Wednesday, 18 January 2017

ಲೈಂಗಿಕ ದೌರ್ಜನ್ಯವನ್ನು ಹುಡುಕುವ ಕ್ಯಾಮರಾಗಳು ಮತ್ತು ಕೆರೆಗೆ ಹಾರುವ ಬಾಬುಗೌಡರು

       ಕಳೆದವಾರ ಮಾಧ್ಯಮ ಕ್ಷೇತ್ರ ಸಾಕಷ್ಟು ಬ್ಯುಸಿಯಾಗಿದ್ದುವು. ಅತ್ಯಾಚಾರ, ಚುಡಾವಣೆ, ಲೈಂಗಿಕ ದೌರ್ಜನ್ಯ ಮುಂತಾದುವುಗಳ ಸುತ್ತ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಧಾರಾಳ ಬೆವರು ಸುರಿಸಿದುವು. ಪುಟಗಳನ್ನೂ ಸಮಯವನ್ನೂ ಮೀಸಲಿರಿಸಿದುವು. ಇದೇ ವೇಳೆ ನಮ್ಮೊಳಗನ್ನು ತೀವ್ರವಾಗಿ ತಟ್ಟಲೇಬೇಕಾದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಎಂಬಲ್ಲಿ ನಡೆಯಿತು. ಒಂದೇ ಮನೆಯ ನಾಲ್ಕು ಮಂದಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ವ್ಯವಸ್ಥೆ ಹೇಗೆ ಮನುಷ್ಯರ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಈ ಕುಟುಂಬ. ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಸಾವಿಗೀಡಾದರೆ ಓರ್ವ ಬದುಕುಳಿದಿದ್ದಾನೆ. ಈ ಬದುಕುಳಿದವನ ಮೇಲೆ ತಮ್ಮವರ ಸಾವು ಯಾವ ರೀತಿಯ ಆಘಾತಕಾರಿ ಪರಿಣಾಮವನ್ನು ಬೀರಬಹುದು ಎಂಬುದು ಒಂದು ಪ್ರಶ್ನೆಯಾದರೆ, ಸಾವು ಯಾಕೆ ಒಂದು ಆಯ್ಕೆಯಾಗಿ ಅಥವಾ ‘ಪರಿಹಾರ’ವಾಗಿ ಇನ್ನೂ ಅಸ್ತಿತ್ವದಲ್ಲಿ ಇದೆ ಎಂಬ ಪ್ರಶ್ನೆ ಇನ್ನೊಂದು. ಹಾಗಂತ, ಆತ್ಮಹತ್ಯೆಯನ್ನು ಪ್ರಶ್ನಿಸಿ ಸಿನಿಮಾ ತಯಾರಿಸಬಹುದು. ನಾಟಕ ರಚಿಸಬಹುದು. ಕಾದಂಬರಿಯನ್ನೋ ಲೇಖನವನ್ನೋ ಬರೆಯಬಹುದು. ಇವೆಲ್ಲದರ ಬಳಿಕವೂ ಮುಖ್ಯ ಪ್ರಶ್ನೆಯೊಂದು ಹಾಗೆಯೇ ಉಳಿಯುತ್ತದೆ. ಓರ್ವ ವ್ಯಕ್ತಿಯನ್ನು ಆತ್ಮಹತ್ಯೆಗೆ ಒತ್ತಾಯಿಸುವ ಮೂಲಭೂತ ಅಂಶ ಯಾವುದು? ಯಾರಿಂದ ಮತ್ತು ಯಾವುದರಿಂದ ಆ ಆತ್ಮಹತ್ಯೆ ಪ್ರಚೋದಿತವಾಗಿದೆ? ಅಂದಹಾಗೆ, ಈ ಆತ್ಮಹತ್ಯೆಯ ಹಿಂದೆ ಎಂಡೋಸಲ್ಫಾನ್ ಎಂಬ ಕ್ರೌರ್ಯದ ಹಿನ್ನೆಲೆಯಿದೆ. ಮನೆಯೊಂದು ಎಂಡೋ ಪೀಡಿತರ ಕುಟುಂಬವಾಗಿ ಮಾರ್ಪಟ್ಟರೆ ಆ ಮನೆಯ ಆಲೋಚನೆಗಳು ಹೇಗಿರಬಹುದು? ವಿಕ್ಷಿಪ್ತರು, ವಿಕಲಚೇತನರು, ಚಾಪೆಗೇ ಸೀಮಿತವಾದವರ ಜೀವನಚಕ್ರ ಏನಿರಬಹುದು? ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಮತ್ತು ಈ ಆತ್ಮಹತ್ಯೆಯನ್ನು ನಾವು ಮುಖಾಮುಖಿಗೊಳಿಸಬೇಕಾದ ಅನಿವಾರ್ಯತೆ ಎದುರಾಗುವುದು ಇಲ್ಲೇ. ರಾತ್ರಿ ಪಾರ್ಟಿಯನ್ನು ಒಂದು ಹಂತದವರೆಗೆ ‘ಹೊಟ್ಟೆ ತುಂಬಿದವರ ಖಯಾಲಿ' ಎಂದು ಹೇಳಬಹುದು. ಅಲ್ಲಿಗೆ ಎಂಡೋ ಸಂತ್ರಸ್ತರು ಬರಲ್ಲ. ಯಾಕೆ ಬರಲ್ಲ ಅಂದರೆ, ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಸೌಂದರ್ಯ ಅವರಿಗಿಲ್ಲ. ದೈಹಿಕವಾಗಿಯೂ ಮಾನಸಿಕವಾಗಿಯೂ ಸ್ವಸ್ಥರಲ್ಲ. ಹೆಚ್ಚಿನವರಿಗೆ ಮನೆ ಬಿಟ್ಟು ಹೊರಬರಲೂ ಆಗುತ್ತಿಲ್ಲ. ಹಾಗಂತ, ಇವರ ಸಂಖ್ಯೆ ಬೆಂಗಳೂರಿನಲ್ಲಿ ರಾತ್ರಿ ಪಾರ್ಟಿಯಲ್ಲಿ ಸೇರಿದವರಿಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚು. ದಕ್ಷಿಣ ಕನ್ನಡ ಒಂದರಲ್ಲಿಯೇ ಮೂರು ಸಾವಿರಕ್ಕಿಂತ ಅಧಿಕ ಎಂಡೋ ಪೀಡಿತರಿದ್ದಾರೆ. ಕೇರಳದ ಕಾಸರಗೋಡು ಮತ್ತಿತರ ಕಡೆಯೂ ಇದ್ದಾರೆ. ದುರಂತ ಏನೆಂದರೆ, ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ ಪತ್ರಕರ್ತರಲ್ಲಿ ಶೇ. 1ರಷ್ಟು ಮಂದಿಯೂ ಈ ಮನುಷ್ಯರನ್ನು ಭೇಟಿಯಾಗಿಲ್ಲ. ತಮ್ಮ ಕ್ಯಾಮರಾಗಳಲ್ಲಿ ಇವರನ್ನು ಚಿತ್ರೀಕರಿಸಿಕೊಂಡಿಲ್ಲ. ಲೈವ್ ಚರ್ಚೆಗಳು ನಡೆದಿಲ್ಲ. ಮನುಷ್ಯರಿಗೆ ಈ ಪ್ರದೇಶ ಎಷ್ಟು ಸುರಕ್ಷಿತ ಎಂಬ ಬಗ್ಗೆ ವಿಶ್ಲೇಷಣೆಗಳು ನಡೆದಿಲ್ಲ. ಅಂಕಿ-ಅಂಶಗಳ ಸಂಗ್ರಹವಾಗಿಲ್ಲ. ಅಷ್ಟಕ್ಕೂ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಒಂದು ಹಂತದಲ್ಲಿ ಅದರ ಪ್ರಭಾವದಿಂದ ಹೊರಬರಲೂ ಬಹುದು. ಕಾಲವು ಅವರಿಂದ ಅದನ್ನು ಮರೆಸಿ ಬಿಡಲೂಬಹುದು ಅಥವಾ ಅವರು ಸ್ವತಃ ಲೈಂಗಿಕ ದೌರ್ಜನ್ಯ ವಿರೋಧಿ ಹೋರಾಟಗಾರರಾಗಿ ಪರಿವರ್ತನೆಯಾಗುವ ಮೂಲಕ ಪ್ರತೀಕಾರ ತೀರಿಸಲೂ ಬಹುದು. ಆದರೆ, ಎಂಡೋ ಸಂತ್ರಸ್ತರಿಗೆ ಇಂಥದ್ದೊಂದು ಅವಕಾಶವೇ ಇಲ್ಲ. ಅದಕ್ಕೆ ತುತ್ತಾದವರು ಬಹುತೇಕ ಶಾಶ್ವತವಾಗಿ ಅದೇ ಸ್ಥಿತಿಯಲ್ಲಿ ಕೊರಗುತ್ತಾ ಬದುಕಬೇಕಾಗುತ್ತದೆ. ಯಾರೇ ಆಗಲಿ, ದೈಹಿಕ ಅಂಗಾಂಗಳು ಸ್ವಸ್ಥವಾಗಿರುವುದನ್ನು ಇಷ್ಟಪಡುತ್ತಾರೆ. ಆರೋಗ್ಯಪೂರ್ಣವಾಗಿರುವುದು, ಸುಂದರವಾಗಿರುವುದು ಇವೆಲ್ಲ ಮಾನವ ಸಹಜ ಬಯಕೆಗಳು. ಎಂಡೋಸಲ್ಫಾನ್ ವಿರೋಧಿಸುವುದೇ ಇವುಗಳನ್ನು. ಅದಕ್ಕೆ ತುತ್ತಾದವರು ಸಹಜ ಸೌಂದರ್ಯವನ್ನು ಕಳಕೊಳ್ಳುತ್ತಾರೆ. ದೈಹಿಕ ಅಂಗರಚನೆಗಳು ಊನಗೊಳ್ಳುತ್ತವೆ. ಆದ್ದರಿಂದಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೂ ಅವರಲ್ಲಿ ಹಿಂಜರಿಕೆ ಉಂಟಾಗುತ್ತದೆ. ಇದೇ ಸ್ಥಿತಿ ಮುಂದುವರಿಯುತ್ತಾ ಅವರನ್ನು ವಿಕ್ಷಿಪ್ತತೆಯೆಡೆಗೆ ಕೊಂಡೊಯ್ಯುತ್ತದೆ. ಆದ್ದರಿಂದ, ಬೆಂಗಳೂರಿನ ಲೈಂಗಿಕ ದೌರ್ಜನ್ಯಕ್ಕೆ ಕೊಕ್ಕಡದ ಎಂಡೋ ದೌರ್ಜನ್ಯವನ್ನು ಮುಖಾಮುಖಿಗೊಳಿಸಿದರೆ ಹಾಗೂ ಬೆಂಗಳೂರಿಗೆ ಸಿಕ್ಕ ಪ್ರಚಾರದ ಮತ್ತು ಆಡಳಿತಾತ್ಮಕ ಸಾಂತ್ವನದ ಅಣುವಿನಷ್ಟು ಮಹತ್ವವೂ ಕೊಕ್ಕಡದ ಎಂಡೋ ದೌರ್ಜನ್ಯಕ್ಕೆ ಸಿಗದೇ ಹೋಗಿದ್ದರೆ ಅದರಲ್ಲಿ ತಮ್ಮ ಹೃದಯ ಶೂನ್ಯತೆಗೆ ಎಷ್ಟು ಪಾಲು ಇದೆ ಎಂಬ ಬಗ್ಗೆ ಮಾಧ್ಯಮದ ಮಂದಿ ಆತ್ಮಾವಲೋಕನ ನಡೆಸಬೇಕಾಗಿದೆ. ಬೆಂಗಳೂರಿನ ಲೈಂಗಿಕ ದೌರ್ಜನ್ಯವನ್ನು ನಾವು ಹೇಗೆ ಆಡಳಿತಾತ್ಮಕ ವೈಫಲ್ಯ ಎಂದು ಕರೆಯುತ್ತೇವೋ ಅಷ್ಟೇ ಮತ್ತು ಅದಕ್ಕಿಂತಲೂ ಹೆಚ್ಚಿನ ಆಡಳಿತಾತ್ಮಕ ವೈಫಲ್ಯ ಎಂಡೋ ಪೀಡಿತರದ್ದು. ಆ ಭಾಗದಲ್ಲಿ ಗೇರು ತೋಟಗಳ ಮೇಲೆ ಸರಕಾರ ಎಂಡೋಸಲ್ಫಾನ್ ಸಿಂಪಡಿಸಿರುವುದರ ಅಡ್ಡ ಪರಿಣಾಮದ ಫಲಿತಾಂಶವೇ ಈ ಸಂತ್ರಸ್ತರು. ವ್ಯವಸ್ಥೆಯೊಂದು ಬೇಜವಾಬ್ದಾರಿಯುತವಾಗಿ ನಡೆದುಕೊಂಡರೆ ಏನಾಗಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಇದು.
     ಮಾಧ್ಯಮ ಜಗತ್ತಿನ ಸಂವೇದನೆಯನ್ನು ಮತ್ತು ಸ್ಪಂದನಾ ಸಾಮರ್ಥ್ಯವನ್ನು ಮರು ಅವಲೋಕನಕ್ಕೆ ಒಳಪಡಿಸಲು ಬಾಬುಗೌಡ, ಗಂಗಮ್ಮ, ಸದಾನಂದ ಮತ್ತು ನಿತ್ಯಾನಂದ ಎಂಬ ಎಂಡೋ ಪೀಡಿತರ ಸಾವು ನಿಮಿತ್ತವಾಗಬೇಕು. ನಗರ ಪ್ರದೇಶದ, ಆಕರ್ಷಕವಾಗಿ ಮಾತಾಡಬಲ್ಲ, ಕೈ ತುಂಬ ದುಡ್ಡು ಎಣಿಸುವ, ಸುಂದರವಾಗಿರುವ, ದುಬಾರಿ ವಾಹನಗಳಲ್ಲಿ ಓಡಾಡುವ ಜನರ ಸುತ್ತಲೇ ಇವತ್ತು ಜರ್ನಲಿಸಂ ಸುತ್ತುತ್ತಿದೆಯೇ? ಅವರ ಸಮಸ್ಯೆಯನ್ನೇ ಇಡೀ ದೇಶದ ಸಮಸ್ಯೆಯಾಗಿ ಮತ್ತು ದೇಶದ ಘನತೆಯ ವಿಷಯವಾಗಿ ಪರಿಗಣಿಸುತ್ತಿವೆಯೇ? ಅವರನ್ನೇ ಭಾರತವಾಗಿಸುವ ತಪ್ಪುಗಳು ನಡೆಯುತ್ತಿವೆಯೇ? ಭಾರತವೆಂದರೆ ನಗರ ಪ್ರದೇಶಗಳೇ ಅಲ್ಲವಲ್ಲ. ನಗರಗಳಲ್ಲಿರುವವರು ಮಾತ್ರವೇ ಮನುಷ್ಯರೂ ಅಲ್ಲವಲ್ಲ. ನಿಜವಾದ ಭಾರತ ನಗರಗಳ ಹೊರಗಿದೆ. ಗಂಭೀರವಾದ ಸಮಸ್ಯೆಗಳೂ ಅಲ್ಲೇ ಇವೆ. ಮಾಧ್ಯಮ ಜಗತ್ತಿನ ಲೇಖನಿಗಳು, ಕ್ಯಾಮರಾಗಳು ಆ ಕಡೆಗೆ ಮುಖ ಮಾಡಬೇಕಾಗಿದೆ. ಟಿ.ವಿ.ಗಳ ಚರ್ಚೆಗಳಲ್ಲಿ ಎಂಡೋ ಪೀಡಿತರನ್ನು, ಸಾಲಗಾರ ರೈತರನ್ನು, 365 ದಿನ ದುಡಿದೂ ಹೊಟ್ಟೆ-ಬಟ್ಟೆ ತುಂಬಲಾರದವರನ್ನು, ಸೋರುವ ಮಾಡನ್ನೂ ಮಾಡಿನೊಳಗಿನ ಮನುಷ್ಯರನ್ನೂ, ಅವರ ತಲ್ಲಣಗಳನ್ನೂ ನಗರಗಳ ಮುಂದೆ ಇಡಬೇಕಾಗಿದೆ. ಆ ಮೂಲಕ ನಗರದ ಮನುಷ್ಯರನ್ನು ಮತ್ತು ನಗರವಲ್ಲದ ಮನುಷ್ಯರನ್ನು ಮುಖಾಮುಖಿಗೊಳಿಸಬೇಕಾಗಿದೆ. ಅಂದಹಾಗೆ,
      ಆತ್ಮಹತ್ಯೆ ಪರಿಹಾರ ಅಲ್ಲ ಸರಿ. ಅದು ತಪ್ಪೂ ಹೌದು. ಆದರೆ, ವ್ಯವಸ್ಥೆ ಬಿಡಿ ಮಾಧ್ಯಮಗಳೂ ಸಂವೇದನೆಯನ್ನು ಕಳಕೊಂಡರೆ ಮತ್ತು ವ್ಯವಸ್ಥೆಯ ಮೇಲೆ ಒತ್ತಡ ಹಾಕುವ ಜವಾಬ್ದಾರಿಯಿಂದ ನುಣುಚಿಕೊಂಡರೆ, ಸಂತ್ರಸ್ತರು ಮಾನಸಿಕ ಸ್ವಸ್ಥತೆಯನ್ನು ಕಳಕೊಳ್ಳಲಾರರೆಂದು ಹೇಗೆ ಹೇಳುವುದು? ನಿಜವಾಗಿ, ಬೆಂಗಳೂರಿನ ‘ಲೈಂಗಿಕ ದೌರ್ಜನ್ಯ’ದ ಆರು ದಿನಗಳ ಬಳಿಕ ನಡೆದ ಬಾಬುಗೌಡ ಕುಟುಂಬದ ಆತ್ಮಹತ್ಯೆಯು ವ್ಯವಸ್ಥೆ ಮತ್ತು ಮಾಧ್ಯಮ ಜಗತ್ತಿನ ಸಂವೇದನಾರಹಿತ ಮನಸ್ಥಿತಿಗೆ ತೋರಿದ ತೀವ್ರ ಪ್ರತಿಭಟನೆಯೆಂದೇ ಹೇಳಬೇಕು. ಮಾತ್ರವಲ್ಲ, ಈ ಪ್ರತಿಭಟನೆಯು ಉಳಿದ ಸಂತ್ರಸ್ತರ ಆಯ್ಕೆಯೂ ಆಗುವ ಮೊದಲು ನಾವೆಲ್ಲ ಎಚ್ಚೆತ್ತುಕೊಳ್ಳಬೇಕು. ನಗರ ಕೇಂದ್ರಿತ ಜರ್ನಲಿಸಂ ಅನ್ನು ಸಮಸ್ಯೆ ಕೇಂದ್ರಿತ ಜರ್ನಲಿಸಂ ಆಗಿ ಇದು ಪರಿವರ್ತಿಸಬೇಕು. ವಿಷಾದ ಏನೆಂದರೆ, ಮಾಧ್ಯಮ ಜಗತ್ತು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಬಾಬುಗೌಡ ಕುಟುಂಬದ ಸಾವಿಗೆ ಸಣ್ಣ ಸುದ್ದಿಯ ಹೊರತಾಗಿ ಬೇರೆ ಯಾವ ಮಹತ್ವವನ್ನೂ ಅವು ಕೊಟ್ಟಿಲ್ಲ. ಅವು ಇನ್ನೂ ಲೈಂಗಿಕ ದೌರ್ಜನ್ಯವನ್ನು ಹುಡುಕುತ್ತಾ ನಗರಗಳಲ್ಲೇ ಇವೆ.

Saturday, 7 January 2017

67 ಸಾವಿರ ಕೋಟಿ ರೂಪಾಯಿ ವ್ಯವಹಾರದ ಬಳಿಕವೂ ನಾವೇಕೆ ಒಂಟಿ?

      ಬಡವರನ್ನು ಅಣಕಿಸುವ ದಿನವನ್ನಾಗಿ ಡಿ. 31ನ್ನು ಪ್ರಧಾನಿ ನರೇಂದ್ರ ಮೋದಿಯವರು ಪರಿವರ್ತಿಸಿದುದಕ್ಕಿಂತ ಎರಡ್ಮೂರು ದಿನಗಳ ಮೊದಲು ಮೋದಿಯವರ ಸಾಮರ್ಥ್ಯವನ್ನು ಪ್ರಶ್ನಿಸುವ ಬೆಳವಣಿಗೆಗಳು ರಶ್ಯಾದಲ್ಲಿ ನಡೆದುವು. ಭಾರತಕ್ಕೆ ಮತ್ತು ಭಾರತೀಯರ ಪಾಲಿಗೆ ಈ ಎರಡೂ ಬಹಳ ಮುಖ್ಯವಾದುವು. ಡಿ. 31, ಈ ವರೆಗೆ ಜಗತ್ತಿನ ಎಲ್ಲೂ ಅಣಕದ ದಿನವಾಗಿ ಆಚರಣೆಗೆ ಒಳಗಾಗಿಲ್ಲ. ಹೊಸ ವರ್ಷಕ್ಕೆ ಸ್ವಾಗತ ಕೋರುವ ದಿನವನ್ನಾಗಿ ಡಿ. 31ನ್ನು ಆಚರಿಸುವವರಲ್ಲೂ ನಿರೀಕ್ಷೆ, ಶುಭಾಕಾಂಕ್ಷೆ ಮತ್ತು ಸಂತಸವಿರುತ್ತದೆಯೇ ಹೊರತು ಅಣಕವಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪ್ರಥಮ ಬಾರಿಗೆ ಈ ಪರಂಪರೆಯನ್ನು ಮುರಿದಿದ್ದಾರೆ. ಡಿ. 31ನ್ನು ಅಣಕದ ದಿನವನ್ನಾಗಿ ಅವರು ಘೋಷಿಸಿದ್ದಾರೆ. ‘ನನಗೆ 50 ದಿನಗಳನ್ನು ಕೊಡಿ’ ಎಂದು ನೋಟು ಅಮಾನ್ಯದ ಬಳಿಕ ನರೇಂದ್ರ ಮೋದಿಯವರು ಭಾರತೀಯರಲ್ಲಿ ವಿನಂತಿಸಿದ್ದರು. ಯಾವುದೇ ನೇತಾರ ಮಾಡಬಹುದಾದ ಅಪರೂಪದ ವಿನಂತಿ ಇದು. 85% ಜನರು ಅವಲಂಬಿಸಿರುವ ನಗದು ವ್ಯವಹಾರವನ್ನು ದಿಢೀರನೇ ರದ್ದುಗೊಳಿಸುವುದು, ಬ್ಯಾಂಕ್‍ನೆದುರು ದಿನಗಟ್ಟಲೆ ಸರತಿ ಸಾಲಲ್ಲಿ ನಿಲ್ಲಿಸುವುದು ಹಾಗೂ ಈ ಸ್ಥಿತಿ 50 ದಿನಗಳವರೆಗೆ ಇರುತ್ತದೆ ಎಂದು ಹೇಳುವುದೇ ಒಂದು ರೀತಿಯಲ್ಲಿ ಅಸೌಜನ್ಯ ಮತ್ತು ಜನವಿರೋಧಿ. ಆದರೆ, ಜನರು ಅದನ್ನು ಅತ್ಯಂತ ಸಕಾರಾತ್ಮಕವಾಗಿ ಸ್ವೀಕರಿಸಿದರು. ಬಳಿಕ ಇದೇ ನೋಟು ರದ್ಧತಿ ನೀತಿಯನ್ನು ವೆನೆಝುವೇಲಾದಲ್ಲಿ ಮಡುರೋ ಅವರ ಕಮ್ಯುನಿಸ್ಟ್ ಸರಕಾರ ಜಾರಿಗೆ ತಂದಾಗ ಜನರು ದಂಗೆ ಎದ್ದು ಬ್ಯಾಂಕ್ ಲೂಟಿ ಮಾಡಿದುದನ್ನು ಮತ್ತು ನೋಟು ರದ್ಧತಿಯನ್ನೇ ಸರಕಾರ ರದ್ದು ಮಾಡಬೇಕಾಗಿ ಬಂದುದನ್ನು ಪರಿಗಣಿಸುವಾಗ ಭಾರತೀಯರು ತೋರಿದ ಸಹಕಾರ ನೀತಿಯ ಬೆಲೆ ಏನು ಎಂಬುದು ಸ್ಪಷ್ಟವಾಗುತ್ತದೆ. ನೋಟು ಅಮಾನ್ಯದಿಂದ ತೊಂದರೆಗೊಳಗಾಗಿ 100ಕ್ಕಿಂತ ಅಧಿಕ ಮಂದಿ ಸಾವಿಗೀಡಾದರೂ ಭಾರತೀಯರು ದಂಗೆ ಏಳಲಿಲ್ಲ. ಬ್ಯಾಂಕ್ ಲೂಟಿಗೂ ಇಳಿಯಲಿಲ್ಲ. ‘ದೇಶದ ಹಿತಕ್ಕಾಗಿ ಅಳಿಲು ಸೇವೆ’ ಎಂಬ ಭಾವದಲ್ಲಿ ಅವರೆಲ್ಲ ಸಹಿಸಿಕೊಂಡರು. ಆದ್ದರಿಂದಲೇ ಡಿ. 31ನ್ನು ಭಾರತೀಯರು ಅಪಾರ ನಿರೀಕ್ಷೆಯಿಂದ ಕಾದರು. ತಾವು ತಮ್ಮದೇ ಹಣವನ್ನು ಪಡಕೊಳ್ಳುವುದಕ್ಕಾಗಿ ಬಿಸಿಲಲ್ಲಿ ದಿನಗಟ್ಟಲೆ ಕಳೆದ ಸಮಯದ ಫಲಿತಾಂಶವನ್ನು ಡಿ. 31ರಂದು ಪ್ರಧಾನಿಯವರು ಪ್ರಕಟಿಸುತ್ತಾರೆ ಎಂಬ ತೀರಾ ತೀರಾ ಜುಜುಬಿ ಆಸೆಯಷ್ಟೇ ಅವರದಾಗಿತ್ತು. ಹಣ ಅವರದ್ದು, ಸಮಯ ಅವರದ್ದು, ಆರೋಗ್ಯವೂ ಅವರದ್ದೇ. ಜನಸಾಮಾನ್ಯರಿಂದ ಈ ಎಲ್ಲವನ್ನೂ 50 ದಿನಗಳ ವರೆಗೆ ಕಿತ್ತುಕೊಂಡ ಪ್ರಧಾನಿಯವರಿಗೆ, ಅದರಿಂದ ದೇಶಕ್ಕೆ ಮತ್ತು ಆ ಮೂಲಕ ಜನಸಾಮಾನ್ಯರಿಗೆ ಆಗಿರುವ ಲಾಭ ಏನು ಎಂಬುದನ್ನು ಹೇಳಬೇಕಾದ ಜವಾಬ್ದಾರಿ ಖಂಡಿತ ಇದೆ. ನರೇಂದ್ರ ಮೋದಿಯವರು ಡಿ. 31ರಂದು ಭಾಷಣವನ್ನೇನೋ ಮಾಡಿದರು. ಆದರೆ ಆ ಭಾಷಣವು 50 ದಿನಗಳನ್ನು ಕೊಟ್ಟ ಜನಸಾಮಾನ್ಯರನ್ನು ಅಣಕಿಸುವ ರೀತಿಯಲ್ಲಿತ್ತು. ಅವರು ತಮ್ಮ ಭಾಷಣದಲ್ಲಿ ನೋಟು ಅಮಾನ್ಯತೆಗೆ ಸಂಬಂಧಿಸಿದಂತೆ ಬಹುಮುಖ್ಯ ಭಾಗವನ್ನು ಸ್ಪರ್ಶಿಸಲೇ ಇಲ್ಲ. ಬ್ಯಾಂಕ್‍ಗಳಲ್ಲಿ ಜಮೆ ಆಗಿರುವ ಹಣ ಎಷ್ಟು, ಕಪ್ಪು ಹಣ ಎಷ್ಟು, ಹೊಸದಾಗಿ ಎಷ್ಟು ನೋಟುಗಳನ್ನು ಮುದ್ರಿಸಲಾಗಿದೆ, ಜನಸಾಮಾನ್ಯರಿಗೆ ಲಭ್ಯವಾದ ದೀರ್ಘಾವಧಿ ಲಾಭ ಏನು ಮತ್ತು ಆ ಕುರಿತಾದ ಅಂಕಿ-ಅಂಶಗಳೇನು.. ಮುಂತಾದ ಜನಸಾಮಾನ್ಯರ ಕುತೂಹಲಗಳಿಗೆ ಮೋದಿಯವರು ಸ್ಪಂದಿಸಲೇ ಇಲ್ಲ. ಅದರ ಬದಲು ಅವರು ಕೆಲವು ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದರು. 50 ದಿನಗಳ ವರೆಗೆ ದೇಶಕ್ಕಾಗಿ ಸಾಕಷ್ಟನ್ನು ಕಳಕೊಂಡ ಜನಸಾಮಾನ್ಯರನ್ನು ನಡೆಸಿಕೊಳ್ಳುವ ವಿಧಾನವೇ ಇದು? ಜನತಂತ್ರ ವ್ಯವಸ್ಥೆಯಲ್ಲಿ ಪ್ರಭುವಿನ ಸ್ಥಾನದಲ್ಲಿರುವ ಜನಸಾಮಾನ್ಯರನ್ನು ನೇತಾರನೊಬ್ಬ ಗುಲಾಮರಂತೆ ನಡೆಸಿಕೊಂಡುದುದಕ್ಕೆ ಉದಾಹರಣೆಯಲ್ಲವೇ ಇದು? ನಿಜವಾಗಿ, ನೋಟು ಅಮಾನ್ಯತೆಯ ಘೋರ ವೈಫಲ್ಯವನ್ನು ಸೂಚಿಸುವ ಬೆಳವಣಿಗೆ ಇದು. ಪ್ರಧಾನಿಯವರಿಗೆ ನೋಟು ಅಮಾನ್ಯತೆಯಿಂದಾಗುವ ದೀರ್ಘಾವಧಿ ಲಾಭದ ಬಗ್ಗೆ ಖಚಿತತೆ ಇಲ್ಲ ಅಥವಾ ಅದರ ವೈಫಲ್ಯದ ಮುನ್ಸೂಚನೆ ಅವರಿಗೆ ಸಿಕ್ಕಿದೆ. ಆದ್ದರಿಂದಲೇ ಅವರು ಮಾತು ಹೊರಳಿಸಿದ್ದಾರೆ. ನೋಟು ಅಮಾನ್ಯತೆ ಚರ್ಚೆಗೊಳಗಾಗದಂತೆ ನೋಡಿಕೊಳ್ಳಲು ಯತ್ನಿಸಿದ್ದಾರೆ. ಈ ಗೊಂದಲದಲ್ಲಿ ಅವರಿಗಾಗಿ ಜೀವತೆತ್ತ 100ಕ್ಕಿಂತಲೂ ಅಧಿಕ ಜನಸಾಮಾನ್ಯರಿಗೆ ಕನಿಷ್ಠ ಶ್ರದ್ಧಾಂಜಲಿ ಸಲ್ಲಿಸುವುದಕ್ಕೂ ಅವರು ಮರೆತು ಬಿಟ್ಟಿದ್ದಾರೆ. ಅಂದಹಾಗೆ, ಈ ವೈಫಲ್ಯಕ್ಕಿಂತ ಎರಡ್ಮೂರು ದಿನಗಳ ಮೊದಲೇ ರಷ್ಯಾದ ಮಾಸ್ಕೋದಲ್ಲಿ ನಡೆದ ಸಭೆಯೊಂದು ಮೋದಿಯವರನ್ನು ಅಸಮರ್ಥ ಎಂದು ಪರೋಕ್ಷವಾಗಿ ಸಾರಿತ್ತು.
       ಚೀನಾ, ಪಾಕಿಸ್ತಾನ ಮತ್ತು ರಷ್ಯಾಗಳು ಜೊತೆ ಸೇರಿಕೊಂಡು ಮಾಸ್ಕೋದಲ್ಲಿ ಕಳೆದ ವಾರ ಸಭೆ ನಡೆಸಿದುವು. ತಾಲಿಬಾನನ್ನು ಮುಖ್ಯವಾಹಿನಿಗೆ ತರುವುದು, ಅಫಘಾನ್ ಆಡಳಿತದಲ್ಲಿ ತಾಲಿಬಾನ್‍ಗೆ ಸ್ಥಾನ ಕಲ್ಪಿಸುವುದು ಮತ್ತು ಅದಕ್ಕೆ ಶಸ್ತ್ರಾಸ್ತ್ರ ಕೊಟ್ಟು ಐಸಿಸ್‍ನ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸುವುದು.. ಇವು ಸಭೆಯ ಒಟ್ಟು ಉದ್ದೇಶವಾಗಿತ್ತು. ಇರಾನ್ ಕೂಡ ಅದನ್ನು ಬೆಂಬಲಿಸಿತು. ಒಂದು ರೀತಿಯಲ್ಲಿ, ಈ ಸಭೆಯು ಭಾರತದ ಹಿತಾಸಕ್ತಿಗೆ ವಿರುದ್ಧ. ಪಾಕ್ ಮತ್ತು ಚೀನಾಗಳು ಅಫಘಾನ್‍ನಲ್ಲಿ ಪ್ರಾಬಲ್ಯ ಪಡೆಯುವುದೆಂದರೆ ಮತ್ತು ತಾಲಿಬಾನ್‍ಗೆ ಮರುಜೀವ ಕೊಡುವುದೆಂದರೆ ಅಫಘಾನ್‍ನಿಂದ ಭಾರತವನ್ನು ಹೊರದಬ್ಬುವುದು ಎಂದೇ ಅರ್ಥ. ಅಫಘಾನ್‍ನ ನಿರ್ಮಾಣ ಕಾಮಗಾರಿಯಲ್ಲಿ ಭಾರತ ತೊಡಗಿಸಿಕೊಂಡಿದೆ. ಸಾಕಷ್ಟು ಹೂಡಿಕೆಯನ್ನೂ ಮಾಡಿದೆ. ಅಲ್ಲದೇ ತಾಲಿಬಾನ್ ಅನ್ನು ಮೋದಿ ಸರಕಾರವು ಭಾರತದ ವೈರಿಯೆಂದೇ ಪರಿಗಣಿಸಿದೆ. ರಷ್ಯಾದೊಂದಿಗೆ 67 ಸಾವಿರ ಕೋಟಿ ರೂಪಾಯಿಯ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಭಾರತವು ಇತ್ತೀಚೆಗಷ್ಟೇ ಸಹಿ ಹಾಕಿದ ಬಳಿಕವೂ ಭಾರತ ವಿರೋಧಿ ಸಭೆಗೆ ರಷ್ಯಾ ನೇತೃತ್ವ ನೀಡುವುದೆಂದರೆ ಏನರ್ಥ? ನರೇಂದ್ರ ಮೋದಿಯವರು ತನ್ನ ಅಧಿಕಾರದ ಈ ಎರಡೂವರೆ ವರ್ಷಗಳಲ್ಲಿ ಸುತ್ತದ ದೇಶಗಳಿಲ್ಲ. ತನ್ನ ಈ ವಿದೇಶಿ ಭೇಟಿಯನ್ನೆಲ್ಲ ಅವರು ಸಹಕಾರ ವೃದ್ಧಿಯ ಹೆಸರಲ್ಲಿ ಸಮರ್ಥಿಸಿಕೊಂಡಿದ್ದರು. ಅವರ ಬೆಂಬಲಿಗರು ಜಗತ್ತೇ ಭಾರತದ ಜೊತೆಗಿದೆ ಎಂಬುದಾಗಿ ಈ ಭೇಟಿಯನ್ನು ಉಲ್ಲೇಖಿಸಿ ವಾದಿಸಿದ್ದರು. ಪಾಕಿಸ್ತಾನ ಒಂಟಿಯಾಯಿತೆಂದು ಸಂಭ್ರಮಿಸಿದ್ದರು. ಆದರೆ, ಮೋದಿಯವರ ರಾಜತಾಂತ್ರಿಕ ನೀತಿ ಅಸಮರ್ಥವಾಗಿದೆ ಎಂಬುದನ್ನು ಮಾಸ್ಕೋ ಸಭೆ ಇದೀಗ ಸ್ಪಷ್ಟಪಡಿಸಿದೆ. 67 ಸಾವಿರ ಕೋಟಿ ರೂಪಾಯಿಯ ಶಸ್ತ್ರಾಸ್ತ್ರ ಖರೀದಿಸುವ ಒಪ್ಪಂದ ಮಾಡಿಕೊಂಡ ಬಳಿಕವೂ ಭಾರತದ ಹಿತಾಸಕ್ತಿಗೆ ರಶ್ಯಾ ವಿರುದ್ಧವಾಗಿ ನಿಂತಿದೆ. ರಷ್ಯಾದ ಅಧ್ಯಕ್ಷ ಪುತಿನ್‍ರೊಂದಿಗೆ ಅಮೇರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್‍ಗೆ ಆತ್ಮೀಯ ಬಾಂಧವ್ಯ ಇರುವುದರಿಂದಾಗಿ ಇನ್ನಷ್ಟು ಭಾರತ ಹಿತಾಸಕ್ತಿ ವಿರೋಧಿ ನೀತಿಗಳು ಭವಿಷ್ಯದಲ್ಲಿ ಜಾರಿಯಾಗುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಒಂದು ಕಡೆ, ಭಾರತವು ಕಪ್ಪು ಪಟ್ಟಿಯಲ್ಲಿ ಸೇರಿಸಿರುವ ಪಾಕಿಸ್ತಾನದ ಮಸ್ಹೂದ್ ಅಝರ್‍ನ ಮೇಲೆ ವಿಶ್ವಸಂಸ್ಥೆಯಲ್ಲಿ ನಿಷೇಧ ವಿಧಿಸಲು ಮೋದಿಯವರಿಗೆ ಸಾಧ್ಯವಾಗಿಲ್ಲ. ಇನ್ನೊಂದು ಕಡೆ, ಎನ್‍ಎಸ್‍ಜಿಯಲ್ಲಿ ಸ್ಥಾನ ಪಡೆಯುವಲ್ಲೂ ಭಾರತ ವಿಫಲವಾಗುತ್ತಿದೆ. ಮತ್ತೊಂದೆಡೆ, ಭಾರತದ ಹಿತಾಸಕ್ತಿಗೆ ಧಕ್ಕೆಯಾಗಬಹುದೆಂದು ಹೇಳಲಾಗುವ ಬೆಳವಣಿಗೆಗಳು ನಡೆಯುತ್ತಿವೆ. ಇದು ಸೂಚಿಸುವುದೇನನ್ನು? ನರೇಂದ್ರ ಮೋದಿಯವರ ವಿದೇಶಿ ಭೇಟಿಗಳು ಯಶಸ್ವಿ ಆಗಿರುತ್ತಿದ್ದರೆ ಈ ಎಲ್ಲ ಬೆಳವಣಿಗೆಗಳು ನಡೆಯಲು ಸಾಧ್ಯವಿತ್ತೇ? ಸದ್ಯ, ಪಾಕಿಸ್ತಾನವು ರಷ್ಯಾ ಮತ್ತು ಅಮೇರಿಕ ಎರಡಕ್ಕೂ ಹತ್ತಿರವಾಗುತ್ತಿದೆ. ಆದರೆ, ಹೊಸ ರಾಜತಾಂತ್ರಿಕ ನೀತಿಯನ್ನು ಪರಿಚಯಿಸಿದ ಭಾರತವು ಎರಡರಿಂದಲೂ ದೂರವಾಗುತ್ತಿದೆ. ಪಾಕಿಸ್ತಾನವನ್ನು ಒಂಟಿ ಮಾಡುವುದಕ್ಕೆ ಹೊರಟ ನರೇಂದ್ರ ಮೋದಿಯವರು ಅಂತಿಮವಾಗಿ ಭಾರತವನ್ನೇ ಒಂಟಿ ಮಾಡುತ್ತಿದ್ದಾರೆಯೇ?
      ಡಿ. 31ರಂದು ನರೇಂದ್ರ ಮೋದಿಯವರು ಮಾಡಿದ ಭಾಷಣ ಮತ್ತು ಅದಕ್ಕಿಂತ ಮೊದಲು ಮಾಸ್ಕೋದಲ್ಲಿ ನಡೆದ ಸಭೆ - ಎರಡರ ಸಂದೇಶವೂ ಒಂದೇ. ಭಾರತ ದುರ್ಬಲವಾಗುತ್ತಿದೆ. ಮೋದಿಯವರು ಅಸಮರ್ಥರಾಗುತ್ತಿದ್ದಾರೆ.

Wednesday, 4 January 2017

50 ದಿನಗಳು ಮತ್ತು ಎರಡು ಪ್ರಶ್ನೆಗಳು

        ನೋಟು ಅಮಾನ್ಯದ ನಂತರದ ಬೆಳವಣಿಗೆಗಳು ಎರಡು ಬಹುಮುಖ್ಯ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಒಂದು- ನಿಜಕ್ಕೂ ಇದರ ಹಿಂದಿನ ಮುಖ್ಯ ಉದ್ದೇಶ ಕಪ್ಪು ಹಣ, ಭ್ರಷ್ಟಾಚಾರ, ನಕಲಿ ನೋಟುಗಳನ್ನು ನಿರ್ಬಂಧಿಸುವುದೇ ಆಗಿದೆಯೇ? ಎರಡು- ದೇಶ ಬಿಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರ ಇಂಥದ್ದೊಂದು ಪ್ರಕ್ರಿಯೆಗೆ ಸಿದ್ಧವಾಗಿತ್ತೇ?
       ಪ್ರಧಾನಿ ಮೋದಿಯವರು ನವೆಂಬರ್ 8ರಂದು ನೋಟು ಅಮಾನ್ಯದ ಘೋಷಣೆಯನ್ನು ಹೊರಡಿಸಿದ ಬಳಿಕ, ತೆರಿಗೆ ಇಲಾಖೆಯಿಂದ ದೇಶದಾದ್ಯಂತ ಅನೇಕಾರು ದಾಳಿಗಳಾಗಿವೆ. ಕರ್ನಾಟಕ ಮತ್ತು ತಮಿಳುನಾಡುಗಳಲ್ಲೇ ಯಾಕೆ ಹೆಚ್ಚಿನ ದಾಳಿಗಳಾಗಿವೆ ಎಂಬ ಪ್ರಶ್ನೆ ಸಹಜವಾಗಿದ್ದರೂ ಮತ್ತು ಈ ಕಾರಣಕ್ಕಾಗಿಯೇ ಈ ದಾಳಿಗಳ ಹಿಂದೆ ರಾಜಕೀಯ ದುರುದ್ದೇಶವನ್ನು ಶಂಕಿಸಬಹುದಾದರೂ ಇದರ ಹೊರತಾಗಿಯೂ ಈ ದಾಳಿಗಳು ವಿಶ್ಲೇಷಣೆಗೆ ಅರ್ಹವಾಗಿವೆ. ಕಳೆದವಾರ, ತಮಿಳ್ನಾಡಿನ ಮುಖ್ಯ ಕಾರ್ಯದರ್ಶಿ ರಾಮ್ ಮೋಹನ್ ರಾವ್‍ರ ಮನೆಯ ಮೇಲೆ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಲೋಡುಗಟ್ಟಲೆ ನಗದು, ಬಂಗಾರ, ಆಭರಣಗಳು ದೊರಕಿವೆ. ಕರ್ನಾಟಕ, ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ.. ಮುಂತಾದ ಕಡೆಯೂ ಇಂಥದ್ದೇ ದಾಳಿಗಳು ನಡೆದಿವೆ. ಅಧಿಕಾರಿಗಳು, ಉದ್ಯಮಿಗಳು ಕಪ್ಪು ಹಣದ ಮೂಲಕ ಸಿಕ್ಕಿಬಿದ್ದಿದ್ದಾರೆ. ಇಲ್ಲೂ ಕೆಲವು ಪ್ರಶ್ನೆಗಳಿವೆ. ನೋಟು ಅಮಾನ್ಯದ ಬಳಿಕವೇ ಈ ದಾಳಿಗಳು ನಡೆಯಲು ಕಾರಣವೇನು? ಅದೂ ನಿರ್ದಿಷ್ಟ ರಾಜ್ಯಗಳೇ ಈ ದಾಳಿಗಳ ಮುಖ್ಯ ಗುರಿ ಆಗಿರುವುದೇಕೆ? ತೆರಿಗೆ ಇಲಾಖೆಯ ದಾಳಿಗೆ ನಿರ್ದಿಷ್ಟ ದಿನ, ತಿಂಗಳು, ವರ್ಷಗಳು ಎಂಬುದಿಲ್ಲವಲ್ಲ. ಅದು ಸಹಜ ಪ್ರಕ್ರಿಯೆ. ಯಾವ ಸಂದರ್ಭದಲ್ಲೂ ಅದು ದಾಳಿ ನಡೆಸಬಹುದು. ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕಿಂತ ಮೊದಲೇ ತೆರಿಗೆ ಇಲಾಖೆ ಇದೆ ಮತ್ತು ದಾಳಿಯನ್ನೂ ನಡೆಸಿದೆ. ಆದ್ದರಿಂದ ನೋಟು ಅಮಾನ್ಯತೆಯು ತೆರಿಗೆ ಇಲಾಖೆಗೆ ದಾಳಿ ನಡೆಸಲು ಲಭಿಸಿದ ಸ್ವಾತಂತ್ರ್ಯ ಎಂದು ಭಾವಿಸುವುದು ಅಸಂಬದ್ಧವಾಗುತ್ತದೆ. ನೋಟು ಅಮಾನ್ಯತೆಯನ್ನು ಬೆಂಬಲಿಸುವ ಮಂದಿ ಅದಕ್ಕೆ ಸಮರ್ಥನೆಯಾಗಿ ತೆರಿಗೆ ಇಲಾಖೆಯ ದಾಳಿಯಲ್ಲಿ ಸಿಕ್ಕಿ ಬಿದ್ದವರನ್ನು ಉಲ್ಲೇಖಿಸುತ್ತಿರುವುದು ಹಾಸ್ಯಾಸ್ಪದವೆಂದು ಹೇಳಬೇಕಾದುದು ಈ ಕಾರಣದಿಂದಾಗಿ. ಒಂದು ರೀತಿಯಲ್ಲಿ, ಈ ದಾಳಿಯೇ ಪ್ರಧಾನಿಯವರ ಘೋಷಿತ ಉದ್ದೇಶ ಶುದ್ಧಿಯನ್ನು ಪ್ರಶ್ನಾರ್ಹಗೊಳಿಸುವುದಕ್ಕೆ ಸಾಕಾಗಬಹುದು. ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿ ನರೇಂದ್ರ ಮೋದಿಯಾಗುವುದಕ್ಕಿಂತ ಮೊದಲೇ ಕಪ್ಪು ಹಣದ ನಿರ್ಮೂಲನೆಯ ಬಗ್ಗೆ ಭರವಸೆ ನೀಡಿದವರು. ಸ್ವಿಸ್ ಬ್ಯಾಂಕ್‍ನಲ್ಲಿರುವ ಸುಮಾರು 648 ಭಾರತೀಯ ಖಾತೆಗಳಲ್ಲಿರುವ ಕಪ್ಪು ಹಣವನ್ನೆಲ್ಲ ವಶಪಡಿಸಿಕೊಂಡು ಪ್ರತಿ ಭಾರತೀಯರ ಜೇಬಿಗೆ ತಲಾ 15 ಲಕ್ಷ ಪಾವತಿಸುವುದಾಗಿ ಮಾತು ಕೊಟ್ಟವರು. ಅದಕ್ಕಾಗಿ 100 ದಿನಗಳ ವಾಯಿದೆಯನ್ನೂ ಕೇಳಿದವರು. ಹಾಗಂತ, ಸ್ವಿಝರ್‍ಲ್ಯಾಂಡ್ ಎಂಬುದು ಭಾರತದ ಒಂದು ರಾಜ್ಯ ಅಲ್ಲವಾದುದರಿಂದ ಈ ಭರವಸೆಯನ್ನು ಈಡೇರಿಸುವಲ್ಲಿ ಅವರಿಗಿರುವ ಅಡೆ-ತಡೆಗಳನ್ನು ಒಂದು ಹಂತದವರೆಗೆ ಒಪ್ಪಿಕೊಳ್ಳೋಣ. ಆದರೆ, ಭಾರತದ ಒಳಗಿನ ಕಪ್ಪು ಹಣವನ್ನು ವಶಪಡಿಸಿಕೊಳ್ಳುವುದಕ್ಕೆ ಈ ಯಾವ ಅಡೆತಡೆಗಳೂ ಇರಲಿಲ್ಲವಲ್ಲ? ಪ್ರಧಾನಿಯಾದ ತಕ್ಷಣ ಕಪ್ಪು ಕುಳಗಳ ಮೇಲೆ ತೆರಿಗೆ ಇಲಾಖೆಯಿಂದ ಅವರಿಗೆ ದಾಳಿ ನಡೆಸಬಹುದಿತ್ತಲ್ಲವೇ? 15 ಲಕ್ಷವಲ್ಲದಿದ್ದರೂ ಸಾವಿರ ರೂಪಾಯಿಯನ್ನಾದರೂ ಭಾರತೀಯರ ಖಾತೆಗೆ ಜಮೆ ಮಾಡಬಹುದಿತ್ತಲ್ಲವೇ? ಅದು ಬಿಟ್ಟು ಪೈಂಟರ್‍ಗಳು, ಪ್ಲಂಬರ್‍ಗಳು, ಕೂಲಿ ಕಾರ್ಮಿಕರು, ವೃದ್ಧರು ಸಹಿತ ಬಡ ಭಾರತೀಯರನ್ನು ಎಟಿಎಮ್‍ಗಳ ಎದುರು ನಿಲ್ಲಿಸಿದ್ದೇಕೆ? ಕಪ್ಪು ಹಣ ಯಾರ ಬಳಿ ಇದೆ ಎಂಬುದು ತೆರಿಗೆ ಇಲಾಖೆಗೆ ಗೊತ್ತು ಅಥವಾ ಆ ಕುರಿತಾದ ಮಾಹಿತಿಯನ್ನು ಸಂಗ್ರಹಿಸುವ ಸಾಮರ್ಥ್ಯ ತೆರಿಗೆ ಇಲಾಖೆಗಿದೆ. ಉಳ್ಳವರ ಕೈಯಲ್ಲಿರುವ ಕಪ್ಪು ಹಣವನ್ನು ವಶಪಡಿಸುವುದಕ್ಕೆ ಇಲ್ಲದವರನ್ನು ಎಟಿಎಂನ ಮುಂದೆ ಬಿಸಿಲಲ್ಲಿ ತಿಂಗಳುಗಟ್ಟಲೆ ನಿಲ್ಲಿಸಬೇಕೇ? ಒಂದು ಸರಕಾರಕ್ಕೆ ಇಷ್ಟೂ ಗೊತ್ತಾಗಲ್ಲ ಎಂಬುದನ್ನು ಹೇಗೆ ನಂಬುವುದು? ಅಥವಾ ಬೃಹತ್ ಉದ್ಯಮಿಗಳ ಬ್ಯಾಂಕ್ ಸಾಲವನ್ನು ಮನ್ನಾ ಮಾಡಬೇಕಾದ ಒತ್ತಡಕ್ಕೆ ಸಿಲುಕಿದ ಪರಿಣಾಮದಿಂದಾಗಿ ಇಂಥದ್ದೊಂದು ನಿರ್ಧಾರಕ್ಕೆ ಸರಕಾರ ಬಂತೇ? ಸಾಲ ಮನ್ನಾದಿಂದಾಗಿ ಖಾಲಿ ಕೊಡದಂತಾಗುವ ಬ್ಯಾಂಕ್‍ಗಳಿಗೆ ಹಣ ತುಂಬಿಸುವುದಕ್ಕಾಗಿ ನೋಟು ಅಮಾನ್ಯದ ದಿಢೀರ್ ನಿರ್ಧಾರಕ್ಕೆ ನರೇಂದ್ರ ಮೋದಿ ಮುಂದಾದರೇ? ಯಾಕೆಂದರೆ, ನವೆಂಬರ್ 8ರ ಬಳಿಕದ ಈ ಸುಮಾರು 50 ದಿನಗಳಲ್ಲಿ ಸರಕಾರ ಮತ್ತು ಆರ್.ಬಿ.ಐ. ಒಟ್ಟು ಸೇರಿ 60ರಷ್ಟು ಸುತ್ತೋಲೆಗಳನ್ನು ಹೊರಡಿಸಿವೆ. ನಿಖರ ಯೋಜನೆ, ಸ್ಪಷ್ಟ ಕಾರ್ಯಸೂಚಿ ಹೊಂದಿರುವ ಯಾವುದೇ ನಿರ್ಧಾರಕ್ಕೆ ಇಷ್ಟೊಂದು ಸುತ್ತೋಲೆಗಳ ಅಗತ್ಯ ಇರುವುದೇ ಇಲ್ಲ. ಇನ್ನೊಂದು ಕಡೆ, ತೆರಿಗೆ ಇಲಾಖೆಯ ದಾಳಿಯಲ್ಲಿ ಕೋಟ್ಯಂತರ ರೂಪಾಯಿಯ ಹೊಸ ನೋಟುಗಳು ಪತ್ತೆಯಾಗಿವೆ. ಇದರರ್ಥ, ಭ್ರಷ್ಟರು ಧಾರಾಳ ಸಂಖ್ಯೆಯಲ್ಲಿ ತಮ್ಮ ಕಪ್ಪು ಹಣವನ್ನು ಬಿಳಿ ಮಾಡಿಕೊಂಡಿದ್ದಾರೆ ಎಂದೇ. ತೆರಿಗೆ ಇಲಾಖೆ ದಾಳಿ ಮಾಡಿದ ಕೆಲವು ಎಣಿಕೆಯ ಮಂದಿಯ ಹೊರತಾಗಿ ದಾಳಿಗೊಳಗಾಗದ ಇಂಥವರ ಸಂಖ್ಯೆ ಎಷ್ಟಿರಬಹುದು? ಇಂಥ ಸಾಧ್ಯತೆಯನ್ನು ಸರಕಾರ ಮುಂಚಿತವಾಗಿ ಯಾಕೆ ಕಂಡುಕೊಳ್ಲಲಿಲ್ಲ? ಇದು ಎಡವಟ್ಟೋ ಅಲ್ಲ ಉದ್ದೇಶಪೂರ್ವಕವೋ? ಒಂದು ಕಡೆ, ರಾಜಕೀಯ ಪಕ್ಷಗಳ ವರಮಾನದ ಮೇಲೆ ಪ್ರಧಾನಿಯವರು ಯಾವ ಪ್ರಶ್ನೆಯನ್ನೂ ಎತ್ತುತ್ತಿಲ್ಲ. ಉದ್ಯಮಿಗಳ ಕಪ್ಪುಹಣದ ದೊಡ್ಡದೊಂದು ಮೂಟೆ ಬಿಜೆಪಿ, ಕಾಂಗ್ರೆಸ್ ಸಹಿತ ಪ್ರಮುಖ ರಾಜಕೀಯ ಪಕ್ಷಗಳಿಗೆ ಸಂದಾಯವಾಗುತ್ತಲೇ ಇವೆ. ಕನಿಷ್ಠ ಕಳೆದ 5 ವರ್ಷಗಳಿಂದ ರಾಜಕೀಯ ಪಕ್ಷಗಳಿಗೆ ಸಂದಾಯವಾದ ಮೊತ್ತದ ವಿವರವನ್ನಾದರೂ ನರೇಂದ್ರ ಮೋದಿಯವರು ‘ಬಿಳಿ’ಗೊಳಿಸಬಹುದಿತ್ತಲ್ಲವೇ? ಅದಕ್ಕಾಗಿ ಸರ್ಜಿಕಲ್ ದಾಳಿ ನಡೆಸಬಹುದಿತ್ತಲ್ಲವೇ? ಅದನ್ನು ಬಿಟ್ಟು ಬಡ ಭಾರತೀಯರ ಮೇಲೆ ದಾಳಿ ನಡೆಸಿದ್ದೇಕೆ?
       ನಿಜವಾಗಿ, ರಾಜಕೀಯ ದೇಣಿಗೆಯಲ್ಲಿ ಒಂದು ಬಗೆಯ ಋಣ ಸಂದಾಯವಿರುತ್ತದೆ. ದೇಣಿಗೆ ಪಡೆದ ಪಕ್ಷ ಅಧಿಕಾರಕ್ಕೆ ಬಂದಾಗ ದೇಣಿಗೆ ನೀಡಿದವರ ಬೇಡಿಕೆಗಳನ್ನು ಪೂರೈಸಬೇಕಾದ ಒತ್ತಡಕ್ಕೆ ಒಳಗಾಗುತ್ತದೆ. ನೋಟು ಅಮಾನ್ಯ ಇಂಥದ್ದೊಂದು ಒತ್ತಡದ ಕೂಸೇ? ನರೇಂದ್ರ ಮೋದಿಯವರನ್ನು ದೇಣಿಗೆ ಮತ್ತಿತರ ಒತ್ತಡಗಳು ಕೈಕಟ್ಟಿ ಹಾಕಿದ್ದುವೇ? ಅವರ ಬ್ಯಾಂಕ್ ಸಾಲವನ್ನು ಮನ್ನಾ ಮಾಡುವುದಕ್ಕಾಗಿ ನೋಟು ಅಮಾನ್ಯ ದಿಢೀರ್ ಜಾರಿಗೊಂಡಿತೇ? ಪ್ರಧಾನಿಯವರ 50 ದಿನಗಳ ವಾಯಿದೆಯು ಬಹುತೇಕ ಕೊನೆಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂಥ ಪ್ರಶ್ನೆಗಳು ಹೆಚ್ಚೆಚ್ಚು ಪ್ರಸ್ತುತಗೊಳ್ಳುತ್ತವೆ. ಇಷ್ಟು ದಿನಗಳಾದರೂ ಬ್ಯಾಂಕುಗಳು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ನಿಬರ್ಂಧಗಳಲ್ಲಿ ಸಡಿಲಿಕೆಯಾಗಿಲ್ಲ. ಬಹುತೇಕ ಎಟಿಎಂಗಳು ಕಾರ್ಯನಿರ್ವಹಿಸುತ್ತಲೂ ಇಲ್ಲ. ಕಳೆದವಾರ ಪಶ್ಚಿಮ ಬಂಗಾಳದ ನಾರು ಉದ್ಯಮ ಸಂಸ್ಥೆಯೊಂದು ಕೆಲಸ ಸ್ಥಗಿತಗೊಳಿಸಿದೆ. ಆ ಮೂಲಕ ನಾಲ್ಕು ಸಾವಿರದಷ್ಟು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಹಾಗಂತ, ಇದು ಮೊದಲ ಪ್ರಕರಣ ಅಲ್ಲ. ಸಾಮಾನ್ಯ ಜನರ ಅನ್ನದ ಬಟ್ಟಲಾಗಿರುವ ಅನೇಕಾರು ಉದ್ಯಮಗಳು, ಚಿಕ್ಕ-ಪುಟ್ಟ ಸಂಸ್ಥೆಗಳು, ವ್ಯಾಪಾರಗಳು ಕೆಲಸ ನಿಲ್ಲಿಸಿವೆ. ತನ್ನದೇ ಹಣವನ್ನು ಪಡಕೊಳ್ಳುವುದಕ್ಕೆ ಕೆಲಸಕ್ಕೆ ರಜೆ ಹಾಕಿ ಸರತಿಯಲ್ಲಿ ನಿಲ್ಲಬೇಕಾದ ಒತ್ತಡವನ್ನು ಬಡವರ ಮೇಲೆ ಹೇರಲಾಗಿದೆ. ಇದು ಸುಧಾರಣಾ ವಿಧಾನವೇ? ಭ್ರಷ್ಟರ ಕೈಯಲ್ಲಿ ಹೊಸ ನೋಟುಗಳು ಕೋಟ್ಯಂತರ ಲೆಕ್ಕದಲ್ಲಿ ಇವೆ. ಬಡವರು ಕನಿಷ್ಠ 500 ರೂಪಾಯಿಗೂ ದಿನವೊಂದನ್ನು ಬ್ಯಾಂಕುಗಳ ಮುಂದೆ ಕೊಲ್ಲಬೇಕಾಗುತ್ತದೆ. ನೋಟು ಅಮಾನ್ಯದ ಉದ್ದೇಶ ಶುದ್ಧಿಯು ಶಂಕೆಗೊಳಗಾಗುವುದು ಈ ಕಾರಣಕ್ಕಾಗಿ. ಲಾಭ ಯಾರಿಗೆ ಪ್ರಧಾನಿಯವರೇ ಎಂದು ಪ್ರಶ್ನಿಸಬೇಕಾಗಿರುವುದೂ ಇದೇ ಕಾರಣದಿಂದ.