Monday, 11 February 2019

ಓದದೆಯೇ ಆಡುವ ಮಾತು ಮತ್ತು ಭಾವುಕ ಗುಂಪು




     ಸಂಘಪರಿವಾರದಿಂದ ಹೊರಬಂದ ಮೂವರು ಪ್ರಮುಖ ನಾಯಕರು ಮಂಗಳೂರಿನಲ್ಲಿ ನಡೆದ ಜನನುಡಿ ಸಾಹಿತ್ಯದ ವೇದಿಕೆಯಲ್ಲಿ ತಮ್ಮ ಗತ ಬದುಕನ್ನು ಮೆಲುಕು ಹಾಕಿಕೊಂಡಿದ್ದಾರೆ. ಅವರ ಮೆಲುಕು ಎಷ್ಟು ಆಘಾತಕಾರಿಯಾದ ವಿಷಯಗಳನ್ನು ಒಳಗೊಂಡಿತ್ತೆಂದರೆ, ಅವರ ಮಾತಿನಿಂದ ಪ್ರಚೋದಿತವಾಗಿ ಈ ಹಿಂದೆ ನ್ಯಾಯಬಾಹಿರ ಕೃತ್ಯಗಳಲ್ಲಿ ಭಾಗಿಯಾದ ಗುಂಪು ಎಷ್ಟು ಅಮಾಯಕವಾದುದು ಎಂದು ಸ್ಪಷ್ಟವಾಗುತ್ತದೆ. ಭಜರಂಗದಳದ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್, ನಮೋ ಬ್ರಿಗೇಡ್‍ನ ನಿಕೇತ್ ರಾಜ್ ಮೌರ್ಯ ಮತ್ತು ಸುಧೀರ್ ಮರೊಳ್ಳಿ ಇವರೇ ಆ ಮೂವರು. ಗುಜರಾತ್‍ಗೆ ಭೇಟಿಯನ್ನು ಕೊಡದೆಯೇ ಮತ್ತು ವಿವೇಕಾನಂದರ ಬಗ್ಗೆ ಏನನ್ನೂ ಓದದೆಯೇ ಗುಜರಾತ್‍ನ ಅಭಿವೃದ್ಧಿಯನ್ನು ಮತ್ತು ವಿವೇಕಾನಂದರ ವಿಚಾರಧಾರೆಯನ್ನು ಜನರ ಮುಂದೆ ಭಾವನಾತ್ಮಕ ಹೇಳುತ್ತಿದ್ದುದಾಗಿ ಅವರು ಒಪ್ಪಿಕೊಂಡರು. ಕ್ಷಮೆ ಯಾಚಿಸಿದರು. ತಮ್ಮ ಮಾತುಗಳಿಂದ ಪ್ರಚೋದಿತವಾಗುತ್ತಿದ್ದ ಕಾರ್ಯಕರ್ತರಿಗೆ ಅಧ್ಯಯನರಹಿತವಾದ ತಮ್ಮ ಮಾತುಗಳೇ ವೇದವಾಕ್ಯಗಳಾಗಿದ್ದುವು ಎಂಬ ಧಾಟಿಯಲ್ಲಿ ಅವರು ಮಾತಾಡಿದರು.
  ಇವತ್ತಿನ ಬಹುದೊಡ್ಡ ದುರಂತ ಇದು. ಓದು ಇಲ್ಲ. ಅಧ್ಯಯನ ಇಲ್ಲ. ತಾವು ಆಲಿಸುತ್ತಿರುವ ಮಾತುಗಳು ನಿಜವೋ ಸುಳ್ಳೋ ಎಂಬುದನ್ನು ಒರೆಗೆ ಹಚ್ಚಿ ನೋಡುವ ತಿಳುವಳಿಕೆಯೂ ಈ ಗುಂಪಿನಲ್ಲಿ ಇರುವುದಿಲ್ಲ. ರಾಜಕೀಯಕ್ಕೆ ಬೇಕಾಗಿರುವುದು ಇಂಥ ಜನಸಮೂಹವೇ. ಒಂದುವೇಳೆ, ವಿವೇಕಾನಂದರನ್ನು ಓದಿಕೊಂಡ ಯಾರೇ ಆಗಲಿ, ಅವರನ್ನು ಒಂದು ಧರ್ಮದ ವೈರಿಯಾಗಿ ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಅವರು ಇಸ್ಲಾಮನ್ನು ಗೌರವಿಸಿದರು. ಮೆಚ್ಚಿಕೊಂಡರು. ಕ್ರೈಸ್ತ ಧರ್ಮದ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ಹಿಂದೂ ಧರ್ಮದ ಮೇಲೆ ನಿಷ್ಠೆಯನ್ನೂ ವ್ಯಕ್ತಪಡಿಸಿದರು. ಇದು ನಿಜವಾದ ವಿವೇಕಾನಂದ. ಅವರನ್ನು ಅರಿತುಕೊಳ್ಳುವುದಕ್ಕೆ ಅನೇಕಾರು ಪುಸ್ತಕಗಳಿವೆ. ಅವರೋರ್ವ ಶ್ರದ್ಧಾವಂತ ಹಿಂದು. ಅವರಿಗೆ ಈ ದೇಶದಲ್ಲಿರುವ ಹಿಂದೂಯೇತರ ಧರ್ಮಗಳು ಎಂದೂ ಅಡ್ಡಿಯಾಗಿರಲಿಲ್ಲ. ಈ ಧರ್ಮಗಳ ಆಚರಣೆಗಳು; ಇಗರ್ಜಿ, ಮಸೀದಿ, ಬಸದಿಗಳು ಅವರನ್ನು ವ್ಯಾಕುಲಕ್ಕೆ ಒಳಪಡಿಸಿಯೂ ಇರಲಿಲ್ಲ. ಅವರು ಇಸ್ಲಾಮಿನ ಸಮಾನತೆಯ ಚಿಂತನೆಯಿಂದ, ಕ್ರೈಸ್ತರ ಸೇವಾ ಮನೋಭಾವದಿಂದ ಬಹಳವೇ ಪ್ರಭಾವಿತಗೊಂಡಿದ್ದರು. ವಿವೇಕಾನಂದರ ಬದುಕನ್ನು ಅಧ್ಯಯನ ನಡೆಸಿದರೆ, ಅವರ ಉದಾರವಾದಿ ವಿಚಾರಧಾರೆಗಳು ಎದುರ್ಗೊಳ್ಳುತ್ತಲೇ ಹೋಗುತ್ತವೆ. ವಿಷಾದ ಏನೆಂದರೆ,
ಸದ್ಯದ ದಿನಗಳಲ್ಲಿ ನಮಗೆ ಪರಿಚಿತವಾಗುತ್ತಿರುವ ವಿವೇಕಾನಂದ ಇವರಲ್ಲ. ಉದಾರವಾದಿ ವಿವೇಕಾನಂದರನ್ನು ಯಾಕೋ ಒಂದು ಬೇಲಿಯೊಳಗೆ ಕೂರಿಸಿ ಪ್ರಸ್ತುತಪಡಿಸುತ್ತಿರುವಂತೆ ಕಾಣಿಸುತ್ತಿದೆ. ಹಾಗಂತ, ಕೇವಲ ವಿವೇಕಾನಂದರಿಗೆ ಮಾತ್ರ ಸೀಮಿತಗೊಳಿಸಿ ಹೀಗೆ ಹೇಳಬೇಕಾಗಿಲ್ಲ. ಗಾಂಧೀಜಿ, ನೆಹರೂ, ಟಿಪ್ಪು ಸುಲ್ತಾನ್, ಶಿವಾಜಿ, ಔರಂಗಝೇಬ್, ಪ್ರವಾದಿ ಮುಹಮ್ಮದ್‍ರ ಕುರಿತೂ ಹೀಗೆ ಹೇಳಬೇಕಾಗುತ್ತದೆ. 5 ದಶಕಗಳ ಹಿಂದೆ ಗಾಂಧೀಜಿ, ನೆಹರೂ, ಪಟೇಲರ ಬಗ್ಗೆ ಇದ್ದ ಅಭಿಪ್ರಾಯಗಳು ಈಗಿನ ಯುವ ತಲೆಮಾರಿನ ಒಂದು ದೊಡ್ಡ ಗುಂಪಿನಲ್ಲಿ ಇಲ್ಲ. ಇವರನ್ನು ಓದಿಯೇ ಇಲ್ಲದ ಒಂದು ದೊಡ್ಡ ಗುಂಪು ಇವತ್ತು ಇವರ ಬಗ್ಗೆ ಧಾರಾಳ ಮಾತಾಡುತ್ತಿದೆ. ಗಾಂಧೀಜಿ ಈ ದೇಶಕ್ಕೆ ಏನನ್ನೂ ಕೊಟ್ಟಿಲ್ಲ, ನೆಹರೂ ದೇಶ ವಿಭಜಕ ಎಂಬಲ್ಲಿಂದ ತೊಡಗಿ ಉದ್ದಕ್ಕೂ ಇವರ ಬಗ್ಗೆ ನಕಾರಾತ್ಮಕವಾಗಿ ಹೇಳುವ ಯುವ ಗುಂಪು ನಿರ್ಮಾಣವಾಗಿದೆ. ಔರಂಗಝೇಬ್, ಟಿಪ್ಪು ಸುಲ್ತಾನ್, ಶಿವಾಜಿ ಇತ್ಯಾದಿ ವ್ಯಕ್ತಿತ್ವಗಳ ಕುರಿತೂ ಈ ಗುಂಪು ಎಷ್ಟು ಬೇಕಾದರೂ ಮಾತಾಡುತ್ತದೆ. ಹಾಗಂತ,
ಈ ಗುಂಪಿಗೆ ಇವೆಲ್ಲ ಮಾಹಿತಿಗಳು ಎಲ್ಲಿಂದ ಎಂದು ಹುಡುಕ ಹೊರಟರೆ ಲಭ್ಯವಾಗುವುದು ತೀವ್ರ ಆಘಾತ ಮತ್ತು ಬಹುದೊಡ್ಡ ಶೂನ್ಯ. ಕಳೆದುಹೋದ ವ್ಯಕ್ತಿತ್ವಗಳ ಬಗ್ಗೆ ಅವರಾಡುವ ಮಾತುಗಳಿಗೆ ಅವರಲ್ಲಿ ಯಾವುದೇ ಆಧಾರಗಳೂ ಇರುವುದಿಲ್ಲ. ಅಲ್ಲಿ ಇಲ್ಲಿ ಕೇಳಿದವುಗಳು ಮತ್ತು ವಾಟ್ಸಾಪ್-ಫೇಸ್‍ಬುಕ್‍ಗಳಲ್ಲಿ ಓದಿದವುಗಳ ಹೊರತು ಅಧ್ಯಯನದ ಅರಿವು ಇರುವುದೇ ಇಲ್ಲ. ಔರಂಗಝೇಬ್‍ನನ್ನು ದೇಗುಲ ಭಂಜಕ ಎಂದು ಹೇಳುವವರಿಗೆ ನಿಜವಾದ ಔರಂಗಝೇಬ್ ಎಷ್ಟು ಮಂದಿಗೆ ಗೊತ್ತಿದೆ? ಆತ ಭಂಜಿಸಿದ ದೇಗುಲಗಳ ಸಂಖ್ಯೆಯನ್ನು ಹುಡುಕುತ್ತಾ ಹೋದರೆ ನಿಖರವಾಗಿ ಸಿಗುವ ಸಂಖ್ಯೆ- ಒಂದು. ಅದಕ್ಕೂ ಬಲವಾದ ಕಾರಣ ಇತ್ತು. ಭಂಜಿಸಿದ ಆ ದೇಗುಲದ ಪಕ್ಕವೇ ಅದೇ ದೇಗುಲದ ಪುನರ್ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಿದ್ದ ಅನ್ನುವ ಮಾಹಿತಿಯೂ ಸಿಗುತ್ತದೆ. ನಿಜವಾಗಿ,
ಔರಂಗಝೇಬ್ ಹಿಂದೂಗಳ ವಿರೋಧಿ ಆಗಿರಲಿಲ್ಲ. ಹಿಂದೂಗಳ ವಿರೋಧ ಕಟ್ಟಿಕೊಂಡು ಯಾವ ರಾಜರಿಗೂ ಇಲ್ಲಿ ಅಧಿಕಾರ ಚಲಾಯಿಸಲು ಸಾಧ್ಯವೂ ಇರಲಿಲ್ಲ. ರಾಜರುಗಳನ್ನು ಹಿಂದೂ ಮತ್ತು ಮುಸ್ಲಿಮ್ ಎಂದು ವಿಭಜಿಸದೇ ಬರೇ ರಾಜರುಗಳಾಗಿ ನೋಡಿದರೆ ಮತ್ತು ಈ ಆಧಾರದಲ್ಲಿಯೇ ಅವರ ಆಡಳಿತವನ್ನು ಪರೀಕ್ಷೆಗೊಡ್ಡಿದರೆ, ಈ ರಾಜರುಗಳಲ್ಲಿ (ಅವರು ಹಿಂದೂ ಆಗಲಿ ಮುಸ್ಲಿಮ್ ಆಗಲಿ) ವ್ಯತ್ಯಾಸಗಳು ಬಹುತೇಕ ಕಾಣಿಸುವುದೇ ಇಲ್ಲ. ಶಿವಾಜಿಯ ಸೇನೆಗೆ ಬಲ ತುಂಬಿದವರೇ ಮುಸ್ಲಿಮರು. ಟಿಪ್ಪು, ಔರಂಗಝೇಬರ ಅಧಿಕಾರಕ್ಕೆ ಬೆಂಗಾವಲಾಗಿ ನಿಂತವರೇ ಹಿಂದೂಗಳು. ಇದು ಇತಿಹಾಸ. ಈ ಇತಿಹಾಸವನ್ನು ಅರಿತುಕೊಳ್ಳುವುದಕ್ಕೆ ಇರುವ ದಾರಿ ಒಂದೇ- ಓದು ಮತ್ತು ಅಧ್ಯಯನ. ಪ್ರವಾದಿ ಮುಹಮ್ಮದ್ ಏನು ಅನ್ನುವುದನ್ನು ವಿವರಿಸುವುದಕ್ಕೆ ಇಲ್ಲಿ ನೂರಾರು ಪುಸ್ತಕಗಳಿವೆ. ಒಂದುವೇಳೆ,
ಈ ಯಾವ ಪುಸ್ತಕಗಳನ್ನು ಓದದೆಯೇ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೆಂದರೆ, ಅದು ಅಪಾರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದಂತೆಯೇ ಆಗಬಹುದು. ಸತ್ಯ ಹೇಳುವ ಸಾಮರ್ಥ್ಯ ಇರುವುದು ಅಧಿಕೃತ ಇತಿಹಾಸ ಗ್ರಂಥಗಳಿಗೆ ಮಾತ್ರ. ಶಿವಾಜಿಯ ಬಗ್ಗೆಯೂ ನಾವು ಇದನ್ನೇ ಹೇಳಬೇಕು. ವೇದಗ್ರಂಥಗಳ ಕುರಿತು, ಬೈಬಲ್, ಕುರ್‍ಆನ್‍ನ ಬಗ್ಗೆಯೂ ಹೇಳಬೇಕಾದುದು ಇದನ್ನೇ. ಭಾಷಣ ನಮ್ಮ ದಾರಿ ತಪ್ಪಿಸಬಹುದು. ಸಾಮಾಜಿಕ ಜಾಲತಾಣಗಳೂ ಸುಳ್ಳು ಹೇಳಬಹುದು. ಆದರೆ, ನಮ್ಮ ಅರಿವಿನ ಮಟ್ಟವನ್ನು ಇತಿಹಾಸಕ್ಕೆ ಸಂಬಂಧಿಸಿದ ವಿವಿಧ ಗ್ರಂಥಗಳು ಮಾತ್ರ ವಿಸ್ತರಿಸುತ್ತಾ ಹೋಗುತ್ತವೆ.
ಇತಿಹಾಸದಲ್ಲಿ ಏನು ನಡೆದಿದೆಯೋ ಅದು ಇತಿಹಾಸದ ಭಾಗವೇ ಹೊರತು ಅದಕ್ಕೆ ಇವತ್ತಿನ ಭಾರತ ಹೊಣೆಗಾರ ಅಲ್ಲ. ಔರಂಗಝೇಬ್, ಬಾಬರ್, ಶಿವಾಜಿ, ಗಾಂಧೀಜಿ ಮತ್ತು ಈ ಪಟ್ಟಿಯಲ್ಲಿ ಸೇರಿಕೊಳ್ಳುವ ಎಲ್ಲರೂ ಭೂಮಿಯಲ್ಲಿ ತಂತಮ್ಮ ಪಾತ್ರವನ್ನು ನಿರ್ವಹಿಸಿ ಹೊರಟು ಹೋಗಿದ್ದಾರೆ. ಅವರ ಹೆಸರಲ್ಲಿ ಇವತ್ತು ನಾವೆಷ್ಟೇ ಜಗಳಾಡಿದರೂ ಅವರಿಗೆ ಕಿಂಚಿತ್ ಲಾಭ ಅಥವಾ ನಷ್ಟ ಆಗುವ ಸಾಧ್ಯತೆ ಇಲ್ಲವೇ ಇಲ್ಲ. ಸದ್ಯದ ಅಗತ್ಯ ಏನೆಂದರೆ, ಅವರನ್ನು ಅವರಿವರಿಂದ ಕಲಿತುಕೊಳ್ಳದೇ ಪುಸ್ತಕಗಳಿಂದ ಕಲಿತುಕೊಂಡು ಅವರು ಮಾಡಿರಬಹುದಾದ ಪ್ರಮಾದಗಳಿಂದ ಪಾಠ ಕಲಿಯುವುದು. ಮಾತ್ರವಲ್ಲ, ಆಧುನಿಕ ಭಾರತವನ್ನು ಇನ್ನಷ್ಟು ಸುಂದರವಾಗಿ ಕಟ್ಟಲು ಪ್ರಯತ್ನಿಸುವುದು, ಇದು ಅಸಾಧ್ಯವಲ್ಲ. ಆದರೆ ಇದನ್ನು ಸಾಧ್ಯಗೊಳಿಸಲು ರಾಜಕೀಯ ಮುಕ್ತ ಅರಿವನ್ನು ಹೊಂದಬೇಕಾಗುತ್ತದೆ.

    ಈ ದೇಶದ ಇತಿಹಾಸವನ್ನು ಓದುವುದು ಮತ್ತು ಇತಿಹಾಸವನ್ನು ಇತಿಹಾಸವಾಗಿ ಓದುವುದು ಇವೆರಡೂ ಇವತ್ತಿನ ತುರ್ತು ಅಗತ್ಯವೆಂದು ಹೇಳಬಹುದು. ಇತಿಹಾಸವನ್ನು ಓದುವುದಕ್ಕೂ ಇತಿಹಾಸವನ್ನು ಇತಿಹಾಸವಾಗಿ ಓದುವುದಕ್ಕೂ ವ್ಯತ್ಯಾಸ ಇದೆ. ಇತಿಹಾಸವನ್ನು ಇತಿಹಾಸವಾಗಿ ಓದುವಾಗ ನಾವು ಆ ಕಾಲದಲ್ಲಿ ನಿಂತು ಯೋಚಿಸುತ್ತೇವೆಯೇ ಹೊರತು ಇವತ್ತಿನ ಭಾರತವನ್ನು ಅವತ್ತಿನ ಇತಿಹಾಸಕ್ಕೆ ಹೊಣೆಯಾಗಿ ಯೋಚಿಸುವುದಿಲ್ಲ. ಸಾಧ್ಯವಾದರೆ ಈ ದೇಶದಲ್ಲಿರುವ ಎಲ್ಲ ಸಂಘಟನೆಗಳೂ ಇತಿಹಾಸದ ಅಧ್ಯಯನವನ್ನು ತಮ್ಮ ಕಾರ್ಯಕರ್ತರಿಗೆ ಕಡ್ಡಾಯಗೊಳಿಸುವ ತೀರ್ಮಾನ ಕೈಗೊಳ್ಳಬೇಕು. ಹೀಗೆ ಅಧ್ಯಯನ ನಿರತ ಯುವ ಸಮೂಹವೊಂದು ತಯಾರಾದರೆ, ಆ ಬಳಿಕ ಭಾಷಣಕಾರರು ಮತ್ತು ಬರಹಗಾರರು ತುಸು ಜಾಗೃತಗೊಂಡಾರು. ಅವರು ಆಡುವುದಕ್ಕಿಂತ ಮೊದಲು ಓದಿಯಾರು. ಹಾಗೆ ಓದಿ ಆಡುವ ಮಾತುಗಳು ಸಮಾಜವನ್ನು ಕಟ್ಟಬಲ್ಲುದೇ ಹೊರತು ಒಡೆಯಲಾರದು.

ನಮ್ಮನ್ನು ಮರುಚಿಂತನೆಗೆ ಒಳಪಡಿಸಬೇಕಾದ ವಾನರ



ರಾಜ್ಯದ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಮೇಲೆ ಒಂದು ಬಗೆಯ ಮಂಕು ಕವಿದಿದೆ. ಈ ಮಂಕು ಕರಾವಳಿಯ ಉಳಿದ ಭಾಗಗಳ ಮೇಲೂ ಕವಿಯಲಿದೆಯೇ ಎಂಬ ಭಯವೂ ಕಾಡುತ್ತಿದೆ. ಮಂಗನನ್ನು ಆರಾಧಿಸುವ ಮತ್ತು ಆರಾಧಿಸದ ಸಮುದಾಯಗಳಲ್ಲಿ ಏಕ ಪ್ರಕಾರ ಮಂಗ ಭಯ ಢಾಳಾಗಿ ಕಾಣಿಸಿಕೊಂಡಿದೆ. ಸುಮಾರು 60ಕ್ಕಿಂತಲೂ ಅಧಿಕ ಮಂಗಗಳು ಈಗಾಗಲೇ ಸಾವಿಗೀಡಾಗಿವೆ. ಮಂಗಗಳು ಸಾಯುವುದೆಂದರೆ ಕಾಯಿಲೆ ಇನ್ನೂ ಜೀವಂತವಿದೆ ಎಂದರ್ಥ. ಕಂಗಿನ ತೋಟಗಳು ಹುಲುಸಾದ ಬೆಳೆಯೊಂದಿಗೆ ಕೊಯ್ಲಿಗೆ ಸಿದ್ಧವಾಗಿರುವ ಈ ಸಮಯದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿರುವುದು ಕೃಷಿಕರನ್ನು ಕಂಗಾಲಾಗಿಸಿದೆ. ಕಂಗಿನ ತೋಟಕ್ಕೆ ಸಾಮಾನ್ಯವಾಗಿ ಮಂಗಗಳು ದಾಳಿಯಿಡುತ್ತವೆ. ಆದ್ದರಿಂದ ತೋಟಕ್ಕೆ ಹೋಗಲು ಮಾಲಿಕರಿಂದ ಕೂಲಿಯಾಳುಗಳ ವರೆಗೆ ಎಲ್ಲರಿಗೂ ಭಯ. ಹಾಗಂತ, ಮಂಗನ ಕಾಯಿಲೆ ಸಾಂಕ್ರಾಮಿಕ ರೋಗವಲ್ಲ ಎಂಬುದು ನಿಜವೇ. ಆದರೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಎಷ್ಟು ದೃಢಕಾಯರನ್ನೂ ಅದು ಅಲುಗಾಡಿಸಬಹುದು ಅನ್ನುವುದೂ ನಿಜ. ವೈರಸ್ ಪೀಡಿತ ಉಣುಗು ಕಚ್ಚಿದರೆ ಮಾತ್ರ ಹರಡುವ ಕಾಯಿಲೆ ಇದು. ಉಣುಗಿಗೆ ಕಚ್ಚುವುದಕ್ಕೆ ಪ್ರಾಯ ಭೇದ ಇಲ್ಲ. ಸಂಪತ್ತು ನೋಡಿ ಅದು ಕಚ್ಚುವುದೂ ಇಲ್ಲ. ಆದ್ದರಿಂದ ಡಿಎಂಪಿ (ಡಿ ಮಿಥೈಲ್ ಪ್ಯಾಲೆಟ್) ತೈಲವನ್ನು ಹಚ್ಚಿಕೊಳ್ಳುವಂತೆ ಈ ಭಾಗದ ಜನರಲ್ಲಿ ಜಿಲ್ಲಾಡಳಿತ ಮನವಿ ಮಾಡಿಕೊಳ್ಳುತ್ತಿದೆ. ಸಮಸ್ಯೆ ಏನೆಂದರೆ,
 ಈ ತೈಲವೇ ಈಗ ದುರ್ಲಭ ಎನಿಸಿಕೊಂಡಿದೆ. ಅಲ್ಲದೆ, ಮಂಗನ ಕಾಯಿಲೆಗೆ ಲಸಿಕೆ ತಯಾರಿಸುವ ಕೇಂದ್ರವಿರುವದು ಈ ದೇಶದಲ್ಲಿ ಒಂದೇ ಒಂದು. ಅದೂ ಬೆಂಗಳೂರಿನಲ್ಲಿ. ಅಲ್ಲಿಂದಲೇ ತಮಿಳುನಾಡು, ಕೇರಳ, ಗೋವಾ ಇತ್ಯಾದಿ ರಾಜ್ಯಗಳಿಗೂ ಸರಬರಾಜು ಆಗಬೇಕಾಗಿರುವುದರಿಂದ ಲಸಿಕೆ ಸಕಾಲಕ್ಕೆ ಪೂರೈಸಲು ಸಾಧ್ಯವಾಗದಂಥ ಸ್ಥಿತಿಯಿದೆ. ಆಘಾತಕಾರಿ ಸಂಗತಿ ಏನೆಂದರೆ, ಮಂಗನ ಕಾಯಿಲೆಯನ್ನು ಹರಡುವ ಉಣುಗು ಮನುಷ್ಯನಿಗೆ ಕಚ್ಚಿದ ತಕ್ಷಣ ರೋಗ ಲಕ್ಷಣಗಳು ಕಾಣಿಸುವುದಿಲ್ಲ. ಉಣುಗು ಕಚ್ಚಿದ ವಾರದ ಬಳಿಕ ಮನುಷ್ಯರಲ್ಲಿ ಜ್ವರ, ಚಳಿ ಇತ್ಯಾದಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಂತ, ಈ ಲಕ್ಷಣಗಳು ಮಂಗನ ಕಾಯಿಲೆಯ ಲಕ್ಷಣವೇ ಎಂದು ಖಚಿತಪಡಿಸಿಕೊಳ್ಳಬೇಕಾದರೆ, ಕಾಯಿಲೆ ಪೀಡಿತರ ರಕ್ತದ ಮಾದರಿಗಳನ್ನು ತಪಾಸಿಸಬೇಕು. ಆದರೆ ಇಂಥ ಪ್ರಯೋಗಾಲಯ ಕರಾವಳಿ ಭಾಗದಲ್ಲಿ ಇಲ್ಲವೇ ಇಲ್ಲ. ಒಂದೋ ಬೆಂಗಳೂರಿಗೆ ಇಲ್ಲವೇ ಪುಣೆಗೆ ರಕ್ತದ ಮಾದರಿಯನ್ನು ಕಳುಹಿಸಿಕೊಟ್ಟು ಅಲ್ಲಿಂದ ಬರುವ ಫಲಿತಾಂಶಕ್ಕಾಗಿ ಕಾಯಿಲೆ ಪೀಡಿತರು ಕಾಯಬೇಕು. ಇದಕ್ಕೆ ಕನಿಷ್ಠವೆಂದರೆ 10 ದಿನಗಳು  ಬೇಕಾಗುತ್ತವೆ. 1953ರಲ್ಲಿ ಮೊತ್ತ ಮೊದಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯ ಅಂಚಿನಲ್ಲಿ ಕಾಣಿಸಿಕೊಂಡ ಈ ಕಾಯಿಲೆಯನ್ನು ಮಂಗನ ಕಾಯಿಲೆಯೆಂದು ಪತ್ತೆ ಹಚ್ಚಿದ್ದೇ 1957ರಲ್ಲಿ. ವಿಶೇಷ ಏನೆಂದರೆ, 1957ರ ಬಳಿಕ ಅತಿದೊಡ್ಡ ಪ್ರಮಾಣದಲ್ಲಿ ಈ ಬಾರಿ ಈ ಕಾಯಿಲೆ ಕಾಣಿಸಿಕೊಂಡಿದೆ.
ಕಾಯಿಲೆಗಳಲ್ಲಿ ಎರಡು ಬಗೆಯಿದೆ. ಒಂದು- ಮನುಷ್ಯ ನಿರ್ಮಿತವಾದರೆ, ಇನ್ನೊಂದು ಪ್ರಾಕೃತಿಕವಾದುದು. ಮಂಗನ ಕಾಯಿಲೆಯನ್ನು ಯಾವ ದೃಷ್ಟಿಯಲ್ಲಿ ಪರಿಶೀಲಿಸಿದರೂ ಅದರ ಹರಡುವಿಕೆಯಲ್ಲಿ ಮನುಷ್ಯನ ಪಾತ್ರವಿದೆಯೆಂದೇ ಅನಿಸುತ್ತದೆ. ಮಂಗನ ಕಾಯಿಲೆಗೂ ಕಾಡಂಚಿನ ಪ್ರದೇಶಗಳಿಗೂ ಸಂಬಂಧ ಇದೆ. ಮಂಗಗಳ ವಾಸ ಸ್ಥಳ ಕಾಡು. ಸಾಮಾನ್ಯವಾಗಿ ‘ಊರಿಗೆ ದಾಳಿಯಿಟ್ಟ ಮಂಗಗಳು’ ಎಂಬ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನಾವು ಓದುತ್ತಿರುತ್ತೇವೆ. ಇಂತಿಂಥ ಕಡೆ ಕಂಗು, ತೆಂಗು, ಬಾಳೆತೋಟಗಳು ಮಂಗಗಳ ಹಾವಳಿಯಿಂದಾಗಿ ನಾಶವಾಗಿವೆ ಎಂದು ಹೇಳಲಾಗುತ್ತದೆ. ನಿಜವಾಗಿ, ಇಂಥ ಸುದ್ದಿಗಳಲ್ಲಿ ಹೇಳದೇ ಇರುವ ಕೆಲವು ಸತ್ಯಗಳೂ ಇರುತ್ತವೆ. ಮೊದಲು ದಾಳಿಯಿಟ್ಟದ್ದು ಯಾರು ಎಂಬ ಪ್ರಶ್ನೆಯನ್ನು ಇಂಥ ಸುದ್ದಿಗಳು ಖಂಡಿತ ಎತ್ತುತ್ತವೆ. ಮಂಗಗಳು ನಾಡಿಗೆ ದಾಳಿಯಿಡುವ ಮೊದಲು ಮನುಷ್ಯ ಕಾಡಿಗೆ ದಾಳಿಯಿಟ್ಟಿದ್ದಾನೆ. ಕಾಡನ್ನು ನಾಡನ್ನಾಗಿ ಪರಿವರ್ತಿಸಿಕೊಂಡಿದ್ದಾನೆ. ತನ್ನ ವಾಸಸ್ಥಳವು ನಾಶವಾದಾಗ ಪ್ರಾಣಿಗಳು ಸಹಜವಾಗಿ ದಿಕ್ಕು ತಪ್ಪುತ್ತವೆ. ನಾಡಾಗಿ ಪರಿವರ್ತನೆಯಾಗಿರುವ ತಮ್ಮ ಕಾಡಿನಲ್ಲಿ ಮತ್ತು ಕೆಲವೊಮ್ಮೆ ದಿಕ್ಕು ತಪ್ಪಿ ಕಾಡಲ್ಲದ ನಾಡಿನಲ್ಲೂ ಅವು ಅಲೆಯುತ್ತವೆ. ಇದನ್ನೇ ಮನುಷ್ಯ ಬಹಳ ಬುದ್ಧಿವಂತಿಕೆಯಿಂದ ದಾಳಿ ಎಂದು ವ್ಯಾಖ್ಯಾನಿಸುತ್ತಾನೆ. ಮಂಗನ ಕಾಯಿಲೆಗೆ ಸಂಬಂಧಿಸಿಯೂ ಈ ಮಾತು ಅನ್ವಯಿಸುತ್ತದೆ. ಮಂಗನ ಕಾಯಿಲೆ ಎಲ್ಲೆಲ್ಲ  ಕಾಣಿಸಿಕೊಂಡಿವೆಯೋ ಅವೆಲ್ಲ ಕಾಡಂಚಿನಲ್ಲಿರುವ ಪ್ರದೇಶಗಳು. ಈ ಪ್ರದೇಶದ ಮಂದಿ ಅರಣ್ಯವನ್ನು ಒತ್ತುವರಿ ಮಾಡಿಕೊಳ್ಳುವ ಉದ್ದೇಶದಿಂದ ಗುಡ್ಡಗಳಿಗೆ ಬೆಂಕಿ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಈ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಲೂ ಇದೆ. ಅದರಿಂದಾಗಿ ಆಗಿರುವ ಪರಿಣಾಮ ಏನೆಂದರೆ, ಕಾಡಿನ ಸಹಜ ಹುಲ್ಲು ನಾಶವಾಗಿದೆ. ಅದರ ಜಾಗದಲ್ಲಿ ಪೊದೆ ಬೆಳೆದಿದೆ. ಈ ಪೊದೆಗಳಲ್ಲಿಯೇ ಮಂಗನ ಕಾಯಿಲೆ ಹರಡುವ ಉಣುಗುಗಳು ಭಾರೀ ಸಂಖ್ಯೆಯಲ್ಲಿ ಸೇರಿಕೊಂಡಿವೆ. ಅಂದಹಾಗೆ,
ಅಸಂಖ್ಯ ಜೀವಿಗಳ ಪೈಕಿ ಮಂಗ ಒಂದು ಜೀವಿ ಮಾತ್ರ. ಪವಿತ್ರ-ಅಪವಿತ್ರತೆಯ ಆಚೆಗೆ ಅದು ಕೇವಲ ಒಂದು ಪ್ರಾಣಿ. ಈ ಪ್ರಾಣಿ ಯಾಕೆ ಮನುಷ್ಯ ಕಂಟಕವಾಗಿ ಪರಿವರ್ತನೆಯಾಯಿತು ಎಂಬ ಬಗ್ಗೆ ಆಲೋಚಿಸಬೇಕಾದ ಸಮಯ ಇದು. ಮೊದಲನೆಯದಾಗಿ, ಮನುಷ್ಯರು ಆರಾಧನಾ ಭಾವದಿಂದ ನೋಡಬೇಕಾದ ಯಾವ ವಿಶೇಷತೆಯೂ ತನ್ನಲ್ಲಿಲ್ಲ ಎಂಬುದನ್ನು ಸತ್ತು ಬಿದ್ದಿರುವ 60ಕ್ಕಿಂತಲೂ ಅಧಿಕ ಮಂಗಗಳೂ ಬಹಿರಂಗವಾಗಿಯೇ ಸಾರಿವೆ. ಸಾವಿನಿಂದ ತಮ್ಮನ್ನೇ ರಕ್ಷಿಸಿಕೊಳ್ಳಲಾಗದ ಮತ್ತು ಮನುಷ್ಯರನ್ನೇ ಸಾಯಿಸುವ ವೈರಾಣು ತನ್ನ ದೇಹದಲ್ಲಿ ಉತ್ಪತ್ತಿಯಾಗುವುದನ್ನು ತಡೆಯಲಾಗದ ಪ್ರಾಣಿ ಅದು. ಇನ್ನೊಂದು ಸಂಗತಿ ಏನೆಂದರೆ, ಹೆಚ್ಚಿನ ರೋಗಗಳೂ ಮನುಷ್ಯ ನಿರ್ಮಿತವೇ. ಈ ಹಿಂದೆ ಗುಜರಾತ್‍ನಲ್ಲಿ ವ್ಯಾಪಕ ಸಾವು-ನೋವಿಗೆ ಕಾರಣವಾದ ಪ್ಲೇಗ್ ರೋಗದ ಬಗ್ಗೆ ಅನೇಕಾರು ಶಂಕೆಗಳಿದ್ದುವು. ಇದರಲ್ಲಿ ಒಂದು- ಪಾಶ್ಚಾತ್ಯ ರಾಷ್ಟ್ರಗಳು ಪ್ರಯೋಗಾತ್ಮಕವಾಗಿ ಪ್ಲೇಗ್ ವೈರಾಣುವನ್ನು ಗುಜರಾತ್‍ನಲ್ಲಿ ಬಿತ್ತಿದೆ ಎಂಬುದಾಗಿತ್ತು. ಹಾಗಂತ, ಬಡಪಾಯಿ ದೇಶಗಳ ಬಡಪಾಯಿ ಜನರ ಮೇಲೆ ವೈಜ್ಞಾನಿಕ ಪ್ರಯೋಗಗಳು ನಡೆಯುವುದು ಹೊಸತೂ ಅಲ್ಲ, ಸುಳ್ಳೂ ಅಲ್ಲ. ತಮ್ಮ ವೈರಿ ರಾಷ್ಟ್ರದ ಮೇಲೆ ಇನ್ನೊಂದು ರಾಷ್ಟ್ರವು ಜೈವಿಕ ಅಸ್ತ್ರವಾಗಿ ರೋಗಗಳನ್ನು ಬಳಸಿರುವ ಇತಿಹಾಸ ಈ ಜಗತ್ತಿಗಿದೆ. ಆ ಕಾರಣದಿಂದಲೇ, ಈ ಮಂಗನ ಕಾಯಿಲೆಯ ಬಗೆಗೂ ಅನುಮಾನ ವ್ಯಕ್ತವಾಗಿದೆ ಎಂದೇ ಅನಿಸುತ್ತದೆ. ಆದರೂ ಜನದಟ್ಟಣೆಯಿಲ್ಲದ, ಕಾಡಿನಂಚಿನಲ್ಲಿ ವಿರಳವಾಗಿರುವ ಜನರ ಮೇಲೆ ಯಾವುದೇ ರಾಷ್ಟ್ರ ಜೈವಿಕ ಅಸ್ತ್ರವನ್ನು ಪ್ರಯೋಗಿಸುವ ಸಾಧ್ಯತೆ ತೀರಾ ತೀರಾ ಕಡಿಮೆ. ಜೈವಿಕ ಅಸ್ತ್ರವನ್ನು ಪ್ರಯೋಗಿಸುವವರ ಉದ್ದೇಶ ಏನೆಂದರೆ, ದೊಡ್ಡ ಮಟ್ಟದಲ್ಲಿ ಜನರ ಪ್ರಾಣ ಹಾನಿಯಾಗಿಸುವುದು. ಮಂಗನ ಕಾಯಿಲೆ ಸದ್ಯ ಕಾಣಿಸಿಕೊಂಡಿರುವ ಪ್ರದೇಶಗಳನ್ನು ಪರಿಗಣಿಸಿದರೆ, ಅದು ಅಸಾಧ್ಯ. ಆದರೂ ಇವತ್ತಿನ ಕಾಯಿಲೆಗಳಿಗೆ ಕಾಯಿಲೆ ಎಂಬ ಮುಖಕ್ಕಿಂತ ಹೊರತಾದ ಬೇರೆಯದೇ ಆದ ಮುಖವೂ ಇರುತ್ತದೆ ಅನ್ನುವುದು ಸುಳ್ಳಲ್ಲ.
ಮಂಗನ ಕಾಯಿಲೆಯೆಂಬುದು ತಡೆಗಟ್ಟಲು ಸಾಧ್ಯವಿರದ ಅಪಾಯಕಾರಿ ಕಾಯಿಲೆ ಏನಲ್ಲ. ಸ್ಥಳೀಯಾಡಳಿತವು ಮುನ್ನೆಚ್ಚರಿಕೆ ವಹಿಸಿದರೆ ಮತ್ತು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡರೆ, ಈ ಕಾಯಿಲೆಯ ಭೀತಿಯಿಂದ ಜನರನ್ನು ಮುಕ್ತಗೊಳಿಸಬಹುದು. ಸಾಕಷ್ಟು ಪ್ರಮಾಣದಲ್ಲಿ ಈ ಪ್ರದೇಶಕ್ಕೆ ಔಷಧಗಳನ್ನು ವಿತರಿಸುವುದು, ಸುಸಜ್ಜಿತ ಆಸ್ಪತ್ರೆಯನ್ನು ಈ ಪ್ರದೇಶದಲ್ಲಿ ಸ್ಥಾಪಿಸುವುದು ಮತ್ತು ರಕ್ತದ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯವನ್ನು ನಿರ್ಮಿಸುವುದನ್ನು ಸರಕಾರ ಮಾಡಿದರೆ, ಈ ಕಾಯಿಲೆಯನ್ನು ತಡೆಗಟ್ಟಬಹುದು. ಜೊತೆಗೇ, ಮನುಷ್ಯ ತನ್ನ ದುರಾಸೆಯನ್ನು ಕೈಬಿಟ್ಟು ಪ್ರಕೃತಿಯ ಮಾತುಗಳಿಗೆ ಕಿವಿಗೊಡುವ ಉದಾರತೆಯನ್ನು ತೋರಬೇಕು. ಇತರ ಜೀವಿ, ಜಾಲಗಳಿಗೆ ಜಾಗ ಇರುವ, ಪ್ರಕೃತಿಯ ಸಂವೇದನೆಗೆ ಕಿವಿಯಾಗುವ ಮನಸ್ಸು ಇರಬೇಕು. ಮಂಗನ ಕಾಯಿಲೆಯಲ್ಲಿ ಸಿಗುವ ಪಾಠ ಇದು.

Wednesday, 6 February 2019

ಶ್ರೀರಾಮಚಂದ್ರ ಮತ್ತು ಪ್ರವಾದಿ ಅನುಯಾಯಿಗಳಿಗೆ ಅಭಿನಂದನೆಗಳು


   
ಕಳೆದವಾರ ಎರಡು ಘಟನೆಗಳು ನಡೆದುವು. ಈ ಎರಡೂ ಘಟನೆಗಳಿಗೆ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳು ವ್ಯಕ್ತಪಡಿಸಿರುವ ಪ್ರತಿಕ್ರಿಯೆ ಅತ್ಯಂತ ಪ್ರಬುದ್ಧತೆಯಿಂದ ಕೂಡಿತ್ತು ಮತ್ತು ಆ ಎರಡೂ ಘಟನೆಗಳಿಗೆ ಕಾರಣಕರ್ತರಾದವರು ತಲೆ ತಗ್ಗಿಸುವ ರೂಪದಲ್ಲಿತ್ತು. ಇದರಲ್ಲಿ ಒಂದು- ಪ್ರೊಫೆಸರ್ ಭಗವಾನ್‍ರ ಬರಹ. ಆ ಬರಹದಲ್ಲಿ ಶ್ರೀರಾಮನನ್ನು ಅವರು ಅತ್ಯಂತ ಕೆಳದರ್ಜೆಯ, ಅವಮಾನಕರವಾದ ಮತ್ತು ನಿಂದನಾತ್ಮಕ ರೀತಿಯಲ್ಲಿ ಉಲ್ಲೇಖಿಸಿದ್ದರು. ಮಾತ್ರವಲ್ಲ, ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನನ್ನು ಹೀಗೆಯೇ ಉಲ್ಲೇಖಿಸಲಾಗಿದೆ ಎಂದೂ ಸಮರ್ಥಿಸಿಕೊಂಡಿದ್ದರು. ಇನ್ನೊಂದು- ಟಿ.ವಿ. ನಿರೂಪಕರೊಬ್ಬರು ಪ್ರವಾದಿ ಮುಹಮ್ಮದ್‍ರ ಬಗ್ಗೆ ಆಡಿದ ಮಾತು. ಪ್ರವಾದಿ ಮುಹಮ್ಮದ್‍ರಿಗೆ ಶಿಶುಕಾಮಿ ಎಂಬ ಪದವನ್ನು ಅವರು ಪ್ರಯೋಗಿಸಿದ್ದರು. ಸಾರ್ವಜನಿಕರ ಪ್ರತಿಕ್ರಿಯೆಯ ದೃಷ್ಟಿಯಿಂದ ಈ ಎರಡೂ ಸಂದರ್ಭಗಳು ಬಹುಮುಖ್ಯವಾದವು. ಒಂದು ಧರ್ಮದ ಐಕಾನ್‍ಗಳೆಂಬ ನೆಲೆಯಲ್ಲಿ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದ್‍ರಿಗೆ ಬಹಳ ದೊಡ್ಡ ಗೌರವವಿದೆ. ಯಾವುದೋ ಒಂದು ಕಾಲದಲ್ಲಿ ಮತ್ತು ಎಷ್ಟೋ ಶತಮಾನಗಳ ಹಿಂದೆ ಬಾಳಿ, ತುಂಬು ಜೀವನ ನಡೆಸಿ ಹೊರಟು ಹೋದವರಷ್ಟೇ ಅಲ್ಲ ಇವರು. ಇವರಿಬ್ಬರನ್ನೂ ಈ ಸಮಾಜ ಅನುಸರಿಸುತ್ತಾ ಬಂದಿದೆ. ಶ್ರೀರಾಮ ಈ ದೇಶದಲ್ಲಿ ಮರ್ಯಾದಾ ಪುರುಷೋತ್ತಮನಾಗಿ ಗುರುತಿಸಿಕೊಂಡವರು. ಅವರನ್ನು ಆರಾಧಿಸುವ, ಆದರಿಸುವ, ದೇವ ಸ್ವರೂಪಿಯಾಗಿ ಕಾಣುವ ಪರಂಪರೆಯೊಂದು ಈ ದೇಶದಲ್ಲಿ ಬೆಳೆದು ಬಂದಿದೆ. ಶ್ರೀರಾಮರ ಕುರಿತಂತೆ ಹೆಣೆದುಕೊಂಡ ಕತೆಗಳೇ ಇಲ್ಲಿ ನೂರಾರು ಇವೆ. ರಾಮ, ಲಕ್ಷ್ಮಣ, ಸೀತೆ, ಹನುಮಂತ, ಸುಗ್ರೀವ, ವಾಲಿ ಇತ್ಯಾದಿ ಇತ್ಯಾದಿಗಳೆಲ್ಲ ಬರೇ ಹೆಸರುಗಳಷ್ಟೇ ಅಲ್ಲ, ಅವೊಂದು ರೂಪಕ. ಜನರು ಸ್ವತಃ ಪಾತ್ರವಾಗಿ ಅವನ್ನು ಬದುಕಿನಲ್ಲಿ ಅನುಸರಿಸುತ್ತಾ ಬಂದಿದ್ದಾರೆ. ಪ್ರವಾದಿ ಮುಹಮ್ಮದರೂ(ಸ) ಅಷ್ಟೇ. 6 ಮತ್ತು 7ನೇ ಶತಮಾನದ ನಡುವೆ ಮಕ್ಕಾ ಮತ್ತು ಮದೀನಾಗಳನ್ನು ಕೇಂದ್ರವಾಗಿಟ್ಟುಕೊಂಡು ಅವರು ನಡೆಸಿದ ಸುಧಾರಣಾ ಚಟುವಟಿಕೆಗಳು ಅಮೋಘ ಮತ್ತು ಅತುಲ್ಯ. ಅವರ ಕಾಲದ ಸಾಮಾಜಿಕ ರೀತಿ-ನೀತಿ, ಜೀವನ ಪದ್ಧತಿ; ಕೌಟುಂಬಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ಗಮನಿಸದೇ ಮತ್ತು ಪರಿಶೀಲನೆಗೊಡ್ಡದೇ ಈ ಕಾಲದಲ್ಲಿ ನಿಂತು ನಾವು ಅವರ ಬಗ್ಗೆ ಬೀಸು ಹೇಳಿಕೆಗಳನ್ನು ಕೊಡುವುದು ಸುಲಭ. ಆದರೆ ಬೀಸು ಹೇಳಿಕೆಗಳಿಗಷ್ಟೇ ಸೀಮಿತವಾಗುವ ವ್ಯಕ್ತಿತ್ವವೇ ಅದು ಎಂಬ ಪರಿಶೀಲನೆಗಿಳಿದರೆ ತೆರೆದುಕೊಳ್ಳುವ ಜಗತ್ತೇ ಬೇರೆ. ಅವರ ಬಾಲ್ಯ, ಯೌವನ, ಮದುವೆ, ಮಕ್ಕಳು, ಅವರ ಸುಧಾರಣಾ ಕಾರ್ಯಗಳು, ಅವರು ಎದುರಿಸಿರುವ ಸವಾಲುಗಳು ಮತ್ತು ಅದನ್ನು ಅವರು ಎದುರಿಸಿದ ರೀತಿ, ಅವರ ಸಾಮಾಜಿಕ ಚಿಂತನೆಗಳು, ಹೆಣ್ಣಿನ ಬಗೆಗಿನ ಅವರ ನಿಲುವು, ವಿಧವೆಯರು ಮತ್ತು ಹೆತ್ತವರ ಬಗೆಗಿನ ಅಭಿಪ್ರಾಯಗಳು ಇತ್ಯಾದಿಗಳನ್ನೆಲ್ಲ ಸಮಗ್ರವಾಗಿ ಅಧ್ಯಯನ ನಡೆಸಿದ ಓರ್ವ ವ್ಯಕ್ತಿ ಅವರನ್ನು ಒಂದು ವಾಕ್ಯದ ಬೀಸು ಹೇಳಿಕೆಯೊಳಗೆ ಬಂಧಿಸಿಡಲಾರ. ಪ್ರವಾದಿ ಮುಹಮ್ಮದ್‍ರಿಂದ ಆಕರ್ಷಿತರಾಗಿ ಅವರ ಅನುಯಾಯಿಗಳಾದ ತತ್ವಜ್ಞಾನಿಗಳಿದ್ದಾರೆ, ಬರಹಗಾರರಿದ್ದಾರೆ, ಕವಿಗಳಿದ್ದಾರೆ, ರಾಜಕಾರಣಿಗಳಿದ್ದಾರೆ, ಕ್ರೀಡಾಪಟುಗಳಿದ್ದಾರೆ. ವಿಶ್ವ ಕಂಡ ಶ್ರೇಷ್ಠ ಬಾಕ್ಸಿಂಗ್ ಪಟು ಅಮೇರಿಕದ ಕ್ಯಾಸಿಯಸ್ ಕ್ಲೇ ಅವರು ಮುಹಮ್ಮದಲಿ ಕ್ಲೇ ಆದುದು ಪ್ರವಾದಿಯವರನ್ನು ಓದಿಕೊಂಡು. ವಿವೇಕಾನಂದ, ಮಹಾತ್ಮಾ ಗಾಂಧೀಜಿ, ಸರೋಜಿನಿ ನಾಯ್ಡು, ನೆಹರೂ ಎಲ್ಲರೂ ಪ್ರವಾದಿಯವರ ಬಗ್ಗೆ ಅಭಿಮಾನದ ಮಾತನ್ನಾಡಿದ್ದಾರೆ. ಜಾಗತಿಕವಾಗಿ ಇವತ್ತು ಪ್ರವಾದಿ ಮುಹಮ್ಮದ್‍ರಿಗೆ 160 ಕೋಟಿಗಿಂತಲೂ ಅಧಿಕ ಅನುಯಾಯಿಗಳಿದ್ದಾರೆ. ಇಂಥ ವ್ಯಕ್ತಿತ್ವದ ಮೇಲೆ ಪ್ರತಿಕ್ರಿಯಿಸುವ ಮೊದಲು ಅವರ ಬಗ್ಗೆ ಅಧ್ಯಯನ ಅತೀ ಅಗತ್ಯ. ಹಾಗಂತ,
ಪ್ರವಾದಿ ಮುಹಮ್ಮದ್‍ರಾಗಲಿ, ಶ್ರೀರಾಮ ಚಂದ್ರರಾಗಲಿ ಈ ಸಮಾಜಕ್ಕೆ ಅಜ್ಞಾತರಾಗಿ ಉಳಿದಿಲ್ಲ. ಇವರನ್ನು ವಿವರಿಸುವ ಸಾವಿರಾರು ಕೃತಿಗಳು ಇಲ್ಲಿವೆ. ಇವರು ಕಾವ್ಯವಾಗಿ, ಕವನವಾಗಿ, ಕತೆ, ಕಾದಂಬರಿಯಾಗಿ, ನಾಟಕವಾಗಿ, ಸಿನಿಮಾವಾಗಿ ಹೀಗೆ ವಿವಿಧ ರೂಪದಲ್ಲಿ ಸಮಾಜದ ನಡುವೆಯಿದ್ದಾರೆ. ಬಿಡಿಬಿಡಿಯಾಗಿರುವ ಇವನ್ನೆಲ್ಲ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ತಂದುಕೊಂಡು ಅಧ್ಯಯನಕ್ಕಿಳಿದರೆ ಅವರೇನೆಂಬುದು ಗೊತ್ತಾಗುತ್ತದೆ. ವಿಷಾದ ಏನೆಂದರೆ,
ಐತಿಹಾಸಿಕ ವ್ಯಕ್ತಿತ್ವಗಳನ್ನು ಈ ಕಾಲದಲ್ಲಿ ನಿಂತು ನೋಡುವಾಗ ಯಾವ ಎಚ್ಚರಿಕೆಯನ್ನು ಪಾಲಿಸಬೇಕಿತ್ತೋ ಆ ಎಚ್ಚರಿಕೆಯನ್ನು ಕಳೆದವಾರದ ಎರಡೂ ಘಟನೆಗಳಲ್ಲಿ ವಹಿಸಲಾಗಿಲ್ಲ ಅನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಆದರೂ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳು ಈ ಬಗ್ಗೆ ಅತ್ಯಂತ ಪ್ರಬುದ್ಧವಾಗಿ ಪ್ರತಿಕ್ರಿಯಿಸಿವೆ. ಪ್ರೊಫಸರ್ ಭಗವಾನ್‍ರ ಬಗ್ಗೆ ಅಥವಾ ಟಿ.ವಿ. ನಿರೂಪಕರ ಬಗ್ಗೆ ಈ ಸಮಾಜ ಸಿಟ್ಟುಗೊಂಡರೂ ಎಲ್ಲೂ ಕಾನೂನನ್ನು ಕೈಗೆತ್ತಿಕೊಂಡಿಲ್ಲ. ಇವರನ್ನು ಖಂಡಿಸುವ ಭರದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿಲ್ಲ. ರಸ್ತೆ ತಡೆ, ಬಂದ್‍ಗೆ ಕರೆಕೊಟ್ಟಿಲ್ಲ. ಇದೊಂದು ಪ್ರಬುದ್ಧ ನಡೆ. ಪ್ರಬುದ್ಧರೆನಿಸಿಕೊಂಡವರು ತೀರಾ ಅಪ್ರಬುದ್ಧರಂತೆ ವರ್ತಿಸಿದಾಗ ಸಾಮಾನ್ಯವಾಗಿ ಜನರು ರೊಚ್ಚಿಗೇಳುವುದಿದೆ. ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವುದಿದೆ. ಬೈಗುಳ ಸುರಿಸುವುದಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳನ್ನು ನಾವು ಅಭಿನಂದಿಸಬೇಕು. ಶ್ರೀರಾಮಚಂದ್ರರಾಗಲಿ ಪ್ರವಾದಿ ಮುಹಮ್ಮದರಾಗಲಿ ನಿಜ ಐಕಾನ್‍ಗಳಾಗುವುದು ಇಂಥ ಪ್ರತಿಕ್ರಿಯೆಗಳ ಮೂಲಕ. ಓರ್ವರು ಶ್ರೀರಾಮಚಂದ್ರರನ್ನು ನಿಂದಿಸಿದರು ಎಂಬುದನ್ನು ಎತ್ತಿಕೊಂಡು ಅದಕ್ಕಿಂತಲೂ ಕೆಟ್ಟದಾಗಿ ಅವರನ್ನು ನಾವು ನಿಂದಿಸಲು ಪ್ರಾರಂಭಿಸಿದರೆ ಅವರಿಗೂ ನಮಗೂ ನಡುವೆ ಇರುವ ವ್ಯತ್ಯಾಸ ಅಳಿದು ಹೋಗುತ್ತದೆ. ಮಾತ್ರವಲ್ಲ, ಶ್ರೀರಾಮಚಂದ್ರರ ನಿಜ ಅನುಯಾಯಿ ನಾವು ಎಂದು ಹೇಳಿಕೊಳ್ಳುವುದಕ್ಕೂ ಅದು ಧಕ್ಕೆ ತರುತ್ತದೆ. ಪ್ರವಾದಿ ಮುಹಮ್ಮದ್‍ರ ನಿಜ ಅನುಯಾಯಿಯೊಬ್ಬ ಪ್ರವಾದಿ ನಿಂದಕರನ್ನು ಅದೇ ಭಾಷೆಯಲ್ಲಿ ನಿಂದಿಸಲಾರ. ನಿಂದನೆಗೆ ಪ್ರತಿಯಾಗಿ ಪ್ರತಿನಿಂದನೆ, ಹತ್ಯೆಗೆ ಪ್ರತಿಯಾಗಿ ಪ್ರತಿಹತ್ಯೆ, ಅನ್ಯಾಯಕ್ಕೆ ಪ್ರತಿಯಾಗಿ ಪ್ರತಿಅನ್ಯಾಯ, ಅತ್ಯಾಚಾರಕ್ಕೆ ಪ್ರತಿಯಾಗಿ ಪ್ರತಿ ಅತ್ಯಾಚಾರ ಇವೆಲ್ಲ ಧರ್ಮ ವಿರೋಧಿಸಿದ ಕೃತ್ಯಗಳು. ನಿಂದನೆಗೆ ಶಿಕ್ಷೆ ಏನು ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು. ಹತ್ಯೆಗೆ ಶಿಕ್ಷೆ ಏನು ಅನ್ನುವುದನ್ನೂ ನಿರ್ಧರಿಸಬೇಕಾದುದು ನ್ಯಾಯಾಲಯವೇ. ಅತ್ಯಾಚಾರವಾಗಲಿ ಇನ್ನಾವುದೇ ಸಮಾಜ ವಿರೋಧಿ ಕೃತ್ಯಗಳಾಗಲಿ ಇವುಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾದ ಹೊಣೆಗಾರಿಕೆ ನ್ಯಾಯಾಲಯದ ಮೇಲಿದೆ. ಈ ಕ್ರಮವನ್ನು ಗೌರವಿಸದೇ ಹೋದರೆ ನಾಗರಿಕ ಸಮಾಜ ಅನಾಗರಿಕವಾಗಿ ಬಿಡುತ್ತದೆ. ಶಿಕ್ಷೆಗೆ ಒಳಗಾಗಬೇಕಾದವರು ತಪ್ಪಿಸಿಕೊಳ್ಳುತ್ತಾರೆ. ಅಮಾಯಕರು ಅನ್ಯಾಯಕ್ಕೊಳಗಾಗುತ್ತಾರೆ. ಆದ್ದರಿಂದಲೇ ಪ್ರೊಫೆಸರ್ ಭಗವಾನ್ ಮತ್ತು ಟಿ.ವಿ. ನಿರೂಪಕರ ವಿಷಯದಲ್ಲಿ ಹಿಂದೂ ಮತ್ತು ಮುಸ್ಲಿಮ್ ಸಮುದಾಯ ತೋರಿದ ಸಹನೆ ಮತ್ತು ವಹಿಸಿದ ಎಚ್ಚರಿಕೆಯು ಇಷ್ಟವಾಗುವುದು. ಒಂದುವೇಳೆ, ಈ ದೇಶದಲ್ಲಿರುವ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದ್‍ರ ಕೋಟ್ಯಾಂತರ ಅನುಯಾಯಿಗಳು ಇದಕ್ಕಾಗಿ ಕಾನೂನು ಕೈಗೆತ್ತಿಕೊಳ್ಳುವ ಪ್ರಮಾದ ಮಾಡಿರುತ್ತಿದ್ದರೆ ಅದರಿಂದ ಅಪಾಯಕಾರಿ ಸನ್ನಿವೇಶವೊಂದು ನಿರ್ಮಾಣವಾಗುತ್ತಿತ್ತು. ಅನಾಹುತಕಾರಿ ವಿದ್ಯಮಾನಗಳಿಗೆ ಅದು ಕಾರಣವಾಗುತ್ತಿತ್ತು. ಮಾತ್ರವಲ್ಲ, ಇಂಥ ಕ್ರಮಗಳು ಪ್ರವಾದಿ ಮತ್ತು ಶ್ರೀರಾಮರಿಗೆ ಮಾಡುವ ದ್ರೋಹವೂ ಆಗುತ್ತಿತ್ತು.
ಪ್ರಬುದ್ಧ ಧರ್ಮಾನುಯಾಯಿಗಳ ಲಕ್ಷಣ ಏನೆಂದರೆ, ಯಾವ ಸಂದರ್ಭದಲ್ಲಿಯೂ ವಿವೇಚನೆಯನ್ನು ಕಳಕೊಳ್ಳದೇ ಇರುವುದು. ಪ್ರವಾದಿ ಮುಹಮ್ಮದ್‍ರ ನಿಂದನೆಗೆ ಪ್ರತಿಕ್ರಿಯೆಯಾಗಿ ಅವರ ಅನುಯಾಯಿಗಳು ಪ್ರತಿನಿಂದನೆಗೆ ಮತ್ತು ಪ್ರತಿಹಿಂಸೆಗೆ ಇಳಿದರು ಎಂದಾದರೆ, ಅವರು ವಿಚಾರವಂತ ಅನುಯಾಯಿಗಳ ಪಟ್ಟಿಯಿಂದ ಹೊರಗಿದ್ದಾರೆ ಎಂದೇ ಅರ್ಥ. ಶ್ರೀರಾಮರಿಗೆ ಸಂಬಂಧಿಸಿಯೂ ಇವೇ ಮಾತುಗಳನ್ನು ಹೇಳಬೇಕು. ನಿಂದನೆಗೆ ಕಾನೂನಿನ ಭಾಷೆಯಲ್ಲಿ ಉತ್ತರಿಸುವ ವಿವೇಚನೆಯನ್ನು ನಾವು ರೂಢಿಸಿಕೊಳ್ಳಬೇಕು. ಪ್ರೊಫೆಸರ್ ಭಗವಾನ್ ಮತ್ತು ಟಿ.ವಿ. ನಿರೂಪಕರ ವಿಷಯದಲ್ಲಿ ಇದು ಸಾಧ್ಯವಾಗಿದೆ. ಇದಕ್ಕಾಗಿ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದರ ಅನುಯಾಯಿಗಳಿಗೆ ಅಭಿನಂದನೆಗಳು.

ಸಾಣೇಹಳ್ಳಿ ಸ್ವಾಮೀಜಿಯವರಿಗೆ ಅಭಿನಂದನೆಗಳು



ಚಿತ್ರದುರ್ಗದಿಂದ ಬೆಂಗಳೂರಿಗೆ ಮಹಿಳೆಯರ ಪಾದಯಾತ್ರೆಯೊಂದು ಹೊರಟಿದೆ. ಸುಮಾರು ಎರಡ್ಮೂರು ಸಾವಿರದಷ್ಟಿರುವ ಈ ಮಹಿಳಾ ಗುಂಪಿನಲ್ಲಿ ರೈತ ಮತ್ತು ಕೂಲಿಕಾರ್ಮಿಕ ಕುಟುಂಬದವರೇ ಅಧಿಕವಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ 20-25 ಕಿಲೋ ಮೀಟರ್ ಸಾಗಬೇಕೆಂಬುದು ಈ ಗುಂಪಿನ ಗುರಿ. ಹೀಗೆ ಸಾಗುವ ಮಾರ್ಗ ಮಧ್ಯದ ಗ್ರಾಮಗಳು ಈ ಗುಂಪಿಗೆ ಊಟ-ವಸತಿಯನ್ನು ಕಲ್ಪಿಸುವ ಉಮೇದು ತೋರಿವೆ. ಲೆಕ್ಕಾಚಾರದಂತೆ ಪ್ರತಿದಿನ ಪಾದಯಾತ್ರೆ ಸಾಗಿದರೆ ಹಿರಿಯೂರು, ಶಿರಾ, ತುಮಕೂರು ಮಾರ್ಗವಾಗಿ ಜನವರಿ 30ರಂದು ಬೆಂಗಳೂರಿಗೆ ತಲುಪಬಹುದು ಎಂಬ ಭರವಸೆ ಈ ಗುಂಪಿನದು. ಹಾಗಂತ, ಸುಮಾರು 213 ಕಿಲೋಮೀಟರ್ ಸಾಗುವ ಗುರಿಯೊಂದಿಗೆ ಹೊರಟ ಈ ಗುಂಪಿನಲ್ಲಿ ಸಿನಿಮಾ ನಟರಿಲ್ಲ. ಬೃಹತ್ ಉದ್ಯಮಿಗಳಿಲ್ಲ. ರಾಜಕಾರಣಿಗಳಿಲ್ಲ. ಟ್ವಿಟರ್, ಫೇಸ್‍ಬುಕ್, ಇನ್‍ಸ್ಟಾಗ್ರಾಂಗಳಲ್ಲಿ ಬ್ಯುಸಿಯಾಗಿರುವವರೂ ಇಲ್ಲ. ಆದ್ದರಿಂದಲೇ, ಈ ಪಾದಯಾತ್ರೆಯ ಯಶಸ್ಸಿನ ಬಗ್ಗೆ ಈಗಲೇ ಕಣಿ ಹೇಳುವುದಕ್ಕೆ ಸಾಧ್ಯವೂ ಇಲ್ಲ. ಆದರೂ ರಾಯಚೂರು, ಬೀದರ್, ಕಲಬುರ್ಗಿಯಿಂದ ಬಂದಿರುವ ಮಹಿಳೆಯರು ಹೀಗೆ ಒಟ್ಟಾಗಿರುವುದಕ್ಕೆ ಏಕೈಕ ಕಾರಣ ಮದ್ಯಪಾನ. ಈ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಮದ್ಯಪಾನದ ಸಂತ್ರಸ್ತರು. ಗಂಡನೆಂದೋ ಅಪ್ಪನೆಂದೋ ಗುರುತಿಸಿಕೊಳ್ಳುವ ವ್ಯಕ್ತಿಯ ಮದ್ಯಪಾನದ ಚಟದಿಂದ ನೆಮ್ಮದಿಯನ್ನು ಕಳಕೊಂಡವರು. ಬದುಕಿನಲ್ಲಿ ನೆಮ್ಮದಿಯನ್ನು ಕಾಣಬೇಕಾದರೆ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯಪಾನ ನಿಷೇಧವಾಗಬೇಕು ಎಂದು ನಂಬಿದವರು. ಇವರ ಈ ಬಯಕೆಗೆ ‘ಮದ್ಯ ನಿಷೇಧ ಆಂದೋಲನ’ ಎಂಬ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಖುಷಿಯ ವಿಚಾರ ಏನೆಂದರೆ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ಪಾದಯಾತ್ರೆಗೆ ಚಾಲನೆ ನೀಡಿರುವುದು. ಅಷ್ಟಕ್ಕೂ,
ಸಮಾಜದ ಪ್ರಗತಿಗೆ ಮದ್ಯದ ಕೊಡುಗೆಯೇನು ಎಂದು ಪ್ರಶ್ನಿಸಿದಾಗಲೆಲ್ಲ ಆದಾಯದ ಉದ್ದದ ಪಟ್ಟಿಯೊಂದನ್ನು ಸರಕಾರ ಮುಂದಿಡುವುದಿದೆ. ಮದ್ಯದ ಆದಾಯವಿಲ್ಲದೇ ಸರಕಾರ ನಡೆಸಲು ಸಾಧ್ಯವಿಲ್ಲ ಅನ್ನುವ ರೀತಿಯಲ್ಲಿ ಅದು ವರ್ತಿಸುತ್ತಿದೆ. ಜೊತೆಗೇ, ಈ ಆದಾಯದ ಹಿಂದೆ ಕರುಣಾಜನಕವಾದ ಕತೆಯಿದೆ ಎಂಬುದನ್ನೂ ಅದು ಒಪ್ಪಿಕೊಳ್ಳುತ್ತಿದೆ. ಆದ್ದರಿಂದಲೇ, ಸರಕಾರವೇ ಮುಂದೆ ನಿಂತು ಮದ್ಯವರ್ಜನಾ ಶಿಬಿರವನ್ನು ನಡೆಸುತ್ತಿರುವುದು. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಹೀರಾತನ್ನೂ ಪ್ರಕಟಿಸುತ್ತಿರುವುದು. ಏಕಕಾಲದಲ್ಲಿ ನಡೆಯುವ ದ್ವಂದ್ವ ಇದು. ಮದ್ಯದ ಆದಾಯವನ್ನೇ ನೆಚ್ಚಿಕೊಂಡಿರುವ ಸರಕಾರವೊಂದು ಮದ್ಯವರ್ಜನಾ ಶಿಬಿರವನ್ನೂ ನಡೆಸುತ್ತದೆ ಎಂದರೆ ಏನರ್ಥ? ಆಡಳಿತ ನಡೆಸುವ ಪಕ್ಷವೇ ವಿರೋಧ ಪಕ್ಷವನ್ನೂ ರಚಿಸಿ ಅದಕ್ಕೆ ಸಂಪನ್ಮೂಲವನ್ನು ಒದಗಿಸಿ ಮುನ್ನಡೆಸಿಕೊಂಡು ಹೋಗುವ ರೀತಿಯಂಥಲ್ಲವೇ ಇದು? ಒಂದುಕಡೆ, ಮದ್ಯದ ಆದಾಯವೂ ಬೇಕು, ಇನ್ನೊಂದು ಕಡೆ, ತಾನು ಮದ್ಯದ ಪರ ಅಲ್ಲ ಎಂದೂ ಬಿಂಬಿಸಿಕೊಳ್ಳಬೇಕು ಎಂಬ ಚಟವನ್ನು ಬಿಟ್ಟರೆ ಇದರಲ್ಲಿ ಬೇರೆ ಏನಿದೆ? ನಿಜವಾಗಿ,
ಮದ್ಯಪಾನದ ವಿರುದ್ಧ ಒಂದು ಸರಕಾರ ಜಾಹೀರಾತನ್ನು ಕೊಡುತ್ತದೆಂದರೆ, ಮದ್ಯಪಾನ ಸಮಾಜದ ಆರೋಗ್ಯಕ್ಕೆ ಹಾನಿಕರ ಎಂದು ಅದು ಒಪ್ಪಿಕೊಳ್ಳುತ್ತದೆ ಎಂದೇ ಅರ್ಥ. ಹೀಗಿರುವಾಗ, ಹಾನಿಕರವಾದುದರ ಮಾರಾಟಕ್ಕೆ ಸರಕಾರ ಅನುಮತಿ ಕೊಡುವುದಾದರೂ ಯಾಕೆ? ಸರಕಾರ ಇರುವುದೇ ಜನರಿಗೆ ಆರೋಗ್ಯಪೂರ್ಣ ಮತ್ತು ನೆಮ್ಮದಿದಾಯಕ ಬದುಕನ್ನು ಖಾತರಿಪಡಿಸಲು. ಸರಕಾರವೆಂದರೆ, ಮೇಜು-ಕುರ್ಚಿಗಳಲ್ಲವಲ್ಲ. ಜನರಿಗೆ ಸುಲಭ ಬದುಕನ್ನು ಒದಗಿಸುವುದಕ್ಕಾಗಿ ಮನುಷ್ಯರೇ ಸೇರಿಕೊಂಡು ಮಾಡಿಕೊಂಡ ವ್ಯವಸ್ಥೆ ಅದು. ಸರಕಾರದಲ್ಲಿರುವವರು ಜನಪ್ರತಿನಿಧಿಗಳೇ ಹೊರತು ಮದ್ಯ ಪ್ರತಿನಿಧಿಗಳಲ್ಲ. ಮದ್ಯವನ್ನು ತಯಾರಿಸುವ ಉದ್ಯಮದಿಂದ ಶಾಸನ ಸಭೆಗಳಿಗೆ ನಾಮಕರಣ ಮಾಡಬೇಕೆಂಬ ಕಡ್ಡಾಯ ನಿಯಮವಿಲ್ಲ. ಆದರೆ ಸಾಹಿತ್ಯ, ಸಂಗೀತ, ಕ್ರೀಡೆ ಇತ್ಯಾದಿ ಕ್ಷೇತ್ರದಿಂದ ವಿಧಾನ ಪರಿಷತ್ ಮತ್ತು ರಾಜ್ಯಸಭೆಗೆ ನಾಮಕರಣ ಮಾಡುವ ಕ್ರಮ ಇದೆ. ಇಷ್ಟೆಲ್ಲ ಇದ್ದೂ ಮದ್ಯೋದ್ಯಮವನ್ನು ಸರಕಾರ ಆಧರಿಸುತ್ತಿರುವುದೇಕೆ? ಈ ಆದಾಯದಾಚೆಗೆ ಕೋಟ್ಯಾಂತರ ಬಡ ಗುಡಿಸಲುಗಳು ಮತ್ತು ಅಲ್ಲಿನ ಆಕ್ರಂದನಗಳು ಸರಕಾರಕ್ಕೆ ಮುಖ್ಯವಾಗುವುದಿಲ್ಲವೇ? ಬೆಳಗ್ಗಿನಿಂದ ಸಂಜೆಯವರೆಗೆ ದುಡಿದ ಹಣವನ್ನು ಮದ್ಯದಂಗಡಿಗೆ ಸುರಿದು ತೂರಾಡಿಕೊಂಡು ಬರುವ ಅಪ್ಪನನ್ನು ಒಂದು ಮಗು ಹೇಗೆ ಸ್ವಾಗತಿಸೀತು? ಪತ್ನಿಯಾದವಳು ಹೇಗೆ ಸ್ವೀಕರಿಸಿಯಾಳು? ಆ ಮನೆಯ ಪರಿಸ್ಥಿತಿ ಹೇಗಿದ್ದೀತು? ಹೊಡೆತ, ಬಡಿತ, ಥಳಿತ, ಬೈಗುಳ, ಬೊಬ್ಬೆಗಳ ನೆಮ್ಮದಿರಹಿತ ಜಗತ್ತು ಅದು. ಪ್ರತಿನಿತ್ಯ ನಮ್ಮ ಸುತ್ತ-ಮುತ್ತಲೇ ಈ ಮನುಷ್ಯರು ಬದುಕುತ್ತಿz್ದÁರೆ. ಕೋಟ್ಯಾಂತರ ಸಂಖ್ಯೆಯಲ್ಲಿರುವ ಈ ಮನುಷ್ಯರ ಕುಟುಂಬ ಹಾಳಾಗಿದೆ. ಮಕ್ಕಳ ಮನಸ್ಸು ಹಾಳಾಗಿದೆ. ಮನೆ ಹಾಳಾಗಿದೆ. ಇವರೆಲ್ಲರ ಬದುಕನ್ನು ಹೀಗೆ ಬೀದಿಪಾಲು ಮಾಡಿಕೊಂಡು ಸರಕಾರಕ್ಕೆ ಆದಾಯ ಗಳಿಸಬೇಕೇ?
ಆಹಾರ, ಉದ್ಯೋಗ, ಆರೋಗ್ಯ, ವಸತಿ ಇತ್ಯಾದಿ ಜೀವನಾವಶ್ಯಕ ವಸ್ತುಗಳ ಪಟ್ಟಿಯಲ್ಲಿ ಮದ್ಯಕ್ಕೆ ಸ್ಥಾನವಿಲ್ಲ. ಯಾಕೆಂದರೆ, ಅದು ಸಾಮಾಜಿಕ ಅನಿವಾರ್ಯತೆ ಅಲ್ಲ. ಮದ್ಯ ಇಲ್ಲದೆ ಬದುಕಬಹುದು. ಆದರೆ ಆಹಾರ, ಆರೋಗ್ಯ, ಉದ್ಯೋಗ, ವಸತಿ ಇಲ್ಲದೇ ಬದುಕಲು ಕಷ್ಟಸಾಧ್ಯ. ದುರಂತ ಏನೆಂದರೆ, ಈ ಅಗತ್ಯತೆಗಳನ್ನು ಪೂರೈಸಲು ವಿಫುಲವಾದ ಸರಕಾರಗಳು ತಮ್ಮ ವೈಫಲ್ಯಗಳನ್ನು ಮರೆಮಾಚುವುದಕ್ಕಾಗಿ ಮದ್ಯವನ್ನು ವಿತರಿಸುತ್ತಿದೆ. ಒಮ್ಮೆ ಮದ್ಯದ ದಾಸನಾದ ವ್ಯಕ್ತಿ ಆ ಬಳಿಕ ಸರಕಾರದ ಉಳಿದೆಲ್ಲ ವೈಫಲ್ಯಗಳನ್ನು ಮರೆತು ಬಿಡುತ್ತಾನೆ/ಳೆ. ಇದೊಂದು ಸಂಚು. ಮದ್ಯದ ಆದಾಯವನ್ನು ತೋರಿಸಿ ಈ ಸಂಚನ್ನು ಸದ್ಯ ಸಮರ್ಥಿಸಲಾಗುತ್ತಿದೆ. ಜನರನ್ನು ಹಿಂಡಿ, ಅವರ ಆರೋಗ್ಯವನ್ನು ಕೆಡಿಸಿ ಸಂಗ್ರಹಿಸುವ ಆದಾಯದ ಅಗತ್ಯವಾದರೂ ಏನಿದೆ? ಆ ಹಣದಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಎಷ್ಟು ನೈತಿಕ? ಅಂದಹಾಗೆ,
ಚಿತ್ರದುರ್ಗದಿಂದ ಹೊರಟ ಪಾದಯಾತ್ರೆಯ ತುಂಬಾ ಮಹಿಳೆಯರೇ ಇದ್ದಾರೆ. ಅದೂ ಗ್ರಾಮೀಣ ಪ್ರದೇಶದ ಬಡ ಮಹಿಳೆಯರು. ಗ್ರಾಮೀಣ ಪ್ರದೇಶವೆಂಬುದು ನಗರ ಪ್ರದೇಶದಂತಲ್ಲ. ನಗರದಲ್ಲಿ ಪ್ರತಿಭಟನೆಗಳು, ರ್ಯಾಲಿಗಳು ಪ್ರತಿದಿನವೆಂಬಂತೆ ನಡೆಯುತ್ತಲೇ ಇರುತ್ತವೆ. ನಗರದಲ್ಲಿ ಅದು ಸುಲಭ. ಆದರೆ ಗ್ರಾಮೀಣ ಪ್ರದೇಶದ ಮಂದಿ ಪಾದಯಾತ್ರೆ ಹಮ್ಮಿಕೊಳ್ಳುವುದು ಅಪರೂಪ. ತಾವಾಯಿತು, ತಮ್ಮ ಪಾಡಾಯಿತು ಎಂದು ತಮ್ಮಷ್ಟಕ್ಕೆ ಬದುಕುವ ಈ ಮಂದಿ ಪಾದಯಾತ್ರೆಯಲ್ಲಿ ರಾಜಧಾನಿಗೆ ಹೊರಟಿದ್ದಾರೆಂದರೆ, ಅದನ್ನು ಸರಕಾರ ಗಂಭೀರವಾಗಿ ಪರಿಗಣಿಸಲೇಬೇಕು. ಹಾಗಂತ, ಈ ಪಾದಯಾತ್ರೆಯಲ್ಲಿರುವ ಮಹಿಳೆಯರಷ್ಟೇ ಮದ್ಯಪಾನದ ಸಂತ್ರಸ್ತರಲ್ಲ. ಒಂದುವೇಳೆ, ರಾಜ್ಯದಲ್ಲಿ ಯಾರಾದರೂ ಸಮೀಕ್ಷೆ ನಡೆಸಿದರೆ, ಸರಕಾರವನ್ನೇ ಉರುಳಿಸುವಷ್ಟು ಪ್ರಮಾಣದಲ್ಲಿ ಅವರ ಸಂಖ್ಯೆ ಇದ್ದೀತು. ಸರಕಾರ ಈ ಮಹಿಳೆಯರ ಆಗ್ರಹಕ್ಕೆ ಕಿವಿಯಾಗಬೇಕು. ಸಕಲ ಕೆಡುಕುಗಳ ತಾಯಿ ಎಂದು ಇಸ್ಲಾಮ್ ಧರ್ಮ ಸೂಚಿಸಿರುವ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಇಂದಿನಿಂದಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾಣೇಹಳ್ಳಿ ಸ್ವಾಮೀಜಿಯವರಂತೆ ಈ ರಾಜ್ಯದ ಇತರ ಮಠ-ಮಂದಿರಗಳಿಂದಲೂ ಮದ್ಯ ವಿರೋಧಿ ಬೃಹತ್ ಚಳವಳಿ ರೂಪುತಾಳಬೇಕು. ಚರ್ಚ್-ಮಸೀದಿಗಳೂ ಇದರಲ್ಲಿ ಪಾಲುಗೊಳ್ಳಬೇಕು. ಇದೇನೂ ಅಸಾಧ್ಯವಲ್ಲ.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಅಭಿನಂದನೆಗಳು.