Monday, 29 August 2022

ಬಿಲ್ಕಿಸ್ ಬಾನು: ಅತ್ಯಾಚಾರದ ಅಪರಾಧಿಗಳಿಗೆ ಸಿಹಿತಿನಿಸಿನ ಸ್ವಾಗತ ಕೋರಿದ ಭಾರತ

 


ಜಸ್ವಂತ್ ನೈ, ಗೋವಿಂದ್ ನೈ, ಶೈಲೇಶ್ ಭಟ್, ರಾಧೇಶ್ಯಾಂ ಭಗವಾನ್ ದಾಸ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರ್‌ಭಾಯ್  ವೊಹಾನಿಯಾ, ಪ್ರದೀಪ್ ಮೊರ್ಧಿಯಾ, ಬಕಭಾಯ್ ವೊಹಾನಿಯಾ, ರಾಜುಭಾಯ್  ಸೋನಿ, ಮಿತೇಶ್ ಭಟ್, ರಮೇಶ್ ಚಂದನ- ಇವೆಲ್ಲ  ಕಳೆದವಾರ ಮುಕ್ತಾಯಗೊಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಪಡೆದವರ ಹೆಸರುಗಳಲ್ಲ. ಈ ದೇಶ ಮಾತ್ರವಲ್ಲ, ಜಗತ್ತನ್ನೇ  ಬೆಚ್ಚಿಬೀಳಿಸಿದ ಅತ್ಯಾಚಾರ ಮತ್ತು ಹತ್ಯಾಕಾಂಡದ ಅಪರಾಧಿಗಳು ಇವರು. 2008ರಲ್ಲಿ ಬಾಂಬೆ ಹೈಕೋರ್ಟ್ ಇವರಿಗೆ ಜೀವಾವಧಿ ಶಿಕ್ಷೆ  ವಿಧಿಸಿತ್ತು. ಇದೀಗ ಗುಜರಾತ್‌ನ ಬಿಜೆಪಿ ಸರ್ಕಾರ ಇವರನ್ನೆಲ್ಲ ಬಿಡುಗಡೆಗೊಳಿಸಿದೆ. 15 ವರ್ಷಕ್ಕಿಂತಲೂ ಅಧಿಕ ಸಮಯದಿಂದ ಇವರು  ಜೈಲಲ್ಲಿದ್ದಾರೆ ಎಂಬುದು ಈ ಬಿಡುಗಡೆಗೆ ಕೊಟ್ಟಿರುವ ಕಾರಣ. ಇದಕ್ಕಿಂತಲೂ ಆಘಾತಕಾರೀ ಸಂಗತಿ ಏನೆಂದರೆ, ಇವರ ಹಣೆಗೆ ತಿಲಕ ಇರಿಸಿ, ಸಿಹಿತಿನಿಸು ತಿನ್ನಿಸಿ ಸ್ವಾಗತಿಸಲಾಗಿದೆ. ಹಾಗಂತ, ಇಂಥ ಸ್ವಾಗತ ಸಿಕ್ಕಿದ್ದು ಇವರ ಗ್ರಾಮದಲ್ಲೋ ಇನ್ನಾವುದೋ ಕುಗ್ರಾಮದಲ್ಲೋ ಅಲ್ಲ. ಗೋಧ್ರಾ ಜೈಲಿನ ಗೇಟಿನ  ಹೊರಗಡೆಯೇ ಈ ಬೆಳವಣಿಗೆ ನಡೆದಿದೆ. ಒಂದು ಪ್ರಭುತ್ವದ ಕಣ್ಣಿಗೆ ಧರ್ಮದ್ವೇಷದ ಪೊರೆ ಕವಿದು ಬಿಟ್ಟರೆ ಏನಾಗಬಹುದು ಎಂಬುದಕ್ಕೆ ಈ ಪ್ರಕರಣ ಒಂದು ಅತ್ಯುತ್ತಮ ಉದಾಹರಣೆ.

ಈ 11 ಮಂದಿಗೆ ಸಿಬಿಐ ವಿಚಾರಣಾ ನ್ಯಾಯಾಲಯವು ಜೀವಾವಿಧಿ ಶಿಕ್ಷೆಯನ್ನು ವಿಧಿಸಿದಾಗ ಈ ದೇಶದ ಸನ್ಮನಸ್ಸುಗಳು ಆ ಶಿಕ್ಷೆಯನ್ನು  ಒಪ್ಪಿರಲಿಲ್ಲ. ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆಯೇ ಸರಿ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೇ, ಸ್ವತಃ ಸಿಬಿಐಯೇ ಇಂಥದ್ದೊಂದು  ನಿಲುವನ್ನು ಹೊಂದಿತ್ತು ಮಾತ್ರವಲ್ಲ, ಇವರನ್ನು ಗಲ್ಲಿಗೇರಿಸುವಂತೆ ಅದು ಬಾಂಬೆ ಹೈಕೋರ್ಟ್ ನ  ಮೆಟ್ಟಿಲೇರಿತ್ತು. ಆದರೆ ಹೈಕೋರ್ಟ್ ಈ ಮನವಿಯನ್ನು ಮಾನ್ಯ ಮಾಡಿರಲಿಲ್ಲ. ಅಷ್ಟಕ್ಕೂ, ಇವರ ಮೇಲೆ ಇಷ್ಟೊಂದು ತೀವ್ರವಾಗಿ ಆಕ್ರೋಶ ವ್ಯಕ್ತವಾಗಲು ಕಾರಣವೇನು ಎಂಬ ಪ್ರಶ್ನೆ  ಇರಬಹುದು. ಅದುವೇ ಬಿಲ್ಕೀಸ್ ಬಾನು ಪ್ರಕರಣ.

2002 ಫೆಬ್ರವರಿ 27ರಂದು ಗುಜರಾತ್‌ನ ಗೋಧ್ರಾ ರೈಲು ದಹನ ಪ್ರಕರಣದಲ್ಲಿ 59 ಕರಸೇವಕರು ಬೆಂಕಿಗಾಹುತಿಯಾದರು. ಆ ಬಳಿಕ  ಗುಜರಾತ್‌ನಲ್ಲಿ ದಂಗೆ ಸ್ಫೋಟಗೊಂಡಿತು. ಜನರು ವಿಶೇಷವಾಗಿ ಮುಸ್ಲಿಮರು ಸುರಕ್ಷಿತ ಸ್ಥಳಕ್ಕೆ ಪಲಾಯನ ಮಾಡತೊಡಗಿದರು. 2002  ಮಾರ್ಚ್ 3ರಂದು ಬಿಲ್ಕೀಸ್ ಬಾನು ಮತ್ತು ಆಕೆಯ ಕುಟುಂಬದವರೂ ಸೇರಿ 17 ಮಂದಿ ಟ್ರಕ್‌ನಲ್ಲಿ ಸುರಕ್ಷಿತ ಸ್ಥಳಕ್ಕೆಂದು  ಹೊರಟಿದ್ದರು. ಇವರಲ್ಲಿ 4 ಮಹಿಳೆಯರು ಮತ್ತು 4 ಮಕ್ಕಳು. ಬಿಲ್ಕೀಸ್ ಬಾನುಗೆ ಆಗ 21 ವರ್ಷ. 5 ತಿಂಗಳ ಗರ್ಭಿಣಿ. ಅವರನ್ನು  ಹೊತ್ತ ಟ್ರಕ್ಕು ದಹೋದ್ ಜಿಲ್ಲೆಯ ರಂಧಿಕ್‌ಪುರ್ ಎಂಬಲ್ಲಿಗೆ ತಲುಪಿದಾಗ ಸುಮಾರು 30-35 ಮಂದಿಯ ಗುಂಪು ಹಠಾತ್ ದಾಳಿ  ನಡೆಸಿತು. ಬಿಲ್ಕೀಸ್‌ಳ ಎರಡು ವರ್ಷದ ಮಗಳು ಸಹೇಲಾಳ ತಲೆಯನ್ನು ಆಕೆಯ ಕಣ್ಣೆದುರೇ ಜಜ್ಜಿ ಗುಂಪು ಸಾಯಿಸಿ ಬಿಟ್ಟಿತು. ಬಿ ಲ್ಕೀಸ್‌ಳ ಮೇಲೆ ಗ್ಯಾಂಗ್ ರೇಪ್ ನಡೆಯಿತು. ಆಕೆಯ ಕುಟುಂಬದ 7 ಮಂದಿಯೂ ಸೇರಿ 
ಒಟ್ಟು 14 ಮಂದಿಯ ಹತ್ಯೆಯೂ ನಡೆಯಿತು. ಬಿಲ್ಕಿಸ್  ಸತ್ತಿದ್ದಾರೆಂದು ಭಾವಿಸಿ ಈ ಗುಂಪು ಹೊರಟು ಹೋಯಿತು. ಎಷ್ಟೋ ಸಮಯದ ಬಳಿಕ ಪ್ರಜ್ಞೆ ಬಂದು ಎಚ್ಚೆತ್ತ ಬಿಲ್ಕಿಸ್ ನಗ್ನರಾಗಿದ್ದರು.  ಸುತ್ತಲೂ ತನ್ನ ಕುಟುಂಬದವರ ಶವಗಳು. ದೂರದಲ್ಲೆಲ್ಲೋ  ಬಿದ್ದಿದ್ದ ಪೆಟಿಕೋಟನ್ನು ಧರಿಸಿಕೊಂಡು ಬಿಲ್ಕಿಸ್ ಪಕ್ಕದ ಗುಡ್ಡ ಹತ್ತಿದರು.  ಅಲ್ಲಿನ ಬುಡಕಟ್ಟು ಜನರು ಆಕೆಗೆ ಆಶ್ರಯ ನೀಡಿದರು. ಇದು ಕ್ರೌರ್ಯದ ಒಂದು ಭಾಗ ಮಾತ್ರ. ಅಲ್ಲಿಗೇ ಆ ಹೆಣ್ಣು ಮಗಳ ಸಂಕಟ  ಕೊನೆಗೊಳ್ಳುವುದಿಲ್ಲ.

21 ವರ್ಷದ ಮತ್ತು ಜರ್ಜರಿತ ಅನುಭವಗಳುಳ್ಳ ಆ ತರುಣಿ ತನ್ನ ಮೇಲಾದ ಕ್ರೌರ್ಯವನ್ನು ಪೊಲೀಸರ ಮುಂದೆ ಹೇಳಿಕೊಳ್ಳುತ್ತಾರೆ.  ಇದಾದ ಒಂದು ವರ್ಷದ ಬಳಿಕ ಆ ಪ್ರಕರಣವನ್ನೇ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸುತ್ತದೆ. ಇದಕ್ಕೆ ಕಾರಣ ಪೊಲೀಸರ  ನಿಷ್ಕ್ರಿಯತೆ. ಅವರು ಆ ಘಟನೆಗೆ ಪೂರಕವಾದ ಯಾವ ಸಾಕ್ಷ್ಯಾಧಾರವನ್ನೂ ಸಂಗ್ರಹಿಸಿರಲೇ ಇಲ್ಲ. ಅಲ್ಲದೇ ಸಾಕ್ಷ್ಯಾಧಾರವನ್ನು ನಾಶ  ಮಾಡುವಲ್ಲಿ ಇಬ್ಬರು ಪೊಲೀಸರು ಮತ್ತು ಓರ್ವ ವೈದ್ಯ ಭಾಗಿಯಾಗಿರುವುದನ್ನು ಆ ಬಳಿಕ ಬಾಂಬೇ ಹೈಕೋರ್ಟ್ ಪತ್ತೆ ಮಾಡಿತ್ತು  ಮತ್ತು ಈ ಮೂವರಿಗೆ 3 ವರ್ಷಗಳ ಶಿಕ್ಷೆಯನ್ನೂ ವಿಧಿಸಿತ್ತು.

ಮ್ಯಾಜಿಸ್ಟ್ರೇಟ್ ಕೋರ್ಟ್ ನ  ತೀರ್ಪನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದರು ಮತ್ತು  ಸುಪ್ರೀಮ್ ಕೋರ್ಟ್ ನ  ಬಾಗಿಲನ್ನು ತಟ್ಟಿದರು. ಸುಪ್ರೀಮ್ ಕೋರ್ಟ್ ಈ ಪ್ರಕರಣವನ್ನು 2003ರಲ್ಲಿ ಸಿಬಿಐಗೆ ವಹಿಸಿಕೊಟ್ಟಿತು. ಆ ಬಳಿಕ  ಪ್ರಕರಣದ ತನಿಖೆ ಚುರುಕು ಪಡೆಯಿತು. ಬಿಲ್ಕಿಸ್ ಬಾನು ಹೆಸರಿಸಿದ ಎಲ್ಲ 20 ಆರೋಪಿಗಳನ್ನೂ ಸಿಬಿಐ ಬಂಧಿಸಿತು ಮತ್ತು  ಹತ್ಯೆಗೊಳಗಾದವರ ಶವವನ್ನು ಮೇಲಕ್ಕೆತ್ತಿ ಪರಿಶೀಲನೆ ನಡೆಸಿತು. ಈ ನಡುವೆ ಬಿಲ್ಕಿಸ್ ಬಾನು ಬದುಕು ಸುಲಭದ್ದೇನೂ ಆಗಿರಲಿಲ್ಲ.  ಆಕೆಗೆ ಪದೇಪದೇ ಜೀವ ಬೆದರಿಕೆ ಬರುತ್ತಲೇ ಇತ್ತು. ಕೇವಲ ಎರಡೇ ವರ್ಷಗಳಲ್ಲಿ ಆಕೆ 20 ಬಾರಿ ತನ್ನ ನಿವಾಸವನ್ನು ಬದಲಿಸಿದ್ದರು.  ಈ ಬೆದರಿಕೆಯ ಮಧ್ಯೆ ವಿಚಾರಣೆಗೆ ಹಾಜರಾಗಲು ಕಷ್ಟ ಸಾಧ್ಯ ಎಂದು ಕಂಡುಕೊಂಡ  ಆಕೆ, ಇಡೀ ಪ್ರಕರಣವನ್ನು ಗುಜರಾತ್‌ನಿಂದ  ಬೇರೆಡೆಗೆ ವರ್ಗಾಯಿಸುವಂತೆ ಸುಪ್ರೀಮ್ ಕೋರ್ಟ್ ಗೆ  ಮನವಿ ಮಾಡಿಕೊಂಡರು. 2004ರಲ್ಲಿ ಈ ಪ್ರಕರಣವನ್ನು ಸುಪ್ರೀಮ್ ಕೋರ್ಟು  ಬಾಂಬೆಗೆ ವರ್ಗಾಯಿಸಿತು. ಇದಾಗಿ ನಾಲ್ಕು ವರ್ಷಗಳ ಬಳಿಕ ಸಿಬಿಐ  ವಿಚಾರಣಾ ನ್ಯಾಯಾಲಯ 20 ಆರೋಪಿಗಳ ಪೈಕಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇದನ್ನು ಸಿಬಿಐ ಒಪ್ಪಿಕೊಳ್ಳಲಿಲ್ಲ. ವಿಶೇಷವಾಗಿ ಜಸ್ವಂತ್ ನೈ, ಗೋವಿಂದ್ ನೈ ಮತ್ತು ಶೈಲೇಶ್ ಭಟ್‌ರ ನ್ನು ಗಲ್ಲಿಗೇರಿಸಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್ ನ  ಮೇಟ್ಟಲೇರಿತು. ಆದರೆ ಬಾಂಬೆ ಹೈಕೋರ್ಟ್ ಈ ಮನವಿಯನ್ನು  ಪುರಸ್ಕರಿಸಲಿಲ್ಲ ಮತ್ತು ಬಿಡುಗಡೆಗೊಳಿಸಲಾದ 7 ಮಂದಿ ಈಗಾಗಲೇ ಜೈಲಲ್ಲಿದ್ದುಕೊಂಡು ಅವರಿಗೆ ವಿಧಿಸಬೇಕಾದ ಶಿಕ್ಷಾ ಅವಧಿಯನ್ನು  ಅನುಭವಿಸಿದ್ದಾರೆ ಎಂದು ತೀರ್ಪಿತ್ತಿತು.

ಇದೀಗ ಈ ಭೀಭತ್ಸ ಕ್ರೂರಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದೆ. ಈ ಬಿಡುಗಡೆಯ ಹಿನ್ನಲೆಯಲ್ಲಿ ನಡೆದ ಬೆಳವಣಿಗೆಯನ್ನು  ನೋಡುವಾಗ ಸರ್ಕಾರಕ್ಕೆ ಸಂಬಂಧಿಸಿದವರೇ ಹೆಣೆದ ಚಿತ್ರಕತೆ ಇದಾಗಿರಬಹುದೇ ಎಂಬ ಸಂದೇಹ ಮೂಡುತ್ತದೆ. ಜೀವಾವಧಿ ಶಿಕ್ಷೆಗೆ  ಒಳಗಾಗಿದ್ದ ಅಪರಾಧಿಗಳ ಪೈಕಿ ರಾಧೇಶ್ಯಾಮ್ ಎಂಬವ  ಇತ್ತೀಚೆಗೆ ಸನ್ನಡತೆ ಆಧಾರದಲ್ಲಿ  ಬಿಡುಗಡೆಗಾಗಿ ಸುಪ್ರೀಮ್ ಕೋರ್ಟ್ ಗೆ  ಮನವಿ ಮಾಡಿದ್ದ. ಸುಪ್ರೀಮ್  ಕೋರ್ಟು ಸಹಜವಾಗಿಯೇ ಈ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿತ್ತು. ಕ್ಷಮಾದಾನ ನೀತಿಯಡಿ ಈ ಅರ್ಜಿಯನ್ನು  ಪರಿಶೀಲಿಸುವಂತೆಯೂ ಅದು ಸರ್ಕಾರಕ್ಕೆ ಆದೇಶ ನೀಡಿತ್ತು. ಇದನ್ನೇ ಕಾಯುತ್ತಿರುವಂತೆ ನಡಕೊಂಡ ಸರ್ಕಾರವು ಪಂಚಮಹಲ್  ಜಿಲ್ಲಾಧಿಕಾರಿ ಸುಜಲ್ ಮಾಯಾತ್ರ ಅವರ ನೇತೃತ್ವದಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಿತು. ಆ ಸಮಿತಿಯು ಇವರ ಬಿಡುಗಡೆಗೆ ಶಿಫಾರಸು ಮಾಡಿತು. ಅದರ ಆಧಾರದಲ್ಲೇ  ಸರ್ಕಾರ ಇದೀಗ ಇವರನ್ನೆಲ್ಲಾ  ಬಿಡುಗಡೆ ಮಾಡಿ ಕೈ ತೊಳೆದುಕೊಂಡಿದೆ. ಇಲ್ಲಿ ಇನ್ನೂ ಒಂದು ಪ್ರಮುಖ ಸಂಗತಿಯಿದೆ. ಅತ್ಯಾಚಾರಿ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಬಾರದೆಂದು ಕೇಂದ್ರ ಸರ್ಕಾರದ  ನಿಯಮವಿದೆ. ಆದ್ದರಿಂದ ಗುಜರಾತ್ ಸರ್ಕಾಯೆಯಾದ 1992 ರ ನಿಯಮದನ್ವಯ ಈ ಬಿಡುಗಡೆಯನ್ನು ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಅಷ್ಟಕ್ಕೂ ಈ ನಿಯಮವನ್ನು ಗುಜರಾತ್ ಸರ್ಕಾರ 2014ರಲ್ಲಿ ತಿದ್ದುಪಡಿ ಮಾಡಿತ್ತು. ಆದರೆ, ಬಿಲ್ಕಿಸ್ ಪ್ರಕರಣ ನಡೆಯುವಾಗ 1992ರ ನಿಯಮವಿದ್ದುದರಿಂದ ಆ ನಿಯಮವನ್ನೇ ಇವರ ಬಿಡುಗಡೆಗೆ ಅನ್ವಯಿಸಲಾಗಿದೆ ಎಂದು ಸರ್ಕಾರ ಸಮರ್ಥನೆ ನೀಡಿದೆ.   ನಿಜವಾಗಿ,

ಬಿಲ್ಕೀಸ್ ಬಾನು ಪ್ರಕರಣವು ಸಾಮಾನ್ಯ ರೇಪ್ ಆ್ಯಂಡ್ ಮರ್ಡರ್ ಪಟ್ಟಿಯಲ್ಲಿ ಸೇರುವ ಕ್ರೌರ್ಯ ಅಲ್ಲ. ಜೀವಭಯದಿಂದ ಪಲಾಯನ  ಮಾಡುತ್ತಿದ್ದ ನಿಷ್ಪಾಪಿ ಜನರನ್ನು ಹತ್ಯೆ ಮಾಡಿದ ಮತ್ತು 5 ತಿಂಗಳ ಗರ್ಭಿಣಿಯನ್ನು ಸರದಿಯಲ್ಲಿ ನಿಂತು ಅತ್ಯಾಚಾರ ಮಾಡಿದ ಭೀಭತ್ಸ  ಪ್ರಕರಣ. ಈ ಕ್ರೌರ್ಯಕ್ಕೆ ಧರ್ಮದ್ವೇಷದ ಹೊರತು ಇನ್ನಾವ ಕಾರಣವೂ ಇರಲಿಲ್ಲ. ಅದರಲ್ಲೂ 5 ತಿಂಗಳ ಗರ್ಭಿಣಿಯನ್ನು ಅತ್ಯಾಚಾರ  ಮಾಡುತ್ತಾರೆಂದರೆ ಮತ್ತು 2 ವರ್ಷದ ಮಗುವಿನ ತಲೆಯನ್ನು ತಾಯಿಯ ಕಣ್ಣೆದುರೇ ನೆಲಕ್ಕಿ ಜಜ್ಜಿ ಹತ್ಯೆ ಮಾಡುತ್ತಾರೆಂದರೆ ಅವರು  ಮರಳಿ ನಾಗರಿಕ ಸಮಾಜದಲ್ಲಿ ಬದುಕಿ ಬಾಳುವುದಕ್ಕೆ ಎಷ್ಟು ಮಾತ್ರಕ್ಕೂ ಅನರ್ಹರು. ಸಾಮಾನ್ಯವಾಗಿ,

ಕೋಮು ಹತ್ಯಾಕಾಂಡದಲ್ಲಿ ಭಾಗಿಯಾದ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದೇ ಹೆಚ್ಚು. ಯಾಕೆಂದರೆ, ಸಂತ್ರಸ್ತರು ಮೊದಲೇ  ಭೀತಿಯ ಸ್ಮರಣೆಯಲ್ಲಿರುತ್ತಾರೆ. ತಮ್ಮವರನ್ನು ಕಳಕೊಂಡು ಅಧೀರರಾಗಿರುತ್ತಾರೆ. ಅಲ್ಲದೇ, ಪೊಲೀಸರಿಗೆ ದೂರು ಕೊಡದಂತೆ  ಬೆದರಿಕೆಯೂ ಬರುತ್ತಿರುತ್ತದೆ. ಕೋಮುಗಲಭೆ ಎಂಬುದು ಧರ್ಮದ ನೆಲೆಯಲ್ಲಿ ನಡೆಯುವ ಕ್ರೌರ್ಯವಾಗಿರುವುದರಿಂದ ಅಪರಾಧಿಗಳಿಗೆ  ಆಯಾ ಸಮುದಾಯದ ಪರೋಕ್ಷ ಬೆಂಬಲವೋ ಆಶ್ರಯವೋ ಲಭ್ಯವಾಗಿರುತ್ತದೆ. ಇಂಥ ಪ್ರತಿಕೂಲಕರ ಸ್ಥಿತಿಯಲ್ಲೂ ಬಿಲ್ಕೀಸ್ ಬಾನು  ಒಂಟಿ ಸಲಗದಂತೆ ನ್ಯಾಯಕ್ಕಾಗಿ ಹೋರಾಡಿದರು. ಇಲ್ಲಿನ ನ್ಯಾಯಾಲಯ ಆಕೆಯ ಬೆನ್ನಿಗೂ ನಿಂತಿತು. ಆದರೆ ಇದೀಗ ಸರ್ಕಾರ  ತೆಗೆದುಕೊಂಡ ನಿರ್ಧಾರವು ಧರ್ಮದ್ವೇಷದ ದಂಗೆಯಲ್ಲಿ ಭಾಗಿಯಾಗುವವರಿಗೆ ಪರೋಕ್ಷ  ಧೈರ್ಯ ತುಂಬುವಂತಿದೆ.  ಮಂದಿಯನ್ನು  ಕೊಂದ ಮತ್ತು ಓರ್ವ ಹೆಣ್ಮಗಳನ್ನು ಸಾಮೂಹಿಕ ಅತ್ಯಾಚಾರಗೈದ ಅಪರಾಧಿಗಳು ಜೈಲಿನಿಂದ ಹೊರಬಂದು ನಾಗರಿಕ ಸಮಾಜದಲ್ಲಿ  ಬದುಕುವ ಅವಕಾಶ ಪಡೆಯುತ್ತಾರೆಂದರೆ ಅದು ಸಾರುವ ಸಂದೇಶವೇನು? ಬಿಡುಗಡೆಗೆ ಅವರಿಗಿದ್ದ ಅರ್ಹತೆಯೇನು?

ಹೆಣ್ಣನ್ನು ಪೂಜಿಸುವ ದೇಶದಲ್ಲಿ ಬಿಲ್ಕೀಸ್ ಎಂಬ ಹೆಣ್ಮಗಳಿಗಿಂತ ಆ 11 ಅಪರಾಧಿಗಳೇ ಸರ್ಕಾರಕ್ಕೆ ಮುಖ್ಯವಾದುದು ದುರಂತ,  ವಿಷಾದನೀಯ.