Tuesday, 3 April 2018

ಕನ್ನಡ ಪತ್ರಿಕೆಗಳು ಮತ್ತು ಯಮುನನ್ ತನಿಖಾ ಬರಹ

    ಸ್ಕ್ರಾಲ್ ಡಾಟ್ ಇನ್ ಎಂಬ ವೆಬ್ ಪತ್ರಿಕೆಯು ಅತ್ಯಂತ ಕುತೂಹಲಕಾರಿ ತನಿಖಾ ಬರಹವೊಂದನ್ನು ಪ್ರಕಟಿಸಿದೆ. ಪತ್ರಿಕೆಯ ವರದಿ ಗಾರರಾದ ಶ್ರುತಿಸಾಗರ್ ಯಮುನನ್ ಅವರು ಇದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ನಡೆಸಿದರು. ರಾಜ್ಯದಲ್ಲಿ 23 ಹಿಂದುತ್ವ ಕಾರ್ಯಕರ್ತರನ್ನು  ನಿರ್ದಿಷ್ಟ ಸಂಘಟನೆಯ `ಜಿಹಾದಿ’ಗಳು ಹತ್ಯೆ ನಡೆಸಿದ್ದಾರೆ ಎಂಬ ಬಿಜೆಪಿಯ ಆರೋಪವನ್ನು ಸ್ಪಷ್ಟಪಡಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಅಚ್ಚರಿ ಏನೆಂದರೆ, ಕನ್ನಡದ ನಂಬರ್ ಒನ್, ಟು, ತ್ರೀ ಸ್ಥಾನದಲ್ಲಿರುವ ಪತ್ರಿಕೆಗಳು ಮತ್ತು ಟಿವಿ ಚಾನೆಲ್‍ಗಳು ಈವರೆಗೂ  ಇಂಥದ್ದೊಂದು ತನಿಖಾ ಬರಹಕ್ಕೆ ಮನಸ್ಸು ಮಾಡಿಲ್ಲ ಅನ್ನುವುದು. ಆರೋಪ ಸಾಮಾನ್ಯವಲ್ಲ. 23 ಹಿಂದೂ ಕಾರ್ಯಕರ್ತರ ಹತ್ಯೆಯ  ಕುರಿತಂತೆ ಸಂಸದೆ ಶೋಭಾ ಕರಂದ್ಲಾಜೆಯವರೇ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದರೆ ಬಿಜೆಪಿಯಂತೂ ಅನೇಕಾರು ವೇದಿಕೆಗಳಲ್ಲಿ  ಅಸಂಖ್ಯ ಬಾರಿ ಈ ಹತ್ಯೆಗಳನ್ನು ಪ್ರಸ್ತಾಪಿಸಿ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿದೆ. ರಾಜಕೀಯವಾಗಿ ಸಾಕಷ್ಟು ಮಹತ್ವ ಪಡೆದಿರುವ ಮತ್ತು ಭಾವನಾತ್ಮಕವಾಗಿಯೂ ಮುಖ್ಯವಾಗಿರುವ ಈ ಹತ್ಯೆಗಳ ಬಗ್ಗೆ ಕನ್ನಡ ಮಾಧ್ಯಮ ಕ್ಷೇತ್ರ ಈ ವರೆಗೂ ಕುತೂಹಲ ತಾಳದೇ  ಇರುವುದು ಯಾಕಾಗಿ?  Ground Report: Have Jihadis killed 23 hindutwa activists in Karnataka Since 2014 as BJP claims’  ಎಂಬ ಶೀರ್ಷಿಕೆಯಲ್ಲಿ ಸ್ಕ್ರಾಲ್ ಡಾಟ್ ಇನ್ (scroll.in)ನಲ್ಲಿ  ಪ್ರಕಟವಾದ ತನಿಖಾ ಬರಹವು ಈ ಪ್ರಶ್ನೆಯನ್ನು ಮತ್ತೆ ಮತ್ತೆ ನಮ್ಮ ಮುಂದಿಡುತ್ತದೆ. ಆ ವರದಿಯನ್ನು ಓದುತ್ತಾ ಹೋದಂತೆ ಬಿಜೆಪಿಯ  ವಾದವು ಎಷ್ಟು ಸುಳ್ಳಿನಿಂದ ಕೂಡಿದೆ ಮತ್ತು ಆಘಾತಕಾರಿಯಾಗಿದೆ ಅನ್ನುವುದನ್ನು ಇಂಚಿಂಚಾಗಿ ವಿವರಿಸುತ್ತದೆ. ಈ ವರದಿ ಪ್ರಕಟವಾದ  ಒಂದು ವಾರದ ಬಳಿಕ ದಿಲ್ಲಿ ಮೂಲದ ಅಧ್ಯಯನ ಸಂಸ್ಥೆಯೊಂದು (ಸಿಆರ್‍ಡಿಡಿಪಿ) ಇನ್ನೊಂದು ಬಹುಮುಖ್ಯ ವಿಷಯವನ್ನು ಸಾರ್ವಜ ನಿಕರ ಮುಂದಿಟ್ಟಿದೆ. ಕರ್ನಾಟಕದ ಸುಮಾರು 15 ಲಕ್ಷ ಅಧಿಕ ಮುಸ್ಲಿಮ್ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿಲ್ಲ ಮತ್ತು  ಅವರಲ್ಲಿ ಮತದಾನದ ಗುರುತಿನ ಚೀಟಿಯೂ ಇಲ್ಲ ಅನ್ನುವುದನ್ನು ಅಧ್ಯಯನದ ಮೂಲಕ ಅದು ಕಂಡುಕೊಂಡಿದೆ. ವಿಶೇಷ ಏನೆಂದರೆ,  ಶೀಘ್ರ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಗಂಭೀರವಾಗಿ ಪರಿಗಣಿತವಾಗಬೇಕಿದ್ದ ಈ ಸುದ್ದಿಯನ್ನು ಕನ್ನಡ  ಮಾಧ್ಯಮ ಕ್ಷೇತ್ರವು ತೀವ್ರವಾಗಿ ನಿರ್ಲಕ್ಷಿಸಿದೆ. 23 ಹಿಂದುತ್ವ ಕಾರ್ಯಕರ್ತರ ಹತ್ಯೆಯ ಹೆಸರಲ್ಲಿ ಬಿಜೆಪಿ ಮಾಡಿರುವ ರ್ಯಾಲಿ, ಭಾಷಣ ಮತ್ತು  ಪ್ರತಿಭಟನೆಗಳಿಗೆ ಕನ್ನಡ ಮಾಧ್ಯಮ ಕ್ಷೇತ್ರ ನೀಡಿರುವ ಸ್ಪೇಸ್ ಅನ್ನು ಪರಿಗಣಿಸಿದರೆ 15 ಲಕ್ಷ ಅರ್ಹ ಮತದಾರರ ಗೈರು ಸಣ್ಣ ¸ ಸಂಗತಿಯಾಗಬೇಕಾದ ವಿಷಯವಲ್ಲ. ಪ್ರಜಾತಂತ್ರದ ಯಶಸ್ಸು ಪೂರ್ಣ ಪ್ರಮಾಣದ ಮತದಾನದಲ್ಲಿದೆ. ಮತದಾರರು ಮತ ಚಲಾವಣೆಯಿಂದ  ದೂರ ನಿಲ್ಲುವುದೆಂದರೆ, ಈ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಕ್ಕೆ ಅವರು ಕೊಡುಗೆ ನೀಡುವುದು ಎಂದೇ ಅರ್ಥ. ಆದ್ದರಿಂದಲೇ,  ಮತದಾನ ನಡೆದ ಯಾವುದೇ ಕ್ಷೇತ್ರದ ಬಗ್ಗೆ ಮರುದಿನ ಪತ್ರಿಕೆಗಳು ಸುದ್ದಿ ಮಾಡುವಾಗ ಎಷ್ಟು ಶೇಕಡಾ ಮತದಾನವಾಗಿದೆ ಎಂಬುದಕ್ಕೇ  ಪ್ರಾಶಸ್ತ್ಯ ನೀಡುತ್ತವೆ. ಅತೀ ಹೆಚ್ಚು ಮತ ಚಲಾವಣೆಯಾದ ಕ್ಷೇತ್ರದ ಬಗ್ಗೆ ವಿಶೇಷ ಉಲ್ಲೇಖ ಮಾಡಿ ಸುದ್ದಿ ಮಾಡುತ್ತವೆ. ನಗರ ಪ್ರದೇಶ  ಮತ್ತು ಗ್ರಾಮೀಣ ಪ್ರದೇಶದಲ್ಲಿ ಚಲಾವಣೆಯಾದ ಮತಗಳ ಶೇಕಡಾವಾರು ವಿಶ್ಲೇಷಣೆ ನಡೆಸುತ್ತವೆ. ನೂರು ವರ್ಷದ ಹಿರಿಯರನ್ನೋ,  ಅನಾರೋಗ್ಯ ಪೀಡಿತ ವೃದ್ಧರನ್ನೋ ಎತ್ತಿಕೊಂಡು ಮತಗಟ್ಟೆಗೆ ತಂದು ಮತ ಫಚಲಾಯಿಸಲಾದ ಘಟನೆಯನ್ನು ಫೋಟೋ ಸಹಿತ ಪ್ರಕಟಿಸುವ  ಉಮೇದು ಮಾಧ್ಯಮ ಕ್ಷೇತ್ರದಲ್ಲಿದೆ. ಈ ಕಾರಣದಿಂದಲೇ, ದೆಹಲಿ ಮೂಲದ ಸಿಆರ್‍ಡಿಡಿಪಿ ಎಂಬ ಸಂಸ್ಥೆಯ ಅಧ್ಯಯನಾಧಾರಿತ ವರದಿ ಯನ್ನು ಕನ್ನಡ ಮಾಧ್ಯಮಗಳೇಕೆ ನಗಣ್ಯವಾಗಿ ಕಂಡವು ಅನ್ನುವ ಪ್ರಶ್ನೆ ಮುಖ್ಯವಾಗುವುದು. 15 ಲಕ್ಷ ಅಧಿಕ ಮಂದಿ ಮತ ಚುನಾವಣೆಯ ಅವಕಾಶದಿಂದ ವಂಚಿತವಾಗುವ ಸನ್ನಿವೇಶವೊಂದು ನಿರ್ಮಾಣಗೊಂಡಿರುವುದು ಯಾಕಾಗಿ? ಇದು ವ್ಯವಸ್ಥಿತ ಷಡ್ಯಂತ್ರವೊಂದರ  ಭಾಗವೇ? ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರೆಯೇ? ವಿವಿಧ ನೆಪಗಳನ್ನೊಡ್ಡಿ ಇವರನ್ನು ಮತದಾರರ ಪಟ್ಟಿಯಿಂದ ಹೊರಗಿರಿಸಲಾಗಿದೆಯೇ? ಹೀಗೆ ಅನರ್ಹರಾದವರ ಸಂಖ್ಯೆ ನಿಜಕ್ಕೂ ಎಷ್ಟು? 15 ಲಕ್ಷ ಅಧಿಕ ಅಂದರೆ ಎಷ್ಟು? ಇಷ್ಟೊಂದು ಬೃಹತ್ ಸಂಖ್ಯೆಯ  ಮತದಾರರು ಚುನಾವಣಾ ರಾಜಕೀಯದಲ್ಲಿ ಭಾಗವಹಿಸದೇ ಇರುವುದು ಪರಿಣಾಮಕಾರಿ ಪ್ರಜಾತಂತ್ರಕ್ಕೆ ಹಿನ್ನಡೆಯಲ್ಲವೇ?
ಬಿಜೆಪಿ ತೇಲಿಸಿಬಿಟ್ಟ ಗಂಭೀರ ಆರೋಪಕ್ಕೆ ದೊಡ್ಡಮಟ್ಟದಲ್ಲಿ ಪ್ರಚಾರ ಕೊಟ್ಟ ಕನ್ನಡ ಪತ್ರಿಕೆಗಳು ಅದೇ ಆರೋಪದ ಜಾಡು ಹಿಡಿದು  ಹೊರಟ ಶ್ರುತಿಸಾಗರ್ ಯಮುನನ್ ಅವರ ತನಿಖಾ ಬರಹಕ್ಕೆ ವಾರ್ತಾಭಾರತಿಯನ್ನು ಬಿಟ್ಟರೆ ಕನ್ನಡದ ಉಳಿದ ಯಾವ ಪತ್ರಿಕೆಗಳೂ  ಪರಿಗಣನೆ ನೀಡಲಿಲ್ಲ. ಟಿ.ವಿ. ಚಾನೆಲ್‍ಗಳ ಸ್ಥಿತಿಯೂ ಇದುವೇ. ಒಂದೋ ಸ್ವತಃ ತನಿಖಾ ವರದಿಯನ್ನು ರಚಿಸುವುದು ಅಥವಾ ಇತರ ¸ ಸಂಸ್ಥೆಗಳ ತನಿಖಾ ವರದಿಗಳಿಗೆ ಗೌರವ ಕೊಡುವುದು- ಇವೆರಡರಲ್ಲಿ ಯಾವುದನ್ನೂ ಮಾಡು ವುದಿಲ್ಲವೆಂದರೆ, ಅದು ಕೊಡುವ ಸಂದೇಶವೇನು? ಬಿಜೆಪಿ ಹೊರಿಸಿರುವ ಆರೋಪ ಸಾಮಾನ್ಯವಾದುದಲ್ಲ. ಅದು ಒಂದು ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವಷ್ಟು  ಪ್ರಾಮುಖ್ಯವಾದುದು. ‘ಹಿಂದುತ್ವದ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಹತ್ಯೆಗೈಯುವುದಕ್ಕೆ ಮುಸ್ಲಿಮರಲ್ಲಿ ಸಂಘಟನೆಯಿದೆ, ಹಾಗೆ  ಹತ್ಯೆಗೈಯುವುದನ್ನು ಅದು ಜಿಹಾದ್ ಎಂದು ಪರಿಗಣಿಸುತ್ತದೆ, 23 ಕಾರ್ಯಕರ್ತರ ಹತ್ಯೆಯ ಹಿಂದೆಯೂ ಈ ಜಿಹಾದಿ ಮನಸ್ಥಿತಿಯೇ  ಕೆಲಸ ಮಾಡಿದೆ ಮತ್ತು ಹಿಂದುತ್ವದ ಕಾರ್ಯಕರ್ತರಿಗೆ ಜಿಹಾದಿಗಳಿಂದ ಅಪಾಯ ಇದೆ..’ ಇತ್ಯಾದಿ ಸಂದೇಶವನ್ನು ರವಾನಿಸುವುದು  ಬಿಜೆಪಿಯ ಉದ್ದೇಶ ಆಗಿತ್ತು. ಮಾಧ್ಯಮಗಳು ಬಿಜೆಪಿಯ ಹೇಳಿಕೆಗಳಿಗೆ ನೀಡಿದ ಪ್ರಚಾರವು ಅದರ ಉದ್ದೇಶವನ್ನು ಈಡೇರಿಸುವಲ್ಲಿ ಬ ಹುಮುಖ್ಯ ಪಾತ್ರ ವಹಿಸಿತ್ತು. ಅಸಂಖ್ಯ ಮಂದಿ ಅದರಿಂದ ಪ್ರಭಾವಿತರಾಗಿರಲೂ ಬಹುದು. ಆದರೆ ಆ ಆರೋಪಗಳನ್ನು ಒರೆಗೆ ಹಚ್ಚಲು  ನಡೆದ ಪ್ರಯತ್ನವನ್ನೇಕೆ ಮಾಧ್ಯಮಗಳು ತೀರಾ ನಗಣ್ಯವಾಗಿ ಕಂಡವು? ಕನಿಷ್ಠ ಸ್ವಯಂ ಅಂಥದೊಂದು ಪ್ರಯತ್ನವನ್ನಾದರೂ ಮಾಡದೆಯೇ  ಮತ್ತು ಮಾಡಿದವರನ್ನು ಗುರುತಿಸದೆಯೇ ಸುಮ್ಮನಾಗಲು ಏನು ಕಾರಣ? ಇದು ಸಹಜವೋ ಅಸಹಜವೋ? ತನಿಖಾ ಪತ್ರಿಕೋದ್ಯಮ ವಿರಳವಾಗುತ್ತಿರುವ ಈ ದಿನಗಳಲ್ಲಿ ಈ ಪ್ರಶ್ನೆಗೆ ಇನ್ನಷ್ಟು ಮಹತ್ವ ಬರುತ್ತದೆ. ತನಿಖಾ ಪತ್ರಿಕೋದ್ಯಮದ ಬಗ್ಗೆ ಮಾಧ್ಯಮಗಳು ಆಸಕ್ತಿ ಕಳೆದುಕೊಳ್ಳುತ್ತಿರುವುದು ಯಾಕಾಗಿ? ಜನಪ್ರಿಯ ಸುದ್ದಿಗಳ ಅಮಲಿನಲ್ಲಿಯೇ ಯಾಕಾಗಿ ಅವು ತೇಲಿ ಹೋಗುತ್ತಿವೆ?
ಪ್ರಜಾತಂತ್ರವನ್ನು ಆಧರಿಸಿ ನಿಂತಿರುವ ನಾಲ್ಕನೇ ಕಂಭವಾಗಿ ಮಾಧ್ಯಮ ಕ್ಷೇತ್ರಕ್ಕೆ ಗುರುತರ ಜವಾಬ್ದಾರಿಯಿದೆ. 15 ಲಕ್ಷ ಅಧಿಕ  ಮತದಾರರು ಮತದಾನದಿಂದ ವಂಚಿತರಾಗಲಿದ್ದಾರೆ ಎಂಬ ವರದಿಯು ಈ ಕ್ಷೇತ್ರವನ್ನು ಖಂಡಿತ ಅಲುಗಾಡಿಸಬೇಕು. ವರದಿಯ ಸತ್ಯಾ¸ ಸತ್ಯತೆಯನ್ನು ತಿಳಿಯುವ ಕುತೂಹಲವನ್ನಾದರೂ ಅದು ವ್ಯಕ್ತಪಡಿಸಬೇಕು. ಹಾಗೆಯೇ, ಧರ್ಮಾಧಾರಿತ ವಿಭಜನೆ ಮಾಡಬಲ್ಲಂಥ ಗಂಭೀರ  ಆರೋಪಗಳ ಹಿಂದೆ ಅವು ತನಿಖಾ ವರದಿ ತಯಾರಿಸಬೇಕು. ಏಕೆಂದರೆ, ಅಂತಿಮವಾಗಿ ಅಂಥ ಆರೋಪಗಳು ಪ್ರಜಾತಂತ್ರದ ಮೂಲ ಆಯವನ್ನೇ ಸಾಯಿಸಿಬಿಡುತ್ತವೆ. ಆ ಕಾರಣದಿಂದಲೇ, ಸ್ಕ್ರಾಲ್ ಡಾಟ್ ಇನ್ ಮತ್ತು ಸಿಆರ್‍ಡಿಡಿಪಿಯ ವರದಿಗಳು ಮುಖ್ಯವಾಗುತ್ತವೆ.  ಹಾಗೆಯೇ ಈ ಬಗ್ಗೆ ಕನ್ನಡ ಮಾಧ್ಯಮ ರಂಗದಿಂದ ವ್ಯಕ್ತವಾದ ನಿರ್ಲಕ್ಷ್ಯ ಧೋರಣೆಯು ತೀವ್ರ ವಿಷಾದವನ್ನು ಉಂಟು ಮಾಡುತ್ತದೆ. ಇದು  ಕಾವಲುನಾಯಿಯ ಸ್ವಭಾವವಲ್ಲ.

ಜಾರ್ಖಂಡ್‍ನ 11 ಮಂದಿ ಮತ್ತು ಗೋವು

     ಗೋಮಾಂಸ ನಿಷೇಧದ ಹೆಸರಲ್ಲಿ ಬಿಜೆಪಿ ನಡೆಸುತ್ತಿರುವ ಭಾವನಾತ್ಮಕ ರಾಜಕೀಯವು ಎಷ್ಟು ಅಪಾಯಕಾರಿ ಎಂಬುದನ್ನು ಜಾರ್ಖಂಡ್‍ನ ತ್ವರಿತಿಗತಿ ನ್ಯಾಯಾಲಯವು ಸ್ಪಷ್ಟಪಡಿಸಿದೆ. 2017 ಜೂನ್ 29ರಂದು ಜಾರ್ಖಂಡ್‍ನ ರಾಮ್‍ಗರ್ ಎಂಬಲ್ಲಿ ಅಲೀಮುದ್ದೀನ್ ಅನ್ಸಾರಿ ಎಂಬವರನ್ನು ಗುಂಪೊಂದು ಥಳಿಸಿ ಕೊಂದಿತ್ತು. ಕೊಲೆಗಾರರಲ್ಲಿ ಸ್ಥಳೀಯ ಬಿಜೆಪಿ ನಾಯಕ ನಿತ್ಯಾನಂದ ಮಹತೋ ಕೂಡ ಸೇರಿದ್ದ. ಮಾಂಸ ಸಾಗಾಟದ ಶಂಕೆಯು ಹತ್ಯೆಗೆ ಕಾರಣವಾಗಿತ್ತು. ಇದೀಗ ತ್ವರಿತಗತಿ ನ್ಯಾಯಾಲಯವು ಮಹತೋ ಸೇರಿದಂತೆ 11 ಮಂದಿ ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಮಾನಿಸಿದೆ. ಇನ್ನು, ಈ ಅಪರಾಧಿಗಳು ಒಂದೋ ಜೈಲು ಸೇರಬೇಕು ಅಥವಾ ಹೈಕೋರ್ಟ್‍ಗೆ ಮನವಿ ಸಲ್ಲಿಸಿ ಕೋರ್ಟು-ಕಚೇರಿ ಎಂದು ಅಲೆದಾಡಬೇಕು. ಜೊತೆಗೇ ಇವರನ್ನು ಅವಲಂಬಿಸಿರುವ ಕುಟುಂಬ ಇದರ ಪರಿಣಾಮವನ್ನು ಅನುಭವಿಸಬೇಕು. ಇದು ಈ ಪ್ರಕರಣದ ಒಂದು ಮುಖವಾದರೆ, ಇದರ ಇನ್ನೊಂದು ಮುಖ ಅತ್ಯಂತ ಧಾರುಣವಾದುದು. ಈ ಹತ್ಯೆ ಅಚಾನಕ್ ಆಗಿರುವುದಲ್ಲ. ಅದರ ಹಿಂದೆ ವ್ಯವಸ್ಥಿತ ಪ್ರಚೋದನೆಯಿದೆ. ಗೋವಿನ ಹೆಸರಲ್ಲಿ ಹುಟ್ಟುಹಾಕಲಾದ ಆವೇಶಭರಿತ ಭ್ರಮೆಯು ಆ ಹತ್ಯೆಯನ್ನು ಸಾಧ್ಯವಾಗಿಸಿದೆ. ಹಾಗಂತ, ಈ ಭ್ರಮೆಯನ್ನು ಬಿತ್ತಿದ ಪಕ್ಷವು ನಿಜಕ್ಕೂ ಗೋಹತ್ಯೆ ನಿಷೇಧವನ್ನು ಪ್ರಾಮಾಣಿಕವಾಗಿ ಬಯಸುತ್ತಿದೆಯೇ ಎಂದು ಹುಡುಕ ಹೊರಟರೆ ಈ 11 ಅಪರಾಧಿಗಳಿಗೆ ಆಘಾತವಾಗಬಹುದು. ಜಾರ್ಖಂಡ್‍ನಲ್ಲಿ ಗೋಮಾಂಸ ಸೇವನೆಯನ್ನು ನಿಷೇಧಿ ಸಿರುವ ಬಿಜೆಪಿಯು ತ್ರಿಪುರ, ಗೋವಾ, ನಾಗಾಲ್ಯಾಂಡ್‍ಗಳಲ್ಲಿ ಗೋಹತ್ಯೆ ಮತ್ತು ಗೋಮಾಂಸ ಸೇವನೆಯನ್ನು ಬೆಂಬಲಿಸುತ್ತಿದೆ. ಇದರ ಅರ್ಥವೇನು? ಜಾರ್ಖಂಡ್‍ನಲ್ಲಿ ಗೋಮಾಂಸ ಸೇವನೆಯ ವಿರುದ್ಧ ಜನರನ್ನು ಎತ್ತಿ ಕಟ್ಟಿದ ಪಕ್ಷವೊಂದು ತನ್ನದೇ ಅಧಿಕಾರವಿರುವ ಗೋವಾ, ನಾಗಾಲ್ಯಾಂಡ್ ಮತ್ತು ತ್ರಿಪುರಗಳಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದೇಕೆ? ಗೋಹತ್ಯೆ ನಿಷೇಧ ಎಂಬ ಕೂಗಿನ ಹಿಂದೆ ಪ್ರಾಮಾಣಿಕತೆ ಇದ್ದಿದ್ದೇ ಆದಲ್ಲಿ, ಇಡೀ ಭಾರತದಲ್ಲಿ ಆ ಕೂಗಿನಲ್ಲಿ ಏಕರೂಪತೆ ಇರಬೇಡವೇ? ಜಾರ್ಖಂಡ್‍ನಲ್ಲಿ ಒಂದು ನಿಲುವು, ತ್ರಿಪುರದಲ್ಲಿ ಇನ್ನೊಂದು ನಿಲುವು ಮತ್ತು ಗೋವಾದಲ್ಲಿ ಮತ್ತೊಂದು ನಿಲುವು ಎಂಬಂತಾಗಿರುವುದು ಏಕೆ? ಇನ್ನು, ಕೇಂದ್ರದಲ್ಲಿ ಅಧಿಕಾರದಲ್ಲಿರು ವುದೇ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ. ಮೈತ್ರಿ ಪಕ್ಷಗಳ ಹಂಗಿಲ್ಲದೇ ಆಡಳಿತ ನಡೆಸುವಷ್ಟು ಸ್ಪಷ್ಟ ಬಹುಮತವನ್ನು ಅದು ಪಡೆದುಕೊಂಡೂ ಇದೆ. ಇಷ್ಟಿದ್ದೂ ಅದೇಕೆ, ದೇಶಾದ್ಯಂತ ಗೋಮಾಂಸ ನಿಷೇಧವನ್ನು ಜಾರಿಗೆ ತರುತ್ತಿಲ್ಲ? ಒಂದು ವೇಳೆ, ಸಾಂವಿಧಾನಿಕ ಇತಿ-ಮಿತಿಗಳು ಹೀಗೆ ಮಾಡುವುದಕ್ಕೆ ಅಡ್ಡಿಯಾಗುತ್ತಿದೆ ಎಂದಾದರೆ, ಕನಿಷ್ಠ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಾದರೂ ನಿಷೇಧ ಹೇರಬಹುದಲ್ಲ? ಅಲ್ಲದೇ, ವಿದೇಶಗಳಿಗೆ ಮಾಂಸ ರಫ್ತು ಮಾಡುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಕೇಂದ್ರ ಸರಕಾರಕ್ಕೆ ಈ ಮಾಂಸ ರಫ್ತಿನ ಮೇಲೆ ನಿಷೇಧವನ್ನು ಹೇರಬಹುದಲ್ಲವೇ? ಗೋಹತ್ಯೆ ನಿಷೇಧಕ್ಕೆ ಸಂಪೂರ್ಣ ಅವಕಾಶ ಇದ್ದೂ ಹಾಗೆ ಮಾಡದಿರುವುದರ ಹೊಣೆಯನ್ನು ಯಾರು ಹೇರಬೇಕು? ತ್ರಿಪುರ, ಗೋವಾದ ಜನರು ಗೋಮಾಂಸ ಸೇವಿಸಬಹುದು ಎಂದಾದರೆ, ಉಳಿದ ರಾಜ್ಯಗಳ ಮಂದಿ ಯಾಕೆ ಸೇವಿಸಬಾರದು ಎಂಬ ಪ್ರಶ್ನೆಗೆ ಬಿಜೆಪಿ ಕೊಡುವ ಉತ್ತರವೇನು? ಗೋಮಾಂಸ ನಿಷೇಧ ಎಂಬ ಅದರ ಆಗ್ರಹ ಯಾಕೆ ದಿನೇ ದಿನೇ ಸೆಲೆಕ್ಟಿವ್ ಆಗುತ್ತಿದೆ?
ಅಲೀಮುದ್ದೀನ್ ಅನ್ಸಾರಿಯನ್ನು ಹತ್ಯೆಗೈದ 11 ಮಂದಿ ಅಪರಾಧಿಗಳು ಕೋಟ್ಯಾಧೀಶರೇನೂ ಅಲ್ಲ. ಅಲ್ಲದೇ, ಆ ಹತ್ಯೆಯಿಂದ ವೈಯಕ್ತಿಕವಾಗಿ ಅವರು ಪಡಕೊಂಡಿರುವುದು ಏನೂ ಅನ್ನುವ ಪ್ರಶ್ನೆಯೂ ಇದೆ. ಅಲ್ಲದೇ, ಅನ್ಸಾರಿಯನ್ನು ಕೊಂದು ಲಕ್ಷಾಂತರ ರೂಪಾಯಿಯನ್ನು ದೋಚುವುದು ಅವರ ಉದ್ದೇಶವೂ ಆಗಿರಲಿಲ್ಲ. ಯಾಕೆಂದರೆ, ಅನ್ಸಾರಿಯಲ್ಲಿ ಅಷ್ಟು ದುಡ್ಡೂ ಇರಲಿಲ್ಲ. ಆದ್ದರಿಂದ, ಅದು ರಾಜಕೀಯ ಪ್ರಚೋದಿತ ಭಾವನೆಯೊಂದರ ಅಭಿವ್ಯಕ್ತಿಯೇ ಹೊರತು ಸಹಜವಾದುದು ಅಲ್ಲ. ಸದ್ಯ ಆ 11 ಮಂದಿಯನ್ನು ಎದುರಿಟ್ಟುಕೊಂಡು ಗೋ ಸಂಬಂಧಿ ಹತ್ಯೆ ಮತ್ತು ಹಲ್ಲೆಗಳ ಕುರಿತು ದೇಶದಲ್ಲಿ ಗಂಭೀರ ಚರ್ಚೆ ನಡೆಯಬೇಕು. ನಿಜಕ್ಕೂ, ಮೊದಲ ಪಂಕ್ತಿಯಲ್ಲಿ ನಿಲ್ಲಬೇಕಾದ ಅಪರಾಧಿ ಗಳು ಆ 11 ಮಂದಿಯೋ ಅಥವಾ ಅವರನ್ನು ಆ ಮಟ್ಟದಲ್ಲಿ ಪ್ರಚೋದಿಸಿ ಅಪರಾಧಿಗಳಾಗಿಸಿದ ರಾಜಕೀಯ ನಾಯಕರೋ? ಜನಸಾಮಾನ್ಯರಲ್ಲಿ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಮಾಧ್ಯಮಗಳು, ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ನೇತಾರರ ಪಾತ್ರ ಪ್ರಮುಖವಾದುದು. ಅವರನ್ನು ಜನ ಸಾಮಾನ್ಯರು ಆಲಿಸುತ್ತಾರೆ. ಅವರ ಮಾತುಗಳ ಮೇಲೆ ತಮ್ಮ ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತಾರೆ. ಗೋಮಾಂಸ ನಿಷೇಧದ ವಿಷಯದಲ್ಲಿ ಬಿಜೆಪಿ ಮತ್ತು ಇತರರ ಅಭಿಪ್ರಾಯವು ಜನಸಾಮಾನ್ಯರ ಮೇಲೆ ಖಂಡಿತ ಪ್ರಭಾವವನ್ನು ಬೀರಿದೆ. ಅದರಲ್ಲೂ
     ಅಲೀಮುದ್ದೀನ್ ಅನ್ಸಾರಿಯನ್ನು ಹತ್ಯೆಗೈದ ಅಪರಾಧಿಗಳಾಗಿ ನ್ಯಾಯಾಲಯದ ಎದುರು ತಲೆತಗ್ಗಿಸಿ ನಿಂತಿರುವ 11 ಮಂದಿಯ ಮೇಲೆ ನಾವು ಆಕ್ರೋಶಗೊಳ್ಳುವುದಕ್ಕಿಂತ ಅವರನ್ನು ತಯಾರಿಸಿದ ರಾಜಕೀಯ ವಿಚಾರಧಾರೆಯ ಮೇಲೆ ನಾವು ಸಿಟ್ಟಾಗಬೇಕು. ಗೋವು ಬಿಜೆಪಿಯ ಪಾಲಿಗೆ ರಾಜಕೀಯ ವಿಷಯವೇ ಹೊರತು ಬೇರೇನೂ ಅಲ್ಲ. ಆ ಪಕ್ಷಕ್ಕೂ ಗೋವಿಗೂ ನಡುವೆ ರಾಜಕೀಯ ಸಂಬಂಧದ ಹೊರತಾಗಿ ಬೇರೆ ಏನೂ ಇಲ್ಲ. ಬಿಜೆಪಿ, ಸಂದರ್ಭಕ್ಕೆ ತಕ್ಕಂತೆ ಗೋವನ್ನು ಭಾವುಕವೂ ಗೊಳಿಸುತ್ತದೆ ಮತ್ತು ಸಂದರ್ಭಕ್ಕೆ ತಕ್ಕಂತೆ ಅದು ಗೋವನ್ನು ಮಾಂಸದ ಪ್ರಾಣಿ ಯಾಗಿಯೂ ಪರಿಗಣಿಸುತ್ತದೆ. ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಗೋವಿನ ವಿಷಯದಲ್ಲಿ ಅದರ ನಿಲುವು ಬದಲಾಗುತ್ತಲೇ ಇರುತ್ತದೆ. ಇದನ್ನು ಅರ್ಥೈಸದ ಮಂದಿ ಭಾವುಕವಾಗುತ್ತಾರೆ. ಪ್ರಚೋಧಿತರಾಗುತ್ತಾರೆ ಮತ್ತು ಕೆಲವೊಮ್ಮೆ ಹತ್ಯೆಯಂತಹ ಅಪಾಯಕಾರಿ ಕ್ರೌರ್ಯಗಳಲ್ಲೂ ಭಾಗಿಯಾಗುತ್ತಾರೆ. ಕೊನೆಗೆ ಅವರು ಅಪರಾಧಿಗಳಾಗಿ ಜೈಲು ಸೇರಬೇಕಾಗುತ್ತದೆ. ಜಾರ್ಖಂಡ್‍ನ 11 ಮಂದಿ ಅಪರಾಧಿಗಳು ಕೊಡುವ ಸಂದೇಶ ಇದು.

ಬಿಜೆಪಿ ಜನರ ಭಾವನೆಯನ್ನು ಪ್ರಚೋದಿಸುವ ಅಸಂಖ್ಯ ಹೇಳಿಕೆಗಳನ್ನೂ ಕಾರ್ಯಕ್ರಮಗಳನ್ನೂ ನೀಡಿದೆ. ಗೋಮಾಂಸ ಸೇವನೆಯನ್ನು ಅದರ ನಾಯಕರು ದೇಶದ್ರೋಹದ ಪಟ್ಟಿಯಲ್ಲಿಟ್ಟಿದ್ದೂ ನಡೆದಿದೆ. ಗೋವಿನ ಹೆಸರಲ್ಲಿ ಹತ್ಯೆಗೈದವರ ಪರ ವಹಿಸಿ ಮಾತನಾಡಿದ್ದೂ ಇದೆ. ಈ ಬಗೆಯ ವರ್ತನೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಸಮಾಜದ ಮೇಲ್ತುದಿಯಲ್ಲಿರುವವರಿಗೆ ಇದರ ಹಿಂದಿರುವ ರಾಜಕೀಯದ ಅರಿವಿರುತ್ತದಾದರೂ ಜನಸಾಮಾನ್ಯರು ಹಾಗಲ್ಲ. ಅವರು ತಕ್ಷಣಕ್ಕೆ ಭಾವುಕರಾಗುತ್ತಾರೆ. ಅದನ್ನೊಂದು ಧಾರ್ಮಿಕ ಕ್ರಿಯೆಯಾಗಿ ಭಾವಿಸುತ್ತಾ ಕಾನೂನನ್ನು ಕೈಗೆತ್ತಿಕೊಳ್ಳುವ ಹಂತಕ್ಕೂ ತಲುಪುತ್ತಾರೆ.