Thursday, 1 April 2021

ಬಂಧನದಲ್ಲಿಡಬೇಕಾದುದು ಮಂದಿರಗಳನ್ನಲ್ಲ...



ಕಳೆದವಾರ ಎರಡು ಘಟನೆಗಳು ನಡೆದುವು.
1. ಸರಕಾರಿ ಶಾಲೆಯ ಮಕ್ಕಳನ್ನು ಮುಖ್ಯೋಪಾಧ್ಯಾಯರು ಮಸೀದಿಯ ಭೋಜನಕ್ಕೆ ಕಳುಹಿಸಿದ್ದು.
2. ಉತ್ತರಾಖಂಡದಲ್ಲಿ 150ಕ್ಕಿಂತಲೂ ಅಧಿಕ ದೇವಾಲಯಗಳ ಆವರಣದಲ್ಲಿ ಮುಸ್ಲಿಮರಿಗೆ ಪ್ರವೇಶವಿಲ್ಲ ಎಂಬ ಬ್ಯಾನರ್ ತೂಗು  ಹಾಕಿದ್ದು.
ಈ ಎರಡೂ ಬೆಳವಣಿಗೆಗಳ ಹಿಂದೆ ಆಂತರಿಕವಾದ ಸಂಬಂಧವೊಂದಿದೆ-
ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಎಂಬಲ್ಲಿ ಹೊಸ ಮಸೀದಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು ಮತ್ತು ಶಾಲೆಯ ಮಕ್ಕಳನ್ನು  ಮಧ್ಯಾಹ್ನದ ಭೋಜನಕ್ಕೆ ಕಳುಹಿಸಿ ಕೊಡುವಂತೆ ಸ್ಥಳೀಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯದಲ್ಲಿ ಮಸೀದಿ ಆಡಳಿತ  ಸಮಿತಿಯವರು ಕೇಳಿಕೊಂಡರು. ಬ್ರಾಹ್ಮಣರೇ ಊಟ ತಯಾರಿಯ ಹೊಣೆ ಹೊತ್ತಿರುವುದನ್ನೂ ಅವರು ತಿಳಿಸಿದ್ದರು. ಆ ವಿನಂತಿಯನ್ನು  ಮುಖ್ಯೋಪಾಧ್ಯಾಯರು ಸಹಜವೆಂಬಂತೆ ಸ್ವೀಕರಿಸಿ ಮಕ್ಕಳನ್ನು ಕಳುಹಿಸಿಯೂ ಕೊಟ್ಟಿದ್ದರು. ಆದರೆ ಆ ಬಳಿಕ ಮುಖ್ಯೋಪಾಧ್ಯಾಯರನ್ನು ಸಂಘಪರಿವಾರದ ವ್ಯಕ್ತಿ ತರಾಟೆಗೆ ತೆಗೆದುಕೊಂಡರು. ಸೋರಿಕೆಯಾದ ಆ ಫೋನ್ ಸಂಭಾಷಣೆ ಜಿಲ್ಲೆಯಲ್ಲಿ ಚರ್ಚಾ  ವಿಷಯವಾಯಿತು. ಮುಖ್ಯೋಪಾಧ್ಯಾಯರು ಭಯದಿಂದ ಕ್ಷಮೆ ಯಾಚಿಸಿದರು. ಪ್ರತಿಭಟನೆಯಂಥ ಉಗ್ರ ನಿರ್ಧಾರ ತಳೆಯಬೇಡಿ  ಎಂದು ಬೇಡಿಕೊಂಡರು. ತನ್ನಿಂದ ತಪ್ಪಾಯ್ತು ಎಂದು ಬಾರಿಬಾರಿಗೂ ಹೇಳುತ್ತಾ ಹೋದರು. ಹಾಗಂತ,
ಒಂದು ಖಾಸಗಿ ಭೋಜನ ಕೂಟಕ್ಕೆ ಸರಕಾರಿ ಶಾಲೆಯ ಮಕ್ಕಳನ್ನು ಕಳುಹಿಸಿಕೊಡುವುದು ಕಾನೂನು ಪ್ರಕಾರ ಸರಿಯೇ ಎಂಬ ಪ್ರಶ್ನೆ  ತಪ್ಪಲ್ಲ. ಊರ ಸಹಜ ಬಾಂಧವ್ಯದ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯರು ಸರಿ-ತಪ್ಪುಗಳ ಜಿಜ್ಞಾಸೆಗೆ ಬೀಳದೇ ಮಕ್ಕಳನ್ನು  ಕಳುಹಿಸಿಕೊಟ್ಟಿರಬಹುದು. ಅಲ್ಲದೇ, ಒಂದು ದಿನ ಮೊದಲೇ ಮಕ್ಕಳಲ್ಲಿ ಆ ಬಗ್ಗೆ ಅವರು ಹೇಳಿಯೂ ಇದ್ದರು. ಮನೆಯಲ್ಲಿ ಒಪ್ಪಿಗೆ  ಕೊಟ್ಟವರು ಮಾತ್ರ ಭೋಜನಕ್ಕೆ ಹೋಗಬಹುದು, ಅಲ್ಲದವರು ಟಿಫಿನ್ ತರಬಹುದು ಎಂದೂ ಹೇಳಿದ್ದರು. ಇವೆಲ್ಲವನ್ನೂ ಕಾನೂನಿ ನಾಚೆಗಿನ ಮಾನವ ಸಹಜ ಸಂಬಂಧದ ದೃಷ್ಟಿಯಿಂದ ನೋಡಿದರೆ ಯಾವ ಸಮಸ್ಯೆಯೂ ಇಲ್ಲ. ಒಂದುವೇಳೆ, ಕಾನೂನು ಪ್ರಕಾರವೇ  ವಿಶ್ಲೇಷಿಸುವುದಿದ್ದರೂ ತಪ್ಪಿಲ್ಲ. ಆದರೆ, ಮುಖ್ಯೋಪಾಧ್ಯಾಯರನ್ನು ಕರೆ ಮಾಡಿ ತರಾಟೆಗೆ ತೆಗೆದುಕೊಂಡವರ ಸಮಸ್ಯೆ ಭೋಜನ ಆಗಿರಲಿಲ್ಲ. ಮಸೀದಿಯಾಗಿತ್ತು ಮತ್ತು ಮುಸ್ಲಿಮರಾಗಿದ್ದರು. ಲವ್ ಜಿಹಾದ್, ಹಿಂದೂ ಹೆಣ್ಮಕ್ಕಳ ರಕ್ಷಣೆ, ಮುಸ್ಲಿಮರಿಗೆ ಹರಿದು ಬರುವ ಹಣ  ಇತ್ಯಾದಿಗಳ ಮೂಲಕವೇ ಆ ವ್ಯಕ್ತಿ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದರ ಜೊತೆಗೇ ಉತ್ತರಾಖಂಡದ ಡೆಹ್ರಾಡೂನ್‌ನ 150 ಮಂದಿರಗಳು ತೂಗು ಹಾಕಿರುವ ಬ್ಯಾನರ್‌ಗಳನ್ನೂ ಇಟ್ಟು ನೋಡಬೇಕು.
ದೇಶ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವಾಗ ಮತ್ತು ನಿರುದ್ಯೋಗದಿಂದ ಸಾಮಾಜಿಕ ವಾತಾವರಣ ಕಳವಳಕಾರಿ ಮಟ್ಟಕ್ಕೆ  ಮುಟ್ಟಿರುವಾಗ, ಪ್ರಭುತ್ವವನ್ನು ಬೆಂಬಲಿಸುವವರ ಪಾಲಿಗೆ ಇವಲ್ಲದೇ ಅನ್ಯದಾರಿಯಿಲ್ಲ ಎಂದಷ್ಟೇ ಇಂಥ ಬೆಳವಣಿಗೆಗಳಿಗೆ ಷರಾ  ಬರೆಯಬೇಕಾಗಿದೆ. ಇಂಥ ಬೆಳವಣಿಗೆಗಳನ್ನು ಸೃಷ್ಟಿ ಮಾಡದೇ ಹೋದರೆ ಜನರು ಪ್ರಭುತ್ವದ ವೈಫಲ್ಯಗಳ ಬಗ್ಗೆ ಮಾತಾಡತೊಡಗುತ್ತಾರೆ.  ಅನ್ನ, ಉದ್ಯೋಗಕ್ಕಾಗಿ ಆಗ್ರಹಿಸುತ್ತಾರೆ. ಒಂದು ಕಡೆ ರೈತ ಪ್ರತಿಭಟನೆ 4 ತಿಂಗಳನ್ನೂ ದಾಟಿ ಮುಂದುವರಿಯುತ್ತಿದೆ. ಬ್ಯಾಂಕ್ ಸಿಬಂದಿಗಳು ಈಗಷ್ಟೇ ಪ್ರತಿಭಟನೆಯನ್ನು ನಿಲ್ಲಿಸಿದ್ದಾರೆ. ಸರಕಾರವೇ ಖಾಸಗೀಕರಣವಾಗಿ ಬಿಡುತ್ತೋ ಎಂಬ ಮಾತುಗಳು ಕೇಳಿ ಬರುವಷ್ಟು  ಒಂದೊಂದನ್ನೇ ಖಾಸಗಿಗೆ ಮಾರಲಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಜನಾಕ್ರೋಶ ಬೀದಿಗೆ ಬರದಂತೆ ತಡೆಯುವುದಕ್ಕಿರುವ ಜನಪ್ರಿಯ ದಾರಿ  ಒಂದೇ- ಹಿಂದೂ-ಮುಸ್ಲಿಮ್ ವಿಭಜನೆ. ಮುಸ್ಲಿಮರನ್ನು ದ್ವೇಷಿಸುವ ಮತ್ತು ಅವರ ಸುತ್ತ ಸುಳ್ಳುಗಳನ್ನು ಹಬ್ಬಿಸಿ ಚರ್ಚೆಯಾಗುವಂತೆ  ನೋಡಿಕೊಳ್ಳುವುದು. ಇಲ್ಲದಿದ್ದರೆ,
ಮುಸ್ಲಿಮರಿಗೆ ಪ್ರವೇಶವಿಲ್ಲ ಎಂಬ ಬ್ಯಾನರನ್ನು ಮಂದಿರಗಳು ಯಾಕಾದರೂ ತೂಗು ಹಾಕಬೇಕು? ಮುಸ್ಲಿಮ್ ಆಗಿದ್ದುಕೊಂಡು ಮಂದಿರ  ಪ್ರವೇಶಿಸಬಾರದೇ? ಅದರಿಂದ ಆಗುವ ಹಾನಿಯೇನು? ಮಂದಿರ, ಮಸೀದಿ, ಚರ್ಚ್, ಸ್ತೂಪ ಇವೆಲ್ಲ ಆಯಾ ಧರ್ಮದ ಸಂಕೇತಗಳು.  ಅವು ಆಯಾ ಧರ್ಮಗಳ ಬಗ್ಗೆ ಬಹಳಷ್ಟನ್ನು ಹೇಳುತ್ತವೆ. ಪೂಜೆ, ಗರ್ಭಗುಡಿ, ಹಿಂದೂ ಸಂಪ್ರದಾಯ, ಭಜನೆ, ಅರ್ಚಕರು, ಆರತಿ,  ಸಂಸ್ಕೃತ ಶ್ಲೋಕಗಳು ಇತ್ಯಾದಿಗಳ ಬಗ್ಗೆ ಮುಸ್ಲಿಮನಿಗೆ ಸುಲಭವಾಗಿ ಅರಿತುಕೊಳ್ಳುವುದಕ್ಕೆ ಮಂದಿರ ಒಂದು ಸುಲಭ ತಾಣ. ಬಾಯಿಯಲ್ಲಿ  ಹೇಳುವುದಕ್ಕೂ ಕಣ್ಣಾರೆ ಕಾಣುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಸಂಶೋಧನಾ ನಿರತ ಮುಸ್ಲಿಮ್ ವಿದ್ಯಾರ್ಥಿಯೋರ್ವ ಮಂದಿರಕ್ಕೆ  ಭೇಟಿ ನೀಡದೇ ಹೇಗೆ ವಿಷಯ ಮಂಡಿಸಬಹುದು? ಮಂದಿರ ಹಿಂದೂಗಳಿಗೆ ಸಂಬಂಧಿಸಿದ್ದೇ ಆಗಿರಬಹುದು. ಆದರೆ, ಇತರ  ಧರ್ಮೀಯರಿಗೆ ಬಾಗಿಲು ಮುಚ್ಚುವುದರಿಂದ ಅದು ಸ್ವಯಂ ಅಡಗಿಕೊಂಡಂತಾಗುತ್ತದೆ. ಸಂಸ್ಕೃತದ ಇಂದಿನ ಸ್ಥಿತಿಗೆ ಅದನ್ನು ಇತರರಿಂದ  ಅಡಗಿಸಿಟ್ಟುದುದೇ ಕಾರಣ ಎಂಬುದು ಎಲ್ಲರಿಗೂ ಗೊತ್ತು.
ಮುಸ್ಲಿಮರು ಮತ್ತು ಹಿಂದೂಗಳ ನಡುವೆ ದ್ವೇಷಭಾವವನ್ನು ಬೆಳೆಸುವುದರಿಂದ ಯಾರಿಗೆ ಲಾಭ ಎಂಬ ಬಗ್ಗೆ ಉಭಯ ಧರ್ಮೀಯರೂ  ಸ್ವಯಂ ಆತ್ಮಾವಲೋಕನ ನಡೆಸಬೇಕಾದ ಅಗತ್ಯ ಇದೆ. ಮುಸ್ಲಿಮರ ಊಟ, ಮುಸ್ಲಿಮರ ಸ್ನೇಹ, ಮುಸ್ಲಿಮರಿಂದ ವ್ಯಾಪಾರ, ಮಸೀದಿ,  ಆಝಾನ್... ಮುಂತಾದುವುಗಳೆಲ್ಲ ನಿಷೇಧದ ಪಟ್ಟಿಗೆ ಬೀಳುವುದಕ್ಕಿಂತ ಮೊದಲು ಉಭಯ ಧರ್ಮೀಯರೂ ಎಚ್ಚೆತ್ತುಕೊಳ್ಳಬೇಕು.  ಯಾವುದಾದರೊಂದು ನೆಪದಲ್ಲಿ ನಾಳೆ ಇನ್ನೇನಕ್ಕೋ ನಿಷೇಧ ಹೇರುವ ಬೆಳವಣಿಗೆ ನಡೆಯಬಹುದು. ಗೋವಿನ ತಲೆಯಿಂದ ಅ ಪವಿತ್ರಗೊಳ್ಳುತ್ತಿದ್ದ ಮಂದಿರಗಳು ಈಗ ಮುಸ್ಲಿಮರ ಪ್ರವೇಶದಿಂದಲೇ ಅಪವಿತ್ರಗೊಳ್ಳುವ ಹಂತಕ್ಕೆ ಬಂದುಬಿಟ್ಟಿದೆ. ಇದೊಂದು ಅ ಪಾಯಕಾರಿ ಬೆಳವಣಿಗೆ. ಈ ದೇಶದ ಯಾವ ಮಸೀದಿಗಳೂ ಹಿಂದೂಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡನ್ನು ಈವರೆಗೂ ತೂಗು  ಹಾಕಿಲ್ಲ. ಹಾಕಲೂ ಬಾರದು. ಕ್ರೈಸ್ತ ಅನುಯಾಯಿಗಳಿಗೆ ಪ್ರವಾದಿ ಮುಹಮ್ಮದರು(ಸ) ಮಸೀದಿಯಲ್ಲೇ  ಪ್ರಾರ್ಥನೆಗೆ ಅವಕಾಶ  ಮಾಡಿಕೊಟ್ಟ ಚರಿತ್ರೆ ಇದೆ. ಮಸೀದಿಯೊಳಗೆ ಮೂತ್ರ ಮಾಡಿದವನನ್ನು ತಿಳಿಹೇಳಿ ಕಳುಹಿಸಿಕೊಟ್ಟ ಇತಿಹಾಸ ಇದೆ. ಸಾಧ್ಯವಾದರೆ ಪ್ರತಿ  ಮಸೀದಿಗಳೂ ಹಿಂದೂಗಳಿಗೆ ಸ್ವಾಗತ ಎಂಬ ಬೋರ್ಡನ್ನು ನೇತು ಹಾಕುವ ಮತ್ತು ಇತರ ಧರ್ಮೀಯರಿಗೆ ಮಸೀದಿಯಲ್ಲಿ ನಡೆಯುವ  ಚಟುವಟಿಕೆ, ನಮಾಝï, ಪ್ರಾರ್ಥನೆ, ಅಂಗಶುದ್ಧಿ ಇತ್ಯಾದಿಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಹಳ್ಳಿ  ಹಳ್ಳಿ, ಗ್ರಾಮ ಗ್ರಾಮಗಳಲ್ಲಿ ಇಂಥ ಕಾರ್ಯಕ್ರಮಗಳು ಅಭಿಯಾನದಂತೆ ನಡೆಯಬೇಕು. ಹಿಂದೂ ಸಮುದಾಯದ ಪ್ರಮುಖರನ್ನು, ಬಿಜೆಪಿ,  ಕಾಂಗ್ರೆಸ್ಸು, ಜೆಡಿಎಸ್ಸು ಎಂಬ ರಾಜಕೀಯ ಬೇಧವಿಲ್ಲದೇ ಮತ್ತು ಸಂಘಪರಿವಾರ ಎಂಬ ಅಂತರ ಕಾಯ್ದುಕೊಳ್ಳದೇ ಸರ್ವರನ್ನೂ ಆಹ್ವಾ ನಿಸುವ ಪ್ರಯತ್ನ ನಡೆಯಬೇಕು. ಮಸೀದಿ, ಮದ್ರಸಗಳ ಕುರಿತು ಚಾಲ್ತಿಯಲ್ಲಿರುವ ಸುಳ್ಳು ಸುದ್ದಿಗಳಿಗೆ ಏಟು ಕೊಡುವುದಕ್ಕೂ ಇದರಿಂದ  ಸಾಧ್ಯವಾಗಬಹುದು.
ಈ ದೇಶದ ಇಂದಿನ ಗಂಭೀರ ಸಮಸ್ಯೆ ಧರ್ಮ ಅಲ್ಲ. ಅದು ಸಮಸ್ಯೆಯೇ ಅಲ್ಲ. ಹಿಂದೂಗಳಾಗಲಿ ಮುಸ್ಲಿಮರಾಗಲಿ ಈ ದೇಶದ  ಏಕತೆ, ಸಮಗ್ರತೆ, ವೈವಿಧ್ಯತೆಗೆ ತೊಡಕೂ ಅಲ್ಲ. ಮಸೀದಿಗಳು ತಮ್ಮ ಪಾಡಿಗಿವೆ ಮತ್ತು ಮಂದಿರಗಳೂ ಕೂಡ. ಭಕ್ತಿಯಿಂದ  ಬಂದವರಿಗೂ ದ್ವೇಷದಿಂದ ಬಂದವರಿಗೂ ಅವು ಒಳಿತನ್ನೇ ಬಯಸುತ್ತವೆ. ಜನರು ಮಸೀದಿಗೋ ಮಂದಿರಕ್ಕೋ ತೆರಳುವುದು- ನೆಮ್ಮ ದಿ, ಶಾಂತಿಯನ್ನು ಬಯಸಿಕೊಂಡು. ಧ್ಯಾನ ಸ್ಥಿತಿಗೆ ತಲುಪುವುದಕ್ಕೆ ಅವು ಉತ್ತಮ ತಾಣ. ಅಂಥ ತಾಣಗಳನ್ನೇ ಬೇಲಿ ಹಾಕಿ ಬಂಧನದಲ್ಲಿಡುವುದು ಅತ್ಯಂತ ಖೇದಕರ. ಹಿಂದೂ ಧರ್ಮದ ಬೆಳವಣಿಗೆ ಮತ್ತು ಸೌಂದರ್ಯವು ಇಸ್ಲಾಮನ್ನು ಮತ್ತು ಮುಸ್ಲಿಮರನ್ನು  ದ್ವೇಷಿಸುವುದರಲ್ಲಿಲ್ಲ, ಪ್ರೀತಿಸುವುದರಲ್ಲಿದೆ. ಆದರೆ ಈ ಸತ್ಯವನ್ನೇ ಮರೆಮಾಚಲಾಗುತ್ತಿದೆ. ಇದು ವಿಷಾದನೀಯ.