Friday, 30 August 2019

ಪೆಹ್ಲೂಖಾನ್: ನ್ಯಾಯವನ್ನು ಬಯಸುವವರಲ್ಲಿರಬೇಕಾದ ಎಚ್ಚರಿಕೆಗಳು



ಪೆಹ್ಲೂಖಾನ್ ಎಂಬ ವೃದ್ಧ ಹೈನುದ್ಯಮಿಯನ್ನು ಥಳಿಸಿ ಕೊಂದ ಆರೋಪದಲ್ಲಿ ಬಂಧಿತರಾಗಿದ್ದ 6 ಮಂದಿಯನ್ನು ದೋಷಮುಕ್ತಗೊಳಿಸುವ ಮೂಲಕ ರಾಜಸ್ತಾನದ ಅಲ್ವಾರ್ ನ  ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಅಂತಾರಾಷ್ಟ್ರೀಯವಾಗಿ ಸುದ್ದಿಗೀಡಾಗಿದ್ದಾರೆ. ನ್ಯಾಯ ಪ್ರಕ್ರಿಯೆಯ ಹಿನ್ನೆಲೆಯನ್ನು ಪರಿಗಣಿಸಿ ಹೇಳುವುದಾದರೆ ಇದೊಂದು ಅಚ್ಚರಿಯ ತೀರ್ಪಲ್ಲ. ಈ ರೀತಿಯ ತೀರ್ಪನ್ನು ಪಡೆಯಬೇಕೆಂಬ ಉದ್ದೇಶವನ್ನು ಇಟ್ಟುಕೊಂಡೇ ಉದ್ದಕ್ಕೂ ಸಂಚು ನಡೆಸಲಾಗಿರುವುದನ್ನು ಒಟ್ಟು ಬೆಳವಣಿಗೆಯು ಸ್ಪಷ್ಟಪಡಿಸುತ್ತದೆ. ಇಲ್ಲಿ ನ್ಯಾಯಾಲಯ ಒಂದು ನಿಮಿತ್ತ ಮಾತ್ರ. ನ್ಯಾಯಾಲಯದಿಂದ ಇಂಥದ್ದೇ ತೀರ್ಪನ್ನು ಪಡೆಯಬೇಕೆಂದು ಉದ್ದೇಶಿಸಿ ಘಟನೆ ನಡೆದ ದಿನದಿಂದಲೇ ಸಂಚುಗಳನ್ನು ಹೆಣೆಯಲಾಗಿತ್ತು. ನ್ಯಾಯಾಲಯ ತೀರ್ಪು ಕೊಡುವುದು ಸಾಕ್ಷಿಗಳ ಆಧಾರದ ಮೇಲೆ. ನ್ಯಾಯಾಧೀಶರೇನೂ ಖುದ್ದು ತನಿಖೆ ನಡೆಸುವುದಿಲ್ಲ. ಘಟನಾ ಸ್ಥಳದ ಮಹಜರು ನಡೆಸುವುದಿಲ್ಲ. ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುವುದಿಲ್ಲ. ಈ ಎಲ್ಲ ಪ್ರಕ್ರಿಯೆಗಳೂ ನ್ಯಾಯಾಲಯದ ಹೊರಗಡೆಯೇ ನಡೆಯುತ್ತವೆ. ನ್ಯಾಯಾಧೀಶರು ವಾದ ಪ್ರತಿವಾದ ಮತ್ತು ಸಾಕ್ಷಿಗಳ ಆಧಾರದಲ್ಲಷ್ಟೇ ತೀರ್ಪು ನೀಡುತ್ತಾರೆ. ಆದ್ದರಿಂದ, ನ್ಯಾಯಾಧೀಶರ ಬಳಿಗೆ ಪ್ರಕರಣದ ಬರುವ ಮೊದಲೇ ಇಡೀ ಪ್ರಕರಣವನ್ನು ಕುಲಗೆಡಿಸಿ ಬಿಟ್ಟರೆ ಆ ಬಳಿಕ ತೀರ್ಪಿನ ಬಗ್ಗೆ ಚಿಂತಿಸಬೇಕಾಗಿಲ್ಲ. ಮಾತ್ರವಲ್ಲ, ಇದರಿಂದ ಜನಸಾಮಾನ್ಯರು  ನ್ಯಾಯಾಧೀಶರ ಮೇಲೆ ಸಂದೇಹ ತಾಳುತ್ತಾರೆಯೇ ಹೊರತು ಇದರ ಹಿಂದಿರುವ ಸಂಚುಕೋರರ ಮೇಲಲ್ಲ. ಪೆಹ್ಲೂಖಾನ್ ಪ್ರಕರಣದಲ್ಲೂ ಇಂಥದ್ದೇ ಸಂದೇಹ ಸಾರ್ವಜನಿಕರಲ್ಲಿ ಉಂಟಾಗಿದೆ. ಅಲ್ವಾರ್ ನ  ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಜನಸಾಮಾನ್ಯರಲ್ಲಿ ಚರ್ಚೆಗಳು ನಡೆಯುತ್ತಿವೆ. ನಿಜವಾಗಿ,
ಇದೊಂದು ಸಂಚಿನ ಭಾಗ. ನ್ಯಾಯಾಧೀಶರಿಗೆ ಇಲ್ಲಿ ಹೆಚ್ಚಿನ ಆಯ್ಕೆಗಳಿಲ್ಲ. ಪೆಹ್ಲೂಖಾನ್‍ರನ್ನು ಹತ್ಯೆಗೈದ ನಿಜವಾದ ಆರೋಪಿಗಳನ್ನು ದೋಷಮುಕ್ತಗೊಳಿಸುವುದಕ್ಕೆ ಪೂರಕವಾದ ಸಾಕ್ಷ್ಯಗಳನ್ನೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಪ್ರಕರಣವನ್ನು ಇಬ್ಬರು ಅಧಿಕಾರಿಗಳು ತನಿಖೆ ನಡೆಸಿದ್ದರು ಮತ್ತು ಆ ತನಿಖೆಯ ಅಂತಿಮ ವರದಿಯ ನಡುವೆ ತಾಳೆಯಿರಲಿಲ್ಲ. ಆರಂಭದಲ್ಲಿ ಬೆಹ್ರೂರ್ ಪ್ರದೇಶದ ಠಾಣಾಧಿಕಾರಿ ರಮೇಶ್ ಸಿನ್ಸಿನ್ವಾರ್ ಅವರು ಮರಣಾಸನ್ನ ಪೆಹ್ಲೂಖಾನ್‍ರಿಂದ ಅಂತಿಮ ಹೇಳಿಕೆಯನ್ನು ಪಡೆದುಕೊಂಡಿದ್ದರು ಮತ್ತು ತನಗೆ ಥಳಿಸಿದ 6 ಮಂದಿಯ ಹೆಸರನ್ನು ಪೆಹ್ಲೂಖಾನ್ ಉಲ್ಲೇಖಿಸಿದ್ದರು. ಆದರೆ ಆ ಬಳಿಕ ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಗಳು ನಡೆದವು. ದನದ ದೊಡ್ಡಿಯನ್ನು ನೋಡಿಕೊಳ್ಳುವ ಜನರು ಮತ್ತು ಮೊಬೈಲ್ ಕರೆ ದಾಖಲೆಗಳನ್ನು ಆಧರಿಸಿ 7 ಮಂದಿ ಹೊಸ ಆರೋಪಿಗಳ ಪಟ್ಟಿಯನ್ನು ತಯಾರಿಸಲಾಯಿತು. ಇವರಲ್ಲಿ ಮೂವರು ಅಪ್ರಾಪ್ತರು. ಅಸಲಿಗೆ ಇವರ ಹೆಸರನ್ನು ಪೆಹ್ಲೂಖಾನ್ ಹೇಳಿಯೇ ಇರಲಿಲ್ಲ. ಮಾತ್ರವಲ್ಲ, ಈ 7 ಮಂದಿಯ ಗುರುತು ಪತ್ತೆ ಹಚ್ಚುವ ಪೆರೇಡ್ ಕೂಡ ನಡೆಯಲಿಲ್ಲ. ಪೆಹ್ಲೂಖಾನ್‍ರನ್ನು ಥಳಿಸಿ ಹತ್ಯೆಗೈದವರು ಇವರು ಎಂದು ಹೇಳಿ ಅವರ ಮೇಲೆ ಆರೋಪ ಪಟ್ಟಿಯನ್ನು ಸಲ್ಲಿಸಲಾಯಿತು.
ಈ ನಡುವೆ ಘಟನೆಯ ಮೂರು ತಿಂಗಳ ಬಳಿಕ 2017 ಜುಲೈಯಲ್ಲಿ ಸರಕಾರ ಪ್ರಕರಣವನ್ನು CIDಗೆ ವಹಿಸಿಕೊಟ್ಟಿತು. ಅದಾದರೋ, ಪೆಹ್ಲೂಖಾನ್‍ರ ಅಂತಿಮ ಹೇಳಿಕೆಯನ್ನೇ ನಂಬಲಿಲ್ಲ. ಆರೋಪಿಗಳ ಹೆಸರನ್ನು ಪೆಹ್ಲೂಖಾನ್ ಹೇಳಿರುವುದನ್ನೇ ಅದು ಸಂದೇಹದ ಮೊನೆಯಲ್ಲಿಟ್ಟಿತು ಮತ್ತು ಅಪರಿಚಿತರಾಗಿದ್ದ ಆರೋಪಿಗಳ ಹೆಸರನ್ನು ಪೆಹ್ಲೂಖಾನ್ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿತು. ಅಂತಿಮವಾಗಿ ಪೆಹ್ಲೂಖಾನ್ ಹೇಳಿದ 6 ಮಂದಿ ಆರೋಪಿಗಳು ಆರೋಪ ಪಟ್ಟಿಯಿಂದ ಹೊರಬಿದ್ದರು ಮತ್ತು ಪೆಹ್ಲೂಖಾನ್‍ರ ಹೇಳಿಕೆಯಲ್ಲಿಲ್ಲದ 7 ಮಂದಿಯ ಮೇಲೆ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಲಾಯಿತು. ಹಾಗಂತ, ಇಲ್ಲಿಗೇ ಈ ಗೊಂದಲ ಮುಗಿಯುವುದಿಲ್ಲ.
ಪೆಹ್ಲೂಖಾನ್‍ರ ಸಾವು ಹೇಗೆ ಸಂಭವಿಸಿತು ಎಂಬ ವಿಷಯದಲ್ಲೂ ವೈದ್ಯಕೀಯ ವರದಿಯಲ್ಲಿ ವೈರುಧ್ಯಗಳಿದ್ದವು. ಗಾಯದ ಕಾರಣದಿಂದ ಪೆಹ್ಲೂಖಾನ್‍ರ ಸಾವು ಸಂಭವಿಸಿದೆ ಎಂದು ಸರಕಾರಿ ವೈದ್ಯರು ತಮ್ಮ ವರದಿಯಲ್ಲಿ ಹೇಳಿದ್ದರೆ, ಖಾಸಗಿ ವೈದ್ಯರು ಆ ಸಾವಿಗೆ ಹೃದಯಾಘಾತ ಕಾರಣ ಎಂಬ ಷರಾ ಬರೆದಿದ್ದರು. ಆದ್ದರಿಂದ ಸಂದೇಹದ ಲಾಭದ ಆಧಾರದಲ್ಲಿ ನ್ಯಾಯಾಧೀಶರು ಆರೋಪಿಗಳನ್ನು ಬಿಡುಗಡೆಗೊಳಿಸಿದರು.
ನಿಜವಾಗಿ, ಮನುಷ್ಯ ವಿರೋಧಿಗಳನ್ನು ನ್ಯಾಯಾಲಯದ ಶಿಕ್ಷೆಯಿಂದ ಹೇಗೆ ರಕ್ಷಿಸಿಕೊಳ್ಳಬಹುದು ಅನ್ನುವುದಕ್ಕೆ ಉತ್ತಮ ಉದಾಹರಣೆ- ಪೆಹ್ಲೂಖಾನ್ ಪ್ರಕರಣ.  ಪೆಹ್ಲೂಖಾನ್‍ರನ್ನು ಥಳಿಸಿ ಕೊಂದವರು ಶಿಕ್ಷೆಗೊಳಗಾಗಬಾರದೆಂಬುದಾಗಿ ರಾಜಸ್ತಾನದ ಆಗಿನ ವಸುಂಧರಾ ರಾಜೆ ಸಿಂಧಿಯಾ ಅವರ ಬಿಜೆಪಿ ಸರಕಾರ ತೀರ್ಮಾನಿಸಿತ್ತು ಅನ್ನುವುದಕ್ಕೆ ತನಿಖೆಯಲ್ಲಿರುವ ವೈರುಧ್ಯಗಳೇ ಉತ್ತಮ ಪುರಾವೆ. ವೈದ್ಯರ ವರದಿಯಲ್ಲೂ ಗೊಂದಲವನ್ನು ಹುಟ್ಟುಹಾಕಲಾಯಿತು. ಆರೋಪಿಗಳನ್ನು ಎರಡು ಗುಂಪುಗಳಾಗಿ ಪರಿವರ್ತಿಸಲಾಯಿತು. ಒಂದರಲ್ಲಿ 6 ಮಂದಿ, ಇನ್ನೊಂದರಲ್ಲಿ 7 ಮಂದಿ. ಪೆಹ್ಲೂಖಾನ್ ಉಲ್ಲೇಖಿಸಿದ 6 ಮಂದಿಯ ಮೇಲಿನ ಆರೋಪವನ್ನು ದುರ್ಬಲಗೊಳಿಸುವುದಕ್ಕೆ ಪೂರಕವಾದ ಸನ್ನಿವೇಶಗಳನ್ನು ಸೃಷ್ಟಿಸಲಾಯಿತು. 7 ಮಂದಿಯ ಇನ್ನೊಂದು ಗುಂಪಿನ ಮೇಲೆ ಆರೋಪ ಪಟ್ಟಿಯನ್ನು ಸಲ್ಲಿಸಲಾಯಿತು. ಮಾತ್ರವಲ್ಲ, ಘಟನೆಗೆ ಸಂಬಂಧಿಸಿ ಎರಡೆರಡು ವೀಡಿಯೋಗಳಿರುವುದು ಮತ್ತು ಒಂದರಲ್ಲಿರುವ ಆರೋಪಿಗಳು ಇನ್ನೊಂದರಲ್ಲಿ ಇಲ್ಲದೇ ಇರುವುದು ಇತ್ಯಾದಿ ಗೊಂದಲವನ್ನು ಸೃಷ್ಟಿಸಲಾಯಿತು. ವಿಚಾರಣೆಗಿಂತ ಮೊದಲು ನಡೆಸಲಾದ ಈ ಪೂರ್ವ ತಯಾರಿಗಳೇ ಅಂತಿಮವಾಗಿ ಪೆಹ್ಲೂಖಾನ್‍ರನ್ನು ಹತ್ಯೆಗೈದ ಆರೋಪಿಗಳ ಬಿಡುಗಡೆಗೆ ಕಾರಣವಾಯಿತು. ಅಷ್ಟಕ್ಕೂ,
ಲಿಂಚಿಂಗ್ ವಿರೋಧಿ ಹೋರಾಟಕ್ಕೆ ಆದ ಹಿನ್ನಡೆಯಾಗಿಯಷ್ಟೇ ನಾವಿದನ್ನು ಕಾಣಬೇಕಿಲ್ಲ. ಸತ್ಯನಾಶ ಮಾಡಲು ಸರಕಾರವೊಂದು ಮನಸು ಮಾಡಿದರೆ ನ್ಯಾಯಾಲಯಗಳು ಹೇಗೆ ಅಸಹಾಯಕವಾಗುತ್ತವೆ ಅನ್ನುವುದಕ್ಕೆ ಉದಾಹರಣೆಯಾಗಿಯೂ ಈ ಪ್ರಕರಣವನ್ನು ನಾವು ಎತ್ತಿಕೊಳ್ಳಬಹುದು. ಈ ತೀರ್ಪಿಗಿಂತ ಮೊದಲು ಜಾರ್ಖಂಡ್ ನ್ಯಾಯಾಲಯದಿಂದ ಎರಡು ಆಶಾದಾಯಕ ತೀರ್ಪುಗಳು ಬಂದಿದ್ದುವು. ಅವೆರಡೂ ಲಿಂಚಿಂಗ್‍ಗೆ ಸಂಬಂಧಿಸಿದವು. ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಆ ತೀರ್ಪಿನಲ್ಲಿ ಘೋಷಿಸಲಾಗಿತ್ತು. ಲಿಂಚಿಂಗ್ ವಿರೋಧಿ ಹೋರಾಟಕ್ಕೆ ಬಲ ನೀಡಲಿದೆಯೆಂದು ವ್ಯಾಖ್ಯಾನಕ್ಕೊಳಗಾದ ಆ ತೀರ್ಪಿನ ಬಳಿಕ ಇದೀಗ ಈ ಆಘಾತಕಾರಿ ತೀರ್ಪು ಬಂದಿದೆ. ಈ ಇಡೀ ಪ್ರಕಣದಲ್ಲಿ ಪೊಲೀಸರು ಆರೋಪಿಗಳ ಪರ ಎಷ್ಟು ಪ್ರಬಲವಾಗಿ ನಿಂತಿದ್ದರೆಂದರೆ, ದುರ್ಬಲ ಮತ್ತು ಗೊಂದಲಕಾರಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದುದಷ್ಟೇ ಅಲ್ಲ, ರಾಜಸ್ತಾನದಲ್ಲಿರುವ ಜಾನುವಾರು ಸಾಗಾಟ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪ ಹೊರಿಸಿ ಇತ್ತೀಚೆಗಷ್ಟೇ ಪೆಹ್ಲೂಖಾನ್‍ರ ಇಬ್ಬರು ಮಕ್ಕಳ ವಿಚಾರಣೆಗೆ ಅನುಮತಿಯನ್ನೂ ಗಿಟ್ಟಿಸಿಕೊಂಡಿದ್ದರು. ಇಡೀ ಬೆಳವಣಿಗೆಯನ್ನು ಅಕ್ರಮ ಸಾಗಾಟ ಪ್ರಕರಣವಾಗಿ ಬಿಂಬಿಸುವುದು ಮತ್ತು ಹತ್ಯೆಯನ್ನು ಜನಾಕ್ರೋಶವಾಗಿ ಪರಿವರ್ತಿಸಿ ನಗಣ್ಯಗೊಳಿಸುವ ತಂತ್ರದ ಭಾಗವಿದು. ಪೆಹ್ಲೂಖಾನ್‍ರ ಮೇಲಿನ ದಾಳಿಗೆ ಚಾಲಕ ಮತ್ತು ಅವರಿಬ್ಬರ ಮಕ್ಕಳು ನ್ಯಾಯಾಲಯದಲ್ಲಿ ಖುದ್ದಾಗಿ ಸಾಕ್ಷ್ಯ  ನೀಡಿಯೂ ಪ್ರಕರಣ ಬಿದ್ದು ಹೋಗುವುದೆಂದರೆ, ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿ ಹೇಗಿರಬಹುದು? ಅವರಿಂದ ಅಂಥ ಆರೋಪ ಪಟ್ಟಿಯನ್ನು ತಯಾರುಗೊಳಿಸಿದ ವ್ಯವಸ್ಥೆಯ ಮನಸ್ಥಿತಿ ಏನಾಗಿರಬಹುದು?
ಅಂದಹಾಗೆ, ಪೆಹ್ಲೂಖಾನ್ ಪ್ರಕರಣದ ತೀರ್ಪಿಗೆ ಇನ್ನೊಂದು ಮುಖವೂ ಇದೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯು ನಿಜಕ್ಕೂ ಎಷ್ಟು ಪ್ರಶ್ನಾತೀತ, ಎಷ್ಟು ನ್ಯಾಯನಿಷ್ಠ, ಎಷ್ಟು ಜನಪರ ಎಂಬ ಪ್ರಶ್ನೆಯ ಮುಖ ಇದು. ತಿರುಚಿದ ಸಾಕ್ಷ್ಯವನ್ನೇ ಸರಕಾರಗಳು ನ್ಯಾಯಾಂಗದ ಮುಂದಿರಿಸಿದರೆ ಮತ್ತು ನ್ಯಾಯಾಧೀಶರಿಗೆ ಅದು ಮನವರಿಕೆಯೂ ಆದರೆ ಆ ಸಂದರ್ಭದಲ್ಲಿ ನ್ಯಾಯಾಧೀಶರು ಯಾವ ನಿಲುವನ್ನು ಕೈಗೊಳ್ಳಬೇಕು ಎಂಬ ಜಿಜ್ಞಾಸೆಗೂ ಈ ತೀರ್ಪು ವೇದಿಕೆಯನ್ನು ಒದಗಿಸಿದೆ. ಆದ್ದರಿಂದ, ನ್ಯಾಯಾಧೀಶರನ್ನು ಮತ್ತು ನ್ಯಾಯಾಲಯವನ್ನು ಕಟಕಟೆಯಲ್ಲಿ ನಿಲ್ಲಿಸುವ ಸರಕಾರಗಳ ಕುತಂತ್ರಕ್ಕೆ ತಿರುಗೇಟು ನ್ಯಾಯಾಂಗ ನೀಡದ ಹೊರತು ನ್ಯಾಯಾಲಯಗಳ ವಿಶ್ವಾಸಾರ್ಹತೆ ಉಳಿಯಲಾರದು.

Monday, 26 August 2019

ಬಿಳಿ ಬಟ್ಟೆಯಿಂದ ಬಿಳಿ ಬಟ್ಟೆಯವರೆಗೆ




ಬದುಕು ಅಂದರೆ ಏನು?
ಈ ವಾಕ್ಯದಲ್ಲಿರುವ ಪ್ರಶ್ನಾರ್ಥಕ ಚಿಹ್ನೆಯನ್ನು ಅಳಿಸಿ ಮತ್ತೊಮ್ಮೆ ಈ ವಾಕ್ಯವನ್ನು ಓದಿದರೆ, ಇದು ಜಿಜ್ಞಾಸೆಯಾಗಿಯೂ ಕಾಣಿಸಬಹುದು. ಪ್ರಶ್ನೆಯಾಗಿಯೂ ಕಾಣಬಹುದು. ನಮ್ಮೊಳಗನ್ನು ಕಲಕುವ, ಕಾಡುವ, ಅರೆಕ್ಷಣ ನಿಂತು ಆಲೋಚಿಸುವಂತೆ ಮಾಡುವ, ನಗುವ, ಅಳುವ, ಅಂತರ್ಮುಖಿಯಾಗಿಸುವ, ಈವರೆಗಿನ ಜೀವನ ಪಥವನ್ನು ಮೆಲುಕು ಹಾಕುವಂತೆ ಒತ್ತಾಯಿಸುವ ವಾಕ್ಯವಾಗಿಯೂ ಕಾಡಬಹುದು. ಓದುವವನ ಮನಸ್ಥಿತಿ ಮತ್ತು ಆ ಓದುವ ಕ್ಷಣದಲ್ಲಿ ಆತನ ಸ್ಥಿತಿಗತಿಯೇ ಇವನ್ನು ನಿರ್ಧರಿಸುತ್ತದೆ. ನಿಜಕ್ಕೂ ಬದುಕು ಅಂದರೆ ಏನು? ಶ್ರೀಮಂತನಿಗೂ ಬದುಕಿದೆ. ಬಡವನಿಗೂ ಬದುಕಿದೆ. ಹೆಣ್ಣಿಗೂ ಬದುಕಿದೆ. ಗಂಡಿಗೂ ಇದೆ. ಮಗುವಿಗೂ ಬದುಕಿದೆ. ಯುವಕರಿಗೂ ಬದುಕು ಇದೆ. ಅಂದಹಾಗೆ,
ಬಿಳಿ ಬಟ್ಟೆಯನ್ನು ಹೊದೆಸಿ ಮಲಗಿಸಲಾದ ಮೃತದೇಹದ ಸುತ್ತ ನೂರು ಮಂದಿ ನೆರೆದಿದ್ದಾರೆ ಎಂದಿಟ್ಟುಕೊಳ್ಳೋಣ. ಬಾಹ್ಯನೋಟಕ್ಕೆ ಅವರೆಲ್ಲರೂ ಬಾಡಿದ ಮುಖ ಹೊತ್ತು ನಿಂತಿರುತ್ತಾರೆ. ಏಕೀಭಾವ ಎಲ್ಲರಲ್ಲೂ ನೆಲೆಸಿರುವಂತೆ ಕಾಣಿಸುತ್ತದೆ. ಆದರೆ, ಅವರೆಲ್ಲರ ಮನಸ್ಸಿನೊಳಗೆ ನಡೆಯುತ್ತಿರುವ ಪ್ರಕ್ರಿಯೆಗಳು ಏಕರೂಪದಲ್ಲಿರುತ್ತದೆಯೇ? ಆ ನೂರು ಮಂದಿಯ ಭಾವನೆ, ಆಲೋಚನೆಗಳು ನೂರು ರೀತಿಯಲ್ಲಿ ಖಂಡಿತ ಇರುತ್ತದೆ. ಹೊರನೋಟಕ್ಕೆ ಎಲ್ಲರ ಮುಖಭಾವವೂ ಶೋಕತಪ್ತವಾಗಿ ಕಂಡರೂ ಅವರೆಲ್ಲರ ಶೋಕ ಏಕರೂಪದ್ದಲ್ಲ. ಗುಂಪಾಗಿದ್ದೂ ಅವರೆಲ್ಲ ಒಂಟಿ ಒಂಟಿ. ಒಂಟಿ ಒಂಟಿಯಾಗಿಯೇ ಅವರು ಆಲೋಚಿಸುತ್ತಿರುತ್ತಾರೆ. ನೋವನ್ನೋ, ಭಯವನ್ನೋ, ಆರ್ಥಿಕ ಲೆಕ್ಕಾಚಾರವನ್ನೋ, ತನ್ನ ಆರೋಗ್ಯವನ್ನೋ ಬೆಳಗ್ಗಿನ ಔಷಧಿಯನ್ನು ಮಿಸ್ ಮಾಡಿಕೊಂಡದ್ದನ್ನೋ, ಮೃತ ವ್ಯಕ್ತಿಯು ತನಗೆ ಮಾಡಿದ ಉಪಕಾರವನ್ನೋ...ಹೀಗೆ ತಂತಮ್ಮ ಲೋಕದಲ್ಲೇ ಸುತ್ತುತ್ತಿರುತ್ತಾರೆ. ಬದುಕಿನ ವಾಸ್ತವ ಸ್ಥಿತಿಯಿದು. ನಾವೆಷ್ಟೇ ಗುಂಪಾಗಿದ್ದರೂ ಮತ್ತು ನಮ್ಮವರೆಂದು ನಂಬಿಕೊಂಡಿರುವ ಪತ್ನಿ ಮಕ್ಕಳು, ಹೆತ್ತವರು ನಮಗಿದ್ದರೂ ನಾವು ಒಂಟಿಯೇ. ನಾವೆಲ್ಲ ಜೊತೆಗಿದ್ದೂ ನಮ್ಮದೇ ಆದ ಬದುಕನ್ನು ಬದುಕುತ್ತೇವೆಯೇ ಹೊರತು ಇತರರದ್ದಲ್ಲ. ವಿಚಾರಣೆಯ ದಿನ ಮನುಷ್ಯರು ತನ್ನ ತಾಯಿ, ತಂದೆ, ಪತ್ನಿ, ಮಕ್ಕಳು ಎಲ್ಲರನ್ನೂ ಬಿಟ್ಟು ಒಂಟಿಯಾಗಿ ದೂರ ಓಡುತ್ತಾರೆ ಎಂದು ಪವಿತ್ರ ಕುರ್‍ಆನ್ (80: 34-37) ಹೇಳಿರುವುದರ ಭಾವಾರ್ಥ ಇದು.
ಹುಟ್ಟಿದ ಕೂಡಲೇ ಮಗುವಿಗೆ ಬಿಳಿ ಬಟ್ಟೆಯನ್ನು ಹೊದೆಸಿ ರಕ್ಷಣೆಯನ್ನು ನೀಡಲಾಗುತ್ತದೆ. ಅದೇ ಮಗು ಮೃತ ಪಟ್ಟಾಗಲೂ ಬಿಳಿ ಬಟ್ಟೆಯನ್ನೇ ಹೊದೆಸಲಾಗುತ್ತದೆ. ಬಿಳಿ ಯಾವುದು, ಕಪ್ಪು ಯಾವುದು ಎಂಬುದನ್ನು ಗುರುತಿಸುವಷ್ಟು ಜ್ಞಾನವಿಲ್ಲದ ಪ್ರಾಯದಲ್ಲಿ ಹೊದೆಸುವುದೂ ಬಿಳಿ ಬಟ್ಟೆಯನ್ನೇ. ತನಗೆ ಹೊದೆಸಿರುವ ಬಟ್ಟೆಯ ಬಣ್ಣ ಯಾವುದು ಎಂಬುದನ್ನು ನೋಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿರುವಾಗಲೂ ಹೊದೆಸುವುದು ಬಿಳಿ ಬಟ್ಟೆಯನ್ನೇ. ನಿಜವಾಗಿ,
ಈ ಎರಡೂ ಸ್ಥಿತಿಗಳಲ್ಲೂ ಮನುಷ್ಯ ಅಸಹಾಯಕ. ಹುಟ್ಟುವಾಗ ಏನನ್ನೂ ತರದೆಯೇ ಹುಟ್ಟುವ ಮತ್ತು ಮರಳುವಾಗ ಏನನ್ನೂ ಕೊಂಡುಹೋಗದೆಯೇ ಮರಳುವ ಎರಡೂ ಸ್ಥಿತಿಗಳೂ ಬಿಳಿ ಬಟ್ಟೆಯೊಂದಿಗೆ ಸಂಬಂಧವನ್ನು ಹೊಂದಿಕೊಂಡಿದೆ. ಆದ್ದರಿಂದ, ಈ ಸ್ಥಿತಿಗಳನ್ನು ಮುಖಾಮುಖಿಗೊಳಿಸಿ ನಾವು ಅನುಸಂಧಾನ ನಡೆಸಬೇಕು. ಈ ಸ್ಥಿತಿಗಳು ಸಾರುವ ಸಂದೇಶ ಏನು? ಮನುಷ್ಯನ ಬದುಕು ಆದಿಯಿಂದ ಅಂತ್ಯದ ವರೆಗೆ ಬಿಳಿ ಬಟ್ಟೆಯಂತೆ ಕಲೆರಹಿತವಾಗಿರಬೇಕು ಎಂದೇ? ಆತನ ಆಲೋಚನೆ, ವ್ಯವಹಾರ, ಮಾತು- ಮೌನ, ನಗು-ಅಳು, ಕೋಪ, ಗಳಿಕೆ, ಖರ್ಚು ಇತ್ಯಾದಿ ಎಲ್ಲವೂ ಬಿಳಿ ಬಣ್ಣದಂತೆ ನಿರ್ಮಲವಾಗಿರಬೇಕು ಎಂದೇ? ಒಂದು ತುಂಡು ಬಟ್ಟೆಯನ್ನು ಹೊದ್ದುಕೊಂಡು ಹುಟ್ಟುವ ನೀನು ಒಂದು ತುಂಡು ಬಟ್ಟೆಯನ್ನು ಹೊದ್ದುಕೊಂಡು ಹೋಗಬೇಕಾದಷ್ಟು ಯಕಶ್ಚಿತ್ ಜೀವಿ ಎಂದೇ? ಹುಟ್ಟುವಾಗ ಹೊದೆಸುವ ಅಚ್ಚ ಬಿಳಿ ಬಟ್ಟೆಯನ್ನು ಅಂತ್ಯದ ವರೆಗೆ ಕಲೆರಹಿತವಾಗಿ ಉಳಿಸಿಕೊಳ್ಳುವ ಪರೀಕ್ಷೆಯೇ (ಪವಿತ್ರ ಕುರ್‍ಆನ್: 67:2) ಜೀವನ ಎಂದೇ?
ಪ್ರವಾದಿ ಇಬ್ರಾಹೀಮ್(ಅ), ಹಾಜಿರಾ ಮತ್ತು ಇಸ್ಮಾಈಲ್(ಅ)- ಈ ಮೂವರೂ ಮತ್ತು ಈ ಮೂವರ ಬದುಕೂ ನಮ್ಮನ್ನು ಜಿಜ್ಞಾಸೆಗೆ ಒಳಪಡಿಸಬೇಕು. ಈ ಮೂವರೂ ಬರಿಗೈ ದಾಸರು. ಉರ್ ಎಂಬ ಹುಟ್ಟಿದೂರಿನಿಂದ ಹೊರಡುವಾಗ, ಮಕ್ಕಾದಲ್ಲಿ ನೆಲೆಸಲು ತೀರ್ಮಾನಿಸುವಾಗ ಮತ್ತು ಆತ್ಮಾರ್ಪಣೆಗೆ ಇಸ್ಮಾಈಲ್ ಸಿದ್ಧವಾಗುವಾಗ- ಈ ಮೂರು ಹಂತಗಳಲ್ಲೂ ಅವರು ಬರಿಗೈ ದಾಸರು. ಹಾಜಿಗಳೂ ಅಷ್ಟೇ. ಅವರ ಜೊತೆಗಿರುವುದು ಬಿಳಿ ಬಟ್ಟೆ ಮಾತ್ರ. ನಮ್ಮೆಲ್ಲರ ಬದುಕೂ ಇಷ್ಟೇ. ಈ ಬದುಕಿನ ಉದ್ದ ಎಷ್ಟೆಂದರೆ, ಬಿಳಿ ಬಟ್ಟೆಯಿಂದ ಬಿಳಿ ಬಟ್ಟೆಯವರೆಗೆ.