ಈದ್‍ನ ಪರೋಕ್ಷ ಅರ್ಥ ಖುಷಿ, ಸಂಭ್ರಮ, ಸಂತೋಷ. ಈದ್ ಎಂಬುದು ಯಾವುದಾದರೊಂದು ದೇಶಕ್ಕೆ, ರಾಜ್ಯಕ್ಕೆ ಅಥವಾ ಯಾವುದಾದರೊಂದು ಜಿಲ್ಲೆಗೆ ಸೀಮಿತವಾದ ಒಂದಲ್ಲ. ದಿನದ ವ್ಯತ್ಯಾಸದೊಂದಿಗೆ ಜಾಗತಿಕವಾಗಿ ಆಚರಿಸುವ ಹಬ್ಬ. ಒಂದು ತಿಂಗಳ ಕಾಲದ ಉಪವಾಸದಿಂದ ಬಿಡುಗಡೆಗೊಂಡ ಸಂಭ್ರಮವನ್ನು ಹರ್ಷೋಲ್ಲಾಸದಿಂದ ಅನುಭವಿಸುವ ದಿನ. ವಿಶೇಷ ಏನೆಂದರೆ, ಈದ್‍ನ ದಿನ ಬಡವರಲ್ಲಿ ಬಡವರಾದ ಕುಟುಂಬ ಕೂಡ ಆನಂದ ಪಡಬೇಕು ಅನ್ನುವ ಗುರಿಯನ್ನು ಈದ್ ಹೊಂದಿದೆ. ಇವತ್ತಿನ ಬಂಡವಾಳಶಾಹಿ ಜಗತ್ತು ಪ್ರಸ್ತುತ ಪಡಿಸುವ ಆನಂದದ ನಿಯಮ ಏನೆಂದರೆ, ಉಳ್ಳವರ ಸಂಭ್ರಮದಲ್ಲಿ ಇಲ್ಲದವನಿಗೆ ಪಾಲಿಲ್ಲ. ಬಡವ ಆನಂದಲ್ಲಿದ್ದಾನೋ ಇಲ್ಲವೋ ಎಂಬುದನ್ನು ಪರಿಗಣಿಸಿ ಧನಿಕ ಆನಂದಪಡುವುದಲ್ಲ. ಆನಂದ ಆತನ ಹಕ್ಕು, ಅದಕ್ಕೂ ಬಡವನಿಗೂ ಸಂಬಂಧ ಇಲ್ಲ. ಬಡವ ಹಬ್ಬವನ್ನು ಹೇಗೆ ಬೇಕಾದರೂ ಆಚರಿಸಲಿ, ಧನಿಕ ಆ ಬಗ್ಗೆ ಚಿಂತಿಸಬೇಕಾಗಿಲ್ಲ. ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ಶ್ರೀಮಂತ ಬಹುದೊಡ್ಡ ಭಾಗ್ಯವಂತ. ಆತನ ಶ್ರೀಮಂತಿಕೆಯಲ್ಲಿ ಬಡವನ ಬೆವರು ಎಷ್ಟೇ ಸುರಿದಿದ್ದರೂ ಆ ಬೆವರಿಗೆ ವೇತನ ನೀಡಿದರೆ, ಅಲ್ಲಿಗೆ ಆತನಿಗೂ ಆ ಬೆವರಿಗೂ ಸಂಬಂಧ ಮುಕ್ತಾಯಗೊಳ್ಳುತ್ತದೆ.
ಇವತ್ತು ವಲಸೆ ಕಾರ್ಮಿಕರು ಪಡುತ್ತಿರುವ ದಾರುಣ ಸ್ಥಿತಿಯ ಹಿಂದಿರುವುದೂ ಇದೇ ಮನಸ್ಥಿತಿ. ನಗರವನ್ನು ಸುಂದರಗೊಳಿಸಬೇಕು ಅನ್ನುವುದು ಸರಕಾರದ ಬಯಕೆ. ಆ ಬಯಕೆ ಪೂರ್ತಿಗೊಳ್ಳಬೇಕಾದರೆ ಈ ಕಾರ್ಮಿಕರು ಬೇಕು. ಅದಕ್ಕಾಗಿ ಅವರನ್ನು ಅತ್ಯಂತ ಕನಿಷ್ಠ ಸೌಲಭ್ಯದೊಂದಿಗೆ ನಗರಗಳಲ್ಲಿ ಉಳಿಸಿಕೊಳ್ಳಲಾಯಿತು. ಅವರ ರಕ್ತವನ್ನು ಬಸಿದು ನಗರವನ್ನೂ ಕಟ್ಟಲಾಯಿತು. ಇಂಥ ವಲಸೆ ಕಾರ್ಮಿಕರು 8 ಕೋಟಿಗಿಂತಲೂ ಅಧಿಕ ಇದ್ದಾರೆ ಎಂಬುದು ಕೇಂದ್ರ ಸರಕಾರವೇ ಒದಗಿಸಿದ ಮಾಹಿತಿ. ಇವರು ವಲಸಿಗಾರರಾಗಿರುವುದರಿಂದ ಇವರಲ್ಲಿ ಪಡಿತರ ಚೀಟಿಯೂ ಇಲ್ಲ. ಆದ್ದರಿಂದ ರಾಜ್ಯ ಸರಕಾರಗಳು ಉಚಿತವಾಗಿ ಹಂಚುವ ಅಕ್ಕಿ-ದವಸ ಧಾನ್ಯಗಳು ಇವರಿಗೆ ಲಭ್ಯವಾಗುತ್ತಲೂ ಇಲ್ಲ. ಕಳೆದ ವಾರ ಸ್ಟ್ರಾಂಡೆಡ್ ವರ್ಕರ್ಸ್ ಆಕ್ಷನ್ ನೆಟ್‍ವರ್ಕ್ ಎಂಬ ಸ್ವಯಂ ಸೇವಾ ಸಂಸ್ಥೆಯು 12,248 ವಲಸೆ ಕಾರ್ಮಿಕರನ್ನು ವಿವಿಧ ರೂಪದಲ್ಲಿ ಸಂಪರ್ಕಿಸಿದಾಗ ಸಿಕ್ಕ ಮಾಹಿತಿ ಅತ್ಯಂತ ಆಘಾತಕಾರಿಯಾದದು. ಇವರಲ್ಲಿ 82% ಮಂದಿಗೂ ಸರಕಾರ ವಿತರಿಸಿರುವ ಪಡಿತರ ಸಿಕ್ಕಿಲ್ಲ. ಸಂಪರ್ಕಿಸಲಾದ 9,981 ಮಂದಿಯ ಪೈಕಿ 64% ಮಂದಿಯಲ್ಲಿ 100 ರೂಪಾಯಿಯೂ ಇಲ್ಲ. ನಮ್ಮ ನಗರವನ್ನು ಸುಂದರವಾಗಿಸುವುದಕ್ಕಾಗಿ ದುಡಿದೂ ದುಡಿದೂ ತಮ್ಮ ದೇಹವನ್ನು ಎಲುಬುಗೂಡನ್ನಾಗಿಸಿಕೊಂಡ ಈ ಮಂದಿಯನ್ನು ಅವರ ಕಷ್ಟಕಾಲದಲ್ಲಿ ಬೀದಿಗೆ ತಳ್ಳುವುದೆಂದರೆ, ಅದು ಯಾವ ಮನಸ್ಥಿತಿ?
ಮಾರ್ಚ್ 24 ರಂದು ಭಾರತದಲ್ಲಿ ಕೇವಲ 536 ಕೊರೋನಾ ಪಾಸಿಟಿವ್ ಪ್ರಕರಣಗಳಷ್ಟೇ ಇತ್ತು. ಕೇವಲ 10 ಮಂದಿ ಸಾವಿಗೀಡಾಗಿದ್ದರು. ಈ ಸಮಯದಲ್ಲೇ ವಿದೇಶದಲ್ಲಿದ್ದ ಶ್ರೀಮಂತರ ಮಕ್ಕಳು-ವಿದ್ಯಾರ್ಥಿಗಳನ್ನು ಕೇಂದ್ರ ಸರಕಾರವೇ ವಿಮಾನ ಕಳುಹಿಸಿ ಉಚಿತವಾಗಿ ಕರೆಸಿಕೊಂಡಿತ್ತು. ಲಾಕ್‍ಡೌನ್ ಘೋಷಿಸುವಾಗ ರಾಜಸ್ಥಾನದ ಕೋಟಾದಲ್ಲಿ ವಿವಿಧ ರಾಜ್ಯಗಳ ಸುಮಾರು 30 ಸಾವಿರ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಐಐಟಿ ತರಬೇತಿಗೆ ಪ್ರಸಿದ್ಧವಾಗಿರುವ ಕೋಟಾದಿಂದ ಈ ವಿದ್ಯಾರ್ಥಿಗಳನ್ನು ಎಪ್ರಿಲ್‍ನಲ್ಲಿ ಆಯಾ ಸರಕಾರಗಳೇ ಬಸ್ ಕಳುಹಿಸಿ ತಂತಮ್ಮ ರಾಜ್ಯಗಳಿಗೆ ಕರೆಸಿಕೊಂಡಿತು. ಕೇವಲ ಉತ್ತರ ಪ್ರದೇಶವೊಂದೇ ಒಂದೇ ಬಾರಿಗೆ 175 ಬಸ್‍ಗಳನ್ನು ಕಳುಹಿಸಿಕೊಟ್ಟಿತು. ಆದರೆ, ಲಾಕ್‍ಡೌನ್‍ಗೆ 50 ದಿನಗಳು ತುಂಬಿರುವ ಈ ಹೊತ್ತಿನಲ್ಲಿ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ತೀರ್ಮಾನಿಸುವಾಗ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಲಕ್ಷದ ಹತ್ತಿರವಾಗಿದೆ. ಸಾವು 3 ಸಾವಿರಕ್ಕೆ ಸಮೀಪವಿದೆ. ಇವತ್ತು ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವುದು ಮಾರ್ಚ್ 24ರಂದು ಕಳುಹಿಸುವುದಕ್ಕಿಂತ 100 ಪಟ್ಟು ಹೆಚ್ಚು ಅಪಾಯಕಾರಿ. ಈಗ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಕಾರ್ಮಿಕರ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದೂ ಕಷ್ಟ. ಅಲ್ಲದೇ, ಪ್ರಯಾಣದ ದುಡ್ಡನ್ನು ಅವರೇ ಪಾವತಿಸಬೇಕು. ಇದು ಕ್ರೌರ್ಯ. ಬಡವರಿಗೂ, ಸರಕಾರಕ್ಕೂ ಅಥವಾ ಅವರನ್ನು ದುಡಿಸಿ ಕೊಂಡವರಿಗೂ ಆಳು ಮತ್ತು ದಣಿ ಅನ್ನುವ ಸಂಬಂಧಕ್ಕಿಂತ ಹೊರತಾದ ಇನ್ನಾವ ಹಕ್ಕು-ಕರ್ತವ್ಯಗಳೂ ಇಲ್ಲ ಅನ್ನುವುದನ್ನು ಸಾರಿ ಸಾರಿ ಹೇಳಿದ ಸಂದರ್ಭ.
ಈದ್ ಇದಕ್ಕಿಂತ ಭಿನ್ನ. ಈದ್- ಹಬ್ಬ ಅಷ್ಟೇ ಅಲ್ಲ, ಅದು ನೀತಿ ಸಂಹಿತೆಯೊಂದನ್ನು ಶ್ರೀಮಂತರಿಗೂ ಬಡವರಿಗೂ ಮರು ನೆನಪಿಸುವ ಸಂದರ್ಭ. ಈದ್‍ನ ದಿನ ಮಸೀದಿ, ನಮಾಝï, ಪ್ರವಚನ, ಹೊಸಬಟ್ಟೆ ಯಾವುದೂ ಕಡ್ಡಾಯವಲ್ಲ. ಆದರೆ, ಒಂದು ದಿನಕ್ಕಾಗುವಷ್ಟು ಆಹಾರ ಧಾನ್ಯಗಳನ್ನು ತನ್ನ ಮನೆಯಲ್ಲಿ ಹೊಂದಿರುವ ವ್ಯಕ್ತಿ, ಅದಿಲ್ಲದ ಮನೆಗೆ ಆಹಾರ ವಸ್ತುಗಳನ್ನು ತಲುಪಿಸಬೇಕಾದುದು ಕಡ್ಡಾಯ. ಈ ಕಡ್ಡಾಯ ನಿಮಯವನ್ನು ಉಲ್ಲಂಘಿಸಿದರೆ, ಆತನ ಉಪವಾಸ ಪೂರ್ತಿಯಾಗುವುದಿಲ್ಲ. ಇದಕ್ಕಿಂತಲೂ ಬಹುಮುಖ್ಯವಾದುದು ಝಕಾತ್ ಎಂಬ ಪರಿಕಲ್ಪನೆ. ಉಳ್ಳವರು ತಮ್ಮ ಸಂಪತ್ತಿನಿಂದ ನಿರ್ದಿಷ್ಟ ಮೊತ್ತವನ್ನು ಬಡವರ ಕಲ್ಯಾಣಕ್ಕಾಗಿ ವ್ಯಯಿಸಲೇಬೇಕು. ಹಾಗೆ ಮಾಡದಿದ್ದರೆ ಆತ ಅಪರಾಧಿಯಾಗುತ್ತಾನೆ. ಅದಕ್ಕಾಗಿ ದೇವನು ಆತನಿಗೆ ಶಿಕ್ಷೆ ಕೊಡುತ್ತಾನೆ. ಈ ಶ್ರೀಮಂತನ ಹಣವನ್ನು ಪಡೆದ ಬಡವ್ಯಕ್ತಿ ಆ ಮೊತ್ತವನ್ನು ಸ್ವಉದ್ಯೋಗಕ್ಕೆ ಬಳಸಿಕೊಂಡು ಆತನೂ ಸಬಲನಾದರೆ, ಮುಂದೆ ಆತ ತನ್ನ ಸಂಪತ್ತಿನಿಂದ ಕಡ್ಡಾಯವಾಗಿ ದಾನ ನೀಡಲೇಬೇಕಾಗುತ್ತದೆ. ಇದೊಂದು ಬಗೆಯ ಸರಪಳಿ ಸಿದ್ಧಾಂತ. ಈ ಸರಪಳಿಯು ಶ್ರೀಮಂತ ಮತ್ತು ಬಡವ ಎಲ್ಲರನ್ನೂ ಜೊತೆಗೇ ಕೊಂಡೊಯ್ಯುತ್ತದೆ ಮತ್ತು ಜೋಡಿಸಿಡುತ್ತದೆ. ಬಡವನ ಕಷ್ಟಕ್ಕೆ ನೆರವಾಗುವುದು ತನ್ನ ಮೇಲಿನ ಧಾರ್ಮಿಕ ಹೊಣೆಗಾರಿಕೆ ಎಂದು ಓರ್ವ ಶ್ರೀಮಂತ ಅಂದುಕೊಳ್ಳುವುದಕ್ಕೂ ಆ ಹೊಣೆಗಾರಿಕೆಯ ಪ್ರಜ್ಞೆಯಿಲ್ಲದೇ ಬದುಕುವುದಕ್ಕೂ ಆಕಾಶ-ಭೂಮಿಯ ಅಂತರ ಇದೆ. ಉಪವಾಸದ ತಿಂಗಳಲ್ಲಿ ಝಕಾತ್ ಎಂಬ ಕಡ್ಡಾಯ ದಾನ ಜಾಗತಿಕವಾಗಿಯೇ ಅತ್ಯಧಿಕ ಸಂಖ್ಯೆಯಲ್ಲಿ ಸಂಗ್ರಹವಾಗುತ್ತಿರುವುದಕ್ಕೆ ಶ್ರೀಮಂತರಲ್ಲಿರುವ ಈ ಕಡ್ಡಾಯ ಪ್ರಜ್ಞೆಯೇ ಕಾರಣ.
ಕೊರೋನಾ ಕಾಲದಲ್ಲಿ ಈದ್ ಒಂದು ಸವಾಲು. ತಂತಮ್ಮ ಮನೆಯಲ್ಲಿ ಈದ್ ಆಚರಿಸಬೇಕಾದ ಅಸಂಖ್ಯ ಮಂದಿ ಇವತ್ತು ಬೀದಿಯಲ್ಲಿದ್ದಾರೆ. ಮನೆಯಲ್ಲಿದ್ದವರೂ ಉದ್ಯೋಗವಿಲ್ಲದೇ, ವ್ಯಾಪಾರವಿಲ್ಲದೇ ಸಂಕಟದಲ್ಲಿದ್ದಾರೆ. ಇಂಥದ್ದೊಂದು ಸ್ಥಿತಿಯನ್ನು ಈಗ ಜೀವಂತವಿರುವ ಯಾರೂ ತಮ್ಮ ಜೀವಮಾನದಲ್ಲಿ ನೋಡಿರುವ ಸಾಧ್ಯತೆ ಇಲ್ಲ. ಇದು ಹೊಸಬಟ್ಟೆ ಧರಿಸಿ ಗಾಳಿಪಟ ಹಾರಿಸುವ ಅಥವಾ ನೆಂಟರಿಷ್ಟರ ಮನೆಗೆ ಭೇಟಿ ಕೊಡುವ ಸಂದರ್ಭ ಅಲ್ಲ. ಮನೆಯಲ್ಲೇ ಇದ್ದು ಈದ್‍ನ ಖುಷಿಯನ್ನು ಹಂಚಿಕೊಳ್ಳಬೇಕು. ಅದೇವೇಳೆ, ಬಡವರ ರಕ್ತ ಹೀರಿ ಅಸಹಾಯಕವಾಗಿಸಿ ರಸ್ತೆಗೆ ಬಿಡುವ ಬಂಡವಾಳಶಾಹಿ ಮನಸ್ಥಿತಿ ನಮ್ಮದಾಗದಂತೆ ಗರಿಷ್ಠ ಜಾಗರೂಕತೆ ಪಾಲಿಸಬೇಕು. ಹೊಸಬಟ್ಟೆ ಧರಿಸದಿದ್ದರೂ ಮಸೀದಿಗೆ ಹೋಗದಿದ್ದರೂ ಪರ್ಫ್ಯೂಮ್ ಪೂಸದಿದ್ದರೂ ಚಿಂತಿಲ್ಲ. ಈದ್‍ನ ದಿನ ಬಡವರ ಮನೆಯಲ್ಲಿ ಸೂತಕ ಮೌನ ಆವರಿಸದಂತೆ ನೋಡಿಕೊಳ್ಳಬೇಕು. ಅದು ಪ್ರತಿ ಉಪವಾಸಿಗನ ಕರ್ತವ್ಯ.
ಕೊರೋನಾ ಒಂದು ಕಾಯಿಲೆ ಅಷ್ಟೇ. ಅದನ್ನು ಮಣಿಸಬಹುದು. ಆದರೆ ಮನುಷ್ಯನೊಳಗಿರುವ ಅಮಾನವೀಯತೆ, ದ್ವೇಷ, ಸ್ಪಂದನಾ ರಹಿತ ಮನೋಭಾವವು ಮಣಿಸಲಾಗದ ಕಾಯಿಲೆಯಾಗಿ ಜಗತ್ತಿನಲ್ಲಿ ಉಳಿದುಕೊಂಡಿದೆ. ಕೋಟ್ಯಾಂತರ ಮಂದಿಯನ್ನು ಇದು ಬಲಿ ಪಡೆದಿದೆ. ವಲಸೆ ಕಾರ್ಮಿಕರ ಸ್ಥಿತಿ ಅದರದ್ದೇ ಒಂದು ಭಾಗ. ಈದ್ ಈ ಮನಸ್ಥಿತಿಯನ್ನು ಪ್ರಶ್ನಿಸುವ ಹಬ್ಬವಾಗಲಿ. ಮನುಷ್ಯರನ್ನು ಪರಸ್ಪರ ಜೋಡಿಸುವ ಮತ್ತು ಸ್ಪಂದಿಸುವ ಸಂಕೇತವಾಗಲಿ. ನೆರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ ಎಂಬ ಪ್ರವಾದಿ(ಸ) ನುಡಿಗೆ ಬದ್ಧವಾಗಿ ಬದುಕುವ ಪ್ರತಿಜ್ಞಾ ದಿನವಾಗಲಿ.