Monday, 30 October 2023

ಧರ್ಮದ್ವೇಷದ ಕಾರ್ಖಾನೆಯಲ್ಲಿ ಉತ್ಪಾದನೆಯಾಗುತ್ತಿರುವ ಸುಳ್ಳುಗಳು

 



ಕಳೆದವಾರ ಎರಡು ಸುದ್ದಿಗಳು ಸದ್ದು ಮಾಡಿದುವು. 

1. ಕೇರಳದ ಕೋಝಿಕೋಡ್‌ನಲ್ಲಿ ಫೆಲೆಸ್ತೀನ್ ಪರ ಮಾಡಲಾದ ರ‍್ಯಾಲಿ.
 2.  ಮಂದಿರದ ಅರ್ಚಕರಿಗೆ ಬ್ಯಾಟ್‌ನಿಂದ ಥಳಿಸಲಾದ ಘಟನೆ.

ಈ ಎರಡೂ ಘಟನೆಗಳಿಗೆ ಸಂಬಂಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಂಚಿಕೆಯಾದುವು. ಟ್ವೀಟರ್,  ಫೇಸ್‌ಬುಕ್ ಮತ್ತು ವಾಟ್ಸಪ್‌ಗಳಲ್ಲಿ ಈ ವೀಡಿಯೋಗಳನ್ನು ಅದಕ್ಕೆ ನೀಡಲಾದ ಒಕ್ಕಣೆಯೊಂದಿಗೆ ಅಸಂಖ್ಯ ಮಂದಿ ಹಂಚಿಕೊಂಡರು.  ಮುಸ್ಲಿಮ್ ವಿರೋಧಿ ಮತ್ತು ಧರ್ಮದ್ವೇಷವನ್ನು ಕೆರಳಿಸುವುದಕ್ಕೆ ಈ ಎರಡೂ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ  ಅಸಂಖ್ಯ ಮಂದಿ ಬಳಸಿಕೊಂಡರು. ನಿಜವಾಗಿ,

 ಈ ಎರಡೂ ವೀಡಿಯೋಗಳು ಮುಸ್ಲಿಮರಿಗೆ ಸಂಬಂಧಿಸಿದ್ದೇ  ಆಗಿರಲಿಲ್ಲ. ಫೆಲೆಸ್ತೀನ್  ಪರ ಕೋಝಿಕ್ಕೋಡ್‌ನಲ್ಲಿ ರ‍್ಯಾಲಿ ನಡೆಸಿದ್ದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಎಂಬ ರಾಜಕೀಯ ಪಕ್ಷ. ಎಸ್.ಕ್ಯು.ಆರ್. ಇಲ್ಯಾಸ್  ಇದರ ರಾಷ್ಟ್ರೀಯ ಅಧ್ಯಕ್ಷರಾದರೆ, ರವಿಶಂಕರ್ ತ್ರಿಪಾಠಿ ರಾಷ್ಟ್ರೀಯ ಉಪಾಧ್ಯಕ್ಷ. ಕೇರಳ ಘಟಕದ ಅಧ್ಯಕ್ಷರಾಗಿ ರಝಾಕ್ ಮಲೇರಿ  ಎಂಬವರು ಕಾರ್ಯನಿರ್ವಹಿಸುತ್ತಿದ್ದರೆ, ಸುರೇಂದ್ರನ್ ಕರಿಪುಝ ಎಂಬವರು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಉಷಾ ಕುಮಾರಿ,  ಜ್ಯೋತಿವ್ಯಾಸ್, ಗಣೇಶ್, ಪ್ರೇಮ ಮುಂತಾದವರು ಕಾರ್ಯದರ್ಶಿಗಳಾಗಿ ಸಕ್ರಿಯವಾಗಿದ್ದಾರೆ. ಜಾನ್ ಉಪಾಧ್ಯಕ್ಷರಾಗಿದ್ದಾರೆ. ಹಾಗೆಯೇ,  ಖ್ಯಾತ ಸಾಹಿತ ಬಿ.ಟಿ. ಲಲಿತಾ ನಾಯಿಕ್ ಅವರು ಈ ಮೊದಲು ಕರ್ನಾಟಕ ಘಟಕದ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿದ್ದರು. ಆದರೆ,

ಈ ಎಲ್ಲವನ್ನೂ ಅಡಗಿಸಿಟ್ಟು ಈ ರಾಷ್ಟ್ರೀಯ ಪಕ್ಷದ ವಿರುದ್ಧವೇ ಸುಳ್ಳುಗಳನ್ನು ಹರಡಲಾಯಿತು. ಈ ಸುಳ್ಳಿಗೆ ಚಾಲನೆ ನೀಡಿದ್ದು ಬಿಜೆಪಿ  ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ತೇಜಿಂದರ್ ಪಾಲ್ ಬಗ್ಗಾ. ಕೇರಳದಲ್ಲಿ ಹಮಾಸ್ ಉಗ್ರರ ಪರ ರ‍್ಯಾಲಿ  ನಡೆಸಲಾಗಿದ್ದು, ಫೆಲೆಸ್ತೀನ್ ಧ್ವಜದ ಬದಲು ಇಟಲಿ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂದು ಅವರು ಟ್ವೀಟರ್‌ನಲ್ಲಿ (ಎಕ್ಸ್)  ವೀಡಿಯೋವೊಂದನ್ನು ಹಂಚಿಕೊಂಡರು. ಬಿಜೆಪಿ ರಾಷ್ಟ್ರೀಯ ವಕ್ತಾರ ಅನಿಲ್ ಆ್ಯಂಟನಿಯಂತೂ  ಇದೇ ವೀಡಿಯೋಗೆ ಇನ್ನಷ್ಟು ಉ ಪ್ಪು-ಖಾರ ಸೇರಿಸಿ ಟ್ವೀಟ್ ಮಾಡಿದರು. ಕೇರಳದಲ್ಲಿ ಇಸ್ಲಾಮಿಕ್ ಮೂಲಭೂತವಾದ ಮತ್ತು ತೀವ್ರಗಾಮಿ ನಿಲುವು ಗಂಭೀರ ಹಂತದಲ್ಲಿದೆ ಎಂಬಂತೆ  ಬರೆದು ಬಗ್ಗಾ ಅವರದೇ ವೀಡಿಯೋವನ್ನು ಹಂಚಿಕೊಂಡಿದ್ದರು. ಇವರು ಕೇರಳದ ಕಾಂಗ್ರೆಸ್ ಮುಖಂಡ ಎ.ಕೆ.  ಆ್ಯಂಟನಿಯವರ ಮಗ. ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಕೇರಳದವರಾದ ಇವರಿಗೆ ಕೇರಳದ ವೆಲ್‌ಫೇರ್  ಪಾರ್ಟಿಯ ಬಗ್ಗೆ ಮತ್ತು ಅದರ ಧ್ವಜದ ಬಗ್ಗೆ ತಿಳಿದಿಲ್ಲ ಎಂದು ಹೇಳುವಂತೆಯೂ ಇಲ್ಲ. ಆದರೂ ತೇಜಿಂದರ್ ಪಾಲ್ ಬಗ್ಗಾ ಹರಡಿದ  ಸುಳ್ಳನ್ನೇ ಇವರೂ ಹಿಂದು-ಮುಂದು  ನೋಡದೇ ಹಂಚಿಕೊಂಡರು. ನಿಜವಾಗಿ,

ಕೇರಳದಲ್ಲಿ ಹಮಾಸ್‌ನ ಪರ ಈ ರ‍್ಯಾಲಿ ನಡೆಸಲಾಗಿರಲಿಲ್ಲ ಮತ್ತು ಇಟಲಿಯ ಧ್ವಜವನ್ನೂ ಪ್ರದರ್ಶಿಸಲಾಗಿರಲಿಲ್ಲ. ಇಟಲಿ ಮತ್ತು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾದ ಧ್ವಜದ ನಡುವೆ ವ್ಯತ್ಯಾಸ ಇದೆ. ನೀಲಿ, ಬಿಳಿ ಮತ್ತು ಕೆಂಪು ಬಣ್ಣವು ಎರಡೂ ಧ್ವಜಗಳಲ್ಲಿದ್ದರೂ  ವೆಲ್‌ಫೇರ್ ಪಾರ್ಟಿಯ ಧ್ವಜದ ಮಧ್ಯಭಾಗದಲ್ಲಿರುವ ಬಿಳಿ ಬಣ್ಣದಲ್ಲಿ ಎರಡು ತೆನೆಗಳ ಚಿತ್ರ ಇದೆ. ಇಟಲಿಯ ರಾಷ್ಟ್ರೀಯ ಧ್ವಜದಲ್ಲಿ ಈ  ತೆನೆಗಳಿಲ್ಲ ಮತ್ತು ಅದರ ಮೂರೂ ಬಣ್ಣಗಳೂ ಸಮಪ್ರಮಾಣದಲ್ಲಿವೆ. ಆದರೆ, ಅನಿಲ್ ಆ್ಯಂಟನಿಯಾಗಲಿ ತೇಜಿಂದರ್ ಬಗ್ಗಾ ಆಗಲಿ  ಅಥವಾ ಇವರಿಬ್ಬರ ಟ್ವೀಟ್‌ಗಳನ್ನು ಹಂಚಿಕೊಂಡ ಅಸಂಖ್ಯಾತ ಬೆಂಬಲಿಗರಾಗಲಿ ಈ ವ್ಯತ್ಯಾಸವನ್ನು ಕಂಡೇ ಇಲ್ಲದಂತೆ ವರ್ತಿಸಿದ್ದಾರೆ.  ಮಾತ್ರವಲ್ಲ, ಫೆಲೆಸ್ತೀನ್ ಪರ ಮತ್ತು ಗಾಝಾದ ಸಂತ್ರಸ್ತರ ಪರ ರ‍್ಯಾಲಿ ಎಂದು ಬ್ಯಾನರ್‌ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದ್ದರೂ ಹಮಾಸ್  ಉಗ್ರರ ಪರ ರ‍್ಯಾಲಿ ಎಂಬ ಸುಳ್ಳನ್ನು ಹರಡಿದ್ದಾರೆ. ಅನಿಲ್ ಆ್ಯಂಟನಿಗಂತೂ  ಇದು ಇಸ್ಲಾಮಿಕ್ ಮೂಲಭೂತವಾಗಿ ಕಂಡಿದೆ.  ರಾಜಕೀಯ ಪಕ್ಷವೊಂದು ಮಾಡಿದ ರ‍್ಯಾಲಿಯನ್ನು ಮುಸ್ಲಿಮರ ರ‍್ಯಾಲಿಯಂತೆ ಮತ್ತು ಉಗ್ರರ ಪರ ರ‍್ಯಾಲಿಯಂತೆ ಅತ್ಯಂತ ಯೋಜನಾಬದ್ಧವಾಗಿ ಸುಳ್ಳನ್ನು ಉತ್ಪಾದಿಸಿ ಹಂಚಲಾಗಿದೆ. ಅಂದಹಾಗೆ,

2020 ನವೆಂಬರ್ 3ರಂದು ಹರ್ಯಾಣದ ಫತೇಹಾಬಾದ್ ಜಿಲ್ಲೆಯ ಧಾಬಿಕಲಾನ್ ಗ್ರಾಮದಲ್ಲಿ ನಾಲ್ವರು ಯುವಕರು ಸೇರಿ ಅರ್ಚಕರಿಗೆ  ಬ್ಯಾಟ್‌ನಿಂದ ಥಳಿಸಿದ್ದರು. ಉತ್ತರ ಭಾರತದ ಪ್ರಮುಖ ಪತ್ರಿಕೆಗಳಾದ ದೈನಿಕ್ ಜಾಗರಣ್ ಮತ್ತು ದೈನಿಕ್ ಭಾಸ್ಕರ್ ಪತ್ರಿಕೆಗಳು ಈ ಬಗ್ಗೆ  ವರದಿಯನ್ನೂ ಮಾಡಿದ್ದುವು. ಮಠದ ಒಳಗೆ ಬ್ಯಾಟನ್ನು ಇರಿಸಲು ಒಪ್ಪದ ಅರ್ಚಕನ ವರ್ತನೆಗೆ ಸಿಟ್ಟಾದ ಅಮಿತ್, ಕೃಷ್ಣಾ, ಪ್ರದೀಪ್  ಮತ್ತು ರಾಕೇಶ್ ಎಂಬ ಯುವಕರು ಅರ್ಚಕರಿಗೆ ಥಳಿಸಿದ್ದು, ಇವರನ್ನು ಬಂಧಿಸಲಾಗಿದೆ ಎಂಬ ಮಾಹಿತಿಯೂ ಆ ವರದಿಯಲ್ಲಿತ್ತು.  ಖಬ್ರೆ ಅಬೀ ತಕ್ ಎಂಬ ಯುಟ್ಯೂಬ್ ಚಾನೆಲ್ ಈ ಕುರಿತಂತೆ ಇನ್ನಷ್ಟು ವಿವರಗಳನ್ನು ನೀಡಿತ್ತು. ಯುವತಿಯೊಂದಿಗೆ ದೂರವಾಣಿಯಲ್ಲಿ  ಅಸಭ್ಯವಾಗಿ ಮಾತಾಡಿದ ಕಾರಣಕ್ಕಾಗಿ ಅವರನ್ನು ಥಳಿಸಲಾಗಿದೆ ಎಂದು ಅದು ಹೇಳಿತ್ತು. ಇವು ಏನೇ ಇದ್ದರೂ ಈ ಘಟನೆಗೂ  ಮುಸ್ಲಿಮರಿಗೂ ಯಾವ ಸಂಬಂಧವೂ ಇಲ್ಲ. ಆದರೆ, 

ಕಳೆದವಾರ ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ  ಹಂಚಿಕೆಯಾಯಿತು. ಮಂದಿರದ ಅರ್ಚಕನನ್ನು ಥಳಿಸುತ್ತಿರುವ ಮುಸ್ಲಿಮ್ ಮತಾಂಧರು ಎಂಬ ಒಕ್ಕಣೆಯೊಂದಿಗೆ ಅಸಂಖ್ಯ ಮಂದಿ  ವೀಡಿಯೋ ಹಂಚಿಕೊಂಡರು. ಭಾರತೀಯ ಯುವ ಮೋರ್ಚಾದ ಸೋಶಿಯಲ್ ಮೀಡಿಯಾದ ದೆಹಲಿ ಸಹಸಂಯೋಜಕಿ ಆಕಾಂಕ್ಷಾ  ಈ ವೀಡಿಯೋವನ್ನು ಟ್ವೀಟ್ ಮಾಡಿದರು. ಆ ಬಳಿಕ ಸಾವಿರಾರು ಮಂದಿ ಇದನ್ನು ಮರುಟ್ವೀಟ್ ಮಾಡಿದರು. ನಿಜವಾಗಿ,

ಸುಳ್ಳು ಹೇಳುವುದು ಮತ್ತು ಸುಳ್ಳು ಹರಡುವುದನ್ನು ಧರ್ಮಗಳು ಅಪರಾಧವಾಗಿ ಕಾಣುತ್ತವೆ. ಆದರೆ, ಧರ್ಮವನ್ನು ರಕ್ಷಿಸುತ್ತೇವೆ ಎಂದು  ಹೇಳುವವರು ಸುಳ್ಳನ್ನೇ ಆಶ್ರಯಿಸಿಕೊಂಡಿದ್ದಾರೆ. ಈ ದೇಶದಲ್ಲಿ ಪ್ರತಿದಿನ ಅಸಂಖ್ಯ ಸುಳ್ಳುಗಳನ್ನು ಉತ್ಪಾದಿಸಲಾಗುತ್ತದೆ. ಬಳಿಕ ಅದನ್ನು  ವಿವಿಧ ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಲಾಗುತ್ತದೆ. ಹೀಗೆ ಉತ್ಪಾದನೆಯಾಗುವ ಸುಳ್ಳುಗಳಲ್ಲಿ 99% ಸುಳ್ಳುಗಳು ಕೂಡ  ಮುಸ್ಲಿಮ್ ದ್ವೇಷವನ್ನೇ ಕಾರುವಂಥವು. ಹಿಂದೂ-ಮುಸ್ಲಿಮ್ ವಿಭಜನೆಯನ್ನೇ ಗುರಿಯಾಗಿಸಿಕೊಂಡು ಉತ್ಪಾದನೆಯಾಗುವ ಸುಳ್ಳುಗಳನ್ನು  ಧರ್ಮರಕ್ಷಣೆಯ ಭ್ರಮೆಯಲ್ಲಿರುವವರು ಸತ್ಯವೆಂದೇ ನಂಬಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ಮುಸ್ಲಿಮರನ್ನು ಮತಾಂಧರು, ಉಗ್ರರು,  ಹಿಂದೂ ಧರ್ಮ ದ್ವೇಷಿಗಳು ಎಂದೆಲ್ಲ ಬಿಂಬಿಸುವುದೇ ಹೆಚ್ಚಿನೆಲ್ಲ ವೀಡಿಯೋ, ಆಡಿಯೋ ಮತ್ತು ಸುದ್ದಿಗಳ ಉದ್ದೇಶ. ಅಷ್ಟಕ್ಕೂ,

ಯಾವುದೇ ಸುಳ್ಳು ಸುದ್ದಿಯನ್ನು ಉತ್ಪಾದನೆ ಮಾಡುವುದು ಸುಲಭ. ಆದರೆ ಅದನ್ನು ಪತ್ತೆ ಹಚ್ಚುವುದು ಸುಲಭ ಅಲ್ಲ. ಅದಕ್ಕೆ ಒಂದಷ್ಟು  ಶ್ರಮ ಬೇಕಾಗುತ್ತದೆ. ಎಲ್ಲರಿಗೂ ಸತ್ಯಶೋಧನೆ ಮಾಡುವುದಕ್ಕೂ ಬರುವುದಿಲ್ಲ. ಯಾರಾದರೂ ಶ್ರಮಪಟ್ಟು ಸತ್ಯಶೋಧನೆ ಮಾಡಿದರೂ  ಆ ವೇಳೆಗಾಗಲೇ ಸುಳ್ಳು ತಲುಪಬೇಕಾದಲ್ಲೆಲ್ಲ ತಲುಪಿರುತ್ತದೆ. ಆ ಬಳಿಕ ಹಂಚಿಕೆಯಾಗುವ ಈ ಸತ್ಯಸುದ್ದಿಯು ಈ ಮೊದಲಿನ ಸುಳ್ಳು  ಸುದ್ದಿ ತಲುಪಿದವರಿಗೆಲ್ಲ ತಲುಪುತ್ತದೆ ಎಂದು ಹೇಳುವುದಕ್ಕೂ ಬರುವುದಿಲ್ಲ. ದ್ವೇಷ ಮತ್ತು ನಕಾರಾತ್ಮಕ ಸುದ್ದಿಗಿರುವ ಮಾರುಕಟ್ಟೆ ಪ್ರೀತಿ  ಮತ್ತು ಸಕಾರಾತ್ಮಕ ಸುದ್ದಿಗೆ ಇರುವುದಿಲ್ಲ ವಾದ್ದರಿಂದ ಇಂಥ ಸತ್ಯಶೋಧಿತ ಸುದ್ದಿಗಳನ್ನು ಹಂಚಿಕೊಳ್ಳುವವರೂ ಕಡಿಮೆ. ಅಲ್ಲದೇ, ಸುದ್ದಿಯೊಂದರ ಮೂಲವನ್ನು ಹುಡುಕುತ್ತಾ ಸತ್ಯವೋ ಸುಳ್ಳೋ ಎಂಬುದನ್ನು ಪತ್ತೆ ಹಚ್ಚುವವರ ಸಂಖ್ಯೆಗೆ ಹೋಲಿಸಿದರೆ ಸುಳ್ಳು ಉತ್ಪಾದಿಸುವವರ ಸಂಖ್ಯೆ ಎಷ್ಟೋ ಸಾವಿರ ಪಟ್ಟು ಅಧಿಕವಿದೆ. ಆದ್ದರಿಂದ, ಒಂದು ಸುದ್ದಿಯ ಮೂಲವನ್ನು ಹುಡುಕುವಾಗ ಅಸಂಖ್ಯ ಸುಳ್ಳು  ಸುದ್ದಿಗಳು ಉತ್ಪಾದನೆಯಾಗಿ ಮಾರುಕಟ್ಟೆಗೆ ಹಂಚಿಕೆಯಾಗುತ್ತಿರುತ್ತದೆ. ಇವನ್ನೆಲ್ಲ ಪತ್ತೆ ಹಚ್ಚುವುದು ಅಸಾಧ್ಯ ಅನ್ನುವಷ್ಟು ಕಷ್ಟ. ಆದ್ದರಿಂದ,

ಸರಕಾರ ಮನಸ್ಸು ಮಾಡದ ಹೊರತು ಸುಳ್ಳು ಸುದ್ದಿಗಳ ನಿಯಂತ್ರಣ ಸಾಧ್ಯವಿಲ್ಲ. ದುರಂತ ಏನೆಂದರೆ, ಇವತ್ತು ಪ್ರಭುತ್ವವೇ ಈ  ಸುಳ್ಳುಗಳನ್ನು ಆಶ್ರಯಿಸಿಕೊಂಡಿದೆ. ಸುಳ್ಳು ಹರಡುವವರಲ್ಲಿ ಪ್ರಭುತ್ವವನ್ನು ಬೆಂಬಲಿಸುವ ಮುಖಂಡರು, ಕಾರ್ಯಕರ್ತರು ಮತ್ತು  ಹೊಣೆಗಾರರೇ ಅಧಿಕವಿದ್ದಾರೆ. ವೆಲ್‌ಫೇರ್ ಪಾರ್ಟಿಯ ರ‍್ಯಾಲಿ ಮತ್ತು ಹರ್ಯಾಣದ ಅರ್ಚಕರ ಥಳಿತದ ವೀಡಿಯೋಗಳನ್ನು ಸುಳ್ಳು  ಒಕ್ಕಣೆಗಳೊಂದಿಗೆ ಪ್ರಭುತ್ವದ ಹೊಣೆಗಾರರೇ ಹಂಚಿಕೊಂಡಿರುವುದು ಇದಕ್ಕೆ ಅತೀ ಪ್ರಬಲ ಉದಾಹರಣೆ. ಅಂದಹಾಗೆ, ಧರ್ಮವೇ  ಖಂಡಿಸುವ ಸುಳ್ಳನ್ನು ಧರ್ಮ ರಕ್ಷಣೆಗೆಂದು ಉತ್ಪಾದಿಸುವವರಿರುವ ದೇಶದಲ್ಲಿ ಸುಳ್ಳು ರಾಜಗಾಂಭೀರ್ಯದಿಂದ ಸುತ್ತುವುದರಲ್ಲಿ ಆಶ್ಚರ್ಯವೂ ಇಲ್ಲ.

Thursday, 26 October 2023

‘ಹಮಾಸ’ನ್ನು ಪದೇ ಪದೇ ಕಟಕಟೆಯಲ್ಲಿ ನಿಲ್ಲಿಸುವ ಮೊದಲು

 





1. ಶಂಕಿತರ ಮೊಬೈಲ್ ಮತ್ತು ಕಂಪ್ಯೂಟರ್‌ನೊಳಗೆ ನುಗ್ಗಿ ಗೂಢಚರ್ಯೆ ನಡೆಸುವ ಸ್ಪೈ ವೇರ್ ತಂತ್ರಜ್ಞಾನದಿಂದ  ಹಿಡಿದು ಡ್ರೋನ್  ಕ್ಯಾಮರಾಗಳ ಕಣ್ಗಾವಲು ವ್ಯವಸ್ಥೆಯವರೆಗೆ ಮತ್ತು ಮೊಸಾದ್‌ನಂತಹ ಜಾಗತಿಕವಾಗಿಯೇ ಅತೀ ಪ್ರಬಲ ಗುಪ್ತಚರ ವಿಭಾಗದಿಂದ  ಹಿಡಿದು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ವರೆಗೆ ಎಲ್ಲದರ ಕಣ್ತಪ್ಪಿಸಿ ಇಝ್ಝುದ್ದೀನ್ ಅಲ್ ಖಸ್ಸಾಂ ಬ್ರಿಗೇಡ್ ಎಂಬ ಗಾಝಾದ ಹಮಾಸ್‌ನ ಸಶಸ್ತ್ರ  ತಂಡವು ನೆಲ, ಜಲ ಮತ್ತು ವಾಯು ಪ್ರದೇಶದ ಮೂಲಕ ಇಸ್ರೇಲ್‌ನೊಳಗೆ ನುಗ್ಗಿ ದಾಳಿ ನಡೆಸಲು ಶಕ್ತವಾದುದು ಹೇಗೆ?

2. ಇಸ್ರೇಲ್ ನಾಗರಿಕರ ಮೇಲೆ ಹಮಾಸ್ ದಾಳಿ ನಡೆಸಿದ್ದು ಎಷ್ಟು ಸರಿ?

ಸದ್ಯ ಈ ಎರಡೂ ಪ್ರಶ್ನೆಗಳಿಗೂ ಮಹತ್ವ ಇದೆ. ಹಮಾಸ್ ಎಂಬುದು ಫೆಲೆಸ್ತೀನಿನ ಅತ್ಯಂತ ಜನಪ್ರಿಯ ರಾಜಕೀಯ ಪಕ್ಷ. ಅದರ ಸಶಸ್ತ್ರ  ಪಡೆಯ ಹೆಸರು ಇಝ್ಝುದ್ದೀನ್ ಅಲ್ ಖಸ್ಸಾಂ. ಹಾಗಂತ, ಇಂಥದ್ದೊಂದು ವ್ಯವಸ್ಥೆ ಕೇವಲ ಹಮಾಸ್‌ಗೆ ಮಾತ್ರ ಇರುವುದಲ್ಲ. ಪಶ್ಚಿಮ  ದಂಡೆಯಲ್ಲಿ ಅಧಿಕಾರದಲ್ಲಿರುವ ಮುಹಮ್ಮದ್ ಅಬ್ಬಾಸ್ ನೇತೃತ್ವದ ಫತಹ್ ಎಂಬ ರಾಜಕೀಯ ಪಕ್ಷಕ್ಕೂ ಇದೆ. ಆ ಸಶಸ್ತ್ರ ಪಡೆಯ  ಹೆಸರು ಅಲ್ ಖುದ್ಸ್. ಇವೆರಡರ ಹೊರತಾಗಿ ಅಲ್ಲಿನ ಎಡಪಕ್ಷಕ್ಕೂ ತನ್ನದೇ ಆದ ಸಶಸ್ತ್ರ ಪಡೆಯೂ ಇದೆ. ಅಂದರೆ, ಫೆಲೆಸ್ತೀನಿನ  ರಾಜಕೀಯ ಪಕ್ಷಗಳು ತಮ್ಮದೇ ಆದ ಸಶಸ್ತ್ರ ಪಡೆಯನ್ನು ಹೊಂದಿದ್ದು, ಫೆಲೆಸ್ತೀನನ್ನು ಇಸ್ರೇಲ್‌ನಿಂದ ವಿಮೋಚನೆಗೊಳಿಸುವುದಕ್ಕೆ ಸಶಸ್ತ್ರ  ಹೋರಾಟ ಅನಿವಾರ್ಯ ಎಂದು ಅವು ಭಾವಿಸಿಕೊಂಡಿವೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ, 1948ರಲ್ಲಿ ಸ್ಥಾಪನೆಯಾದ ದಿನದಿಂದ ಈ ವರೆಗೆ ಫೆಲೆಸ್ತೀನಿಯರೊಂದಿಗೆ ಇಸ್ರೇಲ್ ನಡಕೊಂಡ ವಿಧಾನವನ್ನೂ ಒರೆಗಲ್ಲಿಗೆ ಹಚ್ಚಬೇಕಾಗುತ್ತದೆ.

1948ರಲ್ಲಿ ಇಸ್ರೇಲ್ ಸ್ಥಾಪನೆಗೊಂಡದ್ದೇ  ಬ್ರಿಟಿಷರ ಸಂಚಿನಿಂದ. ಆಗ ಫೆಲೆಸ್ತೀನ್ ಬ್ರಿಟಿಷ್ ಆಧಿಪತ್ಯಕ್ಕೆ ಒಳಪಟ್ಟಿತ್ತು. ದ್ವಿತೀಯ  ವಿಶ್ವಯುದ್ಧದಲ್ಲಿ ಯಹೂದಿಯರು ಅನುಭವಿಸಿದ ಸಂಕಟಕ್ಕೆ ಮರುಗಿದ ಯುರೋಪಿಯನ್ ರಾಷ್ಟ್ರಗಳು, ಅವರಿಗೊಂದು ದೇಶ  ಕಟ್ಟಿಕೊಡಬೇಕೆಂದು ತೀರ್ಮಾನಿಸಿದಾಗ ಕಂಡದ್ದೇ  ಫೆಲೆಸ್ತೀನ್. ಆದರೆ ಈ ವಿಷಯದಲ್ಲಿ ಫೆಲೆಸ್ತೀನಿಯರನ್ನಾಗಲಿ, ಅರಬ್ ರಾಷ್ಟ್ರಗಳನ್ನಾಗಲಿ ಬ್ರಿಟಿಷ್ ಸಹಿತ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ವಿಶ್ವಾಸಕ್ಕೆ ಪಡಕೊಳ್ಳಲಿಲ್ಲ. ಯಹೂದಿಯರಿಗೆ ಯಾಕೆ ಫೆಲೆಸ್ತೀ ನಿನಲ್ಲೇ  ರಾಷ್ಟ್ರ  ಕಟ್ಟಿ ಕೊಡಬೇಕು, ಅವರನ್ನು ನಿರ್ದಯವಾಗಿ ನಡೆಸಿಕೊಂಡ ಹಿಟ್ಲರನ ಜರ್ಮನಿಯಲ್ಲೇಕೆ ಅದನ್ನು ನಿರ್ಮಿಸಬಾರದು  ಎಂಬ ಪ್ರಶ್ನೆಯನ್ನೂ ಈ ರಾಷ್ಟçಗಳು ಕಿವಿಗೆ ಹಾಕಿಕೊಳ್ಳಲಿಲ್ಲ. ಹೀಗೆ 1948ರಲ್ಲಿ ಹುಟ್ಟುವಾಗ ತೀರಾ ಸಣ್ಣ ಭೂಪ್ರದೇಶವನ್ನು ಹೊಂದಿದ್ದ  ಇಸ್ರೇಲ್ ಇವತ್ತು ಫೆಲೆಸ್ತೀನ್ ಭೂಮಿಯನ್ನು ಒತ್ತುವರಿ ನಡೆಸಿ ನಡೆಸಿ ಬೃಹತ್ತಾಗಿ ಬೆಳೆದಿದೆ. ವಿಶ್ವದಾದ್ಯಂತದ ಯಹೂದಿಯರನ್ನು ಅದು  ತನ್ನಲ್ಲಿಗೆ ಕರೆಸಿಕೊಳ್ಳುತ್ತಿದೆ ಮತ್ತು ಅವರ ವಸತಿಗಾಗಿ ಫೆಲೆಸ್ತೀನಿ ನಾಗರಿಕರನ್ನು ಒಕ್ಕಲೆಬ್ಬಿಸಿ ಭೂವಿಸ್ತರಣೆ ಮಾಡುತ್ತಿದೆ. ಅಂದಹಾಗೆ,

ಇಸ್ರೇಲ್ ರಾಷ್ಟ್ರವನ್ನು ಫೆಲೆಸ್ತೀನಿ ಮಣ್ಣಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಕಾರಣದಿಂದಲೇ ಅರಬ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ  3 ಯುದ್ಧಗಳನ್ನು ನಡೆಸಿವೆ. ಮೊದಲನೆಯದ್ದು, 1948ರಲ್ಲಿ. ಅಮೇರಿಕ ಮತ್ತು ಯುರೋಪಿಯನ್ ರಾಷ್ಟ್ರಗಳ ಪೂರ್ಣ ಪ್ರಮಾಣದ  ಬೆಂಬಲ ಇಲ್ಲದೇ ಇರುತ್ತಿದ್ದರೆ ಈ ಯುದ್ಧಗಳಲ್ಲಿ ಇಸ್ರೇಲ್‌ಗೆ ಗೆಲುವು ಸಿಗುವುದಕ್ಕೆ ಸಾಧ್ಯವೇ ಇರಲಿಲ್ಲ. ಒಂದುಕಡೆ ತನ್ನ ಮಣ್ಣಿನಲ್ಲಿ  ಯಹೂದಿಯರಿಗೆ ಅಕ್ರಮವಾಗಿ ರಾಷ್ಟ್ರವೊಂದನ್ನು ನಿರ್ಮಿಸಿದ್ದು ಮತ್ತು ಇನ್ನೊಂದು ಕಡೆ ಆ ರಾಷ್ಟ್ರಕ್ಕೆ ಶಸ್ತ್ರಾಸ್ತ್ರ, ಹಣಕಾಸು ಸಹಿತ ಸರ್ವ  ನೆರವನ್ನೂ ಅಮೇರಿಕ ಸಹಿತ ವಿವಿಧ ರಾಷ್ಟ್ರಗಳು ನೀಡುತ್ತಿರುವುದು- ಇವೆರಡೂ ಫೆಲೆಸ್ತೀನಿಯರಲ್ಲಿ ಕಿಚ್ಚು ಹಚ್ಚಿದ್ದರೆ, ಅದು ಅಸಹಜವಲ್ಲ.  ಆದ್ದರಿಂದಲೇ, ಇಸ್ರೇಲ್ ಜೊತೆ ಅವಿರತ ಶಾಂತಿ ಒಪ್ಪಂದ ಮಾಡಿಕೊಂಡು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿ ನೋಬೆಲ್ ಪ್ರಶಸ್ತಿಗೆ ಭಾಜನರಾದ ಫೆಲೆಸ್ತೀನ್ ನಾಯಕ ಯಾಸಿರ್ ಅರಫಾತ್ ಅವರು 1948ರ ಯುದ್ಧದಲ್ಲಿ ಭಾಗಿಯಾಗಿದ್ದರು. 1983ರಿಂದ 93ರ ವರೆಗೆ ಟ್ಯುನೀಶಿಯಾದಲ್ಲಿ ನೆಲೆಸಿ ಫೆಲೆಸ್ತೀನ್ ವಿಮೋಚನೆಗಾಗಿ ಹೋರಾಡಿದ್ದರು. 1993ರಲ್ಲಿ ಗಾಝಾಕ್ಕೆ ಮರಳಿ ಸ್ವಾಯತ್ತ ಸರ್ಕಾರ ರಚಿಸಿದರು.  ಆ ಬಳಿಕ ಇಸ್ರೇಲ್ ಜೊತೆ ಕ್ಯಾಂಪ್ ಡೇವಿಡ್ ಸಭೆ, ಓಸ್ಲೋ ಒಪ್ಪಂದ, ಮ್ಯಾಡ್ರಿಡ್ ಕಾನ್ಫರೆನ್ಸ್ ನಡೆಸಿದರು. ಆದರೆ ಇಸ್ರೇಲ್ ಈ ಒಪ್ಪಂದವನ್ನು ಪಾಲಿಸಲಿಲ್ಲ ಎಂದು ಮಾತ್ರವಲ್ಲ, ಶಾಂತಿದೂತ ಅರಫಾತ್‌ರನ್ನು ನಿರ್ದಯವಾಗಿ ನಡೆಸಿಕೊಂಡಿತು. ಜಾಗತಿಕವಾಗಿಯೇ  ಅತ್ಯಂತ ಜನಪ್ರಿಯ ನಾಯಕರಾಗಿದ್ದ ಮತ್ತು ಫತಹ್ ರಾಜಕೀಯ ಪಕ್ಷದ ಪ್ರಮುಖರಾಗಿದ್ದ ಅವರಿಗೆ 2002ರಿಂದ 2004ರ ವರೆಗೆ  ಅಕ್ಷರಶಃ ನಿರ್ಬಂಧವನ್ನು ಹೇರಿತು. ಫೆಲೆಸ್ತೀನ್‌ನ ರಮಲ್ಲಾ  ಪ್ರದೇಶದಿಂದ ಹೊರಹೋಗುವುದಕ್ಕೆ ತಡೆ ಹೇರಿತು. ಅವರು  ಹೊರರಾಷ್ಟ್ರಗಳಿಗೆ ಭೇಟಿಕೊಟ್ಟು ಇಸ್ರೇಲ್ ಮೇಲೆ ಒತ್ತಡ ಹೇರದಂತೆ ತಡೆಯುವುದೇ ಈ ನಿರ್ಬಂಧದ ಉದ್ದೇಶವಾಗಿತ್ತು. 2004ರಲ್ಲಿ ಈ  ಅರಫಾತ್ ನಿಧನರಾದರು. ಅವರ ಶಾಂತಿ ಯತ್ನ ಮತ್ತು ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೇ ಇಸ್ರೇಲ್ ವಿಷವಿಕ್ಕಿ ಕೊಂದಿದೆ ಎಂಬ  ಸಂದೇಹವೂ ಅಸ್ತಿತ್ವದಲ್ಲಿದೆ. ನಿಜವಾಗಿ,

ಈ ಅರಫಾತ್‌ರನ್ನು ನಿರ್ದಯವಾಗಿ ನಡೆಸಿಕೊಂಡ ಕಾರಣದಿಂದ ಹುಟ್ಟಿಕೊಂಡಿರುವ ರಾಜಕೀಯ ಸಂಘಟನೆಯೇ ಹಮಾಸ್. 1987ರಲ್ಲಿ  ಈ ಹಮಾಸ್ ರಚನೆಗೊಳ್ಳುವ ಮೊದಲೇ ಇಸ್ರೇಲ್‌ನ ಕೈಗಳಲ್ಲಿ ಸಾಕಷ್ಟು ರಕ್ತದ ಕಲೆಗಳಿದ್ದುವು. ಇಸ್ರೇಲ್‌ನ ದಾಳಿಯಿಂದ ಮತ್ತು  ಭೂವಿಸ್ತರಣಾ ದಾಹದಿಂದ ಚೆಲ್ಲಾಪಿಲ್ಲಿಯಾದ ಫೆಲೆಸ್ತೀನಿಯರು ಪಕ್ಕದ ವಿವಿಧ ಅರಬ್ ರಾಷ್ಟ್ರಗಳಿಗೆ ಹೋಗಿ ನಿರಾಶ್ರಿತ ಶಿಬಿರಗಳಲ್ಲಿ  ನೆಲೆಸಿದ್ದರು. ಅದರಲ್ಲಿ ಲೆಬನಾನ್ ನ  ಶಬ್ರ-ಶತೀಲ ಎಂಬ ನಿರಾಶ್ರಿತ ಶಿಬಿರವೂ ಒಂದು. 1982ರಲ್ಲಿ ಈ ನಿರಾಶ್ರಿತ ಶಿಬಿರದ ಮೇಲೆ ಬಾಂಬ್  ಹಾಕಿದ ಇಸ್ರೇಲ್ ಸುಮಾರು ಮೂರೂವರೆ ಸಾವಿರಕ್ಕಿಂತಲೂ ಅಧಿಕ ಮಂದಿಯ ಮಾರಣಹೋಮಕ್ಕೆ ಕಾರಣವಾಗಿತ್ತು. ಆದ್ದರಿಂದ, ಹಮಾಸ್‌ನಿಂದಾಗಿ  ಇಸ್ರೇಲ್ ಹಿಂಸಾರೂಪ ತಾಳಿದೆ ಎಂಬುದು ಅಪ್ಪಟ ಸುಳ್ಳು. ಇಸ್ರೇಲ್‌ನ ಹಿಂಸೆಯನ್ನು ಪ್ರತಿರೋಧಿಸುವ ಉದ್ದೇಶದಿಂದಲೇ ಹಮಾಸ್  ಸ್ಥಾಪನೆಯಾಗಿದೆ. ಅದು ಅಲ್ ಖೈದಾ, ಐಸಿಸ್, ಲಷ್ಕರೆ ತ್ವಯಿಬಾ ಅಥವಾ ಆಫ್ರಿಕನ್ ಸಶಸ್ತ್ರ  ದಳಗಳಂತೆ ಇನ್ನಾವುದೋ ರಾಷ್ಟ್ರದ ಮೇಲೆ  ಗೆರಿಲ್ಲಾ ಹೋರಾಟ ನಡೆಸುತ್ತಿಲ್ಲ. ತನ್ನದೇ ಭೂಮಿಯಲ್ಲಿ ಅಕ್ರಮವಾಗಿ ರಚಿಸಲ್ಪಟ್ಟ ರಾಷ್ಟ್ರದ ವಿರುದ್ಧ ವಿಮೋಚನೆಯ ಹೋರಾಟ  ನಡೆಸುತ್ತಿದೆ. ಆದ್ದರಿಂದಲೇ, ಹಮಾಸನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯುವುದಕ್ಕೆ ಟರ್ಕಿ, ಇರಾನ್, ರಷ್ಯಾ ಸಹಿತ ವಿವಿಧ  ಅರಬ್ ರಾಷ್ಟ್ರಗಳು ಈಗಲೂ ಹಿಂಜರಿಯುತ್ತಿವೆ. ಅಷ್ಟಕ್ಕೂ,

ಈ 2023ರಲ್ಲಿ ಈವರೆಗೆ 200ಕ್ಕಿಂತ ಅಧಿಕ ಫೆಲೆಸ್ತೀನಿಯರನ್ನು ಇಸ್ರೇಲ್ ಹತ್ಯೆ ಮಾಡಿದೆ. 2022ರಲ್ಲಿ 220 ಮಂದಿ ಫೆಲೆಸ್ತೀನಿಯರನ್ನು  ಇಸ್ರೇಲ್ ಹತ್ಯೆ ಮಾಡಿತ್ತು. ಇದರಲ್ಲಿ 30 ಮಕ್ಕಳು. ಮಾತ್ರವಲ್ಲ, ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ 45ರಷ್ಟು ಮಸೂದೆಗಳು  ಅಂಗೀಕಾರಗೊಂಡಿವೆ. ಆದರೆ ಅವುಗಳಲ್ಲಿ ಒಂದಕ್ಕೂ ಇಸ್ರೇಲ್ ಕಿಂಚಿತ್ ಬೆಲೆಯನ್ನೂ ಕೊಟ್ಟಿಲ್ಲ. ಫೆಲೆಸ್ತೀನಿನಲ್ಲಿ ಇಸ್ರೇಲ್ ನಡೆಸುತ್ತಿ ರುವ  ಕ್ರೌರ್ಯಗಳ ತನಿಖೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ನಡೆಸಬೇಕೆಂಬ ಮಸೂದೆ ಕಳೆದ ವರ್ಷ ವಿಶ್ವಸಂಸ್ಥೆಯಲ್ಲಿ  ಮಂಡಿಸಲಾಗಿತ್ತು. ಇದನ್ನು ಅಮೇರಿಕ, ಬ್ರಿಟನ್, ಜರ್ಮನಿ ಸಹಿತ 26 ರಾಷ್ಟ್ರಗಳು ವಿರೋಧಿಸಿದವು. ಆದರೆ 87 ರಾಷ್ಟ್ರಗಳು ಬೆಂಬಲಿಸುವುದರೊಂದಿಗೆ ಅದು ಅಂಗೀಕಾರಗೊಂಡಿತ್ತು. ಆದರೆ, ಅಂತಾರಾಷ್ಟೀಯ ನ್ಯಾಯಾಲಯಕ್ಕೆ ಇಸ್ರೇಲನ್ನು ಸ್ಪರ್ಶಿಸಲೂ ಈವರೆಗೂ  ಸಾಧ್ಯವಾಗಿಲ್ಲ. ಹಾಗಂತ,

1987ರಲ್ಲಿ ಸ್ಥಾಪನೆಗೊಂಡ ಬಳಿಕದಿಂದ ಈವರೆಗೆ ಇಸ್ರೇಲ್ ನಾಗರಿಕರ ಮೇಲೆ ಹಮಾಸ್ ದಾಳಿಯನ್ನೇ ನಡೆಸಿರಲಿಲ್ಲ. ಅದರ  ರಾಕೆಟ್‌ಗಳು, ಹೋರಾಟಗಳಿಗೆಲ್ಲ ಸೇನೆಯೇ ಗುರಿಯಾಗಿತ್ತು. ಈ ಬಾರಿ ಅದು ಹೋರಾಟದ ದಾರಿಯನ್ನು ಬದಲಿಸಿದೆ. ಆದ್ದರಿಂದಲೇ,  ಹಮಾಸನ್ನು ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುವುದು ತಪ್ಪಾಗುವುದಿಲ್ಲ. ಇದೇವೇಳೆ, ಇಸ್ರೇಲ್ ಉದ್ದಕ್ಕೂ ಫೆಲೆಸ್ತೀನ್ ನಾಗರಿಕರ ವಿರುದ್ಧವೇ  ದಾಳಿ ನಡೆಸುತ್ತಾ ಬಂದಿದೆ ಎಂಬ ಪ್ರಜ್ಞೆಯೂ ಈ ಪ್ರಶ್ನೆ ಎಸೆಯುವವರಿಗೆ ಇರಬೇಕು. 2014ರಲ್ಲಿ 3 ಮಂದಿ ಇಸ್ರೇಲಿ ಯೋಧರನ್ನು  ಹಮಾಸ್ ಅಪಹರಿಸಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ದಾಳಿಗೆ 2100 ಮಂದಿ ಫೆಲೆಸ್ತೀನಿ ನಾಗರಿಕರು ಮೃತಪಟ್ಟಿದ್ದರು.  ಅಂದಹಾಗೆ, ಇಸ್ರೇಲ್‌ನ ಕ್ರೌರ್ಯದ ಬಗ್ಗೆ ಏನೊಂದೂ ಮಾತನಾಡದೆ ಫೆಲೆಸ್ತೀನಿಯರ ಪ್ರತಿರೋಧವನ್ನೇ ಜಾಗತಿಕ ಬಲಿಷ್ಠ ರಾಷ್ಟ್ರಗಳು  ಈವರೆಗೆ ಕಟೆಕಟೆಯಲ್ಲಿ ನಿಲ್ಲಿಸುತ್ತಾ ಬಂದಿದೆ. ಅದರ ಫಲಿತಾಂಶವೇ ಸಹನೆಯ ಕಟ್ಟೆಯೊಡೆದ ಈ ಪ್ರತಿಕ್ರಿಯೆ ಎಂದೂ ಹೇಳಬಹುದು.  ಇದು ಸಮಸ್ಯೆಗೆ ಪರಿಹಾರ ಅಲ್ಲದೇ ಇರಬಹುದು. ಆದರೆ ಪರಿಹಾರ ಆಗಬಹುದಾದ ಅನೇಕ ಸಂದರ್ಭಗಳನ್ನು ಮತ್ತು ಅವಕಾಶಗಳನ್ನು  ಇವೇ ಬಲಿಷ್ಠ ರಾಷ್ಟ್ರಗಳು ಉದ್ದೇಶಪೂರ್ವಕ ಹಾಳುಮಾಡಿದುವಲ್ಲ, ಇಸ್ರೇಲ್‌ನ ಸಕಲ ಕ್ರೌರ್ಯಕ್ಕೂ ಬೆಂಗಾವಲಾಗಿ ನಿಂತುವಲ್ಲ, ಅದೇಕೆ  ಚರ್ಚೆಗೆ ಒಳಗಾಗುತ್ತಿಲ್ಲ? ಇಸ್ರೇಲ್‌ನ ಹಿಂಸೆಗೆ ಮೌನ ಸಮ್ಮತಿ ಕೊಡುತ್ತಾ ಫೆಲೆಸ್ತೀನಿಯರ ಪ್ರತಿರೋಧವನ್ನೇ ಗಂಟಲು ಬಿರಿದು  ವಿರೋಧಿಸುತ್ತಿರುವುದೇಕೆ? ಹಾಗಂತ, ಪ್ರತಿರೋಧವೊಂದು ನಾಗರಿಕರ ಮೇಲಿನ ಹಿಂಸಾತ್ಮಕ ದಾಳಿಯಾಗಿ ಪರಿವರ್ತನೆಗೊಳ್ಳುವುದನ್ನು  ಒಪ್ಪಲು ಖಂಡಿತ ಸಾಧ್ಯವಿಲ್ಲ. 

ಇನ್ನಾದರೂ ಬಲಿಷ್ಠರು ಫೆಲೆಸ್ತೀನಿಯರಿಗಾದ ಅನ್ಯಾಯವನ್ನು ಸರಿಪಡಿಸಲಿ.

Monday, 9 October 2023

ಇಸ್ಲಾಮ್: ಅನ್ಯ ಧರ್ಮ ಅಸಹಿಷ್ಣುವೇ?




ಸನ್ಮಾರ್ಗ ಸೀರತ್ ವಿಶೇಷಾಂಕ ಸಂಪಾದಕೀಯ 

ಪ್ರಥಮ ಮಾನವ ಮತ್ತು ಪ್ರಥಮ ಪ್ರವಾದಿ ಆದಮ್‌ರ(ಅ) ಇಬ್ಬರು ಪುತ್ರರಲ್ಲಿ ಕಿರಿಯವನಾದ ಕಾಬೀಲನು ಅಣ್ಣ ಹಾಬೀಲ್‌ನನ್ನು ಹತ್ಯೆ ಮಾಡುತ್ತಾನೆ. ಅಣ್ಣ ಹಾಬೀಲ್‌ನನ್ನು ಹತ್ಯೆ ಮಾಡಲು ತಮ್ಮ ಕಾಬೀಲ್ ಮುಂದಾದಾಗ ಅಣ್ಣ ಹೇಳುವ ಮಾತನ್ನು ಮತ್ತು ಆ ಇಡೀ ವೃತ್ತಾಂತವನ್ನು ಪವಿತ್ರ ಕುರ್‌ಆನ್‌ನ ಅಧ್ಯಾಯ 50: 27-30ರ ವಚನಗಳಲ್ಲಿ ಹೀಗೆ ವಿವರಿಸಲಾಗಿದೆ-


ನೀನು ನನ್ನನ್ನು ಹತ್ಯೆ ಮಾಡಲು ಕೈಯೆತ್ತಿದರೂ ನಾನು ನಿನ್ನ ಹತ್ಯೆ ಮಾಡಲ್ಲ. ನಾನು ಸರ್ವಲೋಕಗಳ ಪ್ರಭುವಾದ ಅಲ್ಲಾಹನನ್ನು ಭಯಪಡುತ್ತೇನೆ ಎಂದು ಹಾಬೀಲ್ ಹೇಳುತ್ತಾರೆ. ಕೊನೆಗೆ ಅಣ್ಣನನ್ನು ಕಾಬೀಲ್ ಹತ್ಯೆ ಮಾಡಿದ ಮತ್ತು ನಷ್ಟ ಹೊಂದಿದವರಲ್ಲಿ ಸೇರಿದ.

ಈ ವೃತ್ತಾಂತದ ಬೆನ್ನಿಗೇ ಪವಿತ್ರ ಕುರ್ ಆನ್ ನ  32ನೇ ವಚನದಲ್ಲಿ ಹೀಗೆ ಹೇಳಲಾಗಿದೆ-
ಓರ್ವ ಮಾನವನ ಹತ್ಯೆಯ ಬದಲಿಗೆ ಅಥವಾ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವ ಕಾರಣದ ಹೊರತಾಗಿ ಯಾರಾದರೂ ಓರ್ವ ಮನುಷ್ಯನನ್ನು ಹತ್ಯೆ ಮಾಡಿದರೆ ಅವನು ಸಕಲ ಮಾನವ ಸಮೂಹವನ್ನೇ ಹತ್ಯೆ ಮಾಡಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಸಕಲ ಮಾನವ ಸಮೂಹಕ್ಕೇ ಜೀವದಾನ ಮಾಡಿದಂತೆ.

ಪ್ರವಾದಿ(ಸ) ಹೀಗೆ ಹೇಳಿದ್ದಾರೆ,
ಯಾರಾದರೂ ಒಪ್ಪಂದ ಮಾಡಿಕೊಂಡ (ಅಥವಾ ದೇಶದ ಪ್ರಜೆಗಳಾಗಿರಲು ಒಪ್ಪಿಕೊಂಡೆ ಅಲ್ಪಸಂಖ್ಯಾತ) ಮುಸ್ಲಿಮೇತರರ ಹತ್ಯೆ ನಡೆಸಿದರೆ ಅಂಥ ಹತ್ಯೆಕೋರರು ನಲ್ವತ್ತು ವರ್ಷ ಪ್ರಯಾಣಿಸಿ ಹೋಗಬೇಕಾದಷ್ಟು ದೂರದವರೆಗೂ ಹಬ್ಬುವಂಥ ಸ್ವರ್ಗದ ಪರಿಮಳವನ್ನು ಕೂಡಾ ಅನುಭವಿಸಲಾರರು.

ಈ ಮೂರೂ ವಿಷಯಗಳಲ್ಲಿ ಏಕ ಸತ್ಯವೊಂದಿದೆ. ಇಸ್ಲಾಮ್ ಹಿಂಸೆಯ ವಿರೋಧಿ, ಅನ್ಯ ಧರ್ಮ ಅಸಹಿಷ್ಣುತೆಯ ವಿರೋಧಿ ಮತ್ತು ಒಂದು ಹತ್ಯೆಯನ್ನು ಇಡೀ ಮಾನವ ಸಮೂಹವನ್ನೇ ಹತ್ಯೆ ಮಾಡಿದುದಕ್ಕೆ ಸಮವೆಂದು ಪರಿಗಣಿಸುವಷ್ಟು ಹತ್ಯೆ ವಿರೋಧಿ. ಈ ಜಗತ್ತಿನಲ್ಲಿ ಪ್ರಪ್ರಥಮವಾಗಿ ಹತ್ಯೆಗೊಳಗಾದ ಹಾಬೀಲ್‌ನನ್ನು ಇಸ್ಲಾಮ್ ಸಜ್ಜನನೆಂದು ಪರಿಚಯಿಸುತ್ತದೆ ಮತ್ತು ಹತ್ಯೆ ಮಾಡಿದವ ಪ್ರವಾದಿಯ ಮಗನೇ ಆಗಿದ್ದರೂ ಆತನನ್ನು ನಷ್ಟ ಹೊಂದಿದವ ಮತ್ತು ಭ್ರಷ್ಟ ಚಿತ್ತದವ ಎಂದು ಉಲ್ಲೇಖಿಸುತ್ತದೆ. ಅಲ್ಲದೇ, ತಾನು ಹತ್ಯೆಗೊಳಗಾಗುವುದು ಶತಃಸಿದ್ಧ ಎಂದು ಗೊತ್ತಿದ್ದೂ ‘ತಾನು ಸರ್ವಲೋಕಗಳ ಪ್ರಭುವಾದ ಅಲ್ಲಾಹನನ್ನು ಭಯಪಡುತ್ತೇನೆ’ ಎಂದು ಅಣ್ಣ ಹೇಳುತ್ತಾರೆ. ಅಂದರೆ, ಅಲ್ಲಾಹನನ್ನು ಭಯಪಡುವವ ಹತ್ಯೆ ನಡೆಸುವುದಿಲ್ಲ ಅನ್ನುವುದೇ ಇದರ ತಾತ್ಪರ್ಯ. ಈ ಘಟನೆಯನ್ನು ಹೇಳಿದ ಬೆನ್ನಿಗೇ ಹತ್ಯೆಗೆ ಸಂಬಂಧಿಸಿ ಪವಿತ್ರ ಕುರ್ ಆನ್ ಸಾರ್ವತ್ರಿಕ  ನಿಯಮವನ್ನೂ ಮುಂದಿಡುತ್ತದೆ. ಪ್ರವಾದಿ ಮುಹಮ್ಮದ್(ಸ) ಈ ಕುರ್‌ಆನನ್ನೇ ಬೋಧಿಸಿದರು ಮತ್ತು ಬದುಕಿದರು. ‘ತನ್ನ ಅಧೀನದಲ್ಲಿರುವ ಮುಸ್ಲಿಮೇತರ ಕಾರ್ಮಿಕನನ್ನು ಅವಧಿಗಿಂತ ಹೆಚ್ಚು ದುಡಿಸಿದರೆ ಪರಲೋಕ ವಿಚಾರಣೆಯ ವೇಳೆ ನಾನು ಆ ಮುಸ್ಲಿಮೇತರನ ಪರ ನಿಲ್ಲುವೆ..’ ಎಂದು ಪ್ರವಾದಿ(ಸ) ತನ್ನ ಅನುಯಾಯಿಗಳ ಮುಂದೆ ಘೋಷಿಸುವುದಕ್ಕೆ ಈ ಪವಿತ್ರ ಕುರ್‌ಆನೇ ಪ್ರೇರಣೆ. ಮುಹಮ್ಮದರು ಪ್ರವಾದಿಯಾಗಿ 40ನೇ ವರ್ಷದಲ್ಲಿ ನಿಯುಕ್ತರಾದರು ಮತ್ತು 63 ವರ್ಷಗಳ ವರೆಗೆ ಬದುಕಿದರು. ಅವರು ಮೃತಪಡುವಾಗ, ಯುದ್ಧ ಕವಚ ಓರ್ವ ಯಹೂದಿಯ ಬಳಿ ಅಡವಿಡಲಾದ ಸ್ಥಿತಿಯಲ್ಲಿ ಇತ್ತು ಎಂದು ಇತಿಹಾಸ ಹೇಳುತ್ತದೆ. ಇನ್ನೊಂದು ಮಹತ್ವಪೂರ್ಣ ಘಟನೆಯೂ ಉಲ್ಲೇಖಾರ್ಹ-

 ಬಶೀರ್ ಬಿನ್ ಉಬೈರಿಕ್ ಎಂಬ ಮುಸ್ಲಿಮ್ ವ್ಯಕ್ತಿ ಇನ್ನೋರ್ವನ ಗುರಾಣಿಯನ್ನು ಕದಿಯುತ್ತಾರೆ ಮತ್ತು ಮಾಲಕ ತನ್ನ ಗುರಾಣಿಯನ್ನು ಹುಡುಕುತ್ತಿರುವುದು ಗೊತ್ತಾದಾಗ ಅದನ್ನು ಓರ್ವ ಯಹೂದಿಯ ಮನೆಯಲ್ಲಿ ಸದ್ದಿಲ್ಲದೇ ಇಟ್ಟುಬಿಡುತ್ತಾರೆ. ಗುರಾಣಿಯ ಮಾಲಕ ಪ್ರವಾದಿಯವರಲ್ಲಿ(ಸ) ದೂರು ನೀಡುವುದಲ್ಲದೇ ಬಶೀರ್ ಬಿನ್ ಉಬೈರಿಕ್‌ನ ಮೇಲೆ ಸಂದೇಹವನ್ನೂ ವ್ಯಕ್ತಪಡಿಸುತ್ತಾನೆ. ಆದರೆ ಬಷೀರ್ ಬಿನ್ ಉಬೈ ರಿಕ್  ಕಳ್ಳತನವನ್ನು ನಿರಾಕರಿಸುತ್ತಾನಲ್ಲದೇ ಯಹೂದಿಯತ್ತ ಕೈ ತೋರಿಸುತ್ತಾನೆ. ಆ ಬಶೀರ್‌ನ ಪರ ಆತನ ಝಫರ್ ಗೋತ್ರದವರೂ ಹಲವು ಮುಸ್ಲಿಮರೂ ಬೆಂಬಲಕ್ಕೆ ನಿಲ್ಲುತ್ತಾರೆ ಮತ್ತು ಆ ಅಲ್ಪಸಂಖ್ಯಾತ ಯಹೂದಿ ವ್ಯಕ್ತಿ ತಾನು ಕದ್ದಿಲ್ಲ ಎಂದು ಹೇಳಿದರೂ ಸಾಂದರ್ಭಿಕ ಸಾಕ್ಷ್ಯಗಳು ಅವನ ವಿರುದ್ಧವೇ ಇರುವುದರಿಂದ ಪ್ರವಾದಿ(ಸ) ಆತನನ್ನೇ ತಪ್ಪಿತಸ್ಥ ಎಂದು ತೀರ್ಮಾನಿಸುವುದಕ್ಕೆ ಮುಂದಾಗುತ್ತಾರೆ. ಆಗ ಪ್ರವಾದಿಯವರನ್ನು(ಸ) ತಿದ್ದುವ ಧಾಟಿಯಲ್ಲಿ ಪವಿತ್ರ ಕುರ್‌ಆನ್ ನ ವಾಣಿಗಳು ಅಲ್ಲಾಹನಿಂದ ಅವತೀರ್ಣವಾಗುತ್ತವೆ  ಮತ್ತು ಅಪ್ರಾಮಾಣಿಕರ ಪರ ವಾದಿಸುವವರಾಗಬೇಡಿ ಎಂದು (ಅಧ್ಯಾಯ 4, ವಚನ 105-106) ಪ್ರವಾದಿಯನ್ನು ಎಚ್ಚರಿಸುತ್ತದೆ ಮತ್ತು ಯಹೂದಿಯ ಪರ ತೀರ್ಪು ಕೊಡುವಂತೆ ಮಾಡುತ್ತದೆ.

ಅನ್ಯ ಧರ್ಮೀಯರನ್ನು ಅಸಹಿಷ್ಣುತೆಯಿಂದ ಕಾಣುವುದಕ್ಕೂ ಇಸ್ಲಾಮ್‌ಗೂ ಸಂಬಂಧ  ಇಲ್ಲ. ಈ ದೇಶದಲ್ಲಿ 800 ವರ್ಷಗಳ ಕಾಲ ಮುಸ್ಲಿಮರು ರಾಜರಾಗಿ ಮೆರೆದರೂ ಇವತ್ತಿಗೂ ಮುಸ್ಲಿಮರ ಸಂಖ್ಯೆ 15%ವನ್ನೂ ಮೀರಿಲ್ಲ. ಇಸ್ಲಾಮ್ ಅನ್ಯಧರ್ಮ ಅಸಹಿಷ್ಣುವೇ ಆಗಿದ್ದಿದ್ದರೆ ಈ ದೇಶದ ಬಹುಸಂಖ್ಯಾತರು ಇವತ್ತು ಮುಸ್ಲಿಮರೇ ಆಗಿರುತ್ತಿದ್ದರು. ಹಾಗಂತ, ಇದರಾಚೆಗೆ ಹಿಂದೂವನ್ನು ದ್ವೇಷಿಸುವ ಮುಸ್ಲಿಮ್ ಮತ್ತು ಮುಸ್ಲಿಮರನ್ನು ದ್ವೇಷಿಸುವ ಹಿಂದೂ ಇರಲು ಸಾಧ್ಯವಿದೆ. ಅದಕ್ಕೆ ಧರ್ಮ ಕಾರಣ ಅಲ್ಲ. ಸಂದರ್ಭ, ಸನ್ನಿವೇಶ, ತಪ್ಪು ಅಭಿಪ್ರಾಯಗಳು, ಅಸೂಯೆ, ಅಹಂಕಾರ, ರಾಜಕೀಯ ಅಧಿಕಾರ ಇತ್ಯಾದಿ ಇತ್ಯಾದಿ ವೈಯಕ್ತಿಕವಾದವುಗಳೇ ಕಾರಣವಾಗಿವೆ. ಅವನ್ನು ವೈಯಕ್ತಿಕವಾಗಿ ನೋಡಬೇಕೇ ಹೊರತು ಧರ್ಮದ ಕನ್ನಡಕದಿಂದಲ್ಲ. ಮುಸ್ಲಿಮ್ ರಾಷ್ಟ್ರಗಳಾಗಿರುವ ಮತ್ತು ಕುರ್‌ಆನನ್ನೇ ಸಂವಿಧಾನವಾಗಿ ಒಪ್ಪಿಕೊಂಡಿರುವ ಅರಬ್ ರಾಷ್ಟ್ರಗಳಲ್ಲಿ ಇವತ್ತು ಲಕ್ಷಾಂತರ ಹಿಂದೂಗಳು ಅಸಹಿಷ್ಣುತೆಯ ಅಣುವಿನಷ್ಟಾದರೂ ತಾರತಮ್ಯವನ್ನು ಅನುಭವಿಸದೆ ಬದುಕುತ್ತಿರುವುದೇ ಇಸ್ಲಾಮ್ ಅನ್ಯಧರ್ಮ ಅಸಹಿಷ್ಣುವಲ್ಲ ಎಂಬುದಕ್ಕೆ ಸಾಕ್ಷಿ.