ನಾ ಖಾವೂಂಗಾ ನಾ ಖಾನೆದೂಂಗ ಎಂಬ ಪದೋಕ್ತಿಯನ್ನು ಉರುಳಿಸಿ ಅಧಿಕಾರಕ್ಕೇರಿದ ನರೇಂದ್ರ ಮೋದಿಯವರು ಆ ಬಳಿಕ ಆ ಮಾತನ್ನು ಎಷ್ಟರ ವರೆಗೆ ನಿರ್ಲಕ್ಷಿಸಿದರು ಅನ್ನುವುದಕ್ಕೆ ಆರ್.ಟಿ.ಐ. (ಮಾಹಿತಿ ಹಕ್ಕು ಕಾಯಿದೆ) ಉತ್ತರ ನೀಡಿದೆ. ಈ ಉತ್ತರ ಆಘಾತಕಾರಿಯಾದುದು. ಭ್ರಷ್ಟಾಚಾರವನ್ನು ಖಂಡಿಸಿ ಮತ್ತು ಅದಕ್ಕಾಗಿ ಮನ್‍ಮೋಹನ್ ಸಿಂಗ್‍ರನ್ನು ತಮಾಷೆ ಮಾಡಿ ಅಧಿಕಾರಕ್ಕೇರಿದ ಪಕ್ಷವೊಂದು ಆ ಬಳಿಕ ಆ ಇಡೀ ಪ್ರಕ್ರಿಯೆಯನ್ನು ಹೇಗೆ ಮರೆತಿದೆ ಎಂಬುದನ್ನು ಆರ್ ಟಿ ಐ ಮೂಲಕ ಲಭ್ಯವಾದ ಮಾಹಿತಿಗಳು ದೇಶದ ಮುಂದಿಟ್ಟಿದೆ.
2013-14ರಲ್ಲಿ ಈ ದೇಶದಲ್ಲಿ ಅಭೂತಪೂರ್ವವಾದ ಬೆಳವಣಿಗೆಗಳು ನಡೆದುವು. ಅದರಲ್ಲಿ ಒಂದು- ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟವಾದರೆ, ಇನ್ನೊಂದು- ಬಾಬಾ ರಾಮ್‍ದೇವ್ ಅವರ ಕಪ್ಪು ಹಣ ವಾಪಸಾತಿ ಪ್ರತಿಭಟನೆ. ಈ ಸಂದರ್ಭದಲ್ಲಿ ಮಸೀಹನಂತೆ ಫೋಸು ಕೊಟ್ಟದ್ದು ಬಿಜೆಪಿ. ಅದು ಅಣ್ಣಾ ಹಜಾರೆಯನ್ನು ಬೆಂಬಲಿಸಿತು. ಲೋಕ್‍ಪಾಲ್ ಅನ್ನು ಜಾರಿಗೊಳಿಸಬೇಕೆಂಬ ಹಜಾರೆಯವರ ಬೇಡಿಕೆಗೆ ಬೆಂಬಲ ಸೂಚಿಸಿತು. ಕಪ್ಪು ಹಣ ವಾಪಸಾತಿಯ ಬಗೆಗಂತೂ ಅದು ಕೊಟ್ಟ ಭರವಸೆ ಮತ್ತು ನೀಡಿದ ಮಾಹಿತಿಗಳು ರೋಮಾಂಚನಕಾರಿಯಾದುದು. 2009ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿಯವರು ಕಪ್ಪು ಹಣದ ಬಗ್ಗೆ ಏನೆಲ್ಲ ಮಾಹಿತಿಗಳನ್ನು ದೇಶದ ಮುಂದೆ ಇಟ್ಟಿದ್ದರೋ ಅದನ್ನು ಎಲ್ಲ ರೀತಿಯಲ್ಲೂ ಮೀರಿಸುವ ಮಾಹಿತಿಯನ್ನು ನರೇಂದ್ರ ಮೋದಿಯವರು ದೇಶದ ಮುಂದಿಟ್ಟರು. ಅಧಿಕಾರಕ್ಕೆ ಬಂದ 100 ದಿನದೊಳಗೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ತುಂಬುವುದಾಗಿ ಅವರು ಭರವಸೆ ನೀಡಿದರು. ಅಡ್ವಾಣಿಯವರಿಗೆ ಇಷ್ಟು ಧೈರ್ಯವಿರಲಿಲ್ಲ. ಅವರು ಕಪ್ಪು ಹಣದಿಂದ ಒಂದೊಂದು ಗ್ರಾಮಕ್ಕೆ ಎಷ್ಟೆಷ್ಟು ಅನುದಾನವನ್ನು ಒದಗಿಸಬಹುದು ಎಂದಷ್ಟೇ ಹೇಳಿದ್ದರು. ಮೋದಿ ನೇತೃತ್ವದ ಬಿಜೆಪಿ ಬಾಬಾ ರಾಮ್‍ದೇವ್‍ರನ್ನೂ ಬೆಂಬಲಿಸಿತು. ಹೀಗೆ ಲೋಕಪಾಲವನ್ನು ಜಾರಿಗೆ ತರುವ ಮತ್ತು ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ರೂಪಾಯಿಯನ್ನು ತುಂಬುವ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಬಿಜೆಪಿಯು ಸದ್ಯ ಅವೆರಡನ್ನೂ ಹೇಗೆ ನಿರ್ಲಕ್ಷಿಸಿದೆ ಎಂದರೆ, ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ರಚಿಸಲಾದ ಸಮಿತಿಯು ಈವರೆಗೆ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ತಮಾಷೆ ಏನೆಂದರೆ, ಈ ಸಮಿತಿಯ ರಚನೆಯಾದದ್ದೇ 2018 ಮಾರ್ಚ್‍ನಲ್ಲಿ. ಇದಕ್ಕೂ ಒಂದು ಕಾರಣ ಇದೆ. ಈ ಬಗ್ಗೆ ಸುಪ್ರೀಮ್ ಕೋರ್ಟಿಗೆ ವ್ಯಕ್ತಿಯೋರ್ವರು ತಕರಾರು ಅರ್ಜಿ ಸಲ್ಲಿಸಿದುದನ್ನು ಪರಿಗಣಿಸಿ ಇಂಥದ್ದೊಂದು ಸಮಿತಿಯನ್ನು ತರಾತುರಿಯಿಂದ ರಚಿಸಲಾಗಿತ್ತು. ಇದರರ್ಥ ಏನು? ಭ್ರಷ್ಟಾಚಾರವನ್ನು ಚುನಾವಣಾ ಅಜೆಂಡಾ ಆಗಿಸಿಕೊಂಡೇ ಅಧಿಕಾರ ಪಡೆದ ಪಕ್ಷವೊಂದು ಆ ಬಳಿಕ ಆ ಇಡೀ ಪ್ರಕ್ರಿಯೆಯನ್ನೇ ನಿರ್ಲಕ್ಷಿಸಿತು ಎಂದಲ್ಲವೇ? ಯಾಕೆ ಈ ದೇಶದ ಮಾಧ್ಯಮಗಳು ಈ ಬಗ್ಗೆ ಒತ್ತಡವನ್ನು ಹೇರಲಿಲ್ಲ? ಅಣ್ಣಾ ಹಜಾರೆಯವರು ಯಾಕೆ ಪರಿಣಾಮಕಾರಿ ಚಳವಳಿಯನ್ನು ನಡೆಸಲಿಲ್ಲ ಮತ್ತು ಮಾಧ್ಯಮಗಳೇಕೆ ಅಣ್ಣಾ ಅವರ ಆ ಬಳಿಕದ ಸತ್ಯಾಗ್ರಹಕ್ಕೆ ಬೆಂಗಾವಲಾಗಿ ನಿಲ್ಲಲಿಲ್ಲ? ಹಾಗಿದ್ದರೆ, 2013-14ರ ಭ್ರಷ್ಟಾಚಾರ ವಿರೋಧಿ ಹೋರಾಟವೆಂಬುದು ಒಂದು ಸಂಚಾಗಿತ್ತೇ? ಮನಮೋಹನ್ ಸಿಂಗ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಬಿಜೆಪಿ-ಹಜಾರೆ-ರಾಮ್‍ದೇವ್ ಮತ್ತು ಮಾಧ್ಯಮದ ಒಂದು ವರ್ಗ ಈ ಸಂಚಿನ ಹಿಂದಿತ್ತೇ? ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಯಾಕೆ ಮನವಿ ಸಲ್ಲಿಸಬಾರದು?
2ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆಯನ್ನೇ ಮುಖ್ಯ ಕೇಂದ್ರವಾಗಿಟ್ಟುಕೊಂಡು ಮನ್‍ಮೋಹನ್ ಸಿಂಗ್ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದ ಬಿಜೆಪಿ, ಇವತ್ತು ಆ ಪ್ರಕರಣವನ್ನು ಹೇಗೆ ನಿಭಾಯಿಸಿದೆ ಅನ್ನುವುದೂ ದೇಶಕ್ಕೆ ಗೊತ್ತು. ಆರೋಪಿಗಳೆಲ್ಲ ಒಬ್ಬೊಬ್ಬರಾಗಿ ಬಿಡುಗಡೆಗೊಳ್ಳುತ್ತಿದ್ದಾರೆ. ಕಾಂಗ್ರೆಸ್‍ನ ಮೇಲೆ ಮತದಾರರು 2014ರ ಚುನಾವಣೆಯಲ್ಲಿ ಮುನಿಸಿಕೊಳ್ಳುವುದಕ್ಕೆ 1 ಲಕ್ಷ ಕೋಟಿ ರೂಪಾಯಿ ಹಗರಣವಾಗಿ ಬಿಂಬಿತವಾದ 2ಜಿ ಸ್ಪೆಕ್ಟ್ರಂಗೆ ಬಹುಮುಖ್ಯ ಪಾತ್ರ ಇದೆ. ಆದರೆ, ಇವತ್ತು ಅದೊಂದು ಹಗರಣವೇ ಅಲ್ಲವೇನೋ ಅನ್ನುವ ಭಾವನೆ ಮೂಡುವಂತೆ ಬೆಳವಣಿಗೆಗಳು ನಡೆಯುತ್ತಿವೆ. ಹಾಗಿದ್ದರೆ, 2ಜಿ ಸ್ಪೆಕ್ಟ್ರಂನ ಬಗ್ಗೆ 2013-14ರಲ್ಲಿ ಹೇಳಲಾಗಿರುವುದೆಲ್ಲ ಸುಳ್ಳೇ? ಸುದ್ದಿ ಮನೆಯ ಡೆಸ್ಕ್ ರೂಂನಲ್ಲಿ ಕುಳಿತು ಕಟ್ಟಿದ ಕತೆಗಳೇ ಅವೆಲ್ಲ? ಬಿಜೆಪಿ ಜೊತೆ ಮಾಧ್ಯಮದ ಒಂದು ವರ್ಗವೂ ಸೇರಿಕೊಂಡು ಇಂಥದ್ದೊಂದು ಸುಳ್ಳು ಕತೆಯನ್ನು ಹೆಣೆದವೇ? ಯಾಕೆ ಇವತ್ತು ಮಾಧ್ಯಮಗಳು ಮಾತಾಡುತ್ತಿಲ್ಲ? ಟಿವಿಯಲ್ಲಿ ಚರ್ಚೆ, ವಿಶ್ಲೇಷಣೆ, ಎಕ್ಸ್‍ಕ್ಲೂಸಿವ್ ನ್ಯೂಸ್‍ಗಳು ಪ್ರಸಾರವಾಗುತ್ತಿಲ್ಲ? ಹಾಗಿದ್ದರೆ 2ಜಿ ಸ್ಪೆಕ್ಟ್ರಂ ಅನ್ನುವುದೂ ಚುನಾವಣಾ ಗಿಮಿಕ್ಕೇ? ಲೋಕಪಾಲ ಅನ್ನುವುದೂ ಚುನಾವಣಾ ತಂತ್ರವೇ? ಕಪ್ಪು ಹಣ ಅನ್ನುವುದೂ ಜುಮ್ಲಾವೇ?
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ನರೇಂದ್ರ ಮೋದಿಯವರು ಈ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ವಿಧಾನಸಭಾ ಚುನಾವಣೆಗಳ ಸಮಯದಲ್ಲಂತೂ ಸರಣಿ ಭಾಷಣಗಳನ್ನು ನೀಡಿದ್ದಾರೆ. ಈ ಎಲ್ಲ ಸಂದರ್ಭಗಳಲ್ಲಿ ಭ್ರಷ್ಟಾಚಾರವನ್ನು ಒಂದು ಇಶ್ಯೂ ಆಗಿ ಅವರು ಎತ್ತಿಕೊಂಡದ್ದು ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯ ಸರಕಾರವನ್ನು ಅವರು 10 ಪರ್ಸೆಂಟ್ ಸರಕಾರ ಎಂದು ಮೂದಲಿಸಿದ್ದರು. ವ್ಯಂಗ್ಯ ಏನೆಂದರೆ, ಆಗಲೂ ಕೇಂದ್ರದಲ್ಲಿ ಲೋಕಪಾಲ ಖಾಲಿ ಬಿದ್ದಿತ್ತು. ಕನಿಷ್ಠ ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿಕ್ಕಾಗಿ ಒಂದು ಸಮಿತಿಯನ್ನೂ ಆ ಸಮಯದಲ್ಲಿ ಅವರು ರಚಿಸಿರಲಿಲ್ಲ. ಆದರೂ ಅವರು ಭ್ರಷ್ಟಾಚಾರ ನಿರ್ಮೂಲನೆಯ ಕುರಿತಂತೆ ಮಾತಾಡುತ್ತಿದ್ದಾರೆ. ಮಾಧ್ಯಮಗಳು ಅದನ್ನು ವರದಿ ಮಾಡುತ್ತಲೂ ಇವೆ. ಒಂದುವೇಳೆ, ಭ್ರಷ್ಟಾಚಾರದ ನಿರ್ಮೂಲನೆಗೆ ಲೋಕಪಾಲದ ಅಗತ್ಯ ಇಲ್ಲವೆಂದಾದರೆ, ಅದು ಮನಮೋಹನ್ ಸಿಂಗ್‍ರ ಕಾಲದಲ್ಲೂ ಅನಗತ್ಯ ಆಗಬೇಕಿತ್ತಲ್ಲವೇ? ಲೋಕಪಾಲ ಇಲ್ಲದೆಯೇ ಭ್ರಷ್ಟಾಚಾರವನ್ನು ನಿಗ್ರಹಿಸಬಹುದು ಎಂದು ಬಿಜೆಪಿ ಹೇಳಬೇಕಿತ್ತಲ್ಲವೇ? ಧರಣಿ ನಡೆಸಬೇಡಿ ಎಂದು ಅಣ್ಣಾ ಹಜಾರೆಯವರಲ್ಲೂ ಅದು ಕೋರಬೇಕಿತ್ತಲ್ಲವೇ? ಆದರೆ ಆ ಸಂದರ್ಭದಲ್ಲಿ ಲೋಕಪಾಲವೇ ಪರಿಹಾರ ಎಂಬ ರೀತಿಯಲ್ಲಿ ಮಾತಾಡಿದ ಬಿಜೆಪಿಯು ಈಗ ಆ ಬಗ್ಗೆ ಗಮನವನ್ನೇ ಹರಿಸಿಲ್ಲ ಅಂದರೆ ಏನರ್ಥ? ಅಧಿಕಾರಕ್ಕೇರಿದ ನಾಲ್ಕೂವರೆ ವರ್ಷಗಳ ಬಳಿಕವೂ ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಮಿತಿಯ ಸಭೆಯೇ ನಡೆದಿಲ್ಲವೆಂದರೆ ಏನರ್ಥ?
2014ರ ಲೋಕಸಭಾ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಲೋಕಪಾಲ ಮಸೂದೆ ಮತ್ತು ಕಪ್ಪು ಹಣ- ಈ ಎರಡರಲ್ಲೂ ಬಿಜೆಪಿ ಇವತ್ತು ಗಾಢ ವೈಫಲ್ಯವನ್ನು ಕಂಡಿದೆ. ಈ ದೇಶದ ಮತದಾರರು ಬಿಜೆಪಿಯನ್ನು ಬೆಂಬಲಿಸುವುದಕ್ಕೆ ಮುಖ್ಯ ಕಾರಣಗಳಲ್ಲಿ ಈ ಎರಡಕ್ಕೂ ಪಾತ್ರ ಇದೆ. ಆದರೆ, ಮೋದಿಯವರ ಅಧಿಕಾರದ ಅವಧಿ ಕೊನೆಗೊಳ್ಳುತ್ತಾ ಬರುತ್ತಿರುವ ಈ ಹೊತ್ತಿನಲ್ಲಿ ಈ ಎರಡನ್ನೂ ಪರಿಶೀಲನೆಗೆ ಒಡ್ಡಿದರೆ, ನಿರಾಶೆಯ ಜೊತೆಗೇ ಪ್ರಶ್ನೆಗಳೂ ಕಾಡುತ್ತವೆ. ಭ್ರಷ್ಟಾಚಾರ ನಿರ್ಮೂಲನೆಗೂ ಬಿಜೆಪಿಗೂ ಸಂಬಂಧ ಏನು? ಬಿಜೆಪಿ ಅಧಿಕಾರದಲ್ಲಿರುವ ಯಾವೆಲ್ಲ ರಾಜ್ಯಗಳು ಭ್ರಷ್ಟಾಚಾರ ಮುಕ್ತವಾಗಿವೆ? ಬಿಜೆಪಿಯ ಯಾವೆಲ್ಲ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ? ಯಾರಿಗೆಲ್ಲ ಶಿಕ್ಷೆಯಾಗಿದೆ? ವ್ಯಾಪಂ ಹಗರಣ ಎಷ್ಟು ಕೋಟಿಯದು? ಅದರಲ್ಲಿ ಭಾಗಿಯಾದ ಬಿಜೆಪಿಯ ನಾಯಕರುಗಳೆಲ್ಲ ಯಾರ್ಯಾರು? ಶವಪೆಟ್ಟಿಗೆ ಹಗರಣ ಯಾರ ಅಧಿಕಾರಾವಧಿಯಲ್ಲಿ ನಡೆದಿದೆ? ಪ್ರಶ್ನೆಗಾಗಿ ಲಂಚ ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ನೋಟಿನ ಕಂತೆಯೊಂದಿಗೆ ಕಾಣಿಸಿಕೊಂಡ ಬಂಗಾರು ಲಕ್ಷ್ಮಣ್ ಯಾವ ಪಕ್ಷದವರು? ಈ ಪಟ್ಟಿ ಇನ್ನೂ ಉದ್ದ ಇದೆ.
ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‍ನ ಮೇಲೆ ಏನೆಲ್ಲ ಆರೋಪಗಳಿವೆಯೋ ಆ ಎಲ್ಲ ಆರೋಪಗಳೂ ಇವತ್ತು ಬಿಜೆಪಿಯ ಮೇಲೂ ಇದೆ. ಬಹುದೀರ್ಘಕಾಲ ಆಳಿದ ಪಕ್ಷವೆಂಬ ನೆಲೆಯಲ್ಲಿ ಕಾಂಗ್ರೆಸ್‍ನಿಂದಾದ ಹಗರಣಗಳ ಪಟ್ಟಿ ಉದ್ದ ಇದೆ ಮತ್ತು ಬಿಜೆಪಿಯ ಆಡಳಿತಾವಧಿ ಹೃಸ್ವವಾಗಿದ್ದರೂ ಹಗರಣಗಳ ವ್ಯಾಪ್ತಿಯಲ್ಲಿ ಆ ಹೃಸ್ವತನವೇನೂ ಕಾಣಿಸುತ್ತಿಲ್ಲ. ಸಣ್ಣ ಅವಧಿಯಲ್ಲಿ ಹಗರಣಗಳ ಮಟ್ಟಿಗೆ ದೊಡ್ಡದೊಂದು ಸಾಧನೆಯನ್ನು ಮಾಡಿದ ಕೀರ್ತಿ ಬಿಜೆಪಿಗಿದೆ. ಹೀಗಿರುವಾಗ, ಲೋಕಪಾಲರನ್ನು ಅದು ನೇಮಿಸುತ್ತದೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸುತ್ತದೆ ಎಂದು ನಾವು ನಿರೀಕ್ಷಿಸುವುದು ಹೇಗೆ? ನಿಜವಾಗಿ,
ಬಿಜೆಪಿ ಏನು ಅನ್ನುವುದಕ್ಕೆ ಲೋಕಪಾಲವೇ ಅತ್ಯುತ್ತಮ ಉದಾಹರಣೆ.