವನ್ನು ಮಾಡುವ ಸಾಮರ್ಥ್ಯ ಇರಬಹುದು. ಆದರೆ ಅದು ಮಗುರಹಿತ ಪರ್ಯಾಯ ಜಗತ್ತನ್ನು ಕಲ್ಪಿಸಿಕೊಂಡು ಬಂದಿರುವುದಲ್ಲ. ಆದರೆ ಕಿರೋಬೋ ಮಿನಿಯ ಹುಟ್ಟೇ ಮಗುರಹಿತ ಜಗತ್ತನ್ನು ಗುರಿಯಾಗಿಸಿಕೊಂಡಿದೆ. ಆದ್ದರಿಂದಲೇ, ಕಿರೋಬೋ ಮಿನಿಯನ್ನು ನಾವು ನಮ್ಮ ಜೀವನ ಪದ್ಧತಿಯ ಬಗ್ಗೆ ಅವಲೋಕನ ನಡೆಸಲು ಅವತರಿಸಿರುವ ಮಗು ಎಂಬ ನೆಲೆಯಲ್ಲಿ ಪರಿಗಣಿಸಬೇಕಾಗಿದೆ. ತಂತ್ರಜ್ಞಾನಾಧಾರಿತ ಜೀವನ ಕ್ರಮದಲ್ಲಿ ಒಂದು ಕರ್ಣಾನಂದಕರ ಘೋಷಣೆ ಇದೆ. ಎಲ್ಲರೂ ದುಡಿಯುವುದು ಮತ್ತು ಅವರಿಷ್ಟದಂತೆ ಬದುಕುವುದು. ಬಾಹ್ಯನೋಟಕ್ಕೆ ಈ ಘೋಷಣೆಯಲ್ಲಿ ಅನಾಹುತಕಾರಿಯಾದುದೇನೂ ಇಲ್ಲ. ಆದರೆ ಈ ಜೀವನ ಕ್ರಮದ ಬಹುದೊಡ್ಡ ದೋಷ ಏನೆಂದರೆ, ಹೊಣೆಗಾರಿಕೆ ರಹಿತ ಬದುಕನ್ನು ಪ್ರಚೋದಿಸುವುದು. ನನಗಿಷ್ಟ ಬಂದಂತೆ, ಇಷ್ಟವಾದವರ ಜೊತೆ, ಇಷ್ಟವಾದಷ್ಟು ದಿನ ಇರುವೆ.. ಎಂಬ ಅತಿ ಸ್ವತಂತ್ರವಾದವನ್ನು ಅದು ಪ್ರತಿಪಾದಿಸುತ್ತದೆ. ಈ ನಿಲುವಿನಲ್ಲಿ ಹೊಣೆರಹಿತವಾದ ಎಲ್ಲವೂ ಇದೆ. ಮಗು ಎಂಬುದು ಹೊಣೆರಹಿತ ಜೀವನ ವಿಧಾನದ ಉತ್ಪನ್ನ ಅಲ್ಲ. ಅದರಲ್ಲಿ ಜವಾಬ್ದಾರಿಯುತ ಹೆಣ್ಣು-ಗಂಡಿನ ಪಾತ್ರ ಇರುತ್ತದೆ. ಮದುವೆಯ ಮೂಲಕ ಈ ಜವಾಬ್ದಾರಿಗೆ ಆರಂಭವನ್ನು ನೀಡಲಾಗುತ್ತದೆ. ಒಂದಷ್ಟು ಮಂದಿ ಆ ಜವಾಬ್ದಾರಿಗೆ ಸಾಕ್ಷಿಯಾಗಿರುತ್ತಾರೆ. ದಾಂಪತ್ಯವು ಇಷ್ಟವಿದ್ದಷ್ಟು ದಿನ ಒಟ್ಟಾಗಿ ಇರುವ ಸಂಬಂಧವೇ ಆಗಿದ್ದರೂ ಅದರ ಆರಂಭ ಅಂಥದ್ದೊಂದು ಘೋಷಣೆಯ ಮೂಲಕ ಆಗಿರುವುದಿಲ್ಲ. ಮದುವೆಯನ್ನು ಒಂದು ಪವಿತ್ರ ಒಪ್ಪಂದವಾಗಿ ಇಲ್ಲಿ ಪರಿಗಣಿಸಲಾಗುತ್ತದೆ. ಹೆಣ್ಣು ಮತ್ತು ಗಂಡು ದೈಹಿಕ ಆಕರ್ಷಣೆಯಾಚೆಗೆ ಜವಾಬ್ದಾರಿಯಿಂದ ಮತ್ತು ಪರಸ್ಪರ ಕೊಡು-ಕೊಳ್ಳುವಿಕೆಯ ಮೂಲಕ ಬದುಕು ಸಾಗಿಸಿಕೊಂಡು ಹೋಗುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗುತ್ತದೆ. ಅಲ್ಲಿ ದುಡಿತವೂ ಇದೆ. ತ್ಯಾಗವೂ ಇದೆ. ಪತಿಗಾಗಿ ಪತ್ನಿಯೂ ಪತ್ನಿಗಾಗಿ ಪತಿಯೂ ಅಭಿಪ್ರಾಯಗಳನ್ನು ಬಿಟ್ಟು ಕೊಡುವ ಮತ್ತು ಸಂಬಂಧವನ್ನು ಎಂದೂ ಬಿಟ್ಟು ಕೊಡದ ಪ್ರಬುದ್ಧತೆಯೂ ಇದೆ. ಈ ಜವಾಬ್ದಾರಿಯುತ ಬದುಕಿನ ಭಾಗವೇ ಮಗು. ಆದ್ದರಿಂದಲೇ ಕಿರೋಬೋ ಮಿನಿಯ ಹುಟ್ಟಿಗೆ ನಾವು ಸಂಭ್ರಮಿಸುವುದಕ್ಕಿಂತ ಹೆಚ್ಚು ಆತಂಕ ಪಡಬೇಕಾಗಿದೆ. ನಮ್ಮ ಬೇಜವಾಬ್ದಾರಿಯನ್ನು ಸೂಚಿಸುವ ಮಗು ಅದು. ಆಧುನಿಕ ಜಗತ್ತಿನಲ್ಲಿ ದಾಂಪತ್ಯ ದೃಷ್ಟಿಕೋನ ಎಷ್ಟು ಹೊಣೆರಹಿತವಾಗಿದೆ ಎಂಬುದನ್ನು ಪರಿಣಾಮಕಾರಿಯಾಗಿ ಸಾರುವ ಮಗುವೂ ಅದುವೇ.


Tuesday, 11 October 2016

ಎರಡು ಅಡಿ ಉದ್ದ ಬೆಳೆದ ಗೋಡ್ಸೆ

        ಗಾಂಧೀಜಿಯವರ ಭಾರತ ಸದ್ಯ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ಕಳೆದ ಅಕ್ಟೋಬರ್ 2 ಸಾಕ್ಷಿಯಾಯಿತು. ಉತ್ತರ ಪ್ರದೇಶದ 98 ವರ್ಷದ ಹಿರಿಯ ಗಾಂಧಿವಾದಿ ಚಮನ್‍ಲಾಲ್ ಜೈನ್ ಎಂಬವರು ಗಾಂಧಿ ಜಯಂತಿ ದಿನವಾದ  ಅಕ್ಟೋಬರ್ 2 ರಂದು ಯಮುನಾ ನದಿಗೆ ಹಾರಿ ಪ್ರಾಣ ಕಳಕೊಳ್ಳಲು ಮುಂದಾದರು. ಉತ್ತರ ಪ್ರದೇಶವನ್ನು ಮದ್ಯಮುಕ್ತಗೊಳಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಪ್ರೇರೇಪಣೆಯಾಗಿ ಅವರ ಜೊತೆ ಗಾಂಧೀಜಿ ಇದ್ದರು. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ್ದೇ ಆದ ಮೀರತ್‍ನಲ್ಲಿ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಹಿಂದೂ ಮಹಾಸಭಾ ಅನಾವರಣಗೊಳಿಸಿತು. ಗಾಂಧಿ ಜಯಂತಿಯನ್ನು ಅದು `ಧಿಕ್ಕಾರ ದಿನ'ವಾಗಿ ಆಚರಿಸಿತು. ಗಾಂಧೀಜಿಯವರ ಹತ್ಯೆ ನಡೆದ ಜನವರಿ 30ನ್ನು ಅದು ಸಂಭ್ರಮದ ದಿನವಾಗಿಯೂ ಆಚರಿಸುತ್ತಿದೆ. ಆ ದಿನ ಸಿಹಿ ಹಂಚಿ ಸಂತೋಷಪಡುತ್ತದೆ. ವಿಶೇಷ ಏನೆಂದರೆ, ಗಾಂಧೀಜಿಯವರ ತತ್ವವನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಪ್ರಾಣ ತೆರಲು ಸಿದ್ಧವಾದ ವಯೋವೃದ್ಧ ಗಾಂಧಿವಾದಿಯನ್ನು ಪೊಲೀಸರು ಇತ್ತ ಠಾಣೆಗೆ ಒಯ್ಯುವಾಗ ಅತ್ತ ಮೀರತ್‍ನಲ್ಲಿ ಗೋಡ್ಸೆ ನಗುತ್ತಿದ್ದ. ಗೋಡ್ಸೆ ಪ್ರತಿಮೆ ಅನಾವರಣವನ್ನು ತಡೆಯಲು ಪೊಲೀಸರಿಂದ ಸಾಧ್ಯವಾಗಲಿಲ್ಲ. ಇದು ಹೇಗೆಂದರೆ, ಗಾಂಧಿವಾದಿಯನ್ನು ಠಾಣೆಯಲ್ಲಿ ಕೂರಿಸಿ ಗೋಡ್ಸೆಯನ್ನು ಸಾರ್ವಜನಿಕವಾಗಿ ಗೌರವಿಸಿದಂತೆ.
     ನಿಜವಾಗಿ, ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸವೆಂದರೆ ಗಾಂಧಿ ಮತ್ತು ಗೋಡ್ಸೆ ನಡುವಿನ ಇತಿಹಾಸ. ಗಾಂಧಿತತ್ವ ಮತ್ತು ಗೋಡ್ಸೆ ತತ್ವಗಳು ಈ ಏಳು ದಶಕಗಳ ಉದ್ದಕ್ಕೂ ಮುಖಮುಖಿಯಾಗುತ್ತಲೇ ಬಂದಿವೆ. ಸ್ವಾತಂತ್ರ್ಯ ಪೂರ್ವದಲ್ಲೇ ಗಾಂಧಿ ಅಂದರೆ ಒಂದು ಪ್ರಖರ ತತ್ವ-ಸಿದ್ಧಾಂತದ ಪರ್ಯಾಯ ಹೆಸರಾಗಿತ್ತು. ಅವರ ತತ್ವ ಚಿಂತನೆಯೊಳಗೆ ಎಲ್ಲ ಭಾರತೀಯರೂ ಸೇರಿದ್ದರು. ಧರ್ಮ-ಚರ್ಮ-ಜಾತಿ-ಭಾಷೆಗಳ ಹಂಗಿಲ್ಲದೇ ಎಲ್ಲರನ್ನೂ ಒಪ್ಪಿಕೊಳ್ಳುವ ವಿಶಾಲ ವಿಚಾರಧಾರೆಯನ್ನು ಅವರು ಪ್ರತಿನಿಧಿಸಿದ್ದರು. ಆದ್ದರಿಂದಲೇ ಅವರ ಜೊತೆ ಭಿನ್ನಾಭಿಪ್ರಾಯ ಇಟ್ಟುಕೊಂಡಿದ್ದ ಯಾವ ನಾಯಕರೂ ಗಾಂಧಿಯವರ ಈ ವಿಚಾರಧಾರೆಯ ಔಚಿತ್ಯವನ್ನು ಪ್ರಶ್ನಿಸಿರಲಿಲ್ಲ. ಅವರ ನಡುವಿನ ವೈಚಾರಿಕ ಸಂಘರ್ಷಕ್ಕೂ ಈ ತತ್ವಕ್ಕೂ ಯಾವ ಪಾತ್ರವೂ ಇರಲಿಲ್ಲ. ಇವರಿಗೆ ಹೋಲಿಸಿದರೆ ನಾಥೂರಾಮ್ ಮತ್ತು ಆತ ಪ್ರತಿನಿಧಿಸುವ ವಿಚಾರಧಾರೆಯು ಸಂಪೂರ್ಣ ಭಿನ್ನವಾಗಿತ್ತು. ಆತನ ದೃಷ್ಟಿಯಲ್ಲಿ `ವೈವಿಧ್ಯತೆ'ಯಲ್ಲಿ ಏಕತೆ ಎಂಬುದೇ ಅತಿ ದೊಡ್ಡ ವೈರಿಯಾಗಿತ್ತು. ಏಕ ಧರ್ಮ, ಏಕ ಸಂಸ್ಕ್ರತಿ, ಏಕ ಭಾಷೆ, ಏಕ ವಿಚಾರಧಾರೆ... ಹೀಗೆ ಅನೇಕತೆಯನ್ನು ಪೂರ್ಣವಾಗಿ ತಿರಸ್ಕರಿಸುವ ತತ್ವ ಸಿದ್ಧಾಂತದ ಪ್ರಬಲ ಪ್ರತಿಪಾದನೆ ಆತನದ್ದಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಾಗಲಿ, ಸ್ವಾತಂತ್ರ್ಯಾ ನಂತರದ ಆರಂಭದ ಕಾಲದಲ್ಲಾಗಲಿ ಈ ತತ್ವ ಚಿಂತನೆಯ ಮೇಲೆ ಸಮಾಜ ಎಷ್ಟಂಶ ವಿರೋಧವನ್ನು ವ್ಯಕ್ತಪಡಿಸಿತ್ತೆಂದರೆ, ಆತನ ಪ್ರತಿಮೆ ಅನಾವರಣ ಬಿಡಿ, ನಾಥೂರಾಂ ಗೋಡ್ಸೆ ಎಂಬ ಹೆಸರನ್ನೇ ಅಸಹ್ಯಪಡುವಷ್ಟು. ಯಾವ ಹೆತ್ತವರೂ ತಮ್ಮ ಮಕ್ಕಳಿಗೆ ನಾಥೂರಾಂ ಎಂದು ನಾಮಕರಣ ಮಾಡಲಿಲ್ಲ. ನಾಥೂರಾಂ ಎಂಬ ಹೆಸರಲ್ಲಿ ಬರುವ `ಥೂ'ವನ್ನು ಈ ದೇಶದ ಬಹುಸಂಖ್ಯಾತ ಮಂದಿ ಆತನ ಮೇಲೆ ಪ್ರಯೋಗಿಸುವಷ್ಟರ ಮಟ್ಟಿಗೆ ಆತ ಛೀಮಾರಿಗೆ ಒಳಗಾದ. ಆದರೆ ಇವತ್ತು ಗೋಡ್ಸೆ ಮೀರತ್‍ನ ಬೀದಿಯಲ್ಲಿ ನಗುತ್ತಿದ್ದಾನೆ. ಹಿಂದೂ ಮಹಾಸಭವು ಆತನನ್ನು ಬಹಿಂರಗವಾಗಿಯೇ ಕೊಂಡಾಡುತ್ತಿದೆ. ನಟಿ ರಮ್ಯರಲ್ಲಿ, ಕನ್ನಯ್ಯ, ಸಾಯಿಬಾಬ ಮತ್ತಿತರರಲ್ಲಿ ದೇಶದ್ರೋಹವನ್ನು ಕಂಡವರೆಲ್ಲ ಹಿಂದೂ ಮಹಾಸಭಾದ ಈ ಖುಷಿಯಲ್ಲಿ ಯಾವ ದೇಶದ್ರೋಹವನ್ನೂ ಕಾಣುತ್ತಿಲ್ಲ.
       ನಿಜವಾಗಿ, ಪ್ರತಿಮೆಯಾದ ಗೋಡ್ಸೆ ಮತ್ತು ಠಾಣೆ ಪಾಲಾದ ಚಮನ್ ಲಾಲ್ ಜೈನ್- ಪ್ರಸಕ್ತ ಭಾರತವನ್ನು ವ್ಯಾಖ್ಯಾನಿಸುವ ಎರಡು ರೂಪಕಗಳಾಗಿದ್ದಾರೆ. ಗಾಂಧಿ ನಿಧಾನಕ್ಕೆ ನಾಲಾಯಕ್ಕುಗೊಳ್ಳುತ್ತಿದ್ದಾರೆ. ಗಾಂಧಿವಾದವನ್ನು ಗೇಲಿ ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಅಹಿಂಸೆಯನ್ನು ಪ್ರತಿಪಾದಿಸಿದ ಬೌದ್ಧಮತವನ್ನು ದೇಶದಿಂದಲೇ ಓಡಿಸುವ ಪ್ರಯತ್ನ ಈ ಹಿಂದೆ ನಡೆದಂತೆಯೇ, ಗಾಂಧೀಜಿಯ ಅಹಿಂಸೆಯ ತತ್ವ ಚಿಂತನೆಯನ್ನು ದೇಶದಿಂದಲೇ ಗಡಿಪಾರುಗೊಳಿಸುವ ಮಾತು-ಕೃತಿಗಳು ಮುಕ್ತವಾಗಿಯೇ ನಡೆಯುತ್ತಿವೆ. ಬುದ್ಧನನ್ನು ಅತಿಯಾಗಿ ಪ್ರೀತಿಸಿದ್ದು ಅಂಬೇಡ್ಕರ್. ಅದಕ್ಕೆ ಪ್ರಮುಖ ಕಾರಣ-ಬುದ್ದಿಸಂ ಎಂಬುದು ಸಮಾನತೆಯ ಮತ್ತು ಅಹಿಂಸೆಯ ಧರ್ಮ ಎಂದಾಗಿತ್ತು. ಈ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ಹಿಂಸೆಯಿಂದ ಅವರು ಅಪಾರವಾಗಿ ನೊಂದಿದ್ದರು. ಹಾಗೆಯೇ ಗಾಂಧೀಜಿಯರೂ ಹಿಂಸೆಯ ಕಟು ವಿರೋಧಿಯಾಗಿದ್ದರು. ಅಂಬೇಡ್ಕರ್ ಮತ್ತು ಗಾಂಧಿಯವರ ನಡುವೆ ದಲಿತ್ ಸಬಲೀಕರಣದ ವಿಷಯದಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಇದ್ದಿದ್ದರೂ ದಲಿತ ದೌರ್ಜನ್ಯ, ಹಿಂಸೆ, ಅವಮಾನಗಳನ್ನು ಖಂಡಿಸುವಲ್ಲಿ ಅವರಿಬ್ಬರ ನಿಲುವೂ ಒಂದೇ ಆಗಿತ್ತು. ಅವರಿಬ್ಬರೂ ಹಿಂಸಾತ್ಮಕ ಭಾರತದ ವೈರಿಯಾಗಿದ್ದರು. ಅಂಬೇಡ್ಕರ್ ಅಂತೂ ಹಿಂಸೆಯನ್ನು ಎಷ್ಟಂಶ ವಿರೋಧಿಸಿದರೆಂದರೆ, ಅಹಿಂಸೆಯನ್ನು ಅತಿಯಾಗಿ ಸಾರುವ ಬೌದ್ಧಮತವನ್ನೇ ತನ್ನ ನಂಬಿಕೆಯಾಗಿ ಪರಿವರ್ತಿಸಿಕೊಂಡರು. ಅದೇ ಭಾರತ ಇವತ್ತು ಅವರಿಬ್ಬರ ಚಿಂತನೆಯಿಂದ ಬಹುದೂರ ಸರಿಯುತ್ತಿದೆ. ಎಷ್ಟರವರೆಗೆಂದರೆ, ಹಿಂಸೆಯ ಪ್ರತೀಕವಾದ ಗೋಡ್ಸೆಯನ್ನೇ ಗೌರವಿಸುವಷ್ಟು.
       ಅಕ್ಟೋಬರ್ 2 ರಂದು ಎರಡು ಪ್ರತ್ಯೇಕ ಕಾರಣಗಳಿಗಾಗಿ ಸುದ್ದಿಯಾದ ಚಮನ್ ಲಾನ್ ಜೈನ್ ಮತ್ತು ಗೋಡ್ಸೆಯು ಈ ಸುದ್ದಿಯ ಆಚೆಗೆ ನಮ್ಮಲ್ಲಿ ಚರ್ಚೆಗೆ ಒಳಗಾಗಲೇಬೇಕಾದವರಾಗಿದ್ದಾರೆ. ಈ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೇ ಗಾಂಧಿ ಮತ್ತು ಗೋಡ್ಸೆ ವೈಚಾರಿಕ ಸಂಘರ್ಷವನ್ನು ಆರಂಭಿಸಿದ್ದಾರೆ. ಗೋಡ್ಸೆಯದ್ದು ಭಿನ್ನ ವಿಚಾರವನ್ನು ಬಲವಂತದಿಂದ ಹತ್ಯೆ ಮಾಡುವ ಆತಂಕಕಾರಿ ನಿಲುವಾದರೆ ಗಾಂಧಿಯದ್ದು ಎಲ್ಲ ವಿಚಾರಧಾರೆಯನ್ನೂ ಪ್ರೀತಿಸುವ ಮನುಷ್ಯ ಪ್ರೇಮಿ ನಿಲುವು. ಹಾಗಂತ, ಸ್ವಾತಂತ್ರ್ಯಾ ನಂತರದ ಈ 7 ದಶಕಗಳಲ್ಲಿ ಈ ಎರಡು ನಿಲುವುಗಳ ಪ್ರಭಾವವೇನು? ಗಾಂಧಿಯನ್ನು ನಿಧಾನಕ್ಕೆ ಗೋಡ್ಸೆ ಆಹುತಿ ಪಡೆಯುತ್ತಿದ್ದಾನೆಯೇ? ಭಾರತೀಯರನ್ನು ವಿವಿಧ ಧರ್ಮ, ಜಾತಿಗಳಾಗಿ ವಿಂಗಡಿಸುವ ಮತ್ತು ಬೆನ್ನಟ್ಟಿ ಹೊಡೆಯುವ ಘಟನೆಗಳು ಹೇಳುತ್ತಿರುವುದೇನನ್ನು? ಈಗಿನ ಭಾರತದಲ್ಲಿ ದೇಶಪ್ರೇಮದ ವ್ಯಾಖ್ಯಾನ ಬದಲಾಗಿದೆ. ಧರ್ಮ, ಆಹಾರ, ಆಚಾರ, ಆರಾಧನೆ, ಉಡುಪು, ಸಂಸ್ಕøತಿ... ಎಲ್ಲದರ ಬಗ್ಗೆಯೂ ಗಾಂಧಿ ರಹಿತ ಮಾತುಗಳಿಗೆ ಮಾನ್ಯತೆ ದಕ್ಕುತ್ತಿವೆ. ದೇಶಪ್ರೇಮವನ್ನು ವಿವರಿಸುವುದಕ್ಕೂ, ಸಂಸ್ಕ್ರತಿಯನ್ನು ವಿಶ್ಲೇಷಿಸುವುದಕ್ಕೂ ಗೋಡ್ಸೆಯನ್ನೇ ಆಧಾರವಾಗಿ ಇಟ್ಟುಕೊಳ್ಳಲಾಗುತ್ತಿದೆ. ಒಪ್ಪದವರನ್ನು ಗೋಡ್ಸೆ ಶೈಲಿಯಲ್ಲೇ ಹಿಂಸೆಗೆ ಗುರಿಪಡಿಸಲಾಗುತ್ತಿದೆ. ಹಿಂಸೆಯನ್ನು ಪ್ರಬಲವಾಗಿ ವಿರೋಧಿಸಿದ ಗಾಂಧಿ ಭಾರತವು ಸದ್ಯ ಸಾಗುತ್ತಿರುವ ಹಾದಿ ಇದು. ಅಹಿಂಸೆ ಮತ್ತು ಹಿಂಸೆಯ 7 ದಶಕಗಳ ಈ ಮುಖಾಮುಖಿಯಲ್ಲಿ ಚಮನ್ ಲಾಲ್ ಜೈನ್ ನಿಧಾನಕ್ಕೆ ಸೋಲುತ್ತಿರುವಂತೆ ಅನಿಸುತ್ತಿದೆ. ಗೋಡ್ಸೆ ನಗುತ್ತಿರುವಂತೆ ತೋರುತ್ತಿದೆ. ಮೀರತ್‍ನಲ್ಲಿ ತಲೆಎತ್ತಿ ನಿಂತ ಗೋಡ್ಸೆಯ ಪ್ರತಿಮೆಯ ಉದ್ದ ಮತ್ತು ಅಗಲ ಕೇವಲ ಎರಡು ಅಡಿಯಷ್ಟೇ ಆಗಿರಬಹುದು. ಆದರೆ ಗಾಂಧಿಯ ಭಾರತದಲ್ಲಿ ಗೋಡ್ಸೆಗೆ ಇಷ್ಟುದ್ದ ಬೆಳೆಯಲು ಸಾಧ್ಯವಾಯಿತೆಂಬುದೇ ಆತಂಕಕಾರಿ. ಭಾರತದ ಭವಿಷ್ಯದ ದೃಷ್ಟಿಯಿಂದ ಈ ಉದ್ದ ಮತ್ತು ಅಗಲ ಇನ್ನಷ್ಟು ಅಪಾಯಕಾರಿ.