ಹೆಣ್ಣು ಎಷ್ಟು ಅಮೂಲ್ಯ ಅನ್ನುವುದನ್ನು ಸಾಬೀತುಪಡಿಸುವ ಘಟನೆಗಳು ಆಗಾಗ ನಮ್ಮೆದುರು
ನಡೆಯುತ್ತಲೇ ಇರುತ್ತವೆ. ಕಳೆದವಾರ ಪೂಜಾ ಬಿಜರ್ನಿಯ ಎಂಬ ದೆಹಲಿಯ ಹೆಣ್ಣು ಮಗಳು
ಸುದ್ದಿಗೀಡಾದಳು. ಇಳಿ ವಯಸ್ಸಿನ ತಂದೆಗೆ ಆಕೆ ತನ್ನ ಯಕೃತ್ತನ್ನೇ (ಲಿವರ್) ದಾನ
ಮಾಡಿದಳು. ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ ಅವರಿಬ್ಬರ ಫೋಟೋವನ್ನು ವೈದ್ಯರಾದ ರಜಿತ್
ಭೂಷಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಹೊಟ್ಟೆಯ ಭಾಗದಲ್ಲಿ ಮೂಡಿರುವ
ಆಳವಾದ ಗಾಯದ ಗುರುತಿನ ನಡುವೆಯೂ ನಗುವ ಆ ಹೆಣ್ಣು ಮಗಳ ಫೋಟೋ, ಫ್ರೇಮ್ ಹಾಕಿ
ಕಾಪಿಡಬೇಕಾದಷ್ಟು ಅಮೂಲ್ಯವಾದುದು.
ಅಂದಹಾಗೆ, ಹೆಣ್ಣಿಗೆ ನಮ್ಮ ದೇಶದಲ್ಲಿ ಯಾವ ಸ್ಥಾನ-ಮಾನವಿದೆ ಎಂಬುದನ್ನು
ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಅಂಕಿ-ಅಂಶಗಳ ಮೊರೆ ಹೋಗಬೇಕಾಗಿಲ್ಲ. ಈ ದೇಶದಲ್ಲಿ
ಜಾರಿಯಲ್ಲಿರುವ ‘ಲಿಂಗ ಪತ್ತೆ ಪರೀಕ್ಷೆ ತಡೆ ಕಾನೂನೇ’ ಇದನ್ನು ಚೆನ್ನಾಗಿ
ವಿವರಿಸುತ್ತದೆ. ಈ ಆಧುನಿಕ ಕಾಲದಲ್ಲೂ ಈ ದೇಶದ ಓರ್ವ ತಾಯಿಗೆ ತನ್ನ
ಹೊಟ್ಟೆಯಲ್ಲಿರುವುದು ಹೆಣ್ಣೋ-ಗಂಡೋ ಎಂಬುದು ಗೊತ್ತಾಗುವುದೇ ಪ್ರಸವದ ಬಳಿಕ. ಅಷ್ಟಕ್ಕೂ,
ಗರ್ಭ ಧರಿಸುವುದು ಹೆಣ್ಣು. 9 ತಿಂಗಳು ಹೊಟ್ಟೆಯಲ್ಲಿಟ್ಟುಕೊಳ್ಳುವುದೂ ಹೆಣ್ಣು. ಈ
ಅವಧಿಯಲ್ಲಿ ಎದುರಾಗುವ ಸರ್ವ ಗರ್ಭ ಸಂಬಂಧಿ ಸಮಸ್ಯೆಗಳನ್ನು ತಾಳಿಕೊಳ್ಳುವುದೂ ಹೆಣ್ಣೇ.
ಆದರೂ ಆಕೆಗೆ ತನ್ನ ಹೊಟ್ಟೆಯಲ್ಲಿರುವ ಶಿಶು ಗಂಡೋ-ಹೆಣ್ಣೋ ಎಂಬುದನ್ನು ತಿಳಿದುಕೊಳ್ಳುವ
ಸ್ವಾತಂತ್ರ್ಯ ಇಲ್ಲ. ನಿಜವಾಗಿ, ಪ್ರಸವ ಪೂರ್ವದಲ್ಲೇ ಶಿಶುವಿನ ಲಿಂಗ
ಬಹಿರಂಗವಾಗುವುದರಿಂದ ಅನೇಕಾರು ಪ್ರಯೋಜನಗಳಿವೆ. ಹೆಣ್ಣು ಮಗುವನ್ನು ಬಯಸುವ ತಂದೆ ಆ
ಕುರಿತಂತೆ ತನ್ನೊಳಗೆ ಕನಸುಗಳನ್ನು ಹೆಣೆಯಬಲ್ಲ. ಹೆಣ್ಣು ಮಕ್ಕಳ ಮನಸ್ಥಿತಿ
ಹೇಗಿರುತ್ತದೆ, ಅದರೊಂದಿಗೆ ಅಪ್ಪನಾಗಿ ತನ್ನ ವರ್ತನೆ ಹೇಗಿರಬೇಕು, ಯಾವ ರೀತಿ
ಬೆಳೆಸಬೇಕು, ಯಾವ ಹೆಸರು ಉತ್ತಮ, ತಾನೆಷ್ಟು ಸಮಯ ಮೀಸಲಿಡಬೇಕು…ಇತ್ಯಾದಿಗಳನ್ನು ನಿರ್ಣಯಿಸುವುದಕ್ಕೆ ಪ್ರಸವ ಪೂರ್ವದಲ್ಲೇ ಆತನಿಗೆ ಅದು ಅವಕಾಶ
ನೀಡುತ್ತದೆ. ನಿರ್ದಿಷ್ಟ ಮಗುವನ್ನು ಸ್ವಾಗತಿಸುವುದಕ್ಕೆ ಬೇಕಾದ ತಯಾರಿ ನಡೆಸಲು
ಸಮಯಾವಕಾಶವೂ ಸಿಕ್ಕಂತಾಗುತ್ತದೆ. ಸಾಮಾನ್ಯವಾಗಿ, ತಾಯಿಯ ಹೊಟ್ಟೆಯೊಳಗಿರುವ ಮಗು ಹೊರ
ಜಗತ್ತಿನ ಚಲನೆಗಳನ್ನು ಆಲಿಸುತ್ತದೆ ಎಂದುವಿ ಜ್ಞಾನ ಹೇಳುತ್ತದೆ. ತಾಯಿಯ ಭಾವನೆಗಳು
ಮಗುವಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಸಂಗೀತ ಆಲಿಸುವ ತಾಯಿಯಿಂದ ಮಗು ಸಂಗೀತದ
ಭಾವಗಳನ್ನು ಹೀರಬಹುದು. ತಾಯಿಯ ಖುಷಿ ಮಗುವಿಗೂ ರವಾನೆಯಾಗಬಹುದು. ತಾಯಿಯ ನೋವು ಮಗುವಿಗೂ
ಅರಿವಾಗಬಹುದು. ಒಂದು ವೇಳೆ, ಹುಟ್ಟಲಿರುವ ಮಗು ಹೆಣ್ಣೋ-ಗಂಡೋ ಎಂಬುದು ಹೆತ್ತವರಿಗೆ
ಪ್ರಸವ ಪೂರ್ವದಲ್ಲೇ ಗೊತ್ತಾದರೆ ಅವರು ಮಗುವನ್ನು ನಿರ್ದಿಷ್ಟ ಹೆಸರಲ್ಲೇ
ಸಂಬೋಧಿಸಬಹುದು. ಅದೇ ಭಾವದಲ್ಲಿ ಪರಸ್ಪರ ಮಾತುಕತೆ ನಡೆಸಬಹುದು. ಇವೆಲ್ಲವೂ
ಹೊಟ್ಟೆಯೊಳಗಿನ ಮಗುವನ್ನು ಒಂದು ಹಂತದ ವರೆಗೆ ತಟ್ಟಿಯೇ ತಟ್ಟುತ್ತದೆ. ಅಷ್ಟಕ್ಕೂ,
ಹೊಟ್ಟೆಯೊಳಗೆ ಹೆಣ್ಣು ಮಗುವಿದ್ದೂ ಅದರ ಅರಿವಿರ ತಾಯಿ-ತಂದೆಯರಿಬ್ಬರೂ ಗಂಡು ಮಗುವಿನ
ಕನಸನ್ನು ಹಂಚಿಕೊಳ್ಳುತ್ತಾ ಆ ಬಗ್ಗೆ ಮಾತುಕತೆ-ಭಾವನೆಗಳನ್ನು ವಿನಿಮಯಗೊಳಿಸುತ್ತಾ
ಬದುಕುವುದು ಶಿಶುವಿನ ಮೇಲೆ ಯಾವ ಪರಿಣಾಮವನ್ನು ಬೀರಬಹುದು? ಆರೋಗ್ಯಪೂರ್ಣ ಮಗುವಿನ
ದೃಷ್ಟಿಯಿಂದ ಹೆತ್ತವರ ಪ್ರಸವಪೂರ್ವ ಚಟುವಟಿಕೆಗಳೂ ಬಹುಮುಖ್ಯ ಎಂಬುದನ್ನು ನಾವು
ಒಪ್ಪುವುದಾದರೆ, ಪ್ರಸವಪೂರ್ವದಲ್ಲೇ ಶಿಶುವಿನ ‘ಲಿಂಗ’ವನ್ನು ಬಹಿರಂಗಪಡಿಸುವುದು ಅಗತ್ಯ
ಎಂದು ಹೇಳಬೇಕಾಗುತ್ತದೆ. ಗಲ್ಫ್ ರಾಷ್ಟ್ರಗಳಲ್ಲಿ ಇದು ಜಾರಿಯಲ್ಲೂ ಇದೆ. ಆದರೆ
ನಮ್ಮಲ್ಲಿ ಇದು ಕಾನೂನುಬಾಹಿರ. ಕಾರಣ ಏನೆಂದರೆ, ಹೆಣ್ಣು ಮಗುವಿನ ಬಗೆಗೆ ಈ
ದೇಶದಲ್ಲಿರುವ ತಾತ್ಸಾರ. ಈ ತಾತ್ಸಾರ ಭಾವವು ಅಂತಿಮವಾಗಿ ಗರ್ಭಪಾತ
ಮಾಡಿಸಿಕೊಳ್ಳುವುದಕ್ಕೋ, ಗರ್ಭದಲ್ಲೇ ಮಗುವಿಗೆ ಪೋಷಕಾಹಾರ ಸಿಗದೇ ನಿತ್ರಾಣವಾಗುವಂತೆ
ನೋಡಿಕೊಳ್ಳುವುದಕ್ಕೋ ಅಥವಾ ಪಾರಂಪರಿಕ ಮದ್ದನ್ನು ಬಳಸಿ ಗರ್ಭದಲ್ಲೇ ಶಿಶು ಸಾಯುವಂತೆ
ಮಾಡುವುದಕ್ಕೋ ಕಾರಣವಾಗಬಹುದು ಎಂಬ ಭಯ ನಮ್ಮನ್ನಾಳುವವರಲ್ಲಿದೆ. ಹಾಗಂತ, ಈ ಭಯವನ್ನು
ವಿನಾ ಕಾರಣ ಎಂದು ಹೇಳುವಂತೆಯೂ ಇಲ್ಲ. ಹೀಗೆ ಭಯಪಟ್ಟುಕೊಳ್ಳುವುದಕ್ಕೆ ಆಧಾರವಾಗಿ
ಅಸಂಖ್ಯ ಘಟನೆಗಳು ಈ ದೇಶದಲ್ಲಿ ನಡೆದಿವೆ ಮತ್ತು ನಡೆಯುತ್ತಲೂ ಇವೆ. ಹೆಣ್ಣು ಮತ್ತು
ಗಂಡಿನ ನಡುವೆ ಅಂತರವನ್ನು ತೋರುವ ಹೆತ್ತವರು ನಮ್ಮಲ್ಲಿ ಧಾರಾಳ ಇದ್ದಾರೆ . ಗಂಡಿಗೆ
ವಂಶೋದ್ಧಾರಕ ಎಂಬ ಗೌರವ ಸಲ್ಲುವಾಗ ಹೆಣ್ಣಿಗೆ ಕುಲದಿಂದ ಹೊರಗಿನವಳು ಎಂಬ ಅಗೌರವ
ಸಲ್ಲುತ್ತದೆ.
ನಿಜವಾಗಿ, ಹೆಣ್ಣು ಮತ್ತು ಗಂಡನ್ನು ಅಳೆಯಬೇಕಾದುದು ಅವರು ಗಳಿಸಬಹುದಾದ ವರಮಾನದ
ಆಧಾರದಲ್ಲೋ ದೈಹಿಕ ಸಾಮರ್ಥ್ಯದ ಆಧಾರದಲ್ಲೋ ಅಲ್ಲ. ಗಂಡು-ಹೆಣ್ಣು ಎರಡೂ ಪ್ರಕೃತಿಯ
ವಿಶಿಷ್ಟ ಕೊಡುಗೆಗಳು. ಹೆಣ್ಣಿಗಿಂತ ಭಿನ್ನ ಸಾಮಥ್ರ್ಯವನ್ನು ಹೇಗೆ ಗಂಡಿನಲ್ಲಿ
ಹುದುಗಿಸಿಡಲಾಗಿದೆಯೋ ಹಾಗೆಯೇ ಗಂಡಿಗಿಂತ ಭಿನ್ನ ಸಾಮಥ್ರ್ಯವನ್ನು ಹೆಣ್ಣಿನಲ್ಲೂ
ತುಂಬಿಡಲಾಗಿದೆ. ಇಬ್ಬರಲ್ಲೂ ವಿಭಿನ್ನ ಪ್ರತಿಭೆಗಳಿವೆ. ಪೂಜಾ ಇದನ್ನು ಸಾರುವ ಒಂದು
ಪುಟ್ಟ ಉದಾಹರಣೆ ಮಾತ್ರ. ಒಂದು ವೇಳೆ, ಹೆಣ್ಣು ಗಂಡಿಗಿಂತ ಕೀಳು ಆಗಿರುತ್ತಿದ್ದರೆ
ಪೂಜಾಳ ಯಕೃತ್ ಆಕೆಯ ತಂದೆಯ ದೇಹಕ್ಕೆ ಹೊಂದಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಅವರ
ದೇಹ ಆಕೆಯ ಯಕೃತನ್ನು ತಿರಸ್ಕರಿಸಬೇಕಿತ್ತು. ಗಂಡಿನ ಯಕೃತನ್ನು ಮಾತ್ರ
ಸ್ವೀಕರಿಸಬೇಕಿತ್ತು. ಆದರೆ ಪ್ರಕೃತಿ ಎಂದೂ ಮನುಷ್ಯರ ನಡುವೆ ಇಂಥ ವಿಭಜನೆಯನ್ನು ಮಾಡಿಯೇ
ಇಲ್ಲ. ಅದು ಗಂಡು ಮತ್ತು ಹೆಣ್ಣನ್ನು ಎರಡು ಅಚ್ಚರಿಗಳಾಗಿ ಜಗತ್ತಿನ ಮುಂದಿಟ್ಟಿದೆಯೇ
ಹೊರತು ಒಂದನ್ನು ಇನ್ನೊಂದರ ಎದುರು ಅವಮಾನಿಸಿಲ್ಲ. ದುರ್ಬಲಗೊಳಿಸಿಲ್ಲ. ತನ್ನ ಯಕೃತನ್ನು
ತಂದೆಗೆ ದಾನ ಮಾಡುವ ಮೂಲಕ ಪ್ರಕೃತಿಯ ಈ ಸಂದೇಶವನ್ನು ಪೂಜಾ ಜನರಿಗೆ ತಲುಪಿಸಿದ್ದಾ ಳೆ.
ಮಾತ್ರವಲ್ಲ, ‘ಗಂಡು ಬಯಕೆ’ಯ ಹೆತ್ತವರಿಗೆ ಹೆಣ್ಣು ಏನು ಎಂಬುದನ್ನು
ಸ್ಪಷ್ಟಪಡಿಸಿದ್ದಾಳೆ. ಪವಿತ್ರ ಕುರ್‍ಆನ್ ಅಂತೂ ಹೆಣ್ಣನ್ನು ಗಂಡಿಗಿಂತ
ಮೇಲ್ದರ್ಜೆಯಲ್ಲಿರಿಸಿ ಗೌರವಿಸಿದೆ. ಇಬ್ಬರು ಹೆಣ್ಮಕ್ಕಳನ್ನು ಪಡೆದ ಹೆತ್ತವರು ಸ್ವರ್ಗ
ದಕ್ಕಬಲ್ಲ ಸೌಭಾಗ್ಯಶಾಲಿಗಳು ಎಂದು ಪ್ರವಾದಿ(ಸ) ಹೇಳಿದ್ದಾರೆ. ಹೆಣ್ಣು ಶಿಶುವಿನ
ಹತ್ಯೆಯು ಘೋರ ಪಾಪ ಎಂದು ಪವಿತ್ರ ಕುರ್‍ಆನ್ ಎಚ್ಚರಿಸಿದೆ. ತಾಯಿಯ (ಹೆಣ್ಣಿನ) ಪಾದದಡಿ
ಸ್ವರ್ಗವಿದೆ ಎಂದು ಪ್ರವಾದಿ(ಸ) ಹೇಳಿದ್ದಾರೆ. ತಂದೆಗೆ ಯಕೃತನ್ನು ದಾನ ಮಾಡುವ ಮೂಲಕ
ಹೆಣ್ಣಿನ ಕುರಿತಾದ ಈ ಎಲ್ಲ ಹೇಳಿಕೆಗಳಿಗೆ ಪೂಜಾ ನ್ಯಾಯ ತುಂಬಿದ್ದಾಳೆ. ಇಂಥವರ ಸಂಖ್ಯೆ
ಬೆಳೆಯಲಿ.