Saturday, 25 May 2019

ಮದ್ಯಪಾನ: ಇಬ್ಬರು ಮಕ್ಕಳ ಕತೆ


   


ಕಳೆದವಾರ ಎರಡು ಪ್ರಮುಖ ಸುದ್ದಿಗಳು ಪ್ರಕಟವಾದುವು. ಎರಡರ ಕೇಂದ್ರ ಬಿಂದುವೂ ಮದ್ಯವೇ. ರಾಜ್ಯದ ಚಿಕ್ಕಬಲ್ಲಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಇಬ್ಬರು ಮಕ್ಕಳು ನೆರೆಯ ಆಂಧ್ರ ಪ್ರದೇಶದ ಅನಂತರಪುರ ಜಿಲ್ಲೆಯಲ್ಲಿ ಮಣ್ಣು ತಿಂದು ಸಾವನ್ನಪ್ಪಿದ್ದಾರೆ ಅನ್ನುವುದು ಮೊದಲ ಸುದ್ದಿ. ಎರಡನೇ ಸುದ್ದಿ ಏನೆಂದರೆ, ಕಳೆದ 2010 ರಿಂದ 17ರ ನಡುವೆ ಭಾರತದಲ್ಲಿ ಮದ್ಯ ಸೇವನೆಯ ಪ್ರಮಾಣ ಶೇ. 38ಕ್ಕೆ ಹೆಚ್ಚಳವಾಗಿದೆ ಎಂಬುದು. ಬಾಗೇಪಲ್ಲಿಯ ಇಬ್ಬರು ಮಕ್ಕಳ ಸಾವಿಗೂ ಮದ್ಯಕ್ಕೂ ಸಂಬಂಧ ಇದೆ. ಇಲ್ಲಿನ ಮಹೇಶ್ ಮತ್ತು ನಾಗಮಣಿ ದಂಪತಿಗಳು ಕೂಲಿ ಕೆಲಸಕ್ಕೆಂದು ಆಂಧ್ರಕ್ಕೆ ತೆರಳಿದ್ದರು. ಇವರ ಜೊತೆ ಐದು ಮಕ್ಕಳು ಮತ್ತು ನಾಗಮಣಿಯ ತಾಯಿ ಮತ್ತು ಸೋದರಿಯ ಮಗುವೂ ಇತ್ತೆಂದು ಹೇಳಲಾಗುತ್ತದೆ. ಈ ದಂಪತಿಗಳು ಮತ್ತು ನಾಗಮಣಿಯ ತಾಯಿ ಮಹಾ ಕುಡುಕರು. ನಾಗಮಣಿ ದಂಪತಿಗಳು ಕೆಲಸಕ್ಕೆಂದು ಹೊರಗೆ ಹೋಗುವಾಗ ಅಜ್ಜಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಅಜ್ಜಿಯೂ ಕುಡಿಯುತ್ತಿದ್ದುದರಿಂದ ಮನೆಯಲ್ಲಿ ಅನ್ನ ಬೇಯಿಸುತ್ತಿದ್ದುದು ಕಡಿಮೆ. ಹೀಗಾಗಿ ಹಸಿದ ಮಕ್ಕಳು ಮಣ್ಣು ತಿನ್ನುತ್ತಿದ್ದರು. 6 ತಿಂಗಳ ಹಿಂದೆ 3 ವರ್ಷದ ಮಗು ಮಣ್ಣು ತಿಂದು ತೀರಿಕೊಂಡಿತು. ಇದು ಹೊರಗಿನ ಪ್ರಪಂಚಕ್ಕೆ ಗೊತ್ತಾಗಿರಲಿಲ್ಲ. ಆದರೆ ಇದೀಗ ನಾಗಮಣಿಯ ಸೋದರಿಯ ಮಗನೂ ಹಸಿವೆಯಿಂದ ಮಣ್ಣು ತಿಂದ ಪರಿಣಾಮ ಸಾವನ್ನಪ್ಪಿದ್ದಾನೆ. ಇದು ಅಧಿಕಾರಿಗಳಿಗೆ ಗೊತ್ತಾಗಿದೆ. ಈ ಹೃದಯವಿದ್ರಾವಕ ಸುದ್ದಿಯ ಮೂರು ದಿನಗಳ ಬಳಿಕ ಭಾರತದಲ್ಲಿ ಮದ್ಯ ಸೇವನೆಯ ಸ್ಥಿತಿಗತಿಯ ಕುರಿತಂತೆ ಜರ್ಮನಿಯ ಡ್ರೆಸ್ಡನ್ ವಿಶ್ವವಿದ್ಯಾಲಯದ ಸಂಶೋಧಕರು ಸಿದ್ಧಪಡಿಸಿದ ಅಧ್ಯಯನ ವರದಿಯನ್ನು ದಿ ಲಾನ್ಸೆಟ್ ಜರ್ನಲ್ ಬಿಡುಗಡೆಗೊಳಿಸಿದೆ. 1990 ರಿಂದ 2017ರ ನಡುವೆ ಜಾಗತಿಕವಾಗಿ ಮದ್ಯಸೇವನೆಯ ಪ್ರಮಾಣ ಹೇಗಿದೆ ಎಂಬ ಬಗ್ಗೆ 189 ರಾಷ್ಟ್ರಗಳಲ್ಲಿ ಅಧ್ಯಯನ ನಡೆಸಿದ ಬಳಿಕ ಬಿಡುಗಡೆಗೊಳಿಸಲಾದ ಈ ವರದಿಯ ಅಂಶಗಳೇನೂ ಆಶಾದಾಯಕವಾಗಿಲ್ಲ. 2025ರ ವೇಳೆಗೆ ಮದ್ಯ ಸೇವನೆಯ ಪ್ರಮಾಣವನ್ನು ಶೇ. 10 ರಷ್ಟು ಕಡಿಮೆಗೊಳಿಸಲು ವಿಶ್ವಸಂಸ್ಥೆ ಒಂದು ಕಡೆ ಗುರಿ ಇಟ್ಟುಕೊಂಡಿದ್ದರೆ ಇನ್ನೊಂದು ಕಡೆ ಈ ಗುರಿಯನ್ನು ಅಪಹಾಸ್ಯ ಮಾಡುವಂತೆ ಮದ್ಯ ಸೇವನೆಯ ಪ್ರಮಾಣದಲ್ಲಿ ಏರಿಕೆ ಆಗುತ್ತಲೇ ಇದೆ. ವಿಶೇಷ ಏನೆಂದರೆ, 1990ಕ್ಕೂ ಮೊದಲು ಶ್ರೀಮಂತ ರಾಷ್ಟ್ರಗಳಲ್ಲಿ ಮದ್ಯ ಸೇವನೆಯ ಪ್ರಮಾಣ ಅಧಿಕವಿರುತ್ತಿತ್ತು. ಆದರೆ ಆ ಬಳಿಕದ ಈ ಎರಡೂವರೆ ದಶಕಗಳಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ಹೆಚ್ಚು ಆದಾಯಕ್ಕೂ ಮದ್ಯ ಸೇವನೆಗೂ ಸಂಬಂಧ ಇಲ್ಲ ಎಂಬ ಅಘಾತಕಾರಿ ಬದಲಾವಣೆಯೊಂದು ಈ ಕ್ಷೇತ್ರದಲ್ಲಿ ಕಾಣಿಸಿಕೊಂಡಿದೆ. ಯುರೋಪ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ, ಚೀನಾ, ವಿಯೆಟ್ನಾಂ ಸೇರಿದಂತೆ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ತಲಾವಾರು ಆದಾಯ ಕಡಿಮೆ. ಆದರೆ, ಈ ರಾಷ್ಟ್ರಗಳಲ್ಲೇ ಈಗ ಮದ್ಯ ಸೇವನೆಯ ಪ್ರಮಾಣ ಹೆಚ್ಚಾಗಿದೆ ಎಂಬುದಾಗಿ ಅಧ್ಯಯನ ವರದಿ ಹೇಳುತ್ತಿದೆ. 1990 ರಿಂದ 2017ರ ತನಕ ಜಾಗತಿಕ ಮಟ್ಟದಲ್ಲಿ ಮದ್ಯ ಸೇವನೆಯಲ್ಲಿ ಶೇ. 70 ರಷ್ಟು ಹೆಚ್ಚಳವಾಗಿದೆ ಎಂಬ ದಂಗು ಬಡಿಸುವ ಸುದ್ದಿಯನ್ನು ದಿ ಲಾನ್ಸೆಟ್ ಜರ್ನಲ್ ಬಹಿರಂಗ ಪಡಿಸಿದೆ.
ಯಾವುದೇ ಒಂದು ವಸ್ತುವಿನ ಮಾರಾಟಕ್ಕೆ ಸರಕಾರ ಅನುಮತಿಯನ್ನು ಕೊಡುವಾಗ ಅದರ ಅಗತ್ಯ-ಅನಗತ್ಯಗಳ ಕುರಿತಂತೆ ಪರಾಮರ್ಶೆಯೊಂದು ಖಂಡಿತ ನಡೆಯುತ್ತದೆ. ಗಾಂಜಾ, ಅಫೀಮ್ ನಂತಹ ಮಾದಕ ವಸ್ತುಗಳನ್ನು ಯಾಕೆ ನಿಷೇಧಿಸಲಾಗಿದೆಯೆಂದರೆ, ಅದು ಜನರ ಆರೋಗ್ಯಕ್ಕೆ ಹಾನಿಕಾರಕ ಎಂಬುದರಿಂದ. ಮದ್ಯ ಸೇವನೆಯಿಂದ ಸಾಂಕ್ರಾಮಿಕ ರೋಗಗಳೂ ಸೇರಿದಂತೆ ಸುಮಾರು 200ಕ್ಕೂ ಅಧಿಕ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಇದೆಯೆಂದು ದಿ ಲಾನ್ಸೆಟ್ ಜರ್ನಲ್ ಬಿಡುಗಡೆಗೊಳಿಸಿದ ವರದಿಯಲ್ಲೇ ಇದೆ. ಹಾಗಂತ, ಇದು ಈ ವರೆಗೆ ಗೊತ್ತಿಲ್ಲದ ಸಂಗತಿಯಲ್ಲ. ಮದ್ಯ ಸೇವನೆಯಿಂದ ಸಮಾಜದ ಆರೋಗ್ಯ ಕೆಡುತ್ತದೆ ಅನ್ನುವುದು ಅದನ್ನು ಸೇವಿಸುವವರಿಗೂ ಗೊತ್ತು. ಅದನ್ನು ಮಾರಾಟ ಮಾಡುವುದಕ್ಕೆ ಅನುಮತಿ ನೀಡಿರುವ ಸರಕಾರಕ್ಕೂ ಗೊತ್ತು. ಹಾಗಿದ್ದರೂ ಸರಕಾರ ಈ ಮದ್ಯ ಮಾರಾಟಕ್ಕೆ ಯಾಕೆ ಅನುಮತಿ ಕೊಟ್ಟಿದೆಯೆಂದರೆ ಅದರಿಂದ ಬರುವ ಬಹುದೊಡ್ಡ ಆದಾಯವನ್ನು ಪರಿಗಣಿಸಿ. ಈ ಆದಾಯವನ್ನು ಬಳಸಿಯೇ ಶಿಕ್ಷಕರಿಗೆ ವೇತನವೂ ಸೇರಿದಂತೆ ವಿವಿಧ ರೀತಿಯ ಕಾಮಗಾರಿ, ಅಭಿವೃದ್ಧಿ ಯೋಜನೆಗಳನ್ನು ನಿರ್ವಹಿಸಲಾಗುತ್ತಿದೆ ಎಂಬ ಸಮರ್ಥನೆ ಕೇಳಿ ಬರುತ್ತಿದೆ. ನಿಜವಾಗಿ, ಪ್ರಶ್ನೆಯಿರುವುದು ಆದಾಯದ್ದಲ್ಲ, ಬದುಕಿನದ್ದು. ಶಿಕ್ಷಕರಿಗೋ ಅಭಿವೃದ್ಧಿ ಯೋಜನೆಗಳಿಗೋ ಹಣ ಸಂಗ್ರಹಿಸಬೇಕಾದದ್ದು ಜನರನ್ನು ಅನಾರೋಗ್ಯಕ್ಕೆ ತಳ್ಳಿಯೋ? ಸರಕಾರದ ಹೊಣೆಗಾರಿಕೆ ಏನು?
ಅನ್ನ, ಶಿಕ್ಷಣ ಮತ್ತು ಆರೋಗ್ಯ- ಇವು ಮೂರೂ ಜನರ ಪಾಲಿನ ಮೂಲಭೂತ ಬೇಡಿಕೆಗಳು. ಯಾವುದೇ ಸರಕಾರ ಇವುಗಳ ಲಭ್ಯತೆಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕೇ ಹೊರತು ಜನರ ಆರೋಗ್ಯವನ್ನು ನಾಶಮಾಡಿ ಅಭಿವೃದ್ಧಿ ನಡೆಸುವುದಲ್ಲ. ಈ ಹಿಂದೆ ಆಂಧ್ರಪ್ರದೇಶದಲ್ಲಿ ಮದ್ಯಪಾನ ನಿಷೇಧ ಮಾಡಲಾಗಿತ್ತು. ಒಂದುವೇಳೆ, ಇವತ್ತಿಗೂ ಅದು ಮುಂದುವರಿದಿರುತ್ತಿದ್ದರೆ ಈ ಮಕ್ಕಳು ಮಣ್ಣು ತಿನ್ನುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ?
ಆದಾಯ ಮತ್ತು ಆರೋಗ್ಯ- ಈ ಎರಡರ ನಡುವೆ ಆಯ್ಕೆಯ ಪ್ರಶ್ನೆ ಬಂದಾಗಲೆಲ್ಲ ಸರಕಾರಗಳು ಅದಾಯವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಕೆಲವು ತಿಂಗಳುಗಳ ಹಿಂದೆ ಚಿತ್ರದುರ್ಗದಿಂದ ಮಹಿಳೆಯರ ಬೃಹತ್ ಪ್ರತಿಭಟನಾ ರ್ಯಾಲಿಯೊಂದು ಬೆಂಗಳೂರಿಗೆ ತಲುಪಿತ್ತು. ಗ್ರಾಮೀಣ ಪ್ರದೇಶದ ಸಾವಿರಾರು ಮಹಿಳೆಯರು ತಮ್ಮೆಲ್ಲ ಕಷ್ಟಗಳನ್ನು ಕಡೆಗಣಿಸಿ ಕಾಲ್ನಡಿಯಲ್ಲಿ ಬೆಂಗಳೂರಿಗೆ ತಲುಪಿ ಮದ್ಯ ನಿಷೇಧಕ್ಕೆ ಒತ್ತಾಯ ಮಾಡಿದ್ದರು. ತಂತಮ್ಮ ಮನೆಯ ಪರಿಸ್ಥಿತಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದರು. ಪ್ರತಿ ಮನೆಯ ಕತೆಯೂ ಕರುಣಾಜನಕವೇ. ಕುಡಿತವು ಬರೇ ಕುಡಿದವರನ್ನಷ್ಟೇ ಕಾಡುವುದಲ್ಲ, ಅವರನ್ನು ಅವಲಂಬಿಸಿದವರನ್ನೂ ಕಾಡುತ್ತದೆ. ಒಂದು ಮನೆಯ ಪುರುಷ ಕುಡುಕನಾಗಿದ್ದರೆ ಆತನ ಮನೆಯ ಮಹಿಳೆ, ಮಕ್ಕಳು ಮತ್ತು ನೆರೆಕರೆಯವರೂ ಅದರ ಅಡ್ಡಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನೆಯ ಖರ್ಚು ವೆಚ್ಚಗಳಿಗೆ ವಿನಿಯೋಗವಾಗಬೇಕಿದ್ದ ದೊಡ್ಡದೊಂದು ಮೊತ್ತವು ಮದ್ಯದಂಗಡಿಯ ಡ್ರಾವರ್ ಸೇರಿಕೊಳ್ಳುತ್ತದೆ. ಮಕ್ಕಳ ಶೀಕ್ಷಣದ ಮೇಲೂ ಅದು ಪರಿಣಾಮವನ್ನು ಬೀರುತ್ತದೆ. ಈ ಬಗ್ಗೆ ಬೆಳಕು ಚೆಲ್ಲುವ ವರದಿಗಳು ನೂರಾರು ಬಂದಿವೆ. ಮದ್ಯಪಾನವನ್ನು ನಿಷೇಧಿಸಿ ಎಂದು ಜನರು ಅಸಂಖ್ಯ ಬಾರಿ ಬೀದಿಗಿಳಿದು ಒತ್ತಾಯಿಸಿದ್ದಾರೆ. ಆದರೆ ಸರಕಾರ ಕೈ ತಪ್ಪುವ ಭಾರೀ ಪ್ರಮಾಣದ ಆದಾಯವೊಂದನ್ನೇ ತೋರಿಸಿ ನಿರಾಕರಿಸುತ್ತಿದೆ. ಜನರ ಆರೋಗ್ಯವನ್ನು ಕಾಪಾಡುವುದನ್ನೇ ಆದ್ಯತೆಯಾಗಿ ಮಾಡಿಕೊಳ್ಳಬೇಕಿದ್ದ ಸರಕಾರಗಳು ಆದಾಯವನ್ನೇ ಆಧ್ಯತೆಯ ವಿಷಯವಾಗಿ ಆರಿಸಿಕೊಳ್ಳುತ್ತಿರುವುದು ಅತ್ಯಂತ ವಿಷಾದಕರ. ಇದು ಬದಲಾಗಬೇಕು. ಮದ್ಯದ ಆದಾಯಕ್ಕೆ ಬದಲಾಗಿ ಪರ್ಯಾದ ಆದಾಯ ಮೂಲವನ್ನು ಸರಕಾರ ಹುಡುಕಬೇಕು. ಈಗಾಗಲೇ ಬಿಹಾರದಂಥ ರಾಜ್ಯಗಳಲ್ಲಿ ಮದ್ಯಪಾನಕ್ಕೆ ನಿಷೇಧವಿದೆ. ಈ ಬಗ್ಗೆ ರಾಜ್ಯ ಸರಕಾರ ಅಧ್ಯಯನ ನಡೆಸಬೇಕು. ಅಬಕಾರಿ ಕ್ಷೇತ್ರದ ಆದಾಯವಿಲ್ಲದೇ  ಬಿಹಾರದಲ್ಲಿ ಸರಕಾರ ನಡೆಯಬಹುದೆಂದಾದರೆ ಕರ್ನಾಟಕದಲ್ಲಿ ಯಾಕೆ ಸಾಧ್ಯವಿಲ್ಲ ಎಂಬ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು. ಮದ್ಯದ ಆದಾಯಕ್ಕೆ ಬದಲಾಗಿ ಪರ್ಯಾಯ ಆದಾಯ ಮೂಲವನ್ನು ಕಂಡುಕೊಳ್ಳುವ ಅವಕಾಶಗಳನ್ನು ತಜ್ಞರು ಮಂಡಿಸಬೇಕು. ಮದ್ಯ ಸೇವನೆಯು ಮಕ್ಕಳಿಗೆ ಅನ್ನದ ಬದಲು ಮಣ್ಣನ್ನು ತಿನ್ನಿಸುತ್ತದೆ. ಇದು ಹೃದಯ ವಿದ್ರಾವಕ. ಇದಕ್ಕೆ ಸರಕಾರವೇ ನೇರ ಹೊಣೆ.

Saturday, 18 May 2019

ಅರ್ಮಿನ್ ವೋಲ್ಫ್ ಎಂಬ ಉಗ್ರವಾದಿ ಮತ್ತು ವಿಲಿಮಿಸ್ಕಿ ಎಂಬ ದೇಶಪ್ರೇಮಿ



      ಆಸ್ಟ್ರಿಯಾದಲ್ಲಿ ಇತ್ತೀಚೆಗೆ ನಡೆದಿರುವ ಮತ್ತು ನಡೆಯುತ್ತಿರುವ ಬೆಳವಣಿಗೆಗಳು ಭಾರತೀಯ ಪರಿಸ್ಥಿತಿಗೆ ಬಹಳವಾಗಿ ಹೋಲುತ್ತದೆ. ಯುರೋಪಿಯನ್ ಯೂನಿಯನ್‍ನ ಸದಸ್ಯ ರಾಷ್ಟ್ರವಾಗಿರುವ ಆಸ್ಟ್ರಿಯಾದಲ್ಲಿ ಮೈತ್ರಿ ಸರಕಾರವಿದೆ. ತೀವ್ರ ಬಲಪಂಥೀಯ ವಿಚಾರಧಾರೆಯನ್ನು ಹೊಂದಿರುವ ಫ್ರೀಡಂ ಪಾರ್ಟಿ ಆಫ್ ಆಸ್ಟ್ರಿಯಾವು ಈ ಮೈತ್ರಿ ಸರಕಾರದ ಪಾಲುದಾರ ಪಕ್ಷ. ಯುರೋಪಿಯನ್ ಯೂನಿಯನ್‍ನ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಿರುವ ಈ ಪಕ್ಷದ ಹೆರಾಲ್ಡ್ ವಿಲಿಮಿಸ್ಕಿಯನ್ನು ಇತ್ತೀಚೆಗೆ ಅಲ್ಲಿನ ಹೆಸರಾಂತ ಟಿವಿ ನಿರೂಪಕ ಅರ್ಮಿನ್ ವೋಲ್ಫ್ ಸಂದರ್ಶನ ನಡೆಸಿದರು. ಅರ್ಮಿನ್ ವೋಲ್ಫ್ ರು ಆಸ್ಟ್ರಿಯಾದ ಅತ್ಯಂತ ಗೌರವಾನ್ವಿತ ಮತ್ತು ಜನಪ್ರಿಯ ಟಿ.ವಿ. ನಿರೂಪಕ. ಫ್ರೀಡಂ ಪಾರ್ಟಿ ಆಫ್ ಆಸ್ಟ್ರಿಯಾ ಪಕ್ಷವು ನಡೆಸುತ್ತಿರುವ ಚುನಾವಣಾ ಪ್ರಚಾರ ವೈಖರಿಯನ್ನು ಸಂದರ್ಶನದ ವೇಳೆ ವಿಲಿಮಿಸ್ಕಿಯವರಲ್ಲಿ ವೋಲ್ಫ್ ಪ್ರಶ್ನಿಸಿದರು. ಮುಖ್ಯವಾಗಿ, ಇಸ್ಲಾಮೋಫೋಬಿಯ(ಇಸ್ಲಾಮ್ ಭೀತಿ)ವನ್ನು ಬಿತ್ತುವ ಮತ್ತು ಜನಾಂಗೀಯವಾದವನ್ನು ಬೆಳೆಸುವ ವ್ಯಂಗ್ಯ ಚಿತ್ರವನ್ನು ಪಕ್ಷದ ಪ್ರಕಟಣೆಗಳಲ್ಲಿ ಬಳಸಿರುವುದನ್ನು ಅವರು ಬೊಟ್ಟು ಮಾಡಿದರು. ವಿಲಿಮಿಸ್ಕಿಯವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಅರ್ಮಿನ್ ವೋಲ್ಫ್ ಅವರು ಹಿಟ್ಲರ್ ಕಾಲದ ಚಿತ್ರಗಳನ್ನು ಅವರ ಮುಂದೆ ಪ್ರದರ್ಶಿಸಿದರು. ಯಹೂದಿಯರನ್ನು ಇದೇ ರೀತಿಯಲ್ಲಿ ಹಿಟ್ಲರ್ ಬಿಂಬಿಸಿರುವುದನ್ನು ಎತ್ತಿ ಹಿಡಿದರು. ಈ ಎರಡರಲ್ಲಿ ಏನು ವ್ಯತ್ಯಾಸವಿದೆ ಎಂದು ಅವರು ಪ್ರಶ್ನಿಸಿದರು. ತಕ್ಷಣ ವಿಲಿಮಿಸ್ಕಿ ಸಿಟ್ಟಾದರು. ನೀನಿದರ ಪರಿಣಾಮವನ್ನು ಎದುರಿಸುವೆ ಎಂದು ಬೆದರಿಕೆ ಹಾಕಿದರು. ಅಂದಿನಿಂದ ಅಸ್ಟ್ರಿಯಾದ ವೈಸ್ ಚಾನ್ಸಲರ್ ಹೈನ್ ಕ್ರಿಸ್ಚಿಯನ್ ಸ್ಟ್ರಾಚೆಯೂ ಸೇರಿದಂತೆ ಫ್ರೀಡಂ ಪಾರ್ಟಿ ಆಫ್ ಆಸ್ಟ್ರಿಯಾದ ರಾಜಕಾರಣಿಗಳು ಮತ್ತು ಬೆಂಬಲಿಗರು ಅತ್ಯಂತ ನಿಂದನೀಯ ಭಾಷೆಯಲ್ಲಿ ಅರ್ಮಿನ್ ವೋಲ್ಫ್ ರನ್ನು ಜರೆಯುತ್ತಿದ್ದಾರೆ.  ಅವನು ಎಡಪಂಥೀಯ ಉಗ್ರಗಾಮಿ, ದೇಶದ್ರೋಹಿ ಎಂದೆಲ್ಲಾ ಅಪಮಾನಕರ ಭಾಷೆಯಲ್ಲಿ ಜರೆಯುತ್ತಿರುವವರಲ್ಲದೇ, ವೋಲ್ಫ್ ರನ್ನು ವಜಾ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಹಾಗಂತ,
ಕಳೆದ ಶುಕ್ರವಾರ ಆಚರಿಸಲಾದ ವಿಶ್ವ ಪತ್ರಿಕಾ ದಿನಾಚಣೆಯ ಆಸುಪಾಸಿನಲ್ಲೇ ಇಂಥದ್ದೊಂದು ಬೆಳವಣಿಗೆ ನಡೆದಿರುವುದನ್ನು ನಾವು ಅಚ್ಚರಿಯಿಂದ ನೋಡಬೇಕಿಲ್ಲ. ಬಲಪಂಥೀಯ ವಿಚಾರಧಾರೆಯು ಟೀಕೆಯನ್ನೇ ಒಪ್ಪದ ರೀತಿಯಲ್ಲಿ ವರ್ತಿಸುತ್ತಿರುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಹಲವು ರಾಷ್ಟ್ರಗಳು ಸಾಕ್ಷ್ಯ ವಹಿಸಿವೆ. ಟೀಕೆಗೆ ಪ್ರತಿಯಾಗಿ ನಿಂದನೆ, ಅವಮಾನ, ಬೆದರಿಕೆ, ಹಲ್ಲೆ ಮತ್ತು ಚಾರಿತ್ರ್ಯಹರಣದ ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಹಂಚುವುದು ಇತ್ಯಾದಿಗಳನ್ನು ಎಗ್ಗಿಲ್ಲದೇ ಮಾಡಲಾಗುತ್ತಿದೆ. ವಿಶ್ವ ಪತ್ರಿಕಾ ದಿನಾಚಣೆಯ ಸಮಯದಲ್ಲೇ `ರಿಪೋರ್ಟರ್ಸ್ ವಿದೌಟ್ ಬಾರ್ಡ್‍ರ್ಸ್’ ಸಂಸ್ಥೆಯ ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ವಿವಿಧ ರಾಷ್ಟ್ರಗಳ ಸ್ಥಾನಮಾನ ಹೇಗಿದೆ ಎಂಬ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ 2018ರಲ್ಲಿ 11ನೇ ಸ್ಥಾನದಲ್ಲಿದ್ದ ಆಸ್ಟ್ರಿಯಾವು ಈಗ 16ನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕುಸಿತ ಕಾಣಲಿದೆ ಎಂದು ಈಗಾಗಲೇ ತಜ್ಞರು ಹೇಳುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಭಾರತದ ಸ್ಥಾನಮಾನವೂ ಕುಸಿತದ ದಾರಿಯಲ್ಲೇ ಸಾಗಿದೆ. ಒಟ್ಟು 180 ರಾಷ್ಟ್ರಗಳ ಮೇಲೆ `ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್' ಸಂಸ್ಥೆಯು ಅಧ್ಯಯನ ನಡೆಸುತ್ತಿದ್ದು ಅದರಲ್ಲಿ 2017ರಲ್ಲಿ ಭಾರತವು 136ನೇ ಸ್ಥಾನದಲ್ಲಿತ್ತು. 2018ಕ್ಕಾಗುವ ಎರಡು ಸ್ಥಾನಗಳ ಕುಸಿತವನ್ನು ಕಂಡು 138ಕ್ಕೆ ಇಳಿಯಿತು. ಈಗ 140ನೇ ಸ್ಥಾನದಲ್ಲಿದೆ.
ವಿಶ್ವ ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಹೊಂದಿರುವ ಮತ್ತು ವಿಶ್ವದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿರುವ ಭಾರತವು ಪತ್ರಿಕಾ ಸ್ವಾತಂತ್ರ್ಯದ ಪಟ್ಟಿಯಲ್ಲಿ 140ನೇ ಸ್ಥಾನದಲ್ಲಿರುವುದು ಖಂಡಿತ ಅವಮಾನಕರ ಸಂಗತಿ. ಇದಕ್ಕೆ ಕಾರಣವೇನು ಅನ್ನುವುದನ್ನು ಅವಲೋಕಿಸಬೇಕಾದ ತುರ್ತು ಅಗತ್ಯ ಈಗಿನದು. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ನೆಲೆಸಿರುವ ವಾತಾವರಣವನ್ನು ಗಂಭೀರವಾಗಿ ಅವಲೋಕಿಸಿದರೆ ಇದಕ್ಕೆ ಒಂದು ಹಂತದವರೆಗೆ ಉತ್ತರ ಲಭ್ಯವಾಗಬಹುದು. ಆಡಳಿತ ಪಕ್ಷವಾದ ಬಿಜೆಪಿಯ ರಾಜಕಾರಣಿಗಳು ಮತ್ತು ಬೆಂಬಲಿಗರ ಭಾಷೆ ಈ ಐದು ವರ್ಷಗಳಲ್ಲಿ ಎಷ್ಟು ಕಳಪೆ ದರ್ಜೆಯನ್ನು ಹೊಂದಿವೆ ಎಂದರೆ, ಭಾರತದ ಭವ್ಯ ಸಂಸ್ಕೃತಿಗೆ ಯಾವ ಮಟ್ಟದಲ್ಲೂ ಅದು ತಾಳೆಯಾಗಲಾರದು. ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದರೆ ಪ್ರತಿಯಾಗಿ ಬೈಗುಳು ನಿಂದನೆ, ಅಮಾನ, ಬೆದರಿಕೆಗಳೇ ಸಿಗುತ್ತವೆ. ಬಿಜೆಪಿಗೆ ಸಂಬಂಧಿಸಿ ಮಾಧ್ಯಮಗಳು ಯಾವ ತನಿಖಾ ಬರಹವನ್ನೂ ಬರೆಯಬಾರದು ಎಂಬ ರೀತಿಯ ವರ್ತನೆಯೊಂದು ಬಿಜೆಪಿ ಮತ್ತು ಅದರ ಬೆಂಬಲಿಗರಲ್ಲಿದೆ. ಅಮಿತ್ ಶಾ ಅವರ ಮಗನಿಗೆ ಸಂಬಂಧಿಸಿದ ತನಿಖಾ ವರದಿ, ರಕ್ಷಣಾ ಸಲಹೆಗಾರ ಅಜಿತ್ ಧೋವಲ್‍ರ ಮಕ್ಕಳಿಗೆ ಸಂಬಂಧಿಸಿದ ವರದಿ ಮತ್ತು ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ ತನಿಖಾ ವರದಿಗಳನ್ನು ಬಿಜೆಪಿ ಮತ್ತು ಅದರ ಬೆಂಬಲಿಗ ಗುಂಪು ಹೇಗೆ ಸ್ವೀಕರಿಸಿದೆ ಎಂಬುದು ಈಗ ಜಗಜ್ಜಾಹೀರು. ಬೋಫೋರ್ಸ್ ಅವ್ಯವಹಾರವನ್ನು ಭಾರೀ ಉತ್ಸಾಹದಿಂದ ದೇಶದೆಲ್ಲೆಡೆ ಹಂಚಿದ್ದ ಪಕ್ಷವೇ ರಫೇಲ್ ಮತ್ತಿತರ ವ್ಯವಹಾರಗಳ ಬಗ್ಗೆ ವರದಿಯನ್ನಾಗಲಿ, ಟೀಕೆಯನ್ನಾಗಲಿ ಸಹಿಸುವುದಿಲ್ಲ ಎಂದರೆ ಏನರ್ಥ? ಮುಸ್ಲಿಮರ ಬಗೆಗೆ ಬಿಜೆಪಿ ನಾಯಕರು ಮತ್ತು ಅದರ ಬೆಂಬಲಿಗರು ಆಗಾಗ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳನ್ನೂ ಇಲ್ಲಿ ಪರಿಶೀಲನೆಗೊಡ್ಡಬಹುದು. ಮುಸ್ಲಿಮ್ ನಿಂದನೆಯನ್ನೇ ರಾಜಕೀಯ ರಣ ತಂತ್ರವಾಗಿ ಬಿಜೆಪಿ ಸ್ವೀಕರಿಸಿಕೊಂಡಿದೆ ಅನ್ನುವುದನ್ನು ಅಚ್ಚರಿಯ ರೀತಿಯಲ್ಲಿ ಇವತ್ತು ಹೇಳಬೇಕಿಲ್ಲ. ಈ ದೇಶದ ಪ್ರತಿ ಪ್ರಜೆಗೂ ಅದು ಗೊತ್ತಿದೆ. ಮುಸ್ಲಿಮ್ ವಿರೋಧಿ ಭಾಷಣ ಮಾಡಿದವರು, ಮಸೀದಿ ಒಡೆದ ಆರೋಪ ಇರುವವರು, ಮುಸ್ಲಿಮರ ಮತವೇ ಬೇಕಾಗಿಲ್ಲ ಅನ್ನುವವರು... ಹೀಗೆ ವಿಭಿನ್ನ ದಾಟಿಯಲ್ಲಿ ಮುಸ್ಲಿಮ್ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸುವವರನ್ನೇ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಅದೇವೇಳೆ, ಹಿಂದೂ ಧರ್ಮವನ್ನು ಅವಮಾನಿಸುವ, ಹಿಂದೂ ಧರ್ಮದ ಆಚರಣೆಗಳನ್ನು ಪ್ರಶ್ನಿಸುವ ಮತ್ತು ಮಂದಿರದಂಥ ಆರಾಧನಾಲಯಗಳನ್ನು ಒಡೆದ ಆರೋಪ ಇರುವವರಿಗೆ ಅದು ಟಿಕೆಟನ್ನು ನೀಡುತ್ತಲೂ ಇಲ್ಲ. ತನ್ನ ವಿರುದ್ಧದ ಟೀಕೆಯನ್ನು ಸಹಿಸಲು ಸಿದ್ಧರಿರದ ಮತ್ತು ಅಲ್ಪಸಂಖ್ಯಾತರನ್ನು ಟೀಕಿಸಿದರೆ ಪಾರಿತೋಷಕ ಕೊಡುವ ನೀತಿಯೊಂದನ್ನು ಬಿಜೆಪಿ ಅಳವಡಿಸಿಕೊಂಡಿದೆ ಅನ್ನುವುದಕ್ಕೆ ಇವೂ ಸಹಿತ ನೂರಾರು ಆಧಾರಗಳು ಇವೆ. ಉಗ್ರ ಬಲಪಂಥೀಯ ವಿಚಾರಧಾರೆ ಎಂದರೆ ಹೀಗೆಯೇ. ಅದು ಟೀಕೆಯನ್ನು ಸಹಿಸುವುದಿಲ್ಲ. ಬಹುಸಂಖ್ಯಾತ ಪಕ್ಷಪಾತಿಯಾಗಿ ಮತ್ತು ಅಲ್ಪಸಂಖ್ಯಾತ ವಿರೋಧಿಯಾಗಿ ಅದು ಗುರುತಿಸಿಕೊಳ್ಳುತ್ತದೆ. ಟೀಕೆಗೆ ಪ್ರತಿಯಾಗಿ ನಿಂದನೆ ಮತ್ತು ಅಪಾಹಾಸ್ಯವನ್ನು ನೀಡುತ್ತದೆ. ವಿರೋಧಿಗಳನ್ನು ಸಂದರ್ಭಾನುಸಾರ ಉಗ್ರವಾದಿಯೆಂದೋ, ಪರಾವಲಂಬಿಯೆಂದೋ, ನುಸುಳುಕೋರರು, ವಲಸೆಗಾರರೆಂದೋ ಕರೆದು, ಜರೆದು ತನ್ನ ಪರವಾದ ರಾಜಕೀಯ ವಾತಾವರಣವನ್ನು ನಿರ್ಮಿಸಿಕೊಳ್ಳ ಬಯಸುತ್ತದೆ. ಕಳೆದ ಐದು ವರ್ಷಗಳಲ್ಲಿ ಈ ದೇಶದ ವಿವಿಧ ಪತ್ರಿಕೆಗಳ ಪುಟಗಳಲ್ಲಿ ಪ್ರಕಟವಾದ ಸುದ್ದಿ-ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವ ಚರ್ಚೆಗಳು ಇದಕ್ಕೆ ಉತ್ತಮ ಪುರಾವೆಯಾಗಿದೆ.
ಆಸ್ಟ್ರೀಯಾದ ಟಿವಿ ನಿರೂಪಕ ಅರ್ಮಿನ್ ವೋಲ್ಫ್ ಇದರ ಇತ್ತೀಚಿನ ಉದಾಹರಣೆ ಅಷ್ಟೇ. ಭಾರತದಲ್ಲಂತೂ ವಿಲಿಮಿಸ್ಕಿಯಂಥ ರಾಜಕಾರಣಿಗಳು ಮತ್ತು ಪ್ರತಿಭಟನಾ ನಿರತ ಅವರ ಬೆಂಬಲಿಗರಂಥವರು ಧಾರಾಳ ಇದ್ದಾರೆ.

ಹೊರಗೆ ಬಿಳಿ, ಒಳಗೆ ಕತ್ತಲು



‘ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?’
ಇದು ಪವಿತ್ರ ಕುರ್‍ಆನ್‍ನಲ್ಲಿ ನಮೂದಾಗಿರುವ ಒಂದು ಪ್ರಶ್ನೆ. ಹೀಗೆ ಪ್ರಶ್ನಿಸಿದವರು ಪ್ರವಾದಿ ಮೂಸಾ(ಅ). ಪ್ರಶ್ನೆಯನ್ನು ಎದುರಿಸಿದವನು ದೊರೆ ಫಿರ್‍ಔನ್. ಹೀಗೆ ಪ್ರಶ್ನಿಸಬೇಕೆಂದು ಆದೇಶ ಕೊಟ್ಟವನು ಅಲ್ಲಾಹ್. ಪವಿತ್ರ ಕುರ್‍ಆನಿನ ಅನ್ನಾಝಿಆತ್  ಅಧ್ಯಾಯದ 18ನೇ ವಚನದಲ್ಲಿ ಈ ಬಗ್ಗೆ ಉಲ್ಲೇಖವಿದೆ. ನಿಜವಾಗಿ, ಪುರಾತನ ಕಾಲದ ಫಿರ್‍ಔನ್‍ಗೆ ಮಾತ್ರ ಅನ್ವಯಿಸಿ ನೋಡಬೇಕಾದ ಪ್ರಶ್ನೆಯಲ್ಲ ಇದು. ಈ ಪ್ರಶ್ನೆ ಸಾರ್ವಕಾಲಿಕ. ಪ್ರತಿ ವ್ಯಕ್ತಿಯೂ ತನ್ನ ಜೊತೆ ಇಂಥದ್ದೊಂದು ಪ್ರಶ್ನೆಯನ್ನು  ಕೇಳಿಕೊಳ್ಳಲೇಬೇಕು ಮತ್ತು ತನ್ನ ಹೃದಯ ಯಾವ ಬಗೆಯಲ್ಲಿ ಈ ಪ್ರಶ್ನೆಗೆ ಪ್ರತಿಕ್ರಿಯಿಸುತ್ತದೆ ಅನ್ನುವುದನ್ನು ಪರಿಶೀಲಿಸಬೇಕು. ‘ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?’ ಎಂದು ಫಿರ್‍ಔನ್‍ನಲ್ಲಿ ಪ್ರವಾದಿ ಮೂಸಾ(ಅ)ರು ಪ್ರಶ್ನಿಸುವುದಕ್ಕೆ ಎರಡು  ಪ್ರಮುಖ ಕಾರಣಗಳಿದ್ದುವು. 1. ಫಿರ್‍ಔನ್ ಸೃಷ್ಟಿಕರ್ತನನ್ನು ನಿರಾಕರಿಸಿ ಬದುಕುತ್ತಿದ್ದ. 2. ಸೃಷ್ಟಿಗಳ ಮೇಲೆ ಹಿಂಸೆಯೆಸಗುತ್ತಿದ್ದ. ಅಲ್ಲಾಹನ ಪ್ರಕಾರ ಇವೆರಡೂ ಪರಿಶುದ್ಧತೆಗೆ ವಿರುದ್ಧ. ಈ ಬಗ್ಗೆ ಪವಿತ್ರ ಕುರ್‍ಆನ್‍ನಲ್ಲಿ ಬೇರೆ ಕೆಲವು ಉಲ್ಲೇಖಗಳೂ ಇವೆ.  ‘ಪರಿಶುದ್ಧ ಹೃದಯದ ಹೊರತು ಸೊತ್ತು-ಸಂತಾನಗಳಾವುವೂ ನಾಳೆ ಪರಲೋಕದಲ್ಲಿ ಫಲಕಾರಿಯಾಗುವುದಿಲ್ಲ’ ಎಂದು ಅಶ್ಶುಅರಾ ಅಧ್ಯಾಯದ 88-89ನೇ ವಚನದಲ್ಲಿ ಅಲ್ಲಾಹನು ಹೇಳಿದ್ದಾನೆ. ‘ಯಾರು ಆತ್ಮವನ್ನು ಪರಿಶುದ್ಧಗೊಳಿಸಿಕೊಂಡನೋ  ಅವನು ವಿಜಯಿಯಾದನು’ ಎಂದು ಅಶ್ಶಮ್ಸ್ ಅಧ್ಯಾಯದ 9ನೇ ವಚನದಲ್ಲಿ ಹೇಳಲಾಗಿದೆ. ‘ಪ್ರವಾದಿ ಇಬ್ರಾಹೀಮರು ತನ್ನ ಪ್ರಭುವಿನ ಸನ್ನಿಧಿಗೆ ಪರಿಶುದ್ಧ ಮನಸ್ಸಿನಿಂದ ಬಂದರು’ ಎಂಬ ಉಲ್ಲೇಖವು ಪವಿತ್ರ ಕುರ್‍ಆನಿನ ಅಸ್ಸಾಫ್ಫಾತ್ ಅಧ್ಯಾಯದ  37ನೇ ವಚನದಲ್ಲಿದೆ. ‘ಪರಿಶುದ್ಧತೆಯನ್ನು ಕೈಗೊಂಡವನು ಯಶಸ್ವಿಯಾದನು’ ಎಂದು ಅಲ್ ಅಅïಲಾ ಅಧ್ಯಾಯದ 14ನೇ ವಚನವು ಹೇಳುತ್ತದೆ. ಅಂದಹಾಗೆ, ಈ ಎಲ್ಲ ವಚನಗಳಲ್ಲಿ ಪರಿಶುದ್ಧತೆಯ ಬೇರೆ ಬೇರೆ ವ್ಯಾಖ್ಯಾನಗಳಿವೆ. ಫಿರ್‍ಔನನಲ್ಲಿ ಯಾವ  ಎರಡು ಕೆಟ್ಟ ಗುಣಗಳಿದ್ದುವೋ ಅವು ಮಾತ್ರ ಅಪರಿಶುದ್ಧತೆಯ ಮಾನದಂಡ ಅಲ್ಲ. ಸೊತ್ತು ಮತ್ತು ಸಂತಾನಗಳ ಮೇಲಿನ ಅತಿ ವ್ಯಾಮೋಹವೂ ಹೃದಯವನ್ನು ಅಶುದ್ಧಗೊಳಿಸಬಹುದು. ಪರಿಶುದ್ಧಗೊಳ್ಳಬೇಕಾದುದರ ಪಟ್ಟಿಯಲ್ಲಿ ಆತ್ಮವೂ ಇದೆ.  ಆತ್ಮವೂ ಕಳಂಕಕ್ಕೆ ಒಳಗಾಗಬಹುದು. ಅಪರಿಶುದ್ಧಗೊಳ್ಳಬಹುದು. ಒಂದು ರೀತಿಯಲ್ಲಿ, ಪರಿಶುದ್ಧ ಅನ್ನುವುದು ಬದುಕಿನ ಯಾವುದಾದರೊಂದು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿ ಹೇಳಬೇಕಾದ ಪದವಲ್ಲ. ಓರ್ವ ವ್ಯಕ್ತಿ ಅಡಿಯಿಂದ ಮುಡಿವರೆಗೆ  ಬಿಳಿಯಾಗುವುದು ಎಂದು ಸರಳವಾಗಿ ಇದನ್ನು ವಿವರಿಸಬಹುದು. ಬಿಳಿ ಎಂಬುದು ಶುದ್ಧತೆಯ ಪ್ರತೀಕ. ಶುಕ್ರವಾರದಂದು ಮುಸ್ಲಿಮರಲ್ಲಿ ಬಹುತೇಕರೂ ಬಿಳಿ ಬಟ್ಟೆಯನ್ನು ಧರಿಸುತ್ತಾರೆ. ಮೃತದೇಹದ ಮೇಲೂ ಬಿಳಿ ಬಟ್ಟೆಯನ್ನು ಹೊದೆಸಲಾಗುತ್ತದೆ.  ಸದ್ಯದ ಅಗತ್ಯ ಏನೆಂದರೆ, ಬಾಹ್ಯವಾಗಿರುವ ಈ ಬಿಳಿಯನ್ನು ಆಂತರಿಕವಾಗಿ ಸ್ವೀಕರಿಸಿಕೊಳ್ಳುವುದು. ಹೊರಗಿನ ವೇಷ ವಿಧಾನಗಳು ಹೇಗೆ ಬಿಳಿಯೋ ಹಾಗೆಯೇ ಒಳಗಿನ ಭಾವ-ಬಿಂಬಗಳೂ ಬಿಳಿ ಎಂಬುದನ್ನು ಸಾರಲು ಯಾವ P್ಷÀಣದಲ್ಲೂ ನಾವು  ಸಿದ್ಧವಾಗಿರುವುದು. ಇದು ಸುಲಭ ಅಲ್ಲ. ಒಳ್ಳೆಯವರಂತೆ ನಟಿಸುವುದಕ್ಕೂ ಒಳ್ಳೆಯವರಾಗುವುದಕ್ಕೂ ವ್ಯತ್ಯಾಸ ಇದೆ. ಕಷ್ಟವೂ ಇದೆ. ನಟನೆ ಈ ಜಗತ್ತಿನಲ್ಲಿ ಸುಲಭ. ಅದೊಂದು ಕಲೆ. ಈ ಕಲೆಯನ್ನು ಕರಗತ ಮಾಡಿಕೊಂಡ ವ್ಯಕ್ತಿಯೋರ್ವ ಅಪರಿ ಶುದ್ಧನಾಗಿದ್ದೂ ಪರಿಶುದ್ಧನಂತೆ ಜನರನ್ನು ನಂಬಿಸಿ ಬಿಡಬಲ್ಲ. ತನ್ನ ಈ ಕಲೆಯನ್ನು ಬಳಸಿ ವಿವಿಧ ಸ್ಥಾನ-ಮಾನಗಳನ್ನು ಪಡೆಯಬಲ್ಲ. ಆದರೆ ಇದು ಪರಿಪೂರ್ಣ ಯಶಸ್ಸಲ್ಲ ಎಂದು ಪವಿತ್ರ ಕುರ್‍ಆನ್ ಹೇಳುತ್ತದೆ. ಯಶಸ್ಸು ಯಾವುದರಲ್ಲಿ ಅಡಗಿದೆ  ಎಂದರೆ, ಹೊರಗೆ ಕಾಣದ ಹೃದಯವನ್ನು ಕಾಮ, ಕ್ರೋಧ, ಮೋಹ, ಲೋಭಗಳಾದಿಯಾಗಿ ಎಲ್ಲ ಕೆಡುಕುಗಳಿಂದಲೂ ಪರಿಶುದ್ಧಗೊಳಿಸುವುದು. ಹೊರಗೊಂದು ಒಳಗೊಂದು ಎಂಬ ವೇಷವನ್ನು ಕಳಚಿಡುವುದು. ಅಪ್ಪಟ ಪಾರದರ್ಶಕ ಬದುಕನ್ನು  ಬದುಕುವುದು. ರಮಝಾನ್ ತಿಂಗಳ ಉಪವಾಸ ವ್ರತದ ಬಹುಮುಖ್ಯ ಉದ್ದೇಶ ಇದು. ಉಪವಾಸಿಗರೆಲ್ಲರ ಹೃದಯವನ್ನು ಪರಿಶುದ್ಧಗೊಳಿಸುವ ವಾರ್ಷಿಕ ಸ್ವಚ್ಛತಾ ಕಾರ್ಯಕ್ರಮ ಇದು. ಇದರರ್ಥ ವಿಶ್ವಾಸಿಗಳಲ್ಲಿ ಯಾರೂ ಪರಿಶುದ್ಧರಿಲ್ಲ ಎಂದಲ್ಲ.  ಇದೊಂದು ಅಭಿಯಾನ. ಜಾಗೃತಿ ಕಾರ್ಯಕ್ರಮ. ಒಂದು ತಿಂಗಳ ವರೆಗೆ ಈ ಜಾಗೃತಿ ಕಾರ್ಯಕ್ರಮ ಚಾಲ್ತಿಯಲ್ಲಿರುತ್ತದೆ. ಪ್ರತಿದಿನವೂ ಪ್ರತಿಕ್ಷಣವೂ ‘ಪರಿಶುದ್ಧರಾಗಿ’ ಎಂಬ ಸಂದೇಶವನ್ನು ಈ ಒಂದು ತಿಂಗಳು ಉಪವಾಸಿಗರಲ್ಲಿ ಸಾರುತ್ತಲೇ ಇರುತ್ತದೆ.  ಹಸಿವು ಈ ಸಂದೇಶವನ್ನು ಪ್ರಬಲಗೊಳಿಸುವ ಒಂದು ಆಯುಧ ಮಾತ್ರ. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯಾರೆಲ್ಲ ಮನಃಪೂರ್ವಕ ಭಾಗಿಯಾಗುತ್ತಾರೋ ಅವರು ಪರಿಶುದ್ಧರಾಗುತ್ತಾರೆ. ಅಡಿಯಿಂದ ಮುಡಿವರೆಗೆ ಬಿಳಿಯಾಗುತ್ತಾರೆ. ಯಾರು ವೇಷ  ಕಟ್ಟುತ್ತಾರೋ ಅವರು ಹೊರಗಡೆಗೆ ಮಾತ್ರ ಬಿಳಿಯಾಗುತ್ತಾರೆ. ಒಳಗಡೆ ಕತ್ತಲೆಯಿರುತ್ತದೆ.
ಇನ್ನು ತೀರ್ಮಾನ ನಿಮ್ಮದು.

ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ತೆರೆದಿರುವುದು ಬಾಯಲ್ಲ, ಬಾಗಿಲು


 

ಶ್ರೀಲಂಕಾದಲ್ಲಿ ನಡೆದ ಭೀಕರ ಭಯೋತ್ಪಾದನಾ ಕೃತ್ಯಕ್ಕಿಂತ ಒಂದು ವಾರ ಮೊದಲು ನಮ್ಮ ದೇಶದಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆಯಿತು. ಈ ಬೆಳವಣಿಗೆಯ ಸೂತ್ರಧಾರ ಬಿಜೆಪಿ. ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪದಲ್ಲಿ ವರ್ಷಗಳ ಕಾಲ ಜೈಲಲ್ಲಿದ್ದ ಪ್ರಜ್ಞಾಸಿಂಗ್ ಠಾಕೂರ್‍ಳನ್ನು ಅದು ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ನೇಮಿಸಿತು. ಆ ಬಳಿಕ ಆಕೆ ನೀಡಿದ ಹೇಳಿಕೆಯು- ಭಾರತೀಯರು ಈವರೆಗೆ ನಂಬಿಕೊಂಡು ಬಂದಿದ್ದ ಮತ್ತು ಇಲ್ಲಿಯ ತನಿಖಾ ಸಂಸ್ಥೆಗಳು ನಂಬಿಸಿದ್ದ ಸಂಗತಿಗಳೆಲ್ಲವೂ ಪೊಳ್ಳು ಆಗಿರಬಹುದೇ ಎಂಬ ಸಂದೇಹವನ್ನು ಮೂಡಿಸಿದೆ. ನವೆಂಬರ್ 2011 (26/11)ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ರೂವಾರಿ ಪಾಕಿಸ್ತಾನ ಎಂಬುದು ಭಾರತೀಯರ ನಂಬಿಕೆ. ಈ ನಂಬಿಕೆಯನ್ನು ಹುಟ್ಟಿಸಿದ್ದು ಇಲ್ಲಿನ ತನಿಖಾ ಸಂಸ್ಥೆಗಳು. ಅಜ್ಮಲ್ ಕಸಬ್‍ನನ್ನು ಗಲ್ಲಿಗೇರಿಸುವ ಮೂಲಕ ಆ ದಾಳಿಗೆ ನ್ಯಾಯವನ್ನು ಒದಗಿಸಲಾಗಿದೆ ಎಂಬುದೂ ಈ ನಂಬಿಕೆಯ ಭಾಗ. ಹಾಗಂತ, ಈ ದಾಳಿಯ ಕುರಿತಂತೆ ಅನುಮಾನಗಳು ವ್ಯಕ್ತವಾಗಿರಲಿಲ್ಲ ಎಂದಲ್ಲ. ಮಾಲೆಗಾಂವ್ ಸ್ಫೋಟ, ಅಜ್ಮೀರ್ ದರ್ಗಾ ಸ್ಫೋಟ, ಸಂಜೋತಾ ಎಕ್ಸ್‍ಪ್ರೆಸ್ ರೈಲು ಸ್ಫೋಟ ಇತ್ಯಾದಿಗಳಲ್ಲಿ ಹಿಂದುತ್ವ ಭಯೋತ್ಪಾದನೆಯ ಭಯಾನಕ ಪಾತ್ರವನ್ನು ದೇಶದ ಮುಂದೆ ತೆರೆದಿಟ್ಟ ಹೇಮಂತ್ ಕರ್ಕರೆ, ಕಾಮ್ಟೆ ಮತ್ತು ಸಾಲಸ್ಕರ್‍ರಂಥ ಪ್ರಮುಖ ಪೊಲೀಸ್ ಅಧಿಕಾರಿಗಳು ಸಾಲುಸಾಲಾಗಿ ಈ ದಾಳಿಯಲ್ಲಿ ಯಾಕೆ ಬಲಿಯಾದರು ಅನ್ನುವ ಪ್ರಶ್ನೆ ಆಗಲೇ ಎದ್ದಿತ್ತು. ಕಾಂಗ್ರೆಸ್ ಮುಖಂಡ ಎ.ಆರ್. ಅಂತುಳೆಯವರು ಹೀಗೆ ಪ್ರಶ್ನಿಸಿದವರಲ್ಲಿ ಒಬ್ಬರು. ಆ ಬಳಿಕ ಮಹಾರಾಷ್ಟ್ರ ಪೊಲೀಸ್ ಮಹಾ ನಿರೀಕ್ಷಕರಾದ ಎಸ್.ಎಂ. ಮುಶ್ರಿಫ್ ಅವರು ದೊಡ್ಡಮಟ್ಟದಲ್ಲಿಯೇ ಈ ಪ್ರಶ್ನೆಗೆ ಬಲ ನೀಡಿದರು. ಮುಂಬೈ ದಾಳಿಯ ಸಂದರ್ಭದಲ್ಲಿ ರಾತ್ರಿ ಹತ್ತು ಗಂಟೆಯ ಬಳಿಕ ಕರ್ಕರೆ ಮತ್ತು ಅವರ ತಂಡದ ಹತ್ಯೆಗೂ ಮುಂಬೈ ದಾಳಿಗೂ ನೇರ ಸಂಬಂಧ ಇದೆಯೇ? ದಾಳಿಕೋರರು ಕರ್ಕರೆಯವರನ್ನು ಕೊಲ್ಲುವ ಯೋಜನೆ ಹಾಕಿಕೊಂಡಿದ್ದರೆ ಅಥವಾ ಆ ದಾಳಿಯ ಮರೆಯಲ್ಲಿ ಕರ್ಕರೆ ಮತ್ತು ತಂಡವನ್ನು ಹತ್ಯೆಗೈಯುವ ಸಂಚೊಂದು ಒಳಗಿನಿಂದಲೇ ನಡೆಯಿತೇ? ಕರ್ಕರೆ ಮತ್ತು ತಂಡವನ್ನು ಹತ್ಯೆಗೈದು ಮಾಲೆಗಾಂವ್ ಸಹಿತ ಅವರು ಬೆಳಕಿಗೆ ತಂದ ಇಡೀ ತನಿಖಾ ಫಲಿತಾಂಶವನ್ನೇ ಮುಚ್ಚಿ ಹಾಕುವುದಕ್ಕೆ ಆ ಮೊದಲೇ ಷಡ್ಯಂತ್ರವೊಂದು ನಡೆದಿತ್ತೇ? ಮುಂಬೈ ದಾಳಿಯ ಸಂದರ್ಭದಲ್ಲಿ ಆ ಷಡ್ಯಂತ್ರವನ್ನು ಜಾರಿಗೊಳಿಸಲಾಯಿತೇ.. ಇಂಥ ಪ್ರಶ್ನೆಗಳು ಆಗಲೂ ಈಗಲೂ ಹಾಗೆಯೇ ಉಳಿದುಕೊಂಡಿದೆ. ಛತ್ರಪತಿ ಶಿವಾಜಿ ರೈಲು ನಿಲ್ದಾಣದಲ್ಲಿ ಉಗ್ರರು ಗುಂಡು ಹಾರಿಸಿ ಹೊರಟು ಹೋದ ದಾರಿಗೂ ಅವರನ್ನು ಎದುರಿಸುವುದಕ್ಕಾಗಿ ಕರ್ಕರೆ ಸಾಗಿ ಹೋದ ದಾರಿಗೂ ಸಂಬಂಧ ಇಲ್ಲ ಎಂದು ಹೇಳಲಾಗುತ್ತದೆ. ಅವರನ್ನು ಉದ್ದೇಶಪೂರ್ವಕವಾಗಿ ತಪ್ಪು ದಾರಿಯಲ್ಲಿ ಸಾಗಿಸಿ ಹತ್ಯೆಗೈಯಲಾಗಿದೆ ಎಂದೂ ಹೇಳಲಾಗುತ್ತದೆ. ಕರ್ಕರೆ ಮತ್ತು ಅವರ ತಂಡದ ಹುತಾತ್ಮತೆಯ ಹಿನ್ನೆಲೆಯಲ್ಲಿ ಇಂಥ ಅನುಮಾನಗಳು ಇನ್ನೂ ಉಳಿದುಕೊಂಡಿರುವ ಈ ಹೊತ್ತಿನಲ್ಲಿ ಈ ಅನುಮಾನಗಳಿಗೆ ಪುಷ್ಠಿ ನೀಡುವಂತೆ ಪ್ರಜ್ಞಾಸಿಂಗ್ ಹೇಳಿಕೆ ನೀಡಿದ್ದಾಳೆ. ಆಕೆ ಕರ್ಕರೆಯ ಸಾವನ್ನು ಸಂಭ್ರಮಿಸಿದ್ದಾಳೆ. ತನ್ನ ಶಾಪದಿಂದ ಕರ್ಕರೆ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾಳೆ. ನೀನು ನಾಶವಾಗುತ್ತೀ ಎಂದು ನಾನು ಕರ್ಕೆರೆಗೆ ಹೇಳಿದ್ದೆ  ಎಂದೂ ಹೇಳಿದ್ದಾಳೆ. ಬಿಜೆಪಿಯು ಆಕೆಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡರೂ ತನ್ನ ಬೆಂಬಲಿಗರ ಮೂಲಕ ಆಕೆಯನ್ನು ಅದು ಪರೋಕ್ಷವಾಗಿ ಸಮರ್ಥಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಆಕೆಯ ಅಭ್ಯರ್ಥಿತನವನ್ನು ಹೆಮ್ಮೆಯಿಂದ ಸಮರ್ಥಿಸಿಕೊಂಡಿದ್ದಾರೆ. ಅವರ ಜೀವನ ಚರಿತ್ರೆಯನ್ನು ಬರೆದಿರುವ ಮಧುಕೀಶ್ವರ್ ಎಂಬವರು ಮೋದಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ‘ಕರ್ಕರೆ ಪಾಕಿಸ್ತಾನಕ್ಕಾಗಿ ಕೆಲಸ ಮಾಡುತ್ತಿದ್ದರು’ ಎಂದೂ ಹೇಳಿದ್ದಾರೆ. ಮುಂಬೈ ದಾಳಿಕೋರರನ್ನು ಸಾಯಿಸುವ ಹಾದಿಯಲ್ಲಿ ಜೀವವನ್ನೇ ಕಳಕೊಂಡ ಅಧಿಕಾರಿಯ ಬಗ್ಗೆ ಬಿಜೆಪಿಯ ಭಾವನೆ ಏನು ಅನ್ನುವುದು ಈ ಒಟ್ಟು ಬೆಳವಣಿಗೆಯು ಸ್ಪಷ್ಟಪಡಿಸುತ್ತದೆ. ನಿಜವಾಗಿ, ಕರ್ಕರೆ ಮತ್ತು ಅವರ ತಂಡದ ಸಾವಿನ ಬಗ್ಗೆ ಮೊಟ್ಟಮೊದಲು ಪ್ರಶ್ನೆ ಎತ್ತಬೇಕಾಗಿದ್ದುದು ಬಿಜೆಪಿ. ಯಾಕೆಂದರೆ, ಮುಂಬೈ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಯುದ್ಧ ಸಾರಬೇಕು ಎಂಬ ಭಾಷೆಯಲ್ಲಿ ಅಂದು ಇದೇ ಬಿಜೆಪಿ ಮಾತಾಡಿತ್ತು. ಮನ್‍ಮೋಹನ್ ಸಿಂಗ್ ಸರಕಾರವನ್ನು ಅತ್ಯಂತ ತೀವ್ರವಾಗಿ ಅದು ತರಾಟೆಗೆ ತೆಗೆದುಕೊಂಡಿತ್ತು. ಪಾಕಿಸ್ತಾನದ ವಿರುದ್ಧ ಕಟು ಮಾತುಗಳನ್ನಾಡಿತ್ತು. ಆದರೆ, ಈ ದೇಶದ ಬಹು ಬೆಲೆಬಾಳುವ ಕರ್ಕರೆ ಮತ್ತು ಅವರ ತಂಡದ ಸಾವಿಗೆ ಕಾರಣಗಳೇನು ಎಂಬ ಬಗ್ಗೆ ಪ್ರತ್ಯೇಕ ತನಿಖೆಗೆ ಅದು ಅಂದಿನಿಂದ ಇಂದಿನ ವರೆಗೆ ಒತ್ತಾಯಿಸಿಯೇ ಇಲ್ಲವಲ್ಲ, ಯಾಕೆ? ಕರ್ಕರೆಗೆ ದುರ್ಬಲ ಗುಂಡು ನಿರೋಧಕ ಜಾಕೆಟನ್ನು ಒದಗಿಸಿರುವ ಕುರಿತಂತೆ ಬಲವಾದ ಪ್ರಶ್ನೆಯನ್ನು ಅದು ಎಬ್ಬಿಸದೇ ಇರುವುದಕ್ಕೆ ಕಾರಣಗಳೇನು? ಇದರರ್ಥ ಈ ಘಟನೆಯಲ್ಲಿ ಬಿಜೆಪಿಗೆ ಪಾತ್ರ ಇದೆ ಎಂದಲ್ಲ. ಅದನ್ನು ತೀರ್ಮಾನಿಸಬೇಕಾದುದು ಈ ದೇಶದ ನ್ಯಾಯಾಂಗ. ಆದರೆ, ಸಾಧ್ವಿಯನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿರುವುದು ಮತ್ತು ಕರ್ಕರೆಯವರ ಹತ್ಯೆಯನ್ನು ಸಂಭ್ರಮಿಸಿ ಆಕೆ ಹೇಳಿಕೆ ನೀಡಿರುವುದನ್ನು ನೋಡುವಾಗ ಬಿಜೆಪಿ ಸಹಜವಾಗಿ ಕಟಕಟೆಯಲ್ಲಿ ನಿಲ್ಲುತ್ತದೆ. ಒಂದುವೇಳೆ, ಕರ್ಕರೆಯವರ ಪತ್ನಿ ಇವತ್ತು ಜೀವಂತವಿರುತ್ತಿದ್ದರೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಏನನ್ನುತ್ತಿದ್ದರೋ? ಸಾಧ್ವಿ ಪ್ರಜ್ಞಾ ಸಿಂಗ್‍ಳ ಬಗ್ಗೆ ಕರ್ಕರೆಗಿದ್ದ ಅಭಿಪ್ರಾಯ ಮತ್ತು ಒಟ್ಟು ಭಯೋತ್ಪಾದನಾ ಕೃತ್ಯಗಳ ಒಳ ಸತ್ಯಗಳ ಕುರಿತಾಗಿ ಓರ್ವ ದಕ್ಷ ಅಧಿಕಾರಿಯ ಪತ್ನಿಯೆಂಬ ನೆಲೆಯಲ್ಲಿ ಅವರು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರೋ?
ಮಾಲೆಗಾಂವ್, ಸಂಜೋತಾ, ಮಕ್ಕಾ ಮತ್ತು ಅಜ್ಮೀರ್ ಮಸೀದಿಗಳ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾಸಿಂಗ್ ಮಾತ್ರ ಆರೋಪಿಯಲ್ಲ. ಲೆ. ಕರ್ನಲ್ ಪುರೋಹಿತ್, ಅಸೀಮಾನಂದ, ಸುನೀಲ್ ಜೋಷಿ, ಕಲ್‍ಸಿಂಗ್ರಾ ಸಹಿತ ಅನೇಕರಿದ್ದಾರೆ. ಸಾಧ್ವಿಯಿಂದ ಲೆಫ್ಟಿನೆಂಟ್ ಕರ್ನಲ್ ತನಕ ಚಾಚಿರುವ ಈ ಸಂಬಂಧದ ಕೊಂಡಿ ಅತ್ಯಂತ ಭಯಾನಕವಾದುದು. ಸೇನೆಯ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೋರ್ವ ಭಯೋತ್ಪಾದನಾ ಕೃತ್ಯದ ಆರೋಪಿಯಾಗಿ ವರ್ಷಗಳ ಕಾಲ ಜೈಲಲ್ಲಿರುವುದು ಮತ್ತು ಸಾಧ್ವಿಯೋರ್ವಳೊಂದಿಗೆ ಸೇರಿಕೊಂಡು ಕ್ರೌರ್ಯವೊಂದರ ಸಂಚಿನಲ್ಲಿ ಭಾಗಿಯಾಗುವುದೆಂದರೆ ಅದು ಇನ್ನಿತರ ಭಯೋತ್ಪಾದನಾ ಕೃತ್ಯಗಳಿಗಿಂತ ಖಂಡಿತ ಭಿನ್ನವಾದುದು. ಇದನ್ನು ತನಿಖಿಸುವುದು ಸುಲಭ ಅಲ್ಲ. ಸೇನೆಯಲ್ಲಿರುವ ಪ್ರಭಾವಿ ವ್ಯಕ್ತಿಯೋರ್ವರ ಮೇಲೆ ಅನುಮಾನ ಪಡುವುದೇ ಒಂದು ಧೈರ್ಯದ ಕೆಲಸ. ಆ ಅನುಮಾನವನ್ನು ಸಾಬೀತುಪಡಿಸುವುದೆಂದರೆ ಇನ್ನಷ್ಟು ಸಾಹಸದ ಕೆಲಸ. ಯಾಕೆಂದರೆ, ಸಾಮಾನ್ಯ ನಾಗರಿಕರಿಗೆ ಇಲ್ಲದ ರಕ್ಷಣಾ ವಲಯವೊಂದು ಸಾಧ್ವಿಗಳಿಗೆ ಮತ್ತು ಸೇನೆಯ ಅಧಿಕಾರಿಗಳಿಗೆ ಖಂಡಿತ ಇರುತ್ತದೆ. ಇದನ್ನು ಭೇದಿಸಿಕೊಂಡು ಅವರ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ಪ್ರದರ್ಶಿಸುವಾಗ ಅನೇಕಾರು ಅಡೆತಡೆಗಳು ಎದುರಾಗಲೇಬೇಕು. ಹಾಗೆ ತನಿಖಿಸುವ ಧೈರ್ಯ ಪ್ರದರ್ಶಿಸುವವರ ವಿರುದ್ಧ ಸಂಚು, ಷಡ್ಯಂತ್ರ, ತಂತ್ರಗಳೆಲ್ಲ ಖಂಡಿತ ನಡೆದೇ ನಡೆದಿರುತ್ತದೆ. ಸಾಧ್ವಿ ಪ್ರಜ್ಞಾಸಿಂಗ್, ಪುರೋಹಿತ್, ಅಸೀಮಾನಂದ ಮುಂತಾದವರ ಮೇಲೆ ಆರೋಪ ಪಟ್ಟಿ ತಯಾರಿಸುವಾಗ, ಅವರನ್ನು ಬಂಧಿಸುವಾಗ ಮತ್ತು ಅವರ ವಿಚಾರಣೆ ನಡೆಸುವಾಗಲೆಲ್ಲ ಕರ್ಕರೆ ಮತ್ತು ತಂಡ ಇಂಥದ್ದೊಂದು  ಸವಾಲನ್ನು ಎದುರಿಸಿಯೇ ಇರಬಹುದು. ಸಾಧ್ವಿ ನೀಡಿರುವ ‘ನೀನು ನಾಶವಾಗುತ್ತೀಯ’ ಅನ್ನುವ ಹೇಳಿಕೆಯಲ್ಲಿ ಅಡಗಿರುವುದು ಇದೇ ಧ್ವನಿ. ಕರ್ಕರೆಯವರು ಎಂಥ ಹುತ್ತಕ್ಕೆ ಕೈ ಹಾಕಿದ್ದರು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ನಿಜಕ್ಕೂ, ಸಾಧ್ವಿ ನೀಡಿರುವುದು ಬರೇ ಹೇಳಿಕೆ ಮಾತ್ರವೋ ಅಥವಾ ಕರ್ಕರೆಯವರ ನಾಶಕ್ಕೆ ಸಂಚು ಹೆಣೆದು ಯಶಸ್ವಿಯಾದ ಕತೆಯೂ ಆ ಹೇಳಿಕೆಯಲ್ಲಿ ಇದೆಯೇ? ಕರ್ಕರೆ ಮತ್ತು ತಂಡವನ್ನು ನಾಶ ಮಾಡುವುದಕ್ಕೆ ಗುಂಪೊಂದನ್ನು ರಚಿಸಿಕೊಂಡು ಅದರ ಜಾರಿಗಾಗಿ ಸೂಕ್ತ ಸಂದರ್ಭಕ್ಕಾಗಿ ಕಾಯಲಾಗುತ್ತಿತ್ತೇ? ಈ ಹಿನ್ನೆಲೆಯಲ್ಲಿ, ಮುಂಬೈ ದಾಳಿ ಪ್ರಕರಣವನ್ನು ದೇಶ ಮರುತನಿಖೆ ನಡೆಸಬೇಕಾಗಿದೆಯೇ? ಇದರ ಹಿಂದೆ ಈಗಾಗಲೇ ಗೊತ್ತಿರುವ ಸಂಗತಿಗಿಂತ ಗೊತ್ತಿರದ ಸಂಗತಿಗಳು ಇವೆಯೇ? ಕರ್ಕರೆಯವರ ಹುತಾತ್ಮತೆಗೆ ಇಂಥ ತನಿಖೆಯನ್ನು ಉತ್ತರ ಸಿಗಬಲ್ಲುದೇ? ಬಹುಶಃ,
ಸಾಧ್ವಿಯನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಭಯೋತ್ಪಾದನಾ ಕೃತ್ಯಗಳ ಮರು ಅವಲೋಕನವೊಂದಕ್ಕೆ ಬಿಜೆಪಿ ಬಾಗಿಲನ್ನು ತೆರೆದಿದೆ. ಈ ಬಾಗಿಲು ಮುಚ್ಚದಿರಲಿ.