ಒಡೆದ ಮನಸುಗಳನ್ನು ಜೋಡಿಸುವ ಬಗೆ ಹೇಗೆ, ಚೆಲ್ಲಾಪಿಲ್ಲಿಯಾಗಿರುವ ಭಾವಗಳಿಗೆ ಸೌಹಾರ್ದದ ಘಂಟಾನಾದ ಕೇಳಿಸುವ ಬಗೆ ಹೇಗೆ, ‘ಅದು ಹಾಗಲ್ಲ, ಹೀಗೆ, ಇದು ಹೀಗಲ್ಲ, ಹಾಗೆ’ ಎಂದು ವಿವರಣೆ ಕೊಡುವುದಕ್ಕೆ ನಿಮಿತ್ತಗಳನ್ನು ಸೃಷ್ಟಿಸಿಕೊಳ್ಳುವ ದಾರಿ ಏನು ಎಂಬಿತ್ಯಾದಿಗಳಿಗೆ ಈ ಬಾರಿಯ ಉಪವಾಸದ ತಿಂಗಳು ಪುಟ್ಟ ಉತ್ತರವನ್ನು ನೀಡಿದೆ. ಉಪವಾಸದ ತಿಂಗಳನ್ನು ನೆಪ ಮಾಡಿಕೊಂಡು ಅತ್ಯಂತ ಭಿನ್ನ ಬಗೆಯ ಇಫ್ತಾರ್ ಕೂಟಗಳು ಈ ಬಾರಿ ರಾಜ್ಯದ ಹಲವು ಕಡೆಗಳಲ್ಲಿ ನಡೆದಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬೈರಿಕಟ್ಟೆ ಮತ್ತು ಕೇರಳದ ತೃಶೂರ್‌ನಲ್ಲಿ ನವ ವಧೂ-ವರರು ಇಫ್ತಾರ್ ಕೂಟವನ್ನು ಏರ್ಪಡಿಸಿದರು. ಈ ಇಫ್ತಾರ್ ಕೂಟಕ್ಕೆ ಹಿಂದೂ-ಮುಸ್ಲಿಮ್ ಸಂಬಂಧದ ಗಟ್ಟಿ ಹಿನ್ನೆಲೆಯಿದೆ. ತೃಶೂರ್‌ನ ಅಮೃತ ಮತ್ತು ಗೌತಂ ಎಂಬ ವಧೂ-ವರರಿಗೆ ಸಾಕಷ್ಟು ಮುಸ್ಲಿಮ್ ಗೆಳೆಯರಿದ್ದಾರೆ. ಆದರೆ ಈ ಗೆಳೆಯರು ಉಪವಾಸದ ಕಾರಣ ಮದುವೆ ಚಪ್ಪರದಲ್ಲಿ ಆಹಾರ ಸೇವಿಸಿರಲಿಲ್ಲ. ಆದ್ದರಿಂದಲೇ,
ಪ್ರೀತಮ್ ಳ ಮನೆಯಲ್ಲಿ ಸಂಜೆಯ ವೇಳೆ ನಡೆದ ವಿವಾಹ ಔತಣ ಕೂಟವನ್ನು ಇಫ್ತಾರ್ ಕೂಟವಾಗಿ ಪರಿವರ್ತಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೈರಿಕಟ್ಟೆಯಲ್ಲಿ ಚಂದ್ರಶೇಖರ್ ಜಿಡ್ಡು ಎಂಬ ವರ ಮಸೀದಿಯಲ್ಲೇ ಇಫ್ತಾರ್ ಕೂಟವನ್ನು ಏರ್ಪಡಿಸಿದರು. ತನ್ನ ಮದುವೆಗೆ ಆಗಮಿಸಿದ ಮುಸ್ಲಿಮ್ ಗೆಳೆಯರು ಉಪವಾಸದ ಕಾರಣ ಆಹಾರ ಸೇವಿಸದೇ ಇರುವುದನ್ನು ಕಂಡು ವರ ಈ ನಿರ್ಧಾರ ತಾಳಿದರು. ಮಸೀದಿಗೆ ತಾನೂ ತೆರಳಿ ಇಫ್ತಾರ್ ಕೂಟದಲ್ಲಿ ಭಾಗಿಯಾದರು. ಮಂಗಳೂರಿನ ಕೇಂದ್ರ ಭಾಗದ ಆಲದ ಮರದಡಿಯಲ್ಲಿ ಒಂದು ಇಫ್ತಾರ್ ಕೂಟ ನಡೆಯಿತು. ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ ಏರ್ಪಡಿಸಿದ ಈ ಇಫ್ತಾರ್ ಕೂಟವೂ ತನ್ನ ವೈವಿಧ್ಯತೆಯ ಕಾರಣಕ್ಕಾಗಿ ಸುದ್ದಿಗೀಡಾಯಿತು. ಹಿಂದೂ-ಕ್ರೈಸ್ತ, ಇಸ್ಲಾಮ್, ಜೈನ ಮತ್ತು ರಾಮಕೃಷ್ಣಾಶ್ರಮದ ಒಬ್ಬೊಬ್ಬ ವಿದ್ವಾಂಸರು ಬಂದು ತಂತಮ್ಮ ಧರ್ಮದ ಮೂಲ ವಿಚಾರಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ಮೈಸೂರಿನಲ್ಲೂ ಒಂದು ವಿಶಿಷ್ಟ ಕೂಟ ನಡೆಯಿತು. ‘ದ್ರಾವಿಡ ಮಕ್ಕಳ ಊಟದ ಕೂಟ’ ಎಂದು ಕರೆಯಲಾದ ಈ ಇಫ್ತಾರ್ ಕೂಟವನ್ನು ಸುರೇಶ್ ಕಂಜರ್ಪಣೆ, ಆರಾಧ್ಯ ಮತ್ತು ರೂಪ ಪ್ರಕಾಶನದ ಮಹೇಶ್ ಮುಂತಾದವರು ಏರ್ಪಡಿಸಿದರು. ಗ್ಯಾರೇಜು, ಹಣ್ಣಿನಂಗಡಿ, ಪಂಚರ್ ಶಾಪ್.. ಇತ್ಯಾದಿಗಳಲ್ಲಿ ದುಡಿಯುವ ಶ್ರಮಿಕ ಮುಸ್ಲಿಮ್ ಮನಸುಗಳನ್ನು ಹುಡುಕಾಡಿ ಒಂದೇ ಕಡೆ ಸೇರಿಸಿ ಅವರಿಗೆಂದೇ ಮಾಡಲಾದ ಇಫ್ತಾರ್ ಕೂಟ ಇದು. ಬೆಂಗಳೂರಿನಲ್ಲಿ ಮೀನಾಕ್ಷಿ ಅಮ್ಮ ಹಲವರನ್ನು ಕರೆದು ಇಫ್ತಾರ್ ಮಾಡಿಸಿದ ಸುದ್ದಿಯೂ ಬಂದಿದೆ. ಇಂಥ ಬಿಡಿ ಪ್ರಕರಣಗಳು ಬೇರೆಯೂ ಇದ್ದೀತು. ಅಂದಹಾಗೆ,
ಇಲ್ಲಿ ಇಫ್ತಾರ್ ಎಂಬುದು ಒಂದು ನೆಪಮಾತ್ರ. ಹಿಂದೂ-ಮುಸ್ಲಿಮ್ ಜೊತೆ ಸೇರುವುದಕ್ಕೆ ಮತ್ತು ಅವರು ಪರಸ್ಪರ ಮಾತಾಡಿಕೊಂಡು ಮನಸು ಹಗುರಗೊಳಿಸುವುದಕ್ಕೆ ತಯಾರಿಸಲಾದ ವೇದಿಕೆಗಳು ಇವು ಎಂದೇ ಇದನ್ನು ವ್ಯಾಖ್ಯಾನಿಸಬಹುದು. ಅಷ್ಟಕ್ಕೂ, ಇಂಥ ಅಗತ್ಯಗಳು ಯಾಕೆ ಬಂದುವು? ಹಿಂದೂ-ಮುಸ್ಲಿಮರು ಪರಸ್ಪರ ಮಾತಾಡುವುದು, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು ಮತ್ತು ತಮಾಷೆಯನ್ನಾಡುವುದೆಲ್ಲ ದುಸ್ತರವಾಗಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಕಾಡಬಲ್ಲದು. ಇತ್ತಿತ್ತಲಾಗಿ ಇಂಥ ಪ್ರಶ್ನೆಗಳು ಮತ್ತೆ ಮತ್ತೆ ಕೇಳಿಸಲ್ಪಡುತ್ತಲೇ ಇವೆ.
ಹಿಂದೂ ಮತ್ತು ಮುಸ್ಲಿಮರ ನಡುವೆ ಕಂದಕಗಳನ್ನು ತೋಡಲಾಗ್ತಾ ಇದೆ. ಮುಸ್ಲಿಮರು ಈ ಮಣ್ಣಿಗೆಅನ್ಯ ಎಂಬ ಪ್ರಚಾರ ಮಾಡಲಾಗ್ತಾ ಇದೆ. ಮುಸ್ಲಿಮ್ ನಾಮಧೇಯನೋರ್ವ ಮಾಡುವ ಯಾವುದೇ ಕೆಟ್ಟ ಕೃತ್ಯವನ್ನು ಇಡೀ ಮುಸ್ಲಿಮ್ ಸಮುದಾಯದ ಮೇಲೆ ಆರೋಪಿಸಿ ಕಟಕಟೆಯಲ್ಲಿ ನಿಲ್ಲಿಸಲಾಗ್ತಾ ಇದೆ. ಕಳೆದು ಹೋದ ಮುಸ್ಲಿಮ್ ರಾಜರನ್ನು ಎತ್ತಿಕೊಂಡು ಈಗಿನ ಮುಸ್ಲಿಮರ ಯೋಗ್ಯತೆಯನ್ನು ಅಳೆಯಲಾಗ್ತಾ ಇದೆ. ಮುಸ್ಲಿಮ್ ಐಡೆಂಟಿಟಿಯನ್ನು ಪ್ರಶ್ನಿಸುವ, ಅವಹೇಳನಕ್ಕೆ ಒಳಪಡಿಸುವ ಮತ್ತು ನಿಷೇಧಕ್ಕೆ ಒತ್ತಾಯಿಸುವ ರೀತಿಯ ಮಾತು-ಕೃತಿಗಳನ್ನು ಪ್ರಭುತ್ವದಿಂದ ತೊಡಗಿ ಮಾಧ್ಯಮ ಸಂಸ್ಥೆಗಳ ವರೆಗೆ ನಡೆಯುತ್ತಲೂ ಇದೆ. ಇಂಥ ಸ್ಥಿತಿಯಲ್ಲಿ ಸೌಹಾರ್ದ ವೇದಿಕೆಗಳು ಖಂಡಿತ ಮುಖ್ಯವಾಗುತ್ತವೆ. ಹಿಂದೂ-ಮುಸ್ಲಿಮರನ್ನು ವಿಭಜಿಸುವ ನೊಗವನ್ನು ಪ್ರಭುತ್ವವೇ ಹೊತ್ತುಕೊಂಡ ಸ್ಥಿತಿಯಲ್ಲಂತೂ ಇಲ್ಲಿ ಸೌಹಾರ್ದದ ವೇದಿಕೆಗಳು ಬಹು ಮಹತ್ವಪೂರ್ಣ ಅನ್ನಿಸಿಕೊಳ್ಳುತ್ತವೆ. ಯಾವುದೇ ಪ್ರಭುತ್ವದ ಜನ ವಿರೋಧಿ ಹುನ್ನಾರಗಳು ಏನೇ ಇರಲಿ, ಅದನ್ನು ವಿಫಲಗೊಳಿಸುವುದಕ್ಕೆ ಜಾಗೃತ ಜನಸಮೂಹದಿಂದ ಮಾತ್ರ ಸಾಧ್ಯ. ಎಲ್ಲೆಲ್ಲಾ ಬಿರುಕುಗಳನ್ನು ಮೂಡಿಸಲಾಗಿದೆಯೋ ಅಲ್ಲೆಲ್ಲಾ ಜೋಡಿಸುವ ಶ್ರಮಗಳನ್ನು ಹಿಂದೂ-ಮುಸ್ಲಿಮ್ ಎನ್ನದೇ ಎಲ್ಲರೂ ಜೊತೆಸೇರಿ ಮಾಡಬೇಕು. ಅಂದಹಾಗೆ,
ಇಫ್ತಾರ್ ಆಗಲಿ, ದೀಪಾವಳಿ, ಚೌತಿಯಾಗಲಿ ಎಲ್ಲಕ್ಕೂ ಧಾರ್ಮಿಕವಾದ ಹಿನ್ನೆಲೆಯಿದೆ. ಧರ್ಮ ಇಲ್ಲದೇ ಇರುತ್ತಿದ್ದರೆ ಈ ಪದಗುಚ್ಚಗಳೇ ಇರುತ್ತಿರಲಿಲ್ಲ. ಹಿಂದೂ ಮತ್ತು ಇಸ್ಲಾಮ್ ಧರ್ಮಗಳ ಆಚರಣೆ, ಆರಾಧನಾ ರೂಪ ಮತ್ತು ತತ್ವಗಳಲ್ಲಿ ಭಿನ್ನತೆ ಇದ್ದರೂ ಇವುಗಳನ್ನು ಆಚರಿಸುವವರು ಮನುಷ್ಯರೆಂಬ ಏಕರೂಪಿಗಳು. ಹಿಂದೂ ಧರ್ಮವನ್ನು ಶ್ರದ್ಧೆಯಿಂದ ಅನುಸರಿಸುವ ಮತ್ತು ಇಸ್ಲಾಮ್ ಧರ್ಮವನ್ನು ಕಟ್ಟುನಿಟ್ಟಾಗಿ ಆಚರಿಸುವ ಇಬ್ಬರು ವ್ಯಕ್ತಿಗಳ ದೈಹಿಕ ರಚನೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಹಿಂದೂ ವ್ಯಕ್ತಿಯ ದೇಹದಲ್ಲಿ ಕಣ್ಣು, ಮೂಗು, ಕಿವಿ, ಕೈ, ಕಾಲು, ಬೆರಳು, ತಲೆ ಇತ್ಯಾದಿ ಎಲ್ಲ ಅಂಗಗಳು ಎಲ್ಲೆಲ್ಲಿ ಇರುತ್ತವೋ ಅದೇ ಸ್ಥಿತಿಯಲ್ಲಿ ಮುಸ್ಲಿಮ್ ವ್ಯಕ್ತಿಯ ದೇಹ ರಚನೆಯೂ ಇರುತ್ತದೆ. ಸುಖ-ದುಃಖ, ಹಸಿವು, ನೋವು, ಕಾಯಿಲೆ ಇತ್ಯಾದಿಗಳಲ್ಲೂ ಈ ಎರಡೂ ಧರ್ಮವನ್ನಾ ಚರಿಸುವವರ ನಡುವೆ ವ್ಯತ್ಯಾಸ ಇರುವುದಿಲ್ಲ. ಅಲ್ಲದೇ, ಈ ಎರಡೂ ಧರ್ಮಾನುಯಾಯಿಗಳ ನಡುವೆ ಸಮಾನಾಂಶವನ್ನು ಹುಡುಕ ಹೊರಟರೆ ಆರಾಧನೆಯ ಕೆಲವು ಮೂಲಭೂತ ಅಂಶಗಳ ಹೊರತು ವ್ಯತ್ಯಾಸಗಳು ಬಹಳ ಕಡಿಮೆ. ಹಾಗಿದ್ದೂ, ಮುಸ್ಲಿಮ್ ದ್ವೇಷದ ಮಾತುಗಳಿಗೆ ಹೇಗೆ ಮಾರುಕಟ್ಟೆ ಲಭ್ಯವಾಗುತ್ತಿದೆ ಎಂಬ ಪ್ರಶ್ನೆ ಸಹಜ. ಅಂದಹಾಗೆ,
ಯಾವುದೇ ದ್ವೇಷದ ಮಾತು ಜನಪ್ರಿಯಗೊಳ್ಳಬೇಕಾದರೆ ಅದಕ್ಕೆ ಇಬ್ಬರ ಬೆಂಬಲ ಬೇಕಾಗುತ್ತದೆ. 1. ಪ್ರಭುತ್ವ, 2. ಮೌನಿ ಜನರು. ಹಾಗೆಯೇ,
ಯಾವುದೇ ಪ್ರಭುತ್ವ ದ್ವೇಷದ ಮಾತುಗಳ ಮೊರೆ ಹೋಗಬೇಕಾದರೆ ಎರಡು ಬಹುಮುಖ್ಯ ಕಾರಣಗಳು ಬೇಕಾಗುತ್ತವೆ. 1. ಆಡಳಿತಾತ್ಮಕ ವೈಫಲ್ಯ, 2. ಹುಸಿ ನಂಬಿಕೆಗಳು.
ಸದ್ಯ ಈ ದೇಶದಲ್ಲಿ ನಡೆಯುತ್ತಿರುವ ಧರ್ಮದ್ವೇಷದ ಮಾತುಗಳನ್ನು ಪ್ರಭುತ್ವ ಎಷ್ಟು ಪೋಷಿಸುತ್ತಾ ಇದೆಯೋ ಅಷ್ಟೇ ಅಥವಾ ಅದಕ್ಕಿಂತಲೂ ಮಿಗಿಲಾಗಿ ನಾಗರಿಕರ ಮೌನವೂ ಪೋಷಿಸುತ್ತಾ ಇದೆ. ಹಾಗಂತ, ಈ ನಾಗರಿಕರು ದ್ವೇಷದ ಬೆಂಬಲಿಗರು ಎಂದಲ್ಲ. ‘ಇದು ತಮಗೆ ಸಂಬಂಧಿಸಿದ್ದಲ್ಲ, ನಾವು ಸುಖವಾಗಿದ್ದೇವೆ’ ಎಂಬ ಸುರಕ್ಷಿತ ಭಾವವೂ ಇಂಥ ಮೌನಕ್ಕೆ ಕಾರಣ. ದ್ವೇಷ ಹರಡುವವರು ಮತ್ತು ಪ್ರಭುತ್ವ ಇಂಥವರ ಮೌನವನ್ನು ಸದಾ ಪ್ರೀತಿಸುತ್ತಲೇ ಇರುತ್ತದೆ. ಇವರ ಮೌನವೇ ದ್ವೇಷಿಸುವವರ ಗೆಲುವು. ಯಾರಾದರೂ ಇಂಥ ಮೌನದ ಚೌಕಟ್ಟಿನಿಂದ ಹೊರಬಂದು ದ್ವೇಷವನ್ನು ಪ್ರಶ್ನಿಸತೊಡಗುತ್ತಾರೋ ಆಗ ಅವರನ್ನು ಹೀಗಳೆಯುವ ಮತ್ತು ಮೌನಗೊಳಿಸುವ ಪ್ರಯತ್ನಗಳು ನಡೆಯುತ್ತವೆ. ಇದೊಂದು ಸಹಜ ಪ್ರಕ್ರಿಯೆ. ಇಫ್ತಾರ್ ಕೂಟವನ್ನು ಏರ್ಪಡಿಸಿದವರಿಗೂ ಇಂಥ ಅ ನುಭವಗಳು ಖಂಡಿತ ಆಗಿರಬಹುದು. ಮಂಗಳೂರಿನಲ್ಲಿ ಆಲದ ಮರದಡಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿಯವರು ಇದನ್ನು ಬಹಿರಂಗವಾಗಿಯೇ ಹೇಳಿಕೊಂಡರು.
ಇಫ್ತಾರ್ ಕೂಟವನ್ನು ರದ್ದುಪಡಿಸುವಂತೆ ತಮ್ಮ ಮೇಲೆ ಬಿದ್ದ ಒತ್ತಡವನ್ನು ಸಭಿಕರ ಮುಂದೆ ವಿವರಿಸಿದರು. ಬೆದರಿಕೆ ಮತ್ತು ಒತ್ತಡವನ್ನು ಹಾಕುವುದೇ ದ್ವೇಷದ ವಕ್ತಾರರ ಯಶಸ್ಸಿನ ಸೂತ್ರ. ಎರಡೂ ಧರ್ಮದ ಜನರು ಒಟ್ಟುಸೇರಿ ಎಲ್ಲಿ ದ್ವೇಷದ ಮಾತುಗಳ ಹುನ್ನಾರವನ್ನು ಅರಿತುಕೊಳ್ಳುತ್ತಾರೋ ಎಂಬ ಭಯ ಅವರನ್ನು ಸದಾ ಕಾಡುತ್ತಲೇ ಇರುತ್ತದೆ. ಆದ್ದರಿಂದಲೇ ಹಿಂದೂ-ಮುಸ್ಲಿಮ್ ಜೊತೆ ಸೇರುವ ಯಾವುದೇ ಸಂದರ್ಭವನ್ನು ಅವರು ಭಯದಿಂದಲೇ ನೋಡುತ್ತಾರೆ. ಅಂಥ ಸಂದರ್ಭಗಳನ್ನು ವಿಫಲಗೊಳಿಸುವ ಹುನ್ನಾರಗಳನ್ನು ನಡೆಸುತ್ತಿರುತ್ತಾರೆ. ಈ ಕಾರಣಕ್ಕಾಗಿಯೇ ಈ ಮೇಲೆ ಉಲ್ಲೇಖಿಸಲಾದ ಮತ್ತು ಉಲ್ಲೇಖಿಸದೇ ಇರುವ ಇಫ್ತಾರ್ ಕೂಟಗಳು ಮುಖ್ಯವಾಗುತ್ತವೆ. ಇದು ಇಫ್ತಾರ್‌ಗೇ ಸೀಮಿತಗೊಳ್ಳಬಾರದು. ಚೌತಿ, ದೀಪಾವಳಿಯಂಥ ಸಂದರ್ಭಗಳನ್ನೂ ಇಂಥದ್ದೇ ಕೂಡುವಿಕೆಗೆ ನೆಪವಾಗಿ ಬಳಸಿಕೊಳ್ಳಬೇಕು. ಮುಸ್ಲಿಮರೇ ಇಂಥದ್ದೊಂದು ಸಂದರ್ಭವನ್ನು ಸೃಷ್ಟಿಸಿ ಹಿಂದೂ-ಮುಸ್ಲಿಮರನ್ನು ಆಹ್ವಾನಿಸಿ ಸಹಜ ಸಂವಹನಕ್ಕೆ ವೇದಿಕೆ ರೂಪಿಸಬೇಕು. ಸಂವಹನ ಅಧಿಕವಾದಷ್ಟೂ ದ್ವೇಷದ ಬಲೂನು ಒಡೆಯುತ್ತಲೇ ಹೋಗುತ್ತದೆ. ಕೊನೆಗೊಂದು ದಿನ ದ್ವೇಷ ಬೆಂಬಲಿಗರಿಲ್ಲದೇ ಒಂಟಿಯಾಗುತ್ತದೆ. ಯಾಕೆಂದರೆ, ದ್ವೇಷ- ಧರ್ಮ ಅಲ್ಲ, ಅಧರ್ಮ.